ಅಮೆರಿಕದ ಕವಯಿತ್ರಿ ಎಮಿಲಿ ಡಿಕಿನ್ಸನ್ (೧೮೩೦-೮೬) ತುಂಬಾ ಸೆನ್ಸಿಟಿವ್ ಕವಿತೆಗಳನ್ನು ಬರೆದವಳು.  ಬದುಕಿನ ಸೂಕ್ಷ್ಮ ವಿಚಾರಗಳೇ ಹೆಚ್ಚಾಗಿ ಅವಳ ಕವನದ ವಸ್ತುಗಳಾಗಿದ್ದವು. ತನ್ನ ಜೀವಿತಕಾಲದಲ್ಲಿ ಅವಳು ಪ್ರಕಟಿಸಿದ್ದು ಆರೋ ಏಳೋ ಕವಿತೆಗಳನ್ನು ಮಾತ್ರ. ಚಿಕ್ಕ ಚಿಕ್ಕ ಕಾಗದದ ತುಂಡುಗಳಲ್ಲಿ ಅವಳು ಬರೆದು ಬಂಡಲುಗಳಾಗಿ ಇರಿಸಿದ ಕವಿತೆಯ ಕಟ್ಟುಗಳು ಅವಳ ಮರಣಾನಂತರ ಸಿಕ್ಕವು. ಇಂದು ಡಿಕಿನ್ಸನ್ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಸಿದ್ಧ ಹೆಸರು. ಡಿಕಿನ್ಸನ್ ಕವಿತೆಗಳಿಗೆ ಶೀರ್ಷಿಕೆಗಳಿಲ್ಲ.  ಆಕೆಯ ಎರಡು ಕವನಗಳನ್ನು ಹಿರಿಯ ಬರಹಗಾರ ಕೆ.ವಿ.ತಿರುಮಲೇಶ್ ಅನುವಾದಿಸಿದ್ದಾರೆ. 

 

ಮರಣಕ್ಕೋಸ್ಕರ ನಾನು ನಿಲ್ಲಲಾರದ್ದಕ್ಕೆ
ಅವನೇ ಕೃಪೆಯಿಂದ ನನಗೋಸ್ಕರ ನಿಂತ;
ಗಾಡಿಯಲ್ಲಿ ಹಿಡಿದದ್ದು ನಾವಿಬ್ಬರು ಮತ್ತು
ಅಮರತ್ವ ಮಾತ್ರ.

ನಿಧಾನವಾಗಿ ಸಾಗಿದೆವು ನಾವು, ಅವಸರ ಅವನಿಗೆ ಗೊತ್ತಿರಲಿಲ್ಲ,
ಹಾಗೂ ಇರಿಸಿದ್ದೆ ನಾನು ದೂರ
ನನ್ನ ಕಾಯಕವ, ಅದೇ ರೀತಿ ನನ್ನ ವಿರಾಮವ ಕೂಡ,
ಅವನ ವಿನಯಕ್ಕೋಸ್ಕರ.

ವೃತ್ತ ಬರೆದು ಅದರೊಳಗೆ ಹುಡುಗರು ಕುಸ್ತಿಯಾಟ ಆಡುತ್ತಿದ್ದ
ಶಾಲೆಯೊಂದನ್ನು ಹಾದೆವು;
ಬಿಡುಗಣ್ಣಲ್ಲಿ ನೋಡುವ ತೆನೆಗಳಿದ್ದ ಹೊಲಗಳನ್ನೂ
ಮುಳುಗುವ ಸೂರ್ಯನನ್ನೂ ಹಾದೆವು.

ಮನೆಯೊಂದರ ಮುಂದೆ ತಡೆದೆವು, ನೆಲದ
ಉಬ್ಬಿನಂತಿತ್ತು ಅದು;
ಕಂಡೂ ಕಾಣಿಸದಂತೆ ಮರೆಯಾದ ಛಾವಣಿ,
ಬಾಜರಗಂಬ ಬರಿಯ ದಿಬ್ಬ.

ಅಂದಿನಿಂದ ಶತಮಾನಗಳಾಗಿವೆ; ಆದರೆ ಒಂದೊಂದೂ
ಸಣ್ಣದೆನಿಸುತ್ತಿದೆ
ಕುದುರೆಗಳ ಮುಖಗಳು ಅನಂತತೆಯ ಕಡೆಗಿವೆಯೆಂದು
ನಾನು ಮೊದಲಿಗೆ ಅಂದಾಜಿಸಿದ ದಿನಕ್ಕಿಂತ.

