ಬಡ ನಡುವನ್ನು ಬಳುಕಿಸುತ್ತಾ ಸುಕುಮಾರಿಯಂತೆ ಹರಿಯುವ ವರ್ಜಿನ್ ನದಿಗೆ ಆತುಕೊಂಡ ಕ್ಯಾಂಪ್ ಸೈಟ್ ಒಂದರಲ್ಲಿ ಮೊಕ್ಕಾಂ ಹೂಡಿದೆವು. ಸುತ್ತಲೂ ಕೆಂಪು ಕೆಂಪಾದ ಮರಳುಗಲ್ಲುಗಳಿಂದ ನಿರ್ಮಿತವಾಗಿರುವ ಸುಂದರ ಬೆಟ್ಟ ಗುಡ್ಡಗಳು. ಇನ್ನೂರ ಐವತ್ತು ಮಿಲಿಯನ್ ವರ್ಷಗಳ ಹಿಂದೆ ಮಟ್ಟಸವಾಗಿದ್ದ ಭೂಮಿಯ ಮೇಲೆ ಪದರ ಪದರವಾಗಿ ಜಮೆಯಾದ ಮಣ್ಣು ಮರಳುಗಳಿಂದ ಮುಗಿಲೆತ್ತರದ ಈ ದಿಣ್ಣೆಗಳು ನಿರ್ಮಾಣವಾದುದಂತೆ. ವಿದ್ಯುತ್ ಸಂಪರ್ಕವಿಲ್ಲದ ನಮ್ಮ ತಂಗುದಾಣದಲ್ಲಿ ಕತ್ತಲಾದ ಮೇಲೆ ಗೌ ಎನ್ನುವ ಕಗ್ಗತ್ತಲು. ಮಕ್ಕಳಿಗೆ ದೆವ್ವ ಭೂತಗಳ ಕಥೆ ಹೇಳಿಕೊಂಡು ಟಾರ್ಚು ಹಿಡಿದು ಓಡಾಡುವುದೇ ಒಂದು ಮೋಜಿನ ಕೆಲಸವಾಗಿತ್ತು.
ವಲಸೆ ಹಕ್ಕಿ ಬರೆದ ಪ್ರವಾಸ ಕಥನ

 

“ವಂಡೇ ಗುರು ಚರನಾರ ವಿಂಡೇ” ಯೋಗಿನಿ ಲಿಂಡಾಳ ದನಿಗೆ ದನಿಗೂಡಿಸುತ್ತಾ ನಮ್ಮ ಭಾನುವಾರದ ಅಷ್ಟಾಂಗ ಯೋಗದ ಅಭ್ಯಾಸ ಶುರು ಆಗುತ್ತದೆ.

ಇವಳ ಉಚ್ಛಾರಣೆ ಕೇಳಿ ‘ವನ್ ಡೇ’ ಯಾಕೆ ಈ ಸಂಡೆಯೇ ಗುರುವಿನ ಚರಣಗಳು ‘ವಿಂಡ್’ ನಲ್ಲಿ ಲೀನವಾದರೂ ಆಗಬಹುದೇನೋ!

ಪದ ಬಳಕೆ ಹೇಗಾದರೂ ಇರಲಿ ಯೋಗ ಕಲಿಸುವುದರಲ್ಲಿ ಮಾತ್ರ ಲಿಂಡಾಳದ್ದು ಎತ್ತಿದ ಕೈ. ಹೆಡೆ ಬಿಟ್ಟ ಹಾವು, ಒಂಟಿ ಕಾಲ ಕೊಕ್ಕರೆ, ಹಾರುವ ಕಾಗೆ ಮುಂತಾದ ಭಂಗಿಗಳಲ್ಲಿ ನಮ್ಮನ್ನು ಸರಸರನೆ ನಿಲ್ಲಿಸಿ ಕೂರಿಸಿ ಮೈ ಕೈ ತಿರುಗಿಸಿ ನೆಲ ಕಚ್ಚುವಂತೆ ಮಾಡುತ್ತಾಳೆ. ಉಸ್ಸಪ್ಪ ಅಂತ ಏಳಲಾರದೆ ಸುಧಾರಿಸಿಕೊಳ್ಳುತ್ತಿರುವಾಗ, ಸಮಯ ಸಾಧಕಿ ಲಿಂಡಾ ತನ್ನ ಭಾನುವಾರದ ಭಾಷಣ ಶುರು ಮಾಡುತ್ತಾಳೆ.

