ರುದ್ರವೀಣೆ, ಸಿತಾರ್ ವಾದನ ಮತ್ತು ಗಾಯನದಲ್ಲಿ ಹಿಡಿತ ಸಾಧಿಸಿದ್ದ ರಹಿಮತ್ ಖಾನ್ ಅವರು 1912ರಲ್ಲಿ ಮೈಸೂರು ಅರಮನೆಯಲ್ಲಿ ಒಂದು ಸಂಗೀತ ಕಚೇರಿ ನೀಡಿದರು. ಅವರ ಸಂಗೀತ ಪ್ರಸ್ತುತಿ ಕೇಳಿ ಸಂತೋಷಪಟ್ಟ ಮಹಾರಾಜರು ‘ಸಿತಾರ್ ರತ್ನ’ ಬಿರುದು ನೀಡಿ ಸನ್ಮಾನಿಸಿದರು. ಕಛೇರಿ ಮುಗಿಸಿ ರಹಿಮತ್ ಖಾನ್ ತಮ್ಮೂರಿಗೆ ಹೋಗುತ್ತಿದ್ದಾಗ, ಧಾರವಾಡದ ಪ್ರಶಾಂತತೆಯನ್ನು ನೋಡಿ ಅಲ್ಲಿಯೇ ನೆಲೆಸಲು ನಿರ್ಧರಿಸಿದರು. ಹಾಗೆ ಅವರು ನೆಲೆಸಿದ ಮನೆಯ ಹೆಸರೇ ಖಾನ್ ಕಾಂಪೌಂಡ್. ರಹಿಮತ್ ಖಾನ್ ಅವರ ಮೊಮ್ಮಗ ಉಸ್ತಾದ್ ರಫೀಕ್ ಖಾನ್ ಅವರ ಜೀವನಚರಿತ್ರೆಗೆ ಲೇಖಕ ಶೇಣಿ ಮುರಳಿ ಇದೇ ಶೀರ್ಷಿಕೆ ನೀಡಿದ್ದಾರೆ. ಈ ಪುಸ್ತಕದ ಒಂದು ಅಧ್ಯಾಯ ದಿಲ್ಲಿಯ ರಾಜ ದರ್ಬಾರ್ ತೊರೆದು ಗುಜರಾತ್ ನತ್ತ ಪಯಣ ಬೆಳೆಸಿದ ಗುಲಾಂ ಹುಸೇನ್ ಖಾನ್ ಅವರ ಬದುಕಿನ ಪಯಣವನ್ನು ವಿವರಿಸುತ್ತದೆ. ಆ ಅಧ್ಯಾಯ ಇಲ್ಲಿದೆ.

ಬದುಕಿನ ಪಲ್ಲಟ ಗುಲಾಮ್ ಹುಸೇನರನ್ನು ದಡ ಸೇರಿಸಿದ ಊರಿಗೆ ಒಂದೊಳ್ಳೆಯ ಹೆಸರಿತ್ತು. ಅದು ಗುಜರಾತಿನ ಭಾವನಗರ, ಭಾವನೆಗಳ ನಗರವೂ ಹೌದು!

ತಂಬೂರಿಯನ್ನು ಇರಿಸಿ, ಪಕ್ಕದಲ್ಲೇ ಕುಳಿತಾದ ಟಾಂಗಾ ಹೊರಟಿತು.

ಅರಮನೆಯ ಕೋಟೆಬಾಗಿಲನ್ನು ದಾಟಿದಾಗ ಗುಲಾಮ್ ಹುಸೇನ್ ಖಾನರ ಮನಸ್ಸಿನ ಉದ್ವೇಗಕ್ಕೆ, ಕುದುರೆಯನ್ನು ಹಿಂದಿಕ್ಕುವ ವೇಗವಿತ್ತು.

ಅನಪೇಕ್ಷಿತ ವಿಚಾರಗಳಿಗೆ ಮನಸ್ಸು ಕದ ಮುಚ್ಚಿತ್ತಾದರೂ, ಅವು ಪದೇಪದೆ ನುಸುಳಿಬಿಡುತ್ತಿದ್ದವು.

