ಯಾವಾಗ ಅಧ್ಯಾಪಕನಾಗಿ ಶಾಲೆ ಸೇರಿ, ನಾನೇ ಪರೀಕ್ಷೆಯ ಪ್ರಶ್ನೆಪತ್ರಿಕೆ ಮಾಡಲು ಪ್ರಾರಂಭ ಮಾಡಿದೆನೋ, ಮಕ್ಕಳಿಗೆ ಪರೀಕ್ಷೆಯ ತಯಾರಿಯ ಬಗ್ಗೆ ಹೇಳಬೇಕಾಗಿ ಬಂತೋ ಆಗ ಪೇಚಿಗೆ ಸಿಲುಕುತ್ತಿದ್ದೆ. ಮಕ್ಕಳಿಗೆ ಪರೀಕ್ಷಾ ತಯಾರಿಯ ಉಪದೇಶ ಮಾಡುವಾಗ ನಾನು ಕೇಳಿದ ನನ್ನಪ್ಪನ ಮತ್ತು ನನ್ನ ಗುರುಗಳ ಮಾತುಗಳು ನನಗೆ ಅರಿವಿಲ್ಲದಂತೆ ಬಾಯಿಗೆ ಬಂದು ಬಿಡುತ್ತಿತ್ತು. ಉಪದೇಶವನ್ನು ಮಾಡಿದ ಬಳಿಕವೂ ಮಕ್ಕಳು ಉತ್ತರಪತ್ರಿಕೆಯಲ್ಲಿ ಬಿಟ್ಟ ಖಾಲಿ ಜಾಗಗಳನ್ನು ನೋಡಿದಾಗ ನನ್ನ ಉಪದೇಶಗಳು ಪ್ರಯೋಜನಕ್ಕೆ ಬಾರದೇ ಇರುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಬರಹ

ಮಾರ್ಚ್‌ ತಿಂಗಳು ಬಂತೆಂದರೆ ಶಿಕ್ಷಕರಾದ ನಮಗೂ ಮಕ್ಕಳಿಗೂ ಪರೀಕ್ಷಾ ಜ್ವರ ಆವರಿಸುವ ಕಾಲ. ನಾವು ಚಿಕ್ಕವರಿದ್ದಾಗ ನಮಗೆ ವಾರ್ಷಿಕ ಪರೀಕ್ಷೆಗಳು ಇರುತ್ತಿದ್ದವು. ಇಡೀ ವರ್ಷ ಕೇಳಿದ ಪಾಠಗಳನ್ನು ಮತ್ತೆ ನೆನಪಿಗೆ ತಂದುಕೊಂಡು, ವರ್ಷಪೂರ್ತಿ ಬರೆದಿಟ್ಟ ನೋಟ್ಸ್‌ ಪುಸ್ತಕವನ್ನು ಮೊದಲನೇ ಪುಟದಿಂದ ಓದುವ ಕಾಲ. ಆಗೆಲ್ಲ ನಮ್ಮ ಮೇಷ್ಟ್ರು ಪರೀಕ್ಷೆಗೆ ಹೇಗೆ ಓದಬೇಕು, ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಕೆಲವರು ಕೊನೇಯ ಪಾಠದಿಂದ ಒಂದೊಂದೇ ಪಾಠ ಹಿಂದಕ್ಕೆ ಓದಿಕೊಂಡು ಹೋಗುತ್ತಿದ್ದರೆ, ಕೆಲವರು ಮೊದಲನೇ ಪಾಠದಿಂದ ಓದಲು ಪ್ರಾರಂಭ ಮಾಡುತ್ತಿದ್ದರು. ನೋಟ್ಸ್‌ ಪುಸ್ತಕ ಕಳೆದುಕೊಂಡವರು ಇತರರ ನೋಟ್ಸ್‌ ಪುಸ್ತಕ ಕೇಳಿ ಬರೆದುಕೊಳ್ಳುವುದು, ಕೆಲವರು ಬೇರೆಯವರ ನೋಟ್ಸ್‌ ಕದಿಯುತ್ತಿದ್ದುದು ಎಲ್ಲ ನಡೆಯುತ್ತಿತ್ತು.

