ಮೌಂಟ್ ಅಬುನಲ್ಲಿನ ಆಶ್ರಮಕ್ಕೆ ಹೋಗಿದ್ದೆ. ಅಲ್ಲಿ ಇಪ್ಪತ್ತು ನಾಲ್ಕು ಗಂಟೆ ಊಟದ ಮನೆ ಸೇವೆ ಇರುತ್ತೆ ಅಂತ ಯಾರೋ ಹೇಳಿದ್ದರು. ಇಪ್ಪತ್ತು ನಾಲ್ಕು ಗಂಟೆ ಊಟದ ಮನೆ ಸೇವೆ ಇದ್ದರೆ ದೇವರನ್ನ ಯಾವಾಗ ನೋಡೋದು ಅನ್ನುವ ಸಂಶಯ ಹುಟ್ಟಿತ್ತು. ನನ್ನಾಕೆ ಒಂದು ಮೊಟಕು ಕೊಟ್ಟು ಇಪ್ಪತ್ನಾಲ್ಕು ಗಂಟೇನೂ ತಿಂತಲೇ ಕೂಡು ಹಾಗಿಲ್ಲ ಅಂತ ಭೋಜನ ಶಾಲೆಯಿಂದ ಆಚೆಗೆ ದರ ದರ ಎಳೆದುಕೊಂಡು ಹೋಗಿದ್ದಳು. ಊಟಕ್ಕೆ ಅಲ್ಲೂ ಚಪಾತಿ, ಅದಕ್ಕೆ ನೆಂಚಿಕೊಳ್ಳೂಕ್ಕೆ ಅದೇನೋ ಒಂದು. ಅನ್ನ? ಊಹೂಂ ಅದಿಲ್ಲ…
ಎಚ್. ಗೋಪಾಲಕೃಷ್ಣ ಬರೆದ ಹಾಸ್ಯ ಪ್ರಬಂಧ ನಿಮ್ಮ ಓದಿಗೆ

ಮೊದಮೊದಲು ಅಂದರೆ ನಲವತ್ತು ಐವತ್ತು ವರ್ಷ ಹಿಂದೆ ನಾನು ಇನ್ನೂ ಪಡ್ಡೆ ಆಗಿದ್ದ ಕಾಲದಲ್ಲಿ ದೇವರು, ದೇವಸ್ಥಾನ, ಪುಣ್ಯಕ್ಷೇತ್ರ, ಮಠ. ಸ್ವಾಮಿಗಳು.. ಇವೆಲ್ಲಾ ನನಗೆ ತುಂಬಾ ಅಂದರೆ ತುಂಬಾನೆ ದೂರ ಇದ್ದವು.

ಆಗ ನಾನು ಮರಿ ಕಾರ್ಲ್ ಮಾರ್ಕ್ಸು. ದಾಸ್ ಕ್ಯಾಪಿಟಲ್ ಅನ್ನುವ ಮೂರು ಸಂಪುಟದ ದೊಡ್ಡ ದಪ್ಪ ಪುಸ್ತಕಗಳು ನನ್ನಲ್ಲಿತ್ತು. ಅದನ್ನ ಓದಲು ಯತ್ನಿಸಿ ಎರಡು ಮೂರು ಪುಟ ಓದಿ ಸೋತು ಕೈ ಬಿಟ್ಟಿದ್ದೆ. ದೇವರು ಧರ್ಮ ಎಲ್ಲವೂ ಅಫೀಮು ಅಂತ ಮೈಕು ಹಿಡಿದು ಭಾಷಣ ಮಾಡಿ ಮಾಡಿ ಭಾಷಣ ಚಕ್ರವರ್ತಿ ಅಂತ ಹೆಸರು ಮಾಡಿದ್ದೇ… ಪುಟ್ಟದಾಗಿ ಬುಲ್ಗಾನಿನ್ ಗಡ್ಡ ಬಿಟ್ಟಿದ್ದೆ, ಮೀಡಿಯಂ ಮೀಸೆ ಇತ್ತು ಬನ್ನಿ ಭಾಷಣಕ್ಕೆ ಅಂತ ಯಾರೇ ಕೂಗಿದರೂ ಕೆಂಪು ಜುಬ್ಬ, ಕೆಂಪು ಟೋಪಿ, ಬಿಳಿ ಪ್ಯಾಂಟು ಏರಿಸಿ ಥೈ ಅಂತ ಗೆಜ್ಜೆ ಕಟ್ಕೊಂಡು ಹೊರಟು ಬಿಡ್ತಾ ಇದ್ದೆ. ಮೈಕಿನ ಮುಂದೆ ನಿಂತು ಎರಡು ಗಂಟೆ ಒಂದೇ ಸಮ ಮಲೆನಾಡಿನ ಮಳೆ ಹಾಗೆ ಎದುರಿಗೆ ಕೂತಿರುತ್ತಿದ್ದ ತಬ್ಬಲಿಗಳನ್ನು ಕೊರೆದು ಚಿಂದೀ ಮಾಡಿ ಬಿಡ್ತಾ ಇದ್ದೆ. ಕ್ರಾಂತಿ ಮಾಡ್ತೀವಿ ಅಂತ ಎಲ್ಲಾ ಪಡ್ಡೆಗಳೂ ಸೇರಿ ರಾತ್ರಿ ಪಾರ್ಟಿ ಮಾಡ್ತಾ ಇದ್ದೆವು… ಆಗ ದೇವಸ್ಥಾನಕ್ಕೆ ಹೋಗೋರು ಪಾಳೇಗಾರಿಕೆ ಪಳೆ ಉಳಿಕೆಗಳು, ಬೂರ್ಜ್ವಾ ಗಳು ದೇವರ ಹೆಸರಿನಲ್ಲಿ ಸಮಾಜ ಛಿದ್ರ ಮಾಡ್ತಾರೆ ಅಂತ ನನ್ನ ಭಾಷಣದ ಜಿಸ್ಟು.. ಇದು ಹಾಗಿರಲಿ.

