ನಿನ್ನೆ ಇರುಳು ತೀರಿಹೋದ ನಿಷ್ಠುರ ಮನಸಿನ ಕನ್ನಡದ ವಿಮರ್ಶಕ ಡಿ.ಎಸ್.ನಾಗಭೂಷಣ  ಕೈಗೆತ್ತಿಕೊಂಡ ಕೆಲಸವನ್ನು ತಪಸ್ಸಿನಂತೆ ಕುಳಿತು ಮುಗಿಸುತ್ತಿದ್ದ ಶ್ರಮಜೀವಿ ಬರಹಗಾರರಾಗಿದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಆಕಾಶವಾಣಿ ದೆಹಲಿಯಿಂದ ಬರುತ್ತಿದ್ದ  ಕನ್ನಡ ವಾರ್ತೆಗಳ ಪರಿಚಿತ ಮತ್ತು ಜನಪ್ರಿಯ ರೇಡಿಯೋ ಧ್ವನಿಯಾಗಿದ್ದರು.  ಮಹಾ ಜಗಳಗಂಟರೂ ಮತ್ತು ಅಷ್ಟೇ ಮುಗ್ಧರೂ ಆಗಿದ್ದ ನಾಗಭೂಷಣರು  ತಮ್ಮ ರೇಡಿಯೋ ಕಾರ್ಯಕ್ರಮ, ಪತ್ರಿಕಾ ಸಂಪಾದಕೀಯ ಬರಹಗಳು  ಮತ್ತು ಸಾರ್ವಜನಿಕ ಭಾಷಣಗಳಿಂದ ಬಹಳ ಕಾಲ ನೆನಪಿನಲ್ಲಿ ಉಳಿಯಬಲ್ಲವರು. ಈ ಸಲದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಪುಸ್ತಕದ ಕುರಿತು ಈ ಹಿಂದೆ ಅವರು ಬರೆದಿದ್ದ ಲೇಖನವೊಂದು ಅವರ ನೆನಪಿಗಾಗಿ ಇಲ್ಲಿದೆ.

ಎರಡು ಸಾವಿರದ ಹತ್ತೊಂಬತ್ತರ  ಸೆಪ್ಟಂಬರ್ 29ರ ಬೆಳಿಗ್ಗೆ 10 ಘಂಟೆಯ ಹೊತ್ತಿಗೇ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಅದರ ಮೇಲುಪ್ಪರಿಗೆಯಲ್ಲೂ ಜನ ಸೇರಿದ್ದರು. ಹತ್ತೂವರೆ ಹೊತ್ತಿಗೆ ಖ್ಯಾತ ಗಾಯಕಿ ಸಂಗೀತಾ ಕಟ್ಟಿಯವರಿಂದ ಮೀರಾ ಭಜನೆಗಳ ಮಧುರ ಗಾಯನದಿಂದ ಮಹಾತ್ಮ ಗಾಂಧಿಯವರ 150ನೇ ಜನ್ಮವರ್ಷಾಚರಣೆಯ ಸಮಾರಂಭ ಆರಂಭವಾಗಿತ್ತು, ಅಂದು ಅಲ್ಲಿ ನಾನು ಇದೇ ಸಂದರ್ಭಕ್ಕೆಂದು ಒಂದು ವರ್ಷದ ಕಾಲ ತಪಸ್ಸಿನಂತೆ ಕೂತು ಬರೆದ ‘ಗಾಂಧಿ ಕಥನ’ ಗ್ರಂಥದ ಬಿಡುಗಡೆಗೆ ವೇದಿಕೆ ಸಿದ್ಧವಾಗಿತ್ತು. ಒಂದು ವರ್ಷ ಕಾಲ ನನ್ನ ಬೆನ್ನು ಬಿದ್ದು ಈ ಪುಸ್ತಕವನ್ನು ಬರೆಸಿದ್ದ ಬೆಂಗಳೂರಿನ ಎಂ. ಮುನಿಸ್ವಾಮಿ ಅಂಡ್ ಸನ್ಸ್ ಎಂಬ ಪ್ರಕಾಶನ ಸಂಸ್ಥೆಯ ಎಂ.