ಸದಾ ಮೇಲೆ ಅಲೆಯುತ್ತಿರುವ ಮೋಡ, ಕೆಳಗೆ ನೀರು ತುಂಬಿದ ಭೂಮಿ, ಬೀಳುವ ಸಮೃದ್ಧ ಮಳೆಯಿಂದಾಗಿ ದಟ್ಟವಾಗಿ ಬೆಳೆಯುವ ಕಾಡು ದೂರದಿಂದ ನೋಡಲು ರಮಣೀಯವೆನಿಸಿದರೂ ಅದರ ಸುತ್ತಲೂ ಜೀವನ ಕಟ್ಟಿಕೊಳ್ಳಲು ಕಠಿಣ ಸವಾಲೊಡ್ಡುತ್ತದೆ. ಆದರೆ ಮಾನವನ ಜೀವನ ಮಾಡುವ ತುಡಿತ ಎಂತಹ ಪ್ರಕೃತಿ ಸವಾಲುಗಳನ್ನೂ ಮೀರುತ್ತದೆ ಎನ್ನುವುದಕ್ಕೆ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಖಾಸಿ ಜನಾಂಗವೇ ಸಾಕ್ಷಿ. ಖಾಸಿಗಳ ಭಾಷೆ ಖಾಸಿ, ವಾಸಿಸುವ ಬೆಟ್ಟ ಖಾಸಿ. ಹಾಗಾಗಿ ಇವರ ಈ ನಾಡನ್ನು ಅವರು ತಮ್ಮದೇ ಭಾಷೆಯಲ್ಲಿ ‘ರಿ ಖಾಸಿ’ ಎನ್ನುತ್ತಾರೆ. ರಿ ಎಂದರೆ ದೇಶ ಅಥವಾ ನಾಡು ಎಂದರ್ಥ.
ಮೇಘಾಲಯದ ಪ್ರಸಿದ್ಧ “ಜೀವಂತ ಬೇರುಗಳ ಸೇತುವೆ”ಯ ಕುರಿತು ಪ್ರವಾಸ ಬರಹವನ್ನು ಬರೆದಿದ್ದಾರೆ ದೇವೇಂದ್ರ ಅಬ್ಬಿಗೇರಿ

 

ಶಿಲ್ಲೊಂಗನಿಂದ ಸುಮಾರು ೫೦ ಕಿಲೋ ಮೀಟರ್ ದಕ್ಷಿಣಕ್ಕೆ ಹೋದರೆ ಚೀರಾಪುಂಜಿ ಊರು ಸಿಗುತ್ತದೆ. ಚೀರಾಪುಂಜಿಯ ಸುತ್ತಮುತ್ತಲಿನ ಪ್ರದೇಶವನ್ನು ಸ್ಥಳೀಯ ಭಾಷೆಯಲ್ಲಿ ಸೋಹ್ರ ಎಂದು ಕರೆಯುತ್ತಾರೆ. ಮೊದಲಿಗೆ ಚೀರಾಪುಂಜಿ ಊರು ಅತಿ ಹೆಚ್ಚು ಮಳೆ ಪಡೆಯುತಿತ್ತು. ಇತ್ತಿಚೀಗೆ ಚೀರಾಪುಂಜಿಯಿಂದ ಹತ್ತಿರದಲ್ಲೇ ಇರುವ ಮಾವಸಿನ್ ರಾಮ್ ಅತಿ ಹೆಚ್ಚು ಮಳೆ ಪಡೆಯುವ ಊರಾಗಿದೆ.

