ಕೆ.ವಿ. ತಿರುಮಲೇಶರ ಎಂಭತ್ತನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಕೆಲವು ಕವಿತೆಗಳ ಬಗ್ಗೆ ರಾಜು ಹೆಗಡೆ ಲೇಖನ.

 

ಈ ಸಣ್ಣ ಎನ್ನುವುದನ್ನು ಹೇಗೆ ನಿರ್ಧರಿಸುವುದು ಎನ್ನುವುದು ದೊಡ್ಡ ಪ್ರಶ್ನೆಯೇ! ಕವಿತೆಯ ಉದ್ದ ನೋಡಿ ಹೇಳುವುದು ಒಂದು ವಿಧಾನ. ಅರ್ಥ ಅನುಭವವನ್ನು ನೋಡುವುದು ಇನ್ನೊಂದು. ಕೆಲವೊಮ್ಮೆ ದೊಡ್ಡ ಪದ್ಯಗಳು ‘ಸಣ್ಣ’ ಪದ್ಯಗಳಾಗಿರುತ್ತವೆ! ಇನ್ನೊಮ್ಮೆ ಇದರ ಉಲ್ಟಾ. ಆದ್ದರಿಂದ ಆ ಸುದ್ದಿಯನ್ನು ಬಿಟ್ಟು ಸುಮ್ಮನೆ ಲೋಕಾರೂಢಿ ಸೈಜಿನ ಮೇಲೆ ಸಣ್ಣ ಪದ್ಯಗಳು ಎಂದು ಇಟ್ಟುಕೊಂಡಿದ್ದೇನೆ.

ನವೋದಯ, ನವ್ಯ, ಬಂಡಾಯ, ಹೀಗೆಲ್ಲ ಹೋಗುವುದು ಬೇಡ. ಅದೇ ರೀತಿ ಅಡಿಗರು, ಶರ್ಮ, ರಾಮಾನುಜನ್, ಇತರರ ಸುದ್ದಿಯನ್ನು ಬಿಡುವಾ! ಕೇವಲ ತಿರುಮಲೇಶರ ಕವಿತೆ ಮಾತ್ರ ನೋಡಿ ಹೇಳಲು ಯತ್ನಿಸುತ್ತೇನೆ. ಒಬ್ಬ ಕವಿ, ಕಲಾವಿದ ಒಂದು ಪರಂಪರೆಯ ಹಿನ್ನೆಲೆಯಿಂದ ಬಂದಿರುತ್ತಾನೆ. ಅವನಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಆ ಭಾಷೆ, ಅವನ “ಭಾಷೆ” ಯಾಗುತ್ತದೆ. ಒಮ್ಮೆ ಪರಂಪರೆಯನ್ನು ಮುರಿದರೂ ಅದರದ್ದೂ ಒಂದು ಪರಂಪರೆ ಇರುತ್ತದೆ! ಆದಷ್ಟು ಕಟ್ಟುನಿಟ್ಟಾಗಿ ತಿರುಮಲೇಶರ ಪದ್ಯಗಳನ್ನು ಹೊಗಲು ನೋಡುತ್ತೇನೆ.

‘ವಠಾರ’ದಿಂದ ಹಿಡಿದು ‘ಅಕ್ಷಯ’, ‘ಅವ್ಯಯ’ ಕಾವ್ಯದವರೆಗಿನ ಹರವಿದೆ ತಿರುಮಲೇಶರ ಕವಿತೆಗಳಲ್ಲಿ. ನಾನು ಅವರ ಓದಲು ಹಣಕಿದ್ದು ತೊಂಭತ್ತರ ದಶಕದಿಂದ. ಮಜಾ ಎಂದರೆ ಈಗಲೂ ನನಗೆ ಆ ‘ಹಳೆಯ’ ಕವಿತೆಗಳನ್ನು ಹಿಡಿದರೆ ಮತ್ತೆ ಹಾಗೇ ಆಗುತ್ತದೆ ಎಂದು ಅನಿಸುತ್ತದೆ! ಒಂದು ಕವಿತೆ ಹೀಗೆ ಸದ್ಯದ ‘ದೇಶ ಕಾಲ’ವನ್ನು ಮೀರುತ್ತದೆ ಎಂದಾದರೆ ಅದಕ್ಕಿಂತ ದೊಡ್ಡದೇನಿದೆ, ಅಲ್ಲವೆ?

