ಒಬ್ಬರನ್ನೊಬ್ಬರು ಹಿಂಬಾಲಿಸುತ್ತ ನೂರಾನಲವತ್ತು ಅಕ್ಷರಗಳಲ್ಲಿ ಏನು ಒದರಿಕೊಳ್ಳುತ್ತಿದ್ದಾರೆಂಬ ಕುತೂಹಲವೇ ಟ್ವಿಟರ್ ಎಂದರೆ ತಪ್ಪಾಗಲಾರದು. ತಮಗಿಷ್ಟವಾದ ವೆಬ್‌ ಪುಟ, ಹಾಡು, ಚಿತ್ರಗಳನ್ನೆಲ್ಲಾ ಅದಕ್ಕೊಂದು ಕೊಂಡಿ ಕೊಟ್ಟು ಹಂಚಿಕೊಳ್ಳಬಹುದು. ಲೋಕದ ಬಗ್ಗೆಗಿನ ಪ್ರೀತಿ, ಸಿಟ್ಟು ಅಸಹನೆಯನ್ನು ಎಗ್ಗಿಲ್ಲದೆ ತೋಡಿಕೊಳ್ಳಬಹುದು. ಆದರೆ ಒಂದೊಂದು ಮಾತೂ ನೂರನಲವತ್ತು ಅಕ್ಷರಗಳಷ್ಟೇ ಇರಬೇಕು. ಟಿವಿ ರೇಡಿಯೋ ಕಾರ್ಯಕ್ರಮ ನಡೆಯುತ್ತಿರುವಾಗಲೇ – ಅದರ ಬಗ್ಗೆ ಟ್ವೀಟಿಡಬಹುದು. ಅದನ್ನು ಕಾರ್ಯಕ್ರಮ ನಡೆಸುವವರು ಆಗಲೇ ನೋಡುತ್ತ, ಬೇಕಾದರೆ ಅವಲ್ಲಿ ಕೆಲವನ್ನು ತಮ್ಮ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಬಹುದು. ಅ-ಸಮಾಜವಾದಿಗಳು ಕಟ್ಟುನಿಟ್ಟಿಲ್ಲಿದ ವಾಕರಿಕೆ ಹುಟ್ಟಿಸುವ, ಕಟ್ಟುನಿಟ್ಟಿಲ್ಲಿದ ದರಿದ್ರ ಎಂದು ಮುಖಸೊಟ್ಟಗೆ ಮಾಡಿದರೆ, ಸಮಾಜವಾದಿಗಳು ತಾಂತ್ರಿಕ-ಸಾಮ್ರಾಜ್ಯಶಾಹಿಯ ನವನವೀನ ರೂಪವಿದು ಎಂದು ಹಲ್ಲು ಕಡಿಯಬಹುದು. ಈ ಎಗ್ಗಿಲ್ಲದ ಸಮಾನತೆ ಬರೇ ಭ್ರಾಂತು ಎಂದು ಗೊಣಗಿಕೊಳ್ಳುತ್ತಾ ಇಬ್ಬರೂ ನೆಮ್ಮದಿ ಹಾಳುಮಾಡಿಕೊಳ್ಳದೆ ನಿರ್ಲಕ್ಷದಿಂದ ಇದ್ದಾರೆ.

