ಈಗಷ್ಟೇ ಬರೆಯಲು ಕಲಿಯುವ ಮಗುವಿನ ಗೋಡೆಯ ಮೇಲಿನ ಬರಹದಂತೆ ವಕ್ರ ವಕ್ರ… ಕವಿ ತಿರುಮಲೇಶರು ಹೇಳಿದಂತೆ ಎಲ್ಲ ಆರಂಭಗಳೂ ಅನುಮಾನದಲ್ಲೇ! ಬಾಡಿಗೆ ಮನೆಯಲ್ಲಿದ್ದ ಕವಿಯೊಬ್ಬ ಮನೆ ಬದಲಿಸುವಾಗ ಎಲ್ಲಾ ಸಾಮಾನುಗಳನ್ನು ಹೊಸ ಮನೆಗೆ ಒಯ್ದರೂ ಗೋಡೆಯ ಮೇಲೆ ಈಗ ಬೆಳೆದು ದೊಡ್ಡವಳಾದ ಮಗಳ ಗೋಡೆಯ ಗೀರುಗಳನ್ನು ತರಲಾಗಲಿಲ್ಲವೆಂಬ ತಹ ತಹಿಕೆಯ ಕವಿತೆ ಇದೆ. ಕೇವಲ ಗೆರೆಗಳು ಮಾತ್ರವಲ್ಲ, ಸೊಟ್ಟು ಮೂತಿಯ ಪ್ರಾಣಿ, ರೆಕ್ಕೆಯಿಲ್ಲದ ಹಕ್ಕಿ, ಬೆಟ್ಟ, ಮರ, ನದಿ, ಸೇತುವೆ, ಬೇಲಿ, ಬೇಲಿಯ ಮೇಲಿನ ಹೂವು….
ಕೈಬರಹದ ಕುರಿತು ಡಾ. ಲಕ್ಷ್ಮಣ ವಿ. ಎ. ಬರಹ ನಿಮ್ಮ ಓದಿಗೆ

ಕೈ ಬರಹದಲ್ಲಿ ಬರೆದ ಉತ್ತರ ಪತ್ರಿಕೆಯ ಮೊದಲ ಸಾಲುಗಳು ಕುಂಟುತ್ತಲೇ ಸಾಗಿರುತ್ತವೆ. ಪರೀಕ್ಷೆಗಾಗಿ ಎಷ್ಟೊಂದು ತಯಾರಿ ಮಾಡಿಕೊಂಡಿದ್ದರೂ! ಹಾಗೆಯೇ ಪ್ರೇಮದ ಮೊದಲ ತೊದಲ ನುಡಿಗಳು… ಈಗಷ್ಟೇ ಬರೆಯಲು ಕಲಿಯುವ ಮಗುವಿನ ಗೋಡೆಯ ಮೇಲಿನ ಬರಹದಂತೆ ವಕ್ರ ವಕ್ರ… ಕವಿ ತಿರುಮಲೇಶರು ಹೇಳಿದಂತೆ ಎಲ್ಲ ಆರಂಭಗಳೂ ಅನುಮಾನದಲ್ಲೇ! ಬಾಡಿಗೆ ಮನೆಯಲ್ಲಿದ್ದ ಕವಿಯೊಬ್ಬ ಮನೆ ಬದಲಿಸುವಾಗ ಎಲ್ಲಾ ಸಾಮಾನುಗಳನ್ನು ಹೊಸ ಮನೆಗೆ ಒಯ್ದರೂ ಗೋಡೆಯ ಮೇಲೆ ಈಗ ಬೆಳೆದು ದೊಡ್ಡವಳಾದ ಮಗಳ ಗೋಡೆಯ ಗೀರುಗಳನ್ನು ತರಲಾಗಲಿಲ್ಲವೆಂಬ ತಹ ತಹಿಕೆಯ ಕವಿತೆ ಇದೆ. ಕೇವಲ ಗೆರೆಗಳು ಮಾತ್ರವಲ್ಲ, ಸೊಟ್ಟು ಮೂತಿಯ ಪ್ರಾಣಿ, ರೆಕ್ಕೆಯಿಲ್ಲದ ಹಕ್ಕಿ, ಬೆಟ್ಟ, ಮರ, ನದಿ, ಸೇತುವೆ, ಬೇಲಿ, ಬೇಲಿಯ ಮೇಲಿನ ಹೂವು…. ಅದೊಂದು ರಮ್ಯ ಲೋಕದ ಯಾವ ಪರಿಣಿತ ಚಿತ್ರಕಾರನೂ ಬಿಡಿಸದ ಅಮೂಲ್ಯ ಕೈ ಬರಹ.

ಶಾಲೆಯಲ್ಲಿ ಮೊದಲ ದಿನ ಮೇಷ್ಟ್ರು ಕಪ್ಪು ಹಲಗೆಯ ಮೇಲೆ ಬಿಳಿ ಬಳಪದಿಂದ ‘ಅ’ ಎಂಬ ಮೂಲಾಕ್ಷರ ಬರೆಯುವಾಗ ಅರ್ಧ ರೊಟ್ಟಿಯ ಚಿತ್ರ ಬರೆದಿದ್ದರು. ಆ ಅರ್ಧ ರೊಟ್ಟಿಯ ಚಿತ್ರದೊಂದಿಗೆ ಆರಂಭವಾದ ಅಕ್ಷರ ಜೊತೆಗಿನ ಸಿಹಿನಂಟಿನ ಪಯಣ – ಅನ್ನ, ಆಶ್ರಯಕ್ಕೆ ದಾರಿಯಾಗಿ ಕತ್ತಲ ಬದುಕಿಗೆ ಬೆಳಕಿನ ದೊಂದಿಯಾಗಿ ಇಂದು ಈ ಬರಹ ಬರೆಯುವ ಹೊತ್ತಿಗೂ ಜೊತೆಯಾಗಿರುವುದರ ಪಯಣದ ರಮ್ಯತೆಯನ್ನು ಯಾವ ಅಕ್ಷರಗಳಲ್ಲಿ ಹಿಡಿದಿಡುವುದು?

ಹಾಗೆ ನೋಡಿದರೆ ಮೇಷ್ಟ್ರಿಗೆ ‘ಅ’ ಎಂದರೆ ಅಕ್ಕ, ಅಮ್ಮ, ಅಪ್ಪ, ಅತ್ತಿಗೆ…. ಹೀಗೆ ಎಷ್ಟೆಲ್ಲಾ ಹೇಳುವ ಆಯ್ಕೆಗಳಿದ್ದವು! ಆದರೆ ನಮಗೆಲ್ಲಾ ಅ ಎಂಬ ಅರ್ಧ ರೊಟ್ಟಿಯ ಆಸೆ ಹುಟ್ಟಿಸಿ ನಮ್ಮ ಬರಡು ಬದುಕು ಚಿಗುರಿಸಿದರೆಂದು ಬಲು ಅಭಿಮಾನದಿಂದ ಹನಿಗಣ್ಣಿನಲ್ಲೇ ನೆನೆಯುವೆ.
ಕೈ ಬರಹವೆಂಬುದು ಹಣೆಬರಹವೂ ಕೂಡ ಹೌದೇ?

