ಬೆಣ್ಣೆಯಲ್ಲಿ ಕೂದಲು ತೆಗೆದಂತೆ, ವಿನಯವೇ ಮೂರ್ತಿವೆತ್ತಂತೆ ಗಿಳಿ ಮಾತಾಡುವ ಜಿನೇಶನಲ್ಲಿ ಇಂಥ ರಾಕ್ಷಸನಿರುವ ಸಾಧ್ಯತೆ, ಈ ಆರದ ಗಾಯದ ಸಾಕ್ಷಿ ಇರದಿದ್ದರೆ ನಂಬಲು ಸಾಧ್ಯವಾಗುತ್ತಿರಲಿಲ್ಲ. ಅವಳ ಬಾಳು ಕನಸಲ್ಲಿ ನಡೆದಂತೆ ಸುಸೂತ್ರವಾಗಿ ಸೌಖ್ಯದಿಂದಿದೆ ಎಂದು ಭಾವಿಸಿದ್ದರೆ ಅದೆಷ್ಟು ನೋವುಗಳನ್ನು ಒಡಲಲ್ಲಿಟ್ಟು ಬೇಯುತ್ತಿದ್ದಾಳೆ ಎನಿಸಿ ಸುಮಾಳ ಹೊಟ್ಟೆಗೆ ಬೆಂಕಿ ಬಿದ್ದು, ಕಣ್ಣಲ್ಲಿ ನೀರು ಮೌನವಾಗಿ ಕೆನ್ನೆಯನ್ನು ತೋಯಿಸಿದವು.
ಚಂದ್ರಪ್ರಭ ಕಠಾರಿ ಬರೆದ ಈ ಭಾನುವಾರದ ಕಥೆ “ಹಾಡು ಗುಬ್ಬಿ ಪಾಡು!” ನಿಮ್ಮ ಓದಿಗೆ

 

ಅವನು ಏಕಾಏಕಿ ಕಾಡುಪ್ರಾಣಿಯಂತೆ ಸಿದ್ಧಾರ್ಥನ ಮೇಲೆ ಎರಗಿದ್ದ! ಸಿದ್ಧಾರ್ಥನು ಆಡಿದ ಮಾತುಗಳು ಅವನನ್ನು ಕೆರಳಿಸಿತೋ ಅಥವಾ ರಾಜಿಗೆ ಮುತುವರ್ಜಿ ವಹಿಸಿ ದೂರದ ಬೆಂಗಳೂರಿನಿಂದ ಬೆಳ್ಳೂರಿನವರೆಗೂ ಬಂದನೆಂಬ ಹೊಟ್ಟೆಯಲ್ಲಿದ್ದ ಸಿಟ್ಟೋ ಗೊತ್ತಿಲ್ಲ. ಹೋಟೆಲ್ ರೂಮಿನಲ್ಲಿ ನೆರೆದಿದ್ದ ಅವನ ಗೆಳೆಯರು, ಸಂಬಂಧಿಕರು ಬುಸುಗುಡುತ್ತಿದ್ದ ಜಿನೇಶನನ್ನು ಹಿಡಿದೆಳೆದು ಮಂಚದ ಮೇಲೆ ಕೂರಿಸದಿದ್ದರೆ, ಅಕ್ಷರಶಃ ಸಿದ್ಧಾರ್ಥನ ಮೇಲೆ ಕೈ ಮಾಡಿಯೇ ತೀರುತ್ತಿದ್ದ.

ಅಚಾನಕ್ಕಾಗಿ ಆದ ಆಘಾತದಿಂದ ಚೇತರಿಸಿಕೊಳ್ಳಲು ಸಿದ್ಧಾರ್ಥನಿಗೆ ಬಹಳ ಹೊತ್ತೇ ಹಿಡಿಯಿತು. ಕುರ್ಚಿಯಿಂದ ನೆಲಕ್ಕೆ ಕುಸಿದವನು, ಕೆಳಗೆ ಬಿದ್ದ ಕನ್ನಡಕಕ್ಕಾಗಿ ಸೋಫಾ, ಕುರ್ಚಿಗಳ ಕೆಳಗೆ ತಡಕಾಡಿ, ಸಾವರಿಸಿಕೊಂಡು ಏಳಲು ಆಸರೆಗೆ ಚಾಚಿದ ಕೈಗಳನ್ನು ನಿರಾಕರಿಸಿ, ಮುಖಕ್ಕೆ ಕನ್ನಡಕ ಏರಿಸಿ ಪ್ಯಾಂಟು, ಶರಟನ್ನು ಕೊಡವಿಕೊಳ್ಳುತ್ತ ರೂಮಿಂದ ಆಚೆ ನಡೆದ.

ಅಲ್ಲಿಯವರೆಗೂ ಎಲ್ಲವನ್ನೂ ನಿರ್ಲೀಪ್ತರಾಗಿ ನೋಡುತ್ತಿದ್ದ ಡಾಕ್ಟರ್ ಸುಂದರಣ್ಣ “ನೀನಿಂಥ ರೌಡಿ ಅಂತ ಗೊತ್ತಿರ್ಲಿಲ್ಲ. ಗೊತ್ತಿದ್ರೆ ಇಲ್ಲಿಗೆ ಬರ್ತೀರ್ಲಿಲ್ಲ. ನಿನ್ನ ಬಾಳು ನೆಟ್ಗಾಗಲಿ ಅಂತ ಟೈಮು, ದುಡ್ಡು ಹಾಳು ಮಾಡ್ಕೊಂಡ್ ಬೆಂಗಳೂರಿಂದ ಬಂದೋರ ಮೇಲೆ ಕೈ ಮಾಡ್ತೀಯ. ನಿಂಗೆ ನಾಚಿಗೆಯಾಗ್ಬೇಕು!” ಎಂದು ಸಿಟ್ಟಾದರು. ಮೊದಲೇ ಬೆಳ್ಳಗಿದ್ದ ಅವರ ಮುಖ, ರಕ್ತ ಚೆಲ್ಲುವಂತೆ ಕೆಂಪಗಾಗಿತ್ತು. ಜಿನೇಶ ಕೈ ಕಟ್ಟಿಕೊಂಡು ವಿನೀತನಾಗಿ ನಿಂತಂತೆ ಕಂಡರೂ, ತುಟಿಯಲ್ಲಿ ಚೆಲ್ಲಿದ ಸಣ್ಣ ಕುಹಕ ನಗೆ ಏನನ್ನೋ ಸಾಧಿಸಿದ ವಿಕೃತ ಸಂತೃಪ್ತಿಯನ್ನು ಮುಚ್ಚಿಡಲು ಅವನ ಮುಖಾರವಿಂದ ಸೋತಂತೆ ಕಾಣುತ್ತಿತ್ತು.

ಹೋಟೆಲ್ಲಿಂದ ಹೊರಗೆ ಬಂದ ಸಿದ್ಧಾರ್ಥನಿಗೆ ಉಸಿರುಗಟ್ಟಿದ ಗವಿಯಿಂದ ಹೊರಬಂದಂತಾಯಿತು. ಹೋಟೆಲ್ಲಿನ ಮುಂದಿದ್ದ ಹೆದ್ದಾರಿಯಲ್ಲಿ ಆಗೊಂದು ಈಗೊಂದು ಬುರ್ರೆಂದು ಜೋರು ಸದ್ದು ಮಾಡುತ್ತ ಶರವೇಗದಲ್ಲಿ ಸಾಗುತ್ತಿದ್ದ ಕಾರು, ಬಸ್ಸು, ಲಾರಿಗಳನ್ನು ನೋಡುತ್ತ, ದೇಶ ವೇಗವಾಗಿ ಓಡುತ್ತಿದೆಯೆಂದು ಹುಸಿನಕ್ಕು ಸಿಗರೇಟು ಹಚ್ಚಿದ.

ಮಾತಿನ ಓಘದಲ್ಲಿ ತಾನು ಆಡಿದ ಮಾತು ತಪ್ಪಾರ್ಥವಾಯಿತೊ? ಅಥವಾ ಜಿನೇಶ ಬೇಕೆಂತಲೇ ಜಿದ್ದು ಸಾಧಿಸಲು ಅದನ್ನು ಬಳಸಿಕೊಂಡನಾ? ಎಂದು ಯೋಚಿಸುತ್ತ ನಿಂತ.

ಲಿಫ್ಟಿನಿಂದಿಳಿದು ಸಿದ್ಧಾರ್ಥನನ್ನು ಹಿಂಬಾಲಿಸಿ ಬಳಿ ಸಾರಿದ ಯುವಕ, ಜಿನೇಶನ ಖಾಸಾ ಗೆಳೆಯನಿದ್ದಿರಬೇಕು. “ಬೇಸರ ಮಾಡ್ಕೊಳ್ಬೇಡಿ, ಸಾರ್. ಇವರೆಲ್ಲಾ ಕನ್ಸರ್ವೇಟಿವ್ಸ್… ಬಾವೀಲಿ ಇರೋ ಕಪ್ಪೆಗಳು… ಹೊರಗಡೆ ಪ್ರಪಂಚದ ಜ್ಞಾನ ಇಲ್ದೋರು…..” ಅಂತೇನೊ ಸಮಾಧಾನ ಮಾತಾಡುತ್ತಿದ್ದವನಿಗೆ ಏನೂ ಹೇಳದೆ ಮುಗುಮ್ಮಾಗಿ ತಲೆ ಆಡಿಸಿದ.

ಹೆಂಡತಿಯ ಚಿಕ್ಕಮ್ಮನ ಮಗಳು – ಸಂಬಂಧಿಕಳು ಅನ್ನೋದಕ್ಕಿಂತ, ಅಪ್ಪ ಅಮ್ಮಂದಿರನ್ನು ಕಳಕೊಂಡು ಚಿಕ್ಕಂದಿನಿಂದ ಅಜ್ಜಿಯ ನೆರಳಲ್ಲಿ ಬೆಳೆದ ಹೆಣ್ಣೊಬ್ಬಳ ಬಾಳು ಬಯಲುದಾರಿಯಲ್ಲಿ ನಿಂತಿರುವಾಗ, ಅದು ಸರಿದಾರಿಗೆ ಬಂದರೆ ಸಾಕಪ್ಪ ಅಂದುಕೊಂಡು ಬಂದರೆ ಇಲ್ಲಿನ ಪರಿಸ್ಥಿತಿ ತನ್ನ ಕೈಮೀರಿದ್ದು ಎನಿಸಿತು. ಈಗೇನು ಮಾಡುವುದು? ಬೆಂಗಳೂರಿಗೆ ವಾಪಸ್ಸು ಹೋಗುವುದೋ? ಇಲ್ಲಾ ಈ ಮೃಗಗಳ ಮಧ್ಯೆ ಏಗುವುದೋ ತಿಳಿಯದೆ ಸಿದ್ಧಾರ್ಥ ಗೊಂದಲಗೊಂಡ.

ಎರಡು ತಿಂಗಳ ಹಿಂದಿನ ಮಾತು. ಆವತ್ತು, ಬೆಳಿಗ್ಗೆ ಎದ್ದಾಗಿಂದ ಒಂದಾದ ಮೇಲೆ ಒಂದರಂತೆ ಬರುತ್ತಿದ್ದ ಮೊಬೈಲ್ ಕಾಲ್ ಗಳಿಗೆ ಉತ್ತರಿಸುತ್ತ, ಆಫೀಸಿಗೆ ಹೊರಡುವ ಹೊತ್ತಾದರೂ ಕರೆಗಳು ಬರುವುದು ನಿಲ್ಲದಿದ್ದದ್ದು ಸಿದ್ದಾರ್ಥನಿಗೆ ಕಿರಿಕಿರಿಯುಂಟು ಮಾಡಿತ್ತು. ಮೊಬೈಲನ್ನು ಸೈಲೆಂಟಿಗೆ ಹಾಕಿ, ತರಾತುರಿಯಲ್ಲಿ ಬೆಳಗಿನ ತಿಂಡಿ ತಿಂದ ಶಾಸ್ತ್ರ ಮುಗಿಸಿ ಮನೆಯಾಚೆ ಬಂದವನು, “ ಊಟದಡಬ್ಬಿ ಮರೆತು ಇಲ್ಲೇ ಬಿಟ್ಟಿದ್ದೀರಾ! ತಗೊಂಡೋಗಿ” ಎಂದು ಸುಮಾಳು ಕೂಗಿದ್ದನ್ನು ಕೇಳಿ ಮತ್ತೆ ಒಳಗೋಡಿದ.

ಗೇಟು ತೆಗೆದು ಕಾರನ್ನು ಆಚೆ ನಿಲ್ಲಿಸಿ ಮತ್ತೆ ಗೇಟು ಹಾಕುವಾಗ, ಬರ್ರೆಂದು ಬಂದ ಆಟೋವೊಂದು ಮನೆಗೆ ತುಸು ದೂರ ಗಕ್ಕನೆ ನಿಂತಿತು. ಇದ್ಯಾರಪ್ಪ ಅಂತ ನೋಡಿದರೆ ಭಾಗ್ಯ! ಇನ್ನು ಈ ಹರಟೆ ಮಲ್ಲಿ ಬಳಿ ಸಿಕ್ಕಿಕೊಂಡರೆ ಮಾನ್ಯೇಜರತ್ರ ಪ್ರೈಮರಿ ಕ್ಲಾಸಿನ ಬಾಲಭೋದೆ ಗ್ಯಾರಂಟಿ! ಆದರೆ, ಹಾಗೆ ತಪ್ಪಿಸಿಕೊಳ್ಳುವ ಹಾಗಾಗಿರಲಿಲ್ಲ. ಗೇಟು ಹಾಕುವಾಗ ತನ್ನನ್ನು ಗಮನಿಸಿದ್ದಾಳೆ. ಆಟೋದಿಂದ ತಂದಿದ್ದ ಭಾರೀ ದೊಡ್ಡ ದೊಡ್ಡ ಸೂಟ್ ಕೇಸನ್ನು ಇಳಿಸಲು ಒದ್ದಾಡುತ್ತಿದ್ದಾಳೆ. ಸರಿ ಆಯ್ತು! ಇನ್ನೇನು ಮಾಡೋದೆಂದು ಅವಳು ತಂದಿದ್ದ ಸಾಮಾನುಗಳನ್ನು ಮನೆಯೊಳಗೆ ಹೊತ್ತು ಇಟ್ಟು ಕೆಲಸಕ್ಕೆ ಹೊರಟ.

ಕಾರು ಓಡಿಸುತ್ತ ಸಿದ್ಧಾರ್ಥನಿಗೆ ಭಾಗ್ಯಳ ನಡೆಯಲ್ಲಿ ಏನೋ ತಪ್ಪಿಹೋಗಿದೆ ಅನಿಸಿತು. ಹೌದು! ‘ಏನ್ ಭಾವ… ಅಷ್ಟು ದೂರ ಬೆಳ್ಳೂರಿಂದ ಬಂದಿದ್ದೀನಿ. ನೀವು ಕೆಲಸಕ್ಕೆ ಹೋಗಬೇಕಾ? ಇವತ್ತು ರಜೆ ಹಾಕಿ. ನಿಮ್ಮತ್ರ ಹರಟೋದು ಬಹಳಷ್ಟಿದೆ’ ಅಂತ ಅಡ್ಡ ಹಾಕಿ, ಹಠಮಾಡುತ್ತಿದ್ದವಳು ಇವತ್ತು ತುಟಿ ಎರಡು ಮಾಡಿರಲಿಲ್ಲ. ತಾನಾಗೇ ‘ಊರಲ್ಲಿ ಜಿನೇಶ, ಮಕ್ಳು… ಎಲ್ರೂ ಚೆನ್ನಾಗಿದ್ದಾರ?’ ಎಂಬ ಮಾತಿಗೂ ತಲೆಯಷ್ಟೇ ಆಡಿಸಿದ್ದು ಅವನಿಗೆ ಸೋಜಿಗವೆನಿಸಿತು.

