ಮಲ್ಲೇಶ್ವರದ ಹದಿನೆಂಟನೇ ಕ್ರಾಸಿನಲ್ಲಿ ಅವರ ಮನೆಗೆ ಯಾವುದೋ ಸಮಾರಂಭಕ್ಕೆ ಹೋದ ನೆನಪಿದೆ. ಅಲ್ಲಿ ಅಪ್ಪ ಮಡಿಯಲ್ಲಿ ಪುಟ್ಟ ಪಂಚೆ ಕಚ್ಚೆ ಹಾಕಿಕೊಂಡು ಊಟ ಬಡಿಸಿದ ನೆನಪು; ಅಲ್ಲಿ ಮೊಟ್ಟ ಮೊದಲಬಾರಿಗೆ ಊಟದ ಎಲೆಗೆ ಹಳದಿ ಕೆಂಪು ಮಿಶ್ರಣದ ದೊಡ್ಡದಾಗಿ ಹೆಚ್ಚಿದ ಮಾವಿನ ಹಣ್ಣಿನ ಸಿಪ್ಪೆ ಇಲ್ಲದ ಹೋಳು ಬಡಿಸಿದ್ದು, ಅದನ್ನು ನಾನು ಗಬಗಬಾ ತಿಂದಿದ್ದು, ಎದುರು ಕೂತ ರೇಷ್ಮೆ ಸೀರೆ ಉಟ್ಟಿದ್ದ ಚಿಕ್ಕಮ್ಮನ ಹಾಗೆ ಕಾಣಿಸುತ್ತಿದ್ದ ದಪ್ಪನೆ ಹೆಂಗಸರೊಬ್ಬರು ಬಡಿಸುವವರನ್ನು ಕರೆದು ಮಗೂಗೆ ಇನ್ನೊಂದು ಸ್ವಲ್ಪ ಹಣ್ಣು ಬಡಿಸಿ ಅಂತ ಹೇಳಿದ್ದು, ಮತ್ತೆ ನನ್ನ ಎಲೆಗೆ ಹಣ್ಣು ಬಡಿಸಿದ್ದು…. ಇವೆಲ್ಲಾ ನನ್ನ ಮನಸ್ಸಿನಲ್ಲಿ ಅಚ್ಚು ಒತ್ತಿದ ಹಾಗೆ ಇನ್ನೂ ಇದೆ.
ಬಾಲ್ಯಕಾಲದಲ್ಲಿ ಟೆಂಟ್‌ ಸಿನಿಮಾ ನೋಡಿದ ಅನುಭವಗಳ ಕುರಿತು ಬರೆದಿದ್ದಾರೆ ಎಚ್. ಗೋಪಾಲಕೃಷ್ಣ

ನಮ್ಮ ಕುಟುಂಬ 1957ರಲ್ಲಿ ಬೆಂಗಳೂರಿಗೆ ವಲಸೆ ಬಂತು. ಅದಕ್ಕೆ ಮೊದಲು ತುಮಕೂರಿನಲ್ಲಿ ಇದ್ದೆವು. ಉಪ್ಪಾರಹಳ್ಳಿ ಗೇಟಿನ ಬಳಿಯ ರಾಮಕೃಷ್ಣಯ್ಯ ವಠಾರದಲ್ಲಿ ನಮ್ಮ ವಾಸ ಇದ್ದದ್ದು. ಅದೇ ಮನೆಯಲ್ಲಿಯೇ ನಮ್ಮ ಒಬ್ಬನೇ ಭಾವ, ಹಿರಿಯಕ್ಕನ ಗಂಡ, ತೀರಿಕೊಂಡಿದ್ದು. ಕೆಟ್ಟ ನಕ್ಷತ್ರದಲ್ಲಿ ಸತ್ತರು ಅಂತ ಮನೆ ಬದಲಾಯಿಸಲು ಪುರೋಹಿತರು ಹೇಳಿದರು. ಆಗ ತಾನೇ ನಮ್ಮ ದೊಡ್ಡಣ್ಣನಿಗೆ ಬೆಂಗಳೂರಿನ ಎಚ್ ಎಂ ಟಿ ಯಲ್ಲಿ ಕೆಲಸ ಸಿಕ್ಕಿತ್ತು. ರಾಜಾಜಿನಗರದಲ್ಲಿ ಆಗ ತಾನೇ ನಿರ್ಮಿಸಿದ್ದ ಸಿ ಐ ಟಿ ಬೀ ಮನೆಗಳನ್ನು ಕಾರ್ಖಾನೆಗಳಿಗೆ ಕೊಟ್ಟಿದ್ದರು. ಈ ಮನೆಗಳದ್ದೆ ಒಂದು ರೋಚಕ ಕತೆ.

