ಜಗತ್ತಿನ ದಿಕ್ಕು ದೆಸೆಗಳಿಗೆ ದೂರ ಪ್ರಯಾಣ ಮಾಡುತ್ತಾ ಅಲ್ಲಲ್ಲೇ ಹೊಸ ಆಕೃತಿ ಪಡೆಯುತ್ತ ಹೇಗೂ ಬದಲಾಗಿರುವ ಹಬ್ಬ ಈ ವರ್ಷ ಕೋವಿಡ್ ಕಾಲಕ್ಕೆ ಒಪ್ಪುವಂತೆ ಇನ್ನಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಕೋವಿಡ್ ಸೋಂಕು ಅಲೆಅಲೆಯಾಗಿ ಮತ್ತೊಮ್ಮೆ ಇನ್ನೊಮ್ಮೆ ವ್ಯಾಪಕವಾಗಿ ಹಬ್ಬಿ ಜೀವ ಜೀವನಗಳನ್ನು ಬೆದರಿಸುತ್ತಿರುವಾಗ ಹಬ್ಬದ ಆಚರಣೆ ಜೊತೆಗಿನ ಉಲ್ಲಾಸ ಹೊಂದಾಣಿಕೆ ಒಪ್ಪಂದಗಳಿಗೆ ಒಗ್ಗಿಕೊಂಡಿವೆ. ಛದ್ಮವೇಷಗಳಿಂದಲೇ ತುಂಬಿರುವ ಮೆರವಣಿಗೆಯೊಂದು ಕಣ್ಣ ಮುಂದೆ ಸಾಗಿಹೋಗುವಾಗ ಅಲ್ಲಿ ವೇಷ ಬದಲಿಸಿಕೊಂಡವರು ನಮಗೆ ಎಷ್ಟೇ ಪರಿಚಯಸ್ಥರಾದರೂ ಗುರುತು ಹಿಡಿಯುವುದು ಕಷ್ಟ ಆಗುವಂತೆ ಈ ವರ್ಷದ ಹಬ್ಬ ಬದಲಾದ ಸ್ವರೂಪದಲ್ಲಿ ಈಗಷ್ಟೇ ಬಂದು ಇದ್ದು ಹೋಗಿದೆ.
ಯೋಗೀಂದ್ರ ಮರವಂತೆ ಬರೆಯುವ ʼಇಂಗ್ಲೆಂಡ್‌ ಲೆಟರ್‌ʼ

ಇದು ಗಾಳಿ ಮಳೆ ಬಿಸಿಲುಗಳ ನಿರಂತರ ಚಲನೆಯ ಊರು. ದಿನ ಮಾಸ ಯಾವುದೇ ಇದ್ದರೂ ಈ ಮೂವರು, ಖಾಸಾ ಗೆಳೆಯರಂತೆ ಹೆಗಲಮೇಲೆ ಕೈಹಾಕಿಕೊಂಡು ಸಂವಾದ ಮಾಡುತ್ತಲೇ ಇರುವವರು. ಇವರ ಸಹಮತ ಭಿನ್ನಮತಗಳಲ್ಲಿಯೇ ವಾರ ತಿಂಗಳುಗಳಿಗೆ ರೂಪ ಆಕಾರ ಬರುವುದು.

