ಒಮ್ಮೆ ಮನೆಯಲ್ಲಿ ಕಿಟಕಿಯ ಹೊರಗೆ ನೋಡುತ್ತ ಕುಳಿತಿದ್ದ ನನಗೆ ಆ ದೃಶ್ಯ ಕಂಡಿತ್ತು. ಮನೆಯ ಬೇಲಿಗೆ ಬಾಗಿ ನಿಂತ ಹಲಸಿನ ಮರದಲ್ಲಿ ಒಂದು ಹಣ್ಣಿನೆಡೆಯಿಂದ ಸಣ್ಣಗಿನ ತಲೆ ಆಗಾಗ ಇಣುಕಿದಂತೆ ಕಾಣುತ್ತಿತ್ತು. ಯಾವುದೋ ಹಾವು ಇರಬೇಕೇನೋ ಅಂದು ಕೊಂಡು ಸಾಕಷ್ಟು ಹತ್ತಿರ ಹೋದೆ. ನೋಡಿದರೆ ಹಣ್ಣಾಗಿದ್ದ ಹಲಸನ್ನು ಒಂದು ತೂತು ಮಾಡಿ, ಎರಡು ಅಳಿಲುಗಳು ತಿಂದು ಹಾಕಿ ಎರಡು ರಂಧ್ರಕೊರೆದು ಇಣುಕುತ್ತಿದ್ದವು. ಅವುಗಳ ಹಲ್ಲಿನ ಕಠಿಣತೆಗೆ ನಾನು ಬೆರಗಾಗಿದ್ದೆ. ಕತ್ತಿಯಿಲ್ಲದಿದ್ದರೆ ಹಲಸನ್ನು ತಿನ್ನಲಾಗದ ನಮ್ಮಂತಹ ಮನುಷ್ಯರು ಅವುಗಳ ಮುಂದೆ ನಿಜವಾಗಿಯೂ ಕೈಲಾಗದವರು.
ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥನ

 

ಏಪ್ರಿಲ್ ಮೇ ತಿಂಗಳಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಶುರುವಾಗುವುದಕ್ಕೇ ಮಾವಿನ ಮರಗಳು ಕಾಯುವುದಿರಬೇಕು. ಜಾತ್ರೆಗೆ ಹಾಕಿದ ಲೈಟಿನಂತೆ ಮೈತುಂಬಿ ನಿಂತ ಮಾಗಿದ ಹಣ್ಣುಗಳು ಎಂಥವನನ್ನೂ ಬಾಯಲ್ಲಿ ನೀರೂರಿಸದೇ ಬಿಡುವುದಿಲ್ಲ. ಮುಂಗಾರಿನ ಕೆಲವು ದಿನಗಳ ಮೊದಲೇ ಸಣ್ಣಗೆ ಗಾಳಿ ಬೀಸತೊಡಗುವುದು ಪ್ರಾಕೃತಿಕ ರೂಢಿ. ಆ ಗಾಳಿಯಲ್ಲಿ ಕಾಯಿಯು ಹಣ್ಣಾಗಿ ತೊಟ್ಟು ಕಳಚಿಕೊಳ್ಳಲು ಕಾಯುತ್ತಿರುವಂತೆ ಮಾವಿನ ಹಣ್ಣು ಹೆರಕಲು ಬರುವ ಯಾರಿಗೂ ಮರ ನಿರಾಶೆಯನ್ನುಂಟು ಮಾಡುವುದೇ ಇಲ್ಲ. ನನ್ನ ಪ್ರಕಾರ ಮಾವು ಹೆರಕುವುದು ಒಂದು ಕಲೆ. ಬೆಳಿಗ್ಗೆ ಪಿಳಿ ಪಿಳಿ ಕಣ್ಣು ಮಿಟುಕಿಸುವ ಹೊತ್ತಿಗೆ ಮನೆಯಲ್ಲಿನ ದೊಡ್ಡ ಪಾತ್ರೆ ಹಿಡಿದು, ಚಿಮಿಣಿ ದೀಪ ಹಿಡಿದುಕೊಂಡು ಮರದ ಬುಡಕ್ಕೆ ಹೊರಡುವ ನಮ್ಮಂತಹ ಹಲವು ಮಕ್ಕಳ ಮಧ್ಯೆ ಕೆಲವರಿಗಂತೂ ಬೆಕ್ಕಿನ ಕಣ್ಣು, ನಾಯಿಯ ಕಿವಿ. ತರಗಲೆ ಸಣ್ಣಗೆ ಅದುರಿದರೂ ಮರದಡಿ ಹಣ್ಣಿಗಾಗಿ ಕಾವಲು ಕಾಯಲು ಬಂದವರೆಲ್ಲರ ಗದ್ದಲಗಳ ಮಧ್ಯೆ ಅವರಿಗೆ ಕೇಳಿಸಿಕೊಳ್ಳುವುದೆಂದರೆ ಸುಲಭದ ಮಾತೇ. ತಮಾಷೆಯೆಂದರೆ ಕೆಲವೊಮ್ಮೆ ಯಾರಾದರೂ ಒಬ್ಬರೋ ಇಬ್ಬರೋ ಹಣ್ಣು