‘ಮಧ್ಯಮವರ್ಗದ ವಿದ್ಯಾವಂತ ಮತ್ತು ನಗರಕ್ಕೆ ಮುಖ ಮಾಡಿ ನಿಂತ ಸಮುದಾಯ ಯಕ್ಷಗಾನಕ್ಕೆ ತೊಡಗಿಸಿಕೊಂಡಂತೆಲ್ಲಾ ಯಕ್ಷಗಾನದ ರಂಜನೆಯ ಸ್ವರೂಪ ಬೇರೆಯಾಗುತ್ತಾ ಬಂದಿದೆ. ಆಟವು ಕಲೆಯಾಗಿದ್ದು ಹೀಗೆಯೇ. ಅತಿಯಾದ ಹಾಸ್ಯವನ್ನು ಇಷ್ಟಪಡದ, ಪುರಾಣಕತೆಯಿಂದ ಒಂದು ಚೂರೂ ಆಚೆ ಈಚೆ ಹೋಗದಂತೆ ‘ಹಿತಮಿತ’ವಾದ ಮಾತು, ಪಾತ್ರದ ‘ಔಚಿತ್ಯ ಮೀರದ’ ಕುಣಿತ. ಮತ್ತು ಪಾತ್ರಗಳ ‘ಸರಿಯಾದ ಭಾವ’ವನ್ನು ಹೊರತರುವಂತಹ ಭಾಗವತಿಕೆ. ಯಕ್ಷಗಾನವನ್ನು ಈ ರೀತಿಯಿಂದ ಅಸ್ವಾದಿಸುವುದು, ಇಂತಹ ಬದುಕನ್ನು ಒಪ್ಪಿಕೊಂಡವರಿಗೆ ಅನಿವಾರ್ಯವಾಗಿದೆ’ ಎಂದು ಗುರುತಿಸುತ್ತಾರೆ ಕೃತಿ ಆರ್ ಪುರಪ್ಪೇಮನೆ. ಅವರ ಬರಹಗಳು ತಿಂಗಳಿಗೊಮ್ಮೆ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿವೆ.

.

ಯಕ್ಷಗಾನದಲ್ಲಿ ರಂಜನೆ: ನಿತ್ಯದ ರುಚಿಯಿಂದ ಬಿಡುಗಡೆಗೊಂದು ದಾರಿ

ಯಾವ ಕಲೆಯಲ್ಲಾದರೂ ರಂಜನೆಯ ಗುಣ, ಅಷ್ಟು ಸುಲಭವಾಗಿ ಪದಗಳಲ್ಲಿ ಮೂರ್ತವಾಗಿ ಸಿಕ್ಕುವುದಿಲ್ಲ, ಅಥವಾ ಇದನ್ನು ಸುಲಭವಾಗಿ ಸರಳೀಕರಿಸಿ, ಅಮೂರ್ತವಾಗಿ ಹೇಳಿಬಿಡಬಹುದು. ಅಥವಾ ಕಲೆಗೂ ರಂಜನೆಗೂ ಇರುವ ಸಂಬಂಧವನ್ನು ನಮ್ಮಲ್ಲಿ ಈಗಾಗಲೇ ಇರುವ ಪರಿಕಲ್ಪನೆಗಳನ್ನು ಬಳಸಿ ರಂಜನೆಯನ್ನು ವಿವರಿಸಬಹುದು. ಆದರೆ ಈ ರಂಜನೆಯ ನಿಜ ಕೆಲಸವೇನು ಎನ್ನುವುದನ್ನು ಇಡೀ ಸಮುದಾಯದ ಹಿನ್ನೆಲೆಯಲ್ಲಿ ಕೇಳಿಕೊಳ್ಳಬೇಕಾಗುತ್ತದೆ.

ರಂಜನೆಯೆನ್ನುವುದು ಇರಬೇಕಾದರೆ ರಂಜನೆಯಿಲ್ಲದ್ದೂ ಇರಬೇಕಾಗುತ್ತದೆ. ನಾಗರೀಕತೆ ಬೆಳೆದು ಬಂದಂತೆಲ್ಲ ಕೆಲಸ ಮತ್ತು ವಿರಾಮ ಎನ್ನುವುದು ಎರಡು ವಿರುದ್ಧವಾದ, ನಿಖರವಾಗಿ ತುಂಡು ಮಾಡಬಹುದಾದ ಸಮಯವಾಗಿ ಬೆಳೆದಿದೆ. ಈಗ ಕಲೆ ಸಾಹಿತ್ಯ ಮುಂತಾದವು ವಿರಾಮದಲ್ಲೂ, ಹಾಗೆಯೇ ರಂಜನೆಯೆನ್ನುವುದೂ ವಿರಾಮದಲ್ಲಿ ನಮಗಿಷ್ಟವಾಗಿ ನಾವೇ ತೊಡಗಿಕೊಳ್ಳುವ ಕಾರ್ಯಕ್ರಮವಾಗಿ ಬೆಳೆದಿದೆ. ಯಕ್ಷಗಾನವನ್ನೇ ಉದಾಹರಣೆಯಾಗಿಟ್ಟುಕೊಂಡು ಹೇಳುವುದಾದರೆ, ಕೃಷಿ ಆಧಾರಿತ ಸಮಾಜದಲ್ಲಿ ದೈನಂದಿನ ಬದುಕಿನ ಸಮಯವು ಹೀಗೆ ನಿಖರವಾಗಿ ವಿರಾಮ ಮತ್ತು ಕೆಲಸ ಎಂದು ಬೇರೆ ಬೇರೆಯಾದದ್ದಲ್ಲ. ಸಂಜೆ ಹೊರಗೆ ಕೆಲಸ ಮಾಡಲಾಗದೆ ಕತ್ತಲು ಆವರಿಸಿದಾಗ, ಭಜನೆ, ಹರಟೆ, ಪಗಡೆ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ರಂಜನೆಯೆಂದರೆ ಒಟ್ಟು ಕುಟುಂಬಗಳಲ್ಲಿ ಮದುವೆ, ಹಬ್ಬಗಳು. ತಾಳಮದ್ದಲೆ ಅಥವಾ ಇಸ್ಪೀಟ್ ಆಡುವುದು, ಇವೆರಡೂ ಹಬ್ಬ-ಕಾರ್ಯದ ಮನೆಗಳ ರಾತ್ರಿಯ ಕಾಲಕ್ಷೇಪವಾಗಿತ್ತು. ಆಟಗಳು ಸುಗ್ಗಿ ಮುಗಿದ ಮೇಲೆ, ಕಟಾವು ಆದ ಗದ್ದೆಯಲ್ಲಿ ಆಡುವ ಬಯಲಾಟ. ಈಗಲೂ ಹಳ್ಳಿಗಳಲ್ಲಿ ಈ ರೀತಿಯ ಬಯಲಾಟಗಳು ಆಗುತ್ತಿವೆ. ಹಗಲು ಹೊತ್ತಿನಲ್ಲಿ ದೇವಸ್ಥಾನದ ಕಾರ್ಯಕ್ರಮ, ಪಕ್ಕದ ಊರಿನಿಂದ ಬರುವ ನೆಂಟರು ಮತ್ತು ರಾತ್ರಿ ಇಡೀ ಗದ್ದೆ ಬಯಲಲ್ಲಿ ನಡೆಯುವ ಯಕ್ಷಗಾನ. ಯಕ್ಷಗಾನವು ಆರಾಧನೆಯಾಗಿ, ಕಾಲಕ್ಷೇಪವಾಗಿ, ಹಣಕೊಟ್ಟು ನೋಡುವ ಟೆಂಟಿನಾಟವಾಗಿ ಬೇರೆ ಬೇರೆ ಸ್ತರಗಳಲ್ಲಿ ಬದಲಾಗುತ್ತ ಬಂದಿದೆ. ಈ ಎಲ್ಲಾ ರೀತಿಯ ಆಟದ ಅವತಾರಗಳಲ್ಲೂ ರಂಜನೆಯೆನ್ನುವುದು ಬೇರೆ ಬೇರೆ ರೀತಿಯ ಅರ್ಥವನ್ನು, ಅನುಭವವನ್ನು ಕೊಡುತ್ತಿದೆ. ಯಾವುದೋ ಒಂದು ಯಕ್ಷಗಾನ ಪ್ರದರ್ಶನವನ್ನು ಇನ್ನೊಂದಕ್ಕೆ ಹೋಲಿಸಿ ಇದನ್ನು ವಿವರಿಸುವುದಕ್ಕಿಂತ ಈ ವಿಷಯವನ್ನು ಬೇರೆ ರೀತಿಯಿಂದ ಪ್ರವೇಶಿಸುವುದಕ್ಕೆ ಪ್ರಯತ್ನಿಸುತ್ತೇನೆ.

