ಧಾರವಾಡ ಘರಾನಾ ಶೈಲಿಯ ಸಂಗೀತ ಗಾರುಡಿಗ ಪ್ರಸಿದ್ಧ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್. ಅವರ ಅಜ್ಜ ರಹಿಮತ್ ಖಾನ್ ಅವರು ಸಿತಾರ್ ಗೆ ಏಳು ತಂತಿಗಳನ್ನು ಅಳವಡಿಸಿ, ಸಂಗೀತ ಕ್ಷೇತ್ರದಲ್ಲೊಂದು ಮೈಲಿಗಲ್ಲು ಸ್ಥಾಪಿಸಿದವರು. ತಂದೆ ಅಬ್ದುಲ್ ಕರೀಮ್ ಖಾನ್ ಅವರೇ ಮೊದಲ ಗುರುಗಳು. ಈ ಖಾನ್ ಕುಟುಂಬದಲ್ಲಿ ಸಿತಾರ್ ವಾದಕರ ತಂಡವೇ ಇದೆ.  ಸಿತಾರ್ ಮತ್ತು ಸಂಗೀತವನ್ನು ನಂಬಿದ ಈ ಕುಟುಂಬ ಸಾಗಿದ ದಾರಿಗಳ ಬಗ್ಗೆ ರಫೀಖ್ ಖಾನ್ ತಮ್ಮ ವಿಚಾರಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ. ಅವುಗಳನ್ನು ಅಕ್ಷರ ರೂಪಕ್ಕಿಳಿಸಿದವರು ಲೇಖಕ ಶೇಣಿ ಮುರಳಿ. “ಖಾನ್ ಕಾಂಪೌಂಡ್’’ ಎಂಬ ಶೀರ್ಷಿಕೆಯಡಿ ಪ್ರಕಟವಾದ ಈ ಪುಸ್ತಕದ ಕೆಲವು ಅಧ್ಯಾಯಗಳು 15 ದಿನಗಳ ಅಂತರದಲ್ಲಿ ಶುಕ್ರವಾರದಂದು ಓದುಗರಿಗೆ ಇಲ್ಲಿ ಲಭ್ಯವಾಗಲಿದೆ. ಪುಸ್ತಕಕ್ಕೆ ರಫೀಕ್ ಖಾನ್ ಅವರೇ ಬರೆದ ಪ್ರಸ್ತಾವನೆ, ಮುಂದಿನ ಅಧ್ಯಾಯಗಳ ಓದಿಗೆ ಕೈದೀವಿಗೆಯಂತಿದೆ.

 

ಆ ದಿನ ಸಿತಾರ್ ಕಛೇರಿ ಸಲುವಾಗಿ ಕೋಲ್ಕತಾದಲ್ಲಿದ್ದೆ. ‘ಸರ್, ಐ ವಾಂಟ್ ಟು ಮೀಟ್ ಯು. ವೆನ್ ಈಸ್ ಇಟ್ ಪಾಸಿಬಲ್?’ ಅಂತ ಫೇಸ್‌ಬುಕ್ ಇನ್‌ಬಾಕ್ಸ್‌ಗೆ ಮೆಸೇಜ್ ಬಂತು. ಅದು ಶೇಣಿ ಮುರಳಿ (ಬಾಲಮುರಳಿಕೃಷ್ಣ) ಅವರ ಸಂದೇಶವಾಗಿತ್ತು. ‘ಐ ಆಮ್ ಇನ್ ಕೋಲ್ಕತಾ, ವಿಲ್ ಲೆಟ್ ಯು ನೋ ಒನ್ಸ್ ಐ ರೀಚ್ ಮಂಗಳೂರು’ ಅಂತ ರಿಪ್ಲೈ ಮಾಡಿದೆ. ಮುಂದಿನ ವಾರ ಮಂಗಳೂರಿಗೆ ಬಂದೆ. ಮುರಳಿ ದೂರವಾಣಿ ಕರೆ ಮಾಡಿ ನೆನಪಿಸಿದರು. ‘ನಾಳೆ ಬನ್ನಿ ಆಕಾಶವಾಣಿ ಕಚೇರಿಯಲ್ಲಿರುತ್ತೇನೆ’ ಎಂದೆ.