ಕುಂಡಲಿನಿ, ಯಿನ್-ಯಾಂಗ್, ಚಕ್ರ, ಪ್ರಾಣ ಅಂತೆಲ್ಲ ಪೂರ್ವ ದೇಶಗಳ ಕಲಸುಮೇಲೋಗರವನ್ನು ನಮ್ಮ ತಲೆಗೆ ತುಂಬುವುದು ಅವಳಿಗೆ ಬಲು ಪ್ರಿಯವಾದ ಕೆಲಸ. ಇದರ ಜೊತೆಗೆ, ಅವಳು ಸಾಕ್ಷೀಭೂತವಾಗಿ ಮಾತ್ರ ನಿಂತು ಶುದ್ಧ ಅರಿವಿನಿಂದ ಅನುಭವಿಸಿದ ‘ಜ಼ೆನ್’ ಕಥಾನಕಗಳು ಬೇರೆ! ಜ಼ೆನ್ ಕ್ಷಣಗಳನ್ನು ಅನುಭವಿಸಲು ವಿಷಯ-ವಿಷಯೀ ಎನ್ನುವ ಬೇಧಭಾವ ಸಂಪೂರ್ಣವಾಗಿ ನಾಶವಾಗಬೇಕಂತೆ. ಉದಾಹರಣೆಗೆ, ಒಂದು ಹೂವಿನ ಜೊತೆಗೆ ಜ಼ೆನ್ ಕ್ಷಣ ಅನುಭವಿಸಲು ಹೂವಿನ ಒಳಹೊಕ್ಕು ನಾವೇ ಹೂವಾಗಬೇಕಂತೆ! ಹೀಗೆ ಅವಳು ರೆಂಬೆ ಕೊಂಬೆ, ಹುಳು ಹುಪ್ಪಡಿಗಳ ಜೊತೆಗೆ ಕಾಲಕಾಲಕ್ಕೆ ತಾಧ್ಯಾತ್ಯ ಅನುಭವಿಸಿ ಧನ್ಯಳಾಗುತ್ತಾಳಂತೆ.

ಎದ್ದು ಹೋಗಲು ತ್ರಾಣವಿಲ್ಲದೆ ಕಾಟಾಚಾರಕ್ಕೆ ಕೇಳುತ್ತಿದ್ದ ಲಿಂಡಾಳ ಮಾತು ನಿಜವಿರಬಹುದೇನೋ ಅನ್ನಿಸಿದ್ದು ಯೂಟ ರಾಜ್ಯದ ಜ಼ಾಯನ್ ಕಣಿವೆಯಲ್ಲಿ, ಮುಗಿಲೆತ್ತರಕ್ಕೆ ಚಾಚಿರುವ ಬೃಹತ್ ಏಕಶಿಲೆಗಳ ಬೆಟ್ಟ ಗುಡ್ಡಗಳು ಧೀಂ ರಂಗ ಅನ್ನುವಂತೆ ದೃಷ್ಟಿ ಪಟಲವನ್ನು ಸಂಪೂರ್ಣವಾಗಿ ಆಕ್ರಮಿಸಿ ಸೆಡ್ಡು ಹೊಡೆಯುವಂತೆ ನಿಂತಾಗ.

