ಕಳಚುವ ಪರಿ

ನೀನಿರದ ನೀರವ ರಾತ್ರಿಗಳಲಿ
ಎಲೆ ಕಳಚುವ ಮರ್ಮರ
ಕೇಳುತ್ತಿದೆ ಆತ್ಮದ ಮೊರೆಯಂತೆ.

ಹೊರಗೆ ಸುರಿಯುತ್ತಿದೆ ತಣ್ಣಗೆ
ಬೆಳುದಿಂಗಳು
ಚಿತ್ತಭಿತ್ತಿಯ ಮೇಲೆ
ಸದ್ದಿಲ್ಲದೆ ಸರಿದ
ನಿನ್ನದೇ ನೆರಳು
ಸುಳಿದಾಡಿದೆ ಸುಷುಪ್ತಿಯೊಳಗೂ

ಎದ್ದು ಹೋದವನ
ಕಳ್ಳಹೆಜ್ಜೆಗಳ ಉಲಿಯೂ
ಕಿವಿದೆರೆಗಳ ದಾಟಿ ಒಳಗಿಳಿದಿದೆ.
ತಳಮಳದ ತಳವೊಡೆದು
ನೋವಿನ ಆಲಾಪಗಳು ಹೆದ್ದೆರೆಗಳಾಗಿ
ಎದ್ದೆದ್ದು ಅಪ್ಪಳಿಸುತಿವೆ.

ಕತ್ತಲಲಿ ಕೂಡುವುದು
ಬೆಳಕಿಗೆ ಬೇರಾಗುವುದು
ದ್ವೈತ ಅದ್ವೈತಗಳ
ಪದ ಬಂಧದಾಚೆ
ಅರ್ಥದ ಸರಳು ದಾಟಿ
ಹಬ್ಬುತಿದೆ ಹಂಬಲದ ಹಾಡೊಂದು
ನಾಭಿಮೂಲದಲಿ ಮೊಳೆತು.

ಒಮ್ಮೆ ಝಾಡಿಸು
ಬೇರ್ಪಡುವ ವಿಹ್ವಲತೆಗೆ
ಮೈಯಾಗಬೇಕಿದೆ ನಾನು
ಕಿತ್ತುಕೊಡು ನಿನ್ನ ಬೆನ್ನಿಗಂಟಿದ
ನನ್ನ ಕಣ್ಣು
ನನ್ನದೇ ಬೆಳಕ ನಾ ನೋಡಲು.

ಯಾವ ಸ್ನಾನ
ಯಾವ ಧ್ಯಾನ
ಕಲಿಸೀತು ನಿನ್ನ ಕಳಚುವ ಪರಿಯ
ಹೇಳು ಹೇ ಕಳಚಿಕೊಂಡವನೇ
ಬೆತ್ತಲಾಗಬೇಕಿದೆ ನಾನು
ನೀನಿಲ್ಲದೆಯೂ.