ಮುಗಿದ ಹಾಡಿನ ಖಾಲಿ ರಾಗ

ಮೊನ್ನೆ ನಮ್ಮ ಟೇಲರ್ ರಾಮ್ಸಾಮಿ ಸಿಕ್ಕರು
ನಮ್ಮೆಲ್ಲ ಬಟ್ಟೆಗಳನ್ನು ಹೊಲಿದವರು ಹೊಸ
ಕಾಲಕ್ಕೆ ನಮ್ಮನ್ನು ಅಣಿಗೊಳಿಸಿದವರು ಪ್ರತಿ
ಉಡುಗೆ ತೊಟ್ಟಾಗಲೂ ನಾವು ಹೊಸಬರು
ಹೊಸ ಕಾಲಕ್ಕೆ ತಕ್ಕ ಅಳತೆ, ಅಳತಗೆ ತಕ್ಕ
ಉಡುಗೆ, ಊರಿಗೆಲ್ಲ ಒಬ್ಬರೇ ರಾಮ್ಸಾಮಿ

ಊರು ಕುಣಿದಾಡಿತು ಹೊಸ ಫ್ಯಾಷನ್ನಿನಲ್ಲಿ
ಹರಯಕ್ಕೆ ಉಕ್ಕು, ಮುಪ್ಪಿಗೊಂದಿಷ್ಟು ಸುಕ್ಕು
ನಿನಗೆ ಇದೇ ಒಪ್ಪುತ್ತದೆ, ಬೇರೆಯದಕ್ಕೆ ಆಸೆ-
ಪಡಬೇಡ, ರಾಮ್ಸಾಮಿಯ ತತ್ವದ ಮಾತು

ಕಟಕಟ ಯಂತ್ರಕ್ಕೆ ಹಗಲು ರಾತ್ರಿಯ ಭೇದ
ಇರಲಿಲ್ಲ, ಹಬ್ಬವೆಂದರೆ ಅಬ್ಬರಿಸುವುದು, ಮತ್ತೆ
ಹುಣ್ಣಿಮೆಗೆ ಲಾಳಿಹಾಕಬೇಕು ರಾಮ್ಸಾಮಿ ಮನೆಗೆ
ಸಿಟ್ಟಿಲ್ಲ ಸೆಡವಿಲ್ಲ ನಗುನಗುತ್ತಲೇ ಅಲೆಸುವರು

ಊರು ರಾಮ್ಸಾಮಿಯ ಮಾತಿನ ಮೇಲೆಯೇ
ನಿಂತು ಉಡುತ್ತಿತ್ತು ತೊಡುತ್ತಿತ್ತು, ತೊಡಕೇ
ಇಲ್ಲ, ತಿರುಗುತ್ತಿತ್ತು ರಾಮ್ಸಾಮಿಯ ರಾಟೆಯ
ಚಕ್ರ ತಿರುಗಿದಂತೆ ಕಾಲಕ್ಕೆ ಕಾಲವನ್ನೇ ಕಡೆಗಣಿಸಿ

ಊರೂರುಗಳ ಸುತ್ತಿ, ದೇಶವಿದೇಶಗಳ ಅಲೆದು
ಮರಳಿ ಬಂದೆ ಮೊನ್ನೆ ಊರಿಗೆ, ರಾಮ್ಸಾಮಿ
ನೆನಪಾಗಿ ಸೀದ ಅಲ್ಲಿಗೇ ಹೋದೆ ಅವರ ಮನೆಗೆ
ಸದ್ದಿಲ್ಲ ಗದ್ದಲವಿಲ್ಲ ಹಳೆಯಕಾಲದ ಮನೆಯನ್ನು
ತುಂಬಿತ್ತು ಕತ್ತಲೆ, ರಾಟೆಯ ಸದ್ದೂ ಕೇಳಿಸಲಿಲ್ಲ

ಹೆಸರಿಡಿದು ಕರೆದರೆ ಬಂದರೊಬ್ಬರು ಮುದುಕರು
ಮುಖ ಸುಕ್ಕುಸುಕ್ಕು, ಮರೆವು ಮೈತುಂಬ, ಬಾಗಿಲಿಗೆ
ಬಂದು, ಹುಬ್ಬಿನ ಮೇಲೆ ಕೈ ಅಡ್ಡಹಿಡಿದು ಕೇಳಿದರು
‘ಯಾರು ನೀವು?’ ಬೆಪ್ಪಾದೆ ನಾನು, ‘ನಾನು ಯಾರು?’

ಹಳೆಯ ಅಳತೆಗೆ ಸಿಕ್ಕಲಿಲ್ಲ ನಾನು ಹೊಸಬ, ಮಬ್ಬು ಮಬ್ಬು
‘ಕಣ್ಣು ಮಕರು, ಆಪರೇಸನ್ ಮಾಡಿಸಬೇಕು’ ಎಂದರು;
ನನ್ನ ಗುರುತು ಹೇಳಿದಾಗ ನಕ್ಕ ಅವರ ಬೊಚ್ಚುಬಾಯಿಯ
ಅಳತೆ ಸಿಕ್ಕಲಿಲ್ಲ ನನಗೆ; ತೆರೆದ ಬಾಯಲ್ಲಿ ಗುಂಡಿಗಳೆಲ್ಲ
ಬಿದ್ದು ಖಾಲಿ ಕಾಜಾಗಳೇ ಉಳಿದ ರಾಮ್ಸಾಮಿ ನಮ್ಮೂರ
ಅಳತೆಯನ್ನೇ ತುದಿ ನಾಲಗೆಯಲ್ಲೇ ಉಳಿಸಿಕೊಂಡವರು

ಈಗ ಬೊಚ್ಚುಬಾಯಿಯ ಮುದುಕ, ಮುಗಿದ ಹಾಡಿನ ಖಾಲಿ
ರಾಗ, ನೆನಪುಗಳು ನುಗ್ಗಿ ಅಪ್ಪಿಕೊಂಡೆ ಬೆಚ್ಚಗಿನ ಎದೆಯಲ್ಲಿ

 

ಜಿಪಿ ಬಸವರಾಜು ಹೆಸರಾಂತ ಕತೆಗಾರರು, ಬರಹಗಾರರು
ಮೈಸೂರಿನಲ್ಲಿ ನೆಲೆಸಿದ್ದಾರೆ.
ಫ್ರೀಲಾನ್ಸ್ ಪತ್ರಕರ್ತರೂ ಆಗಿದ್ದಾರೆ