ಸೇಂಗಾ, ಹುರಿಗಡಲೆ, ಮಸಾಲೆವಠಾಣಿ, ಪೆಪ್ಪರಮೆಂಟ್ ಮುಂತಾದವುಗಳನ್ನು ಮಾರುವ ಮಧ್ಯ ವಯಸ್ಕನೊಬ್ಬ ಆ ಚಿಕ್ಕ ಕಟ್ಟಡದಲ್ಲಿ ಆರಂಭದಲ್ಲೇ, ನೆಲದ ಮೇಲೆ ಹಾಸಿಕೊಂಡು ಕುಳಿತಿರುತ್ತಿದ್ದ. ಆ ಬಡ ವ್ಯಕ್ತಿಯ ಬದುಕು ಆನಂದಮಯವಾಗಿತ್ತು. ಸದಾ ಹಸನ್ಮುಖಿಯಾಗಿ ಇರುತ್ತಿದ್ದ. ಖಾಕಿ ಹಾಫ್ ಪ್ಯಾಂಟ್ ಮತ್ತು ಹಾಪ್ ಷರ್ಟ್ ಆತನ ‘ಯೂನಿಫಾರ್ಮ್’ ಆಗಿತ್ತು. ಆ ಪುಟ್ಟ ವ್ಯಾಪಾರದಲ್ಲಿ ಎಷ್ಟು ಗಳಿಸುತ್ತಿದ್ದನೋ ದೇವರೇ ಬಲ್ಲ. ಆದರೆ ಆತನ ಜೀವನ್ಮುಖಿ ಬದುಕು ಆದರ್ಶಪ್ರಾಯವಾಗಿತ್ತು. ಇಣಚಿ (ಅಳಿಲು), ಗುಬ್ಬಿಗಳು ಆತನ ಕೈ ಮೇಲೆ ಕುಳಿತು ಕಾಳು ತಿನ್ನುತ್ತಿದ್ದವು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 35ನೆಯ ಕಂತು ಇಲ್ಲಿದೆ.

ಗಾಂಧಿಚೌಕ್ ಎದುರಿಗಿರುವುದು ಸಿದ್ಧೇಶ್ವರ ರಸ್ತೆ. ಅಲ್ಲಿಂದ ಪೂರ್ವ ದಿಕ್ಕಿನತ್ತ ಗೋಳಗುಮ್ಮಟದ ಕಡೆಗೆ ಹೋಗುವ ರಸ್ತೆಯೆ ಸ್ಟೇಷನ್ ರೋಡ್. ಗೋಲಗುಂಬಜ ಮತ್ತು ಬೋಲಿಗುಂಬಜ್ ಎಂದೂ ಗೋಳಗುಮ್ಮಟಕ್ಕೆ ಕರೆಯುತ್ತಾರೆ. ಸ್ಟೇಷನ್ ರೋಡ್ ಸಮೀಪದಲ್ಲಿರುವ ಗೋಳಗುಮ್ಮಟ ದಾಟಿ ಸ್ವಲ್ಪ ದೂರ ಹೋದಮೇಲೆ ಎಡಕ್ಕೆ ಹೊರಳಿ ಮುಂದೆ ಸಾಗಿದರೆ ರೈಲ್ವೆ ಸ್ಟೇಷನ್.

ದಿನಂಪ್ರತಿ ಅನೇಕ ರೈಲುಗಳು ಸಂಚರಿಸುವಾಗ ಗೋಳಗುಮ್ಮಟದ ಒಳಗೆ ಒಂದು ರೀತಿಯ ಕಂಪನದ ಅನುಭವವಾಗುವುದು. ಆದರೂ ಜಗತ್ತಿನ ಎರಡನೇ ಅತಿದೊಡ್ಡ ಗುಮ್ಮಟವನ್ನು ಹೊತ್ತು ನಿಂತ ಗೋಲಗುಂಬಜ ಕಟ್ಟಡಕ್ಕೆ ಆ ಕಂಪನದಿಂದ ಹಾನಿಯಾಗಿಲ್ಲ. (ವ್ಯಾಟಿಕನ್‌ನಲ್ಲಿರುವ ಸೇಂಟ್ ಪೀಟರ್ಸ್ ಬೆಸಿಲಿಕಾ ಕಟ್ಟಡದ ಗುಮ್ಮಟ ಇದಕ್ಕಿಂತ ದೊಡ್ಡದಾಗಿದೆ ಎಂದು ಹೇಳುತ್ತಾರೆ.) ಆ ಇಡೀ ಗೋಲಗುಂಬಜ ಪ್ರದೇಶ ಕಲ್ಪಡಿಯ ಮೇಲೆ ಇರುವುದು ಕೂಡ ಅದರ ಸುರಕ್ಷತೆಗೆ ಸಹಾಯಕವಾಗಿದೆ.

ನಾವು ಹುಡುಗರು ಬಹಳ ಸಲ ಗೋಳಗುಮ್ಮಟ ಗಾರ್ಡನ್‌ನಲ್ಲಿ ಮರದ ಕೆಳಗೆ ಕುಳಿತು ಓದಲು ನಡೆದುಕೊಂಡೇ ಹೋಗುತ್ತಿದ್ದೆವು. ಒಂದು ಸಲ ಸಾಯಂಕಾಲ ಒಂದು ಮರದ ಕೆಳಗೆ ಕುಳಿತು ಓದುತ್ತಿದ್ದೆ. ಬಹಳ ಹಸಿವಾಗಿತ್ತು. ಏನಾದರೂ ತಂದು ತಿನ್ನಬೇಕೆಂದರೆ ಒಂದು ಪೈಸೆಯೂ ಇರಲಿಲ್ಲ. ಯಾರೋ ಉತ್ತರದ ಕಡೆಯವರು ಗೋಲಗುಂಬಜ ನೋಡಲು ಬಂದು ಗಾರ್ಡನ್‌ನಲ್ಲಿ ಸಮೀಪದಲ್ಲೇ ಇದ್ದ ಇನ್ನೊಂದು ಮರದ ಕೆಳಗೆ ಕುಳಿತು ಸೇವುಚೂಡಾದ ರಾಶಿ ಹಾಕಿಕೊಂಡು ತಿನ್ನಲು ಪ್ರಾರಂಭಿಸಿದರು. ಅವರಿಗೆ ಏನು ಅನಿಸಿತೊ ಗೊತ್ತಿಲ್ಲ. ಒಬ್ಬಾತ ನಗುಮುಖದಿಂದ ಬಂದು ಪೇಪರ್ ಪೀಸಲ್ಲಿ ಸಾಕಷ್ಟು ಸೇವುಚೂಡಾ ತಂದು ಕೊಟ್ಟ. ಥ್ಯಾಂಕ್ಸ್ ಹೇಳಿದೆ.

