”ನಾನು ಕಂಡುಕೊಂಡಂತೆ “ಗದ್ಯಂ ಹೃದ್ಯಂ” ನಲ್ಲಿ ನಾಲ್ಕು ಬಗೆಯ ಬರಹಗಳಿವೆ. ಆತ್ಮಕಥಾನಕವಾದ ಬರಹಗಳು, ಪ್ರವಾಸ ಕಥನ, ವ್ಯಕ್ತಿಚಿತ್ರಗಳು ಮತ್ತು ಸಮಕಾಲೀನ ವಸ್ತು, ಘಟನಾವಳಿಗಳನ್ನು ಕುರಿತ ಬಿಡಿ ಲೇಖನಗಳು. ಆತ್ಮಕಥಾನಕದ ಧಾಟಿಯ ಬರೆಹಗಳಲ್ಲಿ ಲೇಖಕರ ಬಾಲ್ಯ ಹಾಗೂ ಹದಿಹರೆಯದ ಬದುಕನ್ನು ಹಿಡಿದಿಟ್ಟಿರುವ ಬೈಲಹೊಂಗಲದ ಬಾಲ್ಯದ ನೆನಪುಗಳು, ನಂತರ ಅಷ್ಟಿಷ್ಟು ದಾಖಲಾಗಿರುವ ಧಾರವಾಡದ ಕಾಲೇಜು ದಿನಗಳು. ತದನಂತರ ದೆಹಲಿಯ ಜೆ.ಎನ್.ಯು ವಿದ್ಯಾರ್ಥಿ ಜೀವನದ ನೆನಪುಗಳು ಸೇರಿವೆ”
ಅಶೋಕ ಶೆಟ್ಟರ್ ಅಂಕಣ ಸಂಕಲನದ ಕುರಿತು ಚಂದ್ರಶೇಖರ ಆಲೂರು.

ಮೂಲತ: ಕವಿಯಾದರೂ ತಮ್ಮ ಗದ್ಯಬರಹಗಳ ಸಂಕಲನಕ್ಕೆ “ಗದ್ಯಂ ಹೃದ್ಯಂ” ಎಂದು ಹೆಸರಿಸಿ ನಮ್ಮಂಥ “ಗದ್ಯಮಾತ್ರ” ಲೇಖಕರಿಗೆ ಗೌರವ ತಂದು ಕೊಟ್ಟ ಕಾರಣ ಶೆಟ್ಟರ್ ಅವರನ್ನು ಅಭಿನಂದಿಸುತ್ತ ಈ ಕೃತಿಯ ಓದು ನನಗೆ ನೀಡಿದ
ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಯತ್ನಿಸುತ್ತೇನೆ.

ನಾನು ಕಂಡುಕೊಂಡಂತೆ “ಗದ್ಯಂ ಹೃದ್ಯಂ” ನಲ್ಲಿ ನಾಲ್ಕು ಬಗೆಯ ಬರಹಗಳಿವೆ. ಆತ್ಮಕಥಾನಕವಾದ ಬರಹಗಳು, ಪ್ರವಾಸ ಕಥನ, ವ್ಯಕ್ತಿಚಿತ್ರಗಳು ಮತ್ತು ಸಮಕಾಲೀನ ವಸ್ತು, ಘಟನಾವಳಿಗಳನ್ನು ಕುರಿತ ಬಿಡಿ ಲೇಖನಗಳು. ಆತ್ಮಕಥಾನಕದ ಧಾಟಿಯ ಬರೆಹಗಳಲ್ಲಿ ಲೇಖಕರ ಬಾಲ್ಯ ಹಾಗೂ ಹದಿಹರೆಯದ ಬದುಕನ್ನು ಹಿಡಿದಿಟ್ಟಿರುವ ಬೈಲಹೊಂಗಲದ ಬಾಲ್ಯದ ನೆನಪುಗಳು, ನಂತರ ಅಷ್ಟಿಷ್ಟು ದಾಖಲಾಗಿರುವ ಧಾರವಾಡದ ಕಾಲೇಜು ದಿನಗಳು. ತದನಂತರ ದೆಹಲಿಯ ಜೆ.ಎನ್.ಯು ವಿದ್ಯಾರ್ಥಿ ಜೀವನದ ನೆನಪುಗಳು ಸೇರಿವೆ.

ಮೊದಲ ಅಧ್ಯಾಯದಲ್ಲಿಯೇ ಬಾಲ್ಯದ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತದೆ. “ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಂಡಿದ್ದ ದಿನಗಳು”, “ಶೇಂಗಾ ಸುಗ್ಗಿಯ ಸಂಭ್ರಮ”, “ಮಮತಾಮಯಿ ತಾಯಿ, ಸ್ಥಿತಪ್ರಜ್ಞ ತಂದೆ” ಹೀಗೆ ಆರಂಭದ ಈ ಮೂರು ಅಧ್ಯಾಯಗಳಲ್ಲದೇ ಸ್ವಂತದ ಬದುಕಿನ ಚದುರಿದ ಚಿತ್ರಗಳು “ಅದು ರಮ್ಯ ಬಾಲ್ಯಕಾಲ”, “ಪ್ರೇಮವೆಂಬ ಮಧುರ ನೋವು”, “ಉಳವೀಯ ದಾರೀಲಿ ಶರಣರ ನೆನೆಯುತ”, “ಡಾಕ್ಟರ್ಸ್ ಡೇ” ನೆಪದಲ್ಲಿ ತಮ್ಮನ್ನು ಕಾಡಿದ ಖಾಯಿಲೆಗಳ ಬಗೆಗಿನ ಸೂಕ್ಷ್ಮ ವರ್ಣನೆ… ಇವೆಲ್ಲ ನೇರವಾಗಿ ಲೇಖಕರ ಆತ್ಮಕಥಾನಕದ ಭಾಗಗಳಂತೆಯೇ ಕಾಣುತ್ತವೆ.

(ಅಶೋಕ ಶೆಟ್ಟರ್ )

ಮೊದಲ ಅಧ್ಯಾಯದ ಮೊದಲ ವಾಕ್ಯಗಳು ಎಷ್ಟೊಂದು ಸರಳವಾಗಿ, ಹೃದಯಂಗಮವಾಗಿ ಆರಂಭವಾಗುತ್ತವೆ ! “ಒಂದೇ ಹೆಸರು ಕವಲೊಡೆದಂತೆ, ನನ್ನ ಅವ್ವ ಈರವ್ವ ಅಪ್ಪ ಈರಪ್ಪ. ಇಬ್ಬರಿಗೂ ಮಧ್ಯೆ ಹತ್ತು ವರ್ಷಗಳ ವ್ಯತ್ಯಾಸ, ಸ್ವಭಾವ ವ್ಯತ್ಯಾಸಗಳೋ ಹಲವಾರು. ಮೂಲತ: ಇಬ್ಬರೂ ಸಾತ್ವಿಕರು…” ತಮ್ಮ ವಂಶಸ್ಥರು ಒಂದು ಕಾಲದಲ್ಲಿ ಅತ್ಯಂತ ಶ್ರೀಮಂತರಾಗಿ ಬಾಳ್ವೆ ನಡೆಸಿದರೆಂಬ ಹೊಳಹುಗಳಷ್ಟೇ ಲೇಖಕರಿಗೆ ಕಾಣುವುದು. ಯಾಕೆಂದರೆ ಅವರ ಬಾಲ್ಯ ಆರಂಭವಾಗುವದೇ ಬೈಲಹೊಂಗಲದ ಬಾಡಿಗೆ ಮನೆಯಲ್ಲಿ. ಬೈಲಹೊಂಗಲಕ್ಕೆ ಬಂದು ನೆಲೆಗೊಳ್ಳುವ ಮೊದಲೇ ಅವರ ತಂದೆ ಮತ್ತು ಚಿಕ್ಕಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರುತ್ತಾರೆ. ಗಾಂಧೀಜಿಯವರನ್ನು ಕಂಡಿರುತ್ತಾರೆ, ಜೈಲುವಾಸ ಅನುಭವಿಸಿರುತ್ತಾರೆ… ಈ ಎಲ್ಲಾ ಘಟನೆಗಳನ್ನು ಲೇಖಕರು ಅವರ ತಂದೆಯವರಷ್ಟೇ ನಿರ್ಲಿಪ್ತ ಮನೋಭಾವದಿಂದ ವಿವರಿಸುವುದೇ ಒಂದು ವಿಶೇಷ.