ಮದುವೆ ಆಗಿ ಮಕ್ಕಳೂ ಆಗಿ ಸಂಸಾರ ಬಂಧನದಲ್ಲಿ ಸಿಲುಕಿಕೊಂಡಿದ್ದೇ… ಕಾರ್ಲ್ ಮಾರ್ಕ್ಸ್ ಕಾಣದಂತೆ ಮಾಯವಾಗಿ ಬಿಟ್ಟ. ಕಾಣದಂತೆ ಮಾಯವಾದನೋ ನಮ್ಮ ಶಿವನು ಅಂತ ಹಾಡು ಇದೆಯಲ್ಲಾ ಹಾಗೇನೇ ಕಾಣದಂತೆ ಮಾಯವಾದನೋ ನಮ್ಮ ಮಾರ್ಕ್ಸು…

ಮಾರ್ಕ್ಸು ಮಾಯ ಆಗುತ್ತಿದ್ದ ಹಾಗೇ ನಮಗೆ ಅಂಟಿದ್ದು ಮೊದಮೊದಲು ಪುಟ್ಟ ಪುಟ್ಟ ದೇವರ ತಾನಗಳು ಅಂದರೆ ಚಿಕ್ಕ ದೇವಸ್ಥಾನಗಳು. ಪುಟ್ಟಪುಟ್ಟ ಅಂತ ಯಾಕೆ ಹೇಳುತ್ತಿದ್ದೇನೆ ಅಂದರೆ ಇಲ್ಲಿ ಊಟ, ಹೊಟ್ಟೆ ತುಂಬಾ ಪ್ರಸಾದ, ಪಾರಾಯಣ, ದಾಸೋಹ, ಭೋಜನ ಶಾಲೆ, ಪ್ರಸಾದ ಗೃಹ, ಪರಿಮಳ ಭವನ ಅಂತ ಏನೂ ಇರಲ್ಲ. ಚಿಕ್ಕ ಸೈಟಿನಲ್ಲಿ ಕಟ್ಟಿರೋ ದೇವರ ಗುಡಿ. ನೋಡಿದ ಕೂಡಲೇ ಇದು ಉಳ್ಳವರದ್ದು ಅಲ್ಲ ಅಂತ ಹೇಳಬಹುದು. ಉಳ್ಳವರದ್ದು ಅನ್ನೋ ಪದ ಹೇಗೆ ಹುಟ್ಟಿತು ಅಂತೀರಿ, ಸಾಹುಕಾರರು ಅಂದರೆ ಉಳ್ಳವರು ಬಡವರು ಅಂದರೆ ಅವರು ಉಳ್ಳವರಲ್ಲ. ಇದು ನಮ್ಮ ಆಗಿನ ಪರಿಭಾಷೆ. haves and have nots ಅನ್ನುವ ಹಾಗೆ.

ಈ ದೇವಸ್ಥಾನಗಳು ಉಳ್ಳವರದ್ದು ಅಲ್ಲ ಅಂತ ಹೇಗೆ ಹೇಳಬಹುದು ಅಂದರೆ ಇಲ್ಲಿ ಊಟದ ಬದಲಿಗೆ ಮಂಗಳಾರತಿ ನಂತರ ಒಂದು ಪುಟ್ಟ ದೊನ್ನೆಯಲ್ಲಿ ಅಥವಾ ಪೇಪರ್ ಲೋಟದಲ್ಲಿ ಒಂದು ಚಮಚ ಅಥವಾ ಒಂದೂವರೆ ಚಮಚದಷ್ಟು ಪ್ರಸಾದ ಅಂತ ಕೊಡುತ್ತಾರೆ. ಒಂದು ಪುಟ್ಟ ಬಕೆಟ್‌ನಲ್ಲಿನ ಪ್ರಸಾದ ಅದೆಷ್ಟೋ ಸಾವಿರ ಭಕ್ತರಿಗೆ ಹಂಚಿಕೆ ಆಗುತ್ತೆ ಅಂತ ನನ್ನ ಗೆಸ್ಸಿಂಗ್.

ಆ ತರಹದ ಸಾವಿರ ದೊನ್ನೆಯ ಪ್ರಸಾದ ತಿಂದರೂ ನಿಮ್ಮ ಹೊಟ್ಟೆಯ ಸಾವಿರದ ಒಂದನೇ ಭಾಗವೂ ತುಂಬಲ್ಲ. ಇಂತಹ ಪುಟ್ಟ ಪುಟ್ಟ ಜಾಗಗಳಿಗೆ ಹೋಗಿ ಅಭ್ಯಾಸ ಆದನಂತರ ಪೂರ್ತಿ ಸಾಕು ಅನ್ನೋವರೆಗೆ ಊಟ ಹಾಕ್ತಾರಲ್ಲ ಅಂತಹ ದೊಡ್ಡ ದೇವರ ಆಸ್ಥಾನಗಳಿಗೆ ನನಗೆ ನಮ್ಮ ನೆಂಟರು ಇಷ್ಟರ ಮೂಲಕ ಪ್ರಮೋಷನ್ ಆಯಿತು. ಪ್ರಮೋಷನ್ ಆಗಿದ್ದೇ ಅದು ಇಷ್ಟು ವರ್ಷ ಬಿಟ್ಟಿದ್ದನ್ನು ಈಗಲೇ ದಕ್ಕಿಸಿಕೊಳ್ಳಲೇಬೇಕು ಅನ್ನುವ ಬಕಾಸುರನ ಹಾಗೆ… ಅದೂ ಮುಖ್ಯವಾಗಿ ಊಟ ಉಣ್ಣುವ ಕ್ರಿಯೆ.. ಹೀಗೆ ಆದಮೇಲೆ ನಾನು ಉಣ್ಣದೇ ಇರುವ ಸ್ಥಳವೇ ಇಲ್ಲ ಇವರೇ.. ದೇವಸ್ಥಾನ, ಮಠ, ಗುರುದ್ವಾರ, ದಾಸೋಹ ಕೇಂದ್ರ, ಗಂಜಿ ಮನೆ, ಪರಿಮಳ ಪ್ರಸಾದ ಗೃಹ….. ಹೀಗೆ ಯಾವುದೂ ನನ್ನ ಲಿಸ್ಟಿನಿಂದಾ ಹೊರಗೆ ಇಲ್ಲ!

