ಕಿಟಕಿ ಸರಿಸಿದರೆ ರಾಚುವ ಮಳೆ
ಅದರಲ್ಲೊಂದು ಆಗಂತುಕ ಪುಳಕ್ಕನೆ
ಎದೆಸೀಳಿನ ಮೇಲೆ ಇಳಿಜಾರಾಗಿ
ಬೀಳುವ ಹನಿಯ ನಯ ಬೆರಳು,
ಸುಯ್ಯನೆ ಸುಳಿಯುತ್ತ ನುಗ್ಗಲು
ಆವರಿಸಿ ಕಾಡಿಸುವ, ಎಲ್ಲೆಲ್ಲೋ ತಾಕಲು
ಹವಣಿಸುವ ತಂಪು ಗಾಳಿಯಲ್ಲಿ
ಹುಡುಕುವ ಖಯಾಲು
ನಯ ನಾಜೂಕು ಗಂಭೀರತೆ

ಬಾಗಿಲು ಕೊಂಚ ಸರಿಸಿ ಇಣುಕಿದ್ದಷ್ಟೆ
ಎದುರು ಇಳಿಜಾರು ಕೊಂಬೆಯ ಮೇಲೆ
ಮೂತಿ ಚೂಪು ಮಾಡಿ ಇತ್ತಲೇ
ಗಮನಿಸುವ ಹದ್ದಿನ ಬಳಗ,
ಮೇರೆ ಮೀರಿ ಚಾಚುತ್ತಾ ತಮ್ಮ
ಅರ್ಧ ಬೆತ್ತಲೆ ರೆಕ್ಕೆ, ಇನ್ನರ್ಧ ಖಾಲಿಯಿದೆ
ಅದರದೇ ಮೆದುಳಿನ ಹಾಗೆ,
ಕಂಡರೆ ಸಾಕು ಶಕ್ತಿ ಮೀರಿ ಅರಚುತ್ತವೆ,
ಶತಮಾನಗಳ ದಾಹ
ತೀರಿಲ್ಲವೆ ಇನ್ನು, ತೀರುವುದಾದರೂ ಹೇಗಿನ್ನು?

ಮೇಲೆ ಕತ್ತೆತ್ತಿದರೆ ಶೂಲ ತ್ರಿಶೂಲ
ಹಿಡಿದು ಝಳಪಿಸುವ ಹಾಲಾಹಲ
ಬೆಂಡು ಬತ್ತಾಸಿನ ಮೃದುತ್ವವಿಲ್ಲ ಇದು
ಗಾಳಿಪಟ, ಬೀಸಿದಂತೆಲ್ಲ ಕಳಚಿ ಸೂತ್ರ
ಅಡ್ಡಾದಿಡ್ಡಿ ಹಾರಾಟದ ಭಂಗಿ
ವ್ಯಯಿಸಿ ಶಕ್ತಿ ಮುರಿದು ನಿರ್ಮಿತಿ
ಸಂಗಾತದ ಮೂಲಕ್ಕೆ ಹೊಕ್ಕು ಒಳಾವರಣ
ಕದಡಿ ಹೊರಗಿನಾವರಣ ಹರಡಿ
ಎಲ್ಲೆಲ್ಲೂ ಸ್ಥಾಪಿಸುವ ಬಿನ್ನಾಣ ಸಾಮ್ರಾಜ್ಯ

ಕಂಗಾಲಾಗುವ ಸ್ಥಿತಿಗೆ ಅರಾಜಕತೆಯೆಂದು
ಹೆಸರಿಡಲೂ ಯೋಜಿಸುವ ಯೋಜಿಸುವ ನೀಲನಕ್ಷೆ
ನಿರಾಳ ನಿರ್ಮಲವಾಗಿ ಉಚ್ಛ್ವಾಸಕ್ಕೆ
ತಾವು ಹುಡುಕೋಣ
ನಿಶ್ವಾಸಕ್ಕೆ ತಮ್ಮದೇ ಬಿಂದುವಿನಿಂದಾಲೋಚಿಸುವ
ಮೃದು ಜೀವಿಗಳವು

 ಮಮತಾ ಹಾಸನ ಜಿಲ್ಲೆಯ ಅರಸೀಕೆರೆಯವರು. ‘ಸಂತೆ ಸರಕು’ ಅವರ ಕವನ ಸಂಕಲನ.
‘ಕಾಲಡಿಯ ಮಣ್ಣು’ ಎಂಬ ಅನುವಾದಿತ ಕೃತಿ ಪ್ರಕಟಿಸಿದ್ದಾರೆ.