“ಶೇಂಗಾ ಸುಗ್ಗಿಯ ಸಂಭ್ರಮ” ಒಂದು ಸಣ್ಣ ವ್ಯಾಪಾರಸ್ಥರ ಮನೆಯಲ್ಲಿ ನಡೆಯುವ ವಹಿವಾಟಿನ ಸಂಭ್ರಮದ ಚಿತ್ರ. ತಂದೆ ಸ್ಥಿತಪ್ರಜ್ಞರಾದಾಗ ಮಮತಾಮಯಿಯಾದ ತಾಯಿ ಸ್ವಲ್ಪ ಮಟ್ಟಿನ ಲೌಕಿಕತೆಯನ್ನಾದರೂ ರೂಢಿಸಿಕೊಳ್ಳಬೇಕಲ್ಲವೇ? ಮಗ ದೆಹಲಿಗೆ ಹೊರಟಾಗ ಆಕೆ ಅವನು ಅಲ್ಲಿ ಪಡೆಯಬಹುದಾದ ಹಣವನ್ನು ತಾನೇ ಹೇಗೆ ಹೊಂದಿಸಿ ಕೊಡಬಲ್ಲೆ ಎಂದು ವಿವರಿಸುವ ಮಾತುಗಳು ಹೃದಯಸ್ಪರ್ಶಿಯಾಗಿವೆ. ಲೇಖಕರು ಕವಿಯೂ ಆಗಿರುವದರಿಂದ ಅವರು ಬಾಲ್ಯದಿಂದ ಮೊಗೆದು ಕೊಟ್ಟಿರುವ ನೆನಪುಗಳೆಲ್ಲ ತಿಳಿನೀರಿನಂತೆ ಕಂಗೊಳಿಸುತ್ತವೆ. ಇದೇ ಬಗೆಯ ಭಾವನಾತ್ಮಕತೆ “ಉಳವೀಯ ದಾರೀಲಿ ಶರಣರ ನೆನೆಯುತ”, “ಅದು ರಮ್ಯ ಬಾಲಕಾಲ”, “ಪ್ರೇಮವೆಂಬ ಮದುರ ನೋವು” ಮುಂತಾದ ಬರೆಹಗಳಲ್ಲಿಯೂ ಮುಂದುವರಿದಿದೆ. ಆತ್ಮಕಥಾನಕವಾದ ಇಂಥ ಬರೆಹಗಳ ಗುಚ್ಛದಲ್ಲಿ ನಾನು “ದೆಹಲಿ ಡೈರಿ” ಎಂದು ಕರೆಯಲು ಇಷ್ಟಪಡುವ ನಾಲ್ಕು ಲೇಖನಗಳು ತುಂಬ ಮಹತ್ವದ್ದಾಗಿವೆ. “ಯಮುನೆಯ ದಡದ ರಾಜನಗರಿಯಲ್ಲಿ ಕೊಲೆ ದಂಗೆ ಮುಂತಾಗಿ”, “ಮನಸು ಹೃದಯಗಳ ಮಾರಣಹೋಮವ ಮರೆತೇನೆಂದರ ಮರೆಯಲಿ ಹ್ಯಾಂಗ” ಈ ಲೇಖನಗಳಲ್ಲಿ ಇಂದಿರಾ ಹತ್ಯೆಯ ನಂತರ ಸಿಖ್ ಸಮುದಾಯದ ಮೇಲೆ ನಡೆದ ಕ್ರೌರ್ಯವನ್ನು, ಹಿಂಸೆಯನ್ನು, ಲೇಖಕರು ತೀವ್ರ ನೋವು, ಅನುಕಂಪದಿಂದ ದಾಖಲಿಸಿದ್ದಾರೆ. ಅವರು ಖುದ್ದಾಗಿ ಇತರೆ ವಿದ್ಯಾರ್ಥಿ ಸ್ನೇಹಿತರೊಂದಿಗೆ ಬಾಧಿತ ಸಿಖ್ ಸಮುದಾಯದ ಪರಿಹಾರ ಕಾರ್ಯಗಳಲ್ಲಿಯೂ ತೊಡಗಿಕೊಳ್ಳುತ್ತಾರೆ.

“ಸಾಲುಸಾಲಾಗಿದ್ದ ಸರದಾರ್ ಗಳ ಹೊಜೈರಿ ಮತ್ತಿತರ ಅಂಗಡಿಗಳ ಮಾಲೆಲ್ಲ ಸುಟ್ಟು ನಿಶಿನಿಶಿ ಹೊಗೆಯಾಡುತ್ತಿತ್ತು, ಇಡೀ ವಾತಾವರಣದಲ್ಲಿ ತಬ್ಬಲಿತನ ಮತ್ತು ವಿಷಾದ”
“ಈ ತನಕ ಬರೀ ಹೊಡಿಬಡಿ ಆಗಿದೆ, ಹೆಣಗಳೇನೂ ಬಿದ್ದಿಲ್ವಲ್ಲ ಎಂದಿದ್ದನಲ್ಲ ತಣ್ಣಗಿನ ದನಿಯಲ್ಲಿ ಆ ಪೋಲೀಸ್ ಅಧಿಕಾರಿ, ಮರುದಿನ ಬರೀ ಸಾವಿನದೇ ಸುದ್ದಿ. ಹೆಣಗಳ ರಾಶಿಯೇ ಬಿದ್ದಿತು”
“ದೆಹಲಿಯ ಕುರಿತು ಆಗಿನಿಂದ ಅಷ್ಟಿಷ್ಟು ಇದ್ದ ಭಾವನಾತ್ಮಕ ತಂತು ಅದೇಕೋ ಕಡಿದೇ ಹೋಯಿತು”.

ಸಿಖ್ಖರ ಅಸಹಾಯಕತೆ, ಆಕ್ರಂದನ, ಪೋಲಿಸರ ನಿಷ್ಕ್ರಿಯತೆ, ಸಿಖ್ಖರ ಸಹಾಯಕ್ಕೆ ಧಾವಿಸಿದ ಅನ್ಯಧರ್ಮೀಯರ ಕಳಕಳಿಯನ್ನು ಲೇಖಕರು ಇಂಥ ವಾಕ್ಯಗಳ ಮೂಲಕ ಇಡೀ ಸನ್ನಿವೇಶದ ದಾರುಣತೆ ಓದುಗನ ಎದೆಯೊಳಗೆ ಇಳಿಯುವಂತೆ ಬಣ್ಣಿಸುತ್ತಾರೆ.

