ಏನಾಗುತ್ತಿದೆಯೆಂದು ಅವರಿಗೆ ಅರ್ಥವಾಗುವ ಮೊದಲೇ ಬೆಂಕಿ ಅರ್ಧದಷ್ಟು ತೋಟಕ್ಕೆ ವ್ಯಾಪಿಸಿತ್ತು. ಅನಿರೀಕ್ಷಿತವಾಗಿ ಘಟಿಸಿದ ಅನಾಹುತ ಕಂಡು ಮಾತುಹೊರಡದೇ ನಿಂತಿದ್ದ ಅಂಬಿಕಾ ಈಗ ಜೋರಾಗಿ ಕಿರುಚಲಾರಂಭಿಸಿದರು. “ಅಯ್ಯೋ, ಯಾರಾದರೂ ಓಡಿ ಬನ್ನಿ.. ನಮ್ಮನ್ನು ಕಾಪಾಡಿ… ಯಾರಾದರೂ ಬನ್ನಿ, ಬೆಂಕಿ ನಂದಿಸಿ….” ನೆರೆಮನೆಯಿಂದ ಕೇಳಿದ ಆರ್ತನಾದ, ಎತ್ತರದಲ್ಲಿ ಕಾಣುತ್ತಿರುವ ಬೆಂಕಿಯ ಕೆನ್ನಾಲಿಗೆ, ಆಗಿರಬಹುದಾದ ಅನಾಹುತದ ಚಿತ್ರಣವನ್ನು ಶಂಕರಣ್ಣನಿಗೆ ಕಟ್ಟಿಕೊಟ್ಟಿತು. ಅವರು ತಮ್ಮ ಶತ್ರುಗಳೆಂಬುದನ್ನೂ ಯೋಚಿಸದೇ ಕತ್ತಿಯೊಂದನ್ನು ಕೈಗೆತ್ತಿಕೊಂಡ ಶಂಕರಣ್ಣ ಅತ್ತ ಧಾವಿಸಿದರು.
ಜೆಸ್ಸಿ ಪಿ.ವಿ. ಪುತ್ತೂರು ಬರೆದ ಈ ಭಾನುವಾರದ ಕಥೆ “ಹೊರಗಿನ ಬೆಂಕಿ ಮತ್ತು ಒಳಗಿನ ಕಳೆ” ನಿಮ್ಮ ಓದಿಗೆ

ಬೌ ಬೌ ಬೌ… ಕರ್ಣ ಕಠೋರವಾಗಿ ಶಂಕರಣ್ಣನ ಮನೆಯ ನಾಯಿ ಬೊಗಳುತಿತ್ತು. ಅದಕ್ಕಿಂತಲೂ ಜೋರಾಗಿ ಆಚೆಮನೆಯ ಅಂಬಿಕಾ ಅರಚುತ್ತಿದ್ದರು. ನಾಯಿಯ ಕರ್ಕಶ ಧ್ವನಿಯ ಮಧ್ಯೆ ಆಕೆಯ ಮಾತುಗಳು ಸ್ಪಷ್ಟವಾಗಿ ಕೇಳಿಸದಿದ್ದರೂ ಶಂಕರಣ್ಣನಿಗೆ ಅದು ತಮ್ಮ ಮನೆಯವರನ್ನು ಬೈದು ಮಾತನಾಡುತ್ತಿರುವುದೆಂದು ಅರ್ಥವಾಯ್ತು. ತೋಟದಲ್ಲಿ ಕೆಲಸ ಮಾಡುತ್ತಿದ್ದ ಆಳು ಮಂಜನನ್ನು ಕೇಳಿದರು. “ಏನಂತೆ ಮಂಜಾ, ಅವಳ ಬೊಂಬಾಯಿ ಬಿಚ್ಚುತ್ತಾ ಇದೆಯಲ್ಲ.. ಏನು ವಿಷಯ?”