ಈ ಮಹಾನುಭಾವರು ಎಂದು ಒಟ್ಟಾಗುತ್ತಾರೆ ಯಾವಾಗ ದೂರ ಇರುತ್ತಾರೆ ಎನ್ನುವುದರ ಮೇಲೆಯೇ ಆಯಾ ಕಾಲಕ್ಕೊಂದು ಗುಣಧರ್ಮವೂ ಆವರಿಸುವುದು. ಈಗಿನ ಸುಂಯ್ ಸುಂಯ್ ಗಾಳಿ, ಜಿರಜಿರ ಮಳೆ, ಮೆಲುದನಿಯಲ್ಲಿ ಪಿಸಿಪಿಸಿ ಎನ್ನುವ ದುರ್ಬಲ ಕೋಮಲ ಬಿಸಿಲು ಇವೆಲ್ಲವೂ ಜೊತೆಯಾದದ್ದು ಚಳಿಗಾಲದ ಆಗಮನದ ಸಿದ್ಧತೆಗೆ ಎಂದು ವಿವರಿಸಿ ಹೇಳಬೇಕಾಗಿಲ್ಲ. ಮತ್ತೆ ಈ ತಯಾರಿಯ ಬಗೆಗೆ ಇನ್ನೂ ಅನುಮಾನ ಇರುವವರಿಗೆ ದೃಢವಾಗಿ ಸಾರಿ ಹೇಳಲು ಮೊನ್ನೆಮೊನ್ನೆಯ ತನಕ ಹಸಿರಾಗಿ ನಲಿಯುತ್ತಿದ್ದ ಮರಗಳೂ ಬೋಳಾಗಿ ಬರಡಾಗಿ ನೇರ ನಿಲುವಿನಲ್ಲಿ ನಿಂತಿವೆ.

ಮರಗಳಿಂದ ಈಗಷ್ಟೇ ಉದುರಿಬಿದ್ದ ಅರಿಶಿನ ಕಂದು ಕೆಂಪು ಪತ್ರೆಗಳ ಮೇಲೆ ಯಾರ ಎಂತಹ ಲಘು ಹೆಜ್ಜೆಯೇ ಬಿದ್ದರೂ ಚರಪರಗುಟ್ಟುತ್ತಿವೆ. ಬೆಳಕು ತಾಗಿದರೆ ಕರಗಿ ಹೋಗುವ ಕತ್ತಲು ಮತ್ತೆ ಕತ್ತಲು ತುಂಬಿದ ಕೂಡಲೇ ಬರಿದಾಗುವ ಬೆಳಕು ತಮ್ಮ ತಮ್ಮ ಪಾಳಿಯಲ್ಲಿ ತಲ್ಲೀನವಾಗಿದ್ದರೂ ಸಧ್ಯದ ದಿವಸಗಳಲ್ಲಿ ಬೆಳಕಿನ ಅವಧಿಗಿಂತ ರಾತ್ರಿಯ ಕಾಲ ಹೆಚ್ಚು, ಮತ್ತೆ ನಿತ್ಯವೂ ಹೆಚ್ಚುಹೆಚ್ಚು ಆಗುತ್ತಿದೆ. ಈ ಕಾಲಕ್ಕೆ ಇದೇ ಸರಿ ಎಂದು ಇಲ್ಲಿ ಯಾರನ್ನು ಕೇಳಿದರೂ ಹೇಳಿಯಾರು. ಇಡೀ ವಾತಾವರಣ, ಈ ಹೊತ್ತಿಗೆ ತಕ್ಕ ಮುಖವರ್ಣಿಕೆ ಬಿಡಿಸಿಕೊಂಡು ವೇಷವನ್ನು ಕಟ್ಟಿಕೊಂಡು ರಂಗಪ್ರವೇಶದ ಸನ್ನಾಹದಲ್ಲಿರುವಾಗ ಕತ್ತಲೊಡನೆ ಸೆಣಸಾಡುವ ಬೆಳಕಿನ ಹಬ್ಬ ಸೆಳೆಮಿಂಚಿನಂತೆ ಬಂದು ಹೋಗಿದೆ.

