“ಭಾರತೀಯರು ಅಲ್ಲಿಯೇ ತಮ್ಮ ಅಸ್ಥಿತ್ವವನ್ನು, ಧರ್ಮವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ರಾಮಾಯಣವನ್ನೇ ಜೀವಾಳವಾಗಿಸಿಕೊಂಡರು. ಹಬ್ಬಹರಿದಿನಗಳನ್ನು ಶ್ರದ್ಧೆಯಿಂದ ಆಚರಿಸಿದರು.ಮಕ್ಕಳಿಗೆ ಭಾರತೀಯ ಹೆಸರುಗಳನ್ನೇ ಇಡುತ್ತಾರೆ. ಅಲ್ಲಿನ ಆಡಳಿತ ಭಾಷೆ ಡಚ್ ಆದರೂ ಹಿಂದಿ ಕೂಡ ಒಂದು ಮುಖ್ಯ ಭಾಷೆ. ನನ್ನೊಬ್ಬ ಸುರಿನಾಮಿ ಸ್ನೇಹಿತನೇ ಹೇಳಿದ ಪ್ರಕಾರ ಡಚ್ಚರ ಒಂದು ಒಳ್ಳೆಯ ಸ್ವಭಾವವೆಂದರೆ ಅವರು ಸುರಿನಾಮ್ ನ ಭಾರತೀಯರ ಸಂಸ್ಕೃತಿ ಮತ್ತು ಭಾಷೆಯ ಆಚರಣೆಯಲ್ಲಿ ಎಂದೂ ಮೂಗು ತೂರಿಸಲಿಲ್ಲವಂತೆ”
ಸೀಮಾ ಎಸ್ ಹೆಗಡೆ ಬರೆವ ಆ್ಯಮ್ಸ್ಟರ್ ಡ್ಯಾಮ್ ಪತ್ರ.

 

”ಭಾರತೀಯರು ಅಲ್ಲಿಯೇ ತಮ್ಮ ಅಸ್ಥಿತ್ವವನ್ನು, ಧರ್ಮವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ರಾಮಾಯಣವನ್ನೇ ಜೀವಾಳವಾಗಿಸಿಕೊಂಡರು. ಹಬ್ಬಹರಿದಿನಗಳನ್ನು ಶ್ರದ್ಧೆಯಿಂದ ಆಚರಿಸಿದರು. ದೇಶವನ್ನು ಬಿಟ್ಟು ಸುಮಾರು ಒಂದೂವರೆ ಶತಮಾನಗಳೇ ಕಳೆದುಹೋದವು, ಆದರೆ ಅವರಿನ್ನೂ ತಮ್ಮ ಧರ್ಮಕ್ಕೆ, ಆಚರಣೆಗೆ ಬದ್ಧರು. ಮಕ್ಕಳಿಗೆ ಭಾರತೀಯ ಹೆಸರುಗಳನ್ನೇ ಇಡುತ್ತಾರೆ. ಅಲ್ಲಿನ ಆಡಳಿತ ಭಾಷೆ ಡಚ್ ಆದರೂ ಹಿಂದಿ ಕೂಡ ಒಂದು ಮುಖ್ಯ ಭಾಷೆ. ನನ್ನೊಬ್ಬ ಸುರಿನಾಮಿ ಸ್ನೇಹಿತನೇ ಹೇಳಿದ ಪ್ರಕಾರ ಡಚ್ಚರ ಒಂದು ಒಳ್ಳೆಯ ಸ್ವಭಾವವೆಂದರೆ ಅವರು ಸುರಿನಾಮ್ ನ ಭಾರತೀಯರ ಸಂಸ್ಕೃತಿ ಮತ್ತು ಭಾಷೆಯ ಆಚರಣೆಯಲ್ಲಿ ಎಂದೂ ಮೂಗು ತೂರಿಸಲಿಲ್ಲವಂತೆ”
ಸೀಮಾ ಎಸ್ ಹೆಗಡೆ ಬರೆವ ಆ್ಯಮ್ಸ್ಟರ್ ಡ್ಯಾಮ್ ಪತ್ರ.

ಕೆಲವು ವಾರಗಳ ಹಿಂದೆ ಆ್ಯಮ್ಸ್ಟರ್ ಡ್ಯಾಮ್ ನ ಸಮೀಪದಲ್ಲಿರುವ ಶ್ರೀ ಸೀತಾರಾಮ ಧಾಮ ಮಂದಿರಕ್ಕೆ ಭೇಟಿನೀಡುವ ಸುಯೋಗ ಲಭಿಸಿತು. ಅದು ಸುರಿನಾಮ್ ನಿಂದ ಇಲ್ಲಿಗೆ ಬಂದು ನೆಲೆಸಿರುವ ಹಿಂದೂ ಜನರು ತಮ್ಮ ಸಂಸ್ಕೃತಿಯನ್ನು ಜೀವಂತವಿರಿಸಲು ಕಟ್ಟಿಕೊಂಡಿರುವ ದೇವಾಲಯ. ನಾವಲ್ಲಿಗೆ ಭೇಟಿಯಿತ್ತ ದಿನ ಏನೋ ಒಂದು ವಿಶೇಷ ಕಾರ್ಯಕ್ರಮವಿತ್ತು. ಅಲ್ಲಿ ನೆರೆದಿದ್ದ ಜನರ ಉತ್ಸಾಹ, ಭಕ್ತಿಯನ್ನು ಕಂಡು ನಮಗಂತೂ ಆಶ್ಚರ್ಯ, ಸಂತೋಷ, ದುಃಖ ಈ ಎಲ್ಲಾ ಭಾವನೆಗಳೂ ಒಮ್ಮೆಲೇ ಉಂಟಾದವು. ಸುರಿನಾಮ್ ನ ಜನರು ನಮಗಿಂತಲೂ ಹೆಚ್ಚು ಶ್ರದ್ಧೆ ಭಕ್ತಿಯಿಂದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದರು. ಅದರಲ್ಲೇನು ವಿಶೇಷ ಎಂದು ನಿಮಗನಿಸಬಹುದು. ಅದಕ್ಕೆ ನಾನು ನೆದರ್ ಲ್ಯಾಂಡ್ಸ್ ನ ಚರಿತ್ರೆಯನ್ನು ಬಿಚ್ಚಿಡಬೇಕು.

ಹದಿನೈದನೇ ಶತಮಾನದಿಂದಲೇ ಬೇರೆ ದೇಶಗಳಿಗೆ ಹೋಗಿ ವಸಾಹತು ಸ್ಥಾಪನೆಯಲ್ಲಿ ಯುರೋಪಿಯನ್ನರು ಒಬ್ಬರನ್ನೊಬ್ಬರು ಮೀರಿಸತೊಡಗಿದ್ದರು. ಸ್ಪ್ಯಾನಿಷ್ ಜನರು ದಕ್ಷಿಣ ಅಮೇರಿಕದ ಕಡೆ ಮುಖಮಾಡಿದರು, ಇಂಗ್ಲೀಷರು ಮತ್ತು ಫ್ರೆಂಚರು ಪೂರ್ವ ಮತ್ತು ಆಫ್ರಿಕಾದ ಕಡೆ ತೆರಳಿದರು. ಪೋರ್ಚುಗೀಸರು ದಕ್ಷಿಣ ಅಮೆರಿಕಾ ಮಾತ್ರವಲ್ಲದೇ ಪೂರ್ವದ ಕಡೆಗೂ ತಮ್ಮ ಒಲವು ತೋರಿದರು. ಭಾರತವನ್ನಂತೂ ಡಚ್ಚರು, ಫ್ರೆಂಚರು, ಪೋರ್ಚುಗೀಸರು, ಡ್ಯಾನಿಷ್ ಜನರು ಮತ್ತು ಇಂಗ್ಲೀಷರು ಕಿತ್ತಾಡಿ ಹಂಚಿಕೊಂಡರು. ಭಾರತದಲ್ಲಿ ಫ್ರೆಂಚರು ಮತ್ತು ಇಂಗ್ಲೀಷರ ಪ್ರಭಾವ ಹೆಚ್ಚಾದಂತೆಲ್ಲಾ ಪೋರ್ಚುಗೀಸರು ಮತ್ತು ಡಚ್ಚರು ಇಂಡೋನೇಷಿಯಾದ ಕಡೆ ಮುಖಮಾಡಿದರು. ಅಲ್ಲಿ ಅವರಿಬ್ಬರ ನಡುವೆ ಡಚ್ಚರ ಕೈಮೇಲಾಯಿತು, ಪೋರ್ಚುಗೀಸರ ಪ್ರಭಾವ ಕಡಿಮೆಯಾಯಿತು. ನಿಜ ಹೇಳಬೇಕೆಂದರೆ ಯಾರ ಕೈಮೇಲಾಗಿದ್ದರೂ ಇಂಡೋನೇಷಿಯಾದ ಹಣೆಬರಹ ಮಾತ್ರ ಒಂದೇ- ಅವರ ಸಂಪತ್ತು ಹೊರಹೋಗಲು ನಿಂತಾಗಿತ್ತು.