(ಬೇರುಗಳ ಹೆಣಿಗೆ)

ಸೋಹ್ರ ಇರುವುದು ಮೆಘಾಲಯ – ಬಾಂಗ್ಲಾದೇಶ ಗಡಿಗೆ ಹಚ್ಚಿ. ಬಾಂಗ್ಲಾದೇಶದ ಸಮತಟ್ಟಾದ ಬಯಲು ಸೀಮೆಯಿಂದ ಒಮ್ಮೆಗೆ ಖಾಸಿ ಬೆಟ್ಟಗಳು ಪ್ರಾರಂಭವಾಗುತ್ತವೆ. ಸಮುದ್ರ ಮಟ್ಟದಿಂದ ಎತ್ತರ ಒಮ್ಮೆಗೆ ೪೦೦೦- ೬೦೦೦ ಫೂಟುಗಳು ಆಗುತ್ತದೆ. ಬಂಗಾಳ ಕೊಲ್ಲಿ ಸಮುದ್ರದಿಂದ ನೀರಿನಂಶವನ್ನು ಹೊತ್ತು ತರುವ ಮೋಡಗಳಿಗೆ ಧಿಡಿರನೆ ಎದುರಾಗುವ ಖಾಸಿ ಬೆಟ್ಟಗಳು ಅವುಗಳು ಕರಗಿ ಹನಿಯಾಗುವಂತೆ ಮಾಡುತ್ತವೆ. ಹಾಗಾಗಿ ಈ ಪ್ರದೇಶ ಅತಿ ಹೆಚ್ಚು ಮಳೆ ಪಡೆಯುತ್ತದೆ. ಹಾಗಂತ ನೀವು ನವೆಂಬರ್ ನಿಂದ ಏಪ್ರಿಲ್ ತಿಂಗಳುಗಳ ನಡುವೆ ಮಳೆಯ ಅನುಭವ ಪಡೆಯಲು ಹೋದರೆ ಮೋಸ ಹೋಗುತ್ತೀರಿ. ಈ ತಿಂಗಳುಗಳಲ್ಲಿ ಮಳೆಯಾಗುತ್ತದೆಯಾದರು ಅದು ಮೇ ದಿಂದ ಅಕ್ಟೋಬರ್ ವರೆಗಿನ ಮಳೆಗಾಲದ ಸಮಯದಲ್ಲಿ ಆಗುವಸ್ಟು ಆಗುವುದಿಲ್ಲ.

ಇಷ್ಟು ಮಳೆ ಬೀಳುತ್ತಿರಬೇಕಾದರೆ ಬಹಳ ನೀರು ಬೆಟ್ಟದಿಂದ ಧುಮುಕುತ್ತಿರಬೇಕಲ್ಲ ಎಂದು ಊಹಿಸುತ್ತಿರಬೇಕು, ನಿಮ್ಮ ಊಹೆ ನಿಜ. ಶಿಲ್ಲಾಂಗ್ ನಿಂದ ಸೋಹ್ರದವೆರೆಗೆ ಬಹಳಷ್ಟು ರಮಣೀಯ ಜಲಪಾತಗಳು ಕಾಣ ಸಿಗುತ್ತವೆ. ಇಡೀ ಭಾರತದಲ್ಲೇ ನಗರದ ಮಧ್ಯೆ ಜಲಪಾತಗಳಿರುವ ರಾಜಧಾನಿ ಶಿಲ್ಲಾಂಗ್ ಒಂದೇ ಇರಬೇಕು. ಬ್ರಿಟಿಶ್ ಮಹಿಳೆಯರು ತೊಡುವ ಸ್ಕರ್ಟ್ ನ್ನು ಕ್ರಿನೋಲಿನ್ ಎನ್ನುತ್ತಾರೆ. ಅದೇ ಆಕಾರದಲ್ಲಿ ನೀರು ಧುಮ್ಮಿಕ್ಕುವ ಕ್ರಿನೋಲಿನ್ ಜಲಪಾತ ಹಾಗು ಈಗಲ್ ಜಲಪಾತ ಶಿಲ್ಲಾಂಗ್ ನ ಮಧ್ಯ ಭಾಗದಲ್ಲೇ ಇವೆ. ಎಲಿಫೆಂಟ್ ಫಾಲ್ಸ್, ಸ್ವೀಟ್ ಫಾಲ್ಸ್ ಶಿಲ್ಲಾಂಗ್ ನ ಹೊರಭಾಗದಲ್ಲೇ ಇವೆ. ಇನ್ನೂ ಶಿಲ್ಲಾಂಗ್ ಬಿಟ್ಟು ಸೋಹ್ರ ಕಡೆಗೆ ನಡೆದರೆ ಬಹಳಷ್ಟು ಜಲಧಾರೆಗಳು ಸಿಗುತ್ತವೆ. ವಾ ಕಾಬಾ, ಡೆನ್ ತ್ಲೆನ್, ನೋಖಾಲಿಕೈ, ಕಿನ್ರೆಮ್, ಸೆವೆನ್ ಸಿಸ್ಟರ್ಸ್ ಫಾಲ್ಸ್, ಕ್ರಾಂಗ್ ಸುರಿ ಹಾಗು ಹೆಸರೇ ಇರದ ಅನೇಕ ಜಲಧಾರೆಗಳು. ಪ್ರತಿ ಜಲಪಾತಗಳ ಹಿಂದೆ ಕುತೂಹಲಕಾರಿಯಾದ ಜನಪದ ಕತೆಗಳಿವೆ.