ಯಾವಾಗ ಫೋಟೋ ಕಾಪಿ ಅಂದರೆ ಜೆರಾಕ್ಸ್ ಬಂತೋ ಆಗ ಚಂದ ಅಕ್ಷರ ಯಾರದ್ದು ಇತ್ತೋ ಅವರ ನೋಟ್ಸ್‌ ಪುಸ್ತಕಕ್ಕೆ ಒಂದು ತಿಂಗಳು ಹಿಂದಿನಿಂದಲೇ ಭಾರೀ ಬೇಡಿಕೆ. ಪರೀಕ್ಷೆಗೆ ಹೇಗೆ ಓದಬೇಕು ಎಂಬ ಬಗ್ಗೆ ನಮ್ಮಪ್ಪ ತಮ್ಮದೇ ಆದ ಥಿಯರಿಯನ್ನು ವಿವರಿಸುತ್ತಿದ್ದರು. ವಿದ್ಯುತ್‌ ಇಲ್ಲದ ಅವರ ಕಾಲದಲ್ಲಿ ಅವರು ಹೇಗೆ ಓದಿಕೊಳ್ಳುತ್ತಿದ್ದರು ಎಂಬ ಬಗ್ಗೆ ರಂಗುರಂಗಾಗಿ ಕಥೆ ಹೇಳುತ್ತಿದ್ದರು. ಬೆಳಗ್ಗೆ ಬೇಗ ಏಳಬೇಕು, ಏನೂ ಸದ್ದುಗದ್ದಲ ಇಲ್ಲದ ಜಾಗದಲ್ಲಿ ಕುಳಿತುಕೊಳ್ಳಬೇಕು. ಏಕಾಗ್ರತೆಯಿಂದ ಓದಿಕೊಳ್ಳಬೇಕು. ಆಗ ಓದಿದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ, ಪ್ರತಿದಿನಕ್ಕೆ ವೇಳಾಪಟ್ಟಿ ಹಾಕಿಕೊಳ್ಳಬೇಕು, ಯಾವ ದಿನ ಯಾವ ವಿಷಯವನ್ನು ಓದಬೇಕು ಎಂದೆಲ್ಲ ನಿಗದಿ ಮಾಡಿಕೊಳ್ಳಬೇಕು, ಆ ಪ್ರಕಾರ ಓದಿದರೆ ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತರಿಸಲು ಸಾಧ್ಯವಾಗುತ್ತದೆ. ನೀನು ನಿನ್ನದೇ ವೇಳಾಪಟ್ಟಿ ತಯಾರಿಸಿ ನನಗೆ ತೋರಿಸಬೇಕು ಅದರಂತೆ ಓದಿಕೊಂಡು ಉತ್ತಮ ಅಂಕ ಪಡೆಯಬೇಕು ಎಂದು ಕಟ್ಟಪ್ಪಣೆ ಮಾಡುತ್ತಿದ್ದರು.

ಅಪ್ಪ ಹೇಳಿದಂತೆ ವೇಳಾಪಟ್ಟಿ ತಯಾರು ಮಾಡುತ್ತಿದ್ದೆ, ಆದರೆ ಅದು ಯಾವತ್ತೂ ಜಾರಿಗೆ ಬಂದದ್ದಿಲ್ಲ. ಏಕೆಂದರೆ ಬೆಳಗ್ಗೆ ಬೇಗ ಏಳಲು ಆಗದ ನನ್ನನ್ನು ಎಬ್ಬಿಸಲು ಅಲರಾಂ ಇಡುತ್ತಿದ್ದೆ. ಅದನ್ನು ಆರಿಸಿ ಮಲಗಿದರೆ, ಅಪ್ಪ ಬೆಳಗ್ಗೆ ಜೋರಾಗಿ ರೇಡಿಯೋ ಇಡುತ್ತಿದ್ದರು. ಅದಕ್ಕೂ ಏಳದಿದ್ದರೆ ತಟ್ಟಿ ಎಬ್ಬಿಸುತ್ತಿದ್ದರು, ಆಗಲೂ ಏಳದಿದ್ದರೆ ಮುಖದಮೇಲೆ ನೀರಿನ ಸಿಂಪಡಣೆ ನಡೆಯುತ್ತಿತ್ತು. ಹಾಗೂ ಹೀಗೂ ಎದ್ದು ಓದಲು ಕುಳಿತರೆ ಸೊಳ್ಳೆಯ ಕಾಟ, ಪಕ್ಕದ ರಸ್ತೆಯಲ್ಲಿ ಹೋಗುವ ವಾಹನಗಳ ಸದ್ದು, ಸುತ್ತಲೂ ಚಿಲಿಪಿಲಿಗುಟ್ಟುವ ಹಕ್ಕಿಗಳ ಕಲರವ ಆ ಕಡೆಗೆ ಸೆಳೆಯುತ್ತಿತ್ತು. ಛೆ, ಈ ಪರೀಕ್ಷೆ ಅನ್ನುವುದು ಯಾಕಾದರೂ ಬರುತ್ತದೋ ಎಂದು ಪರೀಕ್ಷೆಗೆ ಹಿಡಿಶಾಪ ಹಾಕುತ್ತಿದ್ದೆ. ಆದರೆ ನನ್ನ ತಮ್ಮ ಮನೆಯಲ್ಲಿ ಸಂಜೆ ಟಿವಿ ಹಾಕಿದ್ದಾಗಲೇ ಕುಳಿತು ತನ್ನ ಓದು ಬರಹ ಮುಗಿಸಿಕೊಳ್ಳುತ್ತಿದ್ದ, ಪರೀಕ್ಷೆಗೂ ಓದಿಕೊಳ್ಳುತ್ತಿದ್ದ. ಇದು ಹೇಗೆ ಸಾಧ್ಯ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ.