ಹೆರಕಲು ಬಂದವರಿದ್ದರೆ ಮರೆಯಲ್ಲಿ ನಿಂತು ದೂರದಿಂದ ಮರಕ್ಕೆ ಕಲ್ಲೆಸೆಯುವುದು. ಕೆಲವರಂತೂ ಅದು ನಿಜ ಮಾವಿನ ಹಣ್ಣೆಂದು ಪರಿಭಾವಿಸಿ ಯರ್ರಾಬಿರ್ರಿ ಓಡುವುದೇನು, ಗಿಡಗಂಟಿಗಳನ್ನು ಸೋವುವುದೇನು. ಕೊನೆಗೆ ಏನೂ ಸಿಗದೇ ಇದ್ದಾಗ ಗಿಡಗಂಟಿಗಳ ಮರೆಯಿಂದ ಕಲ್ಲೆಸೆದವನ ಗಹಗಹಿಸುವ ನಗು. ಅಬ್ಬಬ್ಬಾ ಮತ್ತೆ ಒಂದು ತಿಂಗಳು ಆತನನ್ನು ರೇಜಿಗೆ ಹುಟ್ಟಿಸುವಷ್ಟು ಕಿಚಾಯಿಸುತ್ತಿದ್ದೆವು. ಕಲ್ಲು ಬಿದ್ದ ಕಡೆ ಓಡುವ ಅಷ್ಟೂ ಮಕ್ಕಳನ್ನು ತಮಾಷೆ ಮಾಡುವುದು ನಮಗೆ ನಿತ್ಯದ ಕೆಲಸ. ಈ ಮಧ್ಯೆ ಕೆಲವರಿಗಂತೂ ಪ್ರತಿಕಾರ ತೀರಿಸುವ ಚಾಳಿ. ಅವರು ಇವರನ್ನು ಪೇಚಿಗೆ ಸಿಲುಕಿಸಿದರೆ, ಮರುದಿನ ಇವನ ಸರದಿ. ಕರ್ಮ ಯಾವತ್ತೂ ತಿರುಗಿ ನಮ್ಮಲ್ಲಿಗೇ ತಲುಪುತ್ತದೆ ಅನ್ನುವುದಕ್ಕೆ ಇದಕ್ಕಿಂತ ಸ್ಪಷ್ಟ ನಿದರ್ಶನ ಬೇಕೆ?

ಆ ದಿನಗಳಲ್ಲಿ ನಮಗೆ ಮತ್ತೂ ಅಗ್ಗಕ್ಕೆ ಸೋಲಿಸಲು ಸಿಗುವ ಅಸ್ತ್ರವೆಂದರೆ “ಅಳಿಲು ಹೂಸು ಬಿಟ್ಟ” ಮಾವಿನ ಹಣ್ಣು. ಹಾಗೆಂದರೆ ನಿಮಗೆ ಅಚ್ಚರಿಯಾಗಬೇಕು. ಬಿಸಿಲಿಗೆ ಬಾಡಿ, ಪೌಷ್ಟಿಕಾಂಶ ಊನತೆಯಿಂದ ಜಗ್ಗಿ ಹೋದ ಹಣ್ಣಿನ ಭಾಗಗಳು ಕಂದು ಬಣ್ಣಕ್ಕೆ ತಿರುಗುವುದುಂಟು. ಅಂತಹ ಮಾವಿನ ಹಣ್ಣನ್ನು ನಮ್ಮ ಹಿರಿಯರು “ಅಳಿಲು ಹೂಸು ಬಿಟ್ಟಿದ್ದು” ಎಂದು ನಂಬಿಸಿದ್ದರು. ಅಂತಹ ಹಣ್ಣಿನ ಅರ್ಧವೋ, ಮುಕ್ಕಾಲು ಭಾಗವೋ ಸ್ವಸ್ಥವಾಗಿರುತ್ತದೆ. ಹೀಗೆ ಈ ಹಣ್ಣು ಸಿಕ್ಕರೆ ನಮಗೆ ಅತ್ಯಂತ ದೊಡ್ಡ ನಿರಾಶೆ, ಕ್ಷಣ ಮಾತ್ರದಲ್ಲೇ ವಕ್ರ ಚಿಂತನೆಯೊಂದು ಜೀವ ತಳೆಯುತ್ತಿತ್ತು. ಯಾರಾದರೂ ಮಾವು ಹೆರಕುತ್ತಿರುವುದು ಕಂಡರೆ, ದೂರದಿಂದ ಅಂತಹ ಹಣ್ಣನ್ನು ಮರದ ನೇರಕ್ಕೆ ಎಸೆಯುವುದು. ಬಿದ್ದ ಕೂಡಲೇ ಮಾವಿನ ಹಣ್ಣೆಂದು ಖುಷಿಯಿಂದ ಓಡಿ ಹೋಗಿ ಹೆಕ್ಕಿದವರು ಬಕ್ರಗಳಾಗುವುದು. ಥೇಟ್ ಈಗಿನ ಕೆಲವು ಮೀಡಿಯಾದವರು ಮಾಡುವಂತದ್ದೇ ಥರ್ಡ್ ಕ್ಲಾಸ್ ಕೆಲಸ. ವ್ಯತ್ಯಾಸ ಇಷ್ಟೇ, ನಾವು ಬುದ್ಧಿ ಬಾರದ ದಿನಗಳಲ್ಲಿ ಮಾಡುತ್ತಿದ್ದೆವು, ಅವರು ಪಕ್ವರಾದ ಮೇಲೂ ಮುಂದುವರೆಸಿದ್ದಾರೆ.