ಡಚ್ಚರು ಇಂಡೋನೇಷಿಯಾದಿಂದ ಅಪಾರ ಸಂಪತ್ತನ್ನು ಕೊಳ್ಳೆಹೊಡೆದರು. ಬ್ರಿಟಿಷರು ಭಾರತದಲ್ಲಿ ಯಾವ ರೀತಿಯ ಕ್ರೌರ್ಯವನ್ನೆಸಗುತ್ತಿದ್ದರೋ ಅದೇ ರೀತಿಯಲ್ಲಿ ಡಚ್ಚರು ಇಂಡೋನೇಷಿಯನ್ನರ ಮೇಲೆ ದೌರ್ಜನ್ಯವನ್ನೆಸಗುತ್ತಿದ್ದರು. ಅಲ್ಲಿನ ಜನರನ್ನು ಕೀಳಾಗಿ ನೋಡುತ್ತಿದ್ದರಂತೆ, ಈಜು ಕೊಳದ ಹೊರಗಡೆಯೇ ಬೋರ್ಡ್ ಹಾಕಿರುತ್ತಿದ್ದರಂತೆ – ‘ನಾಯಿಗಳಿಗೆ ಮತ್ತು ಇಂಡೋನೇಷಿಯನ್ನರಿಗೆ ಪ್ರವೇಶವಿಲ್ಲ’ ಎಂದು. ಅನೇಕ ಹತ್ಯಾಕಾಂಡಗಳನ್ನು ನಡೆಸಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನ ಸೈನ್ಯ ಬಂದು ಡಚ್ಚರನ್ನು ಇಂಡೋನೇಷಿಯಾದಿಂದ ಹೊರದಬ್ಬುವತನಕವೂ ಇಂಡೋನೇಷಿಯಾ ಪೂರ್ತಿ ನೆದರ್ ಲ್ಯಾಂಡ್ಸ್ ನ ವಶದಲ್ಲಿಯೇ ಇತ್ತು. ಅಂತೂ ಕೊನೆಗೆ ಡಿಸೆಂಬರ್ 2011 ರಲ್ಲಿ ನೆದರ್ ಲ್ಯಾಂಡ್ಸ್ ತಾವು ಅಲ್ಲಿ ನಡೆಸಿದ ಹತ್ಯಾಕಾಂಡಗಳಿಗೆ ಜವಾಬ್ದಾರಿಯನ್ನು ಹೊತ್ತು ಔಪಚಾರಿಕ ಕ್ಷಮೆ ಕೋರಿತು. ಇಂಡೋನೇಷಿಯಾದಲ್ಲಿನ ಡಚ್ ರಾಯಭಾರಿ ಆ ಕ್ಷಮಾಪಣಾ ಪತ್ರವನ್ನು ಓದಿದಾಗ ಹತ್ಯಾಕಾಂಡದಲ್ಲಿ ಮಡಿದವರ ಮನೆಯವರು ಕಣ್ಣೀರುಗರೆದರಂತೆ.

(ನೆದರ್ ಲ್ಯಾಂಡ್ಸ್ ನ ಶ್ರೀ ಸೀತಾರಾಮ ಧಾಮ ಮಂದಿರ)

ಇಂಡೋನೇಷಿಯಾ ಅಲ್ಲದೇ ಕೆರೆಬಿಯನ್ ದ್ವೀಪಗಳಲ್ಲಿ ಹಲವಾರು ದ್ವೀಪಗಳೂ ಡಚ್ಚರ ಆಳ್ವಿಕೆಯಲ್ಲಿಯೇ ಇದ್ದವು, ಕೆಲವು ಇನ್ನೂ ಇವೆ; ತಮ್ಮ ಅಸ್ತಿತ್ವವನ್ನು ಕಳೆದುಕೊಂಡು Kingdom of the Netherlands ಎಂಬ ಹೆಸರಿನಡಿ ಸೇರಿಹೋಗಿವೆ. ಇಂಡೋನೇಷಿಯಾ ಸ್ವತಂತ್ರಗೊಂಡ (1945 ರ) ನಂತರದ ವರ್ಷಗಳಲ್ಲಿ ಎಷ್ಟೋ ಜನ ಇಂಡೋನೇಷಿಯನ್ನರು ನೆದರ್ ಲ್ಯಾಂಡ್ಸ್ ಗೆ ಬಂದು ನೆಲೆಸಿದರು. ಇಲ್ಲಿನ ಜನರೊಂದಿಗೆ ಬೆರೆತರು, ಡಚ್ಚರನ್ನು ಮದುವೆಯಾದರು. ಹಳೆಯ ಕಹಿ ಈಗ ಕಾಣಸಿಗುವುದಿಲ್ಲ, ಆದರೂ ಆ ಕಹಿನೆನೆಪುಗಳನ್ನು ಕೆಲವರು ಮರೆತಿಲ್ಲವೆಂಬುದೂ ಅಷ್ಟೇ ಸತ್ಯ. ಇಲ್ಲೇ ಹುಟ್ಟಿಬೆಳೆದ ಇಂಡೋನೇಷಿಯಾ ಮೂಲದ ಯಾರ ಬಳಿಯಾದರೂ “ನೀವು ನೆದರ್ ಲ್ಯಾಂಡ್ಸ್ ನವರಾ?” ಎಂದು ಕೇಳಿದರೆ “ಇಲ್ಲ, ನಾನು ಮೂಲತಃ ಇಂಡೋನೇಷಿಯನ್, ಆದರೆ ಹುಟ್ಟಿಬೆಳೆದಿದ್ದು ಇಲ್ಲಿಯೇ, ನನ್ನ ಅಜ್ಜನ ಕಾಲದಲ್ಲಿಯೇ ಇಲ್ಲಿಗೆ ವಲಸೆ ಬಂದಿದ್ದರಂತೆ, ನನ್ನ ಆಯಸ್ಸಿನಲ್ಲಿ ಒಮ್ಮೆ ಮಾತ್ರ ಅಲ್ಲಿಗೆ ಹೋಗಿದ್ದೆ, ನನಗೆ ಆ ದೇಶ ತುಂಬಾ ಇಷ್ಟವಾಯಿತು” ಎನ್ನುತ್ತಾರೆ! ಡಚ್ ಭಾಷೆಯನ್ನೇ ಮಾತನಾಡುತ್ತಾರೆ, ಇಂಡೋನೇಷಿಯನ್ ಬರೆಯಲು ಓದಲು ಹೋಗಲಿ, ಮಾತನಾಡಲೂ ಸಹ ಬರುವುದಿಲ್ಲ. ಆದರೂ ಅವರಿಗೆ ತಾವು ಇಂಡೋನೇಷಿಯನ್ ಎಂದು ಹೇಳಿಕೊಳ್ಳುವುದರಲ್ಲಿಯೇ ಹೆಚ್ಚಿನ ಸಂತೋಷ. ಮನುಷ್ಯರಿಗೆ ತಮ್ಮ ಪೂರ್ವಜರ ದೇಶದ ಮೇಲಿನ ಪ್ರೀತಿ ಎಂದೂ ಕಡಿಮೆಯಾಗುವುದೇ ಇಲ್ಲವೇನೋ! ಇದು ಇಂಡೋನೇಷಿಯನ್ನರ ಕತೆಯಾದರೆ ನಮ್ಮ ದೇಶದ ಜನರ ಕತೆಯೂ ಇದೆ. ದುರಂತದ ಕತೆ.

