”ದುಗ್ಗತ್ತೆ ಯಾಕೆ ಮೈಮೇಲೆ ಬಂದಾಗ ಕೊಂಕಣಿ ಮಾತಾಡ್ತಾಳೆ ಅಥವಾ ಅವಳ ಮೈಮೇಲೆ ಬರುವ ಚೌಡಿಗೇ ಕೊಂಕಣಿ ಬರುತ್ತದಾ…? ಅಥವಾ ಚೌಡಿ ಎಲ್ಲ ಭಾಷೆಯನ್ನೂ ಮಾತಾಡುತ್ತದಾ…? ಹೀಗೇ ಏನೇನೋ ಪ್ರಶ್ನೆಗಳು ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು. ಇಷ್ಟೆಲ್ಲ ಆದರೂ ಅಪ್ಪ ಮಾತ್ರ ದುಗ್ಗತ್ತೆಯನ್ನು ಏನೂ ಹೇಳುತ್ತಿರಲಿಲ್ಲ. ತುಂಬ ಗೌರವದಿಂದಲೇ ನೋಡುತ್ತಿದ್ದ. ಅವಳಿಗೆ ಯಾರಾದರೂ ಎದುರು ಹೇಳಿದರೆ ಸಿಟ್ಟು ಬರುತ್ತಿತ್ತು ಅಪ್ಪನಿಗೆ”
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಮೊದಲ ಕಂತು.

 

ನಾವು ಆ ಊರಿಗೆ ಬಂದಿಳಿದದ್ದು ತೀರ ಆಕಸ್ಮಿಕವಾಗೇನೂ ಆಗಿರಲಿಲ್ಲ. ಎಲ್ಲವೂ ಪೂರ್ವನಿಯೋಜಿತದಂತೆ ಇತ್ತು ಎಂಬುದರ ಸ್ಪಷ್ಟ ಅರಿವಾಗಿದ್ದು ಅಲ್ಲಿಗೆ ಹೋದಮೇಲೆಯೇ. ಅದುವರೆಗೆ ತಾಳಗುಪ್ಪದ ಸಮೀಪದ ಬಂಜಗಾರಿನ ಪಾಠಶಾಲೆಯೊಂದರಲ್ಲಿ ಸಂಸ್ಕೃತ ಹೇಳಿಕೊಡುತ್ತಿದ್ದ ಅಪ್ಪ ನಮ್ಮನ್ನೆಲ್ಲ ಒಂದುದಿನ ರಾತ್ರೋರಾತ್ರಿ ದಿಢೀರೆಂದು ಇಲ್ಲಿಗೆ ಕರೆದುಕೊಂಡು ಬಂದಾಗ ನಾನಿನ್ನೂ ಒಂದನೇ ತರಗತಿಗೂ ಹೋಗುತ್ತಿರಲಿಲ್ಲ. ಆಗೆಲ್ಲ ಒಂದನೇ ತರಗತಿಗಿಂತ ಮುಂಚಿನ ತರಗತಿಗಳಿಗೆ ಬಿನ್ನೇತೆ, ದೊಡ್ಡ ಬಿನ್ನೇತೆ ಎಂದು ಕರೆಯುತ್ತಿದ್ದರು. ಹಾಗೆ ಬಿನ್ನೇತೆಯೋ, ದೊಡ್ಡ ಬಿನ್ನೆತೆಯೋ ಏನೋ ಒಂದು ಆಗಿದ್ದೆ ಎನಿಸುತ್ತದೆ. ಅಂಥ ವಯಸ್ಸಲ್ಲಿ ಆ ಮನೆಗೆ ಬಂದಿಳಿದಾಗ ಇದು ನನ್ನ ಮನೆ, ಮುಂದೊಂದು ದಿನ ಇಲ್ಲಿಯೇ ಇರಬೇಕಾಗಿ ಬರಬಹುದೆಂಬ ಯಾವುದರ ಕುರುಹೂ ಇರಲಿಲ್ಲ. ಅಲ್ಲಿಗೆ ಹೋದ ದಿನವೇ ದುಗ್ಗತ್ತೆ ಎಂದು ಕರೆಸಿಕೊಂಡ ಹೆಂಗಸೊಬ್ಬಳು ಸುತ್ತ ನಾಲ್ಕಾರು ಜನರ ಮದ್ಯೆ ಜಗುಲಿಯಲ್ಲಿ ಕಂಬಳಿಹೊದ್ದು ಮಲಗಿಕೊಂಡು, ‘ಗಜಾನನಾ… ಗಜಾನನಾ…’ ಎಂದು ಕೈನಡುಗಿಸುತ್ತ ಅಪ್ಪನ ಬಳಿ “ಇನ್ನುಮುಂದೆ ಈ ಸಂಸಾರದ ಜವಾಬ್ದಾರಿ ನಿನ್ನದೇ. ಎನ್ನ ಮಕ್ಕಳ ಕೈ ಬಿಡಡ್ದೋ…” ಎಂದು ಚುಮಣಿ ದೀಪದ ಮಂದಬೆಳಕಿನಲ್ಲಿ ಅಳುತ್ತ ಹೇಳಿದಾಗಲೇ ಅನಿಸಿದ್ದು ಇದೆಲ್ಲ ಮೊದಲೇ ಮಾಡಿದ ಯೋಜನೆಯಾಗಿತ್ತು, ಅಪ್ಪ, ಅಮ್ಮನಿಗಿದೆಲ್ಲ ಗೊತ್ತಿತ್ತು ಎಂದು. ನಾವಿಲ್ಲೇ ಇರುತ್ತೇವೆಂದು ಅಣ್ಣನಿಗೂ ಗೊತ್ತಿತ್ತಾ ಹಾಗಿದ್ರೆ… ಎಂದು ಆ ಮಂದ ಬೆಳಕಲ್ಲಿ ಅಣ್ಣನ ಮುಖ ನೋಡುತ್ತಲೇ ಅವನ ಬಳಿ ಇರುವ ಇನ್ನೂ ನಾಲ್ಕಾರು ಜನರ ಅಳುಮುಖ ನೋಡಿ ಏನೋ ಕೇಳುವ ಮನಸ್ಸಾಗಿರಲಿಲ್ಲ.

ಅದು ನನ್ನ ಅತ್ತೆಯ ಮನೆ, ಅಂದರೆ ಅಪ್ಪನ ಅಕ್ಕನ ಮನೆ. ನಾವಿನ್ನು ಅಲ್ಲಿಯೇ ಇರುವುದು ಎಂಬುದು ತಿಳಿಯಲು ಸ್ವಲ್ಪ ದಿನ ಬೇಕಾಯಿತು. ಸಾಲು ಸಾಲು ಮನೆಗಳಿರುವ ಆ ಊರು ಚಂದ್ರಗಟಗಿ ಎಂಬ ನಾಲ್ಕಾರು ಅಂಗಡಿಗಳಿರುವ ಸಣ್ಣ ಪೇಟೆಯಂಥ ಊರಿನಿಂದ 3-4 ಕಿ.ಮೀ ದೂರದಲ್ಲಿರುವ, ಬೆಟ್ಟಗುಡ್ಡಗಳ ನಡುವೆ ಇರುವಂಥ ಚೆಂದನೆಯ ಕೇರಿಯದು. ಊರ ಎದುರುಗಡೆ ಸಾಲಾಗಿ ಅಡಕೆತೋಟ, ಅದನ್ನು ಹಾದು ಗುಡ್ಡ ಏರಿ, ಬ್ಯಾಣ ದಾಟಿ, ಸುಮಾರು ದೂರ ನಡೆದು ಶಾಲೆಗೆ ಹೋಗಬೇಕಾಗಿತ್ತು. ಖುಷಿಯ ಸಂಗತಿ ಎಂದರೆ ಶಾಲೆಗೆ ಹೋಗುವಾಗ ಮತ್ತು ಬರುವಾಗ ಬೆಟ್ಟ ಬ್ಯಾಣಗಳಲ್ಲಿ ಆಯಾ ಕಾಲಕ್ಕೆ ಸಿಗುವ ಬಿಕ್ಕೆ ಹಣ್ಣು, ಹಲಗೆ ಹಣ್ಣು, ಚಳ್ಳೆ, ಪರಿಗೆ, ಮುಳ್ಳಹಣ್ಣುಗಳನ್ನೆಲ್ಲ ಕೊಯ್ದು ತಿನ್ನುತ್ತ ಶಾಲೆಗೆ ಹೋಗಿಬಂದು ಮಾಡುವಷ್ಟರಲ್ಲಿ, ಆ ಪರಿಸರ, ಊರು, ಆ ಮನೆಯೆಲ್ಲ ನನ್ನದಾಗಿತ್ತು. ಮ್ಯಾಲಿನ ಮನೆಯ ಮಾಲತಿ, ಕೆಳಗಿನ ಮನೆ ಕಮಲಾಕ್ಷಿ, ಶಶಿಕಲಾ, ಇನ್ನೂ ಯಾರ್ಯಾರೋ ಆಟಕ್ಕೆಲ್ಲ ಸಿಕ್ಕು, ಊರ ಬೀದಿಯೂ, ಎದುರಿಗಿರುವ ಗುಡ್ಡಬೆಟ್ಟಗಳೂ, ಅದರಾಚೆ ಹರಿಯುವ ಮಲಾಲ ಹೊಳೆಯೂ ನಮ್ಮದೇ ಆಗಿ ಹೋಗಿತ್ತು.