ಈ ದೆಹಲಿ ಡೈರಿಯ ಮತ್ತೊಂದು ಅಧ್ಯಾಯ ಲೇಖಕರ ಸೆರೆವಾಸವನ್ನು ಕುರಿತದ್ದು: “ಸೆರೆಮನೆಯೊಳಗಿಂದ ಆಕಾಶ ನೋಡಿದ ದಿನಗಳ ನೆನೆಯುತ್ತ”- ದೆಹಲಿಯ ಕುಖ್ಯಾತ ತಿಹಾರ್ ಜೈಲಿನಲ್ಲಿ ಹನ್ನೊಂದು ದಿನಗಳ ವಾಸ್ತವ್ಯದ ವೃತ್ತಾಂತ. ನಮ್ಮ ಕಾಲದ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವೇನೋ ಎಂಬಂತಿದ್ದ ಕುಲಪತಿಯ ಘೇರಾವ್ ಕಾರ್ಯಕ್ರಮದಲ್ಲಿ ಲೇಖಕರೂ ಪಾಲ್ಗೊಳ್ಳುತ್ತಾರೆ. ಸುಮಾರು 350 ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಪೋಲೀಸರು ವಶಕ್ಕೆ ತೆಗೆದುಕೊಂಡು ಆ ವಿದ್ಯಾರ್ಥಿಗಳ ಗುಂಪಿನಲ್ಲಿ ಇವರೂ ಸೇರಿರುತ್ತಾರೆ. ಮಾಮೂಲಿನಂತೆ ಸಂಜೆ ಕಳಿಸುತ್ತಾರೆ ಎಂದು ಎಲ್ಲರೂ ಭಾವಿಸಿರುತ್ತಾರೆ. ಆದರೆ ಇವರೆಲ್ಲರನ್ನು “ಆರ್ಸನ್, ರಾಯ್ಟಿಂಗ್, ಲೂಟಿಂಗ್, ಅಟೆಂಪ್ಟ್ ಟು ಮರ್ಡರ್ ದಿ ವೈಸ್ ಚಾನ್ಸಲರ್, ಮೊಲೆಸ್ಟೆಶನ್” ಅಪಾದನೆಗಳಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ. ತುಂಬ ಚೇತೋಹಾರಿಯಾದ (ಆದರೆ ಲೇಖಕರು ಇದನ್ನು ಮತ್ತಷ್ಟು ತಾಳ್ಮೆಯಿಂದ ವಿಸ್ತರಿಸಬಹುದಿತ್ತು ಎಂಬ ಅಸಮಾಧಾನ ಕಾಡಿತು !) ಈ ಬರಹದಲ್ಲಿ ಎಲ್ಲಿಯೂ ಸ್ವಾನುಕಂಪದ ದನಿ ಇಲ್ಲ, ಬಣ್ಣ ಕಟ್ಟಿ ಹೇಳುವ ಆಡಂಬರವೂ ಇಲ್ಲ, ಯಾವುದೇ ನೈತಿಕ ತೀರ್ಮಾನಗಳಿಲ್ಲ. ಅದು ವಿದ್ಯಾರ್ಥಿ ಜೀವನದ ಮತ್ತೊಂದು ಸರಳ ಅಧ್ಯಾಯವಾಗಿತ್ತೇನೋ ಎಂಬಷ್ಟು ನಿರುಮ್ಮಳವಾಗಿ ವರ್ಣಿಸುತ್ತಾರೆ.

(ಚಂದ್ರಶೇಖರ್ ಆಲೂರು)

ತಂದೆ ಸ್ಥಿತಪ್ರಜ್ಞರಾದಾಗ ಮಮತಾಮಯಿಯಾದ ತಾಯಿ ಸ್ವಲ್ಪ ಮಟ್ಟಿನ ಲೌಕಿಕತೆಯನ್ನಾದರೂ ರೂಢಿಸಿಕೊಳ್ಳಬೇಕಲ್ಲವೇ? ಮಗ ದೆಹಲಿಗೆ ಹೊರಟಾಗ ಆಕೆ ಅವನು ಅಲ್ಲಿ ಪಡೆಯಬಹುದಾದ ಹಣವನ್ನು ತಾನೇ ಹೇಗೆ ಹೊಂದಿಸಿ ಕೊಡಬಲ್ಲೆ ಎಂದು ವಿವರಿಸುವ ಮಾತುಗಳು ಹೃದಯಸ್ಪರ್ಶಿಯಾಗಿವೆ.

“ಹೆಂಡ್ತಿ ಅಂತ ಇರೋಳೇ ನೀನೊಬ್ಳು..”, “ಕಾಶ್ಮೀರವೆಂಬ ಸ್ವರ್ಗವೂ ಕಾನೂನು ಸುವ್ಯವಸ್ಥೆಯ ನರಕವೂ”, “ನನ್ನ ಅಮರನಾಥ್ ಯಾತ್ರೆ”, “ತೀರ್ಥಕ್ಷೇತ್ರಗಳೆಂಬ ಅನುಭವಲೋಕಗಳು”… ಇವೆಲ್ಲ ಲೇಖಕರು ವಿವಿಧ ಕಾಲಘಟ್ಟದಲ್ಲಿ ಕೈಗೊಂಡ ಪ್ರವಾಸದ
ಕಥನಗಳು. “ಹಾಗೆ ನಾನು ಆಸ್ತಿಕನೇನೂ ಅಲ್ಲ. ಮಹಾದೈವಭೀರುವೂ ಅಲ್ಲ. ಭಕ್ತಿರಸದಲ್ಲಿ ಮಿಂದೆದ್ದಂಥ ಅನುಭವಗಳು ನನಗಾದದ್ದು ಇಲ್ಲವೇ ಇಲ್ಲ ಅನ್ನುವಷ್ಟು ವಿರಳ…” ಎಂಬ ಮಾತುಗಳು ಅವರು ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಕೈಗೊಂಡ ಅವರ ಪ್ರವಾಸದ ಕಥನಗಳ ಸಾರದಂತಿದೆ. ಅಂದರೆ ಜಮ್ಮು-ಕಾಶ್ಮೀರ್, ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿರುವ ವೈಷ್ಣೋದೇವಿ, ಅಮರನಾಥ, ಮಥುರಾ, ಋಷಿಕೇಶ, ಹರಿದ್ವಾರ್, ಪಂಜಾಬಿನ ಅಮೃತಸರ್… ಹೀಗೆ ಭಾರತದ ವಿವಿಧ ಧಾರ್ಮಿಕ ಕ್ಷೇತ್ರಗಳ ಭೇಟಿ, ಅಲ್ಲಿನ ಅನುಭವ ಇಲ್ಲಿನ ಪ್ರವಾಸಕಥನಗಳಾಗಿವೆ. ಅಮರನಾಥ್ ಯಾತ್ರೆಯ ಕುರಿತು ಬರೆಯುವಾಗ ಅಮರನಾಥ್ ಯಾತ್ರೆಯ ಪ್ರಾಚೀನತೆಯ ಬಗ್ಗೆ ಹೇಳುತ್ತಲೇ, ಶ್ರೀ ಅಮರನಾಥ್ ಕತೆಯನ್ನು ಪ್ರಸ್ತಾಪಿಸುತ್ತಲೇ “…ಇವು ನನಗೆ ಸ್ಪಿರಿಚುಅಲ್ ಸಂಗತಿಗಳು, ರಿಲಿಜಿಯಸ್ ಅಥವಾ ಥಿಯಾಲಾಜಿಕಲ್ ಸಂಗತಿಗಳಲ್ಲ. ಇವುಗಳಿಗೂ ಧರ್ಮಗಳಿಗೂ ಅರ್ಥಾತ್ ಸಂಬಂಧವಿಲ್ಲ ಎಂದು ಚೀರಾಡಿ ಹೇಳಬೇಕಾಗುತ್ತದೆ. ಹಾಗೆಯೇ ಅಮರನಾಥ್ ಅಥವಾ ಇನ್ನಾವುದೇ ಯಾತ್ರೆ ಕೂಡ ಧಾರ್ಮಿಕವಾಗದೇ ನಮ್ಮನ್ನು ಲೌಕಿಕದ ಅನುಭವಗಳೇ ಅತೀತದ ಕುರಿತ ಗ್ರಹಿಕೆಗೆ ಕೊಂಡೊಯ್ಯುವ ಆಧ್ಯಾತ್ಮಿಕ ಸಂಗತಿಯಾಗಬಹುದು ಎನ್ನಿಸುತ್ತದೆ…” ಎನ್ನುತ್ತಾರೆ, ಹೀಗಾಗಿಯೇ ಈ ಎಲ್ಲ ಯಾತ್ರೆಗಳನ್ನು ಕುರಿತ ಕಥನಗಳು ವಿಶೇಷ ಗ್ರಹಿಕೆಯಿಂದ ಕೂಡಿವೆ.

ಇನ್ನುಳಿದಂತೆ ಈ ಸಂಕಲನದಲ್ಲಿ ಸಮಕಾಲೀನ ಸಂದರ್ಭವನ್ನು ಚರ್ಚಿಸಿರುವ ಹಲವು ಲೇಖನಗಳಿವೆ. ಹಾಗೆಯೇ ನಿರಂಜನ, ಕಿ.ರಂ., ಏಣಗಿ ನಟರಾಜ್, ಸಾಕೇತ್ ರಾಜನ್, ಸಿ. ಬಸವಲಿಂಗಯ್ಯರನ್ನು ಕುರಿತ ವ್ಯಕ್ತಿಚಿತ್ರಗಳಿವೆ. ಸಮಕಾಲೀನ ಸಂದರ್ಭಕ್ಕೆ ಪ್ರತಿಕ್ರಿಯಿಸುವ ರೂಪದಲ್ಲಿರುವ ಬರಹಗಳು ಮೊನಚಾಗಿವೆ, ಲವಲವಿಕೆಯಿಂದ ಕೂಡಿವೆ. ಸಾಹಿತ್ಯ ಸಮ್ಮೇಳನಗಳು, ಚುನಾವಣೆ, ಡಬ್ಬಿಂಗ್, ಫೇಸ್ ಬುಕ್, ಹೊಸವರ್ಷಾಚರಣೆ, ನಂಬಿಕೆ-ಮೂಢನಂಬಿಕೆ, ವಾಘಾ ಬಾರ್ಡರ್… ಹೀಗೆ ಹಲವು ವಸ್ತುಗಳ ವೈವಿಧ್ಯವಿದೆ.

