ಸ್ಟುವರ್ಟ್ ವಿರುದ್ಧ ಸಿಟ್ಟಿನಲ್ಲಿದ್ದ ಯುವ್‌ರಾಜ್‌ ಸ್ಟುವರ್ಟ್ ಬ್ರಾಡ್‌ನ ಬೋಲಿಂಗ್ ಎದುರಿಸಲು ಮುಂದಾದರು. ಅವರ ಸಿಟ್ಟು ಎಷ್ಟರಮಟ್ಟಿಗೆ ಇತ್ತು ಅಂದರೆ ಮುಂದೆ ಅವರು ಆಡಿದ ಪ್ರತಿ ಬಾಲನ್ನೂ ಸಿಕ್ಸರ್‌ಗೆ ಕಳಿಸಿದರು. ಒಂದೊಂದು ಸಿಕ್ಸರ್ ಹೊಡೆದಮೇಲೂ ಫ್ಲಿಂಟಾಫ್ ಕಡೆಗೆ ನೋಡಿ ಬ್ಯಾಟ್ ತಿರುಗಿಸುತ್ತಿದ್ದರು ಯುವ್‌ರಾಜ್‌! ಬ್ರಾಡ್ ಪಾಪ! ಅವರು ಬಹಳ ದೊಡ್ಡ ಬೆಲೆ ತೆರಬೇಕಾಯಿತು. 6 ಬಾಲುಗಳಲ್ಲಿ 36! ಇದು ಪ್ರಥಮ ಬಾರಿ ಟಿ 20 ವಿಶ್ ಕಪ್ ಆಟದ ಅತ್ಯಂತ ರನ್ ಮತ್ತು 6 ಸಿಕ್ಸರ್‌ಗಳಿಂದ ದಾಖಲೆಯಾಯಿತು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಯುವ್‌ರಾಜ್‌ ಸಿಂಘ್‌ ಹಾಗೂ ಹರ್ಭಜನ್‌ ಸಿಂಘ್‌ ಆಟದ ಕುರಿತ ಬರಹ ನಿಮ್ಮ ಓದಿಗೆ

ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಸಿಂಘ್, ಸಿಂಹ ಅಥವ ಸರ್ದಾರ್ ಪಂಗಡದವರ ಕೊಡುಗೆ ಶ್ಲಾಘನೀಯ. ಅವರಲ್ಲಿ ಕೆಲವರು ಭಾರತ ಸ್ವತಂತ್ರವಾಗುವುದಕ್ಕೆ ಮುಂಚೆಯೇ ಇಂಗ್ಲೆಂಡಿನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಆ ಪಂಗಡದವರ ಆಟ ಎಷ್ಟು ಪ್ರಬಲವಾಗಿತ್ತೆಂದರೆ ಅಲ್ಲಿನ ನಾಗರೀಕರಾಗಿ ಆ ದೇಶವನ್ನು ಕ್ರಿಕೆಟ್ ಟೆಸ್ಟ್‌ನಲ್ಲಿ ಪ್ರತಿನಿಧಿಸುತ್ತಿದ್ದರು.

ಅವರಲ್ಲಿ ಮುಖ್ಯವಾದವರು ರಣಜಿತ್ ಸಿಂಘ್. ಅವರು ರಾಜ ವಂಶದವರಾಗಿದ್ದರು. ರಣಜಿತ್ ಸಿಂಘ್ ಅಥವ ಅವರ ಹೆಸರು ಜಾಮ್ ಸಾಹೆಬ್ ನವನಗರ್ ಎಂದೂ ಪ್ರಸಿದ್ಧವಾಗಿದೆ. ಅವರು ಇಂಗ್ಲೆಂಡಿನಲ್ಲಿ ಓದುತ್ತಿದ್ದಾಗ ಚೆನ್ನಾಗಿ ಕ್ರಿಕೆಟ್ ಆಡಿ ಆ ದೇಶವನ್ನು ಪ್ರತಿನಿಧಿಸಿದರು. ಅವರ ಜೀವನದಲ್ಲಿ 15 ಟೆಸ್ಟ್ ಮ್ಯಾಚುಗಳನ್ನಾಡಿ, ಸರಾಸರಿ 45.00 ಮೇರೆಗೆ, 989 ರನ್ ಹೊಡೆದರು. ಅದರಲ್ಲಿ 2 ಶತಕ ಮತ್ತು 6 ಅರ್ಧ ಶತಕಗಳಿದ್ದವು. ಅವರು 307 ಮೊದಲನೇ ದರ್ಜೆ ಮ್ಯಾಚುಗಳನ್ನಾಡಿ 56.37 ಸರಾಸರಿಯಲ್ಲಿ 24, 692 ರನ್ ಹೊಡೆದರು. ಟೆಸ್ಟಿನಲ್ಲಿ 175 ಮತ್ತು ಮೊದಲನೇ ದರ್ಜೆಯ ಕ್ರಿಕೆಟ್‌ನಲ್ಲಿ 285 ಅಜೇಯರಾಗಿ ಅವರ ಅತ್ಯುತ್ತಮ ಸ್ಕೋರಾಗಿತ್ತು. ಅವರು ಇಂಗ್ಲೆಂಡಿನ ಟೀಮಿನಲ್ಲಿ ಪ್ರಸಿದ್ಧ ಆಟಗಾರರಾಗಿ ಆಸ್ಟ್ರೇಲಿಯ ವಿರುದ್ಧ ‘ಆಶಸ್’ ಪಂದ್ಯಗಳಲ್ಲಿ ಮ್ಯಾಚ್‌ಗಳನ್ನು ಗೆಲ್ಲಲು ಸಹಾಯ ಮಾಡಿದ್ದಾರೆ. ಅವರ ಹೆಸರಿನಲ್ಲೇ ಭಾರತದ ರಾಜ್ಯಗಳ ರಣಜಿ ಟ್ರೋಫಿ ಪಂದ್ಯಗಳು ಈಗ ನಡೆಯುತ್ತಿದೆ. ಅವರ ಕ್ರಿಕೆಟ್ ಯಾತ್ರೆ ಎಷ್ಟು ಯಶಸ್ವಿ ಆಗಿತ್ತು ಎಂದರೆ ಮುಂದಿನ ದಿನಗಳಲ್ಲಿ ಅವರ ಬಗ್ಗೆ ಒಂದು ಸುದೀರ್ಘ ವಿಮರ್ಶೆ ಅತ್ಯಗತ್ಯವೆನಿಸುತ್ತೆ.

1983ರಲ್ಲಿ ಬಲವಿಂದರ್ ಸಂಧು ತಮ್ಮ ಅದ್ಭುತ ಬೋಲಿಂಗ್‌ನಿಂದ ವೆಸ್ಟ್ ಇಂಡೀಸ್ ಪ್ರಾರಂಭ ಆಟಗಾರ ಗೋರ್ಡನ್ ಗ್ರೀನಿಡ್ಜ್‌ರನ್ನು ಇನ್ನೂ 1 ರನ್ ಆಗಿದ್ದಾಗಲೇ ಬೋಲ್ಡ್ ಔಟ್ ಮಾಡಿ ಭಾರತಕ್ಕೆ ಪ್ರಬಲವಾದ ಶುರು ಮಾಡಿಕೊಟ್ಟರು. ಯಾಕೆಂದರೆ ಭಾರತ ಕಡಿಮೆ ಸ್ಕೋರಿಗೆ, 183 ರನ್ನಿಗೆ ಎಲ್ಲರೂ ಔಟಾಗಿದ್ದರು. ಗ್ರೀನಿಡ್ಜ್‌ ಒಳ್ಳೆಯ ಆಟಗಾರೆ. ಅವರನ್ನು ಕೇವಲ ಒಂದು ರನ್‌ಗೆ ಔಟ್ ಮಾಡಿ ಭಾರತಕ್ಕೆ ಗೆಲುವಿನ ಹಾದಿಯಲ್ಲಿ ತಂದರು ಸಂಧು ಎನ್ನ ಬಹುದು. ಜೂನ್ 1983ರಲ್ಲಿ ಆ ಪಂದ್ಯವನ್ನು ಗೆದ್ದು ಭಾರತ ವಿಶ್ವ ಕಪ್ ಪ್ರಥಮಬಾರಿ ತನ್ನದಾಗಿಸಿಕೊಂಡಿತು.