ದಿನಕಳೆದಂತೆ ದುಗ್ಗತ್ತೆ, ಅವಳ ಮಕ್ಕಳಾದ ಲೀಲತ್ತಿಗೆ, ಭಾಗತ್ತಿಗೆ, ಭಾವಯ್ಯ, ನನ್ನದೇ ವಾರಿಗೆಯವ ಮಂಜಭಾವಯ್ಯ ಎಲ್ಲರೂಡನೆ ಸೇರಿ, ಅವರೆಲ್ಲ ನಮ್ಮವರಾಗಿ, ನಾವು ಅವರ ಮನೆಯವರಂತೆಯೇ ಆಗಿ, ಆ ಊರು ಯಾವುದೋ ಜನ್ಮದಿಂದಲೂ ನಮ್ಮದೇ ಆಗಿತ್ತು ಎಂದೆನಿಸುವಷ್ಟು ಆಪ್ತವಾಗಿಬಿಟ್ಟಿತ್ತು. ದುಗ್ಗತ್ತೆಯ ದೊಡ್ಡ ಮಗಳು ಲೀಲತ್ತಿಗೆಯೇ ಮನೆಯ ಜವಾಬ್ದಾರಿ ಹೊತ್ತಿದ್ದಳು. ಭಾವಯ್ಯ ಮನೆಗೆ ಬೇಕಾದ ಸಾಮಾನುಗಳನ್ನೆಲ್ಲ ತರುತ್ತಿದ್ದರೆ, ಉಳಿದವರೆಲ್ಲ ಇನ್ನೂ ಚಿಕ್ಕವರು. ಹೀಗೆ ಐವರು ಮಕ್ಕಳು, ಅತ್ತೆ ಮತ್ತು ನಾವು ನಾಲ್ಕು ಜನ ಸೇರಿ ಮನೆತುಂಬಿದಂತಿತ್ತು.

ಆದರೆ ಅಲ್ಲಿ ಅರ್ಥವಾಗದ ಎರಡು ವಿಷಯಗಳಿದ್ದವು. ಒಂದು, ಮಾವ ಆ ಮನೆಯಲ್ಲಿ ಇರುತ್ತಿರಲಿಲ್ಲ. ಅಪರೂಪಕ್ಕೆ ಮಾತ್ರ ಅಲ್ಲಿಗೆ ಬರುತ್ತಿದ್ದ. ಇನ್ನೊಂದು, ದುಗ್ಗತ್ತೆ ಮೈಮೇಲೆ ಚೌಡಿ ಬರುತ್ತದೆ ಎಂಬುದು, ಈ ಚೌಡಿ ಎಂದರೆ ಯಾರು, ಮೈಮೇಲೆ ಬರುವುದು ಅಂದರೇನೆಂದು ತಿಳಿಯದ ಆ ವಯಸ್ಸಲ್ಲಿ ದುಗ್ಗತ್ತೆ ತನ್ನಷ್ಟಕ್ಕೆ ತಾನೆ ಏನೇನೋ ಮಾತನಾಡಿಕೊಳ್ಳುತ್ತ, ಕಂಬಳಿ ಹೊದ್ದುಕೊಂಡೇ ಮಲಗಿರುತ್ತಿದ್ದವಳು, ಒಮ್ಮೊಮ್ಮೆ ಜೋರಾಗಿ ಕಿರುಚುವುದನ್ನು ನೋಡಿ ಚೌಡಿ ಎಂದರೆ ಅತ್ತೆಯ ಥರವೇಇರುತ್ತಾಳೆ ಅಥವಾ ದುಗ್ಗತ್ತೆಯೇ ಚೌಡಿ ಎಂದುಕೊಂಡಿದ್ದೆ.

‘ಗಜಾನನಾ… ಗಜಾನನಾ..’ ಎಂದು ಎರಡೂ ಕೈಗಳನ್ನು ಮೇಲಕ್ಕೆತ್ತಿ ವೇಗವಾಗಿ ಅಲ್ಲಾಡಿಸುವಾಗಲೆಲ್ಲ ಮೊದಮೊದಲು ಭಯವಾಗುತ್ತಿತ್ತು. ದುಗ್ಗತ್ತೆಯನ್ನು ಸಹಜವಾಗಿ ನೋಡಿದ್ದ ನೆನಪೇ ನನಗಿಲ್ಲ. ಆದರೆ ಕಾಡುವ ಒಂದೇ ಒಂದು ಪ್ರಶ್ನೆ ಎಂದರೆ ದುಗ್ಗತ್ತೆಗೆ ಯಾಕೆ ಹಾಗೆ ಚೌಡಿ ಪದೇಪದೇ ಬಂದು ಕಾಡುತ್ತಾಳೆ…? ಅವಳು ಮಾಡಿರುವ ತಪ್ಪಾದರೂ ಏನು ಎಂಬುದು. ಚೌಡಿ ದುಗ್ಗತ್ತೆಯಂತೆ ಇರುವುದಿಲ್ಲ, ಭಯಂಕರವಾಗಿರುತ್ತದೆ, ಮಕ್ಕಳನ್ನು, ದುಷ್ಟರನ್ನೆಲ್ಲ ಅದರಲ್ಲೂ ತಪ್ಪು ಮಾಡಿದವರನ್ನೆಲ್ಲ ತಿಂದು ಬಿಡುತ್ತದೆಂದು ಮೇಲಿನಮನೆ ಮಾಲತಿ ಶಾಲೆಗೆ ಹೋಗುವಾಗ ಬ್ಯಾಣದ ಮೂಲೆಯೊಂದರಲ್ಲಿದ್ದ ಚೌಡಿಕಟ್ಟೆಯನ್ನು ತೋರಿಸಿ ಹೇಳಿದ್ದಳು. ಹಾಗಾಗಿ ಚೌಡಿ ದುಗ್ಗತ್ತೆಯ ಹಾಗಂತೂ ಇರುವುದಿಲ್ಲವೆಂದು ಪಕ್ಕಾ ಆಗಿಬಿಟ್ಟಿತ್ತು ನನಗೆ. ಆದರೆ ಯಾವ ತಪ್ಪಿಗಾಗಿ ಅವಳ ಮೈಮೇಲೆ ಬಂದು ಹೀಗೆಲ್ಲ ಕಷ್ಟಕೊಡುತ್ತಾಳೆ? ಯಾಕೆಂದರೆ ದುಗ್ಗತ್ತೆಗೆ ಚೌಡಿ ಮೈಮೇಲೆ ಬಂದಾಗ ಥರಥರನೆ ನಡುಗುತ್ತ, ಕೂದಲನ್ನೆಲ್ಲ ಬಿಚ್ಚಿಹಾಕಿಕೊಂಡು ನೆಲ ಬಡಿದೂ ಬಡಿದೂ ಕಿರುಚುತ್ತ ಅಳುತ್ತಿದ್ದಳು. ಕೂಗಿ ಕೂಗಿ ಸುಸ್ತಾಗಿ ಕಡೆಗೆ ಎಚ್ಚರ ತಪ್ಪಿ ಬೀಳುತ್ತಿದ್ದಳು. ನಂತರ ಅವಳು ಎದ್ದು ಏನಾದರೂ ಕೆಲಸಮಾಡಬೇಕೆಂದರೆ 3-4 ದಿವಸ ಬೇಕಾಗುತ್ತಿತ್ತು. ಆಗೆಲ್ಲ ಇಡೀ ಮನೆಯವರೆಲ್ಲ ಮಂಕಾಗಿಬಿಡುತ್ತಿದ್ದರು. ಅದಕ್ಕೆ ಒಂದಿನ ರಾತ್ರಿ ಊಟ ಮಾಡಿ ಮಲಗುವಾಗ ಅಮ್ಮನಬಳಿ ಮೆಲ್ಲಗೆ… ‘ದುಗ್ಗತ್ತೆ ಎಂತಕ್ಕೆ ಹಾಂಗೆಲ್ಲ ಕೈನಡುಗಿಸುತ್ತಾ ಅಪ್ಪನ ಕೈಹಿಡಕೊಂಡು ಕೂಗ್ತು..’ ಎಂದು ಕೇಳಿದ್ದಕ್ಕೆ, ಅಮ್ಮ, ‘ಅವಳಿಗೆ ಚೌಡಿ ಮೈಮೇಲೆ ಬಂದರೆ ಹಂಗೇಯ. ಅದು ರಾಶಿ ತ್ರಾಸು ಕೊಡ್ತು’ಎಂದಿದ್ದಳು.

