ನಾನು ಪ್ರತಿವಾರವೂ ಹೋಗುವುದು ಮಾರುಕಟ್ಟೆಗೆ ತಂದು ಮಾರುವ ಪ್ರತಿಯೊಂದು ಗಿಡಮರ, ಬಳ್ಳಿ, ಕೊಂಬೆಗಳನ್ನು ನೋಡುವುದಕ್ಕೆ. ಅದರ ಮಧ್ಯದಲ್ಲಿ ಸಮಯವಿದ್ದರೆ, ಚೀಲದಲ್ಲಿ ಇನ್ನೂ ಕ್ಯಾಶ್ ಉಳಿದಿದ್ದರೆ ಈ ಗುಜರಿ ಮಳಿಗೆಯತ್ತ ಕಣ್ಣಾಡಿಸುತ್ತಿದ್ದೆ. ಆಗಾಗ ಬಹು ಚೆಂದದ ಕೆಲ ವಸ್ತುಗಳು ಕಣ್ಣಿಗೆ ಬೀಳುತ್ತಿದ್ದವು. ಅವು ಏನು, ಅವುಗಳ ಹುಟ್ಟಿನ ರಹಸ್ಯವೇನು, ನಿಮಗೆ ಹೇಗೆ ಸಿಕ್ಕಿತು, ಎಂದೆಲ್ಲ ಅವುಗಳನ್ನು ಚೆಂದನೆ ಜೋಡಿಸಿ ಮಾರಲು ಹಾತೊರೆಯುತ್ತಿದ್ದ ಮಳಿಗೆದಾರರ ಬಳಿ ಮಾತಿಗಿಳಿಯುತ್ತಿದ್ದೆ. ಅವರು ಹೇಳುವ ಕಥೆಗಳನ್ನು ಮನಸ್ಸಿಟ್ಟು ಕೇಳುತ್ತಿದ್ದೆ. ಅವರಲ್ಲಿ ಕೆಲವರು ಬಹು ಕುತೂಹಲ ಕೆರಳಿಸುವ ಕಥೆಗಳನ್ನು ಹೇಳಿದ್ದಾರೆ.  ಅವನ್ನು ಆಗಾಗ ನೆನಪಿಸಿಕೊಳ್ಳುವುದೂ ಕೂಡ ನನ್ನ ಸೈಕಾಲಜಿ ಕ್ಲಾಸಿಗೆ ಉಪಯೋಗವಾಗುತ್ತದೆ.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ನಿತ್ಯಜೀವನದ ಅಂಗವಾಗಿಬಿಟ್ಟಿರುವ ನೀರಸ ಭಾವನೆಯನ್ನು ಒದ್ದೋಡಿಸಲು ಜನರು ಏನೆಲ್ಲಾ ಹಂಚಿಕೊಳ್ಳುತ್ತಿದ್ದಾರೆ ಅನ್ನೋದನ್ನ ಗಮನಿಸಿದರೆ ಅಚ್ಚರಿಯೂ, ಖುಷಿಯೂ ಆಗುತ್ತದೆ. ವಾಟ್ಸ್ಯಾಪಿನಲ್ಲಿ ತಾವು ಮಾಡುತ್ತಿರುವ ವಿವಿಧ ತಿಂಡಿತಿನಿಸು, ಊಟದ ಐಟಮ್ಮುಗಳನ್ನ ಕೆಲವರು ಹಂಚಿಕೊಂಡರೆ, ಬೇರೆ ಒಂದಷ್ಟು ಜನ ಸಿನಿಮಾಗಳನ್ನ, ಹಾಡುಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಫೇಸ್ ಬುಕ್ಕಿನಲ್ಲಿ ಆಟಗಳನ್ನು ಆಡುವವರ ಗುಂಪು ಒಂದು ತರಹ. ಇನ್ನೊಂದು ತರಹದ ಗುಂಪು ಅಂತ್ಯಾಕ್ಷರಿಯನ್ನ ಆಡುತ್ತಾ ಚಿತ್ರಗೀತೆಗಳನ್ನು ನೆನಪಿಸಿಕೊಂಡು ಹರ್ಷಿಸುತ್ತಿದ್ದಾರೆ. ಜನರ ಆಶಾಭಾವನೆಗೆ ಜೈ ಜೈ ಅನ್ನಲೇಬೇಕು.

