ಒಂದು ವಿಶ್ವವಿದ್ಯಾನಿಲಯದ ಕುರಿತು

ತಾನು ಓದಿದ ಪ್ರೈಮರಿ ಶಾಲೆ, ಹೈಸ್ಕೂಲು, ಕಾಲೇಜನ್ನು ನಾವು ಹೆಮ್ಮೆಯಿಂದ ಇತರರಿಗೆ ತೋರಿಸುತ್ತೇವೆ. ನಲ್ವತ್ತು ಐವತ್ತು ವರ್ಷಗಳ ನಂತರವೂ ಶಾಲೆ ಕಾಲೇಜಿಗೆ ರಜೆಯಿದ್ದ ದಿನ ನಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗಿ, ತಾವು ಓದಿದ ಕೋಣೆ, ಕುಳಿತ ಬೆಂಚನ್ನು ತೋರಿಸುತ್ತೇವೆ. ಆ ಕಾಲದ ಅನುಭವಗಳನ್ನು ಮೆಲುಕು ಹಾಕುತ್ತೇವೆ.

ತಾವು ಓದಿದ ಒಹೈವೋ ಯೂನಿವರ್ಸಿಟಿಯನ್ನು ತೋರಿಸುವ ತವಕ ಪ್ರಿಯಾ ಮತ್ತು ವಿಶಾಲ್ ಇಬ್ಬರಿಗೂ ಇತ್ತು. ನೋಡುವ ಆಸಕ್ತಿ ನನಗೂ ಇತ್ತು. ‘ಇದೇ ಒಹೈವೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಮ್ಮ ಡಾಕ್ಟರ್ ಎಚ್. ನರಸಿಂಹಯ್ಯ ೧೯೪೬ರಲ್ಲಿ ನ್ಯೂಕ್ಲಿಯರ್ ಫಿಸಿಕ್ಸಿನಲ್ಲಿ ಪಿ.ಎಚ್‌ಡಿ ಮಾಡಿದ್ದು’ ಎಂದು ನೆನಪಿಸಿದೆ. ಸ್ವಾತಂತ್ರ್ಯ ಯೋಧ, ಸಂಸಾರಿಯಾಗದೆ ಗಾಂಧಿಯಂತೆ ಬದುಕಿದ ಗಾಂಧಿವಾದಿ, ವಿಜ್ಞಾನಿ, ಚಿಂತಕ, ಬೆಂಗಳೂರು ನ್ಯಾಷನಲ್ ಹೈಸ್ಕೂಲಿನ ಸ್ಥಾಪಕ, ಬೆಂಗಳೂರು ಯೂನಿವರ್ಸಿಟಿಯ ಹುಟ್ಟಿನ ಹಿಂದಿನ ಶಕ್ತಿ ಮತ್ತು ೧೯೭೩ರಿಂದ ೧೯೭೭ರ ವರೆಗೆ ಅದರ ವೈಸ್ ಚಾನ್ಸೆಲರ್ ಆಗಿದ್ದ ನರಸಿಂಹಯ್ಯ ಎಂಥ ಶ್ರೇಷ್ಠ ವ್ಯಕ್ತಿ ಎಂದು ಗೊತ್ತಿಲ್ಲದವರು ಇರಲಿಕ್ಕಿಲ್ಲ. ಶುದ್ಧ ಸಸ್ಯಾಹಾರಿ ಆಗಿದ್ದ ನರಸಿಂಹಯ್ಯ ಕೊಲಂಬಸಿನಲ್ಲಿ ಅಧ್ಯಯನ ಮಾಡುತ್ತಿದ್ದ ಮೂರು ವರ್ಷವೂ ತಾನೇ ಬೇಯಿಸಿದ ಉಪ್ಪಿಟ್ಟು ಮತ್ತು ರಾಗಿಮುದ್ದೆ ತಿಂದು ಬದುಕಿದ್ದರು.

ಒಹೈವೋ ಸ್ಟೇಟ್ ಯೂನಿವರ್ಸಿಟಿ ಓಹೈವೋ ರಾಜ್ಯದ ರಾಜಧಾನಿ ಕೊಲಂಬಸ್‌ನಲ್ಲಿದೆ. ಅಮೆರಿಕಾದ ಒಟ್ಟು ೪೦೦೦ ಕಾಲೇಜುಗಳು ಮತ್ತು ಯೂನಿವರ್ಸಿಟಿಗಳ ಶ್ರೇಷ್ಠತೆಯ ಶ್ರೇಣಿಯಲ್ಲಿ ೧೯ನೆಯದಾಗಿರುವ ಒಹೈವೋ ಸ್ಟೇಟ್ ಯೂನಿವರ್ಸಿಟಿ ೧೮೭೦ರಲ್ಲಿ ಸ್ಥಾಪನೆಗೊಂಡಿತು. (ಕ್ರಮವಾಗಿ ಒಂದನೆ ಎರಡನೆ ಮತ್ತು ಮೂರನೆ ಸ್ಥಾನದಲ್ಲಿರುವ ಹಾರ್ವರ್ಡ್, ಪ್ರಿನ್ಸ್‌ಟನ್, ಯೇಲ್ ಯೂನಿವರ್ಸಿಟಿ ಮತ್ತು ಹತ್ತನೇ ರ‍್ಯಾಂಕಿನೊಳಗಿನ ಕೆಲವು ಯೂನಿವರ್ಸಿಟಿಗಳನ್ನು ಬಿಟ್ಟರೆ ಇತರ ಯೂನಿವರ್ಸಿಟಿಗಳ ರ‍್ಯಾಂಕ್ ಆಗಾಗ ಬದಲಾಗುತ್ತದೆ.)

ಕೊಲಂಬಸ್ ಸಿನ್‌ಸಿನಾಟಿಯಿಂದ ೧೦೦ ಮೈಲಿ ದೂರ ಅಂದರೆ ಕಾರಿನಲ್ಲಿ ಎರಡು ಗಂಟೆಗಳ ಪ್ರಯಾಣದ ದೂರ. ಇಲ್ಲಿ ದೂರವನ್ನು ಕಾರು ಪ್ರಯಾಣದ ಅವಧಿಯಲ್ಲಿ ಹೇಳುವುದೇ ರೂಢಿ. ಗಂಟೆಗೆ ಸರಾಸರಿ ೮೦-೧೦೦ ಕಿಲೊಮೀಟರ್ ಎಂದಿಟ್ಟುಕೊಳ್ಳಬಹುದು. ವೇಗ ಮಿತಿ ಗಂಟೆಗೆ ೧೨೦ ಕಿಲೊಮೀಟರ್. ಅದನ್ನು ಮೀರಿದರೆ ವೇಗದ ಮಿತಿಯನ್ನು ಮೀರಿದಂತಾಯಿತು. ತಕ್ಷಣ ಪೊಲೀಸು ಕಾರು ಬೆನ್ನಟ್ಟಲಾರಂಭಿಸುತ್ತದೆ. ಪೊಲೀಸರವನ ಬೈಗಳು, ಗದರಿಕೆ ಏನೂ ಇಲ್ಲ. ಆತ ವಿನಯಪೂರ್ವಕ ನೀಡುವುದು ಒಂದು ಎಚ್ಚರಿಕೆಯ ಕಾರ್ಡು. ಲಂಚದ ಮಾತಿಲ್ಲ. ಅಮೆರಿಕೆಯ ಪೊಲೀಸರಂತೆ ಅಪರಾಧಿಗಳೊಡನೆಯೂ ವಿನಯ ಪೂರ್ವಕ, ಗೌರವಪೂರ್ವಕ, ಮಾನವೀಯವಾಗಿ ಮಾತಾಡುವ ಪೊಲೀಸರು ಇಂಡಿಯದಲ್ಲಿದ್ದರೆ ಅವರಿಗೆ ಪದ್ಮಶ್ರೀ ಪದಕ ನೀಡಬಹುದು!
ಚಾಲಕನಿಗೆ ಭಯ ಪೊಲೀಸರವನದ್ದಲ್ಲ, ತೆರಬೇಕಾದ ನೂರು-ನೂರೈವತ್ತು ಡಾಲರ್ ದಂಡದ್ದೂ ಅಲ್ಲ. ಭಯ ಎಚ್ಚರಿಕೆಯ ಕಾರ್ಡಿನ ಮೂಲಕ ಅಪರಾಧ ಮಾಹಿತಿ ಇನ್ಶೂರೆನ್ಸ್ ಕಂಪೆನಿಗೆ ಹೋಗುತ್ತದೆ ಎಂಬುದು. ಆತ ಕಟ್ಟುವ ಪ್ರೀಮಿಯಮ್ ಗಮನೀಯವಾಗಿ ಏರುತ್ತದೆ. ಎರಡನೆಯ ಕಾರ್ಡಿಗೆ ಇನ್ನಷ್ಟು ಏರುತ್ತದೆ. ಕಾರ್ಡಿನಿಂದ ಕಾರ್ಡಿಗೆ ಮತ್ತಷ್ಟು ಏರುತ್ತದೆ. ಮೂರು-ನಾಲ್ಕು ಕಾರ್ಡಿನ ನಂತರದ ಕಾರ್ಡು ಲೈಸೆನ್ಸ್ ರದ್ದು ಮಾಡುವ ಕಾರ್ಡಾಗಿರಬಹುದು! ಈ ಕಾರ್ಡುಗಳು ಸ್ಥಳೀಯ ಆಡಳಿತಕ್ಕೆ ಒಳ್ಳೆಯ ಆದಾಯ ತರುತ್ತದೆ. ಸ್ಥಳೀಯ ಆಡಳಿತಕ್ಕೆ ಹಣದ ಅಗತ್ಯ ಹೆಚ್ಚಾದಾಗ ಇಂಥ ಪೊಲೀಸು ಬೇಟೆ ಹೆಚ್ಚಾಗುತ್ತದೆ ಎನ್ನುತ್ತಾರೆ!

ಸಿನ್‌ಸಿನಾಟಿಯಿಂದ ಕೊಲಂಬಸ್ ವರೆಗಿನ ೧೬೦ ಕಿಲೊಮೀಟರ್ ಉದ್ದದ ಚತುಷ್ಪಥ ರಸ್ತೆಯನ್ನು ಹಸಿರುಹುಲ್ಲಿನ ಪಟ್ಟಿ ಎರಡಾಗಿ ವಿಭಜಿಸುತ್ತದೆ. ಬಹಳ ಕಡೆ ಹಲವು ಮೈಲುದ್ದ ಗೆರೆಯೆಳೆದಂತೆ ನೇರ ರಸ್ತೆ. ರಸ್ತೆಯ ಇಕ್ಕೆಲದಲ್ಲಿ ಎಲ್ಲೂ ಪಟ್ಟಣ ಇಲ್ಲ. ಅಂಗಡಿ ಪಿಂಗಡಿ ಇಲ್ಲ. ನಿರ್ಜನ. ಎರಡೂ ಕಡೆ ದೂರದಲ್ಲಿ ಕಾಡು. ಆದರಿಂದೀಚೆಗೆ ವಿಶಾಲವಾದ ಹೊಲಗಳು. ಸೋಯಾ, ಜೋಳ, ಬಟಾಟೆ ಇತ್ಯಾದಿ. ಕಾಯಿಪಲ್ಲೆ ತೋಟ ಎಲ್ಲೂ ಇಲ್ಲ. ಅಲ್ಲಲ್ಲಿ ಮಳೆ ನೀರು ಸಂಗ್ರಹಿಸಿಟ್ಟಿರುವ ಕೆರೆಗಳು.

ಚತುಸ್ಪಥ ರಸ್ತೆಯಲ್ಲಿ ಎಲ್ಲಿಯೂ ವಾಹನವನ್ನು ನಿಲ್ಲಿಸುವಂತಿಲ್ಲ. ೨, ೩, ಅಥವಾ ೪ ಮೈಲಿಗೊಂದು ಮೇಲ್ಸೇತುವೆಯಿರುವುದರಿಂದ ವೇಗಕ್ಕೆ ಅಡ್ಡಿಯಿಲ್ಲ. ಎಲ್ಲೋ ಕೆಲವು ಕಡೆ ಯಾವುದೋ ಕಾರಣಕ್ಕೆ ‘ವೇಗ ಮಿತಿ ೨೦ ಮೈಲಿ’ ಎನ್ನುವ ಫಲಕಗಳಿರುತ್ತವೆ. ಚಿಕ್ಕ ಪಟ್ಟಣದ ರಸ್ತೆಗಳಲ್ಲಿ ‘ವೇಗ ಮಿತಿ ೨೦’ ಎನ್ನುವ ಫಲಕಗಳು ಅಲ್ಲಲ್ಲಿ ಇರುತ್ತವೆ. ರೆಸಿಡೆನ್ಶಿಯಲ್ ಏರಿಯಾಗಳಲ್ಲಿ, ಶಾಲೆಗಳಿರುವಲ್ಲಿ, ಜಿಂಕೆಗಳ ಓಡಾಟವಿರುವಲ್ಲಿ ಕೂಡ ಇರುತ್ತವೆ. ನಿರಂತರವಾಗಿ ಮಹಾನಗರಗಳಲ್ಲಿ, ಫ್ಲಾಟುಗಳಲ್ಲಿ ವಾಸಿಸುವವರು ಇಂಥ ಫಲಕಗಳನ್ನು ಕಂಡಿರುವುದಿಲ್ಲ. ಹೈವೇಯಲ್ಲಿ ಇಂಥ ಊರಿಗೆ ಹೋಗುವ ರಸ್ತೆ ಎಂಬ ಫಲಕಗಳು ಆಗಾಗ ಎದುರಾಗುತ್ತವೆ. ಯಾವುದೇ ಕಾರಣಕ್ಕೆ ವಾಹನವನ್ನು ನಿಲ್ಲಿಸಬೇಕೆಂದಿದ್ದರೆ ತುಸು ಕಾದು, ಆ ಊರಿನ ರಸ್ತೆಗೆ ಹೊರಳಿಕೊಳ್ಳಬಹುದು. ಅಲ್ಲಿ ಒಂದೆರಡು ಮೈಲಿ ದೂರದೊಳಗೇ ಆಹಾರ, ಪಾನೀಯ, ಪೆಟ್ರೋಲು, (ಇಲ್ಲಿ ಪೆಟ್ರೋಲನ್ನು ಗ್ಯಾಸ್ ಎನ್ನಲಾಗುತ್ತದೆ) ಎಲ್ಲಾ ರೀತಿಯ ವಸ್ತುಗಳು ಲಭ್ಯವಿರುವ ಮಾಲುಗಳು, ಅಂಗಡಿಗಳು, ಶೌಚ ವ್ಯವಸ್ಥೆ ಸಕಲವೂ ಇರುತ್ತದೆ.

ಒಹೈವೋ ಸ್ಟೇಟ್ ಯೂನಿವರ್ಸಿಟಿಯಿರುವ, ಒಹೈವೋ ರಾಜ್ಯದ ರಾಜಧಾನಿ ಕೊಲಂಬಸ್ ಒಂದು ಸುಂದರ ನಗರ. ಎಷ್ಟು ಸುಂದರ ಎಂದರೆ, ಕೊಳೆ ಕಸ ಕಡ್ಡಿ,  ತುಂಬಿ ಚೆಲ್ಲುವ ಕಸದ ತೊಟ್ಟಿ, ಬೀದಿಯಲ್ಲಿ ಏನೇನೋ ಮಾರುವ-ಕೊಳ್ಳುವ ಜನರ ಸಂದಣಿ, ಅಡ್ಡಾದಿಡ್ಡಿ ಜನ-ವಾಹನ ಸಂಚಾರ ಇತ್ಯಾದಿ ಇಲ್ಲದೆ, ಎಲ್ಲಾ ಕಡೆ ಹಸಿರು ಮರ ಗಿಡಗಳು, ನಾನಾ ವರ್ಣದ ಹೂವುಗಳ ತೋಟಗಳು ಇತ್ಯಾದಿ ಇದ್ದರೆ ಬೆಂಗಳೂರು ಎಷ್ಟು ಸುಂದರವಾಗಿರಬಹುದೋ ಅಷ್ಟು ಸುಂದರ! ಎಲ್ಲಿಯಾದರೂ ಒಂದು ಕಸ ಎಸೆದುದು ಕಾಣಿಸಿದರೆ ೫೦೦ ಡಾಲರ್ ದಂಡ ಬೇರೆ. ನಡೆದೀತೆ ಇದು ಬೆಂಗಳೂರಿನಲ್ಲಿ? ಕಸ ಎಸೆಯದಿರಲು ನಮಗೆ ಸಾಧ್ಯವೆ?

೧೭೦೦ ಎಕರೆ ವಿಸ್ತೀರ್ಣವುಳ್ಳ ವಿಶ್ವ ವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ೧೮ ಕಾಲೇಜುಗಳಿವೆ. ಸುಮಾರು ೬೦ ಸಾವಿರ ವಿದ್ಯಾರ್ಥಿಗಳು, ೫೦೦೦ ಅಧ್ಯಾಪಕರು, ಸುಮಾರು ೧೭೦ ಮೇಜರ್ ಅಧ್ಯಯನ ವಿಷಯಗಳು, ೧೨೦೦೦ ವಿವಿಧ ಕೋರ್ಸುಗಳು. ಪ್ರತಿ ಅಧ್ಯಯನ ವಿಷಯದ ಡಿಪಾರ್ಟ್‌ಮೆಂಟಿಗೂ (ಇಲ್ಲಿ ಡಿಪಾರ್ಟ್‌ಮೆಂಟ್ ಎನ್ನುವ ಬದಲು ‘ಸ್ಕೂಲು’ ಎನ್ನಲಾಗುತ್ತದೆ. ಒಹೈವೋ ಸ್ಟೇಟ್ ಯೂನಿವರ್ಸಿಟಿ ಕ್ಯಾಂಪಸಿನೊಳಗೆ ಈ ಸ್ಕೂಲುಗಳ ಒಟ್ಟು ೪೦೦ ಬೃಹತ್ ಕಟ್ಟಡಗಳಿವೆ. ನೋಡುವಂಥದು ಕಟ್ಟಡಗಳ ಎತ್ತರ ಅಥವಾ ವೈಶಾಲ್ಯವಲ್ಲ, ಅವುಗಳ ಒಳಗೆ ಪಾಠ ಪ್ರವಚನಕ್ಕೆ ಏನೇನು ಸೌಲಭ್ಯ ಸವಲತ್ತುಗಳಿವೆ, ತರಗತಿ ಕೋಣೆಗಳು, ಸೆಮಿನಾರ್ ಹಾಲ್‌ಗಳು, ಪ್ರಯೋಗ ಶಾಲೆಗಳು ಹೇಗಿರುತ್ತವೆ ಎನ್ನುವುದು.)