‘ಚೌಡಿ ಎಂತಕ್ಕೆ ಅತ್ತೆಯ ಮೇಲೇ ಬತ್ತು.. ಈ ಚೌಡಿ ಎಲ್ಲಿರುರ್ತು… ‘ಹೀಗೆ ಕೇಳಿದ ಹತ್ತೆಂಟು ಪ್ರಶ್ನೆಗಳಿಗೆ ಅದೆಲ್ಲ ನಿಂಗೆ ಗೊತ್ತಾಗ್ತಿಲ್ಲೆ ಸುಮ್ಮಂಗಿರು…’ ಎಂದು ಸ್ವಲ್ಪ ಗದರಿದಂತೆ ಹೇಳಿ ತಟ್ಟಿ ಮಲಗಿಸಿಬಿಡುತ್ತಿದ್ದಳು ಅಮ್ಮ. ಹೀಗೆಲ್ಲ ಆಡುವ ದುಗ್ಗತ್ತೆ ತುಂಬ ಒಳ್ಳೆಯವಳಾಗಿದ್ದಳು. ನನ್ನ ಕರೆದು ಗಜಾನನ…ನಿನ್ನ ಮಗಳು ರಾಶಿ ಮುದ್ದಾಗಿದ್ದೋ… ಎಂದು ಮುದ್ದುಮಾಡುತ್ತಿದ್ದಳು. ತೆಳ್ಳಗೆ ಕಡ್ಡಿಯಂತಿದ್ದ ದುಗ್ಗತ್ತೆ, ಸ್ವಲ್ಪ ದಪ್ಪವಿದ್ದಿದ್ದರೆ ಚೆಂದ ಇರುತ್ತಿದ್ದಳೇನೋ ಅನಿಸುತ್ತಿತ್ತು. ತನ್ನ ಉದ್ದ ಕೂದಲನ್ನು ಎತ್ತಿ ಕಟ್ಟಿ, ಹಣೆಗೆ ದೊಡ್ಡದಾದ ಕುಂಕುಮ ಇಟ್ಟು, ಚುರುಕಾಗಿ ಓಡಾಡಿಕೊಂಡಿರುವ ದುಗ್ಗತ್ತೆ ಮತ್ತು ಅಪ್ಪನಿಗೆ ತುಂಬ ಹೋಲಿಕೆ ಇತ್ತು. ಅತ್ತೆಯ ಮುಖವಂತೂ ಥೇಟು ಅಪ್ಪನ ಮುಖದಂತೆಯೇ ಇತ್ತು.

ಆದರೆ ಅವಳಿಗೆ ಚೌಡಿ ಮೈಮೇಲೆ ಬಂದಾಗ ಮಾತ್ರ ಕೂದಲೆಲ್ಲ ಬಿಚ್ಚಿ ಹರಡಿಕೊಂಡು, ಹು… ಹು… ಎಂದು ಹೂಂಕರಿಸುತ್ತಿದ್ದಳು. ಜೊತೆಗೆ ಇನ್ನೊಂದು ಅರ್ಥವಾಗದ ಸಂಗತಿಯೊಂದಿತ್ತು. ಅದೆಂದರೆ ಆಗ ದುಗ್ಗತ್ತೆ ಕೊಂಕಣಿಯಲ್ಲಿ ಮಾತನಾಡುತ್ತಿದ್ದಳು. ಮಾಮೂಲಿಯಾಗಿದ್ದಾಗ ಒಂದೇ ಒಂದು ಶಬ್ದ ಕೊಂಕಣಿ ಬರದ ಅವಳ ಬಾಯಲ್ಲಿ ಚೌಡಿ ಮೈಮೇಲೆ ಬಂದಾಗ ಮಾತ್ರ ಕೊಂಕಣಿ ಶಬ್ದ ಬರುತ್ತಿದ್ದವು. ಅಣ್ಣ, ಅಮ್ಮ, ಅತ್ತಿಗೆಯಂದಿರನ್ನೆಲ್ಲ ಕೊಂಕಣಿ ಭಾಷೆಯಲ್ಲಿಯೇ ಕರೆಯುತ್ತಿದ್ದಳು. ನಾನು ಹೊರಗೆ ಓಡಿದರೆ ಏಯ್… ಹಂಗ್ಯೋ… ಯೋಗೋ… ಎಂದು ಕರೆಯುತ್ತಿದ್ದಳು. ಅದಂತೂ ಊರತುಂಬ ಸುದ್ದಿಯಾಗಿಬಿಟ್ಟಿತ್ತು. ‘ದುಗ್ಗಿ ಮೇಲೆ ಕೊಂಕಣಿ ಚೌಡಿ’ ಎಂದು ಆಡಿಕೊಳ್ಳುತ್ತಿದ್ದರು.

ದಿನಕಳೆದಂತೆ ದುಗ್ಗತ್ತೆ, ಅವಳ ಮಕ್ಕಳಾದ ಲೀಲತ್ತಿಗೆ, ಭಾಗತ್ತಿಗೆ, ಭಾವಯ್ಯ, ನನ್ನದೇ ವಾರಿಗೆಯವ ಮಂಜಭಾವಯ್ಯ ಎಲ್ಲರೂಡನೆ ಸೇರಿ, ಅವರೆಲ್ಲ ನಮ್ಮವರಾಗಿ, ನಾವು ಅವರ ಮನೆಯವರಂತೆಯೇ ಆಗಿ, ಆ ಊರು ಯಾವುದೋ ಜನ್ಮದಿಂದಲೂ ನಮ್ಮದೇ ಆಗಿತ್ತು ಎಂದೆನಿಸುವಷ್ಟು ಆಪ್ತವಾಗಿಬಿಟ್ಟಿತ್ತು.

ದುಗ್ಗತ್ತೆ ಯಾಕೆ ಮೈಮೇಲೆ ಬಂದಾಗ ಕೊಂಕಣಿ ಮಾತಾಡ್ತಾಳೆ ಅಥವಾ ಅವಳ ಮೈಮೇಲೆ ಬರುವ ಚೌಡಿಗೇ ಕೊಂಕಣಿ ಬರುತ್ತದಾ…? ಅಥವಾ ಚೌಡಿ ಎಲ್ಲ ಭಾಷೆಯನ್ನೂ ಮಾತಾಡುತ್ತದಾ…? ಹೀಗೇ ಏನೇನೋ ಪ್ರಶ್ನೆಗಳು ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು. ಇಷ್ಟೆಲ್ಲ ಆದರೂ ಅಪ್ಪ ಮಾತ್ರ ದುಗ್ಗತ್ತೆಯನ್ನು ಏನೂ ಹೇಳುತ್ತಿರಲಿಲ್ಲ. ತುಂಬ ಗೌರವದಿಂದಲೇ ನೋಡುತ್ತಿದ್ದ. ಅವಳಿಗೆ ಯಾರಾದರೂ ಎದುರು ಹೇಳಿದರೆ ಸಿಟ್ಟು ಬರುತ್ತಿತ್ತು ಅಪ್ಪನಿಗೆ.

