ಗಂಟಿಚೋರರ ಸಂಘಟನೆಗಳು ಆಯಾ ಭಾಗದ ಸಮಸ್ಯೆಗಳನ್ನು ಗುರುತಿಸುವ ಮತ್ತು ಆ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಕೆಲಸ ಮಾಡಬೇಕಿದೆ. ಸಮುದಾಯದ ಸಮಸ್ಯೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಲಿಂಗದ ನೆಲೆಯಲ್ಲಿ ಮಹಿಳೆಯರ ಸಮಸ್ಯೆಗಳು ಬೇರೆಯೇ ಆಗಿರುತ್ತವೆ. ಹೀಗೆ ಕಾಲಕಾಲಕ್ಕೆ ಸಮುದಾಯದ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಹರಿಸುವ ಕೆಲಸವನ್ನು ಸಂಘಟನೆಗಳು ಮಾಡಬೇಕಿದೆ.  ಗಂಟೀಚೋರರ ಕಥನಗಳು ಸರಣಿಯಲ್ಲಿ ಗಂಟಿಚೋರರ ಸಂಘಟನೆಗಳ ಕುರಿತು ಅರುಣ್ ಜೋಳದ ಕೂಡ್ಲಿಗಿ ಬರೆದ 22ನೆಯ ಕಂತು ಇಂದಿನ ಓದಿಗಾಗಿ. 

ಇದೀಗ `ಕರ್ನಾಟಕ ರಾಜ್ಯ ಗಂಟಿಚರ‍್ಸ್ ಸಮಾಜದ ಕ್ಷೇಮಾಭಿವೃದ್ಧಿ ಸಂಘ’ ಎನ್ನುವ ರಾಜ್ಯಮಟ್ಟದ ಸಂಘಟನೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಈ ಸಂಘಟನೆಯ ಅಧ್ಯಕ್ಷರಾಗಿ ಸುರೇಶ ಬಾಲೆಹೊಸೂರು, ಉಪಾಧ್ಯಕ್ಷರಾಗಿ ವಸಂತ ಹಂದಿಗುಂದ, ಕಾರ್ಯದರ್ಶಿ ಅನಂತ ಕಟ್ಟಿಮನಿ ಅವರನ್ನು ಒಳಗೊಂಡಂತೆ ಹಲವು ಸದಸ್ಯ ಸಂಚಾಲಕರು ಈ ಸಂಘಟನೆಯನ್ನು ಮುನ್ನಡೆಸುತ್ತಿದ್ದಾರೆ. ಈ ಸಂಘಟನೆಯು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ.

ನಂತರದಲ್ಲಿ `ಉತ್ತರ ಕರ್ನಾಟಕ ಹಿಂದು ಘಂಟಿಚೋರ ಸಮಾಜ ಸುಧಾರಣಾ ಸಂಘ’ ವೊಂದು ಅಸ್ಥಿತ್ವದಲ್ಲಿದೆ. ಗಂಗಾಧರ ರಾಮಪ್ಪ ದತ್ತವಾಡ ಅವರು ಅಧ್ಯಕ್ಷರಾಗಿದ್ದಾರೆ. ಪರುಶುರಾಮ ರಾಮಚಂದ್ರ ಮಾಳಗಿ ಮತ್ತು ಗೋಪಾಲ ಪರಸಪ್ಪ ದತ್ತವಾಡ ಅವರುಗಳು ಉಪಾಧ್ಯಕ್ಷರಾಗಿದ್ದಾರೆ. ಒಟ್ಟು 15 ಜನ ಸದಸ್ಯ ಸಂಚಾಲಕರನ್ನು ಒಳಗೊಂಡ ಈ ಸಂಘಟನೆಯು ಉತ್ತರ ಕರ್ನಾಟಕದ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿದೆ. 2011 ರಲ್ಲಿ ಭಾರತ ಸರಕಾರವು ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ಮಾಡಿದಾಗ ಈ ಸಂಘಟನೆಯು ಕರಪತ್ರ ಪ್ರಕಟಿಸಿ `ಜನಗಣತಿ ವೇಳೆಯಲ್ಲಿ ಗಂಟಿಚೋರ್’ ಎಂದು ಬರೆಯಿಸಲು ಮನವಿ ಮಾಡಿತ್ತು.