ಇವತ್ತಿನ ಬಡಗುತಿಟ್ಟಿನ ಯಕ್ಷಗಾನದಲ್ಲಿ ರಂಜನೆಯ ಹಲವು ಪರಂಪರೆಗಳಿವೆ. ಒಂದು ಪ್ರದರ್ಶನದಲ್ಲಿ ಸುಲಭಕ್ಕೆ ದಕ್ಕುವ ರಂಜನೆಯೆಂದರೆ ವೇಷದ ವೈಭವ, ಬಣ್ಣ ಬ್ಯಾಗಡೆಗಳ ಪ್ರಖರತೆ, ಕುಣಿತದ ಚುರುಕು, ಸಂಭಾಷಣೆಯ ಆಶುತ್ವ. ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ಹೊಂದಿಕೊಂಡು ಇಡೀ ಪ್ರದರ್ಶನವೇ ರಂಜನೀಯವಾಗುವುದು. ಇಂಥಾ ಪ್ರದರ್ಶನದ ಭಾಗಗಳಲ್ಲಿ ಕುಶಲತೆ ತೋರುವ ಭಾಗಗಳಲ್ಲಿ ಸೀಟಿ ಚಪ್ಪಾಳೆಯ ಪ್ರತಿಕ್ರಿಯೆಯೇ ಪ್ರೇಕ್ಷಕರ ತೊಡಗಿಸಿಕೊಳ್ಳುವಿಕೆಯನ್ನು ಸೂಚಿಸುತ್ತದೆ. ಪ್ರಸಂಗ ಪಠ್ಯಕ್ಕೆ ನಿಷ್ಠರಾಗಿರುವುದು, ಪಠ್ಯದ ಹಿಂದಿರುವ ಭಾವ, ಧ್ವನಿಯನ್ನು ಔಚಿತ್ಯಪೂರ್ಣವಾಗಿ ತಂದಿರುವುದು, ಹೊಸ ದೃಷ್ಟಿಕೋನದಲ್ಲಿ ರಂಗ ಪ್ರದರ್ಶನವನ್ನು ನೋಡುವುದು ಇದು ಇನ್ನೊಂದು ರೀತಿಯ ರಂಜನೆಯನ್ನು ಕೊಡುತ್ತದೆ.