ಯಾವಾಗ ಅಧ್ಯಾಪಕನಾಗಿ ಶಾಲೆ ಸೇರಿ, ನಾನೇ ಪರೀಕ್ಷೆಯ ಪ್ರಶ್ನೆಪತ್ರಿಕೆ ಮಾಡಲು ಪ್ರಾರಂಭ ಮಾಡಿದೆನೋ, ಮಕ್ಕಳಿಗೆ ಪರೀಕ್ಷೆಯ ತಯಾರಿಯ ಬಗ್ಗೆ ಹೇಳಬೇಕಾಗಿ ಬಂತೋ ಆಗ ಪೇಚಿಗೆ ಸಿಲುಕುತ್ತಿದ್ದೆ. ಮಕ್ಕಳಿಗೆ ಪರೀಕ್ಷಾ ತಯಾರಿಯ ಉಪದೇಶ ಮಾಡುವಾಗ ನಾನು ಕೇಳಿದ ನನ್ನಪ್ಪನ ಮತ್ತು ನನ್ನ ಗುರುಗಳ ಮಾತುಗಳು ನನಗೆ ಅರಿವಿಲ್ಲದಂತೆ ಬಾಯಿಗೆ ಬಂದು ಬಿಡುತ್ತಿತ್ತು. ಉಪದೇಶವನ್ನು ಮಾಡಿದ ಬಳಿಕವೂ ಮಕ್ಕಳು ಉತ್ತರಪತ್ರಿಕೆಯಲ್ಲಿ ಬಿಟ್ಟ ಖಾಲಿ ಜಾಗಗಳನ್ನು ನೋಡಿದಾಗ ನನ್ನ ಉಪದೇಶಗಳು ಪ್ರಯೋಜನಕ್ಕೆ ಬಾರದೇ ಇರುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು.

ಮಕ್ಕಳನ್ನು ಕರೆದು ಪರೀಕ್ಷೆಯಲ್ಲಿ ಉತ್ತರ ಏಕೆ ಬರೆಯಲಿಲ್ಲ ಎಂದು ಕೇಳಿದರೆ, ನೀವು ರಿವಿಜನ್‌ ಮಾಡಲಿಲ್ಲ, ಇಂಪಾರ್ಟೆಂಟ್‌ ಯಾವುದು ಅಂತ ಹೇಳಲಿಲ್ಲ, ಓದಿದ್ದು ನೆನಪು ಉಳಿಯುವುದಿಲ್ಲ, ಮನೆಯಲ್ಲಿ ತುಂಬಾ ಕೆಲಸ ಇರುತ್ತದೆ, ಆರೋಗ್ಯ ಸಮಸ್ಯೆ ಇತ್ತು ಎಂಬ ತರಹೇವಾರಿ ಉತ್ತರಗಳು ಸಿಗುತ್ತಿದ್ದವು. ಕೊನೆಗೆ ಯಾಕಾದ್ರೂ ಪರೀಕ್ಷೆ ಕೊಟ್ಟೆನೋ ಎಂದು ಪೇಚಿಗೆ ಸಿಲುಕುವ ಪರಿಸ್ಥಿತಿ ನನ್ನದಾಗುತ್ತಿತ್ತು.

