ರಸ್ತೆಗಳು ಒಂದನ್ನೊಂದು ಹಾದು ಹೋಗುವ ಜಾಗದ ಹೆಸರು ಯಾವ ಭಾಷೆಯಲ್ಲಿ ಏನೇ ಆದರೂ ಅಲ್ಲಿ ಹಾದು ಹೋಗುವವರ ಅನುಭವ ಗೊಂದಲ ಯಾವುದೇ ಊರು ದೇಶಗಳಲ್ಲಿಯೂ ಸರಿಸುಮಾರು ಒಂದೇ ತರಹದ್ದು. ನಾವೂ ಎಲ್ಲೆಲ್ಲಿಂದಲೋ ಈ ಕಾಲದ ಬಹು ಜನಪ್ರಿಯ ಹಾಗು ಕುಖ್ಯಾತ ಸಾಮೂಹಿಕ ಪ್ರಯಾಣದಲ್ಲಿ ತೊಡಗಿದವರು, ಸದ್ಯಕ್ಕೆ ಇಷ್ಟು ರಹದಾರಿ ಗಮಿಸಿ ಕ್ರಮಿಸಿ ಇಲ್ಲೊಂದು ಕತ್ರಿಯಲ್ಲಿ ಈಗಷ್ಟೇ ಬಂದು ನಿಂತಿದ್ದೇವೆ. ಕೋವಿಡ್ ಕತ್ರಿಯಲ್ಲಿ. ಇಷ್ಟಾಗುವಾಗ, ಬಲುದೀರ್ಘ, ಕಠಿಣ, ಆಕಸ್ಮಿಕ ತಿರುವುಗಳ ಎಂಬೆಲ್ಲ ವಿಶೇಷಣಗಳಿಂದ ವರ್ಣಿಸಬಹುದಾದ ಹಾದಿಗಳಲ್ಲಿ ಈಗಾಗಲೇ ನಡೆನಡೆಯುತ್ತ ಮತ್ತೆ ನಡಿಗೆಯನ್ನು ಅನಿವಾರ್ಯವಾಗಿ ಅಲ್ಲಲ್ಲೇ ನಿಲ್ಲಿಸಿ ಕಳೆದುಹೋದವರ ಸಂಖ್ಯೆ ಒಂದು ಮಿಲಿಯನ್ ಅಥವಾ ಹತ್ತು ಲಕ್ಷ ತಲುಪಿದೆ.
ಯೋಗೀಂದ್ರ ಮರವಂತೆ ಬರೆಯುವ ‘ಇಂಗ್ಲೆಂಡ್ ಲೆಟರ್’.

 

ನಾವು ವಾಸಿಸುತ್ತಿರುವ ಊರುಗಳಲ್ಲಿ ಇಂತಹದೊಂದು ಸ್ಥಳ ಇದ್ದೇ ಇರುತ್ತದೆ; ರಸ್ತೆಗಳು ಒಂದನ್ನೊಂದು ಕತ್ತರಿಸಿ ಹಾದು ಹೋಗುವ ಅಥವಾ ಹಾದಿಗಳು ಕೂಡುವ ಕವಲೊಡೆಯುವ ಜಾಗ. ಆಯಾ ಊರಿನ ಗುಣ ಸ್ವಭಾವವನ್ನು ಹಿಡಿದಿಡುವ ಶಕ್ತಿ ಸಾಮರ್ಥ್ಯ ಇರುವ ಸ್ಥಳ ಕೂಡ ಅದೇ. ದೂರ ದೂರದಲ್ಲಿದ್ದರೆ ಬಿಡಿಬಿಡಿಯಾಗಿರುವ ಮೃದು ಸರಳ ಬಾಗಿಸಬಹುದಾದ ಎಂದು ತೋರುವ ಎರಡು ಮೂರು ಹಗ್ಗಗಳನ್ನು ಕೆಲವು ಕಾಲ ಜೊತೆಯಲ್ಲಿಟ್ಟರೆ ಒಂದನ್ನೊಂದು ಹಾದು ಹೋಗಿ ತಂತಾನೇ ಅವುಗಳ ನಡುವೆ ಮೂಡುವ ಸಂಕೀರ್ಣ ಗಂಟಿನಂತೆ ಮತ್ತೆ ಗಂಟಿಗಿಂತ ಮೊದಲಿನ ಯಾವ ಹಗ್ಗ, ಗಂಟಿನ ನಂತರದ ಯಾವ ಎಳೆ ಇರಬಹುದು ಎನ್ನುವ ಗೋಜಲಿಗೆ ಕಾರಣವಾಗುವಂತೆ ಈ ರಸ್ತೆಗಳ ಸಂಧಿ ಸಂಗಮವೂ.