ಹೈದರಾಬಾದ್‌ನಿಂದ ಬಂದ ನಿರಾಶ್ರಿತರಿಗೆ ಅಂತ ಈ ಮನೆಗಳು ನಿರ್ಮಾಣ ಆದವು. ನಿರಾಶ್ರಿತರು ಮನೆ ನೋಡಿ ಇವು ನಮಗೆ ಬೇಡ ಅಂತ ತಿರಸ್ಕರಿಸಿದರು. ಮನೆ ನಿರ್ಮಿಸಿ ಆಗಿದೆ, ಏನು ಮಾಡುವುದು ಅಂತ ಸರ್ಕಾರಕ್ಕೆ ಪೀಕಲಾಟ ಶುರು ಆಯಿತು. ಬೆಂಗಳೂರಿನಲ್ಲಿ ಹಲವು ಸಾರ್ವಜನಿಕ ಉದ್ದಿಮೆಗಳು ಜನ್ಮ ತಾಳಿದ್ದು ಅದಕ್ಕೂ ಅವರ ನೌಕರರನ್ನು ಇರಿಸಲು ಮನೆಗಳ ಅವಶ್ಯಕತೆ ಇತ್ತು. ಹೀಗಾಗಿ ಈ ಮನೆಗಳು HMT ತೆಕ್ಕೆಗೆ ಬಂದವು. ಜೋಡಿ ಮನೆಗಳು ಅಂದರೆ ಒಂದು ಕಾಮನ್ ಗೋಡೆ. ಗೋಡೆಯ ಎರಡೂ ಬದಿಯಲ್ಲಿ ಒಂದು ಹಾಲು, ಅಡಿಗೆ ಮನೆ, ಹಾಲಿನ ಎದುರು ಒಂದು ಹತ್ತು ಹತ್ತರ ರೂಮು. ಮಧ್ಯೆ ಒಂದು ಮೂರು ಅಡಿ ನಂತರ ಬಚ್ಚಲು ಕಕ್ಕಸು ಮನೆ. ಮುಂಭಾಗದಲ್ಲಿ ಕೊಂಚ ಜಾಗ, ಅದರಲ್ಲಿ ಸಣ್ಣ ಪುಟ್ಟ ಹೂ ಗಿಡವನ್ನೋ, ತಿಂಗಳ ಹುರುಳಿ ರೀತಿಯ ತರಕಾರಿಯನ್ನು ಬೆಳೆಯ ಬಹುದು. ಅದರಲ್ಲಿ ಒಂದು ಕ್ವಾರ್ಟರ್ಸ್ ದೊಡ್ಡ ಅಣ್ಣನಿಗೆ ಸಿಕ್ಕಿತ್ತು. ಮನೆ ಹೇಗಿದ್ದರೂ ರೆಡಿ ಇತ್ತು, ನಾವೆಲ್ಲ ಅಂದರೆ (ಎರಡನೇ ಅಣ್ಣ ರಾಜು, ಮೂರನೇ ಶಾಮು, ಕೊನೇ ನಾನು, ಅಕ್ಕ ನರಸು ಹಾಗೂ ಅಪ್ಪ ಅಮ್ಮ ದೊಡ್ಡ ಅಣ್ಣ ಹನುಮಂತು ಮನೆ ಹೊಕ್ಕೆವು) ಪುಟ್ಟವರು, ಅಲ್ಲೇ ಶಾಲೆಗೆ ಸೇರಿಸಬಹುದು ಅಂತ ತೀರ್ಮಾನಿಸಿ ನಮ್ಮ ಅಪ್ಪ ಬೆಂಗಳೂರಿಗೆ ನಿವಾಸ ಬದಲಾಯಿಸಿದರು.

ಅಪ್ಪ ಜಿ. ರಾಮೇಗೌಡ ಅನ್ನುವ ಕಂಟ್ರಾಕ್ಟರ್ ಬಳಿ ಸಬ್ ಕಾಂಟ್ರಾಕ್ಟ್ ಕೆಲಸ ಮಾಡ್ತಾ ಇದ್ದದ್ದು. ಇವರು ಕಾಂಗ್ರೆಸ್‌ನವರು. ಎಂ ಎಲ್ ಎ ಆಗಿದ್ದವರು, ನಂತರ ಮಂತ್ರಿಗಳು ಸಹ ಆದರು. ಅರಣ್ಯ ಇಲಾಖೆಮಂತ್ರಿ ಆಗಿದ್ದರು ಅಂತ ನನಗೆ ಮಸಕು ಮಸಕು ನೆನಪು. ಮಲ್ಲೇಶ್ವರದ ಹದಿನೆಂಟನೇ ಕ್ರಾಸಿನಲ್ಲಿ ಅವರ ಮನೆಗೆ ಯಾವುದೋ ಸಮಾರಂಭಕ್ಕೆ ಹೋದ ನೆನಪಿದೆ. ಅಲ್ಲಿ ಅಪ್ಪ ಮಡಿಯಲ್ಲಿ ಪುಟ್ಟ ಪಂಚೆ ಕಚ್ಚೆ ಹಾಕಿಕೊಂಡು ಊಟ ಬಡಿಸಿದ ನೆನಪು; ಅಲ್ಲಿ ಮೊಟ್ಟ ಮೊದಲಬಾರಿಗೆ ಊಟದ ಎಲೆಗೆ ಹಳದಿ ಕೆಂಪು ಮಿಶ್ರಣದ ದೊಡ್ಡದಾಗಿ ಹೆಚ್ಚಿದ ಮಾವಿನ ಹಣ್ಣಿನ ಸಿಪ್ಪೆ ಇಲ್ಲದ ಹೋಳು ಬಡಿಸಿದ್ದು, ಅದನ್ನು ನಾನು ಗಬಗಬಾ ತಿಂದಿದ್ದು, ಎದುರು ಕೂತ ರೇಷ್ಮೆ ಸೀರೆ ಉಟ್ಟಿದ್ದ ಚಿಕ್ಕಮ್ಮನ ಹಾಗೆ ಕಾಣಿಸುತ್ತಿದ್ದ ದಪ್ಪನೆ ಹೆಂಗಸರೊಬ್ಬರು ಬಡಿಸುವವರನ್ನು ಕರೆದು ಮಗೂಗೆ ಇನ್ನೊಂದು ಸ್ವಲ್ಪ ಹಣ್ಣು ಬಡಿಸಿ ಅಂತ ಹೇಳಿದ್ದು, ಮತ್ತೆ ನನ್ನ ಎಲೆಗೆ ಹಣ್ಣು ಬಡಿಸಿದ್ದು…. ಇವೆಲ್ಲಾ ನನ್ನ ಮನಸ್ಸಿನಲ್ಲಿ ಅಚ್ಚು ಒತ್ತಿದ ಹಾಗೆ ಇನ್ನೂ ಇದೆ. ನಾನು ಓದು ಮುಗಿಸಿ ಕೆಲಸಕ್ಕೆ ಸೇರಿದ ನಂತರ ಸಹೋದ್ಯೋಗಿ ಒಬ್ಬರ ಸಂಗಡ ಮಾತು ಆಡಬೇಕಾದರೆ, ಈ ರಾಮೇಗೌಡರ ವಿಷಯ ಬಂತು. ಹೋ ಅವರು ನಮ್ಮ ಗಂಡಂ ಬಚ್ಚಲ್ಲಿ ಅವರು ಅಂತ ಖುಷಿ ತೋರಿದರು. ಅವರು ಜನಪ್ರಿಯ ನಾಯಕರಾಗಿದ್ದರು ಅಂತ ತಿಳಿಯಿತು.

