ಯಾಜಿಯವರು ಸರ್ಚ್‌ಲೈಟ್‌ ಬೀರದ ಸಂಗತಿಗಳು ವಿರಳ. ನಾವೆಲ್ಲ ಮರೆತೇ ಬಿಟ್ಟಿರುವ ವೇದಕಾಲದ ಮಹಾಜ್ಞಾನಿ, ಗಾರ್ಗಿ ವಾಚಕ್ನವಿ ಎಂಬ ಮಹಾಪಂಡಿತೆಯ ಬಗೆಗೂ ಬೆಳಕು ಚೆಲ್ಲುತ್ತಾರೆ. ಗೌತಮ ಬುದ್ಧ ಕರ್ಮಯೋಗವನ್ನು ಪ್ರತಿಪಾದಿಸಿದವನು ಎಂದು ಹೇಳುತ್ತಾ ಬುದ್ಧನೂ ನಮ್ಮ ಪರಂಪರೆಯ ಜತೆಗೆ ಹೊಂದಿರುವ ಸಾಂಗತ್ಯವನ್ನು ಗುರುತಿಸುತ್ತಾರೆ. ಶಂಕರಾಚಾರ್ಯರ ಅದ್ವೈತ ವಿಚಾರದ ವಿಲಾಸವನ್ನು ಬೆರಗಾಗುವಂತೆ ಕಟ್ಟಿಕೊಡುತ್ತಾರೆ. ಹಾಗೆಯೇ ಪುರಾಣದ ಹತಭಾಗ್ಯ ಸ್ತ್ರೀ ಪಾತ್ರಗಳ ಬಗ್ಗೆ ತುಂಬಾ ಮಮತೆಯಿಂದ ಅವರು ಬರೆಯುತ್ತಾರೆ. ಉದಾಹರಣೆಗೆ, ಮಹಾಭಾರತದ ಅಂಬೆ, ಕುಂತಿ, ರಾಮಾಯಣದ ಕೈಕೇಯಿ ಮುಂತಾದವರು.
ನಾರಾಯಣ ಯಾಜಿಯವರ “ನೆಲ ಮುಗಿಲು” ಅಂಕಣ ಬರಹಗಳ ಸಂಕಲನಕ್ಕೆ ಹರಿಪ್ರಕಾಶ್‌ ಕೋಣೆಮನೆ ಬರೆದ ಮುನ್ನುಡಿ

ಸನ್ಮಿತ್ರ ಶ್ರೀ ನಾರಾಯಣ ಯಾಜಿ ಅವರ ಅಂಕಣ ಬರಹಗಳನ್ನು ಓದುವುದೇ ಒಂದು ಹಿತದ ಅನುಭವ. ಸಂಸ್ಕೃತದ ಕಾವ್ಯ ಪುರಾಣ ಉಪನಿಷತ್ತುಗಳು, ಕನ್ನಡ ಹಾಗೂ ಆಂಗ್ಲ ಸಾಹಿತ್ಯದ ಆಳವಾದ ಓದಿನಿಂದ ಪಡೆದ ಜ್ಞಾನದ ಸಾರ್ಥಕ ಅವತರಣಿಕೆಯಾಗಿ ಈ ಕೃತಿ ಮೂಡಿಬಂದಿದೆ. ಜತೆಗೆ ಯಕ್ಷಗಾನ ಅರ್ಥಧಾರಿಯಾಗಿ ಅವರು ಪಡೆದ ಅನುಭವವೂ ಇಲ್ಲಿನ ಬರಹಗಳಲ್ಲಿ ಕೈಗೂಡಿಸಿದೆ.

(ನಾರಾಯಣ ಯಾಜಿ)

