ಹೊಸತರಲ್ಲಿ ಎಲ್ಲ ಚೆಂದವೇ. ಒಂದು ವಾರ ಕಳೆಯುವಷ್ಟರಲ್ಲಿ ಈ ಕೇಳ್ಮೆ ಕೂಡ ಯಾಕೊ ಮನೊಟನಸ್ ಆಗುತ್ತಿದೆ ಅನಿಸಿತು. ಕೇಳ್ಮೆಯ ಮೂಲಕ ವಿಚಾರ ಕ್ರೋಢೀಕರಣ ಸರಿ. ಓದುವ ತ್ರಾಸಿಗಿಂತ ಕೇಳ್ಮೆ ಸುಲಭ. ಇದೂ ಸರಿ. ಆದರೆ ಕೇಳಿಸಿಕೊಂಡದ್ದನ್ನು ಒಂದು ಕಡೆ ಅಕ್ಷರ ಮತ್ತು ಪದಗಳಲ್ಲಿ ಕ್ರಮಬದ್ಧವಾಗಿ ದಾಖಲಿಸಬೇಕಾಗುವಾಗ ವಾಕ್ಯರಚನೆ ಬಿಗಿಬಂಧದಲ್ಲಿ ರೂಪುತಳೆಯಬೇಕಾದರೆ ಓದಿನ ಸಂಗ ಅಗತ್ಯ ಬೇಕು ಎಂಬ ಅರಿವು ಜಾಗೃತವಾಯಿತು.
ಎನ್‌.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

 

ಕಳೆದ ವರ್ಷ ಕೊರೋನಾ ಸೃಷ್ಟಿಸಿದ ಏಕತಾನತೆ, ಅಭದ್ರತೆ, ಭಯದ ನಡುವೆ ಕೂಡ ಚಾಲನೆ ದೊರಕಿಸಿಕೊಂಡ ಕ್ಲಬ್ ಹೌಸ್ ಈ ವರ್ಷ ಏರುಗತಿ ಕಾಣಲು ಆರಂಭಿಸಿದೆ. ಈ ಕ್ಲಬ್ ಹೌಸ್ ಹೆಸರು ಕಿವಿಗೆ ಆಗೊಮ್ಮೆ ಈಗೊಮ್ಮೆ ಬೀಳುತ್ತಿತ್ತು. ನಾನು ಉಪೇಕ್ಷಿಸುತ್ತ ಸುಮ್ಮನಿರಲು ಆರಂಭಿಸಿದ್ದೆ. ಯಾಕೆಂದರೆ ಕೆಲವು ಆ್ಯಪ್ ಗಳು ಒಂದಷ್ಟು ಸವಲತ್ತುಗಳನ್ನೇನೋ ಕಲ್ಪಿಸಿಕೊಡುತ್ತವೆ ನಿಜ; ಆದರೆ ಅದನ್ನು ಬಳಸುವವರು ಬಳಸುವ ಪರಿ ಕಂಡು ನನ್ನಲ್ಲಿ ಬಹಳ ಹೇವರಿಕೆ ಶುರುವಾಗಿತ್ತು. ವಾಟ್ಸಾಪ್ ನಲ್ಲಿ ನಾವು ಇಲ್ಲವೆಂದರೆ ನಮ್ಮನ್ನು ಹಲವರು ಅನುಮಾನದಲ್ಲಿ ನೋಡುವ ಪರಿಸ್ಥಿತಿಯನ್ನ ಅದು ಸೃಷ್ಟಿಸಿತ್ತು. ಇದೆಂಥ ಅನಿವಾರ್ಯದ ಹಿಂಸೆ ಅನಿಸುತ್ತಲೇ ಇದ್ದರೂ ಬಳಕೆ ಪ್ರಮಾಣ ಮಾತ್ರ ತಗ್ಗಿರಲಿಲ್ಲ.

ಫೇಸ್ಬುಕ್ ಆರಂಭವಾಗಿದ್ದೇ ಆಗಿದ್ದು ಸೆನ್ಸಿಬಲ್ ಬರಹಗಳ ಪ್ರಮಾಣಕ್ಕಿಂತ ಕುಹಕ ಹೆಚ್ಚುತ್ತಿರುವಂತೆ ಕಂಡಿತು. ಇನ್ನು ಇನ್ಸ್ಟಾ ತನ್ನ ಒಡಲನ್ನು ಮತ್ತೊಂದು ಬಗೆಯಲ್ಲಿ ತುಂಬಿಸಿಕೊಳ್ಳಲು ನಿತ್ಯ ಅಣಿಯಾಗುವ ಬುಟ್ಟಿಯ ಹಾಗೆ ಕಂಡಿತು. ಟ್ವಿಟರ್ ನಲ್ಲಿ ಮಾತು ಮತ್ತು ಸಂದೇಶ ಚುಟುಕಾಗಿ ರವಾನೆಯಾಗುತ್ತದೆ ಅಂದುಕೊಂಡರೆ ಅದು ಚೇಳುಗಳ ಕುಟುಕು ತಾಣವಾದಂತೆ ಕಾಣಿಸಲು ಆರಂಭಿಸಿತು. ಮತ್ತು ಈ ಎಲ್ಲವನ್ನು ಒಟ್ಟಾರೆ ನೋಡಿದಾಗ ನನ್ನಲ್ಲಿ ಕದಲಿದ ಚಿತ್ರವೇ ಬೇರೆ.

ವಾಟ್ಸಾಪ್ ಗ್ರೂಪ್ ಅನ್ನುವುದು ಒಂದು ಮನೆಯ ಹಾಗೆ. ಮನೆ ಅಂದಮೇಲೆ ಕೆಲವೊಮ್ಮೆ ಜಗಳಗಳಾಗುತ್ತವೆ. ಅದನ್ನ ಅಲ್ಲೇ ಬಗೆಹರಿಸಿಕೊಳ್ಳಬೇಕು. ಈ ಸೂಕ್ಷ್ಮ ಇಲ್ಲದವರಿಗೆ ಫೇಸ್ಬುಕ್ ಎಂಬುದು ಬೀದಿಯ ಹಾಗೆ ಕಾಣಿಸುತ್ತದೆ. ಅವರು ಮನೆ ಜಗಳವನ್ನ ಬೀದಿಗೆ ತಂದು ಕಿರುಚಲು ಆರಂಭಿಸುತ್ತಾರೆ. ಅವರ ಜೊತೆ ಬೀದಿಗಿಳಿದು ಜಗಳ ಮಾಡುವವರು ಯಾರು ಅಂದುಕೊಂಡು ನಾನೂ ನಿರ್ಲಿಪ್ತನಾಗಿ ಇದ್ದ ಹೊತ್ತು ಇದ್ಯಾವುದೋ ಕ್ಲಬ್ ಹೌಸ್ ಶಕೆ ಆರಂಭವಾಗಿ ಎಲ್ಲರ ನಾಲಗೆ ಮೇಲೆ ನರ್ತಿಸಲು ಆರಂಭಿಸಿತು. ಇದರ ವಿಶೇಷ ಏನು ಎಂದು ಕೇಳಿದೆ.