ಸಿ. ನರೇಂದ್ರ ಅವರು ಈ ಸಮಾರಂಭವನ್ನು ಏರ್ಪಡಿಸಿದ್ದರು. ಇವರು ನಿಜ ಗಾಂಧಿವಾದಿಯೂ ಆಗಿದ್ದ ಮಾಜಿ ಸಚಿವ ಎಂ. ಚಂದ್ರಶೇಖರ್ ಅವರ ಮಗನಾಗಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಎಂ. ಚಂದ್ರಶೇಖರ ಪ್ರತಿಷ್ಠಾನದ ಆಶ್ರಯದಲ್ಲಿ ಈ ಸಮಾರಂಭವನ್ನು ಏರ್ಪಡಿಸಿದ್ದರು. ಶಿವಮೊಗ್ಗದ ಲೋಹಿಯಾ ಜನ್ಮ ಶತಾಬ್ಧಿ ಪ್ರತಿಷ್ಠಾನವೂ ಇದರೊಂದಿಗೆ ಕೈ ಜೋಡಿಸಿತ್ತು. ಇದಕ್ಕೆ ಕಾರಣ, ಗಾಂಧಿ ಕುರಿತ ಯಾವ ಪುಸ್ತಕದಲ್ಲೂ ಕಾಣದ ಗಾಂಧಿ-ಸಮಾಜವಾದಿಗಳ ಸಂಬಂಧವನ್ನು ಈ ಪುಸ್ತಕದಲ್ಲಿ ಮೊದಲಿಂದ ಕೊನೆಯವರೆಗೂ ನಿರೂಪಿಸುವ ಪ್ರಯತ್ನ ಮಾಡಲಾಗಿತ್ತು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಹಿರಿಯ ಸಾಹಿತಿ ದೇವನೂರ ಮಹಾದೇವ ‘ಗಾಂಧಿ ಕಥನ’ ಕೃತಿಯನ್ನು ಬಿಡುಗಡೆ ಮಾಡಿದರು. ಅಂದೇ ಪುಸ್ತಕದ ಸುಮಾರು ಮೂರು ನೂರು ಪ್ರತಿಗಳು ಖರ್ಚಾದವು. ಆದರೆ ಮೈಸೂರಿನ ‘ಆಂದೋಲನ’ ಪತ್ರಿಕೆಯ ಹೊರತಾಗಿ ಬೆಂಗಳೂರಿನವೂ ಸೇರಿದಂತೆ ಕರ್ನಾಟಕದ ಯಾವ ಪತ್ರಿಕೆಯೂ ಈ ಸಮಾರಂಭದ ಬಗೆಗೆ ಒಂದು ಸಾಲು ವರದಿಯನ್ನೂ ಪ್ರಕಟಿಸಲಿಲ್ಲ.. ‘ಪ್ರಜಾವಾಣಿʼ ಮಾತ್ರ ಅಮಾಯಕವಾಗಿ ದೇವನೂರ ಮಹಾದೇವ ಅವರ ‘ಭಾಷಣ’ವನ್ನು ಮಾತ್ರ ವಿವರವಾಗಿ ವರದಿ ಮಾಡಿತ್ತು. ಇದು ನಮ್ಮ ಪತ್ರಿಕೋದ್ಯಮ ತಲುಪಿರುವ ಸ್ಥಿತಿ ಆದರೇನು, ಈ ಗ್ರಂಥ ವರ್ಷ ಮುಗಿಯುವ ಮುನ್ನವೇ ಐದು ಮುದ್ರಣಗಳನ್ನು (ಇವುಗಳಲ್ಲಿ ಎರಡು, ಹೆಚ್ಚಿನ ಮಾಹಿತಿ ಸೇರ್ಪಡೆಗೊಂಡ ಪರಿಷ್ಕೃತ ಆವೃತ್ತಿಗಳು) ಕಂಡು ಆರನೇ ಮುದ್ರಣಕ್ಕೆ ಸಿದ್ಧವಾಗುತ್ತಿದೆ. ಈ ಪುಸ್ತಕದ ಪುಟ ಸಂಖ್ಯೆ 18 ಪುಟಗಳ ‘ಗಾಂಧಿ ಚಿತ್ರ ಸಂಪುಟ’ವೂ ಸೇರಿದಂತೆ ಒಟ್ಟು 722 ಪುಟಗಳು. ಮೊದಲ ಮುದ್ರಣದ ಸಂದರ್ಭದಲ್ಲಿ ಸಾದಾ ಪ್ರತಿಗೆ ಆರು