ಮುಕುಂದಯ್ಯ ಗದ್ದೆ ಕೊಯ್ಲಿಗೆ ಜನರನ್ನು ಗೊತ್ತುಮಾಡಬೇಕು, ಸುಮ್ಮನೆ ಕೂತರೆ ಆಗುವುದಿಲ್ಲ ಎಂದೆಲ್ಲ ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಐತನೊಡನೆ ಚರ್ಚಿಸುತ್ತಿದ್ದಾನೆ. ಚಳಿಗೆ ಬೆಂಕಿಯ ಹತ್ತಿರ ಕಾಯಿಸಿಕೊಳ್ಳುತ್ತಾ ಸಂಸಾರದ ಜವಾಬ್ದಾರಿ ಹೊರಲು ತಯಾರಾಗುವುದು, ವೃತ್ತಿ ಜೀವನದ ಮುಂದಿನ ಕೆಲಸಗಳ ಬಗ್ಗೆ ಕಾಳಜಿ ವಹಿಸುವುದು, ತನ್ನ ಮನದನ್ನೆಯ ಮೂಲಕವೇ ಜೀವನ ಸಾರ್ಥಕತೆಯನ್ನು ಅನುಭವಿಸಲು ಕಾತರಿಸುವುದು ಇದನ್ನೆಲ್ಲ ಓದುತ್ತಿದ್ದಾಗ, ಟಾಲ್ಸ್ಟಾಯ್ ನ “ಅನ್ನಾ ಕರೆನಿನ” ಕಾದಂಬರಿಯ ಕೊನೆ ಕೊನೆಯ ಭಾಗದಲ್ಲಿ ಸ್ಪಷ್ಟವಾಗಿ ಬದಲಾಗುವ ಲೆವಿನ್ ಮನೋಧರ್ಮದ ರೀತಿಯನ್ನು ಕಾಣಬಹುದು.
ಕೆ. ಸತ್ಯನಾರಾಯಣ ಬರೆದ ‘ಚಿನ್ನಮ್ಮನ ಲಗ್ನಮಲೆಗಳಲ್ಲಿ ಮದುಮಗಳ ಕುರಿತ ಟಿಪ್ಪಣಿಗಳು’ ಪುಸ್ತಕದಿಂದ ಒಂದು ಟಿಪ್ಪಣಿ

 

ಕಾದಂಬರಿಯ ಕೊನೆಯ ಅಧ್ಯಾಯದ ಓದು ಮುಗಿಸುತ್ತಿದ್ದಂತೆ ಕಾಲ ಚಕ್ರದ ಒಂದು ಮಹಾಸುತ್ತಿನಲ್ಲಿ ಪರಿಕ್ರಮ ಮಾಡಿ ಮುಗಿಸಿದ ಭಾವ ಮನಸ್ಸನ್ನು ತುಂಬುತ್ತದೆ. ಕಾಲದ ಬದುಕಿನ ಆವರ್ತನ ಲಯ ನಿಜವೋ, ಇಲ್ಲ ಅದರ ನೇರ, ಊರ್ಧ್ವಗಾಮಿ ಆಯಾಮ ನಿಜವೋ? ಪ್ರಜ್ಞಾವಂತಿಕೆಯಿಲ್ಲ ಎಂದು ನಾವು ನಂಬುವ ಪ್ರಾಣಿ ಪ್ರಪಂಚದಲ್ಲಿ ಯಾವುದು ನಿಜ? ಪ್ರಕೃತಿ ಕೂಡ ಕಾಲದ ಆಯಾಮವನ್ನು ಇಡಿಯಾಗಿ ಅನುಭವಿಸುತ್ತದೋ, ಇಲ್ಲ ಪ್ರಕೃತಿಯ ಬೇರೆ ಬೇರೆ ಭಾಗಗಳು ಕಾಲದ ಆಯಾಮವನ್ನು ಗ್ರಹಿಸುವ ರೀತಿಯೇ ಬೇರೆ ಬೇರೆಯಾಗಿರುತ್ತವೆಯೇ? ಒಂದೇ ಮರದ ಬೇರು ಮತ್ತು ಕಾಂಡಗಳು, ಕಾಲವನ್ನು ಗ್ರಹಿಸುವ ರೀತಿ ಬೇರೆ ರೀತಿಯಾಗಿರುತ್ತದೆಯೇ? ಇಂತಹ ಪ್ರಶ್ನೆಗಳನ್ನು ಕಾಲಬದ್ಧ, ದೇಹಬದ್ಧ ಮನುಷ್ಯನ ಜೀವನದ ಹಿನ್ನೆಲೆಯಲ್ಲಿ ಪ್ರಚೋದಿಸುತ್ತಾ ಕಾದಂಬರಿ ಮುಗಿಯುತ್ತದೆ.