ಹೌದೆನ್ನುತ್ತವೆ ವಿಜ್ಞಾನದ ದಾಖಲೆಗಳು, ಸಂಶೋಧನೆಗಳು. ಇಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ತನ್ನದೇ ಅನನ್ಯತೆಯ ವ್ಯಕ್ತಿತ್ವದ ವಿಶಿಷ್ಟ ಗುರುತಿರುವ ಹಾಗೆ ಈ ಕೈ ಬರಹವೂ ಕೂಡ. ಹಸ್ತ ಸಾಮುದ್ರಿಕೆ, ಮುಖ ಓದುವಿಕೆ ಜ್ಯೋತಿಷ್ಯ ವಿಜ್ಞಾನ, ದಿನ ಭವಿಷ್ಯ, ರಾಶಿ ಭವಿಷ್ಯ ಹೇಳುವ ಹಾಗೆ ಕೈ ಬರಹವನ್ನು ನೋಡಿ ಭವಿಷ್ಯ ಹೇಳುವ ಶಾಖೆಯ – ಗ್ರಾಫಾಲಾಜಿ ಇಂದು ಬೆಳೆದು ನಿಂತಿದೆ.

ಈ ಶಾಸ್ತ್ರದ ಮುಖೇನ ಬರಹಗಾರನ ವ್ಯಕ್ತಿತ್ವ, ದೈಹಿಕ ಮತ್ತು ಮಾನಸಿಕ ಸ್ಥಿತಿ ಹಾಗು ವ್ಯಕ್ತಿಯ ವ್ಯವಹಾರ ಬದ್ಧತೆ, ವೃತ್ತಿ ನಿಷ್ಠೆ ಅಳೆಯುವ ಮಾಪಕ. ಈ ಶಾಸ್ತ್ರಕ್ಕೆ ಇಂಬುಕೊಡುವ ಹಾಗೆ ಖ್ಯಾತ ತತ್ವಜ್ಞಾನಿ ಅರಿಸ್ಟಾಟಲ್ ಜನರ ಆತ್ಮವನ್ನು ಅವರಬರವಣಿಗೆಯ ವಿಧಾನದಿಂದ ವ್ಯಾಖ್ಯಾನಿಸಬಹುದೆಂದು ಹೇಳಿದ. ಪ್ರಸಿದ್ಧ ನಾಟಕಕಾರ ಷೇಕ್ಸ್‌ಪಿಯರ್ ಮಹಿಳೆಯ ಕೈ ಬರಹವನ್ನು ಕೊಡು ಅವಳು ನಿರ್ವಹಿಸುವ ಪಾತ್ರವನ್ನು ಹೇಳಬಲ್ಲೆ ಎಂದು ಹೇಳಿದ ಉಲ್ಲೇಖ ಸಿಗುತ್ತದೆ.

ಮನುಷ್ಯನಿಗೆ ಬುದ್ಧಿ ಬಲಿತು ತನ್ನ ಅನ್ನ ಆಶ್ರಯಕ್ಕಾಗಿ ಗುಹಾವಾಸಿಯಾಗಿದ್ದಾಗ ಮಾತನಾಡುವ ತನ್ನದೇ ಭಾಷೆ ಬಲಿಯುವ ಮುಂಚೆ ತನ್ನ ಭಾವನೆಗಳನ್ನು ಗೋಡೆಯ ಮೇಲೆ ಚಿತ್ರಿಸುವುದರ ಮೂಲಕ ಎಂದು ಪ್ರಾಗೈತಿಹಾಸಿಕ ಸಾಕ್ಷಗಳು ನಮಗೆ ವಿಫುಲವಾಗಿ ದೊರಕುತ್ತವೆ. ಇಲ್ಲಿ ಕೈ ಬರಹವೆನ್ನುವುದು ಶೈಶಾವಸ್ಥೆಯಲ್ಲಿರುವಾಗ ಎಲ್ಲರೂ ಒಪ್ಪುವ ಒಂದು ಸಿದ್ಧ ಮಾದರಿ ಇರಲಿಲ್ಲ ನಿಜ. ಆದರೆ ಆದಿ ಮಾನವ ತನ್ನ ಮನಸಿನಲ್ಲಿ ಉಳಿದ ಚಿತ್ರಗಳನ್ನು ತೋಚಿದ ಗೆರೆಗಳನ್ನು ಕಲ್ಲಿನಿಂದ ಗೋಡೆಯ ಮೇಲೆ ಗೀಚುತ್ತಾ ನಡೆದ ಎಂಬುದನ್ನು ಜಗತ್ತಿನ ಪ್ರಾಚೀನ ನಾಗರೀಕತೆಗಳೆಂದು ಕರೆಯುವ ಗ್ರೀಕ್, ಮೆಸೊಪಟ್ಯಾಮಿಯಾ, ಬ್ಯಾಬಿಲೋನಿಯ, ಪರ್ಷಿಯಾ ಹಾಗು ಭಾರತದ ಸಿಂಧೂ ನದಿಯ ಬಯಲಿನಲ್ಲಿ ದೊರೆತ ಹರಪ್ಪಾ ಮೊಹಂಜೊದಾರೋ ಕಾಲದ ಗೋಡೆಯ ಮೇಲಿ ಕೈ ಬರಹಗಳು ಇಂದಿಗೂ ನೋಡಲು ಲಭ್ಯವಿವೆ. ಹಾಗೆ ನೋಡಿದರೆ ಆದಿ ಮಾನವ ಒಂದೆಡೆ ಕಲೆತು ನಾಗರೀಕನಾಗುವ ಮುನ್ನವೇ ಅಂದರೆ ಶಿಲಾಯುಗದಲ್ಲೇ ಕೈ ಬರಹದ ಕುರುಹುಗಳನ್ನು ನಾವು ಗುರುತಿಸಬಹುದು.

ಪ್ರಾಚೀನ ನಾಗರೀಕತೆಗಳಲ್ಲಿ ಬರವಣಿಗೆ ಒಂದು ಪವಿತ್ರ ಕೆಲಸವೆಂದೇ ಪರಿಗಣಿಸಲಾಗಿತ್ತು. ಆದರೆ ಇಂದು ಬರಹವೆಂಬುದು ಬದುಕಿನ ಬೆಳಕೂ ಹೌದು. ಇಂದಿಗೂ ಭಾರತದಲ್ಲಿ ಮಗುವಿಗೆ ಅಕ್ಷರ ಸಂಸ್ಕಾರ ಕೊಡಲೆಂದೇ ಶೃಂಗೇರಿ ಶಾರದಾ ಮಾತೆಯ ಸನ್ನಿಧಿಗೆ ಕರೆದೊಯ್ದು ಅಕ್ಷರಾಭ್ಯಾಸ ಮಾಡಿಸುವ ಸಂಪ್ರದಾಯವಿದೆ.