ಮನಸ್ಸನ್ನು ಕದಡಿದ ಕಲಾವಿದನ ಬಗೆಗೆ ಅಸಮಾಧಾನ ತಾಂಡವವಾಡುತ್ತಿತ್ತು. “ಅವರೆಲ್ಲ ಯಾಕೆ ಹೀಗೆ? ಎಲ್ಲರೂ ಕಲಾವಿದರೇ ಆದರೂ, ಅಲ್ಲಿ ಆ ಥರದ ವಾತಾವರಣ ಏಕಿದೆ? ಪರಸ್ಪರ ಕತ್ತಿ ಮಸೆಯುವ ಸದ್ದು, ಹಲ್ಲುಗಳನ್ನು ಕಡಿದುಕೊಳ್ಳುವಷ್ಟು ಜಿದ್ದು-ಅಲ್ಲಿ ಕೆಲವರಿಗೆ. ರಾಜನಿಗೆ ತಾನೇ ಹೆಚ್ಚು ಆಪ್ತ, ತಾನೊಬ್ಬನೇ ಮಹಾವಿದ್ವಾಂಸ ಎಂದು ಪ್ರದರ್ಶಿಸಿಕೊಳ್ಳುವ ತವಕವೇ ಅವರಿಗೆ? ಅವರಿವರ ಬಗೆಗೆ ಲಘುಮಾತುಗಳನ್ನು ಆಡುತ್ತ ಸಂಗೀತದ ಹೊರತಾಗಿಯೂ ಅವರೆಲ್ಲ ತಮ್ಮ ಬದುಕನ್ನು ಕಟ್ಟಿಕೊಂಡರು. ಆದರೆ, ನನಗ್ಯಾಕೆ ಈ ವಿರಕ್ತಿ? ನಾನೇಕೆ ಹೀಗೆ? ಎಂದೆಲ್ಲ ಯೋಚಿಸುತ್ತ ಗುಲಾಮ್ ಹುಸೇನ್ ಖಾನರು ತಂಬೂರಿಯನ್ನು ಬಹಳ ಎಚ್ಚರದಿಂದ ಮಡಿಲಿಗೇರಿಸಿಕೊಂಡರು. ಮಡಿಲ ಸುಖದಲ್ಲಿ ಅದು ಮಗುವಿನಂತೆ ಮಲಗಿತು. ಟಾಂಗಾದಲ್ಲಿದ್ದ ಚಿಕ್ಕದೊಂದು ಗೊಂಬೆ, ಓಡಿಸುವವನ ತಲೆ ಮೇಲೆ ನೇತಾಡುತ್ತ, ಕುಣಿಯುತ್ತಿತ್ತು. ತಾಳ, ಅದರ ಹಿಡಿತದಲ್ಲಿರಲಿಲ್ಲ.ಖಾನರ ಮನದಲ್ಲಿ ರಾಜನ ಚಿತ್ರ ಮಿಂಚಿ ಮರೆಯಾಯಿತು.

ಗಾಡಿಯನ್ನು ಎಳೆಯುತ್ತ ಕುದುರೆ ಮುಂದೆ ಸಾಗುತ್ತಿತ್ತು. ಸ್ವಲ್ಪ ಕಿವಿಗಳನ್ನು ನಿಮಿಸಿರಿಕೊಂಡಿದ್ದರೂ, ಆ ಟಾಂಗಾವಾಲ ಖಾನರ ಪಿಸುಮಾತನ್ನು ಕೇಳಿಸಿಕೊಳ್ಳುತ್ತಿದ್ದನೇನೋ. ಉಹುಂ…. ಕುದುರೆ ಜತೆ ಮಾತನಾಡುತ್ತಿದ್ದ ಅವನಿಗೆಲ್ಲಿಯ ಆಸಕ್ತಿ ಇಂಥದ್ದರಲ್ಲಿ?. ಆತ ತನಗೇನು ಬೇಕೋ, ಅದನ್ನೇ ಗುನುಗಿಕೊಳ್ಳಲಿ ಎಂದೆನಿಸಿದಾಗ, ತಾನು ಈಗ ಮಾಡುತ್ತಿರುವುದೂ ಅದನ್ನೇ ಅಲ್ಲವೇ ಎನಿಸಿತು ಖಾನರಿಗೆ.
ಗಾಡಿ ಮುಂದಕ್ಕೆ ಚಲಿಸುತ್ತಿದ್ದಂತೆ ದೃಶ್ಯಗಳು ಒಂದೊಂದಾಗಿ ಹಿಂದಕ್ಕೆ ಸರಿಯುತ್ತಿದ್ದವು.

