“ಸ್ವಾಮಿಗಳೇ, ಆಧಾರವಿಲ್ಲದೆ ಮಾತಾಡುವ ಪೈಕಿಯವನಲ್ಲ ನಾನು.ನನ್ನ ತಂದೆಯವರ ಕಾಲದಲ್ಲಿ ಕೊಡಗಿನ ದರೋಡೆಕೋರರ ದಂಡು ತುಳುನಾಡಿಗೆ ಇಳಿಯಿತು.ಹೊಂಬಾಳೆ ನಾಯಕ ಮತ್ತು ಗೋಪಗೌಡ ಅದರ ಮುಖಂಡರು. ಅವರು ಉದ್ದಕ್ಕೂ ತುಳು ನಾಡನ್ನು ದೋಚುತ್ತಾ ಹೋದರು.ಆಗ ತುಳುನಾಡಿನಲ್ಲಿ ಟಿಪ್ಪುವಿನ ಆಡಳಿತ ಇತ್ತು ನೋಡಿ. ಕೊಡಗಿನ ಕಾಟಕಾಯಿ ತಂಡ ಬಂಟವಾಳವನ್ನು ಸಂಪೂರ್ಣವಾಗಿ ದೋಚಿತು. ನಮ್ಮ ವೆಂಕಟರಮಣ ದೇವರ ವಿಗ್ರಹವನ್ನೂ ಬಿಡಲಿಲ್ಲ”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಹದಿನೈದನೆಯ ಕಥಾನಕ.

 

ರೈತದಂಡು ಬೆಳ್ಳಾರೆ, ಪುತ್ತೂರುಗಳನ್ನು ಗೆದ್ದು ನಂದಾವರ ದೇವಾಲಯದ ಮುಂಭಾಗದ ತೇರಮಜಲಿನಲ್ಲಿ ಬೀಡುಬಿಟ್ಟಿತ್ತು. ನಂದಾವರದ ಬಂಗರಸ ತನ್ನ ಪುಟ್ಟ ಪಡೆಯೊಡನೆ ರೈತ ದಂಡನ್ನು ಸೇರಿಕೊಂಡಿದ್ದ. ದೇವಾಲಯದ ಸಭಾಮಂಟದಲ್ಲಿ ಪುಟ್ಟ ಬಸವ ಎತ್ತರದ ಪೀಠದಲ್ಲಿ ಕುಳಿತಿದ್ದ. ಕೆಳಗೆ ನೆಲದಲ್ಲಿ ಹುಲಿ ಕಡಿದ ನಂಜಯ್ಯ, ಕೆದಂಬಾಡಿ ರಾಮಗೌಡ, ಬಂಗರಸ ಮತ್ತು ದೇವಾಲಯದ ಮೊಕ್ತೇಸರ ಕಾಂತು ಭಂಡಾರಿ ಈಚಲ ಚಾಪೆಯಲ್ಲಿ ಕುಳಿತಿದ್ದರು. ಅವರು ಏನೋ ಗಹನವಾದ ಚರ್ಚೆಯಲ್ಲಿ ತೊಡಗಿದ್ದರು. ಆಗ ಆ ಗುಂಪು ಒಳಗೆ ಬಂತು. ಅದರಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಇದ್ದರು. ಅವರ ಹಣೆಯಲ್ಲಿ ತಿರುಪತಿ ನಾಮಗಳಿದ್ದವು. ತಲೆಗೆ ಬಿಳಿಟೊಪ್ಪಿ ಹಾಕಿಕೊಂಡಿದ್ದರು. ಗುಂಪಿನ ಮುಂಭಾಗದಲ್ಲಿದ್ದ ಗುಡಾಣ ಹೊಟ್ಟೆಯ ಗುಜ್ಜಾನೆ ಮರಿಯಂತಿದ್ದ ಕುಳ್ಳ ಆಸಾಮಿ ಪುಟ್ಟ ಬಸವನ ಎದುರು ನಿಂತು ಪ್ರಶ್ನಿಸಿದ

“ಕಲ್ಯಾಣ ಸ್ವಾಮಿಗಳು ಎಂದರೆ ನೀವೇಯೋ?”
“ಹೌದು ನಾನೇ. ದಯವಿಟ್ಟು ಕುಳಿತುಕೊಳ್ಳಿ. ನೀವು ಯಾರೆಂದು ತಿಳಿಯಲಿಲ್ಲ.”
ಅಲ್ಲಿ ಬೇರೆ ಆಸನವಿರಲಿಲ್ಲ. ಬಂದವರು ನೆಲದಲ್ಲೇ ಕುಳಿತುಕೊಳ್ಳಬೇಕಿತ್ತು. ಬಂಗರಸನಿಗೆ ಗುಂಪಿನ ಮುಖಂಡನ ಪರಿಚಯವಿತ್ತು.

“ಇಲ್ಲಿಂದ ಮೇಲೆ ಎರಡು ಮೈಲಿ ದೂರದಲ್ಲಿ ನೇತ್ರಾವತಿಯ ಬಲ ದಂಡೆಯಲ್ಲಿ ಬಂಟವಾಳ ಪೇಟೆ ಇದೆ ಸ್ವಾಮಿ. ಅಲ್ಲಿ ವೆಂಕಟರಮಣ ಸ್ವಾಮಿಯ ದೇವಾಲಯವಿದೆ. ಇವರು ಅದರ ಆಡಳಿತ ಮೊಕ್ತೇಸರ ರಂಗ ಬಾಳಿಗರು. ತುಳುನಾಡಿನ ದೊಡ್ಡ ವರ್ತಕರಲ್ಲಿ ಇವರೂ ಒಬ್ಬರು. ಅರಬ್ಬಿ ಸಮುದ್ರದಿಂದ ಬಂಟವಾಳದವರೆಗೆ ನಾವೆಗಳು ಬರುತ್ತವೆ. ಇವರು ಅರಬ್ ದೇಶಗಳಿಗೆ ಅಕ್ಕಿ ರಫ್ತು ಮಾಡುತ್ತಾರೆ. ಇಡೀ ತುಳು ನಾಡಿಗೆ ಉಪ್ಪು ಮತ್ತು ಹೊಗೆಸೊಪ್ಪು ವಿತರಿಸುವುದು ಇವರೇ. ಇಂಗ್ಲಿಷರಿಗೆ ತುಂಬಾ ತುಂಬಾ ಬೇಕಾದವರು.”
ಬಂಗರಸ ಕೊನೆಯ ವಾಕ್ಯವನ್ನು ಬೇಕೆಂದೇ ಒತ್ತಿ ಹೇಳಿದ. ಪುಟ್ಟಬಸವನ ಮುಖದಲ್ಲಿ ಕಂಡೂ ಕಾಣದಂತಹ ನಗುವೊಂದು ಮೂಡಿ ಮಾಯವಾಯಿತು.

