ಮೂಕಿ ಚಿತ್ರವೊಂದು ಈಗ ಸವಾಲುಗಳನ್ನು ಎದುರಿಸಿ ಗೆಲ್ಲುವ ಸಾಧ್ಯತೆ ಇಲ್ಲ ಎನ್ನುವ ತೀವ್ರವಾದ ಅನಿಸಿಕೆಯಿದೆ. ಆದರೆ ಎಲ್ಲರ ಪೂರ್ವಗ್ರಹ, ಅನುಮಾನಗಳನ್ನು ಸಾರಾಸಗಟಾಗಿ ನೆಲಸಮ ಮಾಡಿ, ಅಷ್ಟೆತ್ತರಕ್ಕೆ ಪತಾಕೆ ಹಾರಿಸಿದ ಚಿತ್ರ ʻದ ಆರ್ಟಿಸ್ಟ್‌ʼ. ಹಳೆಯ ದಾರಿಗಳನ್ನು ಹೊಸದಾರಿಗಳನ್ನು ಅನ್ವೇಷಿಸುವಂತೆ ಸಂದೇಶ ನೀಡುವ ಫ್ರಾನ್ಸ್ ನ ಚಿತ್ರವಿದು. ಈ ಚಿತ್ರದ ಚಾರಿತ್ರಿಕ ಸಾಂಸ್ಕೃತಿಕ ಮಹತ್ವವೇನು, ಚಿತ್ರದ ಆಶಯವೇನು ಹಾಗೂ ನಿರ್ದೇಶಕನ ಬಗ್ಗೆ ಪ್ರಶ್ನೆಗಳು ಮೂಡುವುದು ಸಹಜ. 2011ರಲ್ಲಿ ತೆರೆಕಂಡ ಚಿತ್ರವಿದು. ಹಾಗಾಗಿ ಅದರ ಪ್ರಭಾವ, ಮಹತ್ವಗಳ ಪೂರ್ಣ ಅರಿವು ದೊರೆಯಬೇಕಾದರೆ ಇನ್ನಷ್ಟು ಕಾಲ ಸರಿಯಬೇಕು. ಲೋಕಸಿನಿಮಾ ಟಾಕೀಸ್ ನಲ್ಲಿ ಎ.ಎನ್. ಪ್ರಸನ್ನ ಬರಹ ನಿಮ್ಮ ಓದಿಗಾಗಿ. 

 

ಈಗ ಎಲ್ಲ ಬಗೆಯ ದೃಶ್ಯ ಮಾಧ್ಯಮಗಳಲ್ಲಿ ಬಣ್ಣಗಳದೇ ರಾಜ್ಯಭಾರ. ಇನ್ನು ತ್ರೀಡಿ ಬಂದಮೇಲಂತೂ ಅದರ ಮೆರೆದಾಟಕ್ಕೆ ಮೇರೆಯಲ್ಲಿ? ಈ ನಿಲುವನ್ನು ಒಪ್ಪದವರೂ ಕೂಡ ಅನ್ಯಮಾರ್ಗವಿಲ್ಲದೆ ಹೂಂಗುಟ್ಟ ಬೇಕಾಗಿದೆ. ಪ್ರತಿಯೊಂದರಲ್ಲೂ ಈಗ ಇನ್ನಷ್ಟು ಮತ್ತಷ್ಟು ಅನನ್ಯತೆಯನ್ನು ಪರಿಶೋಧಿಸುವ ಅಭಿಲಾಷೆ. ಇದು ಶೀಘ್ರಗತಿಯ ಕಾಲ. ಬೆರಗು ಹೊಮ್ಮಿಸುವ ಬಣ್ಣದ ಪದರುಗಳಿಗೆ ಇಲ್ಲಿ ಮಣೆ. ಚಲನಚಿತ್ರ ಪಯಣದಲ್ಲಿ ಕಪ್ಪು-ಬಿಳುಪು ಮೂಕಿ ಚಿತ್ರಗಳ ಯುಗ ಮುಗಿದು ಹೋದದ್ದಷ್ಟೇ ಅಲ್ಲ, ಅದು ಮರೆತು ಹೋದದ್ದು ಎಂದು ಅದರ ಬಗ್ಗೆ ಯಾರೂ ಉಸಿರೆತ್ತದ ಹಾಗಾಗಿದೆ. ಪರಿಕಲ್ಪನೆಯ ಸತ್ವದಲ್ಲಿ, ಸ್ವಂತಿಕೆಯಲ್ಲಿ, ಪ್ರತಿಭೆಯ ನಂಬಿಕೆಯಲ್ಲಿ, ಸಕಲವನ್ನೂ ಪಣಕ್ಕಿಟ್ಟು, ಬಣ್ಣಗಳ ಮೋಟೋರಿನೋಟಕ್ಕೆ ಸವಾಲು ಹಾಕಿ, ನೋಡುಗರ ಕಣ್ಣುಗಳನ್ನು ಅವರೆ ನಂಬದ ಹಾಗೆ ಅಮೋಘ ದಿಗ್ವಿಜಯ ಸಾಧಿಸಿದ ಕಪ್ಪು-ಬಿಳುಪಿನ 96 ನಿಮಿಷಗಳ ಸೈಲೆಂಟ್ ಚಿತ್ರ, ಫ್ರಾನ್ಸ್‌ನ ಮಿಶೆಲ್‌ ಹಸಾನವಿಸಿಯಸ್ ನಿರ್ದೇಶನದ ʻದ ಆರ್ಟಿಸ್ಟ್‌ʼ. ಅದು 2011ರ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ನಟ ಸೇರಿದಂತೆ ಐದು ಪ್ರಶಸ್ತಿಗಳನ್ನು ಸೂರೆ ಹೊಡೆದ ಚಿತ್ರ. ಒಂದು ರೀತಿಯಲ್ಲಿ ಲೋಕದ ಕಣ್ಣು ತೆರೆಸಿದ ಹಾಗೆ.