ನಾನಿಲ್ಲಿ ಹೇಳುತ್ತಿರುವುದು ಅವರ ಪ್ರಾತಿನಿಧಿಕ ಎನ್ನುತ್ತಾರಲ್ಲ, ಆ ಕವಿತೆಯನ್ನಲ್ಲ. ಸರಳವಾಗಿರುವಂತೆ ಕಾಣುವ, ಆದರೆ ಹಾಗಿಲ್ಲದ, ಸೈಜಿನಲ್ಲಿ ಸಣ್ಣದಾಗಿರುವ ಕವಿತೆಗಳು.

ಆಸನಗಳು

“ನಾಯಿಗಳು ಬೊಗಳುತ್ತವೆ
ಸಾಕಿದವರ ಏಳಿಗೆಗೆ
ಕೋಳಿಗಳು ಹೋರಾಡುತ್ತವೆ
ಮನೆತನದ ಹಿರಿಮೆಗೆ.
ಹೀಗೇ ಸಾಗುತ್ತಾ ಕವಿ,
……ರತಿಯ ಆಸನಗಳು ಕೂಡ
ಪರಿಮಿತವಾಗಿರುವುದರಿಂದ ನಾವು
ನೆರೆಯವರ ವಿಷಯದಲಿ ಆಸಕ್ತರಾಗಿರುವುದು
ಸಹಜವೇ! ” ಎಂದು ಮುಗಿಯುತ್ತದೆ.

ಯಾವುದೂ ಇಲ್ಲಿ ನಿಯತಿ ಕೃತವೂ ಅಲ್ಲ, ನಿಯಮ ರಾಹಿತ್ಯವೂ ಅಲ್ಲ. ಅಸಹಜ ಎಂದುಕೊಳ್ಳುವ ಎಲ್ಲವೂ ಸಹಜವೇ ಆಗಿರುವ ‘ಅಸಹಜ’ ಸ್ಥಿತಿ ನಮ್ಮದು.

ಮನುಷ್ಯರ ಕ್ರೂರ ವಾಸ್ತವವನ್ನು ಹೇಳುವ ‘ನೂರು ಮಂದಿ ಮನುಷ್ಯರು’. ಅದು ಈ ನಮ್ಮ ‘ಕೊರೊನಾ ಕಾಲ’ ದಲ್ಲಿ ಎಷ್ಟು ಸರಿಯಾಗಿದೆ ನೋಡಿ! ಒಂದು ದ್ವೀಪದಲ್ಲಿ ನೂರು ಜನ ಸಿಕ್ಕಿಬಿದ್ದರು. ಅವರಿಗೆ ಎಲ್ಲೂ ಹೋಗುವಂತಿಲ್ಲ. ಒಬ್ಬೊಬ್ಬರಾಗಿ ಮತ್ತೊಬ್ಬರನ್ನು ತಿಂದು ಕೊನೆಗೆ ಒಬ್ಬ ಉಳಿದ. ಆತ ನಿಧಾನವಾಗಿ ತನ್ನನ್ನೇ ತಿನ್ನತೊಡಗಿದ…..” ಅರೇ ಇದೆಲ್ಲ ಹೇಗೆ ಎಂದು ಮೊದಲೇ ಕೇಳಿದ್ದರೆ, ಈಗ ಇಂಥ ಸ್ಥಿತಿ ಯಾರಿಗೂ ಬರುತ್ತಿರಲಿಲ್ಲ.”

….. ಎಲಾ ಇದು ಏನೇನೋ ಹೇಳುತ್ತದೆ, ನಮ್ಮ ತರ್ಕವನ್ನು ತೆಗೆದು ಒಗೆಯುತ್ತದೆ. ಹೀಗೇ ನಮ್ಮನ್ನ ಎಲ್ಲೆಲ್ಲೋ ಮುಟ್ಟಿ ಅಲುಗಾಡಿಸುವುದು ತಿರುಮಲೇಶರ ಕವಿತೆ. ಅವರ ‘ತಿರುವನಂತಪುರ’ ಎಂಬ ಕವಿತೆ ಇದೆ ‘ಮಹಾಪ್ರಸ್ಥಾನ’ ದಲ್ಲಿ. ಅದೂ ಹಾಗೇ ತಿರುತಿರುಗಿಸಿ ಹಾಕುತ್ತದೆ ನಮ್ಮನ್ನು!