“ಹೇಳಿ ರಂಗ ಬಾಳಿಗರೇ, ನಮ್ಮಿಂದ ನಿಮಗೆ ಯಾವ ಸಹಾಯವಾಗಬೇಕು? ನಂದಾವರದ ಬಂಗರಸರು ನಮ್ಮ ಜತೆ ಸೇರಿಕೊಂಡಿದ್ದಾರೆ. ನೀವೂ ಸೇರಿಕೊಂಡರೆ ನಮ್ಮನ್ನು ಸುಲಿಯುವ ಆ ಬ್ರಿಟಿಷರನ್ನು ನಮ್ಮ ತಾಯ್ನೆಲದಿಂದ ಓಡಿಸಿ ನಾವು ಸ್ವತಂತ್ರರಾಗಬಹುದು. ಏನು ನಿಮ್ಮ ಅಭಿಪ್ರಾಯ?”

ಅಂತಹ ಮಾತನ್ನು ರಂಗ ಬಾಳಿಗ ನಿರೀಕ್ಷಿಸಿರಲಿಲ್ಲ. ಒಂದು ಕ್ಷಣ ತಬ್ಬಿಬ್ಬಾದವನು ಸಾವರಿಸಿಕೊಂಡು ಮಾತಾಡಿದ.

“ನಿಮ್ಮ ಹೆಸರಲ್ಲಿ ನಮ್ಮ ದೇವಾಲಯಕ್ಕೊಂದು ಪತ್ರ ಬಂದಿದೆ. ಆದರೆ ನೀವು ಕೊಡಗಿನ ರಾಜ್ಯಪಾಲರು ಹೌದೋ ಅಲ್ಲವೋ ಎಂಬ ಬಗ್ಗೆಯೇ ನಮ್ಮೆಲ್ಲರಲ್ಲಿ ಸಂದೇಹಗಳಿವೆ. ನಿಮ್ಮದು ದರೋಡೆಕೋರರ ದಂಡು ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಕಲ್ಯಾಣಪ್ಪನ ಕಾಟಕಾಯಿ ಎಂಬ ಮಾತು ನಮ್ಮಲ್ಲಿ ಕೇಳಿ ಬರುತ್ತಿದೆ. ನಾನು ನಿಜವನ್ನು ಹೇಳುತ್ತಿರುವುದಕ್ಕೆ ಸ್ವಾಮಿಗಳು ಕ್ಷಮಿಸಬೇಕು.”
ಪುಟ್ಟ ಬಸವನಿಗೆ ಸಿಟ್ಟು ಬರಲಿಲ್ಲ.

“ಹೀಗೆ ಆಡಿಕೊಳ್ಳುತ್ತಿರುವುದಕ್ಕೆ ಕಾರಣವೇನು ರಂಗ ಬಾಳಿಗರೇ.”

“ಸ್ವಾಮಿಗಳೇ, ಆಧಾರವಿಲ್ಲದೆ ಮಾತಾಡುವ ಪೈಕಿಯವನಲ್ಲ ನಾನು. ನನ್ನ ತಂದೆಯವರ ಕಾಲದಲ್ಲಿ ಕೊಡಗಿನ ದರೋಡೆಕೋರರ ದಂಡು ತುಳುನಾಡಿಗೆ ಇಳಿಯಿತು. ಹೊಂಬಾಳೆ ನಾಯಕ ಮತ್ತು ಗೋಪಗೌಡ ಅದರ ಮುಖಂಡರು. ಅವರು ಉದ್ದಕ್ಕೂ ತುಳು ನಾಡನ್ನು ದೋಚುತ್ತಾ ಹೋದರು. ಆಗ ತುಳುನಾಡಿನಲ್ಲಿ ಟಿಪ್ಪುವಿನ ಆಡಳಿತ ಇತ್ತು ನೋಡಿ. ಕೊಡಗಿನ ಕಾಟಕಾಯಿ ತಂಡ ಬಂಟವಾಳವನ್ನು ಸಂಪೂರ್ಣವಾಗಿ ದೋಚಿತು. ನಮ್ಮ ವೆಂಕಟರಮಣ ದೇವರ ವಿಗ್ರಹವನ್ನೂ ಬಿಡಲಿಲ್ಲ. ಆಮೇಲೆ ನನ್ನ ಅಪ್ಪ ಒಂದು ನಿಯೋಗದೊಡನೆ ಮಡಿಕೇರಿಗೆ ಹೋಗಿ ದೊಡ್ಡವೀರ ಮಹಾಪ್ರಭುಗಳಲ್ಲಿ ವಿಷಯ ಅರಿಕೆ ಮಾಡಿ ಮೂರ್ತಿಯನ್ನು ತರಬೇಕಾದರೆ ಸಾಕುಸಾಕಾಗಿ ಹೋಯಿತು. ಕೊಡಗರು ದರೋಡೆಕೋರರೆಂಬುದಕ್ಕೆ ಬೇರೆ ಸಾಕ್ಷಿ ಬೇಕಾ ಸ್ವಾಮಿಗಳೇ?” ಹುಲಿಕಡಿದ ನಂಜಯ್ಯನೆಂದ.

“ಅದು ಟಿಪ್ಪುವಿನ ಹೆಸರು ಕೆಡಿಸಲೆಂದು ಇಂಗ್ಲಿಷರು ದೊಡ್ಡ ವೀರರಾಜರಿಂದ ಬಲಾತ್ಕಾರವಾಗಿ ಆ ಕೆಲಸ ಮಾಡಿಸಿದ್ದು ಬಾಳಿಗರೇ. ಇದೇ ಇಂಗ್ಲಿಷರು ಮಂಗಳೂರಲ್ಲಿ ಚರ್ಚುಗಳಿಗೆ ಬೆಂಕಿ ಇಟ್ಟು ಅದು ಟಿಪ್ಪುವಿನ ಕೃತ್ಯವೆಂದು ಅಪಪ್ರಚಾರ ಮಾಡಿ ಕ್ರಿಶ್ಚಯನ್ನರು ಟಿಪ್ಪುವಿಗೆ ತಿರುಗಿ ಬೀಳುವಂತೆ ಮಾಡಿದರು. ನಮ್ಮ ನಾಡನ್ನು ಧರ್ಮದ ಆಧಾರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಯನ್ ಎಂದು ಒಡೆದು ಆಳುವ ಇಂಗ್ಲಿಷರು ನಿಮಗೆ ಕೊಡಗರಿಗಿಂತ ಆಪ್ತರಾಗಿರುವುದು ಈ ನಾಡಿನ ದುರ್ದೈವ.”