ಕಾದಂಬರಿಯ ಕೊನೆಯ ಅಧ್ಯಾಯದಲ್ಲಿ ಬೇಟೆಯಿದೆ. ಐತ ಬಯಸಿದಂತೆ ಅನ್ನೋಣವೆ ಅಥವಾ ಆ ಆವರಣದಲ್ಲಿ ಆ ಜನರ ಸ್ವಭಾವದಲ್ಲಿ ಅದು ನಿತ್ಯ ಸತ್ಯ ಅನ್ನೋಣವೇ. ಕಾಡುಕೋಳಿ, ಹುಂಜ ಬೇಟೆಯಲ್ಲಿ ಸಿಕ್ಕಿ ಆಹಾರವಾಗಿ ಬಳಕೆಯಾಗಲು ಚಿನ್ನಮ್ಮನ ಮನೆ ಸೇರುತ್ತದೆ. ಆದರೆ ಪೀಂಚಲು ತುಂಬು ಗರ್ಭಿಣಿ. ಅವಳು ಹಸಿಯಬಾರದು, ದಣಿಯಬಾರದು, ಅವಳಿಗೆಂದು ಔಷಧಿ ತರಬೇಕು ಎಂಬುದನ್ನು ಕಾದಂಬರಿ ಗಮನಿಸಿ, ಕಾದಂಬರಿಯ ಮುಂದಿನ ಪ್ರಪಂಚದಲ್ಲಿ ಐತ-ಪೀಂಚಲುವಿನ ಮಗುವಿರುತ್ತದೆ ಎಂದು ಕೂಡ ಸೂಚಿಸಲಾಗಿದೆ. ಮುಕುಂದಯ್ಯನ ಸೋದರ ರಂಗಪ್ಪ ಗೌಡ ಈಗಾಗಲೇ ಅಕ್ಕಣಿಯಿಂದ ದೇಹಸುಖವನ್ನು ಅನುಭವಿಸುತ್ತಿದ್ದಾನೆ ಎಂಬ ವಿವರ ಅಕ್ಕಣಿಯ ಪಾತ್ರವನ್ನು ಇನ್ನೂ ಒಂದು ಹೊಸ ನೆಲೆಯಲ್ಲಿ ಗ್ರಹಿಸುವಂತೆ ಪ್ರೇರೇಪಿಸುತ್ತದೆ. ನಾಗಕ್ಕ ಇನ್ನೂ ಮುಟ್ಟಾಗುತ್ತಿದ್ದಾಳೆ ಎಂಬ ಸೂಕ್ಷ್ಮ ವಿವರ ಕೂಡ ಇದೆ. ಅಂದರೆ ಕಾದಂಬರಿ ಮುಗಿಯುವಾಗಲೂ, ವಾಸ್ತವದ, ಅನುಭವದ ಅನೇಕ ಸಂಕೀರ್ಣ ಪದರುಗಳನ್ನು ಎಡಬಿಡದೆ ಗಮನಿಸುತ್ತಲೇ ಹೋಗುತ್ತದೆ.