****

ಇಷ್ಟೂ ವರ್ಷ ಹಸಿದಿದ್ದೆ ನಾನು; ನನ್ನ
ಮಧ್ಯಾಹ್ನ ಬಂದಿತ್ತು, ಊಟಕ್ಕೆ;
ನಡುಗುತ್ತಾ ಮೇಜು ಹತ್ತಿರಕ್ಕೆಳಕೊಂಡೆ,
ಮತ್ತು ಆ ಕುತೂಹಲದ ದ್ರಾಕ್ಷಾರಸವ ಮುಟ್ಟಿನೋಡಿದೆ.

ಮೇಜುಗಳ ಮೇಲೆಯೇ ಕಂಡದ್ದು ನಾನು,
ಹಸಿದು, ಒಬ್ಬಳೇ, ತಿರುಗಿ,
ಗಳಿಸಲಾರದ ಶ್ರೀಮಂತಿಕೆಗೋಸ್ಕರ
ಕಿಟಕಿಗಳಲ್ಲಿ ನೋಡಿದಾಗ.

ಆ ಪುಷ್ಕಳ ಊಟ ನನಗೆ ಗೊತ್ತಿರಲಿಲ್ಲ,
ನಿಸರ್ಗದ ಪಡಸಾಲೆಯಲ್ಲಿ ಹಕ್ಕಿಗಳು ಮತ್ತು ನಾನು
ಎಷ್ಟೋ ಸಾರಿ ಹಂಚಿಕೊಂಡಿದ್ದಂಥ
ಚೂರುಪಾರುಗಳಿಗಿಂತ ತೀರ ಭಿನ್ನವಾಗಿತ್ತು ಅದು.

ಅದರ ಧಾರಾಳತನ ನೋಯಿಸಿತು ನನ್ನ,
ಅದಿನ್ನೂ ಅಷ್ಟೊಂದು ಹೊಸತಾಗಿತ್ತು,-
ಅಸ್ವಸ್ಥಳಾದೆ, ವಿಲಕ್ಷಣವೆನಿಸಿತು, ರಸ್ತೆಯ ಬಳಿ ತಂದು ನೆಟ್ಟ
ಬೆಟ್ಟದ ನೆಲ್ಲಿಯಂತೆ.

ನನ್ನ ಹಸಿವೂ ಇರಲಿಲ್ಲ; ನನಗನಿಸಿತು
ಹಸಿವೆಂದರೆ ಕಿಟಕಿ ಹೊರಗಿರುವ
ಮನುಷ್ಯರದೊಂದು ರೀತಿ, ಒಳ ಬರುವುದದನ್ನು
ಕಿತ್ತುಕೊಳ್ಳುತ್ತದೆ.

****

“ಅವನಲ್ಲಿಗೆ ಹೋಗು! ಸುಖೀ ಪತ್ರವೇ! ಅವನಿಗನ್ನು–
ಅವನಿಗನ್ನು ನಾ ಬರೆದಿರದ ಪುಟವನ್ನು;
ಬರೇ ವಾಕ್ಯರಚನೆಯ ಮಾತ್ರ ನಾ ಹೇಳಿದೆ ಅನ್ನು,
ಕ್ರಿಯಾಪದ, ಸರ್ವನಾಮಗಳ ಬಿಟ್ಟೆ ಅನ್ನು.
ಬೆರಳುಗಳು ಹೇಗೆ ತುಡುಕಿದುವು, ಆಮೇಲೆ ಹೇಗೆ
ನೀರಲ್ಲಿ ನಡೆದ ಹಾಗೆ, ಮೆಲ್ಲಗೇ, ಮೆಲ್ಲಗೇ, ಮೆಲ್ಲಗೇ, ಅನ್ನು;
ಆಮೇಲೆ ನೀನಂದುಕೊಂಡಿ ಪುಟಗಳಲಿ ನಿನಗೆ ಕಣ್ಣುಗಳಿದ್ದಿದ್ದರೆ ಎಂದು,
ಅವುಗಳನು ಆ ರೀತಿ ನಡೆಸಿದ್ದು ಅದು ಯಾವುದು ಎಂದು ನೋಡಲೆಂದು.