ರಾಜನೂ ಸೂತ್ರದ ಗೊಂಬೆಯಾದನೇ? ಬದುಕಿನ ಶ್ರುತಿಗೂ, ರಾಗಕ್ಕೂ, ತಾಳಕ್ಕೂ ತಾಳೆ ಬೇಡವೇ? ಮನದ ಮಾತುಗಳಿಂದ ಹೊರಬರಲಾರದೆ ಗುಲಾಮ್ ಹುಸೇನ್ ಖಾನ್ ಪಿಸುಗುಡುತ್ತಲೇ ಇದ್ದರು.

ಇವನೆಂಥ ರಾಜ? ಇವನಿಗೆ ಬೇಕಿರುವುದು ಸಂಗೀತವೋ, ಸಂಗೀತಗಾರರೋ; ಆಲಾಪವೋ, ವ್ಯರ್ಥ ಪ್ರಲಾಪವೋ? ರಾಜನ ಮುಂದೆ ಕಡ್ಡಿಮುರಿದಂತೆ ಹೇಳಿದ ಮಾತು ನನೆಪಾದವು.

(ಉಸ್ತಾದ್ ರಹಿಮತ್ ಖಾನ್)

‘ಹುಜೂರ್, ಗಂಟಲು ಗಂಟಿಕ್ಕಿ ಕುಳಿತಿದೆ. ಹಾಡಲಾಗುತ್ತಿಲ್ಲ. ಈ ಪರಿಸರ ಈಗ ಆಪ್ಯಾಯಮಾನವಾಗಿಲ್ಲ. ನಾನು ಪಥ ಬದಲಿಸುತ್ತಿರುವೆ, ಅಪ್ಪಣೆ ಕೊಡಬೇಕು ನಿರ್ಗಮನಕ್ಕೆ’.

ಮಹಾರಾಜ ಮೌನವಾಗಿಯೇ ಇದ್ದ. ಯಾಕೋ ಆ ದಿನ ಆ ಮುಖದಲ್ಲಿ ರಾಜಕಳೆ ಕಾಣಲಿಲ್ಲ, ಬಹುಶಃ ನಾನೇ ನೋಡಲಿಲ್ಲ. ದರ್ಬಾರಿನ ಗವಯಿ (ಆಸ್ಥಾನ ಗಾಯಕ/ಗವಾಯಿ ಎಂಬ ಪದ ಪ್ರಯೋಗವೂ ರೂಢಿಯಲ್ಲಿದೆ) ಆಗಿದ್ದ ನನ್ನನ್ನು ಆತ ತಡೆಯಲಿಲ್ಲ. ತಡೆದರೆ ವಿಫಲನಾಗುತ್ತಿದ್ದ. ಯಾವ ರಾಜನಿಗೂ ಸೋಲು ಬೇಕಿಲ್ಲವಲ್ಲ!. ನನ್ನ ತಂದೆ ದೌಲತ್ ಖಾನ್. ಅಜ್ಜ ಮದಾರ ಬಕ್ಷ್ ಇದೇ ದರ್ಬಾರ್‌ನ ಗವಾಯಿಗಳಾಗಿದ್ದವರು. ಅವರೆಲ್ಲ ಆಸ್ಥಾನದಲ್ಲಿ ಹೊಂದಿಕೊಂಡಿದ್ದರೂ, ನನಗೆ ಮಾತ್ರ ಇಲ್ಲಿನ ರಾಜಕೀಯ ಸಹ್ಯವಾಗಲಿಲ್ಲ. ಅಂಬೆಗಾಲಿಕ್ಕಲು ಕಲಿತಿದ್ದ ಇದೇ ಅರಮನೆಯಲ್ಲಿ, ಬೆಳೆದಂತೆಲ್ಲ ಪ್ರತಿ ಹೆಜ್ಜೆಯೂ ಭಾರವಾಗುತ್ತಿತ್ತು. ರಾಜ ಕಾರಣ ಕೇಳಲಿಲ್ಲ, ಹಾಗಾಗಿ ಇನ್ಯಾರನ್ನೋ ದೂರುವ ಪ್ರಸಂಗವೂ ಬರಲಿಲ್ಲ. ಅವರೇಕೆ ಹಾಗೆ? ಇವರೇಕೆ ಹೀಗೆ? ಎನ್ನುತ್ತ ಮನದಲ್ಲೇ ಹಲುಬುವುದಕ್ಕಿಂತ ‘ಮುಂದೆ ಬದುಕು ಹೇಗೆ’ ಎಂಬ ಪ್ರಶ್ನೆಯೇ ಕಾಲೋಚಿತ ಎನಿಸಿತು. ಅಷ್ಟರಲ್ಲೇ ಟಾಂಗಾ ನಿಧಾನವಾಗುತ್ತ ನಿಂತಿತು, ಗೊಂಬೆ ಕುಣಿಯುತ್ತಿರಲಿಲ್ಲ. ಗಾಡಿ ಓಡಿಸುತ್ತಿದ್ದವನು ಪೆಟ್ಟಿಗೆಗೆಳನ್ನು ರೈಲು ನಿಲ್ದಾಣದ ಬೆಂಚಿನ ಮೇಲಿಟ್ಟ. ಕೈಗೆ ಕಾಸು ಬಂದಾಗ ಬಾಗಿ ನಮಸ್ಕರಿಸಿದ.