ಯಾವಾಗ ಫೋಟೋ ಕಾಪಿ ಅಂದರೆ ಜೆರಾಕ್ಸ್ ಬಂತೋ ಆಗ ಚಂದ ಅಕ್ಷರ ಯಾರದ್ದು ಇತ್ತೋ ಅವರ ನೋಟ್ಸ್‌ ಪುಸ್ತಕಕ್ಕೆ ಒಂದು ತಿಂಗಳು ಹಿಂದಿನಿಂದಲೇ ಭಾರೀ ಬೇಡಿಕೆ. ಪರೀಕ್ಷೆಗೆ ಹೇಗೆ ಓದಬೇಕು ಎಂಬ ಬಗ್ಗೆ ನಮ್ಮಪ್ಪ ತಮ್ಮದೇ ಆದ ಥಿಯರಿಯನ್ನು ವಿವರಿಸುತ್ತಿದ್ದರು.

ನನ್ನ ತರಗತಿಯಲ್ಲಿ ದಿಲೀಪ ಎಂಬ ಹುಡುಗ ಇದ್ದ. ಸದಾ ನಗುತ್ತಾ ಖುಷಿಯಾಗಿರುತ್ತಿದ್ದ ದಿಲೀಪನ ವ್ಯಕ್ತಿತ್ವ ಬಹಳ ವಿಚಿತ್ರವಾಗಿರುತ್ತಿತ್ತು. ಆತ ಆಟ ಆಡುವಾಗ ಶಾಲೆಯಲ್ಲಿ ಓಡಾಡುವಾಗ ಪ್ರತಿದಿನ ಒಮ್ಮೆಯಾದರೂ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದ. ಆದರೆ ನೋವು ಎಂದು ಯಾವತ್ತೂ ಅಳುತ್ತಿರಲಿಲ್ಲ. ಬಿದ್ದು ಗಾಯ ಆದಮೇಲೂ ನಗುತ್ತಿದ್ದ. ಅವನ ಬಟ್ಟೆಗಳು ಹೆಚ್ಚಾಗಿ ಕೊಳೆಯಾಗಿರುತ್ತಿದ್ದವು. ಅಂಗಿಯ ಗುಂಡಿ ಕಿತ್ತು ಹೋಗಿರುತ್ತಿತ್ತು ಇಲ್ಲವೇ ಸರಿಯಾಗಿ ಇನ್‌ ಷರ್ಟ್‌ ಮಾಡುತ್ತಿರಲಿಲ್ಲ. ಆಟಕ್ಕೆಂದು ಹೋಗಿ ಬಂದರೆ ಎಲ್ಲವೂ ಅಸ್ತವ್ಯಸ್ತ. ತರಗತಿಯಲ್ಲೂ ಅವನು ಯಾವುದೋ ಲೋಕದಲ್ಲಿ ಇರುತ್ತಿದ್ದ. ಒಮ್ಮೊಮ್ಮೆ ಏನೂ ವಿಷಯವಿಲ್ಲದೆಯೇ ನಗುತ್ತಿದ್ದ. ಅವನು ಬರೆದ ಅಕ್ಷರವನ್ನು ಓದಲು ನಾವು ಮಾತ್ರವಲ್ಲ ಅವನೂ ಕಷ್ಟಪಡುತ್ತಿದ್ದ. ಅವನ ಪುಸ್ತಕದ ಪೇಜುಗಳು ಹರಿದಿರುತ್ತಿದ್ದವು, ಅಲ್ಲಲ್ಲಿ ಏನೇನೋ ಚಿತ್ರಗಳು. ಪಾಠ ಓದಲು ಹೇಳಿದರೆ ಬಹಳ ಕಷ್ಟಪಡುತ್ತಿದ್ದ. ಬೋರ್ಡಿನಲ್ಲಿ ಬರೆದದ್ದನ್ನು ತನ್ನ ಪುಸ್ತಕದಲ್ಲಿ ಬರೆದುಕೊಳ್ಳುವಾಗಲೂ ಬಹಳಷ್ಟು ತಪ್ಪುಗಳು. ಕೂಡುವ ಕಳೆಯುವ ಲೆಕ್ಕವನ್ನು ಕೇಳಿದರೆ ಬಾಯಿಯಲ್ಲಿ ಉತ್ತರ ಕೊಡುತ್ತಿದ್ದ ದಿಲೀಪ ಅದನ್ನು ಬರೆದು ತೋರಿಸಲು ಹೇಳಿದರೆ ಬಹಳ ಕಷ್ಟಪಡುತ್ತಿದ್ದ. ಎಲ್ಲ ಶಿಕ್ಷಕರ ಕೈಯಲ್ಲೂ ದಿನಾ ಏಟು ತಿನ್ನುತ್ತಿದ್ದ. ಆದರೂ ಸದಾ ನಗುತ್ತಿದ್ದ.