(ಮಿಶೆಲ್‌ ಹಸಾನವಿಸಿಯಸ್)

ಸುಮಾರು ಹನ್ನೆರಡಕ್ಕೂ ಹೆಚ್ಚು ದಶಕಗಳ ಕಾಲ ಪ್ರಪಂಚದ ಸಿನಿಮಾ ಇತಿಹಾಸದಲ್ಲಿ ಅಚ್ಚರಿ ಹುಟ್ಟಿಸುವಂತಹ ಬದಲಾವಣೆಗಳು ಮತ್ತು ಬೆಳವಣಿಗೆಗಳಾಗಿವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸೃಷ್ಟಿಯ ಪ್ರಭೇದವೆಂದು ಪರಿಗಣಿಸಲಾಗಿರುವ ಈ ಮಾಧ್ಯಮದಲ್ಲಿ ಯಾವುದೇ ನಿಖರ, ನಿರ್ದಿಷ್ಟ, ವಿಧಿವಿಧಾನಗಳಿಲ್ಲ. ಅದರ ಭಾಷೆ ಮತ್ತು ವ್ಯಾಕರಣ ಮುಕ್ತ ಸ್ವರೂಪದ್ದು. ಚಲನಚಿತ್ರದ ಒಟ್ಟು ಪರಿಸರಗಳು ಬಯಸಿದ ರೀತಿಯನ್ನು ಮುಂದಿಡುವ ರೀತಿಯದು. ಚಲನಚಿತ್ರದ ಆಳ-ವಿಸ್ತಾರಗಳಿಗೆ ಯಾವುದೇ ರೀತಿಯ ನಿಗದಿತ ಸೀಮೆಗಳಿಲ್ಲ. ಒಂದಕ್ಕೊಂದು ಪೂರಕವಾಗಿ ಸಾವಯವ ಸಂಬಂಧ ರೂಪಿಸಿಕೊಳ್ಳಬೇಕಾದಂಥವು.

ಎಲ್ಲ ಬಗೆಯ ಸೃಷ್ಟಿಕ್ರಿಯೆಗೆ ಸಂದರ್ಭವೊಂದರಲ್ಲಿ, ಒಟ್ಟಾರೆಯಾಗಿ ಮನುಷ್ಯನ ಜೀವನಕ್ರಮದಲ್ಲಿ ಬದುಕು-ಭಾವಗಳು ಹೇಗೆ ಬುನಾದಿಯಾಗುತ್ತವೆಯೋ ಚಲನಚಿತ್ರದಲ್ಲಿಯೂ ಹಾಗೆಯೇ. ಸೃಷ್ಟಿಕ್ರಿಯೆಯ ಈ ಪ್ರಭೇದದಲ್ಲಿ ಅದರ ಸ್ವರೂಪಕ್ಕೆ ಅನುಸಾರವಾಗಿ ಆಯಾ ನಿರ್ದೇಶಕನ ಕಲ್ಪನಾ ಪ್ರತಿಭೆ ಮತ್ತು ಹೆಚ್ಚಾಗಿ ಸಂವಹನ ಸಾಮರ್ಥ್ಯವನ್ನು ಅವಲಂಬಿಸಿರುವುದು ಸಹಜ.

ಇಷ್ಟೆಲ್ಲ ಹಿನ್ನೆಲೆಯನ್ನು ಮುಂದಕ್ಕೆ ಮುಂದಿಡಬೇಕಾದ ಅಗತ್ಯಕ್ಕೆ ʻದ ಆರ್ಟಿಸ್ಟ್‌ʼ ಚಿತ್ರದ ಸ್ವರೂಪವೇ ಪ್ರೇರಣೆ. ಮೂಕಿ ಯುಗದ ಅತ್ಯಂತ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಕೆಲವರಾದ ಆದ ಚಾರ್ಲಿ ಚಾಪ್ಲಿನ್, ಡಬ್ಲ್ಯೂ ಮುರ್ಮನ್‌, ಕಾರ್ಲ್‌ ಡ್ರೈಯರ್, ಸರ್ಗಿ ಐಸೆನ್ಸ್ಟೀನ್ ಅವರ ಚಿತ್ರಗಳನ್ನು ಥಟ್ಟನೆ ನೆನಪು ಮಾಡುವ ಚಿತ್ರ ಇದು. ಯಾರೇ ಆಗಲಿ ಮೂಕಿ ಚಿತ್ರ ನಿರ್ಮಿಸುವ ಆಲೋಚನೆ ಮಾಡಿದ್ದಾದರೆ ಸಧ್ಯದ ಸಂದರ್ಭ ಸವಾಲುಗಳು ಅಪಾರ. ಮೂಕಿ ಯುಗದ ನಂತರದ ಅವಧಿಯಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ಉಂಟಾಗಿರುವ ಪ್ರಗತಿಯನ್ನು ಗಮನಿಸಿದರೆ ಈ ಸವಾಲಿನ ಮಟ್ಟ ಅರಿವಿಗೆ ಬರುತ್ತದೆ. ಇವೆಲ್ಲವನ್ನು ಪ್ರಸ್ತಾಪಿಸುವ ಉದ್ದೇಶದ ಹಿಂದೆ ಮೂಕಿ ಚಿತ್ರವೊಂದು ಈಗ ಸವಾಲುಗಳನ್ನು ಎದುರಿಸಿ ಗೆಲ್ಲುವ ಸಾಧ್ಯತೆ ಇಲ್ಲ ಎನ್ನುವ ತೀವ್ರವಾದ ಅನಿಸಿಕೆಯಿದೆ. ಆದರೆ ಎಲ್ಲರ ಪೂರ್ವಗ್ರಹ, ಅನುಮಾನಗಳನ್ನು ಸಾರಾಸಗಟಾಗಿ ನೆಲಸಮ ಮಾಡಿ, ಅಷ್ಟೆತ್ತರಕ್ಕೆ ಪತಾಕೆ ಹಾರಿಸಿದ ಚಿತ್ರ ʻದ ಆರ್ಟಿಸ್ಟ್‌ʼ.