ಭಾರತದ ಪರಿಸ್ಥಿತಿಗೆ ತದ್ವಿರುದ್ಧವಾಗಿ ನಮ್ಮಲ್ಲಿ ಬೇಕಾದಷ್ಟು ಹೊರಾಂಗಣವಿರುವುದರಿಂದ ನಾವು ವಾಕಿಂಗ್, ಸೈಕ್ಲಿಂಗ್ ಮಾಡಲು ಸುಲಭ. ಆದರೆ ಪಾರ್ಕುಗಳಲ್ಲಿ ಜನ ಸೇರುವುದನ್ನು ಸರ್ಕಾರಗಳು ಇನ್ನೂ ತಡೆಹಿಡಿದಿವೆ. ರಸ್ತೆಯಲ್ಲಿ ಓಡಾಡುವಾಗ ಜನರು ಒಂದೂವರೆ ಮೀಟರ್ ದೂರ ಅಂತರವಿರಬೇಕು ಅನ್ನೋದನ್ನ ಇನ್ನೂ ಪಾಲಿಸುತ್ತಿದ್ದಾರೆ. ವಾರಾಂತ್ಯದ ಮಾರುಕಟ್ಟೆಗಳು ಮುಚ್ಚಿರುವುದು ಪಿಚ್ಚೆನಿಸಿದೆ. ಅಲ್ಲಿಗೆ ನಾನು ಬರೀ ತರಕಾರಿ ಹಣ್ಣು ಕೊಳ್ಳಲು ಹೋಗುತ್ತಿರಲಿಲ್ಲ ಅನ್ನೋದು ನನಗೆ ಮನದಟ್ಟಾಗಿದೆ. ಈ ಗೊಣಗಾಟವನ್ನು ಕೇಳಿದ ಮಕ್ಕಳು ಮತ್ಯಾಕೆ ಹೋಗುತ್ತಿದ್ದೆ ಅಂದರು. ಮಾರುಕಟ್ಟೆಗಳಲ್ಲಿ ನಮ್ಮ ಜನಜೀವನವಿದೆ ಕಾಣಿರೋ, ಅಲ್ಲಿರುವ ವಿವಿಧ ಸ್ಟಾಲುಗಳಲ್ಲಿ, ಮಾರುವ ಜನರಲ್ಲಿ, ಕೊಳ್ಳುವವರಲ್ಲಿ ಜೀವನಪ್ರವಾಹವೆಂಬುದು ಹರಿಯುತ್ತಿದೆ. ಅದನ್ನು ಅನುಭವಿಸಲು ಹೋಗುತ್ತಿದ್ದೆ. ಛೆ, ಕಳೆದ ಐದು ವಾರಗಳಿಂದ ಮಾರುಕಟ್ಟೆಗಳು ಮುಚ್ಚಿರುವುದು ನನ್ನ ಮನಸ್ಸಿನ ಒಂದು ಕಿಟಕಿಯನ್ನು ಮುಚ್ಚಿದಂತಾಗಿದೆ, ಇದು ಯಾಕೋ ಸರಿಯಿಲ್ಲಪ್ಪ ಎಂದು ಮಾತನಾಡುತ್ತೀನಿ. ಸ್ವಗತದಲ್ಲಿ ಕೂಡ ಸುಖವಿದೆ. ಪ್ರತಿ ಮಾತಿನಲ್ಲೂ ನಮ್ಮದೇ ಅಂತರಂಗದ ಅರ್ಥಗಳಿವೆ.

ಅಂಥಾ ಕೆಲವು ಮೌನ-ಮಾತುಗಳನ್ನು ಕೇಳಿಸಿಕೊಳ್ಳಲು ವಾರಾಂತ್ಯದ ಮಾರುಕಟ್ಟೆಯ ಅವಿಭಾಜ್ಯ ಅಂಗವಾಗಿರುವ ಗುಜರಿ ಮಳಿಗೆಗಳಿಗೆ ಭೇಟಿ ಕೊಡಬೇಕು. ಅಲ್ಲಿರುವ ವಸ್ತುಗಳನ್ನು ನೋಡುತ್ತಾ ಕಳೆದುಹೋಗಬೇಕು. ನಮ್ಮದೇ ಖಾಸಗಿ ಕಲ್ಪನಾಲೋಕಕ್ಕೆ ಲಗ್ಗೆಯಿಡುತ್ತಾ ಕಥೆಗಳನ್ನು ಕಟ್ಟಬೇಕು. ಹೌದು ಕಟ್ಟಲೇಬೇಕು, ಹಾಗಾದರೆ ಮಾತ್ರ ಈ ನೀರಸ ದಿನಗಳನ್ನು ಎಣಿಸಲು ಸಾಧ್ಯ.