ಅವತ್ತಿನ ದಿನ ಇನ್ನೂ ನೆನಪಿದೆ ನನಗೆ…
ಅದು ಮೂರುಸಂಜೆಯ ಹೊತ್ತು. ಜಿರ ಜಿರ ಎಂದು ರಗಳೆ ಹತ್ತುವಷ್ಟು ಒಂದೇ ಸಮನೆ ಕಾಡು ಜಿರಲೆ ಕೂಗುತ್ತಿತ್ತು. ಲೀಲತ್ತಿಗೆ ಹಾಲು ಕರೆಯಲು ಕೊಟ್ಟಿಗೆಗೆ ಹೋಗಿದ್ದಳು. ಅಮ್ಮ ಒಂದಷ್ಟು ಕಾಡು ಬಳ್ಳಿ, ಗಿಡಗಳನ್ನೆಲ್ಲ ಸೇರಿಸಿ ದನಕ್ಕೆ ಮುರ ಕೊಚ್ಚುತ್ತಿದ್ದಳು. ಆಗಷ್ಟೇ ದೀಪ ಹಚ್ಚಿಯಾಗಿತ್ತು. ಇನ್ನೇನು ನಾವು ಹುಡುಗರೆಲ್ಲ ಕಾಲು ತೊಳೆದು ಬಾಯಿಪಾಠಹೇಳಬೇಕು. ಅಂದು ಅಪ್ಪ ಹೊರಗೆ ಹೋಗಿದ್ದ, ಆಗ ದುಗ್ಗತ್ತೆ ಕೊಂಕಣಿಯಲ್ಲಿ ನನ್ನ ಕರೆದಳು. ‘ಏಯ್. ಹೋಗೇ… ನೀನು… ಕೊಂಕಣಿಲಿ ಮಾತಾಡಡ’ ಎಂದು ಜೋರು ದನಿಯಲ್ಲಿ ಹೇಳಿದ್ದಕ್ಕೆ, ‘ಎಂಗೇ ಜೋರುಮಾಡತ್ಯನೇ ಬೋಸುಡಿ… ಇರು ನಿನ್ನ ಅಪ್ಪಬರ್ಲಿ, ಹೇಳಿಕೊಡ್ತೆ…’ ಎಂದು ಬೈದಳು. ಅಪ್ಪಬಂದಕೂಡಲೇ ಗಜಾನನಾ… ಎಂದು ಕೂಗಿದಳು. ಚೌಡಿ ಮೈಮೇಲೆ ಬಂದಾಗ ದುಗ್ಗತ್ತೆಯ ಧ್ವನಿ ತುಂಬ ಗಡುಸಾಗಿರುತ್ತದೆ. ಅವಳ ಧ್ವನಿಯ ಮೇಲೆಯೇ ಅವಳು ಸರಿ ಇದ್ದಾಳಾ… ಇಲ್ಲವಾ ಎಂದೆಲ್ಲ ಹೇಳಿಬಿಡಬಹುದಿತ್ತು. ಹಾಗೆ ಕರೆದ ಅವಳ ಧ್ವನಿಗೇ ಅಪ್ಪ ಅವಳ ಬಳಿ ಹೋದ. ಅಲ್ಲೇ ಹೆಬ್ಬಾಗಿಲಕಟ್ಟೆ ಮೇಲೆ ಕೂತು ಚಪ್ಪಾಳೆ ತಟ್ಟುತ್ತ ಏನೇನೋ ಗೊಣಗುತ್ತಿದ್ದವಳು ಅಪ್ಪನನ್ನು ನೋಡಿದವಳೇ… “ನಿನ್ನಮಗಳಿದ್ದಾಳಲ್ಲ, ಚೋಟು ಮೆಣಸಿನ ಕಾಯಿ. ನೋಡು ನಂಗೇ ಹೆಂಗೆ ಜೋರು ಮಾಡ್ತು…” ಎಂದು ಹೇಳಿಕೊಟ್ಟಳು. ಅಷ್ಟೊತ್ತಿಗೆ ಆ ಮನೆಯವರು, ಊರವರು ಎಲ್ಲ ಸಲಿಗೆಯಾಗಿದ್ದ ಕಾರಣ, ಈ ಚೌಡಿ ಬರುವ ಅತ್ತೆಯೂ ಸಲಿಗೆಯಾಗಿದ್ದ ಕಾರಣ “ಹೌದು ಆನು ಚೋಟುಮೆಣಸಿನ ಕಾಯಿಯೇ… ನಿಂಗೇ ಮೆಣಸಿನ ಕಾಯಿ ಅರೀತೀನೋಡು…” ಎಂದು ಛೇಡಿಸಿ ಅಲ್ಲಿಂದ ಓಡ ಹೊರಟವಳನ್ನು ತಡೆದ ಅಪ್ಪ, ಏಟುಹಾಕಿ, ‘ಹಂಗೆಲ್ಲ ಅತ್ತೆಯನ್ನು ತಮಾಷೆಮಾಡ್ತ್ವನೇ..’ ಎಂದು ಗದರಿದ್ದನ್ನುನೋಡಿ ದುಗ್ಗತ್ತೆ ಜೋರಾಗಿ ನಕ್ಕು ಹಂಗೇ ಆಗಬೇಕು ಎಂದು ಚಪ್ಪಾಳೆ ತಟ್ಟಿದಳು. ಇದರಿಂದ ಒಂಥರಾ ಆಗಿ ಅಳು ಬಂದುಬಿಡ್ತು ನನಗೆ. ಹಾಗೆ ಅಳುತ್ತ ಹೆಬ್ಬಾಗಿಲಿಗೆ ಬಂದರೆ, ಎದುರಿಗೆ ಸಿಕ್ಕವ ಮಾವ. ತುಂಬ ದಿನಗಳ ನಂತರ ಅವನ ದರ್ಶನವಾಗಿತ್ತು. ಎತ್ತರದ ಆಳು, ಅಗಲವಾದ ಮೈಕಟ್ಟಿನ, ಅರ್ಧ ಮುಖ ಮುಚ್ಚಿದಂತೆ ಕಾಣುವ ಗಿರಿಜಾ ಮೀಸೆಯ ಮಾವ ಯಾವತ್ತೂ ಉಗ್ರವಾಗಿಯೇ ಕಾಣುತ್ತಿದ್ದ. ಹಾಗಾಗಿ ನಮಗೆಲ್ಲ ಅಷ್ಟು ಸಲುಗೆ ಇರಲಿಲ್ಲ ಅವನೊಂದಿಗೆ. ಸಾಧಾರಣವಾಗಿ ಮಾವ ಹಾಗೆಲ್ಲ ಮನೆಗೆ ಬರುವುದಿಲ್ಲ. ಇವ ಯಾಕೆ ಮನೆಗೆ ಬರುವುದಿಲ್ಲ ಎಂಬ ಪ್ರಶ್ನೆ ನನ್ನನ್ನಷ್ಟೇ ಅಲ್ಲ, ಆ ಮನೆಯ ಸುಮಾರು ಜನರಿಗೆ ಕಾಡಿತ್ತು. ಮಾವ ನನ್ನನ್ನಾಗಲಿ, ಮನೆಯ ಯಾವುದೇ ಹುಡುಗರನ್ನಾಗಲೀ ಮಾತನಾಡಿಸುತ್ತಿರಲಿಲ್ಲ. ಆದರೆ ಅವನನ್ನು ಆ ಹೊತ್ತಲ್ಲಿ ನೋಡಿದ ನನಗೆ ಬೆನ್ನಲ್ಲಿ ಛಳಕ್ ಎಂದಂತಾಗಿ ಭಯದಿಂದ ಅಳುವೂ ನಿಂತಂತೆನಿಸಿತು. ಯಾಕೆಂದರೆ ಮಾವ ಬಂದಾಗಲೆಲ್ಲ ಆ ಮನೆಯವರಾರೂ ಸರಿ ಇರುವುದೇ ಇಲ್ಲ.

ಆಗಾಗ ಸಂಜೆ ಹೊತ್ತು ಬಂದು ಹೋಗುವ ಮಾವ, ಅವ ಬಂದಾಗಲೆಲ್ಲ ಬೈಯ್ಯುತ್ತ ಓಡಾಡುವ ಅತ್ತಿಗೆ. ಅದೇ ಸಮಯದಲ್ಲಿ ಅದೆಲ್ಲಿರುತ್ತದೋ ಚೌಡಿ, ಮಾವ ಬರುವುದನ್ನೇ ಕಾದು ಕೂತುಕೊಂಡಂತೆ ದುಗ್ಗತ್ತೆಯ ಮೇಲೆ ಬಂದು ಕೊಂಕಣಿಯಲ್ಲಿ ಬೈಯ್ಯುವ ಪರಿ, ಇವೆಲ್ಲವನ್ನೂ ನೋಡುತ್ತಿರುವ ನನಗೆ ಇವೆಲ್ಲ ಮಾಮೂಲಾಗುವ ಬದಲು ತುಂಬ ಭಯ ಹುಟ್ಟಿಸುತ್ತಿತ್ತು. ಮಾವ ಬಂದು ಹೋದ 2-3 ದಿನಗಳವರೆಗೂ ಮನೆಯಲ್ಲಿ ಬಿಗು ವಾತಾವರಣವಿರುತ್ತಿತ್ತು. ಲೀಲತ್ತಿಗೆಯಂತೂ ಸದಾ ಬೈಯ್ಯುತ್ತಲೇ ಕೆಲಸಮಾಡುತ್ತಿದ್ದಳು. ಅತ್ತೆ ಹುಷಾರು ತಪ್ಪುತ್ತಿದ್ದಳು. ಇವೆಲ್ಲವನ್ನೂ ನೋಡುತ್ತ ಅಪ್ಪ-ಅಮ್ಮ ಏನೂ ಮಾಡಲಾರದ ಅಸಹಾಯಕರಂತೆ ನಿಂತಂತೆ ಭಾಸವಾಗುತ್ತಿತ್ತು ನನಗೆ.

ಈ ಮಾವನಿಗೂ-ದುಗ್ಗತ್ತೆಗೂ ಇರುವ ತಡೆಗಳೇನು ಹಾಗಿದ್ದರೆ? ಇವ ಯಾಕೆ ಮನೆಯಲ್ಲಿರುವುದಿಲ್ಲ? ಅವ ಬರುವುದಕ್ಕೂ, ದುಗ್ಗತ್ತೆ ಕೊಂಕಣಿಯಲ್ಲಿ ಬೈಯ್ಯುವುದಕ್ಕೂ, ಅತ್ತಿಗೆಗೆ ಸಿಟ್ಟು ಬರುವುದಕ್ಕೂ ಏನಾದರೂ ಸಂಬಂಧವಿದೆಯಾ…? ಹೀಗೆಲ್ಲ ಕೇಳಿಕೊಳ್ಳುತ್ತಿರುವಾಗಲೇ ಒಂದು ದಿನ ಹಸಲರ ಪೈಕಿಯ ಹಾಲಿ ಬಂದು ಲೀಲತ್ತಿಗೆ ಬಳಿ ಅದೇನೋ ಹೇಳತೊಡಗಿದ್ದಳು.

