ಭಾಗವತದ ವಿಷಯ ಬಂದಾಗ ನೆನಪಾಗುವದು ಕೃಷ್ಣ ಮತ್ತು ಗೋಪಿಕೆಯರ ರಾಸಲೀಲೆ. ಯಮುನಾ ನದಿಯ ತಟದಲ್ಲಿರುವ ಬೃಂದಾವನ, ಗೋಪಿಕಾ ಸ್ತ್ರೀಯರು ಮತ್ತು ಕೃಷ್ಣ ಇವೆಲ್ಲವೂ ಅವಿನಾಭಾವ ಸಂಬಂಧವನ್ನು ಹೊಂದಿರುವಂತವು. ಇಲ್ಲಿ ದಾಸ ದಾಸಿಯ ಭೇದಗಳಿಲ್ಲ. ಯಾರದೋ ಮಗಳು, ಮತ್ಯಾರದೋ ಹೆಂಡತಿ, ಇನ್ಯಾರದೋ ಸಹೋದರಿಯೋ ಆಗಿರುವವರೆಲ್ಲ ತಮ್ಮ ತಮ್ಮ ಅಸ್ತಿತ್ವವನ್ನು ಮರೆತು ಕೃಷ್ಣನಲ್ಲಿ ಒಂದಾಗುವ ಅದ್ವೈತೀ ಭಾವ. ಕೃಷ್ಣನೂ ಸಹ ತಾನು ದೇವನೆನ್ನುವದನ್ನು ಮರೆತು ಹಾಡು, ವೇಣುಗಾನ, ರಾಸಲೀಲೆಯಲ್ಲಿ ಮುಳುಗಿಬಿಡುತ್ತಾನೆ.
ಪ್ರೊ. ಕೆ.ಇ. ರಾಧಾಕೃಷ್ಣ ಅವರ “ಗೋಪಿಕೋನ್ಮಾದ” ಕೃತಿಯ ಕುರಿತು ನಾರಾಯಣ ಯಾಜಿ ಬರಹ

ಹಿರಿಯ ವಿದ್ವಾಂಸರಾದ ಪ್ರೊ. ಕೆ. ಇ. ರಾಧಾಕೃಷ್ಣರು ತಾವು ಅನುವಾದಿಸಿದ “ಗೋಪಿಕೋನ್ಮಾದ” ಎನ್ನುವ ಪುಸ್ತಕವೊಂದನ್ನುಕಳುಹಿಸಿದಾಗ ಈ ಕೃತಿಯ ತಲೆಬರಹವನ್ನು ನೋಡಿಯೇ ನಾನು ಅದರೆಡೆ ಆಸಕ್ತನಾದೆ. ಗೋಪಿಕೆಯರಿಗೆ ಕೃಷ್ಣ ಒಂದು ಹುಚ್ಚು, ಉನ್ಮಾದ, ಅದು ಸನ್ನಿಯೂ ಹೌದು. ಮುನ್ನುಡಿಯಲ್ಲಿ ಶ್ರೇಷ್ಠ ವಿದ್ವಾಂಸರಾದ ಜಿ. ವೆಂಕಟಸುಬ್ಬಯನವರಿಗೂ ಕಾಡಿದ ಶಬ್ಧವಂತೆ ಈ ಗೋಪಿಕೋನ್ಮಾದ. ಈ ಕೃತಿಯನ್ನು ಓದುತ್ತಾ ಹೋದಂತೆ ನಾವು ಈ ಉನ್ಮಾದದಲ್ಲಿ ಸಿಲುಕಿ ಕೊನೆಗೆ ನಾರದರ ಮೂಲಕ ಒಂದು ತಹಬಂದಿಗೆ ಬರುವ ಅವಸ್ಥೆ ತಲುಪುತ್ತೇವೆ.

(ಪ್ರೊ. ಕೆ.ಇ. ರಾಧಾಕೃಷ್ಣ)

ಭಾಗವತದ ವಿಷಯ ಬಂದಾಗ ನೆನಪಾಗುವದು ಕೃಷ್ಣ ಮತ್ತು ಗೋಪಿಕೆಯರ ರಾಸಲೀಲೆ. ಯಮುನಾ ನದಿಯ ತಟದಲ್ಲಿರುವ ಬೃಂದಾವನ, ಗೋಪಿಕಾ ಸ್ತ್ರೀಯರು ಮತ್ತು ಕೃಷ್ಣ ಇವೆಲ್ಲವೂ ಅವಿನಾಭಾವ ಸಂಬಂಧವನ್ನು ಹೊಂದಿರುವಂತವು. ಇಲ್ಲಿ ದಾಸ ದಾಸಿಯ ಭೇದಗಳಿಲ್ಲ. ಯಾರದೋ ಮಗಳು, ಮತ್ಯಾರದೋ ಹೆಂಡತಿ, ಇನ್ಯಾರದೋ ಸಹೋದರಿಯೋ ಆಗಿರುವವರೆಲ್ಲ ತಮ್ಮ ತಮ್ಮ ಅಸ್ತಿತ್ವವನ್ನು ಮರೆತು ಕೃಷ್ಣನಲ್ಲಿ ಒಂದಾಗುವ ಅದ್ವೈತೀ ಭಾವ. ಕೃಷ್ಣನೂ ಸಹ ತಾನು ದೇವನೆನ್ನುವದನ್ನು ಮರೆತು ಹಾಡು, ವೇಣುಗಾನ, ರಾಸಲೀಲೆಯಲ್ಲಿ ಮುಳುಗಿಬಿಡುತ್ತಾನೆ. ಭಾಗವತದ ದಶಮ ಸ್ಕಂದದಲ್ಲಿ ಬರುವ ಗೋಪಿಕಾ ಗೀತೆಯಂತೂ ಭಕ್ತಿ ಮತ್ತು ವಿಪ್ರಲಂಭ ಶೃಂಗಾರ ಎರಡರ ಅರ್ಥವನ್ನೂ ಕೊಡುತ್ತದೆ.

ಸುರತವರ್ಧನಂ ಶೋಕನಾಶನಂ
ಸ್ವರಿತವೇಣುನಾ ಸುಷ್ಠು ಚುಮ್ಬಿತಮ್ I

ಇತರರಾಗವಿಸ್ಮಾರಣಂ ನೃಣಾಂ
ವಿತರ ವೀರ ನಸ್ತೇsಧರಾಮೃತಮ್ II ಭಾ. X-31-14

(ರತಿಕ್ರೀಡೆಯ ಅಭಿಲಾಷೆಯನ್ನು ಹೆಚ್ಚಿಸುವಂತೆಯೂ, ವಿರಹದುಃಖವನ್ನು ಕಳೆಯುವಂತೆಯೂ, ನುಡಿಸಲ್ಪಡುವ ಕೊಳಲಿನಿಂದ, ಚನ್ನಾಗಿ ಮುತ್ತಿಕ್ಕಲ್ಪಡುವ ಮತ್ತು ಒಮ್ಮೆ ಪಾನಮಾಡಿದ ಮನುಷ್ಯರಿಗೆ ಇತರ ಭೋಗವಸ್ತುಗಳ ಮೇಲಿನ ಆಸೆಯನ್ನು ತೊರೆಯುವಂತೆ ಮಾಡುವ ಸುಕೋಮಲವಾದ ಮಧುರವಾದ ನಿನ್ನ ಅಧರಾಮೃತದ ರಸವನ್ನು ನಮಗೆ ದಯಮಾಡು)

ಗೋಪಿಕಾ ಸ್ತ್ರೀಯರು ಕೃಷ್ಣನ ಕುರಿತಾದ ಉನ್ಮಾದದಲ್ಲಿ ಮೈಮರೆತು ಆಡುವ ಮಾತುಗಳು ಹೃದಯಂಗಮವಾಗಿವೆ. ಇಲ್ಲಿ ಕೃಷ್ಣನೊಡನೆ ರಮಿಸಲು ಕಾತರರಾಗಿದ್ದಾರೆ; ಅದೇ ಕಾಲಕ್ಕೆ ಆತ ಸಿಗದಿರುವ ವಿರಹದಲ್ಲಿ ಬೇಯುತ್ತಿದ್ದಾರೆ. ಆತನ ಅಧರಾಮೃತದ ಸವಿಯನ್ನು ಸವಿದರೆ ಇತರ ಭೋಗವಸ್ತುಗಳ ಮೇಲಿನ ಮೋಹವೇ ಹೋಗಿಬಿಡುತ್ತದೆ ಎನ್ನುವಲ್ಲಿ ಅಭಿಸಾರಿಕೆಯ ಮನಸ್ಥಿತಿಯಿಂದ ನೇರವಾಗಿ ಯೋಗದ ತುರೀಯಕ್ಕೆ ಕೊಂಡೊಯ್ಯುವ ಸ್ಥಿತಿ ಇದು. “ನಾಹಂಕರ್ತಾ ಹರಿಕರ್ತಾ” ಎನ್ನುವದನ್ನು ಇಲ್ಲಿ ನೆನಪುಮಾಡಿಕೊಳ್ಳಬಹುದಾಗಿದೆ.