ಬಡ ನಡುವನ್ನು ಬಳುಕಿಸುತ್ತಾ ಸುಕುಮಾರಿಯಂತೆ ಹರಿಯುವ ವರ್ಜಿನ್ ನದಿಗೆ ಆತುಕೊಂಡ ಕ್ಯಾಂಪ್ ಸೈಟ್ ಒಂದರಲ್ಲಿ ಮೊಕ್ಕಾಂ ಹೂಡಿದೆವು. ಸುತ್ತಲೂ ಕೆಂಪು ಕೆಂಪಾದ ಮರಳುಗಲ್ಲುಗಳಿಂದ ನಿರ್ಮಿತವಾಗಿರುವ ಸುಂದರ ಬೆಟ್ಟ ಗುಡ್ಡಗಳು. ಇನ್ನೂರ ಐವತ್ತು ಮಿಲಿಯನ್ ವರ್ಷಗಳ ಹಿಂದೆ ಮಟ್ಟಸವಾಗಿದ್ದ ಭೂಮಿಯ ಮೇಲೆ ಪದರ ಪದರವಾಗಿ ಜಮೆಯಾದ ಮಣ್ಣು ಮರಳುಗಳಿಂದ ಮುಗಿಲೆತ್ತರದ ಈ ದಿಣ್ಣೆಗಳು ನಿರ್ಮಾಣವಾದುದಂತೆ. ವಿದ್ಯುತ್ ಸಂಪರ್ಕವಿಲ್ಲದ ನಮ್ಮ ತಂಗುದಾಣದಲ್ಲಿ ಕತ್ತಲಾದ ಮೇಲೆ ಗೌ ಎನ್ನುವ ಕಗ್ಗತ್ತಲು. ಮಕ್ಕಳಿಗೆ ದೆವ್ವ ಭೂತಗಳ ಕಥೆ ಹೇಳಿಕೊಂಡು ಟಾರ್ಚು ಹಿಡಿದು ಓಡಾಡುವುದೇ ಒಂದು ಮೋಜಿನ ಕೆಲಸವಾಗಿತ್ತು. ಬೆಳಗೆಲ್ಲಾ ಜುಲೈ ತಿಂಗಳ ಚುರುಕು ಬಿಸಿಲು ಚಾರಣಿಗರಿಗೆ ಚನ್ನಾಗಿ ನೀರು ಕುಡಿಸುತ್ತಿತ್ತು.

******

ಕಿರಿಗೂರಿನ ಕಮರಿಯಲ್ಲಿ

ಒಂದು ದಿನ ಪೂರ್ತಿಯಾಗಿ ‘ನೇರೋಸ್’ ಎಂದು ಕರೆಯಲ್ಪಡುವ ಆಳ ಕಮರಿಯ ಚಾರಣಕ್ಕಾಗಿಯೇ ಮೀಸಲಿಟ್ಟೆವು. ಬೆಳ್ಳಂಬೆಳಗ್ಗೆಯೇ ಎದ್ದು ವಿಸಿಟರ್ ಸೆಂಟರ್ ನಿಂದ ಹೊರಡುವ ಶಟಲ್ ಹಿಡಿದು ‘ಟೆಂಪಲ್ ಆಫ್ ಸಿನವಾವ’ ಎನ್ನುವ ಸ್ಥಳಕ್ಕೆ ತಲುಪಿದೆವು. ಇಲ್ಲಿಂದ ಸೊಂಟದ ತನಕ ನೀರಿರುವ ವರ್ಜಿನ್ ನದಿಯಲ್ಲಿ ಹೈಕಿಂಗ್ ಪೋಲನ್ನು ಹಿಡಿದು ನಡೆಯಬೇಕು. ದಾರಿಯನ್ನೇ ನುಂಗಲು ಹೊಂಚು ಹಾಕಿರುವಂತಹ ದೈತ್ಯಾಕಾರದ ಬೆಟ್ಟಗಳ ಮಧ್ಯದ ಕಿರುದಾರಿಯಲ್ಲಿ ಆಯ ತಪ್ಪದಂತೆ ನಡೆಯುವುದು ಒಂದು ಸಾಹಸವೇ ಸರಿ. ಕಡಿದಾದ ಬಂಡೆಗಳಿಂದ ನಾಜೂಕಾಗಿ ಕೆಳಗಿಳಿವ ಝರಿಗಳು, ತೋರಣದಂತೆ ತೂಗಾಡುತ್ತಾ ಕೈ ಬೀಸುವ ಹಸಿರು ಬಳ್ಳಿಗಳು ಮುಂದೆ ಮುಂದೆ ಸಾಗುವಂತೆ ಹುರಿದುಂಬಿಸುತ್ತಿರುತ್ತವೆ. ಬೆಣಚು ಕಲ್ಲುಗಳಿಂದ ತುಂಬಿರುವ ನದಿಯಲ್ಲಿ ಹುಷಾರಾಗಿ ನಡೆಯುತ್ತಿದ್ದರೂ ಒಮ್ಮೆ ಬ್ಯಾಲೆನ್ಸ್ ತಪ್ಪಿ ವಾಲಾಡಿದೆ. ಕಾಲಿನ ಜೊತೆ ಬಾಯಿಯು ಜಾರಿ ಹಾಯ್ಕು ಪದ್ಯವೊಂದು ಹೊಮ್ಮಿತು.

