ಕನ್ನಡ ಚಲನಚಿತ್ರ ರಂಗದ ಹೆಸರಾಂತ ನಟರೂ, ಸುಮಾರು ಐದು ದಶಕಗಳ ಹಿಂದಿನ ಮೈಸೂರಿನ ಹವ್ಯಾಸೀ ಕಲಾರಂಗದ ಪ್ರಮುಖ ನಟರೂ, ಮೈಸೂರು ಆಕಾಶವಾಣಿ ನಿಲಯದಿಂದ ಪ್ರಸಾರವಾಗುತ್ತಿದ್ದ ಅನೇಕ ನಾಟಕಗಳಲ್ಲಿ ಪ್ರಮುಖಪಾತ್ರ ವಹಿಸಿ ಪ್ರಖ್ಯಾತರೂ ಆಗಿದ್ದ ಹಿರಿಯ ಗೆಳೆಯ ಶ್ರೀ ಕೆ.ಎಸ್. ಅಶ್ವಥ್ ತೀರಿಹೋದರೆಂದು ತಿಳಿದು ಅತ್ಯಂತ ವ್ಯಾಕುಲವಾಯಿತು.

ನಾಲ್ಕು ದಶಕಕ್ಕೂ ಮೀರಿ ಭಾರತದಿಂದ ಹೊರಗೆ ಅಮೆರಿಕದಲ್ಲಿರುವ ನನಗೆ ಅಶ್ವಥ್ ಅವರ ಬಗ್ಗೆ ಈ ವಿಶೇಷ ದುಮ್ಮಾನ ಏಕೆ ಎನಿಸಬಹುದು. ಹಳೆಯ ಗೆಳೆತನಗಳೇ ಹಾಗೆ…

ಅವರದೂ ನನ್ನದೂ ಮೈಸೂರಿನ ಗೆಳೆತನ. ಮೈಸೂರಿನ ಗೆಳೆತನ ಎಂದು ಹೇಳುವ ಕಾರಣ ಅವರು ಅಚ್ಚ ಮೈಸೂರಿನವರು. ಅವರಲ್ಲಿ ಘನವಾಗಿ ತುಂಬಿಕೊಂಡಿದ್ದ ಕಲೆ ಒಂದೇ ಅಲ್ಲದೆ ಅವರ  ಸುಸಂಸ್ಕೃತ ನಡವಳಿಕೆ, ಗಾಂಭೀರ್ಯ, ಹಿತಮಿತವಾದ ಮಾತು, ಸೌಜನ್ಯ, ವಿನಯ, ವಿಶ್ವಾಸಪೂರಿತ ವ್ಯಕ್ತಿತ್ವ ಅವರ ಬಗ್ಗೆ ಎಲ್ಲರಲ್ಲೂ ಗೌರವ ಹುಟ್ಟಿಸುತ್ತಿತ್ತು.

ನನಗೆ ಅಶ್ವಥ್ ಅವರ ಪರಿಚಯವಾದದ್ದು 1950ರ ದಶಕದಲ್ಲಿ. ಆ ಗೆಳೆತನ ಇಂದಿನವರೆಗೂ ಬೆಳೆಯುತ್ತಲೇ ಬಂತು ಎನ್ನುವಂತಿಲ್ಲ. 1960ರಲ್ಲಿ ನಾನು ಮೈಸೂರು ಬಿಟ್ಟೆ, ಆಮೇಲೆ 1966ರಲ್ಲಿ ಭಾರತವನ್ನೇ ಬಿಟ್ಟೆ. ಆಗಾಗ್ಗೆ, 2-3 ವರ್ಷಕ್ಕೊಮ್ಮೆ ಭಾರತಕ್ಕೆ ಹೋಗಿಬಂದು ಮಾಡುವುದು ಬಿಟ್ಟರೆ, ಒಟ್ಟಿಗೆ ಒಂದು 3 ತಿಂಗಳೂ ಅಲ್ಲಿ ಇದ್ದದ್ದಿಲ್ಲ. ಹೀಗಾಗಿ  ಅಶ್ವಥ್ ರಂಥ ಹಲವಾರು ಕಲಾವಿದ, ಸಾಹಿತ್ಯ ಮಿತ್ರರ ಸಹಚರ್ಯೆ ನನಗೆ ತಪ್ಪಿಹೋಯಿತು. ಈ ಬಗೆಯ ಸ್ನೇಹ, ಸಹಚರ್ಯೆಯಿಂದ ವಂಚಿತನಾದದ್ದು ನನಗೆ ಖೇದ ತರಿಸುತ್ತದೆ.

