ದೃಶ್ಯ ನನ್ನನ್ನು ವಿಚಲಿತಗೊಳಿಸಿತು. ಅವನು ಜೋರಾಗಿ ಬಡಬಡಿಸುವುದು ಕೇಳುತ್ತಿದ್ದರೂ, ಬೆಂಗಾಲಿ ಭಾಷೆ ನನಗೆ ಅಷ್ಟಾಗಿ ಬರದಿದ್ದ ಕಾರಣ, ಅವನೇನೆನ್ನುತ್ತಿದ್ದ ಎಂದು ನನಗೆ ತಿಳಿಯುತ್ತಿರಲಿಲ್ಲ. ಇದರ ಹಿನ್ನೆಲೆಯ ಕುರಿತು ನಮ್ಮ ತಂಡದವರೊಡನೆ ವಿಚಾರಿಸಿದೆ. ಅವರು ತಿಳಿಸಿದ ಮಾಹಿತಿಯ ಪ್ರಕಾರ, ಅವನು ಯಾರಿಂದಲೋ ಸಾಲ ಮಾಡಿದ್ದನಂತೆ, ಹಬ್ಬದ ಬೋನಸ್ ಪಡೆಯುತ್ತಿದ್ದಂತೆಯೇ, ಸಾಲಗಾರನು ಬಂದು ಅವನಿಂದ ಹಣವನ್ನು ಕಸಿದುಕೊಂಡನಂತೆ. ಹೆಂಡತಿಮಕ್ಕಳನ್ನು ಹೊಂದಿದ್ದ ಅವನು, ಹಬ್ಬಕ್ಕೆ ಹಣ ಇಲ್ಲದ್ದರಿಂದ ಬೇಸತ್ತು, ಇದ್ದ ಕೊಂಚ ಹಣದಲ್ಲಿ ಕುಡಿದು ಬಂದಿದ್ದ. ಗಣಿಯ ಆಳದೊಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಡಬಡಾಯಿಸುತ್ತಿದ್ದ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ನಾನು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಮೇಲೆ ಸೇರಿದ ಗಣಿಗಾರಿಕೆಗೆ ಸಂಬಂಧಿತ ಸಂಸ್ಥೆಯ ಮುಖ್ಯ ಕಛೇರಿ ರಾಂಚಿ ನಗರದಲ್ಲಿತ್ತು. ಆದರೆ ಕೆಲಸ ಮಾತ್ರ ಇರುತ್ತಿದ್ದುದು ಉತ್ತರ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ. ಹೀಗಾಗಿ, ನಾನು ಭಾರತದ ಹಲವಾರು ರಾಜ್ಯಗಳಲ್ಲಿ ಸುತ್ತಾಡುತ್ತಿದ್ದೆ. ಭಾರತದ ಕಲ್ಲಿದ್ದಲು ಗಣಿಗಳಲ್ಲಿ, ಎಲೆಕ್ಟ್ರಾನಿಕ್ಸ್ ಸೇಫ್ಟಿ ಉಪಕರಣಗಳನ್ನು ಅಳವಡಿಸುವ ಕಾರ್ಯದ ಮೇಲುಸ್ತುವಾರಿ ನನ್ನ ಕೆಲಸವಾಗಿತ್ತು. ಬಿಹಾರ (ಇಂದಿನ ಜಾರ್ಖಂಡ್ ಸೇರಿ), ಪಶ್ಚಿಮ ಬಂಗಾಲ, ಅಸ್ಸಾಂ, ಒರಿಸ್ಸಾ ರಾಜ್ಯಗಳಲ್ಲಿ ಇಂತಹ ಗಣಿಗಳಿದ್ದುದ್ದರಿಂದ ಅವುಗಳಲ್ಲಿ ಸುತ್ತಾಡುವುದು ನನಗೆ ಸಾಮಾನ್ಯವಾಗಿತ್ತು. (ಆಗೊಮ್ಮೆ-ಈಗೊಮ್ಮೆ ಮಹಾರಾಷ್ಟ್ರ ಮತ್ತು ಅಂದಿನ ಆಂಧ್ರಪ್ರದೇಶಗಳಿಗೂ ಭೇಟಿ ನೀಡಿದ್ದು ಇದೆ)

ಇಂತಹ ಗಣಿಗಳು ಇದ್ದದ್ದು ಯಾವುದೇ ದೊಡ್ಡ ನಗರದ ಹತ್ತಿರದಲ್ಲಲ್ಲ. ಕೆಲವೊಂದು ಗಣಿಗಳು ಹತ್ತಿರದ ಸಣ್ಣ ಪಟ್ಟಣವೊಂದರಿಂದ ಹತ್ತೋ-ಇಪ್ಪತ್ತೋ ಮೈಲು ದೂರವಿದ್ದರೆ, ಇನ್ನೂ ಹಲವು ಗಣಿಗಳು, ದೂರದ ಕಾಡು ಪ್ರದೇಶವೊಂದರ ನಡುವೆ ಇದೆ ಎನ್ನುವಂತಹ ಭಾವನೆ ಬರುತ್ತಿತ್ತು. ಈ ಗಣಿಗಳು ಎಲ್ಲೇ ಇದ್ದರೂ, ಹೊರಗಿನ ಜಗತ್ತಿಗೆ ಸೇರದ ಬೇರೆಯೇ ಪ್ರಪಂಚವೆನ್ನಿಸುತ್ತಿತ್ತು. ಈ ಗಣಿಗಳಲ್ಲಿ ನೂರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಗಣಿಗಳನ್ನು ಬಿಟ್ಟರೆ, ಆ ಪ್ರಪಂಚದಲ್ಲಿ ಇರುತ್ತಿದುದು ಇಷ್ಟೇ: ಕಾರ್ಮಿಕರ ಇರುವಿಕೆಗಾಗಿ ಗಣಿಯ ಪಕ್ಕದಲ್ಲೆಲ್ಲೋ ಗುಡಿಸಲುಗಳು, ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಣ್ಣದೊಂದು ಪ್ರಾಥಮಿಕ ಶಾಲೆ, ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಸಣ್ಣದೊಂದು ಅಂಗಡಿ, ಗಣಿಯ ಹಿರಿಯ ಆಡಳಿತ ವರ್ಗದವರಿಗೆ ಮೀಸಲಾಗಿದ್ದ ಕೆಲವೇ ಕೆಲವು ಬಂಗಲೋಗಳು ಮತ್ತು ಅವರಿಗಾಗಿ ಒಂದು ಕ್ಲಬ್. ಇವಿಷ್ಟರ ಬಣ್ಣವೂ ಒಂದೇ – ಕಪ್ಪು!

