ಕನಸಿನಿಂದ ಎದ್ದಾಗ ಅವನ ಮುಖ ಹಸಿಹಸಿ ಆಗಿತ್ತು. ಮೈಯೆಲ್ಲಾ ಗದಗದ ನಡುಗುತ್ತಿತ್ತು. ಕೈಯಿಂದ ಮುಖದ ಬೆವರು ಒರೆಸಿಕೊಂಡ. ದಿಡಗ್ಗನೆ ಎದ್ದು ಬಾಕ್ಸ್ ಕಡೆ ನೋಡಿದ. ಇರುವೆ ಹಾಗೇ ಮಲಗಿತ್ತು. ಅದನ್ನು ತೆಗೆದು ಟೇಬಲ್ ಮೇಲಿಟ್ಟ. ತನ್ನ ಬ್ಯಾಗ್ ತೆಗೆದು ಅದರಿಂದ ನೀಲಿಮಸಿ ಪೆನ್ನು ತೆಗೆದ. ಅದರ ರಿಫೀಲ್ ಬೇರ್ಪಡಿಸಿದ. ಅದರ ನಿಬ್ ಅನ್ನು ಬಾಯಲ್ಲಿ ಕಚ್ಚಿ ತೆಗೆದ. ಬಾಯಿತುಂಬಾ ಮಸಿ ಆಗಿ ಒಂಥರ ಎನಿಸಿತು. ತ್ಪು ಎಂದು ಉಗುಳಲು ಹೋದವನು ಇರುವೆಗೆ ಎಚ್ಚರವಾಗುತ್ತೆ ಎಂಬ ಯೋಚನೆ ಬಂದಿದ್ದೇ ತಡೆಹಿಡಿದು ನಿಬ್ ಅನ್ನು ಬಾಯಲ್ಲೇ ಇಟ್ಟುಕೊಂಡ. ಮತ್ತಷ್ಟು ಮಸಿ ಬಾಯಿ ತುಂಬಿತು.
ಮಂಜುನಾಯಕ ಚಳ್ಳೂರು ಬರೆದ ಹೊಸ ಕಥೆ ‘ಕೆಂಜಿರುವೆ’ ನಿಮ್ಮ ಈ ಭಾನುವಾರದ ಓದಿಗೆ

 

I am constantly trying to communicate something incommunicable, to explain something inexplicable, to tell about something I only feel in my bones and which can only be experienced in those bones. – Franz Kafka

ಮೊನ್ನೆ ತಾನೆ ಮೊದಲ ಬಾರಿಗೆ ಶೇವ್ ಮಾಡಿಕೊಂಡಿರುವ ರಾಜು ತುಂಬ ಸೂಕ್ಷ್ಮ ಹುಡುಗ. ಇದುವರೆಗೆ ಒಂದೂ ಕೆಟ್ಟ ಪದ ಬಳಸಿ ಮಾತನಾಡಿದವನಲ್ಲ. ಪರೋಕ್ಷವಾಗಿಯೂ ಮತ್ತೊಬ್ಬರಿಗೆ ಹರ್ಟ್ ಮಾಡಲು ಇಷ್ಟ ಪಡುವವನಲ್ಲ. ಪ್ರತಿ ಕೆಲಸವನ್ನೂ ಹೋಂವರ್ಕ್ ನಂತೆ ನೀಟಾಗಿ ನಿರ್ವಹಿಸುತ್ತಾನೆ. ಕ್ಲಾಸಿನಲ್ಲಾಗಲಿ ಮನೆಯಲ್ಲಾಗಲಿ ಬೈಸಿಕೊಂಡ ಉದಾಹರಣೆ ವಿರಳ. ಬೇರೆಯವರೊಂದಿಗೆ ಬೆರೆಯೋದು ಕಮ್ಮಿ. ಮಾತು ತೀರಾ ಕಮ್ಮಿ. ಜಗಳ ಇಲ್ಲವೇ ಇಲ್ಲ. ಅಗತ್ಯಕ್ಕಿಂತ ಹೆಚ್ಚಿಗೆ ಮಾತಾಡುವುದು ಸ್ವತಃ ಅವನಿಗೇ ಆಗಿಬರೋದಿಲ್ಲ. ಅವನನ್ನ ಕಂಡರಾಗದವರು ಅಂತ ಯಾರೂ ಇಲ್ಲ. ಹಾಗಂತ ಆತ್ಮೀಯ ಸ್ನೇಹಿತರೂ ಯಾರೂ ಇಲ್ಲ.

ಅವನು ಅದೊಂದು ಭಾನುವಾರ ಮಧ್ಯಾಹ್ನ ಖಾಲಿ ಖಾಲಿ ಹೊಡೆಯುತ್ತಿದ್ದ ತನ್ನ ಏರಿಯಾದ ಪಾರ್ಕಿನ ಮರವೊಂದರ ಕೆಳಗಿನ ಬೆಂಚಿನ ಮೇಲೆ ಕುಳಿತುಕೊಂಡಿದ್ದ. ಆ ಪಾರ್ಕು ನೋಡಿಕೊಳ್ಳುವ ಕೆಲಸಗಾರರ ಮಗು ಸ್ವಲ್ಪ ಹೊತ್ತಿಗೆ ಮುಂಚೆ ತಳ್ಳಿಹೋದ ಜೋಕಾಲಿ ತೂಗಾಡುತ್ತಿರುವುದನ್ನ ತದೇಕಚಿತ್ತದಿಂದ ನೋಡುತ್ತಿದ್ದ. ಆ ಜೋಕಾಲಿ ಇನ್ನೇನು ಸುಸ್ತಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ಅವನ ಪಾದದ ಮೇಲೆ ಏನೋ ಬಿತ್ತು. ಅದರ ಕಡೆ ಅವನ ಗಮನ ಹರಿಯಿತು.

ಅದೊಂದು ಕೆಂಜಿರುವೆ. ನೋಡಿದ ತಕ್ಷಣ ಅವನಿಗೆ ಕಸಿವಿಸಿಯಾಯಿತು. ಕಾಲು ಜಾಡಿಸಿ ಅದನ್ನ ಕೆಳಗೆ ಬೀಳಿಸಲು ಪ್ರಯತ್ನಿಸಿದ. ಆದರದು ಅವನ ಪಾದಕ್ಕೆ ಗಟ್ಟಿಯಾಗಿ ಅಂಟಿಕೊಂಡಿತ್ತು. ಎದ್ದು ನಿಂತು ಕಾಲನ್ನು ಒಂಚೂರು ಜೋರಾಗಿ ಜಾಡಿಸಿದ. ಆಗಲೂ ಅದು ಕೆಳಕ್ಕೆ ಬೀಳಲಿಲ್ಲ. ಮತ್ತೆ ಮತ್ತೆ ಜಾಡಿಸಿದಾಗಲೂ ಅದು ಬೀಳಲಿಲ್ಲ. ಈಗ ಅವನು ಅಲ್ಲೇ ಇದ್ದ ಅರೆಬರೆ ಒಣಗಿದ ಎಲೆಯೊಂದನ್ನು ತೆಗೆದುಕೊಂಡು ಅದರ ತುದಿಯಿಂದ ದಬ್ಬಿ ಆ ಇರುವೆಯನ್ನು ಕೆಳಕ್ಕೆ ಬೀಳಿಸಲು ನೋಡಿದ. ಎಲೆಯ ತಿವಿತಕ್ಕೆ ಅದು ಕೆಳಕ್ಕೆ ಬಿತ್ತಾದರೂ ಮತ್ತೆ ವಾಪಸ್ ಸರಸರ ಅಂತ ಅವನ ಪಾದ ಏರಿ ಕುಳಿತುಕೊಂಡಿತು. ಅವನಿಗೆ ಕೋಪ ಬಂತು. ಮತ್ತೆ ತಿವಿದು ಅದನ್ನ ಕೆಳಕ್ಕೆ ಬೀಳಿಸಿದ. ಅದು ಮತ್ತೆ ವಾಪಸ್ ಏರಿ ಕುಳಿತುಕೊಂಡಿತು.

ಹೀಗೇ ಹತ್ತಾರು ಸಲ ನಡೆಯಿತು. ಅವನು ತಿವಿದು ಬೀಳಿಸುವುದು ಅದು ಮತ್ತೆ ಏರುವುದು. ಅವನ ಸೈರಣೆ ಮೀರಿತು. ಇದೊಳ್ಳೆ ರಾಮಾಯಣ ಆಯ್ತಲ್ಲ ಎನಿಸಿತು. ಯಾಕೆ ಇದು ಹೀಗೆ ಮಾಡುತ್ತಿದೆ ಎಂಬುದೇ ಹೊಳೆಯದಾಯಿತು. ಅದನ್ನು ನೋಡಿದಷ್ಟೂ ಕಿರಿಕಿರಿ ಆಗತೊಡಗಿತು. ಯೋಚಿಸಿಯೇ ಯೋಚಿಸಿದ. ‘ಹ್ಮ್’ ಅಂತ ಇದೇ ತನಗುಳಿದಿರುವ ಕೊನೆಯ ಉಪಾಯ ಎಂಬಂತೆ ಇನ್ನೇನು ಆ ಹಠಮಾರಿ ಇರುವೆಯ ಮೇಲೆ ತನ್ನ ಇನ್ನೊಂದು ಕಾಲಿನ ಚಪ್ಪಲಿಯಿಟ್ಟು ಹೊಸಕಬೇಕು – ಅಷ್ಟರಲ್ಲಿ ಅವನಿಗೊಂದು ಪ್ರಶ್ನೆ ಹೊಳೆದು ಸುಮ್ಮನಾದ. ಇಷ್ಟೊತ್ತಾದರೂ ಯಾಕೆ ಇದು ತನ್ನನ್ನು ಕಚ್ಚದೆ ಸುಮ್ಮನೆ ಬಿಟ್ಟಿದೆ ಎಂಬ ಪ್ರಶ್ನೆ ಅವನಿಗೆ ಆಶ್ಚರ್ಯಉಂಟು ಮಾಡಿತು. ಕಚ್ಚದ ನಾಯಿಗಳನ್ನು ನೋಡಿದ್ದ ಅವನು. ಆದರೆ ಕಚ್ಚದ ಇರುವೆಗಳನ್ನು ಅವನೆಲ್ಲೂ ನೋಡಿರಲಿಲ್ಲ. ಅದರಲ್ಲೂ ಈ ಕೆಂಜಿರುವೆ?! ಅವನಿಗೆ ಮತ್ತಷ್ಟು ಆಶ್ಚರ್ಯವಾಯಿತು.