ನೂರು ರೂಪಾಯಿಗಳ (ಉತ್ತಮ ಪ್ರತಿಗೆ ಎಂಟು ನೂರು ರೂಪಾಯಿಗಳ) ಬೆಲೆ ಇಟ್ಟಿದ್ದ ಪ್ರಕಾಶಕರು ಪುಸ್ತಕ ಕುರಿತ ಬೇಡಿಕೆಯ ತೀವ್ರತೆಯಲ್ಲಿ ಗಾಂಧಿ ಕುರಿತ ಜನರ ಆಸಕ್ತಿಯ ತೀವ್ರತೆಯನ್ನು ಗಮನಿಸಿ ಹರ್ಷಿತರಾಗಿ ಆ ಬೆಲೆಯನ್ನು ಲಾಭ-ನಷ್ಟಗಳ ಪರಿವೆ ಇಲ್ಲದೆ 350 ರೂಪಾಯಿಗಳಿಗೆ ಇಳಿಸಿದರು. ಪ್ರತಿ ಮುದ್ರಣಕ್ಕೂ ಮುಖಪುಟ ವಿನ್ಯಾಸ ಬದಲಿಸಿದರು. ವರ್ಷದ ಕೊನೆಯಲ್ಲಿ ‘ಪ್ರಜಾವಾಣಿ’ ನಡೆಸಿದ ಪುಸ್ತಕ ಸಮೀಕ್ಷೆಯಲ್ಲಿ ಪಾಲ್ಗೊಂಡ ಗಣ್ಯ ಸಾಹಿತಿ-ಓದುಗರ ಪೈಕಿ ಬಹುಪಾಲು ಜನ ‘ಗಾಂಧಿ ಕಥನ’ವನ್ನು ವರ್ಷದ ಅತ್ಯುತ್ತಮ ಕೃತಿ ಎಂದು ಅಭಿಪ್ರಾಯಪಟ್ಟರು.

ಜನ ಪುಸ್ತಕವನ್ನು ಆಸಕ್ತಿಯಿಂದ ಕೊಳ್ಳುತ್ತಾ ಹೋದರು. ಕೆಲವರು ಐದು-ಹತ್ತು-ಇಪ್ಪತ್ತು-ಐವ್ವತ್ತು-ನೂರು ಪ್ರತಿಗಳನ್ನು ಕೊಂಡು ತಮ್ಮ ಆಪ್ತರಿಗೆ ಹಂಚಿದ್ದೂ ಉಂಟು. ಈಗ ನಾಲ್ಕನೇ ಮತ್ತು ಐದನೇ ಮುದ್ರಣದ ಎಲ್ಲ ಎರಡು ಸಾವಿರ ಪ್ರತಿಗಳನ್ನೂ, ಪ್ರಕಾಶಕರು ನೀಡುತ್ತಿರುವ ಇನ್ನಷ್ಟು ಸುಲಭ ಬೆಲೆಯಲ್ಲಿ ಕೊಳ್ಳುತ್ತಿರುವವರು ಗದಗದ ‘.ಕೆ. ಎಚ್. ಪಾಟೀಲ ಪ್ರತಿಷ್ಠಾನ’ದ ಪರವಾಗಿ ಡಿ.ಆರ್ ಪಾಟೀಲರು. ಇವರು ಮುಂದೆ ಇನ್ನೂ ಎರಡು ಸಾವಿರ ಪ್ರತಿಗಳು ಬೇಕೆಂದು ಹೇಳುತ್ತಿದ್ದಾರೆ. ಇದಕ್ಕೆ ಅವರಿಗೆ ಪ್ರೇರಣೆ ನೀಡಿದವರು ಗಾಂಧಿ ಕಾರ್ಯಕರ್ತರಾದ ಗೆಳೆಯ ಜಿ.ಬಿ. ಶಿವರಾಜು ಅವರು. ಪಾಟೋಳರು ಇವರು ಈ ಕೃತಿಯನ್ನು ಮೊದಲ ಮುದ್ರಣದಲ್ಲೇ ಓದಿ ರೋಮಾಂಚಿತರಾದಂತೆ ನನಗೆ ಕರೆ ಮಾಡಿ ಮಾತಾಡಿದ್ದರು. ಬಹುಶಃ ಆ ರೋಮಾಂಚನದ ಫಲವೇ ಈ ಬೃಹತ್ ಪುಸ್ತಕ ಯಜ್ಞ. ಗಾಂಧಿ ಹಬ್ಬ. ಅಕ್ಟೋಬರ್ ೧೩ರಂದು ಗದಗದಲ್ಲಿ ನಡೆಯುವ ಸಮಾರಂಭದಲ್ಲಿ ಕೃತಿಯನ್ನು ಗದಗ ಜಿಲ್ಲೆಯ ಜನರಿಗಾಗಿ ಲೋಕಾರ್ಪಣೆ ಮಾಡಲಾಗುವುದಂತೆ.