ಆದರೆ ನೋಡಿ, ಹೋದ ವರ್ಷ ಒಂದು ಟ್ವಿಟರ್‍ ಅಕೌಂಟು ಕಾಣಿಸಿಕೊಂಡಿತು – ಶಿಟ್‌ಮೈಡ್ಯಾಡ್ಸೇಸ್ (shitmydadsays) ಅಂತ. ೭೪ ವರ್ಷದ ತನ್ನ ತಂದೆಯ ಜತೆ ವಾಸ ಮಾಡಲೇಬೇಕಾಗಿ ಬಂದಿರುವ ಇಪ್ಪತ್ತರ ಹರೆಯದ ಹುಡುಗನ ಅಕೌಂಟದು. ತನ್ನ ತಂದೆ ಆಗಾಗ ಉದುರಿಸುತ್ತಿದ್ದ ಅಣಿಮುತ್ತುಗಳನ್ನು ಮೊದಮೊದಲು ಗೆಳೆಯರಿಗೆ ಇಮೇಲ್‌ನಲ್ಲಿ ಕಳಿಸುತ್ತಿದ್ದನಂತೆ. ಯಾರೋ ಹೇಳಿದ ಮಾತು ಕೇಳಿ ಟ್ವೀಟು ಮಾಡಲು ಶುರುಮಾಡಿದನಂತೆ. ನನಗೆ ಅದು ಗೊತ್ತಾಗುವಾಗ ಹತ್ತಾರು ಸಾವಿರ ಜನ ಅವನನ್ನು ಹಿಂಬಾಲಿಸುತ್ತಾ ಮಾತುಗಳನ್ನು ಚಪ್ಪರಿಸುತ್ತಿದ್ದರು. ಆತ ಮಾತ್ರ ಒಬ್ಬನೇ ಒಬ್ಬ ಹಾಡುಗಾರನನ್ನು ಹಿಂಬಾಲಿಸುತ್ತಿದ್ದ. ಯಾರೀ ಹುಡುಗ? ಇವನ ಮಾತು ಎಷ್ಟು ನಿಜ? ನಿಜವಾಗಿರಲೀ ಸುಳ್ಳಾಗಿರಲಿ ಮಾತುಗಳು ಮಜವಾಗಂತೂ ಇವೆ ಎಂದು ಓದುತ್ತಾ ಹಲವಾರು ಮಾತುಗಳಿಗೆ ಗೊಳ್ಳೆಂದು ನಕ್ಕುಕೊಳ್ಳುತ್ತಿದ್ದೆ. ಆ ಮಾತುಗಳನ್ನು ಅನುವಾದ ಮಾಡುವುದು ಕಷ್ಟ. ನೂರನಲವತ್ತಿಗಿಂತ ಕಡಿಮೆ ಅಕ್ಷರಗಳಲ್ಲಿ ಮೂಡಿದ ಮಾತುಗಳಿಗೆ ಚಿತ್ರಕ ಶಕ್ತಿ ಹಾಗು ನಾಟಕೀಯ ಗುಣ ಓದಿಯೇ ಅರಿವಾಗಬೇಕು. ಅಲ್ಲಿರುವ ಎಲ್ಲ ನುಡಿಮುತ್ತುಗಳು ಎಲ್ಲರಿಗೂ ಇಷ್ಟವಾಗದು. ಕುಡಿತ, ಸೆಕ್ಸ್, ಡ್ರಗ್ಸ್, ಬದುಕು, ನೈತಿಕತೆ, ಸಂಬಂಧಗಳು ಎಲ್ಲದರ ಬಗ್ಗೆ ಅತಿಸಾಮಾನ್ಯನೊಬ್ಬನ ವಿಲಕ್ಷಣ ನೋಟ ಅಲ್ಲಿದೆ ಅನಿಸಿತು. ನೋಡನೋಡುತ್ತಾ ಹತ್ತಾರು ಸಾವಿರವಿದ್ದ ಹಿಂಬಾಲಕರು ನೂರಾರು ಸಾವಿರವಾದರು ಕಡೆಗೆ ಹತ್ತಾರು ಲಕ್ಷವಾದರು. ಅವನನ್ನು ಟೀವಿ ರೇಡಿಯೋ ಪುಸ್ತಕದ ಪ್ರಕಟಕರು ಹಿಂದಟ್ಟಿಕೊಂಡು ಬಂದರು.

ಕಡೆಗೆ ತನ್ನ ತಂದೆಯ ಬಗ್ಗೆ ಪುಸ್ತಕ ಬರೆದ. ಅವನ ಹೆಸರು ಜಸ್ಟಿನ್ ಹಾಲ್ಪರ್ನ್ ಎಂದು ತಿಳಿಯಿತು. ಅವನ ತಂದೆಯ ಮಾತುಗಳು ಯಾವುದೋ ನಾಟಕಕಾರ ಬರೆದ ಕಟ್ಟುಕಂತೆಯಲ್ಲ ಎಂದೂ ಗೊತ್ತಾಯಿತು. ಮಾತುಗಳನ್ನು ಆಡಿದ ಅವನ ತಂದೆ – ತನ್ನ ಮಾತುಗಳು ಜಗಜ್ಜಾಹೀರಾದುದರ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದಾನೆ. ಮಾಧ್ಯಮದ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳದೆ ಖಾಸಗಿತನ ಕಾಪಾಡಿಕೊಂಡಿದ್ದಾನೆ. ಅವನ ಒಂದೆರಡು ಫೋಟೋ ಬಿಟ್ಟರೆ ಬೇರೇನೂ ಸಿಕ್ಕುವುದಿಲ್ಲ.

ಈ ವರ್ಷ ಜಸ್ಟಿನನ ಪುಸ್ತಕ ಪ್ರಕಟವಾಯಿತು. ಪುಸ್ತಕದ ಹೆಸರು ಶಿಟ್‌ಮೈಡ್ಯಾಡ್‌ಸೇಸ್ ಅಂತಲೇ. ಆ ಪುಸ್ತಕವನ್ನಿಟ್ಟುಕೊಂಡು ಒಂದು ಟೀವಿ ಸೀರಿಯಲ್ ಮಾಡುತ್ತಿದ್ದಾರೆ. ತಂದೆಯ ಮಾತುಗಳಲ್ಲಿನ ಪ್ರಖರತೆ ಅಮೇರಿಕದ ಮಡಿವಂತ ಟೀವಿ ಷೋನಲ್ಲಿ ಬರುವುದು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಾರೆ. ತಂದೆಯ ಪಾತ್ರ ಪ್ಲಾಸ್ಟಿಕ್ ಕಟ್‌ಔಟ್ ಆಗುತ್ತದೆಂದು ಹಲವರು ಆತಂಕಗೊಂಡಿದ್ದಾರೆ.