ಗೋಕುಲದಲ್ಲಿ ಕೃಷ್ಣ ಮತ್ತು ಗೋಪಿಕೆಯರ ನಡುವಿನ ಸಂಬಂಧವೆನ್ನುವದು ಹೊರಗಡೆ ನೋಡಲು ಕಾಮವಾಗಿ ಕಾಣುತ್ತದೆ. ನಮ್ಮಲ್ಲಿ ಕಾಮವೆಂದರೆ ಅದು ಮಡಿಯಾಗಿ, ಮರೆಮಾಚುವ ವಸ್ತುವಾಗಿರುವದಕ್ಕೆ ಬಹುಶಃ ವೇದಾಂತದ ಪ್ರಭಾವ ಕಾರಣವಿರಬಹುದೆನಿಸುತ್ತದೆ. ಕಾಮವೆನ್ನುವದು ಬಯಕೆಗೆ ಮೂಲ ಹೇತು; ಹೀಗೆ ಅಮಿತವಾದ ಕಾಮವೆನ್ನುವದು ಆ ವಸ್ತುವಿನಲ್ಲಿ ಪ್ರೇಮವನ್ನುಂಟು ಮಾಡುತ್ತದೆ. ಪತಿ ಮತ್ತು ಪತ್ನಿಯಾಗಲಿ, ಭಕ್ತ ಮತ್ತು ಭಗವಂತನಾಗಲಿ ಎರಡನೇ ಹಂತವಾದ ಈ ಪ್ರೇಮ ಪರಸ್ಪರ ಬಿಡಲಾರದ ಸ್ಥಿತಿಗೆ ತರುತ್ತದೆ. ಅದು ಅಮೃತಸಮಾನವಾದದ್ದು. ಇದು ಸಂಪೂರ್ಣದೊರೆತ ಮೇಲೆ ಸಿಗುವ ಅನುಭೂತಿಯೇ ಪರಮಾನಂದ. ಅವಧೂತ ಮಾರ್ಗವೂ ಇದನ್ನೇ ಹೇಳುತ್ತದೆ. ಹಾಗಾಗಿ ವೇದಾಂತದ ಕಠಿಣ ಮಾರ್ಗಕ್ಕಿಂತ ಭಗವಂತನನ್ನು ಸೇರಲು ಭಕ್ತಿಮಾರ್ಗ ಸುಲಭ. ಕಾಮದ ಉನ್ಮಾದ ಇಳಿದ ಮೇಲೆ ಕಾಮಿಸಿದ ವಸ್ತುವಿನ ಮೇಲೆ ಮತ್ತೂ ಪ್ರೀತಿ ಉಳಿಯುವದಿದೆಯಲ್ಲ ಅದು ನಿಜವಾದ ಪ್ರೇಮ. ಇದು ಒಂದರ್ಥದಲ್ಲಿ ತತ್ತ್ವಮಸಿ ಅಥವಾ ಸೋಹಂಬಾವ. “ನಾನು ಅವನು, ಅವನು ನಾನು” ಎನ್ನುವ ತುರೀಯಾವಸ್ಥೆಯಲ್ಲಿ ಇರುತ್ತೇವೆ. ಈ ಭಾವವನ್ನು ಜಯದೇವ ಕವಿಯ “ಗೀತಗೋವಿಂದ” ದಲ್ಲಿ ಕಾಣಬಹುದಾಗಿದೆ. ಅದೇ ರಿತಿ ಪುತಿನ ಅವರ ಗೋಕುಲ ನಿರ್ಗಮನದ ವಿರಹ ಕನ್ನಡ ಸಾಹಿತ್ಯಚರಿತ್ರೆಯಲ್ಲಿಯೇ ಒಂದು ಅತ್ಯಪರೂಪದ ಕೃತಿ, ಇಲ್ಲಿ ಗೋಪಿಕೆಯರು ಕೃಷ್ಣನನ್ನು ತಡೆಯಲು ಪ್ರಯತ್ನಿಸಿದರೂ ಅವನ ಪ್ರೇಮಪಾಶದಲ್ಲಿ ಬಂಧಿತರಾದವರಿಗೆ ಅವನನ್ನು ತಡೆಯುವ ಶಕ್ತಿಯಿಲ್ಲ. ಆದರೆ ರಾಧೆ ಹಾಗಲ್ಲ, ತನ್ನ ಮಾಯೆಯಿಂದ ಭಗವಂತನನ್ನೇ ಬಂಧಿಸಿಬಿಟ್ಟಿದ್ದಾಳೆ. ಆಕಯೇನಾದರೂ ಬಂದರೆ ಕೃಷ್ಣ ಹೋಗಲಾರದಂತೆ ಮಾಡುವ ಸಾಧ್ಯತೆ ಇದೆ. ಆದರೆ ಕೃಷ್ಣನ ಅವತಾರವೇ ಲೋಕೋದ್ಧಾರಕ್ಕಾಗಿ ಆಗಿರುವ ಕಾರಣ ಮಾಯೆ ರಾಧೆಯನ್ನು ಆ ಹೊತ್ತಿಗೆ ಮರೆಮಾಚಿಟ್ಟಿದ್ದಾಳೆ. ರಾದೆಯೆಂದರೆ ಕೃಷ್ಣನ ಕೊಳಲಿನ ನಾದವೂ ಹೌದು. ಇನ್ನು ಮುಂದೆ ನಾದವಿಲ್ಲ; ಕೇವಲ ರಣೋನ್ಮಾದ ಎನ್ನುವ ಮೂಲಕ ಪುತಿನ ಅವರು ಈ ಮಾಯೆಯಿಂದ ಜಗದೋದ್ಧಾರನನ್ನು ಬಿಡಿಸಿಬಿಡುತ್ತಾರೆ.