ಸ್ಪ್ಯಾನಿಷ್ ಜನರು, ಡಚ್ಚರು, ಬ್ರಿಟಿಷರು, ಮತ್ತು ಫ್ರೆಂಚರು ದಕ್ಷಿಣ ಅಮೆರಿಕಾದ ಮೇಲ್ಭಾಗದಲ್ಲಿ ಗಯಾನ ಪ್ರದೇಶದಲ್ಲಿ ಹದಿನೇಳನೆಯ ಶತಮಾನದ ಮಧ್ಯದಿಂದಲೂ ಅಲ್ಲಿನ ಆದಿವಾಸಿಗಳ ಜೊತೆ ಹೊಡೆದಾಡಿ ತಮ್ಮ ವಸಾಹಾತುಗಳನ್ನು ಸ್ಥಾಪಿಸಿಕೊಂಡಿದ್ದರು. ಕ್ರಿಸ್ತಪೂರ್ವ 3000 ವರ್ಷಗಳಷ್ಟು ಇತಿಹಾಸವಿರುವ ಇಂದು ‘ಸುರಿನಾಮ್’ ಎಂದು ಕರೆಯಲ್ಪಡುವ ಪುಟ್ಟ ದೇಶದಲ್ಲಿ ನೆಲೆಸಿದ್ದ ಮೂಲ ಅಮೆರಿಕನ್ ನಿವಾಸಿಗಳನ್ನು ಓಡಿಸಿ ಬ್ರಿಟಿಷರು ತಮ್ಮ ವಸಾಹತು ಸ್ಥಾಪಿಸಿಕೊಂಡಿದ್ದರು. ತದನಂತರದಲ್ಲಿ ಆ ಜಾಗವನ್ನು ತಮ್ಮದಾಗಿಸಿಕೊಳ್ಳಲು ಬ್ರಿಟಿಷರ ಮತ್ತು ಡಚ್ಚರ ನಡುವೆ ಕದನಗಳು ನಡೆದವು. ಅಲ್ಲಿನ ಬಂಗಾರ ಮತ್ತು ಬಾಕ್ಸೈಟ್ ಮೇಲೆ ಅವರಿಬ್ಬರ ಕಣ್ಣು. ಕೊನೆಯಲ್ಲಿ 1667 ರಲ್ಲಿ ಸುರಿನಾಮ್ ಡಚ್ಚರ ಕೈಗೆ ದಕ್ಕಿತು. ಅದನ್ನು ಅವರು ಡಚ್ ಗಯಾನ ಎಂದು ಕರೆದರು.

ದಕ್ಷಿಣ ಅಮೇರಿಕಾದ ಈಶಾನ್ಯ ಅಟ್ಲಾಂಟಿಕ್ ತೀರದಲ್ಲಿನ ಜಾಗವನ್ನು ಫ್ರೆಂಚರು, ಬ್ರಿಟಿಷರು, ಡಚ್ಚರು ತಮ್ಮ ತಮ್ಮ ಹೆಸರಿನ ಗಯಾನಗಳೆಂದು ಹರಿದು ಹಂಚಿಕೊಂಡರು. ಅಲ್ಲಿ ಕಬ್ಬು, ಕಾಫಿ ಮತ್ತು ರಬ್ಬರ್ ಬೆಳೆಯಲು ಕೆಲಸಗಾರರ ಅವಶ್ಯಕತೆಯುಂಟಾಯಿತು. ಯಾವಾಗಿನಿಂದಲೂ ‘ಸ್ಲೇವ್ ಟ್ರೇಡ್’ ಗೆ ಹೆಸರುವಾಸಿಯಾದ ಯುರೋಪಿಯನ್ ದೇಶಗಳು ತಮ್ಮ ನಿಯಂತ್ರಣ ಜಗತ್ತಿನ ಯಾವ ದೇಶಗಳ ಮೇಲಿದೆಯೋ ಅಲ್ಲಿಂದ ಕೆಲಸಗಾರರನ್ನು ಇನ್ನೊಂದು ಕಡೆ ಸಾಗಿಸಿ ಗೋಜಲು ಎಬ್ಬಿಸಿಬಿಟ್ಟವು. ಡಚ್ಚರದಂತೂ ‘ಸ್ಲೇವ್ ಟ್ರೇಡ್’ ನಲ್ಲಿ ಎತ್ತಿದ ಕೈ. ಹದಿನೇಳನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗೂ ಇನ್ನೂರು ವರ್ಷಗಳ ಕಾಲ ಡಚ್ಚರು ಆಫ್ರಿಕಾದ ಗೋಲ್ಡ್ ಕೋಸ್ಟ್ (ಇಂದಿನ ದಿನದ ಘಾನಾ) ನ ಹತ್ತು ಬಂದರುಗಳಿಂದ ಸುಮಾರು ಆರು ಲಕ್ಷ ಜೀತದಾಳುಗಳನ್ನು ಸಾಗಿಸಿದ ಬಗ್ಗೆ ದಾಖಲೆಗಳಿವೆ. ಅಲ್ಲಿನ ಕಪ್ಪು ಜನರ ಮೇಲೆ ಯೂರೋಪಿನ ಬಿಳಿಯರು ಎಸಗಿದ ದೌರ್ಜನ್ಯ ಒಂದೆರಡಲ್ಲ. ಇಂದು ಜನಾಂಗೀಯ ತಾರತಮ್ಯತೆಯನ್ನು ಬಿಂಬಿಸಲು ಉಪಯೋಗಿಸುವ apartheid ಎಂಬ ಪದ ಕೂಡ ಡಚ್ ಭಾಷೆಯಿಂದಲೇ ಹುಟ್ಟಿದ್ದು. ಹತ್ತೊಂಬತ್ತನೆಯ ಶತಮಾನದಲ್ಲಿ ಯೂರೋಪಿನ ಹಲವಾರು ದೇಶಗಳು ‘ಸ್ಲೇವ್ ಟ್ರೇಡ್’ (slave trade) ಅನ್ನು ನಿಷೇಧಿಸಿದರೂ ನೆದರ್ ಲ್ಯಾಂಡ್ಸ್ ಅದಕ್ಕೆ ಹಿಂದೇಟು ಹಾಕಿ ಅಂತೂ ಕೊನೆಯಲ್ಲಿ (1863 ರಲ್ಲಿ) ನಿಷೇಧಿಸಿತು. ಅದೂ ಕೂಡ ಸುರಿನಾಮ್ ನಲ್ಲಿ ಹತ್ತು ವರ್ಷಗಳ ನಂತರ (1873 ರಲ್ಲಿ) ಜಾರಿಗೆ ಬಂತು. ಇವೆಲ್ಲವನ್ನೂ ಓದಿದಾಗ ಜೀತದಾಳುಗಳ ಮೇಲಿನ ಡಚ್ಚರ ದೌರ್ಜನ್ಯವನ್ನು ನಾವು ಸುಲಭವಾಗಿ ಊಹಿಸಿಬಿಡಬಹುದು.

(ಇಂಡೋನೇಷಿಯಾದ ಬಳಿ ನೆದರ್ ಲ್ಯಾಂಡ್ಸ್ ಕ್ಷಮಾಪಣೆ ಕೇಳಿದ ಸಂದರ್ಭ)

ಜೀತದಾಳುಗಳ ಸಾಗಾಟ ನಿಷೇಧವಾಯಿತು ನಿಜ, ಆದರೆ ಡಚ್ಚರಿಗೆ ಸುರಿನಾಮ್ ನಲ್ಲಿ ಕೆಲಸಗಾರರು ಬೇಕಾಯಿತು. ಇದಕ್ಕವರು ಪರ್ಯಾಯ ಮಾರ್ಗವೊಂದನ್ನು ಕಂಡುಹಿಡಿದುಕೊಂಡರು. ಅದೇ ‘ಇಂಡೆಂಚ್ಯೂರ್ ಲೇಬರ್’ (Indentured labor)- ಕರಾರು ಮಾಡಿಕೊಂಡ ಕಾರ್ಮಿಕರು ಎನ್ನಬಹುದು. ಇದರೊಂದಿಗೆ ಶುರುವಾಗಿದ್ದು ಭಾರತ ಮತ್ತು ಸುರಿನಾಮ್ ನಡುವಿನ ನಂಟು. ಆಗಲೇ ಬ್ರಿಟಿಷರು ತಮ್ಮ ವಸಾಹತುಗಳಿದ್ದ ದಕ್ಷಿಣ ಆಫ್ರಿಕಾ, ಕೆನ್ಯಾ, ಫಿಜಿ, ಬ್ರಿಟಿಷ್ ಗಯಾನ ಮುಂತಾದ ಜಾಗಗಳಿಗೆಲ್ಲಾ ಭಾರತದಿಂದ ಕೆಲಸಗಾರರನ್ನು ಸಾಗಿಸುತ್ತಿದ್ದರು. ಡಚ್ಚರು ಬ್ರಿಟಿಷರೊಡನೆ ಒಪ್ಪಂದ ಮಾಡಿಕೊಂಡು ‘ಇಂಡೆಂಚ್ಯೂರ್ ಲೇಬರ್’ ಎಂಬ ಹೆಸರಿನಡಿ ಭಾರತದಿಂದ ಕೆಲಸಗಾರರನ್ನು ಸುರಿನಾಮ್ ಗೆ ಕೊಂಡೊಯ್ದರು. ಅಂದು ಹೊರಟವರೆಲ್ಲರೂ ಉತ್ತರಪ್ರದೇಶದ ಪೂರ್ವಭಾಗ ಮತ್ತು ಬಿಹಾರ ದವರು. ಕೊಲ್ಕತ್ತಾದ ಹೂಗ್ಲಿ ನದಿತಟದಿಂದ ಕೆಲಸಗಾರರನ್ನು ತುಂಬಿಕೊಂಡು ಹೊರಟ ಮೊಟ್ಟಮೊದಲ ಹಡಗು ‘ಲಲ್ಲಾ ರೂಖ್’ ಮೂರು ತಿಂಗಳುಗಳ ಸಮುದ್ರಯಾನದ ನಂತರ 1873 ರ ಜೂನ್ 4 ರಂದು ಸುರಿನಾಮ್ ನ ಪರಮಾರಿಬೋ ಬಂದರಿಗೆ ಬಂದು ತಲುಪಿತು.

ಬ್ರಿಟಿಷರು ಆಳುತ್ತಿದ್ದ ಭಾರತದಿಂದ ಹೊರಟ 410 ಜನರಲ್ಲಿ ಸುರಿನಾಮ್ ತಲುಪಿದ್ದು ಜನರು 399 ಮಾತ್ರ. ಉಳಿದ ಹನ್ನೊಂದು ಜನ ಹಡಗಿನಲ್ಲಿಯೇ ಅಸ್ವಸ್ಥರಾಗಿ ಅಸುನೀಗಿದ್ದರು. ಶವಗಳನ್ನು ಹಡಗಿನಿಂದ ಸಮುದ್ರಕ್ಕೆ ಎಸೆಯಲಾಯಿತು. ಬದುಕುಳಿದವರಿಗೆ ಈ ಕರಾಳ ದೃಶ್ಯವನ್ನು ನೋಡಿ ಮರುಗುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಹಡಗು ಬಂದರು ತಲುಪಿದ ಒಂದು ದಿನದ ನಂತರ ಅಂದರೆ ಜೂನ್ 5 ರಂದು ಅವರನ್ನು ನೆಲಕ್ಕೆ ಇಳಿಸಲಾಯಿತು- ಅವರಲ್ಲಿ 279 ಗಂಡಸರು, 70 ಹೆಂಗಸರು ಮತ್ತು 50 ಮಕ್ಕಳು.

ಘಟನೆಗಳು ಪುನರಾವರ್ತಿಸಿದವು- ಮತ್ತೆ 63 ಹಡಗುಗಳು ಹೂಗ್ಲಿ ತೀರದಿಂದ ಸುರಿನಾಮ್ ತಲುಪಿದವು, ಎಷ್ಟೋ ಜನರು ಸಮುದ್ರದ ನಡುವೆಯೇ ಮರಣವನ್ನಪ್ಪಿದರು. ಒಟ್ಟು 34,304 ಜನರು ಕಂಡು ಕೇಳರಿಯದ ದೇಶಕ್ಕೆ ಯಾರದ್ದೋ ಕೈಗೊಂಬೆಗಳಾಗಿ ಸಾಗಿಸಲ್ಪಟ್ಟರು. ಗಂಡಸರಿಗೆ ಎರಡು ಧೋತಿ ಮತ್ತೆರಡು ಕುರ್ತಾ, ಹೆಂಗಸರಿಗೆ ಎರಡು ಸೀರೆ ಇಷ್ಟನ್ನು ಮಾತ್ರ ಕೊಂಡೊಯ್ಯಲು ಅನುಮತಿಯಿತ್ತು. ಇದಲ್ಲದೆ ರಾಮಾಯಣ ಪುಸ್ತಕವನ್ನು ಜೊತೆಯಲ್ಲಿ ಕೊಂಡೊಯ್ಯಲು ಅನುಮತಿಯಿತ್ತು. ಆಶ್ಚರ್ಯಕರ ರೀತಿಯಲ್ಲಿ ಇದೊಂದೇ ಅಂಶ ಅಲ್ಲಿನ ಭಾರತೀಯರು ತಮ್ಮ ಧರ್ಮವನ್ನು ಕಾಪಾಡಿಕೊಳ್ಳಲು ಸಹಕರಿಸಿತು, ಇಂದೂ ಕೂಡ ಸಹಕರಿಸುತ್ತಿದೆ!