ಅಶ್ವಥ್ ಅವರ ಪರಿಚಯವೂ ನನಗೆ ನಾಟಕದ ಮೂಲಕವೇ ಆದದ್ದು. ಆ ಕಾಲದಲ್ಲಿ ಮೈಸೂರಲ್ಲಿ ನಮಗಿದ್ದ ನಾಟಕ ಮಾಧ್ಯಮಗಳು ಎರಡೇ- ಹವ್ಯಾಸೀ ನಾಟಕ ರಂಗ (ಮುಖ್ಯವಾಗಿ ಕಾಲೇಜು ನಾಟಕ ರಂಗ), ಮತ್ತು ರೇಡಿಯೋ ನಾಟಕ ರಂಗ. ಅಶ್ವಥ್ ಈ ಎರಡರಲ್ಲೂ ಅಗ್ರಗಣ್ಯರು. ನಾನೂ ಈ ಎರಡು ಪ್ರಕಾರಗಳಲ್ಲೂ ತೀವ್ರವಾಗಿ ಆಸಕ್ತಿಗೊಂಡಿದ್ದೆ. ಆಗ ನಮಗೆ ಮೈಸೂರಲ್ಲಿ ತುಂಬ ಉತ್ತಮ ರಂಗ ನಿರ್ದೇಶಕರಾಗಿ, ನಟರಾಗಿ, ನಮ್ಮಲ್ಲಿ ಸ್ಫೂರ್ತಿ ತುಂಬುತ್ತಿದ್ದವರೆಂದರೆ ಸಂಪತ್. ರಂಗದ ಮೇಲೆ ಈ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ (ರಂಗನಾಟಕದ ಬಗ್ಗೆ ಅವರ ಮನೋಧರ್ಮಗಳು ಭಿನ್ನವಾಗಿದ್ದುದೂ ಇದಕ್ಕೆ ಕಾರಣವಿರಬಹುದು), ಆದರೆ ರೇಡಿಯೋ ನಾಟಕಗಳಲ್ಲಿ ಅವರಿಬ್ಬರೂ ಅನೇಕ ಸಲ ಒಟ್ಟಿಗೆ ಅಭಿಯಯಿಸುತ್ತಿದ್ದರು. ಆ ಇಬ್ಬರೂ ಇದ್ದರೆಂದರೆ ಆ ನಾಟಕ ಯಶಸ್ವಿಯಾಯಿತು ಎಂದೇ.  ಈ ಇಬ್ಬರು ಉತ್ತಮ ಹಿರಿಯ ನಟರೊಂದಿಗೆ ಅಭಿನಯಿಸುವ, ಅವರಿಂದ ಕಲಿಯುವ ಅವಕಾಶ ನನಗೆ ಎಷ್ಟೋ ಬಾರಿ ಲಭಿಸಿತ್ತು, ಆ ಸೌಭಾಗ್ಯಕ್ಕಾಗಿ ನಾನು ಋಣಿ. ಈ ಸಂದರ್ಭದಲ್ಲಿ ಅಂದಿನ ಆಕಾಶವಾಣಿಯ ಅಧಿಕಾರಿಗಳೂ, ಕಲಾವಿದರೂ ಆಗಿದ್ದ ಶ್ರೀಗಳಾದ ಎಸ್.ಎನ್. ಶಿವಸ್ವಾಮಿ, ಎಸ್. ಕೃಷ್ಣಮೂರ್ತಿ, ಎನ್.ಎಸ್. ವಾಮನರಾವ್, ಶ್ರೀ ಜಿ. ನೀಲಕಂಠರಾವ್, ಮತ್ತು ಶ್ರೀಮತಿಯರಾದ ರಾಜಮ್ಮ ಕಲ್ಲೋಳಿಮಠ, ಮೀರಾ -ಇವರನ್ನು ನೆನೆಯಬೇಕು.