ಈ ದಿಲೀಪನಿಗೆ ಒಬ್ಬಳು ತಂಗಿ ಇದ್ದಳು. ಆಕೆ ಪಕ್ಕದ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಳು. ಆಕೆಯನ್ನು ನೋಡಿದರೂ ದಿಲೀಪನದೇ ಪರಿಸ್ಥಿತಿ. ಪ್ರಾಥಮಿಕ ಶಾಲೆಯ ಶಿಕ್ಷಕರಲ್ಲಿ ಅವನ ಬಗ್ಗೆ ವಿಚಾರಿಸಿದರೆ, ಅಯ್ಯೋ ಅವನು ಏನಕ್ಕೂ ಪ್ರಯೋಜನ ಇಲ್ಲ ಸಾರ್. ಅವನ ತಂಗಿಯೂ ಹಾಗೇ ಇದ್ದಾಳೆ. ಮನೆಯ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಅವನ ಹಿನ್ನೆಲೆಯನ್ನು ವಿವರಿಸಿದರು. ದಿಲೀಪನ ಸಹಪಾಠಿಗಳೂ ಅವನನ್ನು ಕ್ರ್ಯಾಕ್‌ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಹಾಗೆ ಕರೆದಾಗಲೂ ಸ್ವಲ್ಪವೂ ವಿಚಲಿತನಾಗದೆ ನಗುತ್ತಾ ಇರುತ್ತಿದ್ದ ನಮ್ಮ ದಿಲೀಪ.

ತರಗತಿಯಲ್ಲಿ ದಿನವೂ ಪಾಠ ಮಾಡುವುದು, ಲೆಕ್ಕ ಮಾಡಿಸುವುದು ಮಕ್ಕಳಿಗೂ ನನಗೂ ಸ್ವಲ್ಪ ಬೋರಿಂಗ್‌ ವಿಷಯ. ಮಕ್ಕಳು ಬೋರ್‌ ಆಗ್ತಾ ಇದೆ ಬೇರೇನಾದ್ರೂ ಮಾಡೋಣ ಎಂದು ಹೇಳಿದರೆ, ಅವತ್ತು ಒತ್ತಾಯದ ಪಾಠ ಅವರ ತಲೆಯೊಳಗೆ ಇಳಿಯುವುದಿಲ್ಲ ಎಂದೇ ಅರ್ಥ. ಮಾತ್ರವಲ್ಲದೆ ಮಕ್ಕಳಿಗೆ ನಮ್ಮಜೊತೆ ಸಲುಗೆ ಇದ್ದಾಗ ಮಾತ್ರ ಹಾಗೆ ಹೇಳಲು ಸಾಧ್ಯ. ಹೀಗೇ ಒಂದು ದಿನ ದಿಲೀಪನ ತರಗತಿಯಲ್ಲಿ ಇವತ್ತು ಪಾಠದ ಬದಲು ಕ್ರಾಫ್ಟ್‌ ಮಾಡೋಣ ಎಂದದ್ದೇ ತಡ ಮಕ್ಕಳೆಲ್ಲ ಒಂದೇ ದನಿಯಲ್ಲಿ ಆಗಬಹುದು ಸಾರ್‌ ಎಂದರು.