ಈ ಚಿತ್ರದ ಚಾರಿತ್ರಿಕ ಸಾಂಸ್ಕೃತಿಕ ಮಹತ್ವವೇನು, ಚಿತ್ರದ ಆಶಯವೇನು ಹಾಗೂ ನಿರ್ದೇಶಕನ ಬಗ್ಗೆ ಪ್ರಶ್ನೆಗಳು ಮೂಡುವುದು ಸಹಜ. ಇವುಗಳಲ್ಲಿ ಚಾರಿತ್ರಿಕ ಮಹತ್ವವನ್ನು ಕುರಿತು ಯಾವುದೇ ನಿರ್ದಿಷ್ಟ ಅಭಿಪ್ರಾಯವನ್ನು ಹೊಂದುವುದು ಸರಿಯಲ್ಲ. ಇದಕ್ಕೆ ಮುಖ್ಯಕಾರಣ ಚಿತ್ರ ಇತ್ತೀಚಿನದು – 2011ರದು. ಇನ್ನಷ್ಟು ಕಾಲದ ನಂತರ ಇದರ ಹಿರಿಮೆ, ಪ್ರಭಾವ ಮುಂತಾದವು ತಿಳಿಯಬಹುದು.
ಈ ಚಿತ್ರ ನಿರ್ಮಾಣಗೊಂಡಿರುವುದು ಫ್ರಾನ್ಸಿನಲ್ಲಿ. ಕೆಲವು ವರ್ಷಗಳಿಂದ ಅದರ ರಾಷ್ಟ್ರೀಯ ಸ್ಥಿತಿಗತಿಗಳು ಮತ್ತು ಸಮಸ್ಯೆಗಳನ್ನು ಬಿಂಬಿಸಲು ಹೊಸ ಆವಿಷ್ಕಾರದ ಶೋಧನೆಯಲ್ಲಿವೆ. ಈ ಸಂದರ್ಭವನ್ನು ಚಿತ್ರ ಬೇರೊಂದು ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ ಹಾಗೂ ಅದರ ಸಮಸ್ಯೆಯಲ್ಲಿ ಹಳೆಯ ದಾರಿಗಳನ್ನು ತೊರೆದು ಹೊಸದನ್ನು ಸ್ವೀಕರಿಸಬೇಕೆಂದು ಒತ್ತಾಯಿಸುವಂತೆ ತೋರುತ್ತದೆ.

ಹಾಗೆಂದು ಈಗ ತಲೆದೋರಿರುವ ವಿವಿಧ ಸಮಸ್ಯೆಗಳು ಪ್ರಪಂಚದ ಅನೇಕ ರಾಷ್ಟ್ರಗಳಿಗೆ ಅನ್ವಯಿಸುವುದರಿಂದ ಆ ಬಗೆಯ ಚಿತ್ರದ ಚಾರಿತ್ರಿಕ ಮಹತ್ವ ಒಂದು ಬಗೆಯಾದರೆ, ಜಗತ್ತಿನ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಬೇರೊಂದು ಬಗೆಯಲ್ಲಿ ಚರಿತ್ರಾರ್ಹವೆನಿಸುವ ಲಕ್ಷಣಗಳನ್ನು ಹೊಂದಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಯಾವುದೇ ಸೃಷ್ಟಿಕ್ರಿಯೆಯನ್ನು ಅದರ ಪಂಥ ಅಥವಾ ಮಾರ್ಗಗಳು ನಿರ್ಧರಿಸುವುದಿಲ್ಲ, ನಿರ್ಧರಿಸಬಾರದು ಕೂಡ. ಹಾಗೇನಾದರೂ ಆದರೆ ಇದು ಮನುಷ್ಯನ ಸೃಷ್ಟಿಶಕ್ತಿಗೆ ಇನ್ನಿಲ್ಲದಷ್ಟು ಅವಮಾನ. ಅದರ ಒಳಿತುಗಳನ್ನು ಜೀರ್ಣಿಸಿಕೊಂಡು, ಸಮಕಾಲೀನತೆಯ ಜೊತೆ ಹೆಜ್ಜೆ ಹಾಕಲು ಸಾಧ್ಯವಿದೆ, ಅಷ್ಟೇ ಅಲ್ಲ ಶಿಖರ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯ ಎನ್ನುವುದನ್ನು ಕಾರ್ಯಗತ ಮಾಡಿ ಸಾಧಿಸಿ ತೋರಿಸಿದ್ದು ʻದ ಆರ್ಟಿಸ್ಟ್‌ʼ ಚಿತ್ರ. ಚಿತ್ರಕ್ಕೆ ದೊರಕಿರುವ ಮನ್ನಣೆ, ಪುರಸ್ಕಾರ ಮತ್ತು ಜನಪ್ರಿಯತೆಯಿಂದ ಮತ್ತಷ್ಟು ಕಪ್ಪು-ಬಿಳುಪು ಸೈಲೆಂಟ್ ಚಿತ್ರಗಳು ನಿರ್ಮಾಣಗೊಂಡರೆ ಅದು ನಿಜಕ್ಕೂ ಆರೋಗ್ಯಪೂರ್ಣ ಬೆಳವಣಿಗೆಯಾಗುತ್ತದೆ.