ಈ ಎರಡು ರಾಜ್ಯಮಟ್ಟದ ಸಂಘಟನೆಗಳನ್ನು ಹೊರತುಪಡಿಸಿದರೆ, ಜಿಲ್ಲಾ ಮಟ್ಟದ ಸಂಘಟನೆಗಳು ರೂಪುಗೊಂಡಿವೆ. ಅದರಲ್ಲಿ ಬೆಳಗಾಂವ, ಗದಗ, ಬಿಜಾಪುರ ಈ ಮೂರು ಜಿಲ್ಲೆಗಳಲ್ಲಿ ಜಿಲ್ಲಾ ಸಂಘಟನೆಗಳು ಕೆಲಸ ಮಾಡುತ್ತಿವೆ. ಗದಗ ಜಿಲ್ಲಾ ಸಂಘಟನೆ `ಗದಗ ಜಿಲ್ಲಾ ಗಂಟಿಚೋರ್ ಸಮಾಜ ಕ್ಷೇಮಾಭಿವೃದ್ಧಿ ಸೇವಾ ಸಂಘ’ಎನ್ನುವ ಹೆಸರಲ್ಲಿ ನೋಂದಣಿಯಾಗಿದೆ. ಈ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರು ಹನುಮಂತಪ್ಪ ಭೀಮಪ್ಪ ಹಂಸನೂರು,(ಬನಿಯನ್), ಇಂದೀಗ ಉಳಿದಂತೆ ಗುರುಸಿದ್ದಪ್ಪ ಬಾಲಪ್ಪ ಬಾಲೆಹೊಸೂರು, ಯಮುನಪ್ಪ ಫಕ್ಕೀರಪ್ಪ ಆಸಂಗಿ, ಬಿ.ಎಮ್.ವಡ್ಡರಕಲ್ ಹಾಗು ಆಸಂಗೆಪ್ಪ ಆಸಂಗಿ ಅವರನ್ನು ಒಳಗೊಂಡಂತೆ ಹಲವು ಸದಸ್ಯ ಸಂಚಾಲಕರು ಸಂಘಟನೆಯಲ್ಲಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ `ಬೆಳಗಾಂವ ಜಿಲ್ಲಾ ಗಂಟಿಚೋರ ವೆಲ್ಫೇರ್ ಅಸೋಷಿಯೇಷನ್’ 13. 08.2015 ರಲ್ಲಿ ರಚನೆಯಾಗಿದೆ. ಕೆ.ಎಸ್.ಹಂದಿಗುಂದ ಅವರು ಈ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಇದೀಗ ವಸಂತ ಹಂದಿಗುಂದ ಅವರು ಅಧ್ಯಕ್ಷರಾಗಿದ್ದು, ಸುಧೀರ್ ಬಸವಣ್ಣೆಪ್ಪ ಅಂಕಲಿಯವರು ಉಪಾಧ್ಯಕ್ಷರಾಗಿದ್ದಾರೆ. ಹಲವರು ಸದಸ್ಯ ಸಂಚಾಲಕರಾಗಿದ್ದಾರೆ. ಬಿಜಾಪುರಲ್ಲಿ `ಹಿಂದೂ ಗಂಟಿಚೋರ ಸಮಾಜ ಕ್ಷೇಮಾಭಿವೃದ್ಧಿ ಸೇವಾ ಸಂಘ’ 2013-14 ನೇ ಸಾಲಿನಲ್ಲಿ ನೊಂದಣಿಯಾಗಿದೆ. ಈ ಸಂಘಟನೆಯಲ್ಲಿ ಶಿವಾಜಿ ನಾರಾಯಣ ಮಸೂತಿ ಅವರು ಅಧ್ಯಕ್ಷರಾಗಿದ್ದು ಅವರನ್ನು ಒಳಗೊಂಡಂತೆ 13 ಜನ ಸದಸ್ಯರು ಈ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಧಾರವಾಡ ಜಿಲ್ಲಾ ಮಹಿಳಾ ಗಂಟಿಚೋರ ಸಮಾಜವೊಂದು 15 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದದ್ದು ಕಾರಣಾಂತರದಿಂದ ಸ್ಥಗಿತಗೊಂಡಿದೆ. ಬಹುಶಃ ಪುರುಷರ ಸಂಘಟನೆಯು ಅಸ್ತಿತ್ವಕ್ಕೆ ಬಂದ ಮೇಲೆ ಈ ಸಂಘಟನೆ ತೆರೆಗೆ ಸರಿದಂತಿದೆ. ಈ ಸಂಘಟನೆಯ ಬಗ್ಗೆ ಮತ್ತು ಇದರಲ್ಲಿ ಸಕ್ರಿಯವಾಗಿದ್ದ ಮಹಿಳೆಯರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗದ ಕಾರಣ ಇಲ್ಲಿ ಇದರ ವಿವರಗಳನ್ನು ದಾಖಲಿಸಲು ಸಾಧ್ಯವಾಗಿಲ್ಲ.