1953-54ರಲ್ಲಿ ನಾನು ನಮ್ಮ ಶಾರದಾವಿಲಾಸ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಯಾಗಿದ್ದೆ. ಆ ವರ್ಷ ನಮಗೆಲ್ಲ ತುಂಬ ಬೇಕಾದವರಾಗಿದ್ದ sports secretary ಶ್ರೀ ಕೃಷ್ಣರಾಜು ಅವರು ಅಕಾಲಿಕವಾಗಿ ತೀರಿಹೋದರು. ಅವರ ಸಂಸಾರಕ್ಕೆ ಅಷ್ಟು ಆರ್ಥಿಕ ಅನುಕೂಲವಿರಲಿಲ್ಲ. ಅವರಿಗೆ ಸಹಾಯ ಒದಗಿಸುವ ಹಾಗೂ ಆ ಮೂಲಕ  ಕೃಷ್ಣರಾಜು ಅವರಿಗೆ ನಮ್ಮ ಗೌರವ ಸಲ್ಲಿಸುವ ಉದ್ದೇಶದಿಂದ ನಾವೊಂದು benefit show ಇಟ್ಟುಕೊಳ್ಳಬೇಕೆಂದು ಯೋಚಿಸಿದೆವು. ನಮ್ಮ ಕಾಲೇಜಿನಲ್ಲಿ ನಮ್ಮದೇ ಆದ  Jolly Amateurs ಎಂಬ ನಾಟಕ ಸಂಘ ಇತ್ತು,  ಇದನ್ನು ನಮ್ಮ ಗೆಳೆಯ ಎಚ್. ನರಸಿಂಹಮೂರ್ತಿ (ಇಂದಿನ ಪ್ರಖ್ಯಾತ ನಟ ಮಾಸ್ಟರ್ ಹಿರಣ್ಣಯ್ಯ) ಅಲ್ಲಿ ವಿದ್ಯಾರ್ಥಿಯಾಗಿದ್ದಾಗ ಸ್ಥಾಪಿಸಿದ್ದು. ಅಲ್ಲಿ ನಾವಾಡುತ್ತಿದ್ದ ನಾಟಕಗಳು ತುಂಬಾ ಜನಪ್ರಿಯವಾಗಿರುತ್ತಿದ್ದವು. ಆದರೂ ಆ ವರ್ಷ ನಾವು ನಾಟಕದ ಜವಾಬ್ದಾರಿಯನ್ನು ಇತರರಿಗೆ ವಹಿಸಿ, ನಾವು ಕೇವಲ ನಾಟಕದ ವ್ಯವಸ್ಥೆ, ಟಿಕೆಟ್ ಮಾರಾಟ- ಇವುಗಳ ಕಡೆ ಗಮನ ಕೊಡೋಣ ಎಂದು ನಿರ್ಧರಿಸಿದೆವು. ಸರಿ, ನಾಟಕ ಯಾರಿಂದ ಆಡಿಸಬೇಕು ಎಂಬ ಯೋಚನೆ ಬಂದಾಗ, ನಾನು ಅಶ್ವಥ್ ಅವರನ್ನು ನೆನೆದೆ.  ಅವರು ಆಗ ಎಂ.ಎನ್. ಬಾಬು, ಜಿ. ನೀಲಕಂಠರಾವ್, ಎಸ್.ಕೆ. ಅನಂತಪದ್ಮನಾಭ- ಮುಂತಾದವರೊಂದಿಗೆ ಪರ್ವತವಾಣಿಯವರ ಸುಂದ್ರೋಪಸುಂದ್ರು, ವಾರ್ಷಿಕೋತ್ಸವ ಮುಂತಾದ ನಾಟಕಗಳನ್ನು ಅದ್ಭುತವಾಗಿ ಪ್ರದರ್ಶಿಸುತ್ತಿದ್ದರು. ಅವನ್ನೇ ಏಕೆ ಈ ಸಂದರ್ಭಕ್ಕೆ ಬಳಸಿಕೊಳ್ಳಬಾರದು ಎಂದು ಯೋಚಿಸಿ ನಾನು ಅಶ್ವಥ್ ಅವರಿಗೆ ನಮ್ಮ ಸಂದರ್ಭ ಸೂಚಿಸಿ ವಿನಂತಿಸಿಕೊಂಡೆ. ಸಹಜ ಸೌಜನ್ಯಪೂರಿತರಾದ ಅಶ್ವಥ್ ಅದಕ್ಕೆ ಕೂಡಲೆ ಒಪ್ಪಿಗೆ ಕೊಟ್ಟು, ನಾಟಕದ ತಯಾರಿಗೆ ಮೊದಲಿಟ್ಟರು.

