ಕಿಲೋಮೀಟರ್ ದೂರದಲ್ಲಿ ಬೈಕು ನಿಲ್ಲಿಸಿ ನಮ್ಮ ಟ್ರೆಕಿಂಗ್ ಆರಂಭಿಸಿದಾಗ ಇದ್ದ ಉತ್ಸಾಹ, ಕ್ಯಾತನಮಕ್ಕಿಯನ್ನು ಅರ್ಧ ಹತ್ತಿದಾಗಲೇ ಬತ್ತುವುದರಲ್ಲಿತ್ತು. ಒಂಚೂರು ಕುಳಿತು ನೀರು ಕುಡಿದು ಕಚ್ಚಾ ರಸ್ತೆಯಲ್ಲಿ ಬೆವರಿಳಿಸಿ, ತುದಿ ತಲುಪುವಾಗ ಜೀಪಿನಲ್ಲಿ ಬಂದವರ ದರ್ಬಾರಿಗೆ ಮನವೊಮ್ಮೆ ಪಿಚ್ಚೆಂದಿತ್ತು. ಆದರೂ ನಡೆದು ಗಮ್ಯ ತಲುಪುವ ಸಾರ್ಥಕ ಭಾವ ಆರಾಮಾಗಿ ತೇಲಿ ಬಂದವರಿಗೆಲ್ಲಿ ಬರಬೇಕು ಎಂದು ನಮಗೆ ನಾವೇ ಬೆನ್ತಟ್ಟಿಕೊಂಡು ಮುನ್ನಡೆದೆವು. ನಡೆವ ದಾರಿ ಆಕಾಶದೆತ್ತರ ಮುಟ್ಟುವ, ಮೋಡಗಳನ್ನೊಮ್ಮೆ ಸವರಬಹುದಾ ಎಂಬ ಕಲ್ಪನೆಗೆ ಎದೆ ಕೋಗಿಲೆಯಾಗಿತ್ತು.
ಚಿಕ್ಕಮಗಳೂರಿನ ‘ಕ್ಯಾತನಮಕ್ಕಿʼ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ ಶುಭಶ್ರೀ ಭಟ್ಟ

ಒಂದು ಭಾನುವಾರ ಎಲ್ಲಾದರೂ ಟ್ರೆಕಿಂಗ್ ಹೊರಡಬೇಕೆಂದುಕೊಂಡಾಗ ಮೊದಲು ಮನಸಿಗೆ ಬಂದ ಹೆಸರೇ ‘ಕ್ಯಾತನಮಕ್ಕಿ’. ಆ ಹೆಸರಿನ ಮೋಹಕ್ಕೆ ಬಿದ್ದು, ರಸ್ತೆ ಸರಿಯಿಲ್ಲವೆಂದು ತಿಳಿದರೂ ಹೊರಟೆವು. ರಿಪೇರಿ ಪದವೇ ತಿಳಿಯದೆ ಮಕಾಡೆ ಮಲಗಿದ್ದ ಅಮಾಯಕ ಕಚ್ಚಾ ರಸ್ತೆಯಲ್ಲಿ ನಮ್ಮ‌ ಬೈಕು ಧಿಂಗಣ ಹಾಕುತ್ತಾ ಸಾಗುತ್ತಿದ್ದರೆ, ಬೆನ್ನುಳುಕುವ ಮುನ್ಸೂಚನೆಗೂ ಜಗ್ಗದ ನಾವು ಜಯಂತ್ ಕಾಯ್ಕಿಣಿ ಪದ್ಯವನ್ನು ಗುನುಗುತ್ತಿದ್ದೆವು. ರಸ್ತೆಯುದ್ದಕ್ಕೂ ಸಿಗುವ ಕಾಫೀ ಹೂವ ಘಮಲು, ಅಚಾನಕ್ಕಾಗಿ ಸಿಗುವ ಪುಟ್ಟ ತೊರೆ, ಚೆಂದದ ಎಸ್ಟೇಟ್ ಮುಂದೆ ಫೋಟೋಗೆ ಪೋಸ್ ಕೊಟ್ಟರೆ ಕೆಂಗಣ್ಣು ಬಿಡುವ ಕಾರ್ಮಿಕರು, ಬೈಕಲ್ಲಿ ಹೋದರೆ ಮುಂದೆ ಕಷ್ಟವೆಂದು ತಮ್ಮ ವ್ಯಾಪಾರ ಕುದುರಿಸಲು ನೋಡುವ ಜೀಪಿನ ಮಾಲಿಕರು, ಪರವೂರಿನವರ ತಲೆ ಸವರುವ ಹೋಂ ಸ್ಟೇ ಮಂದಿ ಎಲ್ಲವನ್ನೂ ಎಲ್ಲರನ್ನೂ ಮನಸಿನ ಕ್ಯಾಮೆರಾದಲ್ಲಿ ಗಮನಿಸುತ್ತಾ ಬರುವಾಗ ಕ್ಯಾತನಮಕ್ಕಿಯ ಕಾಲ್ಬುಡ ತಲುಪಾಗಿತ್ತು.

