ಮೌನ ಬಿತ್ತ ಬಯಲು

ಅವನೆಂದ: ನಾನು ನಿನ್ನ ಅದೆಷ್ಟು ಪ್ರೀತಿಸುತ್ತೇನೆ- ಎಂದರೆ,
ಕಡಲಷ್ಟು..ಮುಗಿಲಷ್ಟು..ಭೂಮಿಯಷ್ಟು!
ಆದರೆ, ಅವಳಿಗೆ ಗೊತ್ತು-
ತೆಕ್ಕೆಯೊಳಗೆ ಕಡಲು, ಮುಗಿಲು, ಭೂಮಿ
ಎಷ್ಟು-ದಕ್ಕಬಹುದೆಂದು.

ಅವನೆಂದ; ನಾನು ನಿನ್ನ ಅದೆಷ್ಟು ಪ್ರೀತಿಸುತ್ತೇನೆ- ಎಂದರೆ,
ನಿನ್ನಿಂದ ಅರೆಘಳಿಗೆ ಅಗಲಿರಲಾರೆ!
ಆದರೆ, ಅವಳಿಗೆ ಗೊತ್ತು-
ಪ್ರೀತಿಯ, ಅನುಭೂತಿಯ
ನೀತಿ, ನಿಯತಿ- ನಿಯತ್ತು.

ಅವನೆಂದ; ನನಗೆ ನೀನು ಅದೆಷ್ಟು ಅಗತ್ಯ- ಎಂದರೆ,
ಇತಿ-ಮಿತಿಯ ಅಗ್ನಿ, ನೀರು, ಗಾಳಿಯಂತೆ!
ಆದರೆ, ಅವಳಿಗೆ ಗೊತ್ತು-
ಭವದ- ಪರಿ-
ಭವದ ತಂಪು-ಬಿಸುಪಿನಸ್ಮಿತೆ!

ಅವನೆಂದ; ನಾನು ನಿನ್ನನ್ನು, ನೀನು ನನ್ನನ್ನು- ಅದೆಷ್ಟು
ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ!
ಆದರೆ, ಅವಳಿಗೆ ಗೊತ್ತು-
ಅವನಿಗೆ ಅವನ ಬಗೆಗೇ
ತಿಳಿದಿದ್ದಕ್ಕಿಂತ- ಹೆಚ್ಚು!

ಹಾಗೆ- ಕಡಲು, ಮುಗಿಲು, ಭೂಮಿಗಳೆಲ್ಲ
ತಮಗಿಂತ ಅರ್ಥವತ್ತಿನ
ನೆಲೆಯಲ್ಲಿ ಸಂಧಿಸಲು,
ಋತುಮಾನ- ಅಳೆಯುವ
ಸೂರ್ಯ-ಚಂದ್ರರ ಕೊಳಗಗಳೆಂಬ
ಉಸಿರು-ನಳಿಕೆಯಲ್ಲಿ ಬಂಧಿಸಲು,
ಮಾತಿನ ಬೀಜ ಬಿತ್ತ-…
ಮೌನದ ಬಯಲಾದವು..
ಗೀತಾ ಹೆಗಡೆ.