ನಾನು ಕೆಲಸಕ್ಕೆ ಸೇರುವ ವೇಳೆಗೆ, ಕಲ್ಲಿದ್ದಲ ರಾಷ್ಟ್ರೀಕರಣವಾಗಿ ಒಂದು ದಶಕಕ್ಕೂ ಹೆಚ್ಚು ಕಾಲವಾಗಿತ್ತು. ಟಾಟಾದವರಿಗೆ ಸೇರಿದ್ದ ಒಂದು ಕಲ್ಲಿದ್ದಲು ಗಣಿ ಬಿಟ್ಟರೆ, ಉಳಿದೆಲ್ಲಾ ಕಲ್ಲಿದ್ದಲು ಗಣಿಗಳೂ ಸರ್ಕಾರದ ಸುಪರ್ದಿನಲ್ಲಿದ್ದವು. ರಾಷ್ಟ್ರೀಕರಣದ ಒಂದು ಗುರಿ ಕಾರ್ಮಿಕರ ಸುರಕ್ಷತೆಯೇ ಆಗಿದ್ದರೂ, ನಾನು ಕಂಡಂತೆ, ಆ ಗಣಿಗಳಲ್ಲಿ ಅದೊಂದು ಮುಖ್ಯ ವಿಚಾರವಾಗಿರಲಿಲ್ಲ. ಪ್ರತಿ ವರ್ಷ ನೂರಾರು ಮಂದಿ ಕಾರ್ಮಿಕರು ಸಾವಿಗೀಡಾಗುತ್ತಿದ್ದರು. ಅದೊಂದು ಅಪಾಯಕಾರಿ ಜಾಗವಾದ್ದರಿಂದ, ಪ್ರತಿ ಬಾರಿ ನನ್ನಂತಹ ಅಧಿಕಾರಿಗಳು ಈ ಗಣಿ ಪ್ರದೇಶಗಳನ್ನು ಭೇಟಿ ಮಾಡಿದಾಗಲೂ, ಪ್ರವಾಸ ಭತ್ಯೆಯ ಜೊತೆಗೆ, Coal Field Allowance, Underground Allowance ಸಹ ಸಿಗುತ್ತಿದ್ದವು.

ಒಬ್ಬೊಬ್ಬರ ಕಾಲಕ್ಕೆ ಒಂದೊಂದು ಬೆಲೆ ಇದೆಯೆಂದೂ ಮತ್ತು ಕಾಲವನ್ನು ಗುರುತ್ವಾಕರ್ಷಣಶಕ್ತಿಯಿಂದ ಬಗ್ಗಿಸಬಹುದೆಂದು ತಿಳಿದದ್ದು ಇಂತಹ ಗಣಿ ಪ್ರದೇಶಗಳಲ್ಲಿ ನಾನು ಕೆಲಸ ಮಾಡುತ್ತಿದ್ದಾಗಲೇ! ಕವಿಗಳು, ವಿಜ್ಞಾನಿಗಳು ಹೇಳಿದ ಮಾತುಗಳನ್ನು ನಾನು ಅಲ್ಲಿ ಅನುಭವಿಸಿ ಕಂಡುಕೊಂಡೆ.

ಈ ಎಲೆಕ್ಟ್ರಾನಿಕ್ಸ್ ಸುರಕ್ಷಾ ಸಾಧನಗಳನ್ನು ಅಳವಡಿಸಲು ಗಣಿಯೊಂದಕ್ಕೆ ಹೋದಾಗ, ನಾನು ಆ ಗಣಿಯ ಮುಖ್ಯ ಅಧಿಕಾರಿಯ ಅಪ್ಪಣೆ ಪಡೆಯಬೇಕಿತ್ತು. ನಾನು ಗಣಿಗೆ ಭೇಟಿ ಮಾಡುವ ವಾರಗಳ ಮೊದಲೇ, ಪತ್ರಗಳ ಮುಖೇನ ಇವೆಲ್ಲಾ ನಡೆದಿದ್ದರೂ, ಅಲ್ಲಿಗೆ ಹೋದಾಗ ಅವರನ್ನು ಭೇಟಿ ಮಾಡಿ ಅವರಿಂದ ಕೊನೆಯದಾಗಿ ಒಂದು ಅಪ್ಪಣೆ ಪತ್ರ ಪಡೆದುಕೊಳ್ಳಲೇ ಬೇಕಿತ್ತು. ಆ ಪತ್ರವಿಲ್ಲದಿದ್ದರೆ, ಗಣಿಯೊಳಕ್ಕೆ ನಮ್ಮನ್ನು ಬಿಡುತ್ತಿರಲಿಲ್ಲ. ನಮ್ಮ ಸಾಧನಗಳನ್ನು ಅಳವಡಿಸಲು ಕೆಲವೊಮ್ಮೆ ಅರ್ಧ ದಿನ ಗಣಿಯನ್ನು ಮುಚ್ಚಬೇಕಿತ್ತು. ಆದರೆ, ಗಣಿಯ ಮುಖ್ಯಾಧಿಕಾರಿಗಳಿಗೆ “ಪ್ರೊಡಕ್ಟಿವಿಟಿ”ಯೇ ಮುಖ್ಯವಾಗಿದ್ದರಿಂದ ಮತ್ತು ನಮ್ಮ ಉಪಕರಣಗಳ ಬಗ್ಗೆ ಅವರಿಗೆ ನಂಬಿಕೆ ಇರುತ್ತಿರಲಿಲ್ಲವಾದ್ದರಿಂದ ಗಣಿಯನ್ನು ಮುಚ್ಚಲು ಅವರು ಒಪ್ಪುತ್ತಿರಲಿಲ್ಲ. ಹೀಗಾಗಿ, ಎಷ್ಟೋ ಬಾರಿ, ಒಪ್ಪಣೆ ಪತ್ರ ಕೊಡುವುದು ಇರಲಿ, ನನ್ನನ್ನು ನೋಡಲೂ ಅವರು ಸಿದ್ಧರಿರುತ್ತರಿರಲಿಲ್ಲ. ಎರಡು-ಮೂರು ದಿನ ಅವರ ಕಛೇರಿಯ ಮುಂದೆ ಕುಳಿತಿದ್ದರೂ ಅಪ್ಪಣೆ ಪತ್ರ ಸಿಗದೆ, ರಾಂಚಿಗೆ ವಾಪಸು ಬಂದುದು ಎಷ್ಟೋ ಇದೆ. ನಾನೂ ಸಹ ಅದೇ ಸರ್ಕಾರದ ಅಧಿಕಾರಿಯೇ ಆಗಿದ್ದರೂ, ನನಗೆ ಮತ್ತು ನನ್ನ ಸಮಯಕ್ಕೆ ಅವರು ಯಾವ ಬೆಲೆಯೂ ಕೊಡುತ್ತಿರಲಿಲ್ಲ. (ಕೋಲ್-ಫೀಲ್ಡ್-ಅಲೊಯೆನ್ಸ್ ಗಾಗಿ ತೋರಿಸಬೇಕಿದ್ದ ಪತ್ರ ಮಾತ್ರ ಸುಲಭದಲ್ಲಿ ಕಛೇರಿಯ ಕಾರಕೂನರಿಂದ ಪಡೆದುಕೊಳ್ಳಬಹುದಿತ್ತು. ಒಂದು ರೀತಿಯಲ್ಲಿ ಅವರು ನನ್ನ ಕೆಲಸವನ್ನು ನಿಧಾನ ಮಾಡಿದಷ್ಟೂ ನನಗೆ ಅದರಿಂದ ಲಾಭವೇ ಆಗುತ್ತಿತ್ತು – ಅದು ನನಗೆ ಬೇಕಿರದಿದ್ದರೂ)