ಅನೇಕ ಬಗೆಯ ಪ್ರಾಮುಖ್ಯತೆಗಳನ್ನು ಈ ಚಿತ್ರ ಹೇಗೆ ಗಳಿಸಿದೆ ಎನ್ನುವುದನ್ನು ಅವಲೋಕಿಸುವುದಕ್ಕೆ ಪ್ರಾರಂಭಿಸಿದರೆ ಮೊದಲು ಗಮನಕ್ಕೆ ಬರುವುದು ಅದರ ವಸ್ತು ಯಾವ ಬಗೆಯದು- ಕಥನ ರೂಪವೇ ಅಥವಾ ಬೇರೆಯದೇ ಎಂದು. ನಿರ್ದೇಶಕ ಆರಿಸಿಕೊಂಡಿರುವುದು ನೇರ ಹಾಗೂ ಸರಳ ಕಥಾನಕ. ಅದನ್ನು ನಿರೂಪಿಸುವ ಬಗೆಯಲ್ಲಿ ಯಾವುದೇ ಪ್ರಯೋಗವಿಲ್ಲ. ಚಿತ್ರೀಕರಣವನ್ನು ಶೈಲೀಕೃತಗೊಳಿಸುವ ಪ್ರಯತ್ನವಿಲ್ಲ. ಚಿತ್ರವನ್ನು ಪ್ರಸ್ತುತಗೊಳಿಸಿರುವ ವಿಧಾನ ಮೂಕಿ ಯುಗದ ನಿರೂಪಣೆಯ ಮಾದರಿಯಲ್ಲಿಯೇ ಇದೆ.

ಚಿತ್ರದ ನಿರ್ದೇಶಕ ಮಿಚೆಲ್‌ ಹಸನವಿಚಿ ಪ್ಯಾರಿಸ್‌ನವನು. ಅಭ್ಯಾಸ‌ ಮಾಡಿದ್ದು ಕಲಾ ಶಾಲೆಯಲ್ಲಿ. ಕೆಲವು ಟೆಲಿವಿಷನ್ ಕಾರ್ಯಕ್ರಮಗಳನ್ನು ತಯಾರಿಸಿದ ಅವನು ನಟ ಹಾಗೂ ನಿರ್ದೇಶಕ. ಅವನು ಪ್ರಥಮ ಚಲನಚಿತ್ರ ʻಮಿಸ್‌ ಅಮಿಸ್‌ʼ ನಿರ್ದೇಶಿಸಿದ್ದು ೧೯೯೯ರಲ್ಲಿ. ಪ್ರಸ್ತುತ ಚಿತ್ರದಲ್ಲಿ ನಟಿಸಿರುವುದು ಅವನ ಪತ್ನಿ ಮೆರೀನ್‌ ಮಿಜಾ. ಪ್ರಸ್ತುತ ಚಿತ್ರ ಮೂಕಿ ಯುಗದಲ್ಲಿ ಪ್ರಖ್ಯಾತವಾದ ʻಸಿಂಗಿಂಗ್‌ ಇನ್‌ ದ ರೇನ್‌ʼ ಚಿತ್ರದಿಂದ ಪ್ರೇರಣೆ ಹೊಂದಿದೆ ಎಂಬ ಅಭಿಪ್ರಾಯವಿದೆ. ಅದರಲ್ಲಿ ಮೂಕಿ ಕಾಲದ ಖ್ಯಾತ ನಾಯಕಿ ಸಹ ನಟನಲ್ಲಿ ಅನುರಕ್ತಳಾಗುತ್ತಾಳೆ. ಟಾಕಿ ಚಿತ್ರ ಪ್ರಾರಂಭವಾಗುತ್ತಿದ್ದಂತೆ ತನ್ನ ಧ್ವನಿಯ ಕಾರಣದಿಂದ ನಟಿ ಟಾಕಿ ಕಾಲಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ.

ಚಿತ್ರ 1927ರಿಂದ 1932ರ ಕಾಲದ ಅಂತರದಲ್ಲಿ ಮೂಕಿ ಕಾಲದ ಪ್ರಖ್ಯಾತ ನಟ ಜಾರ್ಜ್‌ ವೆಲಾಟನ್ನ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಉಂಟಾಗುವ ತೀವ್ರತರ ಪಲ್ಲಟವನ್ನು ತೆರೆದಿಡುತ್ತದೆ. ಆ ಅವಧಿಯ ಅಂತ್ಯದಲ್ಲಿಯೇ ಟಾಕಿ ಯುಗಕ್ಕೆ ನಾಂದಿಯಾದದ್ದು. ಈ ಬದಲಾವಣೆಯ ಅಂಶವನ್ನು ಚಿತ್ರದ ನಾಯಕನ ಪಾತ್ರಕ್ಕೆ ಸರಿಹೊಂದುವಂತೆ ಚಿತ್ರಕಥೆ ಹೆಣೆದಿರುವುದು ಕಾಲದ ಚಾರಿತ್ರಿಕ ಗುಣವನ್ನು ನಿರ್ದೇಶಕರು ಪರಿಗಣಿಸಿರುವುದು ಗಮನಾರ್ಹವೆನಿಸುತ್ತದೆ.