ಜನ ಪುಸ್ತಕವನ್ನು ಆಸಕ್ತಿಯಿಂದ ಕೊಳ್ಳುತ್ತಾ ಹೋದರು. ಕೆಲವರು ಐದು-ಹತ್ತು-ಇಪ್ಪತ್ತು-ಐವ್ವತ್ತು-ನೂರು ಪ್ರತಿಗಳನ್ನು ಕೊಂಡು ತಮ್ಮ ಆಪ್ತರಿಗೆ ಹಂಚಿದ್ದೂ ಉಂಟು. ಈಗ ನಾಲ್ಕನೇ ಮತ್ತು ಐದನೇ ಮುದ್ರಣದ ಎಲ್ಲ ಎರಡು ಸಾವಿರ ಪ್ರತಿಗಳೂ ಖರೀದಿಯಾಗುತ್ತಿವೆ.

ಈ ಕೃತಿಯ ಲೇಖಕನಾಗಿ ನಾನು ಇದನ್ನೆಲ್ಲ ಕಂಡು ನಿಜವಾಗಿಯೂ ನಿಬ್ಬೆರಗಾಗಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ (ಬಿರು)ಗಾಳಿ ಬೀಸುತ್ತಿರುವ ದಿಕ್ಕನ್ನು ಕಂಡು, ಇದರ ಅಬ್ಬರದ ಮರೆಯಲ್ಲಿ ಉದ್ದೇಶಪೂರ್ವಕವಾಗಿ ಮತ್ತು ವ್ಯವಸ್ಥಿತವಾಗಿ ನಡೆದಿರುವ ಗಾಂಧಿ ಅವಹೇಳನದ, ಅಪಪ್ರಚಾರದ ಕಾರ್ಯಾಚರಣೆಗಳನ್ನು ಕಂಡು ವಿಚಲಿತನಾಗಿ, ಗಾಂಧಿ ನಮ್ಮ ಜನಮನದಿಂದ ಮರೆಯಾಗಿ ಹೋಗುತ್ತಿದ್ದಾರೆ ಎಂಬ ಆತಂಕಕ್ಕೀಡಾಗಿದ್ದ ನಾನು ಈ ಪುಸ್ತಕ ಕುರಿತ ಜನ ತೋರುತ್ತಿರುವ ಆಸಕ್ತಿ, ಪ್ರೀತಿ ಮತ್ತು ಅಭಿಮಾನಗಳನ್ನು ಕಂಡು ಪುಳಕಿತನಾಗಿದ್ದೇನೆ. ನಾಡಿನಾದ್ಯಂತ ಸಣ್ಣದಾಗಿಯಾದರೂ ಗಾಂಧಿ ಕುರಿತ ಹೊಸ ಸಂಚಲನ, ಜಾಗೃತಿ ಕಾಣತೊಡಗಿದೆ. ಇದು ಇಂದಿನ ರಾಜಕೀಯ ಬೆಳವಣಿಗೆಗಳು ತನ್ನ ಭ್ರಷ್ಟ, ಮತೀಯ ಮತ್ತು ಪ್ರಜಾಪ್ರಭುತ್ವ ವಿರೋಧಿ ಖೂಳತನಗಳಿಂದ ಕುಲಗೆಟ್ಟು ಹೋಗಿದ್ದರೂ, ಎಲ್ಲವೂ ಇನ್ನೂ ಕಳೆದುಹೋಗಿಲ್ಲ ಎಂಬ ಆಸೆಯನ್ನು ನನ್ನಲ್ಲಿ ಹುಟ್ಟಿಸಿದೆ. ಈ ನಾಡ ಮಣ್ಣಿನಲ್ಲಿ ಗಾಂಧಿ ಜೀವ ಎಲ್ಲೋ ಸುಪ್ತವಾಗಿ ಇನ್ನೂ ಪುಟಿಯುತ್ತಿದೆ.