ನಿನ್ನೆಯವರೆಗೆ ರಾಜ ದರ್ಬಾರಿನ ಆಸ್ಥಾನ ಗಾಯಕರಾಗಿ ಗುರುತಿಸಿಕೊಂಡಿದ್ದ ಗುಲಾಮ್ ಹುಸೇನ್ ಖಾನ್, ಮಡಿಲಲ್ಲಿ ತಂಬೂರಿ ಇರಿಸಿಕೊಂಡು ರೈಲು ನಿಲ್ದಾಣದ ಬೆಂಚಿನಲ್ಲಿ ಈಗ ಒಬ್ಬಂಟಿ. ಮಾತಿಲ್ಲ, ಕತೆಯಿಲ್ಲ.

ಮನಸ್ಸು ಮತ್ತೆ ಹಲುಬಿತು.

ದರ್ಬಾರಿನ ಗವಾಯಿ, ಆಹಾ ಕೇಳಲೆಷ್ಟು ಚೆಂದ! ಅದು ಚಿನ್ನದ ಪಂಜರ, ನೋಡಲೂ ಚೆಂದ! ಆದರೆ, ಅಸಲಿ ಕಲಾವಿದರಿಗೆ ಅದು ಶಿಕ್ಷೆಯಲ್ಲದೆ ಮತ್ತಿನ್ನೇನು? ರಾಜನ ಆಸ್ಥಾನದಲ್ಲಿ ಮನರಂಜನೆಗಾಗಿ ಹಾಡಬೇಕು. ಪರವೂರ ಅತಿಥಿಗಳ ಮುಂದೆ ಹಾಡಿ ಅವರ ಮನ ತಣಿಸಬೇಕು. ಗವಯಿಗಳು ಬೇರೆಲ್ಲಾದರೂ ಹಾಡಬೇಕಿದ್ದರೆ ರಾಜನ ಆಸ್ಥಾನದ ಅನುಮತಿ ಬೇಡಬೇಕು. ಹಾಡುಹಕ್ಕಿಗೆ ಅನುಮತಿಯ ಹಂಗುಂಟೇ? ಬೇಕೆ ರಾಜಾಶ್ರಯ? ಕಲಾವಿದನೊಬ್ಬ ನನ್ನ ಮನಃಶಾಂತಿ ಕದಡಿದನೇ ಅಥವಾ ಗವಾಯಿ ಪಟ್ಟ ನನಗೇ ಬೇಡವಾಯಿತೇ? ತುಸು ಹೆಚ್ಚೇ ಅಲ್ಲೋಲಕಲ್ಲೋಲಗೊಂಡಿತ್ತು ಮನಸ್ಸು.

ರೈಲಿನ ಸೀಟಿ ಕೇಳಿಸಿತು. ದಿಲ್ಲಿ ದೂರವಾಯಿತು.

ಗುಲಾಮ್ ಹುಸೇನ್ ಖಾನರು ತಂಬೂರಿಯನ್ನು ಬಹಳ ಎಚ್ಚರದಿಂದ ಮಡಿಲಿಗೇರಿಸಿಕೊಂಡರು. ಮಡಿಲ ಸುಖದಲ್ಲಿ ಅದು ಮಗುವಿನಂತೆ ಮಲಗಿತು. ಟಾಂಗಾದಲ್ಲಿದ್ದ ಚಿಕ್ಕದೊಂದು ಗೊಂಬೆ, ಓಡಿಸುವವನ ತಲೆ ಮೇಲೆ ನೇತಾಡುತ್ತ, ಕುಣಿಯುತ್ತಿತ್ತು.