ಈ ವೇಳೆಗೆ ಬುಲ್ಗಾನಿನ್‌ನಲ್ಲಿ ಒಂದೆರೆಡು ಬಿಳಿ ಕೂದಲು ಕಾಣಿಸಿತು ಅಂತ ಬುಲ್ಗಾನಿನ್ ಬೋಳಿಸಿದ್ದೆ.

ಅದರ ಅಂದರೆ ಊಟದ ಅನುಭವದ ಲಕ್ಷದ ಒಂದನೇ ಭಾಗ ನಿಮ್ಮ ಜತೆ ಹಂಚಿಕೊಳ್ಳಲೇ….?

ದಾಸೋಹದ ಊಟ ತೀರಾ ಈಚೇಗೆ ಉಂಡಿದ್ದರಿಂದ ನೆನಪು ಇನ್ನೂ ಮಾಸಿಲ್ಲ. ಸಾಲಾಗಿ ಕುಂಡ್ರಿಸಿ ತಟ್ಟೆ ಇಟ್ಟು ರೊಟ್ಟಿ ಪಲ್ಲೆ ಅನ್ನ ಸಾರು ಅನ್ನ ಮೊಸರು ಹಾಕ್ತಾರೆ ನೋಡಿ, ಅದೇ ಒಂದು ರೀತಿ ಬೇರೆ ಅನ್ಸುತ್ತೆ…

ಗುರುದ್ವಾರದಲ್ಲಿ ಉಂಡಿದ್ದು ಮೊದಲನೆಯದು. ಅದಕ್ಕೇ ಅದಿನ್ನೂ ನೆನಪಲ್ಲಿ ಇರೋದು. ಮೊದಲನೇ ಪ್ರೇಮ ಹಾಗೂ ಮೊದಲ ತಪರಾಕಿ ಕೊನೆ ತನಕ ನೆನಪಲ್ಲಿ ಇರುತ್ತೆ ಅನ್ನುತ್ತಾರೆ. ಇದೂ ಸಹ ಅದೇ ಜಾತಿಗೆ ಸೇರಿದ್ದು…. ದೇವರ ದರ್ಶನ ಆಯ್ತಾ… ಊಟದ ಹಜಾರ ಹೊಕ್ಕುವಿರಿ. ಸಾಲಾಗಿ ಕೂಡಿಸಿ ಒಂದು ಸ್ಟೀಲ್ ತಟ್ಟೆ ಕೈಗೆ ಕೊಡುತ್ತಾರೆ. ಅದರಲ್ಲಿ ಎರಡು ದಪ್ಪನೆ ಚಪಾತಿ ಹಾಕ್ತಾರೆ. ಅದರ ಹಿಂದೇನೆ ಅದಕ್ಕೆ ನೆಂಚಿಕೊಳ್ಳಲು ದಾಲ್ ಬರುತ್ತೆ. ಅದರ ನಂತರ ತಟ್ಟೆ ಪಕ್ಕ ಒಂದು ಬೋಗುಣಿ ಇಟ್ಟು ಅದಕ್ಕೆ ಸೀಗಂಜಿ ಸುರಿತಾರೆ. ಚಪಾತಿ ಬೇಕಾ ಅಂತ ಎರಡನೇ ಸಲ ಮೂರನೇ ಸಲ ಕೇಳಿಕೊಂಡು ಬರ್ತಾರೆ. ನೀವು ಅನ್ನ ಬರುತ್ತೆ ಅಂತ ಎರಡನೇ ಸಲ ಮೂರನೇ ಸಲ ಆ ದಪ್ಪನೆ ಚಪಾತಿ ಹಾಕಿಸಿಕೊಂಡು ಕಷ್ಟಪಟ್ಟು ಅದನ್ನ ತಿಂದು ಕಾದಿದ್ದರೆ, ನಿಮಗಿಂತ ಉಲ್ಲೂ ಬೇರೆ ಇಲ್ಲ..! ಅಲ್ಲಿ ಅನ್ನ ಇಲ್ಲ, ಬರೀ ಚಪಾತಿ ಅಷ್ಟೇ..!

ನನ್ನ ಅರವತ್ತೈದನೇ ವಯಸ್ಸಲ್ಲಿ ಮೊಟ್ಟ ಮೊದಲನೇ ಬಾರಿಗೆ ಏಡು ಕೊಂಡಲ ಸ್ವಾಮೀನ ನೋಡಲು ಹೋಗಿದ್ದೆ. ಮೊಟ್ಟ ಮೊದಲನೇ ಬಾರಿಗೆ ಅಂತ ಹೇಳಿದ್ದು ಯಾಕೆ ಅಂದರೆ ನಾನು ಮರಿ ಕಾರ್ಲ್ ಮಾರ್ಕ್ಸ್ ಆಗಿದ್ದೆನಲ್ಲಾ, ದೇವಸ್ಥಾನಕ್ಕೆ ಹೋಗ್ತಾ ಇರ್ಲಿಲ್ಲ. ಅದು ಅಂದರೆ ದೇವಸ್ಥಾನಕ್ಕೆ ಹೋಗಬಾರದು ಅನ್ನೋದು ಆಗಿನ ನಮ್ಮ ಪಡ್ಡೆ ಗಳಲ್ಲಿ ಒಂದು ಅನ್ ರಿಟನ್ ರೂಲ್. ಈಗ ಆ ರೂಲ್ ಇದ್ದ ಹಾಗೆ ಕಾಣೆ, ಕಾರಣ ಮೈಕ್ ಮುಂದೆ ನಿಂತು ಒಂದೂವರೆ ಗಂಟೆ ದೇವರನ್ನ ಹಿಗ್ಗಾ ಮುಗ್ಗಾ ಎಳೆದು ಬಂದೋರು ದೇವರ ತೀರ್ಥ ತಗೊಂಡು ಅಲ್ಲೇ ಪ್ರಸಾದಕ್ಕೆ ಕೂಡೋದನ್ನ ಕಂಡಿದ್ದೇನೆ.