ಈ ಮಾತಿಗೆ ರಂಗ ಬಾಳಿಗ ತಬ್ಬಿಬ್ಬಾಗಿ ಹೋದ.
ಪುಟ್ಟ ಬಸವ ಸಮಾಧಾನದ ಮಾತನ್ನಾಡಿದ.

“ದೊಡ್ಡವೀರ ರಾಜರ ಕಾಲದಲ್ಲಿ ತಪ್ಪು ಘಟಿಸಿದ್ದರೆ ಕೊಡಗಿನ ಪ್ರತಿನಿಧಿಯಾಗಿ ನಾನು ಕ್ಷಮೆಯಾಚಿಸುತ್ತಿದ್ದೇನೆ. ಅದನ್ನು ಮರೆತುಬಿಡೋಣ. ಕೊಡಗರಿಂದ ಬೇರೆ ಏನಾದರೂ ತಪ್ಪು ಸಂಭವಿಸಿದೆಯೇ?”
ರಂಗ ಬಾಳಿಗನ ಮುಖ ವಿಕಸಿಸಿತು.

ಕೊಡಗಿನ ಕಾಟಕಾಯಿ ತಂಡ ಬಂಟವಾಳವನ್ನು ಸಂಪೂರ್ಣವಾಗಿ ದೋಚಿತು. ನಮ್ಮ ವೆಂಕಟರಮಣ ದೇವರ ವಿಗ್ರಹವನ್ನೂ ಬಿಡಲಿಲ್ಲ. ಆಮೇಲೆ ನನ್ನ ಅಪ್ಪ ಒಂದು ನಿಯೋಗದೊಡನೆ ಮಡಿಕೇರಿಗೆ ಹೋಗಿ ದೊಡ್ಡವೀರ ಮಹಾಪ್ರಭುಗಳಲ್ಲಿ ವಿಷಯ ಅರಿಕೆ ಮಾಡಿ ಮೂರ್ತಿಯನ್ನು ತರಬೇಕಾದರೆ ಸಾಕುಸಾಕಾಗಿ ಹೋಯಿತು. ಕೊಡಗರು ದರೋಡೆಕೋರರೆಂಬುದಕ್ಕೆ ಬೇರೆ ಸಾಕ್ಷಿ ಬೇಕಾ ಸ್ವಾಮಿಗಳೇ?”

“ಹೌದು ಸ್ವಾಮಿಗಳೇ, ನೀವು ಕೊಡಗರು ದರೋಡೆಕೋರರು ಮಾತ್ರವಲ್ಲ, ಹೆಣ್ಣು ಕಳ್ಳರೂ ಕೂಡಾ. ಆ ಘಟನೆ ನಿಮಗೆ ನೆನಪಿರಬಹುದು. ಚಿಕ್ಕ ವೀರರಾಜರ ಕಾಲದಲ್ಲಿ ದಿವಾನ ಕುಂಟ ಬಸವ ಇಲ್ಲಿಗೆ ಬಂದಿದ್ದ. ಈ ದೇವಾಲಯದ ಅರ್ಚಕರ ಮಗ ಪಾಣೆ ಸೂರ್ಯನ ಹೆಂಡತಿಯನ್ನು ಹಾರಿಸಿಕೊಂಡು ಹೋಗಿದ್ದ. ಇದು ಮನುಷ್ಯರು ಮಾಡುವ ಕೃತ್ಯವಾ ಸ್ವಾಮಿ?”

ಕಂದಿದ ಮುಖದಿಂದ ಪುಟ್ಟ ಬಸವನೆಂದ,
“ತಪ್ಪು ಯಾರೇ ಮಾಡಿದ್ದರೂ ಅಂತಿಮವಾಗಿ ಅದಕ್ಕೆ ರಾಜನೇ ಹೊಣೆಗಾರನಾಗುತ್ತಾನೆ. ವೆಂಕಟರಮಣ ದೇವಾಲಯದ ಮೂರ್ತಿಯನ್ನು, ಪಾಣೆ ಸೂರ್ಯನ ಹೆಂಡತಿಯನ್ನು ಒಯ್ದದ್ದು ಕ್ಷಮೆಯೇ ಇಲ್ಲದ ತಪ್ಪುಗಳು. ಅದಕ್ಕಾಗಿ ನಾನು ಮತ್ತೊಮ್ಮೆ ಕ್ಷಮೆ ಯಾಚಿಸುತ್ತೇನೆ.”
ರಂಗ ಬಾಳಿಗ ಗೆಲುವಿನ ನಗೆ ನಕ್ಕ.

“ನಮ್ಮ ಆಕ್ಷೇಪ ಹಿಂದೆ ಘಟಿಸಿ ಹೋದದ್ದರ ಬಗ್ಗೆ ಅಲ್ಲ. ನಿನ್ನೆ ನಮ್ಮ ಅಂಗಡಿಗೆ ಬಂದು ನಿಮ್ಮ ದಂಡಿನವರು ಹತ್ತು ಮುಡಿ ಅಕ್ಕಿ ಕೇಳಿದರು. ನಾನು ಇಲ್ಲವೆಂದರೂ ನಮ್ಮ ಗೋದಾಮಿಗೆ ನುಗ್ಗಿ ಇಪ್ಪತ್ತೈದು ಮುಡಿ ಹೊತ್ತುಕೊಂಡು ಹೋದರು.”
ತಕ್ಷಣ ಕೆದಂಬಾಡಿ ರಾಮಗೌಡ ಕೇಳಿದ.