ರಸ್ತೆಗಳು ಸೇರುವ ಬೇರ್ಪಡುವ ಇಂತಹ ಸ್ಥಳಕ್ಕೆ ಯಾರು ಯಾವ ದಿಕ್ಕಿನಿಂದಲೇ ಬಂದರೂ ಮುಂದಿನ ಹಾದಿಯ ಆಯ್ಕೆ ಸರಿಯಾಗಿ ಮಾಡಿಕೊಂಡು ನಡಿಗೆ ಪ್ರಯಾಣ ಮುಂದುವರಿಸಬೇಕು. ಎಲ್ಲೆಲ್ಲಿಂದ ಇಲ್ಲಿಯತನಕ ಬರುವಾಗ ಯಾರ್ಯಾರ ಅನುಭವ ಹೇಗೇ ಇದ್ದರೂಈ ಸ್ಥಳಕ್ಕೆ ತಲುಪಿ ಇಲ್ಲೇ ಇರುವಷ್ಟು ಹೊತ್ತು ತಲುಪಿರುವ ಎಲ್ಲರದೂ ಬಹುತೇಕ ಒಂದೇ ತರಹದ ಅನುಭವ. ಮೊದಲೇ ಇಂತಹಲ್ಲಿ ಹೋಗಬೇಕೆಂದು ತೀರ್ಮಾನ ಮಾಡಿಕೊಂಡವರಿಗೂ ಅಥವಾ ಈ ಸ್ಥಳಕ್ಕೆ ಬಂದ ಮೇಲೆ ಈ ಹಾದಿಯೋ ಆ ದಾರಿಯೋ ಅಂತ ಯೋಚಿಸಿ ಮುಂದುವರಿಯುವವರಿಗೂ ಎಲ್ಲರಿಗೂ ಒಮ್ಮೆ ಇಲ್ಲಿಗೆ ಬಂದ ಮೇಲೆ ಸಣ್ಣ ಗೊಂದಲ. ಮತ್ತೆ ಈ ಸ್ಥಳವನ್ನು ಹಾದು, ಹೋಗಬೇಕಾದಲ್ಲಿಗೆ ಹೋದ ಮೇಲೆ, “ಛೆ ಇನ್ನೊಂದು ಮಾರ್ಗದಲ್ಲಿ ಹೋಗಿದ್ದಿದ್ದರೆ ಆಗಬೇಕಾದ ಕೆಲಸದ ಪರಿಣಾಮ ಬೇರೆ ಇರುತ್ತಿತ್ತೇನೋ” ಅಥವಾ “ಮುಟ್ಟುವಲ್ಲಿಗೆ ಬೇಗ ತಲುಪುತ್ತಿದ್ದೆವೋ ಏನೋ” ಎಂದು ಮುಂದೆಂದೋ ವಿಮರ್ಶೆ ಮಾಡುವುದೋ ಪಶ್ಚತ್ತಾಪ ಪಡುವುದೋ ಇದೆ.

ಇನ್ನು ಆ ಊರಿಗೆ ಹೊಸಬರು ಅಪರಿಚಿತರು ಬರುವುದಿದ್ದರೆ ಆ ಜಾಗದ ಗುರುತು ಹೇಳಿ ಅವರು ಹೋಗಬೇಕಾದಲ್ಲಿಗೆ ಹೋಗಲು ಯಾವ ಹಾದಿಯನ್ನು ಆಯಬೇಕು ಯಾವ ರಸ್ತೆಯನ್ನು ಬಿಡಬೇಕು ಎಂದು ಕಾಳಜಿಯಲ್ಲಿ ನಿರ್ದೇಶನ ನೀಡುವುದೂ ಇದೆ. ಅದು ಸಣ್ಣ ಊರು ಅಥವಾ ಹಳ್ಳಿಯಾಗಿದ್ದರೆ ಸಂಜೆಯ ಮೇಲೆ ಜನ ಪಟ್ಟಾಂಗಕ್ಕೆ ಸೇರುವುದು, ಆಸುಪಾಸಿನ ಅಂಗಡಿಗಳಲ್ಲಿ ಸುದ್ದಿ ಆಚೀಚೆ ಆಗುವುದೂ ವಿಶೇಷ ವಿಚಿತ್ರ ಗುಸುಗುಸುಗಳು ಹುಟ್ಟುವುದೂ ಈ ಆಯಕಟ್ಟಿನ ಸ್ಥಾನದ ಮೂಲಕವೇ. ರಸ್ತೆಗಳು ಕೂಡಿ ಕವಲೊಡೆಯುವಂತೆಯೇ ಸುದ್ದಿಗಳೂ. ದೊಡ್ಡಪೇಟೆ ಅಥವಾ ನಗರ ಆಗಿದ್ದರೆ ಇಂತಹ ಸ್ಥಳದಲ್ಲಿ ಅಲ್ಲೇ ಒಂದು ಹಸಿರು ಅರಶಿನ ಕೆಂಪುಗಳು ಸರತಿಯಲ್ಲಿ ಮಿಟುಕುವ ಸಿಗ್ನಲ್ ಕಂಬ ಮತ್ತೆ ಯಾರು ಎತ್ತ ಹೋಗಬೇಕು ಹೋಗಬಾರದು ಎನ್ನುವುದರ ಮೇಲೆ ಪರಮೋಚ್ಚ ನಿಯಂತ್ರಣ ಇರುವ ಟ್ರಾಫಿಕ್ ಪೊಲೀಸ್ ಇರುವ ಸಾಧ್ಯತೆಯೂ ಇದೆ. ಎಂತಹ ಊರೇ ಆದರೂ ಅಲ್ಲಿನ ಪ್ರಯಾಣ ವಾಹನ ತಿರುಗಾಟ ಯಾರ ಅನುಮತಿಯ ಮೂಲಕ ನಡೆಯುವಂತಹದ್ದೋ, ಸ್ವಯಂ ಪ್ರೇರಿತವೋ ಚಾಲಿತವೋ ಅಥವಾ ಇವ್ಯಾವವೂ ಅಲ್ಲದ ಪೂರ್ಣ ಸ್ವೇಚ್ಚೆಯದ್ದೋ, ಈ ಸ್ಥಳಕ್ಕೆ ಒಮ್ಮೆ ಬಂದ ಮೇಲೆ ಮುಂದೆಲ್ಲಿಗೆ ಎನ್ನುವುದು ಗೊಂದಲವೇ. ಇಂತಹ ಜಾಗವನ್ನು ಆಯಾ ಊರಿನ “ಕತ್ರಿ” ಎಂದೂ ಕರೆಯಬಹುದು.