ಈ ಬರಹವೆಂಬುದೂ ಒಂದು ಈಗ ಸರಕಾಗಿ ಆಧುನಿಕ ಸಂವಹನ ಕಾಲದ ದಾರಿ ತಪ್ಪಿಸುವ ಸಾಧನವೂ ಹೌದು. ತಂತ್ರಜ್ಞಾನದ ಈ ವೇಗದ ಕಾಲದಲ್ಲಿ ಸತ್ಯಕ್ಕಿಂತ ಸುಳ್ಳುಗಳು, ಭ್ರಮೆಗಳು, ಕಪೋಲಕಲ್ಪಿತ ಸುದ್ದಿಗಳು ವಿಜೃಂಭಿಸಿ ಎಷ್ಟೊಂದು ಅನಾಹುತಗಳು ಮೂಲಕ ಈಗೆಲ್ಲಾ ಎಡೆ ಮಾಡಿಕೊಡುತ್ತಿರುವುದು ಕಣ್ಣೆದುರಿಗಿನ ಅಂಗೈ ಮೇಲಿನ ಗೆರೆಯಷ್ಟೇ ಸತ್ಯ.

ಸ್ಲೇಟು ಬಳಪಗಳ ಮೇಲಿನ ಅಡ್ಡಾ ದಿಡ್ಡಿ ಬರಹ

ಐದನೆಯ ತರಗತಿ ಬರುವ ಹೊತ್ತಿಗೆ ನಮಗೆ ಬರೆಯಲು ಪೆನ್ನು ಹಾಳೆಗಳ ಮೇಲೆ ಕೈ ಬರಹ ಬರೆಯುವ ಬಡ್ತಿ ಸಿಗುವ ಮುಂಚೆ ನಾವು ಕಾಪಿ ಬರಹ ಅಥವ ಶುದ್ಧ ಬರಹವೆಂಬ ಗೆರೆ ಹೊಡೆದ ಸಾಲಿನೊಳಗೆ ಬರೆಯಬೇಕಿತ್ತು. ಆರಂಭದಲ್ಲಿ ಇಂಕು ಪೆನ್ನಿನಿಂದ ಮೂಡುವ ಅಕ್ಷರಗಳು ಮೇಲಿನ ಗೆರೆಗೂ ತಾಗದೆ ಕೆಳಗಿನ ಗೆರೆಗೂ ಅಂಟದೇ ಅಥವ ಇವೆಲ್ಲಾ ಮಿತಿಯ ಗೆರೆಗಳನ್ನೂ ದಾಟಿ ಎಲ್ಲೆಲ್ಲೋ ಅಲೆದು ಬರುತ್ತಿದ್ದವು… ಬಾಲ್ಯವೆಂದರೆ ಹಾಗೇ! ಎಲ್ಲ ತಪ್ಪುಗಳ ಒಟ್ಟು ಮೊತ್ತ. ಅಥವ ಎಲ್ಲ ಗೆರೆ ಗಡಿಗಳನ್ನು ಮೀರುವುದೇ ಬಾಲ್ಯವಲ್ಲವೇ!? ಹೀಗೆ ಪೆನ್ನು ಹಿಡಿದ ಬೆರಳಿಗೂ ಮತ್ತು ಮನಸಿನೊಳಗೆಳೆದ ಗೆರೆಗಳಿಗೂ ತಾಳೆಯಾಗದೆ ಮೇಷ್ಟ್ರುಗಳಿಂದ ಈ ಬರಹ ಬರೆದ ಕೈಗಳ ಮೇಲೆಯೇ ಛಡಿಯೇಟು ತಿನ್ನುವುದು ಮಾತ್ರ ಬಲು ವಿಪರ್ಯಾಸವಾಗಿ ಕಾಣಿಸುತ್ತದೆ. ಇಂದಿನ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಈ ಗೆರೆಯೊಳಗೆ ಬರೆಯುವ ಸವಲತ್ತು ಮತ್ತು ಸ್ವಾತಂತ್ರ್ಯ ಇರುವುದರಿಂದ ಹೆಚ್ಚಿನ ತಪ್ಪುಗಳೂ ಇಲ್ಲ ಮತ್ತು ಛಡಿಯೇಟು ಎಂದರೇನೆಂದು ಕೇಳುವ ಪರಿಣಾಮವಾಗಿ ಪ್ರತಿ ಮಕ್ಕಳ ಬರಹವೂ ಹೆಚ್ಚೂ ಕಡಿಮೆ ಒಂದೇ ತರಹದ ಕಾರ್ಖಾನೆಯಿಂದ ತಯಾರಾದ ಬ್ರ್ಯಾಂಡೆಡ್ ಪಡಿಯಚ್ಚುಗಳು.

ನಾವು ಓದುವ ಕಾಲಕ್ಕೆ ಒಬ್ಬೊಬ್ಬರದು ಒಂದೊಂದು ಶೈಲಿಯ ಕೈ ಬರಹ. ಒಬ್ಬರದು ಯಾವಾಗಲೂ ಎಡಕ್ಕೆ ವಾಲಿದ ಎಡ ಪಂಥೀಯವಾದರೆ ಇನ್ನು ಹಲವರದು ಬಲಕ್ಕೆ ವಾಲಿದ ಬಲಪಂಥೀಯ, ಇನ್ನು ಹಲವರದ್ದು ಅವಕಾಶವಾದಿ ಇವರು ಎಷ್ಟು ಜಾಣರಿದ್ದರೆಂದರೆ ಏಕಕಾಲಕ್ಕೆ ಎಡಕ್ಕೂ ಬಲಕ್ಕೂ ಹೊರಳಿ ಏಕಾ ಏಕಿ ಪರೀಕ್ಷೆಯ ಉತ್ತರಪತ್ರಿಕೆಯಲ್ಲಿ ಮಧ್ಯಮ ಪಂಥೀಯರಾಗಿ ಆದಷ್ಟು ಹೆಚ್ಚು ಮಾರ್ಕ್ಸ್‌ಗಳ ಮೇಲೆ ಕಣ್ಣಿಟ್ಟ ಮಾರ್ಕ್ಸ್ ವಾದಿಗಳು. ಇನ್ನು ಹಲವರ ಬರಹ ಖಾಲಿ ಗೆರೆಯ ಮೇಲೆ ಇರುವೆ ನಡೆದಂತಹ ಸಣ್ಣಾಕ್ಷರಗಳಾದರೆ, ಕೆಲವರದು ಹೋಟೇಲಿನ ಬೋರ್ಡ್ ಬರೆಯುವ ಹಾಗೆ ದೊಡ್ಡಾಕ್ಷರ ಪರಿವಾರ. ಇಂತಹ ದೊಡ್ಡಕ್ಷರಗಳ ಗುಂಪಿನವರಿಗೆಲ್ಲ ಮನೆಯವರಿಂದ ಪೆನ್ನು ಹಾಳೆ ಹೊಂದಿಸುವುದೇ ಒಂದು ದೊಡ್ಡ ಸವಾಲಿನ ಪ್ರಶ್ನೆಯಾಗಿತ್ತು. ಇಂತಹ ದೊಡ್ಡಸ್ಥನದವರ ಒಂದು ಹಿರಿಮೆಯೆಂದರೆ ಪರೀಕ್ಷಾ ಕೊಠಡಿಯೊಳಗೆ ಮೊತ್ತ ಮೊದಲು ಸಪ್ಲಿಮೆಂಟು ಕೇಳಿ – ಈಗಷ್ಟೇ ಇನ್ನೂ ನಾಲ್ಕು ಅಥವಾ ಐದನೇಯ ಪುಟಗಳನ್ನು ತುಂಬಲು ಒದ್ದಾಡುತ್ತಿದ್ದ ನನ್ನಂತಹವರಿಗೆ ಬಲು ಹೊಟ್ಟೆಕಿಚ್ಚಾಗುತ್ತಿತ್ತು. ಆದರೆ ಮೌಲ್ಯ ಮಾಪಕರಿಗೆ ಇವರ ದೊಡ್ಡಸ್ಥನದ ಬಂಡವಾಳ ಅರ್ಥವಾಗದೇ ಇರುತ್ತದೆಯೇ? ಯಥಾ ಪ್ರಕಾರ ಅವರಿಗೆ ಸಲ್ಲಬೇಕಾದ ಅಂಕಗಳನ್ನು ನೀಡಿ ಬರವಣಿಗೆಗೆ ತಕ್ಕ ಗೌರವವನ್ನು ನೀಡಿ ಪಾಸು ಮಾಡಿರುತ್ತಿದ್ದರು.