“ಅವರ ದನ ನಿಮ್ಮ ತೋಟಕ್ಕೆ ನುಗ್ಗಿತಂತೆ. ಆಗ ನಿಮ್ಮ ನಾಯಿ ಅದನ್ನು ಅಟ್ಟಿಸಿಕೊಂಡು ಹೋಯಿತಂತೆ.. ಓಡುವ ರಭಸದಲ್ಲಿ ದನ ಗುಂಡಿಗೆ ಬಿದ್ದು ಗಾಯವಾಗಿದೆಯಂತೆ.. ಅದಕ್ಕೆ ನಿಮಗೂ ನಿಮ್ಮ ನಾಯಿಗೂ ಶಾಪ ಹಾಕುತ್ತಾ ಇದ್ದಾರೆ..” ವಿಷಯ ತಿಳಿದಾಗ ಶಂಕರಣ್ಣನಿಗೂ ಕೋಪ ಬಂತು.

“ದನವನ್ನು ಕಟ್ಟಿಹಾಕದೇ ಬೇಕು ಬೇಕೆಂದೇ ನಮ್ಮ ಬೆಳೆಗಳನ್ನು ನಾಶ ಮಾಡಲೆಂದೇ ಕಳಿಸುತ್ತಾರಲ್ಲ.. ನಾವು ನಾಯಿ ಸಾಕಿದ್ದೇ ನಮ್ಮ ತೋಟ ಕಾಯಲಿಕ್ಕಾಗಿ..” ಶಂಕರಣ್ಣನೂ ಜೋರಾಗಿ ಹೇಳಿದರು.

“ಸಾಕುವವರ ಸ್ವಭಾವವನ್ನು ನಾಯಿ ತೋರಿಸಲೇ ಬೇಕಲ್ಲ.. ಇದ್ದಬದ್ದವರನ್ನೆಲ್ಲ ಕಚ್ಚಲು ನಾಯಿ ಬಿಡುವ ನೀವು ಮನುಷ್ಯರಾ?. ತೋಟಕ್ಕೊಂದು ಬೇಲಿ ಹಾಕುವುದಕ್ಕೂ ಆಗದ ಜಿಪುಣರು…” ಅಂಬಿಕಾ ಮತ್ತಷ್ಟು ದೊಡ್ಡ ಸ್ವರದಲ್ಲಿ ಹೇಳಿದರು.

“ಅಂಡೆಯ ಬಾಯಿಯನ್ನಾದರೂ ಕಟ್ಟಬಹುದು. ನಿಮ್ಮ ದೊಂಡೆಯ ಬಾಯಿ ಕಟ್ಟಲು ಯಾರಿಗೂ ಆಗ್ಲಿಕ್ಕಿಲ್ಲ…” ಎನ್ನುತ್ತಾ ಅಂಬಿಕಾಳ ಬಾಯಿಗೆ ಹೆದರಿ ಶಂಕರಣ್ಣ ಮನೆಯೊಳಗೆ ಹೋದರು. ಮತ್ತೊಂದಷ್ಟು ಹೊತ್ತು ಏನೇನೋ ಗೊಣಗುತ್ತಾ ಬೈಯುತ್ತಾ ಅಂಬಿಕಾ ಕೂಡಾ ಕೇಳಿಸಿಕೊಳ್ಳುವವರು ಯಾರೂ ಇಲ್ಲವೆಂದು ತಿಳಿದು ತನ್ನ ಮನೆ ಕಡೆ ಹೊರಟಳು.