ಆಗಲೂ ನನಗೆ ಅಚ್ಚರಿಯಾಗಿ ಕಂಡಿದ್ದು ಅಳಿಲೇಕೆ ಹಣ್ಣಿಗೆ ಹೂಸು ಬಿಡಬೇಕು? ಅಷ್ಟು ಸಣ್ಣ ಅಳಿಲಿನ ವಾಯು ಹಣ್ಣುಗಳೇ ಹಾಳಾಗುವಷ್ಟು ಪರಿಣಾಮಕಾರಿಯೇ ಎಂಬುವುದು. ನಮ್ಮ ಮನೆಯ ಸ್ವಲ್ಪ ಕೆಳಗೆ “ಮಂಗಳೂರು ಮಾವು” ಎಂಬ ಕಾಡು ಮಾವಿನ ಮರವಿದೆ. ಇದು ಅದರ ಕನ್ನಡೀಕೃತ ಹೆಸರು, ನಿಜವಾಗಿ ಅದು “ಮೈಕಾಲ ಮಾವು” ಎಂಬ ಬ್ಯಾರಿ ಹೆಸರಿನಿಂದ ಕರೆಯುವುದು. ಒಮ್ಮೆ ಅಲ್ಲಿ ನಾನು ಮಾವು ಹೆರಕುತ್ತಿರಬೇಕಾದರೆ ಸಣ್ಣಗೆ “ಚೀಂ ಚೀಂ” ಎಂದು ಸದ್ದು ಕೇಳಿತು. ನಿರ್ಜನ ಕಾಡು, ಸುತ್ತ ಮುತ್ತ ಯಾರೊಬ್ಬರೂ ಮಾವಿನ ಹಣ್ಣು ಹೆಕ್ಕುವವರಿರಲಿಲ್ಲ. ನನಗೆ ಕುತೂಹಲ ಜೋರಾಯಿತು. ಮಾವಿನ ಮರದಡಿಯ ಅನತಿ ದೂರದಲ್ಲಿ ಒಂದು ಸಣ್ಣ ಕೊರಕಲಿದೆ, ಅತಿದೊಡ್ಡದೇನಲ್ಲ. ಆದರೆ ಅಲ್ಲೊಂದು ಹೆದರಿಕೆ ಇತ್ತು. ಆ ಕೊರಕಲಿನಲ್ಲೇ ಕಾಡು ಹಂದಿಗಳ ಆವಾಸ ಸ್ಥಾನವೆಂಬ ಪ್ರತೀತಿ. ನನಗೆ ಸ್ವಲ್ಪ ಭಯ ಹತ್ತಿತ್ತು. ನಾನು ಕಾಡು ಹಂದಿ ನೋಡಿದವನಲ್ಲ, ಅದರ ಮೇಲೆ ಹಿರಿಯರು ಹೆಣೆದ ಕಥೆಗಳು ನನ್ನನ್ನು ಇನ್ನಷ್ಟು ಭಯಕ್ಕೆ ತಳ್ಳಿದ್ದವು.