ಎಲ್ಲ ವರುಷಗಳಂತೆಯೇ ನೆಲ ಮುಗಿಲು ಗಾಳಿ ಬಿಸಿಲು ಮಳೆಗಳ ಬದಲಾವಣೆಗಳು ಚಾಚೂತಪ್ಪದೇ ಆಗುತ್ತಿರುವಾಗ ದೀಪಾವಳಿ ಮಾತ್ರ ತನ್ನ ಎಂದಿನ ಪ್ರಕೃತಿಯನ್ನು ಬದಲಿಸಿ ಈ ಕಾಲದ ಜೊತೆಗೆ ರಾಜಿ ಮಾಡಿಕೊಂಡು ಕೆಲ ದಿನ ಹೇಗೋ ಇದ್ದು ವೇಳೆ ಕಳೆದು ಹೋಗಿದೆ.

ಬ್ರಿಟನ್ನಿನಲ್ಲಿ ಭಾರತೀಯ ಹಬ್ಬಗಳ ಉತ್ಸಾಹ ಉಲ್ಲಾಸಗಳನ್ನು ತನ್ನ ಬೀದಿಯಲ್ಲಿ ಹಿಡಿದಿಡುವ ಲೆಸ್ಟರ್ ನಗರದ “ಗೋಲ್ಡನ್ ಮೈಲ್” ರಸ್ತೆ, ಹಿಂದಿನ ವರ್ಷಗಳ ಗಿಜಿಗಿಜಿ ಗೌಜು ಇಲ್ಲದೇ ತಣ್ಣಗಿದೆ. ಭಾರತದ ಹೊರಗಿನ ಅತಿ ದೊಡ್ಡ ದೀಪಾವಳಿ ಎನ್ನುವ ಹೆಸರಿರುವ ಲೆಸ್ಟರ್ ನಗರದ ಆಚರಣೆ ಈ ವರ್ಷ ಆನ್ಲೈನ್ ಮೂಲಕ ಸಾಂಕೇತಿಕವಾಗಿ ಮುಗಿದಿದೆ. ವಾರಗಟ್ಟಲೆ ಚಕಪಕ ಕೋರೈಸುವ ಸಾಲು ಬಣ್ಣದ ದೀಪಗಳು, ಬಟ್ಟೆ ಮಿಠಾಯಿ ತಿನಿಸು ಚಿನ್ನದ ಅಂಗಡಿಗಳಿಗೆ ಹೊಕ್ಕು ಹೊರಬರುವ ಸಾವಿರ ಸಾವಿರ ಜನರು, ಅವರ ಕೇಕೆ ನಗೆ ಮಾತು ಗುಟ್ಟುಗಳು ಒಟ್ಟಾಗಿ ಮೊರೆಯುವ ಸದ್ದು, ಕಪ್ಪು ಬಾನಿಗೆ ಬೆಂಕಿ ಹಚ್ಚುವಂತೆ ಸಿಡಿಯುವ ಸುಡುಮದ್ದುಗಳು ಎಲ್ಲವೂ ಮೌನದಲ್ಲಿ ಮುಳುಗಿವೆ.

ಇನ್ನು ಇಪ್ಪತ್ತೈದು ಮೂವತ್ತು ಸಾವಿರ ಜನರು ಏಕಕಾಲಕ್ಕೆ ಸೇರಿ ನಲಿದು ಹಾಡಿ ಕುಣಿಯುವ ಲಂಡನ್ನಿನ ಟ್ರಫಾಲ್ಗರ್ ಚೌಕದ ದೀಪಾವಳಿಯೂ ಲಾಕ್ಡೌನ್ ನಿಯಮಾವಳಿಗಳ ಬಂಧನದಲ್ಲಿ ಸ್ಥಬ್ದವಾಗಿದೆ. ಅಲ್ಲಿಯೂ “ಡಿಜಿಟಲ್ ದೀಪಾವಳಿ” ಹೆಸರಲ್ಲಿ ಹಬ್ಬದ ಸಣ್ಣ ಝಲಕ್ ನಡೆದಿದೆ. ಭಾರತೀಯರು ನೆಲೆಸಿರುವ ಊರೂರುಗಳಲ್ಲಿಯೂ ಸಾಮೂಹಿಕ ಉತ್ಸವವಾಗಿ ಸಂಭ್ರಮ ಪಡೆಯುತ್ತಿದ್ದ ಹಬ್ಬ ಈ ಸಲ ಬರೇ ಮನೆಯೊಳಗಿನ ಆಚರಣೆಯಾಗಿದೆ. ಮತ್ತೆ ಅಂತಹ ಮನೆಸಂಭ್ರಮಗಳಲ್ಲಿ ಖಾಯಂ ಭಾಗಿಯಾಗುವ ದೀಪ, ಮೊಂಬತ್ತಿ, ಪಟಾಕಿಗಳು ಈ ಸಲವೂ ಹಾಜರಿ ಹಾಕಿವೆ.