ಆ ಗುಜರಿ ಮಳಿಗೆಗಳಲ್ಲಿ ಬರೀ ಹರುಕುಮುರುಕು, ಯಾರದ್ದೋ, ಸತ್ತುಹೋದವರ, ಇಲ್ಲಾ ಅಡವಿಟ್ಟು ಸಾಲ ಮರಳಿಸಲಾಗದವರ ಸರಕು ಇಟ್ಟಿರುತ್ತಾರೆ, ಅದನ್ನು ನೋಡಲು ಯಾಕೆ ಸಮಯ ವ್ಯರ್ಥ ಮಾಡುತ್ತೀಯಾ ಅಂತಾರೆ ನಮ್ಮನೇಲಿ. ಅವೆಲ್ಲಾ ಒಂದಲ್ಲ ಒಂದು ದಿನ antiques ಆಗುತ್ತೆ, ಸುಮ್ಮನಿರಿ ಎಂದು ನನ್ನ ಒಣವಾದ. ಹಾಗೆಂದು ಪ್ರತಿವಾರವೂ ಅವನ್ನೇ ನೋಡಲು ನಾನೇನು ಹಂಬಲಿಸುತ್ತಿರಲಿಲ್ಲ. ಆಗೊಮ್ಮೆ, ಈಗೊಮ್ಮೆ ಕಣ್ಣಾಡಿಸುತ್ತಿದೆ.

ನಾನು ಪ್ರತಿವಾರವೂ ಹೋಗುವುದು ಮಾರುಕಟ್ಟೆಗೆ ತಂದು ಮಾರುವ ಪ್ರತಿಯೊಂದು ಗಿಡಮರ, ಬಳ್ಳಿ, ಕೊಂಬೆಗಳನ್ನು ನೋಡುವುದಕ್ಕೆ. ಅದರ ಮಧ್ಯದಲ್ಲಿ ಸಮಯವಿದ್ದರೆ, ಚೀಲದಲ್ಲಿ ಇನ್ನೂ ಕ್ಯಾಶ್ ಉಳಿದಿದ್ದರೆ ಈ ಗುಜರಿ ಮಳಿಗೆಯತ್ತ ಕಣ್ಣಾಡಿಸುತ್ತಿದ್ದೆ. ಆಗಾಗ ಬಹು ಚೆಂದದ ಕೆಲ ವಸ್ತುಗಳು ಕಣ್ಣಿಗೆ ಬೀಳುತ್ತಿದ್ದವು. ಅವು ಏನು, ಅವುಗಳ ಹುಟ್ಟಿನ ರಹಸ್ಯವೇನು, ನಿಮಗೆ ಹೇಗೆ ಸಿಕ್ಕಿತು, ಎಂದೆಲ್ಲ ಅವುಗಳನ್ನು ಚೆಂದನೆ ಜೋಡಿಸಿ ಮಾರಲು ಹಾತೊರೆಯುತ್ತಿದ್ದ ಮಳಿಗೆದಾರರ ಬಳಿ ಮಾತಿಗಿಳಿಯುತ್ತಿದ್ದೆ. ಅವರು ಹೇಳುವ ಕಥೆಗಳನ್ನು ಮನಸ್ಸಿಟ್ಟು ಕೇಳುತ್ತಿದ್ದೆ. ಅವರಲ್ಲಿ ಕೆಲವರು ಬಹು ಕುತೂಹಲ ಕೆರಳಿಸುವ ಕಥೆಗಳನ್ನು ಹೇಳಿದ್ದಾರೆ. ಅವನ್ನು ಆಗಾಗ ನೆನಪಿಸಿಕೊಳ್ಳುವುದೂ ಕೂಡ ನನ್ನ ಸೈಕಾಲಜಿ ಕ್ಲಾಸಿಗೆ ಉಪಯೋಗವಾಗುತ್ತದೆ. ಆ ಮಾತು ಹಾಗಿರಲಿ. ಈಗ ಗುಜರಿ ಲೋಕದ ಒಂದು ಕಿಟಕಿ ತೆರೆಯುತ್ತೀನಿ.