ಸಾಮಾನ್ಯವಾಗಿ ಅಂಕಣ ಬರಹಗಳು ಆಯಾ ಕ್ಷಣದ ದಾಖಲೆಗಳಾಗಿರುತ್ತವೆ. ಒಂದು ಕಾಲದ ಬಳಿಕ ಅವು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ. ಆದರೆ ಯಾಜಿಯವರು ಅಂಥ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವ ಗೋಜಿಗೆ ಹೋಗದೆ, ಸಾರ್ವಕಾಲಿಕವಾದ ಕೆಲವು ಸಂಗತಿಗಳನ್ನು ಎತ್ತಿಕೊಂಡು ಬರೆದಿದ್ದಾರೆ. ಇದು ಅವುಗಳನ್ನು ಕ್ಷಣಿಕತೆಯಿಂದ ಪಾರು ಮಾಡಿವೆ. ಆದರೆ ಸಮಕಾಲೀನ ಸ್ಪರ್ಶವೂ ಇವುಗಳಿಗೆ ಇದೆ. ಅವರ ಹೆಚ್ಚಿನ ಬರಹಗಳು ಉಪನಿಷತ್ತುಗಳು, ಪುರಾಣಗಳು, ಆದಿಕಾವ್ಯಗಳ ಆಟದ ಅಂಗಳಲ್ಲಿ ಕುಣಿದಾಡುತ್ತದೆ. ಅಲ್ಲಿಂದ ಕತೆಗಳನ್ನು ಎತ್ತಿಕೊಂಡು ಬಂದು ನಮ್ಮ ಮುಂದಿಟ್ಟು ಅವುಗಳಲ್ಲಿ ಹೊಸ ವಿಚಾರಗಳನ್ನು ಯಾಜಿ ನಮಗೆ ಕಾಣಿಸುತ್ತಾರೆ. ಆದರೆ ಆಂಗ್ಲ ಸಾಹಿತ್ಯದ ‘ಮಹಾ ಭಿಕ್ಷುಕʼನೆಂದೇ ಹೆಸರಾದ ವಿಲಿಯಂ ಹೆನ್ರಿ ಡೇವಿಸ್‌ ಬಗೆಗೂ ಬರೆದು ಅಚ್ಚರಿ ಮೂಡಿಸುತ್ತಾರೆ.

ಯಾಜಿಯವರು ಸರ್ಚ್‌ಲೈಟ್‌ ಬೀರದ ಸಂಗತಿಗಳು ವಿರಳ. ನಾವೆಲ್ಲ ಮರೆತೇ ಬಿಟ್ಟಿರುವ ವೇದಕಾಲದ ಮಹಾಜ್ಞಾನಿ, ಗಾರ್ಗಿ ವಾಚಕ್ನವಿ ಎಂಬ ಮಹಾಪಂಡಿತೆಯ ಬಗೆಗೂ ಬೆಳಕು ಚೆಲ್ಲುತ್ತಾರೆ. ಗೌತಮ ಬುದ್ಧ ಕರ್ಮಯೋಗವನ್ನು ಪ್ರತಿಪಾದಿಸಿದವನು ಎಂದು ಹೇಳುತ್ತಾ ಬುದ್ಧನೂ ನಮ್ಮ ಪರಂಪರೆಯ ಜತೆಗೆ ಹೊಂದಿರುವ ಸಾಂಗತ್ಯವನ್ನು ಗುರುತಿಸುತ್ತಾರೆ. ಶಂಕರಾಚಾರ್ಯರ ಅದ್ವೈತ ವಿಚಾರದ ವಿಲಾಸವನ್ನು ಬೆರಗಾಗುವಂತೆ ಕಟ್ಟಿಕೊಡುತ್ತಾರೆ. ಹಾಗೆಯೇ ಪುರಾಣದ ಹತಭಾಗ್ಯ ಸ್ತ್ರೀ ಪಾತ್ರಗಳ ಬಗ್ಗೆ ತುಂಬಾ ಮಮತೆಯಿಂದ ಅವರು ಬರೆಯುತ್ತಾರೆ. ಉದಾಹರಣೆಗೆ, ಮಹಾಭಾರತದ ಅಂಬೆ, ಕುಂತಿ, ರಾಮಾಯಣದ ಕೈಕೇಯಿ ಮುಂತಾದವರು. ಹಾಗೇ ಕಿಬ್ಬಚ್ಚಲ ಮಂಜಮ್ಮ ಎಂಬ ಅಜ್ಞಾತ ಅಪರೂಪದ ಯಕ್ಷಗಾನ ಕೃತಿಕಾರ್ತಿಯ ಬಗೆಗೂ ಬೆಳಕು ಚೆಲ್ಲುತ್ತಾರೆ. ‘ರಾಷ್ಟ್ರವೆನ್ನುವುದು ಅಸ್ಮಿತೆಯ ಭಾವನಾತ್ಮಕ ಅನುಬಂಧʼ ಎನ್ನುವ ಮೂಲಕ ಹೊಸ ಬಗೆಯ ವ್ಯಾಖ್ಯಾನವನ್ನೇ ನೀಡುತ್ತಾರೆ. ಮಹಾಕವಿ ಪಂಪನ ಬಗ್ಗೆ ಬರೆದಂತೆಯೇ ಇತಿಹಾಸದಲ್ಲಿ ಮರೆಯಾದ ಎರಡನೇ ಸಿಪಾಯಿ ಕ್ರಾಂತಿಯ ಬಗ್ಗೆಯೂ ಅಷ್ಟೇ ಅಥೆಂಟಿಕ್‌ ಆಗಿ ಬರೆಯುತ್ತಾರೆ.