‘ಇದು ಶ್ರವಣ ಪ್ರಧಾನ. ಕೇಳ್ಮೆಯ ಬಗ್ಗೆ ಒಲವಿರುವವರು ಕೇಳಿಸಿಕೊಳ್ಳಬಹುದು. ನಿನಗೂ ಏನಾದರೂ ಅಭಿಪ್ರಾಯ ವ್ಯಕ್ತಪಡಿಸುವ ಮನಸ್ಸಾದರೆ ನೀನು ಕೈ ಎತ್ತಿ ಸೂಚಿಸಬೇಕು. ನೀನು ಸೂಚಿಸಿದ ಕೂಡಲೆ ನಿನಗೆ ಮಾತಾಡಲು ಅವಕಾಶ ಸಿಕ್ಕೇ ಸಿಗುತ್ತದೆ ಅಂತೇನಿಲ್ಲ. ಮಾಡರೇಟರ್ ಅಂತೊಬ್ಬರು ಇರುತ್ತಾರೆ. ಅವರು ನಿನಗೆ ಅವಕಾಶ ಕಲ್ಪಿಸಿದರೆ ನೀನು ಮಾತಾಡಬಹುದು. ಇಲ್ಲದಿದ್ದರೆ ಚರ್ಚೆಯನ್ನ ಸುಮ್ಮನೆ ಕೇಳಿಸಿಕೊಳ್ಳಬಹುದು. ಅದೂ ಆಗದಿದ್ದರೆ ಮತ್ತು ನಿನಗೆ ವಿಷಯ ಮಂಡನೆ ಇಂಟ್ರೆಸ್ಟಿಂಗ್ ಅನಿಸದಿದ್ದರೆ ನಿಶ್ಯಬ್ದವಾಗಿ ನಿರ್ಗಮಿಸಬಹುದು. ನೇರ ಮುಖಾಮುಖಿ ಇಲ್ಲ. ಓನ್ಲಿ ಧ್ವನಿ. ಮಾತಾಡಲು ಕೈ ಎತ್ತಿ ಸೂಚಿಸಲು ಮತ್ತು ನಿರ್ಗಮಿಸಲು ಕಿಂಡಿಗಳಿವೆ..’ ಎಂಬ ವಿವರಣೆ ದೊರೆಯಿತು.

ಬೀದಿ ಜಗಳಕ್ಕಿಂತ ಇದೇನೊ ಬೇರೆ ರೀತಿ ಇದೆ ಅನಿಸಿ ಕ್ಲಬ್ ಹೌಸ್ ಒಳಹೊಕ್ಕೆ. ನಾನು ಕೇಳಿಕೊಂಡ ವಿವರಣೆಗಳನುಸಾರವಾಗೇ ಎಲ್ಲ ಇತ್ತು. ಆದರೆ ಬೇಡವಾದದ್ದೂ ಒಂದು ಇತ್ತು. ಅದು ಫಾಲೊಯಿಂಗ್ ಸಿಸ್ಟಂ. ನಾವು ಯಾರ ಹಿಂದೆ ಹೋಗುತ್ತೇವೆ ಮತ್ತು ನಮ್ಮ ಹಿಂದೆ ಯಾರು ಆಗಮಿಸುತ್ತಾರೆ- ಇದರ ಆಧಾರದ ಮೇಲೆ ಏನೇನು ನಡೆಯುತ್ತದೆಯೋ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ನನ್ನದೊಂದು ಫೋಟೊ ಅಪ್ ಲೋಡ್ ಮಾಡಿ ಮುಂದುವರಿದೆ. ರಂಗದ ಬಗೆಗೇ ನನ್ನ ಸೆಳವು ಹೆಚ್ಚು ಇರುವುದರಿಂದ ರಂಗದ ವಿಚಾರ ಮಾತಾಡುವ ಕೆಲವು ಗುಂಪುಗಳನ್ನ ತಡಕಾಡಿ ಅವುಗಳನ್ನ ಫಾಲೋ ಮಾಡಿದೆ. ನಟರಾಜ್ ಹೊನ್ನವಳ್ಳಿ, ಮಹದೇವ ಹಡಪದ, ಶಶಿಧರ್ ಭಾರಿಘಾಟ್, ಮಂಡ್ಯ ರಮೇಶ್ – ನನ್ನ ಪ್ರೀತಿಯ ಈ ಹಿರಿಯರೆಲ್ಲ ಕಣ್ಣಿಗೆ ನಿಲುಕುತ್ತಿದ್ದಂತೆ ಅವರನ್ನ ಹಿಂಬಾಲಿಸದೆ ಇರುವುದು ಹೇಗೆ? ಇದರ ಪರಿಣಾಮವಾಗಿ ಮಾತುಕಥೆಗಳ ಕೋಣೆಗಳು ತೆರೆದುಕೊಳ್ಳಲು ಆರಂಭಿಸಿದವು. ಯಾವ ಕೋಣೆ ಹೊಗಬೇಕು, ಅದರಲ್ಲಿ ಚರ್ಚೆಯಾಗುತ್ತಿರುವ ವಿಚಾರ ಏನು? ಮಾತಾಡುತ್ತಿರುವವರು ಯಾರು? ನಿರ್ಧಾರ ತೆಗೆದುಕೊಳ್ಳುವುದು ನಮಗೇ ಬಿಟ್ಟದ್ದು. ಸರಿಯಾದ ಕೋಣೆ ಹೊಕ್ಕು ಕಿವಿಯಾದರೆ ಕೇಳುವಿಕೆಯ ಖುಷಿಯೇ ಬೇರೆ. ಬೇಡದ ಕೋಣೆ ಹೊಕ್ಕರೆ ತಲೆ ಗಿರಾ ಗಿರಾ ಗಿರಾ…