ಶಂಕರಣ್ಣ ಮತ್ತು ಪದ್ಮನಾಭ ಒಂದೇ ಜಾತಿಯವರು. ಅಷ್ಟೇ ಅಲ್ಲ ಮೂಲತಃ ಒಂದೇ ಊರವರು. ಈ ಊರಿಗೆ ಮೊದಲು ಬಂದವರು ಶಂಕರಣ್ಣನ ಅಪ್ಪ. ಆಗ ಶಂಕರಣ್ಣ ಹುಡುಗನಾಗಿದ್ದರು. ಶಂಕರಣ್ಣ ಮಧ್ಯವಯಸ್ಸಿಗೆ ಬಂದಾಗ ಅವರ ಊರಿನವರವರಾದ ಪದ್ಮನಾಭರು ಇವರ ನೆರೆಮನೆಯವರಾಗಿ ಬಂದರು. ಮೊದಮೊದಲು ಅವರ ಸಂಬಂಧ ಆಪ್ತವಾಗಿತ್ತು. ಆದರೆ ದಿನ ಕಳೆದಂತೆ ಅವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮುನಿಸು ಉಂಟಾಗಲು ಶುರುವಾಯಿತು. ಶಂಕರಣ್ಣನ ಮನೆಯ ಕೋಳಿಗಳು ಪದ್ಮನಾಭರ ತೋಟಕ್ಕೆ ನುಗ್ಗಿ ಅಡಿಕೆ ಗಿಡಗಳ ಬುಡವನ್ನೆಲ್ಲಾ ಕೆದಕಿ ಹಾಳು ಮಾಡುತ್ತಿದ್ದವು. ಈ ಕಾರಣಕ್ಕೆ ಶುರುವಾದ ಸಣ್ಣ ವಾದವಿವಾದ ಪದ್ಮನಾಭರ ಹೆಂಡತಿ ಅಂಬಿಕಾಳ ನಾಲಿಗೆಯಿಂದಾಗಿ ಹದ್ದುಮೀರಿ ಹೋಯಿತು. ಪರಸ್ಪರ ಕಂಡರೆ ಎರಡೂ ಮನೆಯವರು ಮುಖ ಸಿಂಡರಿಸಿಕೊಂಡು ಹೋಗಲಾರಂಭಿಸಿದ್ದರು. ಶಂಕರಣ್ಣ ಇಂತಹ ರಗಳೆಯೇ ಬೇಡವೆಂದು ಕೋಳಿ ಸಾಕುವುದನ್ನೇ ಬಿಟ್ಟುಬಿಟ್ಟಿದ್ದರು.

ಕೋಳಿ ಸಾಕುವುದು ಬಿಟ್ಟರೂ ಸಮಸ್ಯೆಯೇನೂ ಪರಿಹಾರವಾಗಲಿಲ್ಲ. ಜಗಳಗಂಟಿ ಅಂಬಿಕಾಳಿಗೆ ಜಗಳಕ್ಕೆ ಏನಾದರೊಂದು ಹೊಸ ವಿಷಯ ಸಿಗುತ್ತಲೇ ಹೋಗುತ್ತಿತ್ತು. ಬೇಲಿ ಬದಿಯ ಹಲಸು ಹಾಗೂ ಸಾಗುವಾನಿ ಗಿಡಗಳ ಗೆಲ್ಲುಗಳು ತಮ್ಮ ಜಮೀನಿನ ಕಡೆಗೆ ವಾಲಿರುವುದರಿಂದ ತೋಟದ ಗಿಡಗಳಿಗೆ ನೆರಳಾಗಿ ಅವು ಬೆಳೆಯುತ್ತಿಲ್ಲ ಎಂದು ಅಂಬಿಕಾ ಖ್ಯಾತೆ ತೆಗೆದಾಗ ಶಂಕರಣ್ಣ ಆಳುಗಳನ್ನು ಕರೆದು ಆ ಮರಗಳ ಗೆಲ್ಲು ಸವರಿದ್ದರು. ಅಂಬಿಕಾಳ ಮಾತುಗಳನ್ನು ಮೊದಮೊದಲು ಪದ್ಮನಾಭರು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ತಮ್ಮ ಆಪ್ತರಾದ ಶಂಕರಣ್ಣನೊಂದಿಗೆ ಜಗಳವಾಡುವುದು ಅವರಿಗೆ ಇಷ್ಟವಿರಲಿಲ್ಲ. ಆದರೆ ಹೆಂಡತಿ ನಿರಂತರವಾಗಿ ಕಿವಿಚುಚ್ಚಿದಾಗ ಅವರೂ ಬದಲಾದರು. ಎಷ್ಟೇ ಪ್ರಚೋದನೆಗೊಳಗಾದರೂ ಉದ್ರೇಕಕ್ಕೊಳಗಾಗದ ಶಂಕರಣ್ಣನ ಶಾಂತ ಸ್ವಭಾವ, ಹುಟ್ಟಿನಿಂದಲೇ ಬಂದಂತಿದ್ದ ಮಿತವಾದ ಮಾತು ಇವು ಅಂಬಿಕಾಳ ಬಜಾರಿ ಸ್ವಭಾವ ಮತ್ತಷ್ಟು ಮೆರೆಯಲು ಕಾರಣವಾಗಿದ್ದವು. ಶಂಕರಣ್ಣನ ಹೆಂಡತಿ ಸರಸ್ವತಿ ಕೂಡಾ ಅವರಂತೆಯೇ ಸಾಧು ಸ್ವಭಾವದವರಾಗಿದ್ದರು. ಇದು ಅಂಬಿಕಾಳ ಪ್ರಾಬಲ್ಯ ಮೆರೆಯುವುದಕ್ಕೆ ಮತ್ತೊಂದು ಕಾರಣ. ಸಾಧು ಸ್ವಭಾವದ ಶಂಕರಣ್ಣ-ಸರಸ್ವತಿಯವರು ಯಾವುದೇ ಕಚ್ಚಾಟ ಬೇಡವೆಂದು ಎಷ್ಟೇ ಪ್ರಯತ್ನಿಸಿದರೂ ತಾವಾಗಿ ಕಾಲುಕೆರೆದು ಜಗಳಕ್ಕೆ ಹೋಗುವುದು ಅಂಬಿಕಾಳ ಸ್ವಭಾವವಾಗಿತ್ತು.

“ಅಂಡೆಯ ಬಾಯಿಯನ್ನಾದರೂ ಕಟ್ಟಬಹುದು. ನಿಮ್ಮ ದೊಂಡೆಯ ಬಾಯಿ ಕಟ್ಟಲು ಯಾರಿಗೂ ಆಗ್ಲಿಕ್ಕಿಲ್ಲ…” ಎನ್ನುತ್ತಾ ಅಂಬಿಕಾಳ ಬಾಯಿಗೆ ಹೆದರಿ ಶಂಕರಣ್ಣ ಮನೆಯೊಳಗೆ ಹೋದರು. ಮತ್ತೊಂದಷ್ಟು ಹೊತ್ತು ಏನೇನೋ ಗೊಣಗುತ್ತಾ ಬೈಯುತ್ತಾ ಅಂಬಿಕಾ ಕೂಡಾ ಕೇಳಿಸಿಕೊಳ್ಳುವವರು ಯಾರೂ ಇಲ್ಲವೆಂದು ತಿಳಿದು ತನ್ನ ಮನೆ ಕಡೆ ಹೊರಟಳು.

ನಾಯಿ ಓಡಿಸಿದ ಕಾರಣ ಗುಂಡಿಗೆ ಬಿದ್ದ ದನ ಚೇತರಿಸಿಕೊಂಡರೂ ಅಂಬಿಕಾಳ ಸಿಟ್ಟು ಇಳಿಯಲಿಲ್ಲ. ಸುತ್ತಮುತ್ತಲಿನ ಜನರಲ್ಲೆಲ್ಲಾ ಶಂಕರಣ್ಣ ನಾಯಿಯನ್ನು ಛೂಬಿಟ್ಟು ತಮ್ಮ ದನವನ್ನು ಗುಂಡಿಗೆ ಬೀಳಿಸಿದ್ದಾಗಿ ದೂರು ಹೇಳಿದರು. ಶಂಕರಣ್ಣ ದಂಪತಿಗಳು ನೋಡಲಷ್ಟೇ ಸಾಧುಗಳು, ಅವರಷ್ಟು ಹೊಟ್ಟೆಕಿಚ್ಚಿನ ಜನರನ್ನು ತಾನೆಂದೂ ನೋಡಿಲ್ಲ ಎಂದೂ ಅವರ ಕಿವಿತುಂಬಿದರು. ಅಂಬಿಕಾಳಂತಹ ಶ್ರಮಜೀವಿಗೆ ಶಂಕರಣ್ಣನ ಕುಟುಂಬ ಸ್ವಲ್ಪವಾದರೂ ತೊಂದರೆ ಕೊಡದಿದ್ದರೆ ಆಕೆ ಇಷ್ಟೆಲ್ಲಾ ದೂರಲಿಕ್ಕಿಲ್ಲ ಎಂದೇ ಜನ ತಿಳಿದುಕೊಂಡರು.