ಇದ್ಯಾವುದೋ ಸಂಭಾವಿತ ಇರುವೆ ಇರಬೇಕು ಎಂಬ ತೀರ್ಮಾನಕ್ಕೆ ಬಂದ ರಾಜು. ಹಾಗಾಗಿ ಅದನ್ನು ಹೊಸಕಿಹಾಕುವ ಯೋಚನೆ ಅಲ್ಲಿಗೇ ಕೈಬಿಟ್ಟ. ಆ ಇರುವೆಯನ್ನು ಬಲಗೈಯ ತೋರುಬೆರಳು ಹೆಬ್ಬೆರಳುಗಳ ಸಹಾಯದಿಂದ ಹಿಡಿದು ಎಡ ಅಂಗೈಯ ಮೇಲೆ ಹಾಕಿಕೊಂಡ. ತೋರುಬೆರಳಿನಿಂದ ಅದನ್ನು ಚೂರು ಮುಂದಕ್ಕೆ ದಬ್ಬಿ ನೋಡಿದ. ಆಗಲೂ ಅದು ಕಚ್ಚುವುದಿರಲಿ ಸಣ್ಣ ಪ್ರತಿಭಟನೆಯನ್ನೂ ತೋರದೆ ಅವನಲ್ಲಿ ಮತ್ತಷ್ಟು ಆಸಕ್ತಿ ಕೆರಳಿಸಿತು. ಅವನು ‘ನೋಡುವ ಇದು ಏನು ಮಾಡುತ್ತದೆ’ ಎಂದು ಅದೇ ಬೆಂಚಿನ ಮೇಲೆ ವಾಪಸ್ ಕುಳಿತುಕೊಂಡು ತನ್ನ ಅಂಗೈ ಮೈದಾನದ ಮೇಲೆ ವಿಶ್ರಮಿಸುತ್ತಿರುವ ಆ ಇರುವೆಯ ಚಲನವಲನ ಗಮನಿಸತೊಡಗಿದ. ಅದು ಅವನ ಅಂಗೈ ತನ್ನ ಮನೆಯೇನೋ ಎಂಬಂತೆ ಎಷ್ಟೊತ್ತಾದಾರೂ ಆರಾಮಾಗಿ ಕುಳಿತುಕೊಂಡಿತು. ಅವನೂ ಪಟ್ಟು ಹಿಡಿದು ಅದು ತನ್ನನ್ನ ಕಚ್ಚುವವರೆಗೆ ಕೊಲ್ಲಬಾರದು, ಓಡಲು ಪ್ರಯತ್ನಿಸುವವರೆಗೆ ಕೈ ಜಾಡಿಸಿ ಬೀಳಿಸಬಾರದು ಎಂದು ತೀರ್ಮಾನಿಸಿ ಅದನ್ನು ಮಗ್ನನಾಗಿ ನೋಡುತ್ತ ಕುಳಿತ.

ಅದರ ಪುಟ್ಟತಲೆ, ಅದಕ್ಕಿಂತ ಚಿಕ್ಕ ಗಾತ್ರದ ಮೂರು ಹೊಟ್ಟೆಗಳು. ಅವಕ್ಕೆ ಅಂಟಿಕೊಂಡ ಅವಕ್ಕಿಂತ ಚೂರು ದೊಡ್ಡದೆನ್ನಬಹುದಾದ, ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿದ ಹಿಂಭಾಗ, ತುಸು ಜೋರಾಗಿ ಊದಿದರೆ ಮುರಿದು ಹೋಗುವಷ್ಟು ಸೂಕ್ಷ್ಮವಾದ ಆರು ಕಾಲುಗಳು, ತಲೆಗೆ ಬೆಳೆದಿದ್ದ ಕೊಂಬಿನಂಥ
ಆಂಟೆನಾಗಳು, ಚುಕ್ಕಿಯಂಥ ಕಣ್ಣುಗಳು, ಎರಡು ಸಣ್ಣ ಹಲ್ಲುಗಳ ಇಕ್ಕಳ – ಇವನ್ನೆಲ್ಲಾ ಗಮನಿಸುತ್ತ ಗಮನಿಸುತ್ತ ಹೊತ್ತು ಹೋದದ್ದೇ ಗೊತ್ತಾಗಲಿಲ್ಲ ಅವನಿಗೆ. ಇಷ್ಟೆಲ್ಲಾ ಸಂಗತಿಗಳಿರುತ್ತವೆ ಒಂದು ಕೆಂಜಿರುವೆಯ ದೇಹದಲ್ಲಿ ಎನ್ನುವುದು ಅವನ ಗಮನಕ್ಕೆ ಬಂದಿದ್ದು ಇದೇ ಮೊದಲು.

ಹೀಗೇ ಸ್ವಲ್ಪ ಸಮಯ ಕಳೆಯಿತು. ಇರುವೆಯಂತೂ ಅಲ್ಲಿಂದ ಹೋಗುವ ಯೋಚನೆಯೇ ಇಲ್ಲವೆಂಬಂತೆ ಆರಾಮಾಗಿ ಅವನ ಅಂಗೈ ಮೇಲೆ ವಿಶ್ರಮಿಸುತ್ತಿತ್ತು. ಅವನಿಗೋ ನೋಡುತ್ತ ನೋಡುತ್ತ ಅದರ ಮೇಲೆ ಕುತೂಹಲ ಹೆಚ್ಚಾಯಿತು. ಆಕರ್ಷಣೆ ಮೊಳಕೆಯೊಡೆದು ಬೆಳೆಯತೊಡಗಿತು. ಇಷ್ಟೊತ್ತಾದರೂ ತನ್ನನ್ನು ಕಚ್ಚುವ ಯಾವ ಯೋಚನೆಯೂ ಇಲ್ಲದಂತೆ ಕಾಲ ಕಳೆಯುತ್ತಿರುವ ಅದರ ಮೇಲೆ ಏನೋ ವಿಶ್ವಾಸ ಮೂಡಿತು. ಇಂಥ ಎಷ್ಟೋ ಇರುವೆಗಳನ್ನು ವಿನಾಕಾರಣ ಹೊಸಕಿ ಹಾಕಿರುವ ತನ್ನ ಮೇಲೆ ಇಷ್ಟೊಂದು ನಂಬಿಕೆಯಿಟ್ಟು ಆರಾಮಾಗಿ ತಾಚಿ ಮಾಡುತ್ತಿದೆಯಲ್ಲಾ ಇದು ಎಂದು ಅಚ್ಚರಿಯಾಯಿತು. ಅದನ್ನ ನೋಡುತ್ತ ಯೋಚಿಸುತ್ತ ಯೋಚಿಸುತ್ತ ನೋಡುತ್ತ ಅದರ ಮೇಲೆ ಅವನಿಗೆ ಒಂಥರದ ಸ್ನೇಹ ಬೆಳೆಯಿತು. ಮುದ್ದು ಮೂಡಿತು. ಮುದ್ದು ಹೆಚ್ಚಾಗಿ ಅದನ್ನು ತನ್ನ ಮನೆಗೆ ಕರೆದುಕೊಂಡು ಹೋಗುವ, ತನ್ನ ರೂಮಿನಲ್ಲಿಟ್ಟುಕೊಂಡು ಸಾಕುವ ಮನಸ್ಸಾಯಿತು. ತಲೆಯಲ್ಲಿ ಆ ಯೋಚನೆ ಮೂಡಿದ್ದೇ ಅವನಿಗೆ ಒಂಥರ ಪುಳಕ. ಆದರೆ ಅದರ ಹಿಂದೆಯೇ ಮೂಡಿದ ಪ್ರಶ್ನೆ ಅವನನ್ನ ಕಂಗಾಲು ಮಾಡಿತು.

‘ಯಾರಾದ್ರು ಇರುವೆ ಸಾಕ್ತಾರಾ?’

ರಾಜು ತನ್ನ ಅಪಾರ್ಟ್ಮೆಂಟಿನಲ್ಲಿ ನಾಯಿ ಸಾಕಿದವರನ್ನ, ಬೆಕ್ಕು ಸಾಕಿದವರನ್ನ ನೋಡಿದ್ದ. ಅಜ್ಜಿ ಊರಲ್ಲಿ ದನ ಕರು, ಕುರಿ ಮೇಕೆ, ಕತ್ತೆ ಕುದುರೆ ಸಾಕುವವರನ್ನ ಕಂಡಿದ್ದ. ಸರ್ಕಸ್ ಗಳಲ್ಲಿ ಆನೆ ಕೋತಿ ಮುಂತಾದ ದೊಡ್ಡ ದೊಡ್ಡ ಪ್ರಾಣಿಗಳನ್ನೂ ನೋಡಿದ್ದ. ಅಷ್ಟೇ ಅಲ್ಲದೆ ತನ್ನ ಸಿಲೆಬೆಸ್ ಗಿದ್ದ ರಸ್ಕಿನ್
ಬಾಂಡ್ ರ ಬರಹವೊಂದರಲ್ಲಿ ಬಾಂಡ್ ರ ತಾತ ತಿಮೋತಿ ಎಂಬ ಹುಲಿ ಸಾಕಿದ್ದ ವಿವರ ಇನ್ನೂ ಅವನಿಗೆ ನೆನಪಿನಲ್ಲಿದೆ. ಆದರೆ ಇರುವೆ ಸಾಕಿದ್ದು? ಅವನೆಲ್ಲೂ ನೋಡಿರಲಿಲ್ಲ, ಕೇಳಿರಲಿಲ್ಲ, ಓದಿಯೂ ಇರಲಿಲ್ಲ. ಯಾಕೆ ಯಾರೂ ಇರುವೆ ಸಾಕುವುದಿಲ್ಲ ಎಂಬ ಪ್ರಶ್ನೆ ಅವನಿಗೆ ಕಾಡತೊಡಗಿತು. ಎಷ್ಟು
ಯೋಚಿಸಿದರೂ ಅದಕ್ಕೊಂದು ಸಮರ್ಪಕ ಉತ್ತರ ಹೊಳೆಯಲಿಲ್ಲ. ಯೋಚಿಸಿದಷ್ಟೂ ತಲೆ ಭಾರ ಆಗಿ ಚಿಟ್ಟುಹಿಡಿಯತೊಡಗಿತು. ಕೊನೆಗವನು ‘ಯಾಕಾದ್ರು ಇರ್ಲಿ, ಯಾರೂ ಸಾಕದಿದ್ದರೇನಂತೆ, ನಾನಿದನ್ನ ಸಾಕ್ತೇನೆ’ ಎಂದು ನಿರ್ಧರಿಸಿದ. ಅಷ್ಟು ನಿರ್ಧರಿಸಿದ್ದೇ, ಇಷ್ಟರವರೆಗೆ ಕಾಡುತ್ತಿದ್ದ ಪ್ರಶ್ನೆಗಳೆಲ್ಲ ಹಿಂದೆ ಸರಿದವು. ತಲೆಭಾರ ಕೊಂಚ ಕಮ್ಮಿ ಆಯಿತು. ಆದರೆ ಮತ್ತೊಂದು ಪ್ರಶ್ನೆ ಎದುರಾಗಿ ಅವನನ್ನು ಕಂಗೆಡಿಸಿತು.

‘ಅಪ್ಪ ಅಮ್ಮ ಒಪ್ತಾರಾ ಇದಕ್ಕೆ?’

ಈಗಂತೂ ರಾಜು ನಿಜಕ್ಕೂ ಕಂಗಾಲಾದ. ಹಾಗೆ ನೋಡಿದರೆ ಎಷ್ಟೋ ದಿನಗಳಿಂದ ಅವನಿಗೆ ನಾಯಿಯನ್ನೋ ಬೆಕ್ಕನ್ನೋ ಸಾಕುವ ಆಸೆ. ಆದರೆ ನಾಯಿ ಸಾಕುತ್ತೇನೆ ಎಂದಾಗ ಅಮ್ಮ, ‘ಬೇಡ ಬೇಡ. ಅದು ಯಾವಾಗಲೂ ನಿನ್ನ ಅಪ್ಪನಂತೆ ಬೊಗಳ್ತಾನೇ ಇರತ್ತೆ’ ಎಂದು ಸುಮ್ಮನಾಗಿಸಿದ್ದಳು. ಬೆಕ್ಕು
ಸಾಕುತ್ತೇನೆ ಎಂದಾಗ ಅಪ್ಪ, ‘ನೋ ವೇ ಚಾನ್ಸೇ ಇಲ್ಲ, ಅದು ನಿಮಮ್ಮನ್ ಥರ, ಕಕ್ಕ ಮಾಡಿ ಮುಚ್ ಹಾಕತ್ತೆ’ ಎಂದು ಕಡ್ಡಿಮುರಿದಂತೆ ನಿರಾಕರಿಸಿದ್ದ. ಹಾಗಾಗಿ ರಾಜುವಿಗೆ ತಾನು ಇರುವೆ ಸಾಕುತ್ತೇನೆ ಎಂದರೆ ಇವರು ಮತ್ತೇನಾದರು ಕಾರಣ ಒಡ್ಡಿ ಬೇಡ ಎಂದರೆ ಹೇಗೆ ಎಂದು ಚಿಂತೆಯಾಯಿತು.
ಹಾಗಾದರೆ ಏನು ಮಾಡುವುದು? ಯೋಚಿಸಿಯೇ ಯೋಚಿಸಿದ. ತಲೆ ಮತ್ತಿಷ್ಟು ಭಾರ ಆಗತೊಡಗಿತು. ಕಡೆಗವನು ಒಂದು ನಿರ್ಧಾರಕ್ಕೆ ಬರಲೇಬೇಕಾಯಿತು.