“ಅವನಿಗನ್ನು ನೀ ಊಹಿಸಿದ್ದಿ, ವಾಕ್ಯ ಬಸವಳಿದ ಕ್ರಮದಿಂದ,
ಅವಳೇನೂ ಪಳಗಿದ ಬರಹಗಾರ್ತಿಯಲ್ಲ ಎಂದು;
ನಿನ್ನ ಬೆನ್ನಿನ ಹಿಂದೆ, ರವಿಕೆ ತುಡಿಯುವ ಸದ್ದು ಕೇಳಿಸುತಿತ್ತು;
ಅಯ್ಯೋ ಪಾಪ ಅನಿಸುವಂತಿತ್ತು ನಿನಗೆ, ಆ ರೀತಿ ಅದು ದುಡಿಯುತ್ತಿತ್ತು.
ಅವನಿಗನ್ನು-ಇಲ್ಲ, ನೀನಿಲ್ಲಿ ಮಾತು ದ್ವಂದ್ವಾರ್ಥ ಮಾಡುವುದೊಳಿತು,
ಯಾಕೆಂದರೆ ಗೊತ್ತಾದರೆ ಅವನ ಎದೆಯೊಡೆದೀತು,
ಆ ಮೇಲೆ ನೀನೂ ನಾನೂ ಮೌನಾತಿಮೌನಿ.

“ಅವನಿಗನ್ನು ರಾತ್ರಿ ಮುಗಿಯಿತು ನಾವು ಮುಗಿಸುವ ಮೊದಲೆ
ಹಾಗೂ ಹಳೇ ಗೋಡೆಗಡಿಯಾರ ‘ದಿನ!’ವೆಂದು ಕೆನೆಯುತ್ತಲೇ ಇತ್ತು.
ಅಲ್ಲದೆ ನೀನು ನಿದ್ದೆತೂಗುತ್ತಿದ್ದಿ, ಮುಗಿಸೆಂದು ಬೇಡುತ್ತಿದ್ದಿ–
ಅದನ್ನು ತಡೆಯುವಂಥದು ತಾನೆ ಏನೆನ್ನಬಹುದಿತ್ತು?
ಅವನಿಗಂದರೆ ಸಾಕು ಅವಳು ಹೇಗೆ ಮುಚ್ಚಿದಳು ನಿನ್ನ, ಜಾಗ್ರತೆಯಿಂದ,
ಆದರೆ ನಾಳೆ ವರೆಗೆ ನೀನೆಲ್ಲಿ ಅವಿತಿದ್ದಿಯೆಂದು ಕೇಳಿದರೆ-ಓ ಸುಖೀ ಪತ್ರವೇ!
ಮೈ ಬಳುಕು, ವಯ್ಯಾರ ಮಾಡು, ತಲೆಯಾಡಿಸು!”

***

ಹಕ್ಕಿಯೊಂದು ನನ್ನ ಹಾದಿಯಲಿ ಬಂತು
ನಾ ಕಂಡೆನೆಂಬುದು ಅದಕ್ಕೆ ಗೊತ್ತಿರದೆ ಇತ್ತು;
ಅಂಗುಲ ಹುಳವೊಂದನ್ನು ಎರಡಾಗಿ ಕಡಿಯಿತು
ಆಮೇಲದನ್ನು ಹಾಗೇ ನುಂಗಿತು.

ನಂತರ ಇಬ್ಬನಿ ನೀರ ಕುಡಿಯಿತು
ಅನುಕೂಲಕರ ಹುಲ್ಲೊಂದರಿಂದ;
ಆಮೇಲೆ ಗೋಡೆಯ ಕಡೆಗೆ ಅಡ್ಡಡ್ಡ ನಡೆಯಿತು
ದುಂಬಿಯೊಂದು ಎದುರು ಬಂದುದದರಿಂದ.

ಫಕ್ಕ ಫಕ್ಕನೆ ಕಣ್ಣುಗಳ ಹಾಯಿಸಿತು
ಸಮಸ್ತ ಲೋಕದ ಸುತ್ತ,–
ಭಯಭೀತ ಮಣಿಗಳಂತಿದ್ದುವು ಅವು, ನನಗನಿಸಿತು
ಅದು ತನ್ನ ಮಖಮಲ್ಲು ತಲೆ ಕೊಡವುತ್ತ

ಅಪಾಯದಲ್ಲಿರುವಂತೆ; ಜೋಪಾನವಾಗಿ
ನೀಡಿದರೆ ನಾನೊಂದು ರೊಟ್ಟಿಯ ತರಿ
ತಟ್ಟನೇ ರೆಕ್ಕೆ ಬಿಚ್ಚಿ
ತನ್ನ ಮನೆಯತ್ತ ಹೋಯಿತು ಹಾರಿ ಮೀಟಿ ಮೆತ್ತನೆ ಏರಿ

ಗುರುತು ಬಿಡದಷ್ಟು ಬಿಳಿಯಾಗಿ
ಹುಟ್ಟು ಸಾಗರವ ತುಂಡರಿಸುವುದಕ್ಕಿಂತ,
ಅಥವ ಚಿಟ್ಟೆಗಳು ಮಧ್ಯಾಹ್ನದ ದಂಡೆಗಳಿಂದ,
ಹೇಗೆ ಪುಟಿಯುತ್ತವೆ ಈಜುತ್ತ, ನೀರ ಸಪ್ಪಳ ಮಾಡದೆ, ಅದಕ್ಕಿಂತ.