ಬಿಜಾಪುರಲ್ಲಿ `ಹಿಂದೂ ಗಂಟಿಚೋರ ಸಮಾಜ ಕ್ಷೇಮಾಭಿವೃದ್ಧಿ ಸೇವಾ ಸಂಘ’ 2013-14 ನೇ ಸಾಲಿನಲ್ಲಿ ನೊಂದಣಿಯಾಗಿದೆ. ಈ ಸಂಘಟನೆಯಲ್ಲಿ ಶಿವಾಜಿ ನಾರಾಯಣ ಮಸೂತಿ ಅವರು ಅಧ್ಯಕ್ಷರಾಗಿದ್ದು ಅವರನ್ನು ಒಳಗೊಂಡಂತೆ 13 ಜನ ಸದಸ್ಯರು ಈ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಧಾರವಾಡ ಜಿಲ್ಲಾ ಮಹಿಳಾ ಗಂಟಿಚೋರ ಸಮಾಜವೊಂದು 15 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದದ್ದು ಕಾರಣಾಂತರದಿಂದ ಸ್ಥಗಿತಗೊಂಡಿದೆ.

ಗಂಟಿಚೋರ ಸಮುದಾಯದ ತಾಲೂಕ ಮಟ್ಟದ ಸಂಘಟನೆಗಳು ಈಗ ರೂಪುಕೊಳ್ಳುತ್ತಿವೆ. ಅದರಲ್ಲಿ ಪ್ರಮುಖವಾಗಿ 2015 ರಲ್ಲಿ ಶಿರಹಟ್ಟಿ `ಗಂಟಿಚೋರ ಸಮುದಾಯ ಸೇವಾಭಿವೃದ್ದಿ ಸಂಘಟನೆ’ ಅಸ್ಥಿತ್ವಕ್ಕೆ ಬಂದಿದ್ದು ಶಾಮಪ್ಪ ಭೀಮಪ್ಪ ಕಡೇಮನಿ ಅವರು ಅಧ್ಯಕ್ಷರಾಗಿದ್ದು, ಅನಂತ ಕಟ್ಟಿಮನಿಯವರು ಉಪಾಧ್ಯಕ್ಷರಾಗಿದ್ದಾರೆ. ಇದೀಗ ಗಂಟಿಚೋರ ಸಮುದಾಯದ ಗ್ರಾಮಮಟ್ಟದ ಸಂಘಟನೆಗಳೂ ಆಗುತ್ತಿವೆ. ಮುಖ್ಯವಾಗಿ ಸೆಟ್ಲಮೆಂಟ್ ಹೊರತುಪಡಿಸಿ ಗ್ರಾಮಮಟ್ಟದಲ್ಲಿ ಈ ಸಂಘಟನೆ ರೂಪುಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ಕ್ಷೇತ್ರಕಾರ್ಯದಲ್ಲಿ ಲಭ್ಯವಾದ ಮಾಹಿತಿಯ ಪ್ರಕಾರ ಇದೀಗ ರಾಯಭಾಗ ತಾಲೂಕಿನ ಭೆಂಡವಾಡ ಗ್ರಾಮದಲ್ಲಿ ಗಂಟಿಚೋರ ಸಮುದಾಯದ ಸಂಘಟನೆ ನೋಂದಾಯಿಸಿ ಸಮುದಾಯಕ್ಕೆ ಅಗತ್ಯವಾದ ಕೆಲಸಗಳನ್ನು ಮಾಡುತ್ತಿದೆ.