ಅಲ್ಲಿರುವ ಜೈನ ಬಸದಿಯ ಶುದ್ಧ ಮಕಮಲ್ಲಿನ ಸಿರಿತನವನ್ನೂ, ಸಕಲೈಶ್ವರ್ಯವನ್ನೂ ತೊರೆದು ನಿರಾಕಾರದತ್ತ ತೆರಳಿದ ಸಿದ್ಧಾರ್ಥನನ್ನೂ ಮನ ತುಲನೆ ಮಾಡ್ತಿದ್ದಾಗ ಅಲ್ಲೊಬ್ಬ ವ್ಯಕ್ತಿ ಕ್ಯಾತನಮಕ್ಕಿಯ ಕಾಲ್ಬುಡದಲ್ಲಿದ್ದ ‘ಗಾಳಿಗುಡ್ಡ’ದ ಬಗ್ಗೆ ಹೇಳಿದರು. ಕಡಿದಾದ ರಸ್ತೆಯಲ್ಲಿ ಬೈಕಲ್ಲಿ ಒಂದರ್ಧ ಕಿ.ಮೀ. ತೆರಳಿ, ಬಂಡೆಗಲ್ಲುಗಳ ನಡುವೆ ಇಳಿಜಾರಿನಲ್ಲಿ ಮೆಲ್ಲನಿಳಿದರೆ ಒಂದು ದೊಡ್ಡ ಬಂಡೆಗಲ್ಲಿನ ಕೆಳಗೆ ಅವನು ಕುಳಿತಿದ್ದ. ಮಧ್ಯರಾತ್ರಿಯಲ್ಲಿ ಯಶೋಧರೆಯೆಡೆಗಿನ ಕಡುಮೋಹವನ್ನು, ಮುದ್ದು ರಾಹುಲನನ್ನೂ ತೊರೆದು ಹೊರಟು ಗೌತಮನಾದ ಅಂತರ್ಧಾನಿ.

ಅಲ್ಲಿ ಹರಿಯುತ್ತಿದ್ದ ಸಣ್ಣ ಝರಿಗೂ ಶಾಂತತೆಯ ಲಯವಿತ್ತು. ಧ್ಯಾನಸ್ಥನಾಗಿದ್ದವನ ಧ್ಯಾನ ಕೆಡಿಸಲು ಬಂದ ಅಪ್ಸರೆಯೇ ಅವನನ್ನು ಮೋಹಿಸುತ್ತಾ ಗಿರಿಕನ್ಯೆಯಾಗಿ ಕುಳಿತಿದ್ದಾಳೆಂಬ ಅನಿಸುವಷ್ಟು ಸಹಜವಾಗಿತ್ತು ಅಲ್ಲಿನ ಪರಿಸರ. ಒಂದ್ಹತ್ತು ನಿಮಿಷ ಕಣ್ಮುಚ್ಚಿ ಕುಳಿತೆದ್ದು ಬಂದರೆ, ಜಾವಾ, ಡೆವ್, ಟೆಸ್ಟಿಂಗ್, ಸಿನೆಮಾಟೋಗ್ರಾಫಿ, ಸಾಹಿತ್ಯ ಎಂದು ಹತ್ತಾರು ತಲೆಬಿಸಿಗಳಿಂದ ದೋಸೆ ಕಾವಲಿಯಾಗಿದ್ದ ತಲೆಗೆ ತಣ್ಣೀರು ಸೋಕಿಸಿದಂತೆ‌ ತಂಪಾಗಿತ್ತು. ಮರಳಿ ಬರುವಾಗ ಮನ ಪಾರಿಜಾತದಂತೆ ಹಗುರವಾಗಿ, ಮೃದುವಾಗಿ ಘಮಿಸತೊಡಗಿದ್ದು ಅನುಭವಕ್ಕೆ ಬರತೊಡಗಿತ್ತು. ಅಲ್ಲಿಂದ ಚೂರು ಈಚೆ ಬಂದು ಕ್ಯಾತನಮಕ್ಕಿಯನ್ನು ಏರಬೇಕೆಂದು ಹೊರಟೆವು.