ಅಮೆರಿಕಾ ದೇಶದಲ್ಲಿ ಫುಟ್‌ಬಾಲ್ ಆಟದಲ್ಲಿ ಒಹೈವೋ ಯೂನಿವರ್ಸಿಟಿಗೆ ನಂಬರ್ ವನ್ ಎಂಬ ಗರಿಯಿದೆ. ಸರಕಾರ ಇತ್ತೀಚೆಗೆ ೧೫೦ ಮಿಲಿಯ ಡಾಲರ್ ವೆಚ್ಚದಲ್ಲಿ ಯೂನಿವರ್ಸಿಟಿ ಸ್ಟೇಡಿಯಂ ಅನ್ನು ನವೀಕರಿಸಿ ಕೊಟ್ಟಿದೆ. ಸ್ಟೇಡಿಯಮಿನ ಹೊರ ಸುತ್ತಿನಲ್ಲಿ  ಹದಿನೆಂಟು ಟೆನಿಸ್ ಕೋರ್ಟುಗಳಿವೆ. ಪಕ್ಕದ ಒಂದು ಕಟ್ಟಡ ಜಿಮ್. ಇನ್ನೊಂದರೊಳಗೆ ಈಜು ಸ್ಪರ್ಧೆಯ ಕೊಳಗಳ ಸಾಲು. ಎಲ್ಲೆಲ್ಲಿಯೂ ಆಹಾರ, ಪಾನೀಯ, ಔಷಧ ಲಭ್ಯ. ವಿವಿಧ ಕ್ರೀಡೆಗಳಿಗೆ ವ್ಯವಸ್ಥೆ. ಬೃಹತ್ ಕಟ್ಟಡಗಳಿಗಿಂತ ಹೆಚ್ಚು ಗಮನ ಸೆಳೆಯುವುದು ಎಲ್ಲಾ ಕಡೆ ಮರ ಗಿಡಗಳು, ಹೂವುಗಳಿಂದ ತುಂಬಿದ ಚಿಕ್ಕ ದೊಡ್ಡ ತೋಟಗಳು.

ಯೂನಿವರ್ಸಿಟಿಯ ಕ್ಯಾಂಪಸಿನ ಕೆಲವು ಮೂಲೆಗಳಲ್ಲಿ ದೊಡ್ಡ ಆಕಾರದ ಡಮ್‌ಸ್ಟರ್ ಎಂಬ ಪೆಟ್ಟಿಗೆಗಳಿವೆ. ಪ್ರಜೆಗಳು ತಮಗೆ ಅಗತ್ಯವಿಲ್ಲದ ಮೇಜು, ಕುರ್ಚಿ, ಕಪಾಟು ಇತ್ಯಾದಿಗಳನ್ನು ತಂದು ಇದರಲ್ಲಿ ಇರಿಸುತ್ತಾರೆ. ಯಾವುದೇ ವಿದ್ಯಾರ್ಥಿ ಬಂದು ನೋಡಿ ತನಗೆ ಬೇಕಾದುದನ್ನು ಕೊಂಡು ಹೋಗಬಹುದು.

ಅಮೆರಿಕೆಯಲ್ಲಿ ವಿದ್ಯಾರ್ಥಿಗೆ ತನಗೆ ಹತ್ತಿರದ ಶಾಲೆ, ಕಾಲೇಜು, ಯೂನಿವರ್ಸಿಟಿಗೆ ಹೋಗಲು ಒತ್ತಾಸೆ ನೀಡಲಾಗುತ್ತದೆ. ಉದಾಹರಣೆಗೆ, ಒಹೈವೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ಓದುವ ಒಹೈವೋ ರಾಜ್ಯದ ನಿವಾಸಿಗೆ (ಅಮೆರಿಕನಾಗಿರಲಿ, ವಿದೇಶದವನಾಗಿರಲಿ, ಮೂರು ವರ್ಷಕ್ಕಿಂತ ಹೆಚ್ಚಿನ ಕಾಲ ರಾಜ್ಯದಲ್ಲಿ ವಾಸವಾಗಿದ್ದಲ್ಲಿ) ಫೀಸಿನಲ್ಲಿ ಹೆಚ್ಚು ಕಡಿಮೆ ಅರ್ಧಾಂಶ ವಿನಾಯತಿ ದೊರೆಯುತ್ತದೆ.

ಯೂನಿವರ್ಸಿಟಿಯಲ್ಲಿ ಓದು ಅಂದರೆ, ಹಯರ್ ಸೆಕೆಂಡರಿಯ ಹನ್ನೆರಡನೇ ತರಗತಿಯ ನಂತರದ ಆರು ವರ್ಷದ ಓದು. ನಾಲ್ಕು ವರ್ಷದ ಅಂಡರ್‌ಗ್ರಾಜುವೇಟ್ (ಸ್ನಾತಕ) ಓದು; ಅನಂತರ ಎರಡು ವರ್ಷದ ಗ್ರಾಜುವೇಟ್(ಸ್ನಾತಕೋತ್ತರ)ಓದು. ಮೆಡಿಕಲ್, ಇಂಜಿನಿಯರಿಂಗ್, ಸಯನ್ಸ್, ಆರ್ಟ್ಸ್ ಇತ್ಯಾದಿ ಎಲ್ಲಾ ಸಬ್ಜೆಕ್ಟುಗಳಿಗೂ ಅಧ್ಯಯನ ಅವಧಿ ಸಮಾನ. ಅನಂತರ ಪಿಎಚ್‌ಡಿ ಮಾಡುವುದಾಗಿದ್ದರೆ ಕನಿಷ್ಠ ಮೂರು ವರ್ಷ ಬೇಕು. ಇಂಡಿಯದಿಂದ ಜಿ.ಆರ್.ಈ ಟೆಸ್ಟ್ ಪಾಸ್ ಮಾಡಿಕೊಂಡು ಸ್ಕಾಲರ್‌ಶಿಪ್ ಪಡೆದುಕೊಂಡು ಬರುವ ಸ್ನಾತಕೋತ್ತರ ಪದವೀಧರರಿಗೆ ಇಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಪದವಿ ತರಗತಿಗೆ (ಎಂ.ಎಸ್)ಗೆ ಪ್ರವೇಶ.

ವಿದೇಶಗಳಿಂದ ಸ್ಕಾಲರ್‌ಶಿಪ್ ಪಡೆದು ಬರುವ ವಿದ್ಯಾರ್ಥಿಗಳಿಗೆ ಫೀಸು ಕಟ್ಟಲಿಕ್ಕೆ ಇರುವುದಿಲ್ಲ. ಅವರಿಗೆ ಸಿಗುವ ಸ್ಕಾಲರ್‌ಶಿಪ್ಪಿನಲ್ಲಿ ಅವರು ತಮ್ಮ ಇತರ ಎಲ್ಲಾ ಖರ್ಚನ್ನು ತೂಗಿಸಬೇಕು. ಅವರಿಗೆ ಅಂಡರ್ ಗ್ರಾಜುವೇಟ್ ವರ್ಗಗಳಿಗೆ ಕಲಿಸುವ ಸ್ವಲ್ಪ ಸಂಬಳದ ಟೀಚಿಂಗ್ ಅಸಿಸ್ಟೆಂಟ್ ಎಂಬ ಉದ್ಯೋಗವಲ್ಲದೆ, ಬೇರೆ ಬೇರೆ ಸ್ಕೂಲುಗಳಲ್ಲಿ, ಲೈಬ್ರರಿಗಳಲ್ಲಿ, ಕಾರ್ಯಾಲಯಗಳಲ್ಲಿ ಕೆಲಸ ಲಭ್ಯ. ಸಾಮಾನ್ಯವಾಗಿ ಅಮೆರಿಕನ್ ಅಂಡರ್‌ಗ್ರಾಜುವೇಟ್ ವಿದ್ಯಾರ್ಥಿಗಳು ಸಮ್ಮರ್ ಹಾಲಿಡೆಯಲ್ಲಿ ಕ್ಯಾಂಪಸಿನಿಂದ ಹೊರಗೆ ಯಾವುದೇ ಕೆಲಸ ಮಾಡಿ ಸಂಪಾದನೆ ಮಾಡಿಕೊಳ್ಳಬಹುದು. ಆ ಕೆಲಸ ಈ ಕೆಲಸ ಎಂದಿಲ್ಲ. ನೈತಿಕವಾಗಿ ಹಣ ತರುವುದೆಲ್ಲವೂ ಕೆಲಸವೇ. ವರ್ಷಕ್ಕೆ ಸುಮಾರು ೨೫ ಸಾವಿರ ಡಾಲರ್ ಫೀಸು; ಅದರ ಮೇಲೆ ಹಾಸ್ಟೆಲ್ ವಾಸ ಮತ್ತು ಸ್ವಂತ ಖರ್ಚಿನ ಹಣ. ‘ಯೂನಿವರ್ಸಿಟಿಯಲ್ಲಿ ಓದಿಸಲು ಒಂದು ದೊಡ್ಡ ಗಂಟು ಬೇಕು’ ಎಂದು ಇಲ್ಲಿನ ಪ್ರಜೆಗಳೇ ಹೇಳುತ್ತಾರೆ.

ಸಂಪೂರ್ಣ ಸ್ವಂತ ವೆಚ್ಚದಲ್ಲಿ ಅಂಡರ್‌ಗ್ರಾಜುವೇಟ್ ಮಟ್ಟದ ಓದಿಗೇ ಯೂನಿವರ್ಸಿಟಿ ಸೇರುವ ಭಾರತೀಯ ವಿದ್ಯಾರ್ಥಿಗಳಿಲ್ಲ ಎನ್ನಲಾಗದು; ಬೆರಳೆಣಿಕೆಯಷ್ಟು ಇರುತ್ತಾರೆ. ಅವರಿಗೆ ಐದು ವರ್ಷಕ್ಕೆ ಎಷ್ಟು ರುಪಾಯಿ ಬೇಕಾಗುತ್ತದೆ, ಇಂಡಿಯದಲ್ಲಿ ಅವರ ಆದಾಯ ಎಷ್ಟಿರಬೇಕು ಎಂದು ಲೆಕ್ಕ ಹಾಕಿದರೆ ಆಶ್ಚರ್ಯದ ಮೇಲೆ ಆಶ್ಚರ್ಯ ಉಂಟಾದೀತು!

ಯೂನಿವರ್ಸಿಟಿಯ ಹೆಸರನ್ನು ಬ್ರ್ಯಾಂಡ್ ನೇಮ್ ಆಗಿ ಬಳಸುವುದು ಅಮೆರಿಕೆಯಲ್ಲಿ ಸಾಮಾನ್ಯ. ಅಮೆರಿಕೆಯ ಯಾವುದೋ ಯೂನಿವರ್ಸಿಟಿಯ ಹೆಸರು ಹಚ್ಚಿರುವ ಟೀ ಶರ್ಟ್ ತೊಟ್ಟುಕೊಂಡಿರುವ ಹಳ್ಳಿಗರನ್ನು ನಮ್ಮ ದೇಶದಲ್ಲಿಯೂ ಕಾಣಬಹುದು. ಒಂದು ರಾಜ್ಯದಲ್ಲಿ ಹೆಸರು ಮಾಡಿರುವ ಯೂನಿವರ್ಸಿಟಿಯ ಹೆಸರು ಹಚ್ಚಿದ ಯೂನಿವರ್ಸಿಟಿ ಬ್ರ್ಯಾಂಡಿಗೆ ವಿಶೇಷ ಮನ್ನಣೆಯಿದೆ. ಆದುದರಿಂದ ಸಿದ್ಧ ಉಡುಪುಗಳಿಂದಾರಂಭವಾಗಿ ಪ್ರತಿಯೊಂದು ಸಾಧನ ಸಾಮಗ್ರಿಯ ಮೇಲೆಯೂ ಯೂನಿವರ್ಸಿಟಿಯ ಹೆಸರನ್ನು ಮುದ್ರಿಸಲಾಗುತ್ತದೆ. ಹಾಗೆ ಮಾಡಲು ಯೂನಿವರ್ಸಿಟಿಯ ಪರವಾನಗಿ ಬೇಕು; ಪರವಾನಗಿಗೆ ಯೂನಿವರ್ಸಿಟಿಗೆ ನಿಗದಿತ ಹಣ ಪಾವತಿಸಬೇಕು. ಇದು ಯೂನಿವರ್ಸಿಟಿಗೆ ಒಂದು ಉತ್ತಮ ಆದಾಯ ಮೂಲ ಕೂಡ ಹೌದು. ಈ ಪರಿಪಾಠವನ್ನು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ನಮ್ಮ ದೇಶದ ಕಾಲೇಜುಗಳು ಮತ್ತು ಯೂನಿವರ್ಸಿಟಿಗಳು ಯಾಕೆ ಅನುಕರಿಸಿಲ್ಲ ಎಂದು ನನಗೆ ಆಶ್ಚರ್ಯವಾಗುತ್ತದೆ.

ಒಂದು ಯೂನಿವರ್ಸಿಟಿ ಚೆಂದ ಆಗುವುದು ಅದರ ಎತ್ತರೆತ್ತರದ ಕಟ್ಟಡಗಳ ಸಮೂಹದಿಂದಾಗಲಿ, ವಿಶಾಲವಾದ ಲಾನು, ಹೂದೋಟ, ವೃಕ್ಷಗುಚ್ಛಗಳಿಂದಾಗಲಿ ಅಲ್ಲ. ಅಷ್ಟನ್ನೇ ನೋಡಿ ಅದರ ಚೆಲುವಿಗೆ ಮತ್ತು ಭವ್ಯತೆಗೆ ಮಾರುಹೋಗುವುದಕ್ಕೂ ತಾಜ್ ಮಹಲನ್ನೋ, ಜೋಗಿನ ಜಲಪಾತವನ್ನೋ ನೋಡಿ ಮಾರುಹೋಗುವುದಕ್ಕೂ ಹೆಚ್ಚು ವ್ಯತ್ಯಾಸ ಇಲ್ಲ. ಒಂದು ಯೂನಿವರ್ಸಿಟಿ ಗ್ರೇಟ್ ಆಗುವುದು ಮುಖ್ಯವಾಗಿ ಅಲ್ಲಿನ ಅಧ್ಯಾಪಕರುಗಳಿಂದ, ಅಧ್ಯಯನ ಸವಲತ್ತುಗಳಾದ ಗ್ರಂಥಾಲಯ, ಪ್ರಯೋಗಾಲಯ ಮುಂತಾದವುಗಳಿಂದ. ಅಮೆರಿಕೆಯಲ್ಲಿ ಖಾಸಗಿ ಶಾಲೆ ಕಾಲೇಜು, ಯೂನಿವರ್ಸಿಟಿಗಳಗಿಂತ ಸರಕಾರಿ ಶಾಲೆ ಕಾಲೇಜು, ಯೂನಿವರ್ಸಿಟಿಗಳಿಗೆ ಮನ್ನಣೆ ಹೆಚ್ಚು. ಯಾಕೆಂದರೆ, ಖಾಸಗಿ ಶಾಲೆ ಕಾಲೇಜು ಯೂನಿವರ್ಸಿಟಿಗಳಿಗಿಂತ ಸರಕಾರಿ ಶಾಲೆ ಕಾಲೇಜು ಯೂನಿವರ್ಸಿಟಿಗಳು ಶೈಕ್ಷಣಿಕವಾಗಿ ಎಲ್ಲಾ ರೀತಿಯಲ್ಲಿಯೂ ಮೇಲ್ಮಟ್ಟದಲ್ಲಿರುತ್ತವೆ.