ಈ ಹಾಲಿ ಊರಿನ ಹೊರಗಿದ್ದ ಗುಡಿಸಲುಗಳಲ್ಲಿ ವಾಸವಾಗಿರುವವರ ಪೈಕಿಯಲ್ಲಿ ಒಬ್ಬಳು. ಅಲ್ಲಿಂದ ಯಾರ್ಯಾರೋ ಕೆಲಸಕ್ಕೆಂದು ಸುತ್ತ ಇರುವ ಸುಮಾರು ಊರುಗಳಿಗೆ ಹೋಗುತ್ತಿದ್ದರು. ಈ ಊರಿನಲ್ಲಿರುವ ಎರಡೇ ಎರಡು ಶ್ರೀಮಂತರ ಮನೆಗೆ ಕೆಲಸಕ್ಕೆ ಜನ ಬರುತ್ತಿದ್ದರು. ಈ ಪೈಕಿ ಹಾಲಿ ಹೆಗಡೇರ ಮನೆಗೆ ಕೆಲಸಕ್ಕೆ ಬಂದವಳು ಪಕ್ಕದಲ್ಲೇ ಇದ್ದ ನಮ್ಮ ಮನೆಗೂ ಬರುತ್ತಿದ್ದಳು. ಕಪ್ಪಗೆ ಮಿರಿಮಿರಿ ಹೊಳೆಯುವಂತೆ ಇದ್ದ ಹಾಲಿ ರವಿಕೆಯನ್ನು ಹಾಕಿಕೊಳ್ಳದೆ ಸೀರೆ ಸೆರಗನ್ನೇ ಹೆಗಲ ಮೇಲೆ ಸುತ್ತಿಕೊಂಡು ಬರುತ್ತಿದ್ದಳು. ಮಗು ಹುಟ್ಟಿದ ಮೇಲೆ ಸೀರೆ ಸೆರಗಿನಡಿಯಲ್ಲಿಯೇ ತನ್ನ ಕಪ್ಪು ಮೊಲೆಯನ್ನು ಹೊರತೆಗೆದು ಮಗುವಿನ ಬಾಯಲ್ಲಿಟ್ಟು, ಮಗುವನ್ನು ಎತ್ತಿಕೊಂಡೇ ಊರು ತಿರುಗುವ ಹಾಲಿ ಅವತ್ತು ಅತ್ತಿಗೆಯ ಬಳಿ ಏನೋ ಗುಸುಗುಸು ಎನ್ನುತ್ತಿದ್ದಳು. ಮಗುವಿನ ಬಾಯಿಗೆ ಮೊಲೆಯನ್ನು ತುರುಕಿಯೇ ಮಾತನಾಡುತ್ತಿದ್ದಳು.

‘ನಾ ನೋಡ್ದೆ ಅಮ್ಮೋರಾ…. ಇಬ್ರೂ ಒಟ್ಟಿಗೇ ಹೋಗ್ತಾ ಇದ್ದದ್ದು.. ಅದು… ಒಂದು ಬಂಗಾರದ ಸರ ಕತ್ತಲ್ಲಿ ನೇತಾಡ್ತಿತ್ತು….’
‘ಹೌದನೇ ಹಾಲಿ… ‘ಎಂದು ಲೀಲತ್ತಿಗೆ ಕೇಳಿದಳು.
‘ಹೂ… ನಿಂಗ್ಳ ತಲೆಮೇಲೆ ಮೆಣಸು ಅರಿಯೋದಕ್ಕೇ ಅದು ಬಂದೈತಿ ಬಿಡು…’ ಎಂದು ಹೇಳಿದ್ದು ಸ್ವಲ್ಪ ಸ್ವಲ್ಪ ಕೇಳುತ್ತಿದ್ದರೆ ದುಗ್ಗತ್ತೆಯ ಮತ್ತೊಬ್ಬ ಮಗಳು ಅಳುತ್ತಾ ನಿಂತರೆ ಈ ಲೀಲತ್ತಿಗೆ ಮಾತ್ರ ಸಿಟ್ಟಿನಿಂದ ಬುಸುಗುಡುತ್ತಿದ್ದಳು. ಇವಳಿಗೂ ಎಲ್ಲಿ ಚೌಡಿ ಮೈಮೇಲೆ ಬಂದಿದ್ಯಾ ಎಂದು ಅನಿಸುವಷ್ಟು.  ಈ ನಡುವೆ ದುಗ್ಗತ್ತೆಗೆ ತುಂಬ ಹುಷಾರಿರುತ್ತಿರಲಿಲ್ಲ. ಮುಟ್ಟಾದಾಗ ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದಳು. ಒಮ್ಮೊಮ್ಮೆ ಎಚ್ಚರ ತಪ್ಪಿ ಬಿದ್ದದ್ದೂ ಇತ್ತು. ಅದುಕೂಡ ಚೌಡಿಯದ್ದೇ ಕಾಟವೆನ್ನುತ್ತಿದ್ದರು. ನೋಡಲು ಸಣ್ಣ ಕಡ್ಡಿಯಂತಾಗಿ, ಮೈಯ್ಯಲ್ಲಿ ರಕ್ತವಿಲ್ಲದೆ ಬಿಳಿ ಹತ್ತಿಯಂತೆ ಕಾಣುತ್ತಿದ್ದಳು. ಅವತ್ತು ಲೀಲತ್ತಿಗೆ ಅಮ್ಮನ ಬಳಿ ‘ಅಮ್ಮಂಗೆ ಮುಟ್ಟು ನಿಲ್ಲೋದಿನ ಬತ್ತಾ ಇದ್ದು ಅನಿಸ್ತು. ಅದಕ್ಕೆ ರಾಶಿ ಮುಟ್ಟು ಹೋಗ್ತಾ ಇದ್ದು. ಆ ಖರ್ಮವೂ ಮೈಮೇಲೆ ಬಂದು ಅಮ್ಮನ ಜೀವ ಹಿಂಡ್ತು’ ಎಂದು ಅಳುತ್ತಲೇ ಹೇಳಿದ ಅತ್ತಿಗೆ ಅವತ್ತು ಅಪ್ಪನ ಬಳಿಯೂ, “ಎಂತಾದ್ರೂ ಮಾಡದೇಯ ಮಾವ. ಅಮ್ಮಂಗೆ ಜೋರೇ ಆಗೋಜು” ಎಂದು ನಡುಮನೆಯಲ್ಲಿ ನಿಂತು ಆತಂಕದಿಂದ ಹೇಳುತ್ತಿರುವಾಗಲೇ “ಏನೇ ಮಾಡದು ನೀನು. ಏನು ಮಾಡಿದ್ರೂ ಇಷ್ಟೇಯ…” ಎಂದು ಕೈ ತಿರುಗಿಸುತ್ತ, ವಿಕಾರವಾಗಿ ನಗುತ್ತ ಹೇಳಿದಳು ದುಗ್ಗತ್ತೆ. ಅದಕ್ಕೆ ಅತ್ತಿಗೆಗೂ ಸಿಟ್ಟು ನೆತ್ತಿಗೇರಿ, ‘ಎನ್ನ ಅಮ್ಮನ ಜೀವ ಎಂತಕ್ಕೆ ತಿಂತೆ… ಹೋಗು ಎಲ್ಲಿಗಾದ್ರೂ ಸುಡುಗಾಡಿಗೆ’ ಎಂದು ಅತ್ತೆಯ ತೀರ ಸಮೀಪಕ್ಕೆ ಬಂದು ಅವಳ ಕೂದಲು ಜಗ್ಗಿ ಹೇಳಿದಳು. ಆಗ ಅತ್ತಿಗೆ-ಅತ್ತೆ ಇಬ್ಬರ ಕಣ್ಣುಗಳೂ ಕೆಂಪಗೆ ತಿರುಗಿ ಮುಖ ವಿಕಾರವಾಗಿ ಚೌಡಿ ಯಾರ ಮೈಮೇಲೆ ಬಂದಿದ್ದು ಎಂದು ಹೇಳುವುದೇ ಕಷ್ಟವಾಗುತ್ತಿತ್ತು. ನಾವೆಲ್ಲ ಭಯದಿಂದ ಮೂಲೆಯಲ್ಲಿ ನಿಂತು ನೋಡುತ್ತಿದ್ದೆವು.