ಏನೇ ಆದರೂ, ತನ್ನ ಬಗ್ಗೆ ವಿಪರೀತ ಭ್ರಮೆಗಳಿಲ್ಲದ, ಸಾವ್‌ಸೀದ ಹುಡುಗ ಜಸ್ಟಿನ್. ತನ್ನ ತಂದೆಯನ್ನು ಅಗಾಧವಾಗಿ ಇಷ್ಟಪಡುತ್ತಾನೆಂದು ಅವನ ಮಾತುಗಳಿಂದ ಗೊತ್ತಾಗುತ್ತದೆ. ಪುಸ್ತಕ ಬಿಡುಗಡೆಯ ಹೊತ್ತಿನ ಅವನ ಮಾತು ಕೇಳಿ ಎಲಾ ಇವನ ಅನಿಸಿತು. ಚಲನಚಿತ್ರ ಬರವಣಿಗೆ ಕಲಿತಿರುವ ಈತ ಹಾಲಿವುಡ್ಡಿಗೆ ಹೋಗಿ ಕೆಲಸ ಸಿಕ್ಕದೆ ಪರದಾಡುತ್ತಿದ್ದನಂತೆ. ಸೋತು ಸುಣ್ಣಾಗಿದ್ದಾಗ – ಯಾವುದೋ ಪುಟ್ಟ ಪತ್ರಿಕೆಗೆ ಬರೆಯುವ ಆಹ್ವಾನ ಬಂತಂತೆ. ತನ್ನ ಹುಟ್ಟೂರಿಗೆ ಹಿಂದುರಿಗದನಂತೆ. ಇಷ್ಟುದಿನ ವಾರಾಂತ್ಯ ಮಾತ್ರ ನೋಡುತ್ತಿದ್ದ ತನ್ನ ಗೆಳತಿಯ ಮನೆಗೆ ಹೋದರೆ ಆಕೆ ಇವನ ಜತೆ ಸಂಬಂಧ ಮುರಕೊಂಡಳಂತೆ. ನಿರ್ವಾಹವಿಲ್ಲದೆ ತಂದೆಯ ಮನೆ ಸೇರಿಕೊಂಡನಂತೆ.

ಇವನ ತಂದೆ ಅಣು ವಿಜ್ಞಾನಿ. ತಾಯಿ ನಿರ್ವಸಿತರ ಹಾಗು ಬಡವರ ನಡುವೆ ಕೆಲಸಮಾಡುವಾಕೆ. ಇಬ್ಬರೂ ಖಾಸಗೀ ಜೀವಿಗಳು. ಚಿಕ್ಕವನಿದ್ದಾಗಲೇ ಬಡತನದ ಬಗ್ಗೆ, ಬಡವರನ್ನು ಸೃಷ್ಟಿಸುವ ಸಮಾಜದ ಬಗ್ಗೆ ಅವನ ಒಳಮನಸ್ಸಿನಲ್ಲಿ ಒಂದು ನಿಲುವು ರೂಪುಗೊಂಡಂತಿದೆ. ಇವನು ಸಣ್ಣವನಿದ್ದಾಗ – ಬಡವರು ತಿನ್ನುವುದನ್ನೇ ಒಂದು ವಾರ ತಿನ್ನಬೇಕು, ಅವರ ಬದುಕು ಅರ್ಥಮಾಡಿಕೊಳ್ಳಬೇಕು ಎಂದು ತಾಯಿ ತಾಕೀತು ಮಾಡಿದಳಂತೆ. ತಾಯಿ ಬಡಿಸಿದ “ಬಡವರ ಊಟ” ತಿನ್ನಲಾರದೆ ಜಗಳವಾಡಿ ಮುನಿಸಿಕೊಂಡಾಗ ತಂದೆಯಿಂದ ಸಿಕ್ಕ ಸಾಂತ್ವನ ಹಾಗು ಸವಾಲು ಬೆರೆತ ಮಾತುಗಳು ಮನತಟ್ಟುವಂತಿದೆ. ಇಂತಹ ಹಲವಾರು ಘಟನೆಗಳು, ಸಂಗತಿಗಳು ಆ ಪುಸ್ತಕದಲ್ಲಿದೆ.

ಇನ್ನು ಪ್ರಕಾಶಕ ವ್ಯಾಪಾರಿಗಳ ಕಪಿಮುಷ್ಟಿಯೊಳಗೆ ಸಿಲುಕಿಯೂ ಜಸ್ಟಿನ್ ತನ್ನತನ ಉಳಿಸಿಕೊಳ್ಳುತ್ತಾನೋ ನೋಡಬೇಕು. ನೂರನಲವತ್ತು ಅಕ್ಷರಗಳಿಂದ ತೊಡಗಿದ ಅವನ ಪಯಣ ಎಲ್ಲಿಗೆ ತಲುಪಬಹುದೆಂಬ ಕುತೂಹಲ ಎಲ್ಲರಿಗೂ. ನಾನೂ ಕಾಯುತ್ತಿದ್ದೇನೆ.