ಸುಮಾಳಿಗೂ ಅಷ್ಟೆ. ಯಾವಾಗಲಾದ್ರು ಊರಿಂದ ಬಂದಾಗ ಎರಡ್ಮೂರು ದಿನಗಳ ಬಟ್ಟೆಯೊಂದಿಗೆ ಬರುತ್ತಿದ್ದವಳು, ಈ ಸರ್ತಿ ಎರಡು ದೊಡ್ಡ ಸೂಟ್ ಕೇಸನ್ನು ಹೊತ್ತು ತಂದದ್ದು, ಏನೂ ಮಾತಾಡದೆ ಕೊಟ್ಟ ತಿಂಡಿಯನ್ನು ತಲೆ ಎತ್ತದೆ ತಿನ್ನುತ್ತಿದ್ದವಳನ್ನು ನೋಡಿದರೆ, ಗಂಡನ ಮನೇಲಿ ಏನೋ ಕ್ಯಾತೆ ತೆಗೆದು ಬಂದಿದ್ದಾಳೆ ಎನಿಸಿತು.

ಅಡುಗೆಗೆ ತರಕಾರಿ ಹೆಚ್ಚಿಕೊಟ್ಟು, ಬಟ್ಟೆಗಳನ್ನು ವಾಷಿಂಗ್ ಮೇಷಿನ್ ಗೆ ಹಾಕಿ, ಒಣಗಿದ ಮಡಿಬಟ್ಟೆಗಳನ್ನು ಮಡಿಸಲು ಸಹಾಯ ಮಾಡುತ್ತಿದ್ದವಳಿಗೆ “ಏನಾಯ್ತೇ? ಮನೇಲಿ ಜಗಳ ಮಾಡ್ಕೊಂಡ?” ಅಂದ್ರೆ, ಸ್ವಲ್ಪ ಹೊತ್ತು ಮೌನವಾಗಿದ್ದವಳು ಇದ್ದಕ್ಕಿದಂತೆ “ಅಕ್ಕ… ನನ್ ಮನಸ್ಸು ಸರಿಯಿಲ್ಲ. ಸಾಯೋಣ ಅನ್ಸುತ್ತೆ!” ಅಂತ ಕಣ್ಣಾಲಿ ತುಂಬಿಕೊಂಡಳೇ ಹೊರತು ವಿವರವಾಗಿ ಏನೂ ಹೇಳಲಿಲ್ಲ. ಮೊದಲೇ ಸಪೂರ ಶರೀರದವಳು. ಈಗಂತೂ ಕ್ಷಯರೋಗಿಯಂತೆ ಕಣ್ಣುಗಳು ಗುಳಿ ಬಿದ್ದು, ಇಡೀ ದೇಹ ಅಸ್ಥಿಪಂಜರದಂತೆ ಕಂಡು ಸುಮಾಳಿಗೆ ಹೊಟ್ಟೆ ಚುರ್ರೆಂದು “ಆಯ್ತು. ಬೇಜಾರ್ ಮಾಡ್ಕೊಬೇಡ. ಅಂಥದ್ದೇನು ಆಗಿಲ್ಲ” ಎಂದು, ತನಗೆಲ್ಲ ತಿಳಿದಿದೆಯೆನ್ನುವಂತೆ ಸಮಾಧಾನ ಹೇಳಿ, ಮತ್ತೇನನ್ನು ಅರುಹುವಂತೆ ಒತ್ತಾಯ ಮಾಡಲಿಲ್ಲ.

‘ಸಾಯೋಣ ಅನ್ಸುತ್ತೆ!’ ಅಂತ ಭಾಗ್ಯ ಅವಳ ಮಾಮೂಲು ಮಾತಿನ ವರಸೆಯಲ್ಲಿ ಹೇಳಿದ್ದಾಳೆ ಅಂತಂದು ಕೊಂಡರೂ – ಮರೆವಿನ ಕಾಯಿಲೆಯಿಂದ ಬಳಲುವ ಅತ್ತೆ, ಸದಾ ಆಳುಕಾಳುಗಳ ಮೇಲೆ ನಿಗಾಯಿಟ್ಟು ಯಾವತ್ತು ವ್ಯಾಪಾರ, ವ್ಯವಹಾರದಲ್ಲಿ ಮುಳುಗಿರುವ ಕೋಪಿಷ್ಠ ಮಾವ, ತಮ್ಮ ಬೇಕರಿಯಲ್ಲೇ ಕೆಲಸಕೊಟ್ಟು ಸಾಕಿಕೊಂಡಿರುವ ಮಾವನ ತಮ್ಮನ ಮಗ, ಅವನ ಬಾಣಂತಿ ಹೆಂಡತಿ – ಹಸುಗೂಸು, ಗಂಡ ಜಿನೇಶ ಮತ್ತು ತನ್ನಿಬ್ಬರು ಮಕ್ಕಳು – ಚಂದನ, ಚಿರಂತನ; ತುಂಬು ಸಂಸಾರವನ್ನು ಒಬ್ಬಳೇ ಗಾಣಕ್ಕೆ ಕಟ್ಟಿದ ಎತ್ತಿನಂತೆ ನಿಭಾಯಿಸುವವಳ ಮೇಲೆ ಇಲ್ಲಸಲ್ಲದ ಚಾಡಿಮಾತು, ಆರೋಪಗಳು ಬಂದಾಗ ವಿನಿಮಯವಾಗುವ ಸಣ್ಣಬುದ್ಧಿಯ ಸಣ್ಣಮಾತುಗಳು, ಮುಖ ಸಿಂಡರಿಸಿಕೊಳ್ಳೊದು, ಜಗಳಗಳು ಇದ್ದದ್ದೇ. ಎಲ್ಲರ ಮನೆಯಲ್ಲಿ ಇರುವಂತೆ. ಅಂಥ ಘಟನೆಗಳ ಬಗ್ಗೆ ಸೀನ್ ಟು ಸೀನ್ ಸಿನಿಮಾ ಕತೆಯಂತೆ ಕಣ್ಣಿಗೆ ಕಟ್ಟುವಂತೆ ಭಾಗ್ಯ ಹೇಳುತ್ತಿದ್ದದ್ದು ಹೊಸತೇನಲ್ಲ. ಸಣ್ಣ ಮನಸ್ತಾಪಗಳನ್ನು ತಲೆಗೆ ಹಾಕಿಕೊಳ್ಳದೆ ಅದನ್ನು ತನ್ನ ಅಬ್ಬರವಿಲ್ಲದ, ಭೋರ್ಗರೆಯುವ ಮಾತುಗಳಲ್ಲೇ ಕುಟ್ಟಿ, ಕೊಡವಿಕೊಂಡು ಹೋಗುವವಳು. ಆದರೆ, ಮದುವೆಯಾದ ಇಷ್ಟು ವರ್ಷದಲ್ಲಿ ಯಾವತ್ತು ಸಾಯುವ ಮಾತಾಡುವಷ್ಟು ಜಿಗುಪ್ಸೆ ತೋರಿರಲಿಲ್ಲ.

ಬದುಕಿನ ಪುಟಗಳನ್ನು ತಿರುವಿ ಹಾಕಿದರೆ ಅದೆಷ್ಟೋ ಬಾರಿ – ಭಾಗ್ಯ ಹುಟ್ಟಿದ್ದು, ಬೆಳೆದದ್ದು, ಆಕಸ್ಮಿಕವೆಂಬಂತೆ ಸಿರಿವಂತರ ಮನೆ ಸೊಸೆಯಾಗಿದ್ದು ಎಲ್ಲವೂ ಕನಸಿನಲ್ಲಿ ನಡೆದಂತೆ ಸುಮಾಳಿಗೆ ಭಾಸವಾಗುತ್ತಿತ್ತು!

ರಕ್ತಹೀನತೆಯಿಂದ ಚಿಕ್ಕಮ್ಮನಿಗೆ ಪದೇ ಪದೇ ಗರ್ಭಪಾತವಾಗುತ್ತಿದ್ದಾಗ, ಭಾಗ್ಯ ಹುಟ್ಟಿದ್ದೇ ಪವಾಡವೆಂದು ಹೆರಿಗೆ ಮಾಡಿದ ಡಾಕ್ಟರ್ ಹೇಳಿದ್ದರು. ಆದರೆ, ನಿರೀಕ್ಷೆಯೆಂಬಂತೆ ಅವರಮ್ಮ ಕೆಲವೇ ತಿಂಗಳಲ್ಲಿ ಕಣ್ಮುಚ್ಚಿದ್ದಳು. ಕುಡಿದ ಮೊಲೆವಾಲು ತುಟಿಯಲ್ಲಿ ಆರುವ ಮುನ್ನವೇ ಪುಟಾಣಿ ಕಂದ ಅನಾಥವಾಗಿತ್ತು. ಹೆಸರಿಗಷ್ಟೇ ಅಪ್ಪನೆಂಬುವನಿದ್ದನಾದರೂ, ಸಂಜೆ ಹೊತ್ತಿಗೆ ಬಸ್ಟ್ಯಾಂಡಿನಲ್ಲಿ ಬೊಂಡಬಜ್ಜಿ ಬಿಡುತ್ತಿದ್ದ ಬೀದಿವ್ಯಾಪಾರಿ, ರಾತ್ರಿಯಾಗುತ್ತಿದ್ದಂತೆ ಗಡಂಗಿನಲ್ಲಿ ಕಂಠಮಟ್ಟ ಕುಡಿದು, ಅದೆಲ್ಲಿ ಬಿದ್ದಿರುತ್ತಿದ್ದನೋ? ಮನೆಗೆ ಬರುತ್ತಿದ್ದದ್ದು ಮರುದಿನ ಮಧ್ಯಾಹ್ನದ ಊಟದ ಹೊತ್ತಿಗೆ. ಮಗುವನ್ನು ಅವನಲ್ಲಿ ಬಿಟ್ಟರೆ ಅದರ ಪಾಡು ಹರೋಹರ ಆದೀತೆಂದು ಭಾಗ್ಯಳ ಅಜ್ಜಿ ಸಾಲಿಗ್ರಾಮದಿಂದ ಶಿರಸಿಗೆ ಭಾಗ್ಯಳನ್ನು ಕರೆತಂದು ತಾನೇ ಅದರ ಅಮ್ಮನಾಗಿ ಸಾಕಿದ್ದಳು.

ಕಲಾ ವಿಭಾಗದಲ್ಲಿ ಓದುತ್ತಿದ್ದವಳು ಒಂದೆರೆಡು ವಿಷಯಗಳಲ್ಲಿ ಡುಂಕಿ ಹೊಡೆಯುತ್ತ, ಮತ್ತೆ ಪರೀಕ್ಷೆ ಬರೆಯುತ್ತ, ಹೇಗೊ ತೆವಳುತ್ತ ಬಿಎ ಡಿಗ್ರಿ ಮುಗಿಸಿ ಏದುಸಿರು ಬಿಟ್ಟಿದ್ದಳು. ಅಜ್ಜಿಗೀಗ ಮುಂದೇನು? ಎಂದು ತಲೆನೋವು ಶುರುವಾಗಿತ್ತು. ನೋಡಲು ಅಷ್ಟು ಸುರಸುಂದರಿಯಲ್ಲದಿದ್ದರೂ, ಲಕ್ಷಣವಂತೆ. ಆದರೆ, ಅಪ್ಪ ಅಮ್ಮನಿಲ್ಲದ ತಬ್ಬಲಿ ಹೆಣ್ಣುಮಗಳಿಗೆ ಗಂಡನ್ನು ಎಲ್ಲೆಂದು ಹುಡುಕೋದು? ಹಾಗೆ ಸಿಕ್ಕರೂ ಅವರು ಕೇಳುವ ವರದಕ್ಷಿಣೆ, ವರೋಪಚಾರಕ್ಕೆಂದು ದುಡ್ಡನ್ನು ಹೇಗೆ ಹೊಂದಿಸುವುದೆಂದು ಹಣೆಗೆ ಕೈ ಅಂಟಿಸಿ ಕೂತಿದ್ದರೆ, “ಅಜ್ಜಿ, ಜಾಸ್ತಿ ಚಿಂತೆ ಮಾಡ್ಬೇಡ. ಪರಮಾತ್ಮ ಬಾ ನೆಮ್ಮದಿಯಾಗಿರು ಅಂತ ಕರೆದ್ಬುಟ್ಟಾನು” ಎಂದು ಅಜ್ಜಿಯನ್ನು ಕಿಚಾಯಿಸುತ್ತಿದ್ದ ಭಾಗ್ಯಳಿಗೆ ಅದೊಂದು ದಿನ ಅವಳ ಬದುಕಿಗೆ ಭಾಗ್ಯದ ಬಾಗಿಲು ತೆರೆದಿತ್ತು.

ಸಂಬಂಧಿಕರ ಮದುವೆಯೊಂದರಲ್ಲಿ ತೆಳ್ಳಗೆ, ತುಸು ಕಂದುಬಣ್ಣದ, ಚಿಗರೆಯಂತೆ ಅತ್ತಿತ್ತ ಓಡಾಡುತ್ತಿದ್ದ ಭಾಗ್ಯ, ಬೇಕರಿ ಬಿಸಿನೆಸಲ್ಲಿ ಒಳ್ಳೇ ಸಂಪಾದನೆ ಕಂಡಿದ್ದ ಜಿನೇಶನೆಂಬ ಬೆಳ್ಳೂರಿನ ಯುವರಾಜನ ಕಣ್ಣಿಗೆ ಬಿದ್ದದ್ದೇ, ಅವನೆದೆಯಲ್ಲಿ ಅನುರಾಗದ ಮೃದಂಗ ಬಡಿತ ಶುರುವಾಗಿ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟ. ಅಜ್ಜಿ ತಲೆಯ ಮೇಲಿದ್ದ ಬಂಡೆ ಇಳಿಸಿದರೆ; ಚೂಢಿದಾರ, ಮಿಡಿ, ಪ್ಯಾಂಟು ಶರಟಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಭಾಗ್ಯಳು, ಅಜ್ಜಿಗೆ ಭಾರವಾದೇನೆಂದು ಮದುವೆ ಬೇಡವೆನ್ನಲು ಆಗದೆ, ಎಂಟು ಮೊಳದ ಸೀರೆಯ ಸಂಬಂಧಕ್ಕೆ ಗಂಟು ಬಿದ್ದಳು. “ನಿಂಗೆ ಪ್ರಾಣ ಕೊಟ್ಟು ನಿಮ್ಮಮ್ಮ ದೇವ್ರ ಪಾದ ಸೇರ್ಕೊಂಡ್ಳು. ಅವ್ಳು ಮಾಡ್ಡ ಪುಣ್ಯ, ಒಳ್ಳೇ ಗಂಡನ ಮನೆ ಸಿಕ್ಕಿದೆ! ಇನ್ಮೇಲೆ ನಿನಗದೆ ಮನೆಮಠ ಎಲ್ಲಾ” ಎಂದು ಕಣ್ಣೀರಿಟ್ಟ ಅಜ್ಜಿಯ ಮಾತನ್ನು ಎದೆಗೆ ಹಾಕಿಕೊಂಡಳೋ ಏನೋ? ಅಲ್ಪಸಮಯದಲ್ಲೇ ಚೆಲ್ಲುಚೆಲ್ಲಾಟ ಬಿಟ್ಟವಳು ಗಂಡನನ್ನು, ಅವರ ಮನೆಯವರನ್ನು ಅಪ್ಪಿಕೊಂಡಳು.