‘ಎಲ್ಲಿ ಹೋದಳು ಕತೀಜಾ?’ ಪ್ರಸಿದ್ಧವಾದ ಕವಿತೆ.

ಎಲ್ಲಿ ಹೋದಳು ಕತೀಜ, ನನ್ನ ಮಗಳು
ಮೀನು ತರುತ್ತೇನೆಂದು ಹೋದವಳು
ಬೇಗನೆ ಬರುವೆ ಎಂದವಳು?

ಸಂಜೆಯಾಯಿತು
ಕೊನೆಯ ಬಸ್ಸೂ ಹೊರಟುಹೋಯಿತು
ಏನು ನೋಡುತ್ತ ನಿಂತಳೋ ಏನೊ
ಸಂತೆಯ ದೀಪಗಳಲ್ಲಿ
ಹೊಳೆಯುವ ಬಣ್ಣದ ಲಂಗ
ಪೇಟೆಯವರು ಹಾಕುವಂಥ ಚಪ್ಪಲಿ
ಹೊಸ ನಮೂನೆಯ ಬಳೆಗಳು- ಅವಳ ಆಸೆ.

ಡೊಂಬರಾಟಕ್ಕೆ ಮಾರುಹೋಗುವಳು
ಹೊಸಬರ ಕಂಡರೆ ಬೆರಗಾಗುವಳು
ನಯದ ಮಾತಿಗೆ ಕರಗುವಳು
ಮೀನಿನ ಕೋಪೆ ಹಿಡಿದು ನಿಂತಿರುವಳು
ಎಲ್ಲಿ ಹೋದಳು ಕತೀಜ, ನನ್ನ ಮಗಳು
ಬೇಗನೆ ಬರುವೆ ಎಂದವಳು

ತಾಯಿಯೇ ಇರಬೇಕು ಹೀಗೆ ಹೇಳಿಕೊಂಡಿದ್ದು. ಆದರೆ, ಪಡುವ ಸಂಶಯದ ವಿವರಗಳನ್ನು ನೋಡಿದರೆ ತಂದೆಯೂ ಆಗಿರಬಹುದು ಅನಿಸುತ್ತದೆ! ಮೀನು ತರಲು ಹೋದ ಹುಡುಗಿ ಕತೀಜಾ ಸಂಜೆಯಾದರೂ ಬಂದಿಲ್ಲ. ಅವಳ ಸ್ವಭಾವ ಗೊತ್ತಿದೆ, ಈ ಹೇಳುವವರಿಗೆ. ಅವಳ ಆಸೆ, ಬಯಕೆ ಇತ್ಯಾದಿ. ಅದರಿಂದಲೇ ಅವಳು ಏನಾದರೂ ಭಾನ್ಗಡಿ ಮಾಡಿಕೊಂಡಳೇ ಎಂಬ ಆತಂಕ… ಮುಂದಿನದನ್ನು ತಿರುಮಲೇಶರು ಓದುಗರಿಗೇ ಬಿಡುತ್ತಾರೆ…. ಕವಿತೆ ಮತ್ತೇನನ್ನೂ ಹೇಳುವುದಿಲ್ಲ. ನಾವು ಊಹಿಸಬೇಕು, ಅದು ಏನು ಬೇಕಾದರೂ ಆಗಲಿ!
ಕತೀಜಾಳನ್ನು ಹುಡುಕೋಣ!