ಶುಕ್ರವಾರ ಮಾತ್ರ ಟಿಕೆಟ್ ಇಲ್ಲದೆ ಗೋಳಗುಮ್ಮಟದ ಒಳಗೆ ಬಿಡುತ್ತಿದ್ದರು. ನಾವು ಹಣವಿಲ್ಲದ ಹುಡುಗರು. ಆ ದಿನ ಮಾತ್ರ ಗೋಲಗುಂಬಜ್ ಮೇಲೆ ಹೋಗಿ ಗುಮ್ಮಟದ ಒಳಗಿನ ವಿಸ್ಪರಿಂಗ್ ಗ್ಯಾಲರಿಯ ದಂಡೆಗುಂಟ ಇರುವ ಸಿಮೆಂಟ್ ಆಸನಗಳಲ್ಲಿ ಗೋಡೆಗೆ ಕಿವಿ ಹಚ್ಚಿ ಕುಳಿತುಕೊಳ್ಳುತ್ತಿದ್ದೆವು. ಆ ಬೃಹತ್ ಗುಂಬಜದ ಒಳಗೆ ಸುತ್ತಲೂ ಇರುವ ಆಸನಗಳಲ್ಲಿ ಕುಳಿತವರ ಪಿಸು ಮಾತುಗಳೂ ಕೇಳುತ್ತಿದ್ದವು. ಅವರ ಕೈಯಲ್ಲಿನ ಗಡಿಯಾರದ ಟಿಕ್ ಟಿಕ್ ಸಪ್ಪಳವೂ ಕೇಳಿಸುತ್ತಿತ್ತು. ಯಾರಾದರೂ ಗ್ಯಾಲರಿಗೆ ಬಂದು ಖುಷಿಯಿಂದ ಚಪ್ಪಾಳೆ ತಟ್ಟಿದರೆ ಏಳೆಂಟು ಸಲ ಅದರ ಪ್ರತಿಧ್ವನಿಯಾಗುತ್ತಿತ್ತು. ನಂತರ ಅಸ್ಪಷ್ಟವಾಗಿ ಕೇಳಿಸುತ್ತ ಧ್ವನಿ ಮಾಯವಾಗುತ್ತಿತ್ತು.

ಒಂದು ಸಲ ಒಬ್ಬ ಗುಜರಾಥಿ ವ್ಯಾಪಾರಿ ತಮ್ಮ ಕುಟುಂಬ ಸಮೇತ ಬಂದರು. ಅವರು ಬಂದ ಕೂಡಲೇ “ಪೈಸಾ” ಎಂದು ಕೂಗಿದರು. ಆಗ ಗೋಲಗುಂಬಜದಲ್ಲಿ ಪೈಸಾ ಪೈಸಾ ಪೈಸಾ…. ಎನ್ನುತ್ತ ಏಳು ಸಲ ಸ್ಪಷ್ಟವಾಗಿ ಪ್ರತಿಧ್ವನಿಸಿ ನಂತರ ಕ್ರಮೇಣ ಕಡಿಮೆಯಾಯಿತು. ಆಗ ಆ ಗುಜರಾಥಿಯ ಆನಂದ ಹೇಳತೀರದು.

ಗೋಲಗುಂಬಜದ ಮೇಲೆ ಹೋಗಿ ಹೊರಗಿನಿಂದ ಆ ಬೃಹತ್ ಗುಮ್ಮಟದ ಸುತ್ತ ತಿರುಗುವಾಗ ಒಂದು ಕಡೆ ಗುಂಬಜದ ಮೇಲಿಂದ ದಪ್ಪನೆಯ ಸರಪಳಿಯನ್ನು ಇಳಿಬಿಟ್ಟಿರುವುದು ಕಾಣುವುದು. ಒಮ್ಮೆ ಒಬ್ಬ ಹಳ್ಳಿಯ ತರುಣ ಬಂದು ಆ ಸರಪಳಿಯನ್ನು ಹಿಡಿದು ಸರಸರನೆ ಗುಮ್ಮಟದ ಮೇಲೆ ಹತ್ತಿ ಅದರ ತುದಿಯ ಮೇಲಿನ ಗೂಟವನ್ನು ಮುಟ್ಟಿ ಮತ್ತಿ ಸರಸರನೆ ಇಳಿದು ಬಂದ. ಆತ ತುತ್ತತುದಿಯನ್ನು ಮುಟ್ಟುವುದು ನಮಗೆ ಕಾಣಲಿಲ್ಲ. ಗುಂಬಜ ಅಷ್ಟು ದೊಡ್ಡದಾಗಿದೆ. ಕೆಳಗೆ ದೂರದಲ್ಲಿದ್ದವರಿಗೆ ಮಾತ್ರ ಆ ವಿಸ್ಮಯಕಾರಿ ದೃಶ್ಯ ಕಂಡಿತು.

(ವಿಜಾಪುರ ನಗರದ ಕೇಂದ್ರಸ್ಥಳವಾದ ಗಾಂಧಿಚೌಕದಿಂದ ಗೋಳಗುಮ್ಮಟದ ಕಡೆಗೆ ಹೋಗುವ ಸ್ಟೇಷನ್ ರೋಡ್.)