‘ಅಪ್ಪ ಅಮ್ಮಂಗ್ ಇದನ್ ಹೇಳೋದೇ ಬೇಡ’

ಈ ನಿರ್ಧಾರ ಅವನಲ್ಲಿ ಒಟ್ಟೊಟ್ಟಿಗೆ ರೋಮಾಂಚನವನ್ನೂ ನಡುಕವನ್ನೂ ಹುಟ್ಟಿಸಿತು.

ಅಪ್ಪ ಅಮ್ಮನಿಗೆ ಹೇಳದೆ ಇರುವೆಯನ್ನು ತನ್ನ ರೂಮಿಗೆ ಒಯ್ದು ಸಾಕುವುದು ಎಂಬ ನಿರ್ಧಾರಕ್ಕೇನೋ ಬಂದುಬಿಟ್ಟ. ಆದರೆ ಅದನ್ನು ಹೇಗೆ ಸಾಕುವುದು? ನಾಯಿ ಬೆಕ್ಕುಗಳನ್ನೇನೋ ಸಾಕಿ ಗೊತ್ತು. ಆದರೆ ಇಷ್ಟೇ ಇಷ್ಟು ಇರುವ ಈ ಇರುವೆಯನ್ನು ಹೇಗೆ ಸಾಕುವುದು? ಇದಕ್ಕಂತೂ ಅವನಿಗೆ ತಕ್ಷಣಕ್ಕೆ ಯಾವುದೇ ಉತ್ತರ ಹೊಳೆಯಲಿಲ್ಲ. ಯಾರನ್ನಾದರು ಕೇಳೋಣ ಎಂದುಕೊಂಡ. ಆದರೆ ಅವರೇನಾದರು ತನ್ನನ್ನ ಹುಚ್ಚ ಎಂದುಕೊಂಡುಬಿಟ್ಟರೆ ಹೇಗೆ? ಎಂಬ ಭಯ ಮೂಡಿ ಆ ವಿಚಾರ ಅಲ್ಲಿಗೇ ಕೈಬಿಟ್ಟ. ಮತ್ತೇನು ಮಾಡುವುದು? ಯೋಚಿಸಿಯೇ ಯೋಚಿಸಿದ. ‘ಮನೇಗ್ ಹೋದ್ಮೇಲ್ ಥಿಂಕ್ ಮಾಡಿದ್ರಾಯ್ತು… ಫಸ್ಟು ಇದ್ನಾ ಮನೇಗ್ ಕರ್ಕೊಂಡ್ ಹೋಗ್ತೀನಿ’ ಎಂದು ಸಮಾಧಾನಕರ ಉತ್ತರ ಕೊಟ್ಟುಕೊಂಡ. ‘ಓಕೇ… ಇದ್ನಿವಾಗ ಅಪ್ಪ ಅಮ್ಮಂಗ್ ಗೊತ್ತಾಗ್ದಿರೋ ಹಾಗ್ ಹೇಗ್ ತಗೊಂಡ್ ಹೋಗೋದು? ಹಿಂಗೇನಾದ್ರು ಅಂಗೈಯಲ್ ಹಿಡ್ಕೊಂಡ್ ಹೋದ್ರೆ ಗ್ಯಾರಂಟಿ ಅವ್ರಿಗ್ ಗೊತ್ತಾಗತ್ತೆ’ ಎಂದು ಹೆದರಿಕೆ ಆಯಿತು.

‘ಹಾಗಂತ ಪಾಕೇಟ್ನಲ್ ಇಟ್ಕೊಂಡ್ ಹೋಗೋ ಹಾಗೂ ಇಲ್ಲ. ಮೊದಲೇ ಡೆಲಿಕೇಟ್ ಪ್ರಾಣಿ. ಏನಾದ್ರು ಹೆಚ್ಕಮ್ಮಿ ಹರ್ಟ್ ಆದ್ರೆ ಹೆಂಗೆ? ಮತ್ತೆ ಏನ್ ಮಾಡೋದು? ಹೇಗ್ ಇದ್ನಾ ಅಪ್ಪ ಅಮ್ಮಂಗ್ ಕಾಣ್ದಿರೋ ಹಾಗ್ ನನ್ ರೂಮಿಗ್ ಕರ್ಕೊಂಡ್ ಹೋಗೋದು?’ ಯೋಚಿಸಿಯೇ ಯೋಚಿಸಿದ. ಹೀಗೇ
ಯೋಚಿಸುತ್ತಿರಬೇಕಾದ್ರೆ ಅವನಿಗೆ ತನ್ನ ಅಜ್ಜಿ ಊರಿನ ದ್ಯಾಮ ನೆನಪಾಗಿ ಸ್ವಲ್ಪ ತಲೆಭಾರ ಕಮ್ಮಿ ಮಾಡಿದ.

ದ್ಯಾಮ ಅಜ್ಜಿ ಮನೆಯ ಕೆಲಸದಾಳುವಿನ ಮಗ. ತನ್ನೊಂದಿಗೆ ರಾಜೂನ ಅಡವಿ ತಿರುಗಲು ಕರೆದುಕೊಂಡು ಹೋಗುತ್ತಿದ್ದ. ಅವನು ಈಗ ನೆನಪಾಗಲಿಕ್ಕೆ ಕಾರಣ ಅವನು ಬೆಂಕಿಪಟ್ನದಲ್ಲಿ ಬಣ್ಣಬಣ್ಣದ ಬೋರಾಣಿ ಹಿಡಿದು ಸಾಕುತ್ತಾ ಇದ್ದಿದ್ದು. ಅದು ನೆನಪಾಗಿದ್ದೇ ಈಗ ತನ್ನ ಇರುವೆಗೆ ತಕ್ಕ ಗೂಡು ಬೆಂಕಿಪಟ್ನವೇ ಎಂದು ತೀರ್ಮಾನಿಸಿದ ರಾಜು. ಆದರೆ ಬೆಂಕಿಪಟ್ನ ಎಲ್ಲಿಂದ ತರುವುದು? ಸುತ್ತಮುತ್ತ ನೋಡಿದ. ಮೊದಲೇ ಪಾರ್ಕು. ಅಲ್ಲಿ ಬೆಂಕಿಪಟ್ನ ಎಲ್ಲ ಬಿದ್ದಿರಲು ಸಾಧ್ಯವೇ? ಅಂಗಡಿಗೆ ಹೋಗಿ ತರುವಂತೆಯೂ ಇಲ್ಲ. ಅವರು ಅಪ್ಪನಿಗೆ ಹೇಳಿದರೆ ಮುಗೀತು. ಬೂಟುಗಾಲಿನ ಒದೆತ ಗ್ಯಾರಂಟಿ. ಮತ್ತೇನು ಮಾಡುವುದು? ಯೋಚಿಸಿಯೇ ಯೋಚಿಸಿದ. ಹಾಗೆ ಯೋಚಿಸುತ್ತಿರಬೇಕಾದರೆ ತಾನು ಕೂತ ಬೆಂಚಿನ ಕಾಲಬಳಿ ಯಾರೋ ಎಸೆದುಹೋಗಿರುವ ನ್ಯೂಸ್ ಪೇಪರ್ ತುಣುಕಿನ ಕಡೆ ಅವನ ಗಮನ ಹೋಯಿತು. ಅದು ಕಂಡದ್ದೇ ಅವನಿಗೆ ಖುಷಿಯಾಯಿತು. ಗಡಿಬಿಡಿಯಿಂದ ಆ ಪೇಪರ್ ಕೈಗೆತ್ತಿಕೊಂಡ.

ಇರುವೆಯನ್ನು ನಿಧಾನವಾಗಿ ಬೆಂಚಿನ ಮೇಲೆ ಬಿಟ್ಟ. ಅದು ಈಗ ಅವನ ಮಾತು ಕೇಳುತ್ತಿರುವಂತೆ, ಅವನ ಮನಸು ಅರಿತಿರುವಂತೆ ಮತ್ತೇನೂ ಗಾಂಚಾಲಿ ಮಾಡದೆ ಸುಮ್ಮನೆ ಕುಳಿತಿತು. ಅವನಿಗೆ ಒಂಥರ ಪುಳಕವಾಯಿತು. ರಾಜು ಈಗ ಆ ಪೇಪರ್ ತುಣುಕಿನಿಂದ ಒಂದು ಪುಟ್ಟ ದೋಣಿ ಮಾಡಿದ. ಆ ದೋಣಿಯೊಳಕ್ಕೆ ಇರುವೆಯನ್ನು ಕೂರಿಸಿದ. ಆ ದೋಣಿಯನ್ನು ಸಾವಕಾಶವಾಗಿ ತನ್ನ ಅಂಗಿಯ ಜೇಬಿನಲ್ಲಿಟ್ಟುಕೊಂಡ. ಈಗ ಇರುವೆಗೆ ಹರ್ಟ್ ಆಗುವುದಿಲ್ಲ, ಯಾರ ಕಣ್ಣಿಗೂ ಬೀಳುವುದಿಲ್ಲ ಎಂದು ಸಮಾಧಾನವಾಯಿತು. ಅಲ್ಲಿಂದ ಕಾಲ್ಕಿತ್ತು ನಿಧಾನಕ್ಕೆ ಮನೆದಾರಿ ಹಿಡಿದ.

ತನ್ನ ಅಪಾರ್ಟ್ಮೆಂಟು ಬಂತು. ಲಿಫ್ಟ್ ಏರಿ ತನ್ನ ಮನೆಯಿರುವ ಮಹಡಿಗೆ ಬಂದ. ಬೆಲ್ ಮಾಡಿದ. ನಾಯಿ ಬಾಗಿಲು ತೆಗೆದು ಕನ್ನಡಕದೊಳಗಿನಿಂದ ದುರುಗುಟ್ಟಿಕೊಂಡು ನೋಡಿತು. ಇವನು ತಲೆತಗ್ಗಿಸಿದ. ಅದು ಏನೇನೋ ಬೊಗಳಿತು. ಬೊಗಳುವಷ್ಟು ಬೊಗಳಿ, ‘ಬಾ ಒಳಗೆ… ಅಲ್ಲೇ ನಿಂತ್ಕೊಂಡ್
ಏನ್ ಕತ್ತೆ ಕಾಯ್ತೀಯ? ನಾನ್ ವಾಕ್ ಹೊಗ್ ಬರ್ತೀನಿ’ ಎಂದು ಅವನನ್ನ ಒಳದಬ್ಬಿ ತಾನು ಹೊರಹೋಯಿತು. ರಾಜು ತಲೆತಗ್ಗಿಸಿಕೊಂಡೇ ಒಳಪ್ರವೇಶಿಸಿದ. ಅಷ್ಟರಲ್ಲಿ ಬೆಕ್ಕು ಒಂದು ಕೈಯಲ್ಲಿ ಕಾಫಿ ಹೀರುತ್ತ ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಕುಂಡಿ ಅಲುಗಾಡಿಸುತ್ತ ಬಂತು.
‘ಬೂಸ್ಟ್ ಮಾಡ್ ಕೊಡ್ಲಾ ರಾಜು’ ಎಂದು ಕೇಳಿತು. ಇವನು ‘ಉಹ್ಞೂ’ ಎಂದು ತನ್ನ ರೂಮು ಪ್ರವೇಶಿಸಿ ಬಾಗಿಲು ಹಾಕಿಕೊಂಡ.