*****

ಬಿಷನ್ ಸಿಂಘ್ ಬೇಡಿ ಒಳ್ಳೆಯ ಎಡಗೈ ಸ್ಪಿನ್ ಬೋಲಿಂಗ್‌ಗೆ ಪ್ರಸಿದ್ಧಿಯಾಗಿ ಭಾರತಕ್ಕೆ ಬಹಳ ವರ್ಷ ಸೇವೆ ಸಲ್ಲಿಸಿದರು. ಇತ್ತೀಚೆಗೆ ಇನ್ನೂ ಚಿಕ್ಕವರಾದ ಅರ್ಷದ್ ಸಿಂಘ್ ಫಾಸ್ಟ್ ಬೋಲರ್ ಆಗಿ ಮುಂದೆ ಬರುತ್ತಿದ್ದಾರೆ.

ಈ ಸರ್ತಿ ನಾವು ವಿಮರ್ಶೆ ಮಾಡುತ್ತಿರುವುದು ಯುವ್‌ರಾಜ್‌ ಸಿಂಘ್ ಮತ್ತು ಹರ್ಭಜನ್ ಸಿಂಘ್‌ರ ಆಟ. ಇಬ್ಬರೂ ಅವರವರ ಕ್ಷೇತ್ರದಲ್ಲಿ ಉನ್ನತ ಮಟ್ಟದ ಆಟವಾಡಿ ಅವರ ಹೆಸರುಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿಯಾಗಿದೆ.

2007ರಲ್ಲಿ ಭಾರತ ಮತ್ತು ಇಂಗ್ಲೆಂಡಿನ ಮಧ್ಯೆ ದಕ್ಷಿಣ ಆಫ್ರಿಕದಲ್ಲಿ ಮೊಟ್ಟಮೊದಲಿನ ಟಿ 20 ವಿಶ್ವ ಕಪ್ ಚಾಂಪಿಯನ್ಶಿಪ್‌ನ ಟೂರ್ನಮೆಂಟ್ ನಡೆಯುತ್ತಿತ್ತು. ಭಾರತದ ಯುವ್‌ರಾಜ್‌ ಸಿಂಘ್ ಆಡುತ್ತಿದ್ದರು. ಇಂಗ್ಲೆಂಡಿನ ಫಾಸ್ಟ್ ಬೋಲರ್ ಸ್ಟುವರ್ಟ್ ಬ್ರಾಡ್ ಬೋಲಿಂಗ್ ಮಾಡುತ್ತಿದ್ದರು. ಆಟದ ಮಧ್ಯೆ ಆಗಾಗ್ಗೆ ಮಾತಿನ ಚಕಮಕಿ ಆಗುತ್ತೆ, ಕೇಳಿಬರುತ್ತೆ. ಇದು ಸಹಜ. ಬೇಕೆಂದು ಕೆರಳಿಸಿ, ಬ್ಯಾಟರ್‌ನ ಏಕಾಗ್ರತೆಯನ್ನು ಭಂಗಿಸಿ ಔಟ್ ಮಾಡುವುದಕ್ಕೆ ಏನಾದರೂ ಮಾಡುತ್ತಾರೆ, ನಡೆಯುತ್ತೆ. ಬ್ರಾಡ್ ಬೋಲಿಂಗ್ ಮಾಡುವುದಕ್ಕೆ ಮುಂಚೆ ಇಂಗ್ಲೆಂಡ್ ಆಟಗಾರ ಆಂಡ್ರು ಫ್ಲಿಂಟಾಫ್ ಯುವ್‌ರಾಜ್‌ ಹತ್ತಿರ ಹೋಗಿ ಏನೋ ಅಂದರು. ಅದಕ್ಕೆ ಕೆರಳಿದ ಯುವ್‌ರಾಜ್‌ ಅವರನ್ನು ಹೊಡೆಯಲು ಹತ್ತಿರ ಹೊದರು. ಅಷ್ಟರಲ್ಲಿ ಅಂಪೈರ್‌ಗಳು ನಡುವೆ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಯುವ್‌ರಾಜ್‌ಗೆ ಏನು ಹೇಳಿದರು ಅನ್ನುವುದು ಮುಖ್ಯವಲ್ಲ, ಅದಾದಮೇಲೆ ಏನು ಆಯಿತು ಅದು ಮುಖ್ಯ.

ಸಿಟ್ಟಿನಲ್ಲಿದ್ದ ಯುವ್‌ರಾಜ್‌ ಸ್ಟುವರ್ಟ್ ಬ್ರಾಡ್‌ನ ಬೋಲಿಂಗ್ ಎದುರಿಸಲು ಮುಂದಾದರು. ಅವರ ಸಿಟ್ಟು ಎಷ್ಟರಮಟ್ಟಿಗೆ ಇತ್ತು ಅಂದರೆ ಮುಂದೆ ಅವರು ಆಡಿದ ಪ್ರತಿ ಬಾಲನ್ನೂ ಸಿಕ್ಸರ್‌ಗೆ ಕಳಿಸಿದರು. ಒಂದೊಂದು ಸಿಕ್ಸರ್ ಹೊಡೆದಮೇಲೂ ಫ್ಲಿಂಟಾಫ್ ಕಡೆಗೆ ನೋಡಿ ಬ್ಯಾಟ್ ತಿರುಗಿಸುತ್ತಿದ್ದರು ಯುವ್‌ರಾಜ್‌! ಬ್ರಾಡ್ ಪಾಪ! ಅವರು ಬಹಳ ದೊಡ್ಡ ಬೆಲೆ ತೆರಬೇಕಾಯಿತು. 6 ಬಾಲುಗಳಲ್ಲಿ 36! ಇದು ಪ್ರಥಮ ಬಾರಿ ಟಿ 20 ವಿಶ್ ಕಪ್ ಆಟದ ಅತ್ಯಂತ ರನ್ ಮತ್ತು 6 ಸಿಕ್ಸರ್‌ಗಳಿಂದ ದಾಖಲೆಯಾಯಿತು. ಯುವ್‌ರಾಜ್‌ 12 ಬಾಲು ಗಳಲ್ಲಿ 50 ರನ್ ಹೊಡೆದರು. ಇದೂ ಒಂದು ದಾಖಲೆಯಾಯಿತು. ಫ್ಲಿಂಟಾಫ್ ಓಡಿ ಹೋಗಿ ಸ್ಟುವರ್ಟ್‌ರ ಕ್ಷಮೆ ಕೇಳುತ್ತಿದ್ದರು! ಸಿಂಹವನ್ನು ಏನಾದರೂ ಕೆಣಕಬಾರದು. ಹಾಗಾದರೆ ಯಾರಾದರೂ ಸರಿ ಅದಕ್ಕೆ ತಲೆದಂಡ ಕಟ್ಟಲೇಬೇಕು.

ಯುವ್‌ರಾಜ್‌ ಅವರ ಕ್ರಿಕೆಟ್ ಜೀವನದಲ್ಲಿ 304 ಒಡಿಐ ಮ್ಯಾಚ್‌ಗಳಾಡಿ 36.55 ರ ಸರಾಸರಿಯಲ್ಲಿ 8701 ರನ್ ಹೊಡೆದರು. ಅದರಲ್ಲಿ 14 ಶತಕ ಮತ್ತು 52 ಅರ್ಧ ಶತಕಗಳಿತ್ತು. 150 ರನ್ ಅವರ ಅತ್ಯತ್ತಮ ಸ್ಕೋರಾಗಿತ್ತು. ಅವರು ಬೋಲಿಂಗ್‌ನಲ್ಲಿ 38.68ರ ಸರಾಸರಿಯಲ್ಲಿ 11 ವಿಕೆಟ್ ಗಳಿಸಿದರು. ಫೀಲ್ಡಿಂಗಿಗೆ ಹೆಸರುವಾಸಿಯಾದ ಯುವ್‌ರಾಜ್‌ 94 ಚ್ಯಾಚ್‌ಗಳನ್ನು ಹಿಡಿದಿದ್ದಾರೆ. ಭಾರತದ ಆಲ್ ರೌಂಡರ್‌ಗಳ ಪೈಕಿ ಅವರು ಅತ್ಯಂತ ಶ್ರೇಷ್ಟಗರ ಕ್ರಿಕೆಟರ್ ಎಂದು ಪರಿಗಣಿಸಬಹುದು.

40 ಟೆಸ್ಟ್‌ಗಳಲ್ಲಿ ಆಡಿದ ಯುವ್‌ರಾಜ್‌ 33.92 ಸರಾಸರಿಯಲ್ಲಿ 1900 ರನ್ ಹೊಡೆದು ಅದರಲ್ಲಿ ಅವರ ಅತ್ಯುತ್ತಮ ಸ್ಕೋರ್‌ 169 ರನ್. ಇದರಲ್ಲೂ 31 ಕ್ಯಾಚ್ ಹಿಡಿದರು ಯುವ್‌ರಾಜ್‌.

