ಹೊರದೇಶಕ್ಕೆ ಗುಳೆ ಬಂದವರನ್ನು monolithic ಆಗಿ ನೋಡುವ ಪರಿಪಾಠ ನಮ್ಮಲ್ಲಿ ಮೊದಲಿಂದಲೂ ಇದೆ. ಅದು ಅಮೇರಿಕಕ್ಕೆ ಹೋಗುವ ಡಾಕ್ಟರ್, ಇಂಜಿನಯರುಗಳಾಗಬಹುದು ಅಥವಾ ಇನ್ನಿತರ ಎಡೆಗಳಿಗೆ ಹೋಗುವ ಮಂದಿಯಿರಬಹುದು. ನಾನು ಹೇಳುತ್ತಿರುವುದು ಅವರಲ್ಲಿ ಆಗುವ ಮಾರ್ಪಾಡುಗಳ ಬಗ್ಗೆ ಅಲ್ಲ. ಅಥವಾ ಬದಲಾಗುವ, ಆಗದಿರುವ ನಿಲುವುಗಳ ಬಗ್ಗೆ ಅಲ್ಲ. ಒಂದೇ ಹೊತ್ತಲ್ಲಿ, ಒಂದು ಊರಲ್ಲಿ ವಾಸವಾಗುವ ಹಲವು ಸ್ತರದ ಇಂಡಿಯನ್ನರ ಬಗ್ಗೆ. ಅದಕ್ಕೆ ಎರಡನೇ ತಲೆಮಾರಿನ ಮಕ್ಕಳನ್ನೂ ಸೇರಿಸಿದರೆ ಮತ್ತೂ ಮುಖಗಳು ತೆರೆದುಕೊಳ್ಳುತ್ತದೆ. ಅಮೇರಿಕಕ್ಕೆ ಹೋಗಿರುವ ಮಂದಿಯಲ್ಲಿ ಮೇಲ್ವರ್ಗದ ವಿದ್ಯಾವಂತರೇ ಹೆಚ್ಚು. ಪ್ರೊಫೆಶನಲ್ ಮಂದಿಯೇ ಹೆಚ್ಚು. ಆಫ್ರಿಕಕ್ಕೆ, ಇಂಗ್ಲೆಂಡಿಗೆ ಹೋದವರಲ್ಲಿ ವ್ಯಾಪಾರಿಗಳೇ ಹೆಚ್ಚು. ಆಸ್ಟ್ರೇಲಿಯಕ್ಕೆ ಬಂದರಲ್ಲಿ ಟ್ರೇಡ್ಸ್‌ಮೆನ್ನುಗಳೇ ಹೆಚ್ಚು (ಅದರ ಹೆಚ್ಚುಗಾರಿಕೆಯನ್ನು ಇನ್ನಾವಾಗಲಾದರೂ ಎತ್ತಿಕೊಳ್ಳುತ್ತೇನೆ). ಆದರೆ, ಅಲ್ಲೆಲ್ಲಾ/ಇಲ್ಲೆಲ್ಲಾ ಉಳಿದವರೂ ಇದ್ದಾರೆ. ಮತ್ತು ಇತ್ತೀಚೆಗೆ ಹೆಚ್ಚುತ್ತಲೂ ಇದ್ದಾರೆ.

ಯಾಕೆ ಹೇಳಿದೆನೆಂದರೆ, ಮೊನ್ನೆ ಸಂಜೆ ಕೆಲಸದಿಂದ ಹೊರಡುವುದು ತಡವಾಗಿತ್ತು. ಅಕ್ಕಪಕ್ಕದಲ್ಲಿ ಯಾವುದೋ ನೈಟ್‌ ಕಾಲೇಜು ಬಿಟ್ಟಿರಬೇಕು. ರೈಲಿಗೆ ಇಂಡಿಯನ್ ಹುಡುಗರ ಒಂದು ಗುಂಪು ಹತ್ತಿತು. ಇಂಡಿಯದಿಂದ ಬಂದು ಇಲ್ಲಿನ ಕಾಲೇಜುಗಳಲ್ಲಿ ಓದುವುದು ಇತ್ತೀಚೆಗೆ ಹೆಚ್ಚುತ್ತಿದೆ. ನಂತರ ಇಲ್ಲಿಯ ರೆಸಿಡೆನ್ಸಿ ಪಡಕೊಂಡು ಹಲವರು ಉಳಿದುಕೊಳ್ಳುತ್ತಾರೆ. ಮನೆಯ ಬ್ಯುಸಿನೆಸ್ಸೋ, ಬಂಡವಾಳ ಹೂಡಬಲ್ಲ ತಂದೆತಾಯಿಯರೋ ಇದ್ದರೆ ಹಿಂದಕ್ಕೆ ತೆರಳುತ್ತಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಂದು, ಓದುತ್ತಾ ಪಾರ್ಟ್-ಟೈಂ ಕೆಲಸ ಮಾಡಿಕೊಂಡು ಏಗುವುದು ಸುತ್ತಮುತ್ತ ತುಂಬಾ ಕಾಣುತ್ತದೆ.