ಕೆಲವರು ಅತಿ ದುಂಡನೆಯ ಮುತ್ತು ಬಿತ್ತಿದಂತಹ ಅಕ್ಷರಗಳಿದ್ದರೂ ಅಂಕ ಗಳಿಸುವಲ್ಲಿ ಹಿಂದಿರುತ್ತಿದ್ದರು. ಇನ್ನು ಹಲವರ ಬರಹ ಕತ್ತೆ ಕಾಲು ನಾಯಿ ಕಾಲಿದ್ದರೂ ಪರೀಕ್ಷೆಯಲ್ಲಿ ಯಾವಾಗಲು ಮೇಲುಗೈ ಸಾಧಿಸುತ್ತಿದ್ದರು. ಈ ಅಪವಾದವೊಂದು ಶುದ್ಧ ಬರಹ ಬರೆದವರೆಲ್ಲಾ ಜಾಣರು ಎಂಬ ತಲೆ ತಲಾಂತರುಗಳ ನಂಬಿಕೆಯನ್ನೇ ಬುಡಮೇಲು ಮಾಡುವಂತಹದ್ದು.

ಈಗ ಇದನ್ನೆಲ್ಲಾ ಬರೆಯುವಾಗ ಹತ್ತನೆಯ ತರಗತಿಯ ನನ್ನ ಸಹಪಾಠಿ ಗೆಳೆಯ ಶಂಭುಲಿಂಗ ನೆನಪಾಗುತ್ತಾನೆ. ಅತಿ ಸುಂದರವಾದ ಕೈ ಬರಹವಿದ್ದ ಈತ ಯಾವಾಗಲೂ ತನ್ನ ಶ್ರಮವನ್ನು ಕಾಪಿ ಚೀಟಿ ಬರೆಯುವುದರಲ್ಲಿ ಮತ್ತು ಬೇರೆಯವರು ದುಂಬಾಲು ಬಿದ್ದು ಬರೆಸುತ್ತಿದ್ದ ಪ್ರೇಮಪತ್ರ ಬರೆಯುವುದರಲ್ಲಿ ವೃಥಾ ಹಾಳಾಗಿ ಹೋದ ಎನ್ನುವ ವ್ಯಥೆ ಕೂಡ ಕಾಡುತ್ತದೆ. ಹುಡುಗಿಯರ ಜೊತೆ ಸುಮ್ಮನೇ ಒಂದು ಕ್ಷಣ ಮಾತನಾಡಿದರೂ ಸಾಕು ಶಾಲೆಯ ತುಂಬ ಊಹಾಪೋಹಗಳಿಗೆ ರೆಕ್ಕೆ ತುಂಬಿ ಹಾರಾಡಿ ಹುಡುಗ ಹಾಗು ಹುಡುಗಿಯನ್ನು ಏಕಕಾಲಕ್ಕೆ ಆರೋಪಿಯ ಕಟ ಕಟೆಯಲ್ಲಿ ನಿಲ್ಲಿಸುವ ದಿನಗಳಲ್ಲಿ ಪ್ರೇಮ ಎನ್ನುವುದು ಹೀಗೆ ಕದ್ದು ಮುಚ್ಚಿ ಬರೆದ ಪತ್ರಗಳಲ್ಲಿ ಮಾತ್ರ ಉಸಿರಾಡುವಂತಹ ಉಸಿರುಕಟ್ಟುವ ಕಾಲವೂ ಹೌದು. ಅಷ್ಟಕ್ಕೂ ಹೈಸ್ಕೂಲು ಎಂಬುದು ಪ್ರೇಮಿಸುವ ವಯಸೇ? ಆದರೆ ಪ್ರೇಮಕ್ಕೆಲ್ಲಿ ವಯಸಿನ ಹಂಗು!? ಕುಡಿ ಮೀಸೆ ಮೂಡುವ ಮೊದಲೇ ಎದೆಯಲ್ಲಿ ನಗಾರಿ ಹೊಡೆದು ಜಗತ್ತಿನ ಎಲ್ಲ ಗಡಿ ಗೆರೆ ಮಿತಿಗಳನ್ನು ಮೀರಿದ್ದಲ್ಲವೇ?

ತಮಾಷೆಯೆಂದರೆ ಬೇರೆ ಹುಡುಗನ ಹೆಸರಿನಲ್ಲಿ ಪ್ರೇಮ ಪತ್ರ ಬರೆಯುತ್ತ ಬರೆಯುತ್ತ ಸ್ವತಃ ಇವನೇ ಆ ಹುಡುಗಿಯ ಪ್ರೇಮಪಾಶದಲ್ಲಿ ಮುಳುಗಿ ಕೊನೆಗೆ ಎಸ್ಸೆಸ್ಸೆಲ್ಸಿ ಕೂಡ ಪಾಸು ಮಾಡದೆ ಈಗ ಹಳ್ಳಿಯಲ್ಲಿ ಮೈಲುಗಲ್ಲುಗಳ ಮೇಲೆ ಬಣ್ಣ ಬಳಿದು ಊರ ಹೆಸರು, ಕಿ.ಮಿ.ದೂರ ಬರೆಯುವ ಸಾದಾ ಪೇಂಟರ್ ಆಗಿ ಉಳಿದು ಹೋಗಿದ್ದಾನೆ. ಪ್ರೀತಿಸಿದ ಗೆಳತಿ ದೂರದೂರಿಗೆ ಮದುವೆಯಾಗಿ ತವರು ಮನೆಗೆ ಬರುವಾಗ ಶಂಭುಲಿಂಗ ಬರೆದ ಊರಿನ ಹೆಸರು ಮತ್ತು ದೂರ ಅಳೆಯುತ್ತ ಮತ್ತು ತವರು ತೊರೆಯುವಾಗ ಕಣ್ಣೀರಾಗುತ್ತ ಮತ್ತೆ ದೂರ ಅಳೆಯುತ್ತ ಹೋಗುತ್ತಾಳೆಂಬ ಗುಲ್ಲು ಈಗಲೂ ಊರ ತುಂಬ ಇದೆ. ಇಲ್ಲಿ ಇವರಿಬ್ಬರೂ ತಮ್ಮ ತಮ್ಮ ಹಣೆಬರಹವನ್ನು ಹಳಿಯುತ್ತ ಶಂಭುಲಿಂಗ ತನ್ನ ಕೈ ಬರಹ ತನಗೇ ಮುಳುವಾದ ಬಗೆ ಹಳಿಯುತ್ತ ಬದುಕಿನ ಬಂಡಿ ಕಿಲೋ ಮೀಟರುಗಳನ್ನು ದಾಟಿ ಒಂದೊಂದು ಮೈಲೂ ಒಂದೊಂದು ಯುಗ ಕಳೆದ ಹಾಗೆ ಕಳೆಯುತ್ತಿರುವುದು ಮಾತ್ರ ಅತೀವ ಕಳವಳಕಾರಿ.