‘ನಾ… ಸುಡುಗಾಡಿಗೆ ಕಳ್ಸಲೇ ಬೈಂದ್ನೇ… ಇನ್ನು ಇವ ಎಂತ ಮಾಡ್ತ…’ ಎಂದು ಅಪ್ಪನ ಕಡೆ ಕೈ ತೋರಿಸಿ ಮತ್ತೂ ಜೋರಾಗಿ ನಕ್ಕಳು ದುಗ್ಗತ್ತೆ. ಅವತ್ತು ರಾತ್ರಿ ಅಪ್ಪ ಸ್ನಾನ ಮಾಡಿ, ಮಡಿ ಉಟ್ಟು ಅನುಷ್ಠಾನಕ್ಕೆ ಕೂತು ಜಪ ಮಾಡಿ ನಂತರ ದುಗ್ಗತ್ತೆಯ ಬಳಿ ಬಂದ. ಆಗ ಸ್ವಲ್ಪ ಸೌಮ್ಯವಾಗಿದ್ದಳು.
‘ಏನ್ ನಿನ್ ಕತೆ ಹೇಳು’ ಎಂದ ಅಪ್ಪನೂ ಅವತ್ತು ಸಿಟ್ಟಿನಲ್ಲಿಯೇ ಇದ್ದಂತೆನಿಸಿತ್ತು.
ಏನಿಲ್ಲೆ. ಏನೂ ಇಲ್ಲೆ… ಎಂದು ಮುದುಡಿ ಕೂತಳು ಅತ್ತೆ, ಎಲುಬು ಚರ್ಮ ಮಾತ್ರವಿದ್ದ ಹಣ್ಣುಹಣ್ಣು ಮುದುಕಿಯಂತೆಯೇ ಕಾಣುತ್ತಿದ್ದ ದುಗ್ಗತ್ತೆ ಆಗ ಮಾತ್ರ ಚಿಕ್ಕ ಮಗುವಿನ ತರವೇ ಆಗಿದ್ದಳು. “ನೀನು ಮಹಾನ್ ಅನುಷ್ಠಾನಿಕ. ನಿನ್ನ ಹತ್ರೆಲ್ಲ ಮಾತಾಡಲೆ ಎಂಗೆ ಹೆದರಿಕ್ಯಾಗ್ತು” ಎಂದಳು.
“ತಪ್ಪು ಮಾಡಿದ್ದರೆ ಮಾತ್ರ ಹೆದರವು. ಇಷ್ಟಕ್ಕೂ ನೀ ಎಂತಕ್ಕೆ ಎನ್ನಕ್ಕನ ಮೈಮೇಲೆ ಬೈಂದ್ಯೆ. ನಿನ್ನ ನೆಂಟರು, ಬೆಂಗಳೂರು, ಮುಂಬೈಗಳಲ್ಲೆಲ್ಲ ಇದ್ವಲಾ. ಅಲ್ಲಿಗೂ ಹೋಗು” ಎಂದು ಅಪ್ಪನೂ ಸ್ವಲ್ಪ ಜೋರು ಮಾಡಿದ.
ಅದಕ್ಕೆ ದುಗ್ಗತ್ತೆ ‘ಊಹೂಂ, ನಾ… ಅಲ್ಲಿಗೆಲ್ಲ ಹೋಗೋದಿಲ್ಲ… ಅಲ್ಲಿ ದೊಡ್ಡ ದೊಡ್ಡ ಲೈಟು ಹಾಕಿರ್ತಾರೆ. ಅದರ ಬೆಳಕು ನೋಡಿದ್ರೆ ನಂಗೆ ಹೆದರಿಕೆಯಾಗುತ್ತದೆ’ ಎಂದದ್ದನ್ನು ಕೇಳಿ ಅಪ್ಪನಿಗೆ ನಗು ಬಂದುಬಿಡ್ತು. ‘ನಿಂಗೆಂತ ಹೆದರಿಕ್ಯೇ ಮಾರಾಗಿತ್ತಿ… ನೀ ಹೆಂಗಿದ್ರೂ ಚೌಡಿಯಲಾ. ಹೋಗಿ ದೀಪ ಆರಿಸು ಎಂದು’ ಲೀಲತ್ತಿಗೆಯೂ ನಗುತ್ತ ಹೇಳಿದಳು.

ಕಪ್ಪಗೆ ಮಿರಿಮಿರಿ ಹೊಳೆಯುವಂತೆ ಇದ್ದ ಹಾಲಿ ರವಿಕೆಯನ್ನು ಹಾಕಿಕೊಳ್ಳದೆ ಸೀರೆ ಸೆರಗನ್ನೇ ಹೆಗಲ ಮೇಲೆ ಸುತ್ತಿಕೊಂಡು ಬರುತ್ತಿದ್ದಳು. ಮಗು ಹುಟ್ಟಿದ ಮೇಲೆ ಸೀರೆ ಸೆರಗಿನಡಿಯಲ್ಲಿಯೇ ತನ್ನ ಕಪ್ಪು ಮೊಲೆಯನ್ನು ಹೊರತೆಗೆದು ಮಗುವಿನ ಬಾಯಲ್ಲಿಟ್ಟು, ಮಗುವನ್ನು ಎತ್ತಿಕೊಂಡೇ ಊರು ತಿರುಗುವ ಹಾಲಿ ಅವತ್ತು ಅತ್ತಿಗೆಯ ಬಳಿ ಏನೋ ಗುಸುಗುಸು ಎನ್ನುತ್ತಿದ್ದಳು.

ಹೀಗೆ ಅತ್ತೆ ಒಮ್ಮೆ ಹವ್ಯಕ, ಮತ್ತೊಮ್ಮೆ ಕನ್ನಡ, ಹೆಚ್ಚಾಗಿ ಕೊಂಕಣಿಯಲ್ಲೇ ಮಾತನಾಡುತ್ತಿದ್ದಳು. ಅದೇಕೆ ಹಾಗೆ ಅವಳು ಕೊಂಕಣಿಯಲ್ಲಿ ಮಾತನಾಡುತ್ತಾಳೆಂಬುದು ಅರ್ಥವಾಗದ ಒಗಟಿಗೆ ಪುಷ್ಟಿಕೊಡುವಂಥ ಮತ್ತೊಂದು ಘಟನೆ ನಮ್ಮ ಕಣ್ಣಮುಂದೆಯೇ ನಡೆಯಿತು.
ಅದು ಕೊನೆಕೊಯ್ಲಿನ ಕಾಲ. ಒಬ್ಬೊಬ್ಬರ ಮನೆ ಅಂಗಳದಲ್ಲೂ ಹಸಿರು ಅಡಕೆಗೊನೆಗಳ ರಾಶಿ ಒಂದುಕಡೆ ಇದ್ದರೆ, ಒಂದುಕಡೆ ಸುಲಿದ ಅಡಕೆ ಸಿಪ್ಪೆಗಳು, ಪಕ್ಕದಲ್ಲೇ ದೊಡ್ಡಕೊಳಗದಲ್ಲಿ ಹಾಕಿ ಅಡಕೆ ಬೇಯಿಸುತ್ತಿದ್ದರೆ, ಮತ್ತೊಂದು ಕಡೆ ಕೆಂಪಗಿನ ತೊಗರು. ಅದಕ್ಕೆ ಅಡಕೆಯನ್ನು ಹಾಕಿ ಕೋಲಿನಿಂದ ತೊಳೆಸುವವರೊಬ್ಬರು. ಸಂಜೆಯ ಹೊತ್ತು ಅಂಗಳದಲ್ಲಿ ಊರಿನ ಹೆಂಗಸರೆಲ್ಲ ಸೇರಿ ಒಂದೊಂದು ಮನೆಯ ಅಡಕೆಗಳನ್ನು ಸುಲಿಯುತ್ತಿದ್ದರು. ಇಷ್ಟು ಗಿದ್ನಕ್ಕೆ ಇಷ್ಟು ಎಂಬುದು ಆಗಿನ ಕೂಲಿ ಮಾತು.(ಗಿದ್ನವೆಂದರೆ ಒಂದು ಅಳತೆ. ಉದ್ದ ಮತ್ತು ಅಗಲವಾದ ಮರದ ಪುಟ್ಟದಾದ ಕೊಳಗವಿರುತ್ತಿತ್ತು. ಅದರ ತುಂಬ ಅಡಕೆ ತುಂಬಿದರೆ ಒಂದು ಗಿದ್ನ ಎಂಬುದು ಅಳತೆ.)