ವಾರಾಂತ್ಯದ ಮಾರುಕಟ್ಟೆಗಳ ಮಳಿಗೆಯೆಂದರೆ ಅಂಗಡಿಯ ತರವಲ್ಲ. ದೊಡ್ಡದೊಂದು ಕಾರ್ ಪಾರ್ಕಿನಲ್ಲಿ ವಾರಾಂತ್ಯದ ಮಾರುಕಟ್ಟೆಗಳು ನಡೆಯುತ್ತವೆ. ಪ್ರತಿಯೊಬ್ಬರೂ ಒಂದಷ್ಟು ಜಾಗವನ್ನು ಪಡೆದು ಅದಕ್ಕೆ ಮುಂಗಡವಾಗಿ ಬಾಡಿಗೆ ಕೊಟ್ಟು, ಮಾರುಕಟ್ಟೆ ನಡೆಯುವ ದಿನ ಬೆಳಗಿನ ಜಾವವೇ ಬಂದು ತಮ್ಮ ಮಳಿಗೆ ವಸ್ತುಗಳನ್ನು ಜೋಡಿಸಿಟ್ಟು ಅವನ್ನು ಮಾರುತ್ತಾರೆ. ಕೆಲವರು ಜೋಶಾಗಿ ತಲೆಮೇಲೊಂದು ತಾತ್ಕಾಲಿಕ ಸೂರನ್ನು ಹಾಕಿಕೊಂಡರೆ ಹೆಚ್ಚಿನವರು ಬರಿ ಒಂದು ಖುರ್ಚಿ ತಂದು ಕೂತು, ವಸ್ತುಗಳನ್ನ ನೆಲದ ಮೇಲೆಯೋ ಇಲ್ಲಾ ಮೇಜಿನ ಮೇಲೆಯೋ ಜೋಡಿಸಿರುತ್ತಾರೆ. ನಾವು ಕೊಳ್ಳುದಾರರು ಅವನ್ನು ನೋಡುತ್ತಾ, ಮಾತನಾಡುತ್ತಾ ನಿಲ್ಲಲು ಬೇಕಾದಷ್ಟು ಜಾಗವಿರುತ್ತದೆ.

ಹಾಗೆ ಒಂದಿನ ವಾರಾಂತ್ಯದ ಮಾರುಕಟ್ಟೆಯ ಗುಜರಿ ಮಳಿಗೆಯೊಂದರಲ್ಲಿ ಇಣುಕಿ ನೋಡುತ್ತಿರುವಾಗ ಭಾರತದಲ್ಲಿ, ನಮ್ಮನೆಯಲ್ಲಿ ಹಿಂದೊಮ್ಮೆ ಬಳಸುತ್ತಿದ್ದ ಹಿತ್ತಾಳೆಯ ಸ್ಟೋವ್ ತರಹದ ಒಂದು ಸ್ಟೋವ್ ಕಾಣಿಸಿಬಿಟ್ಟಿತು. ಚಿಕ್ಕಂದಿನಲ್ಲಿ ಅದರ ಸಣ್ಣ ಬಾಯನ್ನು ಬಿಚ್ಚಿ ಅದರೊಳಗೆ ಸೀಮೆ ಎಣ್ಣೆ ಸುರಿದು ಬಾಯನ್ನು ಭದ್ರಮಾಡಿ, ಅದರ ಕೀಲನ್ನೆಳೆದು ಅದರ ತಲೆ ಮೇಲೆ ಬೆಂಕಿಕಡ್ಡಿ ಗೀಚಿ ಸ್ಟೋವ್ ಹತ್ತಿಸುತ್ತಿದ್ದೆವು. ಆ ಕಾಲದಲ್ಲಿ ಈ ಕಲೆ ನನಗಷ್ಟು ಕರತಲಾಮಲಕವಾಗದಿದ್ದರೂ ಅದನ್ನು ದಿನಾಗಲೂ ನೋಡಿ ನೋಡಿ ಅಭ್ಯಾಸವಾಗಿ ಅದರೊಡನೆ ಜೀವನ ಕೊಂಡಿಹಾಕಿಕೊಂಡಿತ್ತು.

ಕಳೆದ ಐದು ವಾರಗಳಿಂದ ಮಾರುಕಟ್ಟೆಗಳು ಮುಚ್ಚಿರುವುದು ನನ್ನ ಮನಸ್ಸಿನ ಒಂದು ಕಿಟಕಿಯನ್ನು ಮುಚ್ಚಿದಂತಾಗಿದೆ, ಇದು ಯಾಕೋ ಸರಿಯಿಲ್ಲಪ್ಪ ಎಂದು ಮಾತನಾಡುತ್ತೀನಿ. ಸ್ವಗತದಲ್ಲಿ ಕೂಡ ಸುಖವಿದೆ. ಪ್ರತಿ ಮಾತಿನಲ್ಲೂ ನಮ್ಮದೇ ಅಂತರಂಗದ ಅರ್ಥಗಳಿವೆ.