ಬದುಕಿನ ಪಲ್ಲಟ ಗುಲಾಮ್ ಹುಸೇನರನ್ನು ದಡ ಸೇರಿಸಿದ ಊರಿಗೆ ಒಂದೊಳ್ಳೆಯ ಹೆಸರಿತ್ತು.

ಅದು ಗುಜರಾತಿನ ಭಾವನಗರ, ಭಾವನೆಗಳ ನಗರವೂ ಹೌದು!

ರಾಜ ಜಸವಂತ್ ಸಿಂಹನಿಗೆ ಸಂಗೀತದ ಖಯಾಲಿ. ಗುಲಾಮ್ ಹುಸೇನ್ ಖಾನರ ಪ್ರತಿಭೆಯ ಮುಸುಕಿನಲ್ಲಿ ಬಂಧಿಯಾದ ಆ ರಾಜ, ದರ್ಬಾರ್ ಗವಯಿ ಪಟ್ಟ ಕೊಟ್ಟ. ಮುಂದಿನ ಮಹಾರಾಜ ತಖತ್ ಸಿಂಹನೂ ಗುಲಾಮ್ ಖಾನರನ್ನೇ ಅಪ್ಪಿಕೊಂಡ. ಎರಡು ಅವಧಿಗೂ ಆಸ್ಥಾನದಲ್ಲಿ ಗವಾಯಿಯಾಗಿದ್ದ ಗುಲಾಮ್ ಖಾನ್ ಸಂಗೀತದಲ್ಲಿ ಮುಳುಗಿಹೋದರು. ಗ್ವಾಲಿಯರ್ ಘರಾನಾ ಪ್ರತಿನಿಧಿಯಾಗಿದ್ದ ಗುಲಾಮ್ ಖಾನರ ಗಾಯನಕ್ಕೆ ಭಾವನಗರದ ಸಂಗೀತಾಸಕ್ತರು ಭಾವಪರವಶರಾಗುತ್ತಿದ್ದರು. ದಿಲ್ಲಿ ರಾಜನ ಆಸ್ಥಾನದಲ್ಲಿ ಸಿಗದ ನೆಮ್ಮದಿ ಇಲ್ಲಿ ಯಥೇಚ್ಛವಿತ್ತು.

ದೂರದಿಂದ ನೋಡಿದರೆ ಗುಲಾಮ್ ಖಾನರ ಮನೆ ಋಷಿಯ ಆಶ್ರಮದಂತಿತ್ತು. ಪ್ರಾಯಶಃ ಗವಾಯಿಗದು ಮಹಾರಾಜರ ಉಡುಗೊರೆ. ಮನೆಯಲ್ಲಿ ಶಿಷ್ಯಂದಿರಿಗೆ ಗುರುಕುಲ ಪದ್ಧತಿಯಂತೆ ಪಾಠವಿದ್ದ ಕಾರಣ, ಅದು ಆಶ್ರಮವೇ ಆಗಿತ್ತು. ಸಂಗೀತ ಅಭಿರುಚಿ ಇಲ್ಲದವರು ಅತ್ತ ಸುಳಿಯುತ್ತಲೂ ಇರಲಿಲ್ಲ. ಯಾಕೆಂದರೆ ಅಲ್ಲಿದ್ದದ್ದು ಸಂಗೀತ, ಸಂಗೀತ, ಮತ್ತು ಸಂಗೀತ ಮಾತ್ರ!

ಅದೊಂದು ಯುಗಾದಿಯ ದಿನ. ಗುಲಾಮ್ ಖಾನರ ಮಡದಿ ತಮ್ಮ ಎರಡನೇ ಮಗನಿಗೆ ಜನ್ಮ ನೀಡಿದರು. ರಟ್ಟೆ ಹಿಡಿದು ಅಳುತ್ತಿದ್ದ ಆ ಮಗನನ್ನು ತಂದೆ, ತಾಯಿ ಪ್ರೀತಿಯಿಂದ ರಹಿಮತ್ ಎಂದು ಕರೆದರು. ಮುಂದೊಂದು ದಿನ ಆತ ‘ಸಿತಾರ್ ರತ್ನ’ನಾದ.