ಪ್ರಸಕ್ತ “ಗೋಪಿಕೋನ್ಮಾದ” ಎನ್ನುವ ಈ ಕೃತಿಯನ್ನು ಪ್ರೋ. ರಾಧಾಕೃಷ್ಣರಿಗೆ ಅನುವಾದ ಮಾಡಲು ಪ್ರೇರೇಪಿಸಿರುವದು ಕನ್ನಡದ ಶ್ರೇಷ್ಠ ವಿದ್ವಾಂಸರಾಗಿದ್ದ ಇಗೋ ಕನ್ನಡದ ಪ್ರೋ. ಜಿ. ವೆಂಕಟಸುಬ್ಬಯ್ಯನವರು. ಅವರಿಗೆ ಈ ಕೃತಿಯ ಹಸ್ತಪ್ರತಿ ತಿರುವನಂತಪುರದ ವಿಶ್ವವಿದ್ಯಾಲಯದಲ್ಲಿ ದೊರಕಿತ್ತು. ಮಂದಾಕ್ರಾಂತ ವೃತ್ತದಲ್ಲಿ ಮೂಲ ಕೃತಿ ರಚನೆಯಾಗಿದೆ. ಮಂದಾಕ್ರಾಂತ ಎಂದ ಕೂಡಲೇ ಕಾಳಿದಾಸನ ಮೇಘದೂತದ ಕಶ್ಚಿದ ಕಾಂತಾ ವಿರಹಗುರುಣಾ ಸ್ವಾಧಿಕಾರಾತ್ಪ್ರಮತ್ತಃ ನೆನಪಾಗುತ್ತದೆ. ವಿಪ್ರಲಂಭ ಶೃಂಗಾರದ ಅಪೂರ್ವವಾದ ರಚನೆ ಇದು. ಗೋಪಿಕೋನ್ಮಾದವೂ ವಿಪ್ರಲಂಭ ಶೃಂಗಾರದಲ್ಲಿಯೇ ಇದೆ. ವೆಂಕಟ ಸುಬ್ಬಯ್ಯನವರೇ ಹೇಳುವಂತೆ ಪಠಣ ಮಾಧುರ್ಯವನ್ನು ಹೊಂದಿದ ಕೃತಿ “ಗೋಪಿಕೋನ್ಮಾದ”. ಇಲ್ಲಿರುವದು ರಾಧೆಯಲ್ಲ, ಬದಲಿಗೆ ಭಾವನಾ ಎನ್ನುವ ಗೋಪಿಕಾ ಸ್ತ್ರೀ. ಆಕೆ ಕೃಷ್ಣನ ಸನ್ನಿಗೆ, ಅವನ ಪ್ರೀತಿಯ ಉನ್ಮಾದಕ್ಕೆ ಸಿಕ್ಕಿಬಿದ್ದಿದ್ದಾಳೆ. ಎರಡು ಭಾಗಗಳಲ್ಲಿ ಈ ಉನ್ಮಾದ ವ್ಯಕ್ತವಾಗಿವೆ. ಪ್ರಥಮ ಭಾಗದಲ್ಲಿ 68 ಶ್ಲೋಕಗಳು, ದ್ವಿತೀಯ ಭಾಗಗಳಲ್ಲಿ 57 ಶ್ಲೋಕಗಳಿವೆ. ಪ್ರೋ. ಕೆ. ಇ. ರಾಧಾಕೃಷ್ಣರು “ಮೂಲವನ್ನು ಅನುವಾದ ಮಾಡಲಿಲ್ಲ ಇದು ಅದರೆ ರೂಪಾಂತರ” ಎನ್ನುವ ಮಾತನ್ನು ಆಡುತ್ತಾರೆ. ಮೂಲದ ಮಂದಾಕ್ರಾಂತ ವೃತ್ತವನ್ನು ಅವರು ಚೌಪದಿಯಲ್ಲಿ ಬದಾಲಾಯಿಸಿದ ಕಾರಣಕ್ಕೆ ಹೀಗೆ ಹೇಳಿರಬಹುದೆನಿಸುತ್ತದೆ. ಕಾವ್ಯದ ಸೌಂದರ್ಯ ಇವರ ಲೇಖನಿಯಲ್ಲಿ ಮದನನ ಬಾಣದಂತೆ ಎದೆಗೆ ತಾಗುತ್ತದೆ. ವೃಂದಾವನದಲ್ಲಿ ಹೂವಾರಿಸಲು ಬಂದ ತರುಣಿ ಭಾವನಾ ಆಕಸ್ಮಿಕವಾಗಿ ಅಲ್ಲಿ ಬಂದ ಕೃಷ್ಣನನ್ನು ನೋಡಿದಳು.

ಕಾಚಿದ್ ವೃಂದಾವನ ಪರಿಸರೇ ಗೋಕುಲಂ ಚಾರಯಂತಂ
ಪಶ್ಚಾದೇತ್ಯ ಪ್ರಕೃತಿಮಧುರಂ ವಂಶಮಾಪೂರಯಂತಮ್
ತನ್ನಾದೇನ ಶ್ರುತಿಸುರಭಿರಣಾ ತೀರ್ಯಗಾಕೃಷ್ಣಮಾಣಾ
ಕೃಷ್ಣಂ ಕ್ರೀಡಾರಸಪರವಶಂ ಪುಷ್ಪಲಾವೀ ದದರ್ಶ

ಮೂಲದ ಈ ಪದ್ಯವನ್ನು ಇಲ್ಲಿ ಅನುವಾದಿಸಿರುವದು ಹೀಗೆ;

ಉದ್ಯಾನವನದಲ್ಲಿ ಹೂವಾರಿಸುವ ಹುಡುಗಿ
ಕೃಷ್ಣ ಕೊಳಲಿನ ಗಾನ ಸವಿದಳು ಸುಭಗೆ
ಕಿವಿಗಿಂಪು ಈ ಗಾನ ವೇದಸಾರದ ಜ್ಞಾನ
ಕ್ರೀಡೆ ಪರವಶ ಕೃಷ್ಣ ದರ್ಶನದ ಭಾಗ್ಯ

ಗೋಕುಲದಲ್ಲಿ ಕೃಷ್ಣ ಮತ್ತು ಗೋಪಿಕೆಯರ ನಡುವಿನ ಸಂಬಂಧವೆನ್ನುವದು ಹೊರಗಡೆ ನೋಡಲು ಕಾಮವಾಗಿ ಕಾಣುತ್ತದೆ. ನಮ್ಮಲ್ಲಿ ಕಾಮವೆಂದರೆ ಅದು ಮಡಿಯಾಗಿ, ಮರೆಮಾಚುವ ವಸ್ತುವಾಗಿರುವದಕ್ಕೆ ಬಹುಶಃ ವೇದಾಂತದ ಪ್ರಭಾವ ಕಾರಣವಿರಬಹುದೆನಿಸುತ್ತದೆ.

ವೇದದ ಸಾರವಾದ ಕೊಳಲ ಗಾನವನ್ನು ಕೇಳಿದ, ಆ ಮೂರ್ತಿಯನ್ನು ನೋಡಿದ ಗೋಪಿಕೆಗೆ ಕೃಷ್ಣನ ಮೇಲೆ ತಕ್ಷಣವೇ ಮೋಹವೆನ್ನುವದು ಆವರಿಸಿ ಕೃಷ್ಣ ತನ್ನವನು, ತನಗೆ ಮಾತ್ರ ಸೇರಿದವನೆನ್ನುವ ಮಹಾಕಾಮದ ಉನ್ಮಾದಕ್ಕೆ ಸಿಕ್ಕುಬಿದ್ದಳು. ಬಿದಿರಿಗೆ ರಂದ್ರಮಾಡಿದರೆ ಅದು ವೇಣು, ಉಸಿರು ತುಂಬಿದರೆ ವೇಣುಗಾನ. ಯಮನೂ ಸಹ ಕೊಳಲು ವಾದಕನೇ(ಋಗ್ವೇದದಲ್ಲಿ ಈ ಕುರಿತು ವಿವರಣೆ ಇದೆ). ದೇಹವೆನ್ನುವ ಕೊರಡಿಗೆ ಉಸಿರು ತುಂಬಿದಾಗ ಜೀವ. ಉಸಿರನ್ನು ಊದುವದನ್ನು ನಿಲ್ಲಿಸಿದರೆ ಅದೇ ಮರಣ. ವೇದದ ಪಾರಮಾರ್ಥವಾದ ಮೃತ್ಯು ರಹಸ್ಯವನ್ನು ತಿಳಿದವ ಯಮ ಮಾತ್ರ. ಇಲ್ಲಿ ಆಕೆಗೆ ಈ ವೇದದ ಸಾರದ ನಾದ ಮಾತ್ರ ಕೇಳಿಸಿದೆ. ಹಾಗಾಗಿ ಲೌಕಿಕ ಬದುಕಿನಲ್ಲಿ ಗೀಪಿಕೆಗೆ ಕೃಷ್ಣದರ್ಶನದಲ್ಲಿ ಆತನ ಬಾಹ್ಯ ವ್ಯಕ್ತಿತ್ವದ ಕುರಿತಾದ ಕಾಮಮಾತ್ರ ಉಂಟಾಗಿದೆ. ಕೃಷ್ಣನ ಸೌಂದರ್ಯವನ್ನು ವರ್ಣಿಸುವ ಪದ್ಯ ಹೀಗಿದೆ.

ಪದ್ಮರಾಗದ ಪಾದ ಇಂದ್ರ ನೀಲದ ಕಾಂತಿ
ಎದೆ ಮದ್ಯೆ ಶ್ರೀವತ್ಸ ಲಲಿತ ಭಿನ್ನಂಜನಾಭಿ

ಇನ್ನೊಂದರಲ್ಲಿ

ಇಂದ್ರ ಸಾವಿರಗಣ್ಣ ಅವಗಿಂತ ಇವ ಚಲುವ
ಚಂದ್ರ ಕಲಂಕಿತನಯ್ಯ ಇವ ನಿಷ್ಕಳಂಕ
ಕಾಮನೇ ಅನಂಗ ಇವ ಸುಂದರಾಂಗ
ಭೂಭಾರ ಪರಿಹಾರ ನಾರಾಯಣ ಶ್ರೀಕೃಷ್ಣ

ಮೂಲದ ಸೊಗಸಿನ ಭಿನ್ನಾಂಜನಾಭ ನೆನ್ನುವದನ್ನು ಅಷ್ಟೇ ಆಕರ್ಷಣೀಯವಾಗಿ ಕನ್ನಡೀಕರಿಸಿದ್ದಾರೆ. ಪ್ರತೀ ಪದ್ಯವೂ ಹೀಗೇ ಸುಂದರವಾಗಿ ಚಿತ್ರಿತವಾಗಿದೆ. ಇಂತಹ ದಿವ್ಯದೇಹಿಯನ್ನು ಕಂಡ ಮುನಿಗಳೇ ಆಕರ್ಷಿತರಾಗಿರುವಾಗ ಗೋಪಿಯ ಪಾಡೇನು; ಆಕೆಯೂ ಆಕರ್ಷಿತಳಾಗಿದ್ದಾಳೆ. ಕವಿ ʻಗೋಪಿಕೋನ್ಮಾದವಿದು ಯೌವನದ ಜೀವರಸ / ಅಭಿನವ ರಸಪೂರ್ಣ ಶೃಂಗಾರ ರಸಕಾವ್ಯ ʼ ವೆಂದು ಮೊದಲೇ ವರ್ಣಿಸಿಬಿಟ್ಟಿದ್ದಾರೆ. ಇಂತಹ ಕೃಷ್ಣನನ್ನು ತನ್ನೆಡೆಗೆ ಸೆಳೆಯಲು ಆಕೆ ಪ್ರಯತ್ನಿಸುತ್ತಾಳೆ. ಆ ಕಾಮ ಕೃಷ್ಣನ ಕುರಿತಾದ ಹುಚ್ಚಿಗೆ ತಿರುಗಿದೆ. ಸೊಂಟಕ್ಕೆ ಅಂಟಿದ್ದ ವಸನ ಜಾರಿದೆಯಂತೆ ಆಕೆಗೆ, ಉಬ್ಬಿದೆದೆ ಸೆರಗು ಸರಿದುಹೋಗಿತ್ತು. ತಾನ್ಯಾರು ಅವನ್ಯಾರು ಎನ್ನುವ ಅರಿವಿನ ಮೇರೆ ದಾಂಟಿ ಗೋಪಿ ವಿವಶಪರವಶಳಾಗಿ ಮದನಾಗ್ನಿಯಲ್ಲಿ ದಗ್ಧಳಾಗಿ ಹೋಗುತ್ತಾಳೆ. ಮಾಧವನ ನೋಟದಲಿ ಕರಗಿ ಹೋಗುತ್ತಾಳೆ. ಸ್ತಬ್ಧಳಾಗಿ ಬಿದ್ದವಳಿಗೆ ಕೃಷ್ಣನದೇ ಸ್ವಪ್ನ. ಈ ಸ್ವಪ್ನ ಕೃಷ್ಣನ ಕುರಿತಾದ ಧ್ಯಾನ, ಭಗವಂತನ ಧ್ಯಾನವೆಂದರೆ ಸ್ವಪ್ನದಾಚೆಗೆ ಸಿಗುವ ಸುಷುಪ್ತಿಲೋಕವಂತೆ. ಶೃಂಗಾರದ ವರ್ಣನೆ ಮಾಡುತ್ತಲೇ ಕೊಂಡೊಯ್ಯುವದು ವೇದಾಂತದ ಕಡೆಗೆ. ಸುಷುಪ್ತಿಯಂದರೆ ಸ್ವ ಅಪೀತಿ ತಾನಲ್ಲದ ಸ್ಥಿತಿ; ಈ ಸ್ಥಿತಿಯಲ್ಲಿ ಜೀವಾತ್ಮ ಪರಮಾತ್ಮನೊಡನೆ ರಮಿಸುತ್ತದೆ ಎಂದು ಉಪನಿಷತ್ತು ವಿವರಿಸುತ್ತದೆ. ಇಲ್ಲಿಯೂ ಸಹ ಭಾವನಾ ಎನ್ನುವದನ್ನು ಮನಸ್ಸು ಎಂದುಕೊಂಡರೆ ಈ ಮನಸ್ಸಿನ ಒಳಗಿರುವ ಜೀವಾತ್ಮ ಪರಮಾತ್ಮನಲ್ಲಿ ರಮಿಸಬೇಕೆನ್ನುವದನ್ನುʻಆತ್ಮಯೋನಿಗೆ ಬೇಕು ದೇವ ಮೈಥುನವುʼ ಎನ್ನುವ ಮೂಲಕ ತುಂಬಾ ಚನ್ನಾಗಿ ಪದ್ಯವನ್ನು ಕಟ್ಟಿಕೊಟ್ಟಿದ್ದಾರೆ. ಗೋಪಿಗೆ ಕೃಷ್ಣ ತನಗೊಬ್ಬನಿಗೆ ಬೇಕೆನ್ನುವ ಸ್ವಾರ್ಥವಿದೆ. ತಾನು ಸುಂದರಿಯೆನ್ನುವ ಅಹಮಿಕೆಯೂ ಇದೆ. ಈ ಅಹಮಿಕೆಯನ್ನು ತೊಲಗಿಸಲು ಕೃಷ್ಣ ಆಕೆಯೊಂದಿಗೆ ರಮಿಸಿ ಮಾಯವಾಗಿಬಿಡುತ್ತಾನೆ.