ಹೆಚ್ಚಿನ ಕಲೆಗಳಂತೆ ಯಕ್ಷಗಾನವು ಒಂದು ಆರಾಧನಾ ಕಲೆಯಾಗಿಯೆ ಹುಟ್ಟಿ ಬೆಳೆದಿದ್ದರ ಸಾಕ್ಷಿ ಇಂದಿನ ಯಕ್ಷಗಾನದಲ್ಲೂ ಸಿಗುತ್ತವೆ. ತಮ್ಮ ಸುತ್ತಲಿನ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳೊಂದಿಗೆ ಹೇಗೆ ಇವು ಹೊಂದಾಣಿಕೆ ಮಾಡಿಕೊಳ್ಳುತ್ತವೆ ಎನ್ನುವುದನ್ನು ಯಕ್ಷಗಾನದಲ್ಲಿ ನೋಡುವಾಗ, ವಸಾಹತುಕಾಲ ಮತ್ತು ರಾಷ್ಟ್ರೀಯತೆಯ ಕಲ್ಪನೆಗಳು ಗಟ್ಟಿಯಾಗುತ್ತಿರುವ ಕಾಲದಲ್ಲಿ ಎರಡು ರೀತಿಯ ಪ್ರತಿಕ್ರಿಯೆಗಳನ್ನು ತೋರಿಸಿದವು. ಟೆಂಟ್ ಮೇಳಗಳು ಹುಟ್ಟಿಕೊಂಡಿದ್ದು, ವ್ಯಾವಹಾರಿಕವಾಗಿದ್ದು ಒಂದು ರೀತಿಯ ಪ್ರತಿಕ್ರಿಯೆಯಾಗಿ ನಮಗೆ ಕಾಣುತ್ತದೆ. ಇನ್ನೊಂದು ಪ್ರತಿಕ್ರಿಯೆ, ಒಂದು ಪ್ರಾದೇಶಿಕ ಆಚರಣೆಗೆ ಸಾರ್ವಕಾಲಿಕ ಆವರಣವನ್ನು ಒದಗಿಸಿಕೊಡುವ ದಾರಿಯೊಂದರ ಹುಡುಕಾಟ ಪ್ರಾರಂಭವಾಗಿದ್ದು. ಭಾರತದ ‘ಕ್ಲಾಸಿಕಲ್ ಕಲೆ’ಗಳು ಹುಟ್ಟಿಕೊಂಡಿದ್ದು ಇದೇ ಸಂದರ್ಭದಲ್ಲಿ. ಪರಂಪರೆಯೊಂದು ಹೊಸದಾಗಿ ಹುಟ್ಟಿಕೊಂಡ ಗುಂಪಿಗೆ ಹೇಗೆ ಅಸ್ಮಿತೆಯಾಗಿ ಮರುಸೃಷ್ಟಿಯಾಗುತ್ತದೆ ಎನ್ನುವುದನ್ನು ಭಾರತದ ಕ್ಲಾಸಿಕಲ್ ಕಲೆಗಳ ಮೇಲೆ ಆದ ಅಧ್ಯಯನಗಳು ನಮಗೆ ತೋರಿಸಿಕೊಡುತ್ತವೆ.

ಇವತ್ತಿನ ಯಕ್ಷಗಾನ ಪ್ರಯೋಗದ ಸಂದರ್ಭದಲ್ಲಿ ನಮಗೆ ವಿಶಿಷ್ಟವಾಗಿ ಕಾಣುವುದು ಮತ್ತು ಅದು ಬೇರೆ ಕಲೆಗಳಿಂದ ಹೊರತಾಗಿ ನಿಂತಿರುವುದು, ಈ ಎರಡೂ ಪ್ರತಿಕ್ರಿಯೆಗಳೂ ಪ್ಯಾರಲೆಲ್ ಆಗಿ ಇನ್ನೂ ನಡೆಯುತ್ತಿರುವುದರಿಂದ. ಹರಕೆ ಆಟವಾಗಿ, ಬಯಲಾಟವಾಗಿ, ಟಿಕೆಟ್ ಮೇಳವಾಗಿ ಯಕ್ಷಗಾನ ತನ್ನ ಜನಪ್ರಿಯತೆಯ ಆಯಾಮವನ್ನು ಇಟ್ಟುಕೊಂಡಿದೆ. ಅದೇ ರೀತಿ, ಶಿವರಾಮ ಕಾರಂತರಿಂದ ಪ್ರಾರಂಭವಾಗಿ, ಮುಂದೆ ಅದರ ಸ್ಫೂರ್ತಿಯಿಂದ ಹುಟ್ಟಿಕೊಂಡ ವಿವಿಧ ಸ್ತರಗಳ ಪ್ರಯೋಗಗಳು, ಹೊಸ ಮಧ್ಯಮವರ್ಗದ ‘ಕಲೆ’ಯಾಗಿ ಹೊರಹೊಮ್ಮಿ ಯಕ್ಷಗಾನ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳುತ್ತಿದೆ. ಈ ಎರಡರ ಗಡಿರೇಖೆ ನಿಖರವಾಗಿ, ಎರಡು ಹೋಳಾಗಿದೆಯೆಂದಲ್ಲ. ಪ್ರತಿಯೊಂದು ಕಲೆಯಲ್ಲೂ ಹಲವು ರೀತಿಯ ನೋಡುಗರಿರುತ್ತಾರೆ. ಒಂದು ಕಾದಂಬರಿಯನ್ನು ಓದುವಾಗ ಅಥವಾ ಒಂದು ಪ್ರದರ್ಶನವನ್ನು ನೋಡುವಾಗ, ಓದುಗರು ಅಥವಾ ಪ್ರೇಕ್ಷಕರು ಬೇರೆ ಬೇರೆ ಆಯಾಮಗಳಿಂದ ಮೆಚ್ಚುತ್ತಾರೆ. ಆದರೆ ಇಲ್ಲಿ ನಾನು ಪ್ರಸ್ತಾಪಿಸುತ್ತಿರುವುದು ಆ ರೀತಿಯ ನೋಡುಗರ ವೈವಿಧ್ಯತೆಯನ್ನಲ್ಲ. ಯಕ್ಷಗಾನದ ಒಟ್ಟೂ ಸಮುದಾಯದೊಳಗೆ ಕಾಣುವ ಎರಡು ಸಾಮಾಜಿಕ ಮನೋಧರ್ಮವನ್ನು ಪ್ರತಿನಿಧಿಸುವ ರಂಜನೆಯ ಎರಡು ಮುಖ್ಯ ದೃಷ್ಟಿಕೋನಗಳು. ಎರಡೂ ಸ್ವಾಯತ್ತವಾದವೂ ಅಲ್ಲ. ಕಲಾವಿದ, ಪ್ರೇಕ್ಷಕ ಇಬ್ಬರೂ ಈ ಎರಡಕ್ಕೂ ಮುಖಾಮುಖಿಯಾಗುತ್ತಿರುವುದೂ, ಇದರ ಅಸ್ತಿತ್ವವನ್ನು ಬಲಪಡಿಸುತ್ತದೆ. ಜೊತೆಗೆ ಈ ಎರಡರ ಕೂಡುಕೊಳ್ಳುವಿಕೆಯ ಸಂಕೀರ್ಣತೆಯನ್ನೂ ತೆರೆದಿಡುತ್ತದೆ.