ಮುರಳಿ ನನ್ನ ಭೇಟಿ ಬಯಸಿದ್ದು ಯಾಕಿರಬಹುದು ಎಂದು ಯೋಚಿಸತೊಡಗಿದೆ. ಪತ್ರಕರ್ತರಾದ ಕಾರಣ, ಅವರು ನನ್ನ ಸಂದರ್ಶನ ಬಯಸಿರಬಹುದೇ? ಅವರೊಬ್ಬ ಹವ್ಯಾಸಿ ಕಪ್ಪು ಬಿಳುಪು ಕಲಾತ್ಮಕ ಛಾಯಾಗ್ರಾಹಕ. ಕಲಾವಿದ ವಿಶ್ವಾಸ್ ಕೃಷ್ಣ ನನಗೆ ಅವರನ್ನು ಪರಿಚಯಿಸಿದ್ದರು. ಮುರಳಿ ನನ್ನ ಕೆಲವು ಫೋಟೋಗಳನ್ನೂ ಸೆರೆಹಿಡಿದಿದ್ದರು. ನಾನವರ ಛಾಯಾಗ್ರಹಣ ಶೈಲಿಯನ್ನು ಇಷ್ಟಪಟ್ಟಿದ್ದೆ. ಹಾಗಾಗಿ ಫೋಟೋ ತೆಗೆಯುವ ಇರಾದೆಯೂ ಇರಬಹುದು ಎಂದೆಲ್ಲ ಭಾವಿಸಿದೆ.

ನಿಗದಿತ ಸಮಯಕ್ಕೆ ಮುರಳಿ ಆಕಾಶವಾಣಿ ಕಚೇರಿಗೆ ಬಂದರು. ಕೈಯಲ್ಲಿ ಕ್ಯಾಮರಾ ಇರಲಿಲ್ಲ. ಹಾಗಾಗಿ ಅವರು ಫೋಟೋ ಸೆಷನ್ ಸಲುವಾಗಿ ಬಂದಿಲ್ಲ ಎಂಬುದನ್ನು ಮನಗಂಡೆ. ಅವರಲ್ಲಿ ಏನನ್ನೋ ಹೇಳುವ ತವಕವಿತ್ತು. ನಮ್ಮ ಮಾತುಕತೆಗೆ ಅವರು ಕಚೇರಿಗೆ ಹೊರತಾದ ವಾತಾವರಣ ಹುಡುಕುತ್ತಿದ್ದಂತೆ ಅನಿಸಿತ್ತು. ‘ಬನ್ನಿ ಚಹಾ ಕುಡಿದು ಬರೋಣ’ ಎಂದೆ. ಹಾಗೆ ಕದ್ರಿ ಪೊಲೀಸ್ ಸ್ಟೇಶನ್ ಪಕ್ಕದ ಹೋಟೆಲ್‌ಗೆ ಹೋದೆವು. ವಿಶಾಲವಾಗಿ ಬಾಹುಗಳನ್ನು ಹರಡಿದ್ದ ಆಲದ ಮರದಡಿ, ನಮ್ಮ ಮಾತುಕತೆ. ಚಹಾವೂ ಬಂತು.