“ಚೀಂ ಚೀಂ” ಸದ್ದು ಹೆಚ್ಚಾದಂತೆ, ನಾನು ಭಯಮಿಶ್ರಿತ ಕುತೂಹಲದೊಂದಿಗೆ ಆ ಕೊರಕಲು ಗುಂಡಿ ಇಣುಕಲು ಹೊರಟೆ. ಸಣ್ಣಗೆ ಇಳಿಜಾರು ಇದ್ದದರಿಂದ ಹಂದಿಗಳು ಹೋಗಿ ಬಂದಲ್ಲೆಲ್ಲ ಗಿಡಗಂಟಿಗಳು ಜಜ್ಜಿ ಸಲೀಸು ದಾರಿಯಾಗಿದ್ದವು. ಹಂದಿಗಳೇ ಬಂದು ಹೋಗಿ ದಾರಿಯಾದದ್ದದೆಂದು ಯಾರು ಬಲ್ಲವರು. ನನ್ನ ಉದ್ವೇಗ ಈಗ ಕುತ್ತಿಗೆಗೆ ಬಂದಿತ್ತು. ಇನ್ನೇನು ಇಣುಕುವಷ್ಟರಲ್ಲೇ ಕಾಡು ಹಂದಿ ತೊಡೆ ಮುರಿದು ಹಾಕುತ್ತದೆಯೆಂಬುವುದನ್ನೇ ಕಲ್ಪಿಸಿಕೊಳ್ಳುತ್ತಾ ಕೊರಕಲು ಇಳಿಜಾರಿಳಿದೆ. ಈಗ ಆ ಪ್ರದೇಶ ಸರಿಯಾಗಿ ನನ್ನ ಕಣ್ಣಿಗೆ ಕಾಣುತ್ತಿತ್ತು. ಪುಣ್ಯಕ್ಕೆ ಯಾವ ಕಾಡು ಹಂದಿಯೂ ಅಲ್ಲಿ ಇರಲಿಲ್ಲ. ಅದರೆ ಯಾವುದೋ ಕಾಡು ಪ್ರಾಣಿ ಅಲ್ಲಿ ಇರುತ್ತಿದೆಯೆಂಬುವುದಕ್ಕೆ ಸ್ಪಷ್ಟ ನಿದರ್ಶನವಿತ್ತು. ಒಡೆದು ಹಾಕಿದ ತೆಂಗಿನ ಗೆರಟೆ, ತಿಂದು ಹಾಕಿದ ಮಾವಿನ ಹಣ್ಣಿನ ಬೀಜಗಳು. ನನಗೆ ಹಂದಿಯ ಹೆದರಿಕೆಯಲ್ಲಿ ಕೇಳಿಸಿದ್ದ ಸದ್ದು ಮರೆತೇ ಹೋಗಿತ್ತು. ಅಷ್ಟರಲ್ಲೇ ಅಲ್ಲೇ ಹತ್ತಿರದಲ್ಲಿ ಮತ್ತೆ “ಚೀಂ ಚೀಂ” ಎಂಬ ಸದ್ದು. ನಾನು ಸೂಕ್ಷ್ಮವಾಗಿ ನೋಡಿದೆ. ಎರಡು ಅಳಿಲುಗಳು ಉಗ್ರ ಕಾಳಗ ನಡೆಸುತ್ತಿವೆ. ಒಂದನ್ನೊಂದು ಕಚ್ಚಿ ಎಳೆಯುತ್ತಿದೆ. ಹತ್ತಿರದಲ್ಲೇ ಎರಡು ಮಾವಿನ ಹಣ್ಣಿದೆ. ನನಗೆ ಯಾಕೋ ಇವು ಹಣ್ಣಿನ ಮೇಲೆ ಹೂಸು ಬಿಟ್ಟಿತೋ ಎಂದು ಭಾವಿಸಿ ಗುಂಡಿಗಿಳಿದೆ. ಒಣ ಮರದ ಕೊರಡೊಂದಕ್ಕೆ ಕಾಲು ತಾಗಿ ಲಟ್ಟೆಂದು ಮುರಿಯಿತು. ಅಷ್ಟರಲ್ಲೇ ಕಾಡಿನ ನಿಶ್ಯಬ್ಧತೆ ಭಂಗವಾದುದರಿಂದ ಎರಡೂ ಅಳಿಲುಗಳು ಪರಾರಿ ಕಿತ್ತವು. ಒಂದು ಅರ್ಧ ತಿಂದ ಹಣ್ಣು. ಸೂಕ್ಷ್ಮವಾಗಿ ಪರಿಶೀಲಿಸಿದೆ. ಎಲ್ಲೂ ಬಾಡಿದ ಗುರುತಂತೂ ಕಾಣಲೇ ಇಲ್ಲ. ನನಗ್ಯಾಕೋ ಈ ಅಳಿಲು ಹೂಸು ಬಿಡುವುದು ಸುಳ್ಳೆಂಬುವುದು ಒಳ ಮನಸ್ಸು ಹೇಳುತ್ತಿತ್ತು. ಆ ಬಳಿಕ ಅಳಿಲು ಹೂಸು ಬಿಟ್ಟ ಹಣ್ಣಿನ ವಿಚಾರ ಬಂದರೆ ಒಳ ಮನಸ್ಸಿನಲ್ಲೇ ವಿರೋಧಿಸುತ್ತಿದ್ದೆ.