ಆತ ಹಾಗೆ ಹತ್ತುವುದನ್ನು ನೋಡಿ ಅಲ್ಲಿದ್ದ ನಾವೆಲ್ಲ ಬೆರಗಾದೆವು. ಅವನಿಗೆ ಏನಾಗುವುದೋ ಎಂಬ ಗಾಬರಿಯೂ ಆಯಿತು. ಆತ ಇಳಿದು ಬಂದಾಗ ಸಮಾಧಾನವಾಯಿತು. ಆ ಗುಮ್ಮಟದ ತುದಿಯ ಗೂಟದ ಸುತ್ತ ಎಷ್ಟು ಜಾಗವಿದೆ ಎಂದು ಒಬ್ಬಾತ ಕೇಳಿದ. ಅದರ ಸುತ್ತಳತೆ ಒಂದು ಕಣ (ಎತ್ತುಗಳ ಸಹಾಯದಿಂದ ಧಾನ್ಯಗಳನ್ನು ಒಕ್ಕುವುದಕ್ಕಾಗಿ ಸಿದ್ಧಪಡಿಸಿದ ಸ್ಥಳ) ದಷ್ಟಿದೆ ಎಂದು ರೈತರ ಭಾಷೆಯಲ್ಲೇ ಹೇಳಿದ. ನಿಂದು ಯಾ ಊರು? ಯಾರ ಪೈಕಿ? ಎಂದು ಇನ್ನೊಬ್ಬ ಕೇಳಿದ. ಆತ ಮುದ್ದೇಬಿಹಾಳ ತಾಲ್ಲೂಕಿನ ಯಾವುದೋ ಹಳ್ಳಿಯ ಹೆಸರು ಹೇಳಿದ. ತಾನು ಮಾದರ ಪೈಕಿ ಎಂದು ತಿಳಿಸಿದ. ಹಾಗೆ ಗೋಳಗುಮ್ಮಟ ಮೇಲೆ ಹತ್ತಿ ಹೋಗಿ ಮತ್ತೆ ಸರಸರನೆ ಸುರಕ್ಷಿತವಾಗಿ ಬಂದ ಇನ್ನೊಂದು ಉದಾಹರಣೆ ಇಲ್ಲ. ಆ ಯುವಕ ನಿಜವಾದ ವೀರಪುರುಷನಾಗಿದ್ದ. ಅವನು ಹಾಗೆ ಗುಮ್ಮಟ ಹತ್ತಿ ಮತ್ತೆ ಇಳಿದು ಬಂದದ್ದು ಒಂದು ಕನಸಿನಂತೆ ನಡೆದು ಹೋಯಿತು.

ಗೋಳಗುಮ್ಮಟ ಕೆಳಗೆ ವಿಶಾಲವಾದ ನೆಲಮಾಳಿಗೆ ಇದೆ. ಕೆಲವೊಂದು ಸಲ ಪ್ರಮುಖರು ಬಂದಾಗ ಅದರ ಬಾಗಿಲು ತೆರೆಯುತ್ತಿದ್ದರು. ಆಗ ನಮಗೂ ಒಳಗೆ ಹೋಗುವ ಅವಕಾಶ ಸಿಗುತ್ತಿತ್ತು. (ಭಯೋತ್ಪಾದಕರ ಸಮಸ್ಯೆಯಿಂದಾಗಿ ಈಗ ಅಲ್ಲಿ ಯಾರನ್ನೂ ಬಿಡುವುದಿಲ್ಲ.) ಆ ನೆಲಮಾಳಿಗೆಯಲ್ಲಿ ಮುಹಮ್ಮದ್ ಆದಿಲಶಾಹಿ ಮತ್ತು ಆ ರಾಜನ ಪರಿವಾರದ ಗೋರಿಗಳಿವೆ. (ಮೇಲೆ ತೋರು ಗೋರಿಗಳಿವೆ) ಅಲ್ಲಿಯ ಒಂದು ಗೋರಿಯನ್ನು ರಂಭಾಳ ಗೋರಿ ಎಂದು ತೋರಿಸುತ್ತಾರೆ, ರಂಭಾ ಎಂಬ ನರ್ತಕಿ ಮುಹಮ್ಮದ್ ಆದಿಲಶಾಹಿಯ ಪ್ರೇಯಸಿ ಎಂದು ಹೇಳುತ್ತಾರೆ. ಒಂದು ಸಲ ರಂಭಾ ಜೊತೆ ಮುಹಮ್ಮದ್ ಆದಿಲಶಾಹಿ ವಿಸ್ಪರಿಂಗ್ ಗ್ಯಾಲರಿಯಲ್ಲಿದ್ದಾಗ, ‘ನನ್ನ ಮೇಲೆ ಬಹಳ ಪ್ರೀತಿ ಇದ್ದರೆ ಇಲ್ಲಿಂದ ಕೆಳಗೆ ಜಿಗಿ’ ಎಂದ ತಕ್ಷಣವೇ ರಂಭಾ ಜಿಗಿದು ಪ್ರಾಣತ್ಯಾಗ ಮಾಡಿದಳು ಎಂಬ ಕಥೆ ಕಟ್ಟಿದ್ದಾರೆ.

ಆ ಬೃಹತ್ ಗುಂಬಜದ ಒಳಗೆ ಸುತ್ತಲೂ ಇರುವ ಆಸನಗಳಲ್ಲಿ ಕುಳಿತವರ ಪಿಸು ಮಾತುಗಳೂ ಕೇಳುತ್ತಿದ್ದವು. ಅವರ ಕೈಯಲ್ಲಿನ ಗಡಿಯಾರದ ಟಿಕ್ ಟಿಕ್ ಸಪ್ಪಳವೂ ಕೇಳಿಸುತ್ತಿತ್ತು. ಯಾರಾದರೂ ಗ್ಯಾಲರಿಗೆ ಬಂದು ಖುಷಿಯಿಂದ ಚಪ್ಪಾಳೆ ತಟ್ಟಿದರೆ ಏಳೆಂಟು ಸಲ ಅದರ ಪ್ರತಿಧ್ವನಿಯಾಗುತ್ತಿತ್ತು. ನಂತರ ಅಸ್ಪಷ್ಟವಾಗಿ ಕೇಳಿಸುತ್ತ ಧ್ವನಿ ಮಾಯವಾಗುತ್ತಿತ್ತು.