(ಭಾರತೀಯರು ಲಲ್ಲಾ ರೂಖ್ ನಿಂದ ಸುರಿನಾಮ್ ನೆಲಕ್ಕೆ ಕಾಲಿಡುತ್ತಿರುವ ಕ್ಷಣ)

ಭಾರತವನ್ನು ಬಿಡುವ ಮೊದಲು ಲಲ್ಲಾ ರೂಖ್ ನಲ್ಲಿ ಹೊರಟ ಜನರಿಗೆ ಗೊತ್ತೇ ಇರಲಿಲ್ಲ- ಕೆಲವರು ಸಾವನ್ನಪ್ಪಲಿದ್ದೇವೆ, ಕೆಲವರು ಇನ್ನೆಂದೂ ಭಾರತಕ್ಕೆ ಹಿಂದಿರುಗಿ ಬರುವುದೇ ಇಲ್ಲವೆಂಬುದು. ಆ ಹಡಗನ್ನು ಅವರ ಪ್ರಯಾಣಕ್ಕೆಂದೇ ಭಾರತದಲ್ಲಿಯೇ ವಿಶೇಷವಾಗಿ ನಿರ್ಮಿಸಲಾಗಿದೆ ಎಂದು ಅವರನ್ನು ನಂಬಿಸಲಾಗಿತ್ತು. ನಿಜವೆಂದರೆ ಆ ಹಡಗು ಒಬ್ಬ ಐರಿಷ್ ಉದ್ಯಮಿಗೆ ಸೇರಿದ್ದಾಗಿತ್ತು ಮತ್ತು ಲಿವರ್ ಪೂಲ್ ನಲ್ಲಿ ನಿರ್ಮಿಸಲ್ಪಟ್ಟಿದ್ದಾಗಿತ್ತು. ಭಾರತೀಯರನ್ನು ಸುರಿನಾಮ್ ತಲುಪಿಸಿದ ನಂತರದಲ್ಲಿ ಆ ಹಡಗಿನ ಹೆಸರು ಬದಲಾಯಿಸಿ ಮಾರಾಟಮಾಡಲಾಯಿತು. ಎಲ್ಲ ರೀತಿಯ ವಂಚನೆಗೊಳಗಾಗಿ ಅವರು ಭಾರತಕ್ಕೆ ಬೆನ್ನು ಮಾಡಿ ಹೊರಟಾಗಿತ್ತು, ಮನಸ್ಸಿದ್ದೋ, ಮನಸ್ಸಿಲ್ಲದೇಯೋ. ಜೀತದಾಳು ಪದ್ಧತಿ ಕೊನೆಗೊಂಡಿತ್ತು ನಿಜ, ಆದರೆ ಅಂದಿನ ಕೆಲಸಗಾರರ ಪರಿಸ್ಥಿತಿ ಜೀತದಾಳುಗಳಿಗಿಂತ ಭಿನ್ನವಾಗೇನೂ ಇರಲಿಲ್ಲ. ಲಲ್ಲಾ ರೂಖ್ ನಿಂದ ಇಳಿಯುತ್ತಿದ್ದ ಭಾರತೀಯರನ್ನು ಕಂಡ ಆಗ ತಾನೇ ಬಿಡುಗಡೆ ಹೊಂದಿದ ಅಲ್ಲಿನ ಜೀತದಾಳುಗಳು “ಇಂದೂ ಕೂಡ ಬಿಳಿಯನೇ ಯಜಮಾನ” ಎಂದು ಕೂಗಿದ್ದರಂತೆ- ಜೀತದಾಳು ಪದ್ಧತಿ ಇನ್ನೂ ಮುಗಿದಿಲ್ಲ ಎಂಬರ್ಥದಲ್ಲಿ.

ಅಲ್ಲಿಗೆ ತಲುಪಿದ ಭಾರತೀಯರು ಯಾವುದೇ ಸೌಕರ್ಯವೂ ಇಲ್ಲದೇ ತೀರಾ ಕನಿಷ್ಠ ರೀತಿಯ ಜೀವನಮಟ್ಟದಲ್ಲಿ ಬದುಕಬೇಕಾಯಿತು. ಅವರಿಗೆ ಸರಿಯಾದ ಕೂಲಿಯನ್ನೂ ಕೊಡದೇ ದುಡಿಸಿಕೊಳ್ಳಲಾಯಿತು. ‘ಇಂಡೆಂಚ್ಯೂರ್ ಲೇಬರ್’ ಎಂಬ ಹೆಸರಿನಡಿ ಕರೆಯಲ್ಪಡುವ ಅವರು ನಿಜವಾಗಿ ಜೀತದಾಳುಗಳೇ ಆಗಿದ್ದರು. ಬ್ರಿಟಿಷರು ತಮ್ಮ ಮೇಲೆ ಹಾಕಿದ ಅತಿರೇಕದ ತೆರಿಗೆಯಿಂದ ತಪ್ಪಿಸಿಕೊಳ್ಳಲೆಂದು ಸುರಿನಾಮ್ ಗೆ ಹೊರಡಲೊಪ್ಪಿದ ಈ ಜನರು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು.

ತಮ್ಮ ಒಪ್ಪಂದವನ್ನು ಪೂರೈಸಿದ ಕೆಲಸಗಾರರಲ್ಲಿ ಮೂರನೇ ಒಂದಂಶದಷ್ಟು ಜನರು ಭಾರತಕ್ಕೆ ಹಿಂದಿರುಗಿದರಾದರೂ ಉಳಿದವರು ಕಾರಣಾಂತರಗಳಿಂದ ಅಲ್ಲಿಯೇ ಉಳಿಯಬೇಕಾಯಿತು. ಆ ದೇಶವನ್ನೇ ತಮ್ಮ ದೇಶವೆಂದುಕೊಳ್ಳಬೇಕಾಯಿತು. ಅಲ್ಲೇ ಉಳಿಯಲು ನಿರ್ಧರಿಸಿದ ಕೆಲವರಿಗೆ ಭೂಮಿಯ ತುಣುಕುಗಳನ್ನೂ, ಸ್ವಲ್ಪ ಹಣವನ್ನೂ ನೀಡಲಾಯಿತು. ಬಹುಶಃ ಡಚ್ಚರಿಗೆ ಅವರನ್ನು ಹಿಂದಿರುಗಿ ಭಾರತಕ್ಕೆ ಸಾಗಿಸುವ ಬದಲು ಅಲ್ಲಿನ ಸ್ವಲ್ಪ ಭೂಮಿಯನ್ನು ಕೊಡುವುದೇ ಲಾಭದಾಯಕವಾಗಿ ಕಂಡಿರಬಹುದು. ಇಲ್ಲವಾದಲ್ಲಿ ಅವರನ್ನು ಎಳೆದು ತಂದಾದರೂ ಹಡಗಿನಲ್ಲಿ ತುಂಬಿ ಹಿಂದಿರುಗಿ ಕಳುಹಿಸುವಂತಹ ಜಾಯಮಾನ ಅವರದ್ದು. ಏನೇ ಆದರೂ ಡಚ್ಚರೇ ಯಜಮಾನರು, ಭಾರತೀಯರು ಆಳುಗಳಾಗಿದ್ದರಲ್ಲವೇ? ಅಲ್ಲೇ ಉಳಿಯಲು ನಿರ್ಧರಿಸಿದ ಭಾರತೀಯರಿಗೂ ಸಹ ಬ್ರಿಟಿಷರ ಭಾರತಕ್ಕೆ ಹಿಂದಿರುಗಿ ಸಾಧಿಸುವುದಾದರೂ ಏನು, ಮೂರು ತಿಂಗಳ ಹಡಗು ಪ್ರಯಾಣ ಬೇರೆ, ಬದುಕುಳಿಯುವುದೇ ಕಷ್ಟ ಎಂದು ಎನಿಸಿದ್ದರೂ ಆಶ್ಚರ್ಯವಿಲ್ಲ! ಇವೆಲ್ಲಾ ನಡೆದುಹೋಗಿ ಶತಮಾನದ ಕಳೆದಿದೆ, ನಾನು ಅಂದಿನ ದಿನದ ಆ ಎರಡೂ ಪಕ್ಷಗಳ ಮನಸ್ಥಿತಿಗಳನ್ನು ಊಹಿಸುತ್ತಿದ್ದೇನೆ ಅಷ್ಟೇ!

