ತೀರದಲ್ಲಿ ನಿಂತವಳು

ಕಡಲು ಉಕ್ಕಿ ಅಬ್ಬರಿಸಿ
ಶಾಂತವಾಯಿತು ಎಂಬುವುದೇ ಭ್ರಮೆ
ತೀರದ ಸಹಜ ಅವಳ ನೋಟ
ಆ ಮೌನ ಹಾಗಲ್ಲ
ಸಾವಿನ ಬಿಲದಲ್ಲಿರುವ
ಇಲಿಯ ಮೇಲೆ ಹದ್ದಿನ ಕಣ್ಣು
ಅದಕ್ಕೂ ಆಸೆ ಮತ್ತೇನಿಲ್ಲ

ಚಂಡಮಾರುತ ಕಡಲಿಗೋ
ಅಲೆಗಳಿಗೋ ತೀರಕೋ ಮರಳಿಗೋ
ಆ ಮನಕೊ ಬುದ್ದಿವಂತರು
ಇನ್ನೂ ನಿರ್ಧರಿಸಿಲ್ಲ

ಅವಳು ತೋಳುಗಳನ್ನು ಚಾಚಿ
ನಿಂತು ಬಿಟ್ಟಿದ್ದಾಳೆ
ಕಡಲನು ಮಡಿಚಿಟ್ಟುಬಿಡಲು
ಆದರೆ, ಸೂರ್ಯ
ಜೊತೆ ನೀಡುತ್ತಿಲ್ಲ

ಭಾವ ದಿಗಂಬರವಾಗಿ ಅಲೆಯುತ್ತಿರುವಾಗ
ಅಂಬರಕ್ಕೂ ಲಜ್ಜೆಯ
ಸೆರಗು ಸರಿಸುವ ಬಯಕೆ

ಭೂಮಿಯ ನಡುಕಕ್ಕೆ ಮಾತ್ರ
ಇಲ್ಲಿ ಅಳತೆ ಪ್ರಮಾಣ
ಮುತ್ತುಗಳ ಉತ್ಪಾದಕವೆನ್ನುವರೆ ಎಲ್ಲ
ಸ್ವಾತಿ ಮುತ್ತನ್ನು ಬಂಧಿಸಿದವ
ಎನ್ನುವವರಾರು
ಈ ಕಡಲಿಗೆ
ಅದಕ್ಕೆ ಅದರದೇ ಚೆಲ್ಲಾಟ
ಮತ್ತೇನಿಲ್ಲ

ಈಗ ಅವಳಿಗೂ ಇದೇ ಅಭ್ಯಾಸ
ಆಕಾಶ ನೋಡುವುದನ್ನು ಬಿಟ್ಟು
ಸಮುದ್ರದ ಮೇಲಷ್ಟೇ ಅವಳ ದೃಷ್ಟಿ
ಥೇಟ್ ತೀರದಲಿ ಬಾಗಿ ನಿಂತ
ತೆಂಗಿನ ಮರದಂತೆ

ಜಹಾನ್ ಆರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ
ಭಾವಜೀವ, ಹಂಗಿಲ್ಲದ ಹಾದಿ ಇವರ ಪ್ರಕಟಿತ ಕವನ ಸಂಕಲನಗಳು