ದೇವರನ್ನು ನೋಡೋದಕ್ಕೆ ಸಹ ಜನ ಎರಡು ದಿವಸ ಮೂರು ದಿವಸ ಕ್ಯೂ ನಲ್ಲಿ ಕಾಯ್ತಾರೆ ಅಂತ ಅವತ್ತು ಮೊದಲ ಬಾರಿಗೆ ಏಡು ಕೊಂಡಲ ಸ್ವಾಮಿ ದರ್ಶನಕ್ಕೆ ಕ್ಯೂನಲ್ಲಿ ನಿಂತಾಗ ಅನುಭವ ಆಯ್ತು. ಎರಡೂವರೆ ದಿವಸ ಕಾದು ದೇವರನ್ನ ನೋಡಿದೆ.

ಸೀನಿಯರ್ಸ್‌ಗೆ ಬೇಗ ಒಳಗೆ ಬಿಡ್ತಾರಲ್ಲ ಅಂತ ನೀವು ಕೇಳ್ತಿರಿ ಅಂತ ನನಗೆ ಗೊತ್ತು. ನಾನು ಆಗಲೇ ಹೇಳಿದ ಹಾಗೆ ಮಾರ್ಕ್ಸ್ ಶಿಷ್ಯ, ಅದರಿಂದ ಸೀನಿಯರ್ ಎಂಬುವ ಸ್ಪೆಷಲ್ ಪ್ರಿವಿಲೆಜ್ ಬೇಡ ಅಂತ ಜನ ಸಾಮಾನ್ಯರ ಕ್ಯೂಗೆ ಸೇರಿಕೊಂಡಿದ್ದೆ. ಅಲ್ಲಿ ಅವಾಗವಾಗ ಪುಳಿಯೋಗರೆ, ಮೊಸರನ್ನ, ಉಪ್ಪಿಟ್ಟು, ಚಿತ್ರಾನ್ನ… ಇವೆಲ್ಲಾ ಒಂದಾದ ಮೇಲೆ ಒಂದು ಬಂದು ಮುಂದೆ ಏನು ಬರಬಹುದು ಅಂತ ಗೆಸ್ ಮಾಡೋದೇ ಆಯ್ತೇ ಹೊರತು ದೇವರು ಮನಸಿಗೆ ಬರಲಿಲ್ಲ. ಈಗ ದೇವರನ್ನು ದರ್ಶನ ಮಾಡಿದ ನೆನಪೂ ಇಲ್ಲ. ಆದರೆ ಅಲ್ಲಿ ತಿಂದ್ನಲ್ಲ ತಿಂಡಿ ಊಟ ಅದರ ನೆನಪು ಇನ್ನೂ ಹಸಿರು ಅಂದರೆ ಹಸಿರು. ಆದರೂ ಅಲ್ಲಿ ಕೊಟ್ರಲ್ಲ ಪ್ರಸಾದ ಅವು ಸೂಪರ್ ಕಣ್ರೀ. ಪ್ರತಿ ಸಲವೂ ಹೊಟ್ಟೆ ತುಂಬಿ ತುಳುಕೋ ಅಷ್ಟು.. ದಿವಸಕ್ಕೆ ಆರೋ ಏಳೋ ಊಟ ಆಯ್ತು…. ಅದರ ಜತೆಗೆ ಅಲ್ಲಿ ಲಾಡು ಕೊಂಡುಕೊಂಡೆವಲ್ಲಾ ಅದರ ರುಚಿ ಸಹ ಈಗಲೂ ಉಳಿದಿದೆ ಮತ್ತು ಯಾರೇ ಅಲ್ಲಿಗೆ ಹೋಗ್ತೀವಿ ಅಂದರೂ ನನಗೆ ಒಂದು ಲಾಡು ತನ್ನಿ ಪ್ಲೀಸ್ ಅಂತ ಕೇಳಿ ಕೊಳ್ತಿನಿ, ಊಹೂಂ, ಬೇಡ್ಕೊತೀನಿ. ಈ ಸ್ವಾಮಿಯನ್ನು ನೋಡಿ ಬಂದ ಮೇಲೆ ಎರಡು ವಾರ ಹಾಸಿಗೆ ಹಿಡಿದಿದ್ದೆ. ಮನೆಯಲ್ಲಿ ಎಲ್ಲರೂ ಯಾಕೆ ಹೀಗಾಯ್ತು ಅಂತ ಚಿಂತೆಲಿ ಇದ್ದರೆ ನನಗೆ ಒಳಗೊಳಗೇ ನಗು. ದಿವಸಕ್ಕೆ ಆರು ಎಂಟು ಊಟ ತಿಂದರೆ ಯಾವ ಪೈಲ್ವಾನ್ ಹೊಟ್ಟೆ ತಡಿತೈತೆ…?

ಮೌಂಟ್ ಅಬುನಲ್ಲಿನ ಆಶ್ರಮಕ್ಕೆ ಹೋಗಿದ್ದೆ. ಅಲ್ಲಿ ಇಪ್ಪತ್ತು ನಾಲ್ಕು ಗಂಟೆ ಊಟದ ಮನೆ ಸೇವೆ ಇರುತ್ತೆ ಅಂತ ಯಾರೋ ಹೇಳಿದ್ದರು. ಇಪ್ಪತ್ತು ನಾಲ್ಕು ಗಂಟೆ ಊಟದ ಮನೆ ಸೇವೆ ಇದ್ದರೆ ದೇವರನ್ನ ಯಾವಾಗ ನೋಡೋದು ಅನ್ನುವ ಸಂಶಯ ಹುಟ್ಟಿತ್ತು. ನನ್ನಾಕೆ ಒಂದು ಮೊಟಕು ಕೊಟ್ಟು ಇಪ್ಪತ್ನಾಲ್ಕು ಗಂಟೇನೂ ತಿಂತಲೇ ಕೂಡು ಹಾಗಿಲ್ಲ ಅಂತ ಭೋಜನ ಶಾಲೆಯಿಂದ ಆಚೆಗೆ ದರ ದರ ಎಳೆದುಕೊಂಡು ಹೋಗಿದ್ದಳು. ಊಟಕ್ಕೆ ಅಲ್ಲೂ ಚಪಾತಿ, ಅದಕ್ಕೆ ನೆಂಚಿಕೊಳ್ಳೂಕ್ಕೆ ಅದೇನೋ ಒಂದು. ಅನ್ನ? ಊಹೂಂ ಅದಿಲ್ಲ. ಅನ್ನ ಇಲ್ಲ ಊಟಕ್ಕೆ ಅಂದರೆ ಅದಕ್ಕಿಂತ ದೊಡ್ಡ ನಿರಾಸೆ ನನಗಂತೂ ಬೇರೆ ಅನ್ನೋದೇ ಇಲ್ಲ. ಅನ್ನಂ ಭಗವಂತಂ ನನಗೆ…! ಎರಡು ಕೇಜಿ ಕೇಸರಿ ಬಾತು, ಹತ್ತು ಕೇಜಿ ಉಪ್ಪಿಟ್ಟು ಕೊಡಿ, ಉಪ್ಪಿಟ್ಟು ಯಾಕೆ ಅಂದರೆ ಇದು ನನ್ನ ಫೇವರಿಟ್. ಉಪ್ಪಿಟ್ಟು ಕೇಸರಿ ಭಾತು ಮುಗಿಸ್ತಿನಾ…? ಅದರ ನಂತರ ಒಂದೇ ಒಂದು ಮುಷ್ಟಿ ಅನ್ನ ಬೇಕೇ ಬೇಕು ಇವರೇ… ಅದು ನನ್ನನ್ನು ನಮ್ಮ ಅಮ್ಮ ಬೆಳೆಸಿ ರೋ ರೀತಿ..