(ಪರಮಾರಿಬೋದ ಬಾಬಾ ಮತ್ತು ಮಾಯಿ ಸ್ಮಾರಕ)

ಕೋಲ್ಕತ್ತಾದ ಹೂಗ್ಲಿ ದಡದಿಂದ ಹಡಗು ಸುರಿನಾಮ್ ಗೆ ಹೊರಟ ಜಾಗವನ್ನು ‘ಸುರಿನಾಮ್ ಘಾಟ್’ ಎಂದು ಕರೆಯುತ್ತಾರೆ. ಅಲ್ಲಿ 2015 ರಲ್ಲಿ ‘ಮಾಯಿ ಬಾಪ್’ ಎಂಬ ಸ್ಮಾರಕವನ್ನು ಅನಾವರಣಗೊಳಿಸಲಾಯಿತು. ಭಾರತದಲ್ಲಿನ ಅಂದಿನ ಸುರಿನಾಮ್ ರಾಯಭಾರಿ ಶ್ರೀಮತಿ ಆಶನಾ ಕನ್ಹಾಯಿ ಅವರು “ನನ್ನ ಪೂರ್ವಜರು ಕೊನೆಯಬಾರಿ ಭಾರತವನ್ನು ತೊರೆಯುವ ವೇಳೆ ಬಹುಶಃ ಇಲ್ಲೇ ನಿಂತಿದ್ದಿರಬಹುದು” ಎಂದು ಗದ್ಗದಿತವಾಗಿ ಹೇಳಿದ್ದರಂತೆ. ಅಂತೆಯೇ ಸುರಿನಾಮ್ ನ ಪರಮಾರಿಬೋನಲ್ಲೂ ಕೂಡ ಅಂಥದೇ ಒಂದು ಸ್ಮಾರಕವಿದೆ.

ಹಿಂದಿರುಗದೇ ಅಲ್ಲೇ ಉಳಿದ ಭಾರತೀಯರು ಅಲ್ಲಿಯೇ ತಮ್ಮ ಅಸ್ಥಿತ್ವವನ್ನು, ಧರ್ಮವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ರಾಮಾಯಣವನ್ನೇ ಜೀವಾಳವಾಗಿಸಿಕೊಂಡರು. ಹಬ್ಬಹರಿದಿನಗಳನ್ನು ಶ್ರದ್ಧೆಯಿಂದ ಆಚರಿಸಿದರು. ದೇಶವನ್ನು ಬಿಟ್ಟು ಸುಮಾರು ಒಂದೂವರೆ ಶತಮಾನಗಳೇ ಕಳೆದುಹೋದವು, ಆದರೆ ಅವರಿನ್ನೂ ತಮ್ಮ ಧರ್ಮಕ್ಕೆ, ಆಚರಣೆಗೆ ಬದ್ಧರು. ಮಕ್ಕಳಿಗೆ ಭಾರತೀಯ ಹೆಸರುಗಳನ್ನೇ ಇಡುತ್ತಾರೆ. ಅಲ್ಲಿನ ಆಡಳಿತ ಭಾಷೆ ಡಚ್ ಆದರೂ ಹಿಂದಿ ಕೂಡ ಒಂದು ಮುಖ್ಯ ಭಾಷೆ. ನನ್ನೊಬ್ಬ ಸುರಿನಾಮಿ ಸ್ನೇಹಿತನೇ ಹೇಳಿದ ಪ್ರಕಾರ ಡಚ್ಚರ ಒಂದು ಒಳ್ಳೆಯ ಸ್ವಭಾವವೆಂದರೆ ಅವರು ಸುರಿನಾಮ್ ನ ಭಾರತೀಯರ ಸಂಸ್ಕೃತಿ ಮತ್ತು ಭಾಷೆಯ ಆಚರಣೆಯಲ್ಲಿ ಎಂದೂ ಮೂಗು ತೂರಿಸಲಿಲ್ಲವಂತೆ. ಅದೇ ಪಕ್ಕದ ಗಯಾನಾಗಳಲ್ಲಿ, ಟ್ರಿನಿಡ್ಯಾಡ್ ಮತ್ತು ಟೊಬ್ಯಾಗೋಗಳಲ್ಲಿ ಬ್ರಿಟಿಷರು ಭಾರತೀಯರ ಸಂಸ್ಕೃತಿಯನ್ನು ಅಳಿಸಿಹಾಕಲು ತಮ್ಮ ಭಾಷೆಯನ್ನು ಹೇರಿದರು. ಪರಿಣಾಮವಾಗಿ ಇಂದು ಅಲ್ಲಿ ಹಿಂದಿ ಕೇಳಿಸುವುದೇ ಇಲ್ಲ, ಬರೀ ಇಂಗ್ಲಿಷ್ ಮಾತ್ರ. ಅದು ಇಂದಿಗೂ ಕೂಡ ಸತ್ಯ. ಡಚ್ಚರು ಬೇರೆ ಧರ್ಮ, ಆಚರಣೆಗಳನ್ನು ಒಪ್ಪಿಕೊಳ್ಳುವ ಜನ. ಅವರ ಆ ಸ್ವಭಾವದಿಂದಲೇ ಸುರಿನಾಮ್ ನ ಭಾರತೀಯ ಮೂಲದ ಜನ ತಮ್ಮ ಅಸ್ಥಿತ್ವವನ್ನು ಉಳಿಸಿಕೊಂಡರು. ದೇವಾಲಯಗಳನ್ನೂ ಕಟ್ಟಿಕೊಂಡರು.

(ಶತಮಾನಗಳ ಹಿಂದೆ ಸೂರಿನಾಮ್ ನಲ್ಲಿನ ಜನ ನಿರ್ಮಿಸಿಕೊಂಡ ದೇವಾಲಯ)

ಸುರಿನಾಮ್ ಡಚ್ಚರ ಆಳ್ವಿಕೆಯಿಂದ 1975 ರಲ್ಲಿ ಸ್ವಾತಂತ್ರ್ವನ್ನು ಪಡೆಯಿತು. ಆಗ ಅಲ್ಲಿಂದ ನೆದರ್ ಲ್ಯಾಂಡ್ಸ್ ಗೆ ಬರಲು ತುಂಬಾ ಜನರಿಗೆ ಪರವಾನಗಿ ಇತ್ತರು. ಹಾಗಾಗಿ 2 ಲಕ್ಷದಷ್ಟು ಜನರು ನೆದರ್ ಲ್ಯಾಂಡ್ಸ್ ಗೆ ವಲಸೆಬಂದರು. ಆದರೂ ಕೂಡ ಇಂದು ಸುರಿನಾಮ್ ನಲ್ಲಿ ಶೇಕಡಾ 27 ರಷ್ಟು ಜನ ಭಾರತೀಯ ಮೂಲದ ಹಿಂದೂ ಧರ್ಮದವರಂತೆ. ಅವರನ್ನು ಹಿಂದೂಸ್ಥಾನಿ ಎಂದು ಕರೆಯುತ್ತಾರೆ. ನೆದರ್ ಲ್ಯಾಂಡ್ಸ್ ನಲ್ಲಿರುವ ಭಾರತೀಯ ಮೂಲದ ಸುರಿನಾಮಿ ಜನರನ್ನೂ ಕೂಡ ಹಿಂದೂಸ್ತಾನಿಗರು ಎಂದೇ ಕರೆಯುತ್ತಾರೆ. ಇಲ್ಲಿ ಬದುಕುತ್ತಿರುವ ಸುರಿನಾಮಿ ಭಾರತೀಯರದ್ದೂ ಕೂಡ ವಿಚಿತ್ರ ವ್ಯಥೆ. ಇಲ್ಲಿಯೇ ಹುಟ್ಟಿ ಬೆಳೆದರೂ ಕೂಡ ಸಂಪೂರ್ಣ ಇಲ್ಲಿಯವರಾಗುವುದೇ ಇಲ್ಲ. ನೋಡಲು ಭಾರತೀಯರಂತೆ ಕಾಣುವ ಇವರು ಡಚ್ ಮಾತನಾಡುತ್ತಾರೆ. ಆದರೆ ನಾವು ಭಾರತದವರೆಂದು ಗೊತ್ತಾದ ತಕ್ಷಣ ಭೋಜಪುರಿ ಮಿಶ್ರಿತ ಹಿಂದಿ ಮಾತನಾಡುತ್ತಾರೆ. ಭಾರತೀಯರ ಬಗ್ಗೆ ಅವರ ಆತ್ಮೀಯ ಭಾವನೆ ಕತ್ತಲೆಯಲ್ಲಿನ ಬೆಳಕಿನಷ್ಟೇ ಸ್ಪಷ್ಟವಾಗಿ ಗೋಚರಿಸುತ್ತದೆ.