ನನ್ನನ್ನು ಈ ಹಿರಿಯ ಅಧಿಕಾರಿಗಳು ನಿರ್ಲಕ್ಷಿಸಲು ಹಲವಾರು ಕಾರಣಗಳಿದ್ದವು. ಮುಖ್ಯವಾಗಿ ಅವರು ನನಗಿಂತ ಹಿರಿಯ ದರ್ಜೆಯಲ್ಲಿರುತ್ತಿದ್ದರು. ಆಗಷ್ಟೇ ಕೆಲಸಕ್ಕೆ ಸೇರಿದ್ದ ನನಗೆ, ಆ ಕೆಲಸಕ್ಕೆ ಬೇಕಿದ್ದ ಅನುಭವ, ವಯಸ್ಸು, ಚಾಕಚಕ್ಯತೆ, ಗತ್ತು, ಭಾಷಾಜ್ಞಾನ ಇವಾವವೂ ಇರಲಿಲ್ಲ. ದಿನಗಳ ಗಟ್ಟಲೇ ಅಪ್ಪಣೆ ಪತ್ರಕ್ಕಾಗಿ, ಕಛೇರಿಯ ಮುಂದೆ ಕುಳಿತುಕೊಂಡು ನನ್ನ ಹಣೆಬರಹವನ್ನು ನಾನೇ ನಿಂದಿಸಿಕೊಂಡಿರುತ್ತಿದ್ದೆ.

ಕೆಲವೊಮ್ಮೆ ನನ್ನೊಂದಿಗೆ ಈ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರು ಮಾಡುತ್ತಿದ್ದ ವಿದೇಶಿ (ಬಹುಮಟ್ಟಿಗೆ ಬ್ರಿಟಿಷ್ ಅಥವಾ ಫ್ರೆಂಚ್) ಸಂಸ್ಥೆಗಳ ಇನ್‌ಸ್ಟಲೇಷನ್ ಎಂಜಿನಿಯರುಗಳೂ ಬಂದಿರುತ್ತಿದ್ದರು. ಹಾಗೆ ಬರುವಾಗ ಅವರು ಖಾಲಿ-ಕೈಗಳಲ್ಲಿ ಬರುತ್ತಿರಲಿಲ್ಲ. ಗಿಫ್ಟ್-ರಾಪ್ ಮಾಡಿದ ತೂಕದ ಉಡುಗೊರೆಯೊಂದನ್ನು ತಂದಿರುತ್ತಿದ್ದರು. ಆಗೆಲ್ಲಾ, ನಮಗೆ ಬೇಕಿದ್ದ ಅಪ್ಪಣೆ ಪತ್ರಗಳು ಕ್ಷಣಾರ್ಧದಲ್ಲೇ ದೊರೆಯುತ್ತಿದ್ದವು. ಶೇಕ್ಸ್‌ಪಿಯರ್ ನ “As You Like It” ನಾಟಕದ ನಾಯಕಿ ಹೇಳುವಂತೆ “ಕಾಲ ಒಬ್ಬೊಬ್ಬರಿಗೂ ಒಂದೊಂದು ವೇಗದಲ್ಲಿ ಹರಿಯುತ್ತದೆ”. ಹಾಗೆಯೇ, ಐನ್‌ಸ್ಟೀನ್ ತನ್ನ ಜೆನೆರಲ್ ಥಿಯರಿ ಆಫ್ ರೆಲೆಟಿವಿಟಿಯಲ್ಲಿ ತೋರಿಸಿಕೊಟ್ಟಂತೆ, ತೂಕದ ವಸ್ತುಗಳು ಕಾಲವನ್ನೂ ಬಗ್ಗಿಸಬಲ್ಲವು.

(ದ್ವಾರಕಾನಾಥ ಟ್ಯಾಗೋರ್)

ನಮ್ಮ ಎಲೆಕ್ಟ್ರಾನಿಕ್ ಸುರಕ್ಷಾ ಸಾಧನಗಳನ್ನು ಅಳವಡಿಸಲು ಗಣಿ ಮುಚ್ಚಿಸುವ ಅಪ್ಪಣೆ ಸಿಗುವುದು ಕಷ್ಟವಾಗುತ್ತಿದ್ದುದರಿಂದ, ಹಬ್ಬಕ್ಕಾಗಿ ಗಣಿ ಮುಚ್ಚುತ್ತಿದ್ದ ದುರ್ಗಾಪೂಜಾ (ದಸರಾ) ಅಥವಾ ಹೋಳಿ ದಿನಗಳು ನಮ್ಮ ಕೆಲಸಕ್ಕೆ ಹೇಳಿ-ಮಾಡಿಸಿದಂತಿದ್ದವು. ಹೀಗಾಗಿ, ನಮ್ಮ ಇನ್‌ಸ್ಟಲೇಷನ್ ಕಾರ್ಯಕ್ರಮವನ್ನು ಈ ರಜಾದಿನಗಳ ಸಮಯದಲ್ಲಿ ಇಟ್ಟುಕೊಳ್ಳುತ್ತಿದ್ದೆವು.

