8 ಟೆಲಿಮಾಖಸ್ಗೆ ಒಡೀಸಿಯಸ್

ಪ್ರಿಯ ಟೆಲಿಮಾಖಸ್,
ಟ್ರೋಜನ್ ಯುದ್ಧ
ಮುಗಿಯಿತು; ಯಾರು ಗೆದ್ದರೋ ನನಗೆ ತಿಳಿಯದು.
ಗ್ರೀಕರೇ ಖರೆ, ಅವರು ಮಾತ್ರವೇ ಅಷ್ಟೂ ಮಂದಿ ಸತ್ತವರ
ತೊರೆಯಬಲ್ಲರು ತಾಯ್ನಾಡಿನಿಂದ ಅಷ್ಟೊಂದು ದೂರ.
ಆದರೂ, ನನ್ನ ಗೃಹಾಗಮನವೊಂದೇ ಇಷ್ಟು ನಿಧಾನ.
ಅನಿಸುವುದು—ನಾವಲ್ಲಿ ಕಾಲಹರಣವ ಗೈಯುತ್ತಿದ್ದಂತೆಯೇ
ಇಲ್ಲಿ ಈ ಹಳೆಯ ಪೋಸಿಡೋನ್ ಮೈಮುರಿದು ಚಾಚಿದ ಹಾಗೆ.

ಎಲ್ಲಿರುವೆ ಯಾವುದೀ ಜಾಗ ಗೊತ್ತಿಲ್ಲ.
ಯಾವುದೋ ಕೊಳಕು ದ್ವೀಪವೇ ಸರಿ,
ಪೊದೆಗಳೂ, ಬಿಡಾರಗಳೂ, ಘೀಳಿಡುವ ಹಂದಿಗಳೂ.
ಕಳೆ ಬೆಳೆದ ತೋಟ; ರಾಜ್ಞಿಯೋ ಅಥವ ಯಾವಳೇ ಆದರೂ.
ಹುಲ್ಲು, ಭಾರೀ ಶಿಲೆಗಳ … ಟೆಲಿಮಾಖಸ್, ಮಗೂ!
ಅಲೆಮಾರಿಗೆಲ್ಲ ನಡುಗಡ್ಡೆಗಳೂ ಕಾಣಿಸುವುವು
ಒಂದೇ ತರ. ತೆರೆಯೆಣಿಸುತ್ತ ಮನಸ್ಸು
ಮುಗ್ಗರಿಸಿ ಬೀಳುವುದು. ಕಡಲ ಕ್ಷಿತಿಜವು ಚುಚ್ಚಿ
ಕಣ್ಣು ತುಂಬುವುದು. ನೀರ ಸೀರಣಿ ಕಿವಿಗೆ ಗಿಡಿಯುವುದು.
ಯುದ್ಧ ಹೇಗಾಯಿತೋ ನನಗೆ ನೆನಪಿಲ್ಲ;
ನಿನ್ನ ವಯಸ್ಸೂ ಕೂಡ—ಈಗ ಗೊತ್ತಿಲ್ಲ.

ಬೆಳೀ, ಹಾಗಾದರೆ, ನನ್ನ ಟೆಲಿಮಾಖಸ್, ಗಟ್ಟಿಮುಟ್ಟಾಗಿ.
ದೇವರಿಗೇ ಗೊತ್ತು ನಾವು ಇನ್ನೊಮ್ಮೆ ಕಾಣುವೆವೋ
ಇಲ್ಲವೋ. ಮುಂಗಾಲ ಕೆರೆವ ಹೋರಿಗಳ ನಿನ್ನೆದುರು
ನಾನು ಪಳಗಿಸಿದಂದು ಹಸುಳೆ ನೀನು—ಈಗ ಬೆಳೆದಿರುವಿ.
ಪಲಮನೈಡೀಸನ ಕಪಟ ಅಲ್ಲದಿರುತ್ತಿದ್ದರೆ
ಒಂದೇ ಮನೆಯಲ್ಲಿ ನಾವು ಇರಬಹುದಾಗಿತ್ತು ಈಗಲೂ.
ಅಥವ ಅವನೇ ಸರಿಯಿದ್ದರೂ ಇರಬಹುದು; ನನ್ನಿಂದ ದೂರ
ನೀನೀಗ ಸಕಲ ಈಡಿಪಸ್ ಕಾಮನೆಗಳಿಂದ ಮುಕ್ತ
ಹಾಗೂ ನಿನ್ನ ಕನಸುಗಳು, ಟೆಲಿಮಾಖಸ್, ದೋಷರಹಿತ.