ಜಾಗರೂಕತೆಯಿಂದ ಜೇಬಿನಲ್ಲಿನ ದೋಣಿ ತೆಗೆದು ತನ್ನ ಓದಿನ ಟೇಬಲ್ ಮೇಲಿಟ್ಟ. ನಿಧಾನಕ್ಕೆ ಹಾಳೆ ಬಿಡಿಸಿ ಇರುವೆಯನ್ನು ಎತ್ತಿಕೊಂಡು ಅಂಗೈಗೆ ಹಾಕಿಕೊಂಡ. ಅದು ಇವನನ್ನೇ ನೋಡುತ್ತಿತ್ತು. ಅದರ ಪುಟ್ಟ ಕಣ್ಣುಗಳನ್ನು ನೋಡಿ ಅವನ ಮುಖ ಅರಳಿತು. ಆದರೆ ಈಗ ಇದಕ್ಕೊಂದು ಜಾಗ
ಮಾಡಬೇಕಲ್ಲ ಎಂಬುದು ತಲೆಗೆ ಬಂತು. ದೋಣಿಯನ್ನು ಎಡಗೈಯಿಂದ ಹಿಗ್ಗಿಸಿ ನೀಟಾಗಿ ನಿಲ್ಲಿಸಿ ಮತ್ತೆ ಅದರೊಳಕ್ಕೆ ಇರುವೆಯನ್ನು ಬಿಟ್ಟ. ಈಗ ತನ್ನ ಟೇಬಲ್ ನ ಡ್ರಾಯರ್ ತೆಗೆದು ಅದರೊಳಗಿನಿಂದ ಒಂದು ಹಳೆಯ ಜಾಮಿಟ್ರಿ ಪೆಟ್ಟಿಗೆ ತೆಗೆದ. ಅದರೊಳಗಿರುವ ಸ್ಕೇಲು ಪೆನ್ಸೀಲು ತ್ರಿಜ್ಯ ಮುಂತಾದ ಸಾಮಗ್ರಿಗಳನ್ನ ಹೊರತೆಗೆದು ಖಾಲಿ ಮಾಡಿದ. ಒಂದು ಹಾಳೆಯನ್ನು ನೀಟಾಗಿ ಕತ್ತರಿಸಿ ಪೆಟ್ಟಿಗೆಯಲ್ಲಿ ಹಾಸಿದ. ಈಗ ಇರುವೆಯನ್ನು ಅದರೊಳಕ್ಕೆ ಕೂರಿಸಿದ. ‘ಇದೇ ಇನ್ಮೆಲ್ ನಿನ್ ಮನೆ. ನೀನ್ ಇಲ್ಲೇ ಇರ್ತೀಯ ಇನ್ಮೇಲಿಂದ. ಸರಿನಾ?’ ಎಂದು ಕೇಳಿದ. ಅದು ತಲೆ ಅಲ್ಲಾಡಿಸಿದಂತಾಗಿ ಅವನಿಗೆ ಹಿಗ್ಗಾಯಿತು. ‘ಓಕೆ ಓಕೆ. ಎಷ್ಟೊತ್ತಾಯ್ತು ನೀನ್ ಏನೂ ತಿಂದೇ ಇಲ್ಲ ಅಲ್ವಾ? ಇರು ಏನಾದ್ರು ತರ್ತೀನಿ. ಒನ್ ಮಿನಿಟ್… ಓನ್ಲಿ ಒನ್ ಮಿನಿಟ್.. ಓಕೆ?’ ಎಂದು ಆ ಇರುವೆಯನ್ನು ಅಲ್ಲೇ ಬಿಟ್ಟು ರೂಮ್ ಬಾಗಿಲು ಹಾಕಿಕೊಂಡು ಅಡುಗೆ ಮನೆ ಕಡೆಗೆ ಉತ್ಸಾಹದಿಂದ ಓಡಿದ. ಟೀವಿ ಹಾಲ್ ನಲ್ಲಿನ ಸೋಫಾದ ಮೇಲೆ ಅಸ್ತವ್ಯಸ್ಥವಾಗಿ ಬಿದ್ದುಕೊಂಡು ಯಾರೊಂದಿಗೋ ಫೋನ್ ನಲ್ಲಿ ಮಾತನಾಡುತ್ತಿದ್ದ ಬೆಕ್ಕಿಗೆ ಇವನು ಇಷ್ಟು ಉತ್ಸಾಹದಲ್ಲಿ ಅಡುಗೆಮನೆ ಕಡೆ ಓಡಿದ್ದು ನೋಡಿ ಆಶ್ಚರ್ಯವಾಯಿತು. ಆದರೂ ಏನೂ ಕೇಳುವ ಗೋಜಿಗೆ ಹೋಗದೆ ‘ಮತ್ತೆ? ಇನ್ನೇನು?’ ಎಂದು ಮೊಬೈಲ್ ನಲ್ಲಿ ತನ್ನ ಮಾತುಕತೆ ಮುಂದುವರಿಸಿತು.

ರಾಜು ಕೈಲೊಂದಿಷ್ಟು ಸಕ್ಕರೆ ಹಿಡಿದುಕೊಂಡು ರೂಮಿಗೆ ಬಂದು ಬಾಗಿಲು ಹಾಕಿದ. ತನ್ನ ಟೇಬಲ್ ಹತ್ತಿರ ಬಂದು ‘ಇರುವೆ… ನಿನ್ ಊಟ ಬಂತೂ’ ಎಂದು ಅಕ್ಕರೆಯಿಂದ ಇನ್ನೇನು ಜಾಮಿಟ್ರಿ ಪೆಟ್ಟಿಗೆಯಲ್ಲಿರುವ ಇರುವೆಗೆ ಕಾಳು ಹಾಕಬೇಕು, ಅವನ ಎದೆ ಧಸಕ್ ಎಂದಿತು. ಅಲ್ಲಿ ಇರುವೆ ಇರಲಿಲ್ಲ. ‘ಅಯ್ಯೋ ಎಲ್ ಹೋಯ್ತಿದು?!’ ಎಂದು ಗಾಬರಿ ಆದ. ಎಡಗೈಯಿಂದ ಜಾಮಿಟ್ರಿ ಪೆಟ್ಟಿಗೆಯೊಳಗೆ ಹಾಸಿದ್ದ ಹಾಳೆಯನ್ನ ಮೇಲಕ್ಕೆತ್ತಿ ನೋಡಿದ. ಕಾಣಿಸಲಿಲ್ಲ ಅದು. ಪೆಟ್ಟಿಗೆ ಸುತ್ತಮುತ್ತ ಕಣ್ಣಾಡಿಸಿದ. ಅಲ್ಲೂ ಕಾಣಿಸಲಿಲ್ಲ. ಟೇಬಲ್ ಮೇಲೆಲ್ಲ ನೋಟ್ಬುಕ್ಕು ಟೆಕ್ಸ್ಟ್ ಬುಕ್ಕು, ಗೈಡುಗಳು ಒಟ್ಟಿದ್ದವು. ಅದು ಯಾವ ಮೂಲೆಗೆ ಹೋಗಿ ಕುಳಿತುಕೊಂಡಿದೆಯೋ ಎಂದು ಚಿಂತೆಯಾಯಿತು. ಪೆಟ್ಟಿಗೆ ಮುಚ್ಚಿ ಹೋಗಿದ್ದರೆ ಚೆನ್ನಾಗಿರ್ತಿತ್ತು ಎನ್ನಿಸಿತು. ‘ಆದ್ರೆ ಏನ್ ಮಾಡೋದು? ಮುಚ್ಚಿದ್ರೆ ಅದಕ್ ಹಿಂಸೆ ಆಗ್ಬೋದ್ ಅಂತ ಹಾಗೇ ಹೋದೆ… ಅಷ್ಟಕ್ಕೂ ಇಷ್ಟೊತ್ತು ನಾನ್ ಹೇಳಿದ್ ಎಲ್ಲಾ ಕೇಳ್ತಿತ್ತಲ್ಲ. ನಾನ್
ಬರೋವರ್ಗೂ ಎಲ್ಲಿಗೂ ಹೋಗಲ್ಲ ಅಂದ್ಕೊಂಡಿದ್ದೆ. ಆದ್ರೆ ಎಲ್ಲಿಗ್ ಹೋಯ್ತಿದು?’ ಎಂದು ತಲೆಕೆಡಿಸಿಕೊಂಡ. ನಿಂತ ಜಾಗದಿಂದ ಸ್ವಲ್ಪವೂ ಅತ್ತಿತ್ತ ಕದಲಲು ಅವನಿಗೆ ಆತಂಕ. ಇಲ್ಲೆಲ್ಲೋ ಇದ್ದು ತಾನದನ್ನ ತುಳಿದುಬಿಟ್ಟರೆ ಎಂಬ ಭಯ. ‘ಅಥ್ವಾ ಓಡ್ಕೊಂಡ್ ಬಂದ್ನಲ್ಲ? ಅಲ್ಲೇನಾದ್ರು ತುಳುದ್ಬಿಟ್ಟಿದೀನಾ? ಅಯ್ಯೋ!!! ಇಲ್ಲಾ ಇಲ್ಲಾ ಹಾಗೇನೂ ಆಗಿರೋದಿಲ್ಲ. ಇಲ್ಲೇ ಎಲ್ಲೋ ಇದೆ ಅದು. ಅಷ್ಟು ದೂರ ಎಲ್ಲ ಬಂದಿರೋದಿಲ್ಲ. ಆಕಸ್ಮಾತ್ ಬಂದಿದ್ರೆ? ಓಹ್ ಗಾಡ್! ಹಾಗ್ ಮಾತ್ರ ಆಗಿರ್ಬಾದಪ್ಪಾ… ಹಾಗ್ ಮಾತ್ರ ಆಗಿರ್ಬಾದು’ ಅವನ ಕೈಯಲ್ಲಿನ ಸಕ್ಕರೆ ಮೆತ್ತಗಾಗತೊಡಗಿತು.

