ಪ್ರೊಫೆಸರ್ ಮಧುಕರ್ ರಾವ್

ನಮ್ಮ ಇಂಗ್ಲಿಷ್ ಪ್ರೊಫೆಸರ್ ಮಧುಕರ್ ರಾವ್
ಟಿಪಿಕಲ್ ಜಂಟ್ಲ್‍ಮನ್ (ಈಗ ಅಪನಗದೀ
ಕರಣಗೊಂಡಿರುವ ಪದ)
ಠೀಕ್ ಠಾಕಿನ ಸೂಟ್
ಅದಕ್ಕೊಪ್ಪುವ ಟೈ ಪಾಲಿಶ್ ಹಾಕಿ ಮಿರುಗುವ ಶೂ
ದಿನವೂ ಶೇವ್ ಮಾಡಿದ ನುಣುಪಾದ ಮುಖ
ನಾವವರನ್ನು ನೆನೆಯುವುದು ಇದಕ್ಕಲ್ಲ

ವಿದ್ಯಾರ್ಥಿಗಳಿಗೆ ತಮ್ಮದೆಲ್ಲವನ್ನೂ ಧಾರೆಯೆರೆದು
ಕೊಡಲು ಬಯಸುವ ಅವರ ಉದಾತ್ತತೆಗೆ
ಸುಂದರವಾದ ಎಂದೂ ಬೇಸರ ಬರಿಸದ ಪಾಠಕ್ಕೆ
ವಿದ್ಯಾರ್ಥಿಗಳನ್ನು ಕಂಡಲ್ಲಿ ಮುಗುಳುನಗೆ ಸೂಸುವ
ಆಪ್ತತೆಗೆ ತಾವು ಕಲಿಸುವ ವಿಷಯದಲ್ಲಿನ ಅನನ್ಯ
ಆಸಕ್ತಿಗೆ ಮಾತ್ರವಲ್ಲ ಟೆನಿಸ್ ಬ್ರಿಜ್ ಪ್ರತಿದಿನದ
ಕ್ರಾಸ್‍ವರ್ಡ್ ಪಝ್ಲ್ ಸಾಲ್ವ್ ಮಾಡಲೇ ಬೇಕು
ಅದರ ವ್ಯಸನವ
ನಮಗೂ ಅಂಟಿಸಬೇಕು ಇನ್ನು ಶೇಕ್ಸಪಿಯರ್, ಕೀಟ್ಸ್,
ವರ್ಡ್ಸ್‌ ವರ್ತ್
Dear God! the very houses seem asleep;
And all that mighty heart is lying still!

ಇನ್ನು ಪದಮೋಹ ಹೇಳುವುದೆ ಬೇಡ ನಿಜಕ್ಕೂ
ಅದು ಪದಮೋಹವಲ್ಲ, ‘ನೆಗೆಟಿವ್ ಕೇಪೆಬಿಲಿಟಿ’
ಹಾಗೆಂದರೇನೆಂದು ಆಗ ನಮಗೆ ನಿಖರವಾಗಿ
ಗೊತ್ತಾಗದೆ ಇದ್ದರೂ-ಈಗ ಗೊತ್ತಾಗಿದೆಯೆಂದಲ್ಲ
ಆದರೆ ಯಾವ ರೀತಿಯಲ್ಲೋ ಇದೆ—
ಅನಿಸುತ್ತದೆ ಹಾಗೆಂದರೆ ಜೀವನವ್ಯಾಮೋಹ
ಪರಕಾಯ ಪ್ರವೇಶ

ಕೀಟ್ಸನ್ನು ಕೀಟ್ ಎಂದು ತಿಳಕೊಂಡ ‘ಗ್ರಾಮೀಣ ಪ್ರತಿಭೆಗಳು’
ನಾವು!
ನಮ್ಮ ಪ್ರೊಫೆಸರರಿಗೆ ಹೇಗೆನಿಸಿರಬೇಡ
ಕುರಿ ಕಾಯುವ ಮೋಸಸ್?

ಹಳೆಕಾಲದ ಪ್ರೊಫೆಸರ್ ಎಂದು ಕ್ಯಾರಿಕೇಚರ್
ಮಾಡುವುದು ಸುಲಭ
ಆದರೆ ಅದು ಮೂರ್ಖತನ
ಅವರೆಂದೂ ಐಡಿಯಾಲಜಿಗಳನ್ನು
ನಮ್ಮ ಮೇಲೆ ಹೇರಲಿಲ್ಲ ಕ್ರಾಂತಿಗಳನ್ನು ಘೋಷಿಸಲಿಲ್ಲ
ಅರ್ಥಾತ್ ನಮ್ಮ ಮಿದುಳು ತೊಳೆಯಲಿಲ್ಲ
ಬದಲು ನಮ್ಮ ನಮ್ಮ ಸಾಧ್ಯತೆಗಳಿಗೆ ನಮ್ಮನ್ನು ಬಿಟ್ಟುಕೊಟ್ಟರು
ಅದಕ್ಕಾಗಿಯೂ ನಮ್ಮ ಕೃತಜ್ಞತೆಗಳು ಸರ್

ಈಗಲಾದರೆ ನನಗೆ ಇಂಗ್ಲಿಷ್ ಕವಿತೆ ಎಂದರೆ ತಕ್ಷಣ
ನೆನಪಾಗುವುದು
ಮಧುಕರ ರಾವ್ ಅದರಲ್ಲೂ
A thing of beauty is a joy forever
ಎಂಬ ಸಾಲು