ಗೋಳಗುಮ್ಮಟಕ್ಕೆ ಹೋಗುವಾಗ ಈಗ ಮ್ಯೂಜಿಯಂ ಇರುವ (ಅದು ಆ ಕಾಲದ ನಗಾರಖಾನೆ ಇದ್ದಿರಬಹುದು.) ಕಟ್ಟಡ ದಾಟಿದ ಮೇಲೆ ಇನ್ನೊಂದು ಚಿಕ್ಕ ಕಟ್ಟಡ ಸಿಗುವುದು. ಇವೆರಡು ಕಟ್ಟಡಗಳು ಮತ್ತು ಗೋಳಗುಮ್ಮಟದ ಎಡಗಡೆ ಇರುವ ಮಸೀದಿ ಕಲಾತ್ಮಕವಾಗಿದ್ದು ಗೋಳಗುಮ್ಮಟದ ಸೌಂದರ್ಯವನ್ನು ಹೆಚ್ಚಿಸಿವೆ.

ಸೇಂಗಾ, ಹುರಿಗಡಲೆ, ಮಸಾಲೆವಠಾಣಿ, ಪೆಪ್ಪರಮೆಂಟ್ ಮುಂತಾದವುಗಳನ್ನು ಮಾರುವ ಮಧ್ಯ ವಯಸ್ಕನೊಬ್ಬ ಆ ಚಿಕ್ಕ ಕಟ್ಟಡದಲ್ಲಿ ಆರಂಭದಲ್ಲೇ, ನೆಲದ ಮೇಲೆ ಹಾಸಿಕೊಂಡು ಕುಳಿತಿರುತ್ತಿದ್ದ. ಆ ಬಡ ವ್ಯಕ್ತಿಯ ಬದುಕು ಆನಂದಮಯವಾಗಿತ್ತು. ಸದಾ ಹಸನ್ಮುಖಿಯಾಗಿ ಇರುತ್ತಿದ್ದ. ಖಾಕಿ ಹಾಫ್ ಪ್ಯಾಂಟ್ ಮತ್ತು ಹಾಪ್ ಷರ್ಟ್ ಆತನ ‘ಯೂನಿಫಾರ್ಮ್’ ಆಗಿತ್ತು. ಆ ಪುಟ್ಟ ವ್ಯಾಪಾರದಲ್ಲಿ ಎಷ್ಟು ಗಳಿಸುತ್ತಿದ್ದನೋ ದೇವರೇ ಬಲ್ಲ. ಆದರೆ ಆತನ ಜೀವನ್ಮುಖಿ ಬದುಕು ಆದರ್ಶಪ್ರಾಯವಾಗಿತ್ತು. ಇಣಚಿ (ಅಳಿಲು), ಗುಬ್ಬಿಗಳು ಆತನ ಕೈ ಮೇಲೆ ಕುಳಿತು ಕಾಳು ತಿನ್ನುತ್ತಿದ್ದವು. ಆ ದೃಶ್ಯ ನನಗಂತೂ ಬಹಳ ಖುಷಿ ಕೊಡುತ್ತಿತ್ತು. ಹೀಗೆ ಆತ ಸದಾ ಆನಂದದಲ್ಲಿ ತಲ್ಲೀನನಾಗಿರುತ್ತಿದ್ದ. ಹತ್ತು ಪೈಸೆ ಗಿರಾಕಿಗಳ ಜೊತೆ ಖುಷಿಯಿಂದ ಮಾತನಾಡುತ್ತ ತನ್ನದೇ ಲೋಕದಲ್ಲಿರುತ್ತಿದ್ದ.

ತೂತಿನ ದುಡ್ಡು ಕಡಿಮೆಯಾಗಿ ಹೊಸದಾಗಿ ನಯಾಪೈಸೆ ಬಂದು ಸ್ವಲ್ಪ ವರ್ಷ ಕಳೆದ ದಿನಗಳವು. 64 ದುಡ್ಡಿನಿಂದ ಕೂಡಿದ ರೂಪಾಯಿ, ನಂತರ ನೂರು ನಯಾಪೈಸೆ ಕೂಡಿದ ರೂಪಾಯಿ ಆಯಿತು. ಆಗ ಸಿನಿಮಾ ಟಾಕೀಜ್‌ನಲ್ಲಿ ಕನಿಷ್ಠ ಟಿಕೆಟ್ ಬೆಲೆ 30 ನಯಾಪೈಸೆ ಇತ್ತು. ರಾಜಕಪೂರ್ ಸಿನಿಮಾ ನೋಡುವುದಕ್ಕಾಗಿ 30 ನಯಾಪೈಸೆ ಕೂಡಿಸುವುದೇ ನನಗೆ ಸಾಹಸದ ಕೆಲಸವಾಗಿತ್ತು. ಈ ಹಾಫ್ ಪ್ಯಾಂಟ್ ವ್ಯಾಪಾರಿಗೂ ರಾಜ್‌ಕಪೂರ್ ಸಿನಿಮಾ ನೋಡುವ ಖಯಾಲಿ ಇತ್ತು. ಏಕೆಂದರೆ ರಾಜ್‌ಕಪೂರ್ ಸಿನಿಮಾ ಬಂದಾಗ ಆತನನ್ನು ಕೆಲವು ಸಲ 30 ನಯಾಪೈಸೆ ಟಿಕೆಟ್ ವಿಭಾಗದಲ್ಲಿ ನೋಡಿದ್ದೆ.