ಕೂಡಿ ಬೇರೆಯಾಗುವುದಕ್ಕೋ, ಎಡ ಬಲಗಳು ಅದಲುಬದಲಾಗುವುದಕ್ಕೋ, ಒಂದನ್ನೊಂದು ಹಾದುಹೋಗುವುದಕ್ಕೋ ಮತ್ತೆ ಆಕಾರ ರಚನೆಯಲ್ಲಿ ಕತ್ತರಿಯ ಗುಣ ಲಕ್ಷಣ ಹೊಂದಿರುವುದಕ್ಕೋ ಆ ಹೆಸರೇ ಇಂತಹ ಜಾಗಕ್ಕೆ ಸೂಕ್ತ ಇರಬೇಕು. ಇಂತಹ ಕತ್ರಿಯನ್ನು ತಮ್ಮ ಕತೆ ಕಾವ್ಯಗಳಲ್ಲಿಯೂ ಬರಮಾಡಿಸಿಕೊಂಡು ವಿಶಿಷ್ಟ ಗುರುತರ ಸ್ಥಾನ ನೀಡುವುದಿದೆ. ಕತೆಯ ಪಾತ್ರಗಳನ್ನು ಓದುವವರನ್ನು ಒಂದು ಕವಲು ದಾರಿಯಲ್ಲಿ ನಿಲ್ಲಿಸುವುದೂ ನಡೆಯುತ್ತದೆ. ಜಯಂತ ಕಾಯ್ಕಿಣಿಯವರ ಕತೆಗಳಲ್ಲಿ ಕತ್ರಿಗಳು ಆಗಾಗ ಬರುವುದಿದೆ. ಕುಮಟಾದ ಮಿರ್ಜಾನ ಕತ್ರಿ, ಗೋವೆಯ ಫರ್ಮಾನ್ ಗುಡಿ ಕತ್ರಿಗಳಲ್ಲೇ ಕತೆ ಶುರು ಆಗುವುದು. ಕತೆಯ ಕೇಂದ್ರ ಪಾತ್ರಗಳು ಹಾದು ಹೋಗುವುದೂ ಉಂಟು. ಮತ್ತೆ, ಅಂತಹ ಕತ್ರಿಯಲ್ಲಿ ಹಾದು ಹೋಗುವ ರಸ್ತೆಗಳನ್ನು ಅಥವಾ ಅಂತಹ ರಸ್ತೆಗಳ ನಡಿಗೆಗೆ ಹೋಲಿಸಬಹುದಾದ ದೈನಂದಿನ ಅನುಭವಗಳನ್ನು ಮತ್ತೆ ಆ ಸ್ಥಳದಲ್ಲಿ ಹುಟ್ಟುವ ಆಯ್ಕೆಯ ಗೊಂದಲ, ವಿಭಜಿತ ಅಭಿಪ್ರಾಯಗಳ ಸಂದರ್ಭಗಳನ್ನು ಆಂಗ್ಲರು “ಕ್ರಾಸ್ ರೋಡ್ಸ್” ಎಂದು ಕರೆದು ವಿವರಿಸುವುದಿದೆ.