ತಮ್ಮ ದೇಶದ ಅವಿಭಾಜ್ಯ ಅಂಗವಾಗಿದ್ದರೂ, ತಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿದ್ದರೂ ಕೂಡ ಡಚ್ಚರು ಅವರನ್ನು ಯಾವತ್ತೂ ತಮಗೆ ಸರಿಸಮಾನರು ಎಂದು ಕಾಣುವುದೇ ಇಲ್ಲ. ಹಾಗಾಗಿ ಈ ಎರಡು ರೀತಿಯ ಜನರೂ ಕೂಡ ಬೇರೆಯಾಗಿಯೇ ಬದುಕುತ್ತಿರುವುದನ್ನು ಕಾಣುತ್ತೇವೆ. ಇದೆ ರೀತಿ ಇಲ್ಲಿಗೆ ಬಂದು ನೆಲೆಸಿರುವ ಆಫ್ರಿಕಾ ಮೂಲದ ಜನರೂ ಕೂಡ ತಮ್ಮದೇ ಜಗತ್ತಿನಲ್ಲಿ ಬದುಕುತ್ತಾರೆ.

ಇಲ್ಲಿನ ಸುರಿನಾಮಿ ಹಿಂದೂಗಳಲ್ಲಿ ಎರಡು ವಿಧ- ಆರ್ಯಸಮಾಜ ಕಲ್ಪನೆಯನ್ನು ನಂಬುವವರು, ಇನ್ನೊಂದು ಆಸ್ತಿಕರು. ಈ ಆಸ್ತಿಕರು ಆರ್ಯಸಮಾಜದಿಂದ ಬೇರ್ಪಡಿಸಿಕೊಳ್ಳಲು ತಮ್ಮನ್ನು ತಾವು ‘ಸನಾತನಿ’ ಎಂದು ಕರೆದುಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಭಾರತದ ಮೇಲೆ ಅತ್ಯಂತ ಪ್ರೀತಿ. ಹಲವಾರು ಜನರು ಒಮ್ಮೆಯಾದರೂ ಭಾರತಕ್ಕೆ ಹೋಗಿ ಬಂದಿರುತ್ತಾರೆ. ಇನ್ನೂ ಕೆಲವರು ತಮ್ಮ ನಿವೃತ್ತಿಯ ನಂತರ ಭಾರತಕ್ಕೇ ಹೋಗಿ ನೆಲೆಸುವ ಯೋಜನೆಯುಳ್ಳವರಿರುತ್ತಾರೆ. ಇನ್ನು ಕೆಲವರಿಗೆ ಒಂದೂವರೆ ಶತಮಾನದಲ್ಲಿ ತಮ್ಮ ಪೂರ್ವಜರ ಜೊತೆ ಸಂಪರ್ಕ ಕಡಿದು ಹೋಗಿದೆ. ಹಾಗಾಗಿ ಅವರಿಗೆ ತಮಗೆ ಭಾರತಕ್ಕೆ ಹೋದರೆ ಯಾರೂ ಇಲ್ಲವೆಂಬ ದುಃಖ. ಆದರೆ ಅವರೆಲ್ಲರಿಗೂ ಈಗಿನ OCI ಕಾರ್ಡ್ ಯೋಜನೆಯ ಬಗ್ಗೆ ತುಂಬಾ ಖುಷಿ. ನನ್ನ ಎರಡು ಸ್ನೇಹಿತರು ತಮಗೆ OCI ಕಾರ್ಡ್ ಸಿಕ್ಕಿದಾಗ ತುಂಬಾ ಖುಷಿಯಿಂದ ನನ್ನ ಬಳಿ ವಿಷಯವನ್ನು ಹಂಚಿಕೊಂಡಿದ್ದರು. ಆದರೆ ದುರದೃಷ್ಟವೆಂದರೆ ಅತ್ತ ತಮ್ಮೊಳಗಿನ ಭಾರತೀಯತೆಯನ್ನು ಪೂರ್ತಿಯಾಗಿ ತೋರ್ಪಡಿಸಲಾಗದೇ ಇತ್ತ ಡಚ್ಚರಿಂದಲೂ ನಿರ್ಲಕ್ಷಿಸಲ್ಪಟ್ಟು ಜೀವನ ಸವೆಸಬೇಕಾಗಿರುವುದು.

(ರಾಮಾಯಣದ ಪುಸ್ತಕ)

ಸುರಿನಾಮಿ ಜನರ ಪೂರ್ವಜರು ಅಂದು ತಮ್ಮೊಡನೆ ಕೊಂಡೊಯ್ದಿದ್ದ ರಾಮಾಯಣದ ಪುಸ್ತಕವೇ ಇಂದೂ ಕೂಡ ಅವರಲ್ಲಿ ಭಾರತೀಯ ಸಂಸ್ಕೃತಿಯನ್ನು ಜೀವಂತವಿರಿಸಿದೆ ಎಂಬುದೇ ಆಶ್ಚರ್ಯಕರ ಸಂಗತಿ! ನೆದರ್ ಲ್ಯಾಂಡ್ಸ್ ನ ಹಲವಾರು ಕಡೆ ಅವರ ದೇವಾಲಯಗಳು ಕಾಣಸಿಗುತ್ತವೆ. ಒಟ್ಟಿಗೆ ಸೇರಿ ಹಬ್ಬಗಳನ್ನು ಆಚರಿಸುತ್ತಾರೆ, ನಾವು ಆಚರಿಸುವುದಕ್ಕಿಂತ ಶ್ರದ್ಧಾಭಕ್ತಿಯಿಂದ! ಭಾರತೀಯ ಉಡುಗೆ ತೊಟ್ಟು ದೇವಸ್ಥಾನಕ್ಕೆ ಬರುತ್ತಾರೆ, ಈಗಿನ ಪೀಳಿಗೆಯ ಯುವಜನತೆಯೂ ಕೂಡ! ಶ್ರದ್ಧೆಯಿಂದ ಕುಳಿತು ರಾಮಾಯಣದ ಯಾವುದೊ ಒಂದು ಕಾಂಡವನ್ನು ಓದುತ್ತಾರೆ. ಆರತಿ ಮಾಡಿ, ಭಜನೆ ಹಾಡುತ್ತಾರೆ. ಆನಂತರದಲ್ಲಿ ಅಲ್ಲಿ ಪ್ರಸಾದದ ಊಟವಿರುತ್ತದೆ. ಕಳೆದ ಬಾರಿ ಅವರ ದೇವಸ್ಥಾನಕ್ಕೆ ಹೋದಾಗ ನನಗಿದೆಲ್ಲವನ್ನೂ ನೋಡಿ ಕಣ್ತುಂಬಿ ಬಂತು. ನಾನು ಇಷ್ಟೆಲ್ಲಾ ಪೂಜೆ ಮಾಡದೇ, ಭಜನೆ ಮಾಡದೇ, ದೇವಸ್ಥಾನದ ಪ್ರಸಾದ ಊಟಮಾಡದೇ ದಶಕಗಳೇ ಕಳೆದುಹೋಗಿವೆ, ಆದರೆ ಆ ದೂರದ ನಾಡಿನಲ್ಲಿರುವ ಇವರಿಗೆ ಎಷ್ಟೊಂದು ಆಸಕ್ತಿ, ಭಕ್ತಿ!