ಒಡಲಿನಲ್ಲಿ
ಸೊರಗಿ ಜನಿಸಿತು
ನುಣುಪುಕಲ್ಲು

ಭಲಾ! ಭಲಾ! ಸಂಭ್ರಮದಿಂದ ಎಲ್ಲರ ಕಿವಿಗೆ ಕೇಳುವಂತೆ ಮತ್ತೊಮ್ಮೆ ಹೇಳಿದೆ. ತಪ್ಪು ಅಂದ ಮಗರಾಯ. ನಿನಗೆ ಅರ್ಥಆಯ್ತೆನೋ ಅನುಮಾನದಿಂದ ಕೇಳಿದೆ. ಹಾಯ್ಕುವಿನಲ್ಲಿ ೫-೭-೫ ಸಿಲ್ಲಬಲ್ಸ್ ಜೊತೆ ನೇಚರ್ ರೆಫರೆನ್ಸ್ ಕೂಡ ಇರಬೇಕು ಎಂದ. ಎಲಾ ಇವನ!

ಜ಼ೆನ್ ಕ್ಷಣವೊಂದರಲ್ಲಿ ನನ್ನ ನಾನು ಮರೆತು, ಕಲ್ಲಲ್ಲಿ ಕಲ್ಲಾಗಿ ರಚಿಸಿದ ಹಾಯ್ಕುವನ್ನು ಹೊಗಳುವುದನ್ನು ಬಿಟ್ಟು ಹುಳುಕು ಹುಡುಕ್ತಾಇದ್ದಾನೆ.

******

ಕೊಚ್ಚೆ ಹಾದಿಯಲ್ಲಿ ತ್ರಿವಳಿ ಪಚ್ಚೆ ತೊಟ್ಟಿಗಳು

ಉದ್ಯಾನವನದ ಒಳಗಿರುವ ಅಂಗಡಿಯಲ್ಲಿ ಕೊಂಡ ಐಸ್ ಕ್ರೀಮ್ ಮೆಲ್ಲುತ್ತಾ ಪಚ್ಚೆ ತೊಟ್ಟಿಗಳ ಹಾದಿ ಹಿಡಿದೆವು. ಒಂದು ತೊಟ್ಟಿಯಿಂದ ಇನ್ನೊಂದು ತೊಟ್ಟಿ ಇನ್ನೂರು ಅಡಿಗಳಷ್ಟು ಎತ್ತರದಲ್ಲಿದ್ದು ಒಟ್ಟು ಚಾರಣದ ಹಾದಿಯಾಗಿ ಸುಮಾರು ಎರಡು ಮೈಲು ಕ್ರಮಿಸುವುದಿತ್ತು. ಯಾವುದೇ ರೀತಿಯ ಏರು ತಗ್ಗುಗಳಿಲ್ಲದ ನೇರ ಹಾದಿಯದು. ಒಂದು ಅರ್ಧ ಮೈಲು ನಡೆಯುವಷ್ಟರಲ್ಲಿ ಹಾದಿಯ ಇಬ್ಬದಿಗಳಲ್ಲೂ ಮರ-ಗಿಡಗಳು ಹೆಚ್ಚಾಗಿ ವಾತಾವರಣ ಬಲು ಹಿತವಾಗಿತ್ತು. ಹತ್ತಿರದಲ್ಲೇ ಜುಳು ಜುಳು ಹರಿಯುವ ನದಿಯ ನಿನಾದ. ಆರಾಮವಾಗಿ ಮಾತು ಕತೆಯಾಡುತ್ತಾ ಕೆಳಮಟ್ಟದ ಎಮರಾಲ್ಡ್ ಪೂಲ್ ಬಳಿ ಬಂದದ್ದೇ ಗೊತ್ತಾಗಲಿಲ್ಲ.ಸಣ್ಣಗೆ ನಲ್ಲಿಯಲ್ಲಿ ನೀರು ಬರುವಂತೆ ಸುರಿವ ನೀರಿನ ಧಾರೆಯ ಕೆಳಗೆ ಪಚ್ಚೆ ಹೆಸರು ಹೊತ್ತು ಬಿಗುವ ಪುಟ್ಟ ಪಾಚಿ ತೊಟ್ಟಿ!