ಇಂದಿನ ಕಾಲದಲ್ಲಿ ಕೇವಲ ಓದಿನ ಸಾಧನೆಯಷ್ಟೇ ಅಲ್ಲ, ತಾನು ಏನನ್ನು ಯಾಕೆ ಕಲಿಯುತ್ತಿದ್ದೇನೆ ಎಂಬ ಅರಿವು-ಮಾಹಿತಿ ವಿದ್ಯಾರ್ಥಿಗೆ ಸಾಕಷ್ಟು ಮೊದಲೇ ಇರಬೇಕಾದ್ದು ಅಗತ್ಯ. ತನ್ನ ಭವಿಷ್ಯಕ್ಕೆ ಬೇಕಾದ ಉದ್ಯೋಗ ಅಥವಾ ವೃತ್ತಿಯನ್ನು ದೊರಕಿಸಿಕೊಡುವಲ್ಲಿ ಕಾಲೇಜು ಅಥವಾ ಯೂನಿವರ್ಸಿಟಿ ಸಹಾಯ ಮಾಡುವುದಾದರೆ ಅದು ಅತ್ಯಂತ ಸ್ವಾಗತಾರ್ಹ ವಿಚಾರ. ಇತ್ತೀಚೆಗೆ ನಮ್ಮಲ್ಲಿ ಕಾಣಿಸಿಕೊಂಡಿರುವ ಕ್ಯಾಂಪಸ್ ಸೆಲೆಕ್ಷನ್ ಎಂಬುದು ಎಲ್ಲೋ ದೂರದಿಂದ ದೇವದೂತರು ಬಂದು ಕೆಲವು ಚುರುಕಿನ ಬುದ್ಧಿವಂತರನ್ನು ಹೆಕ್ಕಿಕೊಂಡು ಹೋಗುವ ವ್ಯವಹಾರ ಅಷ್ಟೆ.
ಒಹೈವೋ ಯೂನಿವರ್ಸಿಟಿಯ ಉದ್ಯೋಗ ಮತ್ತು ವೃತ್ತಿಯನ್ನು ಪಡೆಯಲು ಸಹಾಯ ಮಾಡುವ ಪ್ಲೇಸ್ಮೆಂಟ್ ಸರ್ವೀಸ್ ವಿಭಾಗವನ್ನು ನೋಡಿದೆ. ಯೂನಿವರ್ಸಿಟಿ ಸೇರಿದ ಕೂಡಲೇ ವಿದ್ಯಾರ್ಥಿ ತನ್ನ ಭವಿಷ್ಯದ ಉದ್ಯೋಗದ ಆಯ್ಕೆಯ ವಿಚಾರ ಮಾಡಬಹುದು. ಇವರಿಗೆ ಪ್ಲೇಸ್ಮೆಂಟ್ ಸರ್ವೀಸ್ ವಿಭಾಗ ಸಕಲ ಮಾಹಿತಿಯನ್ನು ಮತ್ತು ಸಲಹೆಯನ್ನು ನೀಡುತ್ತದೆ. ಸುಮ್ಮನೆ ಯಾವುದೋ ಒಂದು ವಿಷಯವನ್ನು ಓದುವುದು ಎಂಬುದಿಲ್ಲಿಲ್ಲ. ವಿದ್ಯಾರ್ಥಿ ತನಗೆ ಬೇಕಾದ, ತನಗೆ ಆಸಕ್ತಿಯಿರುವ ಹಲವು ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬಹುದು. ಕೊನೆಗೆ ಯಾರು ಏನು ಆಗುತ್ತಾರೆ ಎಂಬುದು ಇಲ್ಲಿ ಆಯ್ಕೆ ಮಾಡಿ ಪೂರೈಸಿದ ಕೋರ್ಸುಗಳಲ್ಲಿ ಮಾಡಿದ ಅವಿರತ ಸಾಧನೆಯನ್ನು ಹೊಂದಿಕೊಂಡಿದೆಯೇ ಹೊರತು ಯಾವುದೋ ಒಂದು ಪರೀಕ್ಷೆಯಲ್ಲಿ ಅಥವಾ ಒಂದು ಕಾಮನ್ ಟೆಸ್ಟಿನಲ್ಲಿ ಪಡೆದ ಅಂಕವನ್ನಲ್ಲ.

ಪ್ರಪಂಚದ ಬಹುತೇಕ ಎಲ್ಲಾ ದೇಶಗಳ ವಿದ್ಯಾರ್ಥಿಗಳು ಇಲ್ಲಿ ಇದ್ದಾರೆ. ಎಲ್ಲಾ ದೇಶಗಳ ಧ್ವಜಗಳನ್ನು ಒಂದೆಡೆ ಸಾಲಾಗಿ ಒಪ್ಪವಾಗಿ ಜೋಡಿಸಿಡಲಾಗಿದೆ. ಅಲ್ಲೇ ಬಳಿಯಲ್ಲಿ ಒಹೈವೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ಓದು ಮುಗಿಸಿ ಹೋದ ವಿದ್ಯಾರ್ಥಿಗಳು ಯಾವ್ಯಾವ ಉದ್ಯೋಗ-ವೃತ್ತಿಗಳಲ್ಲಿದ್ದಾರೆ ಎಂದು ಸಾಂಕೇತಿಕವಾಗಿ ಸೂಚಿಸುವ ವರ್ಣ ವರ್ಣದ ತಲೆಕಟ್ಟುಗಳನ್ನು ಜೋಡಿಸಿಡಲಾಗಿದೆ! ತಾನು ಓದಿದ ಶಾಲೆ ಕಾಲೇಜನ್ನು ಗೌರವಿಸುವುದು, ನೆನಪಿನಲ್ಲಿಟ್ಟುಕೊಳ್ಳುವುದು ನಿಜಕ್ಕೂ ಒಂದು ವಿದ್ಯಾರ್ಥಿಯ ಶ್ರೇಷ್ಠ ಗುಣ. ಆದರೆ ತನ್ನಲ್ಲಿ ಓದಿದ ವಿದ್ಯಾರ್ಥಿಯನ್ನು ತಾನು ಮರೆಯುವುದಿಲ್ಲ ಎಂಬುದು ಒಂದು ವಿಶ್ವವಿದ್ಯಾನಿಲಯದ ಅತ್ಯಂತ ಶ್ರೇಷ್ಠ ಗುಣ!

ಲ್ಲಿಯ ಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು

ಅಮೆರಿಕೆಯಲ್ಲಿ ಕುಂಡದಲ್ಲಿ ಕರಿಬೇವಿನ ಗಿಡವನ್ನು ನೆಟ್ಟು ಬೆಳೆಸಿರುವ ಭಾರತೀಯರನ್ನು ಕಂಡು ನನಗೆ ಬಹಳ ಆಶ್ಚರ್ಯವಾಗುತ್ತದೆ. ಯಾಕೆಂದರೆ, ಅಮೆರಿಕೆಯನ್ನು ಪ್ರವೇಶಿಸುವಾಗ ಇಮಿಗ್ರೇಶನಿನವರು ನಡೆಸುವ ಕೂಲಂಕಷ ವಿಚಾರಣೆ-ತಪಾಸಣೆಯಲ್ಲಿ ನಿಮ್ಮ ಬಳಿ ಯಾವುದೇ ಗಿಡ, ಬೀಜ ಸಿಕ್ಕಿದರೆ ಅಪಾಯ ಕಟ್ಟಿಟ್ಟದ್ದು. ನಿಮ್ಮನ್ನು ಅಲ್ಲಿಂದಲೇ ಹಿಂದಕ್ಕೆ ಕಳಿಸುವ ಅಧಿಕಾರ ಕೂಡ ಅವರಿಗಿದೆ! ನೀವು ಭಾರತದಿಂದ ಹೊರಡುವಾಗಲೇ ಅಮೆರಿಕೆಯಲ್ಲಿರುವ ನಿಮ್ಮ ಬಂಧುಗಳು ಸ್ನೇಹಿತರು, ‘ಯಾವುದೇ ಗಿಡ, ಬೀಜ ತರಬೇಡಿ’ ಎಂದು ಮರಳಿ ಮರಳಿ ಎಚ್ಚರಿಸುತ್ತಾರೆ. ಆದರೂ ಕರಿಬೇವಿನ ಗಿಡ ಬರುತ್ತದೆ! ಕರಿಬೇವಿನ ಗಿಡವನ್ನು ಕಂಡರೆ ಸ್ವರ್ಗ ಕಂಡಂತಾಗುವ ಎನ್ನಾರೈಗಳಿಗೆ ಹತ್ತಿಪ್ಪತ್ತು ವರ್ಷಗಳಲ್ಲಿ ಒಂದು ಕೋಟಿ ರುಪಾಯಿ ಪರ್ಸಿನೊಂದಿಗೆ ಭಾರತಕ್ಕೆ ಮರಳಲು ಸಾಧ್ಯವಾದರೆ, ಯಾರಿಗೂ ‘ಕ್ಯಾರ್’ ಮಾಡದೆ, ಸಮಾಜಕ್ಕೆ, ದೇಶಕ್ಕೆ ಏನಾದರೂ ಕನ್ಸ್‌ಟ್ರಕ್ಟಿವ್ ಮಾಡಿಕೊಂಡು ಬದುಕಿದರೆ, ಭಾರತ ಸ್ವಲ್ಪ ಸ್ವಲ್ಪವೇ ಸ್ವರ್ಗವಾಗಲಿಕ್ಕಿಲ್ಲವೆ?

ವಿದೇಶದ ಮರಗಿಡಗಳೆಂದರೆ ಅಮೆರಿಕೆಗೆ ಎಲ್ಲಿಲ್ಲದ ಭಯ. ಯಾವ ಮರ ಗಿಡಗಳು ಬಂದು ಇಡೀ ದೇಶವನ್ನು ಆಕ್ರಮಿಸಿಕೊಳ್ಳುತ್ತವೋ ಎಂಬ ಆತಂಕ! ಕನಿಷ್ಠ ಕರಿಬೇವು, ತುಳಸಿ, ದೊಡ್ಡಪತ್ರೆಯನ್ನಾದರು ತರಲು ಅನುಮತಿ ನೀಡಬಾರದೆ ಎಂದುಕೊಳ್ಳುತ್ತೇನೆ. ಕರಿಬೇವು, ತುಳಸಿ ಮತ್ತು ದೊಡ್ಡಪತ್ರೆ ಎಂಥ ಅದ್ಭುತ ಔಷಧಿ ಗಿಡಗಳು ಎಂದು ಮಾಲ್‌ನ ಸರಕುಗಳಿಗೆ ಶರಣಾಗಿರುವ ಅಮೆರಿಕನರಿಗೆ ಎನ್ನಾರೈಗಳು ಹೇಗಾದರೂ ತಿಳಿಸಿದರೆ ಒಳ್ಳೆಯದು. ಅದರಿಂದ ಹೊಸ ಔಷಧಿ ತಯಾರಿಸಿ ಪೇಟೆಂಟ್ ಮಾಡಿಕೊಳ್ಳದ ಹಾಗೆ ನೋಡಿಕೊಳ್ಳಬೇಕಾದೀತು!
ಒಂದು ವಿಷಯಕ್ಕೆ ಅಮೆರಿಕನ್ ಪ್ರಜೆಗಳನ್ನು ಮೆಚ್ಚಲೇ ಬೇಕು. ಇವರು ನಗರಗಳಲ್ಲಿ ಎಲ್ಲಾ ಕಡೆ ಮರಗಳನ್ನು ನೆಟ್ಟದ್ದು, ನೆಡುತ್ತಿರುವುದು, ನೆಟ್ಟದ್ದನ್ನು ಜೋಪಾನವಾಗಿಟ್ಟುಕೊಂಡು ಸಾಕುವುದು ನಮ್ಮ ಇಡೀ ದೇಶದಲ್ಲಿ ಎಲ್ಲೂ ಕಾಣಸಿಗದಂಥ ಅನನ್ಯ ದೃಶ್ಯ. ಈ ರೀತಿ ನೆಟ್ಟು ಬೃಹದಾಕಾರಕ್ಕೆ ಬೆಳೆದು ನಗರವನ್ನು ಹಸಿರಾಗಿಸಿದ, ಸುಂದರವಾಗಿಸಿದ ಮೇಪಲ್, ಓಕ್, ಹಿಕರಿ, ಬೀಚ್, ರೆಡ್‌ವುಡ್, ವೀಪಿಂಗ್ ವಿಲೊ, ಸಿಕಾಮೋರ್ ಮುಂತಾದ ದೊಡ್ಡ ಮರಗಳ ಸಂಖ್ಯೆ ಇಡೀ ದೇಶದಲ್ಲಿ ಮಿಲಿಯಾಂತರ! ಜೊತೆಗೆ ತಮ್ಮ ಮನೆಯ ಹಿಂದಿನ ಜಾಗದಲ್ಲಿ ಸೇಬು, ಪೇರ್, ಪೀಚ್ ಮುಂತಾದ ಹಲವು ಬಗೆ ಹಣ್ಣಿನ ಮರಗಳನ್ನು ಬೆಳೆವವರು ಕೂಡ ಅನೇಕ. ಯಾವ ಮರದ ಗಿಡವೇ ಆಗಿರಲಿ ಅದು ಲಭ್ಯ ಮಾಲ್‌ನಲ್ಲೇ. ದುಬಾರಿ ಬೆಲೆ ಕೊಟ್ಟು ಅದನ್ನು ತಂದು ಅದರ ಬುಡಕ್ಕೆ ಮಲ್ಚ್ (ಒಣ ಮರ ಮತ್ತು ಅದರ ಕೊಂಬೆ ರೆಂಬೆಗಳನ್ನು ಚೂರುಚೂರಾಗಿ ಕತ್ತರಿಸಿ ತಯಾರಿಸಿದ ಪುಡಿ) ಹರಡಿ ರಕ್ಷಿಸಿ ಬೆಳೆಸುವ ಇವರ ಅಭ್ಯಾಸವನ್ನು ವೃಕ್ಷ ಪ್ರೀತಿ ಎನ್ನುವುದಕ್ಕಿಂತ ಒಂದು ‘ಸಂಸ್ಕೃತಿ’ ಎನ್ನುವುದೇ ಹೆಚ್ಚು ಸರಿ. ಈ ಸಂಸ್ಕೃತಿ ನಮಗೆ ಹೇಗೆ ಬಂದೀತು? ಎಷ್ಟು ವನಮಹೋತ್ಸವಗಳ ನಂತರ ಬಂದೀತು?

ನಮಗೆ ನಮ್ಮ ಪರಿಸರದ್ದಲ್ಲದ ಗಿಡ ಮರಗಳು ಯಾಕೆ ಸುಂದರವಾಗಿ ಕಾಣಿಸುತ್ತವೆ? ನಮ್ಮ ಸಂಪಿಗೆ, ಹಲಸು, ಮಾವು, ಮುಂತಾದ ಮರಗಳು ಸುಂದರವಲ್ಲವೆ? ಬಹುತೇಕ ಅದೃಶ್ಯವಾಗಿರುವ ರೆಂಚೆ, ಹೊನ್ನೆ, ಸುರಹೊನ್ನೆ ಮುಂತಾದ ಹತ್ತು ಹಲವು ಬಗೆಯ ಸುಂದರವಾದ ಮತ್ತು ಪಕ್ಷಿಗಳನ್ನು ಸಾಕಿ ಸಲಹುವ ಮರಗಳನ್ನು ಮತ್ತೆ ನೆಟ್ಟು ಉಳಿಸುವ ಪ್ರಯತ್ನ ನಾವು ಯಾಕೆ ಮಾಡುತ್ತಿಲ್ಲ? ನಾವ್ಯಾಕೆ ಅವುಗಳನ್ನೆಲ್ಲ ಕಡಿದು ಮೋಪು, ಸೌದೆ ಮಾಡಿ ಮುಗಿಸಿ ವಿನಾಶದ ಅಂಚಿಗೆ ತಂದಿದ್ದೇವೆ? ಸಾಯಲು ಸಿದ್ಧವಾಗಿ ಮನೆ ಮೇಲೋ ಮನುಷ್ಯರ ಮೇಲೋ ಬೀಳಲು ಕಾಯುತ್ತಿರುವ ಮರವನ್ನು ಕಡಿಯಲು ಕೂಡ ಅಡ್ಡಿ ಪಡಿಸುವ ಪರಿಸರವಾದಿಗಳು, ಹೊಸ ಮರಗಿಡಗಳನ್ನು ಮುಖ್ಯವಾಗಿ ನಮ್ಮ ಮಣ್ಣಿನದೇ ಆದ ಅಪರೂಪದ ಮರಗಳನ್ನು ಉಳಿಸಲು ಯಾಕೆ ಹೋರಾಟ ನಡೆಸುವುದಿಲ್ಲ? ಯಾಕೆ ಸರಕಾರ, ನಮ್ಮ ಸ್ಥಳೀಯ ಆಡಳಿತ ಸಂಸ್ಥೆಗಳು ಕೇವಲ ಅಕೇಶಿಯಾ ಮತ್ತು ನೀಲಗಿರಿ ಮರಗಳನ್ನು ನೆಟ್ಟಿವೆ? ನಮ್ಮದಾದ ಮರಗಳು ನಮಗಿನ್ನು ಬೇಡವೆ?

ಅಮೆರಿಕಾ ಭೂಮಿ ಮೇಲಿನ ಅತ್ಯಂತ ಶ್ರೇಷ್ಠ ದೇಶ ಎಂದು ಬೇರೆ ದೇಶಗಳನ್ನು ಕಂಡಿರದ ಪ್ರವಾಸಿಗೆ ಕೆಲ ದಿನಗಳ ವರೆಗೆ ಅನಿಸಬಹುದು. ಕೆಲವು ಕಾರಣಗಳಿಗಾಗಿ ನಿಜವಾಗಿಯೂ ಅಮೆರಿಕಾ ಒಂದು ಶ್ರೇಷ್ಠ ದೇಶ. ಅಮೆರಿಕಾ ತನ್ನನ್ನು ಆಶ್ರಯಿಸಿ ಬಂದ ಯಾವ ಪರ ದೇಶೀಯರನ್ನೂ ಹಿಂದಕ್ಕಟ್ಟಿಲ್ಲ. ಇವತ್ತಿಗೂ ನಿರಾಶ್ರಿತರು ಈ ದೇಶಕ್ಕೆ ಬರುತ್ತಿದ್ದಾರೆ. ಇಂಡಿಯಕ್ಕೂ ಅನ್ಯದೇಶೀಯರು ನುಗ್ಗುತ್ತಿದ್ದಾರೆ ನಿಜ. ಆದರೆ ಅವರನ್ನು ‘ನಮ್ಮವರು’ ಎಂದು ನಾವು ಇಟ್ಟುಕೊಂಡಿಲ್ಲ. ಅವರಾಗಿ ನುಸುಳಿ ಬಂದು ಭಾರತದ ಮಣ್ಣಿನಲ್ಲಿ ಬೇರು ಬಿಟ್ಟಿದ್ದಾರೆ. ದೊಡ್ಡ ಸಂಖ್ಯೆಯಲ್ಲಿರುವ ನಮಗೆ ಅವರ ಅಗತ್ಯ ಇಲ್ಲ. ಆದರೆ ಅಮೆರಿಕೆಗೆ ಹೊರಗಿಂದ ಬಂದವರ ಅಗತ್ಯ ಇದೆ. ಓಡಿಕೊಂಡು ಬಂದವರಿಂದಲೇ ಇಲ್ಲಿ ‘ಕೂಲಿ’ ಮಟ್ಟದ ಬಹಳ ಕೆಲಸಗಳು ಸಾಧ್ಯವಾಗಿವೆ. ಈ ದೇಶದ ಮಟ್ಟಿಗೆ ಇದೊಂದು ನಿರಂತರ ಪ್ರಕ್ರಿಯೆ.