ರಹಿಮತ್‌ಗೆ ಬಾಲ್ಯದಲ್ಲಿ ಸಂಗೀತದ ಗಂಧ-ಗಾಳಿಯೇ ಒಡನಾಡಿ. ಆಲಾಪನೆಯೇ ಜೋಕಾಲಿ. ನಾಲ್ಕನೇ ವಯಸ್ಸಿನಲ್ಲಿಯೇ ತಂದೆಯಿಂದ ಸಂಗೀತ ಅಭ್ಯಾಸ ಶುರು. ಅಣ್ಣ ಉಸ್ಮಾನ್ ಜತೆಗೆ ರಹಿಮತ್ ದಿನಕ್ಕೆ ಐದರಿಂದ ಹತ್ತುಗಂಟೆ ರಿಯಾಜ್ (ಸ್ವರ ಸಾಧನೆ/ಸಂಗೀತ ಅಭ್ಯಾಸ) ಮಾಡಲೇಬೇಕಿತ್ತು. ಮನೆಯಲ್ಲಿ ನಾಗರಬೆತ್ತವಿತ್ತು. ಕಲಿಸಿದ್ದನ್ನು ಮರುದಿನಕ್ಕೆ ಹಾಡಿ ಒಪ್ಪಿಸದಿದ್ದರೆ ಅಪ್ಪನ ಬೆತ್ತ ಭುಸುಗುಡುತ್ತಿತ್ತು! ಅದರ ರುಚಿ ತಿಂದವರಿಗೇ ಗೊತ್ತು. ಬೆತ್ತದ ನಾಗನಿಗೆ ಹೆದರಿ ಉಸ್ಮಾನ್ ಮತ್ತು ರಹಿಮತ್ ಬೇಗನೆ ಸಂಗೀತ ಕಲಿತುಕೊಳ್ಳುತ್ತಿದ್ದರು. ಅವರಿಗೆ ಸಂಗೀತಕ್ಕೆ ಹೊರತಾಗಿ ಬೇರೇನೂ ಗೊತ್ತಿರಲಿಲ್ಲ, ಆಶ್ರಮದ ಅಂಗಳಕ್ಕೂ ಆಟೋಟಗಳು ಅಪರಿಚಿತವಾಗಿದ್ದವು.

ರಹಿಮತ್ ಖಾನರ ಮಾವ ನಬೀಬ್ ಖಾನ್ ಅದೇ ಆಸ್ಥಾನದಲ್ಲಿ ವೈದ್ಯರಾಗಿದ್ದರು. ಹಕೀಂ ಮಾಮ ಎನ್ನುತ್ತಿದ್ದರು ಎಲ್ಲರೂ ಅವರನ್ನು. ಅವರು ಸಿತಾರ್ ನುಡಿಸುತ್ತಿದ್ದರು. ಬಾಲಕ ರಹಿಮತ್‌ಗೆ ಒಂದಾಸೆ, ಮಾವನ ಸಿತಾರ್ ತಂತಿಗಳ ಮೇಲೆ ಬೆರಳಾಡಿಸಬೇಕು! ಸೂಕ್ಷ್ಮಸ್ವಭಾವದ, ಸಾಧುವೂ ಆಗಿದ್ದ ಮಾವ, ಅನುಕೂಲ ಮಾಡಿಕೊಟ್ಟರು. ಸೂರ್ಯೋದಯಕ್ಕೆ ತಂದೆಯ ಜತೆ ಆಲಾಪ, ಅಸ್ತಮಾನಕ್ಕೆ ಸಿತಾರ್ ಸಲ್ಲಾಪ. ಅಂತೂ, ಏಳು ವಸಂತಗಳ ಸ್ವರ ಸಾಧನೆಯ ಹೊತ್ತಿಗೆ, ರಹಿಮತ್ ಖಾನ್ ಮುಖದಲ್ಲಿ ಭರವಸೆಯ ಗಾಯಕನಾಗುವ ಲಕ್ಷಣವಿತ್ತು. ಮಗನ ಮನದಿಂಗಿತ ಅರ್ಥಮಾಡಿಕೊಂಡ ತಂದೆ ಗುಲಾಮ್ ಹುಸೇನ್ ಖಾನ್, ರಹಿಮತ್‌ನನ್ನು ಆತನ ಮಾವನ ಸುಪರ್ದಿಗೇ ಬಿಟ್ಟುಕೊಟ್ಟರು. ರೊಟ್ಟಿಯೇ ತುಪ್ಪದ ಪಾತ್ರೆಗೆ ಬಿದ್ದದ್ದು ಹಾಗೆ. ಭಾವನಗರದ ಸೂರ್ಯ ಸಿತಾರ್ ಧ್ವನಿ ಕೇಳುತ್ತಲೇ ಉದಯಿಸಲಾರಂಭಿಸಿದ.