ಆದಿ ಮಾನವ ತನ್ನ ಮನಸಿನಲ್ಲಿ ಉಳಿದ ಚಿತ್ರಗಳನ್ನು ತೋಚಿದ ಗೆರೆಗಳನ್ನು ಕಲ್ಲಿನಿಂದ ಗೋಡೆಯ ಮೇಲೆ ಗೀಚುತ್ತಾ ನಡೆದ ಎಂಬುದನ್ನು ಜಗತ್ತಿನ ಪ್ರಾಚೀನ ನಾಗರೀಕತೆಗಳೆಂದು ಕರೆಯುವ ಗ್ರೀಕ್, ಮೆಸೊಪಟ್ಯಾಮಿಯಾ, ಬ್ಯಾಬಿಲೋನಿಯ, ಪರ್ಷಿಯಾ ಹಾಗು ಭಾರತದ ಸಿಂಧೂ ನದಿಯ ಬಯಲಿನಲ್ಲಿ ದೊರೆತ ಹರಪ್ಪಾ ಮೊಹಂಜೊದಾರೋ ಕಾಲದ ಗೋಡೆಯ ಮೇಲಿ ಕೈ ಬರಹಗಳು ಇಂದಿಗೂ ನೋಡಲು ಲಭ್ಯವಿವೆ.

ಈ ಕೈ ಬರಹಕ್ಕೂ ಮನುಷ್ಯನ ಮಾನಸಿಕ ಸ್ಥಿತಿ ಗತಿಗೂ ಪರಸ್ಪರ ಸಂಬಂಧವಿದೆ. ಸಹಜವಾಗಿ ನಿರಾಳವಾಗಿ ಇದ್ದಾಗ ಇರುವ ಕೈ ಬರಹದ ಸಹಜತೆ ಇದೇ ಪರೀಕ್ಷೆಯ ಉತ್ತರ ಪತ್ರಿಕೆಗಳಲ್ಲಿ ಇರಲಾರದು. ಆತಂಕದಿಂದ ಬೆವರುವ ಅಂಗೈ ಹಾಗು ನಡುಗುವ ಕೈ ಬೆರಳುಗಳಿಂದ ಬರೆದ ಮೊದಲ ಪುಟಕೂ ಪರೀಕ್ಷೆಯ ಒಂದು ಗಂಟೆಯ ತರುವಾಯ ಬರೆಯುವ ನಡುವಿನ ಪುಟಗಳಿಗೂ ಮತ್ತು ಇನ್ನೇನು ಕೊನೆಯ ಬೆಲ್ಲಾಗಿ ಉಳಿದ ಉತ್ತರಗಳನ್ನು ಅತಿ ಅವಸರದಲ್ಲಿ ಬರೆದ ಉತ್ತರದ ಕೈ ಬರಹಗಳಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಇನ್ನೂ ಒಂದು ತಮಾಷೆಯೆಂದರೆ ನಾವು ಪ್ರೇಮ ಪತ್ರಬರೆಯುವಾಗ ಇರುವ ಅತಿ ಶ್ರದ್ಧೆಯ ಮತ್ತು ಗ್ಲಾಮರಿನ ತೋರುವಿಕೆ ಸಹಜವಾಗಿ ಇನ್ನೊಬ್ಬರಿಗೆ ಬರೆದು ಕೊಡುವ ವ್ಯವಹಾರದ ಪತ್ರದ ಕೈ ಬರಹಗಳಿಗಿರುವುದಿಲ್ಲ. ಹೀಗಾಗಿ ಕೈ ಬರಹಕೂ ಕೂಡ ಮುಖ ನೋಡಿ ಮಣೆ ಹಾಕುವ ಪಕ್ಕಾ ವ್ಯವಹಾರಸ್ಥನ ಜಾಣ್ಮೆ ಇದೆ. ಈ ತೋರು ಬರಹಗಳಿಗೊಂದು ವಿಶ್ವ ಸುಂದರಿ ವೇದಿಕೆಯ ಮೇಲಿನ ನಗುವಿನ ‘ಕಾಪಿ ಬುಕ್ ಸ್ಮೈಲಿನ’ ಗುಣವಿರುತ್ತದೆ. ಹೀಗಾಗಿ ಈ ಬರಹ ಆದಷ್ಟು ತನ್ನ ಓರೆ ಕೋರೆಗಳನ್ನು ಮುಚ್ಚಿಸಿಕೊಂಡು ಪ್ರಖರ ಬೆಳಕಿನ ಎದಿರು ಮಿಂಚಲು ಹವಣಿಸುತ್ತಿರುತ್ತದೆ. ಇದಕ್ಕೆ ವ್ಯತಿರಿಕ್ತವಾದ ಕಚ್ಚಾ ನೋಟ್ ಬುಕ್ಕಿನ ಕೊನೆಯ ಪುಟಗಳ ಅಸ್ತವ್ಯಸ್ತ ಬರಹದ ಅನನ್ಯತೆಯೇ ಬೇರೆ. ಇಲ್ಲಿ ಯಾವ ತೋರ್ಪಡಿಕೆಯ ಭಿಡೆ ಇಲ್ಲದೆ ತರುಣಿಯೊಬ್ಬಳು ತನ್ನ ಏಕಾಂತ ಕೋಣೆಯೊಳಗೆ ತನ್ನ ಅಸ್ತವ್ಯಸ್ತ ಉಡುಪಿನೊಳಗೆ ಎದ್ದು ಕಾಣುವ ಅನೂಹ್ಯ ಸೌಂದರ್ಯದಂತಹದ್ದು.

ಬಹಳಷ್ಟು ಪ್ರೇಮ ಪತ್ರಗಳ ಉಗಮ ಈ ನೋಟ್ ಬುಕ್ಕಿನ ಕೊನೆಯ ಪುಟದ ಚಿತ್ತೂ ಕಾಟಿನ ಬರಹದಿಂದಲೇ ಆರಂಭವಿರುತ್ತದೆ… ಹಾಗೆಯೇ ಅದಕ್ಕೊಂದು ಅಮೂಲ್ಯ ಮುಜುಗರದ ಚೆಲುವು ಇರುತ್ತದೆ.