(ಬೇರುಗಳ ಹೆಣಿಗೆ)

ಹೀಗೆ ಸದಾ ಮೇಲೆ ಅಲೆಯುತ್ತಿರುವ ಮೋಡ, ಕೆಳಗೆ ನೀರು ತುಂಬಿದ ಭೂಮಿ, ಬೀಳುವ ಸಮೃದ್ಧ ಮಳೆಯಿಂದಾಗಿ ದಟ್ಟವಾಗಿ ಬೆಳೆಯುವ ಕಾಡು ದೂರದಿಂದ ನೋಡಲು ರಮಣೀಯವೆನಿಸಿದರೂ ಅದರ ಸುತ್ತಲೂ ಜೀವನ ಕಟ್ಟಿಕೊಳ್ಳಲು ಕಠಿಣ ಸವಾಲೊಡ್ಡುತ್ತದೆ. ಆದರೆ ಮಾನವನ ಜೀವನ ಮಾಡುವ ತುಡಿತ ಎಂತಹ ಪ್ರಕೃತಿ ಸವಾಲುಗಳನ್ನೂ ಮೀರುತ್ತದೆ ಎನ್ನುವುದಕ್ಕೆ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಖಾಸಿ ಜನಾಂಗವೇ ಸಾಕ್ಷಿ. ಖಾಸಿಗಳ ಭಾಷೆ ಖಾಸಿ, ವಾಸಿಸುವ ಬೆಟ್ಟ ಖಾಸಿ. ಹಾಗಾಗಿ ಇವರ ಈ ನಾಡನ್ನು ಅವರು ತಮ್ಮದೇ ಭಾಷೆಯಲ್ಲಿ ‘ರಿ ಖಾಸಿ’ ಎನ್ನುತ್ತಾರೆ. ರಿ ಎಂದರೆ ದೇಶ ಅಥವಾ ನಾಡು ಎಂದರ್ಥ.