ಎಚ್ಚರವಾದ ಗೋಪಿಕೆಗೆ ಕೃಷ್ಣನನ್ನು ಹಿಡಿದು ತನ್ನಲ್ಲಿಯೇ ಇರಿಸಿಕೊಳ್ಳುವ ಹಂಬಲ, ಆದರೆ ಕೃಷ್ಣ ಕಾಣಿಸಲೊಲ್ಲ, ಆತ ಇದ್ದಾನೆ ಎಂದು ಭ್ರಮಿಸಿ ಆತನೊಡನೆ ರಮಿಸಿದ ಭ್ರಮೆಯಲಿದ್ದವಳಿಗೆ ಈಗ ಕೃಷ್ಣ ಕಾಣದಾದ. ಸ್ವಪ್ನದಲ್ಲಿ ಮೈಮರೆತವರು ಎಚ್ಚೆತ್ತಾಗ ಅದು ಕ್ಷಣ ಭಂಗುರವೆಂದೆಣಿಸದೇ ಒದ್ದಾಡುವ ಹಾಗೆ. ಇಲ್ಲಿಂದ ಮುಂದಿನ ಎಲ್ಲಾ ಪದ್ಯಗಳು ಗೋಪಿಕೆಯ ವಿರಹವನ್ನು ಬಣ್ಣಿಸುತ್ತವೆ. ಗೊಲ್ಲ ಕೃಷ್ಣನ ವಿರಹವೇದನೆಯಲ್ಲಿ ಭಾವನಾ ಮೂರ್ಛಿತಾಗುತ್ತಾಳೆ. ಅಲ್ಲಿಯೇ ಹಾರಾಡುತ್ತಿರುವ ದುಂಬಿಯೊಂದು ಆಕೆಯ ಮುಖವನ್ನು ನೋಡಿ ಹೂವೆಂದು ಭ್ರಮಿಸಿ ಮಧುವನ್ನು ಹೀರಲು ಹಾರಾಡುತ್ತದೆ. ದುಂಬಿ ಕೃಷ್ಣನ ಕಡೆಯಿಂದ ಬಂದಿರುವದೆಂದು ಗೋಪಿಗೆ ಅನುಮಾನ. ಅವಳು ದುಂಬಿಯೊಡನೆ ಕೃಷ್ಣನ ಕುರಿತಾದ ವಿರಹವನ್ನು ವ್ಯಕ್ತಪಡಿಸುವದು ತುಂಬಾ ಸುಂದರವಾಗಿ ಚಿತ್ರಿತವಾಗಿದೆ. ಕಪಟಿ ಕೃಷ್ಣನ ವೇಣು ಆಕೆಯನ್ನು ಸೋಲಿಸಿತಂತೆ. ಕೃಷ್ಣ ತನ್ನನ್ನು ಹೇಗೆಲ್ಲ ರಮಿಸಿದ್ದ ಎನ್ನುವದನ್ನು ನೆನಪು ಮಾಡಿಕೊಂಡು ಅವನಿಗಾಗಿ ವ್ಯಥಿಸುತ್ತಾಳೆ. ಮೃದು ನಖದಿ ಚಿವುಟುತ್ತ ಸಂಗಸುಖ ಕೊಟ್ಟಿದ್ದ ಆ ಅಪ್ಪುಗೆಯ ಸುಖವನ್ನು ನೆನೆದು ಮತ್ತೊಮ್ಮೆ ಮೂರ್ಛಿತಳಾಗುತ್ತಾಳೆ. ಅವಳ ಈ ಸ್ಥಿತಿಯನ್ನು ನೋಡಲಾರದೇ ಅವಳ ಸಖಿಯರು ಅವಳನ್ನು ಉಪಚರಿಸತೊಡಗಿದರು. ಮೂರ್ಛೆಯಿಂದೆದ್ದರೂ ಆಕೆಗೆ ಕೃಷ್ಣನದೇ ಕನಸು. ಅವಳ ಈ ಭ್ರಮೆಯನ್ನು ಹೋಗಲಾಡಿಸಲು ಕೃಷ್ಣ ಯಾರು ಎನ್ನುವದನ್ನು ಹೇಳುವದನ್ನು ಮನೋಹರವಾಗಿ ಹೇಳಲಾಗಿದೆ. ಆಕೆಯ ಕಾಮಾಗ್ನಿಯನ್ನು ಭಸ್ಮಮಾಡಲು ಅವರು ಕೊಡುವ ಉದಾಹರಣೆಗಳು

ಬಿಡುಗೆಳತಿ ಮನ ಬಂದ ನಿನಗೆಟುಕ ಅರವಿಂದ
ಕ್ಷಣಕಾಲ ಅವನೊಡನೆ ಸುಖಿಪ ಪುಣ್ಯವ ಪಡೆದೆ
ವೇದ ವಾಙ್ಮಯಗಳಲಿ ಶಾಸ್ತ್ರ ಸೂತ್ರಗಳಲ್ಲಿ
ಕೃಷ್ಣನನು ಹುಡುಕಿದರು ಯೋಗಿ ಜನರು

ಬದರಿಕಾಶ್ರಮದಲಿ ತಪಗೈಯುತ್ತಿರುವಾಗ ಇಂದ್ರ ಅಪ್ಸರೆಯರನ್ನು ಕಳುಹಿಸಿದರೆ ಊರ್ವಶಿಯನ್ನು ಸೃಷ್ಟಿಸಿದ ಕೃಷ್ಣನಲಿ ಪ್ರೇಮವೆಂದರೆ ಅದು ನಿನ್ನ ಮಂಕುಬುದ್ಧಿ ಎನ್ನುತ್ತಾರೆ. ಸ್ತನ್ಯಪಾನವನ್ನಿತ್ತ ಗೋಪಿಕೆಯರ ಸೀರೆಯನ್ನೇ ಕದ್ದ ಚೋರ, ಪೂತನಿಯ ಮೊಲೆಕುಡಿದು ಅವಳನ್ನೇ ಕೊಂದವ ಎನ್ನುತ್ತಾ ಕೃಷ್ಣನ ವಿಷಯದಲ್ಲಿ ಚಾಡಿ ಹೇಳುತ್ತಾರೆ. ಎಂತವರಿಗಾದರೂ ಮೂಲದ ಪದ್ಯದ ಭಾವವನ್ನು ಯಥಾವತ್ತಾಗಿ ತರುವದು ತುಂಬಾ ಸವಾಲುಗಳ ಸನ್ನಿವೇಶವನ್ನು ಪ್ರೊ. ರಾಧಕೃಷ್ಣರು ಸಹಜವಾಗಿ ರೂಪಾಂತರಿಸುತ್ತಾರೆ.

ರಾಮೋ ಭೂತ್ವಾರನಭುವಿ ಪುರಾ ರಾವಣಂ ದಾರಯಿತ್ವಾ
ಪ್ರತ್ಯಾನೀತಾಂ ಪ್ರಕೃತಿಕುಟಿಲಃ ಕಿಂ ವದಂತೀಂ ಪ್ರಮಾಣ್ಯ /
ಅಗ್ನೌ ಶುದ್ಧಾಮುಖಿಲಜನಿನೀಂ ಜಾನಕೀಂ ಯಸ್ತ್ವಮುಂಚ-
ನ್ನಿದ್ಯೆ ತಸ್ಮಿನ್ ರಮಯಸಿ ಮನ್ನೋ ನಿರ್ಘೃಣೇ ಹಂತ ಕೃಷ್ಣೇ //1- 35//

ನಿಷ್ಕರುಣಿ ಈ ದೇವ ಪತ್ನಿ ತ್ಯಜಿಸಿದ ರಾಮ
ರಾವಣನನು ಕೊಂದ ಸೀತೆಯನು ತಂದ
ಹೃದಯ ಇಲ್ಲದ ದೇವ ಬೆಂಕಿಯಲಿ ಬೇಯಿಸಿದ
ಪತ್ನಿಯನು ಬಿಟ್ಟವನು ನಿನಗಾವ ಸ್ನೇಹ // 1-38 //

ಮೂಲದ ವಸ್ತುವಿಗೆ ಪುಟವಿಟ್ಟಂತೆ ಮನಮುಟ್ಟುವ ಭಾವಾನುವಾದದ ಇಂತಹ ಅನೇಕ ಪದ್ಯಗಳನ್ನು ಗಮನಿಸಬಹುದಾಗಿದೆ. ಈ ಯಾವ ದೂರುಗಳೂ ಕೃಷ್ಣ ನಿಂದನೆಗಳೂ ಗೋಪಿಕೆಗೆ ಕೃಷ್ಣನನ್ನು ಮರೆಸಲು ಸಾಧ್ಯವಾಗುವದಿಲ್ಲ. ಆಕೆ ಸಾಗರಕೆ ಸೀತುವೆಯ ರಾಮ ಸೀತೆಗಾಗಿ ಕಟ್ಟಿದ, ರಾಮ ಸೇತು ರಾಮ ಸೀತೆಯರ ಪ್ರೇಮದ ಪ್ರತೀಕ, ಪೂತನಿಯನ್ನು ಕೊಲ್ಲುವ ಮೂಲಕ ಹಲವು ಶಿಶುಗಳನುಳಿಸಿ ಲೋಕೊದ್ಧಾರವನ್ನು ಮಾಡಿದವ ಆತ. ಹೀಗಿರುತ್ತಾ ಆತನ ಮೇಲಿನ ಪ್ರೀತಿ ಕ್ಷಣಿಕ ಆಗುವದಾದರೂ ಹೇಗೆ ಎಂದು ಪ್ರಶ್ನಿಸುತ್ತಾಳೆ. ಇದೀಗ ಲಕ್ಷ್ಮಿಯನ್ನು ಆತ ಬಿಟ್ಟಿದ್ದಾನೆ, ಗೋಪಿಯರು ಜತೆಗಿಲ್ಲ ಏಕೆಂದರೆ ತನಾಗಾಗಿ ಆತ ಇವರೆಲ್ಲರನ್ನು ಬಿಟ್ಟಿದ್ದಾನೆ ಎಂದು ಹಲಬುತ್ತಾಳೆ. ಇಲ್ಲಿ ಕಾಳಿದಾಸನ ಮೇಘದೂತದಲ್ಲಿ ಅಲಾಕಾಪುರಿಯಲ್ಲಿ ಯಕ್ಷ ಮೇಘದೊಡನೆ ತನ್ನರಸಿ ತನ್ನ ವಿರಹವೇದನೆಯಲ್ಲಿ