ಕಾಲು ಕೀಳದೆ ನಿಂತಲ್ಲೇ ನಿಂತು ಎಲ್ಲ ಕಡೆಗೂ ಕಣ್ಣು ಅಗಲಿಸಿ ತಪಾಸಣೆ ಮಾಡತೊಡಗಿದ. ಟೇಬಲ್ ಮೇಲೆ ಕೆಳಗೆ ಬಗ್ಗಿ ಬಗ್ಗಿ ನೋಡಿದ. ಅದರ ಬಲಕ್ಕಿದ್ದ ಕಿಟಕಿಯನ್ನೂ ಎಡಕ್ಕಿದ್ದ ಮಂಚವನ್ನೂ ಕಣ್ಣಲ್ಲೇ ಸೂಕ್ಷ್ಮವಾಗಿ ತಪಾಸಣೆ ಮಾಡಿದ. ಇರುವೆ ಎಲ್ಲೂ ಕಾಣಿಸಲಿಲ್ಲ. ಮೆತ್ತಗೆ ಡ್ರಾಯರ್ ತೆಗೆದು ಹುಡುಕಾಡಿದ. ಗೋಡೆಗೇನಾದರು ಏರಿರಬಹುದಾ ಎಂದು ಸುತ್ತ ನೋಡಿದ. ಕಾಣಿಸಲಿಲ್ಲ. ತಾನು ನಿಂತಿರೋ ಜಾಗದಿಂದ ಯಾವ್ಯಾವ ಜಾಗ, ಮೂಲೆಗಳನ್ನ ಪರೀಕ್ಷಿಸಬಹುದೋ ಅವೆಲ್ಲಾ ಕಡೆಗೂ ಕಣ್ಣು ನೆಟ್ಟು ನೆಟ್ಟು ನೋಡಿದ. ಇರುವೆ ಎಲ್ಲೂ ಕಾಣಿಸಲಿಲ್ಲ. ಅಳು ಬಂದ ಹಾಗಾಯಿತು ಅವನಿಗೆ. ಕೈಲಿದ್ದ ಸಕ್ಕರೆಯನ್ನ ಕಿಟಕಿಯ ಅಂಚಿನ ಜಾಗದಲ್ಲೊಂದು ಕಡೆ ಸುರುವಿದ. ಈ ಪುಸ್ತಕಗಳಲ್ಲೆಲ್ಲೋ ಅದು ಹೋಗಿ ಕೂತಿರಬಹುದು, ಇಲ್ಲಾ ಸಿಕ್ಕಾಕ್ಕೊಂಡಿರಬಹುದು ಎಂದು ಅವನಿಗೆ ಬಲವಾಗಿ ಅನ್ನಿಸತೊಡಗಿತು. ಮತ್ತೊಂದು ಸಲ ಮಂಚವನ್ನು ಅಲ್ಲಿಂದಲೇ ಸೂಕ್ಷ್ಮವಾಗಿ ಪರಿಶೀಲಿಸಿದ. ಈಗ ನಿಧಾನಕ್ಕೆ ಒಂದೊಂದೇ ಬುಕ್ ತೆಗೆದು ಅವನ್ನು ಚೆಕ್ ಮಾಡಿ ಆಮೇಲೆ ಆ ಬೆಡ್ ಮೇಲೆ ಇಡುವುದು ಎಂದು ನಿರ್ಧರಿಸಿದ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ರಾಜು ತಲೆತಗ್ಗಿಸಿಕೊಂಡೇ ಒಳಪ್ರವೇಶಿಸಿದ. ಅಷ್ಟರಲ್ಲಿ ಬೆಕ್ಕು ಒಂದು ಕೈಯಲ್ಲಿ ಕಾಫಿ ಹೀರುತ್ತ ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಕುಂಡಿ ಅಲುಗಾಡಿಸುತ್ತ ಬಂತು. ‘ಬೂಸ್ಟ್ ಮಾಡ್ ಕೊಡ್ಲಾ ರಾಜು’ ಎಂದು ಕೇಳಿತು. ಇವನು ‘ಉಹ್ಞೂ’ ಎಂದು ತನ್ನ ರೂಮು ಪ್ರವೇಶಿಸಿ ಬಾಗಿಲು ಹಾಕಿಕೊಂಡ.

ಅದರಂತೆ ಮೊದಲಿಗೆ ಒಂದು ಪುಸ್ತಕವನ್ನು ಅದರ ಮೂಲೆ ಹಿಡಿದು ಜಾಗ್ರತೆಯಿಂದ ತೆಗೆದುಕೊಂಡ. ಸಾವಕಾಶವಾಗಿ ಅದನ್ನ ಆಕಡೆ ಈಕಡೆ ತಿರುಗಿಸಿ ಎಲ್ಲಕಡೆ ನೋಡಿದ. ಇರುವೆ ಎಲ್ಲಾದರು ಅಂಟಿಕೊಂಡಿರಬಹುದಾ ಎಂದು. ಕಾಣಿಸಲಿಲ್ಲ ಅದು. ಮತ್ತೆ ಮತ್ತೆ ನೋಡಿ ಖಾತ್ರಿ ಆದ ಮೇಲೆ ನಿಧಾನಕ್ಕೆ ಆ ಪುಸ್ತಕದ ಪೇಜುಗಳನ್ನ ತಿರುವತೊಡಗಿದ. ಒಂದೊಂದನ್ನೇ ಹಗೂರಕ್ಕೆ ತಿರುವಿ ತಿರುವಿ ಅವನ ಕೈ ಸೋತಂತಾದವು. ಆದರೂ ಪಟ್ಟು ಬಿಡದೆ ಎಲ್ಲ ಪೇಜುಗಳನ್ನೂ ತಿರುವಿ ಹಾಕಿದ. ಆ ಪುಸ್ತಕದಲ್ಲೆಲ್ಲೂ ಅದು ಕಾಣಿಸಲಿಲ್ಲ. ಈಗ ಅದನ್ನು ಬೆಡ್ ಮೇಲೆ ಇಡಬೇಕು ಎಂದು ಹೊರಟವನಿಗೆ ‘ಅಯ್ಯೋ ಈ ಇರುವೆ ಈ ಬೆಡ್ ಕೆಳಗ್ ಏನಾದ್ರು ಇದ್ರೆ ಹೆಂಗೆ?’ ಎಂದು ಗಾಬರಿ ಆಯಿತು. ಹಾಗಾದ್ರೆ ಇಲ್ ಇಡೋದ್ ಬೇಡಾ ಪುಸ್ತಕಾನ’ ಎಂದು ಸುತ್ತ ನೋಡಿದ. ಸಕ್ಕರೆ ಹಾಕಿದ್ದ ಕಿಟಕಿಯ ಜಾಗದ ಪಕ್ಕ ಖಾಲಿ ಖಾಲಿ ಇತ್ತು. ‘ಇಲ್ಲೇ ಇಡೋದ್ ಬೆಟರ್’ ಎಂದು ಆ ಪುಸ್ತಕವನ್ನ ಅಲ್ಲಿಡಬೇಕು ಅಷ್ಟರಲ್ಲಿ ಅವನ ಕಣ್ಣು ಕೆಂಪಾದವು. ಇರುವೆ ಅಲ್ಲೇ ಸಕ್ಕರೆ ತಿನ್ನುತ್ತಿತ್ತು.

‘ಇಲ್ ಇದ್ಯಾ ನೀನು… ಇಷ್ಟೊತ್ತು ಎಲ್ಲೋ ಹೋಗಿದ್ದೆ ಸ್ಟುಪಿಡ್’ ಎಂದು ಬೈದ. ಅದು ಇವನ ಕಡೆ ನೋಡಿದಂತೆ ಮಾಡಿ ಸಕ್ಕರೆ ತಿನ್ನುವುದನ್ನು ನಿಲ್ಲಿಸಿತು. ಇವನಿಗೆ ಪಾಪ ಎನ್ನಿಸಿತು. ಈಗ ಚೂರು ದನಿ ತಗ್ಗಿಸಿ ‘ಹ್ಮ… ಎಷ್ಟ್ ಗಾಬರಿ ಆಗೋಗಿತ್ ಗೊತ್ತಾ ನಂಗೆ? ಸಖತ್ ಟೆನ್ಷನ್ ಆಗೋಗಿತ್ತು… ಹೀಗ್ ಹೇಳ್ದೆ ಕೇಳ್ದೆ ಹೋಗ್ಬಿಟ್ರೆ ಹೆಂಗೆ? ಇನ್ನೊಂದ್ಸಲ ಹೀಗ್ ಮಾಡಿದ್ರೆ ಸರಿ ಇರಲ್ಲ ನೋಡು… ಸರಿ ಸರಿ… ತಿನ್ನು ತಿನ್ನು’ ಎಂದ. ಅದು ಇವನತ್ತ ಒಮ್ಮೆ ನೋಡಿತು. ಅವನು, ‘ಏನ್ ಮುಖ ನೋಡ್ತೀಯ? ತಿನ್ನು’ ಎಂದು ಗದರಿಸಿದ. ಅದು ತಿನ್ನುವುದನ್ನು ಮುಂದುವರಿಸಿತು. ಇವನು ಕೋಪ
ಕಂಟ್ರೋಲ್ ಮಾಡಿಕೊಂಡು ಅದು ತಿನ್ನುವುದನ್ನು ನೋಡತೊಡಗಿದ. ಅದು ಒಂದೆರಡು ಕಾಳು ತಿಂದು ತನ್ನ ಹೊಟ್ಟೆ ತುಂಬಿತು ಎಂಬಂತೆ ರಾಜುವಿನ ಕಡೆ ನೋಡಿತು. ಅವನು ಅದನ್ನ ಅಂಗೈ ಮೇಲೆ ಹಾಕಿಕೊಂಡ.

ಅಷ್ಟೊತ್ತಿಂದ ಕಾಲುಕಿತ್ತದೆ ಒಂದೆ ಕಡೆ ನಿಂತು, ಕಣ್ಣನ್ನು ಅಗಲಿಸಿ ನೋಡಿ ನೋಡಿ ಅವನಿಗೂ ಸುಸ್ತಾಗಿತ್ತು. ಅಂಗೈಲಿರುವ ಇರುವೆಯನ್ನ ನೋಡುತ್ತ ಅಲ್ಲೇ ಖುರ್ಚಿ ಮೇಲೆ ಕೂತುಕೊಂಡ. ಅದು ನಿದ್ದೆ ಹೋಗತೊಡಗಿತು. ಅವನಿಗೆ ಅದರ ಮೇಲೆ ಮತ್ತಷ್ಟು ಮುದ್ದು ಮೂಡಿತು. ಅದಕ್ಕೆ ನಿದ್ದೆ ಹತ್ತಿದ್ದುದು
ಖಾತ್ರಿಯಾದದ್ದೇ ನಿಧಾನಕ್ಕೆ ಅದನ್ನು ಜಾಮಿಟ್ರಿ ಪೆಟ್ಟಿಗೆಯಲ್ಲಿ ಮಲಗಿಸಿದ. ಮಲಗಿಸಿದವನೇ ಆಕಳಿಸುತ್ತ ತಾನೂ ನಿದ್ದೆ ಮಾಡಲು ಬೆಡ್ ಮೇಲೆ ಜಾರಬೇಕು ಎಂದು ಹೊರಟವನು ವಾಪಸ್ ಎದ್ದು ಜಾಮಿಟ್ರಿ ಪೆಟ್ಟಿಗೆ ಕಡೆಗೆ ನೋಡಿದ. ಇರುವೆ ಆರಾಮಾಗಿ ನಿದ್ದೆ ಮಾಡುತ್ತಿತ್ತು. ಇವನು ಅದನ್ನ ಮತ್ತೊಮ್ಮೆ ಅಕ್ಕರೆಯಿಂದ ನೋಡಿ ಆ ಜಾಮಿಟ್ರಿ ಪೆಟ್ಟಿಗೆ ಮುಚ್ಚಿ ಅದರ ಮೇಲೆ ತನ್ನ ಕೆಮಿಸ್ಟ್ರಿ ಪುಸ್ತಕ ಇಟ್ಟ. ಇಟ್ಟವನೇ ವಾಪಸ್ ಬಂದು ಬೆಡ್ ಮೇಲೆ ಮಲಗಿಕೊಂಡ. ನಿದ್ದೆ ಹತ್ತಲಿಲ್ಲ. ಮತ್ತೆ ಎದ್ದು ಜಾಮಿಟ್ರಿ ಪೆಟ್ಟಿಗೆ ಓಪನ್ ಮಾಡಿದ. ಮಾಡಿ ಇರುವೆಯನ್ನು ನೋಡಿದ. ಅದು ಹಾಗೇ ಮಲಗಿತ್ತು. ಏನೋ ಹೊಳೆದಂತಾಗಿ ಪೆಟ್ಟಿಗೆ ಮುಚ್ಚಿ ಅದರ ಮೇಲೆ ಬುಕ್ ಇಟ್ಟು ಬೆಕ್ಕಿನ ರೂಮ್ಗೆ ಹೋದ. ಅದು ಯಾವುದೋ ವಿಡಿಯೋ ನೋಡುತ್ತ ಮಲಗಿತ್ತು. ಇವನು ಒಂದು ಕಬೋರ್ಡ್ ತೆಗೆದು ತನ್ನ ಅಜ್ಜಿ ಇಲ್ಲಿಗೆ ಬಂದಾಗ ಬಳಸುತ್ತಿದ್ದ ಹಳೆಯ ಸೊಳ್ಳೆಪರದೆಯೊಂದನ್ನು ತೆಗೆದುಕೊಂಡು ಅಲ್ಲಿಂದ ಹೊರಟ. ಬೆಕ್ಕು ಒಂದು ಸಲ ಇವನ ಕಡೆ ತಿರುಗಿ ನೋಡಿತಷ್ಟೆ.