ಶಂಕರಣ್ಣನಿಗೆ ರೋಸಿ ಹೋಗಿತ್ತು. ಕಲ್ಲು ಕಂಬಗಳು ಹಾಗೂ ಮುಳ್ಳುತಂತಿಗಳನ್ನು ತಂದು ಆಳುಗಳನ್ನು ಕರೆದು ಜಮೀನಿನ ಗಡಿಯುದ್ದಕ್ಕೂ ಬೇಲಿ ಹಾಕಿದರು. ಸಮೀಪದ ಕಾಡೊಳಗಿಂದ ಹರಿದು ಬರುವ ತೊರೆಯೊಂದು ಶಂಕರಣ್ಣನ ತೋಟದೊಳಗಿಂದ ಹರಿದು ಪದ್ಮನಾಭರ ತೋಟವನ್ನು ಪ್ರವೇಶಿಸಿ ಮುಂದೆ ಹರಿಯುತ್ತಿತ್ತು. ತಮ್ಮ ತೋಟಕ್ಕೆ ಹರಿಯುವ ನೀರಿಗೆ ಶಂಕರಣ್ಣ ತಡೆಯೊಡ್ಡುತ್ತಿದ್ದಾರೆಂದು ಅಂಬಿಕಾ ಹಾಗೂ ಪದ್ಮನಾಭರು ಪೊಲೀಸ್ ಸ್ಟೇಷನ್‌ನಲ್ಲಿ ಕೇಸು ದಾಖಲಿಸಿದರು. ಶಂಕರಣ್ಣ ನಿರಂತರ ಕೋರ್ಟಿಗೆ ಅಲೆಯುವಂತಾಯಿತು. ಸತ್ಯ ತಿಳಿಯದ ಊರವರು ಪದ್ಮನಾಭರಿಗೆ ಶಂಕರಣ್ಣನಿಂದ ಅನ್ಯಾಯವಾಯಿತೆಂದೇ ತಿಳಿದರು. ಜನರ ನಂಬಿಕೆಗೆ ಇಂಬುಕೊಡುವಂತೆ ಕೋರ್ಟ್‌ನಲ್ಲಿ ಪದ್ಮನಾಭರ ಪರವಾಗಿ ತೀರ್ಪಾಯಿತು. ತನ್ನ ಸತ್ಯ ಹಾಗೂ ಪ್ರಾಮಾಣಿಕತೆಯನ್ನು ದೇವರೂ ನೋಡಲಿಲ್ಲವಲ್ಲ ಎಂಬ ಕೊರಗು ಶಂಕರಣ್ಣನನ್ನು ಕಾಡಿತು. ತಂತಿ ಬೇಲಿಯಾಚೆ ಬೇಲಿಗಿಡಗಳನ್ನು ಎತ್ತರಕ್ಕೆ ಬೆಳೆಸಿ ಪದ್ಮನಾಭರ ಮನೆಯವರಿಗೆ ತಮ್ಮ ಮನೆ ಹಾಗೂ ತೋಟ ಕಾಣದಂತೆ ಮಾಡಿ, ಅವರ ಕಣ್ಣಿನಿಂದ ದೂರವೇ ಉಳಿದುಬಿಟ್ಟರು ಶಂಕರಣ್ಣ. ಎರಡೂ ಮನೆಯವರು ಪರಸ್ಪರ ಕಾಣದೇ ತಿಂಗಳುಗಳೇ ಕಳೆದಿತ್ತು.