ಇದಕ್ಕೆ ಹಲವು ವರ್ಷಗಳ ಹಿಂದೆಯೇ ಯುವ್‌ರಾಜ್‌ ಸಿಂಘ್ ಮತ್ತು ಇನ್ನೊಬ್ಬ ಯುವ ಆಟಗಾರ, ಮೊಹಮ್ಮದ್ ಖೈಫ್ ತಮ್ಮ ಆಟದ ವೈಖರಿಯನ್ನು ಇದೇ ಇಂಗ್ಲೆಂಡಿನ ಮೇಲೆ 2002ರಲ್ಲೇ ತೋರಿಸಿದ್ದರು. ಆಗಲೇ ಅವರನ್ನು ಅರಳುವ ಪ್ರತಿಭೆಯೆಂದು ಬಹಳ ಜನ ಕಂಡುಕೊಂಡಿದ್ದರು.

ನ್ಯಾಟ್ ವೆಸ್ಟ್ ಒಡಿಐ ಸರಣಿಯ ಫೈನಲ್ಸ್‌ನಲ್ಲಿ ಇಂಗ್ಲೆಂಡ್ ತನ್ನ 50 ಓವರ್‌ನಲ್ಲಿ ಚೆನ್ನಾಗಿ ಆಡಿ, ಭಾರತದ ವಿರುದ್ಧ ಒಂದು ದೊಡ್ಡ ಸ್ಕೋರ್ – 325/5 ಮಾಡಿತು. ಅದರಲ್ಲಿ ಮಾರ್ಕಸ್ ಟ್ರೆಸ್ಚೋಥಿಕ್ 109 ಮತ್ತು ಅವರ ಕಪ್ತಾನ್ ನಾಸರ್ ಹುಸೇನ್ 115 ಹೊಡೆದರು. ಆ ತರಹದ ಸ್ಕೋರನ್ನು ಬೆನ್ನಟ್ಟಿಕೊಂಡು ಹೋಗಿ ಹೊಡೆಯುವುದು ಅಷ್ಟು ಸುಲಭವಲ್ಲ. ಪ್ರತಿ ಓವರ್‌ಗೆ ಎಷ್ಟು ರನ್ ಬೇಕಾಗುವುದು ಎಂದು ನಿಗದಿಯಾದಾಗ, ಒಂದೆರೆಡು ಓವರ್ ಹಿಂದೆ ಬಿದ್ದರೆ ಅದರ ಒತ್ತಡ ಹೆಚ್ಚಿ ಎಷ್ಟೋ ವೇಳೆ ಔಟಾಗುವುದು ಉಂಟು. ಪ್ರಬಲ ಆಟಗಾರರ ವಿಕೆಟ್ ಪ್ರಾರಂಭದಲ್ಲೇ ಬಿದ್ದು ಬಿಟ್ಟರೆ ಒತ್ತಡ ಹೇಳಲಸಾಧ್ಯ! ಭಾರತ ಆವತ್ತು ಆ ಸ್ಥಿತಿಯಲ್ಲಿತ್ತು. ಸೆಹ್ವಾಗ್ ಮತ್ತು ಗಂಗೂಲಿ ಒಳ್ಳೆ ಶತಕದ ಶುರು ಸ್ಕೋರ್ ಮಾಡಿಕೊಟ್ಟರೂ, ದ್ರಾವಿಡ್, ಟೆಂಡೂಲ್ಕರ್ ಮತ್ತು ಮೊಂಗಿಯ ಬೇಗ ಔಟಾಗಿ ಭಾರತದ ಇನಿಂಗ್ಸ್ 130/5 ರಲ್ಲಿ ಮುಗ್ಗರಿಸುತ್ತಿತ್ತು!

ಆಗ ಯುವ್‌ರಾಜ್‌ ಸಿಂಘ್ ಮತ್ತು ಮೊಹಮ್ಮದ್ ಖೈಫ್ ಭರ್ಜರಿ ಬ್ಯಾಟ್ ಮಾಡಿ ಅವರ 120 ರನ್ ಪಾಲುಗಾರಿಕೆಯಲ್ಲಿ ಭಾರತ ಗೆಲುವಿನ ಹಾದಿ ಹಿಡಿಯಿತು. ಯುವ್‌ರಾಜ್‌ 69, ಖೈಫ್ 87 ರನ್ ಹೊಡೆದು, ಕೊನೆಗೆ ಹರ್ಭಜನ್ 15 ಹೊಡೆದು ಭಾರತಕ್ಕೆ 49.3 ಓವರ್‌ನಲ್ಲಿ ಸ್ಕೋರ್ 326/8 ಆಗಿ ಜಯಮಾಲೆ ಹಾಕಿದರು. ಈ ಪಂದ್ಯದ ವಿಶೇಷವೇನೆಂದರೆ ಇನ್ನು 20. 21 ವಯಸ್ಸಿನ ನಮ್ಮ ಯುವಕರು ಒಂದು ದೊಡ್ಡ ಜವಾಬ್ದಾರಿಯನ್ನು ಅವರ ಹೆಗಲ ಮೇಲೆ ಹೊತ್ತು ಭಾರತದ ತಂಡವನ್ನು ಗೆಲುವಿನ ಶಿಖರಕ್ಕೆ ಕರೆದೊಯ್ದರು. ಈ ಮ್ಯಾಚಿನಿಂದಲೇ ಯುವ್‌ರಾಜ್‌ ಮುಂದೆ ಮಹಾನ್ ಆಟಗಾರನಾಗುತ್ತಾನೆ ಅನ್ನುವ ಲಕ್ಷಣಗಳು ಕಂಡಿದ್ದು.

ಈ ಮ್ಯಾಚಿನ ಇನ್ನೊಂದು ಪವಾಡವೆಂದರೆ ಟೀಮಿನ ನಾಯಕ ಗಂಗೂಲಿಗೆ ಭಾರತ ಗೆದ್ದಿದ್ದು ಎಷ್ಟು ಸಂತೋಷವಾಯಿತೆಂದರೆ ಅವರು ಹಾಕಿದ್ದ ಟಿ- ಶರ್ಟನ್ನು ಬಿಚ್ಚಿ ಅದನ್ನು ಗಾಳಿಗೆ ರಭಸದಿಂದ ತಿರುಗಿಸಿ ಅವರ ಸಂತೋಷವನ್ನು ವ್ಯಕ್ತಪಡಿಸಿದರು!

ಯುವ್ರಾಜ ಸಿಂಘ್ ಬ್ಯಾಟಿಂಗ್ ಜೊತೆಗೆ, ಬೋಲಿಂಗ್ ಮತ್ತು ಅವರ ಫೀಲ್ಡಿಂಗ್‌ಗೆ ಹೆಸರುವಾಸಿಯಾದರು. ಮುಂಚೆಯೆಲ್ಲಾ ಭಾರತದ ಫೀಲ್ಡಿಂಗ್‌ಗೆ ಅಷ್ಟು ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಯಾರಿಗೂ ಬೇಗನೆ ಓಡಿ ಬಾಲನ್ನು ಅಟ್ಟಿಸಿಕೊಂಡು ಹೋಗಿ ಅದನ್ನು ಬೌಂಡರಿ ತಲುಪುವ ಮುನ್ನ ತಡೆದು ಬಾಲನ್ನು ಎಸೆದು ರನ್ ಔಟ್ ಮಾಡಬೇಕೆಂಬ ಕಾತುರತೆ ಇರಲಿಲ್ಲ.