ಅವರು ಅಂದರೆ ರಾಮೇಗೌಡರು ರೈಲ್ವೆ ಕಾಂಟ್ರಾಕ್ಟ್ ಕೆಲಸ ಮಾಡ್ತಾ ಇದ್ದದ್ದು. ನಮ್ಮಪ್ಪ ಅಲ್ಲಿ ಉಪ ಗುತ್ತಿಗೆ ಕೆಲಸ. ಅಪ್ಪನ ಹೆಸರು ಇಟಾಲಿಕ್ ಅಕ್ಷರದಲ್ಲಿದ್ದ ಲೆಟರ್ ಹೆಡ್ ಮತ್ತು ಅದರ ಕೆಳಗೆ ರೈಲ್ವೆ ಕಂಟ್ರಾಕ್ಟರ್ ಎನ್ನುವ ಬರವಣಿಗೆ ಪ್ರಿಂಟ್ ಆಗಿರುತ್ತಿತ್ತು. ಅದೇ ರೀತಿಯ ಒಂದು ರಬ್ಬರ್ ಸ್ಟಾಂಪ್ ಸಹ ಅವರ ಬಳಿ ಇತ್ತು. ಬಹುಶಃ ಇದು ನಾನು ಮೊಟ್ಟಮೊದಲ ಸಲ ನೋಡಿದ ಲೆಟರ್ ಹೆಡ್ ಮತ್ತು ಸ್ಟಾಂಪ್ ಇರಬೇಕು, ಅದರಿಂದ ತಲೆಯಲ್ಲಿ ಅದು ಹಾಗೇ ಉಳಿದಿದೆ. ಅಪ್ಪನ ಕೆಲಸ ಬೆಂಗಳೂರಲ್ಲಿ ಆಗ ನಡೀತಾ ಇದ್ದದ್ದು. ಇದೂ ಒಂದು ಕಾರಣ ಮನೆ ಶಿಫ್ಟ್ ಮಾಡಲು. ಇವೆಲ್ಲಕ್ಕಿಂತ ಮುಖ್ಯ ಕಾರಣ ಅಂದರೆ ನಮಗೆಲ್ಲಿಯೂ ಇಡೀ ಭೂ ಮಂಡಲದಲ್ಲಿ ಸ್ವಂತ ನೆಲೆ ಅನ್ನೋದೇ ಇಲ್ಲದಿದ್ದುದು. ಒಂದು ರೀತಿ ನಮ್ಮ ಸಂಸಾರದ್ದು ಆಗ ನೋಮಾಡಿಕ್ ಲೈಫ್, ಅಲೆಮಾರಿ ಜೀವನ.

ಈ ಹಿನ್ನೆಲೆಯಲ್ಲಿ ನಾವು ರಾಜಾಜಿನಗರ ಸೇರಿದೆವು. ಇಲ್ಲಿನ ವಾಸ ಕುರಿತ ಹಾಗೆ ಬೇರೆ ಬರೀತೀನಿ. ಅದರ ಪಕ್ಕದಲ್ಲೇ ಪ್ರಕಾಶ ನಗರ ನಂತರ ಉದಯವಾಯಿತು. ನಾವು ರಾಜಾಜಿನಗರ ಸೇರಿಕೊಂಡಾಗ ಪ್ರಕಾಶನಗರ ಹೊಲ ತುಂಬಿದ್ದ ಸ್ಥಳ.

ಸುಮಾರು ಅರವತ್ತು ಎಪ್ಪತ್ತರ ದಶಕದ ಆರಂಭದಲ್ಲಿ ಪ್ರಕಾಶನಗರದಲ್ಲಿ ಟೆಂಟ್ ಶುರು ಆಯಿತು. ಅದೇ ಸಮಯದಲ್ಲಿ ಶಿವನ ಹಳ್ಳಿಯಲ್ಲೂ ಒಂದು ಟೆಂಟ್ ಸಿನಿಮಾ ಆರಂಭ ಆಗಿತ್ತು. ನಮಗೆ ಪ್ರಕಾಶ ನಗರದ್ದು ಹತ್ತಿರದ್ದು, ಅದರಿಂದ ಅಲ್ಲೇ ಜಾಸ್ತಿ ಸಿನಿಮಾ ನೋಡಿದ್ದು.