ಚಿಕ್ಕಂದಿನಿಂದ ನನಗೂ ಓರಿಗಾಮಿ ಅಥವಾ ಕಾಗದ ಮಡಚಿ ಆಕೃತಿ ಮಾಡುವ ಕಲೆಯ ಬಗ್ಗೆ ಬಹಳ ಆಸಕ್ತಿ. ಜಪಾನ್‌ ದೇಶದ ಕಲೆಯಾದ ಓರಿಗಾಮಿ ಅಲ್ಲಿನ ಜನರ ಬದುಕು ಮತ್ತು ಆಚರಣೆಗಳ ಅವಿಭಾಜ್ಯ ಅಂಗ ಎನ್ನುತ್ತಾರೆ. ಚಿಕ್ಕಂದಿನಲ್ಲಿ ಅಮ್ಮ ನನಗೆ ಎರಡು ಓರಿಗಾಮಿ ಪುಸ್ತಕಗಳನ್ನು ತಂದುಕೊಟ್ಟಿದ್ದಳು. ಅವು ಈಗಲೂ ನನ್ನ ಜೊತೆಗಿದ್ದವು. ಓರಿಗಾಮಿ ಮಾಡುವುದು ಮೆದುಳು ಚುರುಕಾಗಲು ಮತ್ತು ಸಮಯವನ್ನು ಕಳೆಯಲು ಅತ್ಯುತ್ತಮ ಹವ್ಯಾಸ. ಬಾಲ್ಯದಲ್ಲಿ ಕಲಿತಿದ್ದ ನವಿಲಿನ ಓರಿಗಾಮಿಯನ್ನು ಮಕ್ಕಳ ಜೊತೆ ಮಾಡಲು ಪ್ರಾರಂಭಿಸಿದೆ. ಪೇಪರ್‌ ಮಡಚುತ್ತಾ ಮಡಚುತ್ತಾ ಎರಡು ಅವಧಿಗಳು ಕಳೆದು ಹೋದದ್ದೇ ಗೊತ್ತಾಗಲಿಲ್ಲ. ಹಲವಾರು ಮಕ್ಕಳು ಯಶಸ್ವಿಯಾಗಿ ನವಿಲು ಮಾಡಿದ್ದರು. ಕಲಿಕೆಯಲ್ಲಿ ಜಾಣರು ಎಂದೆನಿಸಿಕೊಂಡ ಹಲವು ಮಕ್ಕಳು ಬಹಳ ಕಷ್ಟಪಟ್ಟರು. ನಮ್ಮ ದಿಲೀಪ ಮಾತ್ರ ಒಂದು ಮಾತೂ ಆಡದೆ, ನಾನು ಮಾಡಿದ್ದನ್ನು ಗಮನವಿಟ್ಟು ನೋಡುತ್ತಾ ನನಗಿಂತ ಮೊದಲೇ ಓರಿಗಾಮಿ ನವಿಲನ್ನು ಮಾಡಿ ಮುಗಿಸಿದ್ದ.

ದಿಲೀಪನ ಮುಖದಲ್ಲಿ ಅವತ್ತು ಮೊದಲಬಾರಿಗೆ ಅಷ್ಟೊಂದು ಏಕಾಗ್ರತೆಯನ್ನು ನಾನು ನೋಡಿದ್ದು. ನನಗೆ ಇನ್ನೊಂದು ಪೇಪರ್‌ ಕೊಡಿ ಸಾರ್‌ ಎಂದು ಕೇಳಿ ತೆಗೆದುಕೊಂಡು ಹೋದ ದಿಲೀಪ ಸ್ವಲ್ಪ ಹೊತ್ತಿನಲ್ಲೇ ಇನ್ನೊಂದು ನವಿಲನ್ನು ತಾನೇ ಮಾಡಿಕೊಂಡು ಬಂದಿದ್ದ. ಸಾಮಾನ್ಯವಾಗಿ ಮಕ್ಕಳು ಮಾತ್ರವಲ್ಲ ನನಗೂ ಹೊಸದಾಗಿ ಕಲಿತ ಓರಿಗಾಮಿಯನ್ನು ಮತ್ತೊಮ್ಮೆ ಮಾಡುವಾಗ ಒಂದಾದರೂ ಸಂಶಯ ಬರುವುದು ಸಹಜವಾಗಿತ್ತು. ಆದರೆ ದಿಲೀಪ ಬಹಳ ಬೇಗ ಕಲಿತುಬಿಟ್ಟಿದ್ದ. ಆ ಪೇಪರ್‌ ನವಿಲನ್ನು ಅವತ್ತು ಕೈಯಲ್ಲೇ ಹಿಡಿದುಕೊಂಡು ಮನೆಗೆ ಹೋದದ್ದನ್ನು ನಾನು ನೋಡಿದ್ದೆ. ಮರುದಿನ ಬೆಳಗ್ಗೆ ಶಾಲೆಗೆ ಬಂದು ನೋಡಿದರೆ ನನ್ನ ಮೇಜಿನ ಮೇಲೆ ಹೊಸತೊಂದು ಪಕ್ಷಿಯ ಪೇಪರ್‌ ಆಕೃತಿ ಪ್ರತ್ಯಕ್ಷವಾಗಿತ್ತು. ನಾನು ಹಿಂದಿನ ದಿನ ಕಲಿಸಿದ ನವಿಲಿನ ಮೂಲ ತತ್ವದಲ್ಲೇ ಇತ್ತಾದರೂ ಬೇರೆಯದೇ ಹಕ್ಕಿಯಂತೆ ಅದು ಕಾಣುತ್ತಿತ್ತು. ಅವತ್ತು ತರಗತಿಗೆ ಹೋದವನು ಮಕ್ಕಳನ್ನು ಕೇಳಿದೆ ಈ ಹಕ್ಕಿಯನ್ನು ಮಾಡಿವರು ಯಾರು? ಎಲ್ಲರೂ ಮುಖಮುಖ ನೋಡಿಕೊಳ್ಳುತ್ತಿರುವಾಗ ದಿಲೀಪನ ಗೆಳೆಯ ಸಂತೋಷ ಹೇಳಿದ, ಸಾರ್‌ ಅದು ದಿಲೀಪ ಮಾಡಿದ ಹಕ್ಕಿ, ಅವನೇ ಬೆಳಗ್ಗೆ ನಿಮ್ಮ ಮೇಜಿನ ಮೇಲೆ ಇಟ್ಟು ಬಂದಿದ್ದ, ನಾನೂ ಅವನ ಜೊತೆಗೆ ಇದ್ದೆ ಎಂದ. ದಿಲೀಪ ಮಾತ್ರ ತಲೆಕೆಳಗೆ ಮಾಡಿ ಕುಳಿತಿದ್ದ. ದಿಲೀಪನನ್ನು ಹತ್ತಿರ ಕರೆದೆ. ತಲೆತಗ್ಗಿಸಿಕೊಂಡೇ ಬಂದ ದಿಲೀಪನ ಹತ್ತಿರ ಕೇಳಿದೆ. ಇದು ನೀನೇ ಮಾಡಿದ್ದಾ ಎಂದು. ಹೌದು ಎಂಬಂತೆ ತಲೆ ಅಲ್ಲಾಡಿಸಿದ.