ಜಿನೇಶನೂ ಒಳ್ಳೆಯ ಹುಡುಗ, ಮೆದುಭಾಷಿ. ಅಪ್ಪ ನಡೆಸಿಕೊಂಡು ಬಂದಿದ್ದ ಬೇಕರಿಯನ್ನು ತನ್ನ ಉಸ್ತುವಾರಿಯಲ್ಲಿ ಚೆನ್ನಾಗಿಯೇ ವಿಸ್ತರಿಸಿದ್ದ. ಚೆನ್ನಾಗಿ ದುಡಿಮೆ ಮಾಡುತ್ತಾನೆನ್ನುವುದಕ್ಕಿಂತ ಮನೆ ಬಾಗಿಲಿಗೆ ಸಹಾಯ ಯಾಚಿಸಿ ಬಂದವರಿಗೆ ಕೈಲಾದ ಸಹಾಯ ಮಾಡುತ್ತ ಉಪಕಾರಿಯಾಗಿದ್ದ. ಎಲ್ಲ ರಾಜಕೀಯ ಪಕ್ಷದವರಿಗೆ ಬೇಕಾದವನಾಗಿ, ಊರಲ್ಲಿ ವಿಶೇಷ ಗೌರವವನ್ನು ಸಂಪಾದಿಸಿದ್ದವನು. ಹೀಗಿರುವಾಗ, ಮೊಬೈಲ್ ಫೋನ್ ಯುಗದಲ್ಲಿ ತುಸು ಹೆಚ್ಚೆನಿಸುವಂತೆ ಆಚಾರ, ವಿಚಾರಗಳನ್ನು ಹೊಂದಿರುವ ಕಡುಸಂಪ್ರದಾಯದ, ಹೊಟ್ಟೆಬಟ್ಟೆಗೆ ಕೊರತೆಯಿಲ್ಲದೆ ಕುಟುಂಬದಲ್ಲಿ ಇವಳಿಗೆಂಥ ಕೊಂಕು ಕಂಡೀತೆಂದು ಸುಮಾಳಿಗೆ ಊಹಿಸಲು ಆಗಲಿಲ್ಲ.

ದಿನಾ ಎಂಟತ್ತು ಕಳೆದು ಭಾಗ್ಯ ಸುಧಾರಿಸಿಕೊಂಡಂತೆ ಕಂಡಳು. ಸದಾ ಮೌನ ಧರಿಸಿದ್ದವಳು ಸುಮಾಳ ಮಗನ ಜೊತೆ ಹೆಚ್ಚು ಬೆರೆತು ಕೇರಮ್, ಚೆಸ್ಸುಂತ ಆಟವಾಡುತ್ತ ಗೆಲುವಿನಿಂದಿದ್ದಳು. ಸುಮಾಳಿಗೆ ಅವಳ ಬಗ್ಗೆ ಆತಂಕ ಕಮ್ಮಿ ಆಗಿ ನಿರಾಳವಾದರೆ, ಸಿದ್ಧಾರ್ಥ ಒಳಗೊಳಗೆ ಕಸಿವಿಸಿಕೊಂಡು ಇಕ್ಕಟ್ಟು ಅನುಭವಿಸುತ್ತಿದ್ದ. ಕೆಲಸದಿಂದ ಬಂದ ಕೂಡಲೇ ಊರಿಂದ ಜಿನೇಶ ಫೋನ್ ಏನಾದರೂ ಫೋನ್ ಮಾಡಿದ್ದನಾ? ಅಥವಾ ಭಾಗ್ಯ ಮಾಡಿದ್ದಳಾ? ಎಂದು ಕಾಳಜಿಯಿಂದ ವಿಚಾರಿಸುತ್ತಿದ್ದ. ‘ಇದು ತುಂಬಾ ಗಂಭೀರದ ವಿಚಾರ. ಭಾಗ್ಯ ಎಷ್ಟು ದಿನವಾದರೂ ಇಲ್ಲಿರಲಿ. ನನಗೇನು ಅಭ್ಯಂತರವಿಲ್ಲ. ಆದರೆ, ಯಾವ ಸಮಾಚಾರ ಹೇಳದೆ ಇರೋದು ನೋಡಿದರೆ ಅವಳಿಗೆ ಬೆಳ್ಳೂರಿಗೆ ವಾಪಸ್ಸು ಹೋಗೊ ಮನಸ್ಥಿತಿ ಇದ್ದಂತೆ ಕಾಣುತ್ತಿಲ್ಲ. ನಿಜಕ್ಕು ಮನೆಯಲ್ಲಿ ಜಗಳವಾಡಿಕೊಂಡು ಬಂದಿದ್ದರೆ, ಅದನ್ನು ಬೇಗ ಬಗೆಹರಿಸದಿದ್ದರೆ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ’ ಎಂದು ಸಿದ್ಧಾರ್ಥ ಸುಮಾಳಿಗೆ ಎಚ್ಚರಿಸಿದ.

ಸಮಯ ನೋಡಿ, ಸಮಾಧಾನದಿಂದ ಭಾಗ್ಯಳ ಬಾಯಿ ಬಿಡಿಸಬೇಕೆಂದು ಸುಮಾ ಅಂದುಕೊಂಡು, ನೇರವಾಗಿ ವಿಷಯಕ್ಕೆ ಬಾರದೆ “ಏನೇ ಭಾಗ್ಯ… ಈಗ್ಲೂ ಅವರೇಕಾಯಿ ಸೀಸನಲ್ಲಿ ಹಿತುಕಿದ ಬೇಳೆ ಸಾರು, ವುಸ್ಲಿ ಸಂಭ್ರಮ ಮೊದಲಿನ ಹಾಗೆ ಜೋರಾ?” ಅಂದರೆ, “ಅಕ್ಕಾ, ಅದೆಲ್ಲಿ ತಪ್ಪುತ್ತೆ? ಮಣಗಟ್ಟಲೆ ತಂದು ಸುರೀತಾರೆ. ರೆಟ್ಟೆ ಬಿದ್ದೊಗೋವರ್ಗು ಸುಲ್ದು, ಸುಲ್ದು ಅಡಿಗೆ ಮಾಡಿ ಅಷ್ಟು ಜನರಿಗೆ ಬಡಿಸೊವಷ್ಟು ಹೊತ್ತಿಗೆ ಜೀವ ಹೋಗಿರುತ್ತೆ!” ಎಂದು ನಿರುತ್ಸಾಹದಿಂದ ಅಂದಾಗ, ಮುಂದೆ ಮಾತನ್ನು ಹೇಗೆ ಮುಂದುವರೆಸುವುದೆಂದು ಸುಮಾಳಿಗೆ ಹೊಳೆಯದೆ ಪೆಚ್ಚಾಗುತ್ತಿದ್ದಳು. ಆದರೆ, ಸೆಕೆಂಡ್ ಪಿಯುಸಿ ಓದುತ್ತಿರುವ ಮಗಳಿಗೆ ಮೊಬೈಲಲ್ಲಿ ಕರೆಮಾಡಿ ಕಾಲೇಜಿನ ಬಗ್ಗೆ, ಮಗನ ಓದಿನ ಬಗ್ಗೆ, ಮನೆಯ ಆಗುಹೋಗುಗಳ ಬಗ್ಗೆ ಗಂಟೆಗಟ್ಟಲೆ ಮೆಲುದನಿಯಲ್ಲಿ ವಿಚಾರಿಸುತ್ತ ಹರಟುವುದು ವಿಚಿತ್ರವೆನಿಸುತ್ತಿತ್ತು.

ಆ ದಿನ ಮಾಮೂಲಿನಂತೆ ಜೋಲು ಮೋರೆ ಹಾಕಿಕೊಂಡು ಶೂನ್ಯದೃಷ್ಟಿ ನೆಟ್ಟು, ನಿರ್ಭಾವುಕಳಾಗಿ ಟೀವಿ ನೋಡುತ್ತಿದ್ದವಳು ಮೊಬೈಲ್ ಸದ್ದು ಮಾಡಿದಾಗ, ಅದನ್ನೆತ್ತಿ ನೋಡಿದ ಅವಳ ಮುಖ ಬಿಳಿಚಿಕೊಂಡಿತು. “ಏನಾಯ್ತೆ? ಯಾರ್ದೇ ಫೋನು?” ಅಂದದ್ದಕ್ಕೆ, ಸುಮಾಳ ಮುಖಕ್ಕೆ ಫೋನು ಹಿಡಿದಳು.

“ನಿಂಗೆ ಮನೆಗೆ ಬರೋಕೆ ಇಷ್ಟಯಿದ್ರೆ ಇನ್ನೂ ವಾರದಾಗೆ ಬರ್ಬೇಕು. ಇಲ್ಲಾಂದ್ರೆ ಚಿರಂತನ ಇಲ್ಲೇ ಇರ್ತಾನೆ. ನಿನ್ನ ಮಗಳು ಚಂದನಳನ್ನು ಕರಕೊಂಡು ಹೋಗು. ಮತ್ತೆ ಮನೆಗೇ ಬರ್ಬೇಡ” ಅಂತ ಜಿನೇಶ ಮೆಸೇಜ್ ಹಾಕಿದ್ದ.

ಸುಮಾಳಿಗೆ ಗಾಬರಿಯಾಗಿ ಸಿದ್ಧಾರ್ಥ ಹೇಳಿದ ಹಾಗೆ ಇಷ್ಟು ದಿನ ವಿಚಾರಿಸದಿದ್ದದ್ದೇ ತಪ್ಪಾಯಿತು ಎನಿಸಿತು. “ಇದೇನೇ ಜಿನೇಶ ಹಿಂಗ್ ಮೇಸೆಜ್ ಹಾಕಿದ್ದಾನೆ?” ಎಂದಳು.
“ಇಪ್ಪತ್ತು ವರ್ಷ ಕತ್ತೇ ಥರ ಅವರ ಮನೆ ಚಾಕ್ರಿ ಮಾಡಿದ್ದಕ್ಕೆ ಸಿಕ್ಕ ಬಹುಮಾನ… ಅಕ್ಕಾ. ಮನೆಗೆಲಸ ಮಾಡೋಕೆ ಯಾರು ಗತಿ ಇಲ್ಲ ಅದಕ್ಕೆ ನನ್ನ ನೆನಪಾಗೈತೆ…” ಎಂದು ಕಣ್ಣೀರಿಟ್ಟಳು.

“ಅಳಬೇಡ ಭಾಗ್ಯ. ಸಮಾಧಾನ ಮಾಡ್ಕೊ. ಏನಾಯ್ತು ಅಂತ ಹೇಳದಿದ್ರೆ ನಮಗಾದರೂ ಹೆಂಗೆ ಗೊತ್ತಾಗುತ್ತೆ!”

“ಏನೂಂತ ಹೇಳ್ಲಿ ಅಕ್ಕ… ಜಿನೇಶ ನನ್ ಜೊತೆ ಮಲಗೋಲ್ಲ….!”

“ಅಂದ್ರೆ, ಏನೇ? ಬಿಡಿಸಿ ಹೇಳು. ಅಷ್ಟು ಒಳ್ಳೆಯವನು. ನೀನೇ ಹೊಂದ್ಕೊಂಡು ಹೋಗ್ಬೇಕು”

“ಹೌದೌದು. ನಾನೇ ಹೊಂದ್ಕೊಂಡ್ ಹೋಗ್ಬೇಕು! ನೀನಿಂಗೇ ಹೇಳ್ತಿಯಾಂತ ಗೊತ್ತಿತ್ತು. ಒಳ್ಳೆಯವನಂತೆ? ಊರಲ್ಲೂ ಫೇಮಸ್…. ಭಾರೀ ಒಳ್ಳೆಯವನು. ಬೆಡ್ ರೂಮೊಳಗೆ ನಡಿಯೋ ಸಮಾಚಾರ ಯಾರಿಗ್ಗೊತ್ತಾಗುತ್ತೆ. ಅವನು ನನ್ನ ಮುಟ್ಟಿ ವರ್ಷದ ಮೇಲಾಯ್ತು.

ಮುಟ್ಟೋದಿರ್ಲಿ ಮುಖಕ್ಕೆ ಮುಖ ಕೊಟ್ಟು ಮಾತಾಡೊಲ್ಲ. ನಾವೇನು ಶತ್ರುಗಳಾ? ಬಿಡಾಡಿ ದನದಂಗೆ ಊರೊಲ್ಲ ಮೇಯ್ಕೊಂಡ್ ಬರ್ತಾನೆ. ನಾನ್ ಮಾತ್ರ ಮೂರೊತ್ತು ಮನೆಯಂಥ ಜೈಲಲ್ಲಿ ದುಡ್ದು ದುದ್ಡು ಸಾಯೋಕೆ ನನಗೆಂತ ಕರ್ಮ! ನಾನು ಮನುಷ್ಯಳೇ… ನಂಗೂ ಗಂಡನ ಪ್ರೀತಿ ಬೇಕೂಂತ ಅನ್ಸೊಲ್ವೆ?”

ಯಾವಾಗಲಾದ್ರು ಊರಿಂದ ಬಂದಾಗ ಎರಡ್ಮೂರು ದಿನಗಳ ಬಟ್ಟೆಯೊಂದಿಗೆ ಬರುತ್ತಿದ್ದವಳು, ಈ ಸರ್ತಿ ಎರಡು ದೊಡ್ಡ ಸೂಟ್ ಕೇಸನ್ನು ಹೊತ್ತು ತಂದದ್ದು, ಏನೂ ಮಾತಾಡದೆ ಕೊಟ್ಟ ತಿಂಡಿಯನ್ನು ತಲೆ ಎತ್ತದೆ ತಿನ್ನುತ್ತಿದ್ದವಳನ್ನು ನೋಡಿದರೆ, ಗಂಡನ ಮನೇಲಿ ಏನೋ ಕ್ಯಾತೆ ತೆಗೆದು ಬಂದಿದ್ದಾಳೆ ಎನಿಸಿತು.