ಯಕ್ಷಗಾನದ ರಂಜನೆಯು ಈ ಎರಡೂ ರೀತಿಯ ನೋಡುವಿಕೆಯಲ್ಲು ಬೇರೆ ಬೇರೆ ರೀತಿ ಕೆಲಸ ಮಾಡುತ್ತದೆ. ಈಗಾಗಲೇ ಯಕ್ಷಗಾನದ ವಿಮರ್ಶಾ ವಲಯದಲ್ಲಿ ವ್ಯಾಪಾರೀಕರಣವಾಗುತ್ತಿರುವ ಬಗ್ಗೆ, ಸುಲಭವಾಗಿ ದಕ್ಕುವ ಮನೋರಂಜನೆಯ ಬಗ್ಗೆ ಹಲವಾರು ಚರ್ಚೆಗಳಾಗಿವೆ. ಅವುಗಳನ್ನು ನಾನು ಇಲ್ಲಿ ವಿವರಿಸುವುದಿಲ್ಲ. ಯಕ್ಷಗಾನದ ಸಮುದಾಯದೊಳಗೆ, ಸಾಮಾಜಿಕ ಮಾಧ್ಯಮ ಮತ್ತು ಟೀ ಸ್ಟಾಲಿನ ಚರ್ಚೆಯಲ್ಲಿ ಭಾಗವಹಿಸುವ ಹೆಚ್ಚಿನ ಜನರಿಗೆ ಇದು ತಿಳಿದಿದೆ. ಇಲ್ಲಿ ನಾನು ಎತ್ತುತ್ತಿರುವ ವಿಷಯ -ಹೆಚ್ಚು ಜನರಿಗೆ ದಕ್ಕುವ ರಂಜನೆ ಮತ್ತು ಪ್ರಸಂಗ ಪಠ್ಯ, ಔಚಿತ್ಯ, ಹಳೆ ನಡೆಯ ವ್ಯತ್ಯಾಸಗಳನ್ನು ವರ್ತಮಾನದ ಯಕ್ಷಗಾನದ ಸಾಂಸ್ಕೃತಿಕ ರಾಜಕಾರಣದ ಸಂದರ್ಭದಲ್ಲಿ ಇಟ್ಟುನೋಡುವುದುಂಟು. ಈ ರಂಜನೆಯ ವ್ಯತ್ಯಾಸಗಳು ಎರಡು ರೀತಿಯ ಬದುಕಿನ ವ್ಯತ್ಯಾಸಗಳಂತೆ ಕಾಣುತ್ತದೆ. ಕಲೆಯನ್ನು ಆರಾಧನೆಯಿಂದ, ಮನೋರಂಜನೆಯಿಂದ ಸ್ವತಂತ್ರವಾಗಿಸಿ, ಒಂದು ಮೇಲ್ಮಟ್ಟದ, ಕಾಲ ದೇಶಗಳನ್ನು ಮೀರುವ ಗುಣವುಳ್ಳ ಒಂದು ಪ್ರದರ್ಶನವಾಗಿ ನೋಡುವುದು ಅಂದರೆ ಅದು ತನ್ನನ್ನು ತಾನು ತಾರ್ಕಿಕವಾಗಿ ಎಲ್ಲರೂ ಬಳಸುವುದಕ್ಕೆ ತೆರೆದುಕೊಳ್ಳುವುದೆಂದರ್ಥ.

ದಶಾವತಾರದಾಟ, ಭಾಗವತರಾಟ ಇತ್ಯಾದಿ ಹೆಸರುಗಳಿಂದ ಮೂವತ್ತರ ದಶಕದಲ್ಲಿ ಯಕ್ಷಗಾನವೆಂದು ಹೆಸರು ಪಡೆದುಕೊಂಡಿರುವುದು ಕಾಕತಾಳೀಯವಲ್ಲ. ‘ಆಟ’ವನ್ನು ‘ಕಲೆ’ಯಾಗಿಸುವ ದರ್ದು ಅವತ್ತಿನ ಸಾಮಾಜಿಕ ಸಂದರ್ಭಕ್ಕಿತ್ತು. ಇವತ್ತಿನ ಯಕ್ಷಗಾನದ ಪ್ರಯೋಗಗಳಲ್ಲಿ ಯಕ್ಷಗಾನದ ಸಾಂಸ್ಕೃತಿಕ ಲೋಕ ರಂಜನೆಯ ವಿಷಯದಲ್ಲಿ ಎರಡಾಗಿರುವುದು ಇದರ ಮುಂದುವರಿಕೆಯಾಗಿರುವುದಲ್ಲದೇ, ಈಗಲೂ ಎರಡು ರೀತಿಯ ಬದುಕಿನ ವ್ಯತ್ಯಾಸಗಳು ಇವೆಯೇ ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ.

ಹಗಲು ಹೊತ್ತಿನಲ್ಲಿ ದೇವಸ್ಥಾನದ ಕಾರ್ಯಕ್ರಮ, ಪಕ್ಕದ ಊರಿನಿಂದ ಬರುವ ನೆಂಟರು ಮತ್ತು ರಾತ್ರಿ ಇಡೀ ಗದ್ದೆ ಬಯಲಲ್ಲಿ ನಡೆಯುವ ಯಕ್ಷಗಾನ. ಯಕ್ಷಗಾನವು ಆರಾಧನೆಯಾಗಿ, ಕಾಲಕ್ಷೇಪವಾಗಿ, ಹಣಕೊಟ್ಟು ನೋಡುವ ಟೆಂಟಿನಾಟವಾಗಿ ಬೇರೆ ಬೇರೆ ಸ್ಥರಗಳಲ್ಲಿ ಬದಲಾಗುತ್ತಲೆ ಬಂದಿದೆ.

ಹೊಸ ಪ್ರಸಂಗಗಳನ್ನು ಟೆಂಟಿನ ಮೇಳಕ್ಕೆ ನೋಡಲು ಹೋಗುವವರು, ಮತ್ತು ಹಳ್ಳಿಗಳಲ್ಲಿ ಗದ್ದೆಯ ಬಯಲಿನಲ್ಲಿ ಅಥವಾ ಊರಿನ ದೇವಸ್ಥಾನದ ಬಯಲಿನಲ್ಲಿ ಆಗುವ ಬಯಲಾಟ ನೋಡುವವರ ರಂಜನೆಯ ಸ್ವರೂಪ ಬೇರೆ. ಈ ಸಂಶೋಧನೆಯ ಭಾಗವಾಗಿ ಹಲವು ರೀತಿಯ ಪ್ರೇಕ್ಷಕರೊಡನೆ ಒಡನಾಡಿ, ಅವರ ಒಟ್ಟೂ ಜೀವನದಲ್ಲಿ ಯಕ್ಷಗಾನಕ್ಕಿರುವ ಸಂಬಂಧವನ್ನೂ, ಅದು ಕೊಡುತ್ತಿರುವ ರಂಜನೆಯನ್ನೂ ಹತ್ತಿರದಲ್ಲಿ ನೋಡಲು ಸಿಕ್ಕಿತು.