(ಕೆ. ಸತ್ಯನಾರಾಯಣ)

ಚಿನ್ನಮ್ಮ-ಪೀಂಚಲುವಿನ ಪರಸ್ಪರ ಬೆರಳು ಮುಟ್ಟುವಾಟದಲ್ಲಿ ಮುಗ್ಧತೆಯೂ ಇದೆ, ಭವಿಷ್ಯದ ಬಗ್ಗೆ ಭಯ, ನಿರೀಕ್ಷೆಗಳೂ ಇವೆ. ಆದರೆ ಈ ಬೆರಳು ಮುಟ್ಟುವಾಟ ಆಡುತ್ತಾ ಮುಗ್ಧ ಅಟ್ಟಹಾಸದಿಂದ ನಲಿಯುವುದು ಸಹ್ಯಾದ್ರಿಯ ಆ ಅಡಕೆ ತೋಟಕ್ಕೆ ಚಕ್ಕಳಗುಳಿ ಇಡುತ್ತಿತ್ತು (ಪುಟ. 703) ಎಂಬುದರ ದಾಖಲೆಯೂ ಇದೆ. ಕಾದಂಬರಿಯಲ್ಲಿ ಎರಡನೆ ಬಾರಿ ಎಮ್ಮೆ, ಹಸುಗಳಿಗೆ ತಿಂಡಿಯಾಗಲಿರುವ ಮುರು ತೊಕ ತೊಕ ತೊಕ ಸದ್ದು ಮಾಡಿ, ಆವಿಗಂಪು ಬೀರಿ ಕುದಿಯತ್ತಿತ್ತು ಎಂಬ ವಿವರ ಪ್ರಸ್ತಾಪಕ್ಕೆ ಬರುತ್ತದೆ.

ಗಾಢವಾದ ಪ್ರೀತಿಯಲ್ಲಿದ್ದರೂ ಚಿನ್ನಮ್ಮ-ಮುಕುಂದಯ್ಯ ಇಬ್ಬರೂ ಯಾವಾಗಲೂ ಆತಂಕದಲ್ಲಿದ್ದಾರೆ. ಯಾರಿಗೆ ಏನಾಗುವುದೋ, ಯಾವ ತೊಂದರೆ ಎದುರಾಗಬಹುದೋ ಎನ್ನುವ ಭಯದ ಜೊತೆಗೆ, ಇನ್ನೊಬ್ಬರು ಅವರ ಮನಸ್ಸಿನಲ್ಲಿ ಏನೇನು ಯೋಚಿಸುತ್ತಿರಬಹುದು ಎಂದೆಲ್ಲಾ ಯೋಚಿಸಿ, ನೋಯುವ, ಬೇಯುವ, ಪರಸ್ಪರ ಅನುಮಾನ ಪಡುವ ಮೂಲಕ ಆದಷ್ಟು ಬೇಗ ಲಗ್ನವಾಗಲು, ಸಮಾಗಮ ಹೊಂದಲು ಇಬ್ಬರೂ ಪರಿತಪಿಸುತ್ತಿದ್ದಾರೆ. ಇನ್ನೊಂದು ತಿಂಗಳಲ್ಲೇ ಲಗ್ನವಾಗಬಹುದು, ಜೋಯಿಸರು ಹಗಲು ಹೊತ್ತಿನ ಮುಹೂರ್ತವನ್ನು ಇಟ್ಟುಕೊಡಬಹುದು ಎಂಬ ಮಾತೂ ಕೂಡ ಬರುತ್ತದೆ. ಚಿನ್ನಮ್ಮ ಮುಟ್ಟಾಗುವುದು, ಮುಕುಂದಯ್ಯನಿಗೆ ಅವಳ ಸಾಮೀಪ್ಯ ಸಿಗದೇ ಇರುವುದು, ಅದರಿಂದ ಹುಟ್ಟುವ ಮನಸ್ಸಿನ ಪರಿತಾಪ, ಇದ್ಯಾವುದರ ಪರಿವೆಯೂ ಇಲ್ಲದೆ ಚಿನ್ನಮ್ಮ-ಪೀಂಚಲು ಸರಸವಾಗಿ, ವಿರಾಮವಾಗಿ ಕಾಲ ಕಳೆಯುತ್ತಿರುವುದು ಕಾದಂಬರಿಯ ಗಂಭೀರವಾದ ಮುಕ್ತಾಯಕ್ಕೆ ಹಾಸ್ಯದ ಮತ್ತು ದೈನಿಕದ ಲಯವನ್ನು ಜೋಡಿಸುತ್ತವೆ.