ಪ್ರಕೃತಿಯು ತಂದೊಡ್ಡುವ ಕಷ್ಟಗಳ ಜೊತೆ ಬದುಕಬೇಕೆಂದರೆ ಅದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಕೊಂಡು ಅದರ ಮೇಲೆ ವಿಜಯ ಸಾಧಿಸ ಹೊರಟರೆ ಆ ಜಯದ ಸುಖ ಕ್ಷಣಿಕ. ಅಣುವಿನ ಶಕ್ತಿಯನ್ನು ಕಂಡುಹಿಡಿದು ಅದನ್ನು ಮಾನವ ಜನಾಂಗದ ಏಳ್ಗೆಗಾಗಿ ಬಳಸುವ ಬದಲು ಇಂದು ಅದು ಮಾನವ ಜನಾಂಗವನ್ನೇ ಭಯದ ಮುಷ್ಟಿಯಲ್ಲಿ ಬಿಗಿ ಹಿಡಿದಿದೆ. ವಿಜಯ ಸಾಧಿಸುವ ಬದಲು ಅದರ ಜೊತೆ ಸಾಮರಸ್ಯ ಸಾಧಿಸಿದರೆ ಮಾನವ ಹಾಗು ಪ್ರಕೃತಿ ಇಬ್ಬರಿಗೂ ಒಳ್ಳೆಯದೆ. ಆದರೆ ಈ ಸಾಮರಸ್ಯ ಸಾಧಿಸಲು ಸಮಯ ಹಿಡಿಯಬಹುದಾದರೂ ಅದರ ಫಲ ಮಾತ್ರ ಅಮೂಲ್ಯ. ಖಾಸಿಗಳ ಜೀವನ ಶೈಲಿಯನ್ನು ನೋಡಿದರೆ ಅವರು ಶತಮಾನಗಳ ಸಮಯ ತೆಗೆದುಕೊಂಡು ಮಳೆಯೊಂದಿಗೆ ಜೀವನ ಮಾಡುವುದನ್ನು ಕರಗತಮಾಡಿಕೊಂಡಿದ್ದಾರೆ ಅನ್ನುವುದು ಗೊತ್ತಾಗುತ್ತದೆ. ಖಾಸಿಗಳ ಇತಿಹಾಸದ ಬಗ್ಗೆ ನಿಖರವಾದ ಮಾಹಿತಿಗಳಿಲ್ಲ. ಸಾಂಸ್ಕೃತಿಕ ಪುರಾವೆಗಳ ಮೂಲಕ ಇವರು ಕಾಂಬೋಡಿಯ ದೇಶದಿದಂದ ಬಂದಿರಬಹುದೆಂದು ಶಂಕೆ. ಅವರು ಬಂದಿರಬಹುದಾದ ಕಾಲದ ಬಗ್ಗೆ ಕೂಡ ಮಾಹಿತಿಯಿಲ್ಲ.

(ನಾಂಗ್ರಿಯಾಟ್ ಹಳ್ಳಿಗೆ ಹೋಗುವ ದಾರಿಯಲ್ಲಿ ಕಾಣುವ ತೊರೆ)

ಶಿಲ್ಲಾಂಗ್ ಬಿಟ್ಟು ಸೋಹ್ರ ಕಡೆಗೆ ನಡೆದರೆ ಬಹಳಷ್ಟು ಜಲಧಾರೆಗಳು ಸಿಗುತ್ತವೆ. ವಾ ಕಾಬಾ, ಡೆನ್ ತ್ಲೆನ್, ನೋಖಾಲಿಕೈ, ಕಿನ್ರೆಮ್, ಸೆವೆನ್ ಸಿಸ್ಟರ್ಸ್ ಫಾಲ್ಸ್, ಕ್ರಾಂಗ್ ಸುರಿ ಹಾಗು ಹೆಸರೇ ಇರದ ಅನೇಕ ಜಲಧಾರೆಗಳು. ಪ್ರತಿ ಜಲಪಾತಗಳ ಹಿಂದೆ ಕುತೂಹಲಕಾರಿಯಾದ ಜನಪದ ಕತೆಗಳಿವೆ.