ಕಿಲೋಮೀಟರ್ ದೂರದಲ್ಲಿ ಬೈಕು ನಿಲ್ಲಿಸಿ ನಮ್ಮ ಟ್ರೆಕಿಂಗ್ ಆರಂಭಿಸಿದಾಗ ಇದ್ದ ಉತ್ಸಾಹ, ಕ್ಯಾತನಮಕ್ಕಿಯನ್ನು ಅರ್ಧ ಹತ್ತಿದಾಗಲೇ ಬತ್ತುವುದರಲ್ಲಿತ್ತು. ಒಂಚೂರು ಕುಳಿತು ನೀರು ಕುಡಿದು ಕಚ್ಚಾ ರಸ್ತೆಯಲ್ಲಿ ಬೆವರಿಳಿಸಿ, ತುದಿ ತಲುಪುವಾಗ ಜೀಪಿನಲ್ಲಿ ಬಂದವರ ದರ್ಬಾರಿಗೆ ಮನವೊಮ್ಮೆ ಪಿಚ್ಚೆಂದಿತ್ತು. ಆದರೂ ನಡೆದು ಗಮ್ಯ ತಲುಪುವ ಸಾರ್ಥಕ ಭಾವ ಆರಾಮಾಗಿ ತೇಲಿ ಬಂದವರಿಗೆಲ್ಲಿ ಬರಬೇಕು ಎಂದು ನಮಗೆ ನಾವೇ ಬೆನ್ತಟ್ಟಿಕೊಂಡು ಮುನ್ನಡೆದೆವು. ನಡೆವ ದಾರಿ ಆಕಾಶದೆತ್ತರ ಮುಟ್ಟುವ, ಮೋಡಗಳನ್ನೊಮ್ಮೆ ಸವರಬಹುದಾ ಎಂಬ ಕಲ್ಪನೆಗೆ ಎದೆ ಕೋಗಿಲೆಯಾಗಿತ್ತು.