ಒಮ್ಮೆ ಅಜ್ಜಿ ಸ್ಟೋವ್ ಆರಿಸಿ ಆ ಕಡೆ ತಿರುಗಿದಾಗ ಇನ್ನೂ ಕೆಂಪನೆ ಬಣ್ಣವಿದ್ದ ಆಕರ್ಷಕವಾಗಿ ಕಂಡಿದ್ದ ಸ್ಟೋವ್ ತಲೆಮೇಲೆ ಕಿರುಬೆರಳಿಟ್ಟು ಚಕ್ಕನೆ ಅದು ಬೆರಳಿನ ತುದಿಯನ್ನು ನಿರ್ದಯದಿಂದ ಸುಟ್ಟಿದ್ದು, ಪ್ರಾಣಹೋಗುವಷ್ಟು ಗಾಬರಿಯಿಂದ ಸರಕ್ಕನೆ ಕೈ ಹಿಂದಕ್ಕೆ ಎಳೆದುಕೊಂಡದ್ದು ಚೆನ್ನಾಗಿ ನೆನಪಿದೆ. ಅಂತಹುದೇ ಸ್ಟೋವ್ ಕಂಡಾಗ ಅದು ನೆನಪಿಗೆ ಬಾರದೆ ಇರುವುದೇ?! ಮುಂದೊಂದು ದಿನ ಗ್ಯಾಸ್ ಬಂದ ಮೇಲೆ ನಮ್ಮಮ್ಮ ಉಶ್ಯಪ್ಪಾ, ಆ ಹಾಳು ಸೀಮೆಎಣ್ಣೆ ಸ್ಟೋವ್ ಸಹವಾಸ ಮುಗಿಯಿತು, ಎಂದರೆ ನನಗೆ ಹೊಳೆಯುತ್ತಿದ್ದ ಹಿತ್ತಾಳೆ ಮೈಯಿದ್ದ ಸ್ಟೋವ್ ಕತೆ ಹೀಗೆ ಬೈಸಿಕೊಂಡು ಕೊನೆಯಾಯ್ತಲ್ಲಾ ಅನ್ನಿಸಿ ಬೇಸರವಾಗಿತ್ತು. ಅದು ಅಟ್ಟ ಹತ್ತಿ ಮುಂದೆ ಏನಾಯ್ತೋ ಗೊತ್ತಿಲ್ಲ.

ಅಂಥದ್ದೊಂದು ಹಿತ್ತಾಳೆ ಮೈ ಇದ್ದ ಆ ಹಳೆಕಾಲದ ಸ್ಟೋವ್ ಈ ಬ್ರಿಸ್ಬನ್ ನಗರದ ಆಚೆಯಿರುವ ಯಾವುದೋ ಒಂದು ಬಡಾವಣೆಯಲ್ಲಿ, ವಾರಾಂತ್ಯದಲ್ಲಿ ಒಬ್ಬ ಗುಜರಿಯವನ ಬಳಿ ಕಂಡಾಗ ನನ್ನ ಕಣ್ಣುಗಳು ಹೊಳೆದು, ಅಯ್ಯೋ, ಅದೇ ಸೀಮೆ ಎಣ್ಣೆ ಸ್ಟೋವ್ ಎಂದು ಜೋರಾಗೇ ಕಿರುಚಿದ್ದೆ. ಗುಜರಿಯವ ಸ್ಟೋವ್ ಬಗ್ಗೆ ನನಗೇನೂ ತಿಳಿದಿಲ್ಲ ಅಂದುಕೊಂಡು ಅದರ ಬಗ್ಗೆ ಎರಡು ನಿಮಿಷಗಳ ಕಾಲ ವಿವರಿಸಿದ. ನನ್ನ ಬಾಲ್ಯದಲ್ಲಿ ಇಂಥದ್ದೇ ಒಂದು ನಮ್ಮನೆಯಲ್ಲಿತ್ತು ಎಂದು ತಿಳಿದು ಹೌದಾ ಅಂದು ಅದನ್ನು ತೆಗೆದು ನನ್ನ ಕೈಯಲ್ಲಿಟ್ಟು ಹತ್ತು ಡಾಲರ್ ಕೊಡು ಸಾಕು, ಅಂದ. ಅದನ್ನ ಕೊಂಡು ಏನ್ ಮಾಡ್ತೀಯ ಎಂದು ಕೊಕ್ಕೆ ಹಾಕಿದ ಜೀಬಿಗೆ antique ಕಣ್ರೀ antique ಅಂತ ನಾನೆಂದರೆ ಜೀಬಿ ನಿಂತಿದ್ದ ಹಾಗೆ ಅವರ ಪಕ್ಕ ಹಾದುಹೊದ ಗಂಡಸೊಬ್ಬ ‘ಐ ಫೀಲ್ ಸಾರೀ ಫಾರ್ ಯು ಮೇಟ್’ ಅನ್ನುವುದೇ! ಜೀಬಿಗೆ ಮುಜುಗರವಾಯ್ತೆನೋ. ನನ್ನ ಕೈಗೆ ಬಂದ ಸ್ಟೋವ್ ಮಾತ್ರ ವಾಪಸ್ ಗುಜರಿ ಅಂತಸ್ತಿಗೆ ಮರಳಲಿಲ್ಲ. ಹಿತ್ತಾಳೆ ಮೈಯುಳ್ಳ ಸ್ಟೋವ್ ಮುದ್ದಾಗಿ ಗೃಹಪ್ರವೇಶ ಮಾಡಿದರೂ ಕೆಲಸವಿಲ್ಲದೇ ಸುಮ್ಮನೆ ಕೂತಿದೆ. ಅದನ್ನು ನೋಡಿದಾಗಲೆಲ್ಲ ನನಗೆ ಗ್ಯಾಸ್ ಸ್ಟೋವ್ /ಸಿಲಿಂಡರ್ ಇಲ್ಲದಿದ್ದ ಕಾಲದಲ್ಲಿ ಒಲೆ ಹತ್ತಿಸಲು, ಅಡುಗೆ ಮಾಡಲು ಹೆಂಗಸರು ಪಟ್ಟ ಬವಣೆಗಳು ನೆನಪಾಗುತ್ತವೆ.