ಕೋಣೆ ನಿರ್ಮಾತೃಗಳು ತಮಗೆ ಸೂಕ್ತವಾದ ಸಮಯ ನಿಗದಿ ಮಾಡಿಕೊಳ್ಳುತ್ತಾರೆ. ಆ ಸಮಯಕ್ಕೆ ಕಿವಿಯಾಗುವುದು ಬಿಡುವುದು ನಮಗೆ ಬಿಟ್ಟದ್ದು. ಒಂದಲ್ಲ ನೂರಾರು, ಸಾವಿರಾರು ಕೋಣೆಗಳಲ್ಲಿ ಮಾತು ಸಾಗಿರುತ್ತದೆ. ಕ್ಲಬ್ ಹೌಸ್ ಹುಟ್ಟು ಹಾಕಿದ ಪಾಲ್ ಡೇವಿನ್ಸನ್ ರಿಂದ ಹಿಡಿದು ಆಶಿಷ್ ವಿದ್ಯಾರ್ಥಿ, ಶಶಿ ತರೂರ್ ಮುಂತಾದವರ ಮಾತುಗಳಿಗೆ ಕಿವಿಯಾಗಬಹುದು.ಸರಿ ಅಂತಂದುಕೊಂಡು ಮಾತಿನ ಕೋಣೆಗಳಿಗೆ ಎಂಟ್ರಿ ಎಕ್ಸಿಟ್ ಕೊಡುವ ಕೆಲಸ ಆರಂಭಿಸಿದೆ.

ಈ ಕ್ಲಬ್ ಹೌಸ್ ಒಂದರ್ಥದಲ್ಲಿ ನನಗೆ ಅದೃಶ್ಯದಲ್ಲಿ ಲೈವ್ ಮಾತುಕಥೆಯಾಡುವ ನಾಟಕ ಗೃಹದ ಹಾಗೇ ಕಾಣಿಸಲು ಆರಂಭಿಸಿತು. ಮಾತುಗಾರರ ಮಾತುಗಳನ್ನು ಥೇಟ್ ನಾಟಕದಲ್ಲಿನ ಪಾತ್ರಗಳ ಮಾತುಗಳಾಗಿಯೇ ಕಲ್ಪಿಸಿಕೊಳ್ಳಲು ಆರಂಭಿಸಿದರೆ ಅದರ ಮಜವೇ ಬೇರೆ. ನಾಟಕದ ರಚನೆಗೆ ಬೇರೆ ಶಿಸ್ತು ಮತ್ತು ಚೌಕಟ್ಟು ಇದೆ ಎಂಬುದು ನನಗೆ ಗೊತ್ತು. ಆದರೆ ಎಲ್ಲರ ಮಾತು ನಾಟಕದ ಬಂಧದಲ್ಲಿ ಅರಳಿಕೊಂಡಂತೆ ಅರಳಿಕೊಳ್ಳುವುದಿಲ್ಲ ಎಂಬುದೂ ನನಗೆ ಗೊತ್ತು. ಆದರೆ ಈ ಚೌಕಟ್ಟು, ಬಂಧ ಎಲ್ಲ ಬಿಟ್ಟು ಕಣ್ಣುಗಳಿಗೆ ಮರೆಯಾಗಿ ಕೇವಲ ಕಿವಿಗೆ ಒದಗಿ ಬರುವ ಮಾತುಗಳನ್ನ ರಂಗದ ಮೇಲೆ ನಿಲ್ಲಿಸಿಕೊಂಡು ಕೇಳಿಕೊಳ್ಳಲು ಅಡ್ಡಿಯೇನೂ ಇರಲಾರದು ಅಂತಲೂ ಅನಿಸಿತು.

ಹೊಸತರಲ್ಲಿ ಎಲ್ಲ ಚೆಂದವೇ. ಒಂದು ವಾರ ಕಳೆಯುವಷ್ಟರಲ್ಲಿ ಈ ಕೇಳ್ಮೆ ಕೂಡ ಯಾಕೊ ಮನೊಟನಸ್ ಆಗುತ್ತಿದೆ ಅನಿಸಿತು. ಕೇಳ್ಮೆಯ ಮೂಲಕ ವಿಚಾರ ಕ್ರೋಢೀಕರಣ ಸರಿ. ಓದುವ ತ್ರಾಸಿಗಿಂತ ಕೇಳ್ಮೆ ಸುಲಭ. ಇದೂ ಸರಿ. ಆದರೆ ಕೇಳಿಸಿಕೊಂಡದ್ದನ್ನು ಒಂದು ಕಡೆ ಅಕ್ಷರ ಮತ್ತು ಪದಗಳಲ್ಲಿ ಕ್ರಮಬದ್ಧವಾಗಿ ದಾಖಲಿಸಬೇಕಾಗುವಾಗ ವಾಕ್ಯರಚನೆ ಬಿಗಿಬಂಧದಲ್ಲಿ ರೂಪುತಳೆಯಬೇಕಾದರೆ ಓದಿನ ಸಂಗ ಅಗತ್ಯ ಬೇಕು ಎಂಬ ಅರಿವು ಜಾಗೃತವಾಯಿತು. ಹಾಗಾಗಿ ಕೇಳುವಿಕೆಗೆ ಡಿವೋಟ್ ಮಾಡುವ ಸಮಯವನ್ನ ಓದುವುದಕ್ಕೂ ಮೀಸಲಿಡುವ ಬಗೆ ಕಂಡುಕೊಳ್ಳಬೇಕು ಎಂದು ಯೋಚಿಸುತ್ತಿದ್ದ ಹೊತ್ತು ಒಂದು ಕೋಣೆಯಲ್ಲಿ ಕೆಲವರು ರಂಗಭೂಮಿಯ ನಟ ನಟಿಯರು, ಕೋವಿಡ್ ಸಮಯದಲ್ಲಿ- ಪ್ರಸ್ತುತ ಈ ಹೊತ್ತೂ ಕೂಡ ಎದುರಿಸುತ್ತಿರುವ ಸಂಕಷ್ಟ, ಸರ್ಕಾರ ಕೊಡುವ ಮೂರು ಸಾವಿರ ಯಾವ ಮೂಲೆಗೆ ಇತ್ಯಾದಿ ವಿಚಾರ ಚರ್ಚೆಯಾಗುತ್ತಿರುವುದು ಕಿವಿಗೆ ನಿಲುಕಿತು. ನಟ ನಟಿಯರು ಮಾನಸಿಕ ಖಿನ್ನತೆಗೆ ಒಳಗಾಗಿರುವ ಸಂಗತಿಗಳ ಬಗ್ಗೆ, ಸರ್ಕಾರದ ದಾಷ್ಟ್ಯಗಳ ಕುರಿತು ಮಾತಾಡಲು ಆರಂಭಿಸಿದ್ದರು. ನಾನು ಕೇಳಿಸಿಕೊಳ್ಳುವ ಜನಮೇಜಯನಾಗಿ ಉಪಸ್ಥಿತನಿದ್ದೆ.