ಕಾದಂಬರಿಯು ಗುತ್ತಿ, ಭರಮೈ ಹೆಗ್ಗಡೆಯವರ ಮನೆಯಿಂದ ಹೊರ ಬೀಳುವುದರ ಮೂಲಕ ಪ್ರಾರಂಭವಾಗುತ್ತದೆ. ಈಗ ಎಲ್ಲರೂ ಹೂವಳ್ಳಿಯ ಮನೆಯೊಳಗೇ ಇರುವುದರಿಂದ ಮುಕ್ತಾಯವಾಗುತ್ತದೆ. ಕಾದಂಬರಿ ಪ್ರಾರಂಭವಾಗುವಾಗ ವಿಪರೀತ ಮಳೆ; ಮುಕ್ತಾಯವಾಗುವಾಗ “ಮುಕುಂದಯ್ಯ ಹೆಬ್ಬಾಗಿಲಾಚೆಗೆ ಕಣ್ಣುಹಾಯಿಸಿದಾಗ, ದಟ್ಟವಾಗಿ ಬೀಳುತ್ತಿದ್ದ ಮಾಗಿಯ ಮಂಜು ಹೊರಗಡೆಯ ಲೋಕಸಮಸ್ತವನ್ನೂ ಆವರಿಸಿ ಆಚ್ಛಾದಿಸಿ ಆಕ್ರಮಿಸಿ ನುಂಗಿಬಿಟ್ಟಿತ್ತು! ಗಿಡ, ಮರ, ಗುಡ್ಡ, ಬೆಟ್ಟ, ಮಲೆ, ಕಾಡು, ಗದ್ದೆ, ತೋಟ, ನೆಲ, ಬಾನು ಒಂದೂ ಇರಲಿಲ್ಲ. ದಟ್ಟೈಸಿ ಸುರಿಯುತ್ತಿದ್ದ ಕಾವಣದ ಮಹಾಶ್ವೇತ ಜಲಪ್ರಲಯದಲ್ಲಿ ಜಗಲ್ಲಯವಾದಂತಿತ್ತು! (ಪುಟ. 712).”

ಕಾದಂಬರಿಯ ಕೊನೆಯ ಎರಡು ಸಾಲುಗಳು ಹೀಗಿವೆ:

“ಚಿನ್ನಮ್ಮ ಪೀಂಚಲು ಇಬ್ಬರೂ ಮಾತು ನಿಲ್ಲಿಸಿ, ನಿದ್ದೆ ಮಾಡುವವರಂತೆ ನಟಿಸುತ್ತಾ, ಗಡದ್ದಾಗಿ ಹೊದ್ದುಕೊಂಡು ಬೆಚ್ಚಗೆ ಮಲಗಿದ್ದರು: ಮುಟ್ಟಾದ ಮೂರು ದಿನವಾದರೂ ಮಲೆನಾಡಿನ ಮಹಿಳೆಯರಿಗೆ ನಿವೃತ್ತಿಜೀವನದ ವಿರಾಮದ ಹಕ್ಕು ಇರುತ್ತಿತ್ತಷ್ಟೆ! (ಪುಟ. 712).” ಇದೊಂದು ರೀತಿಯಲ್ಲಿ ಲಘು ಪ್ರಸ್ತಾಪವೆನ್ನಿಸಿದರೂ, ಹೆಂಗಸರು ತಮ್ಮ ದೇಹದ ಮೇಲೆ ಪಡೆಯಬೇಕಾದ ಹಕ್ಕು, ಸ್ವಾತಂತ್ರ್ಯವನ್ನು ಕೂಡ ಪರೋಕ್ಷವಾಗಿ ಸೂಚಿಸುತ್ತದೆ. ಮದುಮಕ್ಕಳ ಮುಂದಿನ ದಾಂಪತ್ಯದ ಜೀವನದಲ್ಲಿ ಹೆಂಗಸಿಗೆ ತನ್ನ ದೇಹದ ಬಳಕೆಯ ಬಗ್ಗೆ ತಾನೇ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಮತ್ತು ಸ್ವಾತಂತ್ರ್ಯ ಇರಬೇಕು, ಇರುತ್ತದೆ ಎಂಬ ಲೇಖಕರ ಸುಪ್ತ ಮನಸ್ಸಿನ ಬಯಕೆ ಕೂಡ ಇದಾಗಿರಬಹುದು.