****

ನಾನು ಯಾರೂ ಅಲ್ಲ, ನೀ ಯಾರು?
ನೀ ಯಾರೂ ಅಲ್ಲವಾ?
ಹಾಗಿದ್ರೆ ಒಂದು ಜತೆಯಾಯ್ತು–ಯಾರಿಗೂ ಹೇಳೋದು ಬೇಡ!
ಗಡೀಪಾರು ಮಾಡಿಬಿಡ್ತಾರೆ ನಮ್ಮ, ಗೊತ್ತಲ್ಲ?

ಯಾರಾದರೂ ಆಗಿರೋದೆಂದ್ರೆ ಎಷ್ಟೊಂದು ಬೇಜಾರು!
ಎಷ್ಟೊಂದು ಸಾರ್ವಜನಿಕ, ಒಂದು ಕಪ್ಪೆಯ ಹಾಗೆ
ಬದುಕಿನ ದಿನ ಪರ್ಯಂತ ಹೆಸರು ಹೇಳೋದು
ಕೇಳಿ ತಲೆದೂಗುವ ಕೊಂಪೆಗೆ!

****

ಒಂದು ಪ್ರಯರಿಯ ಮಾಡುವುದಕ್ಕೆ ಬೇಕಾದ್ದು ಒಂದು ಲವಂಗ
ಮತ್ತು ಒಂದು ತುಂಬಿ,–
ಒಂದು ಲವಂಗ, ಒಂದು ತುಂಬಿ,
ಮತ್ತು ಯೋಚನಾ ಲಹರಿ.
ಬರೀ ಯೋಚನಾ ಲಹರಿಯೂ ಸಾಕು,
ಕಡಿಮೆಬಿದ್ದರೆ ತುಂಬಿ ಮರಿ.

[ಪ್ರಯರಿ = ಅಮೆರಿಕಾದಲ್ಲಿರುವ ವಿಶಾಲವಾದ ಹುಲ್ಲುಗಾವಲು ಪ್ರದೇಶಗಳಿಗೆ ಈ ಹೆಸರು]

***

ಈ ಜಗತ್ತೇ ಕೊನೆಯಲ್ಲ;
ಕೊನೆಯಿರುವುದು ಆಚೆಗೆ,
ಅದೃಶ್ಯವಾಗಿ, ಸಂಗೀತದ ತರ,
ಆದರೂ ಗುಣಾತ್ಮಕವಾಗಿ, ಶಬ್ದದ ಹಾಗೆ.
ಅದು ಕರೆಯುತ್ತದೆ, ಕಂಗೆಡಿಸುತ್ತದೆ;
ತತ್ವಜ್ಞಾನಗಳಿಗೂ ಸಿಗದೆ,
ಒಗಟಿನ ಮೂಲಕವೆ, ಕೊನೆಗೂ, ಮತಿವಂತಿಕೆ
ಸಾಗಬೇಕಲ್ಲದೆ.
ಊಹಿಸುವುದಕ್ಕೇ ವೇದಾಂತಿಗಳ ದಿಗ್ಭ್ರಮೆಗೊಳಿಸುತ್ತದೆ;
ಸಾಧಿಸುವುದಕ್ಕೆ ಜನ
ತಲೆಮಾರುಗಳನ್ನೆ ಧಿಕ್ಕರಿಸಿದ್ದಾರೆ,
ಕಲಿತಿದಿದ್ದಾರೆ ಶಿಲುಬೆಗೇರುವುದನ್ನ.

***

ನೀರನ್ನು ಅರಿಯುವುದು ಬಾಯಾರಿಕೆಯಿಂದ;
ನೆಲವನ್ನು ಸರಿದ ಸಮುದ್ರಗಳಿಂದ;
ಪ್ರಯಾಣವನ್ನು ಬವಣೆಗಳಿಂದ;
ಶಾಂತಿಯನ್ನು ಅದರ ಯುದ್ಧವ ಕಥಿಸುವುದರಿಂದ;
ಪ್ರೀತಿಯನ್ನು ಗೋರಿಕಲ್ಲಿನ ಪಾಚಿಯಿಂದ;
ಹಕ್ಕಿಗಳನ್ನು ಹಿಮದಿಂದ.