ಬಿರುಬೇಸಿಗೆಯ ಆ ದಿನ ಸಂಜೆ ವಿದ್ಯುತ್ ಕೈಕೊಟ್ಟಿತ್ತು. ಸೂರ್ಯ ಮುಳುಗಿದರೂ ಸೆಖೆ ಸಹಿಸಲಾಗುತ್ತಿಲ್ಲವೆಂದು ಪದ್ಮನಾಭರು ಅಂಗಳದಲ್ಲಿ ಕುರ್ಚಿ ಹಾಕಿ ಕುಳಿತಿದ್ದರು. ಏನೋ ಮಾತನಾಡಲೆಂದು ಅಂಬಿಕಾ ಗಂಡನ ಬಳಿ ಬಂದಳು. ಅಷ್ಟರಲ್ಲಿ ಅವರ ಜಮೀನಿನ ಆಚೆ ಬದಿಯ ಕಾಲು ದಾರಿಯಲ್ಲಿ ಯಾರೋ ನಡೆದು ಹೋಗುತ್ತಿರುವುದು ಕಾಣಿಸಿತು. “ಬೊಂಬೆ ಹೇಳುತೈತೆ.. ನಾನೇ ರಾಜಕುಮಾರ.. ರಾಜಕುಮಾರ ಯಾಕೆ… ನಾನೇ ರಾಜ..” ಹಾಡು ಕೇಳಿದಾಗ “ಓ..ಅದು ಆಚೆ ಬಯಲಿನ ನಾಗೇಶ. ಅಪರೂಪಕ್ಕೊಮ್ಮೆ ಕೆಲಸಕ್ಕೆ ಹೋಗಿ ಸಿಕ್ಕ ದುಡ್ಡಲ್ಲಿ ಕುಡಿಯುವ ಕುಡುಕ!.. ಅವನ ಹೆಂಡತಿ ಮಕ್ಕಳ ದುರಾದೃಷ್ಟ!.. ಇವತ್ತು ಮನೆಯಲ್ಲಿ ಏನು ರಂಪ ಮಾಡ್ತಾನೋ?” ಅಂಬಿಕಾ ಅಸಹನೆಯಿಂದ ನುಡಿದಳು. ಅಷ್ಟರಲ್ಲಿ ನಾಗೇಶ ಇವರ ಬೇಲಿ ಬದಿಯಲ್ಲಿ ಕುಳಿತ. ಇನ್ನೇನು ಕತ್ತಲು ಕವಿಯುವುದರಲ್ಲಿತ್ತು. ಅವನು ಬಹುಶಃ ಬೀಡಿ ಸೇದಲಿಕ್ಕಿರಬಹುದು ಕಡ್ಡಿ ಗೀರಿದ್ದು ಕಾಣಿಸಿತು. ಅಂಬಿಕಾ ಹಾಗೂ ಪದ್ಮನಾಭರು ನೋಡುತ್ತಿದ್ದಂತೆಯೇ ಸಣ್ಣ ಕಿಡಿಯಾಗಿ ಕಂಡ ಬೆಂಕಿ ಬಿಸಲಿಗೆ ಒಣಗಿದ್ದ ತರಗೆಲೆಗಳಿಗೆ ಹರಡಿ ಕ್ಷಣಾರ್ಧದಲ್ಲಿ ಅವರ ತೋಟಕ್ಕೆಲ್ಲಾ ಹರಡಿತು.