ಒಟ್ಟಾರೆಯಾಗಿ “ಗದ್ಯಂ ಹೃದ್ಯಂ…” ನಲ್ಲಿ ಆತ್ಮಕತೆ, ಪ್ರವಾಸಕಥನ, ಪ್ರಬಂಧ, ವ್ಯಕ್ತಿಚಿತ್ರ, ಸಮಕಾಲೀನ ಬದುಕಿಗೆ ಸ್ಪಂದಿಸಿದ ಲೇಖನಗಳು.., ಎಲ್ಲವೂ ಇವೆ. ಇಂಥ ಒಂದು ಸಮೃದ್ಧ ಓದಿಗೆ ಅವಕಾಶ ಮಾಡಿಕೊಟ್ಟ ಗೆಳೆಯ ಅಶೋಕ ಶೆಟ್ಟರ್ ರಿಗೆ ಅಭಿನಂದಿಸುತ್ತ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.

ಕೆಂಡಸಂಪಿಗೆಯಲ್ಲಿ ಈ ಹಿಂದೆ ಪ್ರಕಟವಾಗಿದ್ದ ಈ ಸಂಕಲನದ ಒಂದು ಪ್ರಬಂಧ

ಮಧುಮಾಸ ಚಂದ್ರಮಾ, ನೈದಿಲೆಗೆ ಸಂಭ್ರಮಾ..

ಒಮ್ಮೊಮ್ಮೆ ನಾವು ಅತೀ ವೈಚಾರಿಕತೆಗೆ ಬೀಳುತ್ತೇವೆ, ನಮ್ಮ ಹಬ್ಬಗಳ ಸಂಕೇತಗಳಲ್ಲಿ ಕಾರ್ಯಕಾರಣ ಸಂಬಂಧ ಹುಡುಕತೊಡಗುತ್ತೇವೆ, ಅವುಗಳ ಆಚರಣೆಗಳ ವಿವರಗಳನ್ನು ಹಿಂಜಿ ಹಿಸುಕಿ ಅವುಗಳಲ್ಲಿ ನಮ್ಮ ಶ್ರೇಣೀಕೃತ ಸಮಾಜದ ವೈಕಲ್ಯಗಳನ್ನು ಹುಡುಕಿ ನಿಟ್ಟುಸಿರು ಬಿಡುತ್ತೇವೆ. ಹಬ್ಬದ ಆನಂದಕ್ಕೆ ಎರವಾಗುತ್ತೇವೆ, ಆದರೆ ಇಂಥ ವ್ಯಾಪಗಳಿಲ್ಲದ ಬಹುಪಾಲು ಜನ ಅವುಗಳನ್ನು ಆಚರಿಸುತ್ತಿರುತ್ತಾರೆ. ಸಾಮಾನ್ಯರು ಕೂಡ ಹಬ್ಬ-ಹುಣ್ಣಿಮೆಗಳನ್ನು ತಮ್ಮದೇ ಮಿತಿಗಳಲ್ಲಿ ಆಚರಿಸಿ ಸಂಭ್ರಮಿಸುತ್ತಿರುತ್ತಾರೆ. ಹಲವಾರು ವರ್ಷಗಳ ಹಿಂದೆ ರೈತರ, ಕೂಲಿಕಾರರ, ಗ್ರಾಮೀಣ ಮಹಿಳೆಯರ, ನಗರದ ಬಡಜನರ ಕಷ್ಟಕಾರ್ಪಣ್ಯಗಳ ಕುರಿತು ಸದಾ ಯೋಚಿಸುತ್ತ, ಆ ಕುರಿತು ವಿಷಾದ ಪಟ್ಟುಕೊಳ್ಳುತ್ತಿದ್ದ ಕಾಮ್ರೇಡ್ ಒಬ್ಬರು ( ಈಗ ಅವರು ಕಮ್ಯುನಿಸ್ಟ್ ಪಕ್ಷವೊಂದರ ರಾಜ್ಯ ಮಟ್ಟದ ನಾಯಕರು) ಒಂದು ದಿನ ನನಗೆ “ಬಡವರು, ರೈತರು, ತ್ರಾಸಿನ್ಯಾಗ ಅದಾರ, ತೊಂದ್ರಿ ಪಡ್ತಾರ, ಶೋಷಣೆಗೆ ಒಳಗಾಗ್ಯಾರ ಹಂಗ ಹಿಂಗ ಅಂತ ನಾವು ತೆಲಿ ಕೆಡಿಸಿಕೊಂಡ್ ಕುಂತಿರ್ತೀವಲ್ಲಾ, ಹುಚ್ಚರ ನಾಂವ, ಆ್ಯಕ್ಚುಅಲಿ ನೋಡಿದರ ಅವ್ರು ಜಾತ್ರಿ, ನಿಬ್ಬಣ, ಹಬ್ಬಾ ಹುಣಿಮಿ, ಸಂತೀಪ್ಯಾಟಿ ಅಂತ ಕುಲುಕುಲು ನಕ್ಕೊಂತ ಚೈನಿ ಹೊಡೀತಿರತಾರ” ಎಂದಿದ್ದರು ನಗುತ್ತ.

ನಾನು ಹಬ್ಬಗಳ ಕುರಿತು ಪುರಾಣಕತೆಗಳ ಕೆಸರುಮಡುವಿನಲ್ಲಿ ಬೀಳದೆ ಸುಮ್ಮನೇ ಹಬ್ಬಗಳ ಭಾಗವಾಗುತ್ತ ಬಂದಿದ್ದೇನೆ. ಅದು ರೂಢಿಸಿಕೊಂಡದ್ದಲ್ಲ, ಬಾಲ್ಯದಿಂದಲೂ ಬಂದು ಈಗಲೂ ಹಾಗೇ ಉಳಿದುಕೊಂಡದ್ದು. ಹಬ್ಬಗಳ ಆಚರಣೆಗಳ ಅರ್ಥವಿವರಣೆಯನ್ನು ಯಾರಾದರೂ ನೀಡುವ ಅಥವಾ ಯಾರನ್ನಾದರೂ ಹಾಗೆ ನೀಡುವಂತೆ ಕೇಳುವ ಸಂಸ್ಕೃತಿ ನಮ್ಮದಾಗಿರಲಿಲ್ಲ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಎಂಬ ಪಟ್ಟಣದಲ್ಲಿದ್ದ ನಮ್ಮ ಲಿಂಗಾಯತ ಶೆಟ್ಟರ ಕುಟುಂಬದಲ್ಲಿ ತೊಂದರೆ ತಾಪತ್ರಯಗಳ, ಆಡಚಣಿ ಆಪತ್ತುಗಳ ನಡುವೆ ಹಬ್ಬಗಳು ಬರುತ್ತಿದ್ದವು, ಅವುಗಳನ್ನು ಆಚರಿಸುವ ಒಂದು ಸಿದ್ಧಕ್ರಮಕ್ಕನುಗುಣವಾಗಿ ನಾವು ಅವುಗಳನ್ನು ಆಚರಿಸುತ್ತಿದ್ದೆವು ಮತ್ತು ಅವು ಮುಗಿದು ಹೋಗುತ್ತಿದ್ದವು. ಗಣೇಶ ಚತುರ್ಥಿಯಲ್ಲಿ ಮಾವಿನ ಹಣ್ಣಿನ ಸೀಕರಣೆ, ಹೋಳಿಹುಣಿಮೆಯಲ್ಲಿ ಹೂರಣಹೋಳಿಗೆ, ದೀಪಾವಳಿಯಲ್ಲಿ ಕರ್ಚೀಕಾಯಿ, ಹುರೆಕ್ಕಿ ಹೋಳಿಗಿ, ಯುಗಾದಿ-ದಸರೆಗಳಲ್ಲಿ ಗೋಧಿ ಹುಗ್ಗಿ ಅಥವಾ ಶಾವಿಗಿ ಪಾಯಸ, ಅಮಾವಾಸ್ಯೆಗಳಲ್ಲಿ ಹೂರಣಗಡಬು ಹೀಗೆ ಏನೋ ಒಂದು ಸಿಹಿ ಅಡುಗೆ ಇರುತ್ತಿತ್ತು. ಪೂಜೆ ಸ್ವಲ್ಪ ವಿಶೇಷವಾಗಿರುತ್ತಿತ್ತು. ಹೂವು ಗಂಧ, ತಳಿರು ತೋರಣಗಳ ಇರುವು ಆಹ್ಲಾದವನ್ನುಂಟು ಮಾಡುತ್ತಿತ್ತು.