ಈ ಗೋಳಗುಮ್ಮಟ ನನ್ನ ದೃಷ್ಟಿಯಲ್ಲಿ ನಿಚ್ಚಂ ಪೊಸತು (ಸದಾ ಹೊಸತು). ಅದು ಯಾವುದೇ ದಿಕ್ಕಿನಿಂದ ನೋಡಿದರೂ ಹೊಸ ಹೊಸ ವಿನ್ಯಾಸದಲ್ಲಿ ಕಾಣುತ್ತದೆ. ದೂರದಿಂದ, ಸಮೀಪದಿಂದ, ವಿವಿಧ ದಿಕ್ಕುಗಳಿಂದ, ಮೇಲಿನಿಂದ, ಕೆಳಗಿನಿಂದ ವೈವಿಧ್ಯಮಯವಾಗಿ ಗೋಚರಿಸುತ್ತದೆ.

ಐದನೇ ಇಯತ್ತೆವರೆಗೂ ಗೋಳಗುಮ್ಮಟವನ್ನು ದೂರದಿಂದಲೇ ನೋಡಿದ್ದೆ. ಆರನೇ ಇಯತ್ತೆಯಲ್ಲಿದ್ದಾಗ ಮೊದಲ ಬಾರಿಗೆ ಶಿಕ್ಷಕರು ಗೋಳಗುಮ್ಮಟ ತೋರಿಸಲು ಕರೆದುಕೊಂಡು ಹೋಗಿದ್ದರು. ಅದರ ಸಮೀಪ ಹೋದಾಗ ಆ ಭವ್ಯತೆಯನ್ನು ನೋಡಿ ತಲೆಸುತ್ತು ಬಂದಹಾಗೆ ಆಗಿತ್ತು. ನಂತರ ಅದರ ಭವ್ಯಸೌಂದರ್ಯ ನನ್ನ ಭಾವಕೋಶದಲ್ಲಿ ಶಾಶ್ವತವಾಗಿ ಸೇರಿ ಹೋಯಿತು.

ಬಿ.ಎ. ಓದುವಾಗ ನನ್ನ ವಿದ್ಯಾಗುರು ಎ.ಎಸ್. ಹಿಪ್ಪರಗಿ ಅವರು ಕಲೆಯ ಕುರಿತು ಪಾಠ ಮಾಡುತ್ತ, ‘ಗೋಳಗುಮ್ಮಟ ನೋಡುವಾಗ ನಿಮಗೆ ಯಾರಿಗಾದರೂ ನಿಮ್ಮ ಧರ್ಮ, ಜಾತಿ, ಅಂತಸ್ತು ನೆನಪಾಗುತ್ತವೆಯೆ’ ಎಂದು ಕೇಳಿದ್ದರು. ಇಡೀ ಕ್ಲಾಸು ಮೌನವಾಗಿ ಯಾವುದೂ ನೆನಪಾಗುವುದಿಲ್ಲ ಎಂದು ಸೂಚಿಸಿತ್ತು. ‘ಎಲ್ಲ ಮರೆಸಿ ಕೇವಲ ಮನುಷ್ಯನಾಗಿ ಆನಂದಪಡುವ ಸ್ಥಿತಿಗೆ ಒಯ್ಯುವಂಥದ್ದೇ ಕಲೆ’ ಎಂದು ಹೇಳಿದ್ದರು. ನನಗೆ ಗೋಳಗುಮ್ಮಟ ನೆನಪಾದಾಗಲೆಲ್ಲ ಅವರ ಮಾತು ನೆನಪಾಗುತ್ತದೆ. ಅವರ ಮಾತಿನಿಂದ ನನಗೆ ಜೀವನ ದರ್ಶನವಾಯಿತು. ಮನುಷ್ಯನ ಹಮ್ಮು ಬಿಮ್ಮುಗಳನ್ನು ಕಳೆಯುವ ಮೂಲಕ ಆತನನ್ನು ಎಲ್ಲ ರೀತಿಯ ಸಣ್ಣತನ ಮತ್ತು ಭ್ರಮೆಗಳಿಂದ ಮೇಲೆತ್ತಿ, ತಾನೊಂದು ಪ್ರಕೃತಿಯ ಕೂಸು ಎಂಬ ಭಾವ ಮೂಡಿಸುವ ಸಾಮರ್ಥ್ಯ ಕಲೆಗಿದೆ. ಅದು ಯಾವುದೇ ರೂಪದಲ್ಲಿದ್ದರೂ ಮನದಲ್ಲಿ ವಿಸ್ಮಯದ ಸಂಚಲನ ಮೂಡಿಸುತ್ತದೆ. ಆ ಒಂದು ಕ್ಷಣವಾದರೂ ಮಾನವ ಎಲ್ಲ ಮರೆತು ವಿಶ್ವಮಾನವನಾಗಿರುತ್ತಾನೆ. ಇಂಥ ಒಂದು ಸಾಮರ್ಥ್ಯದ ವಾಸ್ತುಶಿಲ್ಪ ನನ್ನ ಜನ್ಮಸ್ಥಳದಲ್ಲಿ ಇದೆ ಎಂಬುದು ಬಹಳ ತೃಪ್ತಿ ಕೊಡುವಂಥದ್ದು. ಇಂಥ ತೃಪ್ತಿಕೊಡುವ ಸಾಮರ್ಥ್ಯ ಹೊಂದಿರುವ ಜಗತ್ತಿನ ಯಾವುದೇ ಕಲಾಕೃತಿ ನಮ್ಮದೇ ಆಗಿರುತ್ತದೆ.