ಎಂಟತ್ತು ಜನರಿದ್ದ ಗುಂಪಿನ ಹುಡುಗರು ಕೈಯಲ್ಲಿ ತಿಂಡಿ ಪೊಟ್ಟಣ ಹಿಡಕೊಂಡು ತಿನ್ನುತ್ತಾ, ಜೋರಾಗಿ ಮಾತಾಡುತ್ತಾ, ತಿಂಡಿ ಪೊಟ್ಟಣದಿಂದಲೇ ಒಬ್ಬರನ್ನೊಬ್ಬರು ಹೊಡೆಯುತ್ತಾ ಗಲಾಟೆ ಮಾಡಿಕೊಂಡಿದ್ದರು. ರೈಲು ಹತ್ತಿದ ಹಲವರು ಇವರ ಗದ್ದಲ ನೋಡಿ, ನಮಗ್ಯಾಕೆ ಇವರ ಉಸಾಬರಿ ಎಂಬಂತೆ ಕ್ಯಾರೇಜಿನ ಇನ್ನೊಂದು ಮೂಲೆಗೆ ದುಡುದುಡುನೆ ಹೋಗಿ ಕೂರುತ್ತಿದ್ದರು. ಪಂಜಾಬಿ ಮತ್ತು ಹಿಂದಿ ಮಿಶ್ರಿತ ಭಾಷೆ ಮಾತಾಡುತ್ತಿದ್ದ ಹುಡುಗರ ಪಕ್ಕ ಹೋಗಿ ಕೂತೆ. ಅವರ ಮಾತು ಕೇಳಲು ನನಗೆ ಆಸಕ್ತಿ. ಆದರೆ ಹೆಚ್ಚು ಅರ್ಥವಾಗಲಿಲ್ಲ. ಭಾಷೆಯ ತೊಡಕೊಂದೇ ಅಲ್ಲ, ಅವರು ಬಳಸುತ್ತಿದ್ದ ನುಡಿಗಟ್ಟುಗಳ ಒಳಾರ್ಥಗಳು ಗೊತ್ತಾಗುತ್ತಿರಲಿಲ್ಲ. ಅವರ ಜೋಕುಗಳೂಗೊತ್ತಾಗುತ್ತಿರಲಿಲ್ಲ.

ತಾವು ತಾವೇ ದೊಡ್ಡ ಗುಂಪಾದಾಗ ಧೈರ್ಯ, ಹುಂಬತನ ಹೆಚ್ಚು. ಆ ಹುಂಬತನದಲ್ಲಿ ಉಳಿದವರೊಡನೆ ಸಡಿಲವಾಗಿ ನಡಕೊಳ್ಳುವುದು ಉಂಟು. ಆಸ್ಟ್ರೇಲಿಯಾದಲ್ಲಂತೂ ಅದಕ್ಕೇನು ಬರವಿಲ್ಲ. ಆಸ್ಟ್ರೇಲಿಯದ ಬಿಳಿಯರಷ್ಟೇ ಅಲ್ಲ, ಅಬಾರಿಜಿನಿಗಳು, ಗ್ರೀಕರು, ಇಟಾಲಿಯನ್ನರು, ಲೆಬನೀಸರು, ವಿಯಟ್ನಮೀಸರು, ಚೈನೀಸರು ಹೀಗೆ ಹಲವಾರು ಹರೆಯದ ಹುಡುಗ/ಹುಡುಗಿಯರ ಗುಂಪಗಳು ಕಾಣಸಿಗುತ್ತವೆ. ಕೆಲವೊಮ್ಮೆ ಆ ಗುಂಪುಗಳು ಥ್ರೆಟನಿಂಗ್‌ ಆಗಿ ಇರುತ್ತವೆ. ಆದರೆ ಹೆಚ್ಚಾಗಿ ನಗು, ಗದ್ದಲವಷ್ಟೇ ಆಗಿರುತ್ತದೆ. ಆಲ್ಕೋಹಾಲ್ ಸೇರಿದಾಗ ತುಸು ದೂರ ಇರುವುದು ಕ್ಷೇಮ ಎಂದು ನಮ್ಮ ಒಳಮನಸ್ಸಿನಲ್ಲಿ ಎಚ್ಚರ ಸದಾ ಇದ್ದೇ ಇರುತ್ತದೆ. ಮೇಲೆ ಹೇಳಿದ ವಲಸಿಗರ ಸಮಾಜದ ಹಲವು ಸ್ತರಗಳಲ್ಲಿ ಇವರದು ಕೂಡ ಒಂದು. ಈ ಗುಂಪುಗಳದೂ ಒಂದು ಘಟ್ಟ.