ರಾಜು ರೂಮಿಗೆ ಬಂದವನೇ ಆ ಸೊಳ್ಳೆ ಪರದೆಯಿಂದ ಒಂದು ನೀಟಾದ ಚಚ್ಚೌಕ ತುಂಡು ಕತ್ತರಿಸಿಕೊಂಡ. ಜಾಮಿಟ್ರಿ ಪೆಟ್ಟಿಗೆ ತೆಗೆದು ನಿದ್ದೆಯಲ್ಲಿದ್ದ ಇರುವೆಯನ್ನು ಅದರ ನಿದ್ರೆಗೆ ಭಂಗವಾಗದಂತೆ ಎತ್ತಿ ಪುಸ್ತಕದ ಮೇಲಿಟ್ಟ. ಜಾಮಿಟ್ರಿ ಪೆಟ್ಟಿಗೆಯ ಮೇಲ್ಮುಚ್ಚಳವನ್ನು ಅದರಿಂದ ಬೇರ್ಪಡಿಸಿದ. ನಂತರ ಇರುವೆಯನ್ನು ಮತ್ತೆ ಪೆಟ್ಟಿಗೆಗೆ ಸ್ಥಳಾಂತರಿಸಿದ. ಈಗ ಆ ಸೊಳ್ಳೆಪರದೆ ತುಂಡನ್ನು ಅದರ ಸುತ್ತ ಒಂದು ಸುತ್ತು ಸುತ್ತಿ ಗಂಟು ಹಾಕಿದ. ಈಗ ಇರುವೆಗೆ ಗಾಳಿ ಬೆಳಕು ಸರಿಯಾಗಿ ಬೀಳುವಂಥ ವ್ಯವಸ್ಥೆ ಆಯಿತು. ಅದು ಆಕಸ್ಮಾತ್ ಎಲ್ಲಿಗೂ ಹೋಗಲಿಕ್ಕೂ ಆಗದಂತೆ ಬಂದೋಬಸ್ತ್ ಕೂಡ ಆಯಿತು. ಅವನ ಮನಸ್ಸು ನಿರಾಳ ಆಯಿತು. ಇರುವೆ ಇದ್ಯಾವುದರ ಪರಿವೆಯೇ ಇಲ್ಲದಂತೆ ಮಲಗಿತ್ತು. ರಾಜು ಅದರ ಕಡೆ ಮಗದೊಮ್ಮೆ ಅಕ್ಕರೆಯಿಂದ ನೋಡಿ ಪಪ್ಪಿ ಕೊಟ್ಟ ಹಾಗೆ ಮಾಡಿ ಆ ಪೆಟ್ಟಿಗೆಯನ್ನು ಅಲ್ಲೇ ಟೇಬಲ್ ಮೇಲಿಟ್ಟು ಮಲಗಿಕೊಂಡ. ಮಲಗಿ ನಿಮಿಷವಾಗಿರಲಿಲ್ಲ ಮತ್ತೆ ಎದ್ದ. ಪೆಟ್ಟಿಗೆಯನ್ನು ನೋಡಿದ. ಇರುವೆ ಹಾಗೇ ಮಲಗಿತ್ತು. ಇವನು, ‘ಸ್ಟುಪಿಡ್….ಇನ್ನೊಂದ್ ಸಲ ಹಾಗ್ ಎಲ್ಲಾದ್ರು ಹೋದ್ರೆ ನಾನ್ ಸುಮ್ನೆ ಇರೋದಿಲ್ಲ ನೋಡು’ ಎಂದು ಮತ್ತೊಮ್ಮೆ ಬೈದ. ಬೈದು ಮಲಗಲು ಅನುವಾದವನು ಇದ್ದಕ್ಕಿದ್ದ ಹಾಗೆ ಎದ್ದು ಪೆಟ್ಟಿಗೆ ಕೈಗೆತ್ತಿಕೊಂಡು ಪಕ್ಕದಲ್ಲಿಟ್ಟುಕೊಂಡು ಕಣ್ಮುಚ್ಚಿದ. ನಿಧಾನಕ್ಕೆ ನಿದ್ದೆ ಹತ್ತಿತು. ನಿದ್ದೆ ಹತ್ತಿದ್ದೇ ತಡ ಕನಸೊಂದು ಬಿತ್ತು.

ಅಜ್ಜಿ ರಾಜುವಿನ ಟೇಬಲ್ ಮೇಲೆ ಚಕ್ಕಳಮಕ್ಕಳ ಹಾಕಿ ಕೂತು ಕುಟ್ಟಣಿಗೆಯಲ್ಲಿ ಅಡಕೆ ಕುಟ್ಟುತ್ತಿದ್ದಾಳೆ. ಅವನು ನೆಲದ ಮೇಲೆ ತುದಿಗುಂಡಿಯಲ್ಲಿ ಕೂತುಕೊಂಡು ಅವಳನ್ನೇ ನೋಡುತ್ತಿದ್ದಾನೆ. ಅವನಿಗೋ ಆಕೆಗೆ ಆದಷ್ಟು ಬೇಗ ತನ್ನ ಇರುವೆಯನ್ನು ತೋರಿಸುವ ಆತುರ. ಆದರೆ ಅಜ್ಜಿ ಆರಾಮಾಗಿ
ನೋಡಿದರಾಯಿತು ಎಂಬಂತೆ ಅಡಕೆ ಕುಟ್ಟುವುದರಲ್ಲಿ ಮಗ್ನಳಾಗಿದ್ದಾಳೆ. ರಾಜುವಿಗೆ ಕಾದು ಕಾದು ಸಾಕಾಯ್ತು, ‘ಅಜ್ಜೀ?’ ಎಂದು ಮತ್ತೊಮ್ಮೆ ಬಾಯಿಬಿಟ್ಟ. ಅಜ್ಜಿ, ‘ಇರು ಇರು’ ಎಂಬಂತೆ ಸನ್ನೆ ಮಾಡಿ ಕುಟ್ಟಿ ಪುಡಿಮಾಡಿಕೊಂಡ ಅಡಕೆಯನ್ನ ಬಾಯಿಗೆ ಹಾಕಿಕೊಂಡಳು. ನಂತರ ತನ್ನ ಚೀಲದಿಂದ ಎಲೆಯ ಚೂರು ತೆಗೆದು ಅದಕ್ಕೆ ಸುಣ್ಣ ಸವರಿ ಬಾಯಿಗಿಟ್ಟುಕೊಂಡಳು. ನಂತರ ಅವನ ಪುಸ್ತಕವೊಂದನ್ನು ತೆಗೆದುಕೊಂಡು ಅದರಲ್ಲೇನೋ ನೋಡುತ್ತ ಎಲೆಅಡಕೆ ಜಗಿಯತೊಡಗಿದಳು. ಅವಳ ಅಪ್ಪಣೆಗಾಗಿ ಬಾಯಿ ತೆರೆದುಕೊಂಡು ಕಾಯುತ್ತಲೇ ಇರುವ ರಾಜು, ‘ಅಜ್ಜೀ…’ ಎಂದು ಮಗದೊಮ್ಮೆ
ಗೋಗರೆದ. ಅಜ್ಜಿ, ಬಾಯಿ ತುಂಬಾ ತುಂಬಿಕೊಂಡಿರುವ ಜೊಲ್ಲನ್ನು ಅಲ್ಲೇ ತಾನು ಕೂತಿರುವ ಟೇಬಲ್ನ ಪಕ್ಕದ ಮೂಲೆಗೆ ಉಗಿದು, ‘ಬಾ ತೋರ್ಸು ನಿನ್ ರಾಣೀನಾ’ ಎಂದು ಅಪ್ಪಣೆ ಕೊಟ್ಟಳು. ಅವನು ಉತ್ಸಾಹದಿಂದ ಎದ್ದವನೇ ತನ್ನ ಟೇಬಲ್ನ ಡ್ರಾಯರ್ ಹಿಂದಕ್ಕೆ ಜಗ್ಗಿದ. ಅವನು ಹಾಗೆ ಜಗ್ಗಿದ್ದೇ ಸೈನ್ಯೋಪಾದಿಯಲ್ಲಿ ಇರುವೆಗಳು ಜುಳುಜುಳುಜುಳು ಎಂದು ಹೊರಗೆ ಬರತೊಡಗಿದವು. ಅವನಿಗೆ ಗಾಬರಿ ಆಯಿತು. ಇದ್ರಲ್ಲಿ ಯಾವ್ದು ತನ್ನ ಇರುವೆ ಎಂದು ಗುರುತಿಸಲಾಗಷ್ಟು ಇರುವೆಗಳು!! ಅವನು ಆ ಗಾಬರಿ ಅರಗಿಸಿಕೊಳ್ಳುವಷ್ಟರಲ್ಲಿ ಆ ಇರುವೆಗಳು ಶರವೇಗದಲ್ಲಿ ಅಜ್ಜಿಯ ಇಡೀ ದೇಹವನ್ನು ಮುತ್ತಿ ಕಚಕಚಕಚಕಚಕಚಕಚ ಎಂದು ಅವಳ ಮಾಂಸವನ್ನೆಲ್ಲ ತಿಂದುಹಾಕಿ ಕಿಟಕಿ ಮೂಲಕ ಮಾಯವಾದವು. ಅರ್ಧ ನಿಮಿಷದ ಮುಂಚೆ ಇವನ ಕಣ್ಮುಂದೆ ಇದ್ದ ಅಜ್ಜಿ ಹೋಗಿ ಬರಿ ಅಸ್ತಿಪಂಜರ ಉಳಿಯಿತು. ಅದು ದೊಪ್ಪೆಂದು ಒಂದು ಕಡೆ ವಾಲಿ ಬಿತ್ತು. ಇವನು ಚಿಟ್ ಎಂದು ಚೀರಿಕೊಂಡ.