ನನಗೆ ಅಳಿಲೆಂದರೆ ಅಷ್ಟಕ್ಕಷ್ಟೆ. ಒಮ್ಮೆ ನನ್ನ ಗೆಳೆಯನೊಬ್ಬ ಯಾವುದೋ ಕಾಡಿನಲ್ಲಿ ಅಳಿಲೊಂದನ್ನು ಹಿಡಿದಿದ್ದ. ಅಳಿಲು ಸಾಕುತ್ತಿದ್ದೇನೆಂದು ಇಡೀ ಶಾಲೆಗೆ ಹೇಳಿದ್ದ. ನನಗೂ ಇದು ಕೇಳಿಸಿದ್ದರಿಂದ ಕುತೂಹಲ ತಡೆಯಲಾಗದೆ ಒಮ್ಮೆ ನೋಡಿಕೊಂಡು ಬರೋಣವೆಂದು ಹೊರಟೆ. ಅಂತೂ ಗೆಳೆಯನ ಮನೆಗೆ ಹೋದೆ. ಅಲ್ಲಿ ಒಂದು ರಟ್ಟಿನ ಪೆಟ್ಟಿಗೆಯೊಳಗೆ ಹಾಕಿ ಸಣ್ಣಗೆ ಉರುಳು ಹಾಕಿ ಅಳಿಲನ್ನು ಸಾಕಿದ್ದ. ಒಂದಷ್ಟು ಹಣ್ಣುಗಳನ್ನು ಅದರೊಳಗೆ ಇಟ್ಟಿದ್ದ. ಅದನ್ನಾವುದೂ ಅದು ಮುಟ್ಟಿದಂತೆ ಕಾಣಲಿಲ್ಲ. ಅದು ಚಿಂವ್ ಚೀಂವ್ ಅನ್ನುತ್ತಾ ಕಿಟಕಿಯ ಬಳಿ ಆಗಾಗ ಸುಳಿಯುತ್ತಿದ್ದಾಗ ನನಗಂತೂ ಖುಷಿಗೆ ಪಾರವಿರಲಿಲ್ಲ. ಅದು ಬಿಡುಗಡೆಗಾಗಿ ಪ್ರಾರ್ಥಿಸುತ್ತಿದೆಯೆಂಬುವುದು ನಮಗೆ ಅರ್ಥವಾಗಬೇಕಲ್ವಾ. ಮೆಲ್ಲಗೆ ಹೆದರಿಕೆಯಿಂದಲೇ ಅದರ ಬೆನ್ನೊಮ್ಮೆ ಸವರಿದೆ. ತುಪ್ಪಳ ತುಂಬಿದ ಅದರ ಬೆನ್ನು ಮುಟ್ಟಲು ಖುಷಿ ಕೊಡುತ್ತಿತ್ತು. ಬೆನ್ನಿನ ಮೇಲೆ ಮೂರು ಬಿಳಿ ಗೆರೆಗಳನ್ನು ಸರಿಯಾಗಿ ನೋಡಿದೆ. ಅಷ್ಟಕ್ಕೆ ಲಂಕೆಯ ಸೇತುವೆಗೆ ರಾಮನಿಗೆ ಮಾಡಿದ ಅಳಿಲು ಸೇವೆ ನೆನಪಿಗೆ ಬಂತು. ಪುರಾಣದ ಕಥೆಗಳಿಗೆ ನಾನು ಸ್ವಲ್ಪ ಹೆಚ್ಚೇ ಕಿವಿಯಾಗುತ್ತಿದ್ದರಿಂದ, ಅಳಿಲಿನ ಬೆನ್ನ ಮೇಲೆ ಕೃತಜ್ಞತೆಯ ಬೆನ್ನು ಸವರಿದ ಪೌರಾಣಿಕ ಕಥೆ ನೆನಪಾಯಿತು.

ತಮಾಷೆಯೆಂದರೆ ಕೆಲವೊಮ್ಮೆ ಯಾರಾದರೂ ಒಬ್ಬರೋ ಇಬ್ಬರೋ ಹಣ್ಣು ಹೆರಕಲು ಬಂದವರಿದ್ದರೆ ಮರೆಯಲ್ಲಿ ನಿಂತು ದೂರದಿಂದ ಮರಕ್ಕೆ ಕಲ್ಲೆಸೆಯುವುದು. ಕೆಲವರಂತೂ ಅದು ನಿಜ ಮಾವಿನ ಹಣ್ಣೆಂದು ಪರಿಭಾವಿಸಿ ಯರ್ರಾಬಿರ್ರಿ ಓಡುವುದೇನು, ಗಿಡಗಂಟಿಗಳನ್ನು ಸೋವುವುದೇನು. ಕೊನೆಗೆ ಏನೂ ಸಿಗದೇ ಇದ್ದಾಗ ಗಿಡಗಂಟಿಗಳ ಮರೆಯಿಂದ ಕಲ್ಲೆಸೆದವನ ಗಹಗಹಿಸುವ ನಗು. ಅಬ್ಬಬ್ಬಾ ಮತ್ತೆ ಒಂದು ತಿಂಗಳು ಆತನನ್ನು ರೇಜಿಗೆ ಹುಟ್ಟಿಸುವಷ್ಟು ಕಿಚಾಯಿಸುತ್ತಿದ್ದೆವು.