ಶಿರಡಿಗೆ ಹೋದೆನಾ? ಅಲ್ಲೂ ಚಪಾತಿ, ದಾಲ್, ಅನ್ನ ಊಹೂಂ…ಇನ್ನ ನಮ್ಮ ಹತ್ತಿರದ ದೇವಸ್ಥಾನಕ್ಕೆ ಬರ್ರಿ. ರಾಘವೇಂದ್ರ ಸ್ವಾಮಿ ಮಠಗಳು ಅಂದರೆ ಊಟ ತುಂಬಾ ರುಚಿ. ಊಟ ಮಾಡಲು ಯಾವ ಪ್ಲೇಸ್ ಅಂದರೆ ಸ್ಥಳ ಚೆನ್ನ ಅಂದರೆ ನನ್ನ ಉತ್ತರ ಮಠ ಅಂತ. ಯಾವ ಮಠ ಆದರೂ ಸರಿ… ಅದರಲ್ಲೂ ಅಲ್ಲಿನ ಬಿಸಿಬೇಳೆ ಬಾತ್ ಅಂದರೆ… ಬಾಯಲ್ಲಿ ಸಮುದ್ರ ಉಕ್ಕುತ್ತೆ. ಅಲ್ಲಿ ಒಂದು ಸಲ ಕಾಪಿ ಪಾತ್ರೆಲಿ ಬಿಸಿಬೇಳೆ ಬಾತ್ ಬಡಿಸಿದ್ದು ನನಗೆ ಇನ್ನೂ ಹಸಿರು. ಆದರೆ ಅಲ್ಲಿ ಒಂದು ರೂಲು ಇದೆ, ಸುಮಾರು ದಿವಸ ಅದಕ್ಕೆ ಅಲ್ಲಿಗೆ ಉಣ್ಣಲು ಹಾಜರಿ ಹಾಕಿರಲಿಲ್ಲ. ಊಟಕ್ಕೆ ಕುತ್ಕೋ ಬೇಕಾದರೆ ಪಂಚೆ ಉಟ್ಟಿರ್ಬೇಕು, ಶರ್ಟು ಬೇಡ.. ಶರ್ಟು ಬೇಡ ರೂಲ್ ಮೋಸ್ಟ್ಲಿ ಜನಿವಾರ ಕಾಣಲಿ ಅಂತ ಇರಬಹುದು. ಇದು ಮುಜುಗರ ಆಗುತ್ತೆ ಅಂತ ಮೊದಲು ಮೊದಲು ಅವಾಯ್ಡ್ ಮಾಡಿದೆ. ಆಮೇಲೆ ಒಂದು ಉಪಾಯ ಮಾಡಿದೆ. ಪಂಚೆ ಉಟ್ಕೋ, ಶಲ್ಯ ಫುಲ್ ಹೊದ್ದಿಕೊಳ್ಳೋದು. ತೀರಾ ಈಚೆಗೆ ಅದ್ಯಾವುದೋ ಒಂದು ಗುಂಪು ದೇವರನ್ನ ನೋಡೋಕ್ಕೆ ಅಂಗಿ ತೊಟ್ಟು ಬರಬಾರದು ಅನ್ನೋ ರೂಲ್ ತೆಗೆಯಿರಿ ಅಂತ ಅಹವಾಲು ಕೊಟ್ಟಿದ್ದಾರಂತೆ. ಇದಕ್ಕೆ ನನ್ನ ಬೆಂಬಲವೂ ಇದೆ, ಯಾಕೆ ಅಂತೀರಾ ಶರ್ಟು ಹಾಕೊಂಡು ದೇವರ ದರ್ಶನ ಮುಗಿಸಿ ಹಾಗೇ ಊಟದ ಸ್ಥಳಕ್ಕೂ ಹೋಗಬಹುದು ಅಲ್ವಾ ಅದಕ್ಕೆ..

ಪ್ರಮೋಷನ್ ಆಗಿದ್ದೇ ಅದು ಇಷ್ಟು ವರ್ಷ ಬಿಟ್ಟಿದ್ದನ್ನು ಈಗಲೇ ದಕ್ಕಿಸಿಕೊಳ್ಳಲೇಬೇಕು ಅನ್ನುವ ಬಕಾಸುರನ ಹಾಗೆ… ಅದೂ ಮುಖ್ಯವಾಗಿ ಊಟ ಉಣ್ಣುವ ಕ್ರಿಯೆ.. ಹೀಗೆ ಆದಮೇಲೆ ನಾನು ಉಣ್ಣದೇ ಇರುವ ಸ್ಥಳವೇ ಇಲ್ಲ ಇವರೇ.. ದೇವಸ್ಥಾನ, ಮಠ, ಗುರುದ್ವಾರ, ದಾಸೋಹ ಕೇಂದ್ರ, ಗಂಜಿ ಮನೆ, ಪರಿಮಳ ಪ್ರಸಾದ ಗೃಹ….. ಹೀಗೆ ಯಾವುದೂ ನನ್ನ ಲಿಸ್ಟಿನಿಂದಾ ಹೊರಗೆ ಇಲ್ಲ!