ಹೀಗೆ ಅಡಕೆ ಸುಲಿಯುವಾಗ ಈ ಹೆಂಗಸರ ನಡುವೆ ಬರದ ಕತೆಗಳೇ ಇರುತ್ತಿರಲಿಲ್ಲ. ರಾಮಾಯಣ, ಮಹಾಭಾರತದಿಂದ ಹಿಡಿದು, ಯಕ್ಷಗಾನದ ಕತೆಗಳ ಜೊತೆಜೊತೆಗೆ ಊರಿನ ಕತೆ, ನೆಂಟರಿಷ್ಟರ ಮದುವೆ, ಮುಂಜಿ ಕತೆಗಳ ಜೊತೆಗೆ ಯಾರಮನೆಯ ಸೊಸೆ ಬಸುರಿಯಾದಳು, ಯಾರ ಮನೆಯಲ್ಲಿ ಹುಡುಗೀರು ಮೈ ನೆರೆದರು, ಎಲ್ಲಕ್ಕಿಂತ ಮುಖ್ಯವಾಗಿ ಯಾರಮನೆಯ ಯಜಮಾನರು ಯಾರ್ಯಾರ ಇತರೆ ಪೈಕಿಯ ಹೆಂಗಸರನ್ನು ಇಟ್ಟುಕೊಂಡಿದ್ದರು. ಅವರೆಲ್ಲ ಎಲ್ಲಿ ಮಲಗುತ್ತಿದ್ದರು ಎಂಬುದನ್ನೆಲ್ಲ ಚಪ್ಪರಿಸಿಕೊಂಡು ಹೇಳುತ್ತಿದ್ದರೆ, ಅಲ್ಲೇ ಇದ್ದ ಗಂಡಸರು ಅಡಕೆ ಸಿಪ್ಪೆಯನ್ನು ಬುಟ್ಟಿಗೆ ತುಂಬಿ ಅಂಗಳದ ತುದಿಯಲ್ಲಿ ಹಾಕುತ್ತ, ಈ ಕತೆಗಳ ರಸಾನುಭವವನ್ನು ಅನುಭವಿಸುತ್ತ, ಈ ಹೆಂಗಸರನ್ನು ರೇಗಿಸುತ್ತ ಕಾಲ ಕಳೆಯುತ್ತಿದ್ದರು. ಅವತ್ತು ಮಾತ್ರ ಪಕ್ಕದ ಮನೆಯ ಜಾನಕಿ ಅಕ್ಕ, ಮೂಲೆ ಮನೆಯ ಸುಭದ್ರಕ್ಕ ಮತ್ತು ಸಾಣೆಮನೆಯ ಗಂಗಕ್ಕ ಮುಂತಾದವರು ಲೀಲತ್ತಿಗೆಯನ್ನು ಕೂರಿಸಿಕೊಂಡು ಗುಸುಗುಸು ಎಂದು ಸಣ್ಣ ದನಿಯಲ್ಲಿ ಮಾತನಾಡುತ್ತಿದ್ದರು. ಪಕ್ಕದಲ್ಲೇ ಕೂತ ಅಮ್ಮನಿಗೂ ಕೇಳಬಾರದು ಎಂಬಂತೆ. ಇಡೀ ವಾತಾವರಣ ಸ್ವಲ್ಪ ಗಂಭೀರವಾಗಿತ್ತು.

‘ನಿನ್ನೆ ಜಾತ್ರೆಗೆ ಆ ದರಿದ್ರದವಳನ್ನು ಕಟ್ಟಿಕ್ಯಂಡೇ ಬೈನ್ನಪ ಪುಣ್ಯಾತ್ಮ’ ಎಂದು ಜಾನಕಕ್ಕ ಹೇಳಿದರೆ, “ಇಡೀ ಕೊಂಕಣಿಗರ ಕೇರಿಗೆ ಕೇರಿಯೇ ಬಂದ್ಹಾಂಗಿತ್ತು ಅವತ್ತು ದೇವರ ದರ್ಶನಕ್ಕೆ. ನೋಡವು ಆ ವೈಭವವ…” ಎಂದು ಕೈ ತಿರುಗಿಸಿ ಹೇಳಿದಳು ಸುಭದ್ರಕ್ಕ.  ‘ಏನು ಬಂತು ಹೇಳಿ ನಿನ್ನಪ್ಪಂಗೆ… ಬಂಗಾರದಂಥ ಮಕ್ಕಳನ್ನು ಬಿಟಗಂಡು ಹೀಂಗೆಲ್ಲ ಮಾಡತ್ನಲಾ. ಅವಳೆಂಥ ಮಾಟಗಾತಿ ಆಗಿಕ್ಕು ಹಂಗರೆ…’ ಎಲ್ಲ ಕೇಳಿಸಿಕೊಂಡ ಅತ್ತಿಗೆ ಮುಸುಮುಸು ಅಳುತ್ತಲೇ ಜೋರಾಗಿ ಅಡಕೆಯನ್ನು ಮೆಟಗತ್ತಿಗೆ ಕುಕ್ಕಿ ಕುಕ್ಕಿ ಸುಲಿಯುತ್ತಿದ್ದಳು.
ಚಂದ್ರಗಟಗಿ ಜಾತ್ರೆಯಲ್ಲಿ ನೋಡಿದ… ಹಾಗಿದ್ದಾಳೆ… ಹೀಗಿದ್ದಾಳೆಂದೆಲ್ಲ ವರ್ಣಿಸುವ ಆ ಹೆಂಗಸು ಯಾರು ಹಾಗಿದ್ದರೆ…? ಅದೂ ಅವಳ ಬಗ್ಗೆ ಗುಸುಗುಸು ಎಂದು ಏನೋ ಗುಟ್ಟು ಹೇಳುವ ರೀತಿ ಮಾತನಾಡುತ್ತಿದ್ದರೇ ಹೊರತೂ ಯಾರೊಬ್ಬರೂ ಜೋರಾಗಿ ಮಾತನಾಡುತ್ತಿರಲಿಲ್ಲ. ಅಷ್ಟು ಗುಟ್ಟಿನ ವಿಷಯವಾದ ಆ ಅವಳಿಗೂ ನಮ್ಮ ಮನೆಗೂ ಏನು ಸಂಬಂಧ? ಈ ಕುತೂಹಲಗಳು ಮೊಟ್ಟೆಯೊಡೆದು ಮರಿಗಳಾಗುತ್ತಿದ್ದವೇ ಹೊರತು, ಶಮನವಾಗುವ ಹಾದಿಯಿರಲಿಲ್ಲ.  ಇವೆಲ್ಲ ಘಟನೆ ನಡೆದ ನಂತರ ಮತ್ತೆ ಒಂದಿನ ಮಾವ ಮನೆಗೆ ಬಂದಾಗ ಅತ್ತೆ ಹೆಬ್ಬಾಗಿಲ ಕಟ್ಟೆಯ ಮೇಲೆ ಕುಳಿತಿದ್ದಳು.

ಅವತ್ತೂ ಕೂಡ ಹೀಗೇ ಸಂಜೆಯ ಹೊತ್ತು. ಅದೇ ಕಾಡು ಜಿರಲೆಯ ಜೀರ್ ಜೀರ್ ಶಬ್ದ. ಯಾವುದೋ ಅನಾಥ ಭಾವ ಮನಸಲ್ಲಿ ಹೊಕ್ಕಂತೆನಿಸುತ್ತಿತ್ತು ಈ ಶಬ್ದ ಕೇಳಿದರೆ. ಅತ್ತೆಯ ಬಾಯಲ್ಲಿ ಏನೇನೋ ಪದಗಳು.. ‘ಹಲ್ಕಟ್ ರಂಡೆ ತಂದು… ಬೋಸುಡಿ ತಂದು… ಎನ್ನ ಗಂಡನ್ನ ಕರಕಂಡು ಹೋಗತ್ಯನೇ.. ಬೋಸುಡಿ..’ ಹಿಂಗೆ ಕನ್ನಡದಲ್ಲಿ ಬೈಯ್ಯುತ್ತಿದ್ದವಳು ಏಕದಂ ಕೊಂಕಣಿಯಲ್ಲಿ ಮಾತನಾಡತೊಡಗಿದಳು. ಅಷ್ಟೊತ್ತಿಗೆ ಮಾವ ಎದುರಿಗೆ ಬಂದುಬಿಟ್ಟ. ಅವನನ್ನು ನೋಡಿದವಳೇ… ‘ಎನ್ನ ಭಾಷೆ ಈಗ್ಲಾದ್ರೂ ಅರ್ಥಾಗ್ತನೋ ನಿಂಗೆ…’ ಎಂದು ಜೋರಾಗಿ ಕಿರುಚುತ್ತ ಅವನ ಮುಂದೆ ನಿಂತು ಎತ್ತಿ ಹೊಡೆಯಲು ಹೋದಳು. ಮಾವ ‘ಏಯ್… ದುಗ್ಗೀ… ಹೋಗತ್ಲಾಗೆ’ ಎಂದು ಅವಳನ್ನು ದೂಡಿ, ಮನೆಯೊಳಗೆ ಹೋದವನು ಅದೇನು ಮಾಡಿದನೋ… ಅತ್ತಿಗೆಯ ಬಳಿ ಜೋರು ಜಗಳ ಮಾಡಿ, ಕೈಯ್ಯಲ್ಲಿ ಏನೋ ಹಿಡಿದುಕೊಂಡು ಧಡಧಡನೆ ಓಡಿದ. ‘ಅದು.. ಅದೂ… ಎನ್ನ ಅಮ್ಮಂದು, ಅವಳ ಅಪ್ಪನ ಮನೆಯಲ್ಲಿ ಕೊಟ್ಟ ಸರ’ ಎಂಬ ಅತ್ತಿಗೆಯ ಅಳುತುಂಬಿದ ಮಾತುಗಳು ಅವನ ಬೆನ್ನ ಹಿಂದೆಯೇ ಕರಗಿಯೇ ಹೋದವು. ಇಂಥ ದುಗ್ಗತ್ತೆ ಹೀಗೆ ಬಡಬಡಿಸುತ್ತಲೇ ಒಂದು ದಿನ ತೀರಿಹೋದಳು. ಸತ್ತು ಹೆಣವಾಗಿ ಬಿದ್ದವಳ ಮೇಲೆ ಬಿದ್ದು ಹೊರಳಾಡಿ ಅಳುತ್ತಿದ್ದರು ಅತ್ತಿಗೆಯರಿಬ್ಬರು. ಅಪ್ಪ ಗಂಭೀರವಾಗಿ ಕ್ರಿಯಾ ಕೆಲಸಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಅಮ್ಮನೂ ಅಳುತ್ತಿದ್ದಳು. ಅವರೆಲ್ಲ ಅಳುವುದು ನೋಡಿ ನನಗೂ ಅಳುಬರುತ್ತಿತ್ತು. ಮಾವ ಮಾತ್ರ ಕಾಣಿಸಲಿಲ್ಲ.