ಕನಸಿನಿಂದ ಎದ್ದಾಗ ಅವನ ಮುಖ ಹಸಿಹಸಿ ಆಗಿತ್ತು. ಮೈಯೆಲ್ಲಾ ಗದಗದ ನಡುಗುತ್ತಿತ್ತು. ಕೈಯಿಂದ ಮುಖದ ಬೆವರು ಒರೆಸಿಕೊಂಡ. ದಿಡಗ್ಗನೆ ಎದ್ದು ಬಾಕ್ಸ್ ಕಡೆ ನೋಡಿದ. ಇರುವೆ ಹಾಗೇ ಮಲಗಿತ್ತು. ಅದನ್ನು ತೆಗೆದು ಟೇಬಲ್ ಮೇಲಿಟ್ಟ. ತನ್ನ ಬ್ಯಾಗ್ ತೆಗೆದು ಅದರಿಂದ ನೀಲಿಮಸಿ ಪೆನ್ನು ತೆಗೆದ. ಅದರ ರಿಫೀಲ್ ಬೇರ್ಪಡಿಸಿದ. ಅದರ ನಿಬ್ ಅನ್ನು ಬಾಯಲ್ಲಿ ಕಚ್ಚಿ ತೆಗೆದ. ಬಾಯಿತುಂಬಾ ಮಸಿ ಆಗಿ ಒಂಥರ ಎನಿಸಿತು. ತ್ಪು ಎಂದು ಉಗುಳಲು ಹೋದವನು ಇರುವೆಗೆ ಎಚ್ಚರವಾಗುತ್ತೆ ಎಂಬ ಯೋಚನೆ ಬಂದಿದ್ದೇ ತಡೆಹಿಡಿದು ನಿಬ್ ಅನ್ನು ಬಾಯಲ್ಲೇ ಇಟ್ಟುಕೊಂಡ. ಮತ್ತಷ್ಟು ಮಸಿ ಬಾಯಿ ತುಂಬಿತು.

ನಂತರ ರಿಫಿಲ್ ಅನ್ನು ಸಾವಕಾಶವಾಗಿ ಅದರೊಳಗಿನ ಮಸಿ ಕೆಳಗೆ ಚೆಲ್ಲದಂತೆ ಕಿಟಕಿಗೆ ಆನಿಸಿ ಇಟ್ಟ. ಜಾಮಿಟ್ರಿ ಪೆಟ್ಟಿಗೆ ಕೈಗೆತ್ತಿಕೊಂಡು ಪರದೆ ಬಿಚ್ಚಿದ. ಮಲಗಿದ್ದ ಇರುವೆಯನ್ನು ನಿಧಾನಕ್ಕೆ ಹೊರಕ್ಕೆ ತೆಗೆದ.ಟೇಬಲ್ ಮೇಲಿಟ್ಟ.ಕಣ್ಮುಚ್ಚಿ, ‘ಫಾರ್ಗಿವ್ ಮಿ ಇರುವೆ… ಪ್ಲೀಸ್’ ಎಂದು ಪ್ರಾರ್ಥಿಸಿದ.
ಗಟ್ಟಿಮನಸು ಮಾಡಿ ರಿಫಿಲ್ ಕೈಗೆತ್ತಿಕೊಂಡ.ಅವನ ಕೈ ನಡುಗತೊಡಗಿತು. ನಿಶ್ಚಿಂತೆಯಿಂದ ಮಲಗಿದ್ದ ಇರುವೆಯ ಕಡೆಗೊಮ್ಮೆ ನೋಡಿದ. ಕೈ ಮತ್ತಷ್ಟು ನಡುಗತೊಡಗಿತು. ರಿಫಿಲ್ ಅನ್ನು ಇರುವೆ ಹತ್ತಿರಕ್ಕೆ ತಂದ. ಕೈ ಮಗದಷ್ಟು ಜೋರಾಗಿ ನಡುಗಿ ಒಂದು ಹನಿ ಅವನ ಹಣೆಗೆ ಸಿಡಿಯಿತು. ಎಡಗೈಯಿಂದ ಅದನ್ನೊರೆಸಿಕೊಂಡು ರಿಫಿಲ್ ಅನ್ನು ಮತ್ತಷ್ಟು ಬಲವಾಗಿ ಹಿಡಿದ. ಗುರಿಯಿಟ್ಟು ಇರುವೆ ಮೇಲೆ ಒಂದು ಹನಿ ಮಸಿ ಹಾಕಲುಹೋದ. ಆದರೆ ಕಡೆ ಕ್ಷಣದಲ್ಲಿ ಕೈ ನಡುಗಿ ಆ ಹನಿ ಅದರ ಪಕ್ಕಕ್ಕೆ ಬಿತ್ತು. ಈಗ ಅವನು ನಡುಗುವ ಕೈಯನ್ನು ತಹಬದಿಗೆ ತರಲು ಇನ್ನೊಂದು ಕೈಯಿಂದ ಆ ಕೈಯನ್ನು ಬಲವಾಗಿ ಹಿಡಿದುಕೊಂಡು ಹೇಗೋ ತ್ರಾಸುಪಟ್ಟು ಇರುವೆ ಮೇಲೆ ಒಂದು ಹನಿ ಮಸಿ ಹಾಕುವುದರಲ್ಲಿ ಯಶಸ್ವಿಯಾದ. ಆದರೆ ಮಸಿ ಮೈಮೇಲೆ ಬಿದ್ದದ್ದೇ ಇರುವೆ ಎಚ್ಚರಗೊಂಡು ವಿಲವಿಲ ಒದ್ದಾಡತೊಡಗಿತು. ಅದನ್ನು ನೋಡಿ ಅವನಿಗೆ ಗಾಬರಿ ಆಯಿತು. ಕಣ್ಣಲ್ಲಿ ರಕ್ತ ಜಿಲ್ಲೆಂದಿತು. ಕಣ್ಗುಡ್ಡೆ ತುಂಬಾ ನರ ಮೂಡಿದವು.

ರಿಫಿಲ್ ಕೈಬಿಟ್ಟು ‘ಅಯ್ಯೋ! ಸಾರಿ ಸಾರಿ ಐ ಯಾಮ್ ರಿಯಲಿ ಸಾರಿ ಐ ಯಾಮ್ ರಿಯಲಿ ಸಾರಿ’ ಎಂದು ಅಳತೊಡಗಿದ. ಬಾಯೊಳಗೆ ತುಂಬಿಕೊಂಡಿದ್ದ ಮಸಿಮಿಶ್ರಿತ ಜೊಲ್ಲು ಹೊರಗೆ ಬಂದು ಗದ್ದದ ಮೇಲಿಂದ ಕೊರಳ ಕೆಳಗೆ ಹರಿಯತೊಡಗಿತು. ಜೊಲ್ಲಿನೊಂದಿಗೆ ನಿಬ್ಬೂಹೊರಗೆಬಂದಿತು.ಅಷ್ಟರಲ್ಲಿ ಇರುವೆ ಸಾವರಿಸಿಕೊಂಡು ನಿಂತಿತು. ಅದನ್ನ ನೋಡಿ ಅವನಿಗೆ ಸ್ವಲ್ಪ ಸಮಾಧಾನವಾಯಿತು. ಕಣ್ಣೀರು ಜೊಲ್ಲು ಒರೆಸಿಕೊಂಡ. ಇರುವೆ ಹಾಗೆಯೇ ನಿಂತಿತ್ತು. ‘ಐ ಯಾಮ್ ಸಾರಿ ಐ ಯಾಮ್ ರಿಯಲಿ ಸಾರಿ…’ ಎಂದು ಅದನ್ನು ಮುಟ್ಟಲು ಹೋದ. ಅದು ಅವನ ಮಸಿಯಂಟಿದ ಬೆರಳು ಕಂಡಿದ್ದೇ ಸರ್ರ ಅಂತ ಅಲ್ಲಿಂದ ಕೊಂಚ ದೂರ ಹೋಯಿತು. ಅವನಿಗೆ ಆತಂಕವಾಯಿತು. ಸಟ್ ಅಂತ ಕೈ ಹಿಂದಕ್ಕೆ ತೆಗೆದುಕೊಂಡ. ಅವನು ನೋಡನೋಡುತ್ತಲೇ ಅದು ಕಿಟಕಿ ಕಡೆಗೆ ಓಡತೊಡಗಿತು. ಅವನಿಗೆ ಮತ್ತಷ್ಟು ಆತಂಕವಾಯಿತು. ‘ನಿಲ್ಲು… ಆ ಯಾಮ್ ರಿಯಲಿ ಸಾರಿ’ ಎಂದು ಬೇಡಿಕೊಂಡ. ಅವನು ಎಷ್ಟು ಕೇಳಿಕೊಂಡರೂ ಅದು ಅವನತ್ತ ನೋಡಲೂ ಇಲ್ಲ. ಅವನಿಗೆಏನು ಮಾಡಬೇಕು ತೋಚದಾಯಿತು. ಸಿಟ್ಟು ಅಳು ಒಟ್ಟೊಟ್ಟಿಗೆ ಬರತೊಡಗಿತು.

ಏನೇನೋ ಮಾತಾಡಿ,ಸನ್ನೆ ಮಾಡಿ, ಸಾರಿ ಕೇಳಿ, ಜಬರಿಸಿ ಅದನ್ನು ನಿಲ್ಲಿಸಲು ನೋಡಿದ. ಆದರೆ ಅದು ನಿಲ್ಲಲಿಲ್ಲ. ಕಿಟಕಿ ಕಡೆ ಮುಖ ಮಾಡಿ ಒಂದೇ ಸಮ ಓಡತೊಡಗಿತು. ಬಿಟ್ಟರಿದು ಹೋಗೇಬಿಡುತ್ತದೆ ಎಂಬ ಭಯದಲ್ಲಿಅವನು ಅದನ್ನು ಹಿಡಿದು ಜಾಮಿಟ್ರಿ ಪೆಟ್ಟಿಯೊಳಗೆ ಕೂರಿಸಿದ. ಈಗ ಅವನ ಬೆರಳುಗಳಿಂದ ರಕ್ತ ಸೋರಿತು. ಅಲ್ಲೇ ಇದ್ದ ಸೊಳ್ಳೆ ಪರದೆಯನ್ನು ಕೈಗೆತ್ತಿಕೊಂಡು ಹಲ್ಲಿನಿಂದ ಹರಿಯತೊಡಗಿದ. ಅದರಿಂದ ಒಂದು ತುಂಡು ಮಾಡಿಕೊಂಡು ಅದನ್ನು ಮತ್ತೆ ಜಾಮಿಟ್ರಿ ಪೆಟ್ಟಿಗೆಗೆ ಸುತ್ತಲು ಅನುವಾದ. ಆದರೆ ಅಷ್ಟರಲ್ಲಿ ಇರುವೆ ಮತ್ತೆ ಆ ಪೆಟ್ಟಿಗೆಯಿಂದ ತಪ್ಪಿಸಿಕೊಂಡು ಕಿಟಕಿಕಡೆಗೆ ಹೊರಟಿತು. ಅವನ ಮುಖ ಗಂಟಿಕ್ಕಿತು. ಕೈಲಿದ್ದ ಪರದೆತುಂಡು ಕೆಳಗಿಟ್ಟು ಇರುವೆಯನ್ನು ಹಿಡಿದು ಮತ್ತೆ ಪೆಟ್ಟಿಗೆಯೊಳಕ್ಕೆ ಕೂರಿಸಿದ. ಅದು ಮತ್ತೆ ಓಡತೊಡಗಿತು. ಮತ್ತೆ ಹಿಡಿದು ಕೂರಿಸಿದ. ಅದು ಮತ್ತೆ ಅಲ್ಲಿಂದ ಹೊರಟಿತು.ಅವನು ಹಿಡಿದು ಕೂರಿಸುವುದು, ಅದು ಓಡುವುದು – ಹೀಗೇ ನಡೆಯತೊಡಗಿತು. ಪ್ರತಿ ಸಲ ಹಿಡಿದಾಗಲೂ ಅವನ ಕೈಯಿಂದ ರಕ್ತ ಸೋರುವುದು ಜಾಸ್ತಿಯಾಗತೊಡಗಿತು. ಕಡೆಗೊಮ್ಮೆ ಅವನು ಇರುವೆಯನ್ನು ಬಲವಾಗಿ ಹಿಡಿದು ಪೆಟ್ಟಿಗೆಯೊಳಕ್ಕೆ ಜೋರಾಗಿ ಎಸೆದ.