ಜ಼ೆನ್ ಕ್ಷಣಗಳನ್ನು ಅನುಭವಿಸಲು ವಿಷಯ-ವಿಷಯೀ ಎನ್ನುವ ಬೇಧಭಾವ ಸಂಪೂರ್ಣವಾಗಿ ನಾಶವಾಗಬೇಕಂತೆ. ಉದಾಹರಣೆಗೆ, ಒಂದು ಹೂವಿನ ಜೊತೆಗೆ ಜ಼ೆನ್ ಕ್ಷಣ ಅನುಭವಿಸಲು ಹೂವಿನ ಒಳಹೊಕ್ಕು ನಾವೇ ಹೂವಾಗಬೇಕಂತೆ! ಹೀಗೆ ಅವಳು ರೆಂಬೆ ಕೊಂಬೆ, ಹುಳು ಹುಪ್ಪಡಿಗಳ ಜೊತೆಗೆ ಕಾಲಕಾಲಕ್ಕೆ ತಾಧ್ಯಾತ್ಯ ಅನುಭವಿಸಿ ಧನ್ಯಳಾಗುತ್ತಾಳಂತೆ.

ಗಮ್ಯ ಸ್ಥಾನ ಸೇರುವ ಧಾವಂತವಿಲ್ಲದೆ ನಗು ನಗುತಾ ನಡೆದು ಬಂದಿದ್ದರಿಂದ, ಅಯ್ಯೋ ಇಷ್ಟೇನಾ ಎಂದು ಬೇಸರವಾಗಲಿಲ್ಲ. ಅಷ್ಟಲ್ಲದೇ ಮತ್ತೇ! “ಗುರಿಯಿಲ್ಲದಿರುವುದರಿಂದ ನಾನು ಎಂದಿಗೂ ಕಳೆದು ಹೋಗುವುದಿಲ್ಲ” ಎಂದು ಹದಿಮೂರನೆಯ ಶತಮಾನದ ಜ಼ೆನ್ ಮಾಸ್ಟರ್ ಇಕ್ಯೂ ಸುಖಾ ಸುಮ್ಮನೆ ಹೇಳಿರುವನೇ! ಜಲಪಾತದ ಬೆನ್ನಿಗಿರುವ ದಿಣ್ಣೆಯನ್ನು ನೀರು ಕೊರೆದು ಕೊರೆದು ಒಳಗಿನ ಖನಿಜಗಳ ನೀಲಿ ಮತ್ತು ಬೂದು ಬಣ್ಣಗಳ ಸುಂದರ ಸಂಯೋಜನೆಯನ್ನು ಎತ್ತಿ ತೋರಿಸುತ್ತಿತ್ತು. ಫೋಟೋ ಕ್ಲಿಕ್ಕಿಸುತ್ತಿರುವಾಗ ಮುನ್ಸೂಚನೆಯಿಲ್ಲದೆ ಗುಡುಗು ಮಿಂಚಿನ ಮುಂಗಾರು ಮಳೆ ಧಡ ಧಡ ಸುರಿಯತೊಡಗಿತು. ಇನ್ನು ಮುಂದಿನ ಮಜಲಿನ ತೊಟ್ಟಿಗಳೆಡೆ ಸಾಗುವ ಮಾತೇ ಇಲ್ಲ. ಬಂದ ದಾರಿಯಲ್ಲಿ ತಿರುಗಿ ಹೊರಟೆವು. ಗಿಡ ಮರಗಳೆಡೆಯಲಿ ನಿಲ್ಲುತ್ತಾ ನೆನೆಯುತ್ತಾ ಕೊಚ್ಚೆ ಹಾದಿಯಲಿ, ಮೈ ಕೈಯೆಲ್ಲ ಕೆಂಪು ಕೆಂಪು. ಮನವೆಲ್ಲಾ ತಂಪು ತಂಪು.