ಬಯಲಾಟ ಮತ್ತು ಟೆಂಟಿನ ಆಟಗಳಲ್ಲಿ ರಂಜನೆ ಬರೀ ಯಕ್ಷಗಾನ ಪ್ರದರ್ಶನವಲ್ಲ. ಊರುಗಳಲ್ಲಿ ನಡೆಯುವ ಬಯಲಾಟ, ಹಬ್ಬದ ಆಚರಣೆಯ ಒಂದು ಭಾಗ ಮಾತ್ರ. ಅದರ ರಂಜನೆಗೆ ಪ್ರತ್ಯೇಕತೆ ಇಲ್ಲ. ಅವರ ದಿನನಿತ್ಯದ ಬದುಕನ್ನು, ನಿದ್ದೆಯನ್ನು ಸೇರಿಸಿ, ದಿನದ ಅನಿವಾರ್ಯ ಅವಶ್ಯಕ ಕೆಲಸಗಳನ್ನು ಬಿಟ್ಟು ಇಡೀ ರಾತ್ರಿ ತೊಡಗಿಕೊಳ್ಳುವುದೇ ರಂಜನೆಯ ಮುಖ್ಯ ಭಾಗ. ಹಳ್ಳಿಯಲ್ಲಿ ನಡೆಯುವ ಬಯಲಾಟದಲ್ಲಿ ಹೆಂಗಸರು ತಮ್ಮ ಒಳ್ಳೆಯ ಸೀರೆ ಧರಿಸಿ ಸಿಂಗಾರವಾಗಿ ಬರುತ್ತಾರೆ. ಗಂಡಸರು ಗುಂಪುಗಳಲ್ಲಿ ಕುಳಿತುಕೊಂಡು, ಕೆಲವೊಮ್ಮೆ ಪಾನಮತ್ತರಾಗಿ ಹರಟೆ ಹೊಡೆಯುತ್ತಾ ಅತಿ ಮಾತುಗಳು ಬಂದಾಗ ಎದ್ದು ಹೋಗಿ ಹಾಸ್ಯ, ಶೃಂಗಾರಕ್ಕೆ ಮತ್ತೆ ಬಂದು ಕುಳಿತುಕೊಳ್ಳುತ್ತಾರೆ. ಅಲ್ಲಿಯ ವಾತಾವರಣದಲ್ಲಿಯೇ ಹಬ್ಬಗಳು ಕೊಡುವ ಮುಕ್ತತೆ ಬಂದಿರುತ್ತದೆ. ಬದುಕು ಎನ್ನುವುದು ಒಂದಾದ ಮೇಲೊಂದು ಮಾಡಿ ಮುಗಿಸಬೇಕಾದ ಕರ್ತವ್ಯಗಳ ಮೊತ್ತವಾಗಿ ಕಾಣುತ್ತಿರುವುದರ ಮಧ್ಯೆ ಇದೊಂದು ತಾತ್ಕಾಲಿಕ ಬಿಡುಗಡೆಯಾಗಿ ಕಾಣುತ್ತದೆ.

ನಮ್ಮೂರಿನಲ್ಲಿ ಬಡಗಿ, ಮೇಸ್ತ್ರಿ, ಮತ್ತಿತರ ಕುಶಲ ಕರ್ಮಿಗಳು ಮತ್ತು ಕೂಲಿಯವರು ಸೇರಿ ಮಾಡಿಸಿದ ಟೆಂಟ್ ಆಟದ ದಿನ ತಮ್ಮ ಮನೆಯ ಕಾರ್ಯಕ್ರಮವೆಂಬಂತೆ ತಯಾರಾಗಿ ಬಂದು ಸ್ವಾಗತಿಸುತ್ತಿದ್ದರು. ಇದು ಬರೀ ವ್ಯಾವಹಾರಿಕವಾದ ಒಂದು ನಡೆಯಲ್ಲ. ವ್ಯಾವಹಾರಿಕವಾಗಿದ್ದರೆ, ಅವರಿಗೆ ಹಣ ತಂದು ಕೊಡುವ ಕೆಲಸ ಬಿಟ್ಟು ಯಕ್ಷಗಾನವನ್ನೆ ಮಾಡಿಸಬೇಕೆಂದಿರಲಿಲ್ಲ. ಕ್ರಿಕೆಟ್ ಟೂರ್ನಿಯನ್ನೊ, ಕಬ್ಬಡಿ ಪಂದ್ಯಾವಳಿಯನ್ನೊ ಏರ್ಪಡಿಸಿ ದುಡ್ಡು ಎತ್ತಬಹುದಿತ್ತು.

ಹರಟೆ ಕಟ್ಟೆಯಾಗಿ, ಜೂಜಾಡುವ ಜಾಗವಾಗಿ, ರಾತ್ರಿ ಒಂದು ರೌಂಡು ತಿರುಗಾಡಿ ಬರುವ ಸ್ಥಳದಲ್ಲಿ ಏನೆಲ್ಲ ರಂಜನೆಯು ಸಿಗುತ್ತದೊ ಅದೆಲ್ಲವನ್ನೂ ಇಡೀ ರಾತ್ರಿಯ ಯಕ್ಷಗಾನದ ಪ್ರದರ್ಶನ ಕೊಡುತ್ತದೆ.. ಹಿಂದೆ ಯಕ್ಷಗಾನ ಆರಾಧನೆ ಮಾತ್ರ ಆಗಿದ್ದಾಗ ಇದ್ದಂತೆಯೇ ಈಗಲೂ ಹಬ್ಬ ಉತ್ಸವಗಳಂತೆ. ಈ ಅರ್ಥದಲ್ಲಿ ತಮ್ಮ ಜೀವನ ಲಯದಲ್ಲಿಯೆ ಹಾಸುಹೊಕ್ಕಾಗಿದ್ದು. ಇಲ್ಲಿ ನೋಡುವುದೆಂದರೆ ಒಂದು ಜಡವಾದ ಕಾರ್ಯವಲ್ಲ. ಆಲೋಚನೆಯ ಸ್ತರದಲ್ಲಲ್ಲ. ಇಲ್ಲಿ ಹೇಳುತ್ತಿರುವುದು ವಾಸ್ತವವಾಗಿ, ಎಲ್ಲರೂ ಇಡೀ ರಾತ್ರಿ ಸುಮಾರು ಒಂಬತ್ತು ಗಂಟೆ ದೀರ್ಘ ಅವಧಿಯಲ್ಲಿ ಆಟವನ್ನು ಮಾತ್ರ ನೋಡುವುದಿಲ್ಲ, ಸ್ವಲ್ಪ ನಿದ್ದೆ ಮಾಡಿ ಬೆಳಗ್ಗಿನ ಪ್ರಸಂಗಕ್ಕೆ ಏಳುವವರು, ಟಿ ಕುಡಿಯಲು ಹೋಗುವವರು, ಚೌಕಿ ಮನೆಗೆ ಓಡಾಡಿಕೊಂಡು ಬರಲು ಹೋಗುವವರು ಇರುತ್ತಾರೆ. ಈ ರೀತಿಯ ‘ನೋಡುವಿಕೆ’ ಈಗಿನ ರಂಗಭೂಮಿಯ ನೋಡುವಿಕೆಯ ಕಲ್ಪನೆಯಿಂದ ಹೊರತಾದದ್ದು.