ಅಮೆರಿಕೆಯ ಶಕ್ತಿಯಿರುವುದು ಅದರ ಬಳಿಯಿರುವ ಡಾಲರಿನಲ್ಲಿ. ಆದರೆ ಈ ‘ಡಾಲರ್’ ಸಂಪತ್ತು ಜನರ ಬೆವರಿನಿಂದ ಬಂದುದಲ್ಲ. ಭಾಗಶಃ ನೈಸರ್ಗಿಕ ಸಂಪನ್ಮೂಲಗಳಿಂದ. ಉಳಿದುದೆಲ್ಲ ‘ವ್ಯಾಪಾರ’ದಿಂದ. ಅಮೆರಿಕೆಯಲ್ಲಿ ಪ್ರಜೆಗಳ ಬದುಕು ನೂರಕ್ಕೆ ನೂರು ಬೃಹತ್ ಬಂಡವಾಳ ಹೂಡಿರುವ ಮಾಲ್‌ಗಳ ಕೈಯಲ್ಲಿದೆ. ಪ್ರತಿಯೊಂದು ಜೀವನಾವಶ್ಯಕ ಸಾಮಗ್ರಿಗೂ ಮಾಲಿಗೇ ಹೋಗಬೇಕು. ತರಕಾರಿ ಗಿಡ, ಹೂವಿನ ಗಿಡ, ಗೊಬ್ಬರ ಎಲ್ಲವೂ ಮಾಲ್‌ನಲ್ಲಿ ಬಿಕರಿಯಾಗುವ ವಸ್ತು. ಎಲ್ಲೋ ದೇಶದ ಮೂಲೆಯ ಹಳ್ಳಿಗಳಲ್ಲಿ ತಾವೇ ತರಕಾರಿ ಬೆಳೆಸುವ, ಯಾವುದೋ ಸಾಮಾನ್ಯ ಕಾಯಿಲೆಗೆ ಎಲೆ, ನಾರು ಬೇರು ಬಳಸುವ ಮಂದಿ ಇರಬಹುದು. ಆದರೆ ದೇಶದ ತೊಂಬತ್ತು ಪರ್ಸೆಂಟ್ ಭಾಗದಲ್ಲಿ ಎಲ್ಲವನ್ನೂ ಒದಗಿಸುವುದು ಮಾಲ್‌ಗಳೇ. ಪಟ್ಟಣಗಳಲ್ಲಿ, ನಗರಗಳಲ್ಲಿ ಜನ ತಮಗೆ ಬೇಕಾದ ತರಕಾರಿಗಳನ್ನು ತಾವೇ ಬೆಳೆಸುವ ಸಂಸ್ಕೃತಿಯನ್ನು ಅಮೆರಿಕಾ ನಾಶ ಮಾಡಿ ಸುಮಾರು ಒಂದು ಶತಮಾನವೇ ಆಗಿರಬಹುದು. ಅರ್ಧ ಎಕರೆಯ ಲಾನ್ ಇರಬಹುದು. ತರಕಾರಿ ತೋಟ ಇಲ್ಲದಿದ್ದರೂ ಕೆಲವೇ ಚದರಡಿಗಿಂತ ಹೆಚ್ಚಿರಬಾರದು ಎನ್ನುವ ಕಾನೂನು ಕೂಡ ಇದೆ! ಬೆಳೆಸಬಹುದೆನ್ನುವ ನೆನಪು ಕೂಡ ಜನ ಮಾನಸದಿಂದ ಮಾಸಿಹೋಗಿ ವರ್ಷಗಳೇ ಆಗಿವೆ! ಯೋಚಿಸಿ ನೋಡಿದರೆ, ಡೆಮಾಕ್ರಸಿಯ ಒಡಲಿನಲ್ಲಿ ಈ ನಿಯಮಗಳ ಬಲೆಯನ್ನು ಹೆಣೆದಿರುವವರು ಯಾರು, ಯಾಕೆ, ಜಗತ್ತಿನ ಹೆಗಲ ಮೇಲೆ ಏರಿ ಕುಳಿತುಕೊಳ್ಳಲು ಅಮೆರಿಕೆಗೆ ಹೇಗೆ ಸಾಧ್ಯವಾಯಿತು ಎಂದು ಅರ್ಥ ಮಾಡಿಕೊಳ್ಳಬಹುದು. ಜಗತ್ತಿಗೇ ದೊಡ್ಡಪ್ಪನಾಗಲು ಬೇರೆ ದೇಶವನ್ನು ಆಕ್ರಮಿಸಿ ಕಾಲನಿ ಮಾಡಿಕೊಳ್ಳುವ ಕಾಲ ಕಳೆದು ಹೋಯಿತು; ಈಗ ಬೇರೆ ದೇಶದ ಸಂಪನ್ಮೂಲವನ್ನು ಬಳಸಿಕೊಂಡು ಸ್ವಂತ ನೆಲದಲ್ಲಿಯೇ ಕಾಲನಿ ನಿರ್ಮಿಸಿಕೊಂಡರೆ ಅದು ಸಾಧ್ಯ ಎನ್ನುವುದಕ್ಕೆ ಅಮೆರಿಕೆಗಿಂತ ಶ್ರೇಷ್ಠ ಉದಾಹರಣೆ ಬೇರೆ ಇಲ್ಲ.

ಭಾರತ ಎನ್ನುವುದು ಒಂದು ದೇಶ ಮಾತ್ರವಲ್ಲ; ಅದು ಒಂದು ಸಂಸ್ಕೃತಿಯ ಹೆಸರು. ಅಮೆರಿಕಾ ಎನ್ನುವುದು ಒಂದು ದೇಶ ನಿಜ. ಅದು ಒಂದು ಸಂಸ್ಕೃತಿಯ ಹೆಸರಲ್ಲ. ಹಲವು ಶತಮಾನಗಳಿಂದ ನೂರಾರು ದೇಶಗಳಿಂದ ಬಂದು ನೆಲೆ ನಿಂತ ನೂರಾರು ದೇಶೀಯರಿಂದ ಅಮೆರಿಕಾ ಆಗಿದೆ. ಹಾಗೆ ಬಂದವರು ಯಾರೇ ಆಗಿರಲಿ, ಅವರು ಅಮೆರಿಕೆಯನ್ನು ತಮ್ಮ ದೇಶವೆಂದೇ ಪರಿಭಾವಿಸುತ್ತಾರೆ. ತಾವು ಇಟಲಿಯವರು, ಸ್ಪೈನಿನವರು, ಆಫ್ರಿಕನರು, ಜಪಾನೀಯರು ಎಂದೆಲ್ಲಾ ಅವರು ತಮ್ಮನ್ನು ಗುರುತಿಸಿಕೊಳ್ಳುವುದಿಲ್ಲ. ಎಲ್ಲರೂ ತಮ್ಮನ್ನು ‘ಅಮೆರಿಕನ್’ ಎಂದೇ ಗುರುತಿಸಿಕೊಳ್ಳುತ್ತಾರೆ. ಇದು ಶತಮಾನಗಳಿಂದ ನಡೆದಿದೆ.

ರಸ್ತೆ ಬದಿಯ ಹಸಿರುಎಷ್ಟು ಭಾರತೀಯರು ತಮ್ಮನ್ನು ಅಮೆರಿಕನರು ಎಂದು ಗುರುತಿಸಿಕೊಳ್ಳುತ್ತಾರೆ ಎಂದು ತಿಳಿಯದು. ಆದರೆ ಅಮೆರಿಕದಲ್ಲಿ ವಿವಿಧ ಉದ್ಯೋಗ ಮತ್ತು ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಭಾರತೀಯರು ಸಾಂಸ್ಕೃತಿಕ ನೆಲೆಯಲ್ಲಿ ಸಂಘ ಸಂಸ್ಥೆಗಳನ್ನು, ದೇವಾಲಯಗಳನ್ನು ಕಟ್ಟಿಕೊಂಡಿದ್ದಾರೆ. ಭಾರತದಿಂದ ಸಂಗೀತ, ನೃತ್ಯ, ಸಿನಿಮಾ, ಸಾಹಿತ್ಯ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳನ್ನು ಕರೆಸಿಕೊಂಡು ಅವರಿಂದ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಆಗಾಗ ಸಾಂಸ್ಕೃತಿಕ ಸಮ್ಮೇಳನಗಳನ್ನು ಜರಗಿಸುತ್ತಾರೆ. ಇವರೆಲ್ಲ ಸೇರಿ ಅಮೆರಿಕದೊಳಗೊಂದು ಭಾರತವನ್ನು ಕಾಪಿಟ್ಟುಕೊಂಡಿದ್ದಾರೆ, ಬೆಳೆಸಿದ್ದಾರೆ. ಇವರಿಗೆ ಅಮೆರಿಕೆ ಸ್ವರ್ಗ ಅಂತನಿಸುತ್ತದೆಯೆ? ಬಹುಶಃ ಇಲ್ಲ. ಹೌದಾದರೆ ಅದು ಸಂಪಾದನೆಗೆ ಸೀಮಿತ. ಒಂದು ಡಾಲರ್ ಒಂದು ರುಪಾಯಿಗೆ ಸಮ ಎಂದಾದರೆ, ಬೇಡ, ಒಂದು ಡಾಲರು ಹತ್ತು ರುಪಾಯಿಗೆ ಸಮ ಎಂದಾದರೆ ಆ ಸ್ವರ್ಗ ಅದೃಶ್ಯವಾಗುತ್ತದೆ. ಅಮೆರಿಕನ್ ಪ್ರಜೆಗೆ ಅದರಿಂದ ಬಾಧೆಯಾಗದು. ಒಂದು ಡಾಲರಿಗೆ ಸಿಗುವುದು ಯಾವತ್ತೂ ಒಂದು ಡಾಲರಿಗೆ ಸಿಗುತ್ತದಲ್ಲ! ‘ಭಾರತದ ಯಾವುದೇ ಸಾಧನವನ್ನು ಕೊಂಡುಕೊಳ್ಳುವುದಿಲ್ಲ, ಭಾರತಕ್ಕೆ ಹಣ ಕಳಿಸುವುದಿಲ್ಲ ಮತ್ತು ಭಾರತಕ್ಕೆ ಎಂದೆಂದೂ ಮರಳುವುದಿಲ್ಲ’ ಎಂಬ ನಿರ್ಧಾರವನ್ನು ಮಾಡಿದ ಭಾರತೀಯರಿಗೂ ತೊಂದರೆಯಾಗುವುದಿಲ್ಲ. ಅವರು ಇತರ ದೇಶೀಯರಂತೆ ಅಮೆರಿಕನರೇ ಆಗುತ್ತಾರೆ. ಈಗಾಗಲೇ ಅಂಥ ಭಾರತೀಯರು ಅಮೆರಿಕೆಯಲ್ಲಿ, ಕೆನಡಾದಲ್ಲಿ, ಆಸ್ಟ್ರೇಲಿಯದಲ್ಲಿ ಇದ್ದಾರೆ; ದಕ್ಷಿಣ ಅಮೆರಿಕದ ದೇಶಗಳಲ್ಲಿ, ಕೊಲ್ಲಿ ರಾಷ್ಟ್ರಗಳಲ್ಲಿ, ಆಫ್ರಿಕಾದಲ್ಲಿ ಇದ್ದಾರೆ. ಅವರಲ್ಲಿ ಯಾರೂ ‘ಇದು ಸ್ವರ್ಗ’ ಎಂದು ಅಲ್ಲಿ ಉಳಿದುದಲ್ಲ; ಬದುಕು ಅವರನ್ನು ಅಲ್ಲಿ ಉಳಿಸಿದೆ.

ಅಮೆರಿಕಾ ಅತ್ಯಂತ ಶ್ರೇಷ್ಠ ದೇಶ (ಕೆಲವರ ಮಾತಿನಲ್ಲಿ ಸ್ವರ್ಗ) ಎಂದು ಭಾವಿಸುವ, ಅಮೆರಿಕಾ ವಾಸಿಗಳಾದ ವೃತ್ತಿನಿರತ, ಉದ್ಯೋಗ ನಿರತ ಭಾರತೀಯರಿಗೆ ಭಾರತದಲ್ಲಿ ಇದೇ ಸಂಬಳ ಒಳ್ಳೆಯ ಸಂಬಳ ಸಿಗುವುದಾದರೆ ಭಾರತ ಸ್ವರ್ಗವಾಗಲಾರದೆ?

ಒಂದು ಡಾಲರ್ ಅಂದರೆ ೫೦ ರುಪಾಯಿಯೇನೋ ನಿಜ. ಒಂದು ಕೇಜಿ ಟೊಮೆಟೊಕ್ಕೆ ಮೂರೂವರೆ ಡಾಲರ್. ಒಂದು ಕೇಜಿ ಹಸಿ ಮೆಣಸಿನಕಾಯಿಗೆ ಒಂದೂಮುಕ್ಕಾಲು ಡಾಲರ್. ಎಲ್ಲಾ ಕಾಯಿಪಲ್ಲೆ ಸೊಪ್ಪಿನ ಬೆಲೆಯೂ ಇದೇ ಮಟ್ಟದಲ್ಲಿ ಇರುತ್ತದೆ. ಭಾರತದಲ್ಲಿ ೫೦ ರುಪಾಯಿ ತೆಗೆದುಕೊಂಡು ತರಕಾರಿ ಅಂಗಡಿಗೆ ಹೋದರೆ, ಮೂವರ ಕುಟುಂಬಕ್ಕೆ ಎರಡು ದಿನಗಳಿಗೆ ಬೇಕಾದ ತರಕಾರಿ ಸಿಗುತ್ತದೆ. ಅಮೆರಿಕೆಯಲ್ಲಿ ಮಾಲ್‌ನಿಂದ ಅಷ್ಟು ತರಕಾರಿಗೆ ಸುಮಾರು ಹತ್ತು-ಹದಿನೈದು ಡಾಲರ್ ಕೊಡಬೇಕಾಗುತ್ತದೆ! ಭಾರತದಲ್ಲಿ ಹೋಟೆಲಿನಲ್ಲಿ ೫೦ ರುಪಾಯಿಗೆ ಒಂದು ಒಳ್ಳೆಯ ಊಟ ಸಿಗುತ್ತದೆ. (ಒಂದು ಊಟಕ್ಕೆ ನೂರಿನ್ನೂರು ರುಪಾಯಿ ಕೂಡ ವ್ಯಯಿಸಬಹುದು, ಆ ವಿಚಾರ ಬೇರೆ) ಹಳ್ಳಿ-ಪಟ್ಟಣಗಳಲ್ಲಿ ೨೫ ರುಪಾಯಿಗೆ ಸಾದಾ ಊಟ ಸಿಗುತ್ತದೆ. ಹೊಟ್ಟೆ ಬಿರಿಯುವಂತೆ ತಿನ್ನಲಾಗುವ ಸ್ವಾದಿಷ್ಟ ಜಂಕ್-ಊಟಕ್ಕೆ ಏಳೆಂಟು ಡಾಲರಾದರೆ, ಮುಕ್ಕಾಲು ಹೊಟ್ಟೆ ತುಂಬುವಂಥ ಸೇಫ್ ಆದ ಊಟಕ್ಕೆ ಹದಿನೈದು-ಇಪ್ಪತ್ತು ಡಾಲರ್! ಅಮೆರಿಕೆಯಲ್ಲಿ ಅಗ್ಗ ಪೆಟ್ರೋಲು ಮಾತ್ರ!

ನನಗನಿಸುತ್ತದೆ, ಈಗ ಭಾರತದ ಹಳ್ಳಿ-ಪಟ್ಟಣಗಳಲ್ಲಿ ತಿಂಗಳಿಗೆ ಹದಿನೈದು ಸಾವಿರ ಆದಾಯವಿರುವ ಮೂರು ಮಂದಿಯ ಒಂದು ಕುಟುಂಬ ಅಮೆರಿಕೆಯಲ್ಲಿ ತಿಂಗಳಿಗೆ ಎರಡು ಸಾವಿರ ಡಾಲರ್ (ಒಂದು ಲಕ್ಷ ರುಪಾಯಿ) ಸಂಬಳ ಪಡೆಯುವ ಕುಟುಂಬದಷ್ಟೇ ಚೆನ್ನಾಗಿ ಜೀವಿಸಬಹುದು. ಭಾರತದಲ್ಲಿ ನಗರದಲ್ಲಾದರೆ ಈ ಆದಾಯ ಇಪ್ಪತ್ತೈದು ಸಾವಿರವಾಗಿರಬೇಕಾಗುತ್ತದೆ. ಸಾಲ ಮಾಡಿ ಸೈಟು ಕೊಳ್ಳುವುದು, ಬ್ಯಾಂಕ್ ಸಾಲದಲ್ಲಿ ಮನೆ ಕೊಂಡುಕೊಳ್ಳುವ-ಕಟ್ಟಿಕೊಳ್ಳುವ ವಿಚಾರ ಇದರಲ್ಲಿ ಬರುವುದಿಲ್ಲ. ಅದು ಅಮೆರಿಕೆಯಲ್ಲಿಯೂ ಸುಲಭವಲ್ಲ. ಪ್ರೀತಿಸುವ ಮನಸ್ಸು ಇದ್ದರೆ, ಪ್ರೀತಿಸುವಂಥದು ಭಾರತದ ಸಂಗೀತ, ನೃತ್ಯ ಸಿನಿಮ, ಹಾಸ್ಯ ಮತ್ತು ಉಪನ್ಯಾಸ ಮಾತ್ರವಲ್ಲ, ಅಮೆರಿಕೆಯಲ್ಲಿ ಇಲ್ಲದ, ಭಾರತದ ನೆಲದ ಸಾಮಾನ್ಯ ಬದುಕನ್ನು ಕೂಡ ಪ್ರೀತಿಸಬಹುದು.