ಕಥಾಹಂದರದಲ್ಲಿ ಘಟನೆಗಳ ಸಂಖ್ಯೆ ಕಡಿಮೆ. ಕಥೆಯ ಚಲನೆಗೆ ತೀವ್ರತೆಯನ್ನು ಉಂಟುಮಾಡುವ ತಿರುವುಗಳು ಅತಿ ಕಡಿಮೆ. ಉಪಕಥೆಗಳು ಇಲ್ಲವೇ ಇಲ್ಲ. ಪ್ರೇಕ್ಷಕರ ಕುತೂಹಲ, ಆಸಕ್ತಿಗಳನ್ನು ಜೀವಂತವಾಗಿರಿಸುವ ಮಾತುಗಳ ಬಳಕೆಯಿಂದ, ರಂಜಕತೆಯನ್ನು ಒದಗಿಸುವ ಪ್ರಶ್ನೆಯೇ ಇಲ್ಲ. ಹೀಗೆ ಸೃಷ್ಟಿಸಿಕೊಂಡ ಹಲವಾರು ಮಿತಿಗಳನ್ನು ಮೀರಿ ಚಿತ್ರವನ್ನು ಅತ್ಯಂತ ಹಿತವಾಗಿ ಹಾಗೂ ಮುಕ್ತವಾಗಿ ಸ್ವೀಕರಿಸುವುದಕ್ಕೆ ನಿರ್ದೇಶಕರು ಅಳವಡಿಸಿರುವ ರಾಜ ಮಾರ್ಗವೆಂದರೆ, ದೃಶ್ಯಗಳಲ್ಲಿನ ಸಣ್ಣಸಣ್ಣ ವಿವರಗಳನ್ನೂ ಚಿತ್ರೀಕರಿಸಿ ಉದ್ದೇಶಿತ ಭಾವೋದ್ದೀಪನೆಗೆ ದಾರಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ನಿರ್ದೇಶಕ ಹೆಚ್ಚಿನ ಸಂಖ್ಯೆಯ ಸಮೀಪ ಚಿತ್ರಗಳನ್ನು ಬಳಸಿದ್ದಾನೆ. ಹೀಗೆ ಮಾಡುವುದಕ್ಕೆ ಎಲ್ಲಕ್ಕಿಂತ ಮುಖ್ಯ ಸಹಕಾರ ಮತ್ತು ಬೆಂಬಲ ಒದಗಿ ಬಂದಿರುವುದು ಮುಖ್ಯ ಪಾತ್ರಗಳ ಸಾಮರ್ಥ್ಯದಿಂದ ಹಾಗೂ ಛಾಯಾಗ್ರಹಣ ಮತ್ತು ಸಂಕಲನದ ವಿಶೇಷತೆಯಿಂದ.

ಕಥಾಹಂದರದಲ್ಲಿ ಘಟನೆಗಳ ಸಂಖ್ಯೆ ಕಡಿಮೆ. ಕಥೆಯ ಚಲನೆಗೆ ತೀವ್ರತೆಯನ್ನು ಉಂಟುಮಾಡುವ ತಿರುವುಗಳು ಅತಿ ಕಡಿಮೆ. ಉಪಕಥೆಗಳು ಇಲ್ಲವೇ ಇಲ್ಲ. ಪ್ರೇಕ್ಷಕರ ಕುತೂಹಲ, ಆಸಕ್ತಿಗಳನ್ನು ಜೀವಂತವಾಗಿರಿಸುವ ಮಾತುಗಳ ಬಳಕೆಯಿಂದ, ರಂಜಕತೆಯನ್ನು ಒದಗಿಸುವ ಪ್ರಶ್ನೆಯೇ ಇಲ್ಲ. ಹೀಗೆ ಸೃಷ್ಟಿಸಿಕೊಂಡ ಹಲವಾರು ಮಿತಿಗಳನ್ನು ಮೀರಿ ನಿರ್ದೇಶಕರು ದೃಶ್ಯಗಳಲ್ಲಿನ ಸಣ್ಣಸಣ್ಣ ವಿವರಗಳನ್ನೂ ಚಿತ್ರೀಕರಿಸಿ ಉದ್ದೇಶಿತ ಭಾವೋದ್ದೀಪನೆಗೆ ದಾರಿ ಮಾಡಿಕೊಂಡಿದ್ದಾರೆ.

ಚಿತ್ರ ಜಾರ್ಜ್‌ ವೆಲಾಟನ್ ಅಭಿನಯದ ಚಿತ್ರವೊಂದರ ಪ್ರೀಮಿಯರ್ ಶೋ ದೃಶ್ಯದಿಂದ ಪ್ರಾರಂಭವಾಗುತ್ತದೆ. ಅದರಲ್ಲಿ ಸೆರೆಗೊಳಗಾಗಿರುವ ನಾಯಕ ಎಲೆಕ್ಟ್ರಿಕ್ ಕರೆಂಟಿನ ನೋವಿಗೆ ಭಾದೆ ಪಡುತ್ತಿರುವುದನ್ನು ಹತ್ತಿರದಿಂದ ತೋರಿಸುವಾಗ, ಅವನು ಇನ್ನಷ್ಟು ಹಿಂಸಿಸಿದರೂ ಮಾತನಾಡುವುದಿಲ್ಲ ಎಂದು ಸುಮ್ಮನೆ ಬಾಯಿ ಆಡಿಸುವುದನ್ನು ಕಾಣುತ್ತೇವೆ. ಆ ಚಿತ್ರದಲ್ಲಿ ನಟಿಸಿರುವ ಜಾರ್ಜ್ ವ್ಯಾಲೆಂಟಿನ್‌ನ ವೈಯಕ್ತಿಕ ಧೋರಣೆಯೂ ಇದಕ್ಕೆ ಹೊಂದಿಕೊಳ್ಳುತ್ತದೆ. ಹೀಗೆ ಚಿತ್ರಕಥೆಯಲ್ಲಿ ಪಾತ್ರದ ಆಂತರ್ಯವನ್ನು ಇನ್ನೊಂದು ಬಗೆಯಲ್ಲಿ ದೃಶ್ಯದಲ್ಲಿ ಅಳವಡಿಸಿರುವುದು ಚಿತ್ರಕಥಾರಚನೆಯ ಮೇಲ್ದರ್ಜೆಗೆ ಸಾಕ್ಷಿ.