ಇನ್ನು ಲಂಡನ್ನಿನ ರಾಜಬೀದಿಯೆಂದು ಪರಿಗಣಿಸಲ್ಪಡುವ “ಡೌನಿಂಗ್ ಸ್ಟ್ರೀಟ್” ಅಲ್ಲಿ ಇತ್ತೀಚೆಗಷ್ಟೇ ವಾಸ್ತವ್ಯ ಹೂಡಿರುವ ಭಾರತೀಯ ಮೂಲದ ವಿತ್ತ ಸಚಿವ ರಿಷಿ ಸುನಾಕ್, ತನ್ನ ನಿತ್ಯದ ಕಡಕ್ ಸೂಟು ಟೈ ಗಳಲ್ಲಿಯೇ ಹನ್ನೊಂದು ನಂಬರ್‌ ನ ತಮ್ಮ ಮನೆಯಿಂದ ಹೊರ ಬಂದು ಬಾಗಿಲ ಮುಂದೆ ಒಂದು ಮಂಡಿಯೂರಿಕೊಂಡು ದೀಪಗಳನ್ನು ಹೊತ್ತಿಸಿ ಸಿದ್ಧ ರಂಗೋಲಿಯನ್ನು ಜೋಡಿಸಿಟ್ಟು ಒಳನಡೆದಿದ್ದಾರೆ. ಹತ್ತನೆಯ ನಂಬರಿನ ಪಕ್ಕದ ಬಿಡಾರದಲ್ಲಿರುವ ಪ್ರಧಾನಿ, ಸಮಸ್ತರಿಗೂ “ದಿವಾಲಿಯ ಶುಭಕಾಮನೆ” ಗಳನ್ನು ಕೋರಿದ್ದಾರೆ. ಎಲ್ಲರೂ ಸಾಮಾಜಿಕ ಅಂತರ, ಕೋವಿಡ್ ಸುರಕ್ಷೆಯ ಕಿವಿಮಾತುಗಳನ್ನು ಗಮನದಲ್ಲಿಡಿ ಎಂದೂ ನೆನಪಿಸಿದ್ದಾರೆ.

ಬೆಳಕು ತಾಗಿದರೆ ಕರಗಿ ಹೋಗುವ ಕತ್ತಲು ಮತ್ತೆ ಕತ್ತಲು ತುಂಬಿದ ಕೂಡಲೇ ಬರಿದಾಗುವ ಬೆಳಕು ತಮ್ಮ ತಮ್ಮ ಪಾಳಿಯಲ್ಲಿ ತಲ್ಲೀನವಾಗಿದ್ದರೂ ಸಧ್ಯದ ದಿವಸಗಳಲ್ಲಿ ಬೆಳಕಿನ ಅವಧಿಗಿಂತ ರಾತ್ರಿಯ ಕಾಲ ಹೆಚ್ಚು, ಮತ್ತೆ ನಿತ್ಯವೂ ಹೆಚ್ಚುಹೆಚ್ಚು ಆಗುತ್ತಿದೆ.