ನಾಟಕ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.  ಮೈಸೂರಿನ ರಂಗಾಚಾರ್ಲು ಪುರಭವನದಲ್ಲಿ ನಡೆದ ನಾಟಕ ಸಾಕಷ್ಟು ಹಣವನ್ನೂ ಗಳಿಸಿತು. ಖರ್ಚು ಕಳೆದು ಉಳಿದಿದ್ದನ್ನು ಶ್ರೀ ಕೃಷ್ಣರಾಜು ಅವರ ಮನೆಯವರಿಗೆ ತಲುಪಿಸಿದೆವು.

ಆದರೆ, ಅಂದು ನಮಗೆ ತಿಳಿಯದ ಸಂಗತಿಯೊಂದು ನಡೆದಿತ್ತು. ಆ ದಿನಗಳಲ್ಲಿ ಮೈಸೂರಿನ  Premier Studiosನಲ್ಲಿ `ಸ್ತ್ರೀರತ್ನ’ ಚಿತ್ರದ ತಯಾರಿಕೆ ನಡೆದಿತ್ತು. ಅದಕ್ಕಾಗಿ ಮದ್ರಾಸಿನ ಕೆ. ಸುಬ್ರಮಣ್ಯಂ ನಿರ್ದೇಶಕರಾಗಿ ಬಂದು ಮೈಸೂರಲ್ಲಿ ಹಲವು ತಿಂಗಳು ಇದ್ದರು. ತಮ್ಮ ಚಿತ್ರಕ್ಕೆ ನಟನಟಿಯರನ್ನು ಆರಿಸುತ್ತಿದ್ದ ಅವರು ಅಂದು ನಮ್ಮ ನಾಟಕದ ಸುದ್ದಿ ತಿಳಿದು ಅಲ್ಲಿಗೆ ಬಂದಿದ್ದರು- ಅಲ್ಲೇನಾದರೂ ತಮಗೆ ಒಪ್ಪುವಂಥ ನಟರು ದೊರೆಯುವರೇನೋ ಎಂದು. ಅದು ನಮ್ಮ ಕನ್ನಡ ಚಿತ್ರರಂಗದ ಒಂದು ಸುಮುಹೂರ್ತ ಎನ್ನಬಹುದೇನೋ! ಅಶ್ವಥ್ ಸುಬ್ರಮಣ್ಯಂ ಅವರ ಕಣ್ಣಿಗೆ ಬಿದ್ದರು. ಅಶ್ವಥ್ ಅವರ ನಟನಕೌಶಲ್ಯವನ್ನು ನೋಡಿ ಮೆಚ್ಚಿದ ಸುಬ್ರಮಣ್ಯಂ ತಮ್ಮ ಚಿತ್ರಕ್ಕೆ ಅವರನ್ನು ಆರಿಸಿಕೊಂಡರು. ಅಶ್ವಥ್ ಅವರ ಸಿನಿಮಾ ರಂಗಪ್ರವೇಶ ಅಲ್ಲಿಂದಲೇ ಆದುದೆನ್ನಬಹುದು.