ಮೊನ್ನೆ ಸಿಕ್ಕ ನೈಟ್ ಕಾಲೇಜಿನ ಗುಂಪು ರೈಲಿಗೆ ಹತ್ತಿ ಇಳಿಯುತ್ತಿದ್ದ ಹಲವಾರು ಹೆಣ್ಣುಮಕ್ಕಳ ಬಗ್ಗೆ ಜೋರಾಗಿ ಮಾತಾಡಿಕೊಳ್ಳುತ್ತಿದ್ದರು. ಹುಡುಗಿಯರ ಬಗ್ಗೆ ಹೇಳುತ್ತಿದ್ದಾರೆ ಎಂದು ಗೊತ್ತಾದರೂ ಏನು ಹೇಳುತ್ತಿದ್ದಾರೆಂದು ಗೊತ್ತಾಗದೇ ಕೂತಿದ್ದೆ. ಸಣ್ಣಪುಟ್ಟ ಸ್ಕರ್ಟ್ ತೊಟ್ಟ, ಇಳಿ ರವಿಕೆಯ ಹುಡುಗಿಯರು ಇವರ ನಗುವಿಗೆ, ಕೆಣಕಾಟಕ್ಕೆ ಸರಕಾಗಿತ್ತು. ನೇರವಾಗಿ ಕೆಣಕುತ್ತಿರಲಿಲ್ಲವಾದ್ದರಿಂದ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನಾನಂತೂ ಇವರ ಗದ್ದಲ, ಅದಕ್ಕೆ ಉಳಿದವರ ಪ್ರತಿಕ್ರಿಯೆ ನೋಡುತ್ತಾ ಕುಳಿತುಬಿಟ್ಟೆ. ಕೆಲವೊಮ್ಮೆ ಮಾತು ಜೋರು ಜೋರಾಗಿ ಗದ್ದಲ ಹೆಚ್ಚಾಗುತ್ತಿತ್ತು. ಆಗ ಸುತ್ತಲಿದ್ದವರು ಮುಖದಲ್ಲೇ ತುಸು ಅಸಹನೆ ತೋರಿಸಿ ಮತ್ತೆ ಓದುವುದಕ್ಕೋ ನಿದ್ದೆಗೋ ಮರಳುತ್ತಿದ್ದರು.

ನನ್ನ ಸ್ಟೇಷನ್ ಬಂದು ಇಳಿಯುವಾಗ ನಡೆದ ಘಟನೆ ಮಾತ್ರ ತುಂಬಾ ವಿಚಿತ್ರವಾಗಿ ಕಾಡಿತು. ನಾನು ಇಳಿಯುವಾಗಲೇ, ಸೀರೆಯುಟ್ಟ ಇಂಡಿಯದ ನಡುವಯಸ್ಸಿನ ಹೆಂಗಸೊಬ್ಬರು ರೈಲು ಹತ್ತಿದರು. ಅವರು ಹತ್ತಿದ್ದೇ ಒಳಗೆ ಜೋರಾಗಿ ನಗು ಕೇಕೆ ಕೇಳಿತು. ತಿರುಗಿ ನೋಡಿದೆ. ರೈಲು ಹತ್ತಿದ ಹೆಂಗಸು ಆ ಹುಡುಗರ ಗುಂಪಿನತ್ತ ದುರುದುರು ನೋಡುತ್ತಾ ನಿಂತಿದ್ದರು. ಆ ಹುಡುಗರಲ್ಲಿ ಒಬ್ಬ ಮತ್ತೇನೋ ಹೇಳಿದ. “ಮಾತಾದೇವಿ” ಎಂಬ ಮಾತು ಕೇಳಿತು ಅಷ್ಟೆ. ಉಳಿದ ಹುಡುಗರು ಆ ಹೆಂಗಸನ್ನು ತಲೆಯಿಂದ ಬುಡದವರೆಗೆ ನೋಡುತ್ತ ನಗುತ್ತಿದ್ದರು. ಆ ಹೆಂಗಸು ಒಂದು ಕ್ಷಣ ನೋಡಿ, ತಲೆ ತಗ್ಗಿಸಿ ಒಳಗೆ ಹೊರಟು ಹೋದರು. ಬಾಗಿಲು ಮುಚ್ಚಿಕೊಂಡಿತು. ರೈಲು ಹೊರಟಿತು.