ಆ ಎಲ್ಲ ಹಬ್ಬಗಳ ಪೈಕಿ ನನಗೆ ಅತ್ಯಂತ ಮೋಹಕವೆನಿಸುತ್ತಿದ್ದುದು ಹೋಳಿ ಹಬ್ಬ. ನನಗೇನು ನಮ್ಮ ಇಡೀ ಟೋಳಿಗೆ ಹೋಳಿ ಹಬ್ಬದ ಸಂಭ್ರಮ ಕಾಮದಹನಕ್ಕೂ ಹದಿನೈದಿಪ್ಪತ್ತು ದಿನ ಮುಂಚೆಯೇ ಆರಂಭವಾಗುತ್ತಿತ್ತು. ಯಾರ ಯಾರ ಮನೆಯ ಆಸು ಪಾಸಿನಲ್ಲಿ, ಕಂಪೌಂಡ್ ಒಳಗಡೆ ಕಟ್ಟಿಗೆಯ ಸಂಗ್ರಹ ಇದೆ ಎಂಬುದನ್ನು ಹಗಲು ಹೊತ್ತು ಸ್ಟಡಿ ಮಾಡುತ್ತಿದ್ದೆವು. ಎಳ್ಳಷ್ಟೂ ಸದ್ದು ಗದ್ದಲವಾಗದ ಹಾಗೆ, ಯಾರು ಎಲ್ಲಿಂದ ರಾತ್ರಿಯ ಯಾವ ಪ್ರಹರದಲ್ಲಿ ಆ ಜಾಗ ಪ್ರವೇಶಿಸಿ ಹೊರಗಿರುವ ಇನ್ನ್ಯಾರ ಕೈಗೆ ಎಷ್ಟು ಪ್ರಮಾಣದಲ್ಲಿ ಅದನ್ನು ವರ್ಗಾಯಿಸಬೇಕು, ಯಾರು ಅದನ್ನು ಹೊತ್ತೊಯ್ಯಬೇಕು, ಮನೆಯ ಯಾರಾದರೂ ಎಚ್ಚತ್ತರೆ ಪ್ಲ್ಯಾನ್ ಬಿ ಹೇಗಿರಬೇಕು ಎಂಬುದರ ರೂಪುರೇಷೆಯೆಲ್ಲ ಇದ್ದುದರಲ್ಲಿ ಸ್ವಲ್ಪ ಪ್ರೌಢ ವಯಸ್ಕರಾದ ಒಬ್ಬಿಬ್ಬರ ಮಾರ್ಗದರ್ಶನದಲ್ಲಿ ಸಿದ್ಧವಾಗಿ ಹೋಳಿಹಬ್ಬದ ಪ್ರಮುಖ ಚಟುವಟಿಕೆಯಾದ ಕಟ್ಟಿಗೆ, ಕುಳ್ಳುಗಳ ಕಳ್ಳತನಕ್ಕೆ ನಾವು ಶ್ರದ್ಧೆಯಿಂದಲೂ ಉತ್ಸಾಹದಿಂದಲೂ ತೊಡಗುತ್ತಿದ್ದೆವು. ಸುಮಾರು ಇಪ್ಪತ್ತು ಇಪ್ಪತ್ತೈದು ಜನರ ಬಾಲ ಸೈನ್ಯ ಅದು. ಕದ್ದು ತಂದ ಕಟ್ಟಿಗೆಗಳನ್ನು ಒಂದು ಹೊಂಡದಂತಿದ್ದ ತಗ್ಗಿನಲ್ಲಿ ಒಗೆಯುತ್ತಿದ್ದೆವು. ಕಾಮದಹನದ ದಿನ ಬಂದಾಗ ಅವು ಒಂದೇನು ಮೂರು ಕಾಮಣ್ಣರನ್ನು ದಹಿಸುವಷ್ಟು ಪ್ರಮಾಣದಲ್ಲಿ ಸಂಗ್ರಹವಾಗಿರುತ್ತಿದ್ದವು.

ಆಮೇಲೆ ಹಣ ಸಂಗ್ರಹ. ಮನೆಮನೆಗೆ ಹೋಗಿ ಮನೆಯವರ ತಲೆ ಚಿಟ್ಟು ಹಿಡಿಯುವಂತೆ ಎಲ್ಲರೂ ಲಬೋ ಲಬೋ ಬಾಯಿಬಡಿದುಕೊಂಡು ಹೊಯ್ಕೊಳ್ಳುತ್ತ ಢಂಕಣಕ ಢಂಕಣಕ ಹಲಿಗಿ ಬಾರಿಸಿ ಚೌಕಾಸಿ ಮಾಡಿ ಕೊನೆಗೆ ಅವರಿಂದ ಹಣ ಪೀಕಿಸಿ ಮುಂದಿನ ಮನೆಗೆ ಹೋಗಿ ಮತ್ತೆ ಲಬೋಲಬೋ. ಹಾಗೆ ಸಂಗ್ರಹವಾದ ಹಣದ ಲೆಕ್ಕ ಒಬ್ಬ ಇಡುತ್ತಿದ್ದ, ಸಾಮಾನು ಸರಂಜಾಮು ಮತ್ತೊಬ್ಬ ತರುತ್ತಿದ್ದ, ಕಾಮದಹನದ ರಾತ್ರಿ ಇಡೀ ದಿನ ಎಚ್ಚರ ಇರಬೇಕಲ್ಲ, ಹೀಗಾಗಿ ರಾತ್ರಿಯೆಲ್ಲ ತಿನ್ನಲು ಬೇಕಾದ ಚುರುಮುರಿ, ಖಾರಾ ಚೂಡಾ, ಕಾಮಣ್ಣನಿಗೆ ಪೂಜೆ ಮಾಡುವಾಗ ಒಡೆದು ನಂತರ ಅದರ ಕೊಬ್ರಿ ಹೋಳುಗಳನ್ನು ಚುರುಮುರಿಯೊದಿಗೆ ಸೇರಿಸಿ ದೇಣಿಗೆ ಕೊಟ್ಟ ಮನೆಗಳಿಗೆ ಪ್ರಸಾದವಾಗಿ ಕೊಡಲು ತೆಂಗಿನಕಾಯಿಗಳು, ಬೆಲ್ಲ, ಚಾಪುಡಿ, ಹಾಲು, ಬೀಡಿ-ಸಿಗರೇಟು, ಎಲಡಿಕೆ ತಂಬಾಕು ಒಂದೇ ಎರಡೇ… ಸಂಭ್ರಮವೋ ಸಂಭ್ರಮ. ಆಮೇಲೆ ಫಾಲ್ಗುಣ ಶುಕ್ಲ ಹುಣ್ಣಿಮೆಯ ಹಿಂದಿನ ದಿನ ರಾತ್ರಿ ಬೆಳದಿಂಗಳಲ್ಲಿ ಮೀಯುತ್ತ ಉದ್ದನೆಯ ಕೋಲಿಗೆ ಒಣಹುಲ್ಲು ಚಿಂದಿ ಬಟ್ಟೆ ಇತ್ಯಾದಿ ಸ್ಟಫ್ ಮಾಡಿ ಹೊಲಗಳಲ್ಲಿ ಇರುವ ಬೆದರು ಬೊಬೆಯಂಥದೊಂದು ಶರೀರ ಸೃಷ್ಟಿಸಿ ಅದಕ್ಕೊಂದು ಪ್ಯಾಂಟ್ ಶರ್ಟು ತೊಡಿಸಿ ಒಂದು ಮುಖವನ್ನೂ ಮಾಡಿ ತಲೆಗೊಂದು ಮುಂಡಾಸು ಅಥವಾ ಟೋಪಿ ಹಾಕಿ, ಕಣ್ಣು ಮೂಗು ಮೀಸೆ ಬರೆದು ಎತ್ತಿ ಗೋಡೆಗಾನಿಸಿ ಇಟ್ಟರೆ…, ಅದೋ, ನಮ್ಮ ಕಾಮಣ್ಣ ರೆಡಿ.