ಚಿತ್ರದ ಶೋ ಮುಗಿದ ಮೇಲೆ ನಾಯಿಯೊಂದಿಗೆ ಅವನಿಗಿರುವ ಸಖ್ಯ ಹಾಗೂ ಅವನಲ್ಲಿರುವ ಅಹಂಕಾರದ ನಡವಳಿಕೆಗಳು ಎದ್ದು ತೋರುತ್ತವೆ. ನಂತರ ಅಭಿಮಾನಿಗಳನ್ನು ಭೇಟಿಯಾಗುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಪೆಪ್ಪಿ ಮಿಲ್ಲರ್ ಅವನ ಬಳಿಗೆ ಬರುತ್ತಾಳೆ. ಆ ಕ್ಷಣದಲ್ಲಿ ಉಂಟಾದ ಭಾವನೆಯಿಂದ ಅವನಿಗೊಂದು ಮುತ್ತು ಕೊಡುತ್ತಾಳೆ. ಇದು ಅವರ ನಡುವಿನ ವಿಶ್ವಾಸದ ಸಂಬಂಧಕ್ಕೆ ಪೀಠಿಕೆಯಾಗುತ್ತದೆ. ಅವಳಿಗೆ ನಾಟ್ಯದಲ್ಲಿ ಸಹಜ ಪ್ರತಿಭೆ ಇರುವುದನ್ನು ಗಮನಿಸುವ ದೃಶ್ಯದಲ್ಲಿ ಅವರಿಬ್ಬರ ಸಂಬಂಧ ಮೊದಲಿಗಿಂತ ಒಂದು ನಿಶ್ಚಿತ ನೆಲೆ ಕಂಡುಕೊಳ್ಳುತ್ತದೆ. ಸ್ಟುಡಿಯೋ ನಿರ್ದೇಶಕರಿಗೆ ಒತ್ತಾಯಿಸಿ ಅವಳೊಂದಿಗೆ ಒಂದು ದೃಶ್ಯದಲ್ಲಿ ಅಭಿನಯಿಸುತ್ತಾನೆ. ಅವಳು ಬಿಗಿದ ಮನಸ್ಥಿತಿಯನ್ನು ಬಿಟ್ಟು ಹೆಚ್ಚು ಮುಕ್ತವಾಗಿ ನರ್ತಿಸುವುದಕ್ಕೆ ಅನುಕೂಲವಾಗಲೆಂದು ನಾಯಕ ಮತ್ತೆ ಮತ್ತೆ ಚಿತ್ರೀಕರಿಸುವಂತೆ ಮಾಡುತ್ತಾನೆ. ಅವನು ಹೀಗೆ ಮಾಡಿದ್ದನ್ನು ಅನುಮೋದಿಸಲೋ ಎನ್ನುವ ಹಾಗೆ ಪ್ರತಿಸಲ ಚಿತ್ರೀಕರಣದಲ್ಲಿ ಅವಳ ಅಭಿನಯದಲ್ಲಿ ವ್ಯತ್ಯಾಸವಿರುತ್ತದೆ. ಅವಳ ಅಭಿನಯ ಸಾಮರ್ಥ್ಯ ನಾಯಕನಿಂದ ಹಿಡಿದು ಎಲ್ಲರಿಗೂ ಮನವರಿಕೆಯಾಗುತ್ತದೆ.

ಅವನೊಂದಿಗೆ ನಟಿಸಿದ ನಂತರ ಅವನ ರೂಮಿಗೆ ಬರುತ್ತಾಳೆ. ನಿಧಾನಗತಿಯಲ್ಲಿ ಬಂದು ಕ್ರಮೇಣ ಅವನ ಕೋಟಿನ ಬಳಿ ಅದಕ್ಕೆ ತಾಕುವ ಹಾಗೆ ನಿಂತು, ಕೈಯನ್ನು ಕೋಟಿನೊಳಗೆ ಹಾಕುತ್ತಾಳೆ. ಕ್ರಮೇಣ ಅದು ಅವನದು ಎನ್ನಿಸುವಂತೆ ತನ್ನ ಸೊಂಟವನ್ನು ತಾನೇ ಬಳಸಿ ಹಿಡಿದು ಸಂತೋಷಗೊಳ್ಳುತ್ತಾಳೆ ಇಡೀ ದೃಶ್ಯ ಉದ್ದೇಶಿತ ಪ್ರಭಾವ ಮೂಡಿಸುತ್ತದೆ. ಅವಳು ಅವನಲ್ಲಿ ಅನುರಕ್ತಳಾಗಿರುವ ಸ್ಪಷ್ಟ ಸೂಚನೆ ಸಿಗುತ್ತದೆ ಆದರೆ ಅವನಲ್ಲಿ ಆ ವಿಧವಾದ ಭಾವನೆ ಇಲ್ಲ ಎಂಬುದು ವ್ಯಕ್ತವಾಗುತ್ತದೆ.