ಭಾರತದಲ್ಲಿ ಕೆಟ್ಟದು ಯಾವುದೆಂದರೆ, ನಮ್ಮ ಜನ ತಮ್ಮ ಮನೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು, ಸಿಕ್ಕಸಿಕ್ಕಲ್ಲಿ ಕಸ, ಪ್ಲಾಸ್ಟಿಕ್ ತೊಟ್ಟೆ ಎಸೆಯುವುದು, ಮನೆಯೆದುರಿನ ರಸ್ತೆಯಲ್ಲಿನ ಕೊಳೆ ಕಸಗಳ ರಾಶಿಯನ್ನು ಕಾಣುವ ಕಣ್ಣು ಇಲ್ಲದಿರುವುದು; ದೇವರನ್ನು ಕಾಣಲು ಹೋಗುವಾಗ, ಮನುಷ್ಯರನ್ನು ಮತ್ತು ಮನುಷ್ಯರ ಬದುಕಿನ ಪರಿಸರವನ್ನು ಗಮನಿಸದೆ ಕೊಳೆ ಕಸ ಕಡ್ಡಿ ಜಾಸ್ತಿ ಮಾಡಿ ಹೋಗುವುದು.

ಇಷ್ಟೇ ಅಲ್ಲ; ನೂರಾರು ಎನ್ ಜಿಒಗಳಲ್ಲಿ ಹೆಚ್ಚಿನವಕ್ಕೆ ಹಳ್ಳಿಯ ಉದ್ಧಾರದ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲದಿರುವುದು; ನಮ್ಮ ಲಯನ್, ರೋಟರಿ, ಜೇಸಿಸ್ ಮತ್ತು ಇತರ ಹಲವು ಬಗೆ ಸಂಸ್ಥೆಗಳಿಗೆ ಸಾರ್ವಜನಿಕ ಸ್ಥಳದ ಸ್ವಚ್ಛತೆ, ವೃಕ್ಷಗಳ ರಕ್ಷಣೆಯ ಕಾಳಜಿ ಇಲ್ಲದಿರುವುದು; ಸ್ಥಳೀಯ ಆಡಳಿತ ನಮ್ಮ ತೆರಿಗೆಯನ್ನು ತೆಗೆದುಕೊಂಡು ಇದು ತಮ್ಮ ಊರು ಎನ್ನುವುದನ್ನು ಮರೆತು ಪೌರರ ಅಗತ್ಯಗಳನ್ನು ಅವಗಣಿಸುವುದು.

 

ಇಷ್ಟೇ ಅಲ್ಲ; ಕೈಯಲ್ಲಿ ಕಾಸಿಲ್ಲದಿದ್ದರೆ ಮಾತ್ರ ಸಂಬಳದ ದುಡಿತಕ್ಕೆ ಹೋಗುವ, ಕೈಯಲ್ಲಿ ಸ್ವಲ್ಪ ಹಣವಿದ್ದರೆ ಅದನ್ನು ಯದ್ವಾ ತದ್ವ ಖರ್ಚು ಮಾಡುವ, ಸೋಮಾರಿಯಾಗಿ ಅಲೆಯುವ ಸಾಯಂಕಾಲ ಕುಡಿದು ಪಟ್ಟಣದ ಬೀದಿಯಲ್ಲಿ ಅಲೆಮಾರಿ ಜಾನುವಾರುಗಳಂತೆ ಸುಮ್ಮನೆ ನಿಲ್ಲುವ, ತನ್ನ ಮನೆಯ ಸುತ್ತ ಇರುವ ನೆಲವನ್ನು ಬಂಜರು ಬಿಡುವ ಜನರು; ಹಳ್ಳಿಗರಿಗೆ ಒಳ್ಳೆಯ ಬದುಕಿಗೆ ಬೇಕಾದ ಶಿಕ್ಷಣ ನೀಡಲು ಸಾಧ್ಯವಿರುವ ಖಾಸಗಿ, ಸರಕಾರಿ ಸಂಘ ಸಂಸ್ಥೆಗಳ ಔದಾಸೀನ್ಯ ಮತ್ತು ನರದ್ವೇಷ.

ಇದನ್ನೆಲ್ಲ ಸರಿಗೊಳಿಸಲು ಬೇಕಾದ್ದು ಆತ್ಮಾವಲೋಕನ. ಅದಕ್ಕೆ ಬೇಕಾದ ಪ್ರಜ್ಞಾವಂತಿಕೆ ಹೊರಗಿಂದೆಲ್ಲಿಂದ ಬರಬೇಕು? ವಿದ್ಯುತ್ ಸರಬರಾಜು ನಿರಂತರವಾಗಿರುವಂತೆ, ಟೆಲಿಫೋನು ಇಂಟರ್‌ನೆಟ್ ಕೆಡದಂತೆ, ಕೆಟ್ಟರೆ ತಕ್ಷಣ ಸರಿಪಡಿಸುವಂತೆ, ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಹಣ ಮಾಡದಂತೆ, ಸ್ಥಳೀಯ ಆಡಳಿತ ಕೂಡ ಪಾರದರ್ಶಕವಾಗಿರುವಂತೆ, ಪ್ರಜೆಯ ಯಾವುದೇ ನ್ಯಾಯಬದ್ಧ ಕೆಲಸ ಲಂಚವಿಲ್ಲದೆ, ಆತನ ಸಮಯ ಹಾಳು ಮಾಡದೆ ಆಗುವುದಾದರೆ ಸಕಲ ಎನ್ನಾರೈಗಳಿಗೂ ಭಾರತ ಶ್ರೇಷ್ಠ ದೇಶವೆನಿಸದೆ? ಪ್ರವಾಸಿಯ ದೃಷ್ಟಿ ಹೇಗೇ ಇರಲಿ, ನಮಗೇ ನಮ್ಮ ದೇಶ ಶ್ರೇಷ್ಠವಾಗದೆ?

ನಮ್ಮ ದೇಶದಲ್ಲಿ ಕಲಬೆರಕೆಯಿಲ್ಲದ ವಸ್ತುವೇ ಇಲ್ಲ ಎನ್ನುವಂಥ ಸ್ಥಿತಿಯಿದೆ. ಇದು ಮೊಟ್ಟಮೊದಲು ಸರಿಯಾಗಬೇಕು. ಕಲಬೆರಕೆ ವಸ್ತುಗಳನ್ನು ತಯಾರಿಸುವವರನ್ನು ಮತ್ತು ಮಾರುವವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ದುರ್ನಡತೆಯ ನರದ್ವೇಷಿ ಪೊಲೀಸರು, ಪ್ರತಿ ನಗರದಲ್ಲಿಯೂ ಅಂಡರ್‌ಗ್ರೌಂಡೀಯರು, ಮತ್ತು ರೌಡಿಗಳು, ಸರಕಾರಿ ಆಫೀಸುಗಳಲ್ಲಿ ಸಂವೇದನಾಹೀನ ಮತ್ತು ಅಶಿಸ್ತೇ ಶಿಸ್ತಾಗಿರುವ ಉದ್ಯೋಗಸ್ಥರು, ಅಸೆಂಬ್ಲಿಗಳಲ್ಲಿ ಮತ್ತು ಪಾರ್ಲಿಮೆಂಟುಗಳಲ್ಲಿ ತಮ್ಮ ಸ್ಥಾನವನ್ನು ‘ಜಾಬ್’ ಎಂದುಕೊಂಡಿರುವ ಜನಪ್ರತಿನಿಧಿಗಳು…ಇಷ್ಟೇ ಅಲ್ಲ. ಈ ಪಟ್ಟಿ ಇನ್ನೂ ಉದ್ದವಿರಬಹುದು.

ಎಲ್ಲವನ್ನೂ ತಿಕ್ಕಿ ತೊಳೆದು ಗುಡಿಸಿ ಝಾಡಿಸಿ ಶುದ್ಧ ಮಾಡಲಾದೀತೆ? ಸಾಧ್ಯ. ಅವರೆಲ್ಲರನ್ನೂ ಹೊರಗಿರಿಸಿ ಅಲ್ಲ. ಅವರನ್ನು ಬಳಸಿಕೊಂಡೇ ಸಾಧ್ಯ. ಆದರೆ ಅನಿವಾಸಿಯಾಗಿದ್ದುಕೊಂಡೇ ಭಾರತದಲ್ಲಿ ಆಡಳಿತಾತ್ಮಕ, ಶೈಕ್ಷಣಿಕ ಸಾಮಾಜಿಕ ಬದಲಾವಣೆಯಾಗಬೇಕೆಂಬ ಮಾತು ಬರೀ ಮಾತು ಅಥವಾ ಕನಸು. ಆ ಮಾತು ಭಾರತವಾಸಿಗಳಿಗೆ ಕೇವಲ ಹಾಸ್ಯಾಸ್ಪದವಾಗಿ ತೋರುತ್ತದೆ. ಮುಖ್ಯವಾಗಿ, ಅನಿವಾಸಿ ಭಾರತೀಯ ಯಾವುದೇ ಕಾರಣಕ್ಕೆ ಭಾರತವಾಸಿಯಾದರೆ ವಿದೇಶದಲ್ಲಿ ತಾನು ಗಳಿಸಿದ ಜ್ಞಾನವನ್ನು ಮತ್ತು ಸಂಪತ್ತನ್ನು ಬಳಸಿ ಏನಾದರೂ ಮಾಡಬಹುದು. ಹಾಗೆ ಮಾಡಿರುವ, ಮಾಡುತ್ತಿರುವ ಭಾರತೀಯರು ಇದ್ದಾರೆ. ಅಂಥವರ ಸಂಖ್ಯೆ ಬೆಳೆಯಬೇಕು ಎಂದು ಬಯಸುವ ನನಗೆ ಯಾವ ದೇಶ ಸ್ವರ್ಗವಾದರೇನು, ನರಕವಾದರೇನು, ನನ್ನ ದೇಶ ಚೆನ್ನಾಗಿರಬೇಕೆನ್ನುವುದು ನನಗೆ ಮುಖ್ಯ. ಆಗ ನನಗೆ ನನ್ನ ದೇಶದ ಇಂಚಿಂಚೂ ಪ್ರೇಕ್ಷಣೀಯವಾಗುತ್ತದೆ. ಆ ಪ್ರೇಕ್ಷಣೀಯತೆ, ಆ ಸ್ವರ್ಗೀಯತೆಯನ್ನೇ ಇಲ್ಲದಿದ್ದರೂ ಇದೆಯೆಂದು ನಾವು ಕೊಂಡಾಡುವುದು! ಕವಿಗಳ ಹಾಗೆ; ಯಾಕೆಂದರೆ, ಅದು ನಮ್ಮ ಆಸೆ.

ಇದೇನು ಮಸಣವೋ ಇಲ್ಲ ವನರಾಶಿಯೋ…

ರುದ್ರಭೂಮಿ ಅರ್ಥಾತ್ ಸಿಮೆಟರಿ ಹೀಗಿರಬಹುದು ಎಂಬುದು ಊಹೆಗೆ ನಿಲುಕದ್ದು. ಇದು ಸಿನ್ಸಿನಾಟಿ ನಗರದಿಂದ ಸುಮಾರು ಹದಿನೈದು ಮೈಲು ಹೊರಗೆ ಇರುವ ಸ್ಪ್ರಿಂಗ್ ಗ್ರೋವ್ ಸಿಮೆಟರಿ. ಅಮೆರಿಕೆಯ ಎರಡನೆಯ ಅತಿ ದೊಡ್ಡ, ಅತ್ಯಂತ ಸುಂದರವಾದ ರುದ್ರಭೂಮಿ-ಸಸ್ಯಕ್ಷೇತ್ರ (ಆರ್ಬೊರೇಟಮ್). ಇದನ್ನು ಸಿಮೆಟರಿ ಅಥವಾ ಸ್ಮಶಾನ ಎನ್ನುವ ಬದಲು ಸಸ್ಯಕ್ಷೇತ್ರ (ಆರ್ಬೊರೇಟಮ್) ಎನ್ನುವುದೇ ಸರಿ. ಯಾಕೆಂದರೆ, ಶತಮಾನಕ್ಕೂ ಹಿಂದಿನ ಲಕ್ಷಾಂತರ ಆಕರ್ಷಕ ಸಮಾಧಿಗಳ ಜೊತೆಯಲ್ಲಿ ಅವುಗಳಷ್ಟೇ ಹಳೆಯದಾದರೂ ನಿತ್ಯ ನೂತನವಾದ ವೃಕ್ಷಗಳನ್ನು ಇಲ್ಲಿ ಕಾಣಬಹುದು. ಇಲ್ಲಿನ ಸಮಾಧಿಗಳ ಮತ್ತು ಸಮಾಧಿಗಳ ಮೇಲಿನ ವೈವಿಧ್ಯಮಯ ವಿಗ್ರಹ ಮತ್ತು ಕಲಾಕೃತಿಗಳ, ಮತ್ತು ಇಲ್ಲಿನ ಅಪೂರ್ವ ಗಿಡ ಮರ ಸರೋವರಗಳ ಸೌಂದರ್ಯವನ್ನು ಪೂರ್ಣವಾಗಿ ವೀಕ್ಷಿಸಲು ನಾಲ್ಕೈದು ದಿನಗಳು ಬೇಕಾದೀತು.

ಈ ಸಸ್ಯಕ್ಷೇತ್ರ ೭೩೩ ಎಕರೆ ವಿಸ್ತಾರವಾಗಿದೆ. ಇದಲ್ಲದೆ ಈ ಸಸ್ಯಕ್ಷೇತ್ರದ ಒಂದು ಭಾಗದಲ್ಲಿ ನೂರಾರು ಬಗೆಯ ಮರಗಳಿರುವ ೩೦೦ ಎಕರೆ ದಟ್ಟವಾದ ರಕ್ಷಿತಾರಣ್ಯವಿದೆ. ಸಸ್ಯ ಕ್ಷೇತ್ರದೊಳಗೆ ಬೇಕಾದಂತೆ ನಡೆದಾಡಬಹುದು. ಸಸ್ಯಕ್ಷೇತ್ರದೊಳಗೆ ೪೪ ಮೈಲು ಸುಸಜ್ಜಿತವಾದ, ಎಲ್ಲಿಯೂ ಹೊಂಡಗಳಿಲ್ಲದ ಸ್ವಚ್ಛ ಡಾಮರು ರಸ್ತೆಯಿದೆ. ಈ ರಸ್ತೆಯಲ್ಲಿ ರಸ್ತೆಯ ಮೇಲೆಯೇ ಗುರುತಿಸಲಾಗಿರುವ ಹಳದಿ ಮತ್ತು ಬಿಳಿ ಮಾರ್ಗದರ್ಶಕ ಗೆರೆಗಳನ್ನು ಅನುಸರಿಸಿ ಕಾರಿನಲ್ಲಿ ಸಂಚರಿಸಬಹುದು. ಹುಲ್ಲು ಹಾಸನ್ನು ಹೊರತುಪಡಿಸಿ ರಸ್ತೆಯ ಮೇಲೆ ರಸ್ತೆ ನಿಯಮದಂತೆ ಕಾರು ಪಾರ್ಕ್ ಮಾಡಬಹುದು ಇಲ್ಲಿಗೆ ಸಸ್ಯ ಸಂಶೋಧನೆಗೆ ವಿದ್ಯಾರ್ಥಿಗಳು ಬರುತ್ತಾರೆ. ಸಸ್ಯ ಕ್ಷೇತ್ರದೊಳಗೆ ೧೫ ಸರೋವರಗಳಿವೆ. ಕೆಲವು ಬಹಳ ವಿಶಾಲವಾಗಿವೆ. ಪ್ರತಿ ಸರೋವರದ ಅಂಚಿಗೂ ನೆಲಮಟ್ಟಕ್ಕೆ ಕಗ್ಗಲ್ಲಿನ ತಡೆಯನ್ನು ಕಟ್ಟಲಾಗಿದೆ. ಸರೋವರಗಳಲ್ಲಿ ಹಂಸಗಳು ಮತ್ತು ಬಾತುಕೋಳಿಗಳು ತೇಲಾಡುತ್ತಿರುತ್ತವೆ. ಗಿಡ ಮರಗಳು ಹಲವಾರು ಬಗೆಯ ಪಕ್ಷಿಗಳಿಗೆ ಮನೆಯಾಗಿವೆ. ನೆಲದಲ್ಲಿ ದೊಡ್ಡ ಗಾತ್ರದ ಅಳಿಲು, ಗ್ರೌಂಡ್ ಹಾಗ್ ಮುಂತಾದ ಚಿಕ್ಕ ಪ್ರಾಣಿಗಳು ಇಲ್ಲಿ ಹಿಂಸಮೃಗಗಳ ಬಾಧೆಯಿಲ್ಲದೆ ಹಾಯಾಗಿರುತ್ತವೆ. ಕೆಲವು ಮಹಾ ವೃಕ್ಷಗಳನ್ನು ಬಹುಮಾನಿತ ಮರಗಳು ಎಂದು ಗುರುತಿಸಲಾಗಿದೆ. ‘ಚ್ಯಾಂಪಿಯನ್ ಆಫ್ ಯುನಾಯಿಟೆಡ್ ಸ್ಟೇಟ್ಸ್’ ಎಂಬುದು ಅದರಲ್ಲೊಂದು!