ಏನಾಗುತ್ತಿದೆಯೆಂದು ಅವರಿಗೆ ಅರ್ಥವಾಗುವ ಮೊದಲೇ ಬೆಂಕಿ ಅರ್ಧದಷ್ಟು ತೋಟಕ್ಕೆ ವ್ಯಾಪಿಸಿತ್ತು. ಅನಿರೀಕ್ಷಿತವಾಗಿ ಘಟಿಸಿದ ಅನಾಹುತ ಕಂಡು ಮಾತುಹೊರಡದೇ ನಿಂತಿದ್ದ ಅಂಬಿಕಾ ಈಗ ಜೋರಾಗಿ ಕಿರುಚಲಾರಂಭಿಸಿದರು. “ಅಯ್ಯೋ, ಯಾರಾದರೂ ಓಡಿ ಬನ್ನಿ.. ನಮ್ಮನ್ನು ಕಾಪಾಡಿ… ಯಾರಾದರೂ ಬನ್ನಿ, ಬೆಂಕಿ ನಂದಿಸಿ….” ನೆರೆಮನೆಯಿಂದ ಕೇಳಿದ ಆರ್ತನಾದ, ಎತ್ತರದಲ್ಲಿ ಕಾಣುತ್ತಿರುವ ಬೆಂಕಿಯ ಕೆನ್ನಾಲಿಗೆ, ಆಗಿರಬಹುದಾದ ಅನಾಹುತದ ಚಿತ್ರಣವನ್ನು ಶಂಕರಣ್ಣನಿಗೆ ಕಟ್ಟಿಕೊಟ್ಟಿತು. ಅವರು ತಮ್ಮ ಶತ್ರುಗಳೆಂಬುದನ್ನೂ ಯೋಚಿಸದೇ ಕತ್ತಿಯೊಂದನ್ನು ಕೈಗೆತ್ತಿಕೊಂಡ ಶಂಕರಣ್ಣ ಅತ್ತ ಧಾವಿಸಿದರು. ಬೇಲಿಗಿಡವನ್ನು ಕತ್ತರಿಸಿ ತಂತಿ ಬೇಲಿಯನ್ನು ಅಗಲಿಸಿ ಮೈಕೈಗೆ ತಂತಿ ತರಚಿದ್ದನ್ನೂ ನಿರ್ಲಕ್ಷಿಸಿ ಅದರೊಳಗಿಂದ ನುಸುಳಿದರು. ಕೈಗೆ ಸಿಕ್ಕ ಹಸಿಗೆಲ್ಲುಗಳನ್ನು ಕತ್ತರಿಸಿಕೊಂಡು ಬೆಂಕಿಗೆ ಬಡಿಯುತ್ತಾ ಅದನ್ನು ನಂದಿಸುವ ಪ್ರಯತ್ನ ಮಾಡಿದರು. ಅಷ್ಟರಲ್ಲಿ ಸರಸ್ವತಿ ಪಕ್ಕದ ಮನೆಯವರನ್ನೆಲ್ಲಾ ಕರೆದು ತಂದಿದ್ದರು. ಹಸಿ ಗೆಲ್ಲುಗಳಿಂದ ಬಡಿದು ಬೆಂಕಿ ನಂದಿಸಲು ಕೆಲವರು ಪ್ರಯತ್ನಪಟ್ಟರೆ, ಒಂದಿಬ್ಬರು ಪಂಪ್ ಚಾಲೂ ಮಾಡಿ ಪೈಪಲ್ಲಿ ನೀರು ಬಿಡುತ್ತಾ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಅಂತೂ ಒಂದೂವರೆ ತಾಸಿನ ಪ್ರಯತ್ನದ ಬಳಿಕ ಬೆಂಕಿ ಸಂಪೂರ್ಣ ನಂದಿತು. ಹಲವು ಮರಗಳು ಸುಟ್ಟು ಕರಕಲಾಗಿ ಹೊಗೆಯೇಳುತ್ತಿತ್ತು. ಪದ್ಮನಾಭ, ಅಂಬಿಕಾ ದಂಪತಿಗಳು ಕುಸಿದು ಕುಳಿತಿದ್ದರು. ಯಾವತ್ತೂ ಬಾಯಿಮುಚ್ಚದ ಅಂಬಿಕಾ ಮಾತು ಬಿದ್ದು ಹೋದವರಂತೆ ತಟಸ್ಥರಾಗಿ ಕುಳಿತದ್ದು ನೋಡಿ ಸರಸ್ವತಿಗೆ ಬಹಳ ಕೆಡುಕೆನಿಸಿತು.