ಉದ್ವೇಗದಿಂದ ಮಾತಾಡುತ್ತಿದ್ದವಳ ತಲೆ ಸವರಿ ಸಂತೈಸುತ್ತ “ಅಲ್ಲ ಭಾಗ್ಯ, ಇಂಥ ವಿಷ್ಯನಾ ನಾವಾದ್ರು ಹೆಂಗೇ ಜಿನೇಶನಿಗೆ ಹೇಳೋಕ್ಕಾಗುತ್ತೆ? ನೀವೇ ಗಂಡಹೆಂಡತಿ ಕೂತು ಬಗೆಹರಿಸಿಕೊಳ್ಬೇಕು” ಎಂದ ಸುಮಾಳ ಮಾತಿಗೆ ಮತ್ತೂ ರೋಧಿಸುತ್ತ,
“ನಿಮ್ಗೇ ಇಂಥ ವಿಷ್ಯ ಹೇಳೋಕ್ಕಾಗಲ್ಲ ಅಂದ್ರೆ ನಾನಾದ್ರು ಯಾರತ್ರ ಹೇಳೋಕೆ ಸಾಧ್ಯ? ನೀನೇ ಹೇಳಕ್ಕ… ಪ್ರೀತಿಗೀತಿ ಇಲ್ಲಾಂದ್ರೆ ಸಾಯ್ಲಿ… ಹಾಳಾಗ್ಲಿ ಅಂದ್ರೆ… ನಂದು ಅಜ್ಜಿ ಮೊಲೆ ಅಂತೆ… ಎದೆ ಕೇರಮ್ ಬೋರ್ಡಂತೆ… ನಿನ್ನ ಅಂಡು ಒಣಗಿದ ಸೇಬು. ನಿನ್ ನೋಡಿದ್ರೆ ನಂದು ಎದ್ದೇಳೊದಿಲ್ಲ ಅಂತಾನೆ! ನಂಗೂ ಸಿಟ್ಟು ಬಂದು ನಿಂದೂನು ಸುಟ್ಟ ಬದನೆಕಾಯಿ ತರ ಯಾವಾಗ್ಲು ಬಿದ್ಗೊಂಡಿರ್ತದೆ ಅಂದದ್ದಕ್ಕೆ, ಮಕಮೂತಿ ನೋಡ್ದೆ ಹೊಡೆದು, ಐರನ್ ಬಾಕ್ಸ್ ಬಿಸಿ ಮಾಡಿ ಬೆನ್ನಿಗಿಟ್ಟಿದ್ದಾನೆ ನೋಡು” ಎಂದು, ಸೀರೆ ಸೆರಗನ್ನು ನೆಲಕ್ಕೆ ಒಗೆದು ಜಾಕೆಟು ಬಿಚ್ಚಿ ಬೆನ್ನು ಮಾಡಿದಳು. ಅಸ್ಥಿಪಂಜರಕ್ಕೆ ಚರ್ಮ ಹೊದಿಸಿದಂತಿದ್ದ ಅವಳ ಬೆನ್ನಿನ ಮಧ್ಯದಲ್ಲಿ ತ್ರಿಕೋನಾಕೃತಿಯಲಿ ಚರ್ಮ ಸುಟ್ಟು ಕಪ್ಪುಗಟ್ಟಿ, ಬೆರಳನ್ನು ಸವರಿಸಿದರೆ, ಇಸ್ತ್ರಿ ಮಾಡಿದ ಚರ್ಮ ಮರದ ತೊಗಟೆಯಂತೆ ತರಕಲಾಗಿತ್ತು.

ಬೆಣ್ಣೆಯಲ್ಲಿ ಕೂದಲು ತೆಗೆದಂತೆ, ವಿನಯವೇ ಮೂರ್ತಿವೆತ್ತಂತೆ ಗಿಳಿ ಮಾತಾಡುವ ಜಿನೇಶನಲ್ಲಿ ಇಂಥ ರಾಕ್ಷಸನಿರುವ ಸಾಧ್ಯತೆ, ಈ ಆರದ ಗಾಯದ ಸಾಕ್ಷಿ ಇರದಿದ್ದರೆ ನಂಬಲು ಸಾಧ್ಯವಾಗುತ್ತಿರಲಿಲ್ಲ. ಅವಳ ಬಾಳು ಕನಸಲ್ಲಿ ನಡೆದಂತೆ ಸುಸೂತ್ರವಾಗಿ ಸೌಖ್ಯದಿಂದಿದೆ ಎಂದು ಭಾವಿಸಿದ್ದರೆ ಅದೆಷ್ಟು ನೋವುಗಳನ್ನು ಒಡಲಲ್ಲಿಟ್ಟು ಬೇಯುತ್ತಿದ್ದಾಳೆ ಎನಿಸಿ ಸುಮಾಳ ಹೊಟ್ಟೆಗೆ ಬೆಂಕಿ ಬಿದ್ದು, ಕಣ್ಣಲ್ಲಿ ನೀರು ಮೌನವಾಗಿ ಕೆನ್ನೆಯನ್ನು ತೋಯಿಸಿದವು.

ಹಾಗಾದರೆ, ಇವಳ ಅತ್ತೆ ಬೇಡ. ಪಾಪ! ಆಕೆಗೆ ತಾನೇ ಯಾರೆಂದು ತಿಳಿಯದ ಮರೆವಿನ ಕಾಯಿಲೆ. ಆದರೆ, ಇವಳ ಮಾವನಿಗೆ ಮಗನ ಕೌರ್ಯ ತಿಳಿದಿಲ್ಲವೇ? ಅವನೇನು ಮಾಡುತ್ತಿದ್ದ? ಮನೆಯಲ್ಲಿ, ಹೊರಗಡೆ ಯಾರೂ ಭಾಗ್ಯಳ ಹಿತೈಷಿಗಳಿಲ್ಲವೇ? ಪ್ರಶ್ನೆಗಳ ಸರಮಾಲೆಯಲ್ಲಿ ಸಿಕ್ಕು ಸೋಫಾದ ಮೇಲೆ ಕುಸಿದು ಕೂತವಳಿಗೆ ಭಾಗ್ಯ ಮಾತಾಡುತ್ತಲೇ ಇದ್ದದ್ದು ತಿಳಿದದ್ದು ಅರೆಗಳಿಗೆ ಕಳೆದಾಗಲೇ…….

“…………………ಇವನ ತೆವಲುಗಳು ಒಂದಾ ಎರಡಾ… ಇವರದೊಂದು ಫಟಿಂಗರ ಫ್ರೆಂಡ್ಸ್ ಸರ್ಕಲ್ಲಿದೆ. ಎಲ್ಲರೂ ಆಗರ್ಭ ಶ್ರೀಮಂತರೇ! ಒಬ್ಬನದು ಪೆಟ್ರೋಲ್ ಬಂಕಿದ್ದರೆ, ಇನ್ನೊಬ್ಬ ಸಿವಿಲ್ ಕಂಟ್ರಾಕ್ಟರ್, ಮತ್ತೊಬ್ಬನದು ಹೋಟೆಲ್ಲು, ಲಾಡ್ಜ್ ಅಂತ ಐದಾರಿವೆ. ಬಿಸಿನೆಸ್ ಟೂರಂತ ವರ್ಷಕ್ಕೆರೆಡು ಬಾರಿ ಮುಂಬೈ, ಚೆನೈಗೆಂತ ಹೋಗ್ತಾರೆ. ಅವ್ರು ನಿಜಕ್ಕು ಅಲ್ಲಿಗೆ ಹೋಗ್ತಾರ? ಥೈಲಾಂಡಿನ ಪಟಯ್ಯಗೆ ಹೋಗಿ ಎಲ್ಲಾ ತರದ ತೀಟೆ ತೀರಿಸ್ಕೊಂಡು ಬರ್ತಾರೆ! ಅದೆಲ್ಲ ನಂಗೆ ಗೊತ್ತಿಲ್ಲ ಅಂದ್ಕೊಂಡಿದ್ದಾರೆ. ಇಷ್ಟೆ ಅಲ್ಲ ಅಕ್ಕ… ರಫೀಕ್ ಅಂತ ಲಗೇಜ್ ಆಟೋ ಡ್ರೈವರ್ ಬೇಕರಿ ಕೆಲಸಕ್ಕೆಂತ ಇದ್ದ, ರೋಡ್ ಆಕ್ಸಿಡೆಂಟಲ್ಲಿ ಸತ್ತೋದ. ಅವನ ಹೆಂಡತಿಗೆ ದುಡ್ಡುಕಾಸು ಕೊಟ್ಟು, ಮನೆಯೆಲ್ಲ ಮಾಡಿ ಭಾಳ ಸಹಾಯ ಮಾಡಿದ್ರು. ಎಲ್ರಿಗೂ ಮಾಡ್ದಂಗೆ ಅಂದ್ಕೊಂಡಿದೆ. ಆದ್ರೆ, ಬೇಕರಿ ತಿಂಡಿ ಮಾಡೊ ಕೆಲಸಕ್ಕಿರೊ ಕಮಲಮ್ಮ ಒಂದಿನಾ ಜಿನೇಶ ಕದ್ದುಮುಚ್ಚಿ ರಫೀಕನ ಮನೆ ಬಾಗಿಲು ತಟ್ಟೋದನ್ನ ನೋಡಿದ್ಳಂತೆ! ಮೊದ್ಲಿಗೆ ನಾನು ನಂಬಲಿಲ್ಲ. ಆಮೇಲೆ ಜಸೂಸಿ ಮಾಡಿದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ. ಊರಲ್ಲಿ ಮಾನ ಹೋಗುತ್ತೆ ಯಾರಿಗೂ ಹೇಳ್ಬೇಡಾಂತ ಕಾಲು ಹಿಡಿದ. ಮನೆಯ ಮಾನದ ವಿಷ್ಯ ಅಂತ ಸುಮ್ಮನಿದ್ದದ್ದು ನಂದೇ ತಪ್ಪು. ಆವಾಗ್ಲೇ ಮಾವನಿಗೆ, ನಿಮಗೆಲ್ಲ ಹೇಳಿ ಪಂಚಾಯ್ತಿ ಮಾಡಿದ್ದರೆ ನನಗಿಂತ ಗತಿ ಬರ್ತಿಲಿಲ್ಲ…”

ತಲೆ ತಗ್ಗಿಸಿ, ನೆಲಕ್ಕೆ ದೃಷ್ಟಿ ನೆಟ್ಟು ಕೇಳುತ್ತಿದ್ದ ಸುಮಾಳಿಗೆ ಭಾಗ್ಯಳ ಮಾತುಗಳು ನಿಂತಂತಾಗಿ, ತಲೆ ಎತ್ತಿ ನೋಡಿದರೆ ಭಾಗ್ಯ ಕಾಣಲಿಲ್ಲ. ಆತಂಕದಿಂದ “ಭಾಗ್ಯ…ಭಾಗ್ಯ….” ಎಂದು ಕೂಗುತ್ತ ಅಡುಗೆಮನೆ ಬಂದರೆ ಅಲ್ಲಿರಲಿಲ್ಲ. ಅವಳು ಮಲಗುತ್ತಿದ್ದ ಕೋಣೆಗೆ ಬಂದರೆ, ಮಂಚದ ಮೇಲೆ ಅವಳ ವ್ಯಾನಿಟಿ ಬ್ಯಾಗ್ ಬಿದ್ದಿತ್ತು. ಅದರಲ್ಲಿದ್ದ ಬಾಚಣಿಗೆ, ಸ್ಟಿಕ್ಕರ್ ಬಿಂದಿ ಪ್ಯಾಕುಗಳು, ಬಟ್ಟೆಪೀನ್, ಹೇರ್ ಪಿನ್, ಹೇರ್ ಬ್ಯಾಂಡ್ ಎಲ್ಲಾ ಸುರುವಿಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದದ್ದು ನೋಡಿ ಸುಮಾಳಿಗೆ ಮತ್ತಷ್ಟು ಗಾಬರಿಯಾಯಿತು. ಮೂರು ಕೋಣೆಗಳ ಮತ್ತೊಮ್ಮೆ ಓಡುತ್ತ ನೋಡಿ, ಕೂಗುತ್ತ ತಾರಸಿಗೆ ಬಂದು ಗಕ್ಕನೆ ನಿಂತಳು. ಟೆರೆಸ್ ಮೂಲೆಯಲ್ಲಿ ಪ್ಯಾರಪೆಟ್ ಗೋಡೆಗೆ ಒರಗಿ, ಕುಕ್ಕರುಗಾಲಲ್ಲಿ ಕುಳಿತು ಸಿಗರೇಟು ಸೇದುತ್ತಿದ್ದಳು. ಸಧ್ಯ! ಕಂಡಳಲ್ಲ ಎಂದು ನಿಟ್ಟುಸಿರು ಬಿಟ್ಟು ತಾನು ಬಂದದ್ದು ಗೊತ್ತಾಗದಂತೆ ಬೆಕ್ಕಿನೆಜ್ಜೆಯಿಟ್ಟು ಮೆಟ್ಟಲಿಳಿದಳು.

ಭಾಗ್ಯಳು ಕಕ್ಕಿದ ಒಂದೆರೆಡು ಗೋಳುಗಳು ಮುಖ್ಯವಾಗಿ ವೈಯಕ್ತಿಕವಾಗಿ ಕಾಡಿದ್ದವು, ತೀರಾ ಖಾಸಗಿಯಾದ ಬಾಯಿ ಇರದ ಸಂಕಟಗಳು. ಆದರೆ, ಅವುಗಳ ಪಟ್ಟಿ ಅಷ್ಟೇ ಇರಲಿಲ್ಲ. ಪರಸತಿಯ ಸುಖದಲ್ಲಿದ್ದವನು ಪಾಯಿಂಟ್ ಬ್ಲಾಕ್ ರೇಂಜಲ್ಲಿ ಹೆಂಡತಿಯ ಕೈಗೆ ಸಿಕ್ಕು, ಪಾದವನ್ನು ಮುಟ್ಟಿದ್ದು, ಊರಲ್ಲಿ ತನ್ನ ಶ್ರೀರಾಮಚಂದ್ರನ ಅಪರಾವತಾರದ ಇಮೇಜನ್ನು ಉಳಿಸಿಕೊಳ್ಳಲು! ಆದರೆ, ಅದು ಅವನ ಘನಂದಾರಿ ಗಂಡಸ್ತನಕ್ಕೆ ಮರ್ಮಾಘಾತವಾದಂತಾಗಿ ಜಿನೇಶ ಒಳಗೊಳಗೆ ಕುದ್ದು ಹೋದ. ಹೆಂಡತಿಯ ಮೇಲೆ ಹಗೆ ಸಾಧಿಸುತ್ತ ಮಾತನ್ನು ನಿಲ್ಲಿಸಿದ. ಕೊನೆಗೆ ಅವಳ ಮುಖ ಕಂಡರೆ, ಕಣ್ಣಲ್ಲೇ ಕೆಂಡ ಕಾರುತ್ತಿದ್ದ. ಮಗನ ಕತೆ ಇಂತಾದರೆ ಅಪ್ಪನದ್ದು ಇನ್ನೊಂದು ಕತೆ. ಮೊದಲಿಗೆ ಆತ ನೆಟ್ಟಗೇ ಇದ್ದ. ಊಟತಿಂಡಿ ಬಡಿಸೋದು, ಚಪ್ಪಲಿ ಹುಡುಕಿ ಕೊಡೋದು ತಡವಾದರೆ “ಬೇಗ ಕೊಡೋಕ್ಕೆ ನಿಮಗೇನ್ ರೋಗ!” ಅಂತ ಗೊಣಗಿ ರೇಗುತ್ತಿದ್ದ ಅಷ್ಟೆ. ಆದರೆ, ಇತ್ತೀಚಿಗೆ ಸಣ್ಣಸಣ್ಣ ವಿಷಯಕ್ಕೂ ಜೋರಾಗಿ ಕೂಗಾಡಲು ಆರಂಭಿಸಿದ್ದ. ಅದಕ್ಕೂ ಒಂದು ಕುಂಟುನೆಪವನ್ನು ಜೇಬಲ್ಲಿಯೇ ಜೋಪಾನವಾಗಿ ಯಾವಾಗಲೂ ಇರಿಸಿದ್ದ.