******

ಕಲ್ಲರಳಿ ಹೂವಾಗಿ

ಪಾರ್ಕಿನ ಒಳಗೆ ಸಿಗುವ ಸಪ್ಪೆಯೂಟ ಸಾಕಾಗಿ ನಾಲಿಗೆ ಉಪ್ಪು ಖಾರಗಳನ್ನು ಬಯಸುತ್ತಿತ್ತು. ಅದಲ್ಲದೆ ದಿನಂಪ್ರತಿ ನಡೆಸುತ್ತಿದ್ದ ಚಾರಣಗಳಿಂದ ಒಂದು ಬ್ರೇಕ್ ಬೇಕಾಗಿತ್ತು. ಜ಼ಾಯನ್ ಸರಹದ್ದಿನ ಪಕ್ಕವೇ ಇರುವ ಸ್ಪ್ರಿಂಗ್ ಡೇಲ್ ಕಡೆ ಹೊರೆಟೆವು. ಎರಡೇ ಬೀದಿಗಳಿರುವ ಪುಟ್ಟ ಊರು ಸ್ಪ್ರಿಂಗ್ ಡೇಲ್. ಮುಖ್ಯ ಬೀದಿಯಲ್ಲಿರುವ ಉತ್ತರ ಭಾರತದ ಖಾನಾವಳಿಯಲ್ಲಿ ಊಟ ಮಾಡಿ ಪ್ರವಾಸಿಗಳನ್ನು ಸೆಳೆಯುವ ಹರಳುಗಳ ಅಂಗಡಿಯೊಂದಕ್ಕೆ ಭೇಟಿಯಿತ್ತೆವು. ಯೂಟ ರಾಜ್ಯವು ಅನೇಕ ರೀತಿಯ ಕಲ್ಲು ಖನಿಜಗಳ ಆಗರ. ಅಮೆಥಿಸ್ಟ್, ಗಾರ್ನೆಟ್, ಟೋಪಾಜ್ ಮುಂತಾದ ಹೊಳೆ ಹೊಳೆವ ಅರೆ-ಪ್ರಶಸ್ತ ಶಿಲೆಗಳ ಜೊತೆ ಈ ಅಂಗಡಿಗಳಲ್ಲಿ ಉತ್ಖನನ ಮಾಡಿದ ವನ್ಯ ಜೀವನದ ಪಳಿಯುಳಿಕೆಗಳನ್ನು ಮಾರುತ್ತಾರೆ. ಕಲ್ಲೊಳಗೆ ಅರಳಿ ನಿಂತಂತಿದ್ದ ಹೂವಿನ ಪಳಿಯುಳಿಕೆಯೊಂದನ್ನು ನೋಡಿ ನಾಕು ತಂತಿಯ ಈ ಸಾಲುಗಳು ನೆನಪಾದವು.

ಕಲ್ಲರಳಿ ಹೂವಾಗಿ | ಕೆಮ್ಮಣ್ಣ ಮನೆ ತೊಳಗಿ
ನಮ್ಮ ನಿಮ್ಮನ್ನ ಬರ ಮಾಡಿ | ಮನಮನ
ಕಮ್ಮಗಿರಿಸ್ಯಾವ, ಕಲ್ಲರಳಿ

ಸುಣ್ಣದ ಕಲ್ಲಿನ ಮೂಲಕ ಲೌಕಿಕ, ಪೌರಾಣಿಕ, ಪಾರಮಾರ್ಥಿಕ ಅರ್ಥಗಳನ್ನೆಲ್ಲ ಹೇಳುವ ಬೇಂದ್ರೆಯವರ ತ್ರಿಪದಿ, ಹೂವಿನ ಪಳಿಯುಳಿಕೆಯ ಜೊತೆ ನನ್ನ ಚಿತ್ತ ಭಿತ್ತಿಯಲ್ಲಿ ಯಾಕೆ ಬೆಸುಗೆ ಹಾಕಿಕೊಂಡಿತೋ ನಾಕಾಣೆ! ಕಲ್ಲು, ಹೂವು, ಕೆಮ್ಮಣ್ಣುಗಳ ಸಹವಾಸ ಸಾಕು ಮಾಡಿ ಸಿಟಿಗೆ ಮರಳಿ ನನ್ನನ್ನು ಕಮ್ಮಗಿರಿಸು ಅರ್ಥಾತ್ ಆಹ್ಲಾದಗೊಳಿಸು ಎಂದು ನನ್ನ ಸುಪ್ತ ಮನಸ್ಸು ಕೊಟ್ಟ ಸೂಚನೆ ಇರಬಹುದೇ? ಯಾರಿಗೆ ಗೊತ್ತು!