ಗ್ರಾಮಮಟ್ಟದಲ್ಲಿ `ಹಿಂದೂ ಗಂಟಿಚೋರ ಸಮಾಜ ಕ್ಷೇಮಾಭಿವೃದ್ಧಿ ಸೇವಾ ಸಂಘ, ಬೆಂಡವಾಡ’ ಸಂಘಟನೆ ಜೂನ್ 26, 2014 ರಂದು ನೊಂದಾವಣೆಯಾಗಿದೆ. ಸಂಜಯ ಶಿವಾಜಿ ಪಾತ್ರೋಟ ಅವರು ಈ ಅಧ್ಯಕ್ಷರಾಗಿದ್ದು, ಪಿ.ಗೋದಾವರಿ ಅವರು ಉಪಾಧ್ಯಕ್ಷರಾಗಿದ್ದು, 21 ಜನ ಸದಸ್ಯರಿದ್ದಾರೆ.

ಸಂಘಟನೆಯ ಹಕ್ಕೊತ್ತಾಯಗಳು:
ಗಂಟಿಚೋರ ಸಮುದಾಯದ ರಾಜ್ಯಮಟ್ಟದ ಸಂಘಟನೆಗಳನ್ನು ಒಳಗೊಂಡಂತೆ ಜಿಲ್ಲಾ, ತಾಲೂಕು, ಗ್ರಾಮ ಮಟ್ಟದ ಸಂಘಟನೆಗಳ ಹಕ್ಕೋತ್ತಾಯದಲ್ಲಿ ಸಾಮ್ಯತೆ ಇದೆ. ಇದರಲ್ಲಿ ಮುಖ್ಯವಾಗಿ ಐಡೆಂಟಿಟಿಗೆ ಸಂಬಂಧಿಸಿದ್ದು. ಇದು `ಗಂಟಿಚರ‍್ಸ್’ ಸಮುದಾಯವನ್ನು ಮಾತ್ರ ಪರಿಶಿಷ್ಠಜಾತಿಯೆಂದು ಪರಿಗಣಿಸಿ, ಇದೇ ಸಮುದಾಯದ ಸಮನಾಂತರ ಪದಗಳಾದ ಗಿರಣಿ ವಡ್ಡರ್, ವಡ್ಡರ್ (ವಡಾರಿ, ಭೋವಿ), ಠಕಾರಿಯಾ, ಭಾಮ್ಟಾ, ಉಚಲ್ಯಾ, ಪಾತ್ರೂಟ್, ಕಳ್ಳಕಬ್ಬೇರ (ಕೊಪ್ಪಳ ಭಾಗ) ತುಡುಗು ವಡ್ಡರ್ (ಕಳ್ಳವಡ್ಡರ್) ಮುಂತಾದ ಹೆಸರುಗಳನ್ನು ಒಂದೇ ಪದದಡಿ ತರಬೇಕಾಗಿದೆ. ಈ ಎಲ್ಲಾ ಪದಗಳು ಗಂಟಿಚರ‍್ಸ್ ಸಮನಾಂತರ ಪದಗಳೆಂದು ಗುರುತಿಸಿ ಪರಿಶಿಷ್ಟ ಜಾತಿಯ ಸೌಲಭ್ಯಕ್ಕಾಗಿ ಅರ್ಹತೆಯನ್ನು ಮಾನ್ಯ ಮಾಡಲು ಸಮಾಜ ಕಲ್ಯಾಣ ಇಲಾಖೆಯು ಒಂದು ಏಕರೂಪಿ ಗುರುತಿನ ಕಾಯ್ದೆಯನ್ನು ಪಾಸು ಮಾಡಬೇಕಿದೆ ಎನ್ನುವುದಾಗಿದೆ.