‘ಗಾಂಧಿ ಕಥನ’ ಪುಸ್ತಕ ಓದಿದ ಹಲವರು ನನಗೆ ಕರೆ ಮಾಡಿ ಮಾತಾಡಿದ್ದಾರೆ. ಇನ್ನು ಕೆಲವರು ಉತ್ಸಾಹದಿಂದ ಸುದೀರ್ಘವಾಗಿ ಪತ್ರ ಬರೆದಿದ್ದಾರೆ. ದ.ಕ.ದ ಓರ್ವ ಗೃಹಿಣಿಯಂತೂ ಪುಸ್ತಕ ಓದಿ ಎಷ್ಟು ಉತ್ಸಾಹಿತರಾದರೆಂದರೆ ಪ್ರತಿ ದಿನ ತಾವು ಓದಿದ್ದನ್ನು ಸಾರಾಂಶ ರೂಪದಲ್ಲಿ ಟಿಪ್ಪಣಿ ಮಾಡಿಕೊಂಡು ಮರುದಿನ ತಮ್ಮ ಮತ್ತು ನೆರೆಹೊರೆಯ ಮಕ್ಕಳನ್ನು ಕೂಡಿಸಿಕೊಂಡು ಆ ಟಿಪ್ಪಣಿಗಳ ಆಧಾರದ ಮೇಲೆ ಒಂದು ತಿಂಗಳ ಕಾಲ ಗಾಂಧಿ ಕಥೆ ಹೇಳಿದ್ದಾರೆ. ಜೊತೆಗೆ ಅದನ್ನೆಲ್ಲ ಧ್ವನಿಮುದ್ರಿಸಿಕೊಂಡು ರಾಜ್ಯಾದ್ಯಂತ ಇರುವ ತಮ್ಮ ಬಂಧು ಮಿತ್ರರು ಮತ್ತು ಗೆಳೆಯರಿಗೆ ಕಳಿಸಿ ಅವರಲ್ಲಿ ಗಾಂಧಿ ಆಸಕ್ತಿಯನ್ನೂ, ಚರ್ಚೆಯನ್ನೂ ಹುಟ್ಟು ಹಾಕಿದ್ದಾರೆ.

ಇವರೆಲ್ಲರೇನೂ, ಸಾಹಿತಿಗಳಲ್ಲ. ಬೇರೆ ಪರಿಣಿತ ಕ್ಷೇತ್ರಗಳ ಗಣ್ಯ ವ್ಯಕ್ತಿಗಳೂ ಅಲ್ಲ. ಬಹಳ ಜನ ಸಾಮಾನ್ಯ ಓದುಗರು. ಇವರಲ್ಲಿ ಕೆಲವರು ನನಗೇ ಗೊತ್ತಿದ್ದಂತೆ ಗಾಂಧಿ ಕುರಿತು ಅಷ್ಟೇನೂ ಒಳ್ಳೆಯ ಅಭಿಪ್ರಾಯ ಇಲ್ಲದಿದ್ದವರು. ಇಂಥವರ ಪೈಕಿ ಕೆಲವರು ನನ್ನನ್ನು ಸಂಪರ್ಕಿಸಿದಾಗ ಕುತೂಹಲ ಹುಟ್ಟಿಸಿದವರೊಂದಿಗೆ ವಿವರವಾಗಿ ಮಾತನಾಡಿದ್ದೇನೆ. ಪುಸ್ತಕ ಏಕೆ ಇಷ್ಟು ಇಷ್ಟವಾಯಿತೆಂದು ಕೇಳಿದ್ದೇನೆ. ಇವರೆಲ್ಲರ ಒಂದು ಸಾಮಾನ್ಯ ಮಾತೆಂದರೆ, ನಮಗೆ ನಿಜವಾದ ಗಾಂಧಿಯ ಪರಿಚಯವೇ ಆಗಿರಲಿಲ್ಲ. ಅವರ ಕುಟುಂಬ, ಇಂಗ್ಲೆಂಡ್ ಮತ್ತು ದ.ಆಫ್ರಿಕಾದಲ್ಲಿ ಅವರ ಬದುಕು-ಹೋರಾಟಗಳ ನಿಜ ವಿವರಗಳೇ ಗೊತ್ತಿರಲಿಲ್ಲ. ಸ್ವತಃ ಗಾಂಧಿಯವರ ಕೆಲ ಕೃತಿಗಳ ಅನುವಾದಗಳ ಹೊರತಾಗಿ, ಇದನ್ನೆಲ್ಲ ಪರಿಣಮಕಾರಿಯಾಗಿ ಗೊತ್ತು ಮಾಡುವ ಸಾಹಿತ್ಯವೂ ಕನ್ನಡದಲ್ಲಿ ಇಲ್ಲ. ಗಾಂಧಿ ಎಂದರೆ ನಿಜಜೀವನದಲ್ಲಿ ಆಚರಣೆ ಸಾಧ್ಯವಿಲ್ಲದ ಸತ್ಯ-ಅಹಿಂಸೆಗಳ ಓರ್ವ ಆದರ್ಶವಾದಿ ಬೋಧಕ; ನಾವು ಮುಟ್ಟಲು ಸಾಧ್ಯವಿಲ್ಲದಷ್ಟು ಎತ್ತರದಲ್ಲಿರುವ ಮಹಾತ್ಮ ಎಂದುಕೊಳ್ಳುತ್ತಲೇ ಬೆಳೆದವು. ಆದರೆ ಈ ಪುಸ್ತಕ ಗಾಂಧಿಯನ್ನು ನಮ್ಮಂತೆಯೇ ರಕ್ತ ಮಾಂಸಗಳಿಂದ ಕೂಡಿದ, ನಮ್ಮಂತೆಯೇ ಹಲವು ದ್ವಂದ್ವ-ಸಂಕಟ-ದೌರ್ಬಲ್ಯಗಳನ್ನು ಎದುರಿಸುತ್ತಾ, ಅನುಸಂಧಾನ ಮಾಡುತ್ತಾ ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಂಡ ವ್ಯಕ್ತಿತ್ವವೆಂಬುದನ್ನು, ಅವರ ಪ್ರೇಮ ಪ್ರಸಂಗಗಳನ್ನು ಸಾಕಷ್ಟು ವಿವರವಾಗಿ ಹೇಳುತ್ತಲೇ ಮನದಟ್ಟು ಮಾಡುತ್ತದೆ. ಹೀಗೆ ಅವರ ವ್ಯಕ್ತಿತ್ವವನ್ನು ಎಲ್ಲ ಸಾಧ್ಯ ಪಾರ್ಶ್ವಗಳಿಂದಲೂ, ಆದರೆ ಯಾವುದೇ ಆರಾಧನಾ ಭಾವವಿಲ್ಲದೆ ಪ್ರಸ್ತುತಪಡಿಸುತ್ತದೆ. ಆದರೆ ಇಲ್ಲಿ ಭಾವಪೂರ್ಣತೆಗೇನೂ ಕೊರತೆ ಇಲ್ಲ. ಇದೆಲ್ಲ ಸರಳ. ನೇರ ಭಾಷೆಯಲ್ಲಿ ಘಟನೆಗಳ ಸರಮಾಲೆಯಾಗಿ ಕಥಾ ರೂಪದಲ್ಲಿ ಹರಿದಿದೆ. ಇನ್ನು ಗಾಂಧಿ ಎಂದರೆ ದೇಶ ವಿಭಜನೆಗೆ ಕಾರಣನಾದ ಮುಸಲ್ಮಾನರ ಮಿತ್ರ, ಹಿಂದೂಗಳ ಶತ್ರು ಎಂದು ಭಾವಿಸಿದ್ದವರೆಂದು ನನಗೆ ಖಚಿತವಾಗಿ ಗೊತ್ತಿದ್ದ ಜನರ ಪೈಕಿ ಒಬ್ಬರ ಈ ಪ್ರತಿಕ್ರಿಯೆ ಸಾಧಾರಣವಾಗಿ ಇಂತಹ ಬಹುಪಾಲು ಓದುಗರೆಲ್ಲರ ಪ್ರತಿಕ್ರಿಯೆಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಬಹದು: ‘ಇಲ್ಲ, ನಾನು ಅವಸರದ ದೇಶ ಮತ್ತು ಹಿಂದೂ ಭಕ್ತಿಯ ಆವೇಶದಲ್ಲಿ ತಪ್ಪು ದಾರಿಗೆ ಎಳೆಯಲ್ಪಟ್ಟಿದ್ದೆ. ಗಾಂಧಿ ನಮ್ಮವರು, ಎಲ್ಲರವರು. ನಿಜವಾಗಿ ಹಿಂದೂಗಳ ಹೆಮ್ಮೆ ಎಂದು ನನಗೀಗ ಅನ್ನಿಸತೊಡಗಿದೆ.’

ಗಾಂಧಿ ಕುರಿತ ಪುಸ್ತಕವೊಂದರ ಯಶಸ್ಸಿಗೆ ಇನ್ನೇನು ಬೇಕು?

(ಕೃಪೆ: ಆಂದೋಲನ ಪತ್ರಿಕೆಯ ಗಾಂಧಿ ವಿಶೇಷಾಂಕ)