ಊಟ ಮಾಡಲು ಅನುಕೂಲವಾಗುವಂತೆ ಅದಕ್ಕೇ ಕೆಲವು ಕಡೆ ಟೇಬಲ್ಲು ಕುರ್ಚಿ ಪರ್ಮಿಟ್ ಇದೆ. ಪಂಚೆ ಶರ್ಟಿಗು ಸಹ ವಿನಾಯ್ತಿ ಇದೆ… ಪುಣ್ಯಕ್ಷೇತ್ರ ಹೋಗೋದು ಜಾಸ್ತಿ ಆಯ್ತಾ? ಅದರ ಒಂದೆರೆಡು ಅನುಭವ ಹೇಳಲೇಬೇಕು. ರಾತ್ರಿ ಊಟ ಮಾಡದೇ ಇರೋರಿಗೆ ಫಲಾರ ಕೊಡ್ತಾರೆ ಅಂತ ಒಂದು ಕಡೆ ಗೊತ್ತಾಯ್ತು, ಅದೂ ರಾತ್ರಿ ನಾವು ಉಂಡ ಮೇಲೆ? ಹಾಗಾಗಿ ನಮ್ಮ ಸ್ಟೆ ಮುಂದುವರೆಸಿದೆವು. ಮಾರನೇ ದಿವಸ ಏಕಾದಶಿ ಅಲ್ಲ ಅಂತ ಕನ್ಫರ್ಮ್ ಮಾಡಿಕೊಂಡೆ ನಾ.

ರಾತ್ರಿ ಫಳಾರಕ್ಕೆ ಅಂತಲೇ ಹೋಗಿ ಕೂತರೆ… ಮೊದಲು ಬಿಸಿಬಿಸಿ ಇಡ್ಲಿ ಕಾಯಿ ಚಟ್ನಿ, ಆಮೇಲೆ ಅವಲಕ್ಕಿ ಬಿಸಿಬೇಳೆ ಬಾತ್, ಖಾರ ಬೂಂದಿ, ಆಲೂ ಗೆಡ್ಡೆ, ಮಿರ್ಚಿ ಬಜ್ಜಿ, ಕಡಲೆ ಬೇಳೆ ಪಾಯಿಸ, ಮೊಸರವಲಕ್ಕಿ. ಕೇಳಿ ಕೇಳಿ ಎರಡು ಮೂರು ಸಲ ಬಡಿಸೋರು. ಅವತ್ತೇ ಅಲ್ಲಿ ಊಟಕ್ಕಿನ್ನ ಫಲಾರವೇ ಬೆಸ್ಟ್ ಅನ್ನಿಸಿ ಬಿಟ್ಟಿತು! ಇನ್ಮೇಲೆ ಇಲ್ಲಿಗೆ ಬಂದರೆ ರಾತ್ರಿ ಫಲಾಹಾರವೇ ಅಂತ ನಿರ್ಧರಿಸಿ ಬಿಟ್ಟೆ. ಹಾಗೇ ಪಾಲಿಸಿಕೊಂಡು ಬರ್ತಾ ಇದೀನಿ. ಹೀಗೆ ರುಚಿ ಹುಡುಕಿ ಹುಡುಕಿ ತಿಂದುಕೊಂಡು ಬರ್ತಾ ಬರ್ತಾ ಬರ್ತಾ ಇದ್ದರೆ ಅದೆಷ್ಟು ಹೊಸಾ ವಿಷಯ ಗೊತ್ತಾಗುತ್ತೆ ಅಂತೀರಿ?

ದ್ವಾದಶಿ ದಿವಸ ಬೆಳಿಗ್ಗೆ ಆರಕ್ಕೇ ಊಟ ಹಾಕ್ತಾರೆ ಒಂದು ಕಡೆ ಅಂತ ಗೊತ್ತಾಯ್ತು. ಅದಕ್ಕೆ ಏಕಾದಶಿ ದಿನವೇ ಹೋಗಿ ಬುಕ್ ಮಾಡಬೇಕು ಅಂತ ಮಾಹಿತಿ ಕೊಟ್ಟರು. ನಂಟರ ಮನೆಗೆ ಹಿಂದಿನ ದಿನವೆ ಹೋಗಿ ಟಿಕಾಣಿ ಹಾಕಿದೆವು. ನಂತರ ಹೋಗಿ ಟಿಕೆಟ್ ತಂದೆವು. ಬೆಳಿಗ್ಗೆ ಕ್ಯಾಬ್ ಮಾಡಿಕೊಂಡು ಅಲ್ಲಿಗೆ ಹೋದೆವು. ಬೆಳಿಗ್ಗೆ ಬೆಳಿಗ್ಗೆ ಆರೂವರೆಗೆ ಬಿಸಿ ಬಿಸಿ ಗಂಜಿ, ಅದರ ಮೇಲೆ ಹುಣಿಸೆ ಗೊಜ್ಜು, ಹಬೆ ಆಡ್ತಿರೋ ಮಲ್ಲಿಗೆ ಹೂವಿನ ಅನ್ನ, ತೆಂಗಿನ ಕಾಯಿ ಚಟ್ನಿ, ಎರಡು ಪಲ್ಯ, ಎರಡು ಕೋಸಂಬರಿ, ಚಿತ್ರಾನ್ನ, ಅನಾನಸ್ ಗೊಜ್ಜು, ಅಗಸೆ ಪಲ್ಯ, ತಿಳಿ ಸಾರು, ಆರೇಳು ತರಕಾರಿ ಹುರುಳಿ ಕಾಯಿ, ಗೋರಿಕಾಯಿ, ನವಿಲುಕೋಸು, ಆಲೂಗೆಡ್ಡೆ, ಸುವರ್ಣ ಗೆಡ್ಡೆ, ಕುಂಬಳಕಾಯಿ, ಸೌತೆಕಾಯಿ, ಹಸಿ ಕಡಲೆ ಬೀಜ ಇವೆಲ್ಲಾ ಹಾಕಿದ ಗಟ್ಟಿ ಹುಳಿ, ಅವಲಕ್ಕಿ ಹೆಸರುಬೇಳೆ ಪಾಯಸ, ಜಿಲೇಬಿ, ಮೊಸರು….. ಸ್ವರ್ಗದಲ್ಲೇ ಇದೀನಿ, ಅದು ಕೈಗೆ ಸಿಕ್ಕೆ ಬಿಡ್ತು ಅನ್ನಿಸದೇಇರಲು ಸಾಧ್ಯವೇ…!