ಜಾಣ್ಮೆಯ ವಿಚಾರಕ್ಕೆ ಬಂದಾಗ ಮಾತ್ರೆಗಳ ಚೀಟಿ ಬರೆಯುವ ವೈದ್ಯರು ನೆನಪಾಗುತ್ತಾರೆ. ಅತಿ ಪ್ರತಿಭಾವಂತರಾದ ಇವರು ಮನುಷ್ಯನ ನಾಡಿ, ಮುಖ, ರೋಗಿಯ ನಡೆ, ನೋಡಿ ನಿಖರವಾಗಿ ಚಿಕಿತ್ಸೆ ಕೊಡುವ ವೈದ್ಯರ ಕೈ ಬರಹಗಳೇಕೆ ಅಷ್ಟೊಂದು ಅಸ್ತವ್ಯಸ್ತತೆಯಿಂದ ಕೂಡಿರುತ್ತವೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನೂ ಖಚಿತ ಉತ್ತರ ದೊರಕಿದಂತಿಲ್ಲ. ಜನ್ಮತಃ ಇವರ ಕೈ ಬರಹವೇ ಹೀಗೋ ಅಥವಾ ವೈದ್ಯರಾದುದರಿಂದ ಅತಿ ಜಾಣ್ಮೆಯೆಂಬ ಜಂಭಕ್ಕೆ ಹೀಗಾಗುತ್ತದೋ ಗೊತ್ತಿಲ್ಲ. ಅದಿರಲಿ ಈ ಮೆಡಿಕಲ್ ಶಾಪಿನವನೊಬ್ಬನಿಗೆ ಮಾತ್ರ ಅರ್ಥವಾಗುವ ಬ್ರಹ್ಮಲಿಪಿಯನ್ನ ತನ್ನ ಕಾಪಿ ಬುಕ್ಕಿನಲ್ಲಿ ಬರೆದ ನೋಟ್ಸ್‌ ಬುಕ್ಕುಗಳನ್ನು ಒಮ್ಮೆ ನೋಡಬೇಕೆನಿಸುತ್ತದೆ. ಪ್ರತಿ ವರ್ಷ ಸರಾ ಸರಿ ಹತ್ತು ಸಾವಿರ ವೈದ್ಯರು ಪದವಿ ಮುಗಿಸಿ ವೃತ್ತಿ ಆರಂಭಿಸುತ್ತಾರೆ, ಹೀಗೆ ವೃತ್ತಿ ಆರಂಭಿಸಿದ ತಕ್ಷಣಕ್ಕೆ ಎಲ್ಲರ ಕೈ ಬರಹ ಏಕ ಕಾಲಕ್ಕೆ ಜಾದೂವಿನಂತೆ ಬದಲಾಗಿ ಬಿಡುತ್ತದೆಯೆ? ಖಂಡಿತ ಇದೊಂದು ಪಿ. ಎಚ್‌ಡಿ ಮಾಡಬೇಕಾದ ಗಮನಾರ್ಹ ವಿಷಯ.

ಈ ವೈದ್ಯರ ಬ್ರಹ್ಮಲಿಪಿಯ ಬರಹದಿಂದ ಎಷ್ಟೋ ರೋಗಿಗಳ ಪ್ರಾಣ ಹಾನಿಯಾಗಿದೆಯೆಂದು ಓದಿದ್ದೇವೆ. ಇದರಾಚೆ ಅಲ್ಲೊಬ್ಬ ಇಲ್ಲೊಬ್ಬ ಅಪರೂಪದ ವೈದ್ಯರು ಪ್ರೇಮಪತ್ರ ಬರೆಯುವಾಗಿನ ಶ್ರದ್ಧೆಯಿಂದಲೇ ಔಷಧಿ ಚೀಟಿ ಬರೆಯುವುದನ್ನು ನಾನು ನೋಡಿದ್ದೇನೆ. ಬಹುಶಃ ತಾವು ಬರೆದ ಔಷಧಿ ತಮ್ಮ ಔಷಧಿಯ ಅಂಗಡಿಯವನಿಗೆ ಮಾತ್ರ ಗೊತ್ತಾಗಬೇಕೆನ್ನುವ ವ್ಯವಹಾರಿಕ ಬುದ್ಧಿಯೂ ಇರಬಹುದು. ಅಥವಾ ವೃತ್ತಿ ಬೇಡುವ ವೇಗದ ಒತ್ತಡವೂ ಇದಕ್ಕೆ ಕಾರಣವಾಗಿರಬಹುದು.

ವೇಗ ಮತ್ತು ಒತ್ತಡವನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಕೌಶಲ್ಯದ ಶ್ರೇಯ ಮಹಾಭಾರತ ಲಿಪಿಕಾರನಾದ ಗಣೇಶನಿಗೆ ಸಲ್ಲಬೇಕು. ಮಹಾಭಾರತವನ್ನು ಬರೆಯುವಂತೆ ಬ್ರಹ್ಮನು ಶ್ರೀ ವ್ಯಾಸ ಋಷಿಗಳಿಗೆ ಸೂಚಿಸಿದರು. ಇದಕ್ಕಾಗಿ ಗಣೇಶನ ನೆರವು ಪಡೆಯಬಹುದೆಂದೂ ಬ್ರಹ್ಮ ಹೇಳಿದ. ವ್ಯಾಸರು ಕಥೆ ಹೇಳುತ್ತಾ ಹೋದರೆ, ಗಣೇಶ ಬರೆದುಕೊಳ್ಳುತ್ತ ಹೋಗಬಹುದೆಂದು ಬ್ರಹ್ಮ ವಿವರಿಸಿದ. ಗಣೇಶನು ಬ್ರಹ್ಮನ ಬಳಿಗೆ ಬಂದು ಮಹಾಭಾರತ ಬರೆದುಕೊಳ್ಳಲು ಒಪ್ಪಿದ. ಆದರೆ ಒಂದು ಷರತ್ತಿನ ಮೇಲೆ ತಾನು ಬರೆದುಕೊಳ್ಳುವುದಾಗಿ ತಿಳಿಸಿದ. ವ್ಯಾಸ ಮಹರ್ಷಿಗಳು ಯಾವುದೇ ತಡೆ, ವಿರಾಮ ಇಲ್ಲದೆ ಸತತವಾಗಿ ಕಥೆ ಹೇಳುತ್ತಾ ಹೋಗಬೇಕು ಎಂಬುದೇ ಆ ಷರತ್ತು.

ವ್ಯಾಸರು ಇದಕ್ಕೆ ಒಪ್ಪಿದರು. ಆದರೆ ಅವರೂ ಒಂದು ಷರತ್ತು ಹಾಕಿದರು. ತಾವು ಹೇಳುವ ಪ್ರತಿ ಶಬ್ದವನ್ನೂ ಬರೆಯುವ ಮುನ್ನ ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಮಹಾಭಾರತ ಕಥೆ ಹೇಳುವ, ಬರೆಯುವ ಕಾರ್ಯ ನಡೆಯಿತು. ಗಣೇಶ ಪದ್ಯವೊಂದನ್ನು ಬರೆದು ಮುಗಿಸಿದ ಕೂಡಲೇ ವ್ಯಾಸರು ಕ್ಲಿಷ್ಟಕರ ಪದ್ಯ ಹೇಳುತ್ತಿದ್ದರು. ಗಣೇಶ ಅದನ್ನು ಅರ್ಥ ಮಾಡಿಕೊಳ್ಳಲು ಯೋಚಿಸುತ್ತಿದ್ದಾಗ ವ್ಯಾಸರಿಗೆ ಮುಂದಿನ ಪದ್ಯ ರಚಿಸಲು ಕಾಲಾವಕಾಶ ಸಿಗುತ್ತಿತ್ತು. ಗಣೇಶ ಹಿಂದಿನ ಪದ್ಯವನ್ನು ಅರ್ಥ ಮಾಡಿಕೊಂಡು ಬರೆದ ಮೇಲೆ ಈ ಮುಂದಿನ ಪದ್ಯ ಬರೆಯಲು ಆರಂಭಿಸುತ್ತಿದ್ದ. ಈ ರೀತಿ ಜಗತ್ತಿನ ಬೃಹತ್ ಮಹಾ ಕಾವ್ಯವನ್ನು ಮಹರ್ಷಿ ವ್ಯಾಸ ಮತ್ತು ಗಣೇಶ ಬರೆದರು. ಗಣೇಶ ತನ್ನ ಮುರಿದ ದಂತವನ್ನು ಪೆನ್ನಾಗಿ ಬರೆಯಲು ಬಳಸಿದ ಎಂದು ಪುರಾಣದ ಉಲ್ಲೇಖಗಳು ಹೇಳುತ್ತವಾದುದರಿಂದ ಮಹಾಭಾರತವೊಂದು ‘ದಂತ’ ಕಥೆಯೆಂದು ಕರೆಯಲು ಅಡ್ಡಿಯಿಲ್ಲ.