ಸಂಜೆ ಕಳೆದು ಕತ್ತಲಾಗುತ್ತಿದ್ದಂತೆ ಗಿರಾಕಿಗಳು ಹೆಚ್ಚುಹೆಚ್ಚು ಬೇಕರಿಗೆ ಮುಗಿಬೀಳೋರು. ಅವರನ್ನು ನಿಭಾಯಿಸೋ ಭರಾಟೆಯಲ್ಲಿ, ಬೆಳಿಗ್ಗೆ ಬ್ಯಾಂಕಿಗೆ ಹಣ ಕಟ್ಟಲು ಆ ದಿನದ ಸಂಪಾದನೆಯನ್ನು ಎಣಿಸಿ, ಲೆಕ್ಕ ಬರೆದಿಡಲು ತಡವಾಗುತ್ತೆಂದು ಮಾವನ ಮುದ್ದು ಸಾಕುಮಗ ದುಡ್ಡಿನೊಂದಿಗೆ ಎಲ್ಲರಿಗಿಂತ ಮನೆಗೆ ಬೇಗನೆ ಬರೋನು. ದುಡ್ಡನ್ನು ಮುಂದೆ ಗುಡ್ಡೆ ಹಾಕಿಕೊಂಡು ಎಣಿಸಿ, ಲೆಕ್ಕ ಬರೆಯುವುದು ಅವನ ಡ್ಯೂಟಿ. ಹಾಗೆ ಎಣಿಸುತ್ತ ಒಂದಷ್ಟು ದುಡ್ಡನ್ನು ಅತ್ತಿತ್ತ ನೋಡಿ ಜೇಬಿಗೆ ಇಳಿಸುತ್ತಿದ್ದ. ಆಗೊಮ್ಮೆ ರೂಮಿನ ಬಾಗಿಲ ಬಳಿ ನಿಂತ ಭಾಗ್ಯ ಅದನ್ನು ನೋಡಿದ್ದು ಅವನ ಗಮನಕ್ಕೆ ಬಂತು. ಏನೂ ಆಗದವನಂತೆ ನಟಿಸಿದರೂ ಒಳಗೊಳಗೆ ಅವಳೆಲ್ಲಿ ಸಾಕುಅಪ್ಪ ಹಿಟ್ಲರ್ ಗೆ ಹೇಳುತ್ತಾಳೋ ಎಂದು ಹೆದರಿ ನಖಶಿಖಾಂತ ಬೆವತು ಹೋದ. ಹೆಂಡತಿಯೊಂದಿಗೆ ಸುದೀಘ ಚರ್ಚಿಸಿ ಒಂದು ಆಟ ಕಟ್ಟಿದ.

ಬ್ಯಾಂಕಿಗೆ ದುಡ್ಡು ಕಟ್ಟಲು ಹೋದ ಜಿನೇಶನಿಗೆ, ಕ್ಯಾಶಿಯರ್ ಚಲನ್ ನಲ್ಲಿ ಬರೆದಿದ್ದ ಹಣಕ್ಕಿಂತ ಸರಿಯಾಗಿ ಎಂಟು ಸಾವಿರ ಕಮ್ಮಿ ಇದೆಯೆಂದ. ಜಿನೇಶ, ಸಾಕುಮಗನಿಗೆ ಫೋನು ಮಾಡಿದರೆ “ಇಲ್ಲಣ್ಣ, ದುಡ್ಡು ಸರಿಯಾಗಿತ್ತು. ನಾನೇ ಎರೆಡೆರೆಡು ಬಾರಿ ಎಣಿಸಿದ್ದೇನೆ” ಎಂದ. ಹಾಗಿದ್ದರೆ ದುಡ್ಡು ಎಲ್ಲಿ ಮಾಯವಾಯಿತು. ಹಿಟ್ಲರ್ ಸುದ್ದಿ ತಿಳಿದು ಕೆಂಡಾಮಂಡಲನಾದ. ಮನೆಗೆ ಬರೋ ಆಳುಕಾಳುಗಳು ಎಗರಿಸಿರೋಕೆ ಸಾಧ್ಯವಿಲ್ಲ. ಏಕೆಂದರೆ ಕಬ್ಬಿಣದ ಬೀರು ಅಪ್ಪನ ರೂಮಿನಲ್ಲಿರೋದು. “ಅಪ್ಪ ಹಿಂಗ್ ಹೇಳ್ತೀನಿ ಅಂತ ತಪ್ಪು ತಿಳೀಬೇಡಿ. ನನಗೇಕೊ ಭಾಗ್ಯಅತ್ತಿಗೆ ಮೇಲೆ ಡೌಟು!” ಎಂದು ಸಾಕುಮಗ ಅಪ್ಪನ ಕಿವಿ ಕಚ್ಚಿದ. ಸಂಬಂಧಕ್ಕಿಂತ ಬೆವರು ಹರಿಸಿ ದುಡಿದ ದುಡ್ಡೇ ದೊಡ್ಡದಲ್ಲವಾ? ಸರಿ. ಭಾಗ್ಯಳ ಅಲ್ಮೀರಾದಲ್ಲಿ ಬಟ್ಟೆಗಳನ್ನು ಕಿತ್ತಾಕಿ ತಡಕಾಡಿದ್ದಾಯಿತು. ಏನೂ ಗಿಟ್ಟಲಿಲ್ಲ. ಸಾಕುಮಗ – ತಾನು ಕಂಡುಹಿಡಿಯುತ್ತೇನೆಂದು ಸಿಬಿಐ ಆಫೀಸರಂತೆ ನುಗ್ಗಿ ಹಾಸಿಗೆ ಮಡಿಸಿದ. ಕೆಳಗೆ ಐನೂರು ಮೌಲ್ಯದ ನೋಟುಗಳಿದ್ದವು. ಮಾವ ಸಿಟ್ಟಿನಿಂದ ನಡುಗುತ್ತ, ಹಲ್ಲು ಕಟಕಟ ಕಡಿಯುತ್ತ, “ಇಲ್ಲ ಮಾವ…” ಅಂತನೋ ಹೇಳಲು ಹೋದವಳಿಗೆ ಅವಕಾಶ ಕೊಡದೆ “ಹಲ್ಕಾ ರಂಡೆ… ಉಂಡ ಮನೆಗೆ ಕನ್ನ ಹಾಕ್ತೀಯೇನೆ?” ಎಂದು ತಲೆಗೂದಲ ಹಿಡಿದು ಎಳೆದಾಡಿ, ಕಪಾಳಕ್ಕೆ ಬಾರಿಸಿದ. ಭಾಗ್ಯ ನೆಲಕ್ಕೆ ಕುಸಿದು ಮುಖ ಮುಚ್ಚಿ ಕೂತಳು. ನೆಲದ ಮೇಲೆಲ್ಲ ಅವಳ ಕೂದಲ ರಾಶಿ ಹರಡಿತ್ತು.

ನಿಜಕ್ಕು ಭಾಗ್ಯಳಿಗೆ ಸಾಕುಮಗನ ಮೇಲೆ ಚಾಡಿ ಹೇಳಿ, ಅಪ್ಪಮಕ್ಕಳ ವ್ಯವಹಾರದಲ್ಲಿ ಮೂಗು ತೂರಿಸೋ ಯಾವ ಇರಾದೆ ಇರಲಿಲ್ಲ. ಆದರೆ – ಗಂಡ, ಮಾವ, ಸಾಕುಮಗ – ಮೂವರು ತನಿಖೆಗೆಂದು ರೂಮಿಗೆ ಬಂದಾಗ ಸಿಕ್ಕಿಬಿದ್ದೇನೆಂದು ಬೆಚ್ಚಿದ್ದಳು.

ಮನೆಯಲ್ಲಿ ಊಟತಿಂಡಿ ಆಗುತ್ತೆ. ಹಬ್ಬ, ಮದುವೆ ಸಂಭ್ರಮವಿದ್ದರೆ ಮಾರ್ವಾಡಿ ಜವಳಿ ಅಂಗಡಿಗೆ ಹೋದರಾಯಿತು. ಸೀರೆವಸ್ತ್ರ ಬೇಕಾದ್ದು ಕೊಳ್ಳಬಹುದು. ದುಡ್ಡೇನು ಕೊಡೋ ಹಾಗಿಲ್ಲ. ಬೇಕರಿಗೆ ಬಿಲ್ ಬರುತ್ತೆ. ಚುಕ್ತಾ ಆಗುತ್ತೆ. ಹಾಗೆ ಒಡವೆ ಬೇಕಾದ್ರೆ ಚಿನಿವಾರ ಚಿದಾನಂದನ ಅಂಗಡಿಯಲ್ಲಿ ಡಿಸೈನ್ ಸೆಲೆಕ್ಟ್ ಮಾಡಿದರೆ ಆಯಿತು. ಆದ್ಯತೆಯಲ್ಲಿ ರೆಡಿಯಾಗುತ್ತೆ. ಅಲ್ಲೂ ದುಡ್ಡು ಕೊಡೋ ಹಾಗಿಲ್ಲ. ಹಾಗೆ ತರಕಾರಿ, ದಿನಸಿಗೂ ಕೂಡ. ಇನ್ನು ಕೈಗೆ ಯಾಕೆ ರೊಕ್ಕ ಬೇಕು? ಇದು ಮಾವನ ತರ್ಕ.

ಹಳೇ- ಬರೀ ಮಾತಾಡೊಕ್ಕೆ ಮಾತ್ರ ಇರೋ ಬೇಸಿಕ್ ಲಡಕಾಸಿ ಮೊಬೈಲ್ ಫೋನಲ್ಲಿ ವಾಟ್ಸಪ್ ಸೌಕರ್ಯವಿಲ್ಲ. ಅದಕ್ಕಾಗಿ ಭಾಗ್ಯ ದಿನಾ ಒಂದಷ್ಟು ನೋಟಗಳನ್ನು ಜಿನೇಶನ ಪ್ಯಾಂಟ್ ಜೇಬಿನಿಂದ ಎಗರಿಸಿ, ವಾಟ್ಸಪ್ ಇರೋ ಹೊಸ ಮೊಬೈಲ್ ತಗೋಳೊಕ್ಕೆ ಮಂಚದ ಕೆಳಗಿದ್ದ ಹಳೇಟ್ರಂಕಲ್ಲಿ ಕೂಡಿಡುತ್ತಿದ್ದಳು. ಸಾಕುಮಗ ಮಂಚದ ಕಡೆ ಧಾವಿಸಿದಾಗ ಅವಳ ಹೃದಯ ಬಾಯಿಗೆ ಬಂದಿತ್ತು. ಆದರೆ, ಅವನು ಕೆಳಗೆ ನೋಡದೆ ಹಾಸಿಗೆ ಮಡಿಚಿದಾಗ ನಿರಾಳಳಾಗಿದ್ದಳು. ಆದರೆ, ಹಾಸಿಗೆ ಕೆಳಗೆ ಅಷ್ಟು ದುಡ್ಡನ್ನು ಯಾರು, ಯಾವ ಮಾಯದಲ್ಲಿ ತಂದಿಟ್ಟರೆಂದು ತಿಳಿಯಲಿಲ್ಲ. ಅದು ಸಾಕುಮಗನದೇ ಐನಾತಿ ಕೆಲಸವೆಂದು ತಾನು ಹೇಳಿದ್ದರೆ ಈ ಗುಲಾಮಳ ಮಾತನ್ನು ನಂಬುವ ಜನರೇ? ಭಾಗ್ಯ ತುಟಿ ಬಿಚ್ಚಲಿಲ್ಲ.

ಅಲ್ಲಿಗೆ ಜಿನೇಶನಿಗೆ, ಹೆಂಡತಿಗೆ ಆದ ಕಪಾಳಮೋಕ್ಷ ಪಾದಕ್ಕೆರಗಿದ ಪುರಾಣಕ್ಕೆ ಸಂದು ಬರೋಬ್ಬರಿ ಲೆಕ್ಕ ಚುಕ್ತವಾಯ್ತೆಂದು ಸಂಭ್ರಮಿಸಿದ. ಅಷ್ಟಕ್ಕೆ ನಿಲ್ಲದೆ ಮೊಬೈಲ್ ಕಿತ್ತುಕೊಂಡು, ಮನೆಯಾಚೆ ಕಾಲಿಡದಂತೆ ಆರ್ಡರ್ ಮಾಡಿದ. ಏನೋ ಸಂಜೆ ಹೊತ್ತು ಬಸದಿಗೆ ಹೋಗಿ ಅಕ್ಕಿಪುಂಜ ಇಟ್ಟು, ಣಮೋಕಾರ ಹೇಳಿ ನಮಸ್ಕರಿಸಿ, ಒಂದಷ್ಟು ಹೊತ್ತು ಮನೆಯ ಚಾಕರಿಯನ್ನು ಮರೆತು ನಿರಾಳಳಾಗುತ್ತಿದ್ದ ಭಾಗ್ಯಳಿಗೆ ಆ ಪುಟ್ಟ ಏಕಾಂತವೂ ತಪ್ಪಿಹೋಯಿತು. ಮನೆಯೆಂಬ ಮಂದಿರ ಜೈಲಿಗಿಂತ ಕಡೆಯಾಗಿ ಉಸಿರುಗಟ್ಟಿತು.

ಅಲ್ಲಿಗೂ ಭಾಗ್ಯ ಧೃತಿಗೆಟ್ಟಿರಲಿಲ್ಲ. ಮಾವನ ಸೇವೆಯನ್ನು ಮತ್ತಷ್ಟು ಮುತುವರ್ಜಿಯಿಂದ ಮಾಡಿ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದಳು. ಆದರೆ, ನಿರಾಂತಕವಾಗಿ ದುಡ್ಡು ಎಗರಿಸಿ ಕೂಡಿಡುತ್ತಿದ್ದ ಸಾಕುಮಗನಿಗೆ ಕಮಾಯಿ ನಿಂತು ಹೋಗಿದ್ದು ವ್ಯಗ್ರನನ್ನಾಗಿಸಿತು. ಮೈಮನಸ್ಸುಗಳ ತುಂಬೆಲ್ಲಾ ಭಾಗ್ಯಳ ಮೇಲೆ ವಿಷ ತುಂಬಿಕೊಂಡ. ಅವಳನ್ನು ಹೇಗಾದರೂ ಮಾಡಿ ಮನೆಯಿಂದ ಹೊರ ಹಾಕಬೇಕೆಂದು ಶಪಥ ಮಾಡಿದ. ಹಾಗೆ ಮಾಡುವಾಗ, ತನ್ನ ಬಾಣಂತಿ ಹೆಂಡತಿಯ ಸೇವೆ ಮಾಡುತ್ತಿದ್ದದ್ದು, ತನ್ನ ಮಗುವಿನ ಹೇಲುಉಚ್ಚೆಯ ಬಟ್ಟೆಗಳನ್ನು ಅಕ್ಕರೆಯಿಂದ ತೊಳೆಯುತ್ತಿದ್ದದ್ದು ಎದೆ ಕಲ್ಲಾಗಿಸಿಕೊಂಡಿದ್ದವನಿಗೆ ನೆನಪಿಗೆ ಬರಲಿಲ್ಲ.