[ಒಡೀಸಿಯಸ್—ರೋಮನರ ಪ್ರಕಾರ ಯೂಲಿಸಿಸ್—ಟ್ರೋಜನ್ ಯುದ್ಧದಲ್ಲಿ ಭಾಗವಹಿಸಲು
ಇತಾಕಾ ತೊರೆದಾಗ ಅವನ ಮಗ ಟೆಲಿಮಾಖಸ್ ಇನ್ನೂ ಹಸುಳೆ. ಸುದೀರ್ಘ ಯುದ್ಧ ಮುಗಿಸಿಕೊಂಡು
ಹಲವಾರು ಸಾಹಸಗಳಿಗೆ ಒಳಪಟ್ಟು ಒಡೀಸಿಯಸ್ ಮರಳುವ ವೇಳೆಗೆ ಅವನು ಬೆಳೆದು ಯುವಕನಾಗಿರುತ್ತಾನೆ.]

9 ಈನಿಯಸ್ ಮತ್ತು ಡೈಡೋ

ಆ ಮಹಾಮಾನವ ಕಿಟಕಿಯ ಹೊರ ನೋಡಿದನು;
ಇತ್ತ ಇವಳ ಇಡಿಯ ಜಗತ್ತೇ ಅವನ ವಿಶಾಲ
ಗ್ರೀಶಿಯನ್ ಟ್ನೂನಿಕ್ ನ ಅಂಚಿನಲ್ಲಿ ಮುಗಿದಿತ್ತು, ಹಾಗೂ ಅದರ
ನಿರಿಗೆಗಳ ಸಮೃದ್ಧತೆಗೆ, ಎಷ್ಟೋ ವರ್ಷಗಳಿಂದ ನಿಶ್ಚಲ-
ಗೊಂಡ ಸಮುದ್ರ ತರಂಗಗಳ ಘನೀಕೃತ ನೋಟವಿತ್ತು.
ಅವನಿನ್ನೂ ನೋಡುತ್ತಲೇ ಇದ್ದ
ವಿಶಾಲ ಗವಾಕ್ಷಿಯ ಹೊರಗೆ, ದೃಷ್ಟಿಯೂ ಎಷ್ಟೊಂದು ದೂರ:
ತುಟಿ ಮರಗಟ್ಟಿದಂತೆ ಹಾಗೂ ಕಡಲು ಚಿಪ್ಪಿಯ ರೂಪಿಸುವಂತೆ,
ಬಚ್ಚಿಟ್ಟುಕೊಂಡಂತೆ ಅಂತರಂಗದ ನಿಶ್ಶಬ್ದ ಗರ್ಜನೆಯ.
ಥಳಥಳಿಸುವ ದಿಗಂತವೂ ಕೈಯ ಗ್ಲಾಸಿನಲಿ
ತಟಸ್ಥ.
ಇವಳ ಅಪರಿಮಿತ ಪ್ರೇಮವೋ
ಒಂದು ಮೀನಾಗಿ ಕಾಣಿಸಿತು; ಆದರೂ
ಅವನ ಹಡಗಿನ ಹಿಂದೆ ಅದೂ ಹಾರಬಹುದಲ್ಲ ಸಮುದ್ರಕ್ಕೆ,
ತನ್ನ ತೆಳ್ಳಗಿನ ಬಳುಕು ದೇಹದಲಿ ತೆರೆಗಳ ಕೊರೆಯುತ್ತ,
ಹೇಗಾದರೂ ಅವನ ಸೇರಿಕೊಳ್ಳಲು ಬಹುದು—ಒಂದೇ,
ಈತನೀಗಾಗಲೇ ನಡೆದಿದ್ದಾನೆ ಒಣ ನೆಲದಲ್ಲಿ, ಮನದಲ್ಲಿ.
ಕಡಲಾಯಿತು ಹೊಳೆವ ಕಣ್ಣೀರ ಕಡಲು.
ಆದರೂ, ಎಲ್ಲರೂ ತಿಳಿದಂತೆ, ನಮ್ಮ ಸಂಕಟದ
ಉತ್ಕಟ ಕ್ಷಣದಲ್ಲಿ ಹೊಸ ಗಾಳಿಗಳು ಬೀಸುವುವು.
ಆ ಮಹಾವ್ಯಕ್ತಿ ಕಾರ್ತೇಜಿನಿಂದ ತೆರಳಿದನು.
ಡೈಡೋ ಒಬ್ಬಳೇ
ನಿಂತಳು ಕೋಟೆ ಗೋಡೆಯ ಹೊರಗೆ ಸೈನಿಕರು
ಹಚ್ಚಿದ್ದ ಬೆಂಕಿಯ ಮುಂದೆ, ಹಾಗೂ ಅಲ್ಲಿ—
ಧಗೆ ಮತ್ತು ಹೊಗೆಯ ಮಧ್ಯದಲಿ ಕಂಪಿಸುವ
ಒಂದು ದೃಶ್ಯದಲಿ ಎಂಬಂತೆ—ನೋಡಿದಳು ಮಹಾ ಕಾರ್ತೇಜ್ ಸದ್ದುರಹಿತ
ಉರಿದು ಬೀಳುವುದನ್ನು,