ಅಷ್ಟೆಲ್ಲ ಕಿರುಚುತ್ತಿದ್ದ ದುಗ್ಗತ್ತೆ ಈಗ ಮಾತೇ ಬಾರದವಳಂತೆ ಸುಮ್ಮನೆ ಮಲಗಿದ್ದಳು. ಈಗ್ಯಾಕೆ ಈ ಚೌಡಿ ಬರುತ್ತಿಲ್ಲ. ಈ ದುಗ್ಗತ್ತೆ ಹೀಗೆ ಸುಮ್ಮನಿರುವುದಕ್ಕಿಂತ ಕಿರುಚುತ್ತಿರುವುದೇ ಒಳ್ಳೆಯದಿತ್ತೇನೋ… ಎಂದೆಲ್ಲ ಅನಿಸುತ್ತಿತ್ತು. ಈ ಚೌಡಿ ಇನ್ನುಮುಂದೆ ಯಾರ ಮೈಮೇಲೆ ಬರುತ್ತಾಳೆ. ಅತ್ತಿಗೆ ಮೇಲಾ? ಭಾವಯ್ಯನ ಮೇಲಾ? ಅದು ಹೆಂಗಸರ ಮೈಮೇಲೆ ಮಾತ್ರವೇ ಬರುತ್ತದಾ? ಸಂಜೆ ಅಮ್ಮನ ಬಳಿ ಕೇಳಬೇಕು ಎಂದುಕೊಂಡವಳಿಗೆ ಯಾಕೋ ಅವತ್ತು ಮಾವನ ಮೇಲೆ ಇಲ್ಲದ ಸಿಟ್ಟು ಬಂತು. ಕಾಣದ ಆ ಹೆಂಗಸಿನ ಮೇಲೂ… ಇವನಿಂದ ತಾನೇ ಇಷ್ಟೆಲ್ಲ ಆಗಿದ್ದು? ಇವ ಮನೆಗೆ ಬಂದರೆ ತಾನೆ ದುಗ್ಗತ್ತೆಗೆ ಚೌಡಿ ಹಿಡಿದುಕೊಳ್ಳುತ್ತಿತ್ತು? ಅತ್ತಿಗೆ ಸಿಟ್ಟಿನಿಂದ ಜಗಳವಾಡುತ್ತಿದ್ದದ್ದು? ಈ ಚೌಡಿ ಯಾಕೆ ಮಾವನನ್ನೇ ಹಿಡಿದುಕೊಳ್ಳಬಾರದು? ಅವ ಯಾವತ್ತೂ ಮನೆಗೇ ಬಾರದಂತೆ ಯಾಕೆ ತಡೆಯಬಾರದು…? ಎಂಬ ಅನೇಕ ಪ್ರಶ್ನೆಗಳು ದುಗ್ಗತ್ತೆಯ ಹೆಣದ ಹಿಂದೆ ಹೋಗುತ್ತಿದ್ದಾಗ ಕಾಡುತ್ತಿದ್ದವು. ಇಷ್ಟೆಲ್ಲ ಪ್ರಶ್ನೆಗಳನ್ನು ಕೇಳಲು ಚೌಡಿ ಬರುತ್ತಿದ್ದ ಏಕೈಕ ಮಾರ್ಗವಾದ ದುಗ್ಗತ್ತೆ ಇನ್ನು ಮುಂದೆ ಇಲ್ಲ. ಇನ್ನು ಈ ಚೌಡಿ ಹತ್ತಿರ ಇದನ್ನೆಲ್ಲ ಹೇಳುವುದಾದರೂ ಹೇಗೆ..? ಹೀಗೆಲ್ಲ ಯೋಚಿಸುತ್ತಿರುವಾಗಲೇ ದುಗ್ಗತ್ತೆಯನ್ನು ಸುಡುತ್ತಿದ್ದ ಬೆಂಕಿ ಧಗಧಗಿಸುತ್ತ ಕಿಡಿಗಳೆಲ್ಲ ಸಿಡಿಯುತ್ತಿದ್ದವು. ಉರಿಯ ಕೆನ್ನಾಲಿಗೆ ಹೊರಚಾಚುತ್ತಿದ್ದವು.  ಇವೆಲ್ಲ ಆಗಿ, ಕೆಲವೇ ವರ್ಷಗಳ ನಂತರ ಆ ಊರನ್ನೂ ಬಿಡಬೇಕಾಗಿ ಬಂತು ನಮಗೆ. ಆಗಲೂ ಅದ್ಯಾಕೆ ಹಾಗೆ ಎಂಬುದು ನನಗೆ ಗೊತ್ತಿರಲಿಲ್ಲ. ಒಂದು ದಿನ ರಾತ್ರಿ ಊರು ಮಲಗಿರುವ ಹೊತ್ತಲ್ಲಿ, ಅಪ್ಪನ ಕೈಹಿಡಿದು ಲಾರಿ ಹತ್ತಿದ ನೆನಪು.
***
ಅದಾಗಿ ಎಷ್ಟೋ ವರ್ಷಗಳ ನಂತರ, ನಾವೆಲ್ಲ ದೊಡ್ಡವರಾಗಿ, ಶಾಲಾ-ಕಾಲೇಜುಗಳನ್ನು ಮುಗಿಸಿ, ಉದರನಿಮಿತ್ತ ಆ ಊರನ್ನೂ ಬಿಟ್ಟು, ಬೆಂಗಳೂರೆಂಬ ಮಾಯಾ ನಗರಿಯನ್ನು ತಲುಪಿದ ನಂತರವೂ, ನನಗೆ ಮದುವೆಯಾಗಿ, ಮಕ್ಕಳಾದಮೇಲೂ ಆ ಊರು ಮಾತ್ರ ಸದಾ ಕಾಡುತ್ತಿತ್ತು. ಇಲ್ಲಿ ಸರಸರನೆ ಸರಿದಾಡುವ ವಾಹನಗಳ ಶಬ್ದವನ್ನು ಮೂರು ಸಂಜೆಯ ಹೊತ್ತು ಕೇಳಿದಾಗಲೆಲ್ಲ ಊರಲ್ಲಿ ಕಾಡು ಜಿರಲೆ ಜೀರ್… ಜೀರ್.. ಎಂದು ಕೂಗುವ ಶಬ್ದದಂತೆಯೇ ಕೇಳಿದಂತಾಗಿ, ಅದರ ಹಿಂದೆಯೇ ದುಗ್ಗತ್ತೆ ನೆನಪಾಗಿ, ಅವಳ ನಡುಗುವ ಕೈಗಳು ಕಣ್ಣಿಗೆ ಕಟ್ಟಿದಂತೆನೆಸಿ, ಆಗ ಅನಿಸಿದ್ದು, ಹಾಗಿದ್ದರೆ ಜಾತ್ರೆಯಲ್ಲಿ ಮಾವನೊಂದಿಗೆ ಕಾಣಿಸಿಕೊಂಡ ಕೊಂಕಣಿ ಹೆಂಗಸಿಗೂ, ಹಾಲಿ ಹೇಳಿದ ಹೆಂಗಸಿಗೂ, ದುಗ್ಗತ್ತೆಯ ಮೈಮೇಲೆ ಬಂದ ಚೌಡಿ ಆಡುವ ಕೊಂಕಣಿ ಭಾಷೆಗೂ ಒಂದಕ್ಕೊಂದು ಸಂಬಂಧವಿತ್ತಾ? ದುಗ್ಗತ್ತೆಗೇನಾದರೂ ದೊಡ್ಡ ಕಾಯಿಲೆ ಇದ್ದು, ಚೀಟು, ದೆವ್ವ, ಬೂದಿ, ಮಂತ್ರ, ಚೌಡಿ ಎಂದೆಲ್ಲ ಹೇಳಿಯೇ, ಯಾವ ಔಷಧಿಯನ್ನೂ ಮಾಡದೇ ಪಾಪ… ಸತ್ತೇ ಹೋದಳಾ? ಹೀಗೆ ಚೀಟು, ಬೂದಿಗಳಲ್ಲಿ ಅದೆಷ್ಟು ಜೀವಗಳು ಜೀವ ಕಳೆದುಕೊಂಡಿವೆ? ಅದೆಷ್ಟು ಸಂಸಾರಗಳು ಅನಾಥವಾಗಿವೆ…? ಎಂಬ ಪ್ರಶ್ನೆಗಳೆಲ್ಲ ಬೆಂಗಳೂರಿನ ವೇಗವಾಗಿ ಓಡುವ ವಾಹನಗಳ ಶಬ್ದಗಳಡಿಯಲ್ಲಿ ಕಳೆದೇ ಹೋದವು…

(ಮುಂದುವರಿಯುವುದು)