ಅಳಿಲಿನ ಮುಖ ಛಾಯೆ ಸ್ವಲ್ಪ ಇಲಿಗಳಂತೆಯೇ. ತುಂಬಾ ಚಟುವಟಿಕೆಯ ಚೀವಿಗಳಾದ್ದರಿಂದ ಅವುಗಳು ಮನುಷ್ಯನಿಗೆ ಮನೋರಂಜನಾ ಪ್ರಾಣಿಗಳಾಗಿ ಕಾಣುತ್ತವೆ. ಇದಾಗಿ ಮೂರು ದಿನಗಳ ತರುವಾಯ ಅಳಿಲು ಸಾಕುವ ಹುಡುಗ ಬಹಳ ಖಿನ್ನನಾಗಿ ಶಾಲೆಗೆ ಬಂದಿದ್ದ. ಏನಂಥ ಕೇಳಿದ್ದಕ್ಕೆ, “ಅಳಿಲು ಉಪವಾಸ ಸತ್ಯಗ್ರಾಹ ನಡೆಸಿ ಸತ್ತು ಹೋಯಿತು” ಎಂದು ಅಹವಾಲು ಹೇಳಿದ. ಕೆಲವರಂಥೂ “ಅದಕ್ಕೆ ಹೆಸರಿಡಬಾರದಿತ್ತು, ಅದಕ್ಕೆ ಸತ್ತು ಹೋಗುವುದು, ಸಾಕು ಪ್ರಾಣಿಗಳಿಗೆ ಹೆಸರಿಡಬಾರದಂತೆ” ಎಂದು ಮೂಢ ನಂಬಿಕೆಯ ಪಾಠ ಮಾಡಿದರು. ಹುಡುಗ ಅಳಿಲಿಗೆ ‘ಮಿನ್ನು’ ಅಂಥ ಹೆಸರಿಟ್ಟಿದ್ದ.

ಆ ಬಳಿಕ ಒಮ್ಮೆ ಮನೆಯಲ್ಲಿ ಕಿಟಕಿಯ ಹೊರಗೆ ನೋಡುತ್ತ ಕುಳಿತಿದ್ದ ನನಗೆ ಆ ದೃಶ್ಯ ಕಂಡಿತ್ತು. ಮನೆಯ ಬೇಲಿಗೆ ಬಾಗಿ ನಿಂತ ಹಲಸಿನ ಮರದಲ್ಲಿ ಒಂದು ಹಣ್ಣಿನೆಡೆಯಿಂದ ಸಣ್ಣಗಿನ ತಲೆ ಆಗಾಗ ಇಣುಕಿದಂತೆ ಕಾಣುತ್ತಿತ್ತು. ಯಾವುದೋ ಹಾವು ಇರಬೇಕೇನೋ ಅಂದು ಕೊಂಡು ಸಾಕಷ್ಟು ಹತ್ತಿರ ಹೋದೆ. ನೋಡಿದರೆ ಹಣ್ಣಾಗಿದ್ದ ಹಲಸನ್ನು ಒಂದು ತೂತು ಮಾಡಿ, ಎರಡು ಅಳಿಲುಗಳು ತಿಂದು ಹಾಕಿ ಎರಡು ರಂಧ್ರಕೊರೆದು ಇಣುಕುತ್ತಿದ್ದವು. ಅವುಗಳ ಹಲ್ಲಿನ ಕಠಿಣತೆಗೆ ನಾನು ಬೆರಗಾಗಿದ್ದೆ. ಕತ್ತಿಯಿಲ್ಲದಿದ್ದರೆ ಹಲಸನ್ನು ತಿನ್ನಲಾಗದ ನಮ್ಮಂತಹ ಮನುಷ್ಯರು ಅವುಗಳ ಮುಂದೆ ನಿಜವಾಗಿಯೂ ಕೈಲಾಗದವರು.

ಇದಾಗಿ ಸುಮಾರು ದಿನಗಳ ತರುವಾಯ ಒಮ್ಮೆ ಮನೆಯ ಹಿಂಭಾಗದಲ್ಲಿ ನಮ್ಮ ದನ ವಿಚಿತ್ರವಾಗಿ ವರ್ತಿಸಲಾರಂಭಿಸಿತು. ಅಮ್ಮನಿಗೆ ಅದರ ಪ್ರಸವ ವೇದನೆ ಗೊತ್ತಾಗಿರಬೇಕು. ಆಲದ ಮರದ ಬೇರಿಗೆ ಕಟ್ಟಿ ಹಾಕಿ ನೀರು, ಅಕ್ಕಚ್ಚು ತಂದಿರಿಸಿದರು. ನಾವು ಹತ್ತಿರ ಹೋಗುವಂತಿರಲಿಲ್ಲ. ಅಮ್ಮ ಯಾವುದೋ ಹುಲ್ಲು ಕಡಿದು ತಂದು ಹಾಕಿದರು. ದನ ವಿಚಿತ್ರವಾಗಿ ನರಳಾಡುತ್ತಾ ಹಿಂಗಾಲು ಸ್ವಲ್ಪ ಅಗಲವಾಗಿರಿಸಿತು. ನಿಂತೆ ಇದ್ದಂತೆ ಮೆಲ್ಲಗೆ ಸಣ್ಣ ಕರುವಿನ ಕಾಲುಗಳು ಕಾಣಿಸಿಕೊಂಡವು, ನಾವು ಎವೆಯಿಕ್ಕದೆ ನೋಡುತ್ತಿದ್ದೆವು. ಅಕ್ಕಂದಿರು, ಅಣ್ಣಂದಿರ ಜೊತೆ ನಾನು ದೂರ ನಿಂತು ನೋಡುತ್ತಿದ್ದೆ. ಹೊತ್ತು ಕಳೆಯಿತು, ಕರು ಸಂಪೂರ್ಣ ಹೊರ ಬಂತು. ನೆಲಕ್ಕೆ ಬಿತ್ತು. ದನ ಅದರ ಮೈ ಕೈ ನೆಕ್ಕ ತೊಡಗಿತು. ಉಸಿರು ಬಿಗಿ ಹಿಡಿದಿದ್ದ ಎಲ್ಲರ ಬಾಯಿಯಿಂದಲೂ “ಅಬ್ಬಾ” ಎಂಬ ಉದ್ಘಾರ ಬಂತು.