ದಕ್ಷಿಣ ಆಫ್ರಿಕಾದ ಜಾನ್ಟಿ ರೋಡ್ಸ್, ಭಾರತದ ನವಾಬ್ ಅಫ್ ಪಟೌಡಿ, ಮೊಹಮ್ಮದ್ ಅಝರುದ್ದೀನ್, ಏಕ್ನಾಥ್ ಸೋಲ್ಕರ್ ಮುಂತಾದವರು ಅವರ ಫೀಲ್ಡಿಂಗಿಗೆ ಪ್ರಸಿಧ್ದಿಯಾಗಿದ್ದರು. ಸೋಲ್ಕರ್ ಬ್ಯಾಟರ್ ಹತ್ತಿರ ಹೆದರದೆ ನಿಂತು ಕ್ಯಾಚ್‌ಗಳನ್ನು ಹಿಡಿಯುತ್ತಿದ್ದರು. ಯುವ್‌ರಾಜ್‌ ಸಿಂಘ್ ಕವರ್ ಪಾಯಿಂಟ್‌ ಜಾಗದಲ್ಲಿ ನಿಂತು, ಎರಡೂ ಕಡೆ ಡೈವ್ ಹೊಡೆದು ಬಾಲನ್ನು ತಡೆಯುತ್ತಿದ್ದರು. ಒಡಿಐ ಮತ್ತು ಟೀ20 ರಲ್ಲಿ ರನ್‌ಗಳು ಬಹಳ ಮುಖ್ಯ. ರನ್ ಹೊಡೆಯಬೇಕು ಇಲ್ಲ ಎದುರಾಳಿ ಹೊಡೆಯುವದನ್ನು ತಡೆದು ರನ್ ಕೊಡಬಾರದು. (ಏ ರನ್ ಸೇವ್ಡ್ ಈಸ್ ಎ ರನ್ ಮೇಡ್). ರನ್ ಸೇವ್ ಮಾಡುವುದರಲ್ಲಿ ಮೈಕೊಟ್ಟು, ಬಿದ್ದರೂ ಸರಿ ರನ್ ಕೊಡುತ್ತಿರಲಿಲ್ಲ, ಯುವ್‌ರಾಜ್‌! ಎಷ್ಟೋಸಲ ಬ್ಯಾಟರ್ ಈತರಹ ಹೊಡೆದರೂ ಫೀಲ್ಡ್ ಮಾಡುವುದನ್ನು ನೋಡಿ, ಕೊನೆಗೆ ಧೃತಿಗೆಟ್ಟು ಬೀಸಿ ಔಟಾಗುವುದನ್ನು ನೋಡುತ್ತೇವೆ.

ಜೊತೆಗೆ ಯುವ್‌ರಾಜ್‌ ಎಡಗೈಯಲಿ ಒಳ್ಳೆ ಸ್ಪಿನ್ ಬೋಲಿಂಗ್ ಮಾಡುತ್ತಿದ್ದರು; ನಿಧಾನವಾಗಿ ಸ್ಪಿನ್ ಆಗಿ ಬರುತ್ತಿದ್ದ ಬಾಲನ್ನು ಹೊಡೆಯುವುದು ಅಷ್ಟು ಸುಲಭವಲ್ಲ. ಏಮಾರಿದರ ಕ್ಯಾಚ್ ಔಟಾಗಬಹುದು. ಬ್ಯಾಟಿಂಗ್, ಬೋಲಿಂಗ್ ಮತ್ತು ಫೀಲ್ಡಿಂಗ್‌ ಈ ಮೂರರಲ್ಲೂ ಕುಶಲತೆ ತೋರಿಸಿದ ಯುವ್‌ರಾಜ್‌ ತಂಡದ ಅತಿ ಮುಖ್ಯ ಆಟಗಾರರಲ್ಲಿ ಒಬ್ಬರಾದರು.

2011 ಒಡಿಐ ವಿಶ್ವ ಕಪ್ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಿತು. ಅದರಲ್ಲಿ ಅವರ ಆಲ್ ರೌಂಡರ್ ಆಗಿ ಅವರ ಪ್ರದರ್ಶನ ಅತ್ಯುತ್ತಮ ಮತ್ತು ಅದ್ಭುತವಾಗಿತ್ತು. 8 ಇನ್ನಿಂಗ್ಸ್‌ನಲ್ಲಿ ಸರಾಸರಿ 86.19 ಮೇರೆಗೆ, 362ರನ್ ಹೊಡೆದು, 15 ವಿಕೆಟ್ ತೆಗೆದು ಯುವ್‌ರಾಜ್‌ ವಿಶ್ವ ಕಪ್‌ನ ಅತ್ಯುತ್ತಮ ಹಾಗೂ ಅತ್ಯಂತ ಪ್ರಭಾವಿ ಆಟಗಾರರೆಂದು ನೇಮಿಸಲಾಯಿತು. ಅವರ ಸ್ಪಿನ್ ಬೋಲಿಂಗ್ ಎಷ್ಟು ಯಶಸ್ವಿಯಾಗಿತ್ತೆಂದರೆ, ತಂಡದಲ್ಲಿ ಅನುಭವಿ ಹರ್ಭಜನ್ ಇದ್ದಾಗಿಯೂ ಎಷ್ಟೋ ಸರ್ತಿ ಯುವ್‌ರಾಜ್‌ ಅವರ ಬೋಲಿಂಗ್‌ಗೆ ವಿಕೆಟ್ ಬೀಳುತ್ತಿತ್ತು. ಬ್ಯಾಟಿಂಗ್ ಮತ್ತು ಬೋಲಿಂಗ್‌ನಲ್ಲಿ ಎರಡರಲ್ಲೂ ಅವರನ್ನು ಶಿಖರಕ್ಕೆ ಕರೆದೊಯ್ದಿತು ಅವರ ಪ್ರತಿಭೆ. ಅತ್ಯಂತ ಸಂತಸದ ಸುದ್ದಿಯಾದ ಭಾರತ ಒಡಿಐ ಗೆಲುವುಮ ಅದೂ ವಾಂಖೇಡೆ ಮೈದಾನದಲ್ಲಿ, ಭಾರತದ ಕಪ್ತಾನ್ ಧೋಣಿಯವರ ಜೊತೆ ಗೆಲುವಿನ ರನ್. 2011 ರ ವಿಶ್ವ ಕಪ್ನ ಅತ್ಯಂತ ಪ್ರಭಾವಿ ಕ್ರಿಕೆಟರ್ ಎಂದು ಯುವ್‌ರಾಜ್‌ರನ್ನು ಘೋಷಿಸಿತು ಐಸಿಸಿ. ಒಬ್ಬ ಆಟಗಾರನಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ?

ಆದರೆ ವಿಧಿಯ ಆಟವೇ ಬೇರೆ ಇರುತ್ತೆ. ಶಿಖರವನ್ನು ಕಷ್ಟಪಟ್ಟು ಏರಿ ಅದರ ಆನಂದ ಅನುಭವಿಸುದ್ದಂತೆಯೇ ಬಂತು ಸಿಡಿಲಿನ ಹೊಡೆತ – ಯುವ್‌ರಾಜ್‌ಗೆ ಕ್ಯಾನ್ಸರ್ ಬಂದಿದೆ ಎಂದು ಗೊತ್ತಾಯಿತು. ಹಿಮಾಲಯದಿಂದ ಒಮ್ಮೆಲೇ ಪಾತಾಳಕ್ಕೆ ಬಿದ್ದ ಸ್ಥಿತಿ ಅವರದ್ದು. ಎರಡೂ ಒಟ್ಟಿಗೆ ಸಂಭವಿಸಿದ ದೊಡ್ಡ ದುರಂತ.

ಅದು ಗೊತ್ತಾದ ತಕ್ಷಣವೇ ಅವರ ಶಸ್ತ್ರ ಚಿಕಿತ್ಸೆಗೆ ಬಿಸಿಸಿಐ ಅವರನ್ನು ಅಮೆರಿಕಗೆ ಕಳಿಸಿತು. ಅಲ್ಲಿ ಚಿಕಿತ್ಸೆ ಪಡೆದು, ಪುನರ್ಜೀವ ಪಡೆದು ವಾಪಸ್ಸಾದರು ಯುವ್‌ರಾಜ್‌ ಸಿಂಘ್. ಅವರು ಮತ್ತೆ ಮರಳಿ ಬಂದದ್ದು ಬಹಳ ಸಂತೋಷದ ವಿಷಯ. ಆದರೆ ಅವರು ಮತ್ತೆ ಕ್ರಿಕೆಟ್ ಶುರುಮಾಡಿದರೂ ಅವರ ಹಿಂದಿನ ಮಟ್ಟವನ್ನು ತಲುಪಲಾಗಲಿಲ್ಲ. ವಿಧಿ ಅವರಿಂದ ಅವರ ಪ್ರತಿಭೆಯನ್ನು ಕಿತ್ತುಕೊಂಡು ಅವರ ಪ್ರಾಣ ಉಳಿಸಿತು. ಅವರು ಮತ್ತೆ ತರಪೇತಿ ಎಲ್ಲಾ ಶುರು ಮಾಡಿದರು. ಕಣಕ್ಕೆ ಇಳಿದರು. ಮಧ್ಯೆ ಚೆನ್ನಾಗಿಯೂ ಆಡಿದರು. ಆದರೆ ಹುಲಿಯ ಹಳೆಯ ಘರ್ಜನೆ ಮತ್ತೆ ಕೇಳಿಸಲಿಲ್ಲ. ಅದು ಹೊರಟು ಹೋಯಿತು.