ಅದಾದ ಮೇಲೆ ನನ್ನ ಈ antique ಸ್ಟೋವ್ ಕಥೆ ಕೇಳಿದ ಸ್ನೇಹಿತೆಯೊಬ್ಬರು ಮನೆಗೆ ಕರೆದು ತಮ್ಮ ಮಗನ ಮೇಜಿನ ಮೇಲಿದ್ದ typewriter ತೋರಿಸಿದರು. ಅದು ಅವರಿಗೆ ಸಿಕ್ಕಿದ್ದು ಬ್ರಿಸ್ಬನ್ ಪಕ್ಕದ ಊರಿನ ಒಂದು ಗುಜರಿ ಸ್ಟಾಲಿನಲ್ಲಂತೆ. ಈಗ ಅಪರೂಪವಾಗಿರುವ ಟೈಪ್ ರೈಟರ್ ಗೋಸ್ಕರ ಅವರು ಎರಡು ಮೂರು ವರ್ಷಗಳು ಹುಡುಕಿದ್ದರಂತೆ. ಆಗ ತಾನೆ ಹೈಸ್ಕೂಲಿಗೆ ಬಂದಿದ್ದ ಮಗನಿಗೆ ಮುಂದೆ ಶಾಲೆಯಲ್ಲಿ ಕಂಪ್ಯೂಟರ್ ಬಳಕೆ ಕಡ್ಡಾಯವೆಂದು ತಿಳಿದು ಅವನು ಟೈಪ್ ರೈಟರ್ ಬಳಸಿ ಟೈಪಿಂಗ್ ಕಲಿತರೆ ಅದೇ ಶೈಲಿಯಲ್ಲಿ ಎಲ್ಲಾ ಬೆರಳುಗಳನ್ನು ಬಳಸಿ ಕಂಪ್ಯೂಟರಿನಲ್ಲಿ ಟೈಪ್ ಮಾಡಲು ಸುಲಭವಾಗುತ್ತದೆ ಎಂದು ಅವರು ಅಂದಾಜಿಸಿದ್ದರು. ಟೈಪ್ ರೈಟರ್ ಅನ್ನುವ ಯಂತ್ರವನ್ನು ಯಾವತ್ತೂ ನೋಡಿಯೇ ಇಲ್ಲದಿದ್ದ ಅವನಿಗೆ ಹೊಸದರಲ್ಲಿ ಬಳಸಲು ಕಷ್ಟಪಟ್ಟರೂ, ಈಗ ಲೀಲಾಜಾಲವಾಗಿ ಬೆರಳಿಗೆ ನೋವಾಗದಂತೆ ಟೈಪ್ ಮಾಡುತ್ತಾನೆ, ಓಲ್ಡ್ ಈಸ್ ಗೋಲ್ಡ್ ಅಂದರು.