ಈ ಸಿಮೆಟರಿಯ ಸ್ಥಾಪನೆಗೋಸ್ಕರ ರಚಿತವಾದ ಟ್ರಸ್ಟಿನಲ್ಲಿ ಸಿನ್ಸಿನಾಟಿಯ ಹತ್ತಾರು ಸಿರಿವಂತ ಕುಟುಂಬಗಳು ಪಾಲುಗೊಂಡಿದ್ದವು. ಆ ಕುಟುಂಬಗಳ ಹೆಸರಿನ ಮಾಲ್‌ಗಳನ್ನು ಈಗಲೂ ಸಿನ್ಸಿನಾಟಿಯಲ್ಲಿ ಕಾಣಬಹುದು. ಈ ಸಿಮೆಟರಿಯ ಸ್ಥಾಪನೆಯ ಕಾಲದಲ್ಲಿಯೇ ಟ್ರಸ್ಟಿನ ಉದ್ದೇಶ ಇದು ಒಂದು ‘ಸಿಮೆಟರಿ ಮತ್ತು ಪಾರ್ಕ್’ ಆಗಬೇಕೆಂಬುದಾಗಿತ್ತು. ಮೂರು ತಲೆಮಾರುಗಳ ನಂತರವೂ ಇದನ್ನು ಇಟ್ಟುಕೊಂಡ ರೀತಿಯ ಹಿಂದಿನ ಇಚ್ಛಾಶಕ್ತಿ ಅಸಾಮಾನ್ಯವಾದುದೆಂದೇ ಹೇಳಬಹುದು. ಈ ಆರ್ಬೊರೇಟಮಿನ ಸೌಂದರ್ಯವನ್ನು ವೀಕ್ಷಿಸುತ್ತಾ ನೂರಾರು ತಿರುವುಗಳಿರುವ ಚೊಕ್ಕವಾದ ಟಾರ್ಡ್ ರಸ್ತೆಯಲ್ಲಿ ಹೋಗುವಾಗ ಕಾರಿನಲ್ಲಿ ಹೋಗುವುದಾದರೂ ಕೈಯಲ್ಲಿ ಆರ್ಬೊರೇಟಮಿನ ಭೂಪಟ ಇಲ್ಲದಿದ್ದರೆ ಕಳೆದುಹೋಗುವ ಸಂಭವವಿದೆ!

ಶತಮಾನದಿಂದ ಬಳಕೆಯಲ್ಲಿರುವ ಈ ರುದ್ರಭೂಮಿಗೆ ರೈಲುಹಾದಿಗಾಗಿ ೧೮೫೦ರಲ್ಲೇ ರೈಲು ಹಳಿಗಳನ್ನು ಹಾಕಲಾಗಿತ್ತು. ಆದರೆ ರೈಲುಗಾಡಿ ಸ್ಪ್ರಿಂಗ್ ಗ್ರೋವ್ ಪ್ರವೇಶಿಸಲು ಅಗತ್ಯವಿದ್ದ ಸೇತುವೆಯ ನಿರ್ಮಾಣ ಸಿಮೆಟರಿಯ ಡೈರೆಕ್ಟರುಗಳ ವಿರೋಧದಿಂದಾಗಿ ಆಗಲೇ ಇಲ್ಲ. ‘ರೈಲುಹಾದಿಯಿಂದಾಗಿ ಜನದಟ್ಟಣೆ ಅಧಿಕವಾಗುತ್ತದೆ ಮತ್ತು ಶವಸಂಸ್ಕಾರಗಳನ್ನು ಸಕಾಲದಲ್ಲಿ ಮುಗಿಸಲು ತೊಂದರೆಯಾಗುತ್ತದೆ ಎನ್ನುವುದು’ ಅವರ ವಿರೋಧಕ್ಕೆ ಕಾರಣವಾಗಿತ್ತು! ರೈಲು ಹಾದಿ ನಿರ್ಮಾಣವನ್ನು ಕೈಬಿಡಲಾಯಿತು. ತತ್ಪರಿಣಾಮವಾಗಿ, ರೈಲ್ವೇ ಕಂಪೆನಿ ಒಮ್ಮೆಗೆ ಒಂದು ಕುದುರೆಗಾಡಿ ಮಾತ್ರ ಓಡುವಂಥ ಒಂದು ವ್ಯವಸ್ಥೆ ಮಾಡಿತು. ಹತ್ತಿರದ ಹ್ಯಾರಿಸನ್ ಅವೆನ್ಯೂವಿನಿಂದ ಸ್ಪ್ರಿಂಗ್ ಗ್ರೋವಿಗೆ ಹತ್ತು ಸೆಂಟಿಗೆ ಒಂದು ಸವಾರಿಯ ಟಿಕೆಟು ಅಥವಾ ಒಂದು ಡಾಲರಿಗೆ ಹದಿನಾಲ್ಕು ಸವಾರಿಯ ಸೀಸನ್ ಟಿಕೆಟು! ಇಂದಿನ ಕಾರುಗಳ ಯುಗದಲ್ಲಿ ಪ್ರವೇಶ ಉಚಿತವಾಗಿದೆ.

ಸಿಮೆಟರಿಯಲ್ಲಿರುವ ಸಮಾಧಿಗಳ ಮತ್ತು ಸ್ಮಾರಕಗಳ ವಾಸ್ತುಶಿಲ್ಪ ಇತಿಹಾಸ ಪ್ರಸಿದ್ಧ. ಅಮೃತಶಿಲೆಯ ಫಲಕಗಳಲ್ಲಿ ಮೃತರ ಹೆಸರುಗಳನ್ನು ಸಾಲು ಸಾಲಾಗಿ ಕೆತ್ತಿದ ವಿಸ್ತಾರವಾದ ಮೂರು ಸ್ಮಾರಕ-ಕಟ್ಟಡಗಳಿವೆ. ಎರಡು ಚ್ಯಾಪೆಲ್‌ಗಳಿವೆ. ಇಲ್ಲಿ ಪ್ರಾರ್ಥನೆಗಳು, ವಿವಾಹಗಳು ನಡೆಯುತ್ತವೆ. ೭೩೦ ಎಕರೆ ವಿಸ್ತಾರದಲ್ಲಿ ವಿವಿಧ ವಿನ್ಯಾಸದ ವಿವಿಧ ಆಕಾರದ ಲಕ್ಷಾಂತರ ಸಮಾಧಿಗಳಿವೆ. ಕೆಲವು ಸಮಾಧಿಗಳ ಮೇಲೆ ಕೆತ್ತನೆಗಳು, ಸುಂದರ ಮೂರ್ತಿಗಳು ಮತ್ತು ವಿಶಿಷ್ಟ ಕಲಾಕೃತಿಗಳಿವೆ. ಈಗ ರಾಷ್ಟ್ರೀಯ ಸ್ಮಾರಕವಾಗಿರುವ ಈ ಸಿಮೆಟರಿ ಆರಂಭಗೊಂಡ ಕಾಲದಿಂದಲೇ ಪ್ರತಿ ದಿನ ಸಾವಿರಾರು ಮಂದಿ ಸಂದರ್ಶಿಸುವ ಸಿಮೆಟರಿಯಾಗಿತ್ತು. ಮುಖ್ಯವಾಗಿ, ಸಿವಿಲ್ ವಾರ್(೧೮೬೧-೧೮೬೫)ನ ಸಂದರ್ಭದಲ್ಲಿ ಸತ್ತವರ ಶವಗಳು ಸತತವಾಗಿ ಬರುತ್ತಲೇ ಇದ್ದುವು.  ಅನಂತರ ಮೃತವ್ಯಕ್ತಿಗಳಿಗೆ ಗೌರವ ಸಲ್ಲಿಸಲು ಸಮಾಧಿಯನ್ನು ಸಂದರ್ಶಿಸುವವರ ಸಂಖ್ಯೆಯೂ ದೊಡ್ಡದಿತ್ತು. ಆದ್ದರಿಂದ ಸಂದರ್ಶಕರ ಸಂಖ್ಯೆಯನ್ನು ಕಡಿಮೆ ಮಾಡುವ ಅಗತ್ಯವಿತ್ತು. ಆದ್ದರಿಂದ ಸಂದರ್ಶಕರು ತಮ್ಮ ಸಂಬಂಧಿಕರ ಸಮಾಧಿ ಇಲ್ಲಿದೆ ಎಂಬುದಕ್ಕೆ ಗುರುತಿನ ಚೀಟಿ ಪಡೆಯಬೇಕಾಗಿತ್ತು!

೧೮೬೩ರಲ್ಲಿ ಸ್ಥಾಪನೆಗೊಂಡ ಆಡಳಿತ ಕಚೇರಿ ಈಗಲೂ ಇದೆ. ಆ ಕಾಲದಲ್ಲಿಯೇ ರುದ್ರಭೂಮಿಯೊಳಗೆ ಅತಿ ವೇಗವಾಗಿ ತಮ್ಮ ಕುದುರೆಗಾಡಿಗಳನ್ನು ಓಡಿಸಿದ ಅಪರಾಧಕ್ಕಾಗಿ ಹಾಗೆ ಮಾಡಿದವರನ್ನು ಕೂಡಿ ಹಾಕಿಡುತ್ತಿದ್ದ ಬಂದೀಖಾನೆ ಈಗಲೂ ಇದೆ. ನೂರೈವತ್ತು ವರ್ಷಕ್ಕೂ ಹಿಂದೆ ಇದ್ದ ಓಕ್, ಮೇಪ್ಲ್ ಮುಂತಾದ ಭಾರೀ ಗಾತ್ರದ ವೃಕ್ಷಗಳು ಸ್ಪ್ರಿಂಗ್ ಗ್ರೋವಿನ ಇಹಿಹಾಸದ ಭಾಗವಾಗಿವೆ.

ರುದ್ರಭೂಮಿಯೊಳಗಣ ಹುಲ್ಲುಹಾಸುಮಾರ್ಗದರ್ಶನಕ್ಕೆ ಆಡಳಿತ ಕಟ್ಟಡದ ಆಫೀಸು ಇದೆ. ಪ್ರವಾಸಿಗರ ಅವಶ್ಯಕತೆಗಳನ್ನು ಪೂರೈಸುವ ಶೌಚಾಯಲಯಗಳಿವೆ. ಯಾವುದೇ ಎಮರ್ಜನ್ಸಿಯ ಸಂದರ್ಭದಲ್ಲಿ ಸಹಾಯಕ್ಕೆ ಒದಗುವ ಸರ್ವೀಸ್ ಸೆಂಟರ್ ಇದೆ. ಪ್ರವಾಸಿಗರಿಗೆ ಈ ಸಿಮೆಟರಿಯ ನಿರ್ಮಾಣದ ಬಗ್ಗೆ, ಕಾಲದಿಂದ ಕಾಲಕ್ಕೆ ನಿರ್ಮಾಣಗೊಂಡ ನೂರಾರು ರಚನೆಗಳ ಬಗ್ಗೆ, ಇಲ್ಲಿ ಹೂಳಲ್ಪಟ್ಟ ಪ್ರತಿಯೊಬ್ಬ ಪ್ರಸಿದ್ಧ ವ್ಯಕ್ತಿಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವ ಉಚಿತ ಪುಸ್ತಿಕೆಯಿದೆ. ಯಾರ ನೆರವೂ ಇಲ್ಲದೆ ಸ್ವತಂತ್ರವಾಗಿ ನಡೆಯಲು ಅಥವಾ ಕಾರಿನಲ್ಲಿ ಪಯಣಿಸಲು ಮಾರ್ಗದರ್ಶನ ನೀಡುವ ಮ್ಯಾಪ್ ಮತ್ತು ಇತರ ವಿವರಗಳು ಸಿಗುತ್ತವೆ. ಸುಮಾರು ಒಂದೂವರೆ ಶತಮಾನದಲ್ಲಿ ಒಹೈವೋ, ಸಿನ್ಸಿನಾಟಿಯಲ್ಲಿ ಆಗಿ ಹೋದ ಸಾವಿರಾರು ಮಹನೀಯರ, ಶಿಲ್ಪಿಗಳ, ಜನರಲುಗಳ, ಕವಿಗಳ, ಸಾಧಕರ, ಸಾಹಸಿಗಳ, ಅಮೆರಿಕೆಯ ಸಿವಿಲ್ ವಾರ್‌ನಲ್ಲಿ ಮೃತರಾದ ಯೋಧರ ಸಮಾಧಿಗಳಿವೆ. ಎತ್ತರೆತ್ತರದ ಸಮಾಧಿಗಳು ಮಾತ್ರವಲ್ಲ, ನೆಲದ ಮೇಲೆಲ್ಲ ಪುಟ್ಟ ಪುಟ್ಟ ಸಮಾಧಿಗಳಿವೆ. ಸಿಮೆಟರಿಯ ಒಂದು ಕೊನೆಯಲ್ಲಿ, ೧೮೩೦ರಲ್ಲಿ ಸಂಭವಿಸಿದ ಭೀಕರ ಕಾಲರಾ ಬೇನೆಯಲ್ಲಿ ಸತ್ತ ಸಾವಿರಾರು ಮಂದಿಯನ್ನು ಸಾಮೂಹಿಕವಾಗಿ ಸುಟ್ಟ ಕ್ರಿಮೇಶನ್ ಗಾರ್ಡನ್ ಇದೆ.

ಈ ರುದ್ರಭೂಮಿ-ಸಸ್ಯ ಕ್ಷೇತ್ರದಲ್ಲಿ ಸುತ್ತಾಡಿ ಹೊರ ಬರುವಾಗ ಎಲ್ಲಾ ರುದ್ರಭೂಮಿಗಳೂ ಹೀಗಿದ್ದರೆ ಎಷ್ಟು ಚೆನ್ನ ಎಂದನಿಸಿತು. ಇಲ್ಲಿ ಮಲಗಿದ ಲಕ್ಷಾಂತರ ಮಂದಿಯ ಸಾವು ಈ ಭಾರೀ ಗಾತ್ರದ ಮರಗಳ ಬೇರುಗಳ ಸ್ಪರ್ಶಕ್ಕೆ ಸಿಕ್ಕಿ ಕೊಂಬೆ ರೆಂಬೆಯಾಗಿ ಎಲೆಯಾಗಿ ಕಾಯಾಗಿ ಜೀವ ಪಡೆದುಕೊಳ್ಳುತ್ತಿರುವಂತೆ ತೋರಿತು.

ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?

ಯಾವುದೇ ದೇಶವನ್ನು ‘ಅತ್ಯಂತ ಸುಂದರ, ಅತ್ಯಂತ ಪ್ರೇಕ್ಷಣೀಯ’ ಎನ್ನಲಾದೀತೆ? ‘ಸ್ವರ್ಗ ಸದೃಶ’ ಎಂಬಂಥ ದೇಶ ಎಲ್ಲಿಯಾದರೂ ಇದೆಯೇ? ಮೊದಲ ನೋಟಕ್ಕೆ ಚೆಂದ ಎನಿಸಿದ್ದು ಎರಡನೆಯ ನೋಟಕ್ಕೆ, ಹತ್ತನೆಯ ಬಾರಿಗೆ ಚೆಂದ ಕಾಣಿಸುತ್ತದೆಯೆ?

ಪ್ರವಾಸ ನಮಗಿಷ್ಟವಾಗುವುದು ಯಾವಾಗಲೂ ಮನೆಯಲ್ಲಿದ್ದು ಒಮ್ಮೊಮ್ಮೆ ಪ್ರವಾಸ ಹೋದಾಗ. ನಿರಂತರ ಪ್ರವಾಸದಲ್ಲಿರುವುದು ಎಷ್ಟು ರಸಹೀನ ಎಂದು ಗಗನಸಖಿಯರು ಮತ್ತು ಮೆಡಿಕಲ್ ರೆಪ್ರಸೆಂಟೇಟಿವ್‌ಗಳು ಹೇಳಿಯಾರು. ಬೇರೆ ದೇಶ, ಬೇರೆ ನಗರ, ಬೇರೆ ಮನೆ ಎಲ್ಲಾ ಅಷ್ಟೆ. ಸಾಮಾನ್ಯವಾಗಿ ‘ಅತ್ಯಂತ ಪ್ರೇಕ್ಷಣೀಯ ಸ್ಥಳ’ ಸುಪ್ರಸಿದ್ಧವಾಗಿರುತ್ತದೆ. ಅದು ಹಲವು ಬಾರಿ ಟೀವಿಯಲ್ಲಿ ಮತ್ತು ಸಿನಿಮಾದಲ್ಲಿ ಕಂಡ, ಪತ್ರಿಕೆ ಪುಸ್ತಕಗಳಲ್ಲಿ ಓದಿದ ಸ್ಥಳವೇ ಆಗಿರುತ್ತದೆ. ಬಹಳ ಸಲ ಅಂಥ ಸ್ಥಳವನ್ನು ಕಂಡು ಬೋರೆನಿಸಿದರೆ ಆಶ್ಚರ್ಯವಿಲ್ಲ; ಯಾಕೆಂದರೆ, ಏನೂ ಕಷ್ಟ ಖರ್ಚು ಇಲ್ಲದೆ, ಟೀವಿಯಲ್ಲಿ ಇದಕ್ಕಿಂತ ಚೆನ್ನಾಗಿ ಮತ್ತು ವಿಸ್ತಾರವಾಗಿ ಕಾಣಿಸುತ್ತದಲ್ಲ ಎಂದನಿಸಿಬಿಡುತ್ತದೆ. ಸುಪ್ರಸಿದ್ಧ ಸಿನಿಮಾ ತಾರೆ ಅಥವಾ ಕ್ರಿಕೆಟ್ ತಾರೆ ಅಥವಾ ಟೆನಿಸ್ ತಾರೆಯನ್ನು ಕಾಣಲು ಹೋದವರಿಗೂ ಹೀಗನಿಸುವುದುಂಟು.