ರಸ್ತೆಗಳು ಒಂದನ್ನೊಂದು ಹಾದು ಹೋಗುವ ಜಾಗದ ಹೆಸರು ಯಾವ ಭಾಷೆಯಲ್ಲಿ ಏನೇ ಆದರೂ ಅಲ್ಲಿ ಹಾದು ಹೋಗುವವರ ಅನುಭವ ಗೊಂದಲ ಯಾವುದೇ ಊರು ದೇಶಗಳಲ್ಲಿಯೂ ಸರಿಸುಮಾರು ಒಂದೇ ತರಹದ್ದು. ನಾವೂ ಎಲ್ಲೆಲ್ಲಿಂದಲೋ ಈ ಕಾಲದ ಬಹು ಜನಪ್ರಿಯ ಹಾಗು ಕುಖ್ಯಾತ ಸಾಮೂಹಿಕ ಪ್ರಯಾಣದಲ್ಲಿ ತೊಡಗಿದವರು, ಸದ್ಯಕ್ಕೆ ಇಷ್ಟು ರಹದಾರಿ ಗಮಿಸಿ ಕ್ರಮಿಸಿ ಇಲ್ಲೊಂದು ಕತ್ರಿಯಲ್ಲಿ ಈಗಷ್ಟೇ ಬಂದು ನಿಂತಿದ್ದೇವೆ. ಕೋವಿಡ್ ಕತ್ರಿಯಲ್ಲಿ. ಇಷ್ಟಾಗುವಾಗ, ಬಲುದೀರ್ಘ, ಕಠಿಣ, ಆಕಸ್ಮಿಕ ತಿರುವುಗಳ ಎಂಬೆಲ್ಲ ವಿಶೇಷಣಗಳಿಂದ ವರ್ಣಿಸಬಹುದಾದ ಹಾದಿಗಳಲ್ಲಿ ಈಗಾಗಲೇ ನಡೆನಡೆಯುತ್ತ ಮತ್ತೆ ನಡಿಗೆಯನ್ನು ಅನಿವಾರ್ಯವಾಗಿ ಅಲ್ಲಲ್ಲೇ ನಿಲ್ಲಿಸಿ ಕಳೆದುಹೋದವರ ಸಂಖ್ಯೆ ಒಂದು ಮಿಲಿಯನ್ ಅಥವಾ ಹತ್ತು ಲಕ್ಷ ತಲುಪಿದೆ.

ಇದು ಕೋವಿಡ್ ಕಾರಣಕ್ಕೆ ಜಗತ್ತಿನ ಮೊದಲ ಸಾವು ದಾಖಲೆಯಾದ ಜನವರಿ ಹನ್ನೊಂದರಿಂದ ಮೊನ್ನೆ ಮೊನ್ನೆಯ ಸೆಪ್ಟೆಂಬರ್ ೨೯ರ ವರೆಗಿನ ಒಟ್ಟು ಲೆಕ್ಕ. ಎಲ್ಲೋ ದೂರದಲ್ಲಿ ಜತನದಲ್ಲಿ ಕುಳಿತ ವಿಶ್ವ ಆರೋಗ್ಯ ಸಂಸ್ಥೆಯ ಕಡತದಿಂದ ಈ ಸಂಖ್ಯೆ ಹೊರಬಂದದ್ದಾದ್ದರಿಂದ ನಿಜವಾದ ಗಣತಿ ಇನ್ನೂ ಹೆಚ್ಚಿರಬಹುದು. ಈ ಹಿಂದಿನ ಭೀಕರ ಸಾಂಕ್ರಾಮಿಕ ರೋಗಗಳಾದ ಸಿಡುಬು, ಪ್ಲೇಗ್ ಇತ್ಯಾದಿಗಳ ಕಾರಣಕ್ಕೆ ಆದ ಸಾವುಗಳಿಗೆ ಹೋಲಿಸಿದರೆ ಈ ಸಂಖ್ಯೆ ತೀರಾ ಕಡಿಮೆ ಅನಿಸಿದರೂ ಅವೆಲ್ಲ ಎಂದೋ ಯಾರದೋ ಕಾಲದಲ್ಲಿ ಘಟಿಸಿದವು, ಸ್ವಾನುಭವಕ್ಕೆ ದೂರವಾದ ಪುಸ್ತಕದಲ್ಲಿ ಓದಿ ಯಾರಿಂದಲೋ ಕೇಳಿ ತಿಳಿದವು. ಇದೀಗ ಆಗುತ್ತಿರುವುದನ್ನು ಆ ಕಾಲದಲ್ಲಿ ನಡೆದ ಆರೋಗ್ಯ ದುರಂತಗಳಿಗೆ ಹೋಲಿಸಿ ಸಣ್ಣದು ಸೌಮ್ಯವಾದದ್ದು ಎಂದು ವಾದಿಸಬಹುದಾದರೂ ಈಗ ನಡೆಯುತ್ತಿರುವ ಕೊರೊನ ಪಯಣದಲ್ಲಿ ನಾವೆಲ್ಲಾ ಪ್ರತ್ಯಕ್ಷ ಯಾತ್ರಿಗಳು ಆಗಿರುವುದರಿಂದ ನಮ್ಮ ನಮ್ಮ ಅನುಭವದಲ್ಲಿ ಈಗಿನದೇ ಮಹತ್ವದ್ದು ಪ್ರಭಾವಶಾಲಿಯಾದುದು ಅನಿಸುತ್ತದೆ.