‘ಕಲಾಯಿಯವರು’ ಈ ಪದ್ಯ ನೋಡಿ. ಬಹುಶಃ ಈ ತಲೆಮಾರಿನವರಿಗೆ ತೀರ ಅಪರಿಚಿತವಾಗಿರುವ ದೃಶ್ಯ, ಅನುಭವ. ನಾ ನೋಡಿದ್ದೇನೆ; ವರ್ಷಕ್ಕೊಮ್ಮೆ ತಾಮ್ರದ ಪಾತ್ರೆಗೆ ಕಲಾಯಿ ಹಾಕುವವರು ಬರುತ್ತಿದ್ದರು. ಹಾಕಿಸದಿದ್ದರೆ ಪಾತ್ರೆಯಲ್ಲಿ ಮಾಡಿದ ಪದಾರ್ಥಗಳು ಕಿಲುಬಿ ಹೋಗುತ್ತಿದ್ದವು. ಬಂದ ಅವರು ನಿಂತ ಮೆಟ್ಟಿನಲ್ಲಿ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ನೆಲ ಅಗೆದು ಕುಲುಮೆ ಮಾಡಿ, ತಿದಿಯನ್ನು ಸಿದ್ಧಪಡಿಸಿ, ಕೆಂಡದ ಬೆಂಕಿಯನ್ನು ಉರಿಸುತ್ತಿದ್ದರು. ಅದರ ಮೇಲೆ ಪಾತ್ರೆ ಇರಿಸಿ ತವರ ಲೇಪಿಸಿ…. ನೋಡುವ ನಮಗೆ ಎಲ್ಲಿಲ್ಲದ ಕಾತರ, ಕುತೂಹಲ. ಆದರೆ ಅವರಿಗೆ ಅದು ಸಹಜ ಕ್ರಿಯೆ, ವೃತ್ತಿ.”…. ಅವರಿಗೆ ಮಾತ್ರ ಯಾವ ತರಾತುರಿಯೂ ಇಲ್ಲ, ಅವರು ಆ ತಮ್ಮ ಕುಂಡೆಯನ್ನು ತುರಿಸುತ್ತಲೇ ಇರುವರು” ಎಂದು ಪದ್ಯ ಮುಗಿಯುತ್ತದೆ. ಆದರೆ ನಮಗದು ಕಾಡುತ್ತದೆ. ನಾವು ‘ಜೀವ ಹೋಯ್ತು’ ಎಂದು ಹೊಯ್ಕೊಳ್ಳುವ ಸಂಗತಿ ಹಾಗಿರುವುದೇ ಇಲ್ಲ. ಅದು, ಅದಾಗಿಯೇ ಇರುತ್ತದೆ ಎಂದು.

ಕಲಾಯಿಯವರು

ವರ್ಷಕ್ಕೊಮ್ಮೆ ಬರುವ ಕಲಾಯಿಯವರು
ಆಗ ತಾನೆ ಮುಂಗಾರು ಮುಗಿದು ಹಸಿಯಾದ
ಅಂಗಳದಲ್ಲಿ ಠಾಣೆ ಹೂಡುತ್ತಾರೆ.
ಮನೆಯೊಳಗಿಂದ ಹೊರ ಬರುತ್ತವೆ
ಕಿಲುಬು ಹಿಡಿದ ತಾಮ್ರದ ಪಾತ್ರೆಗಳು
ನಾವು ನೋಡುತ್ತಿರುವಂತೆಯೆ ಒಬ್ಬ
ನೆಲ ಅಗೆದು ಕುಲುಮೆ ತಯಾರಿಸುತ್ತಾನೆ

ಇನ್ನೊಬ್ಬ ಕಿಲುಬು ಹೆರೆಯತೊಡಗುತ್ತಾನೆ.
ತುದಿಗಾಲಲ್ಲಿ ಕೂತು ಕಾಯುತ್ತೇವೆ ನಾವು
ಯಾವಾಗ ಪಾತ್ರೆಗಳು ಕುಲುಮೆಯ ಮೇಲೆ
ಬಂದಾವು ಯಾವಾಗ ತಿದಿಯೊತ್ತಿ ಬೆಂಕಿಯ
ಕೆಂಡಗಳು ಹೊಳೆದಾವು ಯಾವಾಗ

ತವರದ ನೀರುಗುಳ್ಳೆಗಳು ಎದ್ದಾವು
ಎಂದು, ಕಲಾಯಿಯವರಿಗೆ ಮಾತ್ರ
ಯಾವ ತರಾತುರಿಯೂ ಇಲ್ಲ, ಅವರು ಆ
ತಮ್ಮ ಕುಂಡೆಗಳನ್ನು ತುರಿಸುತ್ತಲೇ ಇರುವರು.