*****

ಯುವ್‌ರಾಜ್‌ ಸಿಂಘ್ 2 ಡಿಸೆಂಬರ್ 1981ರಲ್ಲಿ ಯೋಗರಾಜ್ ಮತ್ತು ಶಬ್ನಂ ದಂಪತಿಗಳಿಗೆ ಚಂಡಿಘರ್‌ನಲ್ಲಿ ಹುಟ್ಟಿದರು. ಯೋಗರಾಜ ಭಾರತಕ್ಕೆ ಹಾಗೂ ಪಂಜಾಬಿಗೂ ಕ್ರಿಕೆಟ್ ಆಡಿದ್ದಾರೆ. ಅವರು ಫಾಸ್ಟ್ ಬೋಲರ್ ಆಗಿದ್ದರು. ಇತ್ತೀಚೆಗೆ ಅವರು ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಚಿನ್ ಟೆಂಡೂಲ್ಕರ್ ಮಗ ಅರ್ಜುನ್‌ಗೆ ಬೋಲಿಂಗ್ ಕಲಿಸುತ್ತಿದ್ದರು.

ಟೆನಿಸ್ ಮತ್ತು ರೋಲರ್ ಸ್ಕೇಟಿಂಗ್‌ನಿಂದ ಶುರುಮಾಡಿದ ಯುವ್‌ರಾಜ್‌ ಸ್ಕೇಟಿಂಗ್‌ನಲ್ಲಿ 14 ವರ್ಷ ಒಳಗಿರುವ ಹುಡುಗರ ರಾಷ್ಟ್ರೀಯ ಚಾಂಪಿಯನ್‍ಶಿಪ್‌ನಲ್ಲಿ ಮೊದಲಿಗರಾದರು. ಅದರ ನಂತರ ಅವರ ತಂದೆಯ ಆಸೆಯ ಮೇರೆಗೆ ಕ್ರಿಕೆಟ್‌ನಲ್ಲಿ ತರಪೇತಿ ಹೊಂದಿ ರಣಜಿ ಟ್ರೋಫಿಯಲ್ಲಿ ಪಂಜಾಬಿನ ಟೀಮಿನಲ್ಲಿ ಪಾಲ್ಗೊಂಡರು. 1997-98 ರಲ್ಲಿ ಶುರುವಾದ ಅವರ ಕ್ರಿಕೆಟ್ ಜೀವನ ಮೊದಲಿನ ಇನ್ನಿಂಗ್ಸ್‌ನಲ್ಲಿ ಒರಿಸ್ಸಾ ಮೇಲೆ ಶೂನ್ಯ ಹೊಡೆದರು! ಯೂನಿವರ್ಸಿಟಿ ಒಂದು ಪಂದ್ಯದಲ್ಲಿ ಇವರ ಟೀಮಿನ ಮೇಲೆ ಬಿಹಾರ್ 367 ಹೊಡೆದರೆ, ಯುವ್‌ರಾಜ್‌ ಒಬ್ಬರೇ 358ರನ್ ಹೊಡೆದರು! 1999-2000 ರಲ್ಲಿ ಹರ್ಯಾಣ ವಿರುದ್ಧ ಯುವ್‌ರಾಜ್‌ 149 ರನ್ ಹೊಡೆದರು.

ಅವರಿಗೆ 2012 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2014 ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು. ಐಪಿಎಲ್‌ನಲ್ಲಿ ಅವರ ಟೀಮು ಎರಡು ಸರ್ತಿ ಕಪ್ಪನ್ನು ಗೆದ್ದಿದೆ. ಒಂದು ಸಲ ಹೈದರಾಬಾದಿನ ಸನ್ ರೈಸರ್ಸ್ ಮತ್ತು ಮುಂಬೈ ಇಂಡಿಯನ್ಸ್ ಟೀಮಿನ ಜೊತೆ. ಅವರ 12 ಬಾಲಿನ 50 ರನ್ ಇಂದಿಗೂ ಟಿ 20ನಲ್ಲಿ ದಾಖಲೆಯಾಗಿ ಉಳಿದಿದೆ.

ಯುವ್‌ರಾಜ್‌ ಡಿಏವಿ ಕಾಲೇಜಿನಲ್ಲಿ ಓದಿ ಪದವೀಧರರಾದರು. ಹೇಝಲ್ ಕೀಚ್ ಅವರನ್ನು 2016 ರಲ್ಲಿ ಮದುವೆಯಾದ ಅವರಿಗೆ ಜನವರಿ 2022 ರಲ್ಲಿ ಒಂದು ಗಂಡು ಮಗುವಾಯಿತು. 2019ರಲ್ಲಿ ಕ್ರಿಕೆಟ್ ಆಟದಿಂದ ನಿವೃತ್ತಿಯಾದರು.

ಕ್ರಿಕಟ್ ಆಟದಲ್ಲಿ ಒಳ್ಳೆಯ ಆಲ್ ರೌಂಡರ್ ಆದ ಯುವ್‌ರಾಜ್‌ ಸಿಂಘ್ ಉನ್ನತ ಮಟ್ಟದಲ್ಲಿ ಆಡಿ, ಭಾರತಕ್ಕೆ ಅಮೋಘ ಸೇವೆ ಸಲ್ಲಿಸಿ, ಇದ್ದಕಿದ್ದಂತೆ ಬಂದ ಕ್ಯಾನ್ಸರ್ ರೋಗಕ್ಕೆ ಮಣಿಯದೆ ಅದನ್ನು ಎದುರಿಸಿ ಹೋರಾಡಿದ ವೀರ ಯುವ್‌ರಾಜ್‌ ಯುವ ಜನಾಂಗಕ್ಕೆ ಒಂದು ಮಾದರಿಯಾಗಿದ್ದಾರೆ . ಅವರ ಆಟದ ವೈಖರಿ, ಎದುರಾಳಿಗಳನ್ನು ದಂಗು ಬಡಿಯುವ ಅವರ ಸಾಮರ್ಥ್ಯಕ್ಕೆ ಬೇರೆ ಸಾಟಿಯಿಲ್ಲ.

ಇದಕ್ಕೆ ಹಲವು ವರ್ಷಗಳ ಹಿಂದೆಯೇ ಯುವ್‌ರಾಜ್‌ ಸಿಂಘ್ ಮತ್ತು ಇನ್ನೊಬ್ಬ ಯುವ ಆಟಗಾರ, ಮೊಹಮ್ಮದ್ ಖೈಫ್ ತಮ್ಮ ಆಟದ ವೈಖರಿಯನ್ನು ಇದೇ ಇಂಗ್ಲೆಂಡಿನ ಮೇಲೆ 2002ರಲ್ಲೇ ತೋರಿಸಿದ್ದರು. ಆಗಲೇ ಅವರನ್ನು ಅರಳುವ ಪ್ರತಿಭೆಯೆಂದು ಬಹಳ ಜನ ಕಂಡುಕೊಂಡಿದ್ದರು.

ಹರ್ಭಜನ್ ಸಿಂಘ್ ಭಾರತದ ಟೀಮಿನ ಆಫ್ ಸ್ಪಿನ್ನರ್ ಆಗಿ ಹೆಸರುವಾಸಿಯಾದವರು. ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್ ವಾ 2001ರಲ್ಲಿ ಭಾರತಕ್ಕೆ ಅವರ ತಂಡವನ್ನು ಕರೆದುಕೊಂಡು 3 ಟೆಸ್ಟ್ ಪಂದ್ಯವನ್ನಾಡುವ ಸಲುವಾಗಿ ಬಂದರು. ಅವರ ಮಹದಾಸೆ ಏನೆಂದರೆ ಭಾರತವನ್ನು ಭಾರತದಲ್ಲೇ ಬಗ್ಗು ಬಡೆಯಬೇಕೆಂಬುದು! ಬೇರೆ ಎಲ್ಲಾ ದೇಶದಲ್ಲೂ ಜಯಭೇರಿ ಹೊಡೆದು ಅವರನ್ನು ದ್ವಂಸ ಮಾಡಿ ಬಂದ ಆ ಟೀಮಿಗೆ ಈ ಆಸೆ ಇರುವುದು ನ್ಯಾಯವೇ. ಈಗ ಇರುವ ಹಾಗೆ 2001ರಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ (ಡಬ್ಲ್ಯೂ ಟಿ ಸಿ ) ಇರಲಿಲ್ಲ. ಆದರೂ ಇಂಡಿಯಾ ವಿರುದ್ಧ ಗೆದ್ದರೆ ಅನಧಿಕೃತವಾಗಿ ಚಾಂಪಿಯನ್ ಎಂದು ಮೀಸೆ ತಿರುಗಿಸಬಹುದಲ್ಲ ಎಂದು ಅವರ ಎಣಿಕೆ! ತಪ್ಪೇನಿಲ್ಲ. ಅದನ್ನು ಕಾರ್ಯರೂಪಕ್ಕೆ ತರಲು ವಾ ಮೈದಾನಕ್ಕೆ ಇಳಿದರು.