ಕೇನ್ಯನೀರಿಂಗ್

ನೂರಾ ಐವತ್ತು ಸಾವಿರ ಎಕರೆಗಳ ಜ಼ಾಯನ್ ರಾಷ್ಟೀಯ ಉದ್ಯಾನವನ ಅಂತರಾಳದಲ್ಲಿ ಹುದುಗಿರುವ ಅನೇಕಾನೇಕ ತಿರುಚು ಮುರುಚಿನ ದಿಣ್ಣೆ ದಿಬ್ಬಣಗಳು, ಆಳ ಕೊರಕಲುಗಳು ನಮ್ಮಂತಹ ಹುಲು ಮಾನವರನ್ನು ಉಪೇಕ್ಷಿಸಿ, ಎಂಟೆದೆಯ ಭಂಟರನ್ನು ಕೈ ಬಿಸಿ ಕರೆಯಿತ್ತವೆ.

ಈಜು, ಹೆಬ್ಬಂಡೆಗಳಿಗೆ ಹಗ್ಗ ಕಟ್ಟಿ ಹತ್ತಿ ಇಳಿಯುವುದು, ಎತ್ತರದ ದಿಣ್ಣೆಗಳಿಂದ ಜಾರಿ ಇಳಿಯುವುದು ಮುಂತಾದವುಗಳಲ್ಲಿ ತರಬೇತಿ ಪಡೆದವರು ಪಾರ್ಕಿನಿಂದ ಪರ್ಮಿಟ್ ಪಡೆದು ಕೇನ್ಯನೀರಿಂಗ್ ಮಾಡಬಹುದು. ಜ಼ಾಯನ್ ನಲ್ಲಿ ಇದು ತುಂಬಾ ಜನಪ್ರಿಯವಾಗಿದ್ದು ತಿಂಗಳುಗಳ ಮುಂಚೆಯೇ ಜನರು ತಮ್ಮ ಪರ್ಮಿಟ್ ಕಾದಿರಿಸುತ್ತಾರಂತೆ.

ನಮ್ಮಕ್ಯಾಂಪ್ ಸೈಟಿನ ಪಕ್ಕ ಐಡಾಹೋನಿಂದ ಬಂದ ಸಂಸಾರವೊಂದು ಬಿಡಾರ ಹೂಡಿತ್ತು. ಇಪ್ಪತ್ತರ ಆಸುಪಾಸಿನ ಮೂರು ಮಕ್ಕಳ ಜೊತೆ ಬಲು ಫಿಟ್ ಆಗಿ ಕಾಣುತ್ತಿದ್ದ ಅಪ್ಪ. ಇವರೆಲ್ಲರೂ ಸಬ್ವೇ ಎಂದು ಕರೆಯಲ್ಪಡುವ, ಆಳ ಮಡುಗಳು, ದಿಣ್ಣೆಗಳು, ಕುರುಚುಲು ಪೊದೆಗಳು ತುಂಬಿರುವ ಹಾದಿಯಲ್ಲದ ಹಾದಿಯಲ್ಲಿ ದಿನ ಪೂರ್ತಿ ಕೇನ್ಯನೀರಿಂಗ್ ಮಾಡಲು ಬಂದಿದ್ದರು. ಅವರವರ ಭಕುತಿ!