ಗೋಳಗುಮ್ಮಟ ಮ್ಯೂಜಿಯಂ ಸಾಕಷ್ಟು ದೊಡ್ಡದಾಗಿದೆ. ಅಲ್ಲಿ ಆದಿಲಶಾಹಿ ಕಾಲದ ಎಲ್ಲ ಪ್ರಕಾರದ ವಸ್ತುಗಳಿವೆ. ಅವು ನಮ್ಮನ್ನು ಐದು ಶತಾಮಾನ ಹಿಂದಕ್ಕೆ ಒಯ್ದು ನಿಲ್ಲಿಸುತ್ತವೆ. ಸೈನಿಕರು ಅಷ್ಟೊಂದು ಭಾರದ ರಕ್ಷಾ ಕವಚ ಹಾಕಿಕೊಂಡು ಅದು ಹೇಗೆ ಯುದ್ಧ ಮಾಡುತ್ತಿದ್ದರು? ಅಷ್ಟು ದೊಡ್ಡ ಖಡ್ಗವನ್ನು ಅದು ಹೇಗೆ ಹಿಡಿಯುತ್ತಿದ್ದರು? ಎಂದು ಆಶ್ಚರ್ಯ ಪಡುವುದು ಸ್ವಾಭಾವಿಕವಾಗಿತ್ತು. ಯುದ್ಧಗಳ ಮಧ್ಯೆ ಕೂಡ ಕಲೆ, ಸಾಹಿತ್ಯ, ಸೌಂದರ್ಯ, ಐಷಾರಾಮಿ ವಸ್ತುಗಳು ಕೂಡ ಆ ಕಾಲದ ಜನರ ಜೀವನೋತ್ಸಾಹವನ್ನು ಎತ್ತಿ ತೋರಿಸುತ್ತಿದ್ದವು.

ನನಗೆ ಅಲ್ಲಿ ಎರಡು ವಸ್ತುಗಳು ಹೆಚ್ಚಾಗಿ ನೆನಪಿಗೆ ಬರುತ್ತವೆ. ಅಲ್ಲಿನ ಚೀನೀ ಮಣ್ಣಿನ ಊಟದ ತಟ್ಟೆಯೊಂದು ವಿಶಿಷ್ಟವೆನಿಸಿತು. ಅದರಲ್ಲಿ ಆಹಾರ ಹಾಕಿದಾಗ, ಅದರಲ್ಲಿ ವಿಷದ ಅಂಶವಿದ್ದರೆ ಆ ಭಾಗದಲ್ಲಿ ಪ್ಲೇಟಿನ ಬಣ್ಣ ಬದಲಾಗುವುದು ಎಂದು ಅದರ ಮುಂದೆ ಬರೆದ ನೆನಪು. ಯುದ್ಧ ಮತ್ತು ಅಧಿಕಾರದಾಹದಿಂದ ಕೂಡಿದ ಬದುಕು ಸದಾ ಭಯಗ್ರಸ್ಥವಾಗಿರುತ್ತದೆ. ಹಾಗೆ ನೋಡಿದರೆ ರಾಜರು, ಉನ್ನತ ಹುದ್ದೆಯಲ್ಲಿರುವವರು ಮತ್ತು ಕೋಟ್ಯಧೀಶರಿಗಿಂತ ಅರ್ಥದ ಕೊರತೆಯುಳ್ಳ ಜನಸಾಮಾನ್ಯರ ಬದುಕೇ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ಅನಿಸುತ್ತದೆ.

ದಕ್ಷಿಣ ಭಾರತದ ಬೀದರ, ವಿಜಾಪುರ, ಗೋಲ್ಕೊಂಡಾ, ಅಹಮದನಗರ ಮತ್ತು ಬೆರಾರಗಳಲ್ಲಿ ಮುಸ್ಲಿಂ ರಾಜರಿದ್ದರು. ಇವರು ಪರಸ್ಪರ ಕಾದಾಡುವುದನ್ನು ನಿಲ್ಲಿಸಿದ ಕೀರ್ತಿ 1510 ರಲ್ಲಿ ವಿಜಯನಗರ ಸಿಂಹಾಸನ ಏರಿದ ಕೃಷ್ಣದೇವರಾಯನಿಗೆ ಸಲ್ಲುತ್ತದೆ. ಆತನ ಬಿರುದುಗಳಲ್ಲಿ ‘ಯವನ ಸಾಮ್ರಾಜ್ಯ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದು ಕೂಡ ಇದೆ. (ಆದರೆ ಆತನಿಗೆ ಶೈವರ ಮತ್ತು ವೈಷ್ಣವರ ಮಧ್ಯದ ಬಿರುಕು ಮುಚ್ಚುವುದು ಕಷ್ಟವಾಯಿತು.)

ಆ ಮ್ಯೂಜಿಯಂನಲ್ಲಿ ಕಲ್ಲಲ್ಲಿ ತಯಾರಿಸಿದ ಒಂದು ಭಾರಿ ಗಾತ್ರದ ರುಂಡಿನ ಆಕೃತಿ ಇದೆ. ಅದು ರಾಮರಾಯನ ತಲೆಯನ್ನು ಸೂಚಿಸುವ ಶಿಲಾಮೂರ್ತಿ ಎಂದು ಹೇಳಲಾಗುತ್ತಿದೆ. ಆತ ಕೃಷ್ಣದೇವರಾಯನ ಅಳಿಯನಾಗಿದ್ದರಿಂದ ‘ಅಳಿಯ ರಾಮರಾಯ’ ಎಂದೇ ಪ್ರಸಿದ್ಧ. ಆತನ ಅಣ್ಣ ಸದಾಶಿವರಾಯ ವಿಜಯನಗರದ ಅರಸನಾಗಿದ್ದ. ಅಳಿಯ ರಾಮರಾಯ ಮುಖ್ಯಮಂತ್ರಿಯಾಗಿದ್ದು ಆಡಳಿತದ ಮೇಲೆ ಹಿಡಿತ ಸಾಧಿಸಿದ್ದ. ಸೈನ್ಯವನ್ನು ಆಧುನಿಕವಾಗಿ ಸಂಘಟಿಸಿದ್ದ. ಇತಿಹಾಸಕಾರ ಫರಿಶ್ತಾ ಪ್ರಕಾರ 1565ರ ತಾಳಿಕೋಟೆ (ರಕ್ಕಸಗಿ ತಂಗಡಗಿ) ಯುದ್ಧದಲ್ಲಿ ವಿಜಯನಗರದವರು ರಾಕೆಟ್ ಬಳಸಿದ್ದರು.