ಮುರಳಿ ತಮ್ಮ ಬ್ಯಾಗ್‌ನಲ್ಲಿದ್ದ ಮೂವರು ಮಹಾನ್ ಕಲಾವಿದರ ಜೀವನಚರಿತ್ರೆಗಳನ್ನು ಹೊರತೆಗೆದು ನನ್ನ ಕೈಗಿತ್ತರು. ಅವು ಎಂ.ಎಸ್.ಸುಬ್ಬುಲಕ್ಷ್ಮಿ (ಲೇಖಕರು: ಟಿ.ಜೆ.ಎಸ್.ಜಾರ್ಜ್), ಪಂಡಿತ್ ರಾಜೀವ ತಾರಾನಾಥ್ (ಲೇಖಕರು: ಸುಮಂಗಲಾ) ಮತ್ತು ಮಹಮ್ಮದ್ ರಫಿ (ಲೇಖಕರು: ಸುಜಾತಾ ದೇವ್) ಕುರಿತ ಪುಸ್ತಕಗಳಾಗಿದ್ದವು. ನೇರ ನನ್ನ ಮುಖ ನೋಡಿ, “ಸರ್ ನಿಮ್ಮ ಜೀವನಚರಿತ್ರೆ ಬರೆಯಬೇಕು ಎಂದೆನಿಸುತ್ತದೆ ನನಗೆ” ಎಂದರು. ಒಂದು ಕ್ಷಣ ಯಾವ ರೀತಿ ಪ್ರತಿಕ್ರಿಯಿಸಲಿ ಎಂದು ಗೊತ್ತಾಗದೆ ಸುಮ್ಮನಿದ್ದೆ. ಮುರಳಿ, ಯಕ್ಷಗಾನ ಕಲಾವಿದರಾಗಿದ್ದ ಡಾ.ಶೇಣಿಗೋಪಾಲಕೃಷ್ಣ ಭಟ್ ಅವರ ಮೊಮ್ಮಗ. ಮುರಳಿಯವರನ್ನು ನಿರಾಸೆಗೊಳಿಸಲು ನಾನು ಸಿದ್ಧನಿಲ್ಲ. ಓರ್ವ ಕಲಾವಿದ ತನ್ನ ಕ್ಷೇತ್ರದಲ್ಲಿ ಪಕ್ವಗೊಳ್ಳುವುದು ಆತನ ವಯಸ್ಸು ೫೦ನೇ ವರ್ಷ ದಾಟಿದ ಮೇಲೆ. ಅಲ್ಲಿಯವರೆಗೂ ಆತ ವಿದ್ಯಾರ್ಥಿ. ಸಂಗೀತ ಸಾಗರವನ್ನು ಈಜಿ ದಡ ಸೇರಿದವರು ಯಾರಾದರೂ ಇದ್ದಾರೆಯೇ? ನನ್ನ ಜೀವನಚರಿತ್ರೆ ಬರೆಯಲು ನಾನಿನ್ನೂ ಆ ಹಂತವನ್ನು ತಲುಪಿಲ್ಲ ಎಂಬ ಪ್ರಾಮಾಣಿಕ ಅಭಿಪ್ರಾಯವನ್ನು ಮುಂದಿಟ್ಟೆ.

ನಿಮ್ಮ ವಯಸ್ಸು ಎಷ್ಟು ಎಂದು ಮುರಳಿ ಕೇಳಿದರು.
೪೯ ಎಂದೆ.

ಥಟ್ಟನೆ, ಈ ಜೀವನಚರಿತ್ರೆ ಮುದ್ರಣವಾಗುವ ಹೊತ್ತಿಗೆ ನೀವು ಪಕ್ವ ಕಲಾವಿದರಾಗುತ್ತೀರಿ, ಯೋಚಿಸಬೇಡಿ ಎಂದರು. ನಗಾಡಿದೆವು.

ನನ್ನ ಬದುಕಿನಲ್ಲಿ ಬಯೋಗ್ರಫಿಗೆ ಬೇಕಾದಷ್ಟು ‘ಸ್ಟಫ್ ಸಿಗಬಹುದೇ? ಎಂಬ ಪ್ರಶ್ನೆಯನ್ನೂ ಎಸೆದೆ. ಗೊತ್ತಿಲ್ಲ ಎಂದರು. ಅವರಿಗೆ ರಫೀಕ್ ಎಂಬ ಕಲಾವಿದನ ಬಗ್ಗೆ ಎಳ್ಳಷ್ಟೂ ಮಾಹಿತಿ ಇರಲಿಲ್ಲ. ಆದರೆ, ಅವರ ಒಂದು ಮಾತು ನನಗೆ ಬಹಳ ಇಷ್ಟವಾಯಿತು. ‘ನಿಮ್ಮ ಘರಾನಾವೇ’ ಈ ಪುಸ್ತಕಕ್ಕೆ ವಸ್ತು. ನಿಮ್ಮನ್ನು ಆಧಾರವಾಗಿಟ್ಟುಕೊಂಡು ಮನೆತನದ ಕೊಡುಗೆ ಮೇಲೆ ಬೆಳಕು ಚೆಲ್ಲುವ ಪುಸ್ತಕ ಮೌಲ್ಯಯುತವಾಗಲಾರದೇ? ನಿಮ್ಮ ಜೀವನಕ್ಕೆ ಚರಿತ್ರೆಯನ್ನು ಪೋಣಿಸಿದರೆ? ಮುರಳಿಯ ಈ ಪ್ರಶ್ನೆಗಳಿಗೆ ಒಪ್ಪಿದೆ.