ಇಂದಿಗೂ ಕೊರೋನದ ಬಾಹುಬಿಗಿತ ಇನ್ನೂ ಸಡಿಲವಾಗಿಲ್ಲ. ಕೆಲವರು ಧೈರ್ಯದಿಂದ, ಮತ್ತೆ ಕೆಲವರು ಭಂಡತನದಲ್ಲಿ, ಉಡಾಫೆಯಲ್ಲಿ ಓಡಾಡಿಕೊಂಡಿದ್ದರೆ ಹಲವರಿಗೆ ಸಾವು ತಮ್ಮ ಎದೆಯ ಕದ ತಟ್ಟುತ್ತಿರುವಂತೆ ಭಾಸವಾಗುತ್ತಲೇ ಇದೆ. ಅಭದ್ರತೆ, ಅಸ್ಥಿರತೆ, ನೋವು, ಸಾವು ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ಬಾಧಿಸುತ್ತಲೇ ಇದೆ. ಇಂತಿರುವಾಗ ಕಥೆಗೆ ಗುರಿಯಾಗದವರು ಯಾರು? ರಂಗದ ನಟರು ಇದಕ್ಕೆ ಹೇಗೆ ಹೊರತು? ನಮ್ಮನಮ್ಮ ಗಮನಕ್ಕೆ ಬಂದ ನಟನಟಿಯರ ಕಷ್ಟಗಳನ್ನು ಪಟದಂತೆ ಬಿಚ್ಚಿ ಕ್ಲಬ್ ಹೌಸಿನ ಕೋಣೆಯಲ್ಲಿ ಕಾಣಿಸಲು ಆರಂಭಿಸಿದ್ದರು.

ಯಾಕೋ ಗೊತ್ತಿಲ್ಲ. ಯಾರಾದರೂ ಒಂದು ವಿಚಾರ ಮಂಡಿಸುತ್ತಿದ್ದರೆ ಅದರ ವಿರುದ್ಧ ಧ್ರುವದಲ್ಲಿಯೇ ನನ್ನ ಆಲೋಚನೆ ಬಹಳ ಸಲ ಸಾಗುತ್ತ ಪ್ರಶ್ನೆಗಳ ಕೊಂಡಿಗಳು ನನ್ನಲ್ಲಿ ನಿರಂತರ ಏಳುತ್ತಿರುತ್ತವೆ.

ಅವರ ಜೊತೆ ಬೀದಿಗಿಳಿದು ಜಗಳ ಮಾಡುವವರು ಯಾರು ಅಂದುಕೊಂಡು ನಾನೂ ನಿರ್ಲಿಪ್ತನಾಗಿ ಇದ್ದ ಹೊತ್ತು ಇದ್ಯಾವುದೋ ಕ್ಲಬ್ ಹೌಸ್ ಶಕೆ ಆರಂಭವಾಗಿ ಎಲ್ಲರ ನಾಲಗೆ ಮೇಲೆ ನರ್ತಿಸಲು ಆರಂಭಿಸಿತು.

ಕೊರೋನ ತನ್ನ ಮುಷ್ಟಿ ಇನ್ನೂ ಸಡಿಲಿಸಿಲ್ಲ. ನಟನಟಿಯರು ನರಳುತ್ತಿದ್ದಾರೆ ನಿಜ. ಆದರೆ ಕೊರೋನ ಇಲ್ಲದೇ ಇದ್ದ ಸಂದರ್ಭದ ಕಥೆ ಏನು ಹಾಗಾದರೆ? ಆ ಹೊತ್ತು ರಂಗದ ನಟರ ಬದುಕಿನಲ್ಲಿ ಅಸ್ಥಿರತೆ ಪ್ರಮಾಣ ಕೊಂಚ ಕಡಿಮೆ ಇದ್ದಿರಬಹುದು. ದಿನಕ್ಕೆ ಒಂದಿಷ್ಟು ದುಡ್ಡು ಹೊಂದಿಸಿಕೊಳ್ಳುವ ಶಕ್ತಿಯನ್ನು ಅವರು ಸಂಪಾದಿಸಿಕೊಂಡಿದ್ದಿರಬಹುದು. ಇದರ ಹೊರತಾಗಿಯೂ ನಟರು ಎದುರಿಸುವ ಸಮಸ್ಯೆ, ತಾಕಲಾಟ ಎಂಥದು ಎಂದು ಯೋಚಿಸುವಾಗ ನನಗೆ ಮರಾಠಿಯ ಜನಪ್ರಿಯ ನಾಟಕ ‘ನಟಸಾಮ್ರಾಟ್’ ನೆನಪಿಗೆ ಬಂತು. ಆ ನಾಟಕವನ್ನು ಮರಾಠಿಯಲ್ಲಿಯೇ ನೋಡಿದ್ದೆ. ನಂತರ ಆ ನಾಟಕ ಅದೇ ಹೆಸರಿನಲ್ಲಿ ಸಿನಿಮಾ ಕೂಡ ಆಗಿ ನಾನಾ ಪಾಟೇಕರ್ ಅತ್ಯದ್ಭುತವಾಗಿ ನಟಿಸಿದಾಗ ಅದನ್ನು ಕಂಡು ನಾನು ಬೆರಗಾಗಿದ್ದೆ.