ಅವರ display ಕ್ಯಾಬಿನ್ನೆಟ್ಟಿನಲ್ಲಿದ್ದ ಚೈನಾದೇಶದ ಸುಂದರ ಟೀ ಪಾಟ್, ಅವರ ತೋಟದಲ್ಲಿದ್ದ ಹಳೆಕಾಲದ ಸೈಕಲ್ಲು, ಮರದ ತಳ್ಳುಗಾಡಿ, ಗುಜರಿವಸ್ತುಗಳನ್ನು ಬಳಸಿ ಕಟ್ಟಿದ್ದ ಆಕರ್ಷಕ ಫೈರ್ ಪಿಟ್, ಬೊಂಬಿನ ಪರದೆ ಮುಂತಾದವು ಬೇರೆ ಬೇರೆ ಊರುಗಳ ಗುಜರಿ ಮಾರ್ಕೆಟ್ಟುಗಳಿಂದ ಬಂದಿದ್ದಂತೆ. ಈ ವಿವರಗಳನ್ನ ಕೇಳಿ ಸುಸ್ತುಬಿದ್ದೆ. ಪರಿತಪಿಸಬೇಡ, ನಿನ್ನ ಜೊತೆ ನನ್ನಂಥವರು ಬೇಕಾದಷ್ಟು ಜನರಿದ್ದೀವಿ. ಈ ದೇಶದಲ್ಲಿ ಜಂಕ್ ಅನ್ನೋದು ಬಿಸಾಕುವ ಪದಾರ್ಥವಲ್ಲ, ಬೆಲೆಯುಳ್ಳ ಮತ್ತು ಮರುಬಳಕೆಯಾಗುವ ಚೆನ್ನಾದ ವಸ್ತು ಎನ್ನುವುದನ್ನ ಅರ್ಥಮಾಡಿಕೋ, ಎಂದ ಆಕೆಗೆ ಥ್ಯಾಂಕ್ಸ್ ಹೇಳಿದ್ದೀನಿ.

ನನ್ನ ಗುಜರಿ ಪ್ರಪಂಚದ ಪರಿಚಯ ಮತ್ತು ಕುತೂಹಲ ಬೆಳೆಯುತ್ತಿದ್ದ ಕಾಲದಲ್ಲಿ ಒಮ್ಮೆ ನಾನು ಕೊಳ್ಳುತ್ತಿದ್ದ, ನೋಡಲು ನಿಲ್ಲುತ್ತಿದ್ದ bromelaid ಗಿಡಗಳ ಮಳಿಗೆಗೆ ಹೋದೆ. ನಾನು ನೋಡಲು ಹೋದ bromelaid ಗಿಡಗಳ ಮಳಿಗೆದಾರ ಹಿಂದೊಮ್ಮೆ ಹಿಪ್ಪಿಕಾಲದವನು. ಬ್ರಿಟನ್ನಿಂದ ತಿರುಗಾಟಕ್ಕೆಂದು ಬಂದು ಆಸ್ಟ್ರೇಲಿಯ ಸುತ್ತುತ್ತಾ ಇಲ್ಲೇ ನೆಲೆನಿಂತವನು. ಅಪರೂಪಕ್ಕೆ ಸಮಯವಿದ್ದರೆ ಮಾತ್ರ ಅವನನ್ನು ಮಾತನಾಡಿಸುತ್ತಿದ್ದೆ. ಅವನ ಬಳಿ ಇರುವ ಭಯಂಕರ ಕಥೆಗಳ ಗುಚ್ಛಗಳನ್ನು ಬಿಡಿಸುವ ಸಾಹಸವನ್ನಂತೂ ಇಂದಿಗೂ ಮಾಡಿಲ್ಲ. ಇವನ ಬಳಿಯೇ ಒಂದು ದಿನ ಮಾತನಾಡುತ್ತಾ ಅವನು ಬಾರಿಸುತ್ತಿದ್ದ ಬೋಂಗೊ ಡ್ರಮ್ ನೋಡಿ, ಅವನನ್ನು ಪುಸಲಾಯಿಸಿ ಅದನ್ನು ಕೊಂಡುಬಿಟ್ಟಿದ್ದೆ. ಡ್ರಮ್ ಬಾರಿಸುವುದನ್ನ ಕಲಿಯಲು ಬರುತ್ತೀನಿ ಎಂದೂ ಕೂಡ ಹೇಳಿದ್ದೆ.

