1.

ಕವಿತೆ ಅವಿತು ಕೂರುತ್ತೆ
ಉಡದಂತೆ

ಹಿಡಿಯಲು
ಬಾಲ ಹಿಡಿದು
ರೆಟ್ಟೆ ತೋಳು ಎಲುಬಿನ ಬಲಹಾಕಿ
ದರದರ ಎಳೆಯಬೇಕು

ಸಿಕ್ಕರೂ
ತಪ್ಪಿಸಿಕೊಂಡು ಹೋಗಲು ಶತಪ್ರಯತ್ನ
ನಾಲಿಗೆ ಹೊರಹಾಕಿ ಪರಪರ ಬರಕಿ
ಧರೆಯನ್ನು ಅವುಡುಗಚ್ಚಿ ಹಿಡಿಯುತ್ತೆ

ಸಿಕ್ಕರೆ
ಜಾಗೃತೆಯಾಗಿ ಹಿಡಿದು
ಬಾಲ ಕುತ್ತಿಗೆಗೆ ಹಗ್ಗ ಬಿಗಿದು
ಸಿದ್ದಿ ರಾಮನಿಗೆ ಮಧ್ಯಾನ್ಹ ರಾತ್ರಿ ಮದ್ಯಾನ್ಹ ಸಾರು.

ಫಾರೆಸ್ಟಿನವರಿಗೆ ಗೊತ್ತಾದರೆ ಜೈಲು

ಸಿಗಬೇಡ ಉಡವೇ,
ಒಳಗೆ ಕತ್ತಲಿನ ಆಳದಲ್ಲಿ
ಭೂಮಿಯ ಹೊಟ್ಟೆಯಲ್ಲಿ
ಸುಮ್ಮನೆ ಅಡಗಿ ಕೂರು
ಮೊಟ್ಟೆಯಿಟ್ಟು ಮರಿಮಾಡು
ಕವಿತೆಯ ಸಂತತಿ ಸಾವಿರಾಗಲಿ

2.

ಭೂಮಿಯಂತೆ ಆಕಾಶದಲ್ಲಿ
ನೆಲವಿಲ್ಲ, ಬೆಟ್ಟ ಗುಡ್ಡ ಮರ

ಆಕಾಶ
ನೀಲಿ ಚಾದರ
ಗಾಳಿಯಲ್ಲಿ ತೇಲುವ ಸೂರ್ಯ

ನೆಲ ಆಕಾಶ ತಾಗುವ ಜಾಗ
ಅಮ್ಮ ಮಾಡುವ ನಮಸ್ಕಾರ

ಉತ್ತರಕನ್ನಡದ ಯಲ್ಲಾಪುರದ ಗುರುಗಣೇಶ ಭಟ್ ಡಬ್ಗುಳಿ,
ಸದ್ಯ ಉಜಿರೆಯ ಎಸ್ ಡಿ ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿ.
ಓದು ಮತ್ತು ಬರವಣಿಗೆಯಲ್ಲಿ ಆಸಕ್ತಿ.