ಮೂಲತಃ ಇದು ಶೇಕ್ಸ್‌ಪಿಯರ್ ನ ಕಿಂಗ್ ಲಿಯರ್ ನಾಟಕದ ಅಡಾಪ್ಟೇಷನ್. ಮರಾಠಿ ಬದುಕಿನ ಸಂವೇದನೆಯ ಹಿನ್ನೆಲೆಯಲ್ಲಿ ಇದನ್ನು ರೂಪಾಂತರಿಸಿಕೊಂಡಿದ್ದಾರೆ. ಈ ನಾಟಕದಲ್ಲಿ ಒಬ್ಬ ಮಹಾನ್ ನಟ ಇದ್ದಾನೆ. ಅವನು ಗಣಪತ್ ರಾವ್ ಬೆಳವಳ್ಕರ್. ಶೇಕ್ಸ್‌ಪಿಯರ್ ನಾಟಕಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿ ಸಾಮ್ರಾಟ್ ಅನ್ನಿಸಿಕೊಂಡವ. ನಾನು ಆ ನಾಟಕ ಮತ್ತು ಸಿನಿಮಾ ನೋಡುತ್ತ ನೋಡುತ್ತ ಅದರಲ್ಲಿ ಗಣಪತ್ ರಾವ್ ನಟರ ಬದುಕಿಗೆ ಸಂಬಂಧಿಸಿದಂತೆ ಹೇಳುವ ಮಾತುಗಳನ್ನು ಕನ್ನಡಕ್ಕೆ ಹಾಗಾಗೇ ತರ್ಜುಮೆ ಮಾಡಿಟ್ಟುಕೊಂಡಿದ್ದೆ. ಸಾಫ್ಟ್‌ವೇರ್ ವೃತ್ತಿಯಲ್ಲಿದ್ದರೂ ನಟನೆಯ ಗೀಳು ಹತ್ತಿಸಿಕೊಂಡ ಸಿದ್ಧಾರ್ಥ ಎನ್ನುವ ಯುವಕ ಗಣಪತ್ ರಾವ್ ಅವರ ಬೆನ್ನು ಹತ್ತಿರುತ್ತಾನೆ. ಅವನಿಗೆ ಗಣಪತ್ ರಾವ್ ಹೇಳುವ ಮಾತು ಹೀಗಿದೆ – “ನಟರುಗಳ ಬದುಕೇ ಶಾಪಗ್ರಸ್ತವಾದದ್ದು. ನಮ್ಮ ಬದುಕು ನಿರಂತರ ಅಭದ್ರ. ಕನ್ನಡಿ ನೋಡುತ್ತ ನಮ್ಮ ಬಗೆಗೆ ನಾವೇ ಒಲವು ಬೆಳೆಸಿಕೊಳ್ಳುವ ಸ್ವಾರ್ಥದ ತಳಿಗಳು ನಾವು. ಮಿನುಗಿ ಮಿಂಚುವ ಜನಪ್ರಿಯತೆ ಕುಂದುವ ಬಗೆಯನ್ನ ನಾವು ಕಂಡು ಸಹಿಸಿಕೊಳ್ಳಲು ಬರುವುದಿಲ್ಲ. ಪ್ರತಿಕ್ಷಣ ನಮ್ಮನ್ನ ನಾವೇ ಪ್ರೀತಿಸಿಕೊಳ್ಳುತ್ತಿರಬೇಕು. ಇದು ನಮ್ಮ ಚರ್ಮಕ್ಕೆ ಕಾಂತಿ ತಂದುಕೊಡುತ್ತದೆ. ಈ ಹೊಳಪು ಪ್ರತಿಯೊಬ್ಬ ನಟನನ್ನ ಕಬಳಿಸುತ್ತಲೇ ಬರುತ್ತಿರುತ್ತದೆ. ಸಿನಿಮಾ ಮತ್ತು ರಂಗಭೂಮಿಯಲ್ಲಿ ಯಾರು ಕೆಲಸ ಮಾಡ್ತಿರತಾರೋ ಅವರೆಲ್ಲ ಒಂದು ಸುಳ್ಳಿನ ಜಗತ್ತಿನಲ್ಲಿ ಬದುಕುತ್ತಿರುತ್ತಾರೆ. ನಮ್ಮತನವನ್ನ ಒರೆಗೆ ಹಚ್ಚಿಕೊಳ್ಳುವುದು ಅಲ್ಲಿ ತುಂಬ ಕಷ್ಟದ ಕೆಲಸ. ಈ ಎಲ್ಲಕ್ಕೆ ನಾವು ಹೆಚ್ಚಿನ ಬೆಲೆಯನ್ನ ತೆರಬೇಕಾಗುತ್ತದೆ..”

ಕ್ಲಬ್ ಹೌಸ್‌ನಲ್ಲಿ ನಟರ ಸಂಕಷ್ಟಗಳ ಬಗ್ಗೆ ಮಾತು ಹರಡುತ್ತಿದ್ದಾಗ ನನಗೆ ಮೇಲಿನ ಮಾತುಗಳು ಚಿತ್ರ ಸಮೇತ ಕಣ್ಮುಂದೆ ಸುಳಿದವು. ಇದರಲ್ಲಿ ವಾಸ್ತವ ಇಲ್ಲವೆ? ಕೊರೋನದ ಸಂದರ್ಭದಲ್ಲಿ ನಟರು ಎದುರಿಸುತ್ತಿರುವ ಕಷ್ಟ ಒಂದು ಬಗೆ; ಆದರೆ ‘ನಟಸಾಮ್ರಾಟ್’ ನಾಟಕದ್ದೂ ಒಂದು ಬಗೆ ಇದೆಯಲ್ಲ? ಇದಕ್ಕೇನೆನ್ನುತ್ತೀರಿ ಎಂದು ಕೈ ಎತ್ತುವ ಬಟನ್ ಒತ್ತಿ ಕೇಳಬೇಕು ಅಂದುಕೊಂಡೆ.