ಅದು ಕಾಲು ಮೇಲಾಗಿ ದೇಹ ಕೆಳಗಾಗಿ ಬಿದ್ದು ಒದ್ದಾಡತೊಡಗಿತು. ಅವನು ನಾಲಿಗೆಯಲ್ಲಿ ಉಳಿದಿದ್ದ ಮಸಿ ನುಂಗಿಕೊಂಡ. ಪಟ ಪಟ ಬಡಿಯುತ್ತಿರುವ ಅದರ ಆರು ಕಾಲುಗಳನ್ನೇ ನೋಡತೊಡಗಿದ. ಇರುವೆ ಸ್ವಲ್ಪ ಸಮಯ ಶತಾಯಗತಾಯ ಪ್ರಯತ್ನ ಮಾಡಿ ಮತ್ತೆ ಎದ್ದು ಕೂತಿತು. ಎದ್ದು ಕೂತದ್ದೇ ಮತ್ತೆ ಕಿಟಕಿ ಕಡೆಗೆ ಹೊರಟಿತು. ಇವನಿಗೆ ಪಿತ್ತ ನೆತ್ತಿಗೇರಿತು. ಅದನ್ನು ರಪ್ ಅಂತ ಹಿಡಿದುಕೊಂಡ. ಅವನ ಕೈಯಿಂದ ಈಗ ರಕ್ತ ಮತ್ತಷ್ಟು ಧಾರೆಯಾಗಿ ಸುರಿಯತೊಡಗಿತು. ಇರುವೆಯನ್ನು ಹಾಗೇ ಗಟ್ಟಿಹಿಡಿದುಕೊಂಡು ತನ್ನ ಡ್ರಾಯರ್ ತೆಗೆದು ಅದರೊಳಗಿದ್ದ ನೇಲ್ ಕಟರ್ ಹೊರತೆಗೆದ. ತೆಗೆದು ಇರುವೆಯ ಇಕ್ಕಳದಂಥ ಹಲ್ಲುಗಳನ್ನೂ ಅದರ ಮುಂದಿನೆರಡು ಕಾಲುಗಳನ್ನೂ ಕತ್ತರಿಸಿದ. ಆಮೇಲೆ ಅದನ್ನು ಜಾಮಿಟ್ರಿ ಪೆಟ್ಟಿಗೆ ಒಳಗೆ ಕೂರಿಸಿ, ‘ಈಗ ಹೇಗ್ ಹೋಗ್ತೀಯ ನಾನೂ ನೋಡ್ತೀನಿ’ ಅನ್ನೋ ಥರ ನೋಡತೊಡಗಿದ. ಆದರೆ ಅದು ಅವನು ಶಾಕ್ ಆಗುವಂತೆ ಉಳಿದ ನಾಲ್ಕು ಕಾಲುಗಳಿಂದಲೇ ಓಡತೊಡಗಿತು. ಇವನು ಮತ್ತೆ ರಪ್ ಎಂದು ಹಿಡಿದುಕೊಂಡ. ಈಗ ಇನ್ನೆರಡು ಕಾಲು ಕಿತ್ತಿ ಕೂರಿಸಿದ. ಈಗಲೂ ಅದು ಸ್ವಲ್ಪ ಹೊತ್ತು ಒದ್ದಾಡಿ ಸುಧಾರಿಸಿಕೊಂಡು ನಂತರ ತೆವಳಿಕೊಂಡು ಕಿಟಕಿ ಕಡೆಗೆ ಹೊರಟಿತು. ಅವನು ಉಳಿದ ಇನ್ನೆರಡು ಕಾಲುಗಳನ್ನೂ ಕಿತ್ತುಹಾಕಿ ಅದನ್ನ ಜಾಮಿಟ್ರಿ ಪೆಟ್ಟಿಗೆಯೊಳಗೆ ಮಲಗಿಸಿದ. ಅದರ ಪುಟ್ಟ ಕಣ್ಣುಗಳು ಕಿಟಕಿ ಕಡೆಗೆ ನೋಡತೊಡಗಿದವು. ಇವನು ಅದರ ಕಣ್ಣುಗಳನ್ನು ದಿಟ್ಟಿಸಿ ನೋಡತೊಡಗಿದ. ಅದರ ಚಿಕ್ಕ ಕಣ್ಣುಗಳಲ್ಲಿ ತನ್ನ ಮಸಿಮಸಿಯಾದ ಬಿಂಬ ಕಂಡಂತಾಯಿತು. ಹಾಗೇ ಇರುವೆಯ ಕಣ್ಣುಗಳಲ್ಲಿ ತನ್ನನ್ನು ನೋಡಿಕೊಳ್ಳತೊಡಗಿದ.

ನೋಡನೋಡುತ್ತಿದ್ದಂತೆ ಇರುವೆಯ ಕಣ್ಣುಗಳು ಹಿಗ್ಗಿ ಹಿಗ್ಗಿ ದೊಡ್ಡವಾದವು.ಅವುಗಳ ಕೆಳಗೆ ತಾನು ಕಿತ್ತುಹಾಕಿದ್ದ ಹಲ್ಲುಗಳು ಮೆಲ್ಲಗೆಮೂಡತೊಗಿದವು. ಕಿತ್ತುಹಾಕಿದ್ದ ಕಾಲುಗಳ ಜಾಗದಲ್ಲಿ ಏನೋ ಚಲನೆ ಕಾಣಿಸಿಕೊಳ್ಳತೊಡಗಿತು. ನೋಡ ನೋಡುತ್ತಿದ್ದಂತೆ ಅಲ್ಲೆರಡು ಚಿಕ್ಕ ರೆಕ್ಕೆ ಮೂಡಿದವು. ಇವನಿಗೆ ಆಶ್ಚರ್ಯವಾಯಿತು. ಆದರೆ ಇರುವೆಗೆ ಅವನ್ನಿಟ್ಟುಕೊಂಡು ಏನು ಮಾಡಬೇಕು ತೋಚದಾಯಿತು. ಅವುಗಳನ್ನು ಊರುಗೋಲಿನಂತೆ ಬಳಸಿಕೊಂಡು ತೆವಳಲು ಪ್ರಯತ್ನಿಸಿ ಸೋತಿತು. ಇವನ ಮುಖದಲ್ಲೊಂದು ವಿಕೃತ ಮುಗುಳುನಗೆ ಮೂಡಿತು. ಖುಷಿಯಿಂದ ಇರುವೆಯನ್ನೊಮ್ಮೆ ಮುಟ್ಟಲು ಹೋದ. ಆದರೆ ಅದು ಅವನ ಕೈ ಹತ್ತಿರಕ್ಕೆ ಬಂದಿದ್ದೇ ಪಟಪಟ ರೆಕ್ಕೆ ಬಡಿದುಅಲ್ಲಿಂದ ಮೇಲಕ್ಕೆ ಹಾರಿತು. ಅವನು ಟಪ್ ಎಂದು ಬಲವಾಗಿ ಹೊಡೆದು ಅದನ್ನು ಬೀಳಿಸಿದ. ಅದು ನೆಲಕ್ಕೆ ಬಿದ್ದು ಒದ್ದಾಡತೊಡಗಿತು. ಅದನ್ನು ಹಿಡಿದುಕೊಳ್ಳಲು ಹೋದ. ಅದು ಮತ್ತೆ ಮೇಲೆದ್ದು ಕಿಟಕಿ ಕಡೆಗೆ ಹಾರಿತು. ಅವನು ಮತ್ತೆ ಅದನ್ನು ಹೊಡೆದು ಬೀಳಿಸಿದ. ಸುಮಾರು ಹೊತ್ತು ಅವನು ಬೀಳಿಸುವುದು ಅದು ಹಾರುವುದು – ಹೀಗೇ ನಡೆಯಿತು. ಅವನಿಗೆ ಅದು ಹಾರಲು ಪ್ರಯತ್ನಿಸಿದಷ್ಟು ರೋಷ ಉಕ್ಕತೊಡಗಿತು. ಅದಕ್ಕೆ ಇವನು ಬೀಳಿಸಿದಷ್ಟು ಮೇಲಕ್ಕೆ ಹಾರುವ ರೊಚ್ಚು ಏರತೊಡಗಿತು.

ಕಡೆಗೊಮ್ಮೆ ಅವನು ಅದನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಅದರ ರೆಕ್ಕೆಗಳನ್ನು ಬೇರು ಸಮೇತ ಕೀಳಲು ತಯಾರಾದ. ಅದು ಅವನಿಂದ ತಪ್ಪಿಸಿಕೊಂಡು ಹಾರಿ ಮೇಲೆ ಫ್ಯಾನಿನ ರೆಕ್ಕೆಯೊಂದರ ಮೇಲೆ ಕುಳಿತಿತು. ಇವನು ತಲೆಯೆತ್ತಿ ನೋಡಿದ. ಅವನಿಗೆ ನಿಲುಕದಷ್ಟು ದೂರದಲ್ಲಿ ಅದು ಹೋಗಿ ಕುಳಿತಿತ್ತು. ಅದನ್ನು ನೋಡಿದ್ದೇ ಮೈಯಲ್ಲಿ ಏನೋ ಆವೇಗ ಬಂದಂತಾಗಿ ಅಲ್ಲಿಂದಲೇ ಅದರ ಕಡೆಗೆ ಜೋರಾಗಿ ಹಾರಿದ. ನಿಲುಕಲಿಲ್ಲ. ಮತ್ತೆ ಹಾರಿದ. ನಿಲುಕಲಿಲ್ಲ. ಮಗದೊಮ್ಮೆ ಹಾರಿದ. ನಿಲುಕಲಿಲ್ಲ. ಅವನು ಹಾಗೆ ಎಡೆಬಿಡದೆ ಹಾರುತ್ತ ಬೀಳುತ್ತ ಹಾರುತ್ತ ಬೀಳುತ್ತ ಕೊನೆಗೊಮ್ಮೆಮಿಡತೆಯಾದ. ಈಗ ಟಪ್ ಎಂದು ನೆಗೆದು ಫ್ಯಾನಿನ ಇನ್ನೊಂದು ರೆಕ್ಕೆಯ ಮೇಲೆ ಮೇಲೆ ಕುಳಿತ. ಇರುವೆಗೆ ಗಾಬರಿಯಾಯಿತು. ತಪ್ಪಿಸಿಕೊಳ್ಳಲು ಅಲ್ಲಿಂದ ಪಕ್ಕದ ಗೋಡೆಗೆ ಹಾರಿತು. ಮಿಡತೆ ಅದನ್ನು ಹಿಡಿದು ತಿನ್ನುವ ರೊಚ್ಚಿನಲ್ಲಿ ಹಿಂದೆಯೇ ಹಾರಿತು. ಇರುವೆ ಮತ್ತೊಂದು ಗೋಡೆಗೆ ಹಾರಿತು. ಮಿಡತೆಯೂ ಹಾರಿತು. ತನ್ನಿಂದ ತಪ್ಪಿಸಿಕೊಳ್ಳುವ ಹಠದಲ್ಲಿ ಇರುವೆ ಅಲ್ಲಿಂದಿಲ್ಲಿಗೆ ಹಾರಿದಷ್ಟೂಮಿಡತೆಗೆ ರೊಚ್ಚು ಹೆಚ್ಚಾಗಿ ಅದನ್ನ ಅಟ್ಟಿಸಿಕೊಂಡು ಹಾರತೊಡಗಿತು.