ನಿನ್ನೆ ಕಲಿತದ್ದನ್ನು ಯಾರಾದರೂ ಮನೆಗೆ ಹೋಗಿ ಮತ್ತೆ ಮಾಡುವ ಪ್ರಯತ್ನ ಮಾಡಿದ್ರಾ ಎಂದು ಇತರರನ್ನು ಕೇಳಿದೆ. ಒಂದೆರಡು ಮಕ್ಕಳು ಕೈ ಎತ್ತಿದರು. ದಿಲೀಪ ಮಾತ್ರ ಹಿಂದಿನ ದಿನ ಮಾಡಿದ ನವಿಲು ಮಡುವ ವಿಧಾನವನ್ನು ಪೂರ್ಣ ಕರಗತ ಮಾಡಿಕೊಂಡು, ಹೊಸತೊಂದು ಹಕ್ಕಿಯನ್ನು ಮಾಡಿದ್ದ. ದಿಲೀಪನಿಗೆ ತರಗತಿಯ ಎಲ್ಲರಿಂದ ಚಪ್ಪಾಳೆ ಕೊಡಿಸಿದೆ. ಅವನ ಮುಖ ಅರಳಿತು. ಮರುದಿನ ನೋಡುತ್ತೇನೆ ನನ್ನ ಮೇಜಿನ ಮೇಲೆ ಓರಿಗಾಮಿಯ ಇನ್ನೊಂದು ಹೊಸ ಹಕ್ಕಿ ಕುಳಿತಿತ್ತು. ದಿಲೀಪನನ್ನು ಕರೆದು ಕೇಳಿದೆ ನೀನೇ ಮಾಡಿದ್ದಾ ಎಂದು. ಹೌದು ಎಂದ. ಇದು ಯಾವ ಹಕ್ಕಿ ಎಂದು ಕೇಳಿದಾಗ ಇದು ಪಾರಿವಾಳ ಎಂದ. ಬಾಲದ ಆಕಾರ ಪಾರಿವಾಳವನ್ನೇ ಹೋಲುತ್ತಿತ್ತು. ಅವನ ಬೆನ್ನಮೇಲೆ ಕೈ ಇಟ್ಟು ಚೆನ್ನಾಗಿದೆ ಎಂದೆ. ಮರುದಿನ ಮತ್ತೊಂದು ಹೊಸ ಹಕ್ಕಿ ನನ್ನ ಮೇಜಿನಮೇಲೆ ಬಂದು ಕುಳಿತಿತ್ತು.