ಅದೇ ಹೊತ್ತು ನನಗೆ ನೆನಪಾದವನು ನಮ್ಮ ತಂಡದ ಲಕ್ಷ್ಮಣ ಪೂಜಾರಿ ಎಂಬ ನಟ. ಹಾಗೆ ನೋಡಿದರೆ ನಮ್ಮ ತಂಡದಲ್ಲಿನ ಬಹುತೇಕರು ತಿಂಗಳಿಗೆ ಇಂತಿಷ್ಟು ರೊಕ್ಕ ಬರುವ ಮಾರ್ಗ ಕಂಡುಕೊಂಡು ಅದು ತಕ್ಕಮಟ್ಟಿಗೆ ತೃಪ್ತಿ ತರುತ್ತಿದೆ ಅನಿಸಿದಾಗ ನಾಟಕದ ಕಡೆ ಮನಸ್ಸು ಹಾಯಿಸಿದವರು. ರೊಕ್ಕದ ಸ್ಥಿರತೆ ಮೂಲಕ ನಾವು ನಟನೆ ಮತ್ತು ನಾಟಕದ ಜಗತ್ತನ್ನು ನೋಡಿದರೆ ಲಕ್ಷ್ಮಣ ಬೇರೆ ಬಗೆಯವನು. ಅವನು ನಟನೆಯ ಮೂಲಕವೇ ರೊಕ್ಕ ಸಂಪಾದನೆಯ ಮಾರ್ಗ ಕಂಡುಕೊಳ್ಳುತ್ತೇನೆ ಎಂದು ಹಟತೊಟ್ಟಿರುವ ಯೋಗಿ. ಹೆಚ್ಚು ಓದಿಲ್ಲವಾದ ಕಾರಣ ತಾನು ಭೌತಿಕವಾಗಿ ಎತ್ತರಕ್ಕೆ ಯಾಕೆ ಬೆಳೆಯಬೇಕು ಅಂದುಕೊಂಡು ಗಿಡ್ಡವಾಗಿಯೇ ಉಳಿದುಬಿಟ್ಟವನಂತೆ ಕಾಣುವವ. ಆತ್ಮ ಮತ್ತು ಮಾತು ಕುಂದಾಪುರದ್ದು. ಉದ್ಯೋಗ ಬೆಂಗಳೂರಿನಲ್ಲಿ. ‘ರಂಗಭೂಮಿಯೇ ನನ್ನ ಉಸಿರು’ ಎಂಬುದು ಈತನ ವಾಟ್ಸಾಪ್ ಸ್ಟೇಟಸ್. ಇದು ಕೇವಲ ಬಾಯಿಮಾತು ಅಲ್ಲ. ನಾಟಕದಲ್ಲಿ ನುರಿತವನಾಗಬೇಕು ಎಂಬುದು ಈತನ ಇಚ್ಛೆ. ಹೋಟಲ್ ನಲ್ಲಿ ಕೆಲಸ ಮಾಡಿರುವ ಅನುಭವ ಇದೆ. ಹಾಗಾಗಿ ಅದೇ ವೃತ್ತಿಗೆ ಆದ್ಯತೆ.

ಸಾಮಾನ್ಯವಾಗಿ ಕೆಲಸ ಕೊಡುವವರು ಷರತ್ತುಗಳನ್ನು ನೌಕರರಿಗೆ ವಿಧಿಸುತ್ತಾರೆ. ಲಕ್ಷ್ಮಣನ ವಿಚಾರ ಬೇರೆ. ಈತ ಹೋಟಲ್ ಮ್ಯಾನೇಜರ್ ಅಥವಾ ಮಾಲೀಕರ ಬಳಿ ಮೊದಲಿಗೇ ತನ್ನ ಷರತ್ತುಗಳನ್ನ ಮುಲಾಜಿಲ್ಲದೆ ಹೇಳಿಬಿಡುತ್ತಾನೆ. ‘ಸಂಜೆ ನಾಟಕದ ರಿಹರ್ಸಲ್‌ಗಳಿರುತ್ತವೆ. ಹಾಗಾಗಿ ಸಂಜೆ ಹೋಗಬೇಕು. ಇದಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಮತ್ತು ನಾಟಕ ಪ್ರದರ್ಶನ ಇದ್ದ ದಿನ ಅಗತ್ಯ ಅನಿಸಿದರೆ ರಜೆ ಕೊಡಬೇಕು. ಇದು ನಿಮಗೆ ಒಪ್ಪಿಗೆ ಅನಿಸಿದರೆ ಕೆಲಸ ಕೊಡಿ..ಇಲ್ಲದಿದ್ದರೆ…’ ಅನ್ನುತ್ತಾನೆ.

ಇವನ ಮಾತು ಮತ್ತು ಷರತ್ತುಗಳನ್ನು ಕೇಳಿಸಿಕೊಂಡೂ ಕೂಡ ಕೆಲವರು ಇವನಿಗೆ ಕೆಲಸ ಕೊಟ್ಟವರಿದ್ದಾರೆ. ಲಕ್ಷ್ಮಣ ಹೀಗೆ ದುಡಿಯುತ್ತ ಸಂಜೆ ತಾಲೀಮಿಗೆ ತಪ್ಪಿಸದೆ ಬರುತ್ತಿದ್ದವನು. ಆಯಾ ದಿನ ಕೆಲವು ನಟರು ಗೈರು ಹಾಜರಾದಾಗ ಅವರೆಲ್ಲರ ಸಂಭಾಷಣೆಯನ್ನ ತಾನೇ ಹೇಳಿ ತಾಲೀಮಿಗೆ ಒಂದು ಸರಾಗ ದಕ್ಕಿಸಿಕೊಡುವಷ್ಟು ಶ್ರದ್ಧೆ ಇರುವವನು. ಇವನನ್ನು ನೋವು ಮತ್ತು ಹತಾಶೆ ಬಾಧಿಸಿಲ್ಲ ಎನ್ನಲು ಸಾಧ್ಯವೆ? ಆದರೆ ಅದನ್ನು ಎಂದೂ ತೋರಗೊಡದಂತೆ ತಾಲೀಮುಗಳಲ್ಲಿ ನಮ್ಮೊಂದಿಗೆ ಚಾಕಚಕ್ಯತೆಯಿಂದ ಇರುವ ಲಕ್ಷ್ಮಣನ ಬದುಕು ನನ್ನ ಮಟ್ಟಿಗೆ ಒಂದು ಬೆರಗು. ಎಲ್ಲರೂ ಬೈಕ್ ಹತ್ತಿ ಬರುವಾಗ ಇವನು ಸೈಕಲ್ ಹತ್ತಿ ಬರುತ್ತ ನಮ್ಮ ಪರಿಸರ ಮತ್ತು ಹವಾಮಾನಕ್ಕೆ ತನ್ನ ಕಿಂಚಿತ್ ಕೊಡುಗೆ ಸಮರ್ಪಿಸುತ್ತಿದ್ದವನು. ರಂಗದ ಮೇಲೆ ಅತ್ಯಂತ ಕರಾರುವಕ್ಕು. ಆದರೆ ಸೈಡ್ ವಿಂಗ್ಸ್ ನಲ್ಲಿದ್ದರೆ ಮಹಾ ಗಾಬರಿಯ ಮನುಷ್ಯ.