ಈ ಸಲ ಹೋಳಿ ಹುಣ್ಣಿಮೆ ನನಗೆ ವಿಶಿಷ್ಟವಾಗಿತ್ತು. ಈ ವರ್ಷ ನನ್ನ ಹುಟ್ಟಿದ ದಿನವೂ ಹೋಳಿಹುಣ್ಣಿಮೆಯ ಓಕುಳಿಯ ದಿನವೂ ಮೇಳೈಸಿದ್ದವು, “ಚುಮು ಚುಮು ಬೆಳಕಿನ್ಯಾಗ ಒಂದೊಂದs ಕಾಮಣ್ಣ ಮೆರಕೊಂತ ಮನಿಗಿ ಬರಾಕತ್ತಿದ್ವು, ಆಗ ನೀ ಹುಟ್ಟಿದಿ” ಎಂದು ನಮ್ಮವ್ವ ತನ್ನ ತವರೂರು ಸತ್ತಿಗೇರಿಯಲ್ಲಿ ತಮ್ಮ ತಾಯಿಯ ಮನೆಯಲ್ಲಿ ನಾನು ಹುಟ್ಟಿದ ಪ್ರಸಂಗವನ್ನು ನನಗೆ ಆಗಾಗ ಹೇಳುತ್ತಿದ್ದಳು. ಒಮ್ಮೊಮ್ಮೆ ನನ್ನ ಕಿಡಿಗೇಡಿತನದಿಂದ ರೋಸಿ ಹೋದಾಗ “ಕಾಮಣ್ಣ ಮೆರಿಯೂವಾಗ ಹುಟ್ಟಿದಂವ ನೀ, ಅದಕ್ಕs ಇಷ್ಟ ಉರೀತಿ” ಎಂದು ಬೈಯ್ಯುತ್ತಲೂ ಇದ್ದಳು. ಧಾರವಾಡದಲ್ಲಿ ಸಾರ್ವಜನಿಕ ಗಣಪತಿ ಕೂಡ್ರಿಸುವಂತೆ ಕಾಮಣ್ಣರನ್ನು ಓಣಿಗಳಲ್ಲಿ ಸಾದಾಸೀದಾ ಮಂಟಪಗಳಲ್ಲಿ ಕೂಡ್ರಿಸುತ್ತಾರೆ. ಆಮೇಲೆ ದಹಿಸುತ್ತಾರೆ. ನಮ್ಮಲ್ಲಿ ಹಾಗಿರಲಿಲ್ಲ. ಹುಣ್ಣಿಮೆಯ ದಿನ ಬೆಳಿಗ್ಗೆ ಕಾಮಣ್ಣನ ಮೆರವಣಿಗೆ ಶುರು. ಅದು ಮತ್ತೊಂದು ರೌಂಡ್ ಹಣ ಪೀಕಿಸುವ ಕಾರ್ಯಕ್ರಮ. ಊರಿನ ಹಲವಾರು ಓಣಿ- ಬೀದಿಗಳ ಕಾಮಣ್ಣಗಳು ಒಬ್ಬೊಬ್ಬನ ಹೆಗಲಿಗಾನಿ ಅವನ ಹಿಂದೆ ಹೊಯ್ಕೊ, ಬಡಕೋ ಮಾಡುವ ಹತ್ತಾರು ಇತರರ ಪಟಾಲಂ ಗಳೊಂದಿಗೆ ಊರಿನ ಇನ್ನಿತರ ಪ್ರದೇಶದ ಮನೆಗಳಿಗೆ ಹೋಗುವದು, ಕಾಸು ಕೇಳುವದು ಇದು ಮಧ್ಯಾಹ್ನದವರೆಗೆ ನಡೆಯುತ್ತಿತ್ತು. ಕೊಡುವವರು ತಾನೇ ಎಷ್ಟಂತ ಕೊಡುತ್ತಾರೆ? ಎಷ್ಟುಕಾಮಣ್ಣಗಳಿಗೆ? ಒಂದಾಣೆ ಎರಡಾಣೆ ಕೊಟ್ಟು ಸಾಗಹಾಕುತ್ತಿದ್ದರು. ಶಪಿಸುತ್ತಲೂ ಇದ್ದರು. ಹೆಂಗಳೆಯರು “ಬೇಕ್ಕಾದ್ದಷ್ಟ್ ಹೊಯ್ಕೊರ್ರಿ, ಇಷ್ಟs, ಇದರ ಮ್ಯಾಲೆ ಒಂದ್ ನಯಾಪೈಸಾನೂ ಕೊಡೂದುಲ್ಲ” ಎಂದು ಕೈ ಜಾಡಿಸಿ ನಮ್ಮತ್ತ ಬೆನ್ನು ತಿರುವಿ ಒಳಗೆ ಹೋಗುತ್ತಿದ್ದರು. ನಾವು ಸ್ವಲ್ಪ ಹೊತ್ತು ಹೊಯ್ಕೊಂಡು ಅವರ ನಿರ್ಧಾರ ಅಚಲ ಅಂತ ಮನವರಿಕೆಯಾದ ಮೇಲೆ ಮುಂದಿನ ಮನೆಗೆ ಹೋಗುತ್ತಿದ್ದೆವು.

ಎಳ್ಳಷ್ಟೂ ಸದ್ದು ಗದ್ದಲವಾಗದ ಹಾಗೆ, ಯಾರು ಎಲ್ಲಿಂದ ರಾತ್ರಿಯ ಯಾವ ಪ್ರಹರದಲ್ಲಿ ಆ ಜಾಗ ಪ್ರವೇಶಿಸಿ ಹೊರಗಿರುವ ಇನ್ನ್ಯಾರ ಕೈಗೆ ಎಷ್ಟು ಪ್ರಮಾಣದಲ್ಲಿ ಅದನ್ನು ವರ್ಗಾಯಿಸಬೇಕು, ಯಾರು ಅದನ್ನು ಹೊತ್ತೊಯ್ಯಬೇಕು, ಮನೆಯ ಯಾರಾದರೂ ಎಚ್ಚತ್ತರೆ ಪ್ಲ್ಯಾನ್ ಬಿ ಹೇಗಿರಬೇಕು ಎಂಬುದರ ರೂಪುರೇಷೆಯೆಲ್ಲ ಇದ್ದುದರಲ್ಲಿ ಸ್ವಲ್ಪ ಪ್ರೌಢ ವಯಸ್ಕರಾದ ಒಬ್ಬಿಬ್ಬರ ಮಾರ್ಗದರ್ಶನದಲ್ಲಿ ಸಿದ್ಧವಾಗಿ ಹೋಳಿಹಬ್ಬದ ಪ್ರಮುಖ ಚಟುವಟಿಕೆಯಾದ ಕಟ್ಟಿಗೆ, ಕುಳ್ಳುಗಳ ಕಳ್ಳತನಕ್ಕೆ ನಾವು ಶ್ರದ್ಧೆಯಿಂದಲೂ ಉತ್ಸಾಹದಿಂದಲೂ ತೊಡಗುತ್ತಿದ್ದೆವು.