ಇದನ್ನೂ ಇನ್ನು ಸ್ಪಷ್ಟಪಡಿಸಬೇಕಾದರೆ ಇನ್ನೊಂದು ದೃಷ್ಟಿಕೋನಕ್ಕೂ ಅದನ್ನು ಕಟ್ಟಿಕೊಟ್ಟ ಜೀವನ ಕ್ರಮಕ್ಕೂ ಮತ್ತು ಅಂಥಾ ಸಮುದಾಯದಲ್ಲಿ ಯಕ್ಷಗಾನದ ಅರ್ಥ, ಸ್ಥಾನವೇನು ಎನ್ನುವುದನ್ನು ವಿವರಿಸಬೇಕಾಗುತ್ತದೆ. ಮಧ್ಯಮವರ್ಗವು ಗುರುತಿಸಲಾಗುವಂಥ ಒಂದು ವರ್ಗವಾಗಿ ಬೆಳೆಯುತ್ತಿದ್ದಂತೆ, ಬೆಳಿಗ್ಗೆಯಿಂದ ಸಂಜೆಯತನಕ ಕೆಲಸ, ಸಂಜೆ ರಂಜನೆ. ಬೆಳಗ್ಗಿನ ಆಫೀಸಿನ ಕೆಲಸಕ್ಕೆ ಹೋಗುವುದಕ್ಕೆ ತೊಂದರೆಯಾಗದಂತೆ ರಾತ್ರಿಯ ನಿದ್ದೆ ಇವೆಲ್ಲವೂ ಸುಸೂತ್ರವಾಗಿ ನಡೆಯುವಂತಹ ಜೀವನ ಶೈಲಿಯು ಬೆಳೆಯಿತು. ಕಾಲಮಿತಿ ಮತ್ತು ಒಳಾಂಗಣದ ಆಟಗಳು ಹೆಚ್ಚುತ್ತಿರುವುದಕ್ಕೂ ಮಧ್ಯಮ ವರ್ಗದ ಜೀವನ ಶೈಲಿಗೂ ಹತ್ತಿರದ ಸಂಬಂಧವಿದೆ.

ಇಲ್ಲೇ ಇನ್ನೊಂದು ವಿಷಯವನ್ನು ಸ್ಪಷ್ಟಪಡಿಸಬೇಕು. ಮಧ್ಯಮವರ್ಗ ಮತ್ತು ಅದರ ಜೀವನ ಶೈಲಿಯ ಚಲನೆಯು ಒಂದೇ ಸಲ, ಮತ್ತು ನಿಖರವಾಗಿ ನಡೆಯುತ್ತದೆಯೆಂದಲ್ಲ. ಈಗಿನ ಕೃಷಿ ಕುಟುಂಬಗಳು ಕೂಡ, ಈ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಕೆಲವೊಂದು ಬೆಳೆಯ ಕೃಷಿಯು ಅದಕ್ಕೆ ಪೂರಕವಾಗಿ ಬದಲಾಗುತ್ತಿದೆ. ಕೆಲವೊಂದು ಕೃಷಿ ಕೆಲಸಗಳೇ ಈ ರೀತಿಯ ಜೀವನ ಕ್ರಮಕ್ಕೆ ತಡೆಯನ್ನೊಡ್ಡುತ್ತದೆ. ಆದರೆ ಅಂತಹ ನಡೆಗೆ ಪ್ರಯತ್ನವಂತೂ ನಮ್ಮ ಸಮಾಜದಲ್ಲಿ ಕಾಣುತ್ತಿದೆ.

ಕೃಷಿ ಅಥವಾ ಇನ್ನಿತರ ತಮ್ಮ ಪಾರಂಪರಿಕ ಕೆಲಸಗಳನ್ನು ಬಿಟ್ಟು ನಗರಗಳಿಗೆ, ಹೊಸ ರೀತಿಯ ಕೆಲಸಗಳಿಗೆ ಹೋಗುವುದು, ಯಕ್ಷಗಾನ ಪ್ರಚಲಿತವಿರುವ ಜಿಲ್ಲೆಗಳಲ್ಲಿ ಸರ್ವೇಸಾಮಾನ್ಯವಾಗಿವೆ. ಈ ಟ್ರೆಂಡ್ ಎಲ್ಲಾ ವರ್ಗಗಳಲ್ಲಿಯೂ ಇವೆ. ಮಧ್ಯಮವರ್ಗದ ವಿದ್ಯಾವಂತ ಮತ್ತು ನಗರಕ್ಕೆ ಮುಖ ಮಾಡಿ ನಿಂತ ಸಮುದಾಯ ಯಕ್ಷಗಾನಕ್ಕೆ ತೊಡಗಿಸಿಕೊಂಡಂತೆಲ್ಲಾ ಯಕ್ಷಗಾನದ ರಂಜನೆಯ ಸ್ವರೂಪ ಬೇರೆಯಾಗುತ್ತಾ ಬಂದಿದೆ. ಆಟವು ಕಲೆಯಾಗಿದ್ದು ಹೀಗೆಯೇ.