ಸುಮಾರು ವರ್ಷ ಈ ಟೆಂಟ್‌ನಲ್ಲಿ ತಮಿಳು, ತೆಲುಗು ಭಾಷೆಯ ಸಿನಿಮಾಗಳೇ ತೋರಿಸುತ್ತಿದ್ದರು. ದೇವರು, ಮಾಯಾ ಮಂತ್ರ, ಚಾರಿತ್ರಿಕ, ಸಾಮಾಜಿಕ ಅಂಶಗಳುಳ್ಳ ಲೆಕ್ಕವಿಲ್ಲದಷ್ಟು ಸಿನಿಮಾ ಅಂದರೆ ಬಯಾಸ್ಕೊಪ್ ನೋಡಿದೆವು. ನಾನು ಅಮ್ಮ ಅಕ್ಕ ಕೆಲವು ಸಲ ರಾಜು ಶಾಮೂ ಸಹ ಜತೆಗೆ ಇರುತ್ತಿದ್ದರು. ದೊಡ್ಡಣ್ಣ ಯಾವಾಗಲಾದರೂ ಒಮ್ಮೆ ನಮ್ಮ ಜತೆ ಈ ಸಿನಿಮಾಕ್ಕೆ ಬರುತ್ತಿದ್ದ. ಪ್ರತಿ ಮೂರು ದಿವಸಕ್ಕೆ ಸಿನಿಮಾ ಬದಲಾಗುವುದು. ಹೆಚ್ಚು ರಶ್ ಇದ್ದರೆ ಮತ್ತೆ ಮೂರು ದಿವಸ ಪ್ರದರ್ಶನ. ಸಿನಿಮಾದ ರೀಲುಗಳನ್ನು ಚಪ್ಪಟೆ ಆಕಾರದ ಗುಂಡಗಿನ ಡಬ್ಬದಲ್ಲಿ ಸೈಕಲ್ ಮೇಲೆ ಹೊತ್ತು ತರುತ್ತಿದ್ದರು. ಅವು ಗಾಂಧೀನಗರದಿಂದ ಬರುತ್ತೆ ಅಂತ ಕೇಳಿದ್ದೆ. ದೊಡ್ಡ ಹಪ್ಪಳಗಳನ್ನು ಒಂದರ ಮೇಲೆ ಒಂದು ಜೋಡಿಸಿ ಅದೇ ಆಕಾರದ ಪೆಟ್ಟಿಗೆ ಮಾಡಿಸಿ ಅದರಲ್ಲಿ ಸಿನಿಮಾ ರೀಲು ಇಡುತ್ತಾರೆ ಎಂದು ನನ್ನ ಮೊದಲ ತಿಳುವಳಿಕೆ!

ರಾಮನ ಅವತಾರ ರಘುಕುಲ ಸೋಮನ ಅವತಾರ, ಈ ದೇಹದಿಂದ ದೂರನಾದೆ ಏಕೆ ಆತ್ಮನೇ, ಏಡು ಕೊಂಡಲ ವಾಡಾ… ಮೊದಲಾದ ಹಾಡುಗಳು ಸಂಜೆ ಆಗುತ್ತಿದ್ದ ಹಾಗೇ ಸಿನಿಮಾ ಶುರುಮುನ್ನ ಟೆಂಟ್ ಮೇಲೆ ಕಟ್ಟಿದ್ದ ಸ್ಪೀಕರ್‌ಗಳಿಂದ ಪೂರ್ತಿ ವಾಲ್ಯೂಮ್‌ನಲ್ಲಿ ಕಿವಿಗೆ ಅಪ್ಪಳಿಸುತ್ತಿತ್ತು. ಅದು ಸಿನಿಮಾ ಶುರು ಆಗುವ ಮುನ್ಸೂಚನೆ. ಸಿನಿಮಾ ಆರಂಭದ ರಿಂಗ್ ಟೋನ್.

ವಿಶಾಲವಾಗಿ ಹಾಕಿದ ಮಾಸಲು ಬಿಳಿ ಡೇರೆ ಅದರ ಸುತ್ತಲೂ ಬೊಂಬಿನ ತಡಿಕೆ. ತಡಿಕೆ ಮುಚ್ಚುವ ಹಾಗೆ ಅದಕ್ಕೂ ಅಡ್ಡ ಬಟ್ಟೆ. ಡೇರೆ ಚಾವಣಿಗೆ ಆಸ್ ಬೆಸ್ಟಾಸ್ ಶೀಟುಗಳು, ಒಳ ಹೋಗಲು ಕೆಲವು ಬೊಂಬಿನ ಬಾಗಿಲು. ಒಂದು ಕಡೆ ಹಳೇ ಕಬ್ಬಿಣದ ಫೋಲ್ಡಿಂಗ್ ಕುರ್ಚಿಗಳು ಅದರ ಮುಂದೆ ಮತ್ತೆ ಬೊಂಬಿನ ಪಾರ್ಟಿಷನ್ನು ಅದರ ಮುಂದೆ ಬೆಂಚುಗಳು ಅದರ ಮುಂದಿನದು ನೆಲ. ಎರಡರ ನಡುವೆ ಒಂದು ಹಗ್ಗ. ನೆಲದಲ್ಲಿ ಕೂತು ನೋಡೋಕ್ಕೆ ಎರಡಾಣೆ ಕುರ್ಚಿಗೆ ನಾಲ್ಕಾಣೆ. ಬೆಂಚಿಗೆ ಮೂರಾಣೆ… ಹೆಂಗಸರಿಗೆ ಬೇರೆ ಸೀಟು. ಸಿನಿಮಾ ಪ್ರಚಾರ ಒಂದು ಗಾಡಿ ಜಟಕಾ ಗಾಡಿ ಮೂಲಕ ಆಗುತ್ತಿತ್ತು. ಸ್ಪೀಕರ್ ಕಟ್ಟಿದ ಜಟಕಾದಲ್ಲಿ ಒಬ್ಬರು ಕೂತು ಸಿನಿಮಾ ಹೆಸರು, ಅದರ ಪಾತ್ರಗಳು ಮೊದಲಾದ ವಿವರಗಳನ್ನು ಕೂಗುತ್ತಾ ಇದ್ದ. ಅದರ ಜತೆಗೆ ಸಿನಿಮಾ ಚೀಟಿಗಳನ್ನು ಹಂಚುತ್ತಿದ್ದ. ಕೆಲವು ಸಲ ಅದನ್ನು ಗಾಳಿಯಲ್ಲಿ ತೂರುತ್ತಿದ್ದ. ಗಾಡಿ ಹಿಂದೆ ಓಡುತ್ತಿದ್ದ ನಾವು ಅದನ್ನು ಆರಿಸಿ ಜೇಬಲ್ಲಿ ತುಂಬಿಕೊಳ್ಳುತ್ತಿದ್ದೆವು.