ಉತ್ಸಂಗೇ ವಾ ಮಲಿನ ವಸನೇ ಸೌಮ್ಯ ನಿಕ್ಷಿಪ್ಯ ವೀಣಾಂ
ಮದ್ಗೋತ್ರಾಂಕಂ ವಿರಚಿತಪದಂ ಗೇಯ ಮುದ್ಗಾತು ಕಾಮಾ
ತಂತ್ರೀಮಾರ್ದ್ರಾಂ ನಯನಸಲಿಲೈಃ ಸಾರಯಿತ್ವಾ ಕಥಂಚಿದ್
ಭೂಯೊ ಭೂಯಃ ಸ್ವಯಮಪಿ ಕೃತ್ವಾಂ ಮೂರ್ಛನಾಂ ವಿಸ್ಮರಂತೀ

ವಿರಹವೇದನಯಿಂದ ಮಲಿನವಸನೆಯಾದ ಆಕೆ ಸುಮ್ಮನೆ ಕುಳಿತಿದ್ದಾಳೆ. ತೊಡೆಯಮೇಲೆ ವೀಣೆ ಹಾಗೇ ಬಿದ್ದಿದೆ. ಇನಿಯನ ನೆನಪಿನಲ್ಲಿ ಹರಿಯುತ್ತಿರುವ ಕಣ್ಣೀರು ತಂತಿಯ ಮೇಲೆ ಹರಿದು ಶೃತಿ ಇಳಿದಿದೆ. ವೀಣೆಯ ಶೃತಿ ಮಾಡುತ್ತಾ ಆಕೆ ಹಾಡಲು ಬಯಸುತ್ತಿದ್ದಾಳೆ. ಆದರೆ ಹಾಡೇ ಮರೆತು ಹೋಗಿದೆ. ಕಾಳಿದಾಸನ ವೈದರ್ಭಿ ಶೈಲಿಯ ಈ ಮಟ್ಟದ ವಿರಹವನ್ನು ಸರಿಗಟ್ಟಲು ಸಾಧ್ಯವಾಗುವದಿಲ್ಲವಾದರೂ ಪರಿವಾರ ತ್ಯಕ್ತ ಜಿಂಕೆಯ ತೆರದಿ ಕಾಂತಾ ಕಾಂತಾ ಎಂದು ಹಂಬಲಿಸುವ ಭಾವ ವಿರಹದ ಉತ್ಕಂಟಿತ ಸ್ಥಿತಿಗೆ ಕೊಂಡೊಯ್ಯುವಲ್ಲಿ ಸಫಲವಾಗಿದೆ.

ಹಾರಡುತ್ತಿರುವ ದುಂಬಿಯ ಕಡೆ ನೋಡಿ ನನ್ನನ್ನು ಮುಟ್ಟದಿರು “ಕಾಣುತಿದೆ ಸವತಿಯರ ಕುಂಕುಮದ ಕೆಂಪು” ಎನ್ನುತ್ತಾಳೆ. ದುಂಬಿ ಕೃಷ್ಣನ ದೂತ ಎನ್ನುವದು ಅವಳ ನಂಬುಗೆ. ಕೃಷ್ಣನ ಸವತಿಯರ ಸ್ತನದ ಮೇಲಿನ ಕುಂಕುಮ ಕೃಷ್ಣನ ಅಪ್ಪುಗೆಯಿಂದ ಆತ ಧರಿಸಿರುವ ಪುಷ್ಪ ಮಾಲೆಗೆ ಬಳಿದಿದೆ. ಆ ಹೂವಿನ ಮಧುವನ್ನು ಸವಿದಿರುವ ದುಂಬಿಯ ಮುಖಕ್ಕೆ ಅವರ ಕುಂಕುಮವು ಮೆತ್ತಿಕೊಂಡಿದೆ, ಹಾಗಾಗಿ ದುಂಬಿ ತನ್ನನ್ನು ಮುಟ್ಟಕೂಡದು. ಕೃಷ್ಣ ತನ್ನೊಬ್ಬನಿಗೇ ಸೇರಿರಬೇಕು ಎನ್ನುವದು ಗೋಪಿಕೆಯ ಬಯಕೆಯ ಉನ್ಮಾದ. ಈ ಖ್ಂಡಕಾವ್ಯದ ಎರಡನೆಯ ಉನ್ಮಾದದಲ್ಲಿಯೂ ಗೋಪಿಕೆಯ ಈ ವಿರಹ ವೇದನೆ ಮುಂದುವರಿಯುತ್ತದೆ. ಕೃಷ್ಣ ಅಕ್ರೂರನೊಂದಿಗೆ ಮಥುರೆಗೆ ಹೋಗಿದ್ದಾನೆ. ಅಕ್ರೂರ ಗೋಪಿಕೆಯ ಜಗದಲ್ಲಿ ಕ್ರೂರ ತಾನಾದನಂತೆ. ಎನ್ನೊಡನೆ ಕ್ರೀಡಿಸುತ ಸುರತವಾಡುವ ನೀನು/ ಮುಷ್ಟಿ ಕಾಳಗಕೆಂದು ಎನ್ನ ತ್ಯಜಿಸುವೆಯಾ// ಎಂದು ಹಲಬುತ್ತಾಳೆ. ಯಶೋಧೆಯೆ ನಿನ್ನ ಮಗ ಕದ್ದಿಹನು ತನ್ನ ಮನೆವೆನ್ನುವ ಶುದ್ಧ ಬೆಣ್ಣೆಯನು ಎಂದು ಬಿಕ್ಕುತ್ತಾಳೆ. ಅವನ ಹೆಜ್ಜೆಯ ಹಚ್ಚೆ ಈ ನೆಲದಲಿರಲಿ ಎಂದು ಬೇಡಿಕೊಳ್ಳುತ್ತಾಳೆ. ಕೃಷ್ಣ ಸನ್ನಿಯಿಂದ ಆಕೆ ಹುಚ್ಚಿಯಾಗಿ ವಿರಹಾಗ್ನಿಯಲ್ಲಿ ಇನ್ನೇನು ಬೆಂದುಹೋಗುವ ಸ್ಥಿತಿಯಲ್ಲಿ ಇರುವಾಗ ನಾರದರ ಪ್ರವೇಶವಾಗುತ್ತದೆ. ಭ್ರಮಿತ ಗೋಪಿಯನ್ನು ಕಂಡ ನಾರದರು ಕೃಷ್ಣ ಕಥೆಯನು ಹೇಳಿ ಗೋಪಿಯ ಮನವನ್ನು ತಣಿಸುತ್ತಾರೆ. ಮಥುರೆಯಲ್ಲಿನ ಕೃಷ್ಣ ಅಲ್ಲಿಂದ ದ್ವಾರಕೆಗೆ ಸ್ಥಳಾಂತರಗೊಂಡಿದ್ದಾನೆ. ಗೋಪಿಕೆಯನ್ನು ದ್ವಾರಕೆಗೆ ಕರೆದು ತರಲು ನಾರದನನ್ನು ಶ್ರೀಕೃಷ್ಣನೇ ಕಳುಹಿಸಿದ್ದಾನೆ.