ಎಷ್ಟೋ ವರ್ಷಗಳ ಬಳಿಕ ಒಮ್ಮೆ ಬೆಂಗಳೂರಿಗೆ ಹೊಗಿದ್ದಾಗ ಯಾವುದೋ ಪತ್ರಿಕೆಯಲ್ಲಿ ಅಶ್ವಥ್ ತಾವು ಕನ್ನಡ ಚಲನಚಿತ್ರ ರಂಗವನ್ನು ಪ್ರವೇಶಿಸಿದ ಸಂದರ್ಭವನ್ನು ನೆನಸಿಕೊಳ್ಳುತ್ತ ಅದಕ್ಕೆ ಕಾರಣನಾದವನು ನಾನು ಎಂದು ಬರೆದಿದ್ದರು! ಅವರ ವಿನಯಶೀಲತೆಗೆ, ಸೌಜನ್ಯಕ್ಕೆ ಬೆರಗಾದೆ. ನಾನು ಏನು ತಾನೆ ಮಾಡಿದ್ದೆ? ಅದೆಂತೋ ಏನೋ ನಾನು ಅಂದು ಏರ್ಪಡಿಸಿದ್ದ ಅಶ್ವಥ್ ನಾಟಕಕ್ಕೆ ಸುಬ್ರಮಣ್ಯಂ ಬಂದಿದ್ದರು.  ನನಗೆ ಅರಿಯದೆಯೇ ನಾನು ಒಂದು ನಿಮಿತ್ತ ಮಾತ್ರನಾದೆನಷ್ಟೇ ಹೊರತು ನಾನು ಇನ್ನಾವ ರೀತಿಯಿಂದಲೂ ಅವರ ಚಿತ್ರರಂಗ ಪ್ರವೇಶಕ್ಕೆ ನೆರವಾಗಿರಲಿಲ್ಲ. ಆದರೆ ಅಶ್ವಥ್ ಅವರ ಮನಸ್ಸು ದೊಡ್ಡದು. ಅವರು ಈ ಚಿಕ್ಕ ವಿಷಯವನ್ನೂ ಕೃತಜ್ಞತೆಯಿಂದ ನೆನಸಿದ್ದರು. ಅಂಥ ಸೌಜನ್ಯ ಅಪರೂಪ. ಅದಕ್ಕಾಗಿ ನಾನು ಅವರಿಗೆ ಋಣಿ.

ಇತ್ತೀಚೆಗೆ ಯಾವುದೋ ಕಾರಣದಿಂದ ಅಶ್ವಥ್ ಕನ್ನಡ ಚಿತ್ರಂಗದ ಬಗ್ಗೆ ಅಸಮಾಧಾನಗೊಂಡು ಅದರಿಂದ ದೂರವಿದ್ದರು ಎಂದು ಕೇಳಿದ್ದೆ. ಹೀಗಾದದ್ದು ವಿಷಾದಕರ.

ಹಿಂದೆಯೇ ಹೇಳಿದಂತೆ 1960ರ ದಶಕದಲ್ಲಿ ನಾನು ಮೈಸೂರು, ಭಾರತ ಬಿಟ್ಟ ಮೇಲೆ ನನಗೆ ಅಶ್ವಥ್ ಅವರ ನೇರ ಸಂಪರ್ಕ ಇಲ್ಲವಾಯಿತು. ಆಗಾಗ ಪತ್ರಿಕೆಗಳಲ್ಲಿ ಅವರ ಬಗ್ಗೆ ಓದುತ್ತಿದ್ದೆ. ಒಮ್ಮೆ ಭಾರತಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವರಿಗೆ ಫೋನ್ ಮಾಡಿದ್ದೆ. ತುಂಬ ವಿಶ್ವಾಸದಿಂದ ಮಾತಾಡಿದ್ದರು.