“ಹತ್ತು ಮುಡಿ ಅಕ್ಕಿ ಇಲ್ಲದವರ ಗೋದಾಮಿನಲ್ಲಿ ಇಪ್ಪತ್ತೈದು ಮುಡಿ ಅಕ್ಕಿ ಎಲ್ಲಿಂದ ಬಂತು ಬಾಳಿಗರೇ?”
“ನನ್ನ ಗೋದಾಮಿನಲ್ಲಿ ಅಕ್ಕಿ ಇದ್ದದ್ದು ನಿಜ. ಅದು ಹೊರ ದೇಶಕ್ಕೆ ರಫ್ತು ಮಾಡಲೆಂದು ಇಟ್ಟಿದ್ದೇ ಶಿವಾಯಿ, ಯಾರಿಗೂ ಮಾರಲಿಕ್ಕಲ್ಲ. ಕೊಡುವುದಿಲ್ಲವೆಂದು ಹೇಳಿದ ಮೇಲೆ ಬಲಾತ್ಕಾರದಿಂದ ಗೋದಾಮಿಗೆ ನುಗ್ಗಿ ಮುಡಿ ಅಕ್ಕಿ ಒಯ್ದದ್ದು ತಪ್ಪಲ್ಲವೇ ಸ್ವಾಮಿಗಳೇ?”
“ನಿನ್ನೆ ರಂಗ ಬಾಳಿಗರ ಗೋದಾಮಿನಿಂದ ಅಕ್ಕಿ ತಂದವರು ಯಾರು ರಾಮಗೌಡರೇ?”
“ಊಕಣ್ಣ ಬಂಟರ ತಂಡದವರು ಸ್ವಾಮಿ.”
“ಅವರನ್ನು ಬರಹೇಳಿ.”

ರಾಮಗೌಡ ಊಕಣ್ಣ ಬಂಟನನ್ನು ಕರೆತಂದ. ಅದುವರೆಗಿನ ಮಾತುಕತೆ ಕೇಳಿಸಿಕೊಳ್ಳುತ್ತಿದ್ದ ಊಕಣ್ಣ ಬಂಟನೆಂದ,
“ನಮಗೆ ಬಲಾತ್ಕಾರದಿಂದ ಅಕ್ಕಿ ಮುಡಿ ಹೊತ್ತು ತರುವ ಉದ್ದೇಶವಿರಲಿಲ್ಲ ಮಹಾಸ್ವಾಮಿ. ನಾವು ಅಕ್ಕಿ ತರಲೆಂದು ಸಾಕಷ್ಟು ಹಣ ಕೊಂಡು ಹೋಗಿದ್ದೆವು. ಅಕ್ಕಿ ಕೇಳಿದ್ದಕ್ಕೆ ಇವರು ಇಲ್ಲವೆಂದರು. ಇವರ ನಡೆ ನುಡಿಯಲ್ಲಿ ಸುಳ್ಳರ ಭಾವವಿತ್ತು. ನಾವು ಅಂಗಡಿಯಿಂದ ಇತ್ತ ಬಂದು ಮರೆಯಲ್ಲಿ ಕಾದೆವು. ಸ್ವಲ್ಪ ಹೊತ್ತಲ್ಲಿ ಇವರ ಆಳುಗಳು ಅಕ್ಕಿ ಮುಡಿಗಳನ್ನು ಹೊತ್ತುಕೊಂಡು ನದಿಯತ್ತ ಬರುವುದನ್ನು ಕಂಡೆವು. ನಾವು ಕೆಲಸದಾಳುಗಳನ್ನು ತಡೆದು ಅಕ್ಕಿ ಎಲ್ಲಿಗೆ ಎಂದು ಕೇಳಿದಾಗ – ಮಂಗಳೂರಿಗೆ, ಕಲೆಕ್ಟರ್ ಲೂವಿನ್ ಮತ್ತು ಅವನ ಕಡೆಯವರಿಗೆ-ಎಂದರು. ನಾಡನ್ನು ದೋಚುವವರಿಗೆ ಇವರು ಅಕ್ಕಿ ಕೊಡುತ್ತಾರೆ. ನಾಡಿಗೆ ಬಿಡುಗಡೆ ತಂದು ಕೊಡಲು ಹೊರಟವರಿಗೆ ಇಲ್ಲ. ನಮಗೆ ಅಕ್ಕಿ ಬೇಕಿತ್ತು, ತಂದೆವು. ಹಣ ಇಲ್ಲಿದೆ ಮಹಾಸ್ವಾಮಿ, ನೀವೇ ಈ ಬಾಳಿಗರಿಗೆ ಕೊಟ್ಟು ಬಿಡಿ.”

ರಂಗ ಬಾಳಿಗ ತನ್ನ ಹಟ ಬಿಡಲಿಲ್ಲ.
“ನಾನು ವ್ಯಾಪಾರೀ ಧರ್ಮ ಪಾಲಿಸುತ್ತಿದ್ದೇನೆ. ನನ್ನ ವೃತ್ತಿ ಧರ್ಮಕ್ಕೆ ಅಡ್ಡಿಪಡಿಸಿ ಇವರು ಅನ್ಯಾಯವೆಸಗಿದ್ದಾರೆ. ಸ್ವಾಮಿಗಳು ನ್ಯಾಯ-ನೀತಿಯನ್ನು ಗೌರವಿಸುವವರು ಎಂದಾದರೆ ಇವರನ್ನು ಶಿಕ್ಷಿಸಬೇಕು.”
ಇದುವರೆಗೆ ಎಲ್ಲವನ್ನೂ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದ ನಂದಾವರ ದೇವಾಲಯದ ಮೊಕ್ತೇಸರ ಕಾಂತು ಭಂಡಾರಿಗೆ ತಡಕೊಳ್ಳಲು ಸಾಧ್ಯವಾಗಲಿಲ್ಲ.