ಇನ್ನು ‘ಪ್ರಿಯದರ್ಶಿಯಾದ ಅಶೋಕ’ ತಕೊಳ್ಳಿ. ಚಕ್ರವರ್ತಿ, ಕಳಿಂಗ ಯುದ್ಧ, ಬೌದ್ಧ ಧರ್ಮ ಸ್ವೀಕಾರ ಎಲ್ಲ ನಮ್ಮ ತಲೆಗೆ ಬರುತ್ತದೆ. ಆದರೆ ಈ ಕವಿತೆ ಎಲ್ಲ ತಿರಿಗಿಸಿ ಹೊತಾಕುತ್ತದೆ! ಇತಿಹಾಸ ಓದಿದವರು ಏನಾಗಿದ್ದಾರೆ ಈಗ ಎನ್ನುವುದರ ಕಡೆ ಬೆರಳು ಮಾಡುತ್ತದೆ. ಇತಿಹಾಸ ಇತಿಹಾಸವೇ. ವರ್ತಮಾನ ಮೆರೆಯುತ್ತ ಹೋಗುತ್ತದೆ ಎನ್ನುವುದನ್ನು ನಮ್ಮ ಮುಂದಿಡುತ್ತದೆ.

ಇನ್ನೂ ರಾಶಿ ಪದ್ಯಗಳಿವೆ: ಇಲಿಗಳನ್ನು ಕೊಲ್ಲುವುದು, ಕಂಬಳಿ ಹುಳ, ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು, ಚಿಟ್ಟೆಗಳ ಹಿಡಿಯುವುದು ಇತ್ಯಾದಿ.

‘ಮುಖಾಮುಖಿ’ ಸಂಕಲನದಲ್ಲಿರುವ ಅವರ ‘ಕಂಡದ್ದು ಕಂಡ ಹಾಗೆ’ ಎನ್ನುವ ಒಂದು ಕವಿತೆ ಅವರ ಇಂಥ ಕವಿತೆಗಳಿಗೆ ಭಾಷ್ಯ ಬರೆದಂತಿದೆ. ಅದನ್ನು ಇಡಿಯಾಗಿ ಉದ್ಧರಿಸುತ್ತೇನೆ:

ಮನಸ್ಸಿಗೆ ನಾಟುವ ಪ್ರತೀಕಗಳನ್ನು ಬಯಸುವವರಿಗೆ

ಅರ್ಧ ಬೋರಲು ಹಾಕಿದ ಪುಸ್ತಕ,

ಮೇಜಿನ ಮೇಲೆ ತೆಗೆದಿಟ್ಟ ಟೆಲಿಫೋನು,

ಬಟವಾಡೆಯಾಗದೆ ಬಂದ ಪತ್ರ – ಏನೂ
ಅನಿಸುವುದಿಲ್ಲ.

ಬೃಹತ್ತಾದ ಪ್ರತಿಮೆಗಳನ್ನು ಹುಡುಕಿಕೊಂಡು ಹೋದವರು
ರಸ್ತೆ ಚೌಕಗಳಲ್ಲಿ ಮೇಲೆ ನೋಡುತ್ತ ನಿಂತರು

ಕೆಲವರು ಏನು ಧ್ಯಾನಿಸುತ್ತಾರೋ ಅದೇ
ಆಗಬಲ್ಲರು.

ಮಹಾದಾರ್ಶನಿಕರು ಮಹಾದರ್ಶನಗಳನ್ನು ಕೊಡುವರು

ಕೆಲವು ದೃಷ್ಟಿಗೆ ಸಣ್ಣ ವಸ್ತುಗಳು ಬೀಳಲಾರವು

ಉದಾಹರಣೆಗೆ ಈ ಹಿಂದೆ ಹೇಳಿದ

ಅರ್ಧ ಓದಿ

ಬೋರಲು ಹಾಕಿದ ಪುಸ್ತಕ ಅಥವ ಹೊತ್ತಲ್ಲದ ಹೊತ್ತು
ಕಾಮಾಕ್ಷಮ್ಮನ ಹಿತ್ತಲಲ್ಲಿ ಆರಲು ಹಾಕಿದ ಕಾಚ….