ಹೀಗೆ ಒಂದು ವಾರ ದಿನಕ್ಕೊಂದು ಹೊಸ ಹಕ್ಕಿ ಮಾಡಿಕೊಂಡು ಬರುತ್ತಿದ್ದ. ಯಾವ ದಿನವೂ ಕತ್ತರಿಸಿ ಅಂಟಿಸಿರಲಿಲ್ಲ, ಕೇವಲ ಪೇಪರ್‌ ಮಡಚಿಯೇ ಹಕ್ಕಿಯ ಗುರುತು ಸಿಗುವಂತೆ ಮಾಡುತ್ತಿದ್ದ. ಆನಂತರ ಬಹುಮಾನವಾಗಿ ಅವನಿಗೊಂದು ಚಿತ್ರ ಬರೆಯುವ ಪುಸ್ತಕ ತಂದು ಕೊಟ್ಟೆ. ಅವನದೇ ಕಲ್ಪನೆಯ ಸುಂದರ ಚಿತ್ರಗಳನ್ನು ಮಾಡುತ್ತಿದ್ದ. ಅವನಿಗೆ ಅವಕಾಶದ ಅರಿವು ಅಂದರೆ special aptitude ಬಹಳ ಚೆನ್ನಾಗಿತ್ತು. ಆದರೆ ಆತ ಉಳಿದ ಮಕ್ಕಳಂತೆ ಸಾಮಾನ್ಯವಾದ ಕೆಲಸಗಳನ್ನು ಮಾಡಲು ಬಹಳ ಕಷ್ಟ ಪಡುತ್ತಿದ್ದ. ಅವನ ಕುಟುಂಬ ಬೇರೆ ಊರಿಗೆ ಕೆಲಸಕ್ಕೆಂದು ಹೋದ ಕಾರಣ ದಿಲೀಪನೂ ಬೇರೆ ಊರಿನ ಶಾಲೆಗೆ ಸೇರಿಕೊಂಡ. ಆ ನಂತರ ಅವನ ಸಂಪರ್ಕ ಮಾಡುವುದು ಸಾಧ್ಯವಾಗಲಿಲ್ಲ.

ನಮ್ಮ ಶಾಲೆ ಎಂಬ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಏನನ್ನು ಕಲಿಸುತ್ತಿದ್ದೇವೆ, ಹೇಗೆ ಕಲಿಸುತ್ತಿದ್ದೇವೆ, ಅದು ಮಕ್ಕಳನ್ನು ತಮ್ಮ ಸ್ವಂತ ಕಾಲಮೇಲೆ ನಿಲ್ಲಲು ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತಿದೆ? ಐದು ಬೆರಳು ಒಂದೇ ರೀತಿ ಇರುವುದಿಲ್ಲ ಎನ್ನುವ ನಾವು ನಮ್ಮ ಮಕ್ಕಳನ್ನು, ಅವರ ಸಾಮರ್ಥ್ಯವನ್ನು ಎಷ್ಟರ ರಮಟ್ಟಿಗೆ ಗುರುತಿಸುತ್ತಿದ್ದೇವೆ? ಮೂರು ಗಂಟೆಯ ಪರೀಕ್ಷೆಯಲ್ಲಿ ಇನ್ನೂರು ದಿನದ ಕಲಿಕೆಯನ್ನು ಅಳೆಯಲು ಸಾಧ್ಯವೇ?

ಕಲಿತು ದೊಡ್ಡವರಾದ ನಾವೆಷ್ಟು ಮಂದಿ ನಮ್ಮ ನಿಜವಾದ ಸಾಮರ್ಥ್ಯಕ್ಕೆ ಸರಿಯಾದ, ನಮ್ಮ ಆಸಕ್ತಿಯ ಉದ್ಯೋಗ ಮಾಡುತ್ತಿದ್ದೇವೆ. ನಮ್ಮ ಪ್ರೊಫೆಷನ್‌ ಮತ್ತು ಪ್ಯಾಶನ್‌ ಎರಡೂ ಒಂದೇ ಆಗಿದೆಯೇ? ಎಲ್ಲರಂತೆ ನಾವೂ ಹಣಗಳಿಕೆಯ ಓಟದಲ್ಲಿ ಇದ್ದೇವೆಯೇ ಮತ್ತು ನಮ್ಮ ಮಕ್ಕಳನ್ನೂ ಅದೇ ಓಟದ ಕುದುರೆಯನ್ನಾಗಿ ತಯಾರು ಮಾಡುತ್ತಿದ್ದೇವೆಯೇ?

ಪರೀಕ್ಷೆಯಲ್ಲಿ ಅಂಕ ಗಳಿಸುವುದೇ ಮಗುವಿನ ಜೀವನದ ಪರಮ ಧ್ಯೇಯವೇ? ಎಂಬ ಪ್ರಶ್ನೆಗಳು ನನ್ನನ್ನು ಇನ್ನೂ ಕಾಡುತ್ತಿವೆ.