ಅಂಬಿಕಾರ ಬಳಿಹೋಗಿ ಮೆಲ್ಲನೆ ಅವರ ಭುಜದ ಮೇಲೆ ಕೈಯಿಟ್ಟು, “ಹೋಗ್ಲಿ ಬಿಡಿ ಅಂಬಿಕಾ, ಸದ್ಯ ಯಾರಿಗೂ ಏನೂ ಅಪಾಯವಾಗದ್ದು ಪುಣ್ಯ. ಕೆಲವು ಮರಗಳಷ್ಟೇ ಹೋಗಿವೆ. ಹೊಸತನ್ನು ನೆಟ್ಟರಾಯಿತು. ಅದನ್ನು ಯೋಚಿಸಿ ಅಳುತ್ತಾ ಕೂರಬೇಡಿ…. ಏನಾದರೂ ಮಾತಾಡಿ ಅಂಬಿಕಾ.. ನೀವು ಹೀಗೆ ಮೌನವಾಗಿರುವುದನ್ನು ನೋಡಲಾಗುತ್ತಿಲ್ಲ. ಏನಾದರೂ ಮಾತಾಡಿ…” ಸರಸ್ವತಿ ಮೆಲ್ಲನೆ ಅವರ ಭುಜವನ್ನು ಅಲ್ಲಾಡಿಸಿದರು. ಒಮ್ಮೆಲೇ ದುಃಖದ ಕಟ್ಟೆಯೊಡೆದು ಅಂಬಿಕಾ ಗಳಗಳನೆ ಅತ್ತರು. “ದೇವರಂತಹ ಶಂಕರಣ್ಣನನ್ನೂ ನಿಮ್ಮನ್ನೂ ನೋಯಿಸಿದ್ದಕ್ಕೆ ದೇವರು ಕೊಟ್ಟ ಶಿಕ್ಷೆ ಇದು. ಬೇರೆ ಯಾರೇ ಆಗಿದ್ದರೂ ನಮಗೆ ಸಹಾಯ ಮಾಡಲು ಬರುತ್ತಿರಲಿಲ್ಲ. ನೀವು ಸರಿಯಾದ ಸಮಯಕ್ಕೆ ಬಂದು ನಮ್ಮ ಜೀವ ಉಳಿಸಿದಿರಿ.. ಇಲ್ಲದಿದ್ದರೆ ತೋಟವೆಲ್ಲಾ ಸುಡುವಾಗ ನಾವೂ ಅದರಲ್ಲಿ ಹಾರಿ ಪ್ರಾಣ ಬಿಡುತ್ತಿದ್ದೆವು…” ಅಂಬಿಕಾ ಎದೆಯೊಡೆದಂತೆ ದುಃಖಿಸಿ ಅಳುತ್ತಿದ್ದರು. ಪಶ್ಚಾತ್ತಾಪದ ಕಣ್ಣೀರು ಅವರನ್ನು ತೋಯಿಸಿತ್ರು. “ಛೆ!ಛೆ! ಅಂಬಿಕಾ, ಏನು ಹೇಳ್ತಿದ್ದೀರಿ. ಕಷ್ಟ ಬಂದಾಗ ಹೀಗೆ ಕಂಗಾಲಾದರೆ ಹೇಗೆ? ನೆರೆಹೊರೆಯವರು ನಾವು ಪರಸ್ಪರ ಸಹಾಯ ಮಾಡಲೇಬೇಕಾದ್ದೇ… ನಾವೇನೂ ಮಹಾನ್ ಕಾರ್ಯ ಮಾಡಿಲ್ಲ..” ಪದ್ಮನಾಭರೂ ಈ ದಂಪತಿಯೆದುರು ಕಣ್ಣು ತುಂಬಿ, ಕೈಮುಗಿದು ನಿಂತರು. ಶಂಕರಣ್ಣ ಪದ್ಮನಾಭರನ್ನು ಬಿಗಿದಪ್ಪಿಕೊಂಡರು. ಎಲ್ಲಕ್ಕೂ ಸಾಕ್ಷಿಗಳಾದ ಊರವರೂ ಕಣ್ಣೊರೆಸಿಕೊಂಡರು. ತೋಟಕ್ಕೆ ಬಿದ್ದ ಬೆಂಕಿ ಬೆಳೆಯನ್ನಷ್ಟೇ ಅಲ್ಲ, ಪದ್ಮನಾಭ- ಅಂಬಿಕಾರ ಮನಸ್ಸಿನ ಕಳೆಯನ್ನೂ ಸುಟ್ಟು ನಾಶಮಾಡಿತ್ತು.