ಉಳಿದಂತೆ ಎಲ್ಲಾ ಸಂಘಟನೆಗಳ ಶೀರ್ಷಿಕೆಯಲ್ಲಿಯೇ `ಕ್ಷೇಮಾಭಿವೃದ್ಧಿ’ ಎನ್ನುವುದು ಕಾಣುತ್ತದೆ. ಅಂದರೆ ಸಮುದಾಯದ ಕ್ಷೇಮಾಭಿವೃದ್ಧಿಯನ್ನು ಪ್ರಧಾನ ಉದ್ದೇಶವನ್ನಾಗಿಸಿಕೊಂಡು ಸಂಘಟನೆಗಳು ಅಸ್ತಿತ್ವಕ್ಕೆ ಬಂದಿವೆ. ಉಳಿದಂತೆ ಸಮುದಾಯಕ್ಕೆ ಸಲ್ಲಬೇಕಾದ ನ್ಯಾಯಯುತ ಬೇಡಿಕೆಗಳನ್ನು ಈ ಸಂಘಟನೆಯ ಮುಖ್ಯ ಉದ್ದೇಶಗಳಲ್ಲಿ ಪಟ್ಟಿ ಮಾಡಲಾಗಿದೆ. ಈ ಸಂಘಟನೆಯ ಉದ್ದೇಶ ಮತ್ತು ಗುರಿಗಳಲ್ಲಿ ಕೆಲವು ಪ್ರಮುಖವೆನ್ನಿಸುವ ಅಂಶಗಳನ್ನು ಕಾಣಬಹುದು. ಗ್ರಾಮಮಟ್ಟದ ಬೆಂಡವಾಡದ ಸಂಘಟನೆಯ ಬೈಲಾದಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳಿವೆ. ಇಲ್ಲಿ ಸಮುದಾಯದ ಶಿಕ್ಷಣ ಮತ್ತು ಮಹಿಳೆಯರ ಅಭಿವೃದ್ಧಿಗೆ ಪೂರಕವಾದ ಸಂಗತಿಗಳು ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ಇಡೀ ಸಂಘಟನೆಯ ಹಿಂದೆ ಕ್ರಿಯಾಶಕ್ತಿಯಾಗಿ ಪಿ.ಗೋದಾವರಿ ಇರುವ ಕಾರಣ ಇಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ತರಬೇತಿಗೆ ಹೆಚ್ಚು ಅವಕಾಶವನ್ನು ಕೋರಿದ ಹಕ್ಕೊತ್ತಾಯಗಳಿವೆ.

ಸಂಘಟನೆಯ ಹೊಸ ಸಾಧ್ಯತೆಗಳು:
ರಾಜ್ಯಮಟ್ಟದ ಸಂಘಟನೆಯನ್ನು ಒಳಗೊಂಡಂ ತೆ ಜಿಲ್ಲಾ, ತಾಲೂಕು, ಗ್ರಾಮವಾರು ಸಮುದಾಯ ಸಂಘಟನೆಗಳು ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡುವ ಅಗತ್ಯವಿದೆ. ಮುಖ್ಯವಾಗಿ ಈ ಸಂಘಟನೆಗಳು ಸದ್ಯಕ್ಕೆ ಕೆಲವು ಸಭೆಗಳನ್ನು ಮಾಡಿ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಕೆಲಸವನ್ನು ಮಾಡುತ್ತಿದೆ. ಆದರೆ ಕ್ರಿಯಾಶೀಲವಾಗಿ ಸಮುದಾಯದ ಸಾಂಸ್ಕೃತಿಕ ಸಂಗತಿಗಳ ಕಡೆ ಹೆಚ್ಚು ಗಮನವಹಿಸಿದಂತೆ ಕಾಣುತ್ತಿಲ್ಲ. ಅಂತೆಯೇ ಈ ಸಂಘಟನೆಗಳಿಗೆ ಹೋರಾಟದ ಆಯಾಮವೂ ದೊರಕಿಲ್ಲ. ಹಾಗಾಗಿ ಪ್ರಸ್ತುತ ಅಧ್ಯಯನದ ಹಿನ್ನೆಲೆಯಲ್ಲಿ ಸಂಘಟನೆಗಳು ರೂಪಿಸಿಕೊಳ್ಳಬಹುದಾದ ಹೊಸ ಸಾಧ್ಯತೆಗಳ ಬಗ್ಗೆ ಕೆಲವು ಸಂಗತಿಗಳನ್ನು ಚರ್ಚೆ ಮಾಡಲಾಗಿದೆ. ಮುಂದೆ ಸಂಘಟನೆಗಳು ಸಾಧ್ಯವಾದಷ್ಟು ಈ ಸಂಗತಿಗಳನ್ನು ಪೂರಕವಾಗಿ ಬಳಸಿಕೊಂಡು ಹೆಚ್ಚು ಕ್ರಿಯಾಶೀಲವಾಗಬೇಕಿದೆ.