ಇನ್ನು ಇಲ್ಲಿನ ಪ್ರಮುಖ ಸುದ್ದಿ ವಾಹಿನಿಗಳಾದ ಬಿಬಿಸಿ, ಗಾರ್ಡಿಯನ್, ಟೆಲಿಗ್ರಾಫ್, ಟೈಮ್ಸ್ ಇತ್ಯಾದಿಗಳು ದೀಪಾವಳಿ ಎನ್ನುವುದು ಐದು ದಿನಗಳ ಹಬ್ಬ, ಇದನ್ನು ಹಿಂದುಗಳು ಸಿಖ್ಖರು, ಜೈನರು ಅತ್ಯಂತ ಸಂಭ್ರಮದಲ್ಲಿ ಆಚರಿಸುತ್ತಾರೆ, ಈ ಹಬ್ಬದ ಹಿನ್ನೆಲೆಗೆ ಕತೆ ಪುರಾಣಗಳನ್ನು ಸೇರಿಸಿ ತಮ್ಮ ಪತ್ರಿಕೆಯ ಪುಟಗಳಲ್ಲಿ, ಜಾಲತಾಣಗಳಲ್ಲಿ ಪ್ರತಿವರ್ಷದಂತೆ ಈ ಸಲವೂ ಮುದ್ರಿಸಿವೆ. ಮತ್ತೆ ಎಲ್ಲೆಲ್ಲಿ ಹೇಗೆ “ಡಿಜಿಟಲ್ ದಿವಾಲಿ” ನಡೆಯುತ್ತಿದೆ, ಯಾರ್ಯಾರು ಎಂತಹ ಮಾರ್ಪಾಟಿನೊಂದಿಗೆ ಆಚರಣೆ ಮಾಡುತ್ತಿದ್ದಾರೆ ಎಂದೂ ಬರೆದಿವೆ.

ಬಿಬಿಸಿ ರೇಡಿಯೋ ಸಂಪ್ರದಾಯದಂತೆ ಕೆಲವರ ಸಂದರ್ಶನ ಮಾಡಿ “ಲಾಕ್ ಡೌನ್ ದೀಪಾವಳಿ”ಯ ಅನುಭವ ಕೇಳಿಸಿದ್ದಾರೆ. ಭಾರತದ ಪ್ರತಿ ರಾಜ್ಯದಲ್ಲಿ ಅದರೊಳಗಿನ ಪ್ರಾಂತ್ಯ ಸಮೂಹಗಳಲ್ಲಿ ತುಸು ಭಿನ್ನವಾಗಿ ಆಚರಿಸಲ್ಪಡುವ ದೀಪಾವಳಿ ಹಬ್ಬ ಐದು ಸಾವಿರ ಮೈಲಿ ದೂರ ಪ್ರಯಾಣ ಮಾಡಿ ಇಲ್ಲಿ ನೆಲೆ ಕಂಡುಕೊಳ್ಳುವಾಗ ತನ್ನೊಳಗಿನ ಸೂಕ್ಷ್ಮ ವಿವರಗಳನ್ನು ವ್ಯತ್ಯಾಸಗಳನ್ನು ಕಳೆದುಕೊಂಡಿದೆ. ವರುಷ ದಶಕ ಶತಮಾನಗಳೆನ್ನುವ ಕಾಲದ ಹಾದುಹೋಗುವಿಕೆಯಲ್ಲಿ ಮತ್ತೆ ಇಲ್ಲಿ ವಾಸಿಸಿರುವ ವಿವಿಧ ಭಾಷೆ ಸಂಸ್ಕೃತಿಗಳ ಪ್ರವಾಹದಲ್ಲಿ ತನ್ನ ಹಿಂದಿನ ಸ್ವರೂಪವನ್ನು ಮೆಲ್ಲಗೆ ಕಳಚಿಕೊಳ್ಳುತ್ತ ತಿನಿಸು ಹಾಡು ಕುಣಿತ ಪಟಾಕಿಗಳನ್ನೊಳಗೊಂಡ ಜನಪ್ರಿಯ ಸರಳೀಕೃತ ಆಚರಣೆಯಾಗಿ ಬದಲಾಗುತ್ತಿದೆ.

