ದೇವಲೋಕಕ್ಕೆ ಸ್ವಾಗತ

ಕತ್ತಲು ಬೆಳಗಲು ದೀಪ ಹಚ್ಚಬೇಕಾದ ಸ್ಥಿತಿ ನಮ್ಮದು
ಸ್ವಯಂ ಬೆಳಕಿನ ಅಂಶವನ್ನು ನಾವು ಕಳೆದುಕೊಂಡಿದ್ದೇವೆ

ಬೆಳಕು ಮಧ್ಯಾಹ್ನಕ್ಕೆ ಕೆನ್ನಾಲಿಗೆಯಾಗಿ ರಣ ಬಿಸಿಲು ಸುಡುತ್ತದೆ
ಸಂಜೆಗೆ ಕಾಮನ ಜ್ವಾಲೆಯಂತೆ ಸಿಡಿಲು ಮಿಂಚು ಬರೀ ಅಬ್ಬರ
ರಾತ್ರಿಗೆ ಮತ್ತೆ ಕತ್ತಲಿಗೆ ಜೋತು ಬಿದ್ದ ಚಂದ್ರ ಸುಮ್ಮನೆ ನಗುತ್ತಾನೆ

ದೇವತೆಯ ಕಣ್ಣ ಹೊಳಪನ್ನು ತುಂಬಿಕೊಳ್ಳಬೇಕು ನಾನು
ಆದರೆ ಸರಿರಾತ್ರಿಯ ಕತ್ತಲು ಕಣ್ತುಂಬಿದೆ
ಸರಿದುಹೋಗಬಹುದಾದ ಬೆಳಕು ಕತ್ತಲುಗಳು
ಹೊಳಪಿನ ಮಗ್ಗುಲುಗಳು
ದೇವಲೋಕಕ್ಕೆ ಇವುಗಳಿಗೆ ಪ್ರವೇಶವೇ ಇಲ್ಲ

ಸುತ್ತ ಉರಿಯುತ್ತಿರುವ ದೀಪಗಳು ಆರುವ ತನಕ ತಡಿ
ಆರಿ ಕತ್ತಲಾವರಿಸಿದರೆ ನಾನು ನಿನ್ನನ್ನು ಕೂಡುವೆ

ಶಾಂತಿಯ ಧಗೆಯಿಂದ ಕತ್ತಲನ್ನು ಹೊತ್ತಿಸು
ಖುಷಿಯ ಗಾಳಿ ಬೀಸಿ ಒಂದೇಸಮ ಕಿಟಕಿ ಬಡೆದುಕೊಳ್ಳುತ್ತವೆ
ದುಃಖ ಬಾಗಿಲು ದಾಟುತ್ತದೆ ಅದರಪಾಡಿಗೆ,
ಕಾರ್ಗಲ್ಲಿನಂತೆ ಕಪ್ಪಾದ ಇರುಳು ನೀರ್ಗಲ್ಲಿನಂತೆ ಬೆಳಕಾಗಿ
ಎರಡೂ ಮಗ್ಗಲು ಒಂದು ಕ್ಷಣ ಮಿಂಚಿ ಹೊಳೆಯುತ್ತವೆ

ರಾಕ್ಷಸರ ವೇಶ ತೊಟ್ಟ ದೇವರುಗಳು ಮತ್ತು
ಇವರಂಥ ಅವರು ನಿನ್ನ ಬರುವಿಕೆಗಾಗಿ ಕಾದಿದ್ದಾರೆ
ಈಗ ಸ್ವರ್ಗ ನರಕದ ಬಾಗಿಲುಗಳು ಒಟ್ಟಿಗೆ ತೆರೆದಿವೆ
ದೇವಲೋಕಕ್ಕೆ ಸ್ವಾಗತ ನಿನಗೆ

ಅಂಗುಲಿಮಾಲನ ಕೊನೆಯ ಬೋಧನೆ

ಅಂಗೈಗೆರೆಗಳು ಉರಿದಂತೆ ಒಡಲೊಳಗೆ ಕುದಿದು
ಮೌನಕ್ಕಾಗಿ ಧ್ಯಾನಿಸಿ ಬೊಗಸೆ ಒಡ್ಡಿದ

ಬೆಳಕೇ ತಾನಾದ ಕಣ್ಣೊಂದು
ಕೊನೆಯುಸಿರಿಗೆ ತೆರೆದ ಆಕಳಿಕೆಯ ಕಂಡು
ಜೀವನೀಗಿಕೊಂಡ ಒಣಗಿದೆಲೆ ಮೇಲಿನ ನೆರಳ ಮೌನ ಧ್ಯೇನಿಸಿ
ಸೊಗಸಾದ ಮಾತುಗಳಿದ್ದರೆ ಮೌನವೆ ಆಡಬೇಕು ಅವನ್ನು ಎಂದಿತು

ನಿನ್ನ ಪಾಲಿನ ಮುಕ್ಕಾಲು ಹಗಲುಗಳನ್ನು ಬಿಟ್ಟುಕೊಡು
ರಾತ್ರಿಯ ನರಳಿಕೆಗಳನ್ನು ವೈನು ಕುಡಿದು ತೆಕ್ಕೆಗೆ ತುಂಬಿಕೋ
ಒಮ್ಮುಖ ಪ್ರೀತಿ ಉರಿಯುತ್ತದೆ ಎಲ್ಲ ಮೀರಿ ನಿರಾಕರಣೆಯಲಿ
ತೈಲ ಬೇಕಿಲ್ಲ ಬೆಳಕಿಗೆ ಕತ್ತಲೆ ಸಾಕು ಭಿಕ್ಕು

ಏಕಾಂತದ ದವಲಾಗ್ನಿಯಲಿ ನೀನು
ಕವಿತೆಗಳಲ್ಲೆ ಉಳಿದುಬಿಟ್ಟೆ
ನನ್ನನ್ನೂ ಸುಟ್ಟು ತಾನೂ ಭಸ್ಮವಾದ
ಎಲ್ಲವನ್ನೂ ಆಕಾಶದ ಎದೆಯಲ್ಲಿ ಉಳಿಸಿಕೊಳ್ಳಬೇಕು

ಬೆರಳಿಗಿಂತ ತುಸುವೇ ದೊಡ್ಡದಾದ ಉಂಗುರ ದೇವರು,
ತೊಡಲೂ ಬಾರದ ಮುಚ್ಚಿಡಲೂ ಆಗದ ಅದನ್ನು ತೆರೆದೆದೆಯಲ್ಲಿಟ್ಟುಕೊಳ್ಳಬೇಕು

ಇಂದಿನವರೆಗೂ
ಬುದ್ಧ ಗೊತ್ತು ಅಂದ ಯಾರಿಗೂ ಬುದ್ಧ ದಕ್ಕಿಲ್ಲ
ಸ್ವತಃ ಸಿದ್ಧಾರ್ಥನಿಗೂ ಕೂಡ
ದಕ್ಕುವುದಿಲ್ಲ ಆತ ಆಪ್ತವಾಗಿ ಅಪ್ಪಿಕೊಳ್ಳಬಲ್ಲ ಅಷ್ಟೇ