ಬೆಳಿಗ್ಗೆ ಏಳರ ಹೊತ್ತಿಗೆ ಎಲ್ಲರೂ ತಿಂಡಿ ತಿಂದು ಅಂಗಡಿಗೆ ಹೋಗುವ ಗಡಿಬಿಡಿಯಲ್ಲಿದ್ದರು. ಎಲ್ಲರಿಗೂ ಬಿಸಿಬಿಸಿ ಇಡ್ಲಿ, ಸಾಂಬಾರ್ ಬಡಿಸಿ, ಒಂದೇ ಸಮನೆ ಮಗು ಅಳುತ್ತಿದ್ದರಿಂದ ಭಾಗ್ಯ ರೂಮಿಗೋಡಿದಳು. ತೊಟ್ಟಿಲು ಎಷ್ಟು ತೂಗಿದರೂ ಮಗು ಯಾಕೋ ರಚ್ಚೆ ಹಿಡಿದಿತ್ತು. ತೊಟ್ಟಿಲಿಂದ ಮಗುವನ್ನು ಎತ್ತಿಕೊಂಡು, ಬೆನ್ನು ತಟ್ಟಿ ಮಲಗಿಸಲು ಉಳುಳಾಯಿ ಹೇಳುತ್ತಿದ್ದಳು. ಅಷ್ಟೊತ್ತಿಗೆ ಸ್ನಾನ ಮಾಡಿ ಬಂದ ಸಾಕುಮಗನ ಹೆಂಡತಿ ಮಗುವನ್ನು ಎತ್ತಿಕೊಳ್ಳುವುದಕ್ಕೂ ಹೊರಗಡೆ, ‘ಕಾಫಿ..’ ಎಂದು ಮಾವನವರು ಚೀರುವುದಕ್ಕು ಸರಿಯಾಯಿತು. ಈಗ ಭಾಗ್ಯ ಅಡುಗೆಮನೆಗೆ ಓಡಿದಳು.

“ಅಯ್ಯೋ..!” ಎಂದು ಸಾಕುಮಗನ ಹೆಂಡತಿ ಜೋರಾಗಿ ಕೂಗಿದ್ದು ಕೇಳಿ, ಕಪ್ಪುಗಳಿಗೆ ಕಾಫಿ ಬಗ್ಗಿಸುತ್ತಿದ್ದ ಕಾಫಿಬೋಸಿಯನ್ನು ಕೆಳಗಿಟ್ಟು ಭಾಗ್ಯ ಡೈನಿಂಗ್ ಹಾಲಿಗೆ ಬಂದಳು. ಒಂದೇ ಸಮನೆ ಕಣ್ಣೀರು ಹಾಕುತ್ತ “ಇಲ್ಲಿ ನೋಡಿ… ಪಾಪು ತೊಡೇನಾ ಹೇಗೆ ಜಿಗುಟಿದ್ದಾಳೆ” ಎಂದು, ಹೊದಿಸಿದ್ದ ಬಟ್ಟೆ ಸರಿಸಿ ಮಗುವನ್ನು ತೋರುತ್ತಿದ್ದಳು. ಹೆಂಡತಿಯ ಮಾತು ಮುಗಿಯುವುದೇ ತಡ, ತನ್ನ ಡೈಲಾಗಿಗೆ ಕಾಯುತ್ತಿದ್ದಂತೆ ಸಾಕುಮಗ, “ಅಯ್ಯೋ ಬೇವರ್ಸಿ… ಪುಟ್ಟಪಾಪು ನಿಂಗೆ ಏನ್ ಅನ್ಯಾಯ ಮಾಡಿತ್ತೇ? ಅದನ್ನೇನು ಸಾಯಿಸ್ಬೇಕು ಅಂದ್ಕೊಂಡಿದ್ದೀಯ?” ಎಂದು ಗೂಳಿಯಂತೆ ಸಾಕುಮಗ ಭಾಗ್ಯಳತ್ತ ನುಗ್ಗಿದ. ಜಿನೇಶ, “ಈ ಕಡೆ ಬಾರೋ… ಅವ್ಳಿಗೆ ಸರಿಯಾಗಿ ಬುದ್ಧಿ ಕಲಿಸ್ತೀನಿ. ಮತ್ತೆ ಸಾಯೋವರ್ಗು ಮರೀಬಾರ್ದು!” ಎಂದು, ಆರ್ಭಟಿಸುತ್ತಿದ್ದ ತಮ್ಮನನ್ನು ಹಿಂದಕ್ಕೆ ಎಳೆಯುತ್ತಿದ್ದ. ಭಾಗ್ಯಳಿಗೆ ಏನಾಗುತ್ತಿದೆ ಎಂದು ತಿಳಿಯದೆ ಕಲ್ಲಿನಂತೆ ನಿಂತು ಬಿಟ್ಟಳು. ಮೂರು ತೋಳಗಳ ಮಧ್ಯೆ ಸಿಕ್ಕ ಹರಿಣಿಯ ಪರಿಸ್ಥಿತಿ ಅವಳದಾಗಿತ್ತು. ಕೈ ಎತ್ತಿ ಹೊಡೆಯಲು ಬಂದ ಜಿನೇಶನನ್ನು ತನ್ನ ಬಡಕಲು ದೇಹದ ಎಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ತಳ್ಳಿ, ರೂಮೊಳಗೆ ಓಡಿ ಅಗುಳಿ ಹಾಕಿಕೊಂಡಳು.

ದಿನಾಲೂ ಸರಣಿಯಂತೆ ತನ್ನನ್ನೇ ಗುರಿಮಾಡಿಕೊಂಡು ಜರುಗುತ್ತಿದ್ದ ಒಂದೊಂದೇ ಲೆಕ್ಕಾಚಾರದ ದೌರ್ಜನ್ಯಗಳಿಂದ ಅವಳು ಛಿದ್ರಳಾಗಿದ್ದಳು. ಹೊರಗಡೆ ಬಾಗಿಲಿಗೆ ಒದೆಯುತ್ತ, ಬಡಿಯುತ್ತ ಅದನ್ನು ತೆರೆಯುವ ಪ್ರಯತ್ನ ಸಾಗಿತ್ತು. ಜೊತೆಜೊತೆಗೆ “ಬಾಗಿಲು ತೆಗಿಯೇ ಹಲ್ಕಾರಂಡೆ! ಸೂಳೇ.. ಕಳ್ಮುಂಡೇ.. ರಾಕ್ಷಸಿ..” ಮುಂತಾದ ಬೈಗುಳಗಳು ಬಾಗಿಲನ್ನು ತೂರಿ ಬಂದು ರೂಮಿನೊಳಗೆ ಪ್ರತಿಧ್ವನಿಸುತ್ತಿತ್ತು. ಕಿವಿಗಳನ್ನು ಬಿಗಿಯಾಗಿ ಮುಚ್ಚಿಕೊಂಡಳು. ಅಳುತ್ತ ಗೋಡೆಗೆ ಮುಷ್ಟಿಯಿಂದ ಗುದ್ದಿ ಗುದ್ದಿ ಬಳೆಗಳನ್ನು ಚೂರುಚೂರಾಗಿಸಿದ ಭಾಗ್ಯಳ ಗೋಳು ಅರಣ್ಯರೋದನವಾಗಿತ್ತು.

ಅದೆಷ್ಟು ಹೊತ್ತು ಕಳೆದಿತ್ತೋ! ಅತ್ತು ಅತ್ತು ಕಣ್ಣೀರಿನಿಂದ ಮುಖಮೂತಿಯೆಲ್ಲ ತೊಯ್ದಿದ್ದ ಭಾಗ್ಯ ನೆಲದ ಮೇಲೆ ಮಲಗಿದ್ದವಳು ಕಣ್ಣು ಬಿಟ್ಟಾಗ ಇಡೀ ರೂಮು ಮೌನವಾಗಿತ್ತು. ಗೋಡೆಗೆ ನೇತು ಹಾಕಿದ್ದ ಗಾಂಧೀಜಿ ಫೋಟೊ ಫ್ರೇಮಿನ ಹಿಂದೆ ಗೂಡು ಕಟ್ಟಿದ್ದ ಗುಬ್ಬಚ್ಚಿಯ ಚಿಂವ್ ಚಿಂವ್ ಗುಟ್ಟುವ ಕಲರವ ಬಿಟ್ಟರೆ ಮತ್ತೇನು ಕೇಳುತ್ತಿರಲಿಲ್ಲ. ಗುಬ್ಬಚ್ಚಿಯ ಕೂಗನ್ನು ಮತ್ತೊಮ್ಮೆ ಆಲಿಸಿದಳು. ಅದು ಕಲರವವಲ್ಲ… ಚೀರುತ್ತಿದೆ. ಹೊರಗಡೆ ಬೆಕ್ಕೊಂದು ಅಟ್ಟಿಕೊಂಡು ಬಂದಿರಬೇಕು. ತನ್ನದು ಗುಬ್ಬಿಯದೇ ಪಾಡು. ತನ್ನ ಗೋಳಾಟವನ್ನು ಕೇಳುವವರಾರು?

ತಲೆಯೆಲ್ಲಾ ಖಾಲಿಖಾಲಿಯಾಗಿತ್ತು. ಮೂಲೆಯಲ್ಲಿದ್ದ ಮರದ ಸ್ಟೂಲನ್ನು ತಂದು ರೂಮಿನ ಮಧ್ಯೆ ಇಟ್ಟಳು. ಸ್ಟೂಲನ್ನು ಹತ್ತಿ ಅಟ್ಟದ ಮೇಲಿದ್ದ ಧೂಳಿಡಿದು ಕೂತಿದ್ದ ಸೂಟ್ ಕೇಸನ್ನು ಇಳಿಸಿದಳು. ಅಲ್ಮೀರಾದಲ್ಲಿದ್ದ ಬಟ್ಟೆಗಳನ್ನು ಅದರಲ್ಲಿ ತುರುಕಿ, ಮಂಚದ ಕೆಳಗೆ ಟ್ರಂಕಿನಲ್ಲಿಟ್ಟಿದ್ದ ದುಡ್ಡನ್ನು ವ್ಯಾನಿಟಿಬ್ಯಾಗಿನಲ್ಲಿದ್ದ ಪುಟ್ಟ ಪರ್ಸಲ್ಲಿ ತುರುಕಿ, ರೂಮಿನಿಂದ ಹೊರಬಂದಳು. ತಾನು ಹೊರಬರುವುದನ್ನೇ ಕಾಯುತ್ತಿರುವಂತೆ ಹಾಲಿನಲ್ಲಿ ಓರಗಿತ್ತಿ ಶಿಲೆಯಂತೆ ನಿಂತು ವಾರೆಗಣ್ಣಿನಲ್ಲಿ ನೋಡುತ್ತಿದ್ದಳು. ಮಕ್ಕಳು ಮಲಗಿದ್ದ ರೂಮಿಗೋಗಿ ಮಲಗಿದ್ದ ಮಗಳನ್ನು ಎಬ್ಬಿಸಿ ಕಿವಿಯಲ್ಲಿ ಏನೋ ಉಸುರಿ ಹಣೆಗೆ ಮುತ್ತಿಟ್ಟು ಬಂಗಲೆಯಿಂದ ಹೊರಬಿದ್ದಳು.

ಯಾವ ಕೋನದಲ್ಲಿ ಯೋಚಿಸಿದರೂ ಜಿನೇಶ ಅಂತ ಕ್ರೂರಿಯೆಂಬುದು ಸಿದ್ಧಾರ್ಥನಿಗೆ ನಂಬಲು ಸಾಧ್ಯವಾಗಲಿಲ್ಲ. ಮುಖಾರವಿಂದದಿಂದ ವ್ಯಕ್ತಿತ್ವವನ್ನು ಗ್ರಹಿಸಲಾಗದು ಎಂಬುದು ಸರಿಯಾದ ಮಾತಾದರೂ, ವ್ಯಕ್ತಿಯ ನಡೆನುಡಿಯಿಂದ ಆ ವ್ಯಕ್ತಿಯ ಮಾನಸಿಕ ಚಿಂತನಾ ಕ್ರಮವನ್ನು ಅಂದಾಜಿಸಬಹುದಲ್ಲವೇ? ಆದರೆ, ತಾನು ಗ್ರಹಿಸಿರುವ ಜಿನೇಶನಿಗೂ ಭಾಗ್ಯ ಹೇಳುತ್ತಿರುವ ಜಿನೇಶನಿಗೂ ಬಾದರಾಯಣ ಸಂಬಂಧವೂ ಕಾಣಲಿಲ್ಲ.

ಮೂವರು – ಮೂರೊತ್ತು ಕೂತೂ ಯೋಚಿಸಿದರೂ ಸಿಟ್ಟು, ಕೋಪತಾಪ, ನಿರಾಶೆ, ನಿಟ್ಟುಸಿರು, ಹತಾಶಭಾವಗಳು ವಿನಿಮಯವಾಗಿ ಮೂರುದಿನಗಳು ಕಳೆಯಿತೇ ಹೊರತು ಮುಂದೇನು? ಎಂಬ ಪ್ರಶ್ನೆಗೆ ಯಾವ ಉತ್ತರ ಹೊಳೆಯಲಿಲ್ಲ.

ಪೂರ್ತಿಕತೆ ಕೇಳಿದ ಸಿದ್ಧಾರ್ಥ, ಮೊದಲು ಆವೇಶದಿಂದ ಜಿನೇಶನಿಗೆ ಶಿಕ್ಷೆಯಾಗಲೇ ಬೇಕೆಂದು ಗೆಳೆಯ ಸಂದೀಪ – ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ಫೋನು ಮಾಡಿದ್ದ. “ಇದು ತುಂಬಾ ಸೂಕ್ಷವಾದ ವಿಚಾರ. ದೈಹಿಕ ಹಲ್ಲೆಯ ಬಲವಾದ ಸಾಕ್ಷಿ ಇರೋದ್ರಿಂದ ಮತ್ತು ಅದು ಡೊಮೆಸ್ಟಿಕ್ ವಯ್ಲೆನ್ಸ್ ಆಗೋದ್ರಿಂದ ಪೊಲೀಸ್ ಕಂಪ್ಲೇಂಟ್ ಕೊಟ್ಟು, ಜೈಲಿಗೆ ಕಳುಹಿಸಬಹುದು. ಸ್ವಲ್ಪ ತಡವಾದರೂ – ಡೈವೋರ್ಸ್, ಪರಿಹಾರವೂ ಸಿಗಬಹುದು. ಆದರೆ ಹತ್ತು ವರ್ಷದ ಮಗ, ಸೆಕೆಂಡ್ ಪಿಯುಸಿ ಓದುವ ಮಗಳಿದ್ದಾಳೆ ಅಂತೀಯ! ಕಾನೂನು ವಿಚಾರ ಹಾಗಿರಲಿ. ವಂಶೋದ್ಧಾರಕನೆಂದು ಹುಡುಗನನ್ನು ತಾವು ಇಟ್ಟುಕೊಂಡು, ಪ್ರೀತಿ-ಆಸಕ್ತಿಯಿರದ ಹೆಣ್ಣುಮಗುವನ್ನು ಈಗಲೇ ಸಾಗಹಾಕುವ ಮನಸ್ಥಿತಿಯಲ್ಲಿ ಅವರಿದ್ದಾರೆ. ಮುಂದೆ ಮಕ್ಕಳ ಪಾಡೇನು? ಮತ್ತೆ ಈ ಹುಡುಗಿ ದುಡಿಮೆ ಇಲ್ಲದೆ ಮುಂದಿನ ಜೀವನ ಹೇಗೆ ನಡೆಸುತ್ತಾಳೆ? ನೋಡು ಸಿದ್ದು… ಇಂಥ ವಿಷಯಗಳಲ್ಲಿ ನಮ್ಮ ಆದ್ಯತೆಗಳು ಯಾವುದೆಂದು ಮೊದಲು ಸರಿಯಾಗಿ, ಧೃಡವಾಗಿ ಗುರುತಿಸಿಕೊಳ್ಳಬೇಕು. ಆಮೇಲೆ ಅದಕ್ಕೆ ತಕ್ಕಂತೆ ಹೆಜ್ಜೆಯಿಡಬಹುದು” ಎಂದು ಇತ್ತ ಸಲಹೆ ಕೊಟ್ಟಂತೆ ಮಾಡಿ ಅತ್ತ ಒಂದಷ್ಟು ಸಮಸ್ಯೆಗಳನ್ನು ಸುರಿದು, ಅಡ್ಡಗೋಡೆಯ ಮೇಲೆ ದೀಪವಿಟ್ಟ.