ನಮಗೆ ಇವೆಲ್ಲವೂ ದಿನಬೆಳಗಾದರೆ ಸುಲಭವಾಗಿ ಸಿಗುವಂಥವು, ಹಾಗಾಗಿ ಅವುಗಳಿಗೆ ನಾವು ಹೆಚ್ಚಿನ ಬೆಲೆಕೊಡುವುದೇ ಇಲ್ಲ. ಯಾವುದೋ ಒಂದು ವಸ್ತು ದುರ್ಲಭವಾದಾಗ ಮಾತ್ರ ಅದರ ಅಗತ್ಯ ನಮಗೆ ಅರಿವಾಗುತ್ತದೆ. ಉದಾಹರಣೆಗೆ ಅಂದು ನಾನು ಶ್ರೀ ಸೀತಾರಾಮ ಧಾಮ ಮಂದಿರಕ್ಕೆ ಜೀನ್ಸ್ ಧರಿಸಿ ಹೋಗುವವಳಿದ್ದೆ. ಏನೋ ಪೂರ್ವಜನ್ಮದ ಪುಣ್ಯ! ದೇವರು ಸಮಯಕ್ಕೆ ಸರಿಯಾಗಿ ಸದ್ಭುದ್ಧಿ ಕೊಟ್ಟ, ಸಲ್ವಾರ್-ಕಮೀಜ್ ಧರಿಸಿ ಹೋದೆ. ನನ್ನ ಮರ್ಯಾದೆ ಉಳಿಯಿತು. ಅಲ್ಲಿ ನೋಡಿದರೆ ಸುರಿನಾಮಿ ಜನರೆಲ್ಲರೂ ಭಾರತೀಯ ಉಡುಗೆಯಲ್ಲಿ ಬಂದಿದ್ದರು!

ನೆದರ್ ಲ್ಯಾಂಡ್ಸ್ ನಲ್ಲಿ ನಾನು ಭೇಟಿಯಾದ ಪ್ರತಿಯೊಬ್ಬ ಸುರಿನಾಮ್ ನ ವ್ಯಕ್ತಿಯೂ ನನ್ನ ಬಳಿ ತಮ್ಮ ಪೂರ್ವಜರ ಮನಮಿಡಿಯುವ ಕಥೆಯನ್ನು ಹಂಚಿಕೊಂಡಿದ್ದಾರೆ. ಡಚ್ಚರ ಜೊತೆ ಹೊಂದಿಕೊಳ್ಳಲಾಗದೇ ಇಲ್ಲೇ ಬದುಕುತ್ತಿರುವ ಸುರಿನಾಮ್ ನ ಜನರನ್ನು ಕಂಡಾಗಲೆಲ್ಲಾ ಕರುಳು ಚುರ್ ಎನ್ನುತ್ತದೆ, ಮನುಷ್ಯನಿಗೆ ಸಂಪತ್ತಿನ ಅಥವಾ ಅಧಿಕಾರದ ದಾಹವೊಂದಿರದಿದ್ದರೆ ಈ ವಸಾಹತುಶಾಹಿ ಪದ್ಧತಿಯೇ ಇರುತ್ತಿರಲಿಲ್ಲ ಎಂಬ ಯೋಚನೆ ಮನಸ್ಸಿಗೆ ಬಂದು ಬೇಡವೆಂದರೂ ಮನಸ್ಸು ಪುನಃ ಇತಿಹಾಸದ ಪುಟ ತಿರುವತೊಡಗುತ್ತದೆ. ಡಚ್ಚರಿಗೆ ತಮ್ಮ ಇತಿಹಾಸದ ಕರಾಳ ಮುಖವನ್ನು ಶಾಲೆಗಳಲ್ಲಿ ಕಲಿಸುವುದೇ ಇಲ್ಲವೆನಿಸುತ್ತದೆ. ಅವರಿಗೆ ಏನಿದ್ದರೂ ತಮ್ಮ ದೇಶದ ಸಾಹಸಗಾಥೆಯನ್ನಷ್ಟೇ ಬೋಧಿಸುತ್ತಾರೆ.


ನನ್ನೆಲ್ಲಾ ಡಚ್ ಸ್ನೇಹಿತರೂ ಕೂಡ ಯಾವತ್ತೂ ನನ್ನ ಬಳಿ ಹೆಮ್ಮೆಯಿಂದ ಹೇಳಿದ್ದು- “ನಮ್ಮ ಬಳಿ ಜಗತ್ತಿನ ಅತ್ಯಂತ ದೊಡ್ಡ ಹಡಗುಗಳಿದ್ದವು, ನಾವು ಜಗತ್ತಿನ ಮೂಲೆಮೂಲೆಗೂ ಹೋಗಿ ವ್ಯಾಪಾರದಲ್ಲಿ ತೊಡಗಿದ್ದೆವು” ಎಂಬುದು ಮಾತ್ರ. ಇದಕ್ಕೆ ವ್ಯತಿರಿಕ್ತವಾಗಿ ನನ್ನ ಒಬ್ಬಳೇ ಒಬ್ಬಳು ಡಚ್ ಸ್ನೇಹಿತೆ ಮಾತ್ರ. “ನಮ್ಮ ಇತಿಹಾಸಕ್ಕೊಂದು ಕರಾಳ ಮುಖವಿದೆ, ನಾವು slave trade ನಲ್ಲಿ ತೊಡಗಿಕೊಂಡಿದ್ದೆವು” ಎಂದು ಬೇಸರ ವ್ಯಕ್ತಪಡಿಸಿದ್ದಳು. ಯೂರೋಪಿನ ವಸಾಹಾತುಶಾಹಿ ದುರಾಸೆಗೆ ಜಗತ್ತಿನ ಪೂರ್ವ ಮತ್ತು ಪಶ್ಚಿಮದ ಎಷ್ಟೋ ದೇಶಗಳು ತುತ್ತಾದವು, ಯುರೋಪ್ ನ ಕೆಲವು ದೇಶಗಳು ಇಂದು ಎಷ್ಟು ಮುಂದುವರಿದಿದ್ದರೂ ಕೂಡ ಅವೆಲ್ಲಾ ಒಂದಲ್ಲಾ ಒಂದು ಕಾಲದಲ್ಲಿ ಕೊಳ್ಳೆಹೊಡೆದ ಸಂಪತ್ತಿನಿಂದ ಕಟ್ಟಿದ ದೇಶಗಳು ಎಂಬುದು ಮಾತ್ರ ಸತ್ಯ. ಆಶ್ಚರ್ಯವೆಂದರೆ ತಾವು ಎಲ್ಲೆಲ್ಲಿ ವಸಾಹತುಗಳನ್ನು ಹೊಂದಿದ್ದರೋ ಅಲ್ಲೆಲ್ಲವೂ ತಾವು ಜನಾಂಗೀಯ ಗಲಭೆಗಳನ್ನು ಬಡಿದೆಬ್ಬಿಸಿ ಬಂದಿದ್ದೇವೆ, ಅವು ಇಂದೂ ಹೊತ್ತಿ ಉರಿಯುತ್ತಿದೆ, ಪ್ರತಿದಿನವೂ ಎಂಬ ಅರಿವೇ ಅವರಿಗೆ ಇದ್ದಂತಿಲ್ಲ!