ಇಂತಹ ಕತ್ರಿಯನ್ನು ತಮ್ಮ ಕತೆ ಕಾವ್ಯಗಳಲ್ಲಿಯೂ ಬರಮಾಡಿಸಿಕೊಂಡು ವಿಶಿಷ್ಟ ಗುರುತರ ಸ್ಥಾನ ನೀಡುವುದಿದೆ. ಕತೆಯ ಪಾತ್ರಗಳನ್ನು ಓದುವವರನ್ನು ಒಂದು ಕವಲು ದಾರಿಯಲ್ಲಿ ನಿಲ್ಲಿಸುವುದೂ ನಡೆಯುತ್ತದೆ. ಜಯಂತ ಕಾಯ್ಕಿಣಿಯವರ ಕತೆಗಳಲ್ಲಿ ಕತ್ರಿಗಳು ಆಗಾಗ ಬರುವುದಿದೆ.

ಹಿಂದಿನ ಲೆಕ್ಕ ಇಂದಿನ ಗಣತಿಗೆ ಸೇರದೇ ಇನ್ನೂ ಉಳಿದಿರುವವರು ಪ್ರಯಾಣ ಮುಂದುವರಿಸುತ್ತಿರುವವರು ಅವರವರ ಬೀದಿ ವಠಾರ ಮನೆಗಳಿಂದಲೇ ಅಥವಾ ಕೂತಲ್ಲಿಂದ ಮಲಗಿದಲ್ಲಿಂದಲೇ ಕೋವಿಡ್ ಹಾದಿಯಲ್ಲಿ ಸುಮಾರು ಆರು ತಿಂಗಳುಗಳ ಹಿಂದೆ ನಡಿಗೆ ಆರಂಭಿಸಿದವರು. ನಿಧಾನವಾಗಿ ಆರಂಭವಾದ ಹೆಜ್ಜೆಗಳು ಮುಂದೆ ವಿಪರೀತ ಗತಿ ಪಡೆದು ಅಪಾರ ಸಾವು ನೋವು ಹಾನಿ ಸಂಕಟ ಸೃಷ್ಟಿಯಾಗಿ ಮತ್ತೆ ಕಳೆದೆರಡು ತಿಂಗಳುಗಳಲ್ಲಿ ಇಲ್ಲಿನ ಸ್ಥಿತಿ ಒಂದು ಹದ ಹತೋಟಿಗೆ ಬಂದಿದ್ದರ ಬಗೆಗೆ ಈ ಹಿಂದೆ ಹೇಳಿಯಾಗಿದೆ. ಹಾಗಂತ ಈ ಸೋಂಕು ಕಳೆದ ಒಂದೆರಡು ತಿಂಗಳುಗಳ ಮಟ್ಟಿಗಾದರೂ ಹತೋಟಿಗೆ ಬಂದ ವಿಚಾರದಲ್ಲಿ ಕೆಲವು ಭಿನ್ನ ವಾದಗಳಿವೆ. ಕೆಲವರು ವೈರಾಣುವಿನ ತಳಿ ಸ್ವಲ್ಪ ದುರ್ಬಲ ಆದದ್ದೇ ಕಾರಣ ಎನ್ನುವವರು, ಮತ್ತೆ ಕೆಲವರು ಸರಕಾರದ ಮೊದಮೊದಲ ತಪ್ಪು ಹೆಜ್ಜೆಗಳು, ಬೇಕಾದಷ್ಟು ತಯಾರಿ ಸಕಾಲದಲ್ಲಿ ಮಾಡದ್ದು, ಹೊಚ್ಚಹೊಸ ಬಗೆಯ ಆರೋಗ್ಯ ಬಿಕ್ಕಟ್ಟು ಇತ್ಯಾದಿ ಕಾರಣಗಳಿಂದ ಸೂಕ್ಷ್ಮ ಆರೋಗ್ಯ ಸ್ಥಿತಿಯವರೆಲ್ಲ ಇಷ್ಟರಲ್ಲೇ ಜೀವತೆತ್ತು ಈಗ ಇರುವವರಲ್ಲಿ ಸೋಂಕು ಹಬ್ಬುತ್ತಿದ್ದರೂ ಆರೋಗ್ಯ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಕಾರಣಕ್ಕೆ ಅವರು ತಡೆದುಕೊಳ್ಳುತ್ತಿರುವವರು ಎಂದು ಅಭಿಪ್ರಾಯ ಪಡುವವರು.