ನನ್ನ ಸಂಪರ್ಕದಲ್ಲಿ ಇರುವ ಹಲವು ಸಂಗೀತ ಪ್ರೇಮಿಗಳು ಕನ್ನಡವನ್ನು ಓದಲು ಸಮರ್ಥರಲ್ಲ. ನನಗೆ ಈ ಪುಸ್ತಕ ಇಂಗ್ಲಿಷ್‌ನಲ್ಲಿಯೂ ಇದ್ದರೆ ಒಳ್ಳೆಯದೆನಿಸಿತು. ಅದನ್ನು ಪ್ರಸ್ತಾಪಿಸಿದಾಗ, ಮುರಳಿ ತಮ್ಮ ಗೆಳೆಯ, ಮಂಗೂರಿನಲ್ಲಿ ಐಟಿ ಉದ್ಯೋಗಿ ಹರೀಶ್ ಶೆಟ್ಟಿಯವರ ಹೆಸರು ಸೂಚಿಸಿದರು. ಹರೀಶ್ ಕೆಲ ವರ್ಷ ನೌಕರಿಗಾಗಿ ಅಮೆರಿಕದಲ್ಲಿದ್ದವರು, ಇಂಗ್ಲಿಷ್‌ನಲ್ಲಿ ಬ್ಲಾಗ್ ಲೇಖನ ಬರೆಯುವುದು ಅವರ ಹವ್ಯಾಸ. ಪತ್ನಿ ರಾಧಿಕಾ ಭರತನಾಟ್ಯ ಕಲಾವಿದೆ. ಸಾಧನೆಯ ತುಡಿತವಿದ್ದ ಹರೀಶ್ ಕೃತಿಯನ್ನು ಅನುವಾದ ಮಾಡಿದರೆ ಸಾಲದು, ಸ್ವತಂತ್ರವಾಗಿ ಬರೆಯಬೇಕು. ಎರಡು ಕೃತಿಗಳು ಭಿನ್ನವಾಗಿಯೇ ಇರಬೇಕು ಎಂಬ ನಿರ್ಧಾರಕ್ಕೆ ಬಂದೆವು.

ಓರ್ವ ಕಲಾವಿದ ತನ್ನ ಕ್ಷೇತ್ರದಲ್ಲಿ ಪಕ್ವಗೊಳ್ಳುವುದು ಆತನ ವಯಸ್ಸು ೫೦ನೇ ವರ್ಷ ದಾಟಿದ ಮೇಲೆ. ಅಲ್ಲಿಯವರೆಗೂ ಆತ ವಿದ್ಯಾರ್ಥಿ. ಸಂಗೀತ ಸಾಗರವನ್ನು ಈಜಿ ದಡ ಸೇರಿದವರು ಯಾರಾದರೂ ಇದ್ದಾರೆಯೇ? 

ಮುಂದಿನ ವಾರ ಹರೀಶ್, ರಾಧಿಕಾ, ಮುರಳಿ ನನಗಾಗಿ ಹೋಟೆಲ್‌ನಲ್ಲಿ ಕಾಯುತ್ತಿದ್ದರು. ಜೀವನಚರಿತ್ರೆ ಕುರಿತ ಮೊದಲ ಮಾತುಕತೆಗೆ ಹಾಜರಾದೆ. ಹರೀಶ್ ಮುಖದಲ್ಲಿ ಬರೆಯುವ ಆಸಕ್ತಿ ಗಮನಿಸಿದೆ. ಕಂಟೆಂಟ್‌ಗಳ ಬಗ್ಗೆ ಗಂಟೆಗಟ್ಟಲೆ ಹರಟಿದೆವು. ಪ್ರತೀ ಗುರುವಾರ ಸಂಜೆ ೬ ಗಂಟೆಗೆ ಭೇಟಿಯಾಗಿ ಮಾಹಿತಿ ಕಲೆಹಾಕುವುದೆಂಬ ನಿರ್ಧಾರದೊಂದಿಗೆ ಅಂದಿನ ಸಭೆ ಮುಕ್ತಾಯ.