ಆ ದಿನ ಹೋದ ಗಳಿಗೆ ಚೆನ್ನಾಗಿತ್ತು. ಯಾಕೆಂದರೆ ಅದಕ್ಕೂ ಮುನ್ನ ಗುಜರಿ ವಸ್ತುಗಳ ಮೇಜುಗಳನ್ನು ನೋಡುತ್ತಾ ಸಾಗುತ್ತಿದ್ದವಳ ಕಣ್ಣಿಗೆ ಪುಟ್ಟನೆ ಬಿದಿರಿನಿಂದ ಮಾಡಿದ್ದ ಪುಟಾಣಿ ಸೈಕಲ್ಲೊಂದು ಕಾಣಿಸಿತು. ಅದೆಷ್ಟು ಮುದ್ದಾಗಿತ್ತೆಂದರೆ ಅದನ್ನೇ ನೋಡುತ್ತಾ ನಿಂತಿದ್ದವಳನ್ನು ಆ ಮಳಿಗೆಯಾತ ‘ಕೊಳ್ಳುತ್ತಿಯೋ ಇಲ್ಲವೋ’ ಎಂದು ಗದರಿಸಿದ. ಅರೆ, ನಿನ್ನ ಗದರಿಕೆ ಕೇಳಿದ ಮೇಲೆ ಅದನ್ನು ಕೊಳ್ಳಲಿದ್ದ ಮನಸ್ಸು ಬದಲಾಯಿಸಿಬಿಟ್ಟಿತು’ ಅಂದು ಜಾಗ ಖಾಲಿ ಮಾಡಿದೆ. ತರಕಾರಿ ಹಣ್ಣು ಕೊಂಡಾದ ಮೇಲೊ ಆ ಮುದ್ದಾದ ಬಿದರಿನ ಪುಟಾಣಿ ಸೈಕಲ್ಲಿನ ಮೇಲೆ ಮನಸ್ಸು ನಿಂತಿತ್ತು. ಕಾರಲ್ಲಿ ಕೂತವಳು ವಾಪಾಸ್ ಹೋದೆ. ಸೈಕಲ್ಲನ್ನು ಕೊಂಡೇಬಿಟ್ಟೆ. ಅದರ ಹರ್ಷವನ್ನು ಯಾರ ಬಳಿಯಾದರೂ ಹಂಚಿಕೊಳ್ಳಬೇಕು ಅನ್ನಿಸಿಬಿಟ್ಟಿತು.

ನೇರ ಆ ಗಿಡಗಳ ಮಳಿಗೆಯ ಹಿಪ್ಪಿ ಬಳಿ ಹೋದೆ. ಮುಖದ ತುಂಬಾ ಹರಡಿದ್ದ ಉತ್ಸಾಹವನ್ನು ಮುಚ್ಚಿಡದೆ ಸೈಕಲ್ಲನ್ನು ಕೈಯಲ್ಲಿ ಹಿಡಿದೆತ್ತಿ ಅವನಿಗೆ ತೋರಿಸಿ ಹೇಗಿದೆ ಎಂದೆ. ‘ಇಡೀ ಮಾರುಕಟ್ಟೆ ಸುತ್ತುವಾಗ ಇವತ್ತು ಬೆಳಿಗ್ಗೆಯೇ ಇದನ್ನ ನೋಡಿದೆ. ಅವನು ‘ನಿಜ ಹೇಳಬೇಕೆಂದರೆ ಇವತ್ತಿನ ಈ ಮಾರುಕಟ್ಟೆಯಲ್ಲಿರುವ ಸಮಸ್ತ ವಸ್ತುಗಳಲ್ಲಿ ಇದೊಂದೇ ಕೊಳ್ಳಲು ಲಾಯಕ್ಕಾಗಿರುವುದು ಮತ್ತು ಅತ್ಯಂತ ಬೆಲೆ ಬಾಳುವಂಥದ್ದು ಎನ್ನಿಸಿತ್ತು. ಮಧ್ಯಾನ್ಹ ಅವನ ಬಳಿ ಹೋಗಿ ನಾನೇ ಇದನ್ನ ಕೊಳ್ಳಬೇಕೆಂದಿದ್ದೆ. ನೀ ಕೊಂಡುಬಿಟ್ಟೆ. ಬಲು ಮುದ್ದು ಹುಟ್ಟಿಸುತ್ತದೆ. ಈ ಮುಂಜಾನೆ ಅದನ್ನು ನೋಡಿದ ಕ್ಷಣ ನನ್ನಲ್ಲಿ ಏನೇನೋ ನೆನಪು. ಬಿಡು, ಅದೆಲ್ಲಾ ಈಗ್ಯಾಕೆ. ಅಷ್ಟೊಂದು ಮುಚ್ಚಟೆಯಾಗಿ ನೋಡಿಕೊಂಡ ಅದರ ಒಡತಿ ಹೇಗಿದ್ದಳೋ ಎನ್ನುವ ಕಲ್ಪನೆ ಹುಟ್ಟಿತು. ಇರಲಿ ಬಿಡು. ಅದು ನಿನ್ನ ಮಡಿಲಿಗೆ ಬಂದಿದೆ. ಜೋಪಾನವಾಗಿ ನೋಡಿಕೋ,’ ಅಂದ. ಎಳೆ ಕರುವಿನಂತೆ ಕುಣಿಕುಣಿದಾಡುವ ಆಸೆಯಾಯ್ತು.