ಚೂಪಂಚಿನ ತುದಿ ತಲುಪಿದಾಗ ‘ಬಂದ್ರಾ? ಆರಾಮಾ?’ ಎನ್ನುತ್ತಾ ತನ್ನ ಹಸಿರ ಸೆರಗಂಚಲಿ ಹಣೆ ಬೆವರು ಒರೆಸಿದ ಸೋದರತ್ತೆಯಂತಹ ಮಮತೆಯ ಕ್ಯಾತನಮಕ್ಕಿ ತೋರಿದಾಗ, ಆವರಿಸಿದ ಸುಸ್ತೆಲ್ಲಾ ಕ್ಷಣಾರ್ಧದಲ್ಲಿ ಕರಗಿತ್ತು. ಪಚ್ಚೆ ಹಸಿರಿನ ಕಡುನೀಲಿ ಬುಟ್ಟಾ ಒಡಲಿನ ಸೀರೆಯುಟ್ಟು, ಗಿಳಿ ಹಸಿರಿನ ಕುಪ್ಪಸ ತೊಟ್ಟ ಕ್ಯಾತನಮಕ್ಕಿಯ ಸುತ್ತಲೂ ಗಮನ ಸೆಳೆಯಲು ಬಣ್ಣದ ಚಿಟ್ಟೆಗಳು, ಬೆಳ್ಳಕ್ಕಿ ಹಿಂಡುಗಳು ಹಾರಾಡುತ್ತಿದ್ದವು, ಥೇಟ್ ಸುಂದರಿಗೆ ಕಾಳು ಹಾಕುವ ಪೋಲಿ ಹುಡುಗರಂತೆ. ಇನ್ನು ಮನೆಯವರಿಂದ ಹೊರತಳ್ಳಲ್ಪಟ್ಟ ವೃದ್ಧರೂ, ಗಂಡೆಂದು ಕಾಡಿಗಟ್ಟಿಸಿಕೊಂಡ ಪುಂಡರೂ, ಕೊಬ್ಬಿದೆದೆಯ ಕನ್ಯೆಯರೂ ಇದ್ದ ಜಾನುವಾರುಗಳ ಗುಂಪಂತೂ ಹೇರಳವಾಗಿತ್ತು. ಸಿನೆಮಾದಲ್ಲಿ ತೋರಿಸುವ ದೃಶ್ಯ ವೈಭವವೇ ಕಣ್ಮುಂದಿತ್ತು.

ಕಡಿದಾದ ರಸ್ತೆಯಲ್ಲಿ ಬೈಕಲ್ಲಿ ಒಂದರ್ಧ ಕಿ.ಮೀ. ತೆರಳಿ, ಬಂಡೆಗಲ್ಲುಗಳ ನಡುವೆ ಇಳಿಜಾರಿನಲ್ಲಿ ಮೆಲ್ಲನಿಳಿದರೆ ಒಂದು ದೊಡ್ಡ ಬಂಡೆಗಲ್ಲಿನ ಕೆಳಗೆ ಅವನು ಕುಳಿತಿದ್ದ. ಮಧ್ಯರಾತ್ರಿಯಲ್ಲಿ ಯಶೋಧರೆಯೆಡೆಗಿನ ಕಡುಮೋಹವನ್ನು, ಮುದ್ದು ರಾಹುಲನನ್ನೂ ತೊರೆದು ಹೊರಟು ಗೌತಮನಾದ ಅಂತರ್ಧಾನಿ.

ಬೀಸುವ ಗಾಳಿಯ ಶಬ್ದವೂ ಕಿವಿ ಸೋಕುವಷ್ಟು ಶಾಂತವಾದ ಪರಿಸರದಲ್ಲಿ ಕಣ್ಮುಚ್ಚಿ ಕುಳಿತಾಗ ದಶಕಗಳಿಂದ ಅರಸುತ್ತಿದ್ದ ನೆಮ್ಮದಿಯ ಬೆಳಕೊಂದು ಮೆಲ್ಲ ತೂರಿ ಬಂತು. ಅಲ್ಲೇ ಕುರುಚಲು ಹುಲ್ಲು ಹಾಸಿನ ಮೇಲೆ ಮಲಗಿ, ಆಕಾಶವನ್ನೇ ಚಾದರವನ್ನಾಗಿಸಿ ಮಲಗಿದವರ ನಿರಾಳ ಭಾವ ಕಂಡ ಚಂದಿರನಿಗೂ ಅಸೂಯೆಯಾಗಿ ಹಗಲಲ್ಲೇ ಇಣುಕಿ ಹೋದ ಗುರುತಾಯ್ತು. ತಾಸುಗಟ್ಟಲೇ ಕ್ಯಾತನಮಕ್ಕಿಯ ಕಾಲಮೇಲೆ ಕೂತು ಮುದ್ದಿಸಿಕೊಂಡು ಮರಳುವಾಗ, ಮೊದಲ ಬಾರಿಗೆ ದೂರದೂರಿನ ಕಾಲೇಜಿಗೆ ತೆರಳುವ ಸಂಕಟ. ಮನಸ್ಸಿಲ್ಲದ ಮನಸ್ಸಿನಿಂದ ಹೊರಟಾಗ ಎದುರಾದ ಜೀಪಿನವರ ಕೇಕೆ ಕಲರವಗಳನ್ನೂ ಮೀರಿ ಮನದಲ್ಲೊಂದು ದಿವ್ಯ ಮೌನವಿತ್ತು.