“ಮಹಾಸ್ವಾಮಿಗಳೇ, ಈ ರಂಗ ಬಾಳಿಗನ ಬಾಯಿಯಿಂದ ಒಳ್ಳೆಯ ಮಾತುಗಳು ಬಂದಾವೆಂದು ಸುಮ್ಮನಿದ್ದೆ. ಇವನು ನಿಜಕ್ಕೂ ರಾಜದ್ರೋಹ ಮಾಡಿದ್ದಾನೆ. ಮೊನ್ನೆ ಪುತ್ತೂರಲ್ಲಿ ನಿಮ್ಮನ್ನು ಎದುರಿಸಲಾಗದೆ ಪಲಾಯನ ಮಾಡಿದ ಕಲೆಕ್ಟರ್ ಲೂವಿನ್ ಮತ್ತು ಅವನ ಸೈನಿಕರಿಗೆ ಬಂಟವಾಳದಲ್ಲಿ ಗಡದ್ದು ಊಟ-ಉಪಹಾರ ಮತ್ತು ಆಶ್ರಯ ನೀಡಿ ಕ್ಷೇಮವಾಗಿ ಗುರುಪುರದ ಮೂಲಕ ಮಂಗಳೂರಿಗೆ ತಲುಪುವ ವ್ಯವಸ್ಥೆ ಮಾಡಿದ್ದು ಇವನೇ. ದಾಸ್ತಾನಿದ್ದರೂ ನಮಗೆ ಕೊಡದೆ ಮತ್ತೆ ಲೂವಿನ್ ನ ಪಡೆಗೆ ಕಳುಹಿಸಲು ಯತ್ನಿಸಿ ರಾಜದ್ರೋಹ ಎಸಗಿದ್ದನ್ನು ವ್ಯಾಪಾರಿ ಧರ್ಮ ಎನ್ನುತ್ತಿದ್ದಾನೆ. ಈ ನಾಡದ್ರೋಹಿಯನ್ನು ಬಂಧಿಸಿ ನೇಣು ಹಾಕಲು ಆಜ್ಞೆ ಮಾಡಿ ಬಿಡಿ ಸ್ವಾಮಿಗಳೇ. ಈ ಕುತಂತ್ರಿ ನರಿಗೆ ಅದುವೇ ಸರಿಯಾದ ಶಿಕ್ಷೆ.”
ರಂಗ ಬಾಳಿಗ ಭಯದಿಂದ ಬಿಳಿಚಿ ಹೋದ.

“ಮಹಾಸ್ವಾಮಿಗಳು ನನ್ನದು ತಪ್ಪಾಗಿದ್ದರೆ ಕ್ಷಮಿಸಬೇಕು. ಕಲೆಕ್ಟರ್ ಲೂವಿನ್ ಮೊದಲಿನಿಂದಲೂ ನನ್ನ ಸ್ನೇಹಿತರು. ಹಸಿದು ಬಂದು ಅವರು ಅನ್ನ ಕೇಳಿದಾಗ ಇಲ್ಲವೆನ್ನಲು ನನಗೆ ಮನಸ್ಸು ಬರಲಿಲ್ಲ. ಇಲ್ಲವೆನ್ನುವ ಧೈರ್ಯ ಮಾಡುತ್ತಿದ್ದರೆ ಹಸಿವಿನಿಂದ ಕಂಗಾಲಾಗಿದ್ದ ಒಂದೂನೂರ ಐವತ್ತು ಸೈನಿಕರ ಕೋವಿಗಳು ನನ್ನನ್ನು ಉಳಿಸುತ್ತಿರಲಿಲ್ಲ. ಹೊಟ್ಟೆಪಾಡಿಗಾಗಿ ನಾನು ವ್ಯಾಪಾರ ವೃತ್ತಿ ಆರಂಭಿಸಿದವನು. ಲೂವಿನ್ ಸಾಹೇಬರ ದಯೆಯಿಂದ ಒಳ ಪ್ರದೇಶಗಳಿಗೆ ಉಪ್ಪು ಮತ್ತು ಹೊಗೆಸೊಪ್ಪು ವಿತರಣೆ ಮಾಡುವ ಹಕ್ಕು ನನಗೆ ಸಿಕ್ಕಿದೆ. ಮೊದಲು ಇಲ್ಲೆಲ್ಲಾ ಕಳ್ಳಕಾಕರ ಉಪಟಳವಿತ್ತು. ಇಂಗ್ಲಿಷರ ಕಾನೂನು ಮತ್ತು ನ್ಯಾಯ ವ್ಯವಸ್ಥೆಯಿಂದಾಗಿ ನಾವು ಭಯರಹಿತವಾಗಿ ಬಾಳುತ್ತಿದ್ದೇವೆ. ನಾವು, ತುಳುನಾಡಿನ ವ್ಯಾಪಾರಿಗಳು ಇಂಗ್ಲಿಷರನ್ನು ವಿರೋಧಿಸಲು ಕಾರಣಗಳೇ ಇಲ್ಲ.”
ಕೆದಂಬಾಡಿ ರಾಮಗೌಡ ಆಕ್ಷೇಪಿಸಿದ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

“ಏ ರಂಗ ಬಾಳಿಗಾ, ನಾವು ತುಳುನಾಡಿನ ರೈತರು ಇಂಗ್ಲಿಷರನ್ನು ವಿರೋಧಿಸಲು ಸಾಕಷ್ಟು ಕಾರಣಗಳಿವೆ. ರಾಜರ ಕಾಲದಲ್ಲಿ ಬೆಳೆಗೆ ಕಂದಾಯ ಕಟ್ಟಿದರೆ ಸಾಕಿತ್ತು. ಈಗ ಕೃಷಿ ಮಾಡದ ಭೂಮಿಗೂ ನಗದು ರೂಪದಲ್ಲಿ ಕಂದಾಯ ಕಟ್ಟಬೇಕಾಗಿದೆ. ಕಂದಾಯ ಕಟ್ಟಲಾಗದವರ ಭೂಮಿಯನ್ನು ನಿಮ್ಮಂತಹ ವ್ಯಾಪಾರಿಗಳು ಮೂರು ಕಾಸಿಗೆ ಕೊಂಡು ಜಮೀನುದಾರರಾಗುತ್ತೀರಿ. ತಂಬಾಕು ಬೆಳೆಯಲು, ಉಪ್ಪು ತಯಾರಿಸಲು ಅವಕಾಶವನ್ನೇ ಕೊಡುತ್ತಿಲ್ಲ. ನಮ್ಮ ಬೆಳೆಗಳನ್ನು ನೀವು ಹೇಳಿದ ಬೆಲೆಗೆ ಮಾರಿ, ಉಪ್ಪು-ಹೊಗೆಸೊಪ್ಪುಗಳನ್ನು ನೀವೆಂದ ಬೆಲೆಗೆ ನಾವು ಕೊಳ್ಳಬೇಕಿದೆ. ನಿನ್ನ ಲಾಭ ಬಡುಕತನವನ್ನು ನ್ಯಾಯ, ಧರ್ಮ ಎನ್ನುತ್ತೀಯಲ್ಲಾ?”