ಅತಿಯಾದ ಹಾಸ್ಯವನ್ನು ಇಷ್ಟಪಡದ, ಪುರಾಣಕತೆಯಿಂದ ಒಂದು ಚೂರೂ ಆಚೆ ಈಚೆ ಹೋಗದಂತೆ ‘ಹಿತಮಿತ’ವಾದ ಮಾತು, ಪಾತ್ರದ ‘ಔಚಿತ್ಯ ಮೀರದ’ ಕುಣಿತ. ಮತ್ತು ಪಾತ್ರಗಳ ‘ಸರಿಯಾದ ಭಾವ’ವನ್ನು ಹೊರತರುವಂತಹ ಭಾಗವತಿಕೆ. ಯಕ್ಷಗಾನವನ್ನು ಈ ರೀತಿಯಿಂದ ಅಸ್ವಾದಿಸುವುದು, ಇಂತಹ ಬದುಕನ್ನು ಒಪ್ಪಿಕೊಂಡವರಿಗೆ ಅನಿವಾರ್ಯವಾಗಿದೆ. ‘ಎಲ್ಲೆಂದೆರಲ್ಲಿ ಎಳೆಯುತ್ತಾ, ಮುಖ್ಯ ಕತೆಗೆ ಪೂರಕವಲ್ಲದ ಹಾಸ್ಯ, ಮಾತುಗಳು, ಅಭಿನಯದ ಹೊರತಾದ ಕುಣಿತಗಳು, ಭಾಗವತರ ದೀರ್ಘ ಭಾಮಿನಿಗಳು’ ಅವರಿಗೆ ಪ್ರದರ್ಶನದ ಅಂದವನ್ನು ಕೆಡಿಸುತ್ತದೆ.

ಇಲ್ಲಿ ಮಹಾಬಲ ಹೆಗಡೆಯವರ ಮಾತುಗಳು ನೆನಪಾಗುತ್ತದೆ. ಮೊಟ್ಟ ಮೊದಲಿಗೆ ಕಾಲ ಮಿತಿ ಪ್ರದರ್ಶನವನ್ನು 1978 ರಲ್ಲಿ ಕಮಲಶಿಲೆ ಮೇಳದ ವ್ಯವಸ್ಥಾಪಕರಾಗಿ ತಂದವರು ಮಹಾಬಲ ಹೆಗಡೆಯವರು ಎಂದು ಕೇಳಿದ್ದೇನೆ. ಒಂದು ಸಂದರ್ಶನದಲ್ಲಿ ಅವರು ಇಂತಹ ಪ್ರಯೋಗಕ್ಕೆ ಹಿನ್ನಲೆಯಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ;
“ಯಾವುದೇ ಕಲೆಗೆ ಸಂಬಂಧಪಟ್ಟ ವ್ಯವಹಾರ ದೀರ್ಘವಾಗಬಾರದು ಎಂಬುದು ನನ್ನ ನಿಲುವು. ದೀರ್ಘವಾದುದು ರೇಜಿಗೆ ಹುಟ್ಟಿಸುತ್ತದೆ. ಕಲೆ ಇರುವುದು ಸಂತೋಷಕ್ಕಾಗಿ. ಅದು ಬೇಕು ಎನ್ನುವಾಗಲೇ ಮುಗಿಯಬೇಕು. ಇದಕ್ಕೆ ಪ್ರಧಾನ ಕಾರಣವೆಂದರೆ ಪ್ರದರ್ಶನದ ಪರಿಣಾಮದ ತೀಕ್ಷ್ಣತೆಯು ಮಂಕಾಗಬಾರದು. ಆದರೆ ಮೊನೆ ವರ್ಚಸ್ಸು ಸದಾ ಉಳಿಯುವಂತಿರಬೇಕು. ಆಕಳಿಸುತ್ತಾ ತೂಕಡಿಸುತ್ತಾ ಬೆಳಗು ಆಗಲಿಲ್ಲವಲ್ಲ ಎನ್ನುವಂತಿರಬಾರದು. ಇಡೀ ರಾತ್ರಿಯ ಪ್ರದರ್ಶನವೆಂದರೆ ‘ಬೆಳಗು ಮಾಡುವುದೇ’. ಆರ್ಥಿಕವಾಗಿ ಇದು ಅನುಕೂಲವಾಗುವ ಸಾಧ್ಯತೆ ಇದೆ….. ಕಲೆಯ ಹಿತದೃಷ್ಟಿಯಿಂದ, ಪ್ರೇಕ್ಷಕರ ಹಿತದೃಷ್ಟಿಯಿಂದ, ಕಲಾವಿದರ ಹಿತದೃಷ್ಟಿಯಿಂದ ಇದು(ಕಾಲಮಿತಿ) ಅಗತ್ಯ. ಇಂದಲ್ಲ ನಾಳೆ ಈ ಬಗೆ ಬಂದೀತು.”