ಇವನ ಮುಂದಿನ ಕಥೆ ಏನು ಎಂದು ನಾನು ಯೋಚಿಸುತ್ತಿದ್ದ ಹೊತ್ತಿನಲ್ಲೇ ಕೊರೋನ ಬಂದು ಅಪ್ಪಳಿಸಿತು. ಹೋಟಲ್ ಗಳು ಬಂದ್ ಆದವು. ಲಕ್ಷ್ಮಣ ಕುಂದಾಪುರಕ್ಕೆ ಹೊರಟ. ಅಲ್ಲಿ ಮನೆಯಲ್ಲಿ ಅವರ ಮನೆಯ ಹಸುವಿಗೆ ಯಾರೋ ವಿಷ ಉಣಿಸಿ ಸಾಯಿಸಿದರು. ಅದರ ಎಲ್ಲ ವರ್ತಮಾನ ನನ್ನ ಕಿವಿ ಮುಟ್ಟುತ್ತಲೇ ಇತ್ತು. ನಂತರ ಲಾಕ್ ಡೌನ್ ಕೊಂಚ ಸಡಿಲಿಕೆ ಆದ ಸಂದರ್ಭ. ಮತ್ತೆ ಹೋಟಲುಗಳು ತೆರೆದಾಗ ಲಕ್ಷ್ಮಣ ತನ್ನ ವೃತ್ತಿಯನ್ನ ಕೊಂಚ ಗಂಭೀರವಾಗಿ ಪರಿಗಣಿಸಿದವನಂತೆ ಕಂಡ. ಸಂಜೆ ತಾಲೀಮುಗಳಿಗೆ ಬರಲಿಕ್ಕೆ ಕಷ್ಟವಾಗುತ್ತದೆ ಅಂತ ಹೋಟಲ್ ಕೆಲಸಕ್ಕೆ ನಡೆದುಬಿಡುತ್ತಿದ್ದ. ಸದ್ಯ ಈಗಲಾದರೂ ಒಂದಿಷ್ಟು ಅರಿವು ಮತ್ತು ಸೀರಿಯಸ್ ನೆಸ್ ಬಂತಲ್ಲ ಅಂತ ನಾನು ಸಂತೋಷಪಟ್ಟಿದ್ದೆ. ಆದರೆ ನಟನೆಯ ಗೀಳಿನಲ್ಲಿ ಏನೋ ಮೋಡಿ ಇದ್ದಂತಿದೆ. ಅಥವಾ ಬಣ್ಣದ ಕರಾಮತ್ತೋ ಏನೋ ನನಗೆ ಗೊತ್ತಿಲ್ಲ. ಎರಡನೆ ಅಲೆ ಆರಂಭವಾದಾಗ ಮತ್ತೆ ಅಸ್ಥಿರತೆ. ಲಕ್ಷ್ಮಣ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಆ ಹೊತ್ತು ಅವನು ನೀರಿನಿಂದ ಹೊರಬಿದ್ದ ಮೀನಿನಂತೆ ಆಗಿದ್ದ. ರಂಗದಿಂದ ಹೊರಗೆ ಇರುವುದು ತನ್ನಿಂದ ಸಾಧ್ಯವಿಲ್ಲ ಎನ್ನುವಂತೆ ಮಿಡುಕುತ್ತಿದ್ದ.

ನಡುವೆ ಅದೇನೇನು ಯೋಚಿಸಿ ನಿರ್ಧಾರಕ್ಕೆ ಬಂದಿದ್ದನೋ ಗೊತ್ತಿಲ್ಲ. ಕೆಲಸವೇನಿದ್ದರೂ ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ಎನ್ನುವ ತನ್ನ ಪೂರ್ವ ಕರಾರಿನ ಅನ್ವಯದ ರೀತಿಯಲ್ಲೇ ಒಂದು ಕೆಲಸ ಹುಡುಕಿಕೊಳ್ಳಲು ಆರಂಭಿಸಿದ. ಅದು ಹೇಗೊ ಒಂದು ಸ್ಕೂಟಿ ಹೊಂದಿಸಿಕೊಂಡ. ಈಗ ಸ್ವಿಗ್ಗಿಯಲ್ಲಿ ಕೆಲಸ. ಕೈಯಲ್ಲಿ ಒಂದಿಷ್ಟು ರೊಕ್ಕ. ‘ಹೇಗಿದ್ಯಾ ಲಕ್ಷ್ಮಣ ಈಗ..?’ ಎಂದು ಈಚೆಗೆ ಕೇಳಿದ್ದಕ್ಕೆ ‘ಜೀವನಕ್ಕೆ ಓಕೆ… ಸರ್… ಆದಷ್ಟೂ ಬೇಗ ಸೇರೋಣ.. ಹೊಸ ನಾಟಕ ಮಾಡೋಣ..’ ಅಂದ.

ಇವನಲ್ಲಿ ನೋವಿಲ್ಲ ಅಂದವರಾರು? ಆದರೆ ಅದನ್ನು ಕಾಣಗೊಡದಂತೆ ಬದುಕಿರುವವನು. ಎಲ್ಲೋ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಆಗಾಗ ತನ್ನ ಮನಸ್ಸನ್ನ ಹಿಂಡುವ ಸಂಗತಿಗಳನ್ನ ಬರೆದು ಹಾಕುತ್ತಾನೆ. ಅದರಲ್ಲಿ ಅವನ ಜೀವನದ ದರ್ಶನಗಳಿದ್ದರೂ ಇದ್ದೀತು ಎಂದು ನನಗೆ ಅನೇಕ ಸಲ ಅನಿಸಿದೆ.

ಲಕ್ಷ್ಮಣನ ಈ ಸ್ಪಿರಿಟ್ ನನಗೆ ಯಾವತ್ತೂ ಇಷ್ಟ. ಇವನ ಕಷ್ಟಗಳನ್ನೂ ನಾನು ಪಟ್ಟಿ ಮಾಡಿ ಕ್ಲಬ್ ಹೌಸ್ ನಲ್ಲಿ ಹೇಳಬಹುದಿತ್ತು. ಆದರೆ ಇವನಲ್ಲಿರುವ ಚಿಮ್ಮುವ ಗುಣದ ಬಗ್ಗೆ ಹೇಳಿದರೆ ನೊಂದವರಲ್ಲಿ ಮತ್ತು ನೋಯುತ್ತಿರುವವರಲ್ಲಿ ಒಂದು ಭರವಸೆಯ ಗೆರೆ ಮೂಡುತ್ತದೆ ಅನಿಸಿತು. ಹಾಗಾಗಿ ಈ ಹುಡುಗನ ಬಗೆಗೆ ಮೊದಲಿನಿಂದಲೂ ನನ್ನಲ್ಲಿ ಹೆಚ್ಚಿನ ಪ್ರೀತಿ.