ನಾನು ಕೆಲಸಕ್ಕೆ ಸೇರಿದ ಒಂದು ವರ್ಷದ ನಂತರ, ದುರ್ಗಾಪೂಜಾ ಸಮಯದಲ್ಲಿ ನಮ್ಮ ಸಮಸ್ತ ಉಪಕರಣಗಳನ್ನು ತೆಗೆದುಕೊಂಡು ಒಂದು ಸಣ್ಣ ತಂಡದೊಡನೆ ಪಶ್ಚಿಮ ಬಂಗಾಲದ ರಾಣಿಗಂಜ್ ಪ್ರದೇಶದ ಕಲ್ಲಿದ್ದಲ ಗಣಿಯೊಂದಕ್ಕೆ ಹೋದೆ. ಆ ಕಾಲದಲ್ಲಿ ಅದೊಂದು ಅತ್ಯಂತ ಆಳದ ಗಣಿಯಾಗಿತ್ತು. ರಾಣಿಗಂಜ್ ಪ್ರದೇಶದ ಕಲ್ಲಿದ್ದಲ ಗಣಿಗಳಿಗೆ ಒಂದು ಕುತೂಹಲಕಾರಿ ಇತಿಹಾಸ ಇದೆ. ಅದು ಹಿಂದೊಮ್ಮೆ, “ಕಾರ್, ಟ್ಯಾಗೋರ್ ಅಂಡ್ ಕಂಪೆನಿ” ಎಂಬ ಖಾಸಗಿ ಸಂಸ್ಥೆಯೊಂದರ ಒಡೆತನದಲ್ಲಿತ್ತು. ಆ ಕಂಪೆನಿ ಭಾರತೀಯನೊಬ್ಬ (ಟ್ಯಾಗೋರ್) ಯೂರೋಪಿಯನ್ ಒಬ್ಬನೊಡನೆ (ಕಾರ್) ಸಮಭಾಗೀತ್ವದಲ್ಲಿ ಭಾರತದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಪ್ರಾರಂಭಿಸಿದ ಒಂದು ಸಂಸ್ಥೆ. ೧೮೩೨ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ “ಟ್ಯಾಗೋರ್” ಬೇರಾರೂ ಅಲ್ಲ, ರಬೀಂದ್ರನಾಥ ಟ್ಯಾಗೋರರ ಅಜ್ಜ ದ್ವಾರಕಾನಾಥ ಟ್ಯಾಗೋರ್. ಅವರ ಸಂಸ್ಥೆ ಹಲವಾರು ಉದ್ದಿಮೆಗಳಲ್ಲಿ ತೊಡಗಿದ್ದರೂ, ಕಲ್ಲಿದ್ದಿಲಿನ ಗಣಿಗಾರಿಕೆ ಅದರ ಮುಖ್ಯ ಉದ್ದಿಮೆಯಾಗಿತ್ತು. ದ್ವಾರಕಾನಾಥ ಟ್ಯಾಗೋರರು ಮುಂದೆ ರೈಲ್-ವೇ ಕಂಪೆನಿಯೊಂದನ್ನೂ ಸ್ಥಾಪಿಸಿದರಾದರೂ, ಅದೇನೂ ಅಂತಹ ಯಶ ಕಾಣಲಿಲ್ಲ. ಆದರೆ, ಅವರ ಕಲ್ಲಿದ್ದಿಲಿನ ಉದ್ಯಮ ಯಶಸ್ವಿಯಾಯಿತಷ್ಟೇ ಅಲ್ಲದೆ, ಆ ಕಾಲದ ಬೃಹತ್ ಕಾರ್ಖಾನೆಗಳಿಗೆ ಬೇಕಿದ್ದ ಇಂಧನವನ್ನು ಪೂರೈಸುವ ಮೂಲಕ, ಇಡೀ ಕಲ್ಕತ್ತವನ್ನೇ ಒಂದು ಇಂಡಸ್ಟ್ರಿಯಲ್ ಸಿಟಿಯಾಗಿ ಬದಲಿಸಿತು. ಸಹಸ್ರ-ಸಹಸ್ರ ಸಂಖ್ಯೆಗಳಲ್ಲಿ ದುಡಿಯುವ ಕಾರ್ಮಿಕರು ಅಲ್ಲಿಯ ಕಾರ್ಖಾನೆಗಳಲ್ಲಿದ್ದರಿಂದ, ಮುಂದೆ ಇಡೀ ರಾಜ್ಯ ಕಮ್ಯೂನಿಸಂ ಕಡೆಗೆ ಒಲವು ತೋರಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.

ನಾನು, ನಮ್ಮ ತಂಡದೊಡನೆ ರಾಣಿಗಂಜ್ ಸಮೀಪದ ಗಣಿ ತಲುಪಿದಾಗ, ಆಗಷ್ಟೇ ಗಣಿ ಕಾರ್ಮಿಕರಿಗೆ ಹಬ್ಬದ ಬೋನಸ್ ನೀಡಿ, ಗಣಿಯನ್ನು ಮುಚ್ಚಲಾಗಿತ್ತು. ಆದರೂ, ಹಲವಾರು ಮಂದಿ ಕಾರ್ಮಿಕರು ಅಲ್ಲಲ್ಲಿ ಓಡಾಡುತ್ತಲೇ ಇದ್ದರು. ಅವರಲ್ಲಿ ಕೆಲವೊಬ್ಬರನ್ನು ನಮ್ಮ ಕೆಲಸಕ್ಕೆ ಸೇರಿಸಿಕೊಂಡು, ನಾವು, ಗಣಿಯ ಸಮೀಪ ನಮ್ಮ ಸಲಕರಣೆಗಳನ್ನು ಸಜ್ಜು ಮಾಡಿಕೊಳ್ಳಲು ಪ್ರಾರಂಭಿಸಿದೆವು. ಆಳದ ಗಣಿಯೊಳಗೆ ಇಳಿಯಲು ಬಳಸುವ “ಮೈನ್ ಶಾಫ್ಟ್ ಕೇಜ್” ಎನ್ನುವ ಮಂಟಪವನ್ನು ಅದರ ಹಗ್ಗದಿಂದ ಬೇರ್ಪಡಿಸಿ, ಅದನ್ನು ಪಕ್ಕದಲ್ಲಿಟ್ಟಿದ್ದಾಗಿತ್ತು. ಅಷ್ಟರಲ್ಲಿಯೇ, ಜನರು ಕೂಗಾಡುತ್ತಿರುವುದು ಕೇಳಿಸಿತು. ತಲೆ ಎತ್ತಿ ನೋಡಿದರೆ, ಕಾರ್ಮಿಕನೊಬ್ಬ ಬೆಂಗಾಲಿ ಭಾಷೆಯಲ್ಲಿ ಏನೇನೋ ಬಡಬಡಿಸುತ್ತಿದ್ದ. ಅವನು ಕುಡಿದು ಮತ್ತನಾಗಿರುವುದು ಮೊದಲ ನೋಟಕ್ಕೇ ಗೊತ್ತಾಯಿತು. ಇವೆಲ್ಲಕ್ಕಿಂತ ಮುಖ್ಯವಾಗಿ ಅವನು ಗಣಿಯ ಒಳಕ್ಕೆ ಇಳೀ ಬಿಟ್ಟಿದ್ದ ಹಗ್ಗವನ್ನು ಒಂದು ಕೈಯಲ್ಲಿ ಹಿಡಿದಿದ್ದ.