ಆ ಕಾಲದ ಹಿನ್ನೆಲೆಯಲ್ಲಿ ಇಂಥ ಅತ್ಯಾಧುನಿಕ ಸೈನಿಕ ವ್ಯವಸ್ಥೆಯನ್ನು ವಿಜಯನಗರ ಹೊಂದಿದ್ದರಿಂದ ಜಯ ಸುಲಭ ಎಂಬ ಮನಸ್ಥಿತಿಯನ್ನು ರಾಮರಾಯ ಹೊಂದಿದ್ದ. ಅಂತೆಯೆ ಆತ ಪಲ್ಲಕ್ಕಿಯಲ್ಲಿ ಕುಳಿತು ರಣರಂಗಕ್ಕೆ ಬಂದ. ಯುದ್ಧದಲ್ಲಿ ಅಹಮದನಗರದ ಹುಸೇನ್ ನಿಜಾಂ ಶಹಾ ಆತನ ರುಂಡ ಚಂಡಾಡಿದ ಎಂದು ಹೇಳುತ್ತಾರೆ.

ವಿಜಾಪುರ, ಬೀದರ, ಗೋಲ್ಕೊಂಡಾ, ಅಹಮದನಗರಗಳ ಮುಸ್ಲಿಂ ರಾಜರು ವಿಜಯನಗರ ಮೇಲೆ ದಂಡೆತ್ತಿ ಬಂದರು, ತಾಳಿಕೋಟೆ ಯುದ್ಧದಲ್ಲಿ ಸೋಲಿಸಿದರು ಎಂಬುದಷ್ಟೇ ಓದುಗರ ಕಣ್ಮುಂದೆ ಬರುತ್ತದೆ. ಸೂಫಿ ಸಂತನ ಹಾಗೆ ಇದ್ದ ವಿಜಾಪುರದ ಮೊದಲನೇ ಅಲಿ ಆದಿಲಶಾಹಿ ಮತ್ತು ಅಳಿಯ ರಾಮರಾಯ ಆತ್ಮೀಯ ಮಿತ್ರರಾಗಿದ್ದರು. ಇಂಥ ಸಂಬಂಧಗಳು ಹೇಗೆ ಮುರಿಯುತ್ತವೆ? ಎಲ್ಲ ರಾಜರ ಒಡ್ಡೋಲಗ ಮತ್ತು ಅರಮನೆಗಳಲ್ಲಿ ಎಷ್ಟೊಂದು ಅಧೋಗತಿಯ ರಾಜಕೀಯ ನಡೆದಿರುತ್ತದೆ! ಧರ್ಮಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇರದೆ ಸಾಮ್ರಾಜ್ಯದ ವಿಸ್ತರಣೆ ಮತು ಸಂಪತ್ತಿನ ಶೇಖರಣೆ ಮಾತ್ರ ಮುಖ್ಯವಾಗಿರುತ್ತದೆ ಎಂಬುದನ್ನು ಅರಿತುಕೊಳ್ಳಲು ಇಂಥ ಐತಿಹಾಸಿಕ ಘಟನೆಗಳು ಸಹಕರಿಸುತ್ತವೆ.

ಈಗ ಸ್ಟೇಷನ್ ರೋಡ್ ಎಂದು ಕರೆಯಲಾಗುವ ಗೋಳಗುಮ್ಮಟ ಎದುರಿಗಿನ ರಸ್ತೆ 1489ರಲ್ಲಿ ಟರ್ಕಿ ಮೂಲದ ಯೂಸುಫ್ ಆದಿಲಖಾನ್ ಆದಿಲಶಾಹಿ ಸಾಮ್ರಾಜ್ಯ ಸ್ಥಾಪನೆ ಮಾಡಿದಾಗಿನಿಂದಲೂ ಪ್ರಸಿದ್ಧವಾಗಿತ್ತು. ಸರ್ವಧರ್ಮ ಸಮಭಾವದ ಆತ ನ್ಯಾಯವಂತನೂ ಕಲಾಸಕ್ತನೂ ಆಗಿದ್ದ. ಆತನಿಗೆ ಗಾರ್ಡನ್‌ಗಳ ಬಗ್ಗೆ ವಿಶೇಷ ಆಸಕ್ತಿ ಇತ್ತು. ಆ ರಸ್ತೆಯ ಎರಡೂ ಬದಿಯಲ್ಲಿ ಅವನ ದರ್ಬಾರಿನ ಉನ್ನತ ಅಧಿಕಾರಿಗಳ ಮನೆಗಳಿದ್ದು ಅವೆಲ್ಲ ಪ್ರತ್ಯೇಕ ಗಾರ್ಡನ್ ಹೊಂದಿದ್ದವು. ಬೇಗಂ ತಾಲಾಬ್‌ನಿಂದ ನಗರಕ್ಕೆ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿತ್ತು. ಜಗತ್ತಿನಲ್ಲಿ ರೋಮ ನಗರದ ನಂತರ ನೀರು ಪೂರೈಕೆ ವ್ಯವಸ್ಥೆಯಾಗಿದ್ದು ವಿಜಾಪುರ ನಗರದಲ್ಲಿ ಮಾತ್ರ. ಹೀಗೆ ನೀರು ಮತ್ತು ಗಾರ್ಡನ್‌ಗೆ ವಿಜಾಪುರ ಆ ಕಾಲದಲ್ಲೇ ಪ್ರಸಿದ್ಧವಾಗಿತ್ತು. 1686ರ ವರೆಗೆ ಆದಿಲಶಾಹಿ ಆಡಳಿತವಿರುವವರೆಗೆ ನೀರು ಪೂರೈಕೆ ಮತ್ತು ಹಸಿರು ವಾತಾವರಣಕ್ಕೆ ಕೂಡ ವಿಜಾಪುರ ಪ್ರಸಿದ್ಧವಾಗಿತ್ತು.