ಕೇಟೋನ ಕಾಲಜ್ಞಾನಕ್ಕಿಂತ ಎಷ್ಟೋ ಕಾಲ ಮೊದಲು.

[ಟ್ರಾಯ್ ತೊರೆದು ತನ್ನ ಜನರೊಂದಿಗೆ ಹೊಸ ವಸತಿಸ್ಥಳ ಹುಡುಕುತ್ತಿದ್ದ ಈನಿಯಸ್ ಸ್ವಲ್ಪ ಕಾಲ
ಕಾರ್ತೇಜಿನಲ್ಲಿ ಆತಿಥ್ಯ ಸ್ವೀಕರಿಸುತ್ತಾನೆ. ಕಾರ್ತೇಜಿನ ರಾಣಿ ಡೈಡೋ ಅವನಲ್ಲಿ ಮೋಹಗೊಳ್ಳುತ್ತಾಳೆ.
ಆದರೆ ಕರ್ತವ್ಯಪ್ರಜ್ಞೆಯಿರುವ ಈನಿಯಸ್ ಆ ಊರು ತೊರೆಯಬೇಕಾಗುತ್ತದೆ. ಶೋಕದಲ್ಲಿ ಡೈಡೋ
ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ವರ್ಜಿಲ್ ನ ಈನಿಯಡ್ ಕಾವ್ಯದಲ್ಲಿ ಈ ಪ್ರಸಂಗ ಬರುತ್ತದೆ.
ಈನಿಯಸ್ ರೋಮನ್ ಸಾಮ್ರಾಜ್ಯದ ಮೂಲಪುರುಷ. ರೋಮನ್ ಸಾಮ್ರಾಜ್ಯ ಸ್ಥಾಪಿತವಾದ ಎರಡು
ಶತಮಾನಗಳ ನಂತರದ ಪ್ರಸಿದ್ಧ ರೋಮನ್ ತತ್ವಜ್ಞಾನಿ ಕೇಟೋ. ಮಹಾ ನೈತಿಕನಾದ ಈತ ಕಾರ್ತೇಜನ್ನು
ಸುಟ್ಟುಹಾಕಬೇಕು ಎಂದ ಪ್ರತೀತಿಯಿದೆ.]

10 ಮರುಕದಲಿ ಮತ್ತು ಮಮತೆಯಲಿ

ಎ. ಗೋರ್ಬುನೋವ್ಗೆ

ಮತ್ತೆ ಶಾವಿಗೆ ಪುಲಾವು, ಹಾಗೂ ನೀನು,
ಮಿಕೀವಿಕ್ಸ್, ಸೂಪಿನ ಕಟೋರಿ ಪಕ್ಕಕ್ಕೆ ಸರಿಸಿ ಹೇಳಿದಿ
ಏನೂ ತಿನ್ನುವುದೆ ಬೇಡ ಎಂದು.
ಆ ಕಾರಣ ನಾನೂ ಪರಿಚಾರಕನ ಕಣ್ಣಲ್ಲಿ
ದಂಗೆಕೋರನ ಹಾಗೆ ಕಾಣಿಸುವ ಭಯವಿರದೆ
ಲ್ಯಾಟ್ರಿನಿಗೆ ನಿನ್ನ ಹಿಂಬಾಲಿಸುವುದಾಯ್ತು, ವಿರಾಮದ ವರೆಗೆ ಅಲ್ಲಿ.
`ಜನವರಿ ಕಳೆದು ಯಾವಾಗಲೂ ಫೆಬ್ರವರಿ,
ನಂತರ ಬರುತ್ತದೆ ಮಾರ್ಚ್.’ ಹಗುರ ಮಾತಿನ
ಚೂರುಗಳು. ಹೆಂಚು ಪಿಂಗಾಣಿಗಳು
ಜ್ವಲಿಸಿ, ನೀರು ಸ್ಫಟಿಕದ ಹಾಗೆ ಧ್ವನಿಸಿ.