ಪರರು ನಮ್ಮ ಆಚಾರ ವಿಚಾರದ ಬಗ್ಗೆ ತಮಾಷೆ ಮಾಡಿದ್ದು ಹೆಚ್ಚೆನಿಸಿದ ಕೂಡಲೆ ಏನಾದರೂ ಅಂದು ಸುಮ್ಮನಾಗಿಸುತ್ತೇವೆ. ಹೆಂಗಸರ ಕುಂಕುಮ, ಸೀರೆಯ ಬಗ್ಗೆ ರುಚಿಹೀನ ಮಾತನ್ನು ನಮಗೆ ತಡೆಯಲಾಗುವುದಿಲ್ಲ. ಅದೆಲ್ಲಾ ಸರಿಯೆ. ಆದರೆ ಈ ಹುಡುಗರ ವರ್ತನೆಯನ್ನು ಹೇಗೆ ತೆಗೆದುಕೊಳ್ಳುವುದು ಎಂದು ಗೊತ್ತಾಗದೆ ದಡಬಡಿಸಿದೆ. ಹೊರದೇಶದಲ್ಲಿ ಬಂದ ಮೇಲೆ ಹೆಂಗಸರು ಸೀರೆ ಉಡುವುದು ವಿಚಿತ್ರ ಎಂದು ಈ ಹುಡುಗರಿಗೆ ಏಕೆ ಅನಿಸುತ್ತದೆ ಎಂದು ಯೋಚಿಸುವಂತೆ ಮಾಡಿತು.

ಇದೊಂದು ಕ್ಷುಲ್ಲಕ ಘಟನೆ ಇರಬಹುದು. ಯಾಕೆಂದರೆ ಎಲ್ಲೇ ಆಗಲಿ, ಯಾರ ಜತೆಯೇ ಆಗಲಿ ಕೆಟ್ಟದಾಗಿ ನಡಕೊಳ್ಳುವುದು, ಕೆಣಕುವುದು ತಪ್ಪು ಅನ್ನುವುದು ತೀರ ಸಾಮಾನ್ಯ ಮಾತು. ಅದು ಲೈಂಗಿಕ ತೆವಲಿಗಾದರೆ ಎಷ್ಟೋ ಸಂಸ್ಕೃತಿ ರಕ್ಷಣೆಗಾದರೂ ಅಷ್ಟೇ ತಪ್ಪು. ಆದರೆ ಯಾಕೋ ಆ ಘಟನೆ ಇಂಡಿಯದ ವಲಸಿಗರೆಲ್ಲರ ಬಗ್ಗೆ ಯೋಚಿಸುವಂತೆ ಪ್ರೇರೇಪಿಸಿತು, ಫಾರಿನ್ ಅಂದಕೂಡಲೆ ಪಶ್ಚಿಮದವರ ಅನುಕರಣೆ ಮಾಡದಿದ್ದರೆ ಜೀವನ ನಿರರ್ಥಕ ಅಂದುಕೊಳ್ಳುವ ಗುಂಪು ಒಂದು ಕಡೆ. ನಮ್ಮ ಹೆಣ್ಣುಮಕ್ಕಳು ಕೂದಲನ್ನು ಕತ್ತರಿಸಕೂಡದು, ಪ್ಯಾಂಟು, ಚೆಡ್ಡಿ ಉಡಬಾರದು ಎಂದು ಬಲವಾಗಿಯೇ ತಾಕೀತು ಮಾಡುವ ಸನಾತನಿಗಳ ಗುಂಪು ಇನ್ನೊಂದು ಕಡೆ. ಈ ಎರಡೂ ಗುಂಪಲ್ಲಿ ವಲಸೆ ಬಂದ ಹೊಸಬರೂ ಇರುತ್ತಾರೆ, ಹಳಬರೂ ಇರುತ್ತಾರೆ. ಈ ಬಗೆಯ ಜನರ ಎರಡು ತುದಿಗಳ ನಡುವೆ ಹೆಣದುಕೊಂಡು, ಒಂದು ಪೂರ್ಣ ಸುತ್ತುಬರುವ ಮಾಲೆಯಂತಿರುವ ನಮ್ಮಂತಹ ಸಮುದಾಯದ ಪರಿಸ್ಥಿತಿ ಮಾತ್ರ ಬಲು ನಾಜೂಕು.