ಜಗತ್ತಿನ ವಿಶ್ವಾಸ ನಿಂತಿರುವುದು ಮಾತಿಗಿಂತ ಕೃತಿಯ ಮೇಲೆ ಅರ್ಥಾತ್ ಬರಹದ ಮೇಲೆ. ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಾಬ್ದಾರಿಯನ್ನು ಒಪ್ಪಿದ್ದೇವೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಸಹಿಯನ್ನು ಮಾಡುವುದೇ ಹಸ್ತಾಕ್ಷರ. “ಯಾದಿ ಮೇ ಶ್ಯಾದಿ” ಯಾದರೆ ಮಾತ್ರ ಮದುವೆಗೆ ಕಾನೂನಿನ ಮಾನ್ಯತೆ.

ಮೌಖಿಕ ಪರಂಪರೆಗಿಂತ ನಾವು ನಮ್ಮ ಇತಿಹಾಸ ಪುರಾಣಗಳನ್ನು ಒಪ್ಪುವುದು ಈ ಲಿಖಿತ ದಾಖಲೆಗಳ ಮೂಲಕ. ಹೀಗಾಗಿ ಬರಹಕ್ಕೆ ಕಾನೂನಿನ ಮಾನ್ಯತೆಯಿಂದಾಗಿ ಇದು ಎಲ್ಲ ದೇಶ ಕಾಲಗಳಿಗೂ ಒಪ್ಪಿತ.

ಕನ್ನಡದ ಸಾಹಿತ್ಯದ ಇತಿಹಾಸವನ್ನು ಓದುವಾಗ ಮೊಟ್ಟ ಮೊದಲಿಗೆ ನಂಬುವುದೇ ಈ ಬರಹ ರೂಪದ ಶಾಸನಗಳಿಗೆ. ಕ್ರಿ.ಶ. ಒಂದನೇಯ ಶತಮಾನದಲ್ಲಿ ದೊರೆತ ಅಶೋಕನ ಶಿಲಾಶಾಸನದಲ್ಲಿ ‘ಇಸಿಲ್ ‘ಎಂಬ ಪದದ ಉಲ್ಲೇಖದಿಂದಾಗಿ ಕನ್ನಡ ಲಿಪಿಯ ಪ್ರಯೋಗ ಎರಡು ಸಾವಿರ ವರ್ಷಗಳಿಗೂ ಹಿಂದೆ ಹೋಗುತ್ತದೆ. ತದನಂತರ ಹಲ್ಮಿಡಿ ಶಾಸನ, ಬಾದಾಮಿ ಶಾಸನದಿಂದ ಇಂದಿನ ನವ್ಯೋತ್ತರ ಕಾಲದ ಕನ್ನಡದ ಲಿಪಿ ಬರಹ ಬದಲಾಗುತ್ತ ಇಂದು ಇಲ್ಲಿಗೆ ಬಂದು ನಿಂತಿದೆ.

ವೀರನಾರಾಯಣ ದೇವರ ಪರಮಭಕ್ತನಾದ ಕುಮಾರವ್ಯಾಸ ರಚಿಸಿದ `ಕರ್ಣಾಟ ಭಾರತ ಕಥಾಮಂಜರಿ’ ಗದುಗಿನ ಭಾರತ ಎಂದೇ ಪ್ರಸಿದ್ಧ. ಕುಮಾರವ್ಯಾಸ ಆದಿಪರ್ವದ ಪೀಠಿಕಾ ಸಂಧಿಯಲ್ಲಿ ವೀರನಾರಾಯಣನೆ ಕವಿ `ಲಿಪಿಕಾರ ಕುಮಾರವ್ಯಾಸ’ ಎಂದು ಹೇಳಿದ್ದಾನೆ. ಅಂದರೆ, ಬರೆಯುವವ ತಾನಾದರೂ ಹೇಳುವವ ಇನ್ನೊಬ್ಬ ಇದ್ದಾನೆ ಎಂಬ ಭಾವ.

ಆದಿ ಕವಿ ಪಂಪನಿಂದ ನಡುಗನ್ನಡದ ವಚನ, ರಗಳೆ, ಛಂದಸ್ಸು, ದಾಸ ಪರಂಪರೆ, ನವೋದಯ, ದಲಿತ, ಬಂಡಾಯ, ನವ್ಯೋತ್ತರದವರೆಗೂ ಆಳಿದ್ದು ಕೇವಲ ಕೈ ಬರಹ. ಕುವೆಂಪು, ತರಾಸು, ಬೇಂದ್ರೆ ಕನ್ನಡದ ಆ ಕಾಲದ ಸಮೃದ್ಧ ಸಾಹಿತ್ಯ ರಚನೆಯಾಗಿದ್ದು ಕೈ ಬರಹದಲ್ಲೇ.

ಆಧುನಿಕ ಸೌಲಭ್ಯಗಳಿದ್ದರೂ ಇಂದಿಗೂ ಕೆಲವರು ಕೈ ಬರಹದಿಂದಲೇ ಬರೆಯುವುದು. ಪ್ರತಿಯೊಬ್ಬ ಲೇಖಕನ ಬರಹದ ಶೈಲಿಯ ಅನನ್ಯತೆ ಇರುವ ಹಾಗೆ ಅವರ ಕೈ ಬರಹದ ಶೈಲಿಯೂ ತಮ್ಮ ‘ಸಿಗ್ನೇಚರ್ ಸ್ಟೈಲ್ʼನಿಂದ ವಿಶೇಷ ಗಮನಸೆಳೆಯುತ್ತವೆ.

