ಕ್ಷಮಿಸಿ, ನನ್ನದೇನೂ ಇಲ್ಲ

ನಡುರಾತ್ರಿಯಲಿ ಅಮ್ಮ
ಸೆರಗಿನಲಿ ಗಾಳಿ ಹಾಕಿ
ಆರಿಸಿ ಕಳಿಸಿದ ದೀಪಗಳು
ಆಲದ ಮರದಡಿಯಲ್ಲಿ
ಕುಳಿತು ಕಥೆ ಹೇಳುತ್ತಿದ್ದವು
ಹುಣ್ಣಿಮೆಯ ರಾತ್ರಿಯಲಿ
ಅಮ್ಮ ಕಣ್ಮುಚ್ಚಿದಾಗ …….
ಅವಳ ಎದೆಯಲ್ಲಿ ಆರಿದ ದೀಪ
ನನ್ನೊಳಗೆ ಕಥೆಯಾಯಿತು
ಅಮ್ಮ ಆರಿಸಿ ಕಳಿಸಿದ
ಕಥೆ ಹೇಳುವ ದೀಪ ನಾನು!

ಮರ ಹತ್ತುವ ಕಾಯಕದ ಅಪ್ಪ
ಮೇಲೇರಿದಂತೆಲ್ಲ ಬದಲಾಗುವ ಪಾತ್ರಗಳು
ಸೇವಕ, ಮಂತ್ರಿ, ರಾಜ……..
ಮರದ ತುತ್ತತುದಿಯಲ್ಲಿ
ದೇವೇಂದ್ರನ ಒಡ್ಡೋಲಗ!
ಬದುಕಿಗಾಗಿ ಬಯಲಿಗಳಿದ ಅಪ್ಪನ
ದೇವಲೋಕದ ಕನಸು ನಾನು!

ಕೌಶಿಕನಿಗಿಂತ ಶತಪಟ್ಟು ಮೂರ್ಖನ ಕೈ ಹಿಡಿದ ಅಕ್ಕ
ಬಿಟ್ಟು ಬಯಲಾಗು ಬಾರೆ ಎಂದರೆ…
ಕಾಣಲೊಲ್ಲದ ಆ ಶಿವನ ಎಲ್ಲೆಂದು ಹುಡುಕಲೆ?
ಸಿಕ್ಕವನನ್ನೇ ಹಿಡಿದು ಜಂಗಮನನಾಗಿಸುವೆನೆಂಬ
ಹಠದಿಂದ ಹೊರಟವಳು
ಮತ್ತೇನೋ ನೆನಪಾದವಳಂತೆ ಹತ್ತಿರ ಬಂದು
‘ನನ್ನ ಕನಸುಗಳಿವು ಜೋಪಾನ’
ಎಂದು ನನ್ನೆದೆಯೊಳಗೆ ಬಚ್ಚಿಟ್ಟು ಹೋದಳು!

ಹೂವು, ಹಸಿರು, ಚಿಟ್ಟೆ ಚಿತ್ತಾರದ ತಂಗಿ
ಏಳು ಮಲ್ಲಿಗೆ ತೂಕದ ರಾಜಕುಮಾರಿ
ಚಿಪ್ಪಿನಲ್ಲಿ ಬಿಡಿಸಿದ ನವಿಲು ಚೌಕಟ್ಟಿನಲ್ಲಿ ಸ್ಥಬ್ದ!
ನನ್ನೆದೆಯಲ್ಲಿ ಗರಿಬಿಚ್ಚಿ ನರ್ತಿಸುತ್ತಿದೆ
ನಾ ಬಿಡಿಸುವ ಚಿತ್ರ ಚಿತ್ತಾರವವಳು

ಕಂಚು, ಕನ್ನಡಿ, ಕಾಂಚಾಣಗಳನ್ನು
ಕನಸ್ಸಲ್ಲಷ್ಟೇ ಕಾಣುವ ನನ್ನೂರ ಹೆಣ್ಣುಗಳು
ತಮ್ಮ ಕನಸ ಹಾಡುಗಳನ್ನು
ನನ್ನ ಕಂಠದಲ್ಲಿ ಠೇವಣಿಯಿಟ್ಟಿದ್ದಾರೆ
ಬಲು ಆಸೆಯಿಂದ………
ಗಂಡಸರ ಹೆಗಲೇರಿ ಸವಾರಿ ನಡೆಸುವ
ನನ್ನೂರ ಮಾರಿಯ ಹಠವು
ಅಡ್ಡಾಡಿಗಳ ಬಾಯಲ್ಲಿ ರಕ್ತ ಕಾರಿಸಿ
ನಿಜವ ಕಕ್ಕಿಸುವ ನನ್ನೂರ ದೇವಿಯ ಕಸುವು
ನನ್ನೊಂದಿಗೆ ಪಲ್ಲಕ್ಕಿಯಲ್ಲಿ
ಸವಾರಿ ಹೊರಟಿವೆ ಊರಗಲ ತುಂಬ
ಶ್ರಮದ ಕೈಗಳು ಸೇರಿ ಕಟ್ಟಿದ
ನನ್ನೂರ ಪುಟ್ಟ ತೇರು ನಾನು!

ಕ್ಷಮಿಸಿ, ಇಲ್ಲಿ ನನ್ನದೇನೂ ಇಲ್ಲ…