ಕಾಲಿಟ್ಟರೆ ಜಾರುವ ಈ ನೆಲದಲ್ಲಿ ಬದುಕನ್ನು ಕಟ್ಟಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಖಾಸಿಗಳು ಮನೆಗಳನ್ನು ಗುಡ್ಡದ ತುದಿಯ ಮೇಲೆ ಕಟ್ಟುತ್ತಾರೆ. ಒಂದು ಊರಿನಿಂದ ಇನ್ನೊಂದು ಊರಿಗೆ ಈ ದುರ್ಗಮ ಮಳೆ ಬೀಡಿನಲ್ಲಿ ಹೋಗುವುದು ಅಷ್ಟು ಸುಲಭವಾಗಿರಲಿಲ್ಲ. ಅಕ್ಟೋಬರ್ ನಿಂದ ಫೆಬ್ರವರಿವರೆಗೆ ಅಷ್ಟಾಗಿ ಮಳೆ ಇಲ್ಲದೆ ಇರುವುದರಿಂದ ನೀರಿನ ತೊರೆಗಳು ರಭಸವಾಗಿ ಹರಿಯುತ್ತಿರುವುದಿಲ್ಲ. ಈ ಸಮಯದಲ್ಲಿ ಅವುಗಳನ್ನು ದಾಟುವುದು ಅಷ್ಟು ಕಠಿಣವಾಗುವುದಿಲ್ಲ. ಆದರೆ ಮಾನವನ ಬದುಕು- ಸಂಬಂಧಗಳನ್ನು ಈ ಬದಲಾಗುವ ಋತುಮಾನಗಳು ಕಟ್ಟಿ ಹಾಕುವುದಿಲ್ಲ. ಜನನ ಮರಣಗಳು ಋತುಮಾನಗಳನ್ನು ನೋಡಿ ಬರುವುದಿಲ್ಲ. ಬೇರೆ ಊರುಗಳಿಗೆ ಹೋಗಲೆಬೇಕಾಗಬಹುದು. ಮಳೆಗಾಲದಲ್ಲಿ ತುಂಬಾ ಅಗಲವಾಗಿ ಹರಿಯುವ ಈ ರಭಸದ ಜಲಧಾರೆಗಳನ್ನು ದಾಟುವುದಾದರೂ ಹೇಗೆ? ಖಾಸಿಗಳು ತಮ್ಮ ಸುತ್ತ ಇರುವ ಕಾಡನ್ನು ಬಹುತೇಕವಾಗಿ ದೇವರ ಕಾಡೆಂದು ಪರಿಗಣಿಸುತ್ತಾರೆ. ಹಾಗಾಗಿ ಅದರಲ್ಲಿ ಯಾವುದೇ ಮರಗಳನ್ನು ಕಡಿಯುವುದಿಲ್ಲ. ಮರದಿಂದ ಬಿದ್ದ ಹಣ್ಣುಗಳನ್ನು ತಿನ್ನುತ್ತಾರೆ. ಕೆಳಗೆ ಬಿದ್ದ ರೆಂಬೆ ಕೊಂಬೆಗಳನ್ನು ಉರುವಲಾಗಿ ಬಳಸುತ್ತಾರೆ. ಹಾಗಾಗಿ ಮರ ಕಡಿದು ಸೇತುವೆ ಕಟ್ಟುವುದು ದೂರದ ಮಾತೆ ಸರಿ. ಆದರೆ ಈ ರಭಸದ ಜರಿಗಳನ್ನು ದಾಟುವುದಾದರು ಹೇಗೆ?

ಅದಕ್ಕಾಗಿ ಖಾಸಿಗಳು ಕಂಡುಕೊಂಡ ಮಾರ್ಗ ರಬ್ಬರ್ ಮರದ ಬೇರುಗಳನ್ನೇ ಬಳಸಿ ಸೇತುವೆ ನಿರ್ಮಿಸುವುದು. ಸಿಮೆಂಟ್ ತರಹ ಬೇರುಗಳನ್ನು ನಮ್ಮಿಚ್ಚೆಯಂತೆ ಒಂದೇ ದಿನದಲ್ಲಿ ಅಥವಾ ಕೆಲವೇ ದಿನಗಳಲ್ಲಿ ಬೆಳೆಯುವಂತೆ ಮಾಡಲಂತೂ ಆಗುವುದಿಲ್ಲ. ಅವುಗಳು ಬೆಳೆದಂತೆ ಅವುಗಳನ್ನು ತಿದ್ದಿ ತೀಡಿ ನಮಗೆ ಬೇಕಾದಂತೆ ಬಗ್ಗಿಸಲು ದಿನವೂ ಅವುಗಳ ಬೆಳವಣಿಗೆಯನ್ನು ಗಮನಿಸುತ್ತಿರಬೇಕು. ಹೀಗೆ ಬೇರುಗಳನ್ನು ಒಂದರೊಳಗೊಂದು ಹೆಣೆದು ಜಾಡಿ ತರಹ ಮಾಡಲು ವರುಷಗಳೇ ಬೇಕು. ಮೊದಲ ಬಾರಿ ಇದನ್ನ ಯೋಚಿಸಿ ಅದನ್ನು ಅನುಷ್ಟಾನ ಮಾಡಲು ಹೊರಟ ಖಾಸಿ ಮಹಿಳೆ ಅಥವಾ ಪುರುಷನಿಗೆ ಒಂದು ಜೀವಾವಧಿಯೇ ಬೇಕಾಗಿರಬಹುದು. ಅವನು ಮರದ ಜೊತೆ ಸ್ನೇಹ ಬೆಳಸಿ ಅದನ್ನು ಸೇತುವೆ ಮಾಡಲು ನಿರ್ಧರಿಸಿದ್ದು ಅಚ್ಚರಿಯೇ ಸರಿ. ಇಂತಹ ಯೋಚನೆಗಳು ನಾವು ಸುತ್ತಲಿನ ಪ್ರಕೃತಿಯನ್ನು ಪ್ರೀತಿಸಿದಾಗ ಮಾತ್ರ ಬರಲು ಸಾಧ್ಯವೇನೋ.