ರಾತ್ರಿಯೆಲ್ಲ ಎಚ್ಚರವಿದ್ದು ಬೆಳಗು ಹರಿಯುವ ಹೊತ್ತಿಗೆ ಕಾಮಣ್ಣನ ಸುತ್ತ ಕುಳ್ಳು ಕಟ್ಟಿಗೆ ಸೊಪ್ಪುಸದೆ ಎಲ್ಲ ಒಟ್ಟಿ, ಬೆಂಕಿ ಹಚ್ಚಿ ಹೊಯ್ಕೊಳ್ಳುತ್ತ, ಕಿಡಿಗಳನ್ನು, ಹಾರಿಸಿ ಉದ್ದೋಉದ್ದ ಏಳುತ್ತಿದ್ದ ಬೆಂಕಿಯ ಕೆನ್ನಾಲಗೆಗಳ ಮೋಹಕ ಬೆಳಕಿನಲ್ಲಿ ಒಬ್ಬರೊಬ್ಬರು ನೋಡುತ್ತ ನಗುತ್ತ ಬೆಳಗಾಗುತ್ತಲೇ ಮನೆಗೆ ವಾಪಸಾಗಿ ಬಕೀಟಿನಲ್ಲಿ ಬಣ್ಣ ಕಲಸಿ ಬಾಟಲಿಗಳಲ್ಲಿ ತುಂಬಿಕೊಂಡು, ಬಣ್ಣದ ಪುಡಿಯ ಪಾಕೀಟುಗಳನ್ನು ಕಿಸೆಯಲ್ಲಿಟ್ಟುಕೊಂಡು ಓಕುಳಿಗೆ ಹೋಗುವದು ಇನ್ನೊಂದು ಮಜಲು. ಒಬ್ಬರೊಬ್ಬರ ಮುಖಕ್ಕೆ ವಿವಿಧ ಬಗೆಯ ಬಣ್ಣ, ಮಸಿ, ಇತ್ಯಾದಿ ತಿಕ್ಕಿ ಬಟ್ಟೆಗಳೆಲ್ಲ ತೊಯ್ದು ತಪ್ಪಡಿಯಾಗಿ ಮತ್ತೆ ಬಣ್ಣ ಕಲಸಿಕೊಳ್ಳಲು ಮನೆಯ ಬಳಿ ಬಂದರೆ ಸ್ವತ: ನಮ್ಮ ತಾಯಿ, ಅಕ್ಕ ತಂಗಿಯರು ಗುರುತು ಹಿಡಿಯಲಾರದೇ ಹಿಡಿದು “ಐ ಇಂವ ಅಶೋಕ, ಐ ಇಂವ ರುದ್ರಪ್ಪ, ಐ ಇಂವ ಬಾಲ್ಯಾ” ಎಂದು ಕೈ ಮಾಡಿ ತೋರಿಸುವದು, ಕೆಕ್ಯಕ್ಕಾಡಿಸಿ ನಗುವದು ಮಾಡುತ್ತ ನಮ್ಮ ಚೆಹರಾ ಪಟ್ಟಿ ಹಾಗಾದರೆ ಎಷ್ಟು ಬದಲಾಗಿರಬಹುದೆಂದು ನಮಗೇ ಗಾಬರಿಯಾಗಿ ಕನ್ನಡಿಯಲ್ಲಿ ನೋಡಿದರೆ ಅವು ನಿಜಕ್ಕೂ ಕರಾಬುಗೆಟ್ಟು ಹೋಗಿ, ಬರೀ ಕಣ್ಣುಗಳು ಮತ್ತು ಬಾಯಿ ತೆರೆದರೆ ಹಲ್ಲುಗಳ ಸಾಲಿನ ಬಿಳುಪು ಮಾತ್ರ ಕಾಣುವಂತೆ ಮಾರ್ಪಟ್ಟು ಇನ್ನುಳಿದೆಲ್ಲವು ಬಣ್ಣದಲ್ಲಿ ಮುಳುಗಿ ಹೋಗಿ ನೀಲಿ ಹಸಿರು ಕೇಸರಿಗಳೆಲ್ಲ ಮೇಳೈಸಿದ ದಟ್ಟ ವಿಲಕ್ಷಣ ಬಣ್ಣವೊಂದನ್ನು ನಮ್ಮ ಮುಖ ಕಸಿ ಮಾಡಿಕೊಂಡಂತಿರುತ್ತಿತ್ತು. ಹೋಳಿ ಹುಣ್ಣಿಮೆ ಮುಗಿದೊಡನೆ ನಮಗೆ ಎಲ್ಲ ಖಾಲಿ ಖಾಲಿ ಎನ್ನಿಸುತ್ತಿತ್ತು. ಆ ಅಪಾರ ಕ್ರಿಯಾಶೀಲತೆಯ ಪರ್ವ ಮುಗಿದ ಸಂಕಟ ಒಂದೆಡೆಯಾದರೆ ಶಾಲೆ ಎಂಬ ಪೀಡೆಯೂ ವಾರ್ಷಿಕ ಪರೀಕ್ಷೆ ಎಂಬ ದೆವ್ವವೂ ಬಾಯ್ದೆರೆದು ನಿಂತಿರುತ್ತಿದ್ದವು.

ಧಾರವಾಡಕ್ಕೆ ಬಂದ ಮೇಲೆ ಬಣ್ಣದಾಟದ ನನ್ನ ಉತ್ಸಾಹ ಕುಂದಿತು. ದೆಹಲಿಯಲ್ಲಿದ್ದ ಐದು ವರ್ಷಗಳಲ್ಲಿ ಬಿಂದಾಸ್ ಹೋಳಿ ಆಡಿದೆನು. ಮತ್ತೆ ಅಧ್ಯಾಪಕನಾಗಿ ಧಾರವಾಡಕ್ಕೆ ಬಂದ ಮೇಲೆ ಕಳೆದ ಇಪ್ಪತ್ತಾರು ವರ್ಷಗಳಿಂದ ಬಣ್ಣದಾಟ ಸಾಂಕೇತಿಕ ಮಾತ್ರ. ಯೂನಿವರ್ಸಿಟಿ ಕ್ವಾರ್ಟರ್ಸ್ ನಲ್ಲಿದ್ದಾಗ ಗೆಸ್ಟ್ ಹೌಸ್ ನ ಸಿಬ್ಬಂದಿ ಅಥವಾ ಹಾಸ್ಟೆಲ್ ನಲ್ಲಿರುತ್ತಿದ್ದ ವಿದ್ಯಾರ್ಥಿಗಳು ಬಣ್ಣ ಹಾಕಿ ಹೋಗುತ್ತಿದ್ದರು. ಅಲ್ಲಿಂದ ಹೊರಬಂದ ಮೇಲೆ ನಾನು ವಾಸಿಸುವ ಮೊಹಲ್ಲಾದ ಹಾಗೂ ನೆರೆಹೊರೆಯವರು ಬಂದು ಬಣ್ಣ ಹಾಕುತ್ತಾರೆ, ಅವರೊಂದಿಗೆ ಸ್ವಲ್ಪ ಹೊತ್ತು ಸಂಚರಿಸಿ ಮರಳಿ ಬರುತ್ತೇನೆ.