ಮೊದಲ ಉನ್ಮಾದದಲ್ಲಿ ವಿಪ್ರಲಂಭ ಶೃಂಗಾರ ವಿಜ್ರಂಭಿಸಿದೆ. ಈ ಕಾವ್ಯವನ್ನು ಮೇಘದೂತಕ್ಕೋ ಅಥವಾ ಗೋಕುಲ ನಿರ್ಗಮನಕ್ಕೋ ಹೋಲಿಸುವದಕ್ಕಿಂತ ವಿಭಿನ್ನವಾಗಿ ನೋಡಬಹುದಾಗಿದೆ. ಇಲ್ಲಿ ಕಾಮ ವಿರಹ ಭಗವಂತ ತನ್ನೊಬ್ಬಳಿಗೇ ಸೀಮಿತನಾಗಿರಬೇಕೆನ್ನುವ ಸ್ವಾರ್ಥದ ಭಾವ ಮಿಶ್ರಿತವಾಗಿದೆ. ಗೋಪಿಕೆಯ ಈ ಭಾವವನ್ನು ಕಳೆಯಲು ಕೃಷ್ಣ ಆಕೆಯೊಂದಿಗೆ ರಮಿಸಿದಂತೆ ಮಾಯವಾಗಿಬಿಡುವದನ್ನು ಜೀವಾತ್ಮ ಮತ್ತು ಪರಮಾತ್ಮರ ಸಂಬಂಧಕ್ಕೆ ಹೋಲಿಸಬಹುದಾಗಿದೆ. ಭಕ್ತಿಯೂ ಒಂದರ್ಥದಲ್ಲಿ ವಿಪ್ರಲಂಭ ಶೃಂಗಾರವೇ. ಅಲ್ಲಿ ಭಕ್ತ ತನ್ನನ್ನು ತಾನು ಪತ್ನಿಯಾಗಿ ಪರಮಾತ್ಮನನ್ನೇ ಗಂಡನನ್ನಾಗಿ ಭಾವಿಸಿ ಆತನನ್ನು ನೋಡುವ ಕೂಡುವ ವಿರಹವೇದನೆಯಲ್ಲಿ ಇರುತ್ತಾನೆ. ಭಕ್ತಿ ಪರಮಾತ್ಮನ ಕುರಿತಾದ ಕಾಮ, ಅದು ಬೆಳೆಯುತ್ತಿರುವಂತೆ ಭಗಂತನಲ್ಲಿ ಅಮಿತವಾದ ಪ್ರೇಮವಾಗಿ ಪಲ್ಲಟಗೊಳ್ಳುತ್ತದೆ. ಈ ಪ್ರೇಮದ ತುರೀಯಾವಸ್ಥೆಯಲ್ಲಿ ಪ್ರಪಂಚದ ಪ್ರತಿಯೊಂದು ವಸ್ತುವೂ ಭಗವಂತನ ಪ್ರತಿರೂಪವಾಗಿಯೇ ಕಾಣುತ್ತದೆ. ಆಗ ಭಗವಂತ ಕೇವಲ ತನ್ನೊಬ್ಬನಿಗೆ ಅಲ್ಲ, ಸಮಷ್ಟಿಯ ಸ್ವತ್ತು, ಸಮಷ್ಟಿಯೇ ಆತ; ಸಾಗರವನ್ನು ಸೇರಿದ ಗಂಗಾ ನದಿಯೂ ಸಾಗರವೇ ಆಗುವಂತೆ ನಾವೆಲ್ಲರೂ ಆತನ ಭಾಗವೇ. ಆತನನ್ನು ಸೇರಿ ನಮ್ಮ ತನವನ್ನು ಕಳೆದುಕೊಳ್ಳಬೇಕು ಎನ್ನುವದು ಇಲ್ಲಿನ ತಿರುಳು. ಹಾಗಾಗಿ ಉತ್ತರೋನ್ಮಾದದಲ್ಲಿ ವಿಪ್ರಲಂಭ ಮರೆಯಾಗಿ ಸಂಭೋಗ ಶೃಂಗಾರ ಮನಸ್ಸನ್ನು ಮುದಗೊಳಿಸುತ್ತದೆ. ಗೋಪಿಕೆಯನ್ನು ದ್ವಾರಕೆಗೆ ಕರೆದೊಯ್ಯುವ ನಾರದ ಯದುಪತಿಯ ರಮ್ಯಕಥೆಯನ್ನು ವರ್ಣಿಸುತ್ತಾ ಹೋಗುತ್ತಾನೆ. ಆತನ ಈ ಹಿಂದಿನ ಎಂಟು ಅವತಾರಗಳ ಪರಿಚಯ ಮಾಡಿಕೊಡುತ್ತಾನೆ. ಕಂಸ, ಕಾಲಯವನ, ಪೌಂಡ್ರಕ ಮುಂತಾದವರನ್ನು ಕೊಂದ, ರುಕ್ಮಿಣಿಗೆ ಒಲಿದ ಮುಚುಕುಂದನನ್ನುದ್ಧರಿಸಿದ ಕಥೆಗಳನ್ನೆಲ್ಲಾ ಕೇಳುತ್ತಾ ಗೋಪಿಗೆ ಶ್ರೀಕೃಷ್ಣನ ಸ್ಥಾನವೆನ್ನುವದು ಪರಮಹಂಸನ ತಾಣ ಎನ್ನುತ್ತಾನೆ. ಗೋಪಿಗೆ ಈಗ ಕೃಷ್ಣನ ಮೇಲಿರುವದು ವಿರಹವಲ್ಲ, ಅದು ಆಗಸದಿಂದ ಬೀಳುವ ಮಳೆಗಾಗಿ ಕಾತರಿಸುವ ಇಳೆಯ ನೋಟ. ಚಂದಿರನ ಬೆಳದಿಂಗಲಲ್ಲಿ ಮೈ ತುಂಬಿಕೊಳ್ಳುವ ವೃಕ್ಷರಾಜಿಗಳಂತೆ ಆಕೆಯ ಮನಸ್ಸು ತಣಿದಿದೆ. ಕೃಷ್ಣ ಆಕೆಯನ್ನು ಸಂತೈಸಿ

ಚಲುವೆ ನನ್ನೊಳಗೆ ನೀನಿರುವೆ ನಿನ್ನೊಳಗೆ ನಾನಿರುವೆ
ಭೇದವೆಲ್ಲಿದೆ ನಮಗೆ ದೇಹ ಜೀವಗಳೊಂದು ಐಕ್ಯವಾಗಿರಲು
ದೇವಿ ನಿನ್ನ ಮುಸುಕಿದ ಮಾಯೆಯನ್ನು ತೊಲಗಿಸಲು
ಆಟವಾಡಿದೆ ನಾನು ಎನ್ನ ನೀ ಕ್ಷಮಿಸು ಗೋಪಿ

ಎಂದು ಸಂತೈಸುತ್ತಾನೆ. ಗೋಪಿಗೂ ರಾಮ ಪದತಲದಲ್ಲಿ ಕಲ್ಲು ಹೆಣ್ಣಾದ ತೆರದಿ ಕೃಷ್ಣ ಪದಸ್ಪರ್ಶದಲ್ಲಿ ತಾನು ಮತ್ತೊಮ್ಮೆ ಹೆಣ್ಣಾದೆ ಎಂದು ಕೊಳ್ಳುತ್ತಾಳೆ. ಆಕೆಗೆ ತಾನೊಬ್ಬಳೇ ಕೃಷ್ಣಪ್ರೇಮಿ ಎನ್ನುವ ಭ್ರಮೆಯಲ್ಲಿದ್ದ ಗೋಪಿಗೆ ದ್ವಾರಕೆಯಲ್ಲಿ