ಕ್ಯಾತನಮಕ್ಕಿಯ ಮಡಿಲಿಂದ ಕೆಳಗಿಳಿದು ಬಂದರೆ ಅಲ್ಲೊಂದು ವಯಸ್ಸಾದ ದಂಪತಿಯ ಪುಟ್ಟ ಅಂಗಡಿಯಿತ್ತು. ಲಿಂಬೂ ಸೋಡಾ ಕುಡಿಯೋಣವೆಂದು ಅವರ ಅಂಗಡಿಯೊಳಗೆ ಕಾಲಿಟ್ಟಾಗ ಅವರು ತೋರಿದ ಆತ್ಮೀಯತೆಗೆ ಬೆಟ್ಟ ಹತ್ತಿಳಿದ ಆಯಾಸ ಅರ್ಧ ಕಮ್ಮಿಯಾಗಿತ್ತು. ಗಟಗಟನೇ ಕುಡಿದು ನೆತ್ತಿ ಹತ್ತಿಸಿಕೊಂಡ ನನಗೆ ‘ನಿಧಾನ ಕುಡಿ ಮಗಾ’ ಎಂದು ಬೆನ್ನು ತಿಕ್ಕಿ ಅಮ್ಮನ ಅಂತಃಕರಣ ತೋರಿದ ಅಜ್ಜಿಯಂತೂ ನನಗೆ ಬಲು ಆಪ್ತರು ಅನಿಸಿದರು. ಲಿಂಬೂ ಸೋಡಾ ಕುಡಿಯಲೆಂದು ಅಂಗಡಿ ಹೊಕ್ಕಿ ಗಂಟಗಟ್ಟಲೇ ಸ್ಥಳ ಪುರಾಣಗಳ ಬಗ್ಗೆ, ಜನಜೀವನದ ಬಗ್ಗೆ, ಅಲ್ಲಿನ ಹೋಂ ಸ್ಟೇಗಳ ಕುರಿತು ಹರಟಿದ್ದಾಯ್ತು. ಆಹಾ ಅದೆಷ್ಟು ಸ್ವಾರಸ್ಯಕರ ಸಂಗತಿ ಕೇಳಿಸಿಕೊಂಡೆ, ಕಥೆಗೊಂದಿಷ್ಟು ವಸ್ತು ಸಿಕ್ತು ಎಂದು ಮನಸ್ಸು ಕುಣಿಯುತ್ತಿತ್ತು. ಆದರೆ ಅಲ್ಲಿಯದೇ ಸ್ಥಳಿಯರು ಹೊಟ್ಟೆಕಿಚ್ಚಿಂದ ಆ ವೃದ್ಧ ಜೈನ ದಂಪತಿಗೆ ಕೊಡುವ ಸಣ್ಣಪುಟ್ಟ ಕಾಟಕ್ಕೆ, ಪ್ರವಾಸಿಗರ ದಾಂಧಲೆಯಿಂದ ಪರಿಸರಕ್ಕೆ ಆಗುತ್ತಿರುವ ತೊಂದರೆಗೆ ಮನಸ್ಸು ಪಿಚ್ಚೆಂದಿತ್ತು. ತೆಗೆದುಕೊಳ್ಳುವಂತಹ ಅವಶ್ಯಕತೆಯೇನೂ ಇರದಿದ್ದರೂ ಒಂದಿಷ್ಟು ಬಿಸ್ಕತ್, ಚಾಕ್ಲೇಟ್ ಪೊಟ್ಟಣವನ್ನು ಕೊಂಡು ನಮ್ಮ ಕೈಲಾದದ್ದು ಮಾಡಿದಾಗ ನೆರಿಗೆಬಿದ್ದ ಮೊಗದಲ್ಲೊಂಚೂರು ಸಣ್ಣ ಮುಗುಳ್ನಗು, ಅದನ್ನು ನೋಡಿದ ನಮಗೂ ಸಣ್ಣ ತೃಪ್ತಿ. ‘ಮತ್ತೆ ಬನ್ನಿ ಮಗಾ’ ಎಂದು ನಾವು ಕಾಣಿಸುವ ತನಕ ಕೈಬೀಸುತ್ತಲೇ ಇದ್ದ ಅಜ್ಜ-ಅಜ್ಜಿಯ ಮಮತೆಗೆ ಮನಃತುಂಬಿ ಬಂದಿತ್ತು. ತೈಥಕವೆನ್ನುತ್ತಿದ್ದ ಕಚ್ಚಾರಸ್ತೆಯ ಉಬ್ಬುತಗ್ಗುಗಳುಂಟು ಮಾಡುವ ಮೈಕೈ ನೋವೂ ಲೆಕ್ಕಕ್ಕಿಲ್ಲದೆ ಮನಸಿನ್ನೂ ಕ್ಯಾತನಮಕ್ಕಿಯ ಸುತ್ತಲೇ ಇತ್ತು. ಆಗ ಮನಸ್ಸಿನಲ್ಲಿ ಥಟ್ಟನೇ ಹಾದುಬಂದದ್ದು ಎನ್.ಎಸ್.ಎಲ್ ಅವರ ಕವನದ ಸಾಲುಗಳು