ಇದರ ಎಫೆಕ್ಟ್ ಅಂದರೆ ಮೊಟ್ಟ ಮೊದಲ ಬಾರಿಗೆ ಒಂದು ಪಂಚಾಂಗ ಮನೆಗೆ ಬೇಕು ಅನ್ನಿಸಿದ್ದು. ದ್ವಾದಶಿ ಊಟ ಮುಗಿಸಿ ವಾಪಸ್ ಬರುವಾಗಲೇ ಒಂದು ಪಂಚಾಂಗ ಕೊಂಡುಕೊಂಡು ಬಂದೆ. ಅವತ್ತಿಂದ ಪ್ರತಿದಿನ ಪಂಚಾಂಗ ನೋಡಲು ಶುರು ಮಾಡಿದೆ. ಎಲ್ಲರಿಗೂ ಪಂಚಾಂಗ ನೋಡೋದು ಬರೋಲ್ಲ. ಪಂಚಾಂಗ ನೋಡೋದು ಸಹ ಒಂದು ಕಲೆ ಅಂತ ನನ್ನಾಕೆ ಬಳಿ ಪಂಚಾಂಗ ನೋಡೋದು ಕಲಿತ ಮೇಲೆ ಗೊತ್ತಾಯಿತು. ನನಗೆ ಗೊತ್ತಿಲ್ಲದೆ ದ್ವಾದಶಿ ಬರಬಾರದು ತಾನೇ, ಅದಕ್ಕೇ ದಿವಸಾ ಪಂಚಾಂಗ ನೋಡೋದು….

ಇನ್ನೊಂದು ಕಡೆಯ ಊಟದ ಸಂಗತಿ ಮರೆಯೋಕ್ಕೆ ಮೊದಲು ಹೇಳಿಬಿಡುತೇನೆ. ಇದು ಯಾಕೆ ಅಂದರೆ ನನ್ನ ವಿಸ್ತಾರವಾದ ಅನುಭವದಲ್ಲಿ ಇದು ತುಂಬಾ ತುಂಬಾ ವಿಶಿಷ್ಟವಾದದ್ದು. ಊಟಕ್ಕೆ ಕೂತೆ, ಪಲ್ಯ, ಕೋಸಂಬರಿ, ಗೊಜ್ಜು, ಉಪ್ಪು, ಚಿತ್ರಾನ್ನ, ಪಾಯಸ ಅನ್ನ ತೊವ್ವೆ ತುಪ್ಪ ಬಂತಾ.. ನಂತರ ಸಾರು. ಅದಾದಮೇಲೆ ಅನ್ನ ಸಾರು, ಅದಾದಮೇಲೆ ಮತ್ತೆ ಅನ್ನ ಸಾರು…! ಮೂರು ಸಲ ಅನ್ನ ಸಾರು! ಆಮೇಲೆ ಅನ್ನ ಹುಳಿ.. ನಂತರ ಮಿಕ್ಕಿದ್ದು ಅಂದರೆ ಸಿಹಿ ಖಾರ. ಕೊನೆಗೆ ಅನ್ನ ಮೊಸರು ಆಯ್ತಾ.
ಊಟ ಮುಗೀತಾ.. ಮೆಲ್ಲಗೆ ಮೆನೇಜರ್ ಆಫೀಸಿಗೆ ಹೋದೆ.

ಹೆ ಹೆ ನಮಸ್ಕಾರ ಅಂದೆ.

ಅವರು ಏನೋ ಲೆಕ್ಕ ಹಾಕ್ತಾ ಇದ್ದರು. ತಲೆ ಎತ್ತಿ ನನ್ನ ನೋಡಿದರ…

ನಮಸ್ಕಾರ… ಅಂದರು.

ಮತ್ತೆ ಹೆ ಹೇ ಮಾಡಿದೆ.

ಸಂಕೋಚ ಬೇಡಿ ಹೇಳಿ, ಸ್ವಲ್ಪ ಸಾರು ಬೇಕಿತ್ತಾ ಮನೆಗೇ… ಅಂತ ಕೇಳಿದರು.
ಮತ್ತೆ ಹೆ ಹೇ ಮಾಡಿದೆ. ಎರಡು ಸಲ ಎಂಜಲು ನುಂಗಿದೆ.
ನನ್ನ ಪಾಡು ನೋಡಿ ಅವರಿಗೆ ಏನನ್ನಿಸಿತೋ ಕುತ್ಕಳಿ ಅಂದರು. ಕೂತೆ.

ಹೇಳಿ ಏನು ಸಮಾಚಾರ…. ಅಂದರು. ಲೆಕ್ಕದ ಪುಸ್ತಕ ಪಕ್ಕಕ್ಕೆ ಇಟ್ಟು ನನ್ನ ಮಾತು ಕೇಳಲು ಉತ್ಸುಕರಾದರು. ಇಷ್ಟು ವೇಳೆಗೆ ಏನು ಕೇಳಬೇಕು ಅಂತ ಮನಸ್ಸು ಮೆದುಳು ವಾಕ್ಯ ತಯಾರಿಸಿಕೊಂಡಿತ್ತು. ಇವತ್ತು ಊಟಕ್ಕೆ ಕೂತಾಗ ಯಾಕೆ ಮೂರು ಸಲ ಸಾರು ಹಾಕಿದಿರಿ ಸಾರ್… ಅಂತ ಕೇಳಿದೆ. ಕೇಳಬೇಕು ಕೇಳಬಾರದು ಅಂತ ಗೊತ್ತಿಲ್ಲ. ಆದರೂ ಸಂಶಯ ಪರಿಹಾರ ಮಾಡ್ಕೋಬೇಕು ತಾನೇ.. ಅದೇನೋ ಸಂಶಯಾತ್ಮ ವಿನಷ್ಯತಿ… ಅಂತ ಬೇರೆ ಇದೆಯಲ್ಲಾ.