(ನಾಯಕ ನಟ ಜಾನ್‌ ಇಜಾರ್ದನ್)

ಪ್ರಾರಂಭದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಪೆಪ್ಪಿ ಮಿಲ್ಲರ್ ಬಹುಬೇಗ ಆ ಪ್ರಖ್ಯಾತ ಹಿರಿಯ ನಾಯಕನಿಗೆ ನಾಯಕಿಯಾಗಿ ನಟಿಸುವ ಮಟ್ಟ ತಲುಪುತ್ತಾಳೆ; ಜನಪ್ರಿಯಳಾಗುತ್ತಾಳೆ. ಮೂಕಿ ಚಿತ್ರಗಳ ನಿರ್ಮಾಪಕರಿಂದ ಟಾಕಿ ಚಿತ್ರಗಳ ಬಗ್ಗೆ ಸೂಚನೆ ಸಿಗುತ್ತದೆ. ಚಿತ್ರದಲ್ಲಿ ಈ ವಿಷಯವನ್ನು ಒಳಗೊಂಡಿರುವ ದೃಶ್ಯ ಅತ್ಯಂತ ಪ್ರಮುಖವಾದದ್ದು. ಹೆಣ್ಣೊಬ್ಬಳು ಮೈಕಿಗೆ ಮಾತನಾಡುತ್ತಿದ್ದಂತೆ ಕ್ರಮೇಣ ಅದನ್ನು ನೋಡುತ್ತಾ ರೂಮಿನಲ್ಲಿ ಕುಳಿತಿದ್ದವರನ್ನು ಒಳಗೊಳ್ಳುತ್ತದೆ.

ಅಲ್ಲಿ ರೂಮು ಸಿಗಾರ್ ಹೊಗೆಯಿಂದ ಮುಚ್ಚಿಕೊಂಡಿರುತ್ತದೆ. ಜಾರ್ಜ್‌ ಮತ್ತು ಚಿತ್ರ ನಿರ್ದೇಶಕರ ನಡುವೆ ಅಭಿಪ್ರಾಯ ಭೇದ ದಿಢೀರನೆ ದಟ್ಟವಾಗುವುದನ್ನು ಇದು ರೂಪಕದ ಹಾಗೆ ಬಿಂಬಿಸುತ್ತದೆ. ಈ ಮಾನಸಿಕ ಎತ್ತರದಿಂದ ಬೀಳುವ ಒಣಗಿದೆಲೆಯ ಶಬ್ದ ಬಾಂಬ್ ಸ್ಫೋಟದಂತೆ ಭಾಸವಾಗುವುದು ಅವನ ಮನಃಸ್ಥಿತಿಗೆ ಕನ್ನಡಿಯಾಗುತ್ತದೆ. ಅವನ ಭವಿಷ್ಯದ ಜೀವನಕ್ಕೆ ಆಘಾತ ಉಂಟುಮಾಡುವ ಮುನ್ಸೂಚನೆಯನ್ನು ಯಶಸ್ವಿಯಾಗಿ ಮನಗಾಣಿಸುತ್ತದೆ. ಇಷ್ಟಾದರೂ ಜಾರ್ಜ್‌ಗೆ ಸಿನಿಮಾಗಳು ಟಾಕಿ ಆಗುವುದು ಸುತರಾಂ ಒಪ್ಪಿಗೆಯಾಗುವುದಿಲ್ಲ. ವ್ಯರ್ಥ ಹಠ ಮಾಡುತ್ತಾನೆ. ಜನರ ನಾಡಿ ಮಿಡಿತ ಬಲ್ಲ ಮೂಕಿ ಚಿತ್ರಗಳ ನಿರ್ದೇಶಕ ನಾಯಕನಿಗೆ ಸಿನೆಮಾದಲ್ಲಿ ಮಾತನಾಡುವ ಅನಿವಾರ್ಯತೆಯನ್ನು ತಿಳಿಸುತ್ತಾನೆ. ನಾಯಕ ಹಾಗೆ ಮಾಡುವುದಕ್ಕೆ ಒಪ್ಪುವುದಿರಲಿ ಆ ಆಲೋಚನೆಯನ್ನೇ ಒಪ್ಪದೆ ನಿರಾಕರಿಸುತ್ತಾನೆ.

ಜಾರ್ಜ್ ಮನೆಯಲ್ಲಿರುವ ಎಲ್ಲವನ್ನೂ ಕಳೆದುಕೊಳ್ಳುವುದು, ಮನೆಯ ವಸ್ತುಗಳು ಹರಾಜಾಗುವುದು, ಯಾವುದೇ ರೀತಿಯ ವರಮಾನವಿಲ್ಲದಿರುವುದು, ಸಂಬಳ ಕೊಡಲು ಸಾಧ್ಯವಾಗದೆ ವಿಶ್ವಾಸದ ವ್ಯಕ್ತಿಯಾದ ಡ್ರೈವರನಿಗೆ ಕಾರನ್ನೇ ತೆಗೆದುಕೊಂಡು ಹೋಗಲು ಹೇಳುವುದು – ಹೀಗೆ ಒಂದಾದ ಮೇಲೊಂದು ಜರುಗುತ್ತದೆ. ಅವನ ನೆಚ್ಚಿನ ನಾಯಿ ಮಾತ್ರ ಸದಾ ಅವನ ಜೊತೆಗಿರುತ್ತದೆ. ಅನೇಕ ಬಾರಿ ಡ್ರೈವರ್ ಜಾರ್ಜ್ ಗೆ ಪೆಪ್ಪಿ ಮಿಲ್ಲಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುವುದಕ್ಕೆ ಪ್ರಯತ್ನಿಸಿ ಸೋಲುತ್ತಾನೆ.

ಜಾರ್ಜ್‌ನ ಮೂಕಿ ಚಿತ್ರ ಮತ್ತು ಪೆಪ್ಪಿ ಮಿಲ್ಲರ್‌ ಅಭಿನಯದ ಟಾಕಿ ಚಿತ್ರ ಒಂದೇ ದಿನ ಬಿಡುಗಡೆಯಾಗುತ್ತವೆ. ಟಾಕಿ ಚಿತ್ರ ನೋಡಲು ಜನ ಅಷ್ಟುದ್ದಕ್ಕೂ ನಿಂತರೆ, ಮೂಕಿ ಚಿತ್ರಕ್ಕೆ ಸೊನ್ನೆ. ಜಾರ್ಜ್ ಇದನ್ನು ಸ್ವತಃ ಕಂಡರೂ ಟಾಕಿ ಚಿತ್ರ ನೆಲೆ ಕಂಡುಕೊಳ್ಳುವುದಿಲ್ಲ ಎಂದು ನಗುತ್ತಾನೆ. ಅವನಿಗೆ ವಾಸ್ತವವನ್ನು ತಿಳಿದುಕೊಳ್ಳುವ ಮನಸ್ಸಿರುವುದಿಲ್ಲ.