ಆದರೆ, ಹೆಣ್ಣಿನ ಮೇಲೆ ದೌರ್ಜನ್ಯವಾಗಿದೆ. ಕಾನೂನಿನ ಪ್ರಕಾರ ಕಂಪ್ಲೇಂಟು ಕೊಟ್ಟರೆ ಶಿಕ್ಷೆಯಾಗುತ್ತದೆ ಎಂಬ ಖಾತ್ರಿ ಸಿದ್ಧಾರ್ಥನಿಗೆ ಕತ್ತಲಲ್ಲಿ ತಡಕುವವನಿಗೆ ಬುಡ್ಡಿದೀಪದ ಬೆಳಕು ಕಂಡಂತಾಯಿತು. ಈ ವಿಷಯವನ್ನೇ ಮುಂದಿಟ್ಟು, ಜಿನೇಶನಿಗೆ ಮನವರಿಕೆ ಮಾಡುವುದು. ಅದಕ್ಕೂ ಜಗ್ಗದಿದ್ದರೆ ಪೊಲೀಸ್ ಕಂಪ್ಲೇಂಟ್ ಕೊಡುವುದಾಗಿ ಬೆದರಿಸಿ, ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಎಚ್ಚರಿಸಿದರಾಯಿತು. ಆಗ ತಾನಾಗಿಯೇ ದಾರಿಗೆ ಬರುತ್ತಾನೆ ಎಂದು ನಿರ್ಧರಿಸಿದ. ಭಾಗ್ಯಳನ್ನು ಕೇಳಿದರೆ “ಆಯಿತು ಭಾವ. ನೀವು ಹೇಗೆ ಹೇಳಿದರೆ ಹಾಗೇ ಆಗಲಿ” ಎಂದು ತಲೆಯಾಡಿದಳು. ಸರಿ – ನಾಳಿದ್ದು, ಭಾನುವಾರ ಬೆಳಿಗ್ಗೆಯೇ ಬೆಳ್ಳೂರಿಗೆ ಹೊರಡುವುದೆಂದಾಯಿತು.

ಅವತ್ತು ಸಂಜೆ. ಚಂದನ, ಅಮ್ಮನೊಡನೆ ಮಾತಾಡೋದು ಗೊತ್ತಾಗಿ ಅವರಪ್ಪ ಮೊಬೈಲನ್ನು ಕಿತ್ತುಕೊಂಡನೆಂದು ರೋಹಿತನೆಂಬ ಸಂಬಂಧಿಯ ಮನೆಯಿಂದ ಫೋನು ಮಾಡಿದ್ದಳು. “ಹೆದರಿಕೊ ಬೇಡ. ಭಾನುವಾರ ದೊಡ್ಡಮ್ಮನ ಜೊತೆ ಮನೆಗೆ ಬರುತ್ತೇನೆ” ಎಂದು ಅಳುವ ಮಗಳಿಗೆ ಭಾಗ್ಯ ಸಮಾಧಾನ ಹೇಳಿ ಇಡೋ ಹೊತ್ತಿಗೆ ಸಿದ್ಧಾರ್ಥ ಫೋನ್ ಇಸಿದುಕೊಂಡ. “ಅಲ್ರೀ ರೋಹಿತ್… ಅವಳ ಮೇಲೆ ಅಷ್ಟೊಂದು ಅನ್ಯಾಯ ಆಗ್ತಿದೆ. ಆದ್ರೂ ನೀವುಗಳು ಅದ್ಯಾಗ್ರಿ ನೋಡ್ಕೊಂಕ್ ಸುಮ್ನಿದ್ದೀರಾ?” ಅಂದ. “ಇಲ್ಲ ಸಾರ್. ಈಗ ಚಂದನ ಬಂದು ಹೇಳೋವರ್ಗೂ ನಮ್ಗೂ ಅಷ್ಟು ವಿಷ್ಯ ಗೊತ್ತಿಲ್ಲ! ಅಲ್ದೇ ನಮ್ಗೂ ಜಿನೇಶನ ಅಪ್ಪನಿಗೂ ಅಷ್ಟು ಆಗಿ ಬರೋಲ್ಲ. ಇರಲಿ, ನಾನೇ ಜಿನೇಶನ ಹತ್ರ ಮಾತಾಡ್ತೀನಿ. ಸಾಧ್ಯವಾದರೆ ಜಿನೇಶನ ಮನೆಯವ್ರು ಭಾಳ ಗೌರವ ಕೊಡೋ ಹಿರಿಯರೂ ಆದ ಡಾಕ್ಟರನ್ನೂ ಬರ ಹೇಳ್ತೀನಿ. ಇವ್ರ ಸಂಸಾರ ಸರಿಯಾದ್ರೆ ಸಾಕು. ಆದಷ್ಟು ಬೇಗ ಬೆಳ್ಳೂರಿಗೆ ಬನ್ನಿ” ಎಂದ.

ಭಾಗ್ಯಳೊಂದಿಗೆ, ಸುಮಾ ಸಿದ್ಧಾರ್ಥ ಬೆಳ್ಳೂರಿನ ಅವರ ಬಂಗಲೆಗೆ ಬಂದಿಳಿದಾಗ, ಅವರ ಮಾವ ಮನೆಗೆ ಬಂದಿದ್ದಕ್ಕೆ ಆಕ್ಷೇಪಣೆ ತೆಗೆದ. “ನೀವೇಳೊದು ಏನು? ನಾವು ನಿಮ್ಮನೇಗೆ ಬರಬಾರದ್ದಿತ್ತೇ?” ಎಂದು ಸಿದ್ಧಾರ್ಥ ಅಂದ್ರೆ, “ನಾನು ನಿಮ್ಗೆ ಹೇಳ್ಲಿಲ್ಲ. ಹೇಳ್ದೆ ಕೇಳ್ದೆ ಮನೆ ಬಿಟ್ಟೋಗಿರೊ ಈ ಕತ್ತೇಲೌಡಿಗೆ ಹೇಳಿದ್ದು!” ಎಂದು ಕೆಂಗಣ್ಣಿನಿಂದ ಭಾಗ್ಯಳನ್ನು ದುರುಗುಟ್ಟುತ್ತಿದ್ದ. “ಇದೇನು ಹೀಗೆ ಹೇಳ್ತೀರಾ? ಅವಳ ಮನೆಗೆ ಅವಳು ಬಂದಿದ್ದಾಳೆ” ಎಂದದ್ದೇ ತಡ, “ಇದೇನು ಅವಳಪ್ಪನ ಮನೇನಾ? ತನ್ನ ಮನೇಂತಾ ಅವ್ಳ ಎದೆಯಲ್ಲಿದ್ದರೆ ಅಮ್ಮನ ಸಮಾನ ಅತ್ತೆಗೆ ಕೊಡೋಕ್ಕಿಂತ ಜಾಸ್ತಿ ನಿದ್ದೆಮಾತ್ರೆ ಕೊಟ್ಟು ಸಾಯೋ ಹಾಗೆ ಮಾಡ್ತೀದ್ದಳಾ?” ಎಂಬ ರೌದ್ರವತಾರದ ಕೂಗಿನ ಹೊಸ ಆರೋಪಕ್ಕೆ ಸಿದ್ಧಾರ್ಥ ಹಿಮ್ಮೆಟ್ಟಿದ.

“ನೀವು ಕಾಫಿ ಕುಡಿದು, ಹೈವೇ ಪೆಟ್ರೋಲ್ ಬಂಕ್ ಪಕ್ಕ ಇರೋ ಲಾಡ್ಜಿಗೆ ಬನ್ನಿ. ಅಲ್ಲೇ ಪಂಚಾಯಿತಿ ಮಾಡೋಣ. ಹೇಳೋದು ಬಹಳಷ್ಟಿದೆ” ಅಂದ.

ಊರ ಹೊರಗೆ ಹೆದ್ದಾರಿ ಪಕ್ಕ ಭವ್ಯ, ಬಹುಅಂತಸ್ತಿನ ಹೋಟೆಲ್ಲು ಜಿನೇಶನ ಖಾಸಾ ದೋಸ್ತನದು. ಮನೆಯಲ್ಲೇ ಮಾತುಕತೆಯಾಡಿದರೆ, ಕೂಗಾಟ ಇಡೀ ಬೀದಿಗೆ ಕೇಳಿ ಬಹುಸಭ್ಯಸ್ಥರೆನ್ನಿಸಿಕೊಂಡ ತಮ್ಮ ಕಿರೀಟಕ್ಕೆ ಕುಂದು ಬಂದೀತೆಂದು ಇಲ್ಲಿಗೆ ಬರಹೇಳಿದ್ದಾರೆಂದು ಸಿದ್ಧಾರ್ಥ ಊಹಿಸಿದ. ಇನ್ನೂ ಉದ್ಘಾಟನೆಯಾಗದ ಹೊಸಕಟ್ಟಡದ ಬಳಿ ನರಪಿಳ್ಳೆ ಇರಲಿಲ್ಲ. ರಿಸೆಪ್ಶೆನ್ ಕೌಂಟರ್ ಬಳಿ ಕಾಯುತ್ತಿದ್ದ ರೋಹಿತ್ “ಸಾರ್… ಜಿನೇಶ, ಅವರಮ್ಮ ಆಸ್ಪತ್ರೆಯಲ್ಲಿದ್ದಾಳೆಂದು ಭಾರೀ ಗರಂ ಆಗಿದ್ದಾನೆ. ನಮ್ಗೆ ಭಾಗ್ಯಳನ್ನ ಮನೆಗೆ ಸೇರಿಸೋದು ಮುಖ್ಯ. ಆದ್ದರಿಂದ ಅವನೇನೆ ಎಗರಾಡಿದರೂ ಸುಮ್ಮನಿದ್ದು ಬಿಡಿ. ಒಂದು ತಪ್ಪುಮಾತಿಗೂ ಅವನು ಉಲ್ಟಾ ಹೊಡಿಯುವ ಅವಕಾಶಕ್ಕಾಗಿ ಕಾಯ್ತಿರ್ತಾನೆ” ಎಂದ. ಸಿದ್ಧಾರ್ಥನಿಗೆ, ಅವನೇಕೆ ಹಾಗೆ ಹೇಳುತ್ತಿದ್ದಾನೆಂದು ತಿಳಿಯಲಿಲ್ಲ. ಆದರೂ ‘ಆಯಿತು’ ಅಂದ.

ಲಿಫ್ಟಲ್ಲಿ ಮಹಡಿ ಹತ್ತಿ ರೂಮೊಂದಕ್ಕೆ ಬಂದರೆ ಅಲ್ಲಿದ್ದ ಜನರ ಗುಂಪನ್ನು ನೋಡಿ ಸಿದ್ಧಾರ್ಥ ದಂಗಾದ. ರೂಮೊಳಗೆ ಸಂಬಂಧಿಕರು, ಮೂರ್ನಾಲ್ಕು ಗೆಳೆಯರು ಸೇರಿ ಹತ್ತನ್ನೆರಡು ಜನರಿದ್ದರು. ಕಚಪಿಚ ಮಾತಾಡುತ್ತಿದ್ದವರು ಇವರನ್ನು ನೋಡಿದೊಡನೆ ಬಾಯಿಗೆ ಜಿಪ್ ಎಳೆದರು. ಯಾವುದೋ ಕುತಂತ್ರದ ಲೆಕ್ಕಾಚಾರ ಹಾಕಿಯೇ ಅವರುಗಳು ಬಂದಂತೆ ಕಾಣುತ್ತಿತ್ತು. ಕಣ್ಣಿನ ನೋಟಗಳು ವಿನಿಮಯವಾಗುತ್ತಿತ್ತೇ ವಿನಹ ಮಿಕ್ಕಂತೆ ಭೀಕರ ಮೌನ. ಮೂಲೆಯೊಂದರ ಕುರ್ಚಿಯಲ್ಲಿ ಭಾಗ್ಯ ಗುಬ್ಬಚ್ಚಿಯಂತೆ ಮುದುಡಿ ಕೂತಿದ್ದಳು.

ಸ್ವಲ್ಪ ಹೊತ್ತು ನೋಡಿ, ಸಿದ್ಧಾರ್ಥನೇ ಗಂಟಲು ಸರಿಮಾಡಿಕೊಂಡು “ನೋಡಿ ಜಿನೇಶ. ನಿಮ್ ಮೇಲೆ ನಮ್ಗೆ ಬಹಳ ಗೌರವವಿದೆ. ಆದರೆ….” ಎನ್ನುವಷ್ಟರಲ್ಲೇ ಜಿನೇಶ ಕುರ್ಚಿಯಿಂದ ಚಂಗನೆ ಎದ್ದು ನಿಂತು “ಈ ಮನೆಹಾಳೀನಾ ವಹಿಸಿಕೊಂಡು ನೀವು ಬೆಂಗಳೂರಿಂದ ಬರಬಾರದಿತ್ತು. ನೆಮ್ಮದಿಯಾಗಿ ಇದ್ದ ಮನೆಗೆ ಬೆಂಕಿ ಹಚ್ಚಿ ಮಳ್ಳಿಯಂಗೆ ಹೆಂಗೆ ಕುಂತಿದ್ದಾಳೆ…ನೋಡಿ….” ಅಂದ. ಬಾಯಿ ತೆರೆಯಲು ಹೋದ ಸಿದ್ಧಾರ್ಥನಿಗೆ ಎದುರಿಗೆ ಕೂತಿದ್ದ ರೋಹಿತ ಸುಮ್ಮನಿರಲು ಕಣ್ಸನ್ನೆ ಮಾಡಿದ.