ನೈಸರ್ಗಿಕವಾಗಿ ಪ್ರೇಕ್ಷಣೀಯ ತಾಣಗಳು ಭಾರತದಲ್ಲಿಯೂ ಇವೆ, ಅಮೆರಿಕಾದಲ್ಲಿಯೂ ಇವೆ. ಪ್ರತಿಯೊಂದು ತಾಣಕ್ಕೂ ಅದರದೇ ಆದ ಅನನ್ಯತೆ ಇದೆ. ಜೋಗ ಮತ್ತ ನಯಾಗರ ಜಲಪಾತಗಳಲ್ಲಿ ಯಾವುದು ಹೆಚ್ಚು ಚೆಂದ ಅಥವಾ ಶ್ರವಣಬೆಳಗೊಳದ ಗೊಮ್ಮಟ ಮತ್ತು ಅಮೆರಿಕೆಯ ಸ್ಟ್ಯಾಚು ಆಫ್ ಲಿಬರ್ಟಿಯಲ್ಲಿ ಯಾವುದು ಹೆಚ್ಚು ಅದ್ಭುತ ಎಂದು ಕೇಳುವುದು ಹುಂಬತನದ ಪ್ರಶ್ನೆಯಾದೀತು. ಅಮೆರಿಕೆಯಲ್ಲಿ ಆಕರ್ಷಕ, ಅದ್ಭುತ, ಅನನ್ಯ ಎನಿಸುವಂಥದು ಮುಖ್ಯವಾಗಿ ನಿಸರ್ಗದ ಭಾಗವಾಗಿರುವ ಗ್ರ್ಯಾಂಡ್ ಕ್ಯಾನನ್, ಯೆಲ್ಲೋ ಸ್ಟೋನ್ ನ್ಯಾಶನಲ್ ಪಾರ್ಕ್, ರಾಕಿ ಮೌಂಟನ್ ಮುಂತಾದವುಗಳೇ. ನಿಸರ್ಗದ್ದಾದ ಇಂಥ ಆಕರ್ಷಕ ಸ್ಥಳಗಳು ಪ್ರತಿಯೊಂದು ದೇಶದಲ್ಲಿಯೂ ಇವೆ. ಐತಿಹಾಸಿಕವಾಗಿ ಅಮೆರಿಕೆಯಲ್ಲಿ ಅತ್ಯಂತ ಆಕರ್ಷಕ ಸ್ಥಳ ಯಾವುದು ಎಂದು ಕೇಳಿದರೆ, ‘ನ್ಯೂಯಾರ್ಕ್’ ಎನ್ನುವವರಿದ್ದಾರೆ. ನಾವು ‘ದೆಹಲಿ’ ಎನ್ನಬಹುದು. ಅಷ್ಟೇ ಅಲ್ಲ, ಮೈಸೂರು ಇದೆ, ಜಯಪುರ ಇದೆ, ಕೊಲ್ಕತ್ತಾ ಇದೆ. ಭಾರತದಲ್ಲಿರುವ ಅಜಂತಾ ಎಲ್ಲೋರಾ ಎಲಿಫೆಂಟಾ, ಖಜುರಾಹೋ ಕೋನಾರ್ಕ ಬೇಲೂರು ಹಳೆಬೀಡಿನಂಥ ಪುರಾತನವಾದ ಸಾಂಸ್ಕೃತಿಕವಾಗಿ ಪ್ರೇಕ್ಷಣೀಯವಾದ ಸ್ಥಳಗಳು ಅಮೆರಿಕೆಯಲ್ಲಿಲ್ಲ. ತಾಜಮಹಲು, ಕೆಂಪು ಕೋಟೆಯಂಥ ಐತಿಹಾಸಿಕ ರಚನೆಗಳು ಕೂಡ ಇಲ್ಲ. ಭುವನೇಶ್ವರ, ಕಾಶಿ, ತಿರುಪತಿಯಂಥ ಮಹಾ ತೀರ್ಥ ಕ್ಷೇತ್ರಗಳೂ ಇಲ್ಲ.

ಒಂದರ್ಥದಲ್ಲಿ, ಮುಂಬಯಿ ನಗರದ, ಕಾಲಿಡಲು ಕೂಡ ಎಡೆಯಿಲ್ಲದಂತೆ ಕೊಳೆ ಕಸ ಗಲೀಜು, ಮನುಷ್ಯರು ಮತ್ತು ಅವರ ವೈವಿಧ್ಯಮಯ ಬದುಕಿನ ಚಟುವಟಿಕೆಗಳಿಂದ ತುಂಬಿರುವ ಸಾವಿರಾರು ಗಲ್ಲಿಗಳು ಕೂಡ ಪ್ರೇಕ್ಷಣೀಯವೇ ಅಲ್ಲವೆ? ಅಲ್ಲವೆಂದಾದರೆ, ಅವುಗಳನ್ನು ತೋರಿಸುವ ಅಷ್ಟೊಂದು ಸಿನಿಮಾಗಳು, ಅವಾರ್ಡು ಗಳಿಸಿದ ಸಿನಿಮಾಗಳು, ಯಾಕೆ ತಯಾರದವು? ದೇಶ ವಿದೇಶಗಳ ಪತ್ರಿಕೆಗಳನ್ನು ಫೊಟೋಗ್ರಾಫರುಗಳನ್ನು ಯಾಕೆ ಆಕರ್ಷಿಸಿದವು?

ಪ್ರವಾಸಿಗೆ ತಾನು ಒಂದು ಹೊಸ ಸ್ಥಳವನ್ನು ಯಾವ ದೃಷ್ಟಿಯಿಂದ ನೋಡುತ್ತೇನೆ, ತನಗೆ ಏನು ಕಾಣಿಸುತ್ತದೆ ಎನ್ನುವುದು ಮುಖ್ಯ. ಅಷ್ಟೇ ಮುಖ್ಯ ಅವನ ಕಣ್ಣುಗಳು ಏನನ್ನು ಹುಡುಕುತ್ತವೆ ಎನ್ನುವುದು! ಅದು ಅವನವನ ಆಸಕ್ತಿಯನ್ನು ಅವಲಂಬಿಸಿದೆ. ಕೈಯಲ್ಲಿರುವ ಹಣ, ವಯಸ್ಸು, ಅಭ್ಯಾಸಗಳು ಕೂಡ ಮುಖ್ಯವಾಗುತ್ತವೆ. ಒಂದೂರಿಗೆ ಹೋಗಿ ಬಂದು, ಅಲ್ಲಿನ ಮಸಾಲೆ ದೋಸೆ, ಚಿಕನ್ ಬಿರಿಯಾನಿ ಬಗ್ಗೆಯೇ ಮಾತಾಡುವವರಿದ್ದಾರೆ! ಬೇಲೂರು ಹಳೆಬೀಡಿಗೆ ಹೋಗಿ ಬಂದು ಅಲ್ಲೇನಿದೆ ಎಂದು ಗೊಣಗುವವರಿದ್ದಾರೆ. ತಾಜಮಹಲನ್ನು ಕಾಣಲು ಹೋಗಿ ಭ್ರಮನಿರಸನಗೊಂಡು ‘ಅದರಲ್ಲೇನಿದೆ? ಒಂದು ಕಟ್ಟಡ ಅಷ್ಟೆ’ ಎನ್ನುವವರಿಲ್ಲವೆ? ಅಂಡಮಾನಿಗೆ ಹೋಗಿ ‘ಅಲ್ಲಿ ಏನೂ ಇಲ್ಲ’ ಎನ್ನುವವರಿದ್ದಾರೆ.

ಒಂದು ಸ್ಥಳ ಬೇರೆ ಬೇರೆ ಕಾರಣಗಳಿಗಾಗಿ ಪ್ರತಿ ಸಲವೂ ಆಸಕ್ತಿಯುತ ಎನಿಸಬಹುದು. ಒಂದೇ ಒಂದು ಸಂದರ್ಶನದಲ್ಲಿ ಅದೆಲ್ಲವೂ ಕಾಣಿಸದು. ಕಾಣಿಸಬೇಕಾದ ಅಗತ್ಯ ಕೂಡ ಅಲ್ಲ. ನಮ್ಮ ಆಸಕ್ತಿಯಂತೆ ನಾವು ಒಂದು ಸ್ಥಳವನ್ನು ಅಥವಾ ಒಂದು ರಚನೆಯನ್ನು ನೋಡಲು ಮರಳಿ ಮರಳಿ ಹೋಗುತ್ತೇವೆ. ನಾವು ಬೆಳೆದಂತೆ ನಮ್ಮ, ಆಸಕ್ತಿಯೂ ಬದಲಾಗುತ್ತಿರುತ್ತದೆ. ಯಾವುದೋ ಒಂದು ಹಂತದಲ್ಲಿ ‘ಇನ್ನು ನೋಡುವಂಥದು ಏನೂ ಇಲ್ಲ’ ಅಂತನಿಸಲೂ ಬಹುದು! ಎಷ್ಟು ಪ್ರೇಕ್ಷಣೀಯ ಸ್ಥಳವಾದರೂ ಅಲ್ಲಿ ಸ್ವಲ್ಪ ಕಾಲ ಇರಬೇಕಾಗಿ ಬಂದರೆ ಕಾಣಿಸುವುದು ಎಷ್ಟು ಚೆನ್ನಾಗಿದೆ ಎನ್ನುವುದನ್ನು ತಿನ್ನಲು ಏನು ಸಿಗುತ್ತದೆ ಎನ್ನುವುದು ನಿರ್ಧರಿಸಬಹುದು. ಹದಿನೈದು ರುಪಾಯಿಗೆ ಬೆಂಗಳೂರಿನ ‘ದರ್ಶಿನಿ’ಯಲ್ಲಿ ಮೊಸರನ್ನ ಅಥವಾ ಬಿಸಿ ಬೇಳೆ ಬಾತ್ ಅಥವಾ ಚೌಚೌ ಬಾತ್ ಸವಿದ ಕನ್ನಡಿಗನಿಗೆ ಅದೇ ಗುಣ ಮಟ್ಟದ ಎಂಟು ಡಾಲರಿನ ಪೀಟ್ಸಾ ಅಥವಾ ಹ್ಯಾಮ್‌ಬರ್ಗರ್ ಅಷ್ಟೇ ಅಥವಾ ಅದಕ್ಕಿಂತಲೂ ಚೆನ್ನಾಗಿದೆ ಅನಿಸಬೇಕಾದರೆ ಆತನ ನಾಲಗೆ ಮತ್ತು ಉದರದಲ್ಲಿ ಮಾತ್ರವಲ್ಲ, ಹೃದಯದಲ್ಲಿ ಕೂಡ ಬಹಳ ಪರಿವರ್ತನೆ ನಡೆದಿರಬೇಕಾಗುತ್ತದೆ!

ಪ್ರವಾಸಿಗರು ಅಚ್ಚರಿ ಹುಟ್ಟಿಸುವುದನ್ನು ನೋಡಲು ಹೋಗುತ್ತಾರೆ. ವಿಶೇಷವಾದುದನ್ನು, ವಿಚಿತ್ರವಾದುದನ್ನು, ವಿಲಕ್ಷಣವಾದುದನ್ನು ಹುಡುಕಿಕೊಂಡು ಹೋಗುತ್ತಾರೆ. ಅದಕ್ಕಾಗಿ ಸಾವಿರಾರು ಮೈಲಿ ದೂರಕ್ಕೆ ಹೋಗುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ನಾವಿರುವಲ್ಲಿಯೇ ಯಾವ ರೀತಿಯಲ್ಲಿ ಕೂಡ ನಮ್ಮ ಕಣ್ಣಿಗೆ ವಿಶೇಷ ಅನಿಸದ್ದು ಬಹಳ ಇರುತ್ತದೆ. ಆಗ್ರಾ ಹೋಬಳಿಯಲ್ಲಿರುವವನಿಗೆ ಪ್ರವಾಸಿ ಕಾಣುವ ತಾಜಮಹಲು ಕಾಣಿಸುವುದಿಲ್ಲ. ಅವನಿಗೆ ಅದು ಕಟ್ಟಡ ಅಷ್ಟೆ. ಮುಂಬಯಿ ನೋಡಲು ಹೋದವನು ಮುಂಬಯಿ ಕಾಣುತ್ತಾನೆ. ಮುಂಬಯಿಯಲ್ಲಿರುವವನು ಮುಂಬಯಿ ಕಾಣುವುದಿಲ್ಲ. ನಿರಂತರವಾಗಿ ನಮ್ಮ ಮನಸ್ಸನ್ನು ಹಿಡಿದಿಟ್ಟುಕೊಳ್ಳುವುದು, ಆಕರ್ಷಿಸುವುದು, ಮರೆಯಲಾಗದೆ ಉಳಿಯುವುದು ನಾವು ಏನನ್ನು ವ್ಯಕ್ತಿನಿಷ್ಠವಾಗಿ ನೋಡುತ್ತೇವೋ ಅದು. ಅದು ಬರೀ ನೋಡುವಿಕೆ ಅಲ್ಲ; ಅದು ಅನುಭವಿಸುವಿಕೆ. ಕೇವಲ ವಸ್ತುನಿಷ್ಠವಾಗಿ ನೋಡಲು ನಾವಿವತ್ತು ಎಲ್ಲಿಗೂ ಹೋಗಬೇಕಾಗಿಲ್ಲ. ನಮ್ಮ ದೃಷ್ಟಿ ಕೇವಲ ‘ನೋಡುವುದಕ್ಕೆ’ ಸೀಮಿತ ಎಂದಾದರೆ, ಮನೆಯೊಳಗೇ ಕುಳಿತು ಎಲ್ಲವನ್ನೂ ನೋಡಬಹುದು. ಬಹುಶಃ ಕ್ರಿಕೆಟ್, ಟೆನಿಸ್ ಆಟಗಳು ಇದಕ್ಕೆ ಅತ್ಯುತ್ತಮ ಉದಾಹರಣೆ.

ಅಮೆರಿಕಾ ನನಗೆ ಪ್ರೇಕ್ಷಣೀಯವಾಗಿ ಕಾಣಿಸಿಲ್ಲ. ಇಲ್ಲಿ ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ನನಗನಿಸಿಲ್ಲ. ಪರಿಹಾರ ಹುಡುಕಿಕೊಂಡು ನಾನು ಬಂದಿಲ್ಲ. ಅದು ನನ್ನ ಹೊಣೆಗಾರಿಕೆಯೂ ಅಲ್ಲ. ನಾನು ಪ್ರವಾಸಿ ಕೂಡ ಅಲ್ಲ. ಅಮೆರಿಕಾ ತಲುಪಿದೊಡನೆ ಬಹಳ ಮಂದಿ ಮಾಡಿದ್ದನ್ನು ನಾನು ಮಾಡಿದೆ ಎಂದು ನನಗೆ ಅನಿಸಿಯೂ ಇಲ್ಲ. ಬಹಳ ಮಂದಿ ಕಂಡದ್ದನ್ನು ನಾನು ಕಂಡೂ ಇಲ್ಲ. ಒಂದು ಟ್ರಾವಲೋಗ್ ಬರೆಯಬೇಕು ಎಂಬ ಉದ್ದೇಶವೂ ನನಗಿಲ್ಲ. ನನಗಿರುವುದು ಬಹುತೇಕವಾಗಿ ನನ್ನ ದೇಶದ ಕುರಿತಾದ ಕಾಳಜಿ. ನನ್ನ ದೇಶ ಹೇಗಿರಬೇಕು ಎನ್ನುವ ಯೋಚನೆ. ಆದ್ದರಿಂದಲೇ ಅಮೆರಿಕವನ್ನು ನೋಡಿ ಮೈಮರೆಯುವುದು ನನ್ನಿಂದ ಸಾಧ್ಯವಿಲ್ಲ. ಮೈಮರೆಸುವಂಥದನ್ನು ನಾನು ಹುಡುಕಿಕೊಂಡು ಹೋಗಿಲ್ಲ. ಎಲ್ಲಿ ಹೋದರೂ ನನ್ನನ್ನು ನನ್ನ ದೇಶದ, ನನ್ನ ನೆಲದ ನೆನಪು ತೊಲಗುವುದಿಲ್ಲ. ‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನ ಬನವಾಸಿ ದೇಶಮಂ’ ಎಂಬ ಪಂಪನ ಮಾತು ನೆನಪಾಗುತ್ತಿರುತ್ತದೆ. ಆರು ತಿಂಗಳು ಇರಲು ಬಂದ ನನಗೆ ಮೂರು ತಿಂಗಳಲ್ಲೇ ವಾಪಾಸು ಹೋಗೋಣ ಅನಿಸಹತ್ತಿದೆ.

ಒಂದು ದೇಶದಲ್ಲಿ ಮಾನವ ನಿರ್ಮಿತವಾದ ಯಾವುದನ್ನಾದರೂ ದೃಶ್ಯವಾಗಿ ನೋಡುವುದಕ್ಕಿಂತಲೂ ಅದನ್ನು ಮನುಷ್ಯರು ಯಾವ ರೀತಿ ಇಟ್ಟುಕೊಂಡಿದ್ದಾರೆ ಎನ್ನುವ ವಿಚಾರ ಮುಖ್ಯವಾಗುತ್ತದೆ. ಜೋಗದ ಜಲಪಾತ ಅಥವಾ ನಯಾಗರ ಜಲಪಾತ, ತಾಜಮಹಲು ಅಥವಾ ಲಿಂಕನ್ ಮೆಮೋರಿಯಲ್ ಯಾವಾಗಲೂ ಹಾಗೆಯೇ ಇರುತ್ತದೆ. ಅಮೆರಿಕೆಯ ರಸ್ತೆಗಳು ಯಾವಾಗಲೂ ಅತ್ಯಂತ ಸುಸ್ಥಿತಿಯಲ್ಲಿ ಇರುತ್ತವೆ. ಕರ್ನಾಟಕದ ರಸ್ತೆಗಳು ಹಾಗೆ ಇರುವುದಿಲ್ಲ. ಹೆಚ್ಚೇಕೆ, ಕೇರಳ, ತಮಿಳುನಾಡಿನ ರಸ್ತೆಗಳಷ್ಟು ಕೂಡ ಕರ್ನಾಟಕದ ರಸ್ತೆಗಳು ಚೆನ್ನಾಗಿಲ್ಲ. ಕಾರಣ ನಮಗೆ ಗೊತ್ತಿದೆ. ಮಂತ್ರಿಗಳ, ಜನಪ್ರತಿನಿಧಿಗಳ, ಸರಕಾರಿ ಅಧಿಕಾರಿಗಳ ಸ್ವಾರ್ಥ, ಔದಾಸೀನ್ಯ ಮತ್ತು ಭ್ರಷ್ಟಾಚಾರ, ಅದರಲ್ಲಿ ಪಾಲುಗೊಳ್ಳುವ ಗುತ್ತಿಗೆದಾರರ ದ್ರವ್ಯ ದುರಾಸೆ, ಜನರ ಪ್ರಜ್ಞಾವಂತಿಕೆಯ ಕೊರತೆ ಹೀಗೆ ಕಾರಣಗಳನ್ನು ಪಟ್ಟಿ ಮಾಡಬಹುದು. ನಿಜ ತಿಳಿಯದ ಅಜ್ಞಾನಿಗಳಾದ ಜನರು ರಸ್ತೆ ಹಾಳಾಗುವುದಕ್ಕೆ ಮಳೆ ಕಾರಣ ಎನ್ನುತ್ತಾ ಇರುತ್ತಾರೆ! ಏನು ಸರಿಯಾದರೂ ನಮ್ಮ ದೇಶದ ಪೊಲೀಸರು, ಸರಕಾರಿ ಅರೆ ಸರಕಾರಿ ಆಫೀಸುಗಳ ಗುಮಾಸ್ತರು, ನಮ್ಮ ಸರಕಾರಿ ಮತ್ತು ಖಾಸಗಿ ಬಸ್ಸುಗಳ ಕಂಡಕ್ಟರುಗಳು ಯಾವ ಕಾಲಕ್ಕೂ ಸರಿಯಾಗಲಿಕ್ಕಿಲ್ಲ ಅಂತನಿಸುತ್ತದೆ!