ಅವನು ಆ ಹಗ್ಗದ ಕೈ ಬಿಟ್ಟರೆ, ಸುಮಾರು ೫೦೦-೬೦೦ ಅಡಿ ಆಳಕ್ಕೆ ಬೀಳುವುದು ನಿಶ್ಚಿತ. ಈ ದೃಶ್ಯ ನನ್ನನ್ನು ವಿಚಲಿತಗೊಳಿಸಿತು. ಅವನು ಜೋರಾಗಿ ಬಡಬಡಿಸುವುದು ಕೇಳುತ್ತಿದ್ದರೂ, ಬೆಂಗಾಲಿ ಭಾಷೆ ನನಗೆ ಅಷ್ಟಾಗಿ ಬರದಿದ್ದ ಕಾರಣ, ಅವನೇನೆನ್ನುತ್ತಿದ್ದ ಎಂದು ನನಗೆ ತಿಳಿಯುತ್ತಿರಲಿಲ್ಲ. ಇದರ ಹಿನ್ನೆಲೆಯ ಕುರಿತು ನಮ್ಮ ತಂಡದವರೊಡನೆ ವಿಚಾರಿಸಿದೆ. ಅವರು ತಿಳಿಸಿದ ಮಾಹಿತಿಯ ಪ್ರಕಾರ, ಅವನು ಯಾರಿಂದಲೋ ಸಾಲ ಮಾಡಿದ್ದನಂತೆ, ಹಬ್ಬದ ಬೋನಸ್ ಪಡೆಯುತ್ತಿದ್ದಂತೆಯೇ, ಸಾಲಗಾರನು ಬಂದು ಅವನಿಂದ ಆ ಹಣವನ್ನು ಕಸಿದುಕೊಂಡನಂತೆ. ಹೆಂಡತಿ-ಮಕ್ಕಳನ್ನು ಹೊಂದಿದ್ದ ಅವನು, ಹಬ್ಬಕ್ಕೆ ಹಣ ಇಲ್ಲದ್ದರಿಂದ ಬೇಸತ್ತು, ಇದ್ದ ಕೊಂಚ ಹಣದಲ್ಲಿ ಕುಡಿದು ಬಂದಿದ್ದ. ಗಣಿಯ ಆಳದೊಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಡಬಡಾಯಿಸುತ್ತಿದ್ದ.

ಎಷ್ಟೋ ಬಾರಿ, ಒಪ್ಪಣೆ ಪತ್ರ ಕೊಡುವುದು ಇರಲಿ, ನನ್ನನ್ನು ನೋಡಲೂ ಅವರು ಸಿದ್ಧರಿರುತ್ತರಿರಲಿಲ್ಲ. ಎರಡು-ಮೂರು ದಿನ ಅವರ ಕಛೇರಿಯ ಮುಂದೆ ಕುಳಿತಿದ್ದರೂ ಅಪ್ಪಣೆ ಪತ್ರ ಸಿಗದೆ, ರಾಂಚಿಗೆ ವಾಪಸು ಬಂದುದು ಎಷ್ಟೋ ಇದೆ. ನಾನೂ ಸಹ ಅದೇ ಸರ್ಕಾರದ ಅಧಿಕಾರಿಯೇ ಆಗಿದ್ದರೂ, ನನಗೆ ಮತ್ತು ನನ್ನ ಸಮಯಕ್ಕೆ ಅವರು ಯಾವ ಬೆಲೆಯೂ ಕೊಡುತ್ತಿರಲಿಲ್ಲ.

ಸುತ್ತ ನೆರೆದಿದ್ದ ಜನ ಏನೇನೋ ಕೂಗುತ್ತಿದ್ದರಾದರೂ, ಅದನ್ನು ಕೇಳುವ ಸ್ಥಿತಿಯಲ್ಲಿ ಅವನಿರಲಿಲ್ಲ. ನಾನು ನೋಡುತ್ತಿರುವಂತೆಯೇ ಅವನು ಹಗ್ಗದ ತುದಿಯ ಕೈಬಿಟ್ಟ.

ಮನುಷ್ಯನೊಬ್ಬ ಈ ರೀತಿ ಸಾವನ್ನಪ್ಪುವುದನ್ನು ನೋಡಿದಾಗ ನಮ್ಮ ಮನದಲ್ಲಿ ಉಂಟಾಗುವ ಭಾವಗಳನ್ನು ವ್ಯಕ್ತಪಡಿಸುವುದು ಕಷ್ಟ. ಕಾಲ, ಇಂತಹದೊಂದು ಘಟನೆಯನ್ನು ಅಳಿಸಿ ಹಾಕಲು ಅದೆಷ್ಟೇ ಪ್ರಯತ್ನಿಸಿದರೂ, ಪೂರ್ಣವಾಗಿ ಗೆಲ್ಲುವುದಿಲ್ಲ. ಮಸುಕಾಗುತ್ತಿದ್ದರೂ ಮರೆಯಾಗದಂತಹ ನೆನಪುಗಳು, ನಿಶ್ಶಕ್ತವಾಗುತ್ತಿದ್ದರೂ ಅಶಕ್ತವಾಗದ ಭಾವಗಳು ಕಾಲವನ್ನೂ ಸೋಲಿಸಬಲ್ಲವು.

“ಕಾಲದ ತುದಿಯಲಿ
ನಲಿಯುವ ಜೀವ
ಎಲೆಯಂಚಿನ
ಮಂಜು” – ರಬೀಂದ್ರನಾಥ ಟ್ಯಾಗೋರ್

******

ಈ ಸಾವಿನಿಂದಾಗಿ, ಪೋಲೀಸ್ ತನಿಖೆ ಇತ್ಯಾದಿ ನಡೆಯಬೇಕಿತ್ತು. ಮುಂದಿನ ಎರಡು ಮೂರು ದಿನ ನಮ್ಮ ಕೆಲಸ ಮುಂದುವರೆಸುವುದು ಸಾಧ್ಯವಿಲ್ಲ ಎಂಬ ವಿಷಯ ತಿಳಿಯಿತು. ಕಾರ್ಮಿಕನೊಬ್ಬನ ಸಾವೇ, ಕಾರ್ಮಿಕರ ಸುರಕ್ಷತೆಯ ನಮ್ಮ ಕೆಲಸಕ್ಕೆ ಅಡ್ಡಿಯಾಗಿದ್ದು ವ್ಯಂಗ್ಯವೆನ್ನಿಸಿದರೂ, ನಾವು ಕಂಡದ್ದು ಆಘಾತಕಾರಿ ದೃಶ್ಯವಾದರೂ, ಗಣಿಮುಚ್ಚುವ ಹಬ್ಬದ ರಜಾದಿನಗಳನ್ನು ವ್ಯರ್ಥ ಮಾಡಲು ನಮಗೆ ಮನಸ್ಸು ಬರಲಿಲ್ಲ. ನಾವು ಮೊದಲೇ ಯೋಜಿಸಿದ್ದ ಗಣಿಯ ಬದಲಾಗಿ, ಸುಮಾರು ೩-೪ ಗಂಟೆಗಳ ಪ್ರಯಾಣದ ದೂರದಲ್ಲಿರುವ ರಾಜರಪ್ಪಾ ಎಂಬಲ್ಲಿಗೆ ಹೋಗುವುದೆಂದು ನಿಶ್ಚಯಿಸಿದೆವು.