ಸಣ್ಣ ಸಣ್ಣ ಕವಿಗಳು ಸಣ್ಣ ಸಣ್ಣ ಕವಿತೆಗಳನ್ನು
ಬರೆಯುತ್ತಾರೆ.

ಆದರೆ ನೆನಪಿಡಿ:

ತಿರುಮಲೇಶರು ದೊಡ್ಡದಾಗಿಯೂ ಬರೆದಿದ್ದಾರೆ. ದೊಡ್ಡದನ್ನೂ ಬರೆದಿದ್ದಾರೆ. ನಾವು ನಮಗೆ ಹೇಳಿಕೊಳ್ಳೋಣ ಇದನ್ನು!

‘ಮಿಂಚಿ ಮಾಯವಾಗದ ಅವರ ಕವಿತೆಗಳ ಮಂದಹಾಸ, ನಮ್ಮದಾಗಲಿ….’

ಕೆ.ವಿ. ತಿರುಮಲೇಶರ ಮತ್ತೆರೆಡು ಕವಿತೆಗಳು

ಗರಗಸ

ಬೆಂಗಳೂರಿನಲ್ಲಿ
ಬೆಂಗಳೂರಿನ ಸೆರೆಮನೆಯಲ್ಲಿರುವ ಖೈದಿಗೆ
ಬೇಕಾದ್ದು ಸಿಗರೇಟಲ್ಲ, ಪುಸ್ತಕವಲ್ಲ,
ಪತ್ರಿಕೆಯಲ್ಲ, ಮಾತಾಡಲು ಜನರಲ್ಲ,
ಪ್ರೇಯಸಿಯಿಂದ ಪತ್ರವಲ್ಲ,
ಬೇಕಾದ್ದು ಗರಗಸ!
ಆಹ್! ಅದೆಷ್ಟು ಮುದ್ದಾದ
ಅಕ್ಷರಗಳಿಂದ ಮಾಡಿದ್ದು!

ಮುಖಗಳು

ಬೆಳಕಿನ ಮುಖಗಳಿವೆ
ಮಣ್ಣಿನ ಮುಖಗಳಿವೆ
ಇವೆರಡರ ನಡುವೆಯೊಂದು
ದಾರಿ ಹುಡುಕುತ್ತೇನೆ
ಮನುಷ್ಯರ ಮುಖಗಳತ್ತ
ಕೊಂಡೊಯ್ಯುವ ದಾರಿ
ಮುಖವಿಲ್ಲದವನು ನಾನು
ನಿನ್ನ ಮುಖ ನನ್ನದು
ಅವನದೂ ನನ್ನದೇ
ಅವಳದೂ ಹೌದು.
ಕೆಲವೊಮ್ಮೆ ಮಂದಿಯ ಮುಂದೆ ಬಂದಾಗ
ನನ್ನ ಸ್ವರೂಪವೇ ಬಿಂಬಿಸಿದಂತೆ
ಅನಿಸುತ್ತದೆ
ಮತ್ತು
ಈ ಬೃಹತ್ ಕೋಣೆಯಲಿ ನನ್ನ ಸ್ವಗತವೇ
ಧ್ವನಿಯಾಗಿ ಪ್ರತಿಧ್ವನಿಯಾಗಿ
ತಮ್ಮಟೆ ಬಾರಿಸುತ್ತದೆ ನಿರಂತರ.
ಇಷ್ಟೆ ಅಲ್ಲ, ಈಡಿಪಸ್, ನೀರೋ, ಶಾಜಹಾನ್
ಹೀಗೆ ಸೀರೆನಿರಿಯಂತೆ
ಅಕ್ಷಯ ಅವತಾರಿಯಾಗಿ
ಕೊರೆದಿದ್ದೇನೆ ಚರಿತ್ರೆಯಲಿ
ನನ್ನ ಮುಖಗಳ ಏರುತಗ್ಗು.

 

(ಕಲಾಕೃತಿ: ವ್ಯಾನ್ ಗಾಗ್)