ಅಮೆರಿಕೆಯಲ್ಲಿ ಮನುಷ್ಯರು ಚೊಕ್ಕವಾಗಿರಿಸಿರುವ ನಿಸರ್ಗ, ಪರಿಸರ, ಮೈಲು ಮೈಲುದ್ದದ ನೇರ ರಸ್ತೆಗಳು, ರಸ್ತೆಯಲ್ಲಿ ಶಿಸ್ತಿನಿಂದ ಚಲಿಸುವ ಕಾರುಗಳ ಸಾಲು, ಹಸಿರು ಹಸಿರಾದ ಪಾರ್ಕುಗಳು, ದೊಡ್ಡ ದೊಡ್ಡ ಕಟ್ಟಡಗಳು, ನ್ಯೂಯಾರ್ಕ್ ಮಹಾನಗರ, ಬೃಹತ್ ಮಾಲುಗಳು ಇತ್ಯಾದಿಗಳನ್ನು ಕಂಡು ಅಮೆರಿಕಾ ಸ್ವರ್ಗದಂತಿದೆ ಎಂದೊಬ್ಬರು ಹೇಳಿದರೆ, ಅವರು ಭಾರತವನ್ನು ಕಂಡಿಲ್ಲ ಎಂದು ಹೇಳಬೇಕಾಗುತ್ತದೆ. ಹಾಗೆ ಹೇಳುವವರ ಸ್ವರ್ಗದ ಕಲ್ಪನೆ ಏನು ಎಂದು ಕೂಡ ತಿಳಿದುಕೊಳ್ಳಬೇಕಾಗುತ್ತದೆ.

ಭಾರತದಲ್ಲಿ ಎಲ್ಲವೂ ಇದೆ. ಆದರೆ ಸರಕಾರ, ಸ್ಥಳೀಯ ಆಡಳಿತ ಸಂಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಜನರಿಗೂ ‘ಒಳ್ಳೆಯದನ್ನು ಕೊಡಿ’ ಎಂದು ಡಿಮಾಂಡ್ ಮಾಡುವ ಪ್ರಜ್ಞಾವಂತಿಕೆಯಿಲ್ಲ, ಚೆನ್ನಾಗಿಟ್ಟುಕೊಳ್ಳಬೇಕಾದ ಮನೋಧರ್ಮ ಇಲ್ಲ. ಆದ್ದರಿಂದ ಎಲ್ಲ ಇದ್ದರೂ ಯಾವುದೂ ಇರಬೇಕಾದಂತೆ ಇಲ್ಲ ಮತ್ತು ಆ ಕಾರಣಕ್ಕೇ ಯಾವುದೂ ಚೆಂದ ಕಾಣಿಸುತ್ತಿಲ್ಲ. ಹಾಗಂತ ಇದಕ್ಕೆಲ್ಲ ಪರಿಹಾರ ಏನು ಎನ್ನುವುದನ್ನು ಅಮೆರಿಕೆಯನ್ನು ನೋಡಿ ಕಲಿಯಬೇಕೆನ್ನುವುದು ಬೌದ್ಧಿಕ ದೀವಾಳಿತನ! ಅಮೆರಿಕೆಯಲ್ಲಿ ಮನುಷ್ಯರು ನಿರ್ಮಿಸಿಕೊಂಡಿರುವ, ಶಿಸ್ತು, ನೈರ್ಮಲ್ಯ, ಶಿಷ್ಟಾಚಾರ, ಪರಸ್ಪರ ಗೌರವ, ವೃತ್ತಿ ನಿಷ್ಠೆ, ವೃತ್ತಿಗೌರವ, ಮತ್ಸರ ಎನ್ನುವುದಿಲ್ಲದಿರುವುದು ಇತ್ಯಾದಿಗಳನ್ನು ಬೇರೆ ಅನೇಕ ದೇಶಗಳಲ್ಲಿಯೂ ಕಾಣಬಹುದು. ಇಂಡಿಯಾದಲ್ಲಿ ಕಡಿಮೆ ಇದೆ. ನಾವು ಅದನ್ನು ಸರಿಗೊಳಿಸಬಲ್ಲೆವು. ಅದಕ್ಕೆ ನಮ್ಮಲ್ಲೇ ದಾರಿಗಳಿವೆ. ಅದನ್ನು ನಾವು ಕಂಡೂ ಕಾಣದಂತಿದ್ದೇವೆ ಅಷ್ಟೆ. ಅದನ್ನು ಸರಿ ಮಾಡಲು ನಮಗೆ ಅಮೆರಿಕದ ಮಾಡೆಲು ಬೇಕಾಗಿಲ್ಲ. ಆದರೆ ಒಂದಷ್ಟನ್ನು ಜಗತ್ತಿನ ಯಾವ ಭಾಗದಿಂದಲೂ ನೋಡಿ ಕಲಿತುಕೊಳ್ಳಬಹುದು. ಅಮೆರಿಕವೇ ಏಕೆ, ಚೀನಾ, ಜಪಾನು, ಜರ್ಮನಿ, ಇಂಗ್ಲೆಂಡನ್ನು ನೋಡಿ ಕೂಡ ಕಲಿತುಕೊಳ್ಳಬಹುದು.

ಅಮೆರಿಕದಲ್ಲಿ ಜೀವಕ್ಕೆ ಬಹಳ ಬೆಲೆಯಿದೆ; ಇವರಿಗೆ ಮನುಷ್ಯರ ಅಗತ್ಯ ಬಹಳ ಇದೆ. ಇಡೀ ಜಗತ್ತಿನಲ್ಲಿರುವ ಪ್ರತಿಭಾವಂತರನ್ನು ಬನ್ನಿ ಬನ್ನಿ ಎಂದು ಸ್ಕಾಲರ್‌ಶಿಪ್ ಅಥವಾ ಫೆಲೋಶಿಪ್ ಮತ್ತು ಜಾಬ್ ಕೊಟ್ಟು ಬರಮಾಡಿಕೊಳ್ಳುತ್ತಾರೆ. ಹೆಚ್ಚು ಪ್ರತಿಭಾವಂತ ಎಂದು ಕಂಡು ಬಂದರೆ, ಒಂದಲ್ಲ ಎರಡು ಫೆಲೋಶಿಪ್ ಕೊಡಲೂ ಸಿದ್ಧ. ಅಮೆರಿಕೆ ನೀಡುವ ಸ್ಕಾಲರ್‌ಶಿಪ್ ಫೆಲೊಶಿಪ್ ಮೊತ್ತ ಎಷ್ಟು ಎಂದು ಹೇಳಿದರೆ, ಇಂಡಿಯದಲ್ಲಿ ಮೂರು ಕಾಸು ಫೆಲೊಶಿಪ್ಪನ್ನು ಕೂಡ ಕೊಡದಿರುವ ಯೂನಿವರ್ಸಿಟಿ ಅಧಿಕಾರಿಗಳಲ್ಲಿ ಕೆಲವರಿಗೆ ಹಾರ್ಟ್ ಅಟ್ಯಾಕ್ ಆಗಬಹುದು! ತೊಂಬತ್ತೊಂಬತ್ತು ಪರ್ಸೆಂಟ್ ಮಂದಿಗೆ ಆಗುವುದಿಲ್ಲ! ಆದ್ದರಿಂದಲೇ ದುರಾಡಳಿತೆ, ದುರಾಚಾರ, ದುರ್ನಡತೆ ದುಷ್ಟತನ ಸದಾ ಜೀವಂತ!

ಅಮೆರಿಕನರು ಬೆಲೆ ನೀಡುವುದು ಅಮೆರಿಕದ ಪ್ರಜೆಗೆ ಮತ್ತು ಅಮೆರಿಕದ ನೆಲದಲ್ಲಿ ಸೇವಾನಿರತನಾಗಿರುವ ‘ಮನುಷ್ಯ ಜೀವ’ಕ್ಕೆ ಮಾತ್ರ ಎನ್ನುವುದು ಗಮನೀಯ. ಅವರು ಅಮೂಲ್ಯ ಎಂದು ಪರಿಗಣಿಸುವುದು ಬೇರೆ ದೇಶವನ್ನೂ ಅಲ್ಲ, ಬೇರೆ ದೇಶದಲ್ಲಿರುವ ‘ಮನುಷ್ಯ ಜೀವ’ವನ್ನೂ ಅಲ್ಲ. ಬೇರೆ ದೇಶಕ್ಕೆ ಮರ್ಯಾದೆ ಸಲ್ಲುವುದು ಅವರು ತಮ್ಮ ಆಯುಧಗಳನ್ನು, ಸರಕುಗಳನ್ನು ಕೊಳ್ಳುವುದಾದರೆ ಮಾತ್ರ ಮತ್ತು ಅಮೆರಿಕನ್ ಶೈಲಿಯಲ್ಲಿ ಸೋಶಿಯಲಿಸಮ್ಮನ್ನು ಕೊಲ್ಲಲು ಸಿದ್ಧವಿದ್ದರೆ ಮಾತ್ರ. ಸದ್ಯಕ್ಕೆ ಅಮೆರಿಕೆಗೆ ಅಮೆರಿಕವನ್ನು ಶ್ರೀಮಂತಗೊಳಿಸುವ ಸಾವಿರ ಬಗೆ ಸರಕನ್ನು ತಯಾರಿಸಿಕೊಡುವ ನೂರಾರು ‘ಬಡ ದೇಶ’ಗಳು ಬೇಕು. ಹೊಸ ಹೊಸ ಶಸ್ತಾಸ್ತ್ರಗಳನ್ನು ಕೊಂಡುಕೊಳ್ಳುವ ಇತರ ದೇಶಗಳು ಬೇಕು. ಪರೋಕ್ಷ ವಿಧಾನದಲ್ಲಿ ಆಯುಧಗಳ ಪರೀಕ್ಷಾರ್ಥ ಪ್ರಯೋಗಕ್ಕೂ ಬಕ್ರಾ ಆಗಲು ಸಿದ್ಧವಿರುವ ದೇಶಗಳು ಬೇಕು.

ತನ್ನಲ್ಲಿ ಯಥೇಚ್ಛವಾಗಿ ಬೆಳೆಯುವ ಕಾಯಿಪಲ್ಲೆಗಳನ್ನು, ಹಲವು ಬಗೆಯ ಹಣ್ಣು ಹಂಪಲುಗಳನ್ನು ಅಮೆರಿಕಾ ಬೇರೆ ದೇಶಗಳಿಂದ ತರಿಸಿ ಮಾಲ್‌ನಲ್ಲಿಟ್ಟು ಮಾರುವುದಾದರೂ ಯಾಕೆ? ಅಮೆರಿಕೆಯಲ್ಲಿ ಬಡತನ ಇಲ್ಲವೆ? ಇದೆ. ನಿರಾಶ್ರಿತರು ಇದ್ದಾರೆ. ನಿರಂತರ ‘ಅನಿಕೇತನ’ರು ಇದ್ದಾರೆ. ಇವರಲ್ಲಿ ಬಹಳ ಮಂದಿ ಅದೇ ಸ್ಥಿತಿಯಲ್ಲಿ ಅರೆ ಬದುಕು ಬದುಕುತ್ತಾ ಇರಲು ಬಯಸುತ್ತಾರೆ. ಕಾರಣ ಸರಕಾರ ಅರೆಬದುಕಿಗೆ ತಕ್ಕಷ್ಟು ನಿರುದ್ಯೋಗ ಭತ್ತೆ ನೀಡುತ್ತದೆ. ‘ಬದುಕು’ ನೀಡದ ಇಂಥ ನಿರುದ್ಯೋಗ ಭತ್ತೆ ನೀಡುವ ವ್ಯವಸ್ಥೆ ನಮಗೆ ಅನುಕರಣೀಯವಾದೀತೆ? ಇಡೀ ದೇಶ ಅಂಗಡಿಯಾಗಿ ಎಷ್ಟು ದಿನ ಚೆಂದವಾಗಿ ಉಳಿದೀತು?

ನಿಜಕ್ಕೂ ಸ್ವಲ್ಪ ಅನುಕೂಲವಿದ್ದರೆ ನಿಜವಾದ ದುಡಿತದ, ಆರೋಗ್ಯಕರ ಬದುಕನ್ನು ಬದುಕುವವನು ನಮ್ಮ ರೈತನೇ. ಬಹುಶಃ ಇಲ್ಲಿಯ ರೈತನೂ ಹಾಗೆಯೇ. ಇಲ್ಲಿನ ‘ರೈತ’ ನಮ್ಮಲ್ಲಿಯ ದೊಡ್ಡ ಭೂಮಾಲಿಕನಂತೆ ಕಾಣಿಸುವುದರಿಂದ ಇಲ್ಲಿ ರೈತರೇ ಇಲ್ಲ ಅನಿಸಬಹುದು! ರೈತರಿಲ್ಲದಿದ್ದರೆ ಯಾವುದೇ ದೇಶ ಉಳಿದೀತೆ? ಕೇವಲ ಫ್ಯಾಕ್ಟರಿ ಕಾರ್ಮಿಕರು, ಕೂಲಿಕಾರರು, ಕಾರಿನಲ್ಲಿ ಮಾತ್ರ ಓಡಾಡುವ ಉದೋಗಸ್ಥರು ಒಂದು ದೇಶದ ಆಧಾರಸ್ತಂಭವಾಗಬಹುದೆ? ಚೆಂದದ ಕಟ್ಟಡಗಳು, ರಸ್ತೆಗಳು, ಸುಸಜ್ಜಿತ ಆಸ್ಪತ್ರೆಗಳು, ಶ್ರೇಷ್ಠ ವಿದ್ಯಾಲಯಗಳು ಹೇಗೆ ಉಳಿದಾವು ಹಸಿರು ಮತ್ತು ಹಸಿರಿನ ಜೊತೆ ದುಡಿಯುವ ಜೀವಗಳು ಇಲ್ಲ ಎಂದಾದರೆ?

ಯಾರು ಹಿಂದೆ ಉಳಿದವರು ಯಾರು ಮುಂದೆ ಹೋದವರು ಎನ್ನುವ ಚರ್ಚೆ ಕೂಡ ವ್ಯರ್ಥ. ಈ ಲೆಕ್ಕಾಚಾರಕ್ಕೆ ಔದ್ಯೋಗಿಕರಣ, ವಾಣಿಜ್ಯೀಕರಣವನ್ನು ಮಾನದಂಡವನ್ನಾಗಿ ಇಟ್ಟುಕೊಳ್ಳುವುದು ಒಂದು ಕಾಲದಲ್ಲಿದ್ದ ರೂಢಿಯಾಗಿತ್ತು. ಎಲ್ಲಾ ಇಂಡಸ್ಟ್ರಿಯಲ್ ಸಾಧನ ಸಾಮಗ್ರಿಗಳನ್ನೂ ಬೇರೆ ದೇಶದಿಂದ ತರಿಸಿಕೊಂಡು ಸದಾ ಶಾಂತಿಯಿಂದ ಮತ್ತು ಸಮೃದ್ದಿಯಿಂದಿರುವ ಬಹಳ ಚಿಕ್ಕ ದೇಶಗಳು ಜಗತ್ತಿನಲ್ಲಿವೆ. ಆ ದೇಶಗಳು ತಮ್ಮ ಹೊಟ್ಟೆ ಬಟ್ಟೆಗೆ ಬೇಕಾದಷ್ಟನ್ನು ಬೆಳೆಯುವ ಏರ್ಪಾಡನ್ನು ಮಾಡಿಕೊಂಡಿರುತ್ತವೆ. ಅವುಗಳ ಶಾಂತಿ, ಸಮೃದ್ಧಿ, ಅಭಿವೃದ್ದಿಯನ್ನು ಅಮೆರಿಕೆಗೋ, ಇಂಡಿಯಕ್ಕೋ, ಚೈನಕ್ಕೋ ಹೋಲಿಸಲಿಕ್ಕಾಗದು. ಪ್ರತಿಯೊಂದು ದೇಶವೂ ಮುಂದರಿಯುವ ಹಾದಿ ಅನನ್ಯವಾದುದು. ಮತ್ತು ಅದೇ ಸರಿ. ಬೆಂಗಳೂರನ್ನು ಸಿಂಗಾಪುರ ಮಾಡಲು ಪ್ರಯತ್ನಿಸುವುದು, ಇಂಡಿಯವನ್ನು ಅಮೆರಿಕಾ ಮಾಡಲು ಪ್ರಯತ್ನಿಸುವುದು ಹುಂಬತನವಲ್ಲದೆ ಇನ್ನೇನು? ಅಮೆರಿಕೆಯನ್ನು ಕಂಡು ನಾವು ಹೊಸದಾಗಿ ಕೆಲವನ್ನು ಕಲಿತುಕೊಳ್ಳಬಹುದು. ಅದರಲ್ಲಿ ಮುಖ್ಯವಾದುದು ‘ನಮ್ಮ ಬದುಕು ಹೀಗಿರಬಾರದು’ ಎಂಬುದು.