ಆದರೆ ಹೋಳಿಯಾಟದ ವರದಿಗಳನ್ನು, ಚಿತ್ರಗಳನ್ನು ಪತ್ರಿಕೆಯಲ್ಲಿ ಟಿವಿಯಲ್ಲಿ ಮುದದಿಂದ ಆಸ್ವಾದಿಸುತ್ತೇನೆ. ಹೊಸ ಚಿಗುರು, ಕೋಗಿಲೆಗಳ ಕೂಗು, ಋತುಗಳ ರಾಜ ವಸಂತನ ಆಗಮನ, ಬೇಸಿಗೆಯ ಧಗೆ, ಬೆಳದಿಂಗಳು, ಬಣ್ಣ…. ಹೋಳಿ ನನಗೆ ಯಾವಾಗಲೂ ಇಷ್ಟ. ಪಾಠ ಮಾಡುವಾಗ, ಶಿವನ ವಿವಿಧ ರೂಪಗಳನ್ನು, ಆಯಾ ರೂಪಗಳಲ್ಲಿ ಶಿವನನ್ನು ಚಿತ್ರಿಸುವ ಕುರಿತ ಆಗಮ, ಪುರಾಣಗಳ ಶಿಲ್ಪಲಕ್ಷಣಗಳ ಕುರಿತ ಪ್ರಸ್ತಾಪಗಳನ್ನು ವಿದ್ಯಾರ್ಥಿಗಳಿಗೆ ವಿವರಿಸುವ ಸಂದರ್ಭಗಳಲ್ಲಿ ತ್ರಿಪುರಾಂತಕ, ಅಂಧಕಾಸುರಮರ್ದನರ ಜೊತೆ ಮದನಾಂತಕನೂ ಬರುತ್ತಾನೆ. ಕಬ್ಬಿನ ಜಲ್ಲೆಯ ಬಿಲ್ಲು, ಹೂವಿನ ಬಾಣ ಹೊತ್ತು ಬರುವ ಕಾಮದೇವನ ಕಲ್ಪನೆಯಲ್ಲಿರುವ ಕಾಠಿಣ್ಯ ಮತ್ತು ಮೃದುತ್ವದ ಸಮಾಗಮವೇ ನನಗೆ ತುಂಬ ಇಷ್ಟವಾಗುತ್ತದೆ. ರತಿದೇವಿ ಕಾಮದೇವರ ಚಿತ್ರಣದಲ್ಲಿ ಪಾರಂಪರಿಕ ಶೈಲಿಯ ವರ್ಣಚಿತ್ರ ಕಲಾವಿದರು ಮೈಯ್ಯೆಲ್ಲ ಕಣ್ಣಾಗಿ, ಕಣ್ನೋಟವೆಲ್ಲ ಕಾಮವಾಗಿ ತೊಡಗಿಕೊಂಡಂಥ ತನ್ಮಯತೆ ಕೆಲಚಿತ್ರಗಳಲ್ಲಿ ಕಂಡುಬರುತ್ತದೆ. ಧರ್ಮ, ಅರ್ಥ, ಮೋಕ್ಷಗಳೊಂದಿಗೆ ಪುರುಷಾರ್ಥಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡ ಕಾಮನನ್ನು ಶಿವ ಯಾಕೆ ಸುಟ್ಟ ಎಂಬುದು, ಕತೆಗಳನ್ನೋದಿಯೂ, ನನಗೆ ಅರ್ಥವಾಗಿಲ್ಲ. ಕಾಮನೆಗಳು ಪ್ರೇಮದ ನವಿರನ್ನು ತೊರೆದು ಕಾಮಮಾತ್ರವಾಗಿ ಮೃಗೀಯಗೊಳ್ಳುವ ಸಾಧ್ಯತೆಯನ್ನು ನಿರುತ್ತೇಜಕಗೊಳಿಸಲೆಂದೆ? ಆದರೆ ಶೃಂಗಾರಭಾವ ರತಿಭಾವವಾಗದೇ ಹೋದಾಗ ಇರುವ ಸೊಗಸೇನು? ಶರಬಾಣ ಬಿಟ್ಟು ಉದ್ಧಟ ಕಾಮನು ಶಿವನ ತಪವ ಭಂಗಗೊಳಿಸಿದನೆಂದೇ ಇಟ್ಟುಕೊಳ್ಳೋಣ. ಶಿವನು ತ್ರಿಲೋಚನನಾಗಿ ಮನ್ಮಥನನ್ನು ಸುಟ್ಟೇ ಬಿಡುವದೇ? ಹಾಗಂತ ಕಾಮದಿಂದ ಮುಕ್ತನಾದನೇ? ಪಾರ್ವತಿಯೊಂದಿಗೆ ಮದುವೆಯೂ ಆಯಿತು, ಮಕ್ಕಳೂ ಆದವು. ಏನು ಕೇಡಾಯಿತು? ಲೋಕ ಕಲ್ಯಾಣಕ್ಕೆ ಅದರಿಂದೇನು ಕಂಟಕವಾಯಿತು? ಹಾಗೇ ಕೃಷ್ಣನ ಹೆಂಡತಿ ರುಕ್ಮಿಣಿ ಸಂಜಾತ ಪ್ರದ್ಯುಮ್ನನು ರತಿಯನ್ನು ಬಂಧಿಸಿಟ್ಟ ಶಂಭ ರಾಕ್ಷಸನನ್ನು ಕೊಂದು ಅವಳೊಂದಿಗೆ ದ್ವಾರಕೆಗೆ ಮರಳಿದ್ದು ಅಂದು ಅಲ್ಲಿ ವಸಂತೋತ್ಸವ ಇದ್ದದ್ದು.., ಅದು ಬೇರೆಯದೇ ಕತೆ.

ಕತೆಗಳಿಗೇನು, ಸಾಕಷ್ಟಿವೆ. ಪ್ರಶ್ನೆಗಳನ್ನೂ ಕೇಳುತ್ತ ಹೋಗಬಹುದು. ಪುರಾಣಗಳನ್ನು ಇತಿಹಾಸವೆಂಬಂತೆ ಗ್ರಹಿಸಿ ಸಮಾಜದ ವ್ಯಾಖ್ಯಾನಗಳಾಗಿ ಮಾರ್ಪಡಿಸಿ ನೊಂದು ಬೆಂದು ಮಾಡುವದು ನಮ್ಮ ಸಂಭ್ರಮವನ್ನು ನಾವೇ ಹತ್ತಿಕ್ಕುವದಕ್ಕಿಂತ ಹೆಚ್ಚಿನ ಪರಿಣಾಮ ಬೀರುತ್ತದೆಂದು ಅನ್ನಿಸುವದಿಲ್ಲ. ತಪೋಭಂಗಕ್ಕೆ ಕಾರಣನಾದ ಮನ್ಮಥನನ್ನು ಶಿವ ಮೂರನೆಯ ಕಣ್ಣು ತೆರೆದು ಸುಟ್ಟ ಘಟನೆಯಿಂದ ಇನ್ನೊಂಥರ ಪ್ರೇರಣೆ ಪಡೆದು ಅರಿಷಡ್ವರ್ಗಗಳ ಮೇಲೆ ವಿಜಯ ಸಾಧಿಸಿ, ಕಾಮದಿಂದ ವಿಮೋಚನೆ ಪಡೆದು, ಧ್ಯಾನಸಮಾಧಿ ಸ್ಥಿತಿಗೆ ಹೋಗೋಣ. ಎಂಥ ಬೋರಿಂಗ್ ಅಲ್ವಾ? ಕಾಮನ ಬಾಣ ತಾಕುತ್ತಲೇ ಶಿವನಿಗೆ ಸಮಸ್ತ ಜಗತ್ತೇ ರಂಗುರಂಗಾಗಿ ಕಂಡಿತಂತೆ ಎಂಬುದನ್ನು ನಂಬಿ ಈ ಮಧುಮಾಸವನ್ನು ಸ್ವಲ್ಪ ಪ್ಯಾಶನೇಟ್ ಆಗಿ ನೇವರಿಸಬಹುದಲ್ಲವೇ?

ಕೊನೇಪಕ್ಷ ಪುರಾಣಗಳನ್ನು, ದಂತಕತೆಗಳನ್ನು ಸ್ವಲ್ಪ ಪಕ್ಕಕ್ಕಿಟ್ಟು ನಮ್ಮ ಪರಂಪರೆಯನ್ನು ಹೀಗಳೆಯುವ ವಿಮರ್ಶಾಪ್ರಜ್ಞೆಗೂ ಸ್ವಲ್ಪ ವಿರಾಮ ಕೊಟ್ಟು ಬೆಳಕಿಗೊಂದು ಹಬ್ಬ, ಬಣ್ಣಕ್ಕೊಂದು ಹಬ್ಬ ಸೃಷ್ಟಿಸಿದ ನಮ್ಮದೇ ಪರಂಪರೆಯ ಕಲ್ಪನಾಶ್ರೀಮಂತಿಕೆಯನ್ನು ಸ್ವಲ್ಪ ಮೆಚ್ಚಿ, ಸ್ವಲ್ಪ ನಮಿಸಿ ಚೈತ್ರ ವೈಶಾಖವೆಂಬ ಜೇನಿನಂತೆ ಸವಿಯಾದ ತಿಂಗಳುಗಳನ್ನು ಬಣ್ಣ ಬಣ್ಣದ ಓಕುಳಿಯೊಂದಿಗೆ ಕೋಟ್ಯಾಂತರ ಜನ ಆನಂದಿಸುವದನ್ನಾದರೂ ಆನಂದಿಸಬಹುದಲ್ಲವೆ?