ಕೊಂಚ ದಿವಸದ ನಂತರ ನಮ್ಮ ಹಿಂದಿನ ರಸ್ತೆಯ ವೆಂಕಟಾಚಲಯ್ಯ ಅನ್ನುವವರು ಗೇಟ್ ಕೀಪರ್ ಆದರು. ಅವರೂ ನಮ್ಮ ಅಣ್ಣನ ಜತೆ HMT ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದರು. ಬನ್ನಿ ಟಿಕೇಟ್ ಯಾಕೆ ತಗೋತೀರಿ ನಾನೇ ಹಾಗೇ ಬಿಡ್ತೀನಿ ಅಂದರು. ಅವರು ಹೇಳಿದಂತೆ ಒಳಗೆ ಬಿಟ್ಟರು. ಆದರೆ ಅದು ನೆಲದ ಸೀಟು. ನಮ್ಮಮ್ಮ ಬಾಳೆಕಾಯಿನಿಂದ ದುಡ್ಡು ತೆಗೆದು ಕೊಟ್ಟು ಅವರಿಗೆ ಕಾಣದ ಹಾಗೆ ಖುರ್ಚಿ ಟಿಕೆಟ್ ತಗೊಂಡು ಬಾರೋ ಅಂತ ನನ್ನ ಕಳಿಸಿದಳು. ಬಚ್ಚಿಟ್ಟುಕೊಂಡು ಹೋಗಿ ಟಿಕೆಟ್ ತಂದೆ, ಖುರ್ಚಿ ಮೇಲೆ ಕೂತೆವು. ಮತ್ತೆ ಅವರ ಹತ್ತಿರ ಹೋಗಲಿಲ್ಲ! ನಮಗೆ ನೆಲದ ಸೀಟು ಆಗುತ್ತಿರಲಿಲ್ಲ, ಕಾರಣ ಅಲ್ಲೇ ಉಗುಳೋದು, ಬೀಡಿ ಸಿಗರೇಟು ಸೇದಿ ತುಂಡು ಅಲ್ಲೇ ಹಾಕೋದು.. ಒಂದು ರೀತಿ ಅಸಹಜ ವಾತಾವರಣ ಅನಿಸಿಬಿಡೋದು; ನಮ್ಮ ಮಡಿಗೆ ಸರಿ ಹೋಗದು ಅಂತ ಅಮ್ಮನನ್ನು ರೇಗಿಸುತ್ತಾ ಇದ್ದೆ! ನೆಲದ ಸೀಟಿಗೆ ನಾವು ಹೋಗಲೇ ಇಲ್ಲ. ಹೀಗೆ ನಮ್ಮ ಡಿಗ್ನಿಟಿ ಹಾಗೂ ಲೆವೆಲ್ ಕಾಪಾಡಿಕೊಂಡು ಬಂದೆವು!

ದೊಡ್ಡಣ್ಣ ಯಾವಾಗಲಾದರೂ ಒಮ್ಮೆ ನಮ್ಮ ಜತೆ ಈ ಸಿನಿಮಾಕ್ಕೆ ಬರುತ್ತಿದ್ದ. ಸಿನಿಮಾದ ರೀಲುಗಳನ್ನು ಚಪ್ಪಟೆ ಆಕಾರದ ಗುಂಡಗಿನ ಡಬ್ಬದಲ್ಲಿ ಸೈಕಲ್ ಮೇಲೆ ಹೊತ್ತು ತರುತ್ತಿದ್ದರು. ಅವು ಗಾಂಧೀನಗರದಿಂದ ಬರುತ್ತೆ ಅಂತ ಕೇಳಿದ್ದೆ. ದೊಡ್ಡ ಹಪ್ಪಳಗಳನ್ನು ಒಂದರ ಮೇಲೆ ಒಂದು ಜೋಡಿಸಿ ಅದೇ ಆಕಾರದ ಪೆಟ್ಟಿಗೆ ಮಾಡಿಸಿ ಅದರಲ್ಲಿ ಸಿನಿಮಾ ರೀಲು ಇಡುತ್ತಾರೆ ಎಂದು ನನ್ನ ಮೊದಲ ತಿಳುವಳಿಕೆ!

ಮಾಸಲು ಬಿಳಿಯ ಹಳೇ ಪರದೆ

ಆ ಪರದೆ ಮೇಲೆ ನೂರೆಂಟು ಕಡೆ ತೇಪೆ ಹಾಕಿರೋದು ಎದ್ದು ಕಾಣುತ್ತಿತ್ತು. ಅದರ ಮೇಲೆ ಸಿನಿಮಾ ಬಿಡುತ್ತಿದ್ದರು. ತಿರುಗಾಮುರುಗ ಇಟ್ಟ ಪೊರಕೆ ತರಹ ಬರುವ ಬೆಳಕಿನ ಮೂಲದಿಂದ ಹೊಮ್ಮುವ ಭಾರತದ ಪ್ರಧಾನಿ ಹಾಗೂ ಇತರ ಮಂತ್ರಿಗಳು ಭಾಗವಹಿಸಿದ ಕಾರ್ಯಕ್ರಮಗಳ ನ್ಯೂಸ್ ರೀಲು. ಇದಕ್ಕೆ ಪೊರಕೆ ನ್ಯೂಸ್ ಅಂತ ನಮ್ಮ ಪರಿಭಾಷೆ. ಆಮೇಲೆ ಪಿಚ್ಚರು. ಸಿನಿಮಾ ಫಿಲ್ಮು ಸುರುಳಿ ಸುರುಳಿ. ಡಬ್ಬದಲ್ಲಿನ ರೀಲು ಆಗಾಗ ಕಟ್ ಆಗ್ತಾ ಇತ್ತು. ಅದರಿಂದ ಹೇರಳವಾಗಿ ಇಂಟರ್ವಲ್‌ಗಳು.
ಟೆಂಟ್ ಒಳಗೆ ಶೋ ಸಮಯದಲ್ಲಿ ಕಡ್ಲೆಕಾಯಿ ಬಾಳೆ ಹಣ್ಣು ಸೋಡಾ ಕ್ರಶ್…. ನಿಮಿಷ ನಿಮಿಷಕ್ಕೂ ಕಿವಿ ತೂತು ಬೀಳೋ ಹಾಗೆ ವಿಷಲ್‌ಗಳು…..