ವಾಂಖೇಡೆ ಮೈದಾನದಲ್ಲಿ ಆಡಿದ ಮೊದಲನೇ ಟೆಸ್ಟ್ನಲ್ಲಿ ಸ್ಟೀವ್ ವಾ ಎಲ್ಲಾ ಅಂದುಕೊಂಡಂತೆ ನಡೆಯಿತು. ಮೊದಲು ಆಡಿದ ಭಾರತ 176ಕ್ಕೆ ಕುಸಿದು ಬಿದ್ದರು. ಟೆಂಡೂಲ್ಕರ್ ಒಬ್ಬರೆ 76ರನ್ ಹೊಡೆದು ಅವರ ಬೋಲಿಂಗನ್ನು ದಿಟ್ಟತನದಿಂದ ಎದುರಿಸಿದರು. ಆಸ್ಟ್ರೇಲಿಯ ಅದಕ್ಕೆ 349 ರನ್ ಹೊಡೆದು ಭರ್ಜರಿ ಜವಾಬನ್ನು ಕೊಟ್ಟರು. ಹೇಯ್ಡನ್ 119 ಮತ್ತು ಗಿಲ್‌ಕ್ರಿಸ್ಟ್ 122 ರನ್‌ಗಳು ಹೊಡೆದರು. ಅವರಿಬ್ಬರ ಸ್ಕೋರ್ ಬಿಟ್ಟರೆ ಶೇನ್ ವಾರ್ನ್‌ 39 ರನ್ ಹೊಡೆದರು. ಗಿಲ್‌ಕ್ರಿಸ್ಟ್ ಅವರ ಪ್ರತಿದಾಳಿಯಿಂದ ಅವರಿಗೆ ಒಳ್ಳೆ ಸ್ಕೋರ್ ಬಂತು. ಯಾವಾಗ ಆಸ್ಟ್ರೇಲಿಯ ವಿಕೆಟ್‌ಗಳನ್ನು ಕಳೆದುಕೊಂಡು, ತತ್ತರಿಸುತ್ತೋ, ಆವಾಗೆಲ್ಲಾ ಗಿಲ್ಕ್ರಿಸ್ಟ್ ತಮ್ಮ ಬಿರುಸಿನ ಪ್ರತಿದಾಳಿಯನ್ನು ಶುರುಮಾಡಿ ಎದುರಾಳಿಗಳು ಯದ್ವಾತದ್ವಾ ದಿಕ್ಕಿಲ್ಲದೆ ಓಡಾಡುವ ಹಾಗೆ ಮಾಡುತ್ತಾರೆ! ಇದು ಅವರ ಬ್ಯಾಟಿಂಗ್‌ನ ವಿಶೇಷ ವೈಖರಿ.

ಭಾರತ ತನ್ನ ಎರಡನೇ ಇನಿಂಗ್ಸ್‌ನಲ್ಲಿ 219 ಕ್ಕೆ ಔಟಾದಾಗ, ಆಸ್ಟ್ರೇಲಿಯ ತಂಡ 47/0 ಹೊಡೆದು ಮ್ಯಾಚ್ ಗೆದ್ದರು. ಈ ಮ್ಯಾಚಿನಿಂದ ಭಾರತಕ್ಕೆ ಒಂದು ಗಳಿಕೆ ಎಂದರೆ ಹರ್ಭಜನ್ 4 ವಿಕೆಟನ್ನು ತೆಗೆದರು.

ಇನ್ನು ಒಂದು ಗೆದ್ದರೆ ಸರಣಿ ಗೆದ್ದ ಹಾಗೆ, ಕನಸು ಇಡೇರಿದ ಹಾಗೆ ಅನ್ನುವ ಸಂತೋಷದ ಸ್ಥಿತಿಯಲ್ಲಿ ಆಸ್ಟ್ರೇಲಿಯ ತಂಡ ಕೊಲ್ಕೊತ್ತವನ್ನು ಪ್ರವೇಶಿಸಿತು. ಈ ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ನಡೆದ ಶ್ರೇಷ್ಟಪಂದ್ಯಗಳಲ್ಲಿ ಒಂದು ಎಂದು ಒಕ್ಕರೊಲಿನಿಂದ ವಿಶ್ವದಲ್ಲಿ ಸಮ್ಮತವಾಗಿದೆ. ಇದರಲ್ಲಿಯೂ ಭಾರತದ ಶುರುವಿನ ಆಟ ಕಳಪೆಯಾಗಿತ್ತು. ಮೊದಲು ಆಡಿದ ಆಸ್ಟ್ರೇಲಿಯ ತನ್ನ ಸ್ಕೋರ್ 445 ಹೊಡೆದು ತಂಡವನ್ನು ಮಜಬೂತು ಸ್ಥಿತಿಗೆ ತಂದರು. ನಾಯಕ 110 ರನ್ ಬಾರಿಸಿದರೆ ಹೇಯ್ಡನ್ ಮತ್ತೆ 97 ರನ್ ಹೊಡೆದರು. ಹರ್ಭಜನ್ ಇದರ ಮದ್ಯೆಯೂ 7 ವಿಕೆಟ್ ತೆಗೆದರು. ಭಾರತ 171 ರನ್ನಿಗೆ ಆಲ್ ಔಟಾದರು. ಫಾಲೋ ಆನ್ ಕೊಟ್ಟರು ವಾ. ಮ್ಯಾಚು ನಾಲ್ಕನೇ ದಿನ ಮುಗಿದು ಮುಂದಿನ ಟೆಸ್ಟ್ ಗೆ ಚೆನ್ನೈ ಗೆ ಹೋಗಬೇಕಾದುದೆಂದು ಭಾರತದ ಟೀಮಿನ ಮ್ಯಾನೇಜರ್ ಹೊಟೆಲಿನಿಂದ ಎಲ್ಲರ ಲಗೇಝನ್ನು ಖಾಲಿ ಮಾಡಿಸಿ ಏರ್ಪೊರ್ಟಿಗೆ ಕಳುಹಿಸಿದರು. ಮೂರನೇ ದಿನ ಆಟ ಮುಗಿದಾಗ 232/ 4 ಆಗಿತ್ತು. ನಾಲ್ಕನೇ ದಿನ ಆಟ ಮುಗಿದಾಗ, ಇಡೀ ದಿನ ಯಾರೂ ಔಟಾಗದೆ ಐದನೇ ದಿವಸ 608 ಕ್ಕೆ 5 ನೇ ವಿಕೆಟ್ ಬಿತ್ತು! ಭಾರತ 647 /7 ಕ್ಕರ ತನ್ನ ಇನ್ನಿಂಗ್ಸ್‌ಅನ್ನು ಡಿಕ್ಲೇರ್ ಮಾಡಿಕೊಂಡಿತು. ಆಸ್ಟ್ರೇಲಿಯ ತಮ್ಮ ಎರಡನೆ ಬಾರಿ 212 ಕ್ಕೆ ಎಲ್ಲರೂ ಔಟಾದರು. ಹರ್ಭಜನ್ 6 ವಿಕೆಟ್ ತೆಗೆದು ಮ್ಯಾಚಿನಲ್ಲಿ ಒಟ್ಟು 13 ವಿಕೆಟ್ ತೆಗೆದು ಭಾರತ ಗೆಲ್ಲುವುದಕ್ಕೆ ಬೋಲಿಂಗ್‌ನಲ್ಲಿ ಮುಖ್ಯ ಕಾರಣರಾದರು. ಟೆಂಡೂಲ್ಕರ್ ಕೂಡ 3 ವಿಕೆಟ್ ತೆಗೆದರು. ಲಗೇಜನ್ನೆಲ್ಲ ಏರ್ಪೋರ್ಟಿಗೆ ಕಳುಹಿಸಿದ್ದರ ಫಲವಾಗಿ ಎಲ್ಲರೂ ಉಟ್ಟ ಬಟ್ಟೆಯಲ್ಲೇ ಆ ರಾತ್ರಿ ಕಳೆದರು!