ಏಪ್ರಿಲ್ ನಿಂದ ಜೂನ್ ತನಕ ಪೂರ್ತಿ ಕೈತಪ್ಪಿದೆ ಹದಗೆಟ್ಟಿದೆ ಎಂದು ತೋರಿದ ಪರಿಸ್ಥಿತಿ ಜುಲೈ- ಆಗಸ್ಟ್ ತಿಂಗಳುಗಳಲ್ಲಿ ನಿಯಂತ್ರಣಕ್ಕೆ ಬಂತು ಅನಿಸಲು ಕಾರಣ ಏನೇ ಇದ್ದರೂ, ಪರಿಣಾಮದಲ್ಲಿ ಸೋಂಕಿನ ಸಂಖ್ಯೆ, ಅಸುನೀಗುವವರ ಸಂಖ್ಯೆ ತೀವ್ರವಾಗಿ ಇಳಿಮುಖವೂ ಆಗಿತ್ತು. ಆಮೇಲೆ ಬಿಗಿಪಟ್ಟಿನ ನಿರ್ಬಂಧದ ಕಟ್ಟುಗಳನ್ನು ಒಂದೊಂದಾಗಿ ಬಿಚ್ಚುವುದೂ ಶುರು ಆಗಿತ್ತು. ಲಾಕ್ ಡೌನ್ ಸಡಿಲಿಕೆಯ ಮಹತ್ವದ ಹೆಜ್ಜೆಗಳಾಗಿ ಹೋಟೆಲು ರೆಸ್ಟೋರೆಂಟ್ ಪಬ್ ಗಳು ತೆರೆಯಲ್ಪಟ್ಟಿದ್ದವು. ಎಲ್ಲ ಊರಿನ ಎಲ್ಲ ಹಂತದ ಶಾಲೆ ಕಾಲೇಜುಗಳ ಬಾಗಿಲುಗಳೂ ತೆರೆದಿದ್ದವು. ಅಂಗಡಿಗಳೂ ವ್ಯಾಪಾರ ಶುರು ಮಾಡಿದ್ದವು. ಎಲ್ಲಿ ಮುಖಗವಸು ಹಾಕಬೇಕು, ಎಷ್ಟು ಜನ ಎಷ್ಟು ಅಂತರ ಇಟ್ಟು ಹೇಗೆ ಬೆರೆಯಬಹುದು, ಮನೆಯ ಒಳಗೆಷ್ಟು ಜನ ಸೇರಬಹುದು? ಹೊರಗೆಷ್ಟು ಜನರು ಒಟ್ಟಾಗಬಹುದು? ಮದುವೆಗಾದರೆ ಎಷ್ಟು ಆಮಂತ್ರಿತರು? ಶವಸಂಸ್ಕಾರಕ್ಕೆ ಎಷ್ಟು ಆಹ್ವಾನಿತರು? ಕಟ್ಟುಕಟ್ಟಳೆ ಮೀರಿದವರಿಗೆ ಎಷ್ಟು ದಂಡ?… ಹೀಗೆ ನಡಿಗೆಯ ಪ್ರತಿಹೆಜ್ಜೆ ಹಂತದ ಬಗೆಗೂ ನಿಯಮ ನಿಬಂಧನೆಗಳ ಕಾವಲು ಎಚ್ಚರಗಳ ನಿರ್ದೇಶನ ದೊರೆಯುತ್ತಿತ್ತು.

ಆರೋಗ್ಯ ಶಿಕ್ಷಣ ಆರ್ಥಿಕತೆಗಳ ನಡುವೆ ಆಯ್ಕೆಗಳು ನಡೆದು, ಸಪೂರ ಹಗ್ಗದ ಮೇಲಿನ ನಾಜೂಕಿನ ಹೆಜ್ಜೆಗಾರಿಕೆಯಂತೆ ತೋರುತ್ತಿತ್ತು. ಇಲ್ಲಿಯ ತನಕವೂ ಬರೇ ಮುನ್ನೆಚ್ಚರಿಕೆ, ನಿರ್ಬಂಧ, ಪರೀಕ್ಷೆ, ವೈದ್ಯಕೀಯ ವ್ಯವಸ್ಥೆ , ಜವಾಬ್ದಾರಿಯುತ ವೈಯಕ್ತಿಕ ವರ್ತನೆಗಳ ಬಲದಲ್ಲೇ ಬಹುಷಃ ಕಡಿಮೆಯಾಗಿದ್ದ ಅಥವಾ ಹದ್ದುಬಸ್ತಿಗೆ ಬಂದಿದ್ದ ಸೋಂಕು, ಯಾವುದೇ ಔಷಧಿಯ ಬೆಂಬಲ ಇಲ್ಲದೇ ನಡೆಯುತ್ತಿರುವ ಹೋರಾಟದಲ್ಲಿ ಹಿಂದಿನ ಬಿಗಿಗಳೆಲ್ಲ ಸಡಿಲವಾಗಲಾರಂಭಿಸಿದಾಗ ಮತ್ತೆ ಹಬ್ಬಲು ಹೆಚ್ಚಲು ಆರಂಭಿಸಿತು. ಪ್ರತೀ ವಾರಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿರುವುದು ಸಾವಿನ ಸಂಖ್ಯೆ ನಿತ್ಯವೂ ಸ್ವಲ್ಪಸ್ವಲ್ಪವೇ ಹೆಚ್ಚುತ್ತಿರುವುದು ಈ ಕಾಲದ ಇತ್ತೀಚಿನ ವರ್ತಮಾನ. ಏರಿ ಇಳಿದು ಮತ್ತೆ ಏರುತ್ತಿರುವ ಈ ಪ್ರಕ್ರಿಯೆಯನ್ನು ಸಮುದ್ರದ ಅಲೆಗಳಿಗೆ ಹೋಲಿಸಿ ಇದೀಗ ನಾವು ಎರಡನೆಯ ಅಲೆಯಲ್ಲಿದ್ದೇವೆ ಎಂದೂ ನಮಗೆ ತಿಳಿಸಿ ಹೇಳಲಾಗಿದೆ. ಮೊದಲ ಅಲೆಯಲ್ಲಿ ಮಾಡಿದ್ದು ಮಾಡದ್ದು ಇನ್ನೀಗ ಏನು ಮಾಡಬಹುದು/ಬಾರದು ಎನ್ನುವ ಚರ್ಚೆಗಳು ವೇಗ ಪಡೆಯುತ್ತಿವೆ.