ಮಿಕೀವಿಕ್ಸ್ ಮಲಕ್ಕೊಂಡ, ಅವನ ಕಣ್ಣುಗಳು
ಕಿತ್ತಳೆ ಬಣ್ಣದ ರಾತ್ರಿದೀಪದ ಮೇಲೆ ನೆಟ್ಟು.
(ತನ್ನ ವಿಧಿಯೇ ಅಲ್ಲಿ ಪ್ರತಿಬಿಂಬಿಸಿದ್ದನ್ನು ಅವನು
ಕಂಡಿರಬಹುದು.) ಬಬನೋವ್ ಪರಿಚಾರಕನ ಹಾಲಿಗೆ
ಕರೆದ. ಕಪ್ಪಿಟ್ಟ ಕಿಟಿಕಿಯ ಬಳಿ ನಾನು ಬೇರುಬಿಟ್ಟವನಂತೆ ನಿಂತೆ.
ಬೆನ್ನ ಹಿಂದಿನಲ್ಲಿ ಟೆಲಿವಿಷನ್ ಸಿಡುಕುತ್ತ ಇತ್ತು.
`ಲೇ ಗೋರ್ಬುನೋವ್, ಆ ದೊಡ್ಡ ಬಾಲದ ಕಡೆ ನೋಡು!’—
`ಮತ್ತೆ ಆ ವಿಲಕ್ಷಣ ಕಣ್ಣು.’ —`ಹಾಗೂ ನೋಡು ನೋಡಲ್ಲಿ
ರೆಂಕೆ ಮೇಲಿನ ದೊಡ್ಡ ಉಬ್ಬು.’ —`ಬಾವಿನ ತರ.’
ಹೀಗೆ ಬಿಟ್ಟ ಬಾಯಿ ಬಿಡುಗಣ್ಣಲ್ಲಿ ನೋಡಿದೆವು
ಶಿಶಿರದ ಆ ಕಿಟಿಕಿಯ ಹೊರಕ್ಕೆ, ಮೀನರಾಶಿಯ ಕಡೆಗೆ
ಹಾಗೂ ಬೋಳಿಸಿದ ನಮ್ಮ ತಲೆಗಳ ಆಡಿಸುತ್ತ, ಎಲ್ಲಿ
ಜನ ನೆಲದ ಮೇಲುಗಿಯುವರೋ ಅಲ್ಲಿ—

ಎಲ್ಲಿ ಕೆಲವೊಮ್ಮೆ ನಮಗೆ ಮೀನುಗಳನಿಕ್ಕುವರೊ ತಿನ್ನಲು
ಚಾಕು ಫೋರ್ಕುಗಳ ಕೊಡದೇ.

[ದೃಶ್ಯ: ಲೆನಿನ್ಗ್ರಾದ್ ನ ಮಾನಸಿಕ ಚಿಕಿತ್ಸಾಲಯ. ವಿಚಾರಣೆಗೆ ಮೊದಲು ಬ್ರಾಡ್ಸ್ಕಿ ಇಲ್ಲಿ ಕೆಲವು ದಿನ
`ಚಿಕಿತ್ಸೆ’ಗೆ ಒಳಗಾಗಿದ್ದ. ಮೀನರಾಶಿ: ನಕ್ಷತ್ರರಾಶಿಯೆಂಬ ಅರ್ಥದಲ್ಲಿ. ಎ. ಗೋರ್ಬುನೋವ್ ಮತ್ತಿತರರು
ಈ ಚಿಕಿತ್ಸಾಲಯದ ನಿವಾಸಿಗಳು ಎಂದು ತಿಳಿದುಕೊಂಡರೆ ಸಾಕು. Gorbunov and Gorchakov ಎಂಬ,
ಇಬ್ಬರು ಬಂದಿಗಳ ನಡುವಣ ಸಂಭಾಷಣಾರೂಪದಲ್ಲಿರುವ, ಬ್ರಾಡ್ ಸ್ಕಿ ಯ ಸುದೀರ್ಘ ಕವಿತೆಯೊಂದು ಇದೆ.]

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)