ನನ್ನ ಮನಸ್ಸಿನಲ್ಲಿ ಉಳಿದಿರುವ ಅಶ್ವಥ್ ಅವರು ಮೈಸೂರಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದ ಕಾಲದ ಕೆ.ಎಸ್. ಅಶ್ವತ್ಥನಾರಾಯಣ ರಾವ್- ದಟ್ಟಿ ಪಂಚೆ, ನೀಲಿ ಕೋಟು, ಯಾಕೋ ಸ್ವಲ್ಪ ಮ್ಲಾನವಾಗಿ ಕಾಣುತ್ತಿದ್ದ ಮುಖ. ಹಿತವಾದ, ಸುಸಂಸ್ಕೃತವಾದ ದನಿ. ಎಷ್ಟೊ ಸಲ ಅವರು ಪಾತ್ರವಹಿಸಿದ ರೇಡಿಯೋ ನಾಟಕಗಳಿಗೆ ಅವರ ದನಿಯಿಂದಾಗಿ ಯಶಸ್ಸು ದೊರೆಯುತ್ತಿತ್ತು. ಆಗಿನ ದಿನಗಳಲ್ಲಿ ನಾಟಕಗಳನ್ನು ಪೂರ್ವಭಾವಿಯಾಗಿ ಧ್ವನಿಮುದ್ರಿಸಿಕೊಂಡು ಆಮೇಲೆ ಪ್ರಸಾರ ಮಾಡುವ ಪದ್ಧತಿ ಇರಲಿಲ್ಲ. ಎಲ್ಲವೂ live broadcast ಆಗಿಯೇ ಶ್ರೋತೃಗಳನ್ನು ತಲಪುತ್ತಿತ್ತು. ಆದ್ದರಿಂದ ನಟರು, ಮುಖ್ಯವಾಗಿ ಅಶ್ವಥ್, ಅದಕ್ಕಾಗಿ ಎಷ್ಟು ಶ್ರಮವಹಿಸಿ ಅಭ್ಯಾಸ ಮಾಡುತ್ತಿದ್ದರು ಎಂಬುದನ್ನು ನಾನು ನೋಡಿ ಬಲ್ಲೆ. ಅದರಿಂದಾಗಿ ಅಂದಿನ ಆಕಾಶವಾಣಿ ಅಧಿಕಾರವರ್ಗಕ್ಕೂ, ಅಲ್ಲಿನ ನಾಟಕಗಳಲ್ಲಿ ಭಾಗವಹಿಸುತ್ತಿದ್ದ ಇತರ ಅನೇಕರಿಗೂ ಅಶ್ವಥ್ ಬಗ್ಗೆ ಬಹಳ ಗೌರವ.

ದೂರದಲ್ಲಿರುವಾಗ, ಹಳೆಯ ಮಿತ್ರರು ನೆನಪಿಗೆ ಬಂದಾಗ ಅವರನ್ನು ಕರೆದು ಮಾತಾಡಿಸಬೇಕೆನಿಸುತ್ತದೆ. ಕೂಡಲೆ ಆ ಕೆಲಸ ಮಾಡದಿದ್ದರೆ ಏನಾದರೂ ಅಚಾತುರ್ಯವಾಗಬಹುದು. ಮತ್ತೆ ಆ ಅವಕಾಶ ಸಿಕ್ಕದೆಯೇ ಹೋಗಬಹುದು! ನನ್ನ ಹಳೆಯ ಮಿತ್ರರು ಒಬ್ಬೊಬ್ಬರಾಗಿ ಕಣ್ಮರೆಯಾಗುತ್ತಿದ್ದಾರೆ. ಇನ್ನುಮೇಲಾದರೂ ಅನ್ನಿಸಿದ ಕೂಡಲೆ ಕರೆಯಬೇಕು…  ಅಶ್ವಥ್, ನಿಮ್ಮೊಂದಿಗೆ ಮತ್ತೆ ಮಾತಾಡಲಿಲ್ಲ, ಕ್ಷಮಿಸಿ. ಆ ನಷ್ಟ ನನ್ನದು. ಆದರೆ ನಿಮ್ಮ ಕಲಾತ್ಮಕ ಪರಿಶುದ್ಧತೆ, ವಿನಯ, ಸೌಜನ್ಯ, ಸುಸಂಸ್ಕೃತ ಜೀವನದ ಪರಿಚಯದಿಂದಾಗಿ ನಿಮ್ಮ ನೆನಪು ನನ್ನಲ್ಲಿ ಸದಾ ಹಸಿರಾಗಿರುತ್ತದೆ.