ರಂಗ ಬಾಳಿಗ ಉತ್ತರಿಸಿದ,
“ನನಗೆ ಇಂಗ್ಲಿಷರು ಮಾಡಿದ್ದರಲ್ಲಿ ಯಾವ ತಪ್ಪೂ ಕಾಣಿಸುವುದಿಲ್ಲ. ದಾಸರ ಹಾಡು ನೆನಪಿಸಿಕೊಳ್ಳಿ – ಎಲ್ಲಾರು ಮಾಡುವುದು ಹೊಟ್ಟೆಗಾಗಿ. ನಾನು ಇಂಗ್ಲಿಷರನ್ನು ದೂರಲಾರೆ. ನೀವು ನನಗೆ ಶಿಕ್ಷೆ ವಿಧಿಸಿದರೂ ಚಿಂತಿಲ್ಲ.”
ಹುಲಿ ಕಡಿದ ನಂಜಯ್ಯ ಅಭಯ ನೀಡಿದ.

“ರಂಗ ಬಾಳಿಗರೇ, ನಿಮಗೆ ಸ್ವಾಮಿಗಳು ಶಿಕ್ಷೆ ನೀಡುವುದಿಲ್ಲ. ನಮ್ಮ ವೈರಿಗಳು ಇಂಗ್ಲಿಷರೇ ಹೊರತು ನೀವಲ್ಲ. ಒಂದು ಸಂದೇಹವನ್ನು ಪರಿಹರಿಸುವುದಕ್ಕೆ ಇದನ್ನು ಕೇಳುತ್ತಿದ್ದೇನೆ. ರೈತರು ಕಂದಾಯ ಪಾವತಿಸುವಂತೆ ನೀವೂ ಇಂಗ್ಲಿಷರಿಗೆ ತೆರಿಗೆ ಕಟ್ಟಬೇಕಾಗುತ್ತದೆ ಅಲ್ಲವೆ?”
“ಅದು ನಿಜ. ತೆರಿಗೆ ಕಟ್ಟುವುದು ಕಡ್ಡಾಯ”
“ತೆರಿಗೆ ಕಟ್ಟೋದಿಕ್ಕೆ ಹಣ ಎಲ್ಲಿಂದ ತರುತ್ತೀರಿ?”
“ನಾವದನ್ನು ಮಾರಾಟ ಮಾಡುವ ಸಾಮಾನುಗಳ ಮೇಲೆ ಹಾಕುತ್ತೇವೆ.”
“ಹಾಗಾದರೆ ತೆರಿಗೆಗಳಿಂದ ಸಾಮಾನುಗಳ ಬೆಲೆ ಹೆಚ್ಚಾಗುತ್ತದೆ ಅಲ್ಲವೆ?”
“ಹೌದು. ಏರಲೇ ಬೇಕಲ್ವಾ?”
“ಈಗ ಹೇಳಿ ಬಾಳಿಗರೇ, ತೆರಿಗೆಯಿಂದ ತೊಂದರೆ ಪಡುವುದು ಬಡವರೇ ಅಲ್ಲವೆ?”
ರಂಗ ಬಾಳಿಗನ ಮುಖ ಪೆಚ್ಚಾಯಿತು.

ಮೊನ್ನೆ ಪುತ್ತೂರಲ್ಲಿ ನಿಮ್ಮನ್ನು ಎದುರಿಸಲಾಗದೆ ಪಲಾಯನ ಮಾಡಿದ ಕಲೆಕ್ಟರ್ ಲೂವಿನ್ ಮತ್ತು ಅವನ ಸೈನಿಕರಿಗೆ ಬಂಟವಾಳದಲ್ಲಿ ಗಡದ್ದು ಊಟ-ಉಪಹಾರ ಮತ್ತು ಆಶ್ರಯ ನೀಡಿ ಕ್ಷೇಮವಾಗಿ ಗುರುಪುರದ ಮೂಲಕ ಮಂಗಳೂರಿಗೆ ತಲುಪುವ ವ್ಯವಸ್ಥೆ ಮಾಡಿದ್ದು ಇವನೇ. ದಾಸ್ತಾನಿದ್ದರೂ ನಮಗೆ ಕೊಡದೆ ಮತ್ತೆ ಲೂವಿನ್ ನ ಪಡೆಗೆ ಕಳುಹಿಸಲು ಯತ್ನಿಸಿ ರಾಜದ್ರೋಹ ಎಸಗಿದ್ದನ್ನು ವ್ಯಾಪಾರಿ ಧರ್ಮ ಎನ್ನುತ್ತಿದ್ದಾನೆ. ಈ ನಾಡದ್ರೋಹಿಯನ್ನು ಬಂಧಿಸಿ ನೇಣು ಹಾಕಲು ಆಜ್ಞೆ ಮಾಡಿ ಬಿಡಿ ಸ್ವಾಮಿಗಳೇ.

“ಹಾಗೆಯೇ ಭೂ ಕಂದಾಯ ಹೆಚ್ಚಾದರೆ ತೊಂದರೆಗೆ ಒಳಗಾಗುವವರು ಬಡ ರೈತರು ಮಾತ್ರ ರಂಗ ಬಾಳಿಗರೇ. ಅಲ್ಲವೆನ್ನುತ್ತೀರಾ?”
ರಂಗ ಬಾಳಿಗ ಉತ್ತರಿಸಲು ಹೋಗಲಿಲ್ಲ.

“ನಿಜಾ ಹೇಳಿ ರಂಗ ಬಾಳಿಗರೇ. ಟಿಪ್ಪು ಸುಲ್ತಾನನ ಕಾಲದಲ್ಲಿ ಇಷ್ಟೊಂದು ಭೂ ಕಂದಾಯ ಇತ್ತಾ? ಸಾಮಾನುಗಳಿಗೆ ಅವನು ಇಷ್ಟೊಂದು ತೆರಿಗೆ ವಿಧಿಸುತ್ತಿದ್ದನಾ? ಅಫೀಮು, ಗಾಂಜಾ, ಶರಾಬು ಮಾರಾಟವನ್ನು ಅವನು ನಿಷೇಧಿಸಿದ್ದನಲ್ಲ? ಉಪ್ಪು ತಯಾರಿಸಲು, ಹೊಗೆಸೊಪ್ಪು ಬೆಳೆಯಲು ನಿರ್ಬಂಧವಿತ್ತಾ?”
ರಂಗ ಬಾಳಿಗ ಮೌನಕ್ಕೆ ಶರಣಾದ.