“ಬರೋದು ಬಂದಿದ್ದೀರ… ಇವಳೇಲ್ಲಾ ಕರ್ಮಕಾಂಡಗಳನ್ನು ಕೇಳಿಕೊಂಡೇ ಹೋಗಿ. ಇವ್ಳ ಯೋಗ್ತೆ ಏನು ಅಂತ ನಿಮಗೂ ಗೊತ್ತಾಗಲಿ. ವಯಸ್ಸಾದ ಅಮ್ಮನಿಗೆ ನಿದ್ದೆಮಾತ್ರೆ ಜಾಸ್ತಿ ಕೊಟ್ಟು ಆಸ್ಪತ್ರೆಗೆ ಸೇರಿಸಬೇಕಾಯ್ತು! ಪುಟ್ಟಪಾಪು ಮೇಲೆ ವಿಷ ಕಾರ್ತಾಳೆ! ಪೀಡೆ ಯಾಕ್ ಹುಟ್ತೋ ನನ್ ಪ್ರಾಣ ತಿನ್ನೋಕ್ಕೆ ಅಂತಾಳೆ! ದುಡ್ಡು ಕದೀತಾಳೆ. ನನ್ ಕೈಕಾಲು ಬಿದ್ದೋಗಲಿ ಅಂತ ಮಾರಮ್ಮನ ಗುಡೀಲಿ ಮಾಟಮಂತ್ರ ಮಾಡಿಸಿದ್ದಾಳೆ. ರಾತ್ರಿ ಎಲ್ರೂ ಮಲಗಿದ್ದರೆ, ದೆವ್ವದಂಗೆ ಇಡೀ ಮನೆ ಓಡಾಡ್ತಾಳೆ! ಇವಳ ಪುರಾಣ ಒಂದಾ…ಎರಡಾ….”. ಅವನು ಓತಪ್ರೋತವಾಗಿ ಜೋರಾಗಿ ಕೂಗಾಡುತ್ತಲೇ ಇದ್ದ. ಸಿದ್ಧಾರ್ಥ, ಒಂದು ಕಡೆ ಸುಳ್ಳು ಆರೋಪಗಳಿಗೆ ಪ್ರತ್ಯುತ್ತರ ನೀಡಲು ಅವಕಾಶಕ್ಕಾಗಿ ಕಾಯ್ದರೆ ಮತ್ತೊಂದೆಡೆ ರೋಹಿತ ಮಾತಾಡದಂತೆ ಕೈ ಸನ್ನೆ ಮಾಡುತ್ತಿದ್ದ.

“ಇವಳಿಗೆ ಮಾನಮಾರ್ಯಾದೆ ಇದ್ಯಾ? ಸಿಗರೇಟು ಸೇದ್ಕೊಂಡು… ನಮ್ಮಾವ ಅಂತೋನು… ನನ್ಗಂಡ ಇಂಥೋನು ಅಂತ ಹೇಳ್ಕೊಂಡು ಊರಲ್ಲೆಲ್ಲಾ ತಿರುಗಾಡ್ತಾಳೆ. ಇವಳನ್ನ ಕೊಚ್ಚಿ ಕೊಂದ್ರು ಯಾವ ಪಾಪ ಬರೋದಿಲ್ಲ….”

ಸಿದ್ಧಾರ್ಥನಿಗೆ ಇನ್ನು ಸುಮ್ಮನಿರಲು ಆಗಲಿಲ್ಲ. “ಅಲ್ರೀ.. ಜಿನೇಶ… ಸುಮ್ನೆಸುಮ್ನೆ ಸುಳ್ಳು ಆಪಾದನೆ ಮಾಡ್ತಿದ್ದೀರಾ? ನಿಮ್ಮ ಉದ್ದೇಶನಾದ್ರು ಏನು?”

“ನಾನು ಸುಳ್ಳು ಹೇಳ್ತಿಲ್ಲ. ಊರಲ್ಲಿ ಒಂದ್ ರೌಂಡ್ ಹೋಗ್ಬನ್ನಿ. ಜನರೇ ಹೇಳ್ತಾರೆ ಇವಳೆಂಥಾ ಕಚಡಾಂತ…”

ಜಿನೇಶ ವೃಥಾ ಹರಿಯಬಿಡುತ್ತಿದ್ದ ಬಚ್ಚಲುಬಾಯಿಗೆ ರೋಸೆದ್ದ ಸಿದ್ಧಾರ್ಥನಿಗೆ ಸಿಟ್ಟು ಬಂದರೂ ಸಹನೆ ಕಳೆದುಕೊಳ್ಳಬಾರದೆಂದು ತನ್ನನ್ನೇ ತಾನು ಸಂತೈಸಿಕೊಂಡು “ನೋಡ್ರಿ… ಸಿಗರೇಟು ಸೇದೋದು ಅವಳ ದೌರ್ಬಲ್ಯ. ಅವಳ ಕುಡುಕ ತಂದೆ ಚಿಕ್ಕಂದಿನಲ್ಲಿ ಅವಳ ಬಾಯಿಗೆ ಬೀಡಿ ಇಟ್ಟು ಸೇದೋಕೆ ಹೇಳಿ ವಿಕೃತ ಖುಷಿ ಪಡುತ್ತಿದ್ದ. ಹಾಗೆ ಅವಳಿಗೆ ರೂಢಿಯಾಗಿರೋದು. ಅವಳೇನು ನಿತ್ಯ ಸೇದೋದಿಲ್ಲ. ಯಾವಾಗಲೋ ಟೆನ್ಶನ್ ಆದಾಗ ಸೇದ್ತಾಳೆ. ಆರೋಗ್ಯಕ್ಕೆ ಕೆಟ್ಟದ್ದು ಅನ್ನೋದು ಬಿಟ್ರೆ, ಗಂಡಸ್ರು ಸೇದ್ತಾರಂದ್ರೆ ಹೆಣ್ಮಕ್ಕಳು ಯಾಕೆ ಸೇದಬಾರದು? ಅವಳಿಗೆ ಕೌನ್ಸಿಲಿಂಗ್ ಮಾಡಿಸ್ಬೇಕು ಅಷ್ಟೆ….” ಅಂದದ್ದೇ ತಡ, ಜಿನೇಶ ದೇವರು ಮೈಮೇಲೆ ಬಂದವರಂತೆ,
“ಹೇಯ್… ಏನ್ ಹೇಳ್ತೀದ್ದಿಯಾ? ನಿಮ್ದು ದೊಡ್ಡ ಸಿಟಿ. ಯಾರ್ ಏನು ಮಾಡುದ್ರು ಕೇಳೋರಿಲ್ಲ. ನಮ್ಮೂರಲ್ಲಿ ನಮ್ಮ ಮಾನ ಹೋಗಲ್ವ! ನಾವು ತಲೆ ಎತ್ಕೊಂಡು ತಿರುಗೋದು ಹ್ಯಾಗೆ?..” ಬುಸುಗುಡುತ್ತ, ಸೀದಾ ಸಿದ್ಧಾರ್ಥನತ್ತ ನುಗ್ಗಿದ. ಕಾಡುಪ್ರಾಣಿಯಂತೆ ಅವನ ಮೇಲೆ ಬಿದ್ದ. ಅಚಾನಾಕ್ಕಾಗಿ ಅವನು ಎರಗಿದ ರೀತಿಗೆ ಎಲ್ಲರೂ ಅವಾಕ್ಕಾದರು. ಅವನನ್ನು ಹಿಡಿದೆಳೆದು ಕೂಡಿಸುವಷ್ಟರಲ್ಲಿ ಎಲ್ಲರಿಗೂ ಸಾಕುಸಾಕಾಗಿತ್ತು. ಬೆದರಿ ಕುರ್ಚಿಯಿಂದ ನೆಲಕ್ಕೆ ಕುಸಿದ ಸಿದ್ಧಾರ್ಥ ಸಾವರಿಸಿಕೊಂಡು ಎದ್ದು ರೂಮಿನಿಂದ ಹೊರಬಿದ್ದ.

ಅಲ್ಲಿಯವರೆಗೂ ಎಲ್ಲವನ್ನೂ ನಿರ್ಲೀಪ್ತರಾಗಿ ನೋಡುತ್ತಿದ್ದ ಡಾಕ್ಟರ್ ಸುಂದರಣ್ಣ ಬಹಳ ನೊಂದು, ಬೇಸರಗೊಂಡರು. ಜಿನೇಶನ ವರ್ತನೆಗೆ ಛೀಮಾರಿ ಹಾಕಿದರು. “ಊರಿಗೆಲ್ಲ ಸಹಾಯ ಮಾಡೋ ನೀನೊಬ್ಬ ಸಭ್ಯಸ್ಥ ಅಂದ್ಕೊಂಡಿದ್ದೆ. ನಾನೀದ್ದೀನಿ, ವಯಸ್ಸಾದ ಹಿರಿಯರಿದ್ದಾರೆ. ಏನು ಕೆಟ್ಟಬಾಯಿನಯ್ಯ ನಿಂದು. ಹೆಣ್ಣು ಅಂತ ಒಂದು ಚೂರು ಗೌರವ ಬೇಡ್ವ! ನಾಚಿಕೆಯಾಗ್ಬೇಕು ನಿಂಗೆ. ನಾನು ಬರಬಾರದಿತ್ತು. ಇರಲಿ, ಸಿದ್ಧಾರ್ಥ ಹೇಳಿದ ಹಾಗೆ ಸಿಗರೇಟು ಸೇದೋ ಅಭ್ಯಾಸದಿಂದ ಒಬ್ಬ ವ್ಯಕ್ತಿಯ ಗುಣವಾಗುಣವನ್ನು ನಿರ್ಧರಿಸಲಾಗುವುದಿಲ್ಲ. ಅವಳಿಗೆ ಸೈಕ್ಯಾಟ್ರಿಸ್ಟ್ ಬಳಿ ಕೌನ್ಸಿಲಿಂಗ್ ಆಗ್ಬೇಕು. ಜೊತೆಗೆ ನಿನಗೂ ಕೂಡ ಕೌನ್ಸಿಲಿಂಗ್ ಬೇಕು. ಅದಕ್ಕೆ ಯಾವ ಡಾಕ್ಟ್ರ ಬಳಿ ಹೋಗ್ಬೇಕೂಂತ ನಂತರ ಹೇಳ್ತೀನಿ. ಈಗ ಮುಖ್ಯ ವಿಷ್ಯ ಅದಲ್ಲ. ಆರೋಪ ಪ್ರತ್ಯಾರೋಪದಿಂದ ಯಾವ ಪ್ರಯೋಜನವಿಲ್ಲ. ನೇರವಾಗಿ ಕೇಳ್ತೇನೆ. ನೇರವಾಗಿ ಉತ್ತರ ಕೊಡು. ನಿಂಗೆ ನಿನ್ನ ಹೆಂಡ್ತೀ ಬೇಕಾ… ಬೇಡ್ವ?…”

ಹಗೆಯ ವಿಷ ಕಾರಿಕೊಳ್ಳಲು ಸಿಕ್ಕ ಅವಕಾಶ ಇಷ್ಟು ಬೇಗ ಕೈತಪ್ಪಿ ಹೋಗುವುದ ಕಂಡು, ಜಿನೇಶ ಮಧ್ಯೆ ಬಾಯಿಹಾಕಿ “ಸಾರ್ … ಇವಳು ದಿನಾ ಬಸದಿಗೋಗಿ ಪುರೋಹಿತನತ್ರ ಚಕ್ಕಂದ ಆಡ್ತಾಳೆ! ಅದಕ್ಕೇನು ಮಾಡೋದು? ಬೇಕಾದ್ರೆ ಆ ಲೋಫರ್ನ ಕರೆಸಿ. ಎಲ್ಲ ವಿಷ್ಯ ಬಯಲಿಗೆ ಬೀಳುತ್ತೆ” ಎಂದ.

ಅಲ್ಲಿಯವರೆಗೂ ಕೇಳಬಾರದ್ದನ್ನೆಲ್ಲ ಕೇಳುತ್ತ ಕೂತ ಭಾಗ್ಯ ಸಹನೆಗೆಟ್ಟು, ಕೋಪದಿಂದ “ಏನೋ… ದೇವ್ರು ನಿಂಗೊಬ್ಬನಿಗೇನಾ ಬಾಯಿ ಕೊಟ್ಟಿರೋದು ಹೊಲಸು ಮಾತಾಡೋಕ್ಕೆ? ತಲೆಕೆಟ್ಟವನೇ ಕೇಳು. ಅದು ಯಾರನ್ನ ಕರೆಸ್ತೀಯೊ ಕರೆಸು. ನಾನು ನೋಡೇ ಬಿಡ್ತೀನಿ. ಇಲ್ಲಿದ್ರೆ ಹುಚ್ಚೇ ಹಿಡಿಯೋದು!” ಎಂದು, ವ್ಯಾನಿಟಿ ಬ್ಯಾಗಿಂದ ಮೊಬೈಲನ್ನು ತೆಗೆದು ಯಾರಿಗೋ ಕರೆಮಾಡುತ್ತ ರೂಮಿಂದ ಬಿರಬಿರನೆ ಹೊರ ನಡೆದಳು.

ಹೋಟೆಲ್ಲಿನ ಹೊರಗೆ ನಿಂತಿದ್ದ ಸಿದ್ಧಾರ್ಥ, ಭಾಗ್ಯ ಹೈವೇ ಕಡೆ ಹೋಗುವುದ ಕಂಡ. ತುಸುದೂರದ ರಸ್ತೆಯ ಬದಿಯಲ್ಲಿ ನಿಂತು ಎಡಬಲ ಯಾರನ್ನೋ ಎದುರು ನೋಡುವಂತೆ ಅತ್ತಿತ್ತ ನೋಡುತ್ತಿದ್ದಳು. ಆಟೋವೊಂದು ಕಂಡು ಕೈ ಮಾಡಿದಳು. ಅದರಿಂದ ಒಬ್ಬ ಬುರ್ಖಾ ಹಾಕಿದ ಮಹಿಳೆ ಕೆಳಗಿಳಿದಳು.

ಇತ್ತ ಹೋಟೆಲ್ ರೂಮನಲ್ಲಿದ್ದವರೆಲ್ಲರೂ ಮುಂದೇನು? ಎಂದು ಮೆಲುದನಿಯಲ್ಲಿ ಚರ್ಚಿಸುತ್ತಿದ್ದರು. ರೂಮಿನ ಕಿಟಕಿಯಿಂದ ಜಿನೇಶನಿಗೆ, ಭಾಗ್ಯ ಸಿಗರೇಟು ಹಚ್ಚಿ ಬುಸ್ ಬುಸ್ ಹೊಗೆ ಬಿಡುತ್ತ, ಕೈಬಾಯಿ ಆಡಿಸುತ್ತ ಬುರ್ಖಾ ತೊಟ್ಟ ಮಹಿಳೆಯ ಹತ್ತಿರ ಮಾತಾಡುವುದು ಕಾಣಿಸುತ್ತಿತ್ತು. ಆ ಬುರ್ಖಾ ಮಹಿಳೆಯ ಮುಖಚರ್ಯೆಯ ಗುರುತು ಸಿಕ್ಕು, ನೆತ್ತಿಯಿಂದ ಪಾದದವರೆಗೂ ಜಿನೇಶ ಬೆವೆತು ಹೋದ.