ಆ ಹೊತ್ತಿಗಾಗಲೆ, ಯಕ್ಷಗಾನವನ್ನು ಅದು ಕೊಡುವ ಸಂತೋಷವನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವ ನೋಡುವ ಪ್ರಕ್ರಿಯೆಯು ಶುರುವಾಗಿದ್ದು ಕಾಣುತ್ತದೆ. ಬೆಳಗು ಮಾಡುವುದು(ಮೂಲ ಪಠ್ಯದಲ್ಲೇ ಎತ್ತಿತೋರಿಸಿರುವ) ಮತ್ತು ತೀಕ್ಷ್ಣವಾಗಿ, ಮೊನಚಾಗಿ, ಬೇಗ ಮುಗಿಯುವ ಕಲೆಯಾಗುವುದು ಇವುಗಳ ವ್ಯತ್ಯಾಸವು ಸ್ಪಷ್ಟವಾಗಿದೆ. ಇಲ್ಲಿ ‘ಕಲೆ’ಯ ಹಿತದೃಷ್ಟಿಯಿಂದ’ ಎನ್ನುವ ಮಾತನ್ನು ಗಮನಿಸಬೇಕು. ಪ್ರೇಕ್ಷಕರ ಹಿತದೃಷ್ಟಿ, ಕಲಾವಿದರ ಹಿತದೃಷ್ಟಿ ಸುಲಭವಾಗಿ ಅರ್ಥವಾಗುತ್ತದೆ. ಆದರೆ ಕಲೆಯ ಹಿತದೃಷ್ಟಿ ಎಂದರೇನು? ಈ ದೃಷ್ಟಿಯಲ್ಲ್ಲಿ ಯಕ್ಷಗಾನವೆಂಬುದು ಈಗಲೂ ಆರಾಧನೆಯೆ ಆಗಿದೆ, ದೇವರ ಬದಲಿಗೆ ‘ಕಲೆ’ಯು ಆ ಸ್ಥಾನವನ್ನು ತುಂಬಿದೆ. ಪ್ರೇಕ್ಷಕರು, ಮತ್ತು ಕಲಾವಿದರನ್ನು ಬಿಟ್ಟೂ ಕಲೆಯೆಂಬುದಿದೆ ಎನ್ನುವ ಮಾತುಗಳು ಬಯಲಾಟದ ರಂಜನೆಯ ವಿವರಣೆಯಲ್ಲಿ ಸಿಗುವುದಿಲ್ಲ. ಅಡುಗೆ ಮಾಡುವುದು ಊಟ ಮಾಡುವವರ, ಅಡುಗೆ ಮಾಡುವವರ ಹಿತದೃಷ್ಟಿ, ಅಂದರೆ ಅಡುಗೆಯ ಹಿತದೃಷ್ಟಿಯಿಂದ ಎಂದಂತೆ ಇದು. ಬಯಲಾಟದ ರಂಜನೆಯನ್ನು ಸವಿಯುವವರಿಗೆ ಇದು ಇಂಥದ್ದೆ ಒಂದು ಜೀವನದ ಭಾಗ. ಯಕ್ಷಗಾನದ ರಂಜನೆ ವಿಶೇಷ ಅಡುಗೆಯಂತೆ, ನಿತ್ಯದ ರುಚಿಯಿಂದ ಬಿಡುಗಡೆಯಂತೆ.

ಮಧ್ಯಮವರ್ಗಕ್ಕೂ ಇದು ಬಿಡುಗಡೆಯೇ, ಆದರೆ ಬೇರೆ ರೀತಿಯದ್ದು. ಜೀವನ ಯಾಂತ್ರಿಕವಾದಂತೆಲ್ಲ, ಮಾಡುವ ಕೆಲಸಕ್ಕೂ ಪರಂಪರಾಗತ ಜೀವನ ಶೈಲಿಗೂ ಅಂತರ ಏರ್ಪಟ್ಟಂತೆ. ಬೇರಿಲ್ಲದೆ ಅತಂತ್ರವೆನಿಸುವ ಬದುಕಿಗೆ ಹೊಸ ಅರ್ಥವನ್ನು ಯಕ್ಷಗಾನ ಕೊಡುತ್ತದೆ. ಇದೊಂದು ಆಕಾಂಕ್ಷೆಯಾಗುತ್ತದೆ. ಸೋಶಿಯಲ್ ಮೀಡಿಯಾ ಬಳಸಲು ಅನುಕೂಲವಿರುವ ಮಧ್ಯಮವರ್ಗ ಮತ್ತು ಯಕ್ಷಗಾನದಲ್ಲಿ ತೊಡಗಿಕೊಂಡ ಹೊಸ ತಲೆಮಾರಿನ ಚರ್ಚೆಗಳಲ್ಲಿ ಇವು ಢಾಳಾಗಿ ಕಾಣುತ್ತವೆ. ಇದರ ಮೂಲಕ ‘ಪರಂಪರೆ’ಯ ಜೊತೆ ಕೊಂಡಿಯಾಗಿ ಬದುಕಿಗೆ ಹೊಸ ಅರ್ಥವನ್ನು, ಹೊಸ ಅಸ್ಮಿತೆಯನ್ನು ಕಂಡುಕೊಳ್ಳುವುದು.

ಜನರ ಗುಂಪಿನಿಂದ, ಬಯಲಾಟದ ಪ್ರೇಕ್ಷಕರಿಂದ ಪ್ರತ್ಯೇಕಿಸಿಕೊಂಡ ರಂಜನೆಯನ್ನು ಆಸ್ವಾದಿಸುವುದು ವಿಶೇಷ ಅರ್ಥವನ್ನು ಕೊಡುತ್ತದೆ. ಬಯಲಾಟದ ರಂಜನೆಯು ಸಮುದಾಯವಾಗಿ ಆಸ್ವಾದಿಸುವುದು ಮತ್ತು ಕಾಲಮಿತಿ ಪ್ರಯೋಗಗಳನ್ನು ವ್ಯಕ್ತಿಯಾಗಿ ಆಸ್ವಾದಿಸುವುದು. ಇವೆರೆಡು ರೀತಿಯ ರಂಜನೆಯು ಮುಖಾಮುಖಿಯಾಗುತ್ತಿರುತ್ತದೆ. ಈ ಹಿನ್ನಲೆಯಲ್ಲಿ ‘ಪರಂಪರೆ’ ಮತ್ತು ‘ಬದಲಾವಣೆ’ಯನ್ನು ಎರಡು ವಿರುದ್ಧ ದಿಕ್ಕಿನ ಓಟದಂತೆ ನೋಡುತ್ತಿರುವ ಯಕ್ಷಗಾನದ ವಲಯದ ಸಾಮಾಜಿಕ ಸಂದರ್ಭದ ಮೇಲೆ ಹೆಚ್ಚು ಬೆಳಕು ಬೀರಬೇಕಾಗುತ್ತದೆ.

ಇವೆರಡಕ್ಕು ಬಂದ ಮತ್ತು ಈಗಲೂ ಬರುತ್ತಿರುವ ವ್ಯಾಖ್ಯಾನಗಳು, ಸಮರ್ಥನೆಗಳು ಯಕ್ಷಗಾನ ಸಮುದಾಯದ ಮನಸ್ಥಿತಿಯನ್ನು ಮತ್ತು ಅದು ಯಕ್ಷಗಾನವನ್ನು ವರ್ತಮಾನದಲ್ಲಿ ಕೊಂಡೊಯ್ಯುತ್ತಿರುವ ಮಾರ್ಗಗಳನ್ನು ಅರಿಯಲು ಸಹಾಯ ಮಾಡಬಹುದು.