ಟೆಂಟ್ ಒಳಗೆ ಬೀಡಿ ಸಿಗರೇಟು ಸೇದೋರು ಕೂತಕಡೆ ಹೊಗೆ ಬಿಡೋರು, ಎಲೆ ಅಡಿಕೆ ತಿಂದು ಅಲ್ಲೇ ಉಗಿಯೋರು, ಕಡ್ಲೆಕಾಯಿ ತಿನ್ನೋರು, ಕೆಲವರು ಅಲ್ಲೇ ಕ್ಯಾರಿಯರ್ ಬಿಚ್ಚಿ ಡಬ್ಬ ತೆರೆದು ಉಣ್ಣೋರು…. ಹೀಗೆ ಒಂದು ವಿಚಿತ್ರ ಪರಿಸರ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಿತ್ತು.

ಕೋಡುಬಳೆ ಚಕ್ಕುಲಿ ನಿಪ್ಪಟ್ಟು ಕಡ್ಲೆಕಾಯಿ… ಜೇಬಲ್ಲಿ ತುಂಬಿಕೊಂಡು ಸಿನಿಮಾ ಆಸ್ವಾದಿಸುತ್ತಾ ಇದ್ದೆವು. ದಿನಾ ಎರಡೇ ಶೋ. ಸಂಜೆ ಆರೂ ಮೂವತ್ತು, ರಾತ್ರಿ ಒಂಬತ್ತು ಮೂವತ್ತು.

ಆ ಕಾಲದಲ್ಲಿ ಬರೇ ತಮಿಳು ತೆಲುಗು ಸಿನಿಮಾಗಳು ಟೆಂಟಿನಲ್ಲಿ. ಕನ್ನಡ ಹಿಂದಿ ಮಲಯಾಳಂ ಇವೆಲ್ಲಾ ಇನ್ನೂ ಪ್ರವೇಶ ಪಡೆದಿರಲಿಲ್ಲ. ಎನ್ ಟಿ ಆರ್, ಎಂ ಜಿ ಆರ್, ವೀರಪ್ಪನ್, ತಂಗವೇಲು, ಕೃಷ್ಣನ್, ಸರೋಜಾದೇವಿ ಅಂಜಲಿ….. ಹೀಗೆ ಹಲವರ ಅಭಿನಯದ ಸುಮಾರು ಸಿನಿಮಾಗಳನ್ನು ಇಲ್ಲೇ ನಾನು ನೋಡಿದ್ದು. ನೆನಪಿರುವ ಹಲವಾರು ಸಿನಿಮಾಗಳು ಆಗಾಗ್ಗೆ ಮನಸ್ಸಿನಲ್ಲಿ ಎದ್ದುನಿಂತು ಆ ದಿನಗಳಿಗೆ ಎಳೆದುಕೊಂಡು ಹೋಗುತ್ತವೆ. ಒಂದರಲ್ಲಿ ಎಂ ಜಿ ಆರ್ ವೀರಪ್ಪನ್ ನ ಒಂದು ಕಾಲು ಕತ್ತರಿಸಿ ಬಿಡ್ತಾನೆ. ವೀರಪ್ಪನ್ ಒಂದೇ ಕಾಲಲ್ಲಿ ತೆವಳುತ್ತಾ ಫೈಟ್ ಮಾಡಿದ್ದು ನೆನಪಿದೆ! ಇನ್ನೊಂದು ಸಿನಿಮಾದಲ್ಲಿ ಮೀನಿನ ಬಲೆ ಬೀಸಿ ಹೀರೋನ ಅದರಲ್ಲಿ ಹಿಡಿಯುತ್ತಾರೆ!

ವಾರ ವಾರಕ್ಕೆ ಸಿನಿಮಾ ಬದಲಾಗುತ್ತಿತ್ತು. ಮಧುರೈ ವೀರನ್, ಪಾತಾಲ್ ಪಸಿ, ವನಂಗಾಮುಡಿ ನಾಡೋಡಿ ಮಣ್ಣನ್, ಓಡುಂ ನದಿ, ಕಟ್ಟ ಬೊಮ್ಮನ್…. ಮೊದಲಾದ ಸಿನಿಮಾ ಇಲ್ಲೇ ನಾನು ನೋಡಿದ್ದು. ನಾನ್ ಆನೈ ಇಟ್ಟಾಲ್ ಅದು ನಡೆಂದು ವಿಟ್ಟಾಲ್…! ಈ ಹಾಡು ಈಗಲೂ ಗುಣ ಗುಣ ಮಾಡುತ್ತೇನೆ.