ಹೀಗೆ ತಲೆತಲಾಂತರದಿಂದ ಬಂದ ಈ ಜೀವಂತ ಬೇರುಗಳ ಸೇತುವೆ ನಿರ್ಮಾಣ ಈಗಲೂ ಮುಂದೆವರೆಯುತ್ತಿದೆ. ಸೋಹ್ರ ಪ್ರದೇಶದಲ್ಲಿ ಸುಮಾರು ಜೀವಂತ ಬೇರುಗಳ ಸೇತುವೆಗಳಿವೆ. ಸೋಹ್ರಗೆ ನಾನು ಸುಮಾರು ಬಾರಿ ಹೋಗಿದ್ದೇನೆ, ಅನೇಕ ಜೀವಂತ ಬೇರುಗಳ ಸೇತುವೆಗಳನ್ನು ನೋಡಿರುವೆನಾದರೂ ವಿಶಿಷ್ಟವಾಗಿ ಕಂಡಿದ್ದು ಚೀರಾಪುಂಜಿಯಿಂದ ಸುಮಾರು ೨೦ ಕಿ. ಮೀ. ದೂರದಲ್ಲಿರುವ ನಾಂಗ್ರಿಯಾಟ ಹಳ್ಳಿಯ ಜೋಡಿ ಜೀವಂತ ಬೇರುಗಳ ಸೇತುವೆ. ಒಂದೇ ಮರದ ಬೇರುಗಳಿಂದ ಒಂದರ ಮೇಲೊಂದರಂತೆ ಎರಡು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಡಬಲ್ ಡೆಕರ್ ಎಂದು ಕರೆಯುತ್ತಾರೆ.

(ಡಬಲ್ ಡೆಕರ್)

ಮಳೆಗಾಲ ಉನ್ನತಿಯಲ್ಲಿರುವಾಗ. ಜರಿಗಳು ರಭಸದಿಂದ ಹರಿಯುತ್ತಿರುವಾಗ ನಾಂಗ್ರಿಯಾಟಗೆ ಹೋದರೆ ಜೀವಂತ ಬೇರುಗಳ ಸೇತುವೆಗಳ ಮಹತ್ವ ತಿಳಿಯುತ್ತದೆ. ನಾಂಗ್ರಿಯಾಟ ತಲುಪಲು ಬೆಟ್ಟದ ಮೇಲಿರುವ ತಿರ್ನಾ ಎಂಬ ಹಳ್ಳಿಯಿಂದ ಸುಮಾರು ಮೂರುವರೆ ಕಿಲೋ ಮೀಟರ್ ಕೆಳಗೆ ಇಳಿಯಬೇಕು. ಇತ್ತೀಚಿನ ದಿನಗಳಲ್ಲಿ ಕಾಂಕ್ರೀಟ್ ನ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆಯಾದರೂ ಮೊದಲು ಕಲ್ಲುಗಳಿಂದಲೇ ಮಾಡಿದ ಮೆಟ್ಟಿಲುಗಳು ಇದ್ದವು. ಕೆಲವೊಂದು ಕಡೆ ಬೆಟ್ಟ ತುಂಬಾ ಇಳಿಜಾರಾಗಿರುವುದರಿಂದ ಮೆಟ್ಟಿಲುಗಳನ್ನು ಇಳಿದು ಹತ್ತುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ನಾಂಗ್ರಿಯಾಟ ವಾಸಿಗಳು ತಮ್ಮ ಜೀವನಾವಶ್ಯಕ ಸಾಮಗ್ರಿಗಳನ್ನು ಇಂತಹ ಕಠಿಣ ಮಾರ್ಗದ ಮೂಲಕವೇ ಸರಬರಾಜು ಮಾಡಿಕೊಳ್ಳುತ್ತಾರೆ.