ಇಲ್ಲಿ ಭೂಮಿಯನ್ನು ಮೇಲಿದ್ದುಕೊಂಡು ಕಾಪಾಡುವ, ‘ದ್ಯುಲೋಕʼ ಕರೆಯಲಾಗುವ ಸ್ವರ್ಗೀಯ ಸಂಗತಿಗಳಿಗೆ ಸಂಬಂಧಪಟ್ಟ, ಹಾಗೇ ಈ ಮಣ್ಣಿಗೂ ಮನುಷ್ಯರ ಭಾವನೆಗಳಿಗೂ ಸಂಬಂಧಿಸಿದ ಬರಹಗಳೂ ಇವೆ. ಹೀಗಾಗಿಯೇ ‘ನೆಲ ಮುಗಿಲುʼ ಎಂಬ ಹೆಸರು ಈ ಕೃತಿಗೆ ಅರ್ಥಪೂರ್ಣವಾಗಿದೆ. ಯಾಜಿಯವರು ಇಲ್ಲಿನ ಬರಹಗಳನ್ನು ‘ಅಂಬರದಿಂದʼ ಮತ್ತು ‘ಅವನಿಯ ತನಕʼ ಎಂಬ ಎರಡು ವಿಭಾಗಗಳನ್ನು ಮಾಡಿದ್ದಾರೆ. ಮನುಷ್ಯನ ಬದುಕು ಈ ಭೂಮಿಯ ಸಂಗತಿಗಳಿಗೆ ಹೊಂದಿಕೊಂಡಿರುವಂತೆಯೇ, ಅಮೂರ್ತವಾದ ಅನೇಕ ಸಂಗತಿಗಳಿಗೂ ಕೃತಜ್ಞವಾಗಿದೆ ಎಂಬುದನ್ನು ಇದು ಸಾರುತ್ತದೆ. ಉದಾಹರಣೆಗೆ ತತ್ವಮಸಿ, ಪ್ರಜ್ಞಾನಂ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ಅಯತಾತ್ಮಾ ಬ್ರಹ್ಮ ಎಂಬ ಉಪನಿಷತ್ತಿನ ವಾಕ್ಯಗಳಿಗೆ ಇವರು ಮಾಡುವ ವ್ಯಾಖ್ಯಾನಗಳನ್ನೇ ಪರಿಶೀಲಿಸಬಹುದು. ಅಂಥ ಇನ್ನಷ್ಟು ಗಾಢವಾದ ಓದಿಗಾಗಿ ಓದುಗನನ್ನು ಸಜ್ಜುಮಾಡುವ ಬಗೆಯ ಬರಹಗಳು ಇವು.

ಇಲ್ಲಿ ಎರಡು ಮೂರು ಬಾರಿ ಓದಿ ಅರ್ಥಮಾಡಿಕೊಳ್ಳಬೇಕಾದಂಥ ಬರಹಗಳು, ವಾಕ್ಯಗಳು ಇವೆ. ಉದಾಹರಣೆಗೆ, ನಚಿಕೇತನ ಬಗೆಗಿನ ಬರಹದಲ್ಲಿ ಬರುವ “ಹುಟ್ಟು ಸಾವುಗಳು ಕೇವಲ ಕರ್ತೃ ಮತ್ತು ಕರ್ಮಗಳಿಲ್ಲದ ಕ್ರಿಯೆ ಆಗಬೇಕು” ಎಂಬ ಮಾತು. ಹಾಗೇ ಈಶಾವಾಸ್ಯ ಉಪನಿಷತ್ತಿನ ಬಗ್ಗೆ ಬರೆದ ಬರಹದಲ್ಲಿ ಬರುವ “ನಮ್ಮೊಳಗಿನ ಆತನನ್ನು ಅರಿಯಲು ಹೊರಗಡೆ ಕಟ್ಟಿದ ನಮ್ಮದೇ ಆವರಣವನ್ನು ನಾವು ಮುರಿಯಬೇಕು” ಎಂಬ ಮಾತು. ಹಾಗೇ ಮಹಾತ್ಮ ಗಾಂಧಿಯವರ ಬಗ್ಗೆ ಹೇಳುವ ‘ಭಯವಿಲ್ಲದ ಅಸ್ತ್ರದಿಂದಲೇ ಭಯ ಹುಟ್ಟಿಸಿದ ಸಂತʼ ಎಂಬ ಮಾತು. ಇಂಥ ಸಾಲುಗಳನ್ನು ತೀರಾ ಮಗ್ನವಾಗಿ ಓದದೇ ಹೋದ ಹೊರತು ಅರ್ಥ ಮಾಡಿಕೊಳ್ಳಲಾಗದು.