ಕೋವಿಡ್ ಪಯಣದ ಮೊದಮೊದಲ ಹೆಜ್ಜೆಗಳು ದಿಕ್ಕುದೆಸೆಯಿಲ್ಲದೆ ಸಾಗಿದಂತೆ ಅನುಭವವಾಗಿ, ಆಮೇಲೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಮಾಮೂಲಿ ರಸ್ತೆಯಲ್ಲಿ ತೆರಳುತ್ತಿದ್ದೇವೆ ಎನ್ನುವಾಗ ಇಷ್ಟೊತ್ತು ನಾವೆಲ್ಲ ನಡೆದ ನಮ್ಮ ನಮ್ಮ ಪಯಣಗಳು ಈ ಕತ್ರಿಯಲ್ಲಿ ಬಂದು ಸಿಕ್ಕಿಕೊಂಡಿವೆ, ಮುಂದಿರುವ ಹಾದಿ ನಿಗೂಢವೂ ಗೊಂದಲಮಯವೂ ಆಗಿದೆ.

ಈ ಗೋಜಲಿನ ಸಂಧಿಕಾಲದಲ್ಲಿ ನಾವು ನೀವು ಅವರು ಇವರು ಎಂದರೇನು ಇಲ್ಲಿನ ವಿಜ್ಞಾನಿಗಳೂ ಮುಂದಿನ ಮಾರ್ಗ ಹೇಗಿರಬೇಕು, ತಂತ್ರ ಯಾವುದಿರಬೇಕು ಎನ್ನುವುದರ ಬಗೆಗೆ ತಮ್ಮೊಳಗೇ ವಿಭಜಿತರಾಗಿ ವಿಭಿನ್ನ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ. ಸರಕಾರ ಇದೀಗ ಮತ್ತೆ ನಿರ್ಬಂಧವನ್ನು ಹೇರುತ್ತಿರುವ ಹೊತ್ತಿನಲ್ಲಿ ನಿರ್ಬಂಧಗಳ ಬಿಗಿ ಸಾಕಾಗಲಿಲ್ಲ ಎನ್ನುವ ವಿಜ್ಞಾನಿಗಳ ಪಂಗಡ ಒಂದಾದರೆ, ಅತಿಯಾದ ನಿರ್ಬಂಧದಿಂದ ಬೇರೆಬೇರೆ ಕಾಯಿಲೆ ಇರುವ ರೋಗಿಗಳು ಆಸ್ಪತ್ರೆಯನ್ನು ಸೇರಲಾಗದೆ ಸರಿಯಾದ ಕಾಲಕ್ಕೆ ಶುಶ್ರೂಷೆ ಸಿಗದೇ ಸಂಕಟ ಅನುಭವಿಸಬೇಕಾಗಬಹುದು ಸಾಯಬೇಕಾಗಬಹುದು ಎನ್ನುವ ಗುಂಪು ಮತ್ತೊಂದು. ಒಂದು ಬಗೆಯ ಸಾವನ್ನು ತಪ್ಪಿಸಿಕೊಳ್ಳಲು ಹೋಗಿ ಇನ್ನೊಂದು ಬಗೆಯ ಸಾವು ಇನ್ಯಾರಿಗೋ ಬಂದೀತು ಎನ್ನುವುದು ಒಂದು ವಾದವಾದರೆ, ಅರೆಮನಸಿನ ನಿರ್ಬಂಧಗಳಿಂದ ಯಾವ ಪ್ರಯೋಜನವೂ ಆಗದು ಲಾಕ್ಡೌನ್ ಪಟ್ಟು ಇನ್ನೂ ತೀವ್ರಗೊಳಿಸಿ ಎನ್ನುವ ಪ್ರತಿವಾದ ಮತ್ತೊಬ್ಬರದು.