ಕರ್ನಾಟಕದ ಕರಾವಳಿಯಲ್ಲಿ ಕಳೆದ ನನ್ನ ಬಾಲ್ಯದ ದಿನಗಳ ಸಂಜೆಗತ್ತಲಲ್ಲಿ ಕೇಳಿಸುತ್ತಿದ್ದ ಬಲೀಂದ್ರನನ್ನು ಕರೆಯುವ ಹಾಡು ಅಥವಾ ಇನ್ಯಾವುದೋ ಪ್ರಾಂತ್ಯದ ದೀಪಾವಳಿ ಸಂಬಂಧಿತ ಸ್ಥಳೀಯ ಆಚರಣೆ ರಿವಾಜು ಇಷ್ಟು ದೂರ ಬಂದಂತಿಲ್ಲ, ಒಂದು ವೇಳೆ ಒಂದಾನೊಂದು ಕಾಲದಲ್ಲಿ ಇಲ್ಲಿಯತನಕ ಬಂದಿದ್ದರೂ ಈಗಂತೂ ಉಳಿದುಕೊಂಡಿಲ್ಲ.

ಜಗತ್ತಿನ ದಿಕ್ಕು ದೆಸೆಗಳಿಗೆ ದೂರ ಪ್ರಯಾಣ ಮಾಡುತ್ತಾ ಅಲ್ಲಲ್ಲೇ ಹೊಸ ಆಕೃತಿ ಪಡೆಯುತ್ತ ಹೇಗೂ ಬದಲಾಗಿರುವ ಹಬ್ಬ ಈ ವರ್ಷ ಕೋವಿಡ್ ಕಾಲಕ್ಕೆ ಒಪ್ಪುವಂತೆ ಇನ್ನಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಕೋವಿಡ್ ಸೋಂಕು ಅಲೆಅಲೆಯಾಗಿ ಮತ್ತೊಮ್ಮೆ ಇನ್ನೊಮ್ಮೆ ವ್ಯಾಪಕವಾಗಿ ಹಬ್ಬಿ ಜೀವ ಜೀವನಗಳನ್ನು ಬೆದರಿಸುತ್ತಿರುವಾಗ ಹಬ್ಬದ ಆಚರಣೆ ಜೊತೆಗಿನ ಉಲ್ಲಾಸ ಹೊಂದಾಣಿಕೆ ಒಪ್ಪಂದಗಳಿಗೆ ಒಗ್ಗಿಕೊಂಡಿವೆ. ಛದ್ಮವೇಷಗಳಿಂದಲೇ ತುಂಬಿರುವ ಮೆರವಣಿಗೆಯೊಂದು ಕಣ್ಣ ಮುಂದೆ ಸಾಗಿಹೋಗುವಾಗ ಅಲ್ಲಿ ವೇಷ ಬದಲಿಸಿಕೊಂಡವರು ನಮಗೆ ಎಷ್ಟೇ ಪರಿಚಯಸ್ಥರಾದರೂ ಗುರುತು ಹಿಡಿಯುವುದು ಕಷ್ಟ ಆಗುವಂತೆ ಈ ವರ್ಷದ ಹಬ್ಬ ಬದಲಾದ ಸ್ವರೂಪದಲ್ಲಿ ಈಗಷ್ಟೇ ಬಂದು ಇದ್ದು ಹೋಗಿದೆ. ಪ್ರತಿವರ್ಷದಂತಹ ವರ್ಷ ಇದಲ್ಲ ಎನ್ನುವ ಹಲವರ ಜೊತೆ ದೀಪಾವಳಿಯು ತಾನೂ ಹೂಂಗುಟ್ಟುತ್ತಿದೆ.

