ಫ್ಲೈಓವರ್

ಫ್ಲೈಓವರಿನ
ನುಣ್ಣನೆ ರಸ್ತೆಯ ಮೇಲೆ
ಅಂಬೆಗಾಲಿಡುತ್ತಾ ಬರುತ್ತಿದೆ
ಪುಟ್ಟ ಮಗು
ತನ್ನಷ್ಟಕ್ಕೇ ತಾನು ಆಡಿಕೊಳ್ಳುತ್ತಾ
ಭರ್ರೆಂದು ಸಾಗುವ ವಾಹನಗಳ ನೋಡಿ
ಕೇಕೆ ಹಾಕಿ ನಗುತ್ತಾ
ನಿಧಾನವಾಗಿ ತೆವಳುತ್ತಿದೆ.

ಹಾಲುಗಲ್ಲದ ಮೇಲಿನ್ನೂ ತೊಟ್ಟಿಕ್ಕುವ ಜೊಲ್ಲು
ಹೊಳೆವ ಸ್ವಚ್ಛ ಕಣ್ಣುಗಳ
ಮುದ್ದು ಮುಖದ ಸುಂದರ ಕಂದ,
ನೋಡಿಯೂ ನೋಡದಂತೆ
ಶರವೇಗದಲ್ಲಿ ಸಾಗುತ್ತಿವೆ
ಒಂದರ ಹಿಂದೊಂದು ಪೈಪೋಟಿಗೆ ಬಿದ್ದಂತೆ
ಕಾರು ಬಸ್ಸು…. ಬೈಕು ಲಾರಿಗಳು…..

ಈ ವೇಗದ ದಾರಿಯಲ್ಲಿ
ಹೀಗೆ ಬರಬಾರದೆಂದು……
ನಿಧಾನಕ್ಕಿಲ್ಲಿ ಅವಕಾಶವಿಲ್ಲವೆಂದು
ಯಾರೂ ಹೇಳುತ್ತಿಲ್ಲ ಅದಕ್ಕೆ
ಪಾಪ ….., ಅಪಾಯ ಅರಿಯದ ಅಬೋಧ ಕಂದ
ಯಾರ ಮಡಿಲಿನಿಂದ ತಪ್ಪಿಸಿಕೊಂಡಿದೆಯೋ ಏನೋ
ಕಳೆದುಕೊಂಡವರು ಹುಡುಕುತ್ತಿರಬೇಕು
ಖಂಡಿತಾ , ಅದನ್ನು ಎಲ್ಲೆಲ್ಲೋ.

ಒಂದು ಕ್ಷಣ ನಿಂತು
ಅದನ್ನೆತ್ತಿಕೊಳ್ಳಲು
ಯಾರಿಗೂ ಇಲ್ಲಿ ವ್ಯವಧಾನವಿಲ್ಲ
ಈ ವೇಗದ ರಸ್ತೆಗೆಂದೇ ಸುಂಕ ಕಟ್ಟಿ-
ಬಂದಿದ್ದಾರೆ ಎಲ್ಲರೂ
ಅವರೆಲ್ಲರ ಸಮಯಕ್ಕೂ ಬೆಲೆ ಕಟ್ಟಲಾಗುತ್ತಿದೆ

ಈಗ………….
ರುಮ್ಮು …ರುಮ್ಮೆಂದು ರಕ್ಕಸ ವೇಗದಲ್ಲಿ
ಭೋರ್ಗರೆಯುತ್ತಾ ಬರುತ್ತಿರುವ
ವಾಹನಗಳ ಮಧ್ಯೆಯೇ ಬಂದು ಬಿಟ್ಟಿದೆ ಮಗು
ಬೊಚ್ಚು ಬಾಯಗಲಿಸಿ ತೊದಲುತ್ತಾ
ಕೈಚಾಚಿ ಕರೆಯುತ್ತಾ……
ಯಾರೂ ನೋಡುತ್ತಿಲ್ಲ
ವೇ….ಗ ಕಡಿಮೆ ಮಾಡುತ್ತಿಲ್ಲ
ಅಯ್ಯೋ …….ಅದರ ಜೀವ ಇನ್ನೆಷ್ಟು ಹೊತ್ತು!

ಒಬ್ಬರಾದರೂ ಸ್ವಲ್ಪ ನಿಧಾನಿಸಿ ನಿಂತು
ಎತ್ತಿ ಎದೆಗಪ್ಪಿಕೊಳಬಾರದೇ…….
ಎಲ್ಲರ ಶಿಶು ಇದೆಂದು ಒಪ್ಪಿ ಲಾಲಿಸಬಾರದೇ……..!

ಚಂದ್ರಿಕಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರ ತಾಲೂಕಿನ ಮತ್ತಿಹಳ್ಳಿಯವರು.
ವಾಸ ಬೆಂಗಳೂರು ಗ್ರಾಮಾಂತರದ ಮತ್ತೊಂದು ಪುಟ್ಟ ಹಳ್ಳಿ.
ಬರವಣಿಗೆ ಇವರ ಇಷ್ಟದ ಹವ್ಯಾಸ.
ಇವರ ಹಲವಾರು ಕಥೆ ಕವನ, ಪ್ರಬಂಧಗಳು, ಮಕ್ಕಳ ಕಥೆ ಕವನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.