ಈ ರಾಜರಪ್ಪಾ ಎನ್ನುವುದು ಈಗಿನ ಜಾರ್ಖಂಡ್ ರಾಜ್ಯದಲ್ಲಿದೆ. ದಾಮೋದರ ಮತ್ತು ಭೈರವಿ ನದಿಗಳು ಒಂದುಗೂಡುವ ಈ ಊರಿನ ಹತ್ತಿರದಲ್ಲೇ ಹಲವಾರು ಕಲ್ಲಿದ್ದಲ “ಓಪನ್‌ ಕ್ಯಾಸ್ಟ್” ಗಣಿಗಳಿವೆ. ಈ ಓಪನ್‌ ಕ್ಯಾಸ್ಟ್ ಗಣಿಗಳಲ್ಲಿ, ಕಲ್ಲಿದ್ದಲ್ಲನ್ನು ಹೊರಹಾಕಲು ಭೂಮಿಯ ಆಳಕ್ಕೆ ಇಳಿಯಬೇಕಿಲ್ಲ. ಬದಲಾಗಿ, ಭೂಮಿಯ ಹೊರ ಪದರಗಳನ್ನು ತೆಗೆದರೆ ಆಯಿತು. ವಿಶಾಲವಾದ ಮತ್ತು ಎಲ್ಲೆಲ್ಲೂ ಕಪ್ಪು ಧೂಳು ಇರುವ ಈ ಗಣಿಗಳು, ಪ್ರಕೃತಿಯ ಒಡಲನ್ನು ಸುಲಭವಾಗಿ ಬರಿದು ಮಾಡುವ ಪ್ರಯತ್ನಗಳು. ಇವುಗಳಲ್ಲಿ, ಆಳಕ್ಕೆ ಇಳಿಯುವ ಸಾಹಸದ “ರೊಮ್ಯಾಂಟಿಸಿಸಮ್” ಸಹ ಇರುವುದಿಲ್ಲ. ಇಂತಹ ಗಣಿಗಳೊಂದಿಗೆ, ರಾಜರಪ್ಪಾದಲ್ಲಿ ದೊಡ್ಡದಾದ ಒಂದು ಕಲ್ಲಿದ್ದಲು ಸಂಸ್ಕರಣ ಕೇಂದ್ರವೂ ಇದೆ.

ನಾವು ರಾಣಿಗಂಜ್‌ ನ ಆಸುಪಾಸಿನಿಂದ ರಸ್ತೆಯಲ್ಲಿ ಪ್ರಯಾಣ ಮಾಡಿ, ರಾತ್ರಿಯಲ್ಲಿ ರಾಜರಪ್ಪಾ ತಲುಪಿದೆವು. ಆದರೆ, ಮಾರನೆಯ ದಿನ ಬೆಳಿಗ್ಗೆ ಎದ್ದು ನಮ್ಮ ಉಪಕರಣಗಳೊಂದಿಗೆ ಕಲ್ಲಿದ್ದಲು ಸಂಸ್ಕರಣ ಘಟಕಕ್ಕೆ ಹೋದಾಗ, ನಮ್ಮ ಕೆಲಸಕ್ಕೆ ಅಪ್ಪಣೆ ಪತ್ರ ನೀಡುವ ಅಧಿಕಾರಿ ಆ ದಿನ ರಜೆಯಲ್ಲಿದ್ದಾರೆಂಬ ವಿಚಾರ ತಿಳಿಯಿತು. ಅವರು ಮಾರನೆಯ ದಿನ ಬರುವುದಾಗಿ ಅಲ್ಲಿದ್ದ ಕಿರಿಯ ಅಧಿಕಾರಿಗಳು ನಮಗೆ ತಿಳಿಸಿದರು. ಮಾರನೆಯ ದಿನದವರೆಗೆ ಏನು ಮಾಡುವುದೆಂದು ಯೋಚಿಸುತ್ತಿರುವಾಗ, ನಮ್ಮ ತಂಡದಲ್ಲಿದ್ದವರೊಬ್ಬರು ಹತ್ತಿರದಲ್ಲೇ ಒಂದು ಹೆಸರಾಂತ ದೇವಸ್ಥಾನ ಇರುವುದಾಗಿಯೂ, ಅದನ್ನು ಭೇಟಿ ಮಾಡಬಹುದೆಂದೂ ಸೂಚಿಸಿದರು. ಸಾಮಾನ್ಯವಾಗಿ ದೇವಸ್ಥಾನಗಳನ್ನು ನೋಡಲು ನನಗೇನೂ ಅಂತಹ ಅಸ್ಥೆ ಇರುವುದಿಲ್ಲ. ಆದರೂ ತಂಡದವರೆಲ್ಲಾ ಹೋಗಲು ಉತ್ಸುಕತೆ ತೋರಿದ್ದರಿಂದ ನಾನೂ ಸಹ “ಸರಿ” ಎಂದೆ.

ಆ ದೇವಸ್ಥಾನದ ಹೆಸರು “ಮಾ ಚಿನ್ನಮ್ಮಾಸ್ತಾ ದೇವಸ್ಥಾನ” ಎಂದಾಗ, ನನಗೆ ಅದರ ಬಗೆಗೆ ಕೊಂಚ ಮಟ್ಟಿಗೆ ಕುತೂಹಲವೂ ಮೂಡಿತು. ನಮ್ಮ ತಂಡದಲ್ಲಿದ್ದವರಾರಿಗೂ, ಆ ದೇವಸ್ಥಾನದ ಬಗೆಗಾಗಲೀ ಆ ದೇವಿಯ ಬಗೆಗಾಗಲೀ ಹೆಚ್ಚಿಗೆ ಏನೂ ತಿಳಿದಿರಲಿಲ್ಲ. ರಾಜರಪ್ಪಾ ಎಂದು “ಅಪ್ಪಾ” ಎಂದು ಕೊನೆಯಾಗುವ ಊರಿನಲ್ಲಿ “ಚಿನ್ನಮ್ಮಾ” ಎಂಬ ದೇವಿ ಹೇಗೆ ಬಂದಳು ಎಂದೆಲ್ಲಾ ಆಲೋಚಿಸ ತೊಡಗಿದೆ. ಈ “ಚಿನ್ನ” ಕನ್ನಡದ ಚಿನ್ನವೇ ಅಥವಾ ತೆಲುಗು ಚಿನ್ನವೇ? ಎಂದೆಲ್ಲಾ ಪ್ರಶ್ನೆಗಳೂ ಬಂತು. ಈ ಪ್ರಶ್ನೆಗಳು ಪೂರ್ತಿ ಅಸಂಗತವೇನೂ ಆಗಿರಲಿಲ್ಲ. ಉತ್ತರ ಭಾರತದ ಎಷ್ಟೋ ಆಳದ ಗಣಿಗಳಲ್ಲಿ ಮೊದಲು ಆಳಕ್ಕೆ ಇಳಿಯುತ್ತಿದ್ದವರು ಕೆ.ಜಿ.ಎಫ್. ಸುತ್ತಮುತ್ತಲಿಂದ ಬಂದ ತಮಿಳರೇ. ಆ ವೇಳೆಗಾಗಲೇ ಕೆ.ಜಿ.ಎಫ್. ಚಿನ್ನದ ಗಣಿಗಳು ನಿಂತು ಹೋಗಿದ್ದವು. ಆದರೆ, ಆ ಗಣಿಗಳನ್ನು ತೋಡಿದ ತಜ್ಞತೆ ಅಲ್ಲಿನ ಕಾರ್ಮಿಕರಲ್ಲಿ ಇತ್ತು. ಹೀಗಾಗಿ, ಭಾರತ ಸರ್ಕಾರ ಆಳವಾದ ಗಣಿಗಳನ್ನು ಉತ್ತರ ಭಾರತದಲ್ಲಿ ತೋಡುವಾಗಲೂ ಕೆ.ಜಿ.ಎಫ್.‌ನ ಈ ಕಾರ್ಮಿಕರನ್ನು ಕರೆಸುತ್ತಿತ್ತು.