ಸುಮಾರು ೧೯೯೪-೧೯೯೫ ರಲ್ಲಿ “ಸುಧಾ” ವಾರಪತ್ರಿಕೆಯಲ್ಲಿ “ಸಮಕ್ಷಮ” ಎಂಬ ಲೇಖನಮಾಲೆ ಪ್ರಕಟವಾಗುತ್ತಿತ್ತು. ಅದು ಕನ್ನಡದ ಸುಪ್ರಸಿದ್ಧ ಸಾಹಿತಿಗಳನ್ನು ಪರಿಚಯಿಸುವ ಲೇಖನಮಾಲೆ. ಲೇಖಕರ ಚಿತ್ರ, ಹಸ್ತಾಕ್ಷರ ಮತ್ತು ಮಾಹಿತಿ ಎರಡು ಪುಟಗಳಲ್ಲಿ ಪ್ರಕಟವಾಗುತ್ತಿತ್ತು. ಕನ್ನಡದ ಲೇಖಕರು ತಮ್ಮ ಕೃತಿಗಳಷ್ಟೇ ತಾವು ಬರೆಯುವ ಕೈ ಬರಹದ ಪತ್ರಗಳಿಂದಲೂ ಹೆಸರುವಾಸಿ.

ಇನ್ನು ಸೆಲೆಬ್ರೆಟಿಗಳ ಹಸ್ತಾಕ್ಷರ ಪಡೆಯಲು ಬೀಳುವ ಪೈಪೋಟಿ, ಆಸೆ, ಪಡೆದ ಖುಷಿಯನ್ನು ಕಾಪಿಟ್ಟುಕೊಂಡು ಅದನ್ನು ತಮ್ಮ ಆತ್ಯಾಪ್ತರಿಗೆ ತೋರಿಸುವ ಖುಷಿಯನ್ನು ಆಟೋಗ್ರಾಫ್ ಪಡೆದವರಿಗೇ ವಿಶಿಷ್ಟ ಅನುಭೂತಿಯಾಗುವ ಸಂಗತಿ. ಕ್ರಿಕೆಟ್ ಆಟಗಾರರ ಆಟೋಗ್ರಾಫ್ ಇರುವ ಬ್ರ್ಯಾಂಡೆಡ್ ಬ್ಯಾಟು, ಬಾಲು, ಮತ್ತು ಕ್ಯಾಪುಗಳಿಗಂತೂ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ.

ಬದುಕಿನೊಂದಿನ ಒಡನಾಟದಷ್ಟೇ ಅಂಟಿಕೊಂಡ ಕೈ ಬರಹ ಇಂದು ಕಾಲನ ಹೊಡೆತಕ್ಕೆ ತಂತ್ರಜ್ಞಾನದ ಸುಳಿಗೆ ಸಿಕ್ಕು ತನ್ನ ಅಸ್ಮಿತೆಯ ಅಳಿವು ಉಳಿವಿಗಾಗಿ ಇಂದು ಹೋರಾಟ ನಡೆಸುತ್ತಿರುವುದು ಮಾತ್ರ ದುರಂತವೆಂದೇ ಹೇಳಬೇಕಾಗುತ್ತದೆ. ಮನುಷ್ಯನ ವಿಕಾಸವಾದ ಬೆಳವಣಿಗೆಯಲ್ಲಿ ಬರೆಯುವ ಕೈ ಬೆರಳು ಮತ್ತು ಮಿದುಳಿನ ಸಂಯೋಜನೆಯಿಂದಾಗಿ ನರವ್ಯೂಹದ ವಿಶಿಷ್ಠವಾಗಿ ಸಂಯೋಜನೆಯಾಗಲು ಸಹಸ್ರಾರು ವರ್ಷಗಳೇ ಸವೆದಿರಬೇಕು, ಇಂತಹ ವಿಶಿಷ್ಟ ಸಂವೇದನೆಗಳಿಂದ ರೂಪಗೊಂಡ ಬರಹದ ಕೈ ಕೆಲಸ ತಕ್ಷಣಕ್ಕೆ ಇನ್ನಾರೋ ಬಂದು ಆಕ್ರಮಿಸಿದರು ಎನ್ನುವಾಗ ಯಾರಿಗೆ ನಷ್ಟ ?

ಈ ಭೂಮಿಯ ಮೇಲೆ ಹುಟ್ಟಿದ ಪ್ರತಿ ಮನುಷ್ಯನೂ ಬಿಟ್ಟು ಹೋಗುವಾಗ ತನ್ನ ಗುರುತಿಗಾಗಿ ಏನೇನೊ ಇಡಲು ಪ್ರಯತ್ನಿಸುತ್ತಾನೆ. ಇಂತಹ ಗುರುತಿಸುವಿಕೆಗಾಗಿ ಇಡುವ ಅಮೂಲ್ಯ ವಸ್ತುವೆಂದರೆ ಎಂದಿಗೂ ‘ಕ್ಷರ’ ವಾಗದ ಅಮರ ಅಕ್ಷರ, ಮತ್ತು ಹಸ್ತಾಕ್ಷರ.

ಈ ಗುರುತಿಸುಕೊಳ್ಳುವಿಕೆಯ ಸುಪ್ತ ಕ್ರಿಯೆ ಮಗು ಬರೆಯುವ ಗೋಡೆಯ ಮೇಲಿನ ವಕ್ರರೇಖೆಯಿಂದ ಆರಂಭವಾಗಿ ಆಸ್ಪತ್ರೆಯ ಬೆಡ್ಡಿನ ಮೇಲೆ ರೋಗಿ ಎಣಿಸುವ ಕೊನೆಯ ಕ್ಷಣಗಳವರೆಗೆ ಮತ್ತು ಆ ರೋಗಿ ನಡಗುವ ಕೈಗಳಿಂದ ವಿಲ್ಲಿನ ಮೇಲೆ ಸಹಿ ಹಾಕುವತನಕ ಜಾರಿಯಲ್ಲಿರುತ್ತದೆ.

ಈ ಬಂದು ಹೋಗುವುದರ ನಡುವಿನ ಪಯಣದುದ್ದಕ್ಕೂ ಕೈ ಬರಹ ನಮ್ಮ ಮನಸಿನ ಪ್ರತಿರೂಪವಾಗಿ ನಮ್ಮ ನೆರಳಾಗಿ ನಮ್ಮೊಂದಿಗೆ ಬದಲಾಗುತ್ತ ಬೆಳೆಯುತ್ತ ತಿದ್ದಿಕೊಳ್ಳುತ್ತ, ತೀಡಿಸಿಕೊಳ್ಳುತ್ತ ಒಪ್ಪ ಓರಣವಾಗಿ ಜೋಡಿಸಿ ಬರಹವನ್ನು ಮತ್ತೆ ಮತ್ತೆ ಓದುತ್ತ ಥೇಟ್ ನಮ್ಮ ಬದುಕಿನ ಕನ್ನಡಿಯ ಹಾಗೆ, ವ್ಯಕ್ತಿತ್ವದ ಮುನ್ನುಡಿಯ ಹಾಗೆ ಕೊನೆಯವರೆಗೂ ಜೊತೆಗಿರುತ್ತ ನಮ್ಮೊಂದಿಗೇ ಇಲ್ಲವಾಗುವ ಕೈ ಬರಹ, ಮನುಷ್ಯನ ವ್ಯಕ್ತಿತ್ವದಷ್ಟೇ ಜಟಿಲ, ಗೊಂದಲ, ಶಕ್ತಿ, ದೌರ್ಬಲ್ಯದ ಸಂಕೇತವಾಗಿ ಕೈ ಬರಹವೆಂಬುದು ಹಣೆ ಬರಹದಂತೆ ಮಣ್ಣಿನ ಮಡಕೆಯಷ್ಟೇ ಕ್ಷಣಿಕ ಮತ್ತು ಸುಂದರ.