ಆರೋಹ-ಅವರೋಹ. ಮತ್ತದೇ ಆವರ್ತನೆ. ರಹಿಮತ್ ಖಾನ್ ರಾತ್ರಿ ನಿದ್ದೆಯಲ್ಲೂ ಸಂಗೀತವನ್ನೇ ಕನವರಿಸುತ್ತಿದ್ದ ದಿನಗಳವು. ವಯಸ್ಸು ಆಯುಷ್ಯದ ಹನ್ನೆರಡೆನೇ ಮೆಟ್ಟಿಲೇರಿತ್ತು. ರಹಿಮತ್ ಯೋಚಿಸತೊಡಗಿದರು, ‘ಹಾಡಲೇ, ತಂತಿ ಮೀಟಲೇ?’ ಅಂತರಂಗವು ತಂತಿಯ ಮೇಲೆ ನಡೆಯಿತು. ರಹಿಮತ್ ಬೆಳೆದಂತೆಲ್ಲ ಸಿತಾರ್ ನುಡಿಸುವಿಕೆಯ ಚಮತ್ಕಾರಗಳನ್ನು ಕರಗತ ಮಾಡಿಕೊಂಡರು. ಗ್ವಾಲಿಯರ್ ಘರಾನಾದ ಗಾಯನ ಚಾತುರ್ಯವನ್ನು ಪ್ರದರ್ಶಿಸಲು ಅವರ ಕೈಬೆರಳುಗಳೇ ಸಮರ್ಥವಿದ್ದವು. ಹಾಡಬೇಕಿರಲಿಲ್ಲ. ಮಗನ ಮೇಲಿನ ನಿರೀಕ್ಷೆ ಒಂದಿನಿತೂ ಹುಸಿಯಾಗಲಿಲ್ಲವೆಂಬ ಕಾರಣಕ್ಕೆ ಗುಲಾಮ್ ಹುಸೇನ್ ಖಾನರ ಮನ ಬೀಗಿತು. ಮಗನ ಏಳ್ಗೆಗೆ ಹೊಸ ದಾರಿ ಸೃಷ್ಟಿಸಬೇಕು. ಆತನ ಸಂಗೀತಯಾತ್ರೆಗೆ ಸಮರ್ಥ ಪಥದರ್ಶಕನ ಅಗತ್ಯವಿದೆ ಎಂಬುದು ಕಲಾವಿದರೇ ಆಗಿದ್ದ ಗುಲಾಮ್ ಹುಸೇನರಿಗೆ ಗೊತ್ತಿತ್ತು.

ಭಾವನಗರದಲ್ಲಿ ಸಂಗೀತಜ್ಞರ ಬಿಡಾರಗಳಿದ್ದವು. ಹಬೀಬ್ ಖಾನ್ ಎಂಬ ಪ್ರಸಿದ್ಧ ಬೀನ್‌ಕಾರರ ಮನೆಯೂ ಅಲ್ಲಿಯೇ ಇತ್ತು. ಗುರುವಿನ ತೆಕ್ಕೆಗೆ ಮಗನನ್ನು ಒಪ್ಪಿಸಿ ಹಿಂದಿರುಗುವಾಗ ಒದ್ದೆಯಾದ ಗುಲಾಮ್ ಹುಸೇನ್ ಖಾನರ ಕಂಗಳು ಮನೆ ಸೇರುವ ಹೊತ್ತಿಗೆ ಹೊಳೆಯಲಾರಂಭಿಸಿದವು, ಅವುಗಳಲ್ಲಿ ಹೊಸ ಕನಸುಗಳಿದ್ದವು.
ಆದರೆ, ಹಬೀಬ್ ಖಾನ್ ಎಂಬ ಆ ಗುರು ಎಲ್ಲರಂತಿರಲಿಲ್ಲ.