ಏಂಜಲ್’ ಸ್ ಲ್ಯಾಂಡಿಂಗ್

ಮರುದಿನ, ಅಡ್ರೆನಲಿನ್ ವ್ಯಸನಿಗಳನ್ನು ಕೈ ಬೀಸಿ ಕರೆಯುವ, ಅಮೆರಿಕೆಯ ದುರ್ಗಮ ಚಾರಣಗಳಲ್ಲೊಂದಾದ ‘ಏಂಜಲ್’ಸ್ ಲ್ಯಾಂಡಿಂಗ್’ ನತ್ತ ಎಂದು ನಿರ್ಧಾರವಾಗಿತ್ತು. ಈ ಚಾರಣದ ಕಡೆಯ ಘಟ್ಟದಲ್ಲಂತೂ ಕಡಿದಾದ ದಿಣ್ಣೆಯ ಮೇಲೇರುತ್ತ, ಹೆಬ್ಬಂಡೆಗಳಿಗೆ ಕಟ್ಟಿರುವ ಸರಪಳಿ ಹಿಡಿಯಲಾರದೆ ಎಡವೇನಾದರೂ ಬಿದ್ದರೆ ಸಾವಿರಾರು ಅಡಿಗಳ ಪ್ರಪಾತದಲ್ಲೇ ಲ್ಯಾಂಡಿಂಗ್. ಹೀಗೆಲ್ಲಾ ಗೂಗಲ್ ಮಹಾಶಯ ತೆಗೆದು ಕೊಟ್ಟ ತಾಣಗಳಿಂದ ಮಾಹಿತಿ ಸಂಗ್ರಹಿಸಿ, ಹೈಕಿಂಗ್ ಶೂ, ಟೋಪಿಧಾರಿಗಳಾಗಿ ವೀರ ಯೋಧರಂತೆ ತಯಾರಾದೆವು. ಭದ್ರವಾದ ಸರಪಣಿಗಳು, ಆರಾಮವಾಗಿ ಚಪ್ಪಲಿಯಲ್ಲಿ ನಡೆವ ಜನರು, ಮಟ್ಟಸವಾದ ಚಪ್ಪಡಿಗಳು ಇವೆಲ್ಲಾ ನಾವು ಎದುರು ನೋಡುತ್ತಿದ್ದ ರೋಚಕತೆಯ ಮಟ್ಟವನ್ನು ಕಡಿಮೆ ಮಾಡಿ ಭ್ರಮನಿರಸನ ಉಂಟಾಯಿತು. ‘ಕ್ಲಿಫ್ ಹ್ಯಾಂಗರ್’ ಸಿನಿಮಾದ ಸಿಲ್ವಿಸ್ಟರ್ ಸ್ಟಲೊನ್ ನಂತೆ ನೇತಾಡಲು ತಯಾರಾಗಿದ್ದ ಮಕ್ಕಳು ಬೋರು ಬೋರು ಎಂದು ಕಿರಿಕಿರಿ ಶುರು ಮಾಡಿದರು. ೫-೬ ಘಂಟೆಗಳ ಕಷ್ಟಕರ ಚಾರಣ ಸಾಕು ಬೇಕಾಯಿತು.

ಮುಸಲ ಧಾರೆ
ಇಳಿಯಿತು ಡೊಂಕಾಗಿ
ಹಣೆ ಕೆಳಗೆ

ಎಂಬ ಹಾಯ್ಕುವಿನೊಂದಿಗೆ ನಮ್ಮ ಚಾರಣಕ್ಕೆ ಇತಿಶ್ರೀ ಹಾಡಿ ಕ್ಯಾಂಪ್ ಸೈಟಿಗೆ ಮರಳಿದೆವು. ರಾತ್ರಿ, ದೂರದಲ್ಲಿರುವ ಶೌಚಾಲಯಕ್ಕೆ ನಡೆದು ಹೋಗಲು ಶಕ್ತಿಯೇ ಇಲ್ಲ ಎಂದು ಗೊಣಗುತ್ತಿದ್ದವಳಿಗೆ ಆಗಸದಲ್ಲಿ ಹೊಳೆಯುತ್ತಿದ್ದ ಚಂದ್ರ ಹಾಗು ಪ್ಲಾಸ್ಟಿಕ್ ಲೋಟವನ್ನು ಸನ್ನೆಯಿಂದ ತೋರಿಸಿ ಪತಿದೇವ ಜ಼ೆನ್ ಬುದ್ಧನಂತೆ ಮುಗುಳ್ನಕ್ಕ.