“ನಾನೆಂಬ ಮಬ್ಬಿಳಿದು ನೀ ಹಬ್ಬುತಿರುವಾಗ
ಬಂದ ಗಾಳಿಯಲಿತ್ತು ದಿವ್ಯಗಂಧ
ನಿನ್ನ ಕಣ್ಣಿನ ಮಿಂಚು ನನ್ನ ಒಳಗೂ ಹರಿದು
ಮೂಡಿದರು ಅಲ್ಲಿಯೇ ಸೂರ್ಯಚಂದ್ರ

ಮಣ್ಣನ್ನು ಹಿಡಿದೆತ್ತಿ ಮಣ್ಣಿಗೇ ಬಿಡುವಾಗ
ಕಣ್ಣಲ್ಲಿ ನೀರೇಕೆ, ಪ್ರೀತಿ ಮರುಳು
ಪಡೆದ ಗಳಿಗೆಯ ಚೆಲುವು ನಿತ್ಯ ನೆನಪಿಗೆ ವರವು
ವಸ್ತುವನೆ ಬೇಡುವುದು ಏನು ಹುರುಳು?”
-ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಇದನ್ನು ಗುನುಗುನಿಸುತ್ತಾ ಕಣ್ತುಂಬಿಕೊಂಡೆ ಮತ್ತೊಮ್ಮೆ ಮಗದೊಮ್ಮೆ ನಿನ್ನೆಡೆಗೆ ಬರುವೆನೆಂದು ಅಂದುಕೊಳ್ಳುತ್ತ.

ಇಂತಹ ಸುಂದರ ಪರಿಸರವನ್ನು ನೋಡ ಬಯಸುವವರು ಧಾರಾಳವಾಗಿ ಬರಬಹುದು, ಆದರೆ ಪ್ರವಾಸಿಗರಲ್ಲಿ ಒಂದು ವಿನಂತಿ; ದಯವಿಟ್ಟು ಪ್ಲಾಸ್ಟಿಕ್, ಟಿನ್ ಮತ್ತಿತರ ತ್ಯಾಜ್ಯವಸ್ತುಗಳನ್ನು ಅಲ್ಲಿ ಎಸೆಯಬೇಡಿ… ಮೂಕಪ್ರಾಣಿಗಳು ಅರಿವಿಲ್ಲದೆ ತಿಂದು ಒದ್ದಾಡುತ್ತದೆ. ‘ಕ್ಯಾತನಮಕ್ಕಿ’ ಎಂಬ ಸುಂದರಿ ನಮ್ಮ ಚಿಕ್ಕಮಗಳೂರಿನ ಹೊರನಾಡು ಸಮೀಪದಲ್ಲಿದ್ದಾಳೆ. ಬನ್ನಿ, ನೋಡಿ ಕಣ್ತುಂಬಿಕೊಳ್ಳಿ.