“ಉತ್ತರಿಸಿ ರಂಗ ಬಾಳಿಗರೇ. ನಿಮ್ಮ ಆತ್ಮಸಾಕ್ಷಿಯನ್ನು ಬ್ರಿಟಿಷರ ಬೂಟುಗಳಿಗೆ ಅಡವಿಟ್ಟಿದ್ದೀರಾ?”
ಕುಗ್ಗಿದ ದನಿಯಲ್ಲಿ ರಂಗ ಬಾಳಿಗನೆಂದ.
“ಟಿಪ್ಪು ಸುಲ್ತಾನನಂತಹ ಸಹಿಷ್ಣು ರಾಜ ಸಿಗುವುದು ಕಷ್ಟ. ಅವನು ಎಂದಿಗೂ ತನ್ನ ಪ್ರಜೆಗಳನ್ನು ಸುಲಿಯಲಿಲ್ಲ. ನಮ್ಮ ಬಂಟವಾಳದ ವೆಂಕಟರಮಣ ದೇವಾಲಯಕ್ಕೆ, ನಂದಾವರದ ಈ ದೇವಾಲಯಕ್ಕೆ ಅದೆಷ್ಟೋ ಉಂಬಳಿ ನೀಡಿದ್ದಾನೆ. ಅಂಥವನನ್ನು ಬಯ್ದರೆ ದೇವರು ಮೆಚ್ಚುವುದಿಲ್ಲ.”

ಹುಲಿ ಕಡಿದ ನಂಜಯ್ಯ ಮುಂದುವರಿಸಿದ:
“ಆದರೆ ಅಂತ ಧರ್ಮಾತ್ಮನನ್ನು ಮತಾಂಧನೆಂದು ಸುಳ್ಳು ಸುಳ್ಳೇ ಇಂಗ್ಲಿಷರು ಕೂಗಿ ಹೇಳಿದಾಗ ನೀವು ಅದಕ್ಕೆ ನಿಮ್ಮ ದನಿಯನ್ನೂ ಸೇರಿಸಿದರಲ್ಲಾ ಬಾಳಿಗರೇ? ಈ ನಾಡಿನ ರೈತ ಊಟಕ್ಕಿಲ್ಲದೆ ಬೀದಿಗಿಳಿದಾಗ ನೀವು ಆ ಇಂಗ್ಲಿಷರ ಪರ ವಹಿಸುತ್ತಿದ್ದೀರಲ್ಲಾ? ನೀವು ಇಷ್ಟು ಹೊತ್ತು ಕಲ್ಯಾಣ ಸ್ವಾಮಿಗಳೆದುರು ಕೂತು ಇಂಗ್ಲಿಷರ ಗುಣಗಾನ ಮಾಡಿದಿರಿ. ಹೀಗೆ ನೀವು ಕಲೆಕ್ಟರ್ ಲೂವಿನ್ನನೆದುರು ಕೂತು ಕಲ್ಯಾಣ ಸ್ವಾಮಿಗಳ ಗುಣಗಾನ ಮಾಡಬಲ್ಲಿರಾ? ನೀವು ಕಣ್ಣಿದ್ದೂ ಕುರುಡರಾಗಿ ಬಿಟ್ಟಿರಲ್ಲ ರಂಗ ಬಾಳಿಗರೇ?”
ಪೂರ್ತಿ ಸೋತು ಹೋದ ದನಿಯಲ್ಲಿ ರಂಗ ಬಾಳಿಗ ಕೇಳಿದ.
“ನಾನೀಗ ಏನು ಮಾಡಬೇಕೆಂದು ಸ್ವಾಮಿಗಳು ಅಪೇಕ್ಷಿಸುತ್ತೀರಿ?”
ಪುಟ್ಟ ಬಸವ ತೀರ್ಪಿತ್ತ.

“ನಮ್ಮ ದಂಡು ತಂದ ನಿಮ್ಮ ಅಕ್ಕಿ ಮುಡಿಗಳ ಬೆಲೆಯನ್ನು ಸರಿಯಾಗಿ ಲೆಕ್ಕ ಹಾಕಿ ತೆಗೆದುಕೊಳ್ಳಿ. ರೈತರನ್ನು ಸುಲಿದು ತಿನ್ನುವುದನ್ನು ನಿಲ್ಲಿಸಿ. ಕೊಡಗರದು ಕಾಟಕಾಯಿ ಎಂದು ಅಪಪ್ರಚಾರ ಮಾಡಬೇಡಿ. ಅದನ್ನು ಬಿಟ್ಟು ನಾವು ನಿಮ್ಮಿಂದ ಬೇರೇನನ್ನೂ ಅಪೇಕ್ಷಿಸುವುದಿಲ್ಲ.”

ಟಿಪ್ಪಣಿ:
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಪಕರಾಗಿದ್ದು, ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಡಾ. ಪ್ರಭಾಕರ ಶಿಶಿಲ ಆರು ಕಥಾಸಂಕಲನಗಳನ್ನು (ಗಗ್ಗರ, ಬಾರಣೆ, ಬೆಟ್ಟದಾ ಮೇಲೊಂದು, ಕಪಿಲಳ್ಳಿಯ ಕತೆಗಳು, ಗುಜರಿ ಅದ್ದಿಲಿಚ್ಚನ ಜಿಹಾದಿಯು, ಕೊಡಗಿನ ಐತಿಹ್ಯ ಕತೆಗಳು) ಪ್ರಕಟಿಸಿದ್ದಾರೆ. ಅವರ ಆರು ಕಾದಂಬರಿಗಳು ಮಾಸ್ತಿ ಪ್ರಶಸ್ತಿಯ (ನದಿ ಎರಡರ ನಡುವೆ – ಕಾದಂಬರಿಗೆ) ಸಹಿತ ಹಲವಾರು ಪ್ರಶಸ್ತಿಗಳನ್ನು ಪಡೆದಿವೆ. 100 ಕ್ಕಿಂತ ಹೆಚ್ಚು ಅರ್ಥಶಾಸ್ತ್ರ ಕೃತಿಗಳನ್ನು ಅವರು ಕನ್ನಡದಲ್ಲಿ ಬರೆದಿದ್ದಾರೆ. ಅವರ ಇತರ ಕೃತಿಗಳೂ (ಶಿಕಾರಿಯ ಸೀಳುನೋಟ, ದೇಶ ಯಾವುದಾದರೇನು, ಸಂಸ್ಕೃತಿಯ ಶೋಧದಲ್ಲಿ ಇತ್ಯಾದಿ) ವಿಶಿಷ್ಟವಾಗಿವೆ.