ಹಬ್ಬ ಎಂದರೇನು ದೈನಿಕದ ಎಲ್ಲ ಭಾಗಗಳನ್ನು ಅತಿಯಾಗಿ ಪ್ರಭಾವಿಸಿರುವ ಪರಿವರ್ತಿಸಿರುವ ಈ ಕಾಲ ಒಂದು ಸುದೀರ್ಘ ರಾತ್ರಿಯಂತೆ ಎಂದು ಇಲ್ಲಿಯ ತನಕದ ಕೋವಿಡ್ ಬಾಧಿತ ಸಮಯದಲ್ಲಿ ಬೇರೆಬೇರೆಯವರು ಬಣ್ಣಿಸಿದ್ದಿದೆ. ಇದು, ಮುಗಿಯದ ಕಗ್ಗತ್ತಲ ಇರುಳು ಎಂದು ನಿರಾಸೆಯಲ್ಲಿ ಆಡಿದ್ದಿದೆ. ಆದರೆ ಈ ಕೊನೆಯಿಲ್ಲದ ಕತ್ತಲ ರಾತ್ರಿಯಲ್ಲಿ ಈಗಷ್ಟೇ ದೂರದಲ್ಲಿ ಕಂಡು ಬರುತ್ತಿರುವ ಮೇಣದ ಬತ್ತಿಯ ಬೆಳಕೊಂದು ಎಲ್ಲರಲ್ಲೂ ಆಶಾವಾದವನ್ನೂ ಮೂಡಿಸುತ್ತಿದೆ.

ಕತ್ತಲು ಎಷ್ಟು ಗಾಢವಾಗಿದ್ದರೂ ನೀಳವಾಗಿದ್ದರೂ ಮಿಣುಕುಹುಳದಷ್ಟು ಸಣ್ಣ ಬೆಳಕಿಗೂ ಭರವಸೆಯನ್ನು ಹುಟ್ಟಿಸುವ ಸಾಮರ್ಥ್ಯ ಇರುತ್ತದೆ. ಯುರೋಪ್ ಹಾಗು ಅಮೆರಿಕಗಳಲ್ಲಿ ನಡೆದ ಲಸಿಕೆಗಳ ತಯಾರಿ ಪರೀಕ್ಷೆಗಳಿಗೆ ದೊರೆತ ಮೊದಲ ಯಶಸ್ಸು ಇಲ್ಲಿಯೂ ಸಂಚಲನವನ್ನು ಮೂಡಿಸಿದೆ. ಸಧ್ಯದಲ್ಲಿ ಸಿದ್ಧವಾಗಲಿದೆ ಎಂದು ನಂಬಲಾಗುವ ಲಸಿಕೆಗಳ ಸುತ್ತ ತೀವ್ರವಾದ ಚರ್ಚೆ ನಡೆಯುತ್ತಿದೆ. ಎಲ್ಲಿ ಯಾವ ಕಂಪನಿಯಿಂದ ಎಷ್ಟು ಲಸಿಕೆ ತರಿಸಿಕೊಳ್ಳಬಹುದು, ಲಸಿಕೆಗಳನ್ನು ಇಡೀ ದೇಶದ ಜನರಿಗೆ ನೀಡುವ ವ್ಯವಸ್ಥೆ ಹೇಗೆ, ಮೊದಲು ಯಾರಿಗೆ ನಂತರ ಯಾರಿಗೆ, ಶ್ರೀಮಂತ ದೇಶಗಳು ಅಗತ್ಯಕ್ಕಿಂತ ಹೆಚ್ಚಿನ ಲಸಿಕೆಗಳನ್ನು ಔಷಧ ಕಂಪೆನಿಗಳಿಂದ ಪಡೆದುಕೊಂಡರೆ ಅಭಿವೃದ್ಧಿಶೀಲ ಹಾಗು ಬಡದೇಶಗಳಿಗೆ ಸಾಕಷ್ಟು ಲಸಿಕೆಗಳು ಸಿಗದೇ ಇರಬಹುದೇ, ರಾಷ್ಟ್ರೀಯ ಹಿತಾಸಕ್ತಿ ಹಾಗು ಜಾಗತಿಕ ಹಿತಗಳ ಸಮತೋಲನ ಹೇಗೆ ಕಾಯಬಹುದು ಇತ್ಯಾದಿ ವಿಮರ್ಶೆಗಳು ನಡೆಯುತ್ತಿವೆ.

