ಹುಡುಕಾಟಗಳು ನಿಂತಿಲ್ಲ

ತುಮುಲದ ಅಲೆ ದಡ ಮುಟ್ಟಿ
ತಣಿದು, ಹಿಂದೆ ಸರಿವ
ಅಲೆಯೊಡನೆ ಬೆರೆತು ನಾ
ಹುಡುಕಾಟದ ಸುಳಿಯಲಿ
ಸುತ್ತುತ್ತಾ ಆಳಕ್ಕಿಳಿದಿರುತ್ತೇನೆ.

ಆ ಸ್ವಚ್ಛ ನೀಲಿ ಆಗಸ ದಟ್ಟಮಳೆ
ಸುರಿದು, ಬೆಟ್ಟಸಾಲು ತಣಿಸಿ,
ಇಳೆ ಎದೆಯಲಿ ಹಸಿಯೊಲವು
ಬಿತ್ತಿದ ನೆನಪುಗಳಿಗಾಗಿ ಹುಡುಕುತ್ತಾ..

ಕುಡಿಯೊಡೆದ ಬೀಜ; ಹಸಿರಾಗಿ
ನಳನಳಿಸಿ, ಮೊಗ್ಗು – ಹೂವಾಗಿ-
ಕಾಯಾಗಿ; ಬಿಳಿ-ಹಳದಿ- ಕೆಂಪು..
ರೂಪಾಂತರಿಸುವ ಸೋಜಿಗವ
ಹುಡುಕುತ್ತಾ…

ನಮ್ಮಾಸೆ ಒಂದಾಗಿ, ನಲುಮೆ
ಮಗುವಾಗಿ ನಗುವಾಗಿ ನಲಿದಾಟದ
ಸಂಭ್ರಮದ ಹೊತ್ತಿನಲಿ ‘ಅರೆ
ಎಲ್ಲಿತ್ತಿದೆಲ್ಲಾ!’ ಎಂದು ಹುಡುಕುತ್ತಾ..

ನಿರಂತರದ ದುಡಿಮೆ ನಡುವೆ
ವಿಶ್ರಾಂತಿ ಬಯಸಿ ಜೀವ;
ಥಟ್ಟನೆದ್ದು ಮರೆಯಾದಾಗ, ಎತ್ತ
ಸಾಗಿತೆಂಬ ದಿಗ್ಭ್ರಮೆಯ ಅನಂತದಲಿ
ಜೀವ ಚೈತನ್ಯವನು ಅರಸುತ್ತಾ…

ಈ ಯಾವ ಹುಡುಕಾಟಗಳೂ
ಇನ್ನೂ ನಿಂತಿಲ್ಲ…

ಮಂಡ್ಯ ಮೂಲದ ಕೆ.ಎಂ ವಸುಂಧರಾ ಬೆಂಗಳೂರು ವಾಸಿ.
ಕರ್ನಾಟಕ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಮರೆತು ಬಿಟ್ಟದ್ದು’ ಇವರ ಪ್ರಕಟಿತ ಕವನ ಸಂಕಲನ.
ಬರವಣಿಗೆ,ಓದು, ಪ್ರವಾಸ, ಚಾರಣ ಇವರ ಹವ್ಯಾಸಗಳು.