ನಾಂಗ್ರಿಯಾಟ ಹಳ್ಳಿಯ ಪಕ್ಕದಲ್ಲಿ ಸುಮಾರು ಐದರಿಂದ ಆರು ಸೇತುವೆಗಳಿವೆ. ನಾಂಗ್ರಿಯಾಟ ತಲುಪಲು ಆಗುವ ಶ್ರಮವನ್ನು ಅನುಭವಿಸಿದಾಗ ಮಾತ್ರ ಇಂತಹ ದುರ್ಗಮ ಮಳೆ ಬೀಡಿನಲ್ಲಿ ವಾಸಿಸುವ ಖಾಸಿಗಳ ಜೀವನ ಅರ್ಥವಾಗುತ್ತದೆ. ಇಂತಹ ಜೀವಂತ ಬೇರುಗಳ ಸೇತುವೆ ಕುರುಹು ಜಗತ್ತಿನ ಯಾವ ಮೂಲೆಯಲ್ಲೂ ಇಲ್ಲ. ಇದು ಖಾಸಿ ಬೆಟ್ಟಕ್ಕೆ ಮೀಸಲಾದ ವಿಶಿಷ್ಟತೆ.

(ಹೋಗುವ ದಾರಿಯಲ್ಲಿ ಸಿಗುವ ತೂಗು ಸೇತುವೆ)

ಇಂದು ಇಡೀ ವಿಶ್ವವೇ ಪಾಶ್ಚಿಮಾತ್ಯ ಮಾದರಿಯ ಅಭಿವೃದ್ದಿಯ ಹಿಂದೆ ಓಡುತ್ತಿದೆ. ಹಳ್ಳಿಯಿಂದ ಪಟ್ಟಣಕ್ಕೆ, ಪರಿಸರ ಸ್ನೇಹ ವಸ್ತುಗಳಿಂದ ಪ್ಲಾಸ್ಟಿಕ್ ಗೆ, ಕಾಡಿನಿಂದ ಕಾಂಕ್ರಿಟ್ ಕಾಡಿಗೆ ನಡೆಯುವುದೇ ಅಭಿವೃದ್ಧಿ ಎಂದು ಒಪ್ಪಿಕೊಂಡಂತಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ. ಹೆಚ್ಚುತ್ತಿರುವ ಜನಸಂಖ್ಯೆ ವಾಸಿಸಲು ಕಾಡುಗಳನ್ನು ನೆಲಸಮ ಮಾಡಲಾಗುತ್ತಿದೆ. ಎಲ್ಲರ ಬೇಡಿಕೆಗಳನ್ನು ಪೂರೈಸಲು ಪರಿಸರಕ್ಕೆ ದಕ್ಕೆಯಾದರೂ ನೈಸರ್ಗಿಕ ಸಂಪನ್ಮೂಲಗಳನ್ನು ಮೀತಿ ಮೀರಿ ಬಳಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನನಗೆ ಈ ಜೀವಂತ ಬೇರುಗಳ ಸೇತುವೆಗಳು ಮಾನವನು ಹೇಗೆ ಪರಿಸರದ ಜೊತೆ ಕೊಡುಕೊಳ್ಳುವಿಕೆಯಿಂದ ಸ್ನೇಹಯುತವಾಗಿ ಬದುಕಬಹುದೆಂದು ತೋರಿಸಲು ಉತ್ಕೃಷ್ಠ ಉದಾಹರಣೆಯಾಗಿ ಕಾಣುತ್ತದೆ.