ಗೆಲುವಿನ ಹಂತದಲ್ಲಿದ್ದ ಆಸೀಸ್ ಸೋಲು ಅನುಭವಿಸಿದ ಮೇಲೆ ಎರಡೂ ಟೀಮು ಚೆನ್ನೈಗೆ ಬಂದವು. ಮೊದಲು ಆಡಿದ ಆಸ್ಟ್ರೇಲಿಯ 391 ರನ್ ಹೊಡೆದರು, ಅದರಲ್ಲಿ ಈ ಸರಣಿಯಲ್ಲೇ ಬಹಳ ಚೆನ್ನಾಗಿ ಆಡಿದ ಹೇಯ್ಡನ್ 203 ರನ್ ಹೊಡೆದರು. ಹರ್ಭಜನ್ ಮತ್ತೆ 7 ವಿಕೆಟ್ ತೆಗೆದರು! ಭಾರತ ತನ್ನ ಇನ್ನಿಂಗ್ಸ್‌ನಲ್ಲಿ 501 ರನ್ ಹೊಡೆಯಿತು. ಟೆಂಡೂಲ್ಕರ್ 126 ಹೊಡೆದರೆ, ದ್ರಾವಿಡ್ 81, ದಾಸ್ 84, ಸಡಗೋಪನ್ ರಮೇಶ್ 61, ವಿವಿಎಸ್ ಲಕ್ಸ್ಮಣ್ 65 ಹೀಗೆ ಎಲ್ಲರೂ ಚೆನ್ನಾಗಿ ಆಡಿದರು. ಎರಡನೇ ಬಾರಿ ಆಸ್ಟ್ರೇಲಿಯ 264 ಕ್ಕೆ ಔಟಾದರು. ಈ ಬಾರಿ ಹರ್ಭಜನ್ 8 ವಿಕೆಟ್ ತೆಗೆದರು! ಭಾರತಕ್ಕೆ ಬೇಕಾದ 154 ರನ್‌ಗಳನ್ನು ಮುಗ್ಗರಿಸಿತ್ತಾ ಹೇಗೋ 155/8 ಹೊಡೆದು ಸರಣಿಯನ್ನು ಭಾರತ 2 ವಿಕೆಟ್‌ನಿಂದ ಗೆದ್ದಿತು. ವಿಕೆಟ್ ಕೀಪರ್ ಆಗಿದ್ದ ಸಮೀರ್ ಡಿಘೆ ಕೊನೆಗೆ 22 ರನ್ ಹೊಡೆದು ಗೆಲುವನ್ನು ತಂದು ಕೊಟ್ಟರು. ವಿವಿ ಎಸ್ ಲಕ್ಸ್ಮಣ್‌ರ 66 ರನ್‌ಗಳು ಭಾರತದ ಪೈಕಿ ಒಳ್ಳೆ ಸ್ಕೋರಾಗಿತ್ತು.

3 ಟೆಸ್ಟ್ ಪಂದ್ಯಗಳಲ್ಲಿ 32 ವಿಕೆಟ್ ಪಡೆದು ಹರ್ಭಜನ್ ಭಾರತಕ್ಕೆ ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದರು. ವಿಶ್ವದಲ್ಲೇ ಅತ್ಯಂತ ಪ್ರಬಲವಾದ ಆಸ್ಟ್ರೇಲಿಯವನ್ನು 2-1 ಮ್ಯಾಚುಗಳಿಂದ ಇಂಡಿಯ ಸೋಲಿಸಿ ಸರಣಿಯನ್ನು ಗೆದ್ದಿತು. ಹರ್ಭಜರ್‌ನ ಜೀವನದಲ್ಲಿ ಇದು ಬಹಳ ದೊಡ್ಡ ಸಾಧನೆಯೆಂದು ಹೇಳಬಹುದು. ಟರ್ಬನ್ ಹಾಕಿಕೊಂಡು ಬೋಲಿಂಗ್ ಮಾಡುವ ಹರ್ಭಜನ್‌ರನ್ನು ಆವಾಗಿನಿಂದ ಟರ್ಬನೇಟರ್ ಎಂದೂ ಕರೆಯಲಾಯಿತು.

ಹರ್ಭಜನ್ ಸಿಂಘ್ 1998ರಿಂದ 2016 ವರೆಗೆ ಭಾರತವನ್ನು ಪ್ರತಿನಿಧಿಸಿದರು. ಆಫ್ ಸ್ಪಿನ್ನರ್ ಅದ ಹರ್ಭಜನ್ ಒಟ್ಟು 103 ಟೆಸ್ಟ್ ಆಡಿ ತಲಾ 32,46 ಸರಾಸರಿಯಲ್ಲಿ 417 ವಿಕೆಟನ್ನು ಪಡೆದರು. ಅವರು 25 ಬಾರಿ ಕನಿಷ್ಟ 5 ವಿಕೆಟ್ ತೆಗೆದಿದ್ದಾರೆ, ಮತ್ತು 5 ಸಾರಿ ಒಂದು ಮ್ಯಾಚ್‌ನಲ್ಲಿ 10 ವಿಕೆಟ್ ಪಡೆದಿದ್ದಾರೆ. ಅವರ 8/84 ಅತ್ಯುತ್ತಮ ಬೋಲಿಂಗ್‌ಗೆ ಪ್ರದರ್ಶನವಾಗಿತ್ತು. 42 ಕ್ಯಾಚ್ ಹಿಡಿದ ಹರ್ಭಜನ್ ಒಳ್ಳೆ ಫೀಲ್ಡರ್ರೂ ಆಗಿದ್ದರು.

236 ಒಡಿಐ ಮ್ಯಾಚ್ ಆಡಿದ ಹರ್ಭಜನ್ ಸಿಂಘ್ 33.35 ಸರಾಸರಿಯಲ್ಲಿ 269 ವಿಕೆಟ್ ಪಡೆದರು. ಟಿ 20 ಪಂದ್ಯಗಳಲ್ಲಿ ಅವರು 28 ಬಾರಿ ಆಡಿ 25 ವಿಕೆಟ್ ತೆಗೆದುಕೊಂಡರು.

ಹರ್ಭಜನ್ 2007 ಗೆದ್ದ ಟಿ 20 ವಿಶ್ವ ಕಪ್ ಮತ್ತು 2011ರಲ್ಲಿ ಗೆದ್ದ ಒಡಿಐ ವಿಶ್ವ ಕಪ್ ಟೀಮಿನ ಸದಸ್ಯರಾಗಿ ಟೀಮಿನ ಗೆಲುವಿಗೆ ಬಹಳ ಮಟ್ಟಿಗೆ ಕಾರಣರಾದರು. ಅವರು ಪಂಜಾಬಿಗೆ ರಣಜಿ ಟ್ರೋಫಿಗೆ ಆಡಿ ಮತ್ತೆ ಐಪಿಎಲ್‌ಗೆ ಸಿಎಸ್ಕೆ, ಮುಂಬೈ ಇಂಡಿಯನ್ಸ್ ಟೀಮಿಗೆ ಆಡಿದರು. 2011ರಲ್ಲಿ ಎಮ್ ಐ ಐಪಿಎಲ್ ಗೆದ್ದಾಗ ಹರ್ಭಜನ್ ಸಿಂಘ್ ಆ ಟೀಮಿನ ನಾಯಕರಾಗಿದ್ದರು.

ಹರ್ಭಜನ್‌ರ ಬೋಲಿಂಗ್ ವಿಷಯ ಸಾಕಷ್ಟು ಚರ್ಚೆಗಳಾಗಿ ಅವರು ಬಾಲನ್ನು ಎಸೆಯುತ್ತಾರೆ ಎಂಬ ಆರೋಪ ಎದ್ದಿತ್ತು. ಅದನ್ನು ಅವರು ವೈಜ್ಞಾನಿಯವಾಗಿ ಎಸೆಯುತ್ತಿಲ್ಲ ಎಂದು ಪುಷ್ಟೀಕರಿಸಲು ಆಸ್ಟ್ರೇಲಿಯದ ಬ್ರಿಸ್ಬೇನ್ ಯೂನಿವರ್ಸಿಟಿಯ ಅಪ್ಪ್ಲೈಡ್ ಮೆಕಾನಿಕ್ಸ್ ವಿಭಾಗದವರು ಅವರ ಕೈಗೆ ಸೆನ್ಸರ್‌ಗಳನ್ನು ಹಾಕಿ ಅವರ ಬೋಲಿಂಗ್ ಆಕ್ಷನ್ ಅನ್ನು ತನಿಖೆ ಮಾಡಿದರು. ಆ ರಿಪೋರ್ಟಿನ ಪ್ರಕಾರ ಹರ್ಭಜನ್ ಬೋಲಿಂಗ್ ಮಾಡ್ತಾರೆ, ಬಾಲು ಎಸಿಯಲ್ಲ ಎಂಬುದು ವೈಜ್ಞಾನಿಕವಾಗಿ ಸ್ಪಷ್ಟವಾಯಿತು. ಇದರಿಂದ ಅವರಿಗೆ ಮರು ಜೀವ ಬಂತೆಂದು ಹೇಳಬಹುದು. ಆದಾದ ತರುವಾಯವೇ ಅವರು ಆಸ್ಟ್ರೇಲಿಯಾ ವಿರುದ್ಧ 32 ವಿಕೆಟ್ ತೆಗೆದುಕೊಂಡು ದಾಖಲೆಯನ್ನು ಸ್ಥಾಪಿಸಿದರು. ಎಂತಹ ಕಷ್ಟದ ಸಮಯದಲ್ಲೂ ಅವರು ನಿರಾಸೆಯಾಗದೆ ತಮ್ಮ ಬೋಲಿಂಗನ್ನು ಮುಂದುವರಿಸಿಕೊಂಡು ಬಂದರು. ಅವರ ಬೋಲಿಂಗಿನ ಬಗ್ಗೆ ಅವರಿಗೆ ಅಚಲ ವಿಶ್ವಾಸವಿತ್ತು. ಆ ತನ್ನಂಬಿಕೆಯೇ ಅವರ ಬೆನ್ನೆಲುಬಾಗಿತ್ತು.