ಪ್ರಭಾಕರ ಶಿಶಿಲ ಅವರು ಕಲ್ಯಾಣಪ್ಪನ ಹೋರಾಟದ ರೋಚಕ ಇತಿಹಾಸದಲ್ಲಿ ತೀವ್ರ ಆಸಕ್ತರು. ಸುಳ್ಯದ ರಂಗಕರ್ಮಿ, ಸಮಾಜ ಸುಧಾರಕ ಎನ್. ಎಸ್. ದೇವಿಪ್ರಸಾದ್ ಸಂಪಾಜೆಯವರ ನೇತೃತ್ವದಲ್ಲಿ 1998 ರಲ್ಲಿ ‘ಅಮರ ಕ್ರಾಂತಿ ಉತ್ಸವ ಸಮಿತಿ’ಯನ್ನು ರಚಿಸಿದಾಗ ಅದರಲ್ಲಿ ಸಕ್ರಿಯರಾಗಿದ್ದವರು ಪ್ರಭಾಕರ ಶಿಶಿಲ. ಹಿಂದೆ ಸುಳ್ಯದ ಕ್ರಾಂತಿಕಾರರು 1837 ರ ಮಾರ್ಚ್ 30 ರಂದು ಬೆಳ್ಳಾರೆ ಕೋಟೆಯಲ್ಲಿದ್ದ ಖಜಾನೆಯನ್ನು ವಶಪಡಿಸಿಕೊಳ್ಳುವುದರೊಂದಿಗೆ ಕ್ರಾಂತಿ ಆರಂಭಿಸಿ, ಪುತ್ತೂರು ಪಾಣೆ ಮಂಗಳೂರು ದಾರಿಯಾಗಿ ಎಪ್ರಿಲ್ 5 ರಂದು ಮಂಗಳೂರಿಗೆ ತಲುಪಿದ್ದರು. ಬಾವುಟಗುಡ್ಡದಲ್ಲಿ ಕೊಡಗಿನ ಅರಸರ ವಿಜಯಧ್ವಜವನ್ನು ಹಾರಿಸಿದ್ದರು.

1998 ರಲ್ಲಿ ಅದೇ ರೀತಿ ಕಾಲ್ನಡಿಗೆಯ ಜಾಥಾ ಕೈಗೊಂಡು ಅಮರ ಸುಳ್ಯದ ಕ್ರಾಂತಿಯನ್ನು ಅರ್ಥಪೂರ್ಣವಾಗಿ ನೆನಪಿಸಿಕೊಳ್ಳಬೇಕು ಎನ್ನುವ ಆಲೋಚನೆಯನ್ನು ಶಿಶಿಲರು ನೀಡಿದ್ದರು. ಅದೇ ರೀತಿ 1998 ಮಾರ್ಚ್30 ರಂದು ಪ್ರಾರಂಭವಾದ ಜಾಥಾ ಬೆಳ್ಳಾರೆ, ಕುಂಬ್ರ, ಪುತ್ತೂರು, ನಂದಾವರ ಮಾರ್ಗದಲ್ಲಿ ಸಾಗಿ ಎಪ್ರಿಲ್ 5 ರಂದು ಮಂಗಳೂರಿಗೆ ತಲುಪಿತು. ಬಾವುಟಗುಡ್ಡದಲ್ಲಿ ಕೊಡಗಿನ ರಾಜನ ಧ್ವಜವನ್ನು ದೇವಿಪ್ರಸಾದ್ ಸಂಪಾಜೆ ಹಾರಿಸಿದರು. ಶಿಶಿಲರು ಜಾಥಾಕ್ಕಾಗಿಯೇ ರಚಿಸಿದ ‘ಅಮರ ಕ್ರಾಂತಿ ವೀರರು’ ಬೀದಿ ನಾಟಕವನ್ನು ದಾರಿಯಲ್ಲಿ ಪ್ರದರ್ಶಿಸುತ್ತಿದ್ದರು. ಏಳುದಿನಗಳ ಜಾಥಾದಲ್ಲಿ ಶಿಶಿಲರ ಇಡೀ ಸಂಸಾರ ಭಾಗವಹಿಸಿತ್ತು. ಪ್ರಭಾಕರ ಶಿಶಿಲರ ಈ ಕತೆಯ ಹಿನ್ನೆಲೆಯಾಗಿ ಈ ಮಾಹಿತಿಗಳನ್ನು ಗಮನಿಸಿದಾಗ ಅವರ ಕತೆಗಳ ಪಾತ್ರಧಾರಿಗಳು ಆಡುವ ಮಾತುಗಳಲ್ಲಿ ಶಿಶಿಲರ ‘ಧ್ವನಿ’ ಕೇಳಿಸುವುದು ವಿಶೇಷವಲ್ಲ ಎಂದು ಅರ್ಥವಾಗುತ್ತದೆ.

ಈ ಕತೆಯಲ್ಲಿ ಕೊಡಗರ ಕಾಟಕಾಯಿ ಎಂಬ ಶಬ್ದ ಮತ್ತು ಅದರ ಬಗ್ಗೆ ವಿವರಗಳು ಸಿಗುತ್ತವೆ. ಕಲ್ಯಾಣಪ್ಪನ ಕಾಟಕಾಯಿ ಶಬ್ದದ ಮೂಲ ಅದೇ. ಕಲ್ಯಾಣಪ್ಪನ ಕ್ರಾಂತಿಯ ಕಾಲದ ಚಟುವಟಿಕೆಗಳನ್ನು ದಕ್ಷಿಣ ಕನ್ನಡದ ಜನ ಕೊಡಗರ ಕಾಟಕಾಯಿಯ ಮುಂದುವರಿಕೆ ಎಂದು ಭಾವಿಸಿದ್ದಕ್ಕೆ ಕಾರಣಗಳಿವೆ.

ಟಿಪ್ಪು ಸುಲ್ತಾನನ ಆಡಳಿತದ ಬಗ್ಗೆ, ಬ್ರಿಟಿಷರ ತೆರಿಗೆ ಹೆಚ್ಚೇ ಆಗಿದ್ದರೂ ಅವರು ಜನರನ್ನು ಮರುಳುಗೊಳಿಸುತ್ತಿದ್ದುದಕ್ಕೆ (ಈ ಬಗ್ಗೆ ಪ್ರಸ್ತಾವನೆಯಲ್ಲಿ ಹೇಳಲಾಗಿದೆ) ಇಲ್ಲಿನ ರಂಗ ಬಾಳಿಗ ಸಾಕ್ಷ್ಯ ನುಡಿಯುತ್ತಿದ್ದಾನೆ.