ನಾನು, ಈ ಊರು ಮತ್ತು ಈ ದೇವಸ್ಥಾನದ ಹಿಂದೆ, ಇಂತಹ ತಮಿಳರ ವಿಷಯ ಇರಬಹುದೇ ಎಂದು ಊಹಿಸತೊಡಗಿದೆ. ನಮ್ಮ ವಾಹನ ಆ ದೇವಸ್ಥಾನದ ಹತ್ತಿರ ಬಂದಾಗ, ಅದು ದುರ್ಗಾಪೂಜೆಯ ಸಂದರ್ಭವಾದದ್ದರಿಂದ ಅಲ್ಲಿ ಜನ ಜಂಗುಳಿ ನೆರೆದಿತ್ತು. ದೇವಸ್ಥಾನಕ್ಕೆ ಹೋಗುವ ಹಾದಿಯ ಇಕ್ಕೆಲಗಳಲ್ಲೂ ಅಂಗಡಿ-ಮುಂಗಟ್ಟುಗಳಿದ್ದವು. ಅದೊಂದು ದೊಡ್ಡ ಜಾತ್ರೆಯಂತೆಯೇ ಕಾಣುತ್ತಿತ್ತು. ರಾಜರಪ್ಪಾ ಗಣಿಯ ಸುತ್ತಮುತ್ತ ಎಲ್ಲೆಲ್ಲಿ ನೋಡಿದರೂ ಕಪ್ಪೇ-ಕಪ್ಪಾದರೆ, ಇಲ್ಲಿ ಕಂಡಲ್ಲೆಲ್ಲಾ ಕುಣಿದಾಡುವ ರಂಗ-ಬಿರಂಗಿ ಬಣ್ಣಗಳು. ದೇವಸ್ಥಾನಕ್ಕೂ ಸಹ ತರಹಾವರಿ ಬಣ್ಣ ಹಚ್ಚಿದ್ದರು. ದೇವಸ್ಥಾನದ ಒಳಗೆ ಹೋಗಲು ಒಂದು ದೊಡ್ಡ ಸಾಲೇ ಇತ್ತು. ಸಾಲಿನಲ್ಲಿ ನಿಂತಿದ್ದ ಹಲವರ ಬಳಿ ಬಲಿ-ಪಶುಗಳೂ ಇದ್ದವು. ಇದೆಲ್ಲಾ ನನ್ನ ಮನಸ್ಸಿನಲ್ಲಿ ಒಂದು ರೀತಿಯ ಕಸಿವಿಸಿ ಮೂಡಿಸಲಾರಂಭಿಸಿತು. ಈ ಸಾಲಿನಲ್ಲಿ ನಿಂತಿದ್ದಾಗ ಬದಿಯಲ್ಲಿ ಮಾರಾಟಕ್ಕಿಟ್ಟಿದ್ದ ಆ “ಮಾ ಚಿನ್ನಮ್ಮಾಸ್ತಾ” ದೇವಿಯ ಚಿತ್ರಪಟವನ್ನು ನೋಡಿ ಸ್ಥಂಭೀಭೂತನಾದೆ. ಹಿಂದಿನ ದಿನವಷ್ಟೇ ಕಣ್ಣೆದುರಿನಲ್ಲೇ ಮನುಷ್ಯನೊಬ್ಬ ಸಾವನ್ನಪ್ಪಿದ್ದನ್ನು ನೋಡಿ ಸಾವರಿಸಿಕೊಳ್ಳುತ್ತಿದ್ದ ನನಗೆ, ಆ ಚಿತ್ರಪಟದಲ್ಲಿದ್ದ ದೇವಿಯ ಭೀಕರತೆ ತಾಳಲಾಗದು ಎಂದೆನಿಸಿತು. ದೇವಸ್ಥಾನದ ಒಳಗೆ ಹೋಗುವುದೇ ಬೇಡವೇನೋ ಎಂದು ಯೋಚಿಸಲಾರಂಭಿಸಿದೆ. ಆದರೂ, ಹೇಗೋ ಹೋದೆ. ದೇವಸ್ಥಾನದ ಒಳಗಿನ ಆ ದೇವಿಯ ರೂಪ ನನ್ನ ನೆನಪಲ್ಲಿ ಒಂದಿಷ್ಟೂ ಉಳಿದಿಲ್ಲ. ಆದರೆ ಅಲ್ಲಿನ ಅಂಗಡಿಗಳಲ್ಲಿ ಮಾರಾಟಕ್ಕಿದ್ದ ಕಣ್ಣಿಗೆ ರಾಚುವ ಕೆಂಪು, ಹಳದಿ, ಕಪ್ಪು ಬಣ್ಣಗಳಿದ್ದ ಆ ಚಿತ್ರಪಟಗಳು ಮಾತ್ರ ಮರೆಯಲಾಗದಂತೆ ಸ್ಮೃತಿ ಪಟಲದ ಮೇಲೆ ಅಚ್ಚೊತ್ತಿ ನಿಂತಿವೆ.

“ಮಾ ಚಿನ್ನಮ್ಮಾಸ್ತಾ” ಎಂದು ನಾನು ಕೇಳಿಸಿಕೊಂಡಿದ್ದ ದೇವಿಯ ಹೆಸರು ವಾಸ್ತವದಲ್ಲಿ, ಸಂಸ್ಕೃತದ “ಛಿನ್ನ ಮಸ್ತಕಾ” – ಎಂದರೆ, ರುಂಡವನ್ನು ಬೇರ್ಪಡಿಸಿಕೊಂಡಂತಹವಳು. ಎಷ್ಟೋ ಶತಮಾನಗಳ ಇತಿಹಾಸ ಇರುವ ದೇವಿ ಅವಳು. ತನ್ನ ರುಂಡವನ್ನು ತಾನೇ ಸ್ವತಃ ಕತ್ತರಿಸಿಕೊಂಡು, ಅದನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ನಿಂತವಳು. ಅವಳ ಕತ್ತಿನಿಂದ ಚಿಮ್ಮುತ್ತಿರುವ ನೆತ್ತರ ಬುಗ್ಗೆಯೊಂದು ಅವಳ ಕೈಯಲ್ಲಿರುವ ರುಂಡದ ಬಾಯಿಗೆ ಹೋಗುತ್ತಿದ್ದರೆ, ಇನ್ನೆರಡು ಬುಗ್ಗೆಗಳು ಅವಳ ಅಕ್ಕ-ಪಕ್ಕದಲ್ಲಿ ನಗ್ನರಾಗಿ ನಿಂತಿರುವ ಅವಳ ಪರಿಚಾರಿಕೆಯರ ದಾಹವನ್ನು ತಣಿಸುತ್ತಿದೆ!