ಇನ್ನು ಈ ನಡಿಗೆಯಲ್ಲಿ ಭಾಗಿಯಾಗುತ್ತಿರುವ ಜನಸಾಮಾನ್ಯರಲ್ಲಿಯೂ ಕೆಲವರದು ಸಮಾಜವಾದಿ ಉದಾರವಾದಿ ನಿಲುವಾದರೆ ಮತ್ತೆ ಕೆಲವರು ಕಟ್ಟುನಿಟ್ಟಿನ ಜಾಗರೂಕತೆಯೇ ಮುಂದಿನ ಹಾದಿ ಎಂದು ನಂಬುವವರು. ಎಲ್ಲಿ ಬೇಕೆಂದರಲ್ಲಿ ಓಡಾಡುವ ಸ್ವಾತಂತ್ಯ್ರ ಬೇಕು ಎನ್ನುವವರು ಒಂದಿಷ್ಟು ಜನರಾದರೆ, ವಯಸ್ಸಿನ ಅಥವಾ ಬೇರೆ ಅನಾರೋಗ್ಯದ ಕಾರಣಕ್ಕೆ ಹೆಚ್ಚು ಅಪಾಯದಲ್ಲಿರುವವರು ಮಾತ್ರ ಮನೆಯಲ್ಲಿ ನಿರ್ಬಂಧದಲ್ಲಿ ಇದ್ದರೆ ಸಾಕು ಎನ್ನುವವರು ಮತ್ತೊಂದಿಷ್ಟು ಮಂದಿ. ಸಮಾಜದ ಎಲ್ಲ ವೃದ್ಧರ ದುರ್ಬಲರ ಆರೋಗ್ಯ ಆಯುಷ್ಯದ ಜವಾಬ್ದಾರಿ ಉಳಿದವರದೂ ಎನ್ನುವವರು ಮತ್ತೆ ಕೆಲವರು. ಇನ್ನು ಆಡಳಿತ ಪಕ್ಷದ ಒಳಗೂ ಒಮ್ಮತವಿಲ್ಲದೇ ಅಭಿಪ್ರಾಯಗಳು ಒಡೆದಿವೆ. ಆರ್ಥಿಕತೆ, ಆರೋಗ್ಯ, ಸುರಕ್ಷತೆ, ಶಿಕ್ಷಣ, ಸಮಾಜ ಜೀವನ, ಸಮತೋಲನ ಎಂದು ಒಂದೊಂದು ಮುಖದ ಮೇಲೆ ಒಂದೊಂದು ಹೆಸರು ಆಯ್ಕೆ ಇರುವ ಹಲವು ಮುಖಗಳ ದಾಳವನ್ನು ತಿರುಗಿಸುತ್ತಾ, ಯಾವ ಮುಖ ಬಿದ್ದರೆ ಯಾವ ಕಡೆ ಎನ್ನುವ ಅಂದಾಜಿನಲ್ಲಿ ಸರಕಾರ ಇದೆ.

ಮುಂಬರುವ ದಿನಗಳಲ್ಲಿ ಯಾವ ಊರಿನ ಯಾವ ನಗರದ ಉದ್ಯಮದ ಉದ್ಯೋಗಳ ಸ್ವರೂಪ ಸ್ಥಿತಿ ಹೇಗಿರಬಹುದು ಎನ್ನುವ ಚರ್ಚೆಯೂ ಪತ್ರಿಕೆ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಸದ್ಯಕ್ಕೆ ಮುಗಿಯದಿರುವ, ಇನ್ನೂ ದೂರ ಸಾಗಬೇಕಾದ ಹಾದಿ ಇದೆಯೆನ್ನುವ ಕಲ್ಪನೆ ಎಲ್ಲರದಾದರೂ ಮುಂದೆ ಆಯ್ದುಕೊಳ್ಳಬೇಕಾದ ರಸ್ತೆ ಯಾವುದು ಎನ್ನುವುದು ಎಲ್ಲರ ಗೊಂದಲ. ನಮ್ಮನಮ್ಮ ಬೇರೆ ಬೇರೆ ಮಾರ್ಗಗಳಲ್ಲಿ ಏರು ತಗ್ಗಿನ ಬೀದಿಗಳಲ್ಲಿ ಇಲ್ಲಿಯ ತನಕ ಸಾಗಿಬಂದಿದ್ದರೂ ಎಲ್ಲರಿಗೂ ಸಾಮಾನ್ಯವಾದ ಬಹುತೇಕ ಒಂದೇ ಬಗೆಯ ಅನುಭವ ನೀಡುವ ಈ ಸಂಧಿ ಸ್ಥಳಕ್ಕೆ ಇದೀಗ ಬಂದು ನಿಂತಿದ್ದೇವೆ. ಕೋವಿಡ್ ಕತ್ರಿಯನ್ನು ತಲುಪಿದ್ದೇವೆ.