ನನ್ನ ಅಕಾಡೆಮಿಯ ಕಚೇರಿಯೇ ಪ್ರತೀ ಗುರುವಾರದ ಮಾತುಕತೆಗೆ ತಾಣವಾಯಿತು. ನಾನು ಮಾಹಿತಿ ನೀಡುತ್ತಿದ್ದಾಗ ಹರೀಶ್ ರೆಕಾರ್ಡ್ ಮಾಡುತ್ತಿದ್ದರು. ಮುಂದಿನ ಸೆಷನ್‌ನಲ್ಲಿ ಯಾವ ಟಾಪಿಕ್ ಎಂಬುದು ಅಲ್ಲಿಯೇ ನಿರ್ಧಾರವಾಗಿ, ನಾನು ಸಿದ್ಧನಿರಬೇಕಿತ್ತು. ನಮ್ಮ ಭೇಟಿ ಯಾವ ಅಡ್ಡಿಯೂ ಇಲ್ಲದೆ ಸಾಗಿತು.

ಶನಿವಾರ ಮತ್ತು ಭಾನುವಾರ ಬೆಳಗ್ಗಿನ ಹೊತ್ತಲ್ಲೂ ನಾವು ಮಾತನಾಡಿದೆವು. ಮುರಳಿ ಮತ್ತು ಹರೀಶ್ ಉದ್ಯೋಗಸ್ಥರಾದ್ದರಿಂದ ಅವರ ಬಿಡುವಿನ ಸಮಯಕ್ಕೆ ನನ್ನ ಕೆಲಸದ ಸಮಯ ಮತ್ತು ಕ್ಲಾಸ್‌ಗಳನ್ನು ಹೊಂದಿಸಿಕೊಳ್ಳಬೇಕಾಯಿತು. ಕಛೇರಿ ಇದ್ದಾಗ ಮಾತುಕತೆಯನ್ನು ಮುಂದೂಡುತ್ತಿದ್ದೆವು. ಮಂಗಳೂರಿನ ಆಸುಪಾಸು ನನ್ನ ಕಛೇರಿ ಇದ್ದಾಗ ಇವರಿಬ್ಬರೂ ಬಂದು ಆಸ್ವಾದಿಸುತ್ತಿದ್ದರು. ಲೇಖಕರು ಧಾರವಾಡ ಮತ್ತು ಗೋವಾಕ್ಕೆ ಹೋಗದೆ ಜೀವನಚರಿತ್ರೆ ಪೂರ್ಣವಾಗಲಾರದು. ಹಾಗಾಗಿ ಅಲ್ಲಿಗೂ ಹೋದೆವು. ನನ್ನ ಮನೆಮಂದಿ, ಬಾಲ್ಯ ಸ್ನೇಹಿತರು, ಕಲಿತ ಶಾಲೆ, ನಮ್ಮೂರಿನವರೇ ಆದ ಸಂಗೀತ ದಿಗ್ಗಜ ಪಂಡಿತ ಬಸವರಾಜ ರಾಜಗುರು ಅವರ ಮನೆಮಂದಿಯನ್ನೆಲ್ಲ ಭೇಟಿ ಮಾಡಿ, ಮಾಹಿತಿ ಪಡೆದುಕೊಂಡರು. ಸಹೋದರ ಶಫೀಕ್ ಖಾನ್ ಮನೆಯಲ್ಲಿ ಆತಿಥ್ಯ. ಹೋದಲ್ಲೆಲ್ಲ ಹೊಂದಿಕೊಳ್ಳುವ ಈ ಯುವಕರ ಗುಣವನ್ನು ಮೆಚ್ಚಿದ್ದೇನೆ. ಎಲ್ಲಿಯೂ ತಂಟೆ-ತಕರಾರಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ, ಗೌರವಯುತವಾಗಿ ವರ್ತಿಸಿದರು.