ಮುಕುಂದಯ್ಯ ಗದ್ದೆ ಕೊಯ್ಲಿಗೆ ಜನರನ್ನು ಗೊತ್ತುಮಾಡಬೇಕು, ಸುಮ್ಮನೆ ಕೂತರೆ ಆಗುವುದಿಲ್ಲ ಎಂದೆಲ್ಲ ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಐತನೊಡನೆ ಚರ್ಚಿಸುತ್ತಿದ್ದಾನೆ. ಚಳಿಗೆ ಬೆಂಕಿಯ ಹತ್ತಿರ ಕಾಯಿಸಿಕೊಳ್ಳುತ್ತಾ ಸಂಸಾರದ ಜವಾಬ್ದಾರಿ ಹೊರಲು ತಯಾರಾಗುವುದು, ವೃತ್ತಿ ಜೀವನದ ಮುಂದಿನ ಕೆಲಸಗಳ ಬಗ್ಗೆ ಕಾಳಜಿ ವಹಿಸುವುದು, ತನ್ನ ಮನದನ್ನೆಯ ಮೂಲಕವೇ ಜೀವನ ಸಾರ್ಥಕತೆಯನ್ನು ಅನುಭವಿಸಲು ಕಾತರಿಸುವುದು ಇದನ್ನೆಲ್ಲ ಓದುತ್ತಿದ್ದಾಗ, ಟಾಲ್ಸ್ಟಾಯ್ ನ “ಅನ್ನಾ ಕರೆನಿನ” ಕಾದಂಬರಿಯ ಕೊನೆ ಕೊನೆಯ ಭಾಗದಲ್ಲಿ ಸ್ಪಷ್ಟವಾಗಿ ಬದಲಾಗುವ ಲೆವಿನ್ ಮನೋಧರ್ಮದ ರೀತಿಯನ್ನು ಕಾಣಬಹುದು. ಈ ಕಾದಂಬರಿ ಕುವೆಂಪುರವರ ಮೆಚ್ಚಿನ ಕಾದಂಬರಿಯೂ ಹೌದು. ಆದರೆ ಲೆವಿನ್ ಹಾದು ಬಂದ ಒಳತೋಟಿ, ಸಾಮಾಜಿಕ ಆವರಣವೇ ಬೇರೆ, ಮುಕುಂದಯ್ಯನ ಆಯ್ಕೆ ಮತ್ತು ರೂಪಿತವಾಗುತ್ತಿರುವ ಮನೋಧರ್ಮದ ಆವರಣ ಮತ್ತು ಕಾಲಮಾನವೇ ಬೇರೆ ಎಂಬುದನ್ನು ಕೂಡ ಗಮನಿಸಬೇಕು. ಲೆವಿನ್ ಆಯ್ಕೆಯ ಹಿಂದೆಯೂ ಕೂಡ ಒಂದು ಸಾಂಸ್ಕೃತಿಕ ಅನಿವಾರ್ಯತೆಯಿದೆ. ಆದರೆ ಮುಕುಂದಯ್ಯನ ಆಯ್ಕೆಯಲ್ಲಿ, ಮುಂದಿನ ಬದುಕಿನಲ್ಲಿ ದಾರ್ಶನಿಕತೆ ಮತ್ತು ಐತಿಹಾಸಿಕ ಅನಿವಾರ್ಯತೆ ಇದೆ ಎನ್ನುವುದನ್ನು ಕೂಡ ಕಾದಂಬರಿ ಉದ್ದಕ್ಕೂ ಸೂಚಿಸುತ್ತಲೇ ಬಂದಿದೆಯಷ್ಟೇ.