ತಾನೇ ಕಂಡಳು ಈಗ ಮನೆಮನೆಯ ಗೋಡೆಗಳು
ಮಾಡುತಿದ್ದವು ಕೃಷ್ಣರಸಪೂರ್ಣ

ಪುರಿಯಲ್ಲಿ ಜಗನ್ನಾಥನ ರಥವನ್ನು ಎಳೆಯುವ ದೃಶ್ಯ ಇಲ್ಲಿ ನೆನಪಾಗುತ್ತದೆ. ಯಾವ ಬೇಧವಿಲ್ಲದೇ ರಥಎಳೆಯುವಾಗ ತಾನ್ಯಾರೋ, ಅವರ್ಯಾರೋ, ಅಲ್ಲಿ ಕಾಣುವದು ಕೃಷ್ಣ ಬಲರಾಮರು ಮಾತ್ರ ಎನ್ನುವ ಭಾವ ಅಲ್ಲಿಗೆ ಹೋದವರಿಗೆ ಬರುವಂತೆ ಇಲ್ಲಿ ಗೋಪಿಗೆ ಆಗುತ್ತದೆ. ನಾಚಿಗೆಯಿಂದ ನಿಂತವಳನ್ನು ಕೃಷ್ಣ ತೆಕ್ಕೈಸಿ ಅಪ್ಪಿ ಮುದ್ದಡುತ್ತಾನೆ. ಗೋಕುಲದಲ್ಲಿ ಸೀರೆಯ ಸೆರಗು ಎಳೆದಿದ್ದ ಕೃಷ್ಣ ಇಲ್ಲಿ ಆಕೆಯ ಅಹಮಿಕೆಯ ಉನ್ಮಾದವನ್ನು ಕಳಚುತ್ತಾನೆ. ಈ ಭಾಗವನ್ನು ಪ್ರೋ. ರಾಧಾಕೃಷ್ಣರು ರೂಪಾಂತರಿಸಿರುವದನ್ನು ಓದುತ್ತಲೇ ಇರಬೇಕೆನಿಸುತ್ತಿದೆ.

ಪ್ರೇಮಿಕೆಯ ಅಹಮಿಕೆಯ ನಿರ್ವಾಣಗೊಳಿಸಿ
ಗೋಪಿಕೆಗೆ ಸಿರಿಕೃಷ್ಣ ಒಲಿದ ಸಹಜದಲಿ //
ಕೃಷ್ಣಕೇಳಿಯ ಕಥೆಯ ಪೊಗಳುವಾ ಈ ಕಾವ್ಯ
ವೇದಾಂತ ಗೂಡಾರ್ಥ ಹೊಂದಿರುವ ರಸಕಾವ್ಯ //60//

ಗೋಪಿಕೋನ್ಮಾದವನ್ನು ಮೂಲದೊಂದಿಗೆ ತಮ್ಮದೆ ಆದ ಶೈಲಿಯಲ್ಲಿ ಖಂಡಕಾವ್ಯವನ್ನಾಗಿ ಕನ್ನಡ ಸಾಹಿತ್ಯಕ್ಕೆ ಪ್ರೋ. ಕೆ. ಇ. ರಾಧಾಕೃಷ್ಣ ಆವರು ನೀಡೀದ್ದಾರೆ. ಸರಳವಾದ ಶಬ್ಧಗಳಲ್ಲಿ ಕಾವ್ಯವನ್ನು ಕಟ್ಟಿಕೊಡುವ ಹೊತ್ತಿನಲ್ಲಿ ಶೃಂಗಾರವನ್ನು ಅಶ್ಲೀಲತೆಯ ಸೋಂಕಿಲ್ಲದೇ ಸಾ. ಶಿ. ಮರುಳಯ್ಯನವರು ಮುನ್ನುಡಿಯಲ್ಲಿ ಬರೆದಂತೆ ಸುಭಗತೆ ಇದೆ. ಮರುಳಯ್ಯನವರು ಇದನ್ನು ನಾರಿಕೇಳಪಾಕ ಎಂದು ವರ್ಣಿಸಿದ್ದಾರೆ. ಮೂಲದ ಮಂದಾಕ್ರಾಂತ ವೃತ್ತದಲ್ಲಿರುವ ಪದ್ಯಗಳು ಅನೇಕ ಸಲ ಶಬ್ಧಗಳ ಮದ್ಯದಲ್ಲಿ ಬರುವ ಯತಿಗಳಿಂದಾಗಿ ರಸಭಂಗವಾಗುವಂತೆ ಇದ್ದಂತೆ ತೋರುತ್ತದೆ. ಆದರೆ ಸರಳಗನ್ನಡದ ಚೌಪದಿಯಲ್ಲಿ ಇದ್ಯಾವ ಅಡೆತಡೆಗಳಿಲ್ಲದೇ ಕಾವ್ಯದ ಸೌಂದರ್ಯವನ್ನು ರಸಿಕರು ಸವಿಯಬಹುದು. ಗೋಪಿಕೋನ್ಮಾದವೆನ್ನುವದು ಕೃಷ್ಣಭ್ರಮೆಯನ್ನು ಕಳೆಯುವ ಸಾರೂಪ್ಯ ಸಿದ್ಧಿ ಎಂದು ಕವಿ ವರ್ಣಿಸುತ್ತಾರೆ. ಕೃಷ್ಣನೆಂದರೆ ಆಕರ್ಷಿಸುವನು, ಆತ ಭ್ರಮೆಯಾಗಕೂಡದು. ಸಿದ್ಧಿಯಲ್ಲಿ ಭ್ರಮೆ ಇರುವದಿಲ್ಲ. ಗೋಪಿಕೆಯಲ್ಲಿಯೂ ಈ ಕೃಷ್ಣನೆನ್ನುವ ಕಾಮನಯ್ಯನಲ್ಲ. ಅವ ಪದ್ಮಪತ್ರಮಿವಾಂಭಸಾ, ಎಲ್ಲರೊಳಗಿದ್ದೂ ಎಲ್ಲದಕ್ಕಿಂತಲೂ ಹೊರಗಿರುವವ ಎನ್ನುವದನ್ನು ತುಂಬಾ ಚನ್ನಾಗಿ ಇಲ್ಲಿ ಅಭಿವ್ಯಕ್ತಿಸಲಾಗಿದೆ.

ಸಮಗ್ರ ಕಾವ್ಯದ ಪರಿಚಯವನ್ನು ಪ್ರೋ. ಜಿ. ವೆಂಕಟಸುಬ್ಬಯ್ಯನವರೇ ವಿವರಿಸಿದ್ದಾರೆ. ತಿಮ್ಮಪ್ಪದಾಸರೆನ್ನುವವರು “ಭ್ರಮರಗೀತ” ವೆನ್ನುವ ಇದೇ ರೀತಿ ಹೋಲುವ ಕೃತಿಯೊಂದನ್ನು ಕನ್ನಡದಲ್ಲಿಯೂ ಬರೆದಿದ್ದಾರೆ ಎನ್ನುವ ಹೊಸ ಸಂಗತಿಯನ್ನು ಹೊರಹಾಕಿದ್ದಾರೆ. ಒಂದು ಸುಂದರ ಕಾವ್ಯವನ್ನು ಕನ್ನಡದ್ದೇನೋ ಎನ್ನುವ ರೀತಿಯಲ್ಲಿ ರೂಪಾಂತರಿಸಿರುವ ಪ್ರೋ. ಕೆ. ಇ. ರಾಧಾಕೃಷ್ಣರನ್ನು ಅಭಿನಂದಿಸಲೇ ಬೇಕು.

(ಕೃತಿ: ಗೋಪಿಕೋನ್ಮಾದ, ಸಂಸ್ಕೃತ ಮೂಲ: ಅನಾಮಿಕ ಕವಿ, ಕನ್ನಡಕ್ಕೆ: ಪ್ರೊ. ಕೆ. ಇ. ರಾಧಾಕೃಷ್ಣ, ಪ್ರಕಾಶಕರು: ವಸಂತ ಪ್ರಕಾಶನ, ಬೆಂಗಳೂರು)