ಇದಾಗಿ ಎರಡು ದಿನ ಕಳೆದಿತ್ತು. ನಾನು ಆಗಾಗ ಹೋಗಿ ಕರು ಮತ್ತು ದನವನ್ನು ನೋಡಿ ಬರುತ್ತಿದ್ದೆ. ಕರುವನ್ನು ಮುಟ್ಟಲು ಪ್ರಯತ್ನಿಸುತ್ತಿದ್ದಂತೆ ದನ ಹಾಯಲು ಬರುತ್ತಿತ್ತು. ಆದಿನ ನಾನು ಅಣ್ಣ ದೂರದಿಂದ ದನ ನೋಡುತ್ತಾ ಮಾತಾನಾಡುತ್ತಿರಬೇಕಾದರೆ, ಅಲ್ಲೇ ಹತ್ತಿರದ ಮಾವಿನ ಮರದಲ್ಲಿ ಎರಡು ಅಳಿಲುಗಳು ಗಲಾಟೆಯೆಬ್ಬಿಸುತ್ತಿದ್ದವು. ಅಲ್ಲೇ ಬಿದ್ದಿದ್ದ ಸಣ್ಣ ಕೋಲೊಂದನ್ನು ಎತ್ತಿದ ಅಣ್ಣ ಗುರಿ ಹಿಡಿದು ಎಸೆದು ಬಿಟ್ಟ. ನೋಡ ನೋಡುತ್ತಿದ್ದಂತೆ ಕೋಲು ನೇರ ಹಾರಿ ಅಳಿಲಿನ ಮೇಲೆ ಬಿತ್ತು. ಅಷ್ಟರಲ್ಲೆ ಸಣ್ಣ ಅಳಿಲು ದೊಪ್ಪೆಂದು ತಲೆ ಕೆಳಾಗಾಗಿ ಬಿತ್ತು. ಇದೆಲ್ಲಾ ಮಿಂಚಿನಂತೆ ಗತಿಸಿತ್ತು. ನಾನು ಬಿದ್ದ ಅಳಿಲಿನ ಮರಿಯನ್ನು ಓಡಿ ಹೋಗಿ ಎತ್ತಿದೆ. ಅಷ್ಟರಲ್ಲೆ ತನ್ನ ಹಿಂಗಾಲಿನ ಉಗುರುಗಳಿಂದ ನನ್ನ ಕೈಯನ್ನೊಮ್ಮೆ ಗೀರಿ ಬಿಟ್ಟಿತು. ಕೈ ತಪ್ಪದಿರಲೆಂದೆ ಸ್ವಲ್ಪ ಸರಿಯಾಗಿ ಹಿಡಿಯುವಷ್ಟರಲ್ಲಿ ಎನ್ನೊಮ್ಮೆ ಗೀರಿತು. ನಾನು ತಕ್ಷಣ ಕೈ ಬಿಟ್ಟೆ. ಮರದಿಂದ ಬಿದ್ದು ಸ್ವಲ್ಪ ಗಾಯವಾಗಿರಬೇಕು, ಕೈಯಿಂದ ತಪ್ಪಿಸಿಕೊಂಡ ಅಳಿಲು ಹಿಂದೆ ಮುಂದೆ ನೋಡದೆ ಮರವೇರಿತು. ಮರವೇರಿದ ಮರುಕ್ಷಣ ಮರದಲ್ಲಿದ್ದ ಅಳಿಲಿಗೂ ಇದಕ್ಕೂ ಭೀಕರ ಯುದ್ಧವೇರ್ಪಟ್ಟಿತು, ಮೊದಲೇ ಗಾಯ ಗೊಂಡಿದ್ದ ಅಳಿಲಿಗೆ ಇನ್ನೊಂದು ಅಳಿಲು ಬಲವಾಗಿ ಕಚ್ಚಿತು. ಈಗ ಮೊದಲೇ ಬಿದ್ದಿದ್ದ ಅಳಿಲು ಆಯ ತಪ್ಪಿ ಮತ್ತೆ ದೊಪ್ಪೆಂದು ಮರದಿಂದ ಜಾರಿ ಕಲ್ಲ ಮೇಲೆ ಬಿತ್ತು. ಈ ಹೊತ್ತು ಸಣ್ಣಗೆ ಅಳಿಲಿನ ಬಾಯಿಯಲ್ಲಿ ರಕ್ತಸ್ರಾವ ವಾಗುತ್ತಿತ್ತು. ಅದು ಸಣ್ಣಗೆ ಕೊಸರಾಡುತ್ತಿತ್ತು. ಮೇಲಿದ್ದ ಅಳಿಲು ನೋಡುತ್ತಾ ಚೀಂವ್ಗುಟ್ಟುತ್ತಾ ಹಸಿರೆಲೆಗಳ ಮಧ್ಯೆ ಮರೆಯಾಯಿತು .