ಈ ಎರಡೂ ಆಯ್ಕೆಗಳ ಅಭಿವ್ಯಕ್ತಿಯ ಹಿಂದೆ ಲೇಖಕರ ಸುಪ್ತ ಮನಸ್ಸಿನ ಬಯಕೆ ಕೆಲಸ ಮಾಡಿರುವ ರೀತಿಯನ್ನು ಕೂಡ ಗಮನಿಸಬಹುದು. ಅನ್ನಾ ಕಾದಂಬರಿ ಬರೆದಾಗ ಟಾಲ್ಸ್ಟಾಯ್ ಗೆ 50ರ ಆಸುಪಾಸು. ಕುವೆಂಪು ಮದುಮಗಳು ಕಾದಂಬರಿಯ ಕೆಲವು ಪುಟಗಳನ್ನು (80) 1930ರ ದಶಕದಲ್ಲೇ ಬರೆದಿದ್ದು, 1960ರ ದಶಕದ ಕೊನೆಯ ಭಾಗದಲ್ಲಿ ಕೃತಿ ಪ್ರಕಟವಾಯಿತು.

ಮುಕುಂದಯ್ಯ ಹೂವಯ್ಯನ ಹಿಂದಿನ ತಲೆಮಾರಿನವನೋ, ಇಲ್ಲ ನಂತರದ ತಲೆಮಾರಿನವನೋ? ಮಾನಸಿಕವಾಗಿ ಮತ್ತು ದೈಹಿಕವಾಗಿ? ಕುವೆಂಪು ಯಾರಿಗೆ ಹತ್ತಿರ ಮತ್ತು ಎಷ್ಟು ಹತ್ತಿರ? ಹೂವಯ್ಯ-ಮುಕುಂದಯ್ಯ-ಕುವೆಂಪು ಎಲ್ಲರೂ ಒಬ್ಬರೇ ಕೂಡ ಆಗಿರಬಾರದೇಕೆ? ತೇಜಸ್ವಿ ಇವರೆಲ್ಲರನ್ನೂ ಒಳಗೊಂಡರೇ? ತೇಜಸ್ವಿಯವರ ನಂತರದ ಮುಂದಿನ ಮಲೆನಾಡಿನ ಒಕ್ಕಲಿಗ ಸಮಾಜ? ಕಾದಂಬರಿಯ ಆಶಯಗಳಿಗನುಗುಣವಾಗಿಯೇ ಈ ಸಮಾಜ ಮತ್ತು ಮಲೆನಾಡು ಬದುಕನ್ನು ರೂಪಿಸಿಕೊಂಡಿದೆಯೇ? ಇಲ್ಲ, ಕುವೆಂಪುರನ್ನು ಸುಮ್ಮನೆ ಆರಾಧಿಸಿದೆಯೇ? ಒಂದು ಶ್ರೇಷ್ಠ ಕಾದಂಬರಿ ಕೂಡ ಮುಂದಿನ ತಲೆಮಾರಿನ ಬದುಕಿನ ಮೇಲೆ ಅದೆಷ್ಟು ಪ್ರಭಾವ ಬೀರಬಲ್ಲದು, ಬೀರಬೇಕು?

 

(ಕೃತಿ: ಚಿನ್ನಮ್ಮನ ಲಗ್ನ (ಮಲೆಗಳಲ್ಲಿ ಮದುಮಗಳ ಕುರಿತ ಟಿಪ್ಪಣಿಗಳು), ಲೇಖಕರು: ಕೆ.ಸತ್ಯನಾರಾಯಣ, ಪ್ರಕಾಶಕರು: ಅಂಕಿತ ಪ್ರಕಾಶನ, ಬೆಲೆ: 170)