ಆಕೆಯ ಹುಟ್ಟಿನ ಬಗೆಗೆ ಹಲವಾರು ಕತೆಗಳಿವೆ. ಒಂದು ಕತೆಯ ಪ್ರಕಾರ, ಪಾರ್ವತಿ ತನ್ನ ಪರಿಚಾರಿಕೆಯರಾದ ಶಾಕಿಣಿ, ಡಾಕಿಣಿಯರೊಂದಿಗೆ ಮಂದಾಕಿನಿ ನದಿಯಲ್ಲಿ ಸ್ನಾನ ಮಾಡಿ ಬರುತ್ತಿರುತ್ತಾಳೆ. ಆಗ ಶಾಕಿಣಿ-ಡಾಕಿಣಿಯರು ತಮಗೆ ಹಸಿವಾಗಿದೆಯೆಂದೂ, ಆಹಾರವನ್ನು ನೀಡಬೇಕೆಂದೂ ಪಾರ್ವತಿಯನ್ನು ಕೋರುತ್ತಾರೆ. ಅವರ ಬೇಡಿಕೆಗೆ ಓಗೊಟ್ಟು ಪಾರ್ವತಿ ತನ್ನ ಕತ್ತನ್ನೇ ಕತ್ತರಿಸಿಕೊಂಡು, ತನ್ನ ದೇಹದಿಂದ ಚಿಮ್ಮುತ್ತಿರುವ ರಕ್ತವನ್ನು ಅವರಿಬ್ಬರಿಗೂ ನೀಡಿ ತಾನೂ ಸ್ವೀಕರಿಸುತ್ತಾಳೆ.

ಈ “ಮಾ ಛಿನ್ನ-ಮಸ್ತಕಾ” ತಾಯಿಯೊಬ್ಬಳ ರೌದ್ರ ರೂಪ; ಕರುಣೆ-ರೌದ್ರಗಳು ಬೇರ್ಪಡಿಸಲಾಗದ ಸಂಕೇತ; ಸರ್ವಾನಂದ ಪ್ರದಾಯಿನಿಯೇ ಪ್ರಚಂಡ ಚಂಡಿಕೆಯಾಗುವ ಪರಿ ಅದು. ಆಹಾರ ನೀಡುವವಳೂ ಅವಳೇ. ಅದನ್ನು ಉಣ್ಣುವವಳೂ ಅವಳೇ. ಆಹಾರವೂ ಅವಳೇ!

ಕಾಲದ ಬಗೆಗೆ ಗಾಢವಾಗಿ ಚಿಂತಿಸಿ ಅದರ ನಾನಾ ರೂಪಗಳ ಕುರಿತು ಹಲವಾರು ಕತೆ, ಲೇಖನಗಳನ್ನು ಬರೆದವನು ಅರ್ಜೆಂಟಿನಾದ ಕವಿ-ಕತೆಗಾರ-ಚಿಂತಕ ಹೋರ್ಹೇ ಲೂಯಿಸ್ ಬೋರ್ಹೆಸ್ (Jorges Luis Borges). ಕಾಲದ ಕುರಿತು ಅವನು ಬರೆದಿರುವ “A New Refutation of Time” ಬರಹ ಅತ್ಯಂತ ಪ್ರಸಿದ್ಧವಾದುದು. ಆ ಲೇಖನದ ಹೆಸರಲ್ಲೇ ಒಂದು ಪ್ಯಾರಡಾಕ್ಸ್ ಇದೆ. ಛಿನ್ನ-ಮಸ್ತಕಾಳ ನೆನಪಾದಾಗೆಲ್ಲಾ, ಬೋರ್ಹೆಸ್‌ ನ ಆ ಬರಹದ ಈ ಸಾಲುಗಳು ನನಗೆ ನೆನಪಾಗುತ್ತವೆ. “ಕಾಲ ಎನ್ನುವುದು ನನ್ನನ್ನು ಸೆಳೆದೊಯ್ಯುವ ನದಿ. ಆದರೆ ನಾನೇ ಆ ನದಿ; ಅದು ನನ್ನನ್ನು ಸಿಗಿದು ತಿನ್ನುವ ಹುಲಿ. ಆದರೆ ನಾನೇ ಆ ಹುಲಿ; ಅದು ನನ್ನನ್ನು ಸುಟ್ಟು ಸೇವಿಸುವ ಬೆಂಕಿ. ಆದರೆ ನಾನೇ ಆ ಬೆಂಕಿ; ದುರದೃಷ್ಟವೆಂದರೆ ಈ ಜಗತ್ತು ಸತ್ಯ; ದುರದೃಷ್ಟವೆಂದರೆ, ಈ ನಾನು ಬೋರ್ಹೆಸ್”

******

ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಕತೆಗಾರ, “ಛಿನ್ನ-ಮಸ್ತಕಾಳ ಶಾಪ” (“ಛಿನ್ನಮಸ್ತಾರ್ ಅಭಿಶಾಪ್”)ಎಂಬ ಪತ್ತೇದಾರಿ ಕಾದಂಬರಿಯೊಂದನ್ನು ಬರೆದಿದ್ದಾರೆ. ಆ ಕಾದಂಬರಿಯಲ್ಲಿನ ಕಥಾನಕ ನಡೆಯುವುದೆಲ್ಲಾ ಈ ರಾಜರಪ್ಪಾದ ಆಸುಪಾಸಿನಲ್ಲೇ. ಆ ಕತೆಯಲ್ಲಿ ಸರ್ಕಸ್ಸಿನ ಒಂದು ಹುಲಿ ತಪ್ಪಿಸಿಕೊಂಡು ಹೋಗುತ್ತದೆ.

ನಮ್ಮ ಈ ಕಾಲ ಪ್ರಯಾಣದಲ್ಲಿ ಗಡಿಯಾರಗಳ ತಾಂತ್ರಿಕತೆ ವಿಚಾರದ ಮಧ್ಯದ ಈ ಬ್ರೇಕ್ ನಂತರ ಮತ್ತೊಮ್ಮೆ ಗಡಿಯಾರಗಳ ಕುರಿತು ಗಮನ ಹರಿಸೋಣ.

(ಮುಂದುವರೆಯುವುದು)