ಸಿನಿಮಾ ಪರದೆಯ ಹಿಂದೆ ಆಕ್ಟರ್ಸ್ ಕುಣಿಯುತ್ತಾ ಇರ್ತಾರೆ. ಅವರ ಡ್ರೆಸ್ ಕತ್ತಿ ಖಡ್ಗ ಕುದುರೆ ಇವೆಲ್ಲವೂ ಪರದೆ ಹಿಂದೆ ಇರುತ್ತೆ ಅನ್ನೋ ನಂಬಿಕೆ. ಮೊದಮೊದಲು ಪರದೆ ಹಿಂದೆ ಹೋಗಿ ಬಗ್ಗಿ ನೋಡುತ್ತಿದ್ದೆ. ಯಾರಾದರೂ ಆಕ್ಟರ್ಸ್ ಕಾಣಿಸ್ತಾ ಇದ್ದಾರಾ ಅನ್ನೋ ಕುತೂಹಲ ಇತ್ತು. ಖುರ್ಚಿ ಸೀಟುಗಳ ಹಿಂದೆ ಇದ್ದ ಲೈಟು ಬಿಡುತ್ತಿದ್ದ ಒಂದು ಜಾಗ ತೋರಿಸಿ ಅಲ್ಲಿ ಪ್ರೊಜೆಕ್ಟರ್ ಇರುತ್ತೆ ಅಂತ ದೊಡ್ಡಣ್ಣ ವಿವರಿಸಿದ್ದ. ನಿಧಾನಕ್ಕೆ ಪ್ರೊಜೆಕ್ಟರ್‌ನಿಂದ ಸಿನಿಮಾ ಬಿಡ್ತಾರೆ ಅಂತ ಅಣ್ಣನ ಮೂಲಕ ತಿಳೀತು. ನಂತರ ಆಗಾಗ ಖುರ್ಚಿಯಲ್ಲಿ ಹಿಂದು ಮುಂದು ಕೂತು ಪ್ರೊಜೆಕ್ಟರ್ ಕಿಂಡಿ ನೋಡುತ್ತಾ ಇದ್ದೆ. ಇದನ್ನು ನಮ್ಮ ಅಮ್ಮ ಸಿನಿಮಾದಲ್ಲಿ ಭಯ ಹೆದರಿಕೆ ಆಗುವ ದೃಶ್ಯ ಬಂದರೆ ಇವನು ಹಿಂದೆ ಮುಂದಾಗಿ ಕೂತ್ಕೋತಾನೆ ಅಂತ ಅರ್ಥೈಸಿದ್ದಳು. ಹಾಗೇ ನಂಟರು ಇಷ್ಟರ ಮುಂದೆ ಹೇಳಿ ನಾನು ತಮಾಷೆ ವಸ್ತು ಆಗುವ ಹಾಗೆ ಮಾಡಿದ್ದಳು!

ಬೆಳಿಗ್ಗೆ ಟೆಂಟ್ ಸುತ್ತಾ ಒಂದು ರೌಂಡ್ ಹೊಡೆದರೆ ಪ್ರೊಜೆಕ್ಟರ್ ರೂಮಿನ ಹತ್ತಿರ ತುಂಡಾದ ಫಿಲಂ ರೀಲ್‌ನ ಚೂರು ಸಿಗ್ತಾ ಇತ್ತು. ಅವುಗಳನ್ನು ತಂದು ಮನೆಯಲ್ಲಿ ಪ್ರೊಜೆಕ್ಟರ್ ತಯಾರಿಸಿದ್ದು, ಮನೆಯ ರೂಮನ್ನು ಕತ್ತಲು ಮಾಡಿ ಸಿನೆಮಾ ಬಿಡಲು ಯತ್ನಿಸಿದ್ದು, ಪರದೆಗಾಗಿ ಅಮ್ಮನ ಸೀರೆ ಹರಿದು ತುಂಡು ಮಾಡಿದ್ದು, ನಂತರ ತಿಂದ ತಪರಾಕಿ…. ಇವೆಲ್ಲಾ ಮಸಕು ಮಸಕು ನೆನಪು. ಹೀಗೆ ಸಿಕ್ಕಿದ ತುಂಡು ಫಿಲಂ ಜೋಪಾನವಾಗಿ ಸುಮಾರು ವರ್ಷ ಕಾಪಾಡಿಕೊಂಡಿದ್ದೆ, ನಾನು ಕಾಲೇಜು ಮೆಟ್ಟಲು ಏರಿದಾಗಲೂ ಸಹ ಅವು ನನ್ನ ಬಳಿ ಇದ್ದವು. ಈಗ ನನ್ನ ಮೊಮ್ಮಕ್ಕಳಿಗೆ ಆಗಿನ ಸಿನಿಮಾ ವೈಭವ ವಿವರಿಸಲು ಫಿಲ್ಮ್ ತುಂಡು ಇಟ್ಟುಕೊಳ್ಳಬೇಕಿತ್ತು ಅಂತ ಸುಮಾರು ಸಲ ಅನಿಸಿದೆ.