ನನ್ನ ಕೈ ನೋಡಿದೆ. ಎರಡು ಗೀರು ಗಾಯಗಳಲ್ಲಿ ಸಣ್ಣಗೆ ರಕ್ತ ಬರುತ್ತಿತ್ತು. ಅಣ್ಣ ಅಂಗಾತ ಬಿದ್ದ ಅಳಿಲನ್ನು ಎತ್ತಲು ನೋಡಿದ ಅವನ ಕೈಗೂ ಸಣ್ಣಗೆ ಉಗುರಿನಲ್ಲಿ ಗೀರೆಳೆಯಿತು. ಅಷ್ಟರಲ್ಲೆ ಉಮ್ಮ ಬಂದರು. ಅಳಿಲನ್ನೆತ್ತಿಕೊಂಡು ಬಂದು, ನಮ್ಮ ಅಂಗಳದಲ್ಲಿ ಮಲಗಿಸಿ ಬಕೆಟ್ಟು ಮುಚ್ಚಿ ಗರ ಗರ ಸದ್ದು ಬರುವಂತೆ ಬಕೆಟ್ಟನ್ನು ತಿರುಗಿಸಿ ಬಕೆಟಿನ ಸುತ್ತ ತೀಡಿದರು. ಹಾಗೆ ಮಾಡಿದರೆ ಅದು ಎಚ್ಚರಗೊಳ್ಳುವುದೆಂಬುವುದು ಅಮ್ಮನ ಪ್ರಯತ್ನ. ಆದರೆ ಪರಿಸ್ಥಿತಿ ಕೈ ಮೀರಿತ್ತು. ತಲೆಗೆ ತೀವ್ರ ಪೆಟ್ಟಾದ್ದರಿಂದ ಅಳಿಲು ಪ್ರಾಣ ಬಿಟ್ಟಿತ್ತು. ಅಲ್ಲೇ ಕೆಲಸ ಮಾಡುತ್ತಿದ್ದ ಅಂಗಜನನ್ನು ಕರೆದು “ಇದನ್ನು ಮಣ್ಣು ಮಾಡಿ ಬಿಡು, ಈ ಮಕ್ಕಳಿಗೆ ಪಾಪದ ಕಾಡು ಪ್ರಾಣಿಗಳಿಗೆ ಉಪದ್ರ ಕೊಡಬಾರದೆಂದು ಹೇಳಿದ್ರೂ ಅರ್ಥವಾಗುವುದಿಲ್ಲ” ಎಂದು ದಬಾಯಿಸಿದರು. ನನ್ನ ಕೈಗಳ ಗೀರು ಸಣ್ಣಗೆ ಉರಿಯುತ್ತಿತ್ತು. ಅಂಗಜ ಗುಂಡಿ ತೆಗೆದು ಅಳಿಲಿನ ಶವ ಅದರೊಳಗಿರಿಸಿದ. ಮಣ್ಣು ಹಾಕತೊಡಗಿದಂತೆ ಕಣ್ಣಲ್ಲಿ ಪಶ್ಚಾತಾಪದ ಹನಿಯೊಂದು ಜಿನುಗಿತು. ಆದರೂ ಒಮ್ಮೆ ಮರದಿಂದ ಬಿದ್ದ ಅಳಿಲಿಗೆ ಇನ್ನೊಂದು ಅಳಿಲೇಕೆ ಕಚ್ಚಿ ಕೆಳ ಹಾಕಿತೆಂಬುವುದೇ ಆಶ್ಚರ್ಯವಾಗುಳಿದಿತ್ತು.

ಇತ್ತೀಚೆಗೆ ತೇಜಸ್ವಿಯವರ ಪುಸ್ತಕದಲ್ಲಿ, ಮನುಷ್ಯನ ಜೊತೆ ಒಡನಾಡಿದ ಪ್ರಾಣಿಗಳನ್ನು ಅದೇ ಜಾತಿಯ ಪ್ರಾಣಿಗಳು ನಂಬುವುದಿಲ್ಲವೆಂದು ಓದಿದ್ದೆ. ಬಹುಶಃ ನಾನು ಕೈಯಿಂದ ಎತ್ತಿದ್ದರಿಂದಲೇ ಜಾತಿ ಕೆಟ್ಟಿತೆಂದು ತಿಳಿದು ಅದು ತನ್ನ ಜೊತೆ ಸೇರಿಸದೆ ಗಲಾಟೆಗಿಳಿದಿದ್ದು. ಮನುಷ್ಯನನ್ನು ಮನುಷ್ಯ ನಂಬದ ಕಾಲವಿದು. ಅಂಥದ್ದರಲ್ಲಿ ಪ್ರಾಣಿಗಳು ನಮ್ಮನ್ನು ನಂಬುವುದುಂಟೇ!