ಅವನ ಚಿತ್ರವಿರುವ ಚಿತ್ರಮಂದಿರ ಖಾಲಿ ಹೊಡೆಯುತ್ತದೆ. ನಿಜ ಪರಿಸ್ಥಿತಿಯನ್ನು ನೋಡಿ‌ ಪೆಪ್ಪಿ ಮಿಲ್ಲರ್ ಅವನಿಗಾಗಿ ಮರುಗುತ್ತಾಳೆ. ಅವನ ಬಗ್ಗೆ ಹೊಂದಿರುವ ಕೃತಜ್ಞತೆಯ ಭಾವನೆಗಳನ್ನು ತಿಳಿಸುವುದಕ್ಕೆ ಹೆಣಗುತ್ತಾಳೆ. ಅವಳ ಪ್ರಯತ್ನಗಳಿಗೆ ಜಾರ್ಜ್ ಸ್ಪಂದಿಸುವುದಿಲ್ಲ. ಅವಳ ಟಾಕಿ ಚಿತ್ರಗಳು ಜನಪ್ರಿಯವಾಗುವುದು ಮುಂದುವರಿಯುತ್ತದೆ. ಜಾರ್ಜ್‌ಗೆ ಕ್ರಮೇಣ ಬದಲಾದ ಪರಿಸ್ಥಿತಿ ಅರಿವಾಗುತ್ತದೆ. ಏಕಾಂತತೆ, ಹತಾಶೆ, ವ್ಯಗ್ರತೆ, ಖಿನ್ನತೆಗಳು ಉಂಟಾಗುತ್ತವೆ. ಆದರೆ ತನ್ನ ಬಗ್ಗೆ ಉಂಟಾದ ಅನುಕಂಪ ಹಾಗೂ ರೋಷ ಅವನ ಚಿತ್ತವನ್ನು ಹಾಳುಮಾಡುತ್ತವೆ. ಭಾವಾವೇಶ ಹೊಮ್ಮಿಸುವ ಇಂಥ ದೃಶ್ಯಗಳಲ್ಲಿ ಸಮೀಪ ಚಿತ್ರಿಕೆಗಳನ್ನು ಅಗತ್ಯದಂತೆ ಬಳಸುವುದರಿಂದ ಉದ್ದೇಶಿತ ಪರಿಣಾಮ ಉಂಟಾಗುತ್ತದೆ.

ಅನಂತರ ಅವನು ಸ್ಮೃತಿಗೆಟ್ಟವನಂತೆ ತನ್ನ ಚಿತ್ರಗಳ ರೀಲುಗಳಿಗೆ ಬೆಂಕಿ ಹಚ್ಚುತ್ತಾನೆ. ನಿರೀಕ್ಷೆಯಂತೆ ಅವನ ನಾಯಿ ಅವನ ಪ್ರಾಣ ಉಳಿಸಲು ಕಾರಣವಾಗುತ್ತದೆ. ವಾಸ್ತವವನ್ನು ಅರಿತು ಆಸ್ಪತ್ರೆಯಲ್ಲಿರುವ ಅವನನ್ನು ಮನೆಗೆ ಕರೆತಂದು ಉಪಚರಿಸುವ ಅವಳ ಪ್ರೇಮವನ್ನು ಸ್ವೀಕರಿಸುತ್ತಾನೆ. ಮೊದಲು ಮಾತಾಡುವುದೇ ಇಲ್ಲ ಎಂದು ಹೇಳುವುದು ಮತ್ತು ಕೊನೆಗೆ ಅದಕ್ಕೆ ಅಣಿಯಾಗುವುದು ನಾಯಕನ ಜೀವಪರ ಧೋರಣೆ ಮತ್ತು ಅನಿವಾರ್ಯತೆಯನ್ನು ಬಿಂಬಿಸುತ್ತದೆ. ನಿರ್ದೇಶಕರ ಆಸೆಯೂ ಇದೇ ಆಗಿರುವುದು ಸ್ಪಷ್ಟವಾಗಿ ತೋರುತ್ತದೆ ಇಷ್ಟಲ್ಲದೆ ಟಾಕಿ ಚಿತ್ರದಲ್ಲಿ ಪಾಲ್ಗೊಳ್ಳುವುದರ ಮೂಲಕ ನಿರಾಳನಾಗುತ್ತಾನೆ. ದೃಶ್ಯವೊಂದರ ಚಿತ್ರೀಕರಣದೊಂದಿಗೆ ಪ್ರಾರಂಭವಾಗುವ ʻದ ಆರ್ಟಿಸ್ಟ್ʼ ಚಿತ್ರೀಕರಣದ ರೀತಿಯಲ್ಲಿಯೇ ಮುಕ್ತಾಯವಾಗುತ್ತದೆ.

ನಾಯಕನ ಪಾತ್ರದಲ್ಲಿ ಜಾನ್‌ ಇಜಾರ್ದನ ಅಭಿನಯಕ್ಕೆ ಅವನ ಮುಖಚಹರೆಯೇ ಸಂಪತ್ತು. ಚಿತ್ರಕ್ಕೆ ತಕ್ಕ ಮಾನ್ಯತೆ ಪುರಸ್ಕಾರ ಲಭಿಸಿರುವುದು ಸಂತೋಷವೆಂದರೆ, ಅಷ್ಟೇ ಸಾಕೆ?