ಈತನ್ಮಧ್ಯೆ ಅಮೆರಿಕದಲ್ಲಿ ಲಸಿಕೆ ಪರೀಕ್ಷೆಯಲ್ಲಿ ಯಶಸ್ಸು ಕಂಡಿರುವ ಕಂಪೆನಿಯಲ್ಲಿ ರಿಷಿ ಸುನಾಕ್ ಹೂಡಿಕೆ ಇದೆಯೆಂದು ಸುಳಿವು ಸಿಕ್ಕಿರುವ ಕೆಲ ಪತ್ರಕರ್ತರು, ಲಸಿಕೆಗಳನ್ನು ಮಾರುವ ಕೊಳ್ಳುವ ವ್ಯವಹಾರದಲ್ಲಿ ನಿಮಗೆಷ್ಟು ಲಾಭ ಎಂದು ಸುನಾಕ್ ರನ್ನು ಕೇಳುತ್ತಿದ್ದಾರೆ . ಇನ್ನು ಲಸಿಕೆಯ ಬಗೆಗೆ ಹೆಚ್ಚು ತಿಳಿದಿರುವ ವೈದ್ಯಕೀಯ ಪಂಡಿತರು ಇಡೀ ಜಗತ್ತಿನ ಜನರಿಗೆ ಹೊಂದುವ ಸಾರ್ವತ್ರಿಕ ಲಸಿಕೆ ಇದಲ್ಲ, ಬೇರೆಬೇರೆಯವರಿಗೆ ಬೇರೆಬೇರೆ ತರಹದ ಲಸಿಕೆ ಬೇಕಾಗಬಹುದು ಎಂದೂ ಎಚ್ಚರಿಸಿದ್ದಾರೆ. ಲಸಿಕೆ ಪೂರ್ಣ ಪರೀಕ್ಷೆಗಳನ್ನು ದಾಟಿ ಅಧೀಕೃತವಾಗಿ ಲಭ್ಯ ಆಗಿಲ್ಲದಿದ್ದರೂ ಈಗ ಸಿಕ್ಕಿರುವ ಸಫಲತೆ ಈ ಸೋಂಕಿಗೊಂದು ಅಂತ್ಯ ಹೇಳೀತು ಎನ್ನುವ ಹಾರೈಕೆ ಆಸೆ ಎಲ್ಲೆಡೆ ಹುಟ್ಟಿದೆ.

ಲಸಿಕೆಯನ್ನು ಎಲ್ಲರಿಗೂ ಮುಟ್ಟಿಸುವಲ್ಲಿನ ತಯಾರಿಯೂ ಶುರುವಾಗಿದೆ. ಕಗ್ಗತ್ತಲ ದೀರ್ಘ ರಾತ್ರಿಗಳು ಮುಂದುವರಿದಿದ್ದರೂ ಎಂದಿನಂತಲ್ಲದ ದೀಪಾವಳಿ ಬೆಳಕು ಮೂಡಿಸಿ ಮರೆಯಾಗಿದ್ದರೂ ಸುತ್ತಲಿನ ಕತ್ತಲಿನಲ್ಲೊಂದು ಹೊಳಹು ಕಾಣಿಸುತ್ತಿದೆ. ಕೊನೆಯೇ ಇಲ್ಲದ ರಾತ್ರಿಯಲ್ಲಿ ಮೊಂಬತ್ತಿಯ ಬೆಳಕೊಂದು ಉರಿಯುತ್ತಿದೆ.