ಪ್ರತಿಭಟನೆಯ ದಾರಿ: ಸಮುದಾಯದ ಸಂಘಟನೆಗಳು ಸಮುದಾಯದ ಪರವಾದ ಹಕ್ಕೊತ್ತಾಯಗಳಿಗಾಗಿ ಕೆಲವೊಮ್ಮೆ ಪ್ರತಿಭಟನೆಯ ದಾರಿಯನ್ನು ಹಿಡಿಯಬೇಕಾಗುತ್ತದೆ. ಇದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವೂ ಇದೆ. ಸಮುದಾಯದ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವುದು, ಅದರ ಜಾರಿಗಾಗಿ ಮತ್ತೆ ಮತ್ತೆ ಅದರ ಹಿಂದೆ ನಿಂತು ಒತ್ತಡಗಳನ್ನು ಸೃಷ್ಟಿಸುವುದು, ಇದಕ್ಕೂ ಮಣಿಯದಾದಾಗ ಸಮುದಾಯದ ಸದಸ್ಯರನ್ನೊಳಗೊಂಡಂತೆ ಪ್ರತಿಭಟನೆ ಮಾಡುವುದಕ್ಕೆ ಸಮುದಾಯದ ಸಂಘಟನೆ ಬದ್ಧವಾಗಿರಬೇಕು. ಸದ್ಯಕ್ಕೆ ಗಂಟಿಚೋರ ಸಮುದಾಯದ ಸಂಘಟನೆಗಳಿಗೆ ಪ್ರತಿಭಟನೆಯ ಈ ಆಯಾಮವಿಲ್ಲ. ಬಾಲೆಹೊಸೂರು ಕೊಲೆ ಪ್ರಕರಣದಲ್ಲಿ ಹೀಗೆ ಹೋರಾಟ ಪ್ರತಿಭಟನೆಯ ಆಯಾಮಕ್ಕೆ ಒಂದು ಪ್ರವೇಶ ಸಿಕ್ಕಿದೆ. ಇದು ಸಮುದಾಯಕ್ಕೆ ಸಲ್ಲಬೇಕಾದ ಮೂಲಭೂತ ಅವಶ್ಯಕತೆಗಳ ಬೇಡಿಕೆಗೂ ವಿಸ್ತರಿಸಬೇಕಿದೆ.

ಮಹಿಳಾ ಪ್ರಾತಿನಿಧ್ಯ : ಗಂಟಿಚೋರ ಸಮುದಾಯದ ಸಂಘಟನೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ತುಂಬಾ ಕಡಿಮೆ ಇದೆ. ಇದು ಒಂದು ಬಗೆಯ ಪುರುಷ ಪ್ರಾದಾನ್ಯ ಸಂಘಟನೆಗಳಾಗಿವೆ. ಬಿಜಾಪುರ ಜಿಲ್ಲಾ ಗಂಟಿಚೋರ ಸಂಘಟನೆಯಲ್ಲಿ ಒಬ್ಬ ಮಹಿಳಾ ಸದಸ್ಯೆಯೂ ಇಲ್ಲ, ಬೆಂಡವಾಡದ ಗ್ರಾಮೀಣ ಸಂಘಟನೆಯಲ್ಲಿ ಗೋದಾವರಿ ಅವರು ಉಪಾಧ್ಯಕ್ಷರಾಗಿದ್ದು ಉಳಿದಂತೆ ಸತ್ತೆವ್ವಾ, ರೇಣುಕ, ಕಲ್ಲವ್ವ ಒಳಗೊಂಡಂತೆ ನಾಲ್ಕು ಮಹಿಳೆಯರ ಪ್ರಾತಿನಿಧ್ಯವಿದೆ. ರಾಜ್ಯ ಗಂಟಿಚರ‍್ಸ್ ಸಮುದಾಯ ಸಮಾಜದ ಕ್ಷೇಮಾಭಿವೃದ್ಧಿ ಸಂಘದಲ್ಲಿಯೂ ಸದ್ಯಕ್ಕೆ ಮಹಿಳಾ ಪ್ರಾತಿನಿಧ್ಯವಿಲ್ಲ. ಈ ಕುರಿತು ಅಧ್ಯಕ್ಷರಾದ ಸುರೇಶ ಬಾಲೇಹೊಸೂರು ಅವರು ಇಬ್ಬರು ಮಹಿಳೆಯರನ್ನು ತೆಗೆದುಕೊಳ್ಳುವ ಚರ್ಚೆ ನಡೆದಿದೆ ಎಂದು ಹೇಳಿದರು. ಇದನ್ನು ಗಮನಿಸಿದರೆ ಮಹಿಳೆಯರೇ ಸಂಖ್ಯೆಯಲ್ಲಿ ಹೆಚ್ಚಿರುವ ಗಂಟಿಚೋರ ಸಮುದಾಯದಲ್ಲಿ ಕನಿಷ್ಠ ಅರ್ಧದಷ್ಟು ಮಹಿಳೆಯರಿಗೆ ಸಂಘಟನೆಯಲ್ಲಿ ಪ್ರಾತಿನಿಧ್ಯ ಕೊಡಬೇಕಾಗಿದೆ.