ನಟಸಾಮ್ರಾಟ್ ನಾಟಕ ಪ್ರತಿಪಾದಿಸುವ ನಟರ ಬದುಕು ಮತ್ತು ವ್ಯಸನ ಅದು ನಟರೇ ಸಂಯಮ ಕಳೆದುಕೊಂಡು ತಂದುಕೊಳ್ಳುವ ದುಡುಕು. ಇದನ್ನ ನಿವಾರಿಸಿಕೊಳ್ಳುವುದು ಬಿಡುವುದು ಅವರವರ ಸ್ಥಿರತೆಗೆ ಬಿಟ್ಟದ್ದು. ಒಂದು ಪ್ಯಾಷನ್ ಗೋಸ್ಕರ ತುಡಿಯುವ ಲಕ್ಷ್ಮಣ ಬದುಕೂ ನಟಸಾಮ್ರಾಟ್ ನಾಟಕ ಕಟ್ಟಿಕೊಡುವ ನಟರ ಚಿತ್ರದ ವ್ಯಸನದಂತೆ ಕಂಡರೂ ಒಂದು ಭಿನ್ನತೆ ಇದೆ. ಲಕ್ಷ್ಮಣನನ್ನು ಜನಪ್ರಿಯತೆ, ಪ್ರೇಕ್ಷಕರ ಚಪ್ಪಾಳೆ ಅಷ್ಟಾಗಿ ಕಾಡಿ ಕಂಗೆಡಿಸಿದಂತೆ ನನಗೆ ಅನಿಸಿಲ್ಲ. ಹಾಗಂತ ಅವನು ಜಡ ಅಲ್ಲ. ಪ್ರೇಕ್ಷಕರು ಮೆಚ್ಚಿ ಚಪ್ಪಾಳೆ ತಟ್ಟಿದಾಗ ಅದನ್ನು ಅವನು ಆನಂದಿಸಿದ್ದೂ ಇದೆ. ಆದರೆ ಸದಾ ಅದರ ಧ್ಯಾನಕ್ಕೇ ಮನಸ್ಸು ತೆತ್ತವನು ಎಂದು ನನಗೆ ಅನಿಸಿಲ್ಲ. ದುಡ್ಡಿಲ್ಲದ ಬದುಕು ಎಷ್ಟು ದುಸ್ತರ ಎಂಬುದು ಅವನಿಗೆ ಚೆನ್ನಾಗಿ ಗೊತ್ತು. ಇಷ್ಟಾಗಿಯೂ ಅವನು ಹೆಚ್ಚಿಗೆ ದುಡ್ಡಿನ ಕಡೆಗೇ ವಾಲಿದವನಲ್ಲ. ಇತ್ತ ಚಪ್ಪಾಳೆಗೇ ಕಿವಿ ಅಂಟಿಸಿ ಕೂತವನೂ ಅಲ್ಲ. ದುಡ್ಡು ಮತ್ತು ಚಪ್ಪಾಳೆ ಆಚೆಗೆ ತಾನು ಮಾಡುವ ರಂಗದ ಕೆಲಸವನ್ನು ಪೂರ್ಣಪ್ರಮಾಣದಲ್ಲಿ ಆನಂದಿಸುವ ಘಟ್ಟ ತಲುಪಿರುವುದರಿಂದ ಕೊರೋನ ಪೂರ್ವಕಾಲ ಮತ್ತು ಉತ್ತರದ ಘಟ್ಟ ಅವನನ್ನು ತೀವ್ರವಾಗಿ ಅಲುಗಿಸಿರುವಂತೆ ಮತ್ತು ಮುಂದಕ್ಕೆ ಘಾಸಿ ಮಾಡುವಂತೆ ಕಂಡಿಲ್ಲ.

ಇಂಥವನ ಬದುಕಿನ ಬಗೆ ಹೇಳಬೇಕು ಅನಿಸಿ ಕೈ ಎತ್ತಿ ತನಗೆ ಹೇಳುವ ಇಚ್ಛೆ ಇದೆ ಎಂದು ಸೂಚಿಸಿದೆ. ಅನುಮತಿ ಕೊಟ್ಟರು. ನಟಸಾಮ್ರಾಟ್ ನಾಟಕದ ಮೂಲಕ ನಾನು ಹಾದು, ಲಕ್ಷ್ಮಣನ ಬದುಕನ್ನು ತಲುಪಿ ಚಿಂತಿಸಿದ ಬಗೆಯನ್ನು ಹೇಳಿದೆ. ಮೆಚ್ಚುಗೆ ಮತ್ತು ಒಳ್ಳೆಯ ಅಭಿಪ್ರಾಯ ವ್ಯಕ್ತವಾಯಿತು. ಆದರೆ ಎಲ್ಲ ಮುಗಿದ ಮೇಲೆ ನಾನು ಗ್ರಹಿಸಿದಷ್ಟು ಸರಳವಾಗಿರಲಾರದು ಲಕ್ಷ್ಮಣನ ಬದುಕು ಅಂತಲೂ ಅನಿಸಿತು. ಏನು ಮಾಡುವುದು?


ಹಿಂದೊಮ್ಮೆ ರಂಗಭೂಮಿಯ ಘನ ನಟ ನಾಸಿರುದ್ದೀನ್ ಶಾ ಅವರನ್ನ ‘ಹೊಸದಾಗಿ ರಂಗಭೂಮಿಗೆ ಕಾಲಿಡುವ ಯುವ ಪೀಳಿಗೆಗೆ ಕಿವಿಮಾತು ಹೇಳಿ..’ ಅಂತ ಕೇಳಿದಾಗ ಶಾ ಹೇಳಿದ್ದು ಹೀಗೆ : “ಕತ್ತಲು ತುಂಬಿದ, ಕಪ್ಪು, ದೀರ್ಘ ಹಾಗೂ ಏಕಾಂತದ ಪ್ರಯಾಣ ಹೊರಟಿದ್ದೀರಿ ಅಂತ ಎಚ್ಚರಿಸ್ತೀನಿ…”

ಇದನ್ನು ಅರ್ಥೈಸಿಕೊಳ್ಳುವ ಬಗೆ ಹೇಗೆ ಎಂದು ನಟಸಾಮ್ರಾಟ್ ನಾಟಕ ಹಾಗೂ ಲಕ್ಷ್ಮಣನ ಬದುಕಿನ ಹಿನ್ನೆಲೆಯಲ್ಲಿ ಯೋಚಿಸುತ್ತಲೇ ಇದ್ದೇನೆ…