(ಹರಿಪ್ರಕಾಶ್‌ ಕೋಣೆಮನೆ)

ಹಾಗೇ ಇವೆಲ್ಲವನ್ನೂ ಅವರು ಈ ಕಾಲದ ಜ್ಞಾನದ ಜತೆಗೆ ಸೊಗಸಾಗಿ ತಳುಕು ಹಾಕುತ್ತಾರೆ. ಉದಾಹರಣೆಗೆ, ಕಠೋಪನಿಷತ್ತಿನ ನಚಿಕೇತನ ವಿನಯವನ್ನು ಬಸವಣ್ಣನವರ ‘ಎನಗಿಂತ ಕಿರಿಯರಿಲ್ಲʼ ಎಂಬ ವಚನದ ಜತೆಗೆ ಹೋಲಿಸಿ ಅವರು ನೀಡುವ ಹೋಲಿಕೆ ಇಡೀ ಬರಹಕ್ಕೇ ಒಂದು ಹೊಸ ಆಯಾಮವನ್ನು ನೀಡುತ್ತದೆ. ಹಾಗೆಯೇ, ಈಶಾವಾಸ್ಯೋಪನಿಷತ್ತಿನ ‘ತೇನ ತ್ಯಕ್ತೇನ ಭುಂಜೀಥಾʼ (ತ್ಯಾಗದಿಂದಲೇ ಅನುಭವಿಸಬೇಕು) ಎಂಬ ಮಾತನ್ನು ಇವರು ಇಸ್ಲಾಂನ ಕುರಾನ್‌ನ ‘ನಿನ್ನ ನೆರೆಮನೆಯವರು ಉಪವಾಸವಿದ್ದಾಗ ನೀನು ಹಬ್ಬ ಮಾಡಕೂಡದುʼ ಎಂಬ ಮಾತಿಗೆ, ‘ಎಲ್ಲ ಉತ್ತಮ ಉಡುಗೊರೆಗಳೂ ನಮಗೆ ಸ್ವರ್ಗದಿಂದ ಕೊಡಲ್ಪಟ್ಟಿವೆʼ ಎಂಬ ಬೈಬಲ್‌ಗೆ ಮಾತಿಗೆ ಹೋಲಿಸುತ್ತಾರೆ. ಇದು ಎಷ್ಟು ಸೊಗಸಾಗಿದೆ ಅಲ್ಲವೇ?

ಹೀಗೆ ನಮ್ಮನ್ನು ಪುರಾಣ- ಉಪನಿಷತ್ತು- ಇತಿಹಾಸ- ವರ್ತಮಾನಗಳ ಕೋಣೆ ಕೋಣೆಗಳಲ್ಲಿ ಸುತ್ತಾಡಿಸುವ ಇವರ ಬರಹಗಳು ನನಗಂತೂ ತುಂಬಾ ತಿಳಿವನ್ನೂ ಆನಂದವನ್ನೂ ಕೊಟ್ಟಿವೆ. ನಿಮಗೂ ನೀಡಲಿದೆ ಎಂಬ ದೃಢವಿಶ್ವಾಸ ನನ್ನದು.

(ಕೃತಿ: ನೆಲ ಮುಗಿಲು (ಅಂಕಣ ಬರಹಗಳ ಸಂಕಲನ), ಲೇಖಕರು: ನಾರಾಯಣ ಯಾಜಿ, ಪ್ರಕಾಶಕರು: ಯಾಜಿ ಪ್ರಕಾಶನ, ಬೆಲೆ: 220/-)