ಮೆನೇಜರ್ ನಕ್ಕರು. ಹೋ ಅದಾ. ಇಲ್ಲಿ ಊಟಕ್ಕೆ ಮೊದಲನೇ ಸಲ ಬಂದರಾ? ಇಲ್ಲಿ ನಮ್ಮದು ಅದೇ ರೂಢ ಸಂಪ್ರದಾಯ. ಹುಳಿ ಸ್ವಲ್ಪ ಮಾಡಿರ್ತಿವಿ, ಎರಡು ಮೂರು ಸಲ ಬಡಿಸೋ ಅಷ್ಟು ಇರುಲ್ಲ, ಒದಗಿಸೋದು ಕಷ್ಟ. ಅದಕ್ಕೇ ಸಾರು ಮೂರು ಸಲ ಹಾಕಿದರೆ ಆಮೇಲೆ ಹುಳಿನ ಯಾರೂ ಕೇಳದಿಲ್ಲ… ನಿಜವಾಗಲೂ ಇವರೇ, ಅವತ್ತು ಒಂದು ಒಂದು ಹೊಸಾ ವಿಷಯ ಕಲಿತೆ ಅಂತ ಖುಷಿ, ಸಂತೋಷ ಆಯ್ತು.

ಊಟದ ಸಂಗತಿ, ಯಾವ ದೇವಸ್ಥಾನ, ಯಾವ ಮಠ ಇಂತ ಕಡೆ ಊಟ ಹೇಗೆ ಅನ್ನೋದರಲ್ಲಿ ನಾನು ಗೂಗಲ್ ಮಾವ ಅಂತ ನನ್ನ ಬಂಧುಗಳು, ನೆಂಟರು, ಇಷ್ಟರು ನನ್ನನ್ನು ಕೊಂಡಾಡುತ್ತಾರೆ. ಇದೆಲ್ಲಾ ಸಾಧ್ಯ ಆಗಿದ್ದು ನಾನು ಕಾರ್ಲ್ ಮಾರ್ಕ್ಸ್ ನ ಮರೆತು ಬಿಟ್ಟೆ ನೋಡಿ ಅದರಿಂದ.

ಅಂದ ಹಾಗೇ ನಾನು ಈಗ ಕೆಂಪು ಜುಬ್ಬಾ ತೊಡುಲ್ಲ ಮತ್ತು ಕೆಂಪು ಟೋಪಿ ಸಹ. ಎರಡೂ ತಲಾ ಮೂರು ಜತೆ ಇದೆ ಆ ಕಾಲದ್ದು. ಅದನ್ನ ಭದ್ರವಾಗಿ ಮಡಿಸಿ ಒಂದು ಬ್ಯಾಗ್‌ನಲ್ಲಿ ತುರುಕಿ ಅಟ್ಟದ ಮೇಲೆ ಒಂದು ಮೂಲೆಯಲ್ಲಿ ಬಚ್ಚಿಟ್ಟು ಮರೆತಿದ್ದೀನಿ. ಕಾರ್ಲ್ ಮಾರ್ಕ್ಸ್‌ನ ದಪ್ಪನೆ ಮೂರು ಪುಸ್ತಕ ಅದ್ಯಾವಾಗಲೋ ನನ್ನಾಕೆ ಹಳೇ ಪೇಪರ್‌ನವನಿಗೆ ಸುಮ್ಮನೆ ಕೊಟ್ಟು ಬಿಟ್ಟಿದ್ದಾಳೆ…

ಇದೆಲ್ಲಾ ಸರಿ, ಆ ಕೆಟ್ಟ ಚಾಳಿ ಭಾಷಣ ಬಿಟ್ರಾ ಅಂದರೆ… ಇಲ್ಲ, ಬಿಟ್ಟಿಲ್ಲ. ಭಾಷಣ ಒಂದು ಚಟ, ಸುಲಭಕ್ಕೆ ಬಿಡೋದೂ ತುಂಬಾ ಕಷ್ಟ. ಭಾಷಣಕ್ಕೆ ಹೋಗ್ತೀನಿ ಚಟ ಬಿಡೋಕ್ಕೆ ಆಗಿಲ್ಲ ಅದಕ್ಕೆ. ಭಾಷಣದಲ್ಲಿ ದೇವರು, ಜಾತಿ, ವರ್ಗ ಸಂಘರ್ಷ, ಅಫೀಮು, ಬೂ ರುಜವಾ ಮೊದಲಾದ ಪದಗಳನ್ನು ಮರೆತೂ ಸಹ ಬಳಸೋದಿಲ್ಲ…. ಜುಟ್ಟು ಜನಿವಾರ ಅವರಿಗೆ ಕೊಟ್ಟು ನಾವು ಹಾಳಾದೆವು ಅಂತ ಪರೋಕ್ಷವಾಗಿ ಆಳೋರನ್ನ ಬೈತೀನಿ…. ಅದಕ್ಕೇ ನಾನು ನನ್ನ ಅತ್ಯಂತ ದೀರ್ಘ ಅನುಭವದಿಂದ ನಮ್ಮ ಲಾಲ್ ಝಂಡಾ ಹುಡುಗರಿಗೆ ಹೇಳ್ತಾ ಇರ್ತೀನಿ, ಮಾರ್ಕ್ಸು ಬರೀ ಭಾಷಣಕ್ಕೆ ಇರಲಿ ಕಣ್ರೋ ಅಂತ….! ಭಾಷಣ ಮೀರಿ ಅವನನ್ನು ನೀವು ಮನೆಗೆ ತಂದರೆ ನಿಮ್ಮ ಜೀವನದಲ್ಲಿ ಅಮೂಲ್ಯವಾದದ್ದು ಕಳ್ಕೊತೀರಿ, ಅರ್ಥ ಮಾಡ್ಕಳ್ರೀ ಅಂತ….

ಎಚ್. ಗೋಪಾಲಕೃಷ್ಣ