ನೂರಾರು ಜನರು ಸೇರಿಕೊಂಡು ಕಂಪ್ಯೂಟರ್ ನಲ್ಲಿ ನೀಲಿ ನಕ್ಷೆ ತಯಾರಿಸಿ ಅತ್ಯಾಧುನಿಕ ಯಂತ್ರಗಳನ್ನು ಬಳಸಿ ನಿರ್ಮಿಸುವ ಅಗಾಧ ಸೇತುವೆಗಳಿಗಿಂತ, ಕೆಲವೇ ಜನರು ಸೇರಿಕೊಂಡು, ಬೇರುಗಳ ಜೊತೆ ಸ್ನೇಹ ಬೆಳಸಿ, ಅವುಗಳನ್ನು ತಮ್ಮ ಕೈಗಳಿಂದಲೇ ನಾಜೂಕಾಗಿ ವರುಷಾನುಗಟ್ಟಲೆ ತಿದ್ದಿ ತೀಡಿ ನಿರ್ಮಿಸುವ ಈ ಜೀವಂತ ಬೇರುಗಳ ಸೇತುವೆಗಳು ವಿಸ್ಮಯಗೊಳಿಸುತ್ತವೆ.

ಈ ಮಾತುಗಳು ಇಂದಿನ ದಿನಗಳಲ್ಲಿ ರೊಮ್ಯಾಂಟಿಸಿಸಂ ಎನಿಸಬಹುದಾದರೂ, ಸ್ವಲ್ಪ ತಾಳ್ಮೆಯಿಂದ ಯೋಚಿಸಿದರೆ ಅದರ ಮಹತ್ವ ತಿಳಿಯುತ್ತದೆ. ಬದಲಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಬದಲಾವಣೆಯ ಗಾಳಿ ಖಾಸಿಗಳನ್ನು ಬಿಟ್ಟಿಲ್ಲ. ಇಂದು ಈ ಸೇತುವೆಗಳು ಪ್ರವಾಸೋದ್ಯಮದ ಸರಕುಗಳಾಗಿ ಮಾರ್ಪಟ್ಟಿವೆ. ದೂರದಿಂದ ಜನರು ಇವುಗಳನ್ನು ನೋಡಲು ಬರುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರು ಈ ಸೇತುವೆಗಳ ಮಹತ್ವ ತಿಳಿಯದೆ ಅವುಗಳ ಮೇಲೆ ಒಂದೇ ಬಾರಿ ಅದು ತಾಳುವ ಭಾರಕ್ಕಿಂತ ಹೆಚ್ಚು ಭಾರ ಹಾಕಿ ಅವುಗಳಿಗೆ ಧಕ್ಕೆ ತರುತ್ತಿದ್ದಾರೆ. ಕಾಲದ ಚಕ್ರಕ್ಕೆ ಸಿಕ್ಕು ಈ ಸೇತುವೆಗಳು ಕೂಡ ಮರೆಯಾಗಿ ಹೋಗಬಹುದು. ಅವುಗಳು ಹಾಗೆ ನಶಿಸಿ ಹೋಗುವ ಮೊದಲು ಅವುಗಳು ಮೂಕವಾಗಿ ಹೇಳುವ ಪಾಠವ ಕಿವಿಗೊಟ್ಟು ಕೇಳಬೇಕಾಗಿದೆ. ಮೊತ್ತ ಮೊದಲ ಬಾರಿಗೆ ಅವುಗಳ ನಿರ್ಮಿಸಿದ ಕರ್ತನ ಮನಸಿಲ್ಲಿದ್ದ ಪರಿಸರದ ಹೃದಯಾಳಕ್ಕೆ ಇಳಿಯಬೇಕಾಗಿದೆ. ಇಲ್ಲದಿದ್ದರೆ ಅಭಿವೃದ್ಧಿಯ ಬಿಸಿಲ ಕುದುರೆ ಬೆನ್ನತ್ತಿರುವ ನಮಗೆ ನಮ್ಮ ಪೂರ್ವಜರ ಪರಿಸರದ ಪಾಠಗಳು ಸಂಪೂರ್ಣವಾಗಿ ಕಳೆದೆ ಹೋಗಬಹುದು.

(ಫೋಟೋಗಳು: ಲೇಖಕರವು)