ಶಿಕ್ಷಣದ ಜಾಗೃತಿ: ಅಂಬೇಡ್ಕರ್ ಅವರು ದಲಿತ ಕೆಳಜಾತಿಗಳ ಜಾಗೃತಿಗೆ ಪ್ರಮುಖ ಶಕ್ತಿಯನ್ನಾಗಿ ಶಿಕ್ಷಣವನ್ನು ಸೂಚಿಸುತ್ತಾರೆ. ಇದು ವಾಸ್ತವ ಕೂಡ. ಹಾಗಾಗಿ ಗಂಟಿಚೋರ್ ಸಮುದಾಯವು ಕೂಡ ಇಂದು ಸಾಮಾಜಿಕ ಸ್ಥಿತಿಯಲ್ಲಿ ಬದಲಾಗಿರುವುದು ಕೂಡ ಶಿಕ್ಷಣದಿಂದ. ಈ ಹಿನ್ನೆಲೆಯಲ್ಲಿ ಸಮುದಾಯದ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಜಾಗೃತಿಮೂಡಿಸುವ ಕೆಲಸವನ್ನು ಸಂಘಟನೆ ಮಾಡಬೇಕಿದೆ.

ಸೌಲಭ್ಯಗಳ ಅರಿವು ಮೂಡಿಸುವುದು: ಸರಕಾರದಿಂದ ಸಮುದಾಯಕ್ಕೆ ಇರಬಹುದಾದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಸಂಘಟನೆಗಳು ಮಾಡಬೇಕಿದೆ. ಹೀಗೆ ಅರಿವು ಮೂಡಿಸುತ್ತಲೇ ಸೌಲಭ್ಯಕ್ಕಾಗಿ ಸ್ಪರ್ಧಿಸುವ ಮತ್ತು ಅವಕಾಶಕ್ಕಾಗಿ ಅಹವಾಲು ಸಲ್ಲಿಸುವ ಕೆಲಸವೂ ಆಗಬೇಕಿದೆ.

ಸಾಂಸ್ಕೃತಿಕ ಕೂಡುಕೊಳೆ: ಸಂಘಟನೆಗಳು ವಾರ್ಷಿಕ ಸಭೆಗಳನ್ನು ಮಾಡುತ್ತಾ, ಸಾಂಸ್ಕೃತಿಕ ಸಂಗತಿಳಿಗೆ ಪ್ರೋತ್ಸಾಹದಾಕ ಕೆಲಸಗಳನ್ನು ಮಾಡಬೇಕಿದೆ. ಇಂತಹ ಸಭೆಗಳಲ್ಲಿ ಶೈಕ್ಷಣಿದ ಸಾಧಕರನ್ನು ಗೌರವಿಸುವುದು, ಹೆಚ್ಚು ಅಂಕ ಪಡೆದ ಮಕ್ಕಳಿಗೆ ಬಹುಮಾನ ವಿತರಿಸುವುದು. ಉತ್ತಮ ನೌಕರಿ ಪಡೆದು ಸಾಧನೆ ಮಾಡಿದವರನ್ನು ಸನ್ಮಾನಿಸುವುದು ಇತ್ಯಾದಿ ಚಟುವಟಿಕೆಗಳನ್ನು ಮಾಡಬೇಕಿದೆ.

