“ಅರೆ ಹುಡುಗಿ..! ಎಲ್ಲಿ ಮರೆಯಾದೆ!?”

ಎಲ್ಲೆಂದರಲ್ಲಿ ನಕ್ಕು ಎದೆ ಹಗೂರ
ಮಾಡಿಕೊಳ್ಳುತ್ತಿದ್ದ ಬಾಲೆ; ಈಗೀಗ
ತುಟಿ ಅಂಚು ಕೊಂಕದಂತೆ ನಗು
ತುಳುಕಿಸುವುದ ಎಲ್ಲಿಂದ ಕಲಿತೆ..!?

ಮಾತು, ಮಾತು, ಮಾತಿನರಮನೆಯ
ಅಂಗಡಿ ತೆರೆದು ಕೂರುತ್ತಿದ್ದವಳೇ
ಮೌನವನ್ನು ಕಡ ಕೊಳ್ಳಲು ನಿನ್ನತ್ತ
ಬರಬೇಕಾಗಿದೆ ನೋಡೀಗ..!

ಹೆಜ್ಜೆ ಸದ್ದು ಗೊತ್ತು ಮಾಡಿಸುತ್ತಿತ್ತು, ಹಾಗೆ
ಗುಡುಗುಡಿಸಿ ಬರುವುದು ನೀನೆಂದು.
ಆದರೀಗ ಬೆಳ್ಳಿ ಅಂಗಡಿಯಲೂ ಸದ್ದು
ಮಾಡದ ಕಾಲ್ಗೆಜ್ಜೆ ಹುಡುಕುವವಳು ನೀನೇ ..!

ನಿನ್ನಿಷ್ಟದ ಪಾನೀಪೂರಿ ಬಾಯೊಳಗೆ
ಹಾಕಿ ರಸದುಂಬಿ ಹೊಟ್ಟೆಭರ್ತಿ ಲೊಟ್ಟೆ
ಹೊಡೆದು ತಿನ್ನುತ್ತಿದ್ದವಳೇ.., ಡಯೆಟ್ಟಿನ
ಮಂತ್ರದ ಮೋಡಿಗೆ ಮೌನವಾದೆಯಾ..?!
ಏಕೆ ಹುಡುಗಿ ನೀನೇಕೆ ಹೀಗಾದೆ..

ಅಪ್ಪನ ಅಂಗಿ ಜೇಬು, ಅಮ್ಮನ ಸಾಸಿವೆ ಡಬ್ಬಿಗೆ
ನಿನಗೂ ತಿಳಿಯದಂತೆ ಮಡಚಿಟ್ಟ ನೋಟುಗಳನು
ಹಾಕುತ್ತಾ, ಹಿಂದೆ ಅಲ್ಲಿಂದಲೇ ಕದ್ದು ಅಥವಾ
ಕೇಳಿ ಪಡೆದದ್ದು ಮರೆತು ಬಿಟ್ಟವಳು ನೀನೇ…?!

ಮಾತಿಗೊಮ್ಮೆ ಅಮ್ಮಾ ಎನುತ್ತಾ, ಅಪ್ಪನಾಣತಿಗೂ,
ಒಪ್ಪಂದಕೂ ಕೂರುತ್ತಿದ್ದವಳೇ.. ಬಾಣಂತಿ
ಕೋಣೆಯ ಹಿತದ ನಗುವಲ್ಲಿ ನೋವು
ಮರೆತುಬಿಡುವ ಕಲೆಗಾರಳೇ, ‘ಅಮ್ಮ’ನಾಗಿ
ಬಿಟ್ಟಿರುವೆಯಲ್ಲೇ…. ಅರೆ ಹುಡುಗಿ..!?

ಮಂಡ್ಯ ಮೂಲದ ಕೆ.ಎಂ ವಸುಂಧರಾ ಬೆಂಗಳೂರು ವಾಸಿ.
ಕರ್ನಾಟಕ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಮರೆತು ಬಿಟ್ಟದ್ದು’ ಇವರ ಪ್ರಕಟಿತ ಕವನ ಸಂಕಲನ.
ಬರವಣಿಗೆ,ಓದು, ಪ್ರವಾಸ, ಚಾರಣ ಇವರ ಹವ್ಯಾಸಗಳು.