11 ಮಾರ್ಚ್‌ 2001ರಲ್ಲಿ ಕಲ್ಕತ್ತೆಯಲ್ಲಿ ನಡೆಯುತ್ತಿದ್ದ ಟೆಸ್ಟ್ ಪಂದ್ಯದಲ್ಲಿ ಹರ್ಭಜನ್ ರಿಕಿ ಪಾಂಟಿಂಗ್, ಆಡಮ್ ಗಿಲ್ಕ್ರಿಸ್ಟ್ ಮತ್ತು ಶೇನ್ ವಾರ್ನ ಅವರನ್ನು ಮೂರು ಬಾಲಲ್ಲಿ ಔಟ್ ಮಾಡಿ ಭಾರತದಲ್ಲಿ ಹ್ಯಾಟ್ ಟ್ರಿಕ್ ತೆಗೆದ ಮೊದಲನೇ ಬೋಲರ್ ಆದರು.

ಹರ್ಭಜನ್ ಸಿಂಘ್ 3 ಜುಲೈ 1980ರಲ್ಲಿ ಸರ್ದಾರ್ ಸರ್ದೇವ್ ಸಿಂಘ್ ಪ್ಲಾಹ ಅವರ ಮಗನಾಗಿ ಜಲಂಧರ್‌ನಲ್ಲಿ ಜನಿಸಿದರು. ಅವರ ತಂದೆಯ ಸಹಾಯದಿಂದ ಅವರಿಗೆ ಕ್ರಿಕೆಟ್ ಆಡಲು ಪ್ರೋತ್ಸಾಹ ಸಿಕ್ಕಿತು. ಒಳ್ಳೆಯ ಆಫ್ ಸ್ಪಿನ್ನರ್ ಆಗಿ ಹಂತ ಹಂತವಾಗಿ ಮುಂದೆ ಬಂದರು. ಅವರು ಇಂಗ್ಲೆಂಡಿನಲ್ಲಿರುವ ಸರ್ರೆ ಮತ್ತು ಎಸೆಕ್ಸ್ ಕೌಂಟಿ ಟೀಮುಗಳಿಗೆ ಆಡುತ್ತಿದ್ದರು.

ಹರ್ಭಜನ್ ಆಸ್ಟ್ರೇಲಿಯ ಪ್ರವಾಸದಲ್ಲಿ ಆಂಡ್ರೂ ಸೈಮಂಡ್ಸ್ ಅವರ ಜೊತೆ ಮಾತಿನ ಚಕಮಕಿಯಲ್ಲಿ ಸಿಕ್ಕಿ ಅವರ ಮೇಲೆ ವರ್ಣಭೇಧ ನೀತಿಯ ಆರೋಪ ಬಂದಿತ್ತು. ಅದರಲ್ಲಿ ಹರ್ಭಜನ್ ನಿರ್ದೋಷಿ ಎಂದು ಸಾಬೀತಾಯಿತು. ಇನ್ನೊಂದು ಜಗಳದಲ್ಲಿ ಸಹ ಕ್ರಿಕೆಟ್ಟಿಗ ಶ್ರೀಶಾಂತರ ಕಪಾಳಕ್ಕೆ ಬಾರಿಸಿದರೆಂದು ಅವರನ್ನು ಐಪಿಎಲ್ ಮ್ಯಾಚ್‌ಗಳಿಂದ ವಜಾ ಮಾಡಲಾಯಿತು. ಆಗಾಗ್ಗೆ ಹರ್ಭಜನ್ ಒಂದಲ್ಲ ಒಂದು ವಿಚಾರದಲ್ಲಿ ಗಲಭೆಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದರು.

ಅವರ ಬೋಲಿಂಗ್‌ನಲ್ಲಿ ಆಗಾಗ್ಗೆ ವಿಕೆಟ್ ಬರಲಿಲ್ಲ ಎಂಬುವ ಕಾರಣಕ್ಕೋ/ ಕಲಹಗಳ ಮಧ್ಯೆ ಅವರನ್ನು ಟೀಮಿಗೆ ತೆಗೆದುಕೊಳ್ಳುತ್ತಿರಲಿಲ್ಲ. ರಣಜಿ ಟ್ರೋಫಿಯಲ್ಲಿ ಮತ್ತೆ ಚೆನ್ನಾಗಿ ಬೋಲಿಂಗ್ ಮಾಡಿ ವಾಪಸ್ಸು ಭಾರತದ ಟೀಮಿಗೆ ಬರುತ್ತಿದ್ದರು. ಅವರು ಡಿಸೆಂಬರ್ 2021ರಲ್ಲಿ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ವಿಶ್ರಾಂತಿಯನ್ನು ಘೋಷಿಸಿದರು.

ಅವರು ಸಧ್ಯಕ್ಕೆ ಆಮ್ ಆದ್ಮಿ ಪಾರ್ಟಿ ಸೇರಿ ಅದರಿಂದ ರಾಜ್ಯ ಸಭಾ ಸದಸ್ಯರಾಗಿದ್ದಾರೆ.

ಸರ್ಕಾರ ಅವರಿಗೆ ಅರ್ಜುನ ಪ್ರಶಸ್ತಿ, 2009ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಅವರು 2015ರಲ್ಲಿ ಗೀತಾ ಬಸ್ರಾ ಎಂಬುವ ನಟಿಯನ್ನು ಮದುವೆಯಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಹೀಗೆ ಸಿಂಘ್ ಅಥವ ಸರ್ದಾರ್ ಅವರ ಪಂಗಡ ಭಾರತಕ್ಕೆ ಎಷ್ಟೋ ವರ್ಷಗಳಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಾ ಬಂದಿದೆ. ಕ್ರಿಕೆಟ್ ಒಂದೇ ಅಲ್ಲ, ದಶದ ರಕ್ಷಣೆಯಲ್ಲಿ ಇವರು ಯಾವಾಗಲೂ ಮುಂದು. ಹಾಗೂ ಇವರ ಲಂಗರ್ ಎಂದು ಕರೆದು ಅದೊಂದು ಸೇವೆಯಾಗಿ ಪರಿಗಣಿಸಿ ವಿಶ್ವದಲ್ಲೆ ಎಲ್ಲೇ ಇರಲಿ, ಎಲ್ಲಿ ಭಯಂಕರ ಅನಾಹುತ ನಡೆದು ಸಾವಿರಾರು ಜನಗಳು ಕುಡಿಯುವುದಕ್ಕೆ ನೀರು, ತಿನ್ನಲಿಕ್ಕೆ ಇರದೆ ಪರದಾಡುವ ಸ್ಥಿತಿಯಲ್ಲಿರುತ್ತಾರೋ, ಅಲ್ಲಿ ಇವರು ಟೊಂಕ ಕಟ್ಟಿ ರಾತ್ರೋ ರಾತ್ರಿ ನೀರು, ಊಟ ಮತ್ತು ವಸತಿಯನ್ನು ಮಾಡಿಕೊಡುತ್ತಾರೆ. ಇವರ ದೇಶ ಸೇವೆಗೆ, ಸಮಾಜ ಸೇವೆಗೆ ಕ್ರಿಕೆಟಾಯದಿಂದ ನಮ್ಮ ನಮೋ ನಮಃ.