ನನ್ನ ಬಾಲ್ಯಕಾಲದಲ್ಲಿ ಸ್ಟೇಷನ್ ರೋಡ್ ಅಕ್ಕಪಕ್ಕದಲ್ಲಿ ವಿಜಾಪುರದ ಗೌಡರ, ನಾಡಗೌಡರ, ಧಣಿಗಳ, ದೇಸಾಯರ, ಜಹಾಗೀರದಾರರ ಮತ್ತು ಜಮೀನುದಾರರ ಬಂಗ್ಲೆಗಳು ಹೆಚ್ಚಾಗಿದ್ದವು. ಆ ಮನೆಗಳ ಮಧ್ಯೆ ಆಲಮೇಲ ದೇಸಾಯಿಯವರ ‘ಆಲಮೇಲ ಹೌಸ್’ ಬಂಗ್ಲೆಯೂ ಇತ್ತು. ಆಲಮೇಲ ದೇಸಾಯಿಯವರ ಮನೆತನದ ಪೂರ್ವಜ 12ನೇ ಶತಮಾನದ ಜಗದೇವ ಎಂಬುದು ನನಗೆ ತಿಳಿವಳಿಕೆ ಬಂದ ಮೇಲೆ ಗೊತ್ತಾದ ನಂತರ ಆಲಮೇಲ ಹೌಸ್ ಬಗ್ಗೆ ವಿಶೇಷವಾದ ಆಕರ್ಷಣೆ ಉಂಟಾಯಿತು. (ಆಲಮೇಲ ದೇಸಾಯಿ ಮನೆತನದವರು ಅದನ್ನು ಮಾರಿ ಬಹಳ ವರ್ಷಗಳೇ ಆದವು.)

ಕಲ್ಯಾಣದಲ್ಲಿ ಶರಣರ ಹತ್ಯಾಕಾಂಡವಾದಾಗ ಜಗದೇವ ಮತ್ತು ಮಲ್ಲಿಬೊಮ್ಮರು ಸೇರಿ ಬಿಜ್ಜಳನ ಕೊಲೆ ಮಾಡಿದರು ಎಂದು ಇತಿಹಾಸ ಹೇಳುತ್ತದೆ. ದೇಸಾಯಿಯವರ ಮನೆಯಲ್ಲಿ ಜಗದೇವ ಹೆಸರು ಇಂದಿಗೂ ಉಳಿದುಕೊಂಡು ಬಂದಿದೆ. (ಕಲ್ಯಾಣ ಚಾಲುಕ್ಯರ ರಾಜ್ಯದಲ್ಲಿ ಜಗದೇವ ಮತ್ತು ಮಲ್ಲಿಬೊಮ್ಮರು ಮಾಂಡಲಿಕರಾಗಿದ್ದರು. ಮಂಗಳವಾಡದ ಮಹಾಮಂಡಲೇಶ್ವರ ಬಿಜ್ಜಳ ಮಹತ್ವಾಕಾಂಕ್ಷಿಯಾಗಿದ್ದ. ದುರ್ಬಲ ಕಲ್ಯಾಣ ಚಾಲುಕ್ಯ ದೊರೆ ಮೂರನೇ ತೈಲಪನನ್ನು ಪದಚ್ಯುತಗೊಳಿಸಿ ತಾನೇ ಕಲ್ಯಾಣದ ರಾಜನಾದ. ಅ ಸಂದರ್ಭದಲ್ಲಿ ತೈಲಪನಿಗೆ ನಿಷ್ಠರಾಗಿದ್ದ ಜಗದೇವ ಮತ್ತು ಮಲ್ಲಿಬೊಮ್ಮರನ್ನು ಕಾರಾಗೃಹದಲ್ಲಿಟ್ಟ. ಕಲ್ಯಾಣದಲ್ಲಿ ನಡೆದ ಶರಣರ ಹತ್ಯಾಕಾಂಡದ ಪ್ರಕ್ಷುಬ್ಧ ವಾತಾವರಣದಲ್ಲಿ ಒಡ್ಡೋಲಗದೊಳಗಿನ ಮನುವಾದಿ ಪಟ್ಟಭದ್ರ ಹಿತಾಸಕ್ತಿಗಳು ಜಗದೇವ ಮಲ್ಲಿಬೊಮ್ಮರನ್ನು ಸೆರೆಮನೆಯಿಂದ ಅರಮನೆಗೆ ಜಂಗಮವೇಶದಲ್ಲಿ ಕರೆತಂದು ಬಿಜ್ಜಳನ ಕೊಲೆ ಮಾಡಿಸಿ ಶರಣರ ಮೇಲೆ ಆರೋಪ ಹೊರಿಸಿದರು ಎಂದೂ ಹೇಳಲಾಗುತ್ತಿದೆ. ಈ ರೀತಿ ಮಾಡುವ ಮೂಲಕ ಅವರು ಬಿಜ್ಜಳನ ಕೊಲೆ ಮಾಡುವುದರೊಂದಿಗೆ ಶರಣರ ಸಮಾನತಾ ತತ್ತ್ವವನ್ನು ಹಾಳುಗೆಡವಿ ಅವರನ್ನು ದಿಕ್ಕಾಪಾಲಾಗಿಸಿದರು. ಇದು ಹಾಗೇ ಆಗಿರಬಹುದು. ಏಕೆಂದರೆ ತಮ್ಮನ್ನು ಕಾರಾಗೃಹದಲ್ಲಿಟ್ಟ ಬಿಜ್ಜಳನ ಬಗ್ಗೆ ಜಗದೇವ ಮಲ್ಲಿಬೊಮ್ಮರಿಗೆ ಸಿಟ್ಟಿತ್ತು. ಅಲ್ಲದೆ ಪವಿತ್ರರೂ ಮಾನವತಾವಾದಿಗಳು ಆಗಿದ್ದ ಶರಣರ ಹತ್ಯಾಕಾಂಡದ ಬಗ್ಗೆ ಅವರ ಮನಸ್ಸು ನೊಂದಿತ್ತು.

ಹೀಗೆ ಗೋಳಗುಮ್ಮಟದ ಸುತ್ತಮುತ್ತಲಿನ ಅನೇಕ ಸ್ಥಳಗಳು ಮತ್ತು ನೆನಪುಗಳು ನನ್ನ ಮನದಲ್ಲಿ ಸುತ್ತುತ್ತಲೇ ಇರುತ್ತವೆ.

(ಚಿತ್ರಗಳು: ಸುನೀಲಕುಮಾರ ಸುಧಾಕರ)