ಸಮುದಾಯದ ಸಮಸ್ಯೆಗಳನ್ನು ಗುರುತಿಸುವುದು: ಸಂಘಟನೆಗಳು ಆಯಾ ಭಾಗದ ಸಮಸ್ಯೆಗಳನ್ನು ಗುರುತಿಸುವ ಕೆಲಸ ಮಾಡಬೇಕಿದೆ. ಅಂತೆಯೇ ಆಯಾ ಭಾಗದ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಬೇಕಿದೆ. ಸಮುದಾಯದ ಸಮಸ್ಯೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಅಂತೆಯೇ ಲಿಂಗದ ನೆಲೆಯಲ್ಲಿ ಮಹಿಳೆಯರ ಸಮಸ್ಯೆಗಳು ಬೇರೆಯೇ ಆಗಿರುತ್ತವೆ. ಹೀಗೆ ಕಾಲಕಾಲಕ್ಕೆ ಸಮುದಾಯದ ಸಮಸ್ಯೆಗಳನ್ನು ಅರಿತು ಅವುಗಳನ್ನು ಸರಕಾರದ, ಸಮಾಜದ ಗಮನಕ್ಕೆ ತರುವ ಕೆಲಸವನ್ನು ಸಂಘಟನೆಗಳು ಮಾಡಬೇಕಿದೆ.

ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹೋರಾಟ: ಸಂಘಟನಾತ್ಮಕವಾಗಿ ಇಂದು ಗಂಟಿಚೋರ್ ಸಂಘಟನೆಗಳು ಮೂಡಿಸಬೇಕಾದ ಎಚ್ಚರದಲ್ಲಿ `ರಾಜಕೀಯ’ ಪ್ರಾತಿನಿಧ್ಯಕ್ಕಾಗಿ ಹೋರಾಟ ಮಾಡುವುದು ಮುಖ್ಯವಾಗಿದೆ. ಹಾಗೆ ನೋಡಿದರೆ ಪರಿಶಿಷ್ಟಜಾತಿಯ ಪ್ರಾತಿನಿಧ್ಯದಲ್ಲಿ ರಾಜಕೀಯ ಮೀಸಲಾತಿಯನ್ನು ಈ ಸಮುದಾಯ ಈಗಲೂ ಪಡೆಯಲಾಗಿಲ್ಲ. ರಾಯಭಾಗ ತಾಲೂಕಿನಲ್ಲಿ ಸ್ಥಳೀಯ ಪಂಚಾಯ್ತಿಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಬಿಟ್ಟರೆ ಇತರೆ ಕಡೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಪಡೆಯುವ ಅಗತ್ಯವಿದೆ.

ಸಮುದಾಯದ ಪತ್ರಿಕೆ: ಈಚೆಗೆ ಆಯಾ ಸಮುದಾಯಕ್ಕೆ ಸಂಬಂಧಿಸಿದ ಪತ್ರಿಕೆಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ ಮುಖ್ಯವಾಗಿ ಸಮುದಾಯದ ವೈಭವೀಕರಣವಿರುತ್ತದೆ. ಅಂತೆಯೇ ಸಮುದಾಯದ ಕೆಲವರ ಮೆರವಣಿಗೆಗೆ ಸೀಮಿತವಾಗಿರುತ್ತದೆ. ಇದನ್ನು ನೋಡಿದರೆ ಸಮುದಾಯದ ಸಮಸ್ಯೆಗಳನ್ನು ಚರ್ಚೆ ಮಾಡಲು ಒಂದು ಪತ್ರಿಕೆ ಅಗತ್ಯವಿದೆ. ಅಥವಾ ಇಂದು ಅಂತರ್ಜಾಲದ ಸೌಲಭ್ಯಗಳು ಇರುವುದರಿಂದ ಅಂತರ್ಜಾಲದಲ್ಲಿಯೂ ಇಂತಹ ಅವಕಾಶಗಳನ್ನು ಸೃಷ್ಠಿಸಿಕೊಳ್ಳುವ ಅಗತ್ಯವಿದೆ.