ನಾನು ನೋಡಿದ ಮೊಟ್ಟ ಮೊದಲನೇ ಸಬ್ ಟೈಟಲ್ ಸಿನಿಮಾ ಹಾಗೇ ಅಲ್ಲಿ ನೋಡಿದ ಒಂದು ಸಿನಿಮಾ ಇನ್ನೂ ಮನಸಿನಲ್ಲಿ ಅಚ್ಚಾಗಿದೆ. ಅವೈಯಾರ್ ಅನ್ನುವ ತಮಿಳು ಸಿನೆಮಾಗೆ ಕನ್ನಡದಲ್ಲಿ ಸಬ್ ಟೈಟಲ್ ಇತ್ತು. ಸಿನಿಮಾ ತುಂಬಾ ಹಾಡು ಹಾಡು ಮತ್ತು ಹಾಡು. ನಾನು ನೋಡಿದ ಅಷ್ಟೊಂದು ಹಾಡು ಇರುವ ಮೊದಲನೇ ಸಬ್ ಟೈಟಲ್ ಸಿನಿಮಾ ಅದು! ಸುಂದರಾಂಬಾಳ್ ಮಾಡಿರೋ ಸಿನಿಮಾ ತುಂಬಾ ಚೆನ್ನಾಗಿತ್ತು ಅಂತ ಅಮ್ಮ ಅಕ್ಕ ಪಕ್ಕದ ಮನೆಯವರಿಗೆ ಹೇಳಿದ್ದು ಕೇಳಿಸಿಕೊಂಡ ನೆನಪು ಇದೆ. ಸುಂದರಾಂಬಾಳ್ ಅನ್ನುವವರು ಪ್ರಸಿದ್ಧ ಸಂಗೀತ ವಿದುಷಿ ಅಂತ ಎಷ್ಟೋ ವರ್ಷಗಳ ನಂತರ ತಿಳಿಯಿತು. ಬೆಳೆದ ಮೇಲೆ ಸುಮಾರು ಬಂಗಾಳಿ ಸಿನೆಮಾಗಳನ್ನು ಅದೂ ಸತ್ಯಜಿತ್ ರೇ ಅವರ ಸಿನೆಮಾಗಳನ್ನು ಸಬ್ ಟೈಟಲ್‌ನಲ್ಲೇ ನೋಡಿದ್ದು. ಈಚೆಗೆ ನೋಡಿದ ಸಬ್ ಟೈಟಲ್ ಸಿನಿಮಾ ಅಂದರೆ ಕಾಂತಾರ. ಭಾಷೆ ಗೊತ್ತಿರುವ ಸಬ್ ಟೈಟಲ್ ಸಿನಿಮಾಗಳ ದೊಡ್ಡ ತೊಡಕು ಅಂದರೆ ನೀವು ಸರಿಯಾಗಿ ಭಾಷಾಂತರ ಮಾಡಿ ಟೈಟಲ್ ಹಾಕಿದಾರಾ ಅಂತ ವಿಮರ್ಶೆಗೆ ನಿಮ್ಮ ಅರಿವಿಲ್ಲದ ಹಾಗೆ ತೊಡಗಿಸಿಕೊಳ್ಳುವುದು. ಇದರಿಂದ ಸಿನಿಮಾ ಸಂಪೂರ್ಣ ಆಸ್ವಾದಿಸಲು ಕಷ್ಟ. ಈ ಕೆಟ್ಟ ಅನುಭವ ನಿಮಗೂ ಸಹ ಆಗಿರಬಹುದು.

ಸ್ವಂತ ಗೂಡು ಕಟ್ಟಿಕೊಂಡು ವಿದ್ಯಾರಣ್ಯಪುರ ಸೇರಿದ ಮೇಲೂ ಟೆಂಟ್ ಸಿನೆಮಾ ನಂಟು ಮುಂದುವರಿಯಿತು. ಮನೆಯಿಂದ ಎರಡು ಮೂರು ಕಿಮೀ ದೂರದಲ್ಲಿ ಎರಡೂ ದಿಕ್ಕಿನಲ್ಲಿ ಮೂರು ಟೆಂಟ್ ಟಾಕೀಸ್ ಇದ್ದವು. ಬರೀ ಹಿಂದಿ ಸಿನೆಮಾ ಒಂದರಲ್ಲಿ, ಮತ್ತೊಂದರಲ್ಲಿ ಹಸೀ ಸೆಕ್ಸ್ ತುಂಬಿದ ಮಲಯಾಳಿ ಸಿನಿಮಾ ಮೂರನೆಯದರಲ್ಲಿ ನಾಲ್ಕು ಭಾಷೆಗಳ ಚರ್ವಿತ ಚವರ್ಣ..

ಎಂಬತ್ತರ ದಶಕದಲ್ಲಿ ಜಯನಗರದ ಪೂರ್ವ ತುದಿಯಲ್ಲಿ ಇದ್ದ ನರೇಂದ್ರ ಹೆಸರಿನ ಒಂದು ಟೆಂಟ್‌ನಲ್ಲಿ ಸಿನಿಮಾ ನೋಡಿದ್ದೆ. ಹತ್ತು ವರ್ಷದ ನಂತರ ಅಲ್ಲಿ ಅದರ ಅವಶೇಶವೂ ಸಹ ಇರಲಿಲ್ಲ.

ನಗರ ಬೆಳೆದ ಹಾಗೆ ಟೆಂಟ್ ಸಿನಿಮಾ ಹೋಗಿ ಥಿಯೇಟರ್ ಬಂದವು. ಈಗ ಅದೂ ಹೋಗಿ ಮಲ್ಟಿಪ್ಲೆಕ್ಸ್ ಬರ್ತಿವೆ. ಆದರೆ ಟೆಂಟ್ ಸಿನೆಮಾ ಕೊಟ್ಟ ಖುಷಿ ಇವು ಯಾವುವೂ ಕೊಡಲ್ಲ ಅನ್ನೋದು ಸತ್ಯ. ಹೀಗೆ ಹತ್ತಿದ ಸಿನಿಮಾ ಹುಚ್ಚು ಇನ್ನೂ ಬಿಟ್ಟಿಲ್ಲ.. ಟೆಂಟ್ ಸಿನಿಮಾ ಅಂದರೆ ನೆನಪಿನ ಖಜಾನೆ, ಗಣಿ. ಬೇರೇನೇ ಒಂದು ಭ್ರಾಮಕ ಲೋಕಕ್ಕೆ ನಿಮ್ಮನ್ನು ಒಯ್ಯುವ ಟೈಮ್ ಮಷೀನ್. ಮತ್ತೆ ಆ ಕಾಲ ಬರಬಾರದೇ ಅನಿಸುತ್ತೆ.