(ಶೇಣಿ ಮುರಳಿ)

ಮುರಳಿ ಬರೆದ ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ವೈದೇಹಿ ಅವರಿಗೆ ಕಳುಹಿಸಿ, ಅವರಿಂದ ಉಪಯುಕ್ತ ಸಲಹೆಗಳನ್ನು ಪಡೆದುಕೊಂಡೆವು. ಅವರ ಮಾರ್ಗದರ್ಶನದಂತೆ ಮಹತ್ವದ ಬದಲಾವಣೆಗಳನ್ನು ಮಾಡಲಾಯಿತು. ಬರವಣಿಗೆಯಲ್ಲಿ ಮುರಳಿ ಅವರಿಗೆ ಯಕ್ಷಗಾನ ಅರ್ಥದಾರಿ ರಾಧಾಕೃಷ್ಣ ಕಲ್ಚಾರರು ಕಾಲಕಾಲಕ್ಕೆ ಸಲಹೆಗಳನ್ನು ನೀಡುತ್ತಿದ್ದರು. ಬೆಂಗಳೂರಿನಲ್ಲಿರುವ ಹಿರಿಯ ಸಂಗೀತಗಾರ ನಾಗರಾಜ ಹವಾಲ್ದಾರ್ ಅವರು ಕೂಡ ನಮ್ಮ ಕೋರಿಕೆಯ ಮೇರೆಗೆ ಈ ಕೃತಿಯನ್ನು ಓದಿ ವಿಮರ್ಶಿಸಿದ್ದಾರೆ. ಇವರೆಲ್ಲರಿಗೂ ನಾನು ಆಭಾರಿ.

ನನ್ನ ತಾಯಿ ಮೆಹಬೂಬಿ ಖಾನ್ ಪ್ರಪಂಚದಲ್ಲೇ ಅತ್ಯಂತ ಮುಗ್ಧೆ ಎಂಬುದು ನನಗೆ ಅತಿಶಯವಲ್ಲ. ನಮ್ಮ ಮನೆಗೆ ಬರುತ್ತಿದ್ದ ಕಲಾವಿದರು, ನೆಂಟರನ್ನು ಸತ್ಕರಿಸಿ, ನನ್ನ ತಂದೆಯವರಿಗೆ ಯಾವ ರೀತಿಯಲ್ಲಿಯೂ ಸಮಸ್ಯೆಗಳಾಗದಂತೆ ನೋಡಿಕೊಂಡವರು ತಾಯಿ. ಆಕೆಯ ಜತೆ ಕಳೆದ ೨೭ ವರ್ಷಗಳನ್ನು ಮರೆಯಲು ಸಾಧ್ಯವಿಲ್ಲ. ಅನಾರೋಗ್ಯವು ಆಕೆಯನ್ನು ಕಸಿದುಕೊಂಡಿರಬಹುದು. ಆದರೆ ನನ್ನ ಬಳಿ ನೆನಪುಗಳ ನಿಧಿಯೇ ಇದೆ. ಅದು ಶಾಶ್ವತ.

ಖಾನ್ ಕಾಂಪೌಂಡ್ ಮತ್ತು ರೊಮ್ಯಾನ್ಸಿಂಗ್ ದ ಸಿತಾರ್ ಕೃತಿಗಳು ನನ್ನ ಜೀವನಕ್ಕಷ್ಟೇ ಅಲ್ಲ, ಮನೆತನದ ಸಾಧನೆಗೂ ಕನ್ನಡಿ ಹಿಡಿದಿವೆ. ನನ್ನ ಸಹೋದರರು, ಸಹೋದರಿಯರು ಮತ್ತು ಮುಂದಿನ ತಲೆಮಾರಿನ ಕುರಿತ ಮಾಹಿತಿಗಳೂ ಇದರಲ್ಲಿವೆ. ಪುಸ